ಕನ್ನಡ ವಿಶ್ವವಿದ್ಯಾಲಯ ಹಂಪಿಯ ಕುಲಪತಿಗಳಾದ ಡಾ|| ಬಿ.ಎ. ವಿವೇಕ ರೈ ಅವರಿಂದ ಹೊನ್ನಾರು ಮಾಲೆಯಲ್ಲಿ ಪ್ರಕಟಿಸಲು ೩೫೦ ಪುಟಗಳ ಒಂದು ಹೊಸ ಪುಸ್ತಕವನ್ನು ಬರೆದು ಕೊಡಲು ಕೇಳಿ ಪತ್ರ ಬಂಉತ. ಅದರಲ್ಲಿ ಮರುಮುದ್ರಣಕ್ಕೆ ಆಸ್ಪದವಿಲ್ಲವೆಂದು ತಿಳಿಸಲಾಗಿತ್ತು. ಅವರು ಕೊಟ್ಟ ಸಮಯದಲ್ಲಿ ಹೊಸ ಪುಸ್ತಕ ಬರೆದು ಕೊಡಲು ಸಾಧ್ಯವಿರಲಿಲ್ಲ. ಅದಕ್ಕಾಗಿ ನಾನು ಅವರ ಪತ್ರಕ್ಕೆ ನಾನು ಉತ್ತರಿಸಲಿಲ್ಲ.

ಕನ್ನಡ ವಿಶ್ವವಿದ್ಯಾಲಯ ಹಂಪಿಯ ಪ್ರಸಾರಾಂಗದ ನಿರ್ದೇಶಕರಾದ ಪ್ರೊ || ಮಲ್ಲೇಪುರಂ ಜಿ. ವೆಂಕಟೇಶ ಅವರು ಗದುಗಿನಲ್ಲಿ ನನ್ನನ್ನು ಭೇಟಿಯಾದಾಗ ಹೊಸಪುಸ್ತಕದ ಬದಲಾಗಿ ನಿಮ್ಮ ಲೇಖನಗಳ ಸಂಗ್ರಹ ಹೊನ್ನಾರು ಮಾಲೆಯಲ್ಲಿ ಪ್ರಕಟಿಸಲು ಕೊಡಲು ಕೇಳಿದರು. “ನೀವು ಲೇಖನಗಳನ್ನು ಸಂಗ್ರಹ ಮಾಡಿರಿ ಕಲಬುರ್ಗಿಗೆ ಬಂದು ಅವುಗಳನ್ನು ನಾನೆ ತೆಗೆದುಕೊಂಡು ಹೋಗುತ್ತೇನೆ” ಎಂದರು.

ನನ್ನ ಸಂಶೋಧನ ಕಾವ್ಯ ‘ಬಾರಮಾಸ’ ೧೯೯೧ ರಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪ್ರಕಟವಾಗಿತ್ತು. ೧೯೯೫ ರಿಂದ ೧೯೯೮ ರವರೆಗೆ ನಾನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿದ್ದಾಗ ಕನ್ನಡ ವಿಶ್ವವಿದ್ಯಾಲಯದ ಪದ ನಿಮಿತ್ತ ಸೆನೆಟ್ ಸದಸ್ಯನಾಗಿದ್ದೆ. ಅಲ್ಲದೆ ವಿಶ್ವವಿದ್ಯಾಲಯದ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೆ. ಹೀಗಾಗಿ ನನ್ನ ಮತ್ತು ವಿಶ್ವವಿದ್ಯಾಲಯದ ನಡುವೆ ಆತ್ಮೀಯ ಸಂಬಂಧ ಬೆಳೆದಿತ್ತು. ಈಗ ಕುಲಪತಿಗಳ ಪತ್ರಕ್ಕೆ ಉತ್ತರಿಸದೆ ಇರುವುದರಿಂದ ಮನಸ್ಸಿಗೆ ಬಹಳ ಬೇಜಾರಾಗಿತ್ತು. ಪ್ರೊ || ಮಲ್ಲೇಪುರಂ ಜಿ. ವೆಂಕಟೇಶ ಅವರ ಮಾತಿನಿಂದ ನೆಮ್ಮದಿಯೆನಿಸಿತು.

ನನ್ನ ಎಲ್ಲ ಲೇಖನಗಳನ್ನು ವಿಷಯವಾಗು ಸಂಗ್ರಹಿಸಿ ಇಟ್ಟುಕೊಂಡೆ. ಒಂದು ದಿನ ಮಲ್ಲೇಶ್ವರಂ ಅವರು ಕಲಬುರ್ಗಿಗೆ ಬಂದರು. ಎಲ್ಲ ಲೇಖನಗಳನ್ನು ನೋಡಿದರು. ಅವರಿಗೆ ಶರಣರು ಮತ್ತು ಶರಣ ಸಾಹಿತ್ಯದ ಲೇಖನಗಳು ಇಷ್ಟವಾದವು. ನನಗೂ ಅವೇ ಲೇಖನಗಳು ಪ್ರಕಟವಾಗಬೇಕೆಂಬ ಇಚ್ಛೆಯಿತ್ತು. ಆ ಲೇಖನಗಳನ್ನು ಮಲ್ಲೇಪುರಂ ಅವರು ಅಕ್ಷರಸಂಯೋಜನೆಗೆ ತೆಗೆದುಕೊಂಡು ಹೋದರು. ಈ ಲೇಖನಗಳು ಬೇರೆ ಬೇರೆ ಕಾಲದಲ್ಲಿ ಬರೆದವುಗಳಾದುದರಿಂದ ಕೆಲವು ವಿಷಯಗಳು ಪುನರಾವರ್ತನೆಯಾಗಿವೆ. ಇದು ಅನಿವಾರ್ಯ.

ನನ್ನ ಲೇಖನಗಳು ಅಲ್ಲಲ್ಲಿ ಚದುರಿ ಹೋಗಿದ್ದವು. ಅವುಗಳನ್ನು ಸಂಗ್ರಹಿಸುವಲ್ಲಿ, ಪ್ರತಿ ಮಾಡುವಲ್ಲಿ, ಝೆರಾಕ್ಸ್ ಮಾಡುವಲ್ಲಿ ಮತ್ತು ಪ್ರೂಫ್ ತಿದ್ದುವಲ್ಲಿ ಅನೇಕ ಸ್ನೇಹಿತರು ತನ್ನೊಡನೆ ಸಹಕರಿಸಿದ್ದಾರೆ. ಪೂಜ್ಯ ಬಸವಲಿಂಗ ಪಟ್ಟದ್ದೇವರು ಭಾಲ್ಕಿ, ಡಾ|| ಪ್ರಭು ಖಾನಾಪುರೆ, ಡಾ|| ಪಂಚಾಕ್ಷರಿ ಹಿರೇಮಠ, ಚನ್ನಬಸವಪ್ಪ ಬೆಟ್ಟದೂರು, ಮೋಹನ ಕೋಟಿ, ಎಚ್.ಎಸ್. ಪಾಟೀಲ, ಅಯ್ಯಪ್ಪ ತುಕ್ಕಾಯಿ, ಅಲ್ಲಮಪ್ರಭು ಬೆಟ್ಟದೂರು, ಚಂದ್ರಶೇಖರ ಪಾಟೀಲ (ಚಂಪಾ), ಎಂ.ಬಸವರಾಜ, ಶಂಕರಗೌಡ ಬೆಟ್ಟದೂರು, ಕಥೆಗಾರ ಮಹಾಂತೇಶ, ಇಂಜಿನಿಯರ್ ಲೋಹಿತಾಶ್ವ ನಾಯಕ, ಚಿಕಣಿ ಚಿತ್ರ ಕಲಾವಿದ ವಿಜಯ ಹಾಗರಗುಂಡಗಿ, ಹನುಮಂತರೆಡ್ಡಿ ಇಟಗಿ, ನನ್ನ ಮಕ್ಕಳಾದ ಎಚ್.ಎಸ್. ಮುಕ್ತಾಯಕ್ಕ, ಎಚ್.ಎಸ್. ಬಸವಪ್ರಭು, ಭಾರತಿ ಮೋಹನ ಕೋಟಿ, ಮೊಮ್ಮಗಳು ಶ್ವೇತಾ ಕೊಟಿ ಇವರೆಲ್ಲರಿಗೆ ನನ್ನ ತುಂಬು ಹೃದಯದ ನೆನಕೆಗಳು.

ನಾನು ಗುಲಬರ್ಗಾದಲ್ಲಿರಲು ಬಂದು ಏಳುವರ್ಷಗಳಾದವು. ಈ ಅವಧಿಯಲ್ಲಿ ನನ್ನ ಆರೋಗ್ಯ ಕಾಪಾಡಿದವರು ಮೂವರು: ಸಹನಶೀಲರೆಂದೆ ಹೆಸರಾದ ಡಾ|| ಎಸ್.ಎಸ್.ಪಾಟೀಲ, ಡಾ|| ಮಲ್ಲಿಕಾರ್ಜುನ ನಿಷ್ಠಿ ಮತ್ತು ಡಾ|| ನಿರಂಜನ ನಿಷ್ಠಿ ಇವರಿಗೆ ನನ್ನ ನಮನಗಳು. ಅಂದವಾಗಿ ಅಕ್ಷರೀಕರಣಗೊಳಿಸಿದ ಉದಯಗ್ರಾಫಿಕ್ಸ್‌ನ ಶ್ರೀಮತಿ ಎಂ.ಡಿ. ಶೈಲಜಾ, ಸಹಕರಿಸಿದ ಕುಮಾರ ಅವಿನಾಶ ನಡಹಳ್ಳಿ, ಅಂದವಾಗಿ ಮುದ್ರಿಸಿಕೊಟ್ಟ ಸ್ನೇಹಾಪ್ರಿಂಟರ್ಸ್ ಮಾಲೀಕರಾದ ಡಾ|| ಎಸ್.ವಿದ್ಯಾಶಂಕರ್ ಇವರೆಲ್ಲರಿಗೂ ವಂದನೆಗಳು.

ಎಂದೋ ಬರೆದ, ಎಲ್ಲೆಲ್ಲಿಯೋ ಇದ್ದ ಲೇಖನಗಳನ್ನು ಸಂಗ್ರಹಿಸಿ ಸಂಪಾದಿಸಿ ಕೊಡಲು ಈ ವೃದ್ಧಾಪ್ಯದಲ್ಲಿ ಮತ್ತೊಮ್ಮೆ ಸಾಹಿತ್ಯಾಸಕ್ತಿಯ ಚೈತನ್ಯ ಮೂಡಿಸಿದ ಮತ್ತು ಪುಸ್ತಕ ಪ್ರಕಟಿಸಿದ ಕನ್ನಡ ವಿಶ್ವವಿದ್ಯಾಲಯ, ಹಂಪಿ ಪ್ರಸಾರಾಂಗದ ನಿರ್ದೇಶಕರಾದ ಪ್ರೋ || ಮಲ್ಲೇಪುರಂ, ಜಿ. ವೆಂಕಟೇಶ ಮತ್ತು ಕುಲಪತಿಗಳಾದ ಡಾ|| ಬಿ.ಎ. ವಿವೇಕ ರೈ ಇವರಿಬ್ಬರಿಗೂ ನನ್ನ ನಮನಗಳು.

ಶಾಂತರಸ
ಗುಲ್ಬರ್ಗ.