ಪಶ್ಚಿಮ ಚಾಳುಕ್ಯರಲ್ಲಿ ಅತ್ಯಂತ ಬಲಶಾಲಿಯಾದ ದೊರೆ ಜಗದೇಕ ಮಲ್ಲ ಎರಡನೆಯ ಜಯಸಿಂಹ. ಕ್ರಿ.ಶ. ೧೦೧೫ರಿಂದ ೧೦೪೨ರ ವರೆಗೆ ಈತ ರಾಜ್ಯಭಾರ ಮಾಡಿದ. ಬಳ್ಳಿಗಾಂವೆ, ಯಾದಗಿರಿ, ಕೊಲ್ಲಿಪಾಕಿ ಪೊಟ್ಟಲಕೆರೆ ಆತನ ರಾಜಧಾನಿಗಳಾಗಿದ್ದುವೆಂದು ಶಾಸನಗಳಿಂದ ತಿಳಿದುಬರುತ್ತದೆ. ಪೊಟ್ಟಲಕೆರೆ ಆತನ ರಾಜಧಾನಿಯಾಗಿದ್ದ ಬಗ್ಗೆ[1] ಶಿಕಾರಿಪುರದ ಶಾಸನದಲ್ಲಿ ಹೇಳಿದೆ.

ಸುಗ್ಗಲೆ ಜಯಸಿಂಹನ ಪಟ್ಟದ ರಾಣಿ. ಆಕೆ ಶಿವಭಕ್ತೆ, ಅನುಭಾವಿ. ಮೊಟ್ಟಮೊದಲಿಗೆ ಲಿಂಗವಂತ ಧರ್ಮಕ್ಕೆ ರಾಜಾಶ್ರಯವಿತ್ತ ವೀರಮಹಿಳೆ ಆಕೆ. ಶಾಸನ ಕವಿಗಳು ಈಕೆಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ವೀರಶೈವ ಕಾವ್ಯಪುರಾಣಗಳಲ್ಲಿ ಈಕೆಗೆ ಅಗ್ರಸ್ಥಾನ. ಭಕ್ತಿಯಿಂದ ಕವಿಗಳು ಈಕೆಯನ್ನು ನೆನೆಯುತ್ತಾರೆ.

ಸುಗ್ಗಲೆ ಮೊದಲು ಶೈವಳಿದ್ದಳೆಂದು ತೋರುತ್ತದೆ. ಆ ಕಾಲಕ್ಕೆ ನಾಡಿನಲ್ಲಿ ಹೊಸಹುಟ್ಟಿಗೆ ಮೂಲಿಗನಾಗಿ ಲಿಂಗವಂತ ಧರ್ಮವನ್ನು ಜನಪ್ರಿಯಗೊಳಿಸುತ್ತಿದ್ದ ದೇವರದಾಸಮಯ್ಯ ಸುಗ್ಗಲೆ ದೇವರದಾಸಮಯ್ಯನನ್ನು ಪೊಟ್ಟಲಕೆರೆಗೆ ಭಕ್ತಿಗೌರವಗಳಿಂದ ಬರಮಾಡಿಕೊಂಡು, ಆತನಿಂದ ಲಿಂಗದೀಕ್ಷೆಯನ್ನು ಪಡೆದಳು.

ಜಯಸಿಂಹನು ಶೈವನಾಗಿದ್ದನೋ ಜೈನನಾಗಿದ್ದನೋ ತಿಳಿಯದು. ಆದರೆ ವೀರಶಯವ ಕಾವ್ಯಗಳೆಲ್ಲ ಆತ ಜೈನನಾಗಿದ್ದನೆಂದೇ ಹೇಳುತ್ತವೆ. ಸುಗ್ಗಲೆ ವೀರಶೈವ ದೀಕ್ಷೆಪಡೆದ ಬಳಿಕ ಗಂಡ – ಹೆಂಡರಲ್ಲಿ ವಿರಸ ಹುಟ್ಟಿರಬೇಕು. ಪುಣ್ಯ – ಪಾಪ ಮೋಕ್ಷ – ನರಕ – ಇವು ಯಾವಕ್ಕೂ ವೀರಶೈವ ಧರ್ಮದಲ್ಲಿ ಗಂಡ ಹೆಂಡಿರು ಒಬ್ಬರಿಗೊಬ್ಬರು ಬಾಧ್ಯಸ್ತರಲ್ಲ. ಅವರವರ ಆತ್ಮದ ಸಾಧನೆ ಸಿದ್ಧಿ ಅವರವರದೇ. ಗಂಡನೇ ದೇವರೆಂಬ ಮಾತನ್ನು ಲಿಂಗವಂತ ಧರ್ಮ ಒಪ್ಪುವುದಿಲ್ಲ. ಸಕಲರಿಗೂ ಶಿವನೇ ದೇವರು. ಗಂಡ ದುಷ್ಟನಿದ್ದರೂ ಅವನು ಹೇಳಿದಂತೆ ಕೇಳಿ ಪತಿವ್ರತಾಧರ್ಮವನ್ನು ಮೆರೆಯಬೇಕೆಂಬ ಹುರುಳಿಲ್ಲದ ಮಾತನ್ನು ಲಿಂಗವಂತರು ನಂಬುವುದಿಲ್ಲ. ಧರ್ಮ, ದೇವರುಗಳ ವಿಷಯದಲ್ಲಿಯೂ ಅವರು ಸ್ವತಂತ್ರರು. ಗಂಡನ ಧರ್ಮವನ್ನೇ ಸ್ವೀಕರಿಸಿ ಆಚರಿಸಬೇಕೆಬ ಕಟ್ಟುಪಾಡು ವೀರಶೈವ ಧರ್ಮದಲ್ಲಿಲ್ಲ. ಸುಗ್ಗಲೆ ಲಿಂಗವಂತ ಧರ್ಮವನ್ನು ಸ್ವೀಕರಿಸಿದ ಬಳಿಕ ಬಹುಶಃ ಆಕೆ ಗಂಡನಿಂದ ಐಹಿಕವಾಗಿ ದೂರ ಸರಿದಿರಬೇಕು.

ಪೊಟ್ಟಲಕೆರೆಯ ಜೈನರಿಗೆ ಸುಗ್ಗಲೆಯ ವರ್ತನೆಯಿಂದ ಮುಖ ಭಂಗಿತವಾದಂತಾಯಿತು. ಆಕೆ ಮಹಾರಾಣಿ. ಆಕೆಗೆ ಎದುರಾಡುವ ಧೈರ್ಯವಿರಲಿಲ್ಲ ಅವರಿಗೆ. ಆದುದರಿಂದ ಅವರು ತಮ್ಮ ಸಿಟ್ಟನ್ನು ದ್ವೇಷವನ್ನು ದೇವರದಾಸಮಯ್ಯನ ಮೇಲೆ ಕಾರಹತ್ತಿದರು.

ಸುಗ್ಗಲೆಗೆ ದೀಕ್ಷೆಕೊಟ್ಟ ಬಳಿಕ ದೇವರದಾಸಮಯ್ಯ ಕೆಲವು ದಿನಗಳವರೆಗೆ ಪೊಟ್ಟಲಕೆರೆ ರಾಜಧಾನಿಯಲ್ಲಿಯೇ ಉಳಿದಿದ್ದ; ಶಿವಧರ್ಮವನ್ನು ಪ್ರಸಾರಮಾಡತೊಡಗಿದ್ದ. ಜೈನರು ಆತನನ್ನು ನಾನಾ ರೀತಿಯಾಗಿ ಕಾಡಿಸಿ ನೋಡಿದರು; ಕಿರುಕುಳ ಕೊಟ್ಟು ನೋಡಿದರು. “ರಾಮಸಾಥ ಸರ್ವಗತನಾಗಿದ್ದಾನೆ ಎನ್ನುವಿಯಲ್ಲ ದಾಸಯ್ಯ, ನೀನು ಮೂಲಮೂತ್ರಗಳನ್ನು ಎಲ್ಲಿ ಬಿಡುವಿ?” ಎಂದು ಕೆಣಕಿದರವರು. ಅದಕ್ಕೆ ದಾಸಯ್ಯ ಕೇಳಿದ, “ನಿಮ್ಮ ನಾಲಗೆಯಲ್ಲಿ ಶಿವನಿದ್ದಾನೆಯೇ?” ಅವರು ಇಲ್ಲವೆಂದರು. “ಸರೆ, ಶಿವನಿಲ್ಲದ ನಿಮ್ಮ ನಾಲಗೆಯೇ ಮಲಮೂತ್ರ ಬಿಡಲು ಯೋಗ್ಯ ಸ್ಥಾನ” ಎಂದ ದಾಸಮಯ್ಯ. ಇಂಥ ನೂರಾರು ಕೆಣಕುವ ಪ್ರಶ್ನೆಗಳಿಗೆ ದಾಸಮಯ್ಯ. ಇಂಥ ನೂರಾರು ಕೆಣಕುವ ಪ್ರಶ್ನೆಗಳಿಗೆ ದಾಸಮಯ್ಯ ಸಮರ್ಪಕ ಉತ್ತರ ಕೊಡುತ್ತಿದ್ದ. ದಿನದಿನಕ್ಕೆ ಅವನ ಮೇಲೆ ಅವರಿಗೆ ದ್ವೇಷ ಹೆಚ್ಚಾಯಿತು. ಮಾಟಮಂತ್ರದಿಂದ ಆತನನ್ನು ಕೊಲ್ಲಲು ಬಗೆದರು. ಆದರೆ ಮಂತ್ರ ದೇಹಿಯಾದ ದೇವರ ದಾಸಮಯ್ಯನಿಗೆ ಆ ಮಾಟ ಮಂತ್ರಗಳಿಂದ ಏನೂ ಆಗಲಿಲ್ಲ. ವಿಷಪೂರಿತ ನೀರನ್ನು ಕುಡಿಯಲು ಕೊಟ್ಟರು; ಆತ ಕುಡಿದು ಮೃತ್ಯಂಜಯನೆನಿಸಿದ. ಕೊನೆಗೆ ಜಯಸಿಂಹ ದೊರೆಯಲ್ಲಿಗೆ ಹೋಗಿ “ದಾಸಮಯ್ಯನಿಂದ ನಮ್ಮ ಧರ್ಮ ಹಾಳಾಯಿತು. ಆತ ನೀತಿಬಾಹಿರ. ದೇಶದ ನೀತಿ ಕೆಡುವಿಕೆಯಿಂದ ಮಳೆ ಬೆಳೆಯಲ್ಲಿ ಕೊರತೆಯುಂಟಾಯಿತು. ಬಡತನ ಹೆಚ್ಚಾಯಿತು. ದೇಶವನ್ನು ಧರ್ಮವನ್ನು ರಕ್ಷಿಸುವ ರಾಣಿಯರೇ ಅಧರ್ಮದಿಂದ ನಡೆದರೆ ಪಾಪ ಹೆಚ್ಚಾಗದೆ ಬಿಟ್ಟೀತೇ? ರಾಣಿ ಸುಗ್ಗಲಾದೇವಿಯವರು ತಮ್ಮ ವರ್ತನೆಯಿಂದ ನಮಗೂ ನಮ್ಮ ಧರ್ಮಕ್ಕೂ ಕುಂದು ತಂದರು” ಎಂದು ಜೈನರು ರಾಜನ ಮನಸ್ಸನ್ನು ಕೆಡಿಸಿದರು. ಜಯಸಿಂಹ ವೀರಶೈವಮತವನ್ನು ಬಿಟ್ಟು ಜೈನಮತವನ್ನು ಮತ್ತೆ ಸ್ವೀಕರಿಸುವಂತೆ ರಾಣಿಗೆ ಒತ್ತಾಯಿಸಿದ. ಆಗ ಆಕೆ, “ಜೈನರು ನನ್ನ ಗುರುವಾದ ದೇವರದಾಸಮಯ್ಯನನ್ನು ವಾದದಲ್ಲಿ ಸೋಲಿಸಿ, ಜನಿಮತವೇ ಶ್ರೇಷ್ಟವೆಂಬುದನ್ನು ತೋರಿಸಲಿ, ಆಗ ನಾನು ಜೈನಮತವನ್ನು ಸ್ವೀಕರಿಸುವೆನು” ಎಂದಳು. ಮಾರನೆಯ ದಿನ ಓಲಗದಲ್ಲಿ ಜೈನರಲ್ಲದೆ ವೈಷ್ಣವರು, ಕಾಪಾಲಿದರು ಸೌರರು, ಶಾಕ್ತರು ಮುಂತಾದ ನಾನಾ ಮತದವರು ವಾದಿಸಿದರು. ದೇವರದಾಸಮಯ್ಯ ಎಲ್ಲರನ್ನು ಸೋಲಿಸಿದ. ರೊಚ್ಚಿಗೆದ್ದ ಜೈನರು ಕೊನೆಗೆ ಆತನನ್ನು ಕೊಲ್ಲಲು ಇಚ್ಛಿಸಿದರು. ಒಂದು ದೊಡ್ಡ ಘಟದಲ್ಲಿ ಪಾವಕಜ್ವಾಲಾ ಪ್ರಭಾವವುಳ್ಳ ಘಟಸರ್ಪವನ್ನಿಟ್ಟು, “ನಿನ್ನ ಸರ್ವಗತನಾದ ಶಿವನನ್ನು ಈ ಘಟದಲ್ಲಿ ತೋರಿಸು” ಎಂದರು. ದಾಸಮಯ್ಯ ಘಟದಲ್ಲಿ ಕೈಯಿಟ್ಟು. ಆ ಘಟದಲ್ಲಿದ್ದ ಹಾವು ಆತನ ಸ್ಪರ್ಶದಿಂದ ಸ್ಫಟಿಕಲಿಂಗವಾಯಿತು. ಈ ಪವಾಡಕ್ಕೆ ಸರ್ವರೂ ಮಣಿದರು. ಜಯಸಿಂಹದೊರೆ ಮತ್ತು ಅನೇಕ ಜೈನರು ದಾಸಮಯ್ಯನಿಂದ ವೀರಶೈವ ದೀಕ್ಷೆಯನ್ನು ಹೊಂದಿದರು. ಏಳುನೂರು ಬಸದಿಗಳು ಶಿವಾಲಯಗಳಾದವು.

ಪವಾಡಗಳನ್ನು ನಂಬಬಹುದು; ಬಿಡಬಹುದು. ಆದರೆ ಪಂಡಿತನೂ ಅನುಭಾವಿಯೂ ಪ್ರತಿಭಾವಂತನೂ ಆದ ದಾಸಮಯ್ಯ ವಾದದಲ್ಲಿ ಸರ್ವರನ್ನು ಗೆದ್ದುದು ಐತಿಹಾಸಿಕ ಸತ್ಯ. ಆತನ ಗೆಲುವೆಂದರೆ ನವೀನ ಶರಣ ಸಂಪ್ರದಾಯದ, ಹೊಸರೂಪುದಳೆಯುತ್ತಿದ್ದ ಲಿಂಗವಂತ ಧರ್ಮದ ಗೆಲುವು. ಈ ಗೆಲುವಿಗೆ ಕಾರಣವಾದಾಕೆ ಸುಗ್ಗಲೆ. ಸುಗ್ಗಲೆಯಿಂದ ಸರ್ವ ಸಮಾನತೆಯ, ಗಂಡಿನಂತೆ ಹೆಣ್ಣಿಗೂ ಪೂಜೆ, ಮೋಕ್ಷ ಮುಂತಾದ ಧಾರ್ಮಿಕ ಅಧಿಕಾರಗಳಿರುವ, ವೈಚಾರಿಕ ಕ್ರಾಂತಿಯನ್ನೊಳಗೊಂಡ ಶರಣ ಪರಂಪರೆಗೆ ಸಾಸಿರದೋಳಿನ ಬಲಬಂತು. ರಾಜಾಶ್ರಯವಿಲ್ಲದ ಧರ್ಮವೂ ಸರಿಯಾಗಿ ಬೆಳೆದು ಬಾಳಲಾರದು. ದೇವರದಾಸಮಯ್ಯನ ಧರ್ಮದ ಮಹತ್ಕಾರ್ಯಗಳಿಗೆ ಸುಗ್ಗಲೆ ನಾನಾ ರೀತಿಯಾಗಿ ನೆರವು ನೀಡಿದಳು. ಅಂತೆಯೇ ಪೊಟ್ಟಲಕೆರೆಯಿಂದ ನಾಡಿನಲ್ಲಿ ಶರಣಧರ್ಮ ಮೈದುಂಬಿಕೊಂಡು ಬೆಳೆಯಲು ಅನುಕೂಲಮಾಯಿತು.

ಸುಗ್ಗಲೆ ಧಾರ್ಮಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಅನೇಕ ಮಹತ್ಕಾರ್ಹಗಳನ್ನು ಸಾಧಿಸಿದಳು. ಆಕೆಯ ಕೀರ್ತಿ ನಾಡಿನತುಂಬ ಹಬ್ಬಿತು. ಆಕೆ ತನ್ನ ಜೀವಿತದಲ್ಲೊಂದೇ ಕೀರ್ತಿಯನ್ನು ಪಡೆಯಲಿಲ್ಲ; ಮುಂದೆ ಶತಶತಮಾನಗಳವರೆಗೂ ಆಕೆಯ ಆದರ್ಶ ಸತೀತ್ವವನ್ನು ಶಾಸನಕಾರರು ಕವಿಗಳು ಹೊಗಳಿ ಹಾಡಿದರು. ಅತ್ತಿಮಬ್ಬೆಯ ತರುವಾಯ ಇತಿಹಾಸದಲ್ಲಿ ಬೆಳಗಿದ ಮಹಿಳೆ ಎಂದರೆ ಸುಗ್ಗಲೆಯೇ.

ಕ್ರಿ.ಶ. ೧೦೨೯ರ ದೇವೂರಿನ ಶಾಸನ ಸುಗ್ಗಲೆಯ ವ್ಯಕ್ತಿತ್ವದ ಸುಂದರ ಚಿತ್ರವನ್ನು ಕೊಡುತ್ತದೆ. ಸುಗ್ಗಲೆ ಪಾಶುಪತ ಯೋಗಾಚಾರ್ಯ ಬ್ರಹ್ಮರಾಶಿ ಪಂಡಿತನಿಗೆ ದತ್ತಿ ಬಿಟ್ಟ ವಿವರಣೆ ಈ ಶಾಸನದಲ್ಲಿದೆ:

೧.  xxxx ಭುವನಾಸ್ರ (ಯ) ಶ್ರೀ ಪ್ರಿಥ್ವೀ ವಲ್ಲಭ ಮಹಾರಾಜಾ
೨.  xxx ಪರಮೇಶ್ವರ ಪರಮ ಭಟ್ಟಾರಕಂ ಸತ್ಯಾಶ್ರಯ
೩.  xxx ಳೆಕಂ ಚಾಳುಕ್ಯಾಭರಣಂ ಶ್ರೀಮಜ್ಜಗದೇಕಮಲ್ಲರ
೪.  xx (ಯ) ಉತ್ತರೋತ್ತ(ರಂ) ಸಲುತ್ಥಮಿರೆ ಸ್ವಸ್ತ್ಯನವರತ ಪ
೫.  xx ಕಲ್ಯಾಣಾಭ್ಯದಯ ಸಹಸ್ರ ಫಲಭೋಗ ಭಾಗಿ
೬.  xx ದ್ವಿತೀಯ ಲಕ್ಷ್ಮೀ ವಿಶಿಷ್ಟಜನ ಕಾಮಧೇನು ಆಶ್ರಿತ
೭.  ಜನ ಕಲ್ಪಲತೆ ರೂಪ ವಿದ್ಯಾಧರಿ ಕಲಿಕಾಲ ಸರಸ್ವ(ತಿ)
೮.  ಶ್ರೀಮಜ್ಜಗದೇಕಮಲ್ಲ ದೇವರ ವಿಶಾಲವಕ್ಷಸ್ಥಲ ನಿವಾಸಿನಿ (ಯುಗ)
೯.  ಪ್ಪ ಶ್ರೀಮತ್ಸುಗ್ಗಲದೇವಿಯರು ಸಕನ್ರಿಪ ಕಾಳಾತೀತ ಸಂವತ್ಸ
೧೦. (ರ) ಸತಂಗ ೯೫೧ ನೆಯ ಶುಕ್ಲ ಸಂವತ್ಸರದ ತದ್ವರಿಷಾ ಭ್ಯಂ
೧೧. (ತರ) ದೆ ಪುಷ್ಯ ಬ – ೧ ಬುಧವಾರಮುತ್ತರೋತ್ತರಾಯಣ ಸಂಕ್ರಾ
೧೨. (ನ್ತಿ) ಯಂನ್ದು ಸ್ವಸ್ತಿಯಮ ನಿಯಮಾಸನ ಪ್ರಾಣಾ
೧೩. (ಯಾ) ಮಪ್ರತ್ಯಾಹಾರ ಧ್ಯಾನ ಧಾರಣ ಜಪ ಸಮಾಧಿ
೧೪. xxx ಪನ್ನ ಪಾಸುಪತ ಯೋಗಾಚಾರ್ಯ್ಯ ಶ್ರೀಮದ್ಬ್ರಹ್ಮರಾಸಿ
೧೫. (ಪಂ) ಡಿತರ್ಗೆ ದೇವಾಪುರದ ಶ್ರೀಮಾರಸಿಂಘೇಶ್ವರ
೧೬. (ದೆ) ವರಂಗಭೋಗಕ್ಕಂ ತಪೋಧನರ್ಗಂ ವಿದ್ಯಾರ್ತಿಗಳುಗ[೦] ಮ
೧೭. (ಶ) ನಾ ಚ್ಛಾದನ ಪಥ್ಯೌಷಧಾತ್ಥಮಾಗೆ…….೧ (ಮುಂದೆ ದತ್ತಿ ವಿವರವಿದೆ)

ದ್ವಿತೀಯ ಲಕ್ಷ್ಮೀ, ವಿಶಿಷ್ಟಜನ ಕಾಮಧೇನು, ಆಶ್ರಿತಜನ ಕಲ್ಪಲತೆ, ರೂಪವಿದ್ಯಾಧರಿ, ಕಲಿಕಾಲ ಸರಸ್ವತಿ – ಶಾಸನಕಾರನ ಈ ಮಾತುಗಳು ಸುಗ್ಗಲ ದೇವಿಯ ಪರಿಪೂರ್ಣ ವ್ಯಕ್ತಿತ್ವವನ್ನು ಚಿತ್ರಿಸುತ್ತವೆ.

ಕೆರೆಸಂತೆಯ ಶಾಸನವೊಂದು ಸುಗ್ಗಲೆಯನ್ನು ಹೆಸರಿಸಿ ಆಕೆ ಆದರ್ಶ ಮಹಿಳೆಯರಲ್ಲಿ ಹೆಸರಾಂತ ಅರಸಿಯರಲ್ಲಿ ಒಬ್ಬಳೆಂದು ಹೇಳುತ್ತದೆ. ಬಲ್ಲಾಳನ ಹೆಂಡತಿ ಕೇತಲದೇವಿಯನ್ನು ಶಾಸನಕವಿಗೆ ಹೊಗಳಬೇಕಾಗಿದೆ. ಆಗ ಆತ ಸುಗ್ಗಲದೇವಿ ಮತ್ತು ಶಾಂತಲದೇವಿಯರನ್ನೂ ಕೇತಲದೇವಿಯೊಂದಿಗೆ ಸೇರಿಸುತ್ತಾನೆ. ಈ ಮೂವರು ಭಾಗ್ಯವಂತೆಯರು, ಘನತೆವೆತ್ತವರು ಎಂಬುದು ಆ ಕವಿಯ ಅಭಿಪ್ರಾಯ.

ಪಡೆದಳ್ಸುಗ್ಗಲದೇವಿ ಮುನ್ನೆ ಜಯಸಿಂಹೋರ್ವೀಶನೊಳು ಸೌಮ್ಯವಂ
ಪಡೆದಳು ಸಾಂತಲದೇವಿ ಮತ್ತೆ ತೊದಳೇ ಶ್ರೀವಿಷ್ಣು ಭೂಪಾಲನೊಳ್
ಪಡೆದಳ್ಕೇತಲದೇವಿ ವಲ್ಲಭನೊಳೀ ಬಲ್ಲಾಳ ಭೂಪಾಳನೊಳ್
ಪಡೆದರ್ಮಾನರು ಮೂವರರಸಿಯರು ಸೌಭಾಗ್ಯ ಭಾಗ್ಯಂಗಳಂ[2]

ಹೊಯ್ಸಳ ವೀರಬಲ್ಲಾಳ ಮಡಿದಾಗ ಅವನ ದಂಡನಾಯಕನಾದ ಕುಮಾರ ಲಕ್ಷ್ಮ ಮತ್ತು ಆತನ ಸಾವಿರ ಅನುಯಾಯಿಗಳು ಪ್ರಾಣತ್ಯಾಗಮಾಡಿಕೊಂಡರು. ಕರ್ನಾಟಕದ ವೀರ ಸಂಪ್ರದಾಯದಂತೆ ಅವರೆಲ್ಲ ಗರುಡರಾಗಿದ್ದರು. ಕುಮಾರಲಕ್ಷ್ಮನೊಡನೆ ಆತನ ಅರಸಿಯಾದ ಸುಗ್ಗಲೆಯೂ ಚಿತೆಯೇರಿದಳು. ಕುಮಾರಲಕ್ಷ್ಮನ ಹೆಂಡತಿ ಸುಗ್ಗಲೆ, ಜಯಸಿಂಹನ ರಾಣಿ ಸುಗ್ಗಲೆಗೆ ಸಮಾನಳು ಮತ್ತು ಆಕೆ ಜಯಸಿಂಹನಿಗೆ ಕೊಟ್ಟ ಭಾಷೆ, ಈಕೆ ಕುಮಾರಲಕ್ಷ್ಮನಿಗೆ ಕೊಟ್ಟ ಭಾಷೆ ಸಮಾನವಾದುದೆಂದು ಶಾಸನ ಕವಿ ಬಣ್ಣಿಸಿದ್ದಾನೆ.

ಜಯಸಿಂಹ ಕ್ಷಿತಿಪಾಳಕಂಗೆ ಜಗಮೆಲ್ಲಂ ಬಣ್ಣೀಸಲ್ ಪೂಣ್ದು ಭಾ
ಷೆಯನಾ ಸುಗ್ಗಲದೇವಿ ಕೊಟ್ಟ ತೆರದಿಂ ಬಲ್ಲಾಳ ಭೂಪೋತ್ತಮಂ
ಪ್ರಿಯ ಪುತ್ರಂಗೆ ಕುಮಾರಲಕ್ಷ್ಮರಥಿನೀನಾಂಥಗೆ ಕೊಟ್ಟಳ್ ಮನಃ
ಪ್ರಿಯೆಯಿಂ ಸುಗ್ಗಲದೇವಿ ಭಾಷೆಯನಿಳಾಚಕ್ರಂ ಪೊಗಳ್ವನ್ನೆಗಂ[3]

ಜಯಸಿಂಹನಿಗೆ ಸುಗ್ಗಲೆ ಕೊಟ್ಟ ಭಾಷೆ ಏನೆಂಬುದು ಇಲ್ಲಿ ತಿಳಿಯುವುದಿಲ್ಲ. ಅದು ತಿಳಿದಿದ್ದರೆ ಈ ಇಬ್ಬರು ರಾಣಿಯರ ವ್ಯಕ್ತಿತ್ವ ಸ್ಫುಟಗೊಳ್ಳುತ್ತಿತ್ತು. ಮತ್ತು ಚರಿತ್ರೆಗೆ ಒಂದು ಹೊಸ ವಿಷಯ ದೊರಕುತ್ತಿತ್ತು.

ಸುಮಾರು ಒಂದುವರೆ ಶತಮಾನದ ಬಳಿದ ಹೊಯ್ಸಳರ ಶಾಸನಗಳಲ್ಲಿ ಅತ್ಯಂತ ಗೌರವದಿಂದ ಉಲ್ಲೇಖಿತಳಾದ ಸುಗ್ಗಲದೇವಿ ನಿಜಕ್ಕೂ ಘನವಂತೆ.

[1] EC VII ನಂ. ೧೨೬

[2] MAR ೧೯೨೫ ಕಡೂಠು ನಂ. ೬೪, ಕೆರೆಸಂತೆ ಕ್ರಿ.ಶ. ೧೧೮೨

[3] EC ii ಬೇಲೂರು ೧೧೨. ಹಳೇಬೀಡು.