ತಾಯಿ ದೇವರೆಂದು ವೇದ ಹೇಳಿತು. ಆದರೆ ವಚನಕಾರರು ಹೆಣ್ಣೇ ದೇವರೆಂದು ಹೇಳಿದರು. ಹೆಣ್ಣು ತಾಯಿಯಾದಾಗ ಮಾತ್ರ ಅದಕ್ಕೆ ದೈವತ್ವ ಲಭಿಸುತ್ತದೆ ವೇದದ ‘ಹೆಣ್ಣು ಸಾಕ್ಷಾತ್ ಕಪಿಲ ಸಿದ್ಧಮಲ್ಲಿಕಾರ್ಜುನ’ ಎಂದು ಶಿವಶರಣು ಸಮಾಜದಲ್ಲಿ ಆಕೆಗೆ ಘನತೆಯ ಗೌರವದ ಸ್ಥಾನ ಕೊಟ್ಟರು. ಇಲ್ಲಿ ಹೆಣ್ಣಾದರೆ ಸಾಕು – ಆಕೆಗೆ ಸ್ಥಾನಮಾನ. ಅಲ್ಲದೆ ಭಾರತೀಯ ಸಾಮಾಜಿಕ ಧಾರ್ಮಿಕ ಜೀವನದಲ್ಲಿ ಆಕೆಗೆ ಇರದ ಸ್ಥಾನಗಳನ್ನು ಮೊದಲಿಗೆ ಕೊಟ್ಟು ಗೌರವಿಸಿದವರು ವಚನಕಾರರು.

ಸತಿಪತಿಗಳೊಂದಾದ ಭಕ್ತಿತವಪ್ಪುದು ಶಿವಂಗೆ.
ಸತಿಪತಿಗಳೊಂದಾಗದವನ ಭಕ್ತಿ
ಅಮೃತದೊಳು ವಿಷಬೆರಿಸಿದಂತೆ, ಕಾಣಾ, ರಾಮನಾಥ.”

ಜೇಡರದಾಸಮಯ್ಯನ ಈ ಮಾತು ಆತನ ದಾಂಪತ್ಯ ಜೀವನಕ್ಕೆ ವ್ಯಾಖ್ಯೆ ಬರೆದಂತಿದೆ.

ಮಹಾಪುರುಷರು ಮಡದಿಯಾಗಿ ಬಾಳುವುದು ಕಷ್ಟದ ಕೆಲಸ. ಮಡದಿಯಾದವಳು ಇಲ್ಲಿ ಅವರು ಏರಿದ ಎತ್ತರಕ್ಕೂ ಏರಬೇಕು. ಆ ಎತ್ತರಕ್ಕೆ ಏರಲು ನೆರವೂ ನೀಡಬೇಕು. ಅಲ್ಲದೆ ಆಗಾಗ ಗಂಡನಿಗೆ ಆವರಿಸುವ ಮರೆವು, ಅಹಂಕಾರಗಳನ್ನು ಅಳಿಸಿಹಾಕಬೇಕು. ಲೋಕದ ಮಹಾಪುರುಷರ ಮಡದಿಯರೆಲ್ಲ ಇಂಥ ‘ದಿಬ್ಯ’ಗಳಿಗೆ ಮೈಮನಸ್ಸು ಕೊಟ್ಟು ಗೆದ್ದು ಬಾಳಿದವರೇ. ಅಂಥವರಲ್ಲಿ ದುಗ್ಗಳೆ ಶ್ರೇಷ್ಠಳು.

ಮದುವೆಯಾಗುವುದಕ್ಕಿಂತ ಮುಂಚೆಯೇ ಆಕೆ ಜೇಡರದಾಸಮಯ್ಯ ಒಡ್ಡಿದ ದಿಬ್ಯದಲ್ಲಿ – ನೀರಿಲ್ಲದೆ ಅಡಿಗೆಮಾಡಬೇಕು ಎಂಬ ಪರೀಕ್ಷೆಯಲ್ಲಿ – ಗೆದ್ದಳು. ದಾಸಮಯ್ಯ ಮೆಚ್ಚಿ ಕೈಹಿಡಿದ. ದಾಸಮಯ್ಯನ ಭಕ್ತಿಯ ಜೀವನಕ್ಕೆ ಬೆಳಕಾಗಿ ಬಾಳಿದಳು ಆಕೆ. ಆತ ನಾಡಿನಲ್ಲಿ ತಂದ ‘ಹೊಸಹುಟ್ಟಿಗೆ’ಗಾಗಿ ಆಕೆ ಗಂಡನಿಗೆ ಎಲ್ಲಂದದಿಂದ ನೆರವಾಗಿ ನಿಂತಳು. ಸಾಮಾಜಿಕವಾಗಿ ಧಾರ್ಮಿಕವಾಗಿ, ವೈಚಾರಿಕವಾಗಿ – ಎಲ್ಲ ರೀತಿಯ ಸಮಾನತೆ ದಾಸಮಯ್ಯ ಆಕೆಗೆ ಕೊಟ್ಟಿದ್ದ. ಅಂತೆಯೇ ಅವರ ಒಂದಾದ ಭಕ್ತಿ ಶಿವನಿಗೆ ಹಿತವಾಗಿತ್ತು.

ದಾಸಮಯ್ಯನ ಶಿವನಿಗೆ ಹಿತವಾದ ದಾಂಪತ್ಯ ಜೀವನವನ್ನು ಕುರಿತು ಹೇಳುವ ಒಂದು ಕಥೆಯಿದೆ. ಕೈಲಾಸದಲ್ಲಿ ಇಬ್ಬರು ಗಣಂಗಳು ಸಂಸಾರ ಹೆಚ್ಚೋ, ವೈರಾಗ್ಯ ಹೆಚ್ಚೋ ಎಂದು ವಾದಿಸಿದರು. “ಭೂಲೋಕಕ್ಕೆ ಹೋಗಿ ದಾಸಮಯ್ಯನ ದಾಂಪತ್ಯ ಜೀವನ ನೋಡಿರಿ” ಎಂದು ಶಿವನು ಅವರಿಗೆ ಅಪ್ಪಣೆ ಮಾಡಿದ. ಸರೆ, ಅವರು ಭೂಮಿಗಿಳಿದು ಮುದೆನೂರಿಗೆ ಬಂದು ದಾಸಮಯ್ಯನ ಮನೆಗೆ ಹೋದರು. ಅವರು ಬಂದ ಕೆಲಸವೇನೆಂಬುದನ್ನು ದಾಸಮಯ್ಯ ಜ್ಞಾನದೃಷ್ಟಿಯಿಂದ ಗ್ರಹಿಸಿದ. ಅವರನ್ನು ಉಪಚರಿಸಿ ಕೂಡಿಸಿದ. ದುಗ್ಗಳೆ ಮನೆಗೆಲಸದಲ್ಲಿದ್ದಳು. ದಾಸಮಯ್ಯನ ಬಟ್ಟೆ ನೇಯುತ್ತಿದ್ದ. “ದುಗ್ಗಳೇ, ಈ ದಾರ ಹರಿದುಹೋಗಿದೆ ಗಂಟು ಹಾಕಬೇಕು. ಅದಕ್ಕಾಗಿ ದೀಪ ತಾ. ಸರಿಯಾಗಿ ಕಾಣಿಸಲೊಲ್ಲದು” ಎಂದ. ಅದು ಹಗಲು. ಹಗಲಿನ ಬೆಳಕಿನಲ್ಲಿ ದೀಪವೇಕೆ? ಇದನ್ನು ವಿಚಾರಿಸದೆ, ಪತಿಯಾಜ್ಞೆಯೆಂದು ದುಗ್ಗಳೆ ದೀಪವನ್ನು ಒಯ್ದಳು. ಆ ಬೆಳಕಿನಲ್ಲಿ ಆತ ಎಳೆ ಸರಿಪಡಿಸಿದ. ಮತ್ತೊಮ್ಮೆ ಆತ “ದುಗ್ಗಳೆ ಕುಂಚಿಗೆ ಕೊಡು” ಎಂದ. ಕುಂಚಿಗೆ ಆ ಕಾಲದಲ್ಲಿ ಹೆಂಗಸರು ತಲೆಯ ಮೇಲೆ ಹೊದ್ದುಕೊಳ್ಳುತ್ತಿದ್ದರು ಮರುಮಾತಾಡದೆ ದುಗ್ಗಳೆ ಕುಂಚಿಗೆಯನ್ನೊಯ್ದು ಗಂಡನಿಗೆ ಕೊಟ್ಟಳು. ಇಂಥ ಇನ್ನೂ ಮೂರು ನಾಲ್ಕು ಪ್ರಸಂಗಗಳನ್ನು ಆ ಕೈಲಾಸದ ಗಣಂಗಳು ನೋಡಿ, “ಇಂಥ ಸತಿಪತಿಗಳೊಂದಾದ ಸಂಸಾರವೇ ಲೇಸು, ಇಂಥ ಸಂಸಾರ ವೈರಾಗ್ಯಕ್ಕಿಂತಲೂ ಮಿಗಿಲು” ಎಂದು ಬಗೆಯುತ್ತ ಕೈಲಾಸಕ್ಕೆ ಹೋದರು.

ಗಂಡ ಏನು ಹೇಳಿದರೂ ದುಗ್ಗಳೆ ಎರಡಾಡದೆ ಮೌನವಾಗಿ ಮಾಡಿದ್ದು ನೋಡಿದರೆ ಆಕೆಗೆ ಸ್ವತಂತ್ರ ವಿಚಾರವೇ ಇರಲಿಲ್ಲವೇ ಎನಿಸುತ್ತದೆ. ಆದರೆ ನಿಜಸ್ಥಿತಿ ಹಾಗಿಲ್ಲ. ಹಗಲಲ್ಲಿ ದೀಪ ತಾ ಎಂದುದು, ಕುಂಚಿಗೆ ಬೇಡಿದುದು, ಅದೂ ಮನೆಗೆ ಅತಿಥಿಗಳು ಬಂದಾಗ, ಇದರಲ್ಲಿ ಏನೋ ಅರ್ಥವಿರಬೇಕು ಎಂದು ಆಕೆ ಗ್ರಹಿಸದೆ ಇಲ್ಲ. ಆಕೆಯ ಮೌನದ ಆಚರಣೆ ಅಲ್ಲಿ ಅರ್ಥಪೂರ್ಣವಾಗಿದೆ. ಆದರೆ ಎಲ್ಲ ಕಾಲಕ್ಕೂ ಆಕೆ ಗಂಡ ಮಾಡಿದ್ದು ಸರಿ ಎಂದು ಒಪ್ಪಿಕೊಳ್ಳುತ್ತಿರಲಿಲ್ಲ. ಸಮಯ ಬಂದಾಗ ತಪ್ಪು ತೋರಿಸಿ ಬುದ್ದಿ ಹೇಳುತ್ತಿದ್ದಳು.

ಭಕ್ತಿ, ಕಾಯಕ, ಅನುಭಾವ – ಇವುಗಳಿಂದ ದಾಸಮಯ್ಯನ ಕೀರ್ತಿ ನಾಡಿನ ತುಂಬಿ ಹಬ್ಬಿತು. ಶಿವನು ಕೊಟ್ಟ ‘ತವನಿಧಿ’ ಬೇರೆ. ಯಾವುದಕ್ಕೂ ಕೊರತೆಯಿರಲಿಲ್ಲ. ಆದರೆ ಇವೆಲ್ಲದರಿಂದ ಅಂತರಂಗಕ್ಕೆ ಮಾತ್ರ ತುಸು ಕೊರತೆ ಉಂಟಾಗಿತ್ತು; ಹೌದೋ ಅಲ್ಲವೋ ಅನ್ನುವಷ್ಟು ಅಹಂಕಾರ ಸುಳಿದಿತ್ತು. ಇದು ಶಂಕರದಾಸಮಯ್ಯನ ಸಂದರ್ಶನದಲ್ಲಿ ಹೊರಬಿತ್ತು.

ನವಲಿಯ ಶಂಕರದಾಸಮಯ್ಯ ದೇವರದಾಸಮಯ್ಯನನ್ನು ಕಾಣಲು ಮುದೆನೂರಿಗೆ ಚಂದ.ಶಿವಾಲಯದಲ್ಲಿ ಶಿವಾನುಭವಗೋಷ್ಠಿ ನಡೆಯಿತು. ಲಿಂಗಾರ್ಚನೆಯ ಹೊತ್ತಾಗಲು ಶಂಕರದಾಸಮಯ್ಯ ಸೇವಕನಾದ ವಕ್ತ್ರಪಾದನಿಗೆ “ಜೋಳದ ಭಿಕ್ಷೆ ಮಾಡಿಕೊಂಡು ಬಾ” ಎಂದು ಹೇಳಿದ. ನಿತ್ಯ ಐದು ಮನೆಯಿಂದ ತಂದ ಜೋಳದೆಂದಲೇ ದಾಸೋಹ ನಡೆಸುತ್ತಿದ್ದ ಆತ. ಇದನ್ನು ಕೇಳಿ ಜೇಡರದಾಸಮಯ್ಯನಿಗೆ ಏನೆನಿಸಿತೋ? “ಭಿಕ್ಷಕ್ಕೆ ಏಕ ಕಳಿಸುವಿರಿ? ನಮ್ಮಲ್ಲಿ ತವನಿಧಿಯಿದೆ. ಬೇಕಾದಷ್ಟು ತರಿಸಿಕೊಳ್ಳಿರಿ” ಎಂದ. ಶಂಕರದಾಸಮಯ್ಯನಿಗೆ ಇದನ್ನು ಕೇಳಿ ನೋವೆನಿಸಿತು. ಶರಣ ಮಾರ್ಗವನ್ನು ದೇವರದಾಸಮಯ್ಯ ತಿಳಿದುಕೊಳ್ಳಲಿಲ್ಲವಲ್ಲ ಎಂದು ಆತ ಮನದಲ್ಲಿ ಮರುಗಿದ. ದೇವರದಾಸಮಯ್ಯ ಮನೆಗೆ ಬಂದ.ನೋಡಿದ, ತವನಿಧಿ ಬಯಲಾಗಿತ್ತು. ನಡೆದುದನ್ನು ದುಗ್ಗಳೆಗೆ ಹೇಳಿದ. ದುಗ್ಗಳೆ ನಸುಕೋಪದಿಂದ ಗಂಡನ ವರ್ತನೆಯನ್ನು ಖಂಡಿಸಿದಳು. ಇಂತಹ ಅಹಂಕಾರ ಸಲ್ಲದೆಂದಳು. ಶಂಕರದಾಸಮಯ್ಯನಂತಹ ಶರಣನನ್ನು ನೀವು ತಿಳಿಯದೆ ಹೋದಿರಲ್ಲಾ ಎಂದು ಮರುಗಿದಳು. ಗಂಡನಿಗೆ ತಿಳಿವುತಂದುಕೊಟ್ಟು ಅಹಂಕಾರದ ಸಸಿಯನ್ನು ಬೇರು ಸಹಿತ ಕಿತ್ತು ಹಾಕಿದಳು. ಗಂಡನನ್ನು ಒಡಗೊಂಡು ಬಂದು ಶಂಕರದಾಸಮಯ್ಯನನ್ನು ಕ್ಷಮೆ ಬೇಡಿದಳು.

ದೇವರದಾಸಮಯ್ಯ ತಾನು ನೆಯ್ದ ದಿವ್ಯಾಂಬರವನ್ನು ಸಂತೆಯಿಂದ ಬರುಮಾಗ ಒಬ್ಬ ಜಂಗಮನಿಗೆ ಕೊಟ್ಟಿದ್ದ. ಆ ಜಂಗಮ ಅದನ್ನು ಹರಿದು ಚಿಂದಿಯಾಗಿಸಿದ. ಆ ಜಂಗಮನನ್ನು ಆಕೆ ಗಂಡನ ವರ್ತನೆಗೆ ಹೆಮ್ಮೆ ಪಟ್ಟಕೊಂಡಳು. ಒಡೆಯರ ಒಡವೆ ಒಡೆಯರಿಗೆ ಸಲ್ಲಿಸಿದ ಗಂಡನ ಆಚರಣೆಯನ್ನು ಅರಿತು ಆಕೆ ಆನಂದಿಸಿದಳು. ಜಂಗಮ ಸೇವೆ, ಜಂಗಮದಾಸೋಹ ಆ ದಂಪತಿಗಳ ಪ್ರಾಣಮಾಗಿತ್ತು. ದಿವ್ಯಾಂಬರ ಹರಿದುದಕ್ಕೆ ದುಗ್ಗಳೆ ಏನಾದರೂ ಅನ್ನುವಳೊ ಎಂಬ ಭಾವನೆ ಆ ಜಂಗಮನಿಗೆ ಮೂಡಿತ್ತು, ದಾಸಮಯ್ಯನಿಗಲ್ಲ. ದುಗ್ಗಳೆ ಹೆಮ್ಮೆಪಟ್ಟುದನ್ನೂ ಗಂಡನ ಜಂಗಮ ನಿಷ್ಠೆಯನ್ನು ಮೆಚ್ಚಿದುದನ್ನೂ ಕಂಡು ಆ ಜಂಗಮ ಸಂತುಷ್ಟನಾದ. ಅವರಿಗೆ ತವನಿಧಿ ಕೊಟ್ಟು ಬಯಲಾದ. ಆತ ರಾಮನಾಥವೆಂಬುದು ಆ ದಂಪತಿಗಳಿಗೆ ತಿಳಿಯಲಾರದ ವಿಷಯವೇನೂ ಆಗಿರಲಿಲ್ಲ. ಜಂಗಮನೇ ಶಿವ. ಈ ನಂಬುಗೆ ಸಾಮಾನ್ಯವೇ? ಶಿವನ ದಾಸ – ದುಗ್ಗಳೆಯರನ್ನು ಪರೀಕ್ಷಿಸಿ ಸೋತ; ಸೋತು ತವನಿಧಿ ಕೊಟ್ಟ.

ಹನ್ನೊಂದನೆಯ ಶತಮಾನದ ಪೂರ್ವಾರ್ಧದಲ್ಲಿ ಕಾಯಕ, ಭಕ್ತಿ, ಅನುಭಾವ, ದಾಸೋಹ – ಮುಂತಾದ ತತ್ವಗಳ ಕೊಡುಗೆಯನ್ನು ಕೊಡಮಾಡಲು ಹುಟ್ಟಿದ ಹೊಸ ಹುಟ್ಟಿನ ಜನಕರಲ್ಲಿ ಒಬ್ಬಳಾದ ದುಗ್ಗಳೆ ಮುಮಬರುವ ಶರಣರಿಗೆ ಶರಣೆಯರಿಗೆ ಆದರ್ಶ ಹಾಕಿಕೊಟ್ಟಳು. ಜಯಸಿಂಹನ ರಾಣಿ ಸುಗ್ಗಲೆ ಧರ್ಮಕ್ಕೆ ರಕ್ಷೆಯಾಗಿ ನಿಂತು ಅದರ ಪ್ರಸಾರ ಕಾರ್ಯದಲ್ಲಿ ದಾಸಮಯ್ಯನಿಗೆ ನೆರವಾದಳು. ಶರಣಧರ್ಮ ನವೀನರೂಪ ತಾಳುಮಂತೆ ಮಾಡಿ, ಅದಕ್ಕೆ ಉಸಿರಿತ್ತು. ಬಲವಿತ್ತು ಅದನ್ನು ಬೆಳೆಸಿ, ಅದೇ ಆಗಿ ಬಾಳಿ, ಆ ಬಾಳಿನಲ್ಲಿ ಗಂಡ ತಪ್ಪಿದರೆ ತಿದ್ದಿತೀಡಿದಳು ದುಗ್ಗಳೆ. ದುಗ್ಗಳೆ ಹೆಚ್ಚಾಗಿ ಮೌನಿ. ಎಷ್ಟು ಬೇಕೋ ಅಷ್ಟೇ ಮಾತು. ಆಕೆ ವಚನ ಬರೆಯಲಿಲ್ಲ. ಆದರೆ ಜೇಡರದಾಸಮಯ್ಯನ ವಚನಗಳಲ್ಲಿ ಆಕೆಯ ಅನುಭವ ಅನುಭಾಮ ಇಲ್ಲದಿಲ್ಲ.

ಸತಿಪತಿಹಳೊಂದಾದ ಭಕ್ತಿ ಅವರದು. ಆ ಒಂದಾದ ಜೀವನದ ಅನುಭಾವ ದಾಸಮಯ್ಯನ ವಚನಗಳಲ್ಲಿ ಮೂಡಿಬಂದಿದೆ.

ಜೇಡರದಾಸಮಯ್ಯ ದುಗ್ಗಳೆಯರನ್ನು ಬಸವಣ್ಣ ಹೃದಯತುಂಬಿ ಹೊಗುಳುತ್ತಾನೆ. ಏಕೆಂದರೆ ಅವರು ಹೊಸ ಹುಟ್ಟಿಗೆ ಮೂಲಿಗರಾಗಿದ್ದರು.

ನೆರೆನಂಬೊ ನೆರೆನಂಬೊ ಧರ ಧುರವಿಲ್ಲದ ಸಾಮ ವೇದಿಗಳಂತೆ,
ನೆರೆನಂಬೊ ನೆರೆನಂಬೊ ದಾಸದುಗ್ಗಳೆಯರಂತೆ,
ನೆರೆನಂಬೊ ನೆರೆನಂಬೊ ಸಿರಿಯಾಳ ಚೆಂಗಳೆಯರರಂತೆ,
ನೆರೆನಂಬೊ ನೆರೆನಂಬೊ ಸಿಂಧುಬಲ್ಲಾಳನಂತೆ,
ನಂಬಿದೆಯಾದೊಡೆ ತನ್ನನೀವ ಕೂಡಲಜಂಗಮದೇವ.