ಜೀವನವನ್ನು ಕುರಿತು ಗಂಭೀರವಾಗಿ ವಿಚಾರಿಸಿ, ಅದನ್ನು ಸರ್ವಾಂಗ ಸುಂದರವನ್ನಾಗಿ ಮಾಡಲು ಹೊಸ ಹೊಸ ಮೌಲ್ಯಗಳನ್ನು ಆವಿಷ್ಕಾರಗೊಳಿಸಿ ಆ ಮೌಲ್ಯಗಳನ್ನು ನಡೆದು ನುಡಿದು ಜನ ಜೀವನಕ್ಕೆ ಇಳಿಸಿದರು ಶರಣರು. ಧರ್ಮ, ದೇವರು, ಸಮಾಜ, ಜೀವ, ಆತ್ಮ ಮುಂತಾದುವುಗಳ ಬಗೆಗೆ ಹೊಸ ವಿಚಾರಗಳನ್ನು ಮಂಡಿಸಿದರು; ಸೂಕ್ಷ್ಮ ತತ್ವಗಳನ್ನು ಅರುಹಿದರು. ಯಾವುದನ್ನೇ ಕುರಿತು ಅವರು ಹೇಳಿದರೂ ಅದರ ಹಿಂದೆ ಒಂದು ವೈಚಾರಿಕ ಹಂದರವಿರುತ್ತದೆ; ಒಂದು ಸಮಗ್ರ ಅನುಭವದ ತಳಹದಿ ಇರುತ್ತದೆ. ಜೀವನವನ್ನು ಇದ್ದುದಿದ್ದಂತೆ ಕಂಡು ಅದನ್ನು ತಿದ್ದಿ ತೀಡಲು ಶರಣರು ಮಾಡಿದಂಥ ಹೋರಾಟ, ನಡೆಸಿದಂಥ ತತ್ವಜಿಜ್ಞಾಸೆ – ಭಾರತದಲ್ಲಿಯಂತೂ ಇಲ್ಲವೇ ಇಲ್ಲ – ಇಡಿಯ ವಿಸ್ವದ ಇತಿಹಾಸದಲ್ಲಿ ಅಲ್ಲೊಂದಿಷ್ಟು, ಇಲ್ಲೊಂದಿಷ್ಟು, ಕಂಡುಬರಬಹುದು, ಒಬ್ಬಿಬ್ಬರು ತಮ್ಮ ಜೀವನವನ್ನು ಮಾನವ ಕುಲದೇಳ್ಗೆಗೆ ಮುಡಿಪಿಟ್ಟು ಶ್ರಮಿಸಿದ ಉದಾಹರಣೆಗಳುಂಟು. ಆದರೆ ನೂರಾರು ಜನ ಹೆಣ್ಣು ಗಂಡು – ಲಿಂಗಭೇದವಿಲ್ಲದೆ ಒಂದೇ ಕಾಲದಲ್ಲಿ ಒತ್ತಟ್ಟಿಗೆ ಸೇರಿ ಒಂದೇ ಭಾವನೆಯಿಂದ ಒಂದು ಗುರಿಗಾಗಿ ಶ್ರಮಿಸಿದ ಉದಾಹರಣೆ ಲೋಕದ ಇತಿಹಾಸದಲ್ಲಿ ಇಲ್ಲ. ಈ ನೂರಾರು ಜನ ಒಂದೇ ಸ್ಥಳದವರಲ್ಲ, ಒಂದೇ ಕಾಯಕದವರಲ್ಲ; ಹಲವು ಸ್ಥಳದವರು, ಹಲವು ಕಾಯಕದವರು; ರಾಷ್ಟ್ರದ ನಾನಾ ಭಾಗಗಳಿಂದ ಈ ತತ್ವಜಿಜ್ಞಾಸೆಗಾಗಿಯೇ ಬಂದವರು. ಇಂಥ ಉದಾಹರಣೆಗೆ ಕಲ್ಯಾಣದ ಕ್ರಾಂತಿಯೇ ಮೊದಲು; ಅದುವೇ ಕೊನೆ. ಹೀಗೆ ನೂರಾರು ಶರಣರು ಕಲ್ಯಾಣದ ಅನುಭವ ಮಂಟಪದಲ್ಲಿ ಒಟ್ಟುಗೂಡಿ ತತ್ವಜಿಜ್ಞಾಸೆ ನಡೆಸಿದ್ದರಿಂದ ಸಮಗ್ರ ಮಾನವ ಜೀವನದ ಪರಿಪೂರ್ಣ ಅಭ್ಯುದಯದ ಸುಲಭ ಮಾರ್ಗಗಳನ್ನು ಕಂಡು ಹಿಡಿಯಲು ಸಾಧ್ಯವಾಯಿತು.

ಯಾವುದೇ ವಿಷಯವಿರಲಿ – ಸಣ್ಣದಿರಲಿ ದೊಡ್ಡದಿರಲಿ ಅದನ್ನು ಶರಣರು ಗಂಭೀರವಾಗಿಯೇ ವಿವೇಚಿಸಿದ್ದಾರೆ. ಒಳ್ಳೆಯದನ್ನು – ಸಾರ್ವಜನಿಕ ಮತ್ತು ಸರ್ವಕಾಲಿಕ – ಮೌಲ್ಯದಿಂದೊಡಗೂಡಿದ ಒಳ್ಳೆಯದನ್ನು – ಅದು ಎಲ್ಲಿದ್ದರೂ ಯಾವರೂಪದಲ್ಲಿದ್ದರೂ ಅಪ್ಪಿಕೊಂಡಿದ್ದಾರೆ. ಅವಶ್ಯವೆನಿಸಿದ ಹೊಸ ಮೌಲ್ಯಗಳನ್ನು ಕಂಡು ಹಿಡಿದಿದ್ದಾರೆ, ತೀರ ಸವುಕಲಾದ ಸಂಪ್ರದಾಯಗಳನ್ನು ಮೌಲ್ಯಗಳನ್ನು ದೂರ ಸರಿಸಿದ್ದಾರೆ; ಅವುಗಳಿಂದಾಗುವ ಹಾನಿಯನ್ನು ಜನರಿಗೆ ಮನದಟ್ಟು ಮಾಡಿಕೊಟ್ಟಿದ್ದಾರೆ. ಶಸ್ತ್ರಚಿಕಿತ್ಸೆಗೊಳಪಡಿಸಿ ಸುಧಾರಿಸಬಹುದಾದ ನೀತಿ ನಡವಳಿಕೆಗಳನ್ನು ಸುಧಾರಿಸಿದ್ದಾರೆ; ಕೆಲವಕ್ಕೆ ಹಿಂದಿನ ಹಳೆಯ ಹೆಸರುಗಳನ್ನೇ ಉಳಿಸಿ ಅವುಗಳಿಗೆ ಹೊಸ ಅಂತಸ್ಸತ್ವವನ್ನಿದ್ದಾರೆ. ಹೀಗೆ ಹಳೆಯ ಹೆಸರುಗಳನ್ನುಳಿಸಿಕೊಂಡು ಹೊಸ ಅಂತಸ್ಸತ್ವವನ್ನು ಪಡೆದ ಸಂಪ್ರದಾಯಗಳಲ್ಲಿ ಶೀಲ, ವ್ರತ, ನೇಮಗಳು ಮುಖ್ಯವಾಗಿವೆ.

ಶೀಲ, ವ್ರತ ನೇಮ ಸಂಪ್ರದಾಯಗಳಿಗೆ ಈ ಜಗತ್ತಿನಷ್ಟೇ ಇತಿಹಾಸವಿದೆ. ಮೊದಲು ಅವು ಒಳ್ಳೆಯ ಭಾವನೆಯಿಂದ ಪ್ರಾರಂಭವಾಗಿರಬೇಕು ಎಂದು ಹೇಳುತ್ತಾರೆ. ಇರಬಹುದು; ಇರಲಿಕ್ಕಿಲ್ಲ. ಬಹಳಷ್ಟು ವ್ರತ ನೇಮಗಳು ಜೊಳ್ಳಾಗಿವೆ; ಕೀಳು ಭಾವನೆಯಿಂದ ಕೂಡಿವೆ; ಕೀಳು ಆಚಾರಕ್ಕೆ ಎಡೆಗೊಟ್ಟಿವೆ. ‘ಕರ್ಮಕಾಂಡ’ದಿಂದ ಮನುಷ್ಯ ಏನಾದನೆಂಬುದನ್ನು ಇಲ್ಲಿ ನೆನೆಯಬಹುದು.

ಶೀಲವ್ರತ ನೇಮಗಳು ಪ್ರಾಚೀನಕಾಲದಿಂದ ಮಾನವನ್ನು ಆಳುತ್ತಾ ಬಂದಿವೆ. ಇಷ್ಟೇ ಅಲ್ಲ, ನಮ್ಮನ್ನಾಶ್ರಯಿಸಿದ ಪೂಜಾರಿಗಳ, ಧಾರ್ಮಿಕರ, ದಲ್ಲಾಳಿಗಳ ಡೊಳ್ಳು ಹೊಟ್ಟೆಗಳನ್ನು ತುಂಬಿ ಅವರ ಅನಾಚಾರಗಳಿಗೆ ಅವಕಾಶ ಕಲ್ಪಿಸಿಕೊಡುತ್ತ ಬಂದಿವೆ. ಇನ್ನೂ ಹೊಕ್ಕು ನೋಡಿದರೆ ಇವು ಮಾನವನ ಸಮಾಜದಲ್ಲಿ ಅಂಧಶ್ರದ್ಧೆ, ನೈಚಾನು ಸಂಧಾನ, ವಿಚಾರಹೀನತೆ, ಸತ್ಯ ಮತ್ತು ನೈಜ ಪರಿಸ್ಥಿತಿಯಿಂದ ವಿಮುಖತೆ – ಇವುಗಳನ್ನು ಬೆಳೆಸಿದವು. ಅಲ್ಲದೆ, ಧರ್ಮ ದೇವರು ನನ್ನಿಮುಂತಾದವುಗಳನ್ನು ಮೂಲೆಗುಂಪು ಮಾಡಿ ತಮ್ಮದೆ ದರ್ಬಾರು ನಡೆಸಿದವು – ಈ ಸಂಪ್ರದಾಯ ಪಿಶಾಚಿಗಳು.

ಶೀಲ ವ್ರತ ನಿತ್ಯ ನೇಮಗಳನ್ನು ಹಿಡಿದ ಮನುಷ್ಯ ತೀರ ಅಂಜುಬುರುಕನಾಗಿರುತ್ತಾನೆ; ವೈಚಾರಿಕ ಶಕ್ತಿಯನ್ನು ಕಳೆದುಕೊಂಡಿರುತ್ತಾನೆ; ವಾಸ್ತವ ಪ್ರಪಂಚದ ಪ್ರಖರತೆಯನ್ನು ಅವನು ತಡೆಯಲಾರ; ವಾಸ್ತವ ಜಗತ್ತನ್ನು ಅವನು ಎದುರಿಸಲಾರ. ಇದ್ದುದನ್ನು ಇದ್ದಂತೆ ನೋಡುವುದಾಗಲೀ ಎದುರಿಸುವುದಾಗಲೀ ಅವನಿಗೆ ಸೇರದು. ಆದುದರಿಂದ ಅವನು ಶೀಲ ವ್ರತ ನೇಮಗಳ ನೆರವಿನಿಂದ ವಾಸ್ತವಿಕತೆಯಿಂದ ಪಲಾಯನ ಮಾಡಲು ಯತ್ನಿಸುತ್ತಾನೆ.ಇದರಿಂದ ಅನೇಕ ಸಮಸ್ಯೆಗಳುದ್ಭವಿಸಿ ಅವು ವ್ಯಕ್ತಿಗೂ, ಸಮಾಜಕ್ಕೂ ಕಂಟಕಪ್ರಾಯವಾಗಿ ಪರಿಣಮಿಸುತ್ತವೆ. ‘ಹನುಮಪ್ಪನಿಗೆ ಪ್ರತಿ ಶನಿವಾರ ತುಪ್ಪದ ದೀಪ ಬೆಳಗಬೇಕು’. ಇದು ಒಬ್ಬನ ನೇಮ. ಅಕಸ್ಮಾತ್ ತಪ್ಪಿದರೆ ಸಹಜ ಬರುವ ಕಷ್ಟ ತೊಂದರೆಗಳೆಲ್ಲಾ ಆ ನೇಮ ತಪ್ಪಿದ್ದರಿಂದಲೆ ಬಂದವು ಎಂದು ಅವನು ನಂಬುತ್ತಾನೆ. ‘ಭಗವದ್ಗೀತೆಯ ಪಠನದಿಂದ ಮನಸ್ಸಿನಲ್ಲಿ ಮಾಡಿಕೊಂಡ ಕೆಲಸವಾಗುವುದು, ಅಷ್ಟೇ ಅಲ್ಲ, ಎಲ್ಲಿಂದಲೋ ಧನ ಸಿಗುವುದು’ ಇದು ಇನ್ನೊಬ್ಬನ ನೇಮ ನಂಬುಗೆ. ಭಗವದ್ಗೀತೆ ಓದುತ್ತಾನೆ. ನೆನೆದುದು ಸಿಕ್ಕರೆ ಹಿಗ್ಗು. ಇಲ್ಲದಿದ್ದರೆ ತನ್ನ ಪಠನದಲ್ಲಿಯೇ ಏನೋ ತಪ್ಪಿದೆ ಎಂದು ತನ್ನನ್ನು ತಾನು ಹಳಿದುಕೊಳ್ಳುತ್ತಾನೆ. ಇಲ್ಲವೆ ಆ ಪಠನದ ಕಾಲಕ್ಕೆ ಹೆಂಡಿರು ಮಕ್ಕಳು ಏನಾದರೂ ತುಸು ಅಸಹಕಾರ ಮಾಡಿದರೆ ಹಾನಿಯನ್ನೆಲ್ಲ ಅವರ ತಲೆಗೆ ಕಟ್ಟುತ್ತಾನೆ. ಇದರಿಂದ ಮನೆಯಲ್ಲಿ ಮನಸ್ತಾಪಕ್ಕೆ ನಾಂದಿ; ಅಂತಃಕಲಹದ ಪ್ರಾರಂಬ. ಒದ್ದೆ ಬಟ್ಟೆಯಿಂದ ದೇವರ ಗುಡಿಗೆ ಹೋಗಿ ಪೂಜೆ ಮಾಡಬೇಕು. ಅದು ಹದಿನಾರು ಸೋಮವಾರದ ವ್ರತ. ಅಂದು ಉಪವಾಸ ಬೇರೆ. ಈ ವ್ರತದಿಂದ ಭೋಗಭಾಗ್ಯ ಬರುವುದೆಂದು ನಂಬುಗೆ. ನಡುವೆ ಜ್ವರ ಬಂದರೆ ಗತಿ? ವ್ರತ ಬಿಡಬಾರದಲ್ಲ; ಒಬ್ಬ ಹೀಗೆ ಜ್ವರ ಬಂದಾಗ ಸ್ನಾಮಾಡಿ ದೇವರ ಗುಡಿಗೆ ಹೋದ ಪೂಜೆಗೆ. ಅವನನ್ನು ಅಲ್ಲಿಂದ ಹೊತ್ತು ತರಬೇಕಾಯಿತು. ನಿಮೋನಿಯಾ ಆಗಿ ಸತ್ತು ಸತ್ತು ಬದುಕಿದ. ಸಾಲವಾಯಿತು. ಇನ್ನೇನನ್ನೋ ತಾಪತ್ರಯಗಳು ಅಡಸಿಬಂದವು. ಕರ್ಮಠರಾಗಿ ವ್ರತಗಳನ್ನು ಆಚರಿಸುವವರ ಗತಿ ಇದು.

ಹಾಗಾದರೆ ವ್ರತ ಶೀಲ ನೇಮಗಳೇ ಬೇಡವೇ? ಬೇಕು. ಮೊದಲನೆಯದಾಗಿ ವ್ರತ ಶೀಲಗಳು ಒಳ್ಳೆಯವಾಗಿರಬೇಕು, ತತ್ವಮಯವಾಗಿರಬೇಕು. ಎರಡನೆಯದಾಗಿ ಅವುಗಳನ್ನು ಅರಿತು ಆಚರಿಸಬೇಕು. ತತ್ವವನ್ನು ತಿಳಿಯದೆ, ಜೀವನವನ್ನು ಅರಿಯದೆ, ಪರಿಸ್ಥಿತಿಯನ್ನು ವಿಚಾರಿಸದೆ ವ್ರತಶೀಲಗಳ ಆಚರಣೆ ಕೈಕೊಂಡರೆ ಏನಾಗುವುದೆಂಬುದಕ್ಕೆ ಚೆನ್ನಬಸವಣ್ಣನವರ ಈ ವಚನವನ್ನು ಮನನಮಾಡಬೇಕು –

ಸುಖವನರಿಯದ ಕಾರಣ ಹೆಂಗಸು ಸೂಳೆಯಾದಳು.
ಶಿವಲಿಂಗವನ್ನರಿಯದ ಕಾರಣ ಭಕ್ತ ಶೀಲವಂತನಾದ.
ಉಭಯ ಕುಲಸ್ಥಲದವು ನಿಷ್ಪತ್ತಿಯಾಗದನ್ನಕ್ಕರ,
ಕೂಡಲ ಚನ್ನಸಂಗಮದೇವನೆಂತೊಲಿವನಯ್ಯಾ

ತತ್ವವನ್ನರಿಯದ ಕಾರಣ ಸೂಳೆಗೂ ಶೀಲವಂತನಿಗೂ ವ್ಯತ್ಯಾಸವುಳಿಯಲಿಲ್ಲ; ಅವಳದು ದೇಹದ ವ್ಯಭಿಚಾರವಾದರೆ ಇವನದು ವಿಚಾರದ ವ್ಯಭಿಚಾರ. ತತ್ವ ತಿಳಿಯದವನು ಶೀಲವಂತನಾದರೆ ತತ್ವ ತಿಳಿದವನು ಶೀಲಸಂಪಾದನಕಾರನಾಗುತ್ತಾನೆ. ಈ ವಿಚಾರವನ್ನು ಮುಂದೆ ವಿವರಿಸುವೆ.

ಶೀಲ, ವ್ರತ ನೇಮಗಳು ಬೇಕು. ಶರಣರು ಅವುಗಳನ್ನು ಬೇಡವೆನ್ನುವುದಿಲ್ಲ. ಆದರೆ ಅವು ಕೇವಲ ಬಾಹ್ಯಚರಣೆಗೆ ಸಂಬಂಧಪಟ್ಟು ತತ್ವಹೀನವಾಗಿ ಕಟ್ಟಾಚಾರಗಳಾಗಿ ಜೀವನವನ್ನು ಕೆಡಿಸಬಾರದೆಂಬುದು ಶರಣರ ಆಶಯ. ಅಂತೆಯೇ ಅವರು ಹಿಂದಿನ ವ್ರತಶೀಲ ನೇಮಗಳನ್ನು ಅಳಿಸಿ ಹೊಸ ವ್ರತಶೀಲ ನೇಮಗಳನ್ನು ಸ್ಥಾಪಿಸಿ ಬಳಕೆಯಲ್ಲಿ ತಂದರು:

ಪರಧನವ ಒಲ್ಲದಿಪ್ಪುದೇ ವ್ರತ,
ಪರಸ್ತ್ರೀಯರ ಕೂಡದಿಪ್ಪುದೇ ಶೀಲ
ಸರ್ವಜೀವರ ಕೊಲ್ಲದಿಪ್ಪುದೇ ನೇಮ,
ತಥ್ಯಮಿಥ್ಯವನಳಿದಿಪ್ಪುದೇ ನಿತ್ಯನೇಮ
ಇದು ಈಶಾನ್ಯಮೂರ್ತಿ ಮಲ್ಲಿಕಾರ್ಜುನನ ಲಿಂಗಕ್ಕೆ
ಸಂದೇಹವಿಲ್ಲದೆ ವ್ರತ[1]

ಶಿವಲೆಂಕ ಮಂಚಣ್ಣನ ಈ ವಚನ ನೇಮ, ಸತ್ಯ, ಶೀಲ, ವ್ರತಗಳೇನೆಂಬುದನ್ನು ಸರಿಯಾಗಿ ಸಾರುತ್ತದೆ. ಜೀವನವನ್ನು ಪರಿಶುದ್ಧವಾಗಿಡುವುದೇ ಶೀಲ. ಅಹಿಂಸೆಯೇ ನಿಜವಾದ ನೇಮ. ಸತ್ಯದ ಸಾಕ್ಷಾತ್ಕಾರವೇ ನಿತ್ಯನೇಮ.

ಬಂದುದ ಕೈಕೊಳ್ಳಬಲ್ಲರೆ ನೇಮ.
ಇದ್ದುದ ವಂಚನೆ ಮಾಡದಿದ್ದರೆ ಅದು ನೇಮ
ನಡೆದು ತಪ್ಪದಿದ್ದರೆ ನೇಮ, ನುಡಿದು ಹುಸಿಯದಿದ್ದರೆ ನೇಮ,
ನಮ್ಮ ಕೂಡಲಸಂಗನ ಶರಣರು ಬಂದರೆ
ಒಡೆಯರಿಗೊಡವೆಯನೊಪ್ಪಿಸುವುದೇ ನೇಮ.[2]

ಅದು ಇದು ಎಂದು ಗೊಣಗದೇ ಧೀರನಾಗಿ ಬಂದುದನ್ನು ಅನುಭವಿಸಬೇಕು; ಅನುಭವಿಸಿ ಅದನ್ನು ಶಿವನಿಗೆಡೆಮಾಡಬೇಕು. ಇಲ್ಲದ್ದಕ್ಕೆ ಕೈಹಾಕುವವ ಜಾಣನಲ್ಲ. ಇದ್ದುದನ್ನು, ಬಂದುದನ್ನು ಶಿವನೊಲುಮೆ – ಅವಿಚಾರಿಯಾಗಿ ಹೇಡಿಯಾಗಿ ಅಲ್ಲ, ವಿಚಾರವುಳ್ಳ ಧೀರನಾಗಿ – ಎಂದು ಸ್ವೀಕರಿಸುವುದೇ ನಿಜವಾದ ನೇಮ. ಈ ವಚನದಲ್ಲಿ ಕಾಯಕ ಮತ್ತು ದಾಸೋಹಗಳೇ ನೇಮಗಳೆಂಬ ಧ್ವನಿಯಿದೆ. ಅಲ್ಲದೆ ನಡೆ – ನುಡಿ ಒಂದಾಗಬೇಕು; ಅದು ನೇಮ. ಇಷ್ಟೇ ಅಲ್ಲ, ಸರ್ವಾರ್ಪಣಭಾವ ಮತ್ತುಅದರಂತೆ ಆಚಾರ – ಇವು ನಿಜವಾದ ನೇಮಗಳು. ಒಟ್ಟಾರೆ ಬದುಕನ್ನು ಹಸನುಗೊಳಿಸಿ ಅದನ್ನು ಶಿವನತ್ತ ಒಯ್ಯುವುದೇ ನೇಮ.

ವ್ರತ ಶೀಲಗಳು ಲಿಂಗಾಂಗ ಸಾಮರಸ್ಯಕ್ಕೆ ದಾರಿಮಾಡಿಕೊಡುತ್ತದೆ ಎಂಬುದು ಮೇಲಿನ ವಚನಗಳಲ್ಲಿ ಅಡಗಿರುವ ಮುಖ್ಯ ಭಾವ. ಷಣ್ಮುಖ ಸ್ವಾಮಿಗಳು ಇದಕ್ಕೂ ಮುಂದೆ ಹೋಗುತ್ತಾರೆ; ಶೀಲವೇ ಲಿಂಗಾಂಗ ಸಾಮರಸ್ಯವೆಂದು ಹೇಳುತ್ತಾರೆ:

ಇಷ್ಟಲಿಂಗದಲ್ಲಿ ತನುವಡಗಿ,
ಪ್ರಾನಲಿಂಗದಲ್ಲಿ ಮನವಡಗಿ,
ಭಾವಲಿಂಗದಲ್ಲಿ ಜೀವವನಿಕ್ಷೇಪಿಸಿ,
ಇಷ್ಟಪ್ರಾಣ ಭಾವಲಿಂಗ ಒಂದಾದ
ಮಹಾಘನ ಪರಬ್ರಹ್ಮದಲ್ಲಿ ತಾನಡಗಿ,
ತಾನೆಂದ ನೆನಹಡಗಿ, ದ್ವಂದ್ವಕರ್ಮಂಗಳ ನೀಗಿ,
ಪರಿಪೂರ್ಣ ಬ್ರಹ್ಮವೇ ತಾನಾದುದೇ
ಮಹಾಶೀಲವಯ್ಯಾ ಅಖಂಡೇಶ್ವರಾ[3]

ವೀರಶೈವ ಪರಿಭಾಷೆಯಲ್ಲಿ ಶೀಲದ ಜೊತೆಗೆ ಸಂಪಾದನೆ ಎನ್ನುವ ಶಬ್ದವೂ ಬರುತ್ತದೆ. ಶೂನ್ಯ ಸಂಪಾದನೆ ಎನ್ನುವಂತೆ ಶೀಲಸಂಪಾದನೆ ಎನ್ನುವುದೂ ಉಂಟು. ಶುನ್ಯ ಸಂಪಾದನೆಗಿರುವಷ್ಟೆ ಮಹತ್ವ, ಅರ್ಥವ್ಯಾಪ್ತಿ ಶೀಲಸಂಪಾದನೆಗೂ ಉಂಟು.

ಶೂನ್ಯ ಎಂದರೆ ಶಿವ, ಲಿಂಗ, ಪರತತ್ವ. ಇದರಂತೆ ಸಂಪಾದನೆ ಎಂದರೆ ಕೇವಲ ಗಳಿಕೆ ಎಂದರ್ಥವಲ್ಲ. ಶುನ್ಯದ ಅರ್ಥವೇ ಅದಕ್ಕಿದೆ. ಶೂನ್ಯವನ್ನು, ಬಯಲನ್ನು, ಪರತತ್ವವನ್ನು ಗಳಿಸುವುದೆಂದರ್ಥವಲ್ಲ. ಸಂಪಾದನೆಯೆಂದರೆ, ಗಳಿಸುವುದೆಂದರೆ ಅಲ್ಲಿ ದ್ವಂದ್ವ ಉಳಿಯಿತು. ಸಂಪಾದನೆ ಎಂದರೆ ಆ ಶೂನ್ಯವೇ ತಾನಾಗುವುದು. “ಸಂಪಾದನೆ ಎಂದರೆ ಅನುಭವ” ಎಂದು ಡಾ|| ತಿಪ್ಪೇರುದ್ರಸ್ವಾಮಿಯವರು ಹೇಳುತ್ತಾರೆ. ಅವರ ಮತ್ತು ಸತ್ಯ. ಅನುಭಾವ ಎಂದರೆ ಪರತತ್ವ ತಾನಾಗುವುದೇ ಎಂದರ್ಥ. ಇನ್ನು ಶೀಲ ಸಂಪಾದನೆಯ ಅರ್ಥ ಏನಾಗುವುದು ನೋಡುವಾ: ಶಿಲ ಸಂಪಾದನೆ ಎಂದರೆ ಶೀಲದ ಅನುಭಾವ, ಎಂದರೆ ಶೀಲವೇ ತಾನಾಗುವುದು. “ಶೀಲವೆಂದರೆ ಬ್ರಹ್ಮ; ಬ್ರಹ್ಮವೇ ತಾನಾದುದೇ ಶೀಲ” ಎಂದು ಷಣ್ಮುಖ ಸ್ವಾಮಿಗಳು ಅಪ್ಣಣೆಕೊಡಿಸಿದ್ದನ್ನು ಹಿಂದೆಯೇ ನೋಡಿದ್ದೇವೆ. ಶೀಲ ಸಂಪಾದನೆ ಎಂದರೆ ಶೂನ್ಯ ಸಂಪಾದನೆಯೇ ಎಂದಂತಾಯಿತು. ಎಂದಂತಾಯಿತು ಏಕೆ? ಶೂನ್ಯ ಸಂಪಾದನೆಯೇ ಆಯಿತು.

ಶೀಲ ವ್ರತಗಳಿಗೆ ಕರ್ಮಠತನವನ್ನಂಟಿಸಿ ಹಿಂದಿನವರು ಅವುಗಳನ್ನು ಕುಲಗೆಡಿಸಿದ್ದರು; ಅರ್ಥಗೆಡಿಸಿದ್ದರು; ಸಮಾಜಕ್ಕೆ ಕಂಟಕಪ್ರಾಯಗಳನ್ನಾಗಿ ಮಾಡಿದ್ದರು. ‘ಶೀಲ’ ಎಂಬ ಶಬ್ದದ ಅರ್ಥಕ್ಕೆ ವಿರೋಧವಾಗಿತ್ತು ಅದರ ಆಚರಣೆ. ಅಂಥ ಶೀಲಕ್ಕೆ ಶರಣರು ಶಸ್ತ್ರಚಿಕಿತ್ಸೆ ಮಾಡಿದರು; ಹೊಸ ಜೀವವಿತ್ತರು. ಸಾಮಾನ್ಯವಾದುದನ್ನು ಅಸಮಾನ್ಯವಾಗಿಸಿ ಲಿಂಗಾಂಗ ಸಾಮರಸ್ಯದ ಮಟ್ಟಕ್ಕೆ ಅದನ್ನೇರಿಸಿದರು – ಶರಣರು.

ಸರ್ವಪುರಾತನರ ವಚನ ಕಟ್ಟುಗಳಲ್ಲಿ “ಶೀಲ ಸಂಪಾದನೆಯ ವಚನಗಳು” ಎಂಬ ತಲೆಬರಹದಡಿಯಲ್ಲಿ ಕೇವಲ ಶರಣೆಯರ ವಚನಗಳನ್ನು ಮಾತ್ರ ಸಂಕಲಿಸಲಾಗಿದೆ. ಶರಣರ ವಚನಗಳನ್ನು ಇಲ್ಲಿ ಏಕೆ ತೆಗೆದುಕೊಂಡಿಲ್ಲ ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. ವ್ರತ, ನೇಮ, ಶೀಲಗಳ ಆಚರಣೆಯಲ್ಲಿ ಹೆಂಗಸರು ಗಂಡಸರಿಗಿಂತ ಗಟ್ಟಿಗರೆಂದು ಸಂಕಲನಕಾರರ ಅಭಿಪ್ರಾಯವಾಗಿರಬಹುದೇ? “ಸರ್ವಪುರಾತನರ ವಚನ” ಎಂಬ ತಮ್ಮ ಸಂಪಾದನೆಯ ಗ್ರಂಥದಲ್ಲಿ ಶ್ರೀ ಚೆನ್ನಮಲ್ಲಿಕಾರ್ಜುನರು ಶೀಲಸಂಪಾದನೆಯ ವಚನಗಳನ್ನು ಕುರಿತು ಹೀಗೆ ಬರೆದಿದ್ದಾರೆ: “ಹೆಣ್ಣು ಮಕ್ಕಳಲ್ಲಿ ಧರ್ಮವು ವ್ಯಾಪಿಸಿದರೆ ಆ ಧರ್ಮದಿಂದ ಸಮಾಜವೇ ಸುಧಾರಣೆಯಾಗುತ್ತದೆ ಎಂಬ ಅಭಿಪ್ರಾಯದಿಂದಲೇ ಶೀಲ ಸಂಪಾದನೆಯ ಭಾಗವು ಸ್ತ್ರೀಯರಿಗೆ ವಹಿಸಲ್ಪಟ್ಟು ಅವರು ಆಚರಿಸಿ ನುಡಿದ ವಚನಗಳೇ ಇಲ್ಲಿ ಬಂದಿವೆ”[4]

ಈ ಅಭಿಪ್ರಾಯ ಒಂದು ದೃಷ್ಟಿಯಿಂದ ಸರಿ ಇದೆಯೆಂದೇ ಒಪ್ಪಿಕೊಂಡರೂ ಶೀಲದಲ್ಲಿ ಶರಣರನ್ನು ಕಡಿಮೆ ಎಂದೇನೂ ಅರ್ಥಮಾಡುವಂತಿಲ್ಲ. ಪ್ರಸಾದ ಸಂಪತ್ತು, ಭಕ್ತಿ ಸಂಪತ್ತು ಮುಂತಾದವುಗಳಲ್ಲಿ ಒಬ್ಬೊಬ್ಬ ಶರಣ ಒಂದೊಂದು ವೈಶಿಷ್ಟ್ಯವನ್ನು ಗಳಿಸಿಕೊಂಡಂತೆ ಶೀಲ ಸಂಪಾದನೆಯಲ್ಲಿ ಶರಣೆಯರು ವೈಶಿಷ್ಟ್ಯವನ್ನು ಮೆರೆದಿರಬೇಕು.

ಶ್ರೀಚೆನ್ನಮಲ್ಲಿಕಾರ್ಜುನರು ಸಂಪಾದಿಸಿದ ಸರ್ವಪುರಾತನರ ವಚನ ಎಂಬ ಗ್ರಂಥದಲ್ಲಿ ಶೀಲಸಂಪಾದನೆಯ ವಚನಗಳನ್ನು ಬರೆದ ಶರಣೆಯರ ಸಂಖ್ಯೆ ೧೭ ಇದೆ. ಡಾ|| ಆರ್.ಸಿ. ಹಿರೇಮಠರು ಸಂಪಾದಿಸಿದ ಶಿವಶರಣೆಯರ ವಚನಗಳು (ಸಮಗ್ರ ಸಂಪುಟ) ಎಂಬ ಗ್ರಂಥದಲ್ಲಿ ಶೀಲವ್ರತ ನೇಮಗಳನ್ನು ಹೇಳಿದ ಶರಣೆಯರ ಸಂಖ್ಯೆಯೂ ಹದಿನೇಳೇ ಇದೆ. ಆದರೆ ಈ ಗ್ರಂಥದಲ್ಲಿ “ಶೀಲಸಂಪಾದನೆಯ ವಚನಗಳು” ಎಂಬ ತಲೆಬರಹವಿಲ್ಲ. ಆ ಗ್ರಂಥದಲ್ಲಿ ಮೂರನೆಯ ಭಾಗದ ಪ್ರಸ್ತಾವನೆಯಲ್ಲಿ, “ಸರ್ವ ಪುರಾತನರ ವಚನಗಳ ಕಟ್ಟುಗಳಲ್ಲಿ ‘ಶೀಲ ಸಂಪಾದನೆಯ ವಚನಗಳು’ ಎಂಬ ಶೀರ್ಷಿಕೆಯಲ್ಲಿ ಕೆಲವು ಜನ ಶಿವಶರಣೆಯರ ವಚನಗಳೂ ಕಂಡುಬರುತ್ತವೆ” ಎಂದು ಡಾ|| ಆರ್.ಸಿ. ಹಿರೇಮಠರು ಬರೆದಿದ್ದಾರೆ. ಆ ವಚನಗಳು ಪ್ರಾರಂಭವಾಗುವಲ್ಲಿ ಈ ತಲೆಬರಹ ಕೊಟ್ಟಿದ್ದರೆ ಚೆನ್ನಾಗಿತ್ತು.

ಇವರು ಶೀಲ ಸಂಪಾದನೆಯ ವಚನಕಾರ್ತಿಯರು.[5]

೧. ಉರಿಲಿಂಗಪೆದ್ದಿಗಳ ಪುಣ್ಯ ಸ್ತ್ರೀ ಕಾಳವ್ವೆ
೨. ಎಡೆಮಠದ ನಾಗಿದೇವಯ್ಯಗಳ ಪುಣ್ಯ ಸ್ತ್ರೀ ಮಸಣಮ್ಮ
೩. ಹರದರ ಮಾಚಯ್ಯ (ಹಾದರದ ಕಾಯಕದ ಮಾರಯ್ಯ)ಗಳ ಪುಣ್ಯ ಸ್ತ್ರೀ ಗಂಗಮ್ಮ
೪. ಕೊಂಡೆಮಂಚಣ್ಣಗಳ ಪುಣ್ಯ ಸ್ತ್ರೀ ಲಕ್ಷ್ಮಮ್ಮ
೫. ರಾಯಸದ ಮಂಚಣ್ಣ(ಅಮುಗಿ ದೇವಯ್ಯ)ಗಳ ಪುಣ್ಯ ಸ್ತ್ರೀ ರಾಮಮ್ಮ
೬. ಕಾಲಕಣ್ಣಿಯ ಕಾಮಮ್ಮ
೭. ಗುಂಡಯ್ಯಗಳ ಪುಣ್ಯ ಸ್ತ್ರೀ ಕೇತಲದೇವಿ
೮. ಕಾಲಕೂಟಯ್ಯಗಳ ಪುಣ್ಯ ಸ್ತ್ರೀ ರೇಚವ್ವೆ
೯. ಕೊಟ್ಟಣದ ಸೋಮವ್ವೆ
೧೦. ಬಾಚಿಕಾಯದ ಬಸವಪ್ಪಯ್ಯಗಳ ಪುಣ್ಯ ಸ್ತ್ರೀ ಕಾಳವ್ವೆ
೧೧. ದಸರಯ್ಯಗಳ ಪುಣ್ಯ ಸ್ತ್ರೀ ವೀರಮ್ಮ
೧೨. ಬತ್ತಲೇಶ್ವರ ದೇವರ ಪುಣ್ಯ ಸ್ತ್ರೂ ಗುಡ್ಡವ್ವೆ
೧೩. (ಏಲೇಶ್ವರ ಕೇತಯ್ಯಗಳ ಪುಣ್ಯ ಸ್ತ್ರೀ?) ಅಕ್ಕಮ್ಮ
೧೪. ಕದಿರ ಕಾಯಕದ ಕಾಳವ್ವೆ
೧೫. ಕನ್ನಡಿ ಕಾಯಕದ ರೇಮಮ್ಮ
೧೬. ಸೂಳೆ ಸಂಕವ್ವೆ
೧೭. ಸಿದ್ಧಬುದ್ಧಯ್ಯಗಳ ಪುಣ್ಯ ಸ್ತ್ರೀ ಕಾಳವ್ವೆ

ಈ ಹದಿನೇಳು ಶರಣೇಯರು ಶೀಲವ್ರತ ನೇಮಗಳನ್ನು ಕುರಿತು ಬಹು ಸುಂದರವಾದ ವಚನಗಳನ್ನು ಹಾಡಿದ್ದಾರೆ. ಕೆಲವು ಶರಣೆಯರ ಒಂದೊಂದೇ ವಚನ ಸಿಕ್ಕಿವೆ. ಆ ಒಂದು ವಚನದಲ್ಲಿ ಅವರು ವ್ರತದ ಬಗೆಗೆನ ಖಚಿತವಾದ ಸ್ಪಷ್ಟವಾದ ತಿಳಿವಳಿಕೆಯನ್ನು ನೀಡುತ್ತಾರೆ. ಅಲ್ಲದೆ ಈ ಶರಣೆಯರು ತಮ್ಮ ತಮ್ಮ ಕಾಯಕಗಳನ್ನೇ ರೂಪ, ಉಪಮೆ, ದೃಷ್ಟಾಂತಗಳನ್ನಾಗಿ ಉಪಯೋಗಿಸಿ ತತ್ವದ ಅರ್ಥವನ್ನು ಸೌಂದರ್ಯವನ್ನು ಹೆಚ್ಚಿಸಿದ್ದಾರೆ.

ಈ ಹದಿನೇಳು ಶರಣೆಯರಲ್ಲಿ ಹದಿನಾರು ಶರಣೆಯರದು ಒಂದು ತೂಕವಾದರೆ ಏಲೇಶ್ವರದ ಅಕ್ಕಮ್ಮನವರದೇ ಒಂದು ತೂಕ. ಆಕೆಯ ವಚನಗಳು ಎಲ್ಲ ದೃಷ್ಟಿಯಿಂದ ಮೇಲ್ಮಟ್ಟದವು. ಆಕೆಯ ತರ್ಕದೆದುರಿಗೆ ನಿಲ್ಲುವವನಿಗೆ ಎಂಟೆದೆಯೇ ಬೇಕು. ಜೀವನದ ಆಳವಾದ ಅಪಾರವಾದ ಅನುಭವ ಅಕ್ಕಮ್ಮನಿಗಿದೆ. ಬಂಧುರವಾದ ಸುಸಂಸ್ಕೃತವಾದ ಶೈಲಿ. ಜೀವಂತ ಉಪಮೆ ಉದಾಹರಣೆಗಳು. ಮೊನಚಾದ ಒಂದೊಂದು ಮಾತು ಒಂದೊಂದು ಶಾಸನ. ಅಕ್ಕಮ್ಮನ ವ್ರತದ ವ್ಯಾಖ್ಯೆ ಇಲ್ಲೆ:

ಅಕ್ಕಿ ಬೇಳೆ ಬೆಲ್ಲ ಮೆಣಸು ಅಡಕೆ ಫಲ ರಸದ್ರವ್ಯ ಮುಂತಾದ
ದ್ರವ್ಯಕ್ಕೆ ವ್ರತವೋ ಮುಟ್ಟುವ ತಟ್ಟುವ ಸೋಂಕುವ ಚಿತ್ತಕ್ಕೆ ವ್ರತವೋ?
ಇವು ಬಾಹ್ಯದಲ್ಲಿ ಮಾಡುವ ಸೌಕರ್ಯವಲ್ಲದೆ ವ್ರತಕ್ಕೆ ಸಲ್ಲ
ವ್ರತವಾವುದೆಂಡದೆ:

ತನ್ನಯ ಸ್ವಪ್ನದಲ್ಲಿ ತನಗಲ್ಲದುದ ಕಂಡಡೆ,
ತಾ ಮುಟ್ಟದುದ ಮುಟ್ಟಿದಡೆ, ತಾ ಕೊಳ್ಳದುದ ಕೊಂಡಡೆ,
ಸೂಕ್ಷ್ಮ ತನುವಿನಲ್ಲಿ ತನುವಂ ಬಿಟ್ಟು ನಿಂದುದು ವ್ರತ.
ಸ್ಥೂಲ ತನುವಿನಲ್ಲಿ ಸರ್ವರ ನಿಂದೆಗೊಡಲಾಗದೆ
ಮಾಡಿಕೊಂಡ ನೇಮಕ್ಕೆ ಕೇಡು ಬಂದಲ್ಲಿ,

ಅಂಗಕ್ಕೆ ಓಸರಿಸದೆ ನಿಂದುದು ಆಚಾರ.
ಇಂತೀ ಅಂತರಂಗದಲ್ಲಿ ವ್ರತ, ಬಹಿರಂಗದಲ್ಲಿ ಆಚಾರ
ಇಂತೀ ಉಭಯ ಸಿದ್ಧವಾಗಿ ನಡೆವುದೆ ವ್ರತ ಆಚಾರ[6]

ಇನ್ನುಳಿದ ಶರಣೆಯರು ವ್ರತಶೀಲಗಳನ್ನು ಕುರಿತು ಅರ್ಥವತ್ತಾದ ವಚನಗಳನ್ನು ರಚಿಸಿದ್ದಾರೆ.

ವ್ರತವೆಂಬುದು ನಾಯಕರತ್ನ; ವ್ರತವೆಂಬುದು ಸುಪ್ಪಾಣಿಯ ಮುತ್ತ
ವ್ರತವೆಂಬುದು ಜೀವಕಳೆ…..”[7]

ಎನ್ನುತ್ತಾಳೆ ಉರಿಲಿಂಗ ಪೆದ್ದಿಗಳರಸಿ ಕಾಳವ್ವೆ. ಮುಂದುವರಿದ ಆಕೆ “ಅರ್ಥ ಪ್ರಾಣಾಭಿಮಾನದ ಮೇಲೆ ಬಂದರೂ ಬರಲಿ ವ್ರತಹೀನನ ನೆರೆಯಲಾಗದು” ಎಂದು ನುಡಿಯುತ್ತಾಳೆ. ಅಷ್ಟೇ ಅಲ್ಲ, ಆ ವ್ರತಹೀನನನ್ನು “ನೋಡಲು ನುಡಿಸಲು ಎಂದೂ ಆಗದು” ಎಂದು ಹೇಳಿ, ಒಂದು ವೇಳೆ “ಪಾಪವಶದಿಂದ ನೋಡಿದರೆ, ರುದ್ರಜಪ ಮಾಹೇಶ್ವರಾರಾಧನೆ” ಮಾಡಬೇಕೆಂದು ಅಭಿಪ್ರಾಯವೀಯುತ್ತಾಳೆ.

ವ್ರತ ಭ್ರಷ್ಟರು ಬಾಳಬಾರದು; ಅವರಿಂದ ಲೋಕಕ್ಕೆ ಕಂಟಕ. ಅದುದರಿಂದ ಅವರನ್ನು ‘ನಿಟ್ಟೊರಸುವೆ’ ಎನ್ನುತ್ತಾಳೆ ಕಾಲಕಣ್ಣಿಯ ಕಾಮಮ್ಮ. ಅವರನ್ನು “ಸುಟ್ಟು ತುಱತುಱನೆ ತೂರುವಳಂತೆ”, ಈ ಮಾತುಗಳಲ್ಲಿ ಹಿಂಸೆಯಿಲ್ಲ, ಕ್ರೌರ್ಯವಿಲ್ಲ. ಕಳಕಳಿಯಿದೆ; ಅಶುಭವನ್ನು, ಅಲ್ಲದ್ದನ್ನು ಭ್ರಷ್ಟತನವನ್ನು ಅಳಿಸುವ ದಿಟ್ಟತನವಿದೆ. ಆ ಶರಣೆ ಒರಸುವುದು, ಸುಡುವುದು ಮನುಷ್ಯನನ್ನಲ್ಲ; ಅವನ ಭ್ರಷ್ಟತನವನ್ನು. ಆಕೆ ತನ್ನ ಕಾಯಕವನ್ನು ರೂಪಕ ಮಾಡಿರುವುದು ನೋಡಿರಿ:

ಎನ್ನ ಕರಣಂಗಳ ಲಿಂಗದಲ್ಲಿ ಕಟ್ಟುವೆ;
ಗುರುಲಿಂಗ ಜಂಗಮದ ಕಾಲು ಕಟ್ಟುವೆ.”[8]

ದನಗಳನ್ನು ಕಟ್ಟುವ ಕಣ್ಣಿಗಳನ್ನು ಹೊಸೆವ ಕಾಯಕ ಕಾಮಮ್ಮನದು. ಆ ಕಾಯಕವನ್ನೇ ರೂಪ ಮಾಡಿಕೊಂಡು ಇರುವಿನ ತತ್ವವನ್ನು ಹೇಳುವಲ್ಲಿ ಎಂಥ ಸೊಗಸಿದೆ! ಎಂಥ ಸೌಂದರ್ಯವಿದೆ! ಅರ್ಥ ಸಂಪತ್ತಿಗೂ ಇಲ್ಲಿ ಕೊರತೆಯಿಲ್ಲ.

ಕರಣಗಳೂ ಪಶುಗಳೇ. ಅವುಗಳಿಗೂ ಕಟ್ಟಲು ಹಗ್ಗಬೇಕು. ಲಿಂಗವೆಂಬ ಹಗ್ಗದಿಂದ ಕರಣಗಳೆಂಬ ಪಶುಗಳನ್ನು ಕಟ್ಟುತ್ತಾಳಂತೆ. ಲಿಂಗದ ಸೋಂಕಿನಿಂದ ಅಂಗಗುಣವಳಿದು ಕರಣಗಳಿಗೆ ಲಿಂಗಗುಣ ಬರುವುದು. ಈ ಮಾತು, ಈ ರೂಪಕ ಅತ್ಯಂತ ಜೀವಂತವಗಿದೆ; ಲೋಕದ ಸಾಹಿತ್ಯೇತಿಹಾಸದಲ್ಲಿ ಇಂಥ ಮಾತು ಕಂಡುದಿಲ್ಲ; ಕೇಳಿದಿಲ್ಲ. ತತ್ವಸೌಂದರ್ಯ, ಕಾವ್ಯಸೌಂದರ್ಯಗಳ ಜೊತಗೆ ಸಫಲಗೊಂಡ ಜೀವನ ಸೌಂದರ್ಯವೂ ಇಲ್ಲದೆ. ಅಲ್ಲದೆ ಒಬ್ಬ ಕಣ್ಣಿಕಾಯಕದ ಸಾಮಾನ್ಯ ಹೆಣ್ಣು ಆಧ್ಯಾತ್ಮದಲ್ಲಿ ಏರಿದ ಎತ್ತರವೂ ಇಲ್ಲಿ ನಿಚ್ಚಳವಾಗಿ ಕಾಣುತ್ತದೆ. ಇಂಥ ಸಾಮಾನ್ಯರ ಬದುಕನ್ನು ತತ್ವಮಯ ಸೌಂದರ್ಯಮಯ ಸಾರ್ವತ್ರಿಕವಾಗಿ ಮಾಡಿದವರೆಂದರೆ ಲೋಕದ ಇತಿಹಾಸದಲ್ಲಿ ಶರಣರೇ; ಮತ್ತಾರು ಅಲ್ಲ. ಅವರ ವ್ರತಶೀಲಗಳು ಇಂಥ ಬದುಕನ್ನು ಅರಳಿಸಲಿಕ್ಕೆ ಇದ್ದುವು; ಇವೆ.

ಲಿಂಗದ ಕಟ್ಟಿನಿಂದ ಕರಣಗಳು ಅಂಗಗುಣವಳಿಯುತ್ತವೆ. ಆ ಬಳಿಕ ಅವು ಗುರುಲಿಂಗ ಜಂಗಮರನ್ನು ಒಲಿಸಲು ಯೋಗ್ಯವಾಗುತ್ತವೆ. “ಗುರುಲಿಂಗ ಜಂಗಮದ ಕಾಲಕಟ್ಟುವೆ” ಎಂಬ ಮಾತಿನಲ್ಲಿ ಕಾಮಮ್ಮ ಈ ಅರ್ಥವನ್ನೇ ಹುದುಗಿಸಿಟ್ಟಿದ್ದಾಳೆ.

ಶೀಲಸಂಪಾದನೆಯ ವಚನಗಳಲ್ಲಿ ಆಗಿನ ಕಾಲದ ಧಾರ್ಮಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಜನಪ ನಿತ್ಯನಡೆವಳಿಕೆಗಳನ್ನು ಸ್ಪಷ್ಟವಾಗಿ ಗುರುತಿಸಬಹುದು. ಸಂಪ್ರದಾಯಗಳೇ ‘ಕರ್ಮ’ಗಳೇ ಧರ್ಮವೆಂದು ಜನರು ನಂಬಿದ್ದರು, ಅಥವಾ ಅವರನ್ನು ನಂಬಿಸಲಾಗಿತ್ತು. ಬಾಹ್ಯಾಚರಣೆಗೇ ಪ್ರಾಶ್ಯಸ್ತ್ಯವಿತ್ತು; ಡಾಂಭಿಕನಿಗೆ ಬೆಲೆಯಿತ್ತು. ಕರ್ಮಠತನ ಹೆಚ್ಚಿದಷ್ಟೂ ಜನ ಅದನ್ನು ಒಳ್ಳೆಯದೆಂದು ತಿಳಿದು ಗೌರವಿಸುತ್ತಿತ್ತು. ಪುರೋಹಿತರು, ಪೂಜಾರಿಗಳು, ದೊಡ್ಡ ಜಾತಿಯವರು ಶುಷ್ಕವ್ರತನೇಮಗಳನ್ನು ಸೃಷ್ಟಿಸಿ, ಅವುಗಳನ್ನು ಜನರು ಆಚರಿಸುವಂತೆ ಮಾಡಿ ತಾವು ಡೊಳ್ಳನ್ನು ತುಂಬಿ ಬೆಳೆಸುತ್ತಿದ್ದರು. ಅನೀತಿ, ಅನಾಚಾರ, ಸುರಾಪಾನ ಮುಂತಾದ ವಾಮಮಾರ್ಗಗಳೇ ವ್ರತಗಳೆನಿಸಿಕೊಂಡಿದ್ದುವು. ಈ ವ್ರತಗಳ ಅಭ್ಯಾಸದಿಂದ, ಆಗಿನ ಮಾನವ ಎಷ್ಟರಮಟ್ಟಿಗೆ ತನ್ನ ಬುದ್ದಿಯನ್ನು ಕಳೆದುಕೊಂಡಿದ್ದನೆಂಬುದು ತಿಳಿದುಬರುತ್ತದೆ. ಒಂದಿನಿತು ವಿಚಾರದ ವಿವೇಚನೆಯ ಶಕ್ತಿಯೂ ಅವನಲ್ಲಿರಲಿಲ್ಲ. ಹಿಂಸಾಚಾರದ ವ್ರತಗಳನ್ನು ನೆನೆದಾಗ ಕರುಣೆಗೂ ಅವನಲ್ಲಿ ಕೊರತೆಯಿತ್ತು ಎಂದು ತಿಳಿಯುತ್ತದೆ. ವಾಮಮಾರ್ಗದ ವ್ರತಗಳು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿದ್ದುದಲ್ಲದೆ ಸತ್ಯ, ನನ್ನಿ, ಕರುಣೆ ಮುಂತಾದವುಗಳಿಂದ ವ್ಯಕ್ತಿಯನ್ನು ವಂಚಿತಗೊಳಿಸುತ್ತಿದ್ದವು. ಸಾಮಾನ್ಯ ಜನರ ಮಾನಸಿಕ ಆರೋಗ್ಯ ಸರಿಯಾಗಿದ್ದಿಲ್ಲವೆಂದೇ ಈ ವ್ರತಗಳು ಸಾರುತ್ತವೆ. ಭಯ, ಭವಿಷ್ಯತ್ತಿನ ಚಿಂತೆ, ಭೂತ, ವಶೀಕರಣ ಮುಂತಾದವುಗಳನ್ನು ಕುರಿತ ವ್ರತಗಳು ಮಾನವನ ಪ್ರಗತಿಗೆ ಮಾರಕವಾಗಿ ಅವನನ್ನು ನಿರಂತರವಾಗಿ ಅಜ್ಞಾನದಲ್ಲಿಟ್ಟಿದ್ದವು. ಸುಖಕ್ಕಾಗಿ, ಸಂಪತ್ತಿಗಾಗಿ, ಹೆಸರಿಗಾಗಿ ವ್ರತನೇಮಗಳನ್ನು ಕೈಕೊಂಡು ಜನ ಯಾವಾಗಲೂ ಬಳಲುತ್ತಿತ್ತು. ಮಡಿ, ಮೈಲಿಗೆ ಮುಂತಾದ ವ್ರತಗಳಿಂದ ಪುರೋಹಿತ ವರ್ಗ ‘ತತ್ವ’ದಿಂದ ಬಹುದೂರವಿತ್ತು; ಆದರೆ ಸಾಮಾನ್ಯರ ಶೋಷಣೆಯಿಂದ ‘ಭೋಗಿ’ಯಾಗಿತ್ತು.

ತಿಂಡಿತಿನಿಸು ಪದಾರ್ಥಗಳ ನೇಮ ಹಿಡಿದವರು ಎಷ್ಟೋ ಜನ. ಇದುವೇ ಧರ್ಮ! ಇದರಿಂದಲೇ ಮೋಕ್ಷ ಎಂದು ಅವರು ನಂಬಿದ್ದರು. ಅಂಥವರನ್ನು ಕಂಡು ಪ್ರಭು ವಿಡಂಬಿಸಿದ; ‘ಹಾಲ ನೇಮದವ ಬೆಕ್ಕಾಗುವ, ಕಡಲೆಯ ನೇಮದವ ಕುದುರೆಯಾಗುವ’ ಎಂದು ಆತ ಜನರ ಅಜ್ಞಾನ ಕಳೆಯಲೆತ್ನಿಸಿದ.

ಶಿವಶರಣರು ಒಂದು ಸುಭದ್ರವಾದ ಸುವ್ಯವಸ್ಥಿತವಾದ ಸರ್ವಾಂಗ ಪರಿಪೂರ್ಣವಾದ ಮತ್ತು ಸ್ವಾವಲಂಬಿಯಾದ ಸಮಾಜವನ್ನು ಕಟ್ಟಿದರು. ಇದರ ತಳಪಾಯ ದುಡಿಮೆ ಮತ್ತು ಶೀಲವಾಗಿದೆ.

ದುಡಿಮೆ ಮತ್ತು ಶೀಲ ಇವೆರಡೂ ಅಂದಿನ ಕಾಲದಲ್ಲಿ ತಮ್ಮ ನಿಜಾರ್ಥವನ್ನು ಕಳೆದುಕೊಂಡಿದ್ದುವು. ಜನರು ಸೋಮಾರಿಗಳಾಗಿ, ಡಂಭಾಚಾರದ ಮತ್ತು ವಾಮಮಾರ್ಗದ ಶೀಲಗಳಲ್ಲಿ ತೊಡಗಿದ್ದರು. ಶಿವಶರಣರು ಕಾಯಕ ತತ್ವದಿಂದ ಆರ್ಥಿಕ ಸುಭದ್ರತೆಯನ್ನು ತಂದಂತೆ ಶೀಲದಿಂದ ಸಮಾಜದ ನೈತಿಕ ಬಲವನ್ನು ಹೆಚ್ಚಿಸಿದರು. ಅವರು ಸತ್ಯಶುದ್ಧ ದುಡಿಮೆಯೇ ಶೀಲವೆಂದು ಹೇಳಿದರು.

ಆರ್ಥಿಕ ಅವನತಿಗಿಂತ ನೈತಿಕ ಅವನತಿ ಬಹಳ ಅಪಾಯವುಳ್ಳುದು. ಇದರಿಂದ ನೂರಾರು ಸಮಸ್ಯೆಗಳುದ್ಭವಿಸುತ್ತವೆ. ಅರ್ಥವಿದ್ದು ನೀತಿ ಇರದಿದ್ದರೆ ವ್ಯಕ್ತಗಾಗಲಿ ಸಮಾಜಕ್ಕಾಗಲಿ ಬೆಲೆ ಬರುವುದಿಲ್ಲ. ನೀತಿಯಿದ್ದು ಅರ್ಥವಿರದಿದ್ದರೆ ಬೆಲೆಗಾಗಲಿ ಗೌರವಕ್ಕಾಗಲಿ ಕುಂದು ಬರುವುದಿಲ್ಲ. ಅಂದಿನ ಸಮಾಜದಲ್ಲಿ ವ್ರತ ನೇಮ ಶೀಲಗಳು ನೀತಿಯನ್ನು ನಿರ್ನಾಮ ಮಾಡಿದ್ದವು. ಸಾಮಾನ್ಯ ನೀತಿ ವ್ಯಕ್ತಿಗೂ ಸಮಾಜಕ್ಕೂ ಬಹು ಮುಖ್ಯ. ಇವೇ ಲೋಪವಾದರೆ ಮುಗಿಯಿತು; ಸಮಾಜದ ಅಧೋಗತಿ ನಿಶ್ಚಿತ. ಅಂತೆಯೇ ವಚನಕಾರರು ಈ ಸಾಮಾನ್ಯ ನೀತಿಗೆ ಆದ್ಯ ಪ್ರಾಶಸ್ತ್ಯ ನೀಡಿದರು ಮತ್ತು ಈ ನೀತಿಗೆ ಮಾರಕವಾದ ಶೀಲ, ವ್ರತ, ನೇಮಗಳನ್ನು ಶಸ್ತ್ರಚಿಕಿತ್ಸೆಗೊಳಪಡಿಸಿ ಅವುಗಳನ್ನು ಶುದ್ಧೀಕರಿಸಿದರು; ಅಷ್ಟೇ ಅಲ್ಲ, ‘ಶೀಲ’ ಎಂದರೆ ಪರಬೊಮ್ಮ ಎಂದರು.

ಶೀಲವೆಂದರೆ ಪರಬ್ರಹ್ಮ – ಎಂಬುದು ಸರಿ. ಸಾಮಾನ್ಯವಾದ, ವ್ಯಾವಹಾರಿಕವಾದ ಮತ್ತು ಸಾಮಾಜಿಕ ದೃಷ್ಟಿಯಿಂದಲೂ ಶೀಲದ ವಿವೇಚನೆ ಮಾಡುವುದು ಅವಶ್ಯಕವಾಗಿದೆ. ವಚನಕಾರರು ದೀರ್ಘವಾಗಿ ಇದರ ವಿವೇಚನೆ ಮಾಡಿದ್ದಾರೆ. ಸಾಮಾನ್ಯ ವ್ಯವಹಾರದಲ್ಲಿ. ನಿತ್ಯಬಳಕೆಯಲ್ಲಿ, ಕೊಡುಕೊಳ್ಳುವಿಕೆಯಲ್ಲಿ, ಉಂಬಲ್ಲಿ, ಆಟ ವಿನೋದಗಳಲ್ಲಿ ಸಾಮಾನ್ಯ ನೀತಿ ಇರಬೇಕಾದುದು ಅವಶ್ಯ. ಇಲ್ಲೆಲ್ಲ ನೀತಿ ನೆಲಗೊಂಡರೆ ಅದು ಗಟ್ಟಿಗೊಂಡು ಮುಂದೆ ಪರಬ್ರಹ್ಮದ ಸ್ಥಾನಕ್ಕೆ ಏರುವುದು. ಅಂತೆಯೇ ವಚನಕಾರರು ಎಲ್ಲ ಶೀಲ, ವ್ರತ, ನೇಮಗಳು ಅವು ಏನೇ ಇರಲಿ, ಎಂಥವೇ ಇರಲಿ ಅವುಗಳಿಗೆ ನೀತಿಯ ಜೀವರಸಾಯನ ಹಿಂಡಿದರು. ಸುಶೀಲವೇ ಶೀಲ ವೆಂದರು. ಸಮಾಜದ ಕಣಕಣದಲ್ಲಿ ವ್ಯಕ್ತಿಯ ಸರ್ವ ಆಚಾರಗಳಲ್ಲಿ ಶೀಲವನ್ನು – ಸುಶೀಲವನ್ನು ತುಂಬಿದರು.

ಇನ್ನೊಂದೆಡೆ ಚನ್ನಬಸವಣ್ಣನವರು ಕಾಮ, ಕ್ರೋಧ ಮೊದಲಾದವುಗಳನ್ನು ಬಿಡುವುದೇ ಶೀಲವೆನ್ನುತ್ತಾರೆ.

‘………………
ಕಾಮವೆಂಬುದೊಂದು ಪಾಪಿ, ಮರಹೆಂಬುದೊಂದು ದ್ರೋಹಿ,
ಮತ್ಸರವೆಂಬುದೊಂದು ಹೊಲೆಯ,
ಕ್ರೋಧವೆಂಬುದೊಂದು ಕೈಸೂನೆಗಾರ,
ಇಂತಿವನರಿದು ಮರೆದು ಹರವಸಂಬೋಗಿ
ಹೊಯಿ ಹೊಡೆದಂತಿರ್ದಡೆ
ಕೂಡಲ ಚನ್ನಸಂಗಯ್ಯ ಅವರ ಶೀಲವಂತರೆಂಬೆ[9]

ವ್ರತದ ಬಗ್ಗೆ ಅಕ್ಕಮ್ಮ ಹೇಳುತ್ತಾಳೆ:

ವ್ರತವಾವುದೆಂದಡೆ:
ಪರಾಪೇಕ್ಷೆಯ ಮರೆದು, ಪರಸತಿಯ ತೊರೆದು,
ಗುರುಲಿಂಗ ಜಂಗಮದಲ್ಲಿ ತಾಗು ನಿರೋಧಮಂ ತಾಳದೆ,
ಹೆಣ್ಣು, ಹೊನ್ನು, ಮಣ್ಣಿಗಾಗಿ ತಪ್ಪಿ ನುಡಿಯದೆ,
ಒಡೆಯರು ಭಕ್ತರಲ್ಲಿ ತನ್ನ ಕುರಿತು ಗೆಲ್ಲ ಸೋಲಕ್ಕೆ ಹೋದಡೆ,
ತನಗೊಂದು ಬೇಕೆಂದು ಅನ್ಯರ ಕೈಯಲ್ಲಿ ಹೇಳಿಸದೆ,
ಬಹು ಢಾಳಕತನವಂ ಬಿಟ್ಟು ಸರ್ವರ ಆತ್ಮಚೇತನವನರುಹಿ
ತಾ ಮರೆದುದ ಅರೆದು ಎಚ್ಚತ್ತು ನೋಡಿ,
ಅಹುದಾದುದ ಹಿಡಿದು, ಅಲ್ಲದುದ ಬಿಟ್ಟು, ಬಹು ದುಃಖ ಮಂಮರೆದು
ಇಂತೀ ಸರ್ವಗುಣ ಸಂಪನ್ನನಾಗಿ….”[10]

ನೇಮದ ಬಗ್ಗೆ ಸತ್ಯಕ್ಕ ಹೇಳುತ್ತಾಳೆ:

ಅರ್ಚನೆ, ಪೂಜನೆ ನೇಮವಲ್ಲ,
ಮಂತ್ರ, ತಂತ್ರ ನೇಮವಲ್ಲ
ಧೂಪ ದೀಪದಾರತಿ ನೇಮವಲ್ಲ,
ಪರಧನ, ಪರಸ್ತ್ರೀ, ಪರದೈವಂಗಳಿಗೆರಗದಿಪ್ಪುದೇ ನೇಮ
ಶಂಭುಜಕ್ಕೇಶ್ವರ ದೇವರಲ್ಲಿ ಇದು ಕಾರಣ ಇದು ನೇಮ[11]

ಹೀಗೆ ಶರಣರು ಶೀಲ, ವ್ರತ, ನೇಮಗಳ ಸ್ಪಷ್ಟವಾದ ತಿಳಿವಳಿಕೆಯನ್ನು ಜನರಿಗೆ ನೀಡಿದರು. ಆ ತಿಳಿವಳಿಕೆಯಿಂದ ವ್ಯಕ್ತಿಯ ಚಾರಿತ್ರ ಶೀಲ ಶುದ್ಧವಾದುವು; ಅದರಂತೆ ಸಮಾಜದ ಶೀಲ ಚಾರಿತ್ರಗಳೂ ಶುದ್ಧವಾದುವು.

ಬಸವಣ್ಣನ ೫೨ ವಿಧದ ಇರವು, ಪಾಲ್ಕುರಿಕೆ ಸೋಮನಾಥನ ೬೩ ಶೀಲಗಳು, ಚನ್ನಬಸವಣ್ಣ, ಪಾಲ್ಕುರಿಕ ಸೋಮನಾಥನ ೬೩ ಶೀಲಗಳು, ಚನ್ನಬಸವಣ್ಣನ ೫೦ ಆಚಾರಗಳು, ಇನ್ನಿತರ ಶರಣರ ೬೪ ವ್ರತಗಳು, ೫೬ ಶೀಲಗಳು, ೩೨ ನೇಮಗಳು – ಇವೆಲ್ಲ ವ್ಯಕ್ತಿ ಸಮಾಜಗಳನ್ನು ತಿದ್ದಿ ಶೀಲಸಂಪನ್ನವಾಗಿ ಮಾಡಿದುವು. ಬಸವಣ್ಣ, ಚನ್ನಬಸವಣ್ಣ, ಪಾಲ್ಕುರಿಕೆ ಸೋಮನಾಥ ಮುಂತಾದವರ ವ್ರತ ಶೀಲ ನೇಮಗಳು ಆಚರಣೆಗೆ ಸುಲಭವಾದುವು; ಸರ್ವರಿಗೂ ಗ್ರಾಹ್ಯವಾದುವು.

[1] ಡಾ|| ಹಳಕಟ್ಟಿ: ವಚನಶಾಸ್ತ್ರಸಾರ, ಭಾಗ ೧. ಪುಟ ೨೭೨, ವಚನ ೧೦.

[2] ಪ್ರೊ|| ಶಿ.ಶಿ. ಬಸವನಾಳ: ಬಸವಣ್ಣವರ ಷಟ್‌ಸ್ಥಲದ ವಚನಗಳು, ಪುಟ ೬೧. ವಚನ ೨೩೧.

[3] ಡಾ|| ಹಳಕಟ್ಟಿ: ವಚನಶಾಸ್ತ್ರ, ಭಾಗ ೧. ಪುಟ ೨೭೫, ವಚನ ೯.

[4] ಸರ್ವಪುರಾತನರ ವಚನ: ಆದಿಯ ಬೋಧೆ, ಪುಟ ೪.

[5] ಶ್ರೀ ಚೆನ್ನಮಲ್ಲಿಕಾರ್ಜುನ ಸಂಪಾದಿತ ಸರ್ವಪುರಾತನರ ವಚನ, ಪುಟ ೧೮೪ – ೧೯೪.

[6] ಡಾ. ಆರ್. ಸಿ. ಹಿರೇಮಠ: ಶಿವಶರಣೆಯರ ವಚನಗಳು, (ಸಮಗ್ರಸಂಪುಟ) ಪುಟ ೪೫೯, ವಚನ ೧.

[7] ಡಾ. ಆರ್. ಸಿ. ಹಿರೇಮಠ: ಶಿವಶರಣೆಯರ ವಚನಗಳು. (ಸಮಗ್ರ ಸಂಪುಟ) ಪುಟ ೩೮೭, ವಚನ ೨೦೫.

[8] ಡಾ. ಆರ್. ಸಿ. ಹಿರೇಮಠ: ಶಿವಶರಣೆಯರ ವಚನಗಳು. (ಸಮಗ್ರ ಸಂಪುಟ) ಪುಟ ೩೯೫, ವಚನ ೨೨೦

[9] ಡಾ|| ಹಳಕಟ್ಟಿ ಸಂಪಾದಿತ ವಚನಶಾಸ್ತ್ರ ಸಾರ, ಭಾಗ ೨, ಪುಟ – ೪೨೪, ವಚನ – ೧೫

[10] ಡಾ. ಆರ್. ಸಿ. ಹಿರೇಮಠ: ಶಿವಶರಣೆಯರ ವಚನಗಳು. (ಸಮಗ್ರ ಸಂಪುಟ) ಪುಟ ೫೦೧, ವಚನ ೬೨.

[11] ಡಾ|| ಹಳಕಟ್ಟಿ ವಚನಶಾಸ್ತ್ರ ಸಾರ, ಭಾಗ ೨, ಪುಟ – ೪೨೩, ವಚನ – ೮.