ಬಿಡದೊಮ್ಮೆ ಕಂಡ ಜೀವರ ಭವವ್ರಜದ ಬೆಂ
ಬಡಿಗೆ ಪಾತಕದ ತೋಮೆಯ ಕತ್ತಿ ದುಷ್ಕರ್ಮ
ದೆಡೆಗೊರಳ ಕತ್ತರಿ ಸಮಸ್ತರೋಗಂಗಳೆಡೆಗೊಡ್ಡಿದಲಗ ಜ್ಞಾನದ
ನಡುದಲೆಯ ಗರಗಸಂ ಮಲೆವ ಮಾಯೆಯ ಬಸುರಿ
ನೊಡೆಹೊಯ್ವ ಶೂಲವಿನ್ನುಳಿದ ದುರಿತವನುರುಹಿ
ಸುಡುವ ಕಿಚ್ಚೆಂದೆನಿಪ ತುಂಗಭದ್ರಾನದಿಯ ನವನೀತ ನೋಡೆಂದನು.

ಮಹಾಕವಿ ರಾಘವಾಂಕನ ಹೃದಯದಿಂದ ಹೊಮ್ಮಿದ ತಾಯೆ ತುಂಗಭದ್ರೆಯ ವರ್ಣನೆಯಿದು. ಎಂಟುನೂರು ವರ್ಷಗಳ ಹಿಂದೆ ರಾಘವಾಂಕನಿಗೆ ತಾಯೆ ತುಂಗಭದ್ರೆ “ಒಮ್ಮೆ ಕಂಡ ಜೀವರ ಭವವ್ರಜದ ಬೆಂಬಡಿಗೆಯಾಗಿ, ಪಾತಕದ ತೋಮೆಯ ಕತ್ತಿಯಾಗಿ, ದುಷ್ಕರ್ಮದೆಡೆಗೊರಳ ಕತ್ತರಿಯಾಗಿ, ಸಮಸ್ತರೋಗಂಗಳೆಡೆಗೊಡ್ಡಿದ ಅಲಗಾಗಿ, ಅಜ್ಞಾನದ ನಡುದೆಲೆಯ ಗರಗಸವಾಗಿ, ಮಲೆವ ಮಾಯೆಯ ಬಸುರನೊಡೆ ಹೊಯ್ವಶೂಲವಾಗಿ, ಇನ್ನುಳಿದ ದುರಿತವನು ಉರುಹಿಸುಡುವ ಕಿಚ್ಚಾಗಿ” ಕಂಡಳು. ಇಂದು ಆ ತಾಯಿ ಕವಿ ಹೇಳಿದ ಎಲ್ಲ ಆಭಯಗಳನ್ನೀವುದರ ಜೊತೆಗೆ ಕೋಟಿ ಕೋಟಿ ಹಸಿದ ಹೊಟ್ಟೆಗಳಿಗೆ ಅನ್ನವನ್ನು ನೀಡುವ ಅನ್ನಪೂರ್ಣೆಯಾಗಿದ್ದಾಳೆ; ತನ್ನ ಎದೆ ಹಾಲನ್ನು ಚೆಲ್ಲಿ ಪಂಪಾಸಾಗರವಾಗಿ ನಿಂದಿದ್ದಾಳೆ: ಕಾಲುವೆಗಳ ಜಾಲವಾಗಿ ಹೊಲ ಹೊಲಕ್ಕೆ ಮನೆಮನೆಗೆ ಮನಮನಕ್ಕೆ ತನ್ನ ಕರುಣಾರಸವನ್ನು ಹರಿಸುತ್ತಾಳೆ.

ತಾಯಿ ತುಂಗಭದ್ರೆ. ಸ್ನೇಹಮಯಿಕೃಷ್ಣೆ ಇವರೀರ್ವರ ನಳಿದೋಳ ತೊಟ್ಟಿಲಲ್ಲಿ ಪವಡಿಸಿರುವ ನೆಲ, ನಾಡುವೀರಕ್ಕೆ, ಧರ್ಮಕ್ಕೆ, ಶಿಲ್ಪಕ್ಕೆ, ಸಾಹಿತ್ಯಕ್ಕೆ – ಒಂದೇ ಎರಡೇ ಅನೇಕ ವಿಷಯಗಳಿಗೆ ಹೆಸರಾಗಿದೆ. ಇಲ್ಲಿ ಭಕ್ತಿಯ ಕಾರಂಜಿ ಪುಟಿದಿದೆ. ಅನುಭಾವದ ಕುಸುಮ ಅರಳಿದೆ. ಕಾವ್ಯರಸದ ಹೆದ್ದೊರೆಗಳು ಹರಿದಿವೆ. ಕೆಚ್ಚು ಕಲಿತನಗಳು ಬೆಟ್ಟ ಗೋಂಟೆಗಳಾಗಿ ನಿಂತಿವೆ. ಈ ನೆಲವನ್ನಗೆದರೆ ನಮ್ಮ ಪೂರ್ವಜರು ಮೆರೆದ ಶೂರ ಸಾಹಸದ ಕಥೆ ಅದರ ಸ್ತರಸ್ತರಗಳಲ್ಲಿ ಸಿಕ್ಕುತ್ತದೆ. ಪ್ರಪಂಚವನ್ನೇ ಬೆರಗುಗೊಳಿಸಿದ ಮಹಾ ಸಾಮ್ರಾಜ್ಯವೊಂದು ಈ ನೆಲದಡಿಯಲ್ಲಿ ಇನ್ನೂ ಉಸಿರಾಡಿಸುತ್ತ ಕುಳಿತಿದೆ – ಸಮಯವನ್ನು ಕಾದು. ಸುಳಿದು ಸೂಸುವ ಗಾಳಿಯಲ್ಲಿ ಶರಣರ ಚನ ಸಿರಿಮೊಳಗು, ದಾಸರ ಏಕದಾರಿಯ ನಾದ, ವೀರರ ಕೇಕೆ – ಇನ್ನೂ ಗುಂಯ್‌ಗುಡುತ್ತಲಿವೆ; ಕಿವಿಯಿದ್ದವರು, ಎದೆಯಿದ್ದವರು, ಅಭಿಮಾನವಿದ್ದವರು ಇವುಗಳನ್ನು ಕೇಳಬಹುದು.

ಹಿಂದಿನಿಂದಲೂ ಅನ್ನ, ಅನುಭಾವ, ಕಾವ್ಯ, ಶಿಲ್ಪ, ವೀರ – ಎಲ್ಲಕ್ಕೂ ಚೇತನಕಾರಿಯಾಗಿ ನಿಂತಾಕೆ ನಮ್ಮ ಈ ತಾಯಿ ತುಂಗಭದ್ರೆ ಈಕೆಯ ದಂಡೆಯಲ್ಲಿಯೇ ಪಂಪಾವತಿ ಪಂಪಾಂಭಿಕೆಯೊಡನೆ ನೆಲಸಿದ: ಇಕೆಯ ನೀರನ್ನೆ ಕುಡಿದು ಬೆಳೆದ ವೀರರು ಹನುಮಂತ, ಅಂಗದ, ಸುಗ್ರೀವ ಮುಂತಾದ ವೀರರು ರಾಮಚಂದ್ರನ ಸೊಲ್ಲನ್ನಾಲಿಸಿದವರು; ಆತನಿಗೆ ಗೆಲ್ಲು ತಂದವರೂ: ರಾಮನಿಗೆ ಬೋರೆ ಹಣ್ಣು ತಿನ್ನಿಸಿದ ಶಬರಿ ನಮ್ಮ ತಾಯಿಯ ಮಗಳೇ. ಇದು ಪುರಾಣ. ಇತಿಹಾಸ ಬೇಕೇನು? ಜಗತ್ತೇ ಬೆರಳುಕಚ್ಚುವಂತಹ ಮಹಾಸಾಮ್ರಾಜ್ಯವನ್ನು ಕಟ್ಟಿ ವೀರರಾಗಿ, ಧರ್ಮಿಗಳಾಗಿ, ಪರಧರ್ಮಸಹಿಷ್ಣುಗಳಾಗಿ, ವಿದ್ಯಾಪಕ್ಷಪಾತಿಗಳಾಗಿ, ಕಲೆಗಳ ಪೋಷಕರಾಗಿ ಆಳಿದ ವಿಜಯನಗರದ ಅರಸರು ನಮ್ಮ ತಾಯಿ ತುಂಗಭದ್ರೆಯ ಮಮತೆಯ ಮಕ್ಕಳು. ಕನ್ನಡ ನಾಡನ್ನು ಈಕೆಯಷ್ಟು ಎಲ್ಲಂದದಿಂದ ಪೋಷಿಸಿದವರು ಮತ್ತಾರೂ ಇಲ್ಲ – ಅಂತೆಯೇ ನಮ್ಮ ಕವಿಗಳು ಈಕೆಯನ್ನು ಹೊಗಳಿದಷ್ಟು ಮತ್ತಾರನ್ನೂ ಹೊಗಳಿಲ್ಲ.

ಮಹಾಕವಿ ಹರಿಹರ ತುಂಗಭದ್ರೆಯನ್ನು ‘ಮಹಾನದೀಶ್ವರೀ – ಎಂದು ಕರೆಯುತ್ತಾನೆ.

ಮತ್ತಂ ಮಹಾನದೀಶ್ವರೀ ತುಂಗಭದ್ರೆಯೊಳು
ಉತ್ತಮ ವಿಶಿಷ್ಟನಾಶ್ರಮವಿರ್ಪುದೊಲುಮೆಯೊಳು
ತನ್ನ ಜಯ ರಗಳೆಯಲ್ಲಿ ಹರಿಹರ

‘ತುಂಗಭ್ರೆಯೋಗಾನಿಳಯನೆ ಜಯ’ – ಎಂದು ಕರೆಯುತ್ತಾನೆ ಪಂಪಾ ಪುರದರಸನನ್ನು.

ಆಖಿಳ ಪುರುಷಾರ್ಥಸಿದ್ಧಿಗಳನೀವೆ ಈಕೆ ತುಂಗೆಯೂ ಹೌದು, ಭದ್ರೆಯೂ ಹೌದು ಎಂಬುದನ್ನು ಬಹು ಹೃದಯಂಗಮವಾಗಿ ವರ್ಣಿಸಿದ್ದಾನೆ ಕವಿ ಲಕ್ಕಣ್ಣದಂಡೇಶ.

ಕಂಗೊಳಿಪ ಸಕಲತೀರ್ಥದ ಮಹಿಮೆಯಂ ತನ್ನೊ
ಳಂಗೀಕರಿಸಿ ಧರಾತಳದ ಜೀವರ್ಗೆಲ್ಲ
ಮಂಗಳಪ್ರದ ನಿಖಿಳ ಪುರುಷಾರ್ಥ ಸಿದ್ಧಿಗಳ ನೀವತಿಕೈಪಾರಸದೊಳು
ತುಂಗೆಯೆಮದೆನಿಸುತಂ ಭದ್ರಲಕ್ಷಣವಿಡಿದು
ತುಂಗಭದ್ರಾನಾಮಮಂ ಧರಿಸಿದತಿ ನಿರ್ಮಳಾಂಗಿ ಗಂಗೆಯ ತೀರದತುಳ
ಪಂಪಾವತಿಯ ಚರಣಾಂಬುಜಕ್ಕೆ ಶರಣು.

ಅಷ್ಟಭಾಷಾ ಕವಿ ಚಂದ್ರಶೇಖರನು ಬಹು ರಮ್ಯವಾಗಿ, ಚಿತ್ರವತ್ತಾಗಿ ವರ್ಣಿಸುತ್ತಾನೆ – ತುಂಗಭದ್ರೆಯನ್ನು.

ತೆರೆಸುಳಿಯುರ್ಬುಬೊಬ್ಬುಳಿಕೆ ಪಾವಸೆ ಸಿರ್ಪುಜವುಂಗು ತಾಯ್ಮಳಲ್
ನೊರೆಯರೆಗಲ್ಗಳಿಂ ಹರಿವ ಹಿಂಗುವ ಕೂಡುವಗಲ್ವ ಸೂಸುವೋ
ಪರಿಸುವ ತಗ್ಗುವೇಳ್ವತಡಿಯೊತ್ತುವ ಪತ್ತುವ ಪೊಯ್ವ ಪಾಯ್ವ ಭೋ
ರ್ಗರೆವ ಜಲಪ್ರವಾಹಮೆಸದಿರ್ಪುದು ನೋರ್ಪಡೆ ತುಂಗಭದ್ರೆಯಾ.

ಈ ಕವಿಗೆ ಗಂಗೆ, ಯಮುನೆ, ಸರಸ್ವತಿಯರಿಗಿಂತಲೂ ತುಂಗಭದ್ರೆ ಹೆಚ್ಚಿನವಳು.

ಅದು ಮೂವಟ್ಟಿಗೆ ಬಂದ
ತ್ತದು ಮಲಿನಾಕಾರಮಾದುದದು ಮೆರೆಯೊಳ್ ಬಾ
ಳ್ಳುದು ಗಂಗೆ ಯಮುನೆ ಸರಸ್ವತಿ
ಸದಮಲಗುಣ ತುಂಗಭದ್ರೆಗೇಂ ಪಾಸಟಿಯೇ

ಅಕೆಯ ನಾಮವನ್ನು ಕೇಳಿದರೆ ಸಾಕು, ಕೇಳಿದವರ ಪಾಪವನ್ನು ಕೆಡಿಸುವಳು ತುಂಗಭದ್ರೆ. ಶುಭದಮುದ್ರೆ – ಎಂದು ಎದೆದುಂಬಿ ವರ್ಣಿಸಿದ್ದಾನೆ ಕವಿ ಚಿಕ್ಕನಂಜೇಶ:

ಸಂದ ನಿಜನಾಮಮಂ ಕೇಳ್ವರಘಮಂ ಕೆಡಿಸಿ
ಛಂದಛಂದದಿ ಪೊಗಳುವರ್ಗೆ ಸಂಪದವೀವು
ತೊಂದಿ ಜಾನಿಪುರ ವಾಂಛಿತವೀವುತಂ ಇದು ಮಹಾತೀರ್ಥವೆಂದು ನೆನೆದು
ಮಿಂದರ್ಗೆ ಚತುರ್ವಿಧ ಪದಂಗಳಂ ಸಾರ್ಚುತ್ತೆ
ಕುಂದಿಲ್ಲದತುಳ ಮಹಿಮೆಯನಾಂತು ಪರಿದಳಾ
ನಂದದಿಂದಾ ದೇಶದೊಳ್ ತುಂಗಭದ್ರೆ ಸರಿದ ಕ್ಷುದ್ರೆ ಶುಭದ ಮುದ್ರೆ

ನಾಡವರಿಗೆ ಸರ್ವಸ್ವವನ್ನೂ ಕೊಟ್ಟ ತುಂಗಭ್ರೆಯ ಉಡಿಯಲ್ಲಿ ನೂರಾರು ಜನ ಶರಣರು, ಸಾಧುಸಂತರು, ಕವಿಗಳು ಹುಟ್ಟಿ ಬೆಳೆದು ಬಾಳಿದರು. ಇಲ್ಲಿ ಬಾಳಿ ಬೆಳಗಿದ ವೀರಶೈವ ಶರಣರ, ಸಾಧುಸಂತರ, ಕವಿಗಳನ್ನು ಕುರಿತು ಒಂದಷ್ಟು ಪರಿಚಯ ಮಾಡಿಕೊಳ್ಳುವಾ.

ಶರಣರುಸಾಧುಸಂತರು

ಕಲ್ಯಾಣ ಕ್ರಾಂತಿಗಿಂತ ಸುಮಾರು ಒಂದು ಶತಮಾನ ಮುಂಚೆ ದೇವರ ದಾಸಮಯ್ಯ, ಶಂಕರದಾಸಿಮಯ್ಯ, ಢಕ್ಕೆಯಬೊಮ್ಮಯ್ಯ ಮುಂತಾದ ಶರಣರು ಹುಟ್ಟಿ ಬಾಳಿದರು, ಶಿವಭಕ್ತಿಯ ಕಾರಂಜಿಯನ್ನು ಪುಟಿಸಿದರು, ವಚನಗಳನ್ನು ರಚಿಸಿದರು. ಇವರಲ್ಲಿ ಶಂಕರದಾಸಮಯ್ಯ ರಾಯಚೂರು ಜಿಲ್ಲೆಗೆ ಸೇರಿದ ಮಹಾನುಭಾವ.

ಕಲ್ಯಾಣ ಚಾಳುಕ್ಯರ ಒಂದನೆಯ ಜಯಸಿಂಹನ ಕಾಲ. ಆಗ ಕಲಬುರ್ಗಿ ಜಿಲ್ಲೆಯಮುದೆನೂರಿನಲ್ಲಿ ಜೇಡರದಾಸಮಯ್ಯ ಎಂಬ ಶರಣನಿದ್ದ. ಆತ ಶಿವನಿಂದ ತವನಿಧಿಯನ್ನು ಪಡೆದಿದ್ದ. ಕಾಲಕ್ರಮದಲ್ಲಿ ಆತನಿಗೆ ಅಹಂಕಾರ ಬಂದಿತು. ಆ ಅಹಂಕಾರವನ್ನು ಹೋಗಲಾಡಿಸಿದಾತ ಶಂಕರದಾಸಮಯ್ಯ. ಈತನ ಊರು ಲಿಂಗಸೂರು ತಾಲ್ಲೂಕಿಗೆ ಸೇರಿದ ಕಂದಗಲ್ಲು, ಈತನ ಮೊದಲ ಹೆಸರು ಗೋವಿಂದಭಟ್ಟ, ಹೆಂಡತಿ ದುಮ್ಮೆವ್ವೆಯೊಡನೆ ಗೋವಿಂದಭಟ್ಟ ಕಾಶಿಗೆ ಪ್ರಯಾಣ ಬೆಳೆಸಿದ. ದಾರಿಯಲ್ಲಿ ಕೃಷ್ಣಾತೀರದ ನವಿಲಿಗೆ ಬಂದ. ಅಲ್ಲಿ ಜಟಾಶಂಕರ ದೇವಾಲಯಕ್ಕೆ ಹೋದ. ಏನು ಶಿವ ಪ್ರೇರಣೆಯಾಯಿತೋ? ಕಾಶಿಗೆ ಹೋಗುವದನ್ನು ನಿಲ್ಲಿಸಿದ. ಹೆಸರು ಶಂಕರದಾಸಮಯ್ಯನೆಂದು ಬದಲಾಯಿಸಿಕೊಂಡ: ಹೆಂಡತಿ ದುಮ್ಮವ್ವೆ ಹೋಗಿ ಶಿವದಾಸಿಯಾದಳು. ನವಿಲೆಯಲ್ಲಿಯೇ ಹೊಲಿಯುವ(ಸೂಜಿಕಾಯಕ) ಮಾಡುತ್ತಾ ನೆಲೆಸಿದ.

ಶಂಕರದಾಸಮಯ್ಯನಿಗೂ ಅಹಂಕಾರ ಬಂದಿತ್ತು ಅದನ್ನು ಹೋಗಲಾಡಿಸಿದ. ಮಹಾಶರಣ ಢಕ್ಕೆಯ ಬೊಮ್ಮಣ್ಣನ ವಚನಗಳು ಬಹು ಅರ್ಥಪೂರ್ಣವಾಗಿವೆ. ಮಾಯೆಯನ್ನು ಕುರಿತ ಈ ವಚನ ಬಹು ಸೊಗಸಾಗಿದೆ:

ಬ್ರಹ್ಮಂಗೆ ಸರಸ್ವತಿಯಾಗಿ ಬೆನ್ನಲಿ ಬಂದಳಾ ಮಾಯೆ;
ವಿಷ್ಣುವಿಗೆ ಲಕ್ಷ್ಮಿಯಾಗಿ ಭವಕ್ಕೆ ತಿರುಗಿಸಿದಳಾ ಮಾಯೆ;
ರುದ್ರಂಗೆ ಉಮಾದೇವಿಯಾಗಿ ಶಿರತೊಡೆಯಲ್ಲಿ ಕಾಡಿದಳಾ ಮಾಯೆ;
ಎಳ್ಳಿಗೆ ಎಣ್ಣೆ, ಮುಳ್ಳಿಗೆ ಮೊನೆ, ಹೂವಿಗೆ ಗಂಧವಾಗಿ
ಅವರದವರಂಗದಲ್ಲಿ ಹಿಂಗದೆ ಪ್ರತಿರೂಪವಾಗಿ
ಸಂದಿಲ್ಲದೆ ಕಾಡುತ್ತಿದ್ದಾಳೆ ಮಾಯೆ;
ಕಾಲಾಂತಕ ಭೀಮೇಶ್ವರ ಲಿಂಗವನರಿಯ ಬಲ್ಲೊಡೆ.

ಸಕಲ ಜೀವರಿಗೆ ಲೇಸಾಗಲೆಂದೇ ಮಜ್ಜನಕ್ಕೆರೆದು ಲೋಗರನ್ನು ಇಲ್ಲಿಯೂ ಸಲ್ಲಿ ಅಲ್ಲಿಯೂ ಸಲ್ಲುವಂತೆ ಮಾಡಲು ಗೈದ ಬಸವಣ್ಣನವರ ಮಹಾಮಣಿಹದಲ್ಲಿ ಭಾಗಿಯಾಗಲು ಭಾರತದ ನಾನಾ ಭಾಗಗಳಿಂದ ಶರಣರು ಕಲ್ಯಾಣಕ್ಕೆ ನಡೆದರು. ತುಂಗಭದ್ರೆಯ ಸೀಮೆಯಿಂದ ಕಲ್ಯಾಣಕ್ಕೆ ಹೊದವರು ಇವರು: ಆಯ್ದಕ್ಕಿ ಮಾರಯ್ಯ ಆತನ ಪುಣ್ಯಸ್ತ್ರೀ ಲಕ್ಕಮ್ಮ; ಮುಕ್ತಾಯಕ್ಕ, ಬಿಬ್ಬಿ ಬಾಚರಸ, ಮೊರಟದ ಬಂಕಯ್ಯ, ಬಳ್ಳೇಶ ಮಲ್ಲಯ್ಯ.

ಆರ್ಥಿಕ ಸಾಮಾಜಿಕ ಧಾರ್ಮಿಕ ನೈತಿಕ – ಹೀಗೆ ಹಲವು ಸಮಸ್ಯೆಗಳನ್ನು ಬಗೆಹರಿಸಿ, ಸರ್ವದೃಷ್ಟಿಯಿಂದ ಮಾನವನ ಏಳಿಗೆಯಾಗಲು ಬಸವಣ್ಣನವರು ಒಂದೇಒಂದು ಸರ್ವದೃಷ್ಟಿಯಿಂದ ಮಾನವನ ಏಳಿಗೆಯಾಗಲು ಬಸವಣ್ಣನವರು ಒಂದೇ ಒಂದು ತತ್ವವನ್ನು ನುಡಿದು ನಡೆದರು. ಅದುವೇ ಕಾಯಕತತ್ವ. ಕಾಯಕವೇ ಕೈಲಾಸ. ಇದನ್ನು ಬಹು ಅರ್ಥಪೂರ್ಣವಾಗಿ ನಡೆದುನುಡಿದವರು ಆಯ್ದಕ್ಕಿ ದಂಪತಿಗಳು. ಇವರು ಗುಡಗುಂಟ ಅಮರೇಶ್ವರ ಕ್ಷೇತ್ರದವರು. ಕಲ್ಯಾಣಕ್ಕೆ ಹೋಗಿ ನೆಲೆಸಿದರು. ವ್ಯಾಪಾರ ಮಾಡುವಾಗ ಕಣ ಮಾಡುವಾಗ ಕುಟ್ಟಿ ಬೀಸಿ ಹಸನು ಮಾಡುವಾಗ ಚೆಲ್ಲುವ ಕಾಳುಕಡಿ ಹಾಳಾಗಬಾರದೆಂದು ಅದು ಶಿವನ ರಾಷ್ಟ್ರದ ಒಡವೆ ಕೆಡಬಾರದೆಂದು – ಅಂಥ ಕಾಳುಕಡಿಯನ್ನು ಆರಿಸಿ ತಂದು ದಾಸೋಹ ಮಾಡಿ ಜೀವಿಸುತ್ತಿದ್ದರು ಆಯ್ದಕ್ಕಿ ದಂಪತ್ತಿಗಳು. ಮಾರಯ್ಯನ ಸಿದ್ಧವಾಣಿ ಇದು: ಕಾಯಕವನ್ನು ಕುರಿತು:

ಕಾಯಕದಲ್ಲಿ ನಿರತನಾದರೆ ಗುರುದರ್ಶನವಾದರೂ ಮರೆಯಬೇಕು;
ಲಿಂಗಪೂಜೆಯಾದರೂ ಮರೆಯಬೇಕು;
ಜಂಗಮ ಮುಂದಿದ್ದರು ಹಂಗು ಹರಿಯಬೇಕು;
ಕಾಯಕವೇ ಕೈಲಾಸವಾದ ಕಾರಣ,
ಅಮರೇಶ್ವರ ಲಿಂಗವಾಯಿತ್ತಾದರೂ ಕಾಯಕದೊಳಗು.

ಲಕ್ಕಮ್ಮನ ಪ್ರಸಾದವಾಣಿ ಇದು:

ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
ಚಿತ್ತಶುದ್ಧದಲ್ಲಿ ಕಾಯಕಮಾಡುವ ಸದ್ಭಕ್ತಂಗೆ
ಎತ್ತ ನೋಡಿದತ್ತ ಲಕ್ಷ್ಮೀ ತಾನಾಗಿಪ್ಪಳು
ಮಾರೇಶ್ವರ ಪ್ರಿಯ ಅಮರೇಶ್ವರ ಲಿಂಗದ ಸೇವೆಯುಳ್ಳನಕ್ಕರ

ಹೆಣ್ಣು ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನ ಎಂದರು. ವಚನಕಾರರು. ಹಾಗೆ ನುಡಿದು ಸುಮ್ಮನೆ ಕೂಡಲಿಲ್ಲ. ಅವರ ಆತ್ಮೋನ್ನತಿಗೆ ದಾರಿ ತೆರೆದರು. ಆ ದಾರಿಯಲ್ಲಿ ನೂರಾರು ಬೆಳಕಿನ ಹೆಜ್ಜೆಗಳು ಮಾಡಿದುವು. ಆ ಹೆಜ್ಜೆ ಮೂಡಿಸಿದವರಲ್ಲಿ ಬಹು ತೇಜಸ್ವಿನಿಯಾಗಿ ಕಾಣುವಾಕೆ ಮುಕ್ತಾಯಕ್ಕ. ಈಕೆಯ ಊರು ಗದುಗಿನ ಹತ್ತಿರವಿರುವ ಲಕ್ಕುಂಡಿ. ಮಸಳಿ ಕಲ್ಲು (ಈಗಿನ ದೇವದುರ್ಗ ತಾಲ್ಲೂಕಿನ ಮೊಸರ ಕಲ್ಲು) ಈಕೆಯ ಗಂಡನೂರು. ಮುಕ್ತಾಯಕ್ಕನಿಗೆ ಅಣ್ಣ ಅಜಗಣ್ಣನೇ ಗುರು. ಆಕೆಯ ಸಾಧನೆ ಅಲ್ಲಮಪ್ರಭುವನ್ನೂ ಬೆಗುಗೊಳಿಸಿತು. ಮಹವನಿಂಬುಗೊಂಡ ಮುಕ್ತಾಯಕ್ಕನ ಪ್ರಸಾದವಾಣಿ ಇದು:

ಘನಮಹಿಮ ಶರಣರ ಸಂಗದಿಂದ
ಘನಕ್ಕೆ ಘನ ವೇದ್ಯವಾದ ಬಳಿಕ
ಅರಿಯಲಿಲ್ಲ, ಮರೆಯಲಿಲ್ಲ, ಕೂಡಲಿಲ್ಲ, ಅಗಲಿಲ್ಲ,
ಮನ ಮೇರೆದಪ್ಪಿ ನಿರವಯಲದ ಸುಖವ
ಶೂನ್ಯ ನಿಶೂನ್ಯವೆಂದು ನುಡಿಯಲುಂಟೆ?
ಶಬ್ದ ಮುಗ್ಧವಾಗಿ ಎನ್ನ ಅಜಗಣ್ಣ ತಂದೆಯ
ಬೆರೆಸಿದ ಬಳಿಕ ಉರಿಯುಂಡ ಕರ್ಪೂರದಂತಾದೆನಯ್ಯಾ.

ಗೊಬ್ಬೂರು ಹಿಂದೆ ಬಹು ಪ್ರಸಿದ್ಧವಾದ ಅಗ್ರಹಾರವಾಗಿತ್ತು; ಅದಕ್ಕೆ ಗೋಪುರ ಗ್ರಾಮವೆಂದು ಕರೆಯುತ್ತಿದ್ದರು. ಆ ಊರಿನಲ್ಲಿ ಒಬ್ಬ ಬಾಚರಸನೆಂಬ ಶರಣನಿದ್ದನು. ಅಂಗ – ಲಿಂಗ ಸಂಬಂಧದ ಬಗ್ಗೆ ಆತ ಆಚರಿಸಿ ಹೀಗೆ ನುಡಿದಿದ್ದಾನೆ:

ಅಗ್ನಿಲೋಹದಂತೆ
ಫಲರಸದಂತೆ,
ಕಾಯಜೀವದ ಪರಿಯಂತೆ,
ಲಿಂಗನೆಳಲಿನಂತೆ
ಅಂಗಲಿಂಗ ಸಂಬಂಧವಾಗಬೇಕು.
ಏಕಾಂಕ, ಸೋಮೇಶ್ವರಲಿಂಗದಲ್ಲಿ

ಶಿರಿವಾರದ ಹತ್ತಿರವಿರುವ ಮೊರಟದಲ್ಲಿ ಬಂಕಯ್ಯಾ ಎಂಬ ಶರಣನಿದ್ದನು. ಆತ ಅನೇಕ ಪವಾಡಗಳನ್ನು ಮೆರೆದನು. ಬಳ್ಳಾರಿಯಲ್ಲಿ ಬಳ್ಳೇಶ ಮಲ್ಲಯ್ಯನೆಂಬ ವಚನಕಾರನಿದ್ದನು. ಆತ ಸುಂದರವಾದ ವಚನಗಳನ್ನು ಬರೆದಿದ್ದಾನೆ. ಆತನ ಡಂಗುರ ಇದು:

ಪರಮನೆಂಬುದು ನಿಮ್ಮ ಭೇರಿ?
ಬೇಡಿದುದನೀವನೆಂಬುದು ನಿಮ್ಮ ತಂಬ
ಜಗದ್ವಂದಿತ ಲೋಕದೊಡೆಯನೆಂಬುದು ನಿಮ್ಮ ಶಂಖ
ಶಿವನಲ್ಲದೆ ಪರ ದೈವವಿಲ್ಲವೆಂಬುದು ನಿಮ್ಮ ಡಮರುಗ
ಶಿವಕೊಡನೆಂಬವರ ಬಾಯ ತ್ರಿಶೂಲದಲ್ಲಿರುವ
ಬಳ್ಳೇಶ್ವರ ಲಿಂಗದ ಡಂಗುರ ಮೂಜಗದೊಳಗಯ್ಯ.

ಕಲ್ಯಾಣದ ಶರಣರ ಬಳಿಕ ಅವರ ತತ್ವಗಳಿಗೆ ತೊತ್ತಾಗಿ, ಅವರು ನಡೆದುದನ್ನೇ ನಡೆದು ನುಡಿದುದನ್ನೇ ನುಡಿದು ಜನರ ಜೀವನ ಹಸನುಗೊಳಿಸಿದ ಮಹಾನುಭಾವರನೇಕರು ಈ ಸೀಮೆಯಲ್ಲಿ ಆಗಿ ಹೋದರು. ಇವರ ನಿಲವು ಕಲ್ಯಾಣದ ಶರಣರಷ್ಟೇ ಎತ್ತರ.

ಸುಕ್ಷೇತ್ರ ಶ್ರೀ ನಾರದಗಡ್ಡೆ ರಾಯಚೂರಿಗೆ ಹದಿನೆಂಟು ಮೈಲುಗಳ ಅಂತರದಲ್ಲಿದೆ; ಅದು ಕೃಷ್ಣಾ ನದಿಯಲ್ಲಿ ಒಂದು ಗಡ್ಡೆ; ಬಹು ರಮ್ಯ ಸ್ಥಳ. ಹಿಂದೆ ಇಲ್ಲಿ ನಾರದ ಮಹರ್ಷಿಗಳು ತಪಸನ್ನಾಚರಿಸಿದರಂತೆ. ಅಂತೆಯೇ ಇದಕ್ಕೆ ನಾರದಗಡ್ಡೆ ಎಂಬ ಹೆಸರು ಬಂದಿದೆ. ಸುಮಾರು ನಾಲ್ಕುನೂರ ವರ್ಷಗಳ ಹಿಂದೆ ಇಲ್ಲಿ ವೈರಾಗ್ಯನಿಧಿ, ಶಿವಾನುಭವ ಚರಚಕ್ರವರ್ತಿ ಚನ್ನಬಸವ ಸ್ವಾಮಿಗಳೆಂಬವರು ಇದ್ದರು. ಅವರು ಮಹಾತಪಸ್ವಿಗಳು. ಅನುದಿನ ಭಕ್ತರ ಉದ್ದಾರವೇ ಅವರ ಉಸಿರಾಗಿತ್ತು. ಅವರು ಅನೇಕ ಪವಾಡಗಳನ್ನು ಮೆರೆದರು. ಒಮ್ಮೆ ವ್ಯಾಘ್ರಾಸನ ಹಾಸಿ, ಅದರ ಮೇಲೆ ಕುಳಿತು ಹೊಳೆಯನ್ನು ದಾಟಿದರು. ಈ ಕ್ಷೇತ್ರವನ್ನು ಈ ಮಹಿಮರನ್ನು ಕುರಿತು ಚಿಕ್ಕನಂಜೇಶ ಕವಿ ಗುರುರಾಜ ಚಾರಿತ್ರದಲ್ಲಿ ಹೀಗೆ ಹೊಗಳಿದ್ದಾರೆ:

ನಾರದ ಮಹಾಋಷಿ ಕೃಷ್ಣವೇಣಿಯ ನಡುವೆ
ರಾರಾಜಿಸುವ ಕುರುವದಲ್ಲುಗ್ರತಪಗೆಯ್ದು
ಮಾರಹರನೊಲವು ಪಡೆದಾ ಕ್ಷೇತ್ರಮೆಸೆದುದುಂ ನಾರಗಡ್ಡೆಯುಮೆನುತಲಿ
ಚಾರು ಜಂಗಮ ಮೂರ್ತಿಯಲ್ಲೋರ್ವ ನೆಲಸಿ ಸೆಲೆ
ಭೂರಿ ಜನರು ಪೂಜೆಗೊಳುತಿರತಲೊಂದು ದಿನ
ಧೀರ ವ್ಯಾಘ್ರಾಸನದ ಮೇಲೆ ಕುಳಿತಾ ನದಿಯ ದಾಂಟಿದಂ ಪೂಜೆಗೊಳಲು

ಬಳ್ಳಾರಿಜಿಲ್ಲೆಯ ಕೊಟ್ಟೂರು ಬಸವೇಶ್ವರರು ಭಕ್ತರನ್ನುದ್ಧರಿಸಿದ ಪುಣ್ಯಪುರುಷರು. ಕವಿ ಗೌರವಾಂಕ ಕೊಟ್ಟೂರು ಬಸವೇಶ್ವರನನ್ನು ಕುರಿತು ಪುರಾಣ ಬರೆದಿದ್ದಾನೆ. ಅದರಲ್ಲಿ:

“……………….
ಜಯ ಜಯ ನಿರಾಮಯ ವಿಮಾಯ ವಿನುತಾಮ್ನಾಯ
ಜಯಜಯ ದಯಾರಾಮ ರಾಮಣೀಯಕ ನಾಮ
ಜಯಜಯ ಬಸವರಾಜ ರಾಜರಾಜ ಪ್ರಿಯ
ಮತಾಂಬೋಧಿರಾಜ ವಿಜಯ” – ಎಂದು ಕವಿ ಗೌರವಾಂಕ ಹೃದಯದುಂಬಿ
ಕೀರ್ತಿಸಿದ್ದಾನೆ.

“ಶಿವನಲ್ಲಿ ನಂಬುಗೆ ಭಕ್ತರಲ್ಲಿ ಕಿಂಕರಭಾವ, ಮೃದುವಚನ, ಇಂದ್ರಿಯ ವಿಕಾರ ದಮನ, ಕಾಮಾದಿ ಅರಿಷಡ್‌ವರ್ಗದ ಉಪಶಮನ, ಸರ್ವಜೀವಿಗಳಲ್ಲಿ ಕರುಣ” – ಇವೇ ಕೊಟ್ಟೂರೇಶನು ಎಲ್ಲ ಜನರಿಗಿತ್ತ ಹಿತವಚನಗಳು.

ಮೈಲಾರ ಬಸವಲಿಂಗ ಶರಣರು ಮಹಾಮಹಿಮರು. ಮಹಾ ಕರುಣಿಗಳು, ಕವಿಗಳು. ಬಳ್ಳಾರಿ ಜಿಲ್ಲೆಯ ಮೈಲಾರ ಗ್ರಾಮ ಬಸವಲಿಂಗ ಶರಣರಿಂದ ಇತಿಹಾಸದಲ್ಲಿ ತನ್ನ ಹೆಸರನ್ನು ನಿರಂತರ ಉಳಿಸಿಕೊಂಡಿತು; ಅಲ್ಲದೆ ಶರಣರನ್ನು ಪಡೆದು ಪುಣ್ಯವನ್ನೂ ಗಳಿಸಿತು. ಲಿಂಗನಾಯಕನ ಹಳ್ಳಿಯಲ್ಲಿ ಗುರುಕುಲವನ್ನು ಕಟ್ಟಿ ಅನುಭಾವದಮೃತವನ್ನು ಅಲ್ಲಿಗೆ ಬಂದವರಿಗೆಲ್ಲ ಹಂಚಿದರು. ಬಸವಲಿಂಗ ಶರಣರು ಬದುಕಿರುವವರೆಗೂ ಕಾಯಕ ಮಾಡಿದರು. ಕಿರಾಣಿ ಅಂಗಡಿಯ ವ್ಯಾಪಾರ ಅವರ ಕಾಯಕವಾಗಿತ್ತು. “ಗುರು ಕರುಣ ತ್ರಿವಿಧಿ” ಶರಣ ಕೃತಿ. ಇದರಲ್ಲಿ ೩೩೩ ತ್ರಿಪದಿಗಳಿವೆ. ಎದೆದುಂಬಿ, ಭಾವದುಂಬಿ ಇದರಲ್ಲಿ ಗುರುವನ್ನು ಹೊಗಳಿದ್ದಾರೆ. ಚೆನ್ನವೀರ ಎಂಬುದು ಇವರ ಅಂಕಿತ. ‘ಗುರುಕರುಣ ತ್ರಿವಿಧಿಯಲ್ಲ’ದೆ ಇವರು ಅನೇಕ ಹಾಡುಗಳನ್ನು ಬರೆದಿದ್ದಾರೆ. ನರಸುತ, ಗುರುಸುತನಲ್ಲಿರುವ ಭೇದವನ್ನು ಬಸವಲಿಂಗ ಶರಣರು ಎಷ್ಟು ಮನೋಜ್ಞವಾಗಿ ಹೇಳಿದ್ದಾರೆ!

ಸಪ್ತವ್ಯಸನಗಳ ಚಿತ್ರದಿ ಕಾಮಿಸಿ
ಗುಪ್ತಪಾತಕನಹ ನರಸುತನು
ಸಪ್ತವಿಧದ ಸದುಭಕ್ತಿಯೊಳಗೆ ಲೋ
ಲುಪ್ತನೆನಿಸುತಿಹ ಗುರುಸುತನು
ಧರೆಯೊಳಹಂಕಾರ ಮಮಕಾರಗಳು
ಬೆರಡರೊಳಿರುತಿಹ ನರಸುತನ
ಶರಣನೆ ಸತಿ ಶಿವಲಿಂಗವೆ ಪತಿ ಎಂ
ಬೆರಡರರುವಿನೊಳಿಹ ಗುರುಸುತನು

ಈಗ ಆದವಾನಿ ತಾಲೂಕಿಗೆ ಸೇರಿದ ಹಾಲ್ವಿ ಕನ್ನಡ ನಾಡಿನ ತುಂಗಭದ್ರೆಯ ಅಂಗಳದ್ದೇ. ಹಾಲ್ವಿ ಗ್ರಾಮದ ಪಶ್ಚಿಮಕ್ಕೆ ಬೆಟ್ಟಗಳದಡಿಗೆ, ಗಿಡಗಂಟೆಗಳ ನಡುವೆ ಭವ್ಯವಾದ ಮಠವಿದೆ. ಅದಕ್ಕೆ ಚರಣಗಿರಿ ಮಠವೆಂದು ಹೆಸರು. ತೊಂಬತ್ತು ವರ್ಷಗಳ ಹಿಂದೆ ‘ಮಹಾಂತೇಶ’ ಎಂಬ ಮಹಾಸ್ವಾಮಿಗಳು ಅಲ್ಲಿದ್ದು ತಪಸ್ಸಿನಿಂದ, ಹಿತವಚನಗಳಿಂದ, ಪುರಾಣ ಪ್ರವಚನಗಳಿಂದ ಜನರ ಜೀವನಕ್ಕೆ ಶಿವಭಕ್ತಿಯನ್ನಿಳಿಸಿದರು. ಸತತ ಮೂರು ವರ್ಷದವರೆಗೆ ಬಸವಪುರಾಣ ಪ್ರವಚನ ನಡೆಸಿ ಜ್ಞಾನದಾಸೋಹದ ಜೊತೆಗೆ ನಿತ್ಯ ಸಾವಿರಾರು ಜನರಿಗೆ ಅನ್ನದಾಸೋಹವನ್ನೂ ನಡೆಸಿದ ಮಹಾನುಭಾವರು ಶ್ರೀ ಮಹಾಂತೇಶರು.

ಮಾನ್ವಿ ತಾಲೂಕಿಗೆ ಸೇರಿದ ಕಲ್ಲೂರಿನಲ್ಲಿ ಒಂದು ತಲೆಮಾರಿನ ಹಿಂದೇ “ಅಡಿವೆಪ್ಪತಾತ”, ನವರೆಂಬ ಶರಣರಿದ್ದರು. ಅವರು ತಮ್ಮ ತಪಸ್ಸಿನಿಂದ ಸುತ್ತು ಮುತ್ತಿನ ಜನರ ಜೀವನ ಹಸನುಗೊಳಿಸಿದರು. ಈಗ ಅಲ್ಲಿ ಅವರ ಗದ್ದುಗೆಯಿದ್ದು ಪ್ರತಿವರ್ಷ ಜಾತ್ರೆಯಾಗುತ್ತದೆ. ಸಿಂಧನೂರ ತಾಲೂಕಿನ ಬಳಗಾನೂರಿನಲ್ಲಿ ಮರಿ ಸ್ವಾಮಿಗಳೆಂದು ಶರಣರಿದ್ದರು. ಅವರು ಅನೇಕ ಹಾಡುಗಳನ್ನು ಬರೆದಿದ್ದಾರೆ. ಸಂದಿಗ್ಧ ಸಮಯದಲ್ಲಿ ಕುಮಾರಸ್ವಾಮಿಗಳಿಗೆ ದಾರಿತೋರಿದ ಎಮ್ಮಿಗನೂರು ಜಡೆಪ್ಪತಾತ, ಬಳ್ಳಾರಿಯ ಸಕ್ಕರೆ ಕರಡೆಪ್ಪ, ಚೆಳ್ಳುಗುರಿಕಿ ಎರಿತಾತ ಈ ಮಹಿಮರಿಂದ ಅನಂತಜೀವಿಗಳು ಉದ್ದಾರವಾಗಿದೆ.

ಕವಿಗಳು

ತುಂಗಭದ್ರೆಯ ಸೀಮೆ ಪುರಾತನ ಕಾಲದಿಂದ ಕನ್ನಡ ಸಾಹಿತ್ಯಕ್ಕೆ ಹೆಸರಾಗಿದೆ. ನೃಪತುಂಗನು ಹೇಳುವ ತಿರುಳ್ಗನ್ನಡ ನಾಡಿನಲ್ಲಿ ಕೊಪಣ ನಗರವೂ ಒಂದು. ಕನ್ನಡದ ವೀರವನ್ನು ಮೆರೆದ ಸೀಮೆ ಇದೆ. ಹಂಪೆಯಂತೂ ಸಾಹಿತ್ಯ ಸೃಷ್ಟಿಗೆ ಎರಡಿಲ್ಲದಂತಿದೆ. ಕನ್ನಡ ಸಾಹಿತ್ಯ ಲೋಕಕ್ಕೆ ಹಂಪೆ ಕೊಟ್ಟಷ್ಟು ಕವಿಗಳನ್ನು, ಸಾಹಿತಿಗಳನ್ನು ಮತ್ತಾವ ಊರು ಕೊಟ್ಟಿಲ್ಲ. ಸಾಹಿತ್ಯ, ಕಾವ್ಯ, ವೀರ, ಶಿಲ್ಪ, ಅನುಭಾವ, ಭಕ್ತಿ – ಎಲ್ಲಕ್ಕೂ ಹಂಪೆ ತವರೆನಿಸಿ ಮೆರೆದಿದೆ. ಕನ್ನಡದ ಅಭಿಮಾನದ. ಐಸಿರಿಯ, ಬೀರದ ಕುರುಹು ಅದು.

ಕನ್ನಡ ನವೋದಯಕ್ಕೆ ಕಾರಣರಾದ ಪಂಡಿತರ ವಜ್ರ ಬಾಹುಗಳಿಂದ, ಅರಮನೆಯ ಉಸಿರುಕಟ್ಟಿಸುವ ಪರಿಸರದಿಂದ ಸರಸ್ವತಿಯನ್ನು ಹೊರತಂದು, ಸ್ವಚ್ಛಗಾಳಿ ಬೆಳಕು, ಚೇತನ ಮೂಡಿಸಿ ಶ್ರೀ ಸಾಮಾನ್ಯನ ಅಂಗಳದಲ್ಲಿ ಆಕೆಯ ವಾಣಿಯನ್ನು ಮೊಳಗುವಂತೆ ಮಾಡಿದ ಮಹಾ ಕವಿಗಳಿಬ್ಬರು – ಹರಿಹರ, ರಾಘವಾಂಕರು – ಹಂಪೆಯವರು. ಛಂದಸ್ಸು, ರೀತಿ, ಕಥೆ, ಶೈಲಿ, ಮಾರ್ಗ, ವಸ್ತು – ಎಲ್ಲ ದೃಷ್ಟಿಯಿಂದ ಪರಿವರ್ತನೆಯನ್ನು ತಂದು ಸಂಪ್ರದಾಯವನ್ನು ಮೀರಿ ಮೆರೆದಾತ ಹರಿಹರ; ತುಂಗಭದ್ರೆ ಸೀಮೆಯ ಮೊದಲ ಮಹಾಕವಿ ಹೊಯ್ಸಳರ ಓಲಗದಲ್ಲಿ ಕರಣಿಕನಾಗಿದ್ದು, ಮನುಜರ ಸೇವೆ, ಸಾವವರ ಸೇವೆ ಮಾಡದೆ ಹಂಪೆಗೆ ಬಂದು ಪಂಪಾಪತಿಯ ಅಡಿಯಲ್ಲಿ ಕುಳಿತು ನೂರಾ ಆರು ರಗಳೆಗಳನ್ನು, ಗಿರಿಜಕಲ್ಯಾಣವೆಂಬ ಚಂಪೂಕಾವ್ಯವನ್ನು, ಮುಡಿಗೆಅಷ್ಟಕವನ್ನು, ಪಂಪಾಶತಕ, ರಕ್ತಾಶತಕಗಳನ್ನು ಬರೆದು ಯುಗಪುರುಷನಾದನು. ಆತನ ಕಾವ್ಯವನ್ನೋದುವಾಗ ಆರೆ ನಿಮಿಷದಲ್ಲಿ ನಾವು ಆತನವರಾಗಿ ಬಿಡುತ್ತೇವೆ. ಆ ಉತ್ಸಾಹ, ಆ ಭಕ್ತಿಯ ನಿರ್ಭರತೆ, ಆ ರೂಪಕ ಎಲ್ಲವೂ ಹೊಸವು. ಪುಷ್ಟದಂತೆ ಅರಳಿ, ಘಮಘಮಿಸುವ ಆತನ ಜೀವನವನ್ನು ಪಡಿನುಡಿಯುತ್ತದೆ ಆತನ ಪುಷ್ಪರಗಳೆ, ಶತಕಗಳು ಆತನ ಅಂತರಂಗದ ಜೀವನವನ್ನು ನಮ್ಮೆದುರಿಗೆ ತೆರೆದಿಡುತ್ತವೆ.

ಪೋಗೆನೆ ಪೋಪ, ಬಾರೆಲ್ಲವೊ ಬಾರೆನೆ ಜೀಯ ಹಸಾದವೆಂದು ಬೆಳ್ಳಾಗುತೆ
ಬರ್ಪ, ಮಾಣೆಲವೊ ಸುಮ್ಮನಿರೆಂದೆಡೆ ಸುಮ್ಮನಿರ್ಪಮ,
ತ್ತಾಗಳೆ ಝಂಕಿಸುತ ನಡುಗಿ ಬೀಳುವ ಸೇವೆಯ ಕಷ್ಟವೃತ್ತಿಯಂ
ನೀಗಿದೆನಿಂದು ನಿಮ್ಮ ದೆಸೆಯಿಂ ಕರುಣಾಕರ ಹಂಪೆಯಾಳ್ದನೇ

ಈ ಪದ್ಯ ಆತ ಹೊಯ್ಸಳರ ಸೇವೆಯನ್ನು ಬಿಟ್ಟು ಬಂದುದನ್ನು ಧ್ವನಿಪೂರ್ಣವಾಗಿ ಚಿತ್ರಿಸುತ್ತದೆ.

ಮನುಜರ ಮೇಲೆ ಸಾವವರ ಮೇಲೆ ಕನಿಷ್ಟರ ಮೇಲೆ ಅಕ್ಕಟಾ
ತನತನಗಿಂದ್ರ ಚಂದ್ರ ರವಿ ಕರ್ಣ ದಧೀಚಿ ಬಲೀಂದ್ರರೆಂದು ಮೇಣ್
ಅನವರತಂ ಪೊಗಳ್ದು ಕೆಡಬೇಡೆಲೆಮಾನವ ನೀನಹರ್ನಿಶಂ
ನೆನೆಪೊಗಳಿರ್ಚಿಸೆಮ್ಮ ಕಡುಸೊಂಪಿನ ಪೆಂಪಿನ ಹಂಪೆಯಾಳ್ದನಾ

ಈ ಪದ್ಯ ಆತ ಎಂಥವರನ್ನು ಕುರಿತು ಕಾವ್ಯ ಬರೆದನೆಂಬುದನ್ನು ಸಾರಿ ಹೇಳುತ್ತದೆ. ಆತನ ಕಾವ್ಯದ ನಾಯಕರು – ಸಾವಿಲ್ಲದವರು – ಮೃತ್ಯುಂಜಯರು: ಮಾದರ ಚೆನ್ನಯ್ಯ, ಬೇಡರ ಕಣ್ಣಪ್ಪ, ಕುಂಬರ ಗುಂಡಯ್ಯ ಮುಂತಾದವರು. ಮಾದಿಗರು, ಕುಂಬಾರರು, ಒಕ್ಕಲಿಗರು, ಬೇಡರು, ಜೇಡರು – ಎಂದೂ ಕಾವ್ಯ ನಾಯಕರಾಗಿರಲಿಲ್ಲ. ಅಂಥವರನ್ನು ಕಾವ್ಯದ ನಾಯಕರನ್ನಾಗಿ ಮಾಡಿದ ಧೀರ ಹರಿಹರ. ಮುಂದೆ ವೀರಶೈವ ಕವಿಗಳು ಆತನ ದಾರಿಯಲ್ಲಿಯೇ ನಡೆದರು; ಆತನ ಪಾದಕ್ಕೆ ಹೊವನ್ನರ್ಪಿಸದ ಒಬ್ಬ ಕವಿಯೂ ಇಲ್ಲ.

ಆತನ ಸೋದರಳಿಯ ರಾಘವಾಂಕ ಮಾನವಂತೆ ಈತನೂ ಕ್ರಾಂತಿಯ ಷಟ್ಪದಿಗೆ ಮೂಲಪುರುಷ. ವಸ್ತು. ರೀತಿ, ಕಥೆ, ಮುಂತಾಗಿ ಎಲ್ಲ ದೃಷ್ಟಿಯಲ್ಲಿಯೂ ಮಾವನನ್ನೇ ಅನುಸರಿಸಿದ. ಆದರೆ ಮೊದಲು ಹರಿಶ್ಚಂದ್ರ ಕಾವ್ಯ ಬರೆದು ಹರಿಹರನಿಂದ ಹಲ್ಲು ಮುರಿಸಿಕೊಂಡೆನೆಂಬ ವದಂತಿಯೂ ಇದೆ. ಹರಿಶ್ಚಂದ್ರ ಕಾವ್ಯ. ಸೋಮನಾಥ ಚರಿತ್ರೆ ಸಿದ್ಧರಾಮ ಚರಿತ್ರೆ, ವೀರೇಶ ಚರಿತ್ರೆ, ಶರಭ ಚಾರಿತ್ರ, ಹರಿಹರ ಮಹತ್ವ – ಇವು ಈತನ ಕೃತಿಗಳು. ಕೊನೆಯ ಎರಡು ಕಾವ್ಯಗಳು ಉಪಲಬ್ಧವಿಲ್ಲ. “ಹರನೆಂಬುದೆ ಸತ್ಯ, ಸತ್ಯವೆಂಬುದೆ ಹರನು” ಎಂಬ ಚಿರಂತನ ತತ್ವವನ್ನು ಕಾವ್ಯ ಮುಖದಿಂದ ಸಾರಿದ ಮಹಾಕವಿ ಈತ. ಕನ್ನಡ ಸಾಹಿತ್ಯದಲ್ಲಿ ಕವಿಗಳನ್ನು ಕುರಿತು ಕಾವ್ಯ ರಚನೆಯಾದದ್ದು ರಾಘವಾಂಕನನ್ನುಳಿದು ಇನ್ನೆಲ್ಲಿಯೂ ಕಂಡು ಬರುವುದಿಲ್ಲ. ಹದಿನಾರನೆಯ ಶತಮಾನದ ಚಿಕ್ಕನಂಜೇಶಕವಿಯು ‘ರಾಘವಾಂಕ ಚರಿತ್ರೆ’ ಎಂಬ ಕಾವ್ಯವನ್ನು ಬರೆದಿದ್ದಾನೆ. ಇದರಿಂದ ರಾಘವಾಂಕ, ಕೆರೆಯ ಪದ್ಮರಸ, ಹರಿಹರ ಮುಂತಾದವರ ಬಗ್ಗೆ ಅನೇಕ ಸಂಗತಿಗಳು ತಿಳಿದು ಬರುತ್ತವೆ.

ವಿಜಯನಗರ ಸಾಮ್ರಾಜ್ಯದ ಕಾಲ ಕನ್ನಡ ಸಾಹಿತ್ಯದ ಉಚ್ಛ್ರಾಯದ ಕಾಲ. ಸಂಗಮ ವಂಶದ ಬುಕ್ಕರಾಯನ ಮಗ ಎರಡನೆಯ ಕೆಂಪದೇವ ಕವಿಯೆಂದು ಹೆಸರಾಗಿದ್ದಾನೆ. ಈತ ‘ಸೊಬಗಿನ ಸೋನೆ’, ‘ಅಮರ ಶತಕ’ಗಳನ್ನು ಬರೆದಿದ್ದಾನೆ.

ಸಂಗಮವಂಶದ ಪ್ರೌಢದೇವರಾಯನ ಕಾಲ ಎಲ್ಲ ದೃಷ್ಟಿಯಿಂದ ಸುವರ್ಣಯುಗ; ಕನ್ನಡ ಸಾಹಿತ್ಯದ ಸುಗ್ಗಿಯ ಯುಗ. “…ಆ ವಿಷಮತೆಯ ವಿರುದ್ಧ ನಿತ್ಯಸ್ತ್ರಕ್ರಾಂತಿ ಎಬ್ಬಿಸಿದ ಕ್ರಾಂತಿ ಪುರುಷ ಬಸವಣ್ಣನವರು. ಅವರ ಕ್ರಾಂತಿಯ ಫಲವಾಗಿಯೇ ದಕ್ಷಿಣಭಾರತೀಯರು ಅಂದರೆ ಕನ್ನಡಿಗರು ಆತ್ಮಜಾಗ್ರತೆ ಪಡೆದದ್ದು. ಈ ಹದಗೊಳಿಸಿದ ಭೂಮಿಯಲ್ಲಿಯೇ ಮುಂದೆ ವಿಜಯನಗರ ಸಾಮ್ರಾಜ್ಯದ ಬೆಳೆ ಬಂದದ್ದು” ಎಂದು ಶ್ರೀಚಿಂತಾಮಣಿಯವರು ತಮ್ಮ “ಯುಗಪ್ರವರ್ತಕ” ಬಸವಣ್ಣನವರು ಎಂಬ ಗ್ರಂಥದಲ್ಲಿ ಹೇಳಿದ್ದಾರೆ. ಆ ಬೆಳೆಯ ಪೂರ್ಣಫಲ ಬಂದದ್ದು ಇಮ್ಮಡಿ ಪ್ರೌಢದೇವರಾಯನ ಕಾಲದಲ್ಲಿ ಎಂದು ಹೇಲಬಹುದು. ಪ್ರೌಢದೇವರಾಯ ವೀರ, ಶೂರ, ಗಜ, ಬೇಟೆಯನ್ನಾಡುವ ಧೀರನಿದ್ದಂತೆ ಸಾಹಿತಿಗಳಿಗೆ. ಕವಿಗಳಿಗೆ ಆಶ್ರಯವೀಯುವಲ್ಲಿ ಉದಾರಿಯೂ ಆಗಿದ್ದನು. ಈತನ ಕಾಲಕ್ಕೆ ಶರಣಧರ್ಮ ಪುನರುಜ್ಜೀವನಗೊಂಡಿತು. ಶರಣರ ವಚನಗಳನ್ನು ಸಂಶೋಧಿಸಿ, ವ್ಯಾಸಂಗ ನಡೆದು ಆ ಸಾಹಿತ್ಯವನ್ನು ಉಳಿಸಿ ಬೆಳೆಸಲಾಯಿತು. ಈತನ ಕಾಲಕ್ಕೆ ನೂರೊಂದು ವಿರಕ್ತರಿದ್ದು. ಅವರು ಕವಿಗಳು, ಶರಣರು ಅನುಭಾವಿಗಳು ಆಗಿದ್ದುದಲ್ಲದೆ ವಿಜಯನಗರ ಸಾಮ್ರಾಜ್ಯದ ರಕ್ಷಕರೂ ಆಗಿದ್ದರು. ಲಕ್ಕಣ್ಣದಂಡೇಶ, ಜಕ್ಕಣ್ಣ, ಚಾಮರಸ, ಕಲ್ಲುಮಠದ ಪ್ರಭುದೇವ, ಮಹಾಲಿಂಗದೇವ, ಕರಸ್ಥಲದ ನಾಗಿದೇವ, ಶ್ರೀ ಗಿರೀಂದ್ರ, ಬತ್ತಲೇಶ್ವರ, ಕುಮಾರ ಬಂಕನಾಧ, ಮಗ್ಗೆಯ ಮಾಯಿದೇವ, ಸಪ್ತಕಾವ್ಯದ ಗುರುಬಸವ, ಅಷ್ಟಭಾಷಾಕವಿ ಚಂದ್ರಶೇಖರ, ತೆಲುಗು ಕವಿ ಶ್ರೀನಾಥ ಮುಂತಾದ ಕವಿಗಳು ಇಮ್ಮಡಿ ಪ್ರೌಢದೇವರಾಯನ ಆಸ್ಥಾನದಲ್ಲಿದ್ದರು. ಕನ್ನಡರಾಜರಲ್ಲಿ ಪ್ರೌಢದೇವರಾಯನನ್ನು ಕವಿಗಳು ಹೊಗಳಿದಷ್ಟು ಇನ್ನಾವ ರಾಜನನ್ನೂ ಹೊಗಳಿಲ್ಲ. ಸಮಕಾಲೀನ ಕವಿಗಳಂತೂ ಮನದುಂಬಿ ಹೊಗಳಿದ್ದಾರೆ. ಹದಿನಾರನೆಯ ಶತಮನಾದ ಅದೃಶನೆಂಬ ಕವಿ ‘ಪ್ರೌಢರಾಯ ಕಾವ್ಯ’ ಎಂಬ ಹೆಸರಿನ ಕಾವ್ಯವನ್ನು ಬರೆದಿದ್ದಾನೆ.

ಲಕ್ಕಣ್ಣದಂಡೇಶ ಇಮ್ಮಡಿ ಪ್ರೌಢದೇವರಾಯನ ಸಾಮ್ರಾಟನ ಮಹಾದಂಡನಾಯಕನೂ ಮುಖ್ಯಾಮಾತ್ಯನೂ ಆಗಿದ್ದನು. ದೊರೆಯ ಆಪ್ತ ಸಚಿವನೂ ಆಗಿದ್ದನು. “ಒಂದೇ ವ್ಯಕ್ತಿ ಮಹಾಮಂತ್ರ, ಮಹಾಸೇನಾನಿ, ಮಹಾಕವಿ, ಮಹಾನುಭಾವಿಯಾಗಿ ಎಲ್ಲ ಪಾತ್ರಗಳಲ್ಲಿಯೂ ಔನತ್ಯವನ್ನು ಪಡೆದಿರುವ ನಿದರ್ಶನಗಳು ಪ್ರಪಂಚದ ಇತಿಹಾಸದಲ್ಲಿ ಅತಿ ವಿರಳವೆಂದು ಹೇಳಬಹುದು” – ಸಿ.ಎಚ್. ದೇವೀರಪ್ಪನವರ ಮಾತು ಸತ್ಯವೆನಿಸುತ್ತದೆ. “ಶಿವತತ್ವಚಿಂತಾಮಣಿ” ಈತನ ಕಾವ್ಯ. ಇದರಲ್ಲಿ ೨೨೨೧ ಪದ್ಯಗಳಿವೆ. ಪ್ರತಿ ಪದ್ಯವೂ ಚರಣಾಂಬುಜಕ್ಕೆ ಶರಣು ಎಂದು ಮುಕ್ತಾಯವಾಗುತ್ತದೆ. ಚಿಕ್ಕನಂಜೇಶ ಕವಿಯು ಇದಕ್ಕೆ ‘ಶಿವತತ್ವ ಚಿಂತಾಮಣಿಶಾಸ್ತ್ರ’ ಎಂದು ಕರೆದಿದ್ದಾನೆ. ಇದೊಂದು ಬೃಹತ್ಕಾವ್ಯ – ಇದು ವೀರಶೈವ ಶರಣರ ಅಮರಕೋಶ. ಲಕ್ಕಣ್ಣ ದಂಡೇಶ ಪ್ರೌಢದೇವರಾಯನನ್ನು ಕುರಿತು ಹೀಗೆ ಹೇಳುತ್ತಾನೆ:

ಪೂಜಕನು ತಾಣೆಯಾದಪೆನೆನುತ ಮನವೊಲಿದು
ರಾಜಶೇಖರ ವಿರುಪಾಕ್ಷಂ ಸ್ವಲೀಲೆಯಂ
ರಾಜಾಧಿರಾಜ ಪರಮೇಶ್ವರಂ ಶ್ರೀ ವೀರದೇವರಾಜೇಂದ್ರನಾಗಿ
ರಾಜಿಸುತ ಸಕಲ ದೇಶದ ಮಕುಟವರ್ಧನವಿ
ರಾಜಿತ ಮಹಾರತ್ನ ಸಿಂಹಾಸನದೊಳಿಧಿಕ
ತೇಜದಿಂ ಪ್ರತ್ಯಕ್ಷನಾದನೆಂದರಿವವರ ಚರಣಾಂಬುಜಕ್ಕೆ ಶರಣು

ಕಲ್ಯಾಣ ನಗರವನ್ನು ಬಹು ಸೊಗಸಾಗಿ, ಬಹು ಅರ್ಥಪೂರ್ಣವಾಗಿ, ‘ಕಲ್ಯಾಣ’ ಎಂಬ ಶಬ್ದ ಹಲವು ಮುಖದಿಂದ ಸಾರ್ಥಕಗೊಳಿಸಿ ಹೀಗೆ ಹೊಗಳುತ್ತಾನೆ:

ಕಲ್ಯಾಣ ಪುರವಿಳಾತಳಕೆ ಶುಭ ಕಲ್ಯಾಣ
ಕಲ್ಯಾಣಪುರ ಮನುಜ ಮಂಗಳದ ಕಲ್ಯಾಣ
ಕಲ್ಯಾಣ ಪಾಪೌಘರದನಿ ಬಿದುವಿದಳನದ ಪಂಚಾಸ್ಯ ಕಲ್ಯಾಣವು
ಕಲ್ಯಾಣವು ಭಕ್ತಿಸತಿಯ ವಿವಾಹ ಕಲ್ಯಾಣ
ಕಲ್ಯಾಣ ಪರಮ ಕೈವಲ್ಯಪದ ಕಲ್ಯಾಣ
ಕಲ್ಯಾಣದೊಳ್ ಬಸವನಂತಿರ್ಪ ಭಕ್ತರ ಸುಚರಣಾಂಬುಜಕ್ಕೆ ಶರಣು

ಚಾಮರಸ ಅಲ್ಲಮಪ್ರಭುವಿನ ಚಾರಿತ್ರವನ್ನು ‘ಪ್ರಭುಲಿಂಗಲೀಲೆ’ ಎಂಬ ಹೆಸರಿನಿಂದ ಬರೆದಿದ್ದಾನೆ. ನೂರೊಂದು ವಿರಕ್ತರಲ್ಲಿ ಇವನೂ ಒಬ್ಬ. ಅಸಾಧಾರಣ ಕೀರ್ತಿಗೂ ಗೌರವಕ್ಕೂ ಪಾತ್ರನಾದ ಕವಿಯೀತ. ವ್ಯೋಮಕಾಯ ಅಲ್ಲಮನ ಚರಿತೆ ಚಿತ್ರಸುವುದೂ ಅಷ್ಟೇ ಎತ್ತರಕ್ಕೆ ಮುಟ್ಟಿದ ಚಾಮರಸನಿಗೆ ಸಾಧ್ಯ. ಈ ಪ್ರಭುಲಿಂಗ ಲೀಲೆ ಸಂಸ್ಕೃತ, ತೆಲುಗು, ಮರಾಠಿ, ತಮಿಳು ಭಾಷೆಗಳಲ್ಲಿ ಆಗಿನ ಕಾಲದಲ್ಲಿಯೇ ಅನುವಾದವಾಗಿದೆ.

‘ಮಗ್ಗೆಯ ಮಾಯಿದೇವ’ ಪ್ರೌಢರಾಯನ ಗುರುವಾಗಿದ್ದಂತೆ ಕಂಡುಬರುತ್ತದೆ. ಶತಕತ್ರಯ, ಪ್ರಭುನೀತಿ, ಮಗ್ಗೆಯ ಮಾಯಿದೇವ ವಚನ ಮುಂತಾದುವು ಈತನ ಕನ್ನಡ ಗ್ರಂಥಗಳು. ‘ಅನುಭವ ಸೂತ್ರ’ ಈತನ ಸಂಸ್ಕೃತ ಗ್ರಂಥ. ಅಪಾರ ಗೌರವ ಸಂಪಾದಿಸಿದ ಕವಿ ಮಗ್ಗೆಯಮಾಯಿ ದೇವ.

ಗುರು ಬಸವ ಈತ ಸಪ್ತಕಾವ್ಯದ ಗುರು ಬಸವನೆಂದೇ ಪ್ರಸಿದ್ಧನಾಗಿದ್ದಾನೆ. ೧. ಸದ್ಗುರು ರಹಸ್ಯ ೨. ಕಲ್ಯಾಣೇಶ್ವರ ೩. ಸ್ವರೂಪಾಮೃತ ೪. ವೃಷಭ ಗೀತೆ ೫. ಅವಧೂತಗೀತೆ ೬. ಮನೋವಿಜಯ ೭. ಯೋಗಾಂಗ ವಿಭೂಷಣ – ಇವು ಈತನ ಕಾವ್ಯಗಳು.

ಅಷ್ಟಭಾಷಾ ಕವಿ ಚಂದ್ರಶೇಖರ. ಈತ ಪಂಪಸ್ಥಾನಾವರ್ಣನಂ ಮತ್ತು ಗುರುಮೂರ್ತಿ ಶಂಕರ – ಶತಕ – ಇವುಗಳನ್ನು ಬರೆದಿದ್ದಾನೆ.

ಜಕ್ಕಣ್ಣನು ‘ಏಕೋತ್ತರ ಶತಸ್ಥಲ’ ಎಂಬ ಗ್ರಂಥವನ್ನು ಬರೆದಿದ್ದಾನೆ. ಕಲ್ಲುಮಠದ ಪ್ರಭೂದೇವ “ಲಿಂಗಲೀಲಾ ವಿಲಾಸ” ಚಾರಿತ್ರವನ್ನು ಸಂಕಲಿಸಿದ್ದಾನೆ. ಕುಮಾರ ಬಂಕನಾಥ ‘ಷಟ್‌ಸ್ಥಲೋಪದೇಶ’ವನ್ನು ರಚಿಸಿದ್ದಾನೆ. ಕರಸ್ಥಲದ ವೀರಣ್ಣೊಡೆಯ ವಚನ ಗ್ರಂಥ ಬರೆದಿದ್ದಾನೆ. ಈತನಿಗೆ ಪ್ರೌಢದೇವರಯ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿದನೆಂದು ಚನ್ನಬಸವನ ಪುರಾಣದಲ್ಲಿ ಹೇಳಿದೆ. ಕರಸ್ಥಲದ ನಾಗಿದೇವ ‘ನಾಗಿ ದೇವನ ತ್ರಿವಿಧಿ’ ಎಂಬ ಗ್ರಂಥ ಬರೆದಿದ್ದಾನೆ. ಬತ್ತಲೇಶ್ವರ ಎಂಬ ಕವಿ ರಾಮಾಯಣವನ್ನು ಬರೆದಿದ್ದಾನೆ.

ವಿರೂಪಾಕ್ಷ ಪಂಡಿತ ಹದಿನಾರನೆಯ ಶತಮಾನದ ಕವಿ. ಈತನೂರು ಹಂಪೆ. ಚನ್ನಬಸವ ಪುರಾಣವನ್ನು ಬರೆದಿದ್ದಾನೆ. ಚೆನ್ನಬಸವಣ್ಣನವರ ಚರಿತ್ರೆಯಲ್ಲದೆ ಇದರಲ್ಲಿ ಶರಣರ ಕಥೆಗಳು, ಶಿವನಲೀಲೆಗಳು, ಸ್ಥಲವಿವೇಚನೆ, ಅಮರಗಣಗಳು, ಕಾಲಜ್ಞಾನ ಮುಂತಾದ ಅನೇಕ ವಿಷಯಗಳಿವೆ. ಈ ಕವಿಯ ಚಂದ್ರೋದಯ, ಸೂರ‍್ಯಾಸ್ತ ಮುಂತಾದ ವರ್ಣನೆಗಳು ಬಹು ಪ್ರಸಿದ್ಧಿ ಪಡೆದಿದೆ. ಈತನ ‘ರಾಜನೀತಿಯ ಸಂಧಿ’ ಯಂತೂ ಕನ್ನಡ ಸಾಹಿತ್ಯದಲ್ಲಿ ಅದ್ವಿತೀಯವಾಗಿದೆ.

ಇದು ಸೂರ್ಯಾಸ್ತದ ಸೊಗಸಾದ ವರ್ಣನೆ:

ಅನ್ನೆಗಂ ಪಶ್ಚಿಮಾಂಗನೆ ಲೀಲೆಯಂ ಪಿಡಿದ
ರನ್ನದಿಮ್ಮೈಗನ್ನಡಿಯೊ ವಾರುಣಿಯ ಮಸ್ತ
ಕೋನ್ನತ ನವೀನ ಮಾಣಿಕ್ಯವೋ ವಡದಾಗ್ನಿಯಿಂದ ಸಿಡಿದಪೆರ್ಗಿಡಿಯಿದೊ
ಮುನ್ನೀರ ಸತಿ ಪತಿಗೆಯಾರತಿಯನ್ನೆತ್ತಿ ಜವ
ದಿನ್ನೆಗಪಿ ಚೆಲ್ಲಲ್ಲಾಕೆಯ ಕಯ್ಯೊಳಿರ್ಪ ಪೊಸ
ಪೊನ್ನ ಪರಿಯಾಣವೆನಲಸ್ತಗಿರಿ ಮಸ್ತಕದೊಳಿನ ಬಿಂಬಮೆಸೆದಿರ್ದುದು

ಅಲ್ಲದೆ ಕಲ್ಲೂರಿನ ಲಿಂಗರ್ಣಾಚಾರ್ಯ, ಗಣೇಕಲ್ಲಿನ ಸಂಗವಿಭು, ಸಂತೇಕೆಲ್ಲೂರಿನ ಘನಮಠದಾರ್ಯ, ಕೂಡಲೂರು ಬಸವಲಿಂಗ ಶರಣರು, ಗೂಗಲ್ಲು ಪರಪ್ಪ, ದ್ಯಾಂಪುರದ ಚನ್ನಕವಿಗಳು, ಮಸ್‌ಇಕಯ ಬಸವಪ್ಪಶಾಸ್ತ್ರಿಕ, ದಿನ್ನಿಯ ವೆಂಕಯ್ಯ ಕವಿ, ಮಸ್ಕಿಯ ಅಮರೇಶ್ವರ ಶಾಸ್ತ್ರಿ, ಗೊಬ್ಬೂರು ಮುದಕಪ್ಪ, ಗೊಬ್ಬೂರು ಹಂಪಣ್ಣ ಮುಂತಾದ ಕವಿ, ಶಾಸ್ತ್ರಕಾರ, ಸಾಧುಸಂತರ ಮೂಲಕ ತುಂಗಭದ್ರಾ ಸೀಮೆಯ ಈ ನಾಡು ಸಾಹಿತ್ಯ ಹಾಗೂ ಸಂಸ್ಕೃತಿಗೆ ತನ್ನದೇ ಆದ ವಿಶಿಷ್ಟ ಕಾಣಿಕೆ ಸಲ್ಲಿಸಿದೆ.

ತುಂಗಭದ್ರೆಯ ಸೀಮೆರಾಜ್ಯಕ್ಕೆ, ರಾಷ್ಟ್ರಕ್ಕೆ ಕಣ್ಣಾಗಿ ಮೆರೆವ ಕಾಲ ಸನ್ನಿಹಿತವಾಗಿದೆ. ಮತ್ತೊಮ್ಮೆ ಕನ್ನಡದ ಐಸಿರಿ ತನ್ನ ಸಕಲ ರೂಪಗಳಿಂದ ಪ್ರಕಟವಾಗುವ ಸಮಯ ಬಂದಿದೆ. ನಾವೆಲ್ಲ ಆ ಕಾಲವನ್ನು, ಸಮಯವನ್ನು ಸ್ವಾಗತಿಸಲು ಸಿದ್ಧರಾಗುವ.