ಶೀಲ ಮತ್ತು ಸಂಪಾದನೆ ಇವೆರಡು ಶಬ್ದಗಳು ವಚನಕಾರರಲ್ಲಿ ವಿಶಿಷ್ಟ ಅಥವನ್ನು ಪಡೆಯುತ್ತವೆ.

ಶೀಲವೆಂದರೆ ನಡೆ, ವ್ರತ ಮತ್ತು ನೇಮವೆಂದು ಸಾಮಾನ್ಯ ಬಳಕೆಯಲ್ಲಿ ಅರ್ಥವಾಗುತ್ತದೆ. ಇವು ಜನಜೀವನದಲ್ಲಿ ಹಾಸುಹೊಕ್ಕಾಗಿ ಬೆಳೆದು ನಿಂತಿವೆ, ಪುಣ್ಯಗಳಿಸಲು ಮೋಕ್ಷದ ದಾರಿ ನಿರ್ಮಿಸಲು ಈ ವ್ರತ, ಶೀಲ, ನೇಮಗಳು ಬಳಕೆಯಲ್ಲಿ ಬಂದುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಸಾಧಾರಣ ಜೀವನದಲ್ಲಿ ಇವು ಸಾಧಾರಣ ಅರ್ಥದಿಂದ ಜನರನ್ನು ಒಂದು ಬಗೆಯ ಗೊಂದಲಕ್ಕೀಡುಮಾಡುತ್ತವೆ; ಚಿತ್ರಹಿಂಸೆ ಕೊಡುತ್ತಿವೆ ಎಂದರೂ ನಡೆಯುತ್ತದೆ. ಇವುಗಳನ್ನು ಬೆನ್ನಿಗೇರಿಸಿಕೊಂಡವ ನೆಮ್ಮದಿ ಜೀವನ ಬಾಳಲಾರ. ಶೀಲ ಎಂಬುದಂತೂ ಮನುಷ್ಯರನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ಇಂಥ ಶೀಲ ವಚನಕಾರರಲ್ಲಿ ವಿಶೇಷ ಅರ್ಥವನ್ನು ಪಡೆದು, ಜೀವನದ ಅತ್ಯಂತಿಕ ಗುರಿಯಾಗಿದೆ. ಆದರೆ ಕರ್ಮಕಾಂಡದ ಶೀಲವಂತನಿಗೆ ಇದು ಸಾಧ್ಯವಾಗುವುದಿಲ್ಲ. ಏನಿದ್ದರೂ ಅವನು ಕೆಲವು ನೇಮ ನಿತ್ಯಗಳಲ್ಲಿ ಮುಳುಗಿ ಹಾಳಾಗುತ್ತಾನೆ.

ಸುಖವನರಿಯದ ಕಾರಣ ಹೆಂಗಸು ಸೂಳೆಯಾದಳು.
ಶಿವಲಿಂಗವನರಿಯದ ಕಾರಣ ಭಕ್ತ ಶೀಲವಂತನಾದ.

ಚೆನ್ನಬಸವಣ್ಣನವರ ಈ ವಚನ ಸನಾತನ ಶೀಲವಂತರನ್ನು ಎತ್ತಿತೋರಿಸುತ್ತದೆ.

ಬಾಹ್ಯ ಜೀವನದಲ್ಲಿ ಶೀಲ ಬದುಕಿನ ನೀತಿಯನ್ನು ಎತ್ತಿಹಿಡಿಯುತ್ತದೆ. ಕಂದಾಚಾರಗಳಿಗೆ ಇದು ಪೂರ್ತಿ ವಿರುದ್ಧ. “ಪರಸ್ತ್ರೀಯರ ನೋಡದಿಪ್ಪುದೇ ಶೀಲ” ಎನ್ನುತ್ತಾನೆ ಶಿವಲೆಂಕ ಮಂಚಣ್ಣ. ಅಂತರಂಗವನ್ನು ಬೆಳಗಿ ಸಾಮರಸ್ಯದ ನಿಲುವಿಗೆ ಮುಟ್ಟಿಸುವದು, ಮುಟ್ಟಿಸುವದು ಏಕೆ ಸಾಮರಸ್ಯವೇ ತಾನಾಗುವದು ಶೀಲ. ಇದನ್ನು ಷಣ್ಮುಖಸ್ವಾಮಿಗಳು ತಮ್ಮ ವಚನದಲ್ಲಿ ಸ್ಪಷ್ಟಗೊಳಿಸಿದ್ದಾರೆ.

ಇಷ್ಟಲಿಂಗದಲ್ಲಿ ತನುವಡಗಿ
ಪ್ರಾಣಲಿಂಗದಲ್ಲಿ ಮನವಡಗಿ
ಭಾವಲಿಂಗದಲ್ಲಿ ಜೀವವ ನಿಕ್ಷೇಪಿಸಿ
ಇಷ್ಟ ಪ್ರಾಣ ಭಾವಲಿಂಗ ಒಂದಾದ
ಮಹಾಘನ ಪರಬ್ರಹ್ಮದಲ್ಲಿ ತಾನಡಗಿ
ತಾನೆಂಬ ನೆನಹಡಗಿ ದ್ವಂದ್ವಕರ್ಮಂಗಳ ನೀಗಿ
ಪರಿಪೂರ್ಣ ಬ್ರಹ್ಮವೇ ತಾನಾದುದೇ
ಮಹಾಶೀಲವಯ್ಯ ಅಖಂಡೇಶ್ವರಾ

– ಹೀಗೆ ಶೀಲ ಪರಿಪೂರ್ಣ ಬ್ರಹ್ಮವೇ ತಾನಾಗುತ್ತದೆ.

ವೀರಶೈವ ಪರಿಭಾಷೆಯಲ್ಲಿ ಶೀಲದ ಜೊತೆಗೆ ಸಂಪಾದನೆ ಎನ್ನುವ ಶಬ್ದವೂ ಬರುತ್ತದೆ. ಶೂನ್ಯಸಂಪಾದನೆ ಎನ್ನುವಂತೆ ಶಿಲಸಂಪಾದನೆ ಎನ್ನವುದೂ ಉಂಟು. ಶೂನ್ಯಸಂಪಾದನೆಗಿರುವಷ್ಟೇ ಮಹತ್ವ, ಅರ್ಥವ್ಯಾಪ್ತಿ ಶೀಲಸಂಪಾದನೆಗೂ ಉಂಟು.

ವೀರಶೈವ ಪಾರಿಭಾಷಿಕದಲ್ಲಿ ಸಂಪಾದನೆ ಎಂದರೆ ಕೇವಲ ಗಳಿಕೆ ಎಂದರ್ಥವಲ್ಲ. ಶೂನ್ಯದಷ್ಟೇ ಅರ್ಥವ್ಯಾಪ್ತಿ ಅದಕ್ಕಿದೆ. ಶೂನ್ಯಸಂಪಾದನೆ. ಸಂಪಾದನೆ ಎಂದರೆ ಆ ಶೂನ್ಯವೇ ತಾನಾಗುವುದು ಎಂದರ್ಥ. ಸಂಪಾದನೆ ಎಂದರೆ ಅನುಭಾವ; ಅನುಭಾವ ಎಂದರೆ ಪರತತ್ವ ತಾನಾಗುವುದು.

ಶೂನ್ಯ ಸಂಪಾದನೆ ಎಂಬಲ್ಲಿ ಶೂನ್ಯವೇ ತಾನಾಗುವುದು ಎಂಬರ್ಥವಿರುವಂತೆ ಶೀಲ ಸಂಪಾದನೆ ಎಂಬಲ್ಲಿ ಶೀಲವೇ ತಾನಾಗುವುದು ಎಂಬರ್ಥವಿದೆ. ಹಿಂದೆ ನೋಡಿದಂತೆ ಶೀಲವೆಂದರೆ ಪರತತ್ವ, ಶೀಲವೆಂದರೆ ಶೂನ್ಯ. ಹೀಗೆ ಶೀಲಸಂಪಾದನೆಯೆಂದರೆ ಶೂನ್ಯ ಸಂಪಾದನೆ ಎಂದೇ ಅರ್ಥವಾಗುವದು.