ಬಸವಣ್ಣನವರನ್ನು ಕುರಿತು ಅನೇಕ ಬಗೆಯ ಅಪಾರ ಸಾಹಿತ್ಯ ಸೃಷ್ಟಿಯಾಗಿದೆ; ಸೃಷ್ಟಿಯಾಗುತ್ತಲೇ ಇದೆ. ಆದರೆ ಯಾವುದೂ ಅವರ ಸಮಗ್ರವಾದ ಸಂಪೂರ್ಣವಾದ ಚಿತ್ರವನ್ನು ಕೊಡುವುದಿಲ್ಲ. ಅವರ ಅಂತರಂಗ ಮತ್ತು ಬಹಿರಂಗದಿಂದೊಡಗೂಡಿದ ವ್ಯಕ್ತಿತ್ವದ ದರ್ಶನ ಎಲ್ಲಿಯೂ ನಮಗೆ ಆಗುವುದಿಲ್ಲ. ಹಿಂದಿನ ಪುರಾಣ, ಕಾವ್ಯಗಳು ಪವಾಡಗಳ ಸಂತೆಯಾಗಿ ಬಹುಮಟ್ಟಿಗೆ ಬಸವಣ್ಣನವರಿಗೆ ಅಪಚಾರವೆಸಗಿದುವು. ಎಲ್ಲಿಯೊ ಒಬ್ಬಿಬ್ಬರು ಅವರ ಸರಿಯಾದ ಒಂದೆರಡು ಮುಖದ ವ್ಯಕ್ತಿತ್ವದ ದರ್ಶನ ಮಾಡಿಸಿದ ಪುಣ್ಯಾತ್ಮರು ಇಲ್ಲದಿಲ್ಲ.[1] ಆದರೆ ಅದು ಸಾಲದು. ಅತಿಭಕ್ತಿಯಿಂದ, ಅತ್ಯಭಿಮಾನದಿಂದ ಬರೆದು ಅವರ ಚಿತ್ರದ ರೇಖೆಗಳನ್ನು ನಿರ್ಜೀವಗೊಳಿಸಿದವರೇ ಹೆಚ್ಚು.[2] ಇಪ್ಪತ್ತನೆಯ ಶತಮಾನದಲ್ಲಿ ತಿಳಿದವರು, ತಿಳಿಯದವರು, ತಿಳಿಯಲಾರದವರು, ಖ್ಯಾತಿಲಾಭದಾಸೆಯವರು – ಹೀಗೆ ಯಾರು ಯಾರೋ ಬಸವಣ್ಣನವರ ಚರಿತ್ರೆಗೆ ಕೈ ಹಾಕಿದರು; ಅವರ ಕೈಗಳ ಸ್ಪರ್ಶದಿಂದ ಬಸವಣ್ಣನವರ ಮೈಮನಕ್ಕೆ ಮಸಿ ಹತ್ತಿದ್ದೇ ಹೆಚ್ಚು. ಹಿಂದಿನ ಶತಮಾನಗಳಲ್ಲಿದ್ದಂತೆ ಇಲ್ಲಿಯೂ ಅತಿಭಕ್ತಿ ಅತ್ಯಭಿಮಾನಗಳುಂಟು; ಅಭಿಮಾನ ಹೀನತೆಯೂ ಉಂಟು; ಹೀಗೆಂದ ಮಾತ್ರಕ್ಕೆ ಬಸವಣ್ಣನವರನ್ನು ಕುರಿತು ಈ ಶತಮಾನದಲ್ಲಿ ಒಳ್ಳೆಯ ಸಾಹಿತ್ಯ ಸೃಷ್ಟಿಯಾಗಿಲ್ಲವೆಂದಲ್ಲ; ಆಗಿದೆ. ಅದು ತೀರ ಕಡಿಮೆ. ಅವರ ಸಮಗ್ರ ವ್ಯಕ್ತಿತ್ವ ಎಲ್ಲಿಯೂ ಸ್ಫುಟಗೊಂಡು ಮೂಡಿಬಂದಿಲ್ಲವೆಂದು ಹೇಳಲೇಬೆಕಾಗುತ್ತದೆ.

ಬಸವಣ್ಣನವರ ಚರಿತ್ರೆ ನೈಜವಾಗಿ ಸ್ಫುಟವಾಗಿ ಮೂಡಿಬರಲಾರದುದಕ್ಕೆ ಇನ್ನೊಂದು ಕಾರಣವೂ ಇದೆ: “ಅವರು ಮಹಾತ್ಮರಾಗಿಯೇ ಹುಟ್ಟಿ ಮಹಾತ್ಮರಾಗಿಯೇ ಬಾಳಿದರು” ಎಂಬ ನಂಬಿಕೆ. ಈ ಮಾತು ಬಹು ಅಪಾಯಕಾರಿಯಾದುದು. ಮಹಾತ್ಮರಾಗಿಯೇ ಹುಟ್ಟಿದವರಿಂದ ನಮ್ಮ ಇಳೆಯ ಬಾಳಿಗೆ ಬಹಳಷ್ಟು ಪ್ರಯೋಜನವಿಲ್ಲವೆಂದು ಧೈರ್ಯವಾಗಿ ಹೇಳಬಹುದು. ಅವರಿಗೆ ಈ ಬದುಕಿನ ಕಷ್ಟ, ಕಾರ್ಪಣ್ಯ, ಸುಖ, ದುಃಖ, ನೆಮ್ಮದಿ, ನೆಲೆ, ಕಲೆ, ಬೆಲೆ ಇವಾವುವೂ ತಿಳಿದಿರುವುದಿಲ್ಲವೆಂದೇ ಹೇಳಬೇಕಾಗುತ್ತದೆ. ಸಾಮಾನ್ಯ ಜನರಿಂದಂತೂ ಅವರು ಬಹಳ ದೂರ.

ಈ ನೆಲ, ನೀರು, ಗಾಳಿ, ಬೆಂಕಿ, ಬಯಲುಗಳ ವಾಸನೆ ಮೂಸದೆ ಅವುಗಳ ಗುಣಗಳ ಸ್ಪರ್ಶವಿಲ್ಲದೆ, ಸಹವಾಸವಿಲ್ಲದೆ, ಅವುಗಳೊಡನೆ ಹೋರಾಟವಿಲ್ಲದೆ ಅವುಗಳನ್ನು ಉದಾತ್ತೀಕರಿಸುವುದಾಗಲೀ ಅಥವಾ ಗೆಲ್ಲುವದಾಗಲೀ ಯಾರಿಂದಲೂ ಸಾಧ್ಯವಿಲ್ಲ. ಇವುಗಳನ್ನು ಗೆದ್ದವ, ಉದಾತ್ತೀಕರಿಸಿದ ಈ ಬಾಳಿಗೆ ಸತ್ವವನ್ನೊದಗಿಸಬಲ್ಲ. ತನ್ನ ಹೋರಾಟದಿಂದ, ಸಾಧನೆಯಿಂದ ಒಂದು ಮಾರ್ಗವನ್ನು ನಿರ್ಮಿಸಿ ಜನಜೀವನಕ್ಕೆ ಅರ್ಪಿಸಬಲ್ಲ. ಮಹಾತ್ಮನಾಗಿಯೇ ಹುಟ್ಟಿದವನಿಂದ ಇದು ಸಾಧ್ಯವಿಲ್ಲ. ಆತ ಜನರಿಂದ ದೂರ ನಿಂತಿರುತ್ತಾನೆ; ಈ ನೆಲದ ಬಾಳು ಮತ್ತು ಆತನ ಬಾಳಿನ ನಡುವೆ ಒಂದು ದೊಡ್ಡ ಕಂದರವಿರುತ್ತದೆ. ಆತನಿಗೆ ಜನ ಭಾಷೆ ಬರುವುದಿಲ್ಲ; ಆ ಭಾಷೆ ಆತನಿಗೆ ತಿಳಿಯುಉದೂ ಇಲ್ಲ. ಅಂತೆಯೇ ಆತ ಮತ್ತು ಜನರಲ್ಲಿ ಸೌಹಾರ್ದ ಪ್ರೇಮ ಕಂಡುಬರುವುದಿಲ್ಲ.

ಎಲ್ಲ ಮಾನವರಂತೆ ಬಸವಣ್ಣನರು ಹುಟ್ಟಿ ಬೆಳೆದರು. ಸತ್ಯ, ಸೌಂದರ್ಯ, ಶಿವ, ಶುಭದತ್ತ ತಮ್ಮ ಮನಸ್ಸನ್ನು ವಾಲಿಸಿಕೊಂಡು ಸಂಸಾರ ಮಾಡಿದರು. “ಕೀಡಿ ತುಂಬಿಯಾಗುವಂತೆ” ಶಿವವಾದರು. ಈ ದೃಷ್ಟಿಯಿಂದ ಅವರ ಚರಿತ್ರೆ ರೂಪಿತವಾಗಬೇಕು.

ತುಂಬಿದ ಅಂತಃಕರಣದಿಂದ, ಅರಳಿದ ಕಂಗಳಿಂದ ಇಳೆಯ ಬದುಕನ್ನು ನೋಡಿ, ವಿವೇಕ, ವಿವೇಚನೆ, ಸ್ವತಂತ್ರ ವಿಚಾರ ಶಕ್ತಿಗಳನ್ನು ಜನರ ಮನದಲ್ಲಿ ಬಿತ್ತಿ ಬೆಳೆದು ಒಂದು ಹೊಸ ಹುಟ್ಟನ್ನು ನಾಡಿನಲ್ಲಿ ತಂದ ಶಿವಶರಣರ ಚರಿತ್ರೆ ಕಾವ್ಯ ಪುರಾಣಗಳಲ್ಲಿರುವುದಕ್ಕಿಂತ ಅವರ ವಚನಗಳಲ್ಲಿ ಹೆಚ್ಚಿಗಿದೆ; ಇದುವೇ ಸತ್ಯಶುದ್ಧವಾದ ಚರಿತ್ರೆ. ಆದರೆ ಇದು ಹೆಚ್ಚಾಗಿ ಅವರ ಅಂತರಂಗದ ಜೀವನಕ್ಕೆ ಸಂಬಂಧಪಟ್ಟುದಾಗಿದೆ.

ಬಸವಣ್ಣನವರ ವಚನಗಳು ವಚನಕಾರರಲ್ಲಿಯೇ ವಿಶಿಷ್ಟವಾದವುಗಳು. ಆ ಆತ್ಮ ಸಂಶೋಧನೆ, ಆ ತುಡಿತ, ಆ ಮಾರ್ದವತೆ, ಮಾನವ ಜೀವನದ ಬಗೆಗಿನ ಆ ಅನುಕಂಪ ಬೇರೆಯವರ ವಚನಗಳಲ್ಲಿ ಅಷ್ಟು ಗಟ್ಟಿಗೊಂಡು ಬಂದಿಲ್ಲವೆಂದು ಹೇಳಬಹುದು. ಧಾರ್ಮಿಕ ಕಟ್ಟುಕಟ್ಟಳೆ, ಮತಪ್ರಕ್ರಿಯೆ ಮತ್ತು ತತ್ವ ಸಿದ್ಧಾಂತಗಳು ಅವರ ವಚನಗಳಲ್ಲಿ ತೀರ ಕಡಿಮೆ; ಒಂದು ನಾಲ್ಕು ಭಾಗದಷ್ಟು ಇಲ್ಲವೆನ್ನಬಹುದು. ಏನಿದ್ದರೂ ಏನು ಹೇಳಿದರೂ ಅವರ ಹೃದಯ ತುಡಿಯುವುದು ಮಾನವ ಕಲ್ಯಾಣಕ್ಕಾಗಿಯೇ.

ಸಾವಿರಕ್ಕೂ ಮಿಕ್ಕಿದ ಬಸವಣ್ಣನವರ ವಚನಗಳಲ್ಲಿ ಅವರ ಜೀವನದ ಬಹುಮುಖ್ಯ ಘಟ್ಟಗಳನ್ನು ನಾವು ಗುರುತಿಸಬಹುದು; ಕೆಲವು ಐತಿಹಾಸಿಕ ಸಂಗತಿಗಳನ್ನು ಅವುಗಳಿಂದ ತಿಳಿಯಬಹುದು; ಆಗಿನ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಜೀವನದಿಂದ ಆತು ಬಂದ ಕಷ್ಟ ಪರಂಪರೆಗಳು, ಅವರ ದೃಢತೆ, ನಿಲುವು, ಒಲವು, ಸೋಲು – ಗೆಲುವು, ದೌರ್ಬಲ್ಯಗಳನ್ನು ಸ್ಪಷ್ಟವಾಗಿ ಅವುಗಳಲ್ಲಿ ಕಾಣಬಹುದು. ಎಲ್ಲಕ್ಕೂ ಮಿಗಿಲಾಗಿ ಅವರ ಅಂತರಂಗದ ಸಂಪೂರ್ಣ ಚಿತ್ರವನ್ನು ಅಲ್ಲಿ ನೋಡಬಹುದು. ಈ ನಿಟ್ಟಿನಿಂದ ಎಲ್ಲ ವಚನಕಾರರ ವಚನಗಳ ಅಭ್ಯಾಸ ನಡೆಯಬೇಕಾಗಿದೆ.

ಸಾಧಾರಣವಾಗಿ ಅವರ ಎಲ್ಲ ವಚನಗಳಲ್ಲಿ ಅವರ ಮಾನಸಿಕ ಹೋರಾಟ ತುಂಬಿದೆ. ಅವರ ಅರ್ಧದಷ್ಟು ವಚನಗಳಲ್ಲಿ ‘ಮನ’ ಶಬ್ದ ಬಳಕೆಯಾಗಿದೆ. ಈ ಮನ ಅವರನ್ನು ನಾನಾ ರೀತಿಯಾಗಿ ಕಾಡಿದೆ; ಹೆಜ್ಜೆ ಹೆಜ್ಜೆಗೂ ತೊಂದರೆ ಕೊಟ್ಟಿದೆ. ಅವರನ್ನು ಮಣ್ಣು ಮಾಡಲು ಬಗೆದಿದೆ, ಮಸಿಯ ಮಾಡಲು ಬಗೆದಿದೆ. ಆದರೆ ಅದಕ್ಕೆ ಅವರು ಅಧೀನರಾಗದೆ ಸಡ್ಡು ಹೊಡೆದು ನಿಂತು ಎದುರಿಸಿದ್ದಾರೆ. “ಇನ್ನೆನ್ನಂಗದ ಮೇಲೆ ಬರಲಿ, ಹಿಡಿ ಖಂಡಂಗೊಯ್ಯಲಿ, ಇಕ್ಕುವ ಶೂಲ ಪ್ರಾಪ್ತಿಯಾಗಲಿ, ಹಾಕೊಂದೆಸೆ ಹನ್ನೊಂದೆಸೆಯಾಗಿ ಮಾಡುತ್ತಿರಲಿ; ಅಂಜೆನು” ಎಂದವರು ಭಕ್ತಿಯ ದೃಢತೆಯ ಕೂರಲಗನ್ನೆತ್ತಿ ಹೋರಾಡಿದ್ದಾರೆ. ಅದು ಬಹು ಉಗ್ರವಾದ, ಭಯಂಕರವಾದ ಹೋರಾಟ. ಅದನ್ನು ನೆನೆದರೆ ಮೈಮನ ನಡುಗುತ್ತವೆ. “ಮುನಿನವರುಹೋದ ದಾರಿ ಭಯ ಕಾಣಿರಣ್ಣಾ” ಎಂಬ ಬಸವಣ್ಣನವರ ಮಾತು ಸತ್ಯ; ಈ ಮಾತು ಅವರು ನಡೆದ ದಾರಿಗೂ ಅನ್ವಯಿಸುತ್ತದೆ.

ಮನುಷ್ಯನ ಆಲೋಚನೆಯ, ಚಿಂತೆಯ ಮೂಲವೇ ಮನಸ್ಸು. ಸಕಲ ಆಗು ಹೋಗುಗಳ ತವರು ಇದು. ಈ ಮನಸ್ಸು ಮನುಷ್ಯನ ಅಂತಸ್ತನ್ನು ನಿರ್ಣಯಿಸುತ್ತದೆ. ಇದರಿಂದ ಮನುಷ್ಯ ದೇವನೂ ಆಗಬಲ್ಲ, ದೆವ್ವನೂ ಆಗಬಲ್ಲ. ಮನಸ್ಸಿನ ಗೆಲುವೇ ಲೋಕದಲ್ಲಿ ಮುಖ್ಯವಾದುದು.

ಮನಸ್ಸು ಮೂಲತಃ ಕೆಟ್ಟುದೋ ಒಳ್ಳೆಯದೋ ನಿರ್ಣಯಿಸಲು ಬರುವುದಿಲ್ಲ. ಆದರೆ ಅದು ಸುಮ್ಮನಿರುವ ಗುಣವುಳ್ಳದು ಮಾತ್ರ ಅಲ್ಲ. ಅದು ಕ್ರಿಯಾಶೀಲ; ನಿರಂತರ ಚಟುವಟಿಕೆವುಳ್ಳುದು; ಇದನ್ನು ಪಳಗಿಸಿ ಉಪಯೋಗಿಸಿಕೊಳ್ಳುವುದರಲ್ಲಿ ಜಾಣತನವಿದೆ.

ಮನವೆಂಬುದು ಬೇರಿಲ್ಲ; ಮಹಾದೇವನ ಮಹಾ ಅರಿಹು ನೋಡಾ.
ಸಂಕಲ್ಪ ವಿಕಲ್ಪಂಗಳ ಧರಿಸಿದಲ್ಲಿ ಮನವೆನಿಸಿತ್ತು;
ಅದು ಅಳಿದಲ್ಲಿ ಮಹಾಜ್ಞಾನವೆನಿಸಿತ್ತು;
ಅಳಿದ ಭಾವ ತಲೆದೋರಿದಲ್ಲಿ ಕಪಿಲ ಸಿದ್ಧಮಲ್ಲಿಕಾರ್ಜುನನೆನಿಸಿತ್ತು.”[3]

ಶಿವಯೋಗಿ ಸಿದ್ಧರಾಮೇಶ್ವರರ ಈ ವಚನ ಮನದ ಮೂಲ ಸ್ವರೂಪವನ್ನು ಅರುಹುತ್ತದೆ. ಸಂಕಲ್ಪ – ವಿಕಲ್ಪಗಳಿದ್ದರೆ ಅದು ‘ಮನ’. “ಇಲ್ಲದುದ ಕಲ್ಪಿಸುವುದೇ ಸಂಕಲ್ಪ; ಇದ್ದುದ ಅರಿಯದುದೇ ವಿಕಲ್ಪ.”[4] ಈ ಸಂಕಲ್ಪ – ವಿಕಲ್ಪಗಳನ್ನು ಅಳಿದರೆ ಮನ ‘ಮಹಾಜ್ಞಾನ’ ವಾಗುವುದು. ಈ ಜ್ಞಾನ ತಾನೇ ಆದಾಗ ಮನ ಕಪಿಲಸಿದ್ಧ ಮಲ್ಲಿಕಾರ್ಜುನವಾಗುವುದು. ಇದರಿಂದ ಸಾಧಕನ ಮನಸ್ಸು ಮೂರು ಅಂತಸ್ತುಗಳಲ್ಲಿ ಓಡಾಡುತ್ತದೆ ಎಂದು ಹೇಳಬಹುದು ಅಥವಾ ಹೀಗೆ ವಿವರಿಸಬಹುದು: ಮನಸ್ಸಿಗೆ ಮೂರು ಪರೆಗಳುಂಟು. ಸಾಧಕ ಒಂದೊಂದು ಪರೆಯನ್ನು ಬಿಚ್ಚುತ್ತ ಹೋಗುವನು. ಕೊನೆಯ ಪರೆ ಬಿಚ್ಚಿದಾಗ – ಬಾಳೆಯ ಪರೆ ಬಿಚ್ಚಿದಾಗ ಕೊನೆಗೆ ಏನೂ ಉಳಿಯದಂತೆ – ಏನೂ ಉಳಿಯುವುದಿಲ್ಲ. ಏನೂ ಉಳಿಯುವುದಿಲ್ಲವೆಂದರೆ ನಕಾರವಲ್ಲ, ಬರಿಯ ಶೂನ್ಯ (Nil, Nothingness) ವಲ್ಲ; ಅದು ತಾನಾಗುವುದು ಎಂದರ್ಥ. ಅದು ಎಂದರೆ ಶೂನ್ಯ, ಬ್ರಹ್ಮ, ನಿರ್ವಯಲು.

ಬಸವಣ್ಣನವರ ವಚನಗಳಲ್ಲಿ ಈ ಮೂರು ಅಂತಸ್ತು ‘ಪರೆ’ಗಳ ಸ್ಪಷ್ಟ ಚಿತ್ರ ಕಂಡುಬರುತ್ತದೆ: ಒಂದೆನೆಯದು ಮನಿಸಗಳ್ಳೆ; ಎರಡನೆಯದು, ಘನಮನ; ಮೂರನೆಯದು ಮನೋಲಯ.

ಬಸವಣ್ಣನವರ ವಚನಗಳಲ್ಲಿ ಸುಳಿವ ‘ಮಾನಿಸಗಳ್ಳೆ’ಯ ರೂಪ ವಿಲಾಸ ಕ್ರಿಯೆಗಳನ್ನು ಇಲ್ಲಿ ನೋಡುವಾ.

ಬಸವಣ್ಣನವರು ತಮ್ಮ ತಪ್ಪು – ಒಪ್ಪುಗಳನ್ನೆಲ್ಲವನ್ನು ಬಿಚ್ಚಿಡುತ್ತಾರೆ; ಅವರಲ್ಲಿ ಮುಚ್ಚುಮರೆ ಎಂಬುದೇ ಇಲ್ಲ. ಅಂತರಂಗವನ್ನು ಅವರಂತೆ ತೆರೆದಿಟ್ಟವರು ಲೋಕದಲ್ಲಿ ವಿರಳರೆಂದೇ ಹೇಳಬೇಕು. ಅವರು ತಮ್ಮನ್ನು ತಾವೇ ವಿಡಂಬಿಸಿಕೊಳ್ಳುತ್ತಾರೆ. ಅವರು ತಮ್ಮನ್ನು ತಾವೇ ನಗೆಪಾಟಲು ಮಾಡಿಕೊಳ್ಳುತ್ತಾರೆ. ತಮ್ಮ ಸಾಧನೆಯಲ್ಲಿ ಕಂಡು ಬಂದ ಓರೆ – ಕೋರೆಗಳನ್ನು ಬಯಲಿಗೆ ಹಾಕುತ್ತಾರೆ. ಇದೆಲ್ಲ ಅಂತರಂಗದ ಶುದ್ಧಿಗಾಗಿ, ಶಿವದ ಒಲವಿಗಾಗಿ.

ಆಸೆಯಾಮಿಷ, ತಾಮಸ, ಹುಸಿ, ವಿಷಯ,
ಕುಟಿಲ, ಕುಹಕ, ಕ್ರೋಧ, ಕ್ಷುದ್ರ, ಮಿಥ್ಯೆ
ಇವನೆನ್ನ ನಾಲಗೆಯ ಮೇಲಿಂದತ್ತ ತೆಗೆದು ಕಳೆಯಯ್ಯಾ,
ಅದೇಕೆಂದೊಡೆ ನಿಮ್ಮತ್ತಲೆನ್ನ ಬರಲೀಯವು.
ಇದು ಕಾರಣ, ಇವೆಲ್ಲವ ಕಳೆದು
ಎನ್ನ ಪಂಚಯ್ವರ ಭಕ್ತರ ಮಾಡು,
ಕೂಡಲ ಸಂಗಮದೇವಾ.”[5]

ಇವೆಲ್ಲ ದುರ್ಗುಣಗಳು ಹೋಗಬೇಕು; ನುಡಿ ಶುದ್ಧವಾಗ ಬೇಕು; ನಡೆ ಶೂದ್ಧವಾಗಬೇಕು. ಪಂಚೇದ್ರಿಯಗಳು ಭಕ್ತರಾಗಬೇಕು. ಭಕ್ತ ಎಂದರೆ ವಿಭೂತಿ, ರುದ್ರಾಕ್ಷಿ ಧರಿಸಿದ ಲಾಂಛನಧಾರಿಯಲ್ಲ. “ಈಗ ಹುಟ್ಟಿದ್ದೇ ಸಾಕು, ಇನ್ನೊಮ್ಮೆ ಹುಟ್ಟಬಾರದು. ಹುಟ್ಟಿಲ್ಲವೆಂದಮೇಲೆ ಸಾವಿಲ್ಲ. ಹೀಗೆ ಹುಟ್ಟು – ಸಾವುಗಳನ್ನು ಅಳಿಸಬೇಕು.” ಈ ಭಾವನೆಯಿಂದ ನಡೆಯುವವನೇ ಭಕ್ತ. ಇಂಥ ಭಕ್ತರು ತಮ್ಮ ಪಂಚೇಂದ್ರಿಯಗಳಾಗಬೇಕೆಂದು ಬಸವಣ್ಣನವರು ಶಿವನಲ್ಲಿ ಮೊರೆಯಿಡುತ್ತಾರೆ; ಸಾಧನೆಯ ಕಲ್ಲು – ಮುಳ್ಳು ದಾರಿಯಲ್ಲಿ ಮುಂದುವರೆಯುತ್ತಾರೆ. ಆದರೆ ಅವರ ಸಾಧನೆಗೆ ನಾನಾ ಬಗೆಯ ಅಡ್ಡಿಗಳನ್ನೊಡ್ಡಿ, ಅವರ ಮನಸ್ಸು ಸಡ್ಡು ಹೊಡೆದು ಇದಿರು ನಿಲ್ಲುತ್ತದೆ. ಏನಿದ್ದರೂ ಪಂಚೇದ್ರಿಯಗಳನ್ನು ಆಡಿಸುವುದೇ ಮನಸ್ಸು;[6] ಅದು ಭವಿಯಾಗಿ[7] ಉಳಿದ ಇಂದ್ರಿಯಗಳು ಭಕ್ತರಾದರೆ ಪ್ರಯೋಜನವಿಲ್ಲ. ಈ ಭವಿ ಮನಸ್ಸು ಸಾಧಕರನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ಅವರೊಂದು ಬಗೆದರೆ ತಾನೊಂದು ಬಗೆಯುತ್ತದೆ; ಅವರತ್ತಲೆಳೆದರೆ ತಾನಿತ್ತಲೆಳೆಯುತ್ತದೆ. ಅದರ ಮಾತು, ಕೃತಿಗಳಲ್ಲಿ ತಾಳ – ಮೇಳವಿಲ್ಲ. ಇಂಥ ಮನಸ್ಸನ್ನು ಬಸವಣ್ಣನವರು “ಮಾನಿಸಗಳ್ಳೆ” ಎನ್ನುತ್ತಾರೆ.

ಅವಳ ವಚನ ಬೆಲ್ಲದಂತೆ: ಹೃದಯದಲ್ಲಿಪ್ಪುದು ನಂಜುಕಂಡಯ್ಯಾ!
ಕಂಗಳಲ್ಲೊಬ್ಬನ ಕರೆವಳು, ಮನದಲ್ಲೊಬ್ಬನ ನೆರೆವಳು!
ಕೂಡಲ ಸಂಗಮದೇವ, ಕೇಳಯ್ಯಾ:
ಮಾನಿಸಗಳ್ಳೆಯ ನಂಬಿದಿರಯ್ಯಾ.”

ವಿಕೃತವಾದ ಸಂಕಲ್ಪ – ವಿಕಲ್ಪವುಳ್ಳ ಮನಸ್ಸಿನ ಸ್ವರೂಪಗುಣಕ್ರಿಯೆಗಳನ್ನು ಇದಕ್ಕಿಂತ ಧ್ವನಿಪೂರ್ಣವಾಗಿ, ಅರ್ಥವತ್ತಾಗಿ ವರ್ಣಿಸುವುದು ಸಾಧ್ಯವಿಲ್ಲವೆನಿಸುತ್ತದೆ. ವೇಶ್ಯೆಗೆ, ಕಳ್ಳಿಗೆ ಮನಸ್ಸನ್ನು ಹೋಲಿಸಿದ್ದು ಬಹು ಔಚಿತ್ಯಪೂರ್ಣವಾಗಿದೆ. ಮಾತು ಬೆಲ್ಲ; ಕೇಳಿದ ಕೂಡಲೇ ನಂಬಬೇಕು. ಅಂಥ ಮಾತು ನಾಲಗೆಯಲ್ಲಿರುವಾಗ, “ಹೇಗೆ ಮಾಡಲಿ? ಏನು ಮಾಡಿ ಇವನ ಹಣ ದೋಚಲಿ; ಇವನ ಗೋಣು ಮುರಿವ ಬಗೆಯೇನು?” ಎಂಬ ವಿಚಾರ ಹೃದಯದಲ್ಲಿ. ಕಣ್ ಸನ್ನೆಯಿಂದ ಒಬ್ಬನನ್ನು ಕರೆಯುತ್ತಿರುವಾಗಲೇ ಇನ್ನೊಬ್ಬ ವಿಟನೊಡನೆ ಮನದಲ್ಲಿ ಸಂಭೋಗ. ಎಂತಹ ಕುಲಟೆ, ಕುಟಿಲೆ ಇವಳು? ಇವಳು ತನುವಿನಿಂದೊಂದೇ ಹಾದರಗಿತ್ತಿಯಲ್ಲ; ಮಾನಸಿಕವಾಗಿಯೂ ವೈಚಾರಿಕವಾಗಿಯೂ ಹಾದರಗಿತ್ತಿ! ಮಾಯೆ, ಅವಿದ್ಯೆ, ಕಳ್ಳೆ, ಜಾರೆ ಇವಳು; ಇವಳ ವಾಸ ನಮ್ಮ ಅಂತರಂಗದಲ್ಲಿಯೇ! ಅಲ್ಲಿಂದ ಇವಳನ್ನು ಉಚ್ಚಾಟಿಸಬೇಕೆನಿಸುತ್ತದೆ, ಆದರೆ ಅದು ಸಾಧ್ಯವಿಲ್ಲ. ಅವಳನ್ನುಳಿದು ನಮ್ಮ ಬದುಕು ಸಾಗದು. ಅವಳು ಬೇಕು; ಆದರೆ ಈ ರೂಪದಲ್ಲಲ್ಲ. ಅವಳ ರೂಪ, ಗುಣ ಎರಡೂ ಬೇರೆಯಾಗಬೇಕು. ಅದಕ್ಕಾಗಿ ಹೋರಾಟ.

“ಮಾತಿನಲ್ಲಿ ಶ್ರೋತೃ ಸುಖವ ನುಡಿಯಬಹುದಲ್ಲದೆ ಮಾಡುವ ಸತ್‌ಕ್ರಿಯೆಯಿಂದ ಭಕ್ತನೆನಿಸಬಾರದು.” ಈ ಭಕ್ತಿ ಹೋಗುತ್ತಲೂ, ಬರುತ್ತಲೂ ಕೊಯ್ವ ಗರಗಸ. ಇದಕ್ಕೊಮ್ಮೆ ಮನಕೊಟ್ಟು ಶುದ್ಧನಾಗಬೇಕು. ಆದರೆ ಆ ಸತ್‌ಕ್ರಿಯೆ ಒಮ್ಮಗೇ ಸಿದ್ಧಿಸುವುದಿಲ್ಲ. ಈ ಸತ್‌ಕ್ರಿಯೆ ಒಮ್ಮೆಗೇ ಸಿದ್ಧೀಸುವುದಿಲ್ಲ. ಈ ಸತ್‌ಕ್ರಿಯಾಚರಣೆಯ ಸಾಧನೆಯಲ್ಲಿ ಬಸವಣ್ಣನವರು ಅನುಭವಿಸಿದ ಅನುತಾಪ ತೋಡಿಕೊಳ್ಳುತ್ತಾರೆ.

“ಕೆಸರಲ್ಲಿ ಬಿದ್ದ ಪಶುವಿನಂತಾನು ದೆಸೆದೆಸೆಗೆ ಬಾಯಿ ಬಿಡುತ್ತಿದ್ದೇನಯ್ಯಾ…. ವಿಕಳನಾದೆನು ಪಂಚೇಂದ್ರಿಯ ಧಾತುವಿನಿಂದ; ಮತಿಗೆಟ್ಟೆನು… ಮನದ ವಿಕಾರದಿಂದ; ಧೃತಿಗೆಟ್ಟೆನು ಕಾಮವಿಕಾರದಿಂದ… ಆಸೆಯೆಂಬ ಪಾಶದಲ್ಲಿ ಭವಬಂಧನನಾಗಿರ್ದೆನಯ್ಯಾ, ಸಕೃತು ನಿಮ್ಮ ನೆನೆಯಲೆನಗೆ ತೆಱಹಿಲ್ಲವಯ್ಯಾ…. ಅನು ಭಕ್ತನಲ್ಲವಯ್ಯಾ, ಅನು ವೇಷಧಾರಿಯಯ್ಯಾ, ಕಾಟುಗ, ಕೆತ್ತುಗ, ಪೋಲುಗನೆಂಬುದು ಎನ್ನ ಹೆಸರು…. ತನುವಂಚಕ, ಮನವಂಚಕ, ಧನವಂಚಕ ನಾನು. ತೊಡಹದ ಬಣ್ಣದ ಕೆಲಸದಂತೆ ಕಡಿಹಕ್ಕೆ ಒರೆಗೆ ಬಾರದು ನೋಡಾ! ಎನ್ನ ಮನದಲೊಂದು, ಹೃದಯದಲ್ಲೊಂದು, ವಚನದಲೊಂದು ನೋಡಾ… ಹೊಲೆಯರ ಮದ್ದಳೆಯಂತೆ ನುಡಿವ ಡಂಭಕ ನಾನಯ್ಯಾ…. ಕೆಲಕ್ಕೆ ಶುದ್ಧನಾದೆನಲ್ಲದೆ ಎನ್ನ ಮನಕ್ಕೆ ಶುದ್ಧನಾಗಲಿಲ್ಲ…. ಎಂದೋ ಸಂಸಾರದ ದಂದುಗೆ ಹಿಂಗುವುದು, ಎಂದೋ ಮನದಲ್ಲಿ ಪರಿಣಾಮವಹುದೆನಗೆಂದೋ…”

ಬಂದ ಯೋನಿಯನರಿದು ಸಲಹೆನ್ನ, ತಂದೆ
ಬೆಂದ ಮನವೆನ್ನ ಗತಿಗೆಡಿಸಿ ಕಾಡಿತ್ತು;
ಬೆಂದ ಮನವೆನ್ನ ಮತಿಗೆಡಿಸಿ ಕಾಡುತ್ತು!
ಎನ್ನ ತಂದೆ, ಕೂಡಲ ಸಂಗಮದೇವಾ,
ಇವ ಮಾಣಿಸು ನಿಮ್ಮ ಧರ್ಮ!”

ಎಂದು ಅವರು ಶಿವನಲ್ಲಿ ಮೊರೆಯಿಡುತ್ತಾರೆ. ಈ ಬೆಂದ ಮನ ಶುದ್ಧವಾಗಬೇಕು. ಅದಕ್ಕಾಗಿ,

ಕರಗಿಸಿ ಎನ್ನ ಮನದ ಕಾಳಿಕೆಯ ಕಳೆಯಯ್ಯಾ,
ಒರೆ ಬಣ್ಣಕ್ಕೆ ತಂದೆನ್ನ ಪುಟವಿಕ್ಕಿ ನೋಡಯ್ಯಾ

ಎಂದು ಆರ್ತರಾಗಿ ಬೇಡುತ್ತಾರೆ.

ಸಾಧನೆ ಒಂದೇ ದಿನಕ್ಕೆ ಸಿದ್ಧಿಯನ್ನು ತುರುವುದಿಲ್ಲ. ಮೊರೆಯಿಟ್ಟ ಕೂಡಲೇ ಮನ ಶುದ್ಧವಾಗುವುದಿಲ್ಲ. ಇನ್ನೂ ಸಾಧನೆ ಬೇಕು. ಸಾಧನೆಯ ಬಲ ಹೆಚ್ಚಾದಂತೆಲ್ಲ ಮಾನಿಸಗಳ್ಳೆಯ ಕಾಡಿಕೆಯೂ ಹೆಚ್ಚಾಗುತ್ತದೆ. ಅವಳು ತನ್ನ ಸಾವಿರ ಮುಖದ ವಿಕಾರಗಳನ್ನು ಮುಂದೊಡ್ಡಿ ನಿಲ್ಲತ್ತಾಳೆ. ಆ ‘ವಿಚಾರ’ಗಳನ್ನು ಬಸವಣ್ಣನವರು ತಮ್ಮ ವಚನಗಳಲ್ಲಿ ತೋಡಿಕೊಂಡಿದ್ದಾರೆ.

ನಾನಾ ಬಗೆಯಾಗಿ ಶುಭದ ಚಿಂತನೆಗೆ ತೊಡಗಿದರೂ ಹೇಗೋ ಮನದ ವಿಕಾರ ಅದರಲ್ಲಿ ನುಸುಳಿಬರುತ್ತದೆ. “ಇಲಿ ಗಡುಹನೊಡ್ಡಿದಲ್ಲಿರ್ಪಂತೆ” ಸಂಸಾರವಾಗುತ್ತದೆ. “ಕಪ್ಪೆ ಸರ್ಪನ ನೆರಳಲ್ಲಿಪ್ಪ” ಸ್ಥಿತಿಯೊದಗುತ್ತದೆ. ನೂರು ನಿಟ್ಟಿನಿಂದ ಚಿಂತಿಸಿ, ದೇಹ ಶುಚಿಗೊಳಿಸಿ, ಅದಕ್ಕೆ ಗಟ್ಟಿತನ ಬರಿಸಿ, ಗುರುಲಿಂಗಜಂಗಮ ಮುಂತಾದ ಎಂಟು ವಿಧದ ಆವರಣಗಳನ್ನು ರಕ್ಷಣೆಗಾಗಿ ರಚಿಸಿ ಭಕ್ತಿಯ ಭರದಲ್ಲಿರುವಾಗ ಒಳಗಿನ ಮನವೇ ಮೃತ್ಯುವಾಗಿ ಕಾಡುತ್ತದೆ. ದೇಹಬಲ್ಲವನ್ನೇ ನಂಬಿದ್ದವರನ್ನು ಕುರಿತು ಹೇಳಿದ ವಚನವಿದಾದರೂ ಮನ ಒಳಗೊಳಗೇ ಸಾವಾಗಿ ಪರಿಣಮಿಸಬಲ್ಲುದೆಂಬುದು ಎಲ್ಲ ಸ್ಥಿತಿಯಲ್ಲೂ ಸತ್ಯ ಎಂಬುದನ್ನು ಅಲ್ಲಗಳೆಯುವಂತಾಗುವುದಿಲ್ಲ.

ಹಂಜರ ಬಲ್ಲಿತ್ತೆಂದು, ಅಂಜದೆ ಓದುವ ಗಿಳಿಯೇ
ಎಂದೆಂದೂ ಅಳಯನೆಂದು ಗುಡಿಗಟ್ಟಿದೆಯಲ್ಲಾ!
ನಿನ್ನ ಮನದಲ್ಲಿ
ಮಾಯಾಮಂಜರ ಕೊಲುವರೆ ನಿನ್ನ ಹಂಜರ ಕಾವುದೆ
ಕೂಡಲ ಸಂಗಮದೇವನಲ್ಲದೆ?”

ಬಹಿರಂಗದ ಅಡೆ – ತಡೆಗಳಿಗೆ, ಕಷ್ಟ – ಕಾರ್ಪಣ್ಯಗಳಿಗೆ ಹೆದರಬೇಕಾಗಿಲ್ಲ. ಆದರೆ ಒಳಗಿನ ಮನಸ್ಸೇ ಮೃತ್ಯುವಾದರೆ ಹೆಜ್ಜೆ ಹೆಜ್ಜೆಗೂ ಭಯ. ಅದು ಯಾವಾಗ ಕೊಲ್ಲುವುದೋ? ಇಲ್ಲಿ ಮನದ ಅಹಂಕಾರಕ್ಕೆ ಬೆಕ್ಕು ಎಂದು ಕರೆದುದರ ಔಚಿತ್ಯವನ್ನರಿಯಬೇಕು. ಅಹಂಕಾರವೇ ಸಾವು. ಕಿಂಚಿತ್ ಅಹಂಕಾರ ಎಲ್ಲ ಸುಗುಣಗಳನ್ನು ನಾಶಮಾಡಿಬಿಡುತ್ತದೆ. ಈ ಅಹಂಕಾರದ ಬೆಕ್ಕನ್ನು ಹೊರಗೆ ಹಾಕದಿದ್ದರೆ ಜೀವಿಗಿಳಿರಾಮನಿಗೆ ಯಾವ ಕಾಲಕ್ಕೂ ಮೋಕ್ಷವಿಲ್ಲ; ಯಾರಿಂದಲೂ ರಕ್ಷೆಯಿಲ್ಲ.

ತೋರಿಕೆಗೆ ಮನಸ್ಸು ಬಹು ಸುಂದರ, ಸಾತ್ವಿಕ; ಒಳಹೊಕ್ಕು ನೋಡಿದಾಗ ಅದರ ಹೊಲಸು ಕಣ್ಣಿಗೆ ಕಾಣುವದು. “ಎನ್ನ ಚಿತ್ತವು ಅತ್ತಿಯ ಹಣ್ಣು ನೋಡಯ್ಯಾ” ಎನ್ನುತ್ತಾರೆ ಬಸವಣ್ಣನವರು. ಅರ್ಥವತ್ತಾದ ಉಪಮಾನವಿದು. ಅತ್ತಿಯ ಹಣ್ಣು ನೋಡಲು ಚೆಂದ; ಮಾಗಿದ ಹಣ್ಣು ಬಾಯಲ್ಲಿ ನೀರೂರಿಸುತ್ತದೆ. ಆದರೆ ತಿನ್ನಲು ಅದನ್ನು ಸೀಳಿದಾಗ ಅದರ ತುಂಬ ಲಿಬಿಲಿಬಿ ಹುಳುಗಳು; ಹೇಸಿಕೆ, ವಾಕರಿಕೆ ಬರುವುದು. ನೋಡಲು ಸಾತ್ವಿಕವಾಗಿರುವ ಮನದೊಳಗೆ ನೂರಾರು ದುಷ್ಟಗುಣಗಳ ಹುಳುಗಳು.

ಹಾಳುಮನೆಯ ದೃಷ್ಟಾಂತವನ್ನೆತ್ತಿಕೊಂಡು ಹೇಳುವ ಈ ವಚನ ಮನದ ಸ್ಥಿತಿಗತಿಯ ಯಥಾವತ್ತಾದ ಚಿತ್ರ ಕೊಡುತ್ತದೆ:

ಮನೆಯೊಳಗೆ ಮನೆಯೊಡೆನಿದ್ದಾನೊ ಇಲ್ಲವೊ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ
ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ?
ತನುವಿನೊಳಗೆ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ,
ಮನೆಯೊಳಗೆ ಮನೆಯೊಡೆಯನಿಲ್ಲಾ,
ಕೂಡಲ ಸಂಗಮದೇವಾ.”

ಮನೆಯ ಬಾಗಿಲು ಮುಚ್ಚಿದೆ; ಹೊಸ್ತಿಲ ಮುಂದೆ ಹುಲ್ಲು ಬೆಳೆದಿದೆ; ಮನೆಯೊಳಗೆ ಕಸ, ಇಲ್ಲಣ, ಜೇಡಬಲೆ ತುಂಬಿವೆ. ಅಂಥ ಮನೆಯಲ್ಲಿ ಯಾರೂ ಇಲ್ಲವೆಂದೇ ಅರ್ಥ. ಮನೆಯೊಡೆಯನಿದ್ದರೆ ಅದುಹಾಗಿರುತ್ತಿತ್ತೇ? ಇದರಂತೆ ದೇಹದ ತುಂಬ ಹುಸಿ, ಮೋಸಗಳು ತುಂಬಿವೆ; ಮನದಲ್ಲಿ ವಿಷಯ, ವ್ಯಾಮೋಹಗಳು ಮನೆಮಾಡಿವೆ. ಅಂಥ ಮನದಲ್ಲಿ ದೇವರು ವಾಸ ಮಡಬಹುದೇ?

ಇಲ್ಲವೆಯ ಮೇಲೆ ಕಂಚೊಡೆದಂತೆ, ಬಡಮನವೆನ್ನ ಕಾಡಿತ್ತಯ್ಯಾ;
ಮತಿಯಿಲ್ಲದ ಮರುಳ ನಾನಯ್ಯಾ; ಭಕ್ತಿಯಿಲ್ಲದ ಬಡವ ನಾನು;
ನಿಮ್ಮ ನೆನಹವಿಲ್ಲದೆ ನಿರ್ಭಾಗ್ಯನಾದೆ,
ಎನಗೆ ನೀ ಕರುಣಿಸಾ, ಕೂಡಲ ಸಂಗಮದೇವಾ!”

ಮನೆಯಲ್ಲಿ ಕಡು ಬಡತನ; ಎಲ್ಲಕ್ಕೂ ಕೊರತೆ. ಒಂದೇ ಒಂದು ಕಂಚಿನ ತಟ್ಟೆಯಿದೆ. ಅದು ಒಡೆದುಹೋದರೆ ಬೇರೆ ತಟ್ಟೆ ತರಲು ಹಣವಿಲ್ಲ. ತಟ್ಟೆಯಿಲ್ಲದೆ ಉಣ್ಣುವದಾದರೂ ಹೇಗೆ? ಮೊದಲೇ ಭಕ್ತಿಯಿಲ್ಲದ ಬಡವ ನಾನು; ಮತಿಯಿಲ್ಲದ ಮರುಳ. ಹೇಗೋ ಇದ್ದಬಿದ್ದ ಕೊಂಚ ಒಲವಿನಿಂದ ನಿಮ್ಮನ್ನು ನೆನೆಯುತ್ತಿದ್ದೆ. ಈ ಬೆಂದ ಮನ ಕಾಡಿ ಅದನ್ನೂ ಇಲ್ಲದಂತೆ ಮಾಡಿಬಿಟ್ಟಿತು. ನಾನು ನಿಮ್ಮ ನೆನಹನ್ನು ಕಳೆದುಕೊಂಡು ನಿರ್ಭಾಗ್ಯನಾದೆ.

ಈ ಮನಸ್ಸನ್ನು ಶುಚಿಗೊಳಿಸಲು ಬಗೆದಷ್ಟೂ ಅದು ವಿಕಾರವಾಗುತ್ತದೆ. ಇದು ಸಗಣಿಯ ಬೆನಕ; ಸಂಪಗೆಯರಳಲ್ಲಿ ಪೂಜಿಸಿದರೆ ರಂಜನೆಯಾದೀತು; ಆದರೆ ಗಂಜಳ ಬಿಡದು. ಮಣ್ಣ ಪುತ್ಥಳಿಯಿದು; ನೀರಲ್ಲಿ ತೊಳೆದರೆ ಕೆಸರಿನ ಗುಣ ಮಾಯವಾದೀತೇ? ಇಂಥ ಮನಸ್ಸನ್ನು ಬಸವಣ್ಣನವರು, “ಕಂಬಳಿಯಲ್ಲಿ ಕಣಕ ನಾದಿದಂತೆ ಕಾಣಿರೇ ಎನ್ನ ಮನ” ಎನ್ನುತ್ತಾರೆ. ಕಂಬಳಿಯಲ್ಲಿ ಕಣಕ ನಾದಿದರೆ ಅದು ಮಿದುವಾಗಬಹುದು, ಜಿಗುಟಾಗಬಹುದು. ಆದರೆ ಉಣ್ಣೆಯ ಚಿಕ್ಕ ಚಿಕ್ಕ ಎಳೆಗಳು ಕಣಕದಲ್ಲಿ ಕೂಡಿ ಹೋಗುವವು. ಅವುಗಳನ್ನು ಬೇರ್ಪಡಿಸುವುದು ಹೇಗೆ? ವಿಷಯದಲ್ಲಿ ನನ್ನ ಮನಸ್ಸನ್ನು ನಾದಲಾಗಿದೆ. ಅಂತೆಯೇ ಅದರಲ್ಲಿ ಮಲಮಂತ್ರಯಗಳ, ದುರ್ಗುಣಗಳ, ತಾಪತ್ರಯಗಳ, ಅಹಂಕಾರ – ಮಮಕಾರಗಳ ಉಣ್ಣೆಯ ಎಳೆಗಳು ಬೆರೆತು ಹೋಗಿವೆ. ಅವುಗಳನ್ನು ತೆಗೆದು ಅದನ್ನು ಶುದ್ಧಮಾಡುವುದು ಹೇಗೆ? ಈ ಬೆಂದ ಮನದಿಂದ ಭಕ್ತಿ ಅಳವಡದಾಗಿದೆ ಎಂದು ಬಸವಣ್ಣನವರು ಮತ್ತೆ ಮತ್ತೆ ತಮ್ಮ ದುಗುಡವನ್ನು ತೋಡಿಕೊಳ್ಳುತ್ತಾರೆ. “ಉದಯಾಸ್ತಮಾನವೆನ್ನ ಬೆಂದ ಬಸುರಿಂಗೆ ಕುದಿಯಲಲ್ಲದೆ ನಿಮ್ಮ ನೆನೆಯಲು ತೆರೆಹಿಲ್ಲಯ್ಯಾ, ಬೆರಣಿನಾಯಲಲ್ಲದೆ ಅಟ್ಟುಣ್ಣ ತೆರಹಿಲ್ಲವೆನಗೆ… ಲೋಕೋಪಚಾರಕ್ಕೆ ಮಜ್ಜನಕ್ಕೆರೆವೆ, ಮನದ ತಾಮಸ ಬಿಡದು. ಹಾವ ತೋರಿ ಹವಿಯ ಬೇಡುವಂತೆ ಎನ್ನ ಭಕ್ತಿಯಾಗಿದೆ. ಏನು ಮಾಡಲೀಮನವನು? ಎಂತು ಮಾಡಲೀಮನವನು? ತನ್ನ ವಿಚಾರಿಸಲ್ಲೊಲ್ಲದು, ಇದರಿ ವಿಚಾರಿಸ ಹೋಹುದೀಮನವು. ತನ್ನಿಚ್ಛೆಯ ನುಡಿದರೆ ಮೆಚ್ಚುವುದು, ಇದಿರಿಚ್ಛೆಯ ನುಡಿದರೆ ಮೆಚ್ಚದು. ಏನೇನೋ ಇದರ ಆಸೆ – ಆಕಾಂಕ್ಷೆಗಳು. ಅಲ್ಲದ್ದನ್ನೇ ಬಯಸುವುದು. ತನಗೆ ಸಿಕ್ಕದ ಲೇಸನ್ನು ಕಂಡು ಬಯಸುವುದು. ತಾಳೆ ಮರಕ್ಕೆ ಕೈಯೊಡ್ಡಿ ಅಳುವುದು. ವಿಚಿತ್ರ ಆಸೆ ಇದರದು….” ಎಂದು ಅವರು ಮನದ ವಿಚಿತ್ರ ಆಸೆ ಎಂಥದೆಂಬುದನ್ನು ಈ ವಚನದಲ್ಲಿ ತಿಳಿಸುತ್ತಾರೆ.

ಮುಂಗೈಯ್ಯ ಕಂಕಣಕೆ ಕನ್ನಡಿಯ ತೋಱವಂತೆ
ಎನ್ನ ಮನವು ನಿಧಾನವನೊಲ್ಲದೆ ಜಲಗ ಮಚ್ಚಿತ್ತು ನೋಡಾ!
ನಾಯಿಗೆ ನಾರಿವಾಣವಕ್ಕುವುದೇ ಕೂಡಲ ಸಂಗಮದೇವಾ?”

ಜಲಗ ಎಂದರೆ ಮರಳಿನಲ್ಲಿ ಬಹು ಪ್ರಯಾಸಪಟ್ಟು, ಶೋಧಿಸಿ ತೆಗೆದ ಬಂಗಾರದ ಕಣ. ಅಕ್ಕಸಾಲಿಗರ ಮನೆಯಲ್ಲಿ ಕೂಡಿಸಿಟ್ಟ ಕಸಕಡ್ಡಿಯನ್ನು ನೀರಲ್ಲಿ ಜಾಲಿಸಿದರೆ ಸಿಕ್ಕುವ ಬಂಗಾರದ ಕಣಕ್ಕೂ ಜಲಗವೆಂದು ಹೆಸರು. ಮುಂದೆ ನಿಕ್ಷೇಪವಿದೆ; ಬಂಗಾರದ ಗಟ್ಟಿಗಳೇ ಇವೆ. ಜಲಗಕ್ಕಿಂತ ಈ ನಿಕ್ಷೇಪ ಹೆಚ್ಚಿದನೆಂದು ಬೇರೆ ಹೇಳಬೇಕೆ? ಮುಂಗೈಯ್ಯ ಕಂಕಣ ನೋಡಲು ಕನ್ನಡಿ ಬೇಕೇ? ಆದರೆ ಈ ದುಷ್ಟ ಮನ ನಿಕ್ಷೇಪವನೊಲ್ಲದಾಗಿದೆ; ಅಕ್ಕಸಾಲಿಗರ ಮನೆಯ ಕಸವನ್ನು ನೀರಲ್ಲಿ ಜಾಲಿಸಬಯಸುತ್ತದೆ. ಈ ಕೆಟ್ಟ ಮನಸ್ಸಿಗೆ ಶಿವನ ನೆನಹೆಂಬ ನಿಕ್ಷೇಪ ಬೇಡವಾಗಿದೆ; ವಿಷಯ, ವ್ಯಾಮೋಹ, ಸ್ವಾರ್ಥಗಳ ಜಲಗವನ್ನೇ ಇದು ಮೆಚ್ಚಿದೆ. ಎಷ್ಟಾದರೂ ನಾಯಿ ಇದು; ಅದಕ್ಕೆ ಎಲುವೇ ರುಚಿ ಹೊರತಾಗಿ ತೆಂಗಿನಂಥ ಉತ್ತಮ ಪದಾರ್ಥಗಳು ರಚಿಸುವವೇ?

ಈ ಮನಕ್ಕೆ ನೂರು ಡೊಂಕಿದ್ದರೂ ಅದನ್ನು ವಿಚಾರಿಸದೆ ಲೋಕದ ಡೊಂಕನ್ನು ತಿದ್ದಲು ಹೋಗುತ್ತದೆ; ಪರರ ದುಃಖಕ್ಕೆ ಅಳುವುದರಲ್ಲಿಯೇ ಇದರ ಕಾಲ ಕಳೆಯುತ್ತದೆ. ಪೂಜೆಯಾಯಿತು, ಧ್ಯಾನವಾಯಿತು, ನಿಚ್ಚ ನಿಚ್ಚ ಶಿವರಾತ್ರಿಯಾಯಿತು. ಆದರೆ ಅದರ ಫಲ….?

“………………………………….
ಅನು ಎನ್ನಂತೆ, ಮನ ಮನದಂತೆ,
ಕೂಡಲ ಸಂಗಮದೇವ ತಾನು ತನ್ನಂತೆ.”

ಕಲ್ಲು ಕರಗುವಂತೆ, ದಿಕ್ಕುಗಳು ಮಾರ್ದನಿಗುಡುವಂತೆ ಆಕ್ರಂದನಗೈದರೂ ದೈನ್ಯದಿಂದ ಕೂಡಲಸಂಗನಲ್ಲಿ ಬೇಡಿದರೂ ‘ಮಾಯಾಪಾಶ’ ಹರಿಯಲಿಲ್ಲ; ಮನದ ಗಂಟು ಬಿಡಲಿಲ್ಲ. ಆ ಗಂಟನ್ನು ಬಿಚ್ಚಲು ಹೋದಂತೆಲ್ಲ, ಮನದ ವಿಕಾರದ ಇನ್ನೂ ನೂರಾರ ರೂಪಗಳು, ನೂರಾರು ಅವಗುಣಗಳು ಅದರಿಂದ ಹೊರಬಂದವು. ನಾಯಿ, ಕೋಡಗ, ಬಾವುಲಿ, ಓತಿ, ಸರ್ಪ ಅನೇಕ ಪ್ರಾಣಿಗಳು ಮನದ ಗಂಟಿನಿಂದ ಹೊರಜಿಗಿದವು. ಇವೆಲ್ಲ ಆ ಮಾನಿಸಗಳ್ಳೆಯ ವಿಕಾರ ರೂಪಗಳೇ. ಬಸವಣ್ಣನವರ ವಚನಗಳಲ್ಲಿ ಬರುವ ಈ ಪ್ರಾಣಿ ರೂಪಕಗಳು ಸಾಹಿತ್ಯದಲ್ಲಿ ಅಪೂರ್ವವಾದುವುಗಳು.

ಮರ್ಕಟ ಬಹು ಚಂಚಲ; ನಿಂತಲ್ಲಿ ನಿಲ್ಲದು, ಕುಳಿತಲ್ಲಿ ಕುಳ್ಳಿರದು; ವಿವೇಕವಿಲ್ಲದ ಲಂಘನ, ತಮ್ಮ ಮನಸ್ಸೂ ಈ ಮರ್ಕಟನಂತಿದೆ ಎನ್ನುತ್ತಾರೆ ಬಸವಣ್ಣನವರು.

ಕೊಂಬಿನ ಮೇಲಣ ಮರ್ಕಟನಂತೆ ಲಂಘಿಸುವುದೆನ್ನು ಮನವು;
ನಿಂದಲ್ಲಿ ನಿಲ್ಲಲೀಯದೆನ್ನ ಮನವು;
ಹೊಂದಿದಲ್ಲಿ ಹೊಂದಲೀಯದೆನ್ನ ಮನವು
ಕೂಡಲಸಂಗಮದೇವಾ, ನಿಮ್ಮ ಚರಣ ಕಮಲದಲ್ಲಿ
ಭ್ರಮರನಾಗಿರಿಸು, ನಿಮ್ಮ ಧರ್ಮ!”

ಅವರ ಮನಸ್ಸು ನಾಯಿಯಂತೆ. ಅದನ್ನು ಎಲ್ಲಿಟ್ಟರೂ ತನ್ನ ಸ್ವಭಾವವನ್ನು ಬಿಡುವದಿಲ್ಲವಂತೆ ಎಂದು ಬಸವಣ್ಣನವರು ಈ ವಚನದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ :

ಅಂದಣವನೇರಿದ ಸೊಣಗನಂತೆ
ಕಂಡೊಡೆ ಬಿಡದು ಮುನ್ನಿನ ಸ್ವಭಾವವನು;
ಸುಡು ! ಸುಡು!! ಮನವಿದು ವಿಷಯಕ್ಕೆ ಹರಿವುದು;
ಮೃಡ, ನಿಮ್ಮನನುದಿನ ನೆನೆಯಲೀಯದು.
ಎನ್ನೊಡೆಯ ಕೂಡಲ ಸಂಗಮದೇವಾ,
ನಿಮ್ಮ ಚರಣವ ನೆನೆವಂತೆ ಕರುಣಿಸು,
ಸೆರಗೊಡ್ಡಿ ಬೇಡುವೆ, ನಿಮ್ಮ ಧರ್ಮ!”

ನಾಯಿಯೊಂದನ್ನು ಪಲ್ಲಕ್ಕಿಯಲ್ಲಿ ಕೂಡಿಸಿ ಮೆರವಣಿಗೆ ತೆಗೆಯುತ್ತಾರೆ. ದಾರಿಯಲ್ಲಿ ಎಲ್ಲಿಯೋ ಒಂದು ಎಲುಬಿನ ಚೂರು ಬಿದ್ದುದು ಅದಕ್ಕೆ ಕಂಡರೆ, ಅದು ತನ್ನ ಸ್ಥಾನಮಾನವನ್ನರಿಯದೆ ಚಂಗನೆ ಆ ಎಲುವಿನ ಚೂರಿನತ್ತ ನೆಗೆಯುತ್ತದೆ. ಅದರಂತೆ ಈ ಮನಸ್ಸು. ಇದನ್ನು ಎಂಥ ಧ್ಯಾನದಲ್ಲಿ ನಿಲ್ಲಿಸಿದರೂ, ಎಂಥ ಉದಾತ್ತ ಭಾವನೆಗಳ ಪಲ್ಲಕ್ಕಿಯಲ್ಲಿ ಕೂಡಿಸಿದರೂ ಅದು ತನ್ನ ಮುನ್ನಿನ ಮದ ಮತ್ಸರ ಮಾಯೆ ಮೋಹ ಅಹಂಕಾರ ಮುಂತಾದ ದುರ್ಗುಣಗಳನ್ನು ಬಿಡುವುದಿಲ್ಲ. ಇದು ಒಂದು ರೀತಿಯಾದರೆ, ಮನದ ನಾಯಿತನ ಇನ್ನೊಂದು ರೀತಿಯನ್ನೂ ಬಸವಣ್ಣನವರು ವರ್ಣಿಸುತ್ತಾರೆ:

ತುಪ್ಪದ ಸವಿಗೆ ಅಲಗ ನೆಕ್ಕುವ ಸೊಣಗನಂತೆನ್ನ ಬಾಳುವೆ!
ಸಂಸಾರ ಸಂಗವ ಬಿಡದು ನೋಡೆನ್ನ ಮನವು.
ನಾಯಿತನವ ಮಾಣಿಸು,
ಕೂಡಲ ಸಂಗಮದೇವಾ, ನಿಮ್ಮ ಧರ್ಮ!”

ತುಕ್ಕುಹಿಡಿಯದಿರಲೆಂದು ಕತ್ತಿಗೆ ತುಪ್ಪ ಸವರಿರುತ್ತಾರೆ. ಆ ತುಪ್ಪದಾಸೆಗೆ ನಾಯಿ ಕತ್ತಿಯನ್ನು ನೆಕ್ಕುತ್ತದೆ. ಕತ್ತಿಯ ಧಾರೆ ತಗುಲಿ ನಾಲಗೆಯಿಂದ ರಕ್ತ ಒಸರುತ್ತದೆ. ಆ ರಕ್ತ ಕತ್ತಿಯಿಂದಲೇ ಬಂದುದೆಂದು ಸೊಣಗ ನೆಕ್ಕುತ್ತ ಹೋಗುತ್ತದೆ. ಅದು ನೆಕ್ಕಿದಂತೆಲ್ಲ ಅದರ ನಾಲಗೆಯಿಂದ ರಕ್ತ ಒಸರುತ್ತ ಹೋಗುತ್ತದೆ. ಅದು ತನ್ನದೇ ರಕ್ತವೆಂಬುದರ ಅರಿವು ಅದಕ್ಕಿಲ್ಲ. ಇದೇ ರೀತಿ, ಮೋಹ, ಮಾಯೆಯ ಸವಿಗಾಗಿ ಸಂಸಾರವೆಂಬ ಅಲಗಿಗೆ ನೆಚ್ಚಿಕೊಂಡ ಮನ ಘಾಸಿಗೊಳಗಾಗುತ್ತದೆ; ಆ ಘಾಸಿಯೇ ರುಚಿಕಟ್ಟೆನಿಸಿ, ಆ ರುಚಿ ರಕ್ತಗತ, ಪ್ರಾಣಗತವಗಿ ಮಲತ್ರಯಗಳಲ್ಲಿ, ತಾಪತ್ರಯಗಳಲ್ಲಿ ಬಿದ್ದು ಒದ್ದಾಡುತ್ತಿದೆ.

ಓತಿ, ಗೋಸುಂಬೆ, ಬಾವುಲಿ – ಇವುಗಳಂತೆ ತಮ್ಮ ಮನಸ್ಸು ಎನ್ನುತ್ತಾರೆ ಬಸವಣ್ಣನವರು :

ಓತಿ ಬೇಲಿವರಿದಂತೆ ಎನ್ನ ಮನವಯ್ಯಾ,
ಹೊತ್ತಿಂಗೊಂದು ಪರಿಯಪ್ಪ ಗೋಸುಂಬೆಯಂತೆನ್ನ ಮನವು;
ಬಾವುಲ ಬಾಳುವೆಯಂತೆನ್ನ ಮನವು!
ನಡುವಿರುಳೊಳೆದ್ದ ಕುರುಡಂಗೆ ಅಗಸೆಯಲ್ಲಿ ಬೆಳಗಾದಂತೆ
ನಾನಿಲ್ಲದ ಭಕ್ತಿಯ ಬಯಸಿದರುಂಟೆ
ಕೂಡಲ ಸಂಗಮದೇವಾ?”

ಓತಿಕಾಟ ದಾರಿಯ ಬದುವಿಗೆ ಹಚ್ಚಿದ ಬೇಲಿಯಲ್ಲಿ ಓಡಾಡುತ್ತಿರುತ್ತದೆ. ಅದು ಯಾರನ್ನೋ ಕರೆಯುವಂತೆ ತಲೆಹಾಕುತ್ತಿರುತ್ತದೆ. ನನ್ನನ್ನೇ ಕರೆಯಿತೆಂದು ಯಾರಾದರೂ ಸಮೀಪಕ್ಕೆ ಹೋದರೆ ಅದು ಸರಸರ ಹರಿದಾಡಿ ಬೇಲಿಯಲ್ಲಿ ಮಯವಾಗುವದು, ಅದರಂತೆ ಈ ಮನಸ್ಸು. ಇದರ ಪರಿದಾಟ ವಿಷಯದ ಬೇಲಿಯ ಮೇಲೆ. ಇದರ ತಲೆ ಹಾಕುವಿಕೆಯೆಂದರೆ, ಆಗಾಗ ಬಯಸಲಾರದೆ ‘ಜ್ಞಾನ’ವನ್ನು ಬಯಸುವದು. ಆ ಜ್ಞಾನ ಹತ್ತಿರಕ್ಕೆ ಬಂದರೆ ನಾನಿದನ್ನು ಕರೆದೇ ಇಲ್ಲ, ಬಯಸೇ ಇಲ್ಲ ಎನ್ನುವಂತೆ ವಿಷಯ, ವ್ಯಾಮೋಹದಲ್ಲಿ ಮುಳುಗಿ ಕಾಣದಂತಾಗುವುದು.

ಗೋಸುಂಬೆ ಓತಿಯ ಜಾತಿಗೆ ಸೇರಿದ ಪ್ರಾಣಿ. ದಿನದಲ್ಲಿ ಅದು ಅನೇಕ ಸಲ ತನ್ನ ಮೈಬಣ್ಣ ಬದಲಾಯಿಸತ್ತದೆ. ಅದರಂತೆ ಈ ಮನಸ್ಸಿಗೆ ನೂರು ಬಣ್ಣಗಳಿವೆ, ನೂರು ವರ್ತನೆಗಳಿವೆ. ಒಮ್ಮೆ ಜ್ಞಾನಿಯಂತೆ, ಒಮ್ಮೆ ಅಜ್ಞಾನಿಯಂತೆ; ಒಮ್ಮೆ ಒಳ್ಳೆಯವನಂತೆ, ಒಮ್ಮೆ ಕೆಟ್ಟವನಂತೆ; ಒಮ್ಮೆ ವಿಷಯಿಯಂತೆ, ಒಮ್ಮೆ ನಿರ್ವಿಷಯಿಯಂತೆ ವರ್ತಿಸುವುದು ಈ ಮನಸ್ಸು. ಸ್ಥಿರವಾದುದೊಂದೂ ಇದಕ್ಕಿಲ್ಲ. ಹೊತ್ತು ಬಂದಂತೆ ಕೊಡೆಹಿಡಿವ ಸ್ವಭಾವವೂ ಇದಕ್ಕುಂಟು.

ಬಾವುಲಿ ತಿಂದುದನ್ನು ತಿಂದ ಬಾಯಿಯಿಂದಲೇ ಹೊರಹಾಕುವದು. ತಿಂದದಕ್ಕೂ, ಅದರಿಂದಾದ ಮಲಕ್ಕೂ ಒಂದೇ ದ್ವಾರ. ಈ ಮನಸ್ಸೂ ಬಾವುಲಿಯಂತೆ. ವಿಚಾರ – ಅವಿಚಾರ, ಜ್ಞಾನ – ಅಜ್ಞಾನ ಇವೆರಡಕ್ಕೂ ಇದರಲ್ಲಿ ಒಂದೇ ದ್ವಾರ. ಒಳ್ಳೆಯದನ್ನಾಡಿದ ಬಾಯಿಯಿಂದಲೇ ಕೆಟ್ಟುದನ್ನಾಡುವದು. ತತ್ವಜ್ಞಾನ, ಲಿಂಗಾಂಗ ಸಾಮರಸ್ಯ ಮುಂತಾದ ಘನವಾದ ವಿಚಾರಗಳನ್ನು ವ್ಯಕ್ತಪಡಿಸಿದ ಮುಖದಿಂದಲೇ – ಪರನಿಂದ, ಚಾಡಿ, ದ್ವೇಷ, ಮೋಸದ ಮಾತುಗಳನ್ನಾಡುವುದು. ಒಳ್ಳೆಯದನ್ನು ಬಗೆವುದೂ ಇದೇ, ಕೆಟ್ಟದನ್ನು ಬಗೆವುದೂ ಇದೇ; ಈ ಮನಸ್ಸು.

ಹೀಗೆ ಓತಿಕಾಟ, ಗೋಸುಂಬೆ, ಬಾವುಲವಾದ ಮನಸ್ಸು ಭಕ್ತಿ ಮಾಡಿದರೆ ದೇವನೊಲಿವನೇ? ಮುಕ್ತಿ ದೊರಕುವದೇ? ಅದು ನಡುರಾತ್ರಿಯಲ್ಲೆದ್ದ ಕುರುಡನಿಗೆ ಅಗಸೆಯಲಿ ಬೆಳಗಾದಂತೆ ಆಗುತ್ತದೆ. ಹುಟ್ಟುಗುರುಡ; ಎಲ್ಲಿಗೋ ಪ್ರಯಾಣ. ನಡುರಾತ್ರಿಯಲ್ಲಿ ಎದ್ದ, ನಡೆದ; ಸೂರ್ಯ ಮೂಡುವದರೊಳಗೆ ಅವನು ಊರುಬಿಟ್ಟು ಎಷ್ಟೋ ದೂರ ಹೋಗಿರಬೇಕು. ಆದರೆ ಪರಿಸ್ಥಿತಿ ಹಾಗಿಲ್ಲ. ಆ ಕುರುಡ ಅಲ್ಲಿ ಇಲ್ಲಿ, ಆ ಓಣಿ ಈ ಓಣಿಗಳಲ್ಲಿ ತಿರುಗಿ ಕಣ್ಣು ಕಾಣದೆ ಅಲ್ಲಲ್ಲಿ ಸುತ್ತಾಡಿ ಅಗಸೆಗೆ ಬರುವಷ್ಟರಲ್ಲಿ ಬೆಳಗಾಯಿತು. ಇನ್ನೂ ಊರೇ ದಾಟಿಲ್ಲ; ಗುರಿ ಮುಟ್ಟುವ ಬಗೆ ಹೇಗೆ? ಲಿಂಗಾಂಗ ಸಾಮರಸ್ಯದ ಗುರಿಯುಳ್ಳ ಈ ಅಂಧಮನಸ್ಸು ಧ್ಯಾನಕ್ಕೆ ತೊಡಗುತ್ತದೆ. ದೃಷ್ಟಿ ನಿಲ್ಲಲಿಲ್ಲ, ಉಸಿರು ನಿಲ್ಲಲಿಲ್ಲ. ಇನ್ನು ಮನ ನಿಂತು ಅದಕ್ಕೆ ಏಕಾಗ್ರತೆ ಬರುವದು ಯಾವಾಗ? ಯಾಕೆಂದರೆ ಮನ ಏಕಾಗ್ರವನೊಲ್ಲದೆ ಅಲ್ಲಿ ಇಲ್ಲಿ ತಿರುಗಾಡಿತು; ಪಂಚೇಂದ್ರಿಯಂಗಳಲ್ಲಿ ಬೆಳಗಾಯಿತು. ಎಂದರೆ ಆ ಮನಸ್ಸು ಪಂಚೇಂದ್ರಿಯಂಗಳಲ್ಲಿ ಹೊಕ್ಕು, ಧ್ಯಾನ ಗುರಿ ಮರೆತು ಆ ಇಂದ್ರಿಯಗಳ ವ್ಯಾಪಾರಕ್ಕೆ ಅನುವುಮಾಡಿಕೊಟ್ಟಿತು. ಈ ಕುರುಡು ಮನಕ್ಕೆ ಕರಣಗಳಲ್ಲಿ ಬೆಳಗಾಗುವದು ಸಹಜ.

ಸರ್ಪದ ರೂಪಕವುಳ್ಳ ವಚನ ತತ್ವಸೌಂದರ್ಯ ಮತ್ತು ಕಾವ್ಯಸೌಂದರ್ಯ ಎರಡೂ ಉಳ್ಳ ವಚನ:

ಮನವೇ ಸರ್ಪ, ತನುವೇ ಹೇಳಿಗೆ:
ಹವಿನೊಡತಣ ಹುದುವಾಳಿಗೆ!
ಇನ್ನಾವಾಗ ಕೊಂದಹುದೆಂದರಿಯೆ;
ಇನ್ನಾವಾಗ ತಿಂದಹುದೆಂದರಿಯೆ!
ನಿಚ್ಚಕ್ಕೆ ನಿಮ್ಮ ಪೂಜಿಸಬಲ್ಲೊಡೆ
ಅದೇ ಗಾರುಡ, ಕೂಡಲ ಸಂಗಮದೇವಾ.”

ಮನಸ್ಸೇ ಹಾವು; ದೇಹವೇ ಅದರ ವಾಸದ ಬುಟ್ಟಿ. ವಿಷ, ವಿಷಯ, ವ್ಯಾಮೋಹ, ಸಿಟ್ಟು ದ್ವೇಷ, ಕಾಮ ಏನೆಲ್ಲ ದುರ್ಗುಣಗಳ ಸಂಕೇತ ಸರ್ಪ. ಇಂಥ ಸರ್ಪವೇ ಮನ! ನಮ್ಮ ಮೈಯೇ ಅದರ ವಾಸದ ಮನೆ. ಬಾಳು ಪೂರೈಸುವುದು ಹೇಗೆ? ಸದಾ ಹಾವಿನ ಸಂಸರ್ಗ ಈ ಬಾಳಿಗೆ! ಅದು ಶಿವನನ್ನು, ಶುಭವನ್ನು ಗಳಿಸುವದು ಹೇಗೆ? ಶುಭದ ಕಲ್ಪನೆಗೂ ಇಲ್ಲಿ ಆಸ್ಪದವಿಲ್ಲ. ಅದು ಯಾವಾಗ ಕೊಲ್ಲುವುದೂ? ಯಾವಾಗ ತಿನ್ನುವದೂ? ಇದರ ಭಯವೇ ಸದೈವ. ಎಲ್ಲ ಕಾಲಕ್ಕೂ ವಿಷಯ, ಮೋಹ, ಮದ, ಮತ್ಸರ, ಲೋಭಗಳ ನಂಜನ್ನು ಕಾರುತ್ತಲೇ ಇರುವದು ಈ ಮನದ ಸರ್ಪ. ಹೀಗಿದ್ದರೂ ಇದಕ್ಕೆ ಗಾರುಡ ಉಂಟು; ಅದು ಶಿವನ ನಿಚ್ಚ ನಿಚ್ಚ ಪೂಜೆ.

ಪೂಜೆ, ಧ್ಯಾನ, ಕಾಯಕ, ಶರಣರ ಸಂಗ ನಾನಾ ಬಗೆಯಿಂದ ಮನದ ಹಾದರಗಿತ್ತಿಯ ನಾಯಿತನ ಮಾಣಿಸಲು ಬಸವಣ್ಣನವರು ಹೋರಾಡುತ್ತಾರೆ. ಸುತ್ತೂ ನಾಲ್ಕು ನಿಟ್ಟಿನಿಂದ ಸತ್ಯವನ್ನು, ಚೆಲುವನ್ನು, ಶಿವನನ್ನು ತುಂಬಿಕೊಳ್ಳುತ್ತಾರೆ. ಆದರೆ ಅದು ಒಳಗೆ ಹೇಗೆ ನಿಲ್ಲಬೇಕು? ಮನ ಧಾರೆವಟ್ಟಲಾಗಿದೆ; ತುಂಬಿದುದೆಲ್ಲವು ಸೋರಿಹೋಗುತ್ತದೆ :

ಸತ್ಯವುಳ್ಳ ಭಂಡವ ತುಂಬುವುದಯ್ಯಾ!
ಸಯಿಧಾನ ಸಯಿಧಾನವಯ್ಯಾ!
ಮನ ಧಾರೆವಟ್ಟಲು!
ಕೂಡಲ ಸಂಗನ ಶರಣರು ಹಿಡಿಯದ ಭಂಡವನು
ಆರಾದೊಡಾಗಲಿ ಹೋಗಲೀಯರಯ್ಯಾ.”

ಮನಸ್ಸಿಗೆ ಧಾರೆವಟ್ಟಲೆಂದು ಕರೆದುದು ತುಂಬ ಧ್ವನಿಪೂರ್ಣವಾಗಿದೆ. ಎಷ್ಟು ತುಂಬಿದರೂ ಸೋರುವುದೇ ಧಾರೆವಟ್ಟಲಿನ ಗುಣ; ಇಲ್ಲಿ ತುಂಬುವದು ಸೋರಲಿಕ್ಕಾಗಿಯೇ. ಮಾತು, ಗೀತ, ಪೂಜೆ, ಧ್ಯಾನ, ಕಾರ್ಯದ ಪರಿಣಾಮ, ತತ್ತ್ವ, ಒಳಿತು – ಏನು ತುಂಬಿದರೂ ಮನ ಅವುಗಳನ್ನು ಹೊರಹಾಕುತ್ತದೆ.

ಇಂಥ ನೂರಾರು ರೂಪಗಳ, ನೂರಾರು ವಿಕಾರಗಳ ಮಾನಿಸಗಳ್ಳೆ ತರಕಟ ಕಾಡಿ ನೋಡುತ್ತಾಳೆ, ಬೇಡಿ ನೋಡುತ್ತಾಳೆ, ಬೇಯಿಸಿ ನೋಡುತ್ತಾಳೆ, ಸಾಯಿಸಿ ನೋಡುತ್ತಾಳೆ. ಎಲ್ಲವನ್ನೂ ತಾಳಿ ಧೃತಿಗೆಡದೆ ಮುಂದುವರಿದಾಗ ಮೆಲ್ಲಮೆಲ್ಲನೆ ಸಂಕಲ್ಪ – ವಿಕಲ್ಪಗಳ ಪರೆ ಉಚ್ಚತೊಡಗುತ್ತದೆ; ಜ್ಞಾನ ಅಳವಡತೊಡಗುತ್ತದೆ :

ಕಂಡುದಕ್ಕೆಳಸೆನೆನ್ನ ಮನದಲ್ಲಿ, ನೋಡಿ ಸೋಲೆನೆನ್ನ ಕಣ್ಗಳಲ್ಲಿ,
ಆಡಿ ಹುಸಿಯೆನೆನ್ನ ಜಿಹ್ವೆಯಲ್ಲಿ.
ಕೂಡಲ ಸಂಗಮದೇವಾ, ನಿಮ್ಮ ಶರಣನ
ಪರಿ ಇಂತುಟಯ್ಯಾ.”

ಎಂಬ ಭಾವ ಗಟ್ಟಿಗೊಂಡು “ತೋಱುವ ಮನವೆ ನೀವೆಂದರಿದೆ” ಎಂಬ ನಂಬುಗೆ ನೆಲೆಗೊಳ್ಳುತ್ತದೆ. ಮನದ ಕೊನೆಯ ಸೂತಕ ಹಿಂಗುತ್ತದೆ; ಕಳ್ಳತನ ಕಳಚುತ್ತದೆ. ಕುಟಿಲ, ಕ್ಷುದ್ರ, ಕುಹಕ, ವಂಚನೆ ಮುಂತಾದವು ದೂರವಾಗುತ್ತದೆ. ಮಾನಿಸಗಳ್ಳೆ ಮಾನಿಸ ಶರಣೆಯಾಗುತ್ತಾಳೆ. ಆಗ:

ನೋಡಿ ನೋಡಿ ಲಿಂಗಧ್ಯಾನವೆನ್ನ ಮನವು :
ರಾಗರಂಜನೆಯ ಉತ್ಪತ್ತಿ ಸ್ಥಿತಿ ಲಯ ನಿನಗೆಂದಾದುವು
ರಾಗರಂಜನೆಯ ಪೂಜೆ ಎನ್ನ ಮನ,
ಕೂಡಲ ಸಂಗಮದೇವಾ, ಆಹಾ, ಎನ್ನ ಮನ!”

ನೋಡಿ ನೋಡಿ
ಮನದಲ್ಲಿ ರತಿಹುಟ್ಟಿ ನಿಮಿರ್ದುವೆನ್ನ ಕಳೆಗಳು.”

– ಇದು ‘ಘನಮನ’ವಾಗಲು ದಾರಿಯಾಗುತ್ತದೆ.

[1] ಹರಿಹರ ಮತ್ತು ಚಾಮರಸ.

[2] ಈ ಮಾತು ಎಲ್ಲ ಮಹಾತ್ಮರ ಚರಿತ್ರೆಗೂ ಅನ್ವಯಿಸುತ್ತದೆ.

[3] ಡಾ|| ಆರ್.ಸಿ.ಹಿರೇಮಠ ಸಂಪಾದಿತ : ಶ್ರೀ ಸಿದ್ಧರಾಮೇಶ್ವರ ವಚನಗಳು, ವಚನ ಸಂಖ್ಯೆ – ೧೨೫೧, ಪುಟ ೧೨೮

[4] ಡಾ|| ಆರ್.ಸಿ.ಹಿರೇಮಠ ಸಂಪಾದಿತ : ಶ್ರೀ ಸಿದ್ಧರಾಮೇಶ್ವರ ವಚನಗಳು, ವಚನ ಸಂಖ್ಯೆ – ೪೨೯, ಪುಟ ೫೮೭

[5] ಈ ಲೇಖನದಲ್ಲಿ ಬರುವ ಬಸವಣ್ಣನವರ ಎಲ್ಲ ವಚನಗಳನ್ನು ಎಸ್.ಎಸ್. ಬಸವನಾಳರಿಂದ ಸಂಪಾದಿತವಾದ “ಬಸವಣ್ಣನವರ ಷಟ್ಸ್ಥಲದ ವಚನಗಳುಎಂಬ ಗ್ರಂಥದಿಂದ ಆರಿಸಿಕೊಂಡಿದೆ.

[6] “ಲೋಕದ ಚೇಷ್ಟೆಗೆ ರವಿ ಬೀಜವಾದಂತೆ, ಕರಣಂಗಳ ಚೇಷ್ಟೆಗೆ ಮನವೇ ಬೀಜ” – ಎಂಬ ಅಕ್ಕಮಹಾದೇವಿಯ ವಚನವನ್ನು ಇಲ್ಲಿ ನೆನೆಯಬಹುದು.

[7] ಲಿಂಗವಂತ ಅಲ್ಲದವನು ಭವಿ ಎಂಬ ತಪ್ಪು ಕಲ್ಪನೆ ಜನರಲ್ಲಿ ಹೇಗೋ ಬಂದು ಬಿಟ್ಟಿದೆ. ಹುಟ್ಟು – ಸಾವುಗಳನ್ನು ಗೆದೆಯಲು ಮನಸ್ಸಿಲ್ಲದವ, ಈ ಭವರಾಟಳದಲ್ಲಿ ನಿರಂತರ ತಿರುಗುವವ ಮತ್ತು ಸದಾಚಾರ, ಸದ್‌ಭಾವನೆ ಇಲ್ಲದವ ಭವಿ. ವಚನಗಳಲ್ಲಿ ‘ಭವಿ’ ಎಂಬುದಕ್ಕೆ ಇದೇ ಅರ್ಥವಿದೆ.