ಕನ್ನಡ ಸಾರಸ್ವತ ಲೋಕವು ವಿಶ್ವಸಾಹಿತ್ಯಕ್ಕೆ ಕೊಟ್ಟ ಅಪೂರ್ವವಾದ ಕಾಣಿಕೆ ವಚನ ಸಾಹಿತ್ಯ. ಕನ್ನಡದ ಹಿರಿಮೆ ಗರಿಕೆ ಈ ವಚನಗಳಲ್ಲಿ ಅಡಗಿದೆ. ಕನ್ನಡ ಸಂಸ್ಕೃತಿಯ ಜೀವಜೀವಾಳವೇ ಈ ವಚನಗಳು; ಕನ್ನಡ ಜನತೆಯ ಆತ್ಮದ ಧ್ವನಿಯೇ ಇವುಗಳಲ್ಲಿ ಮಿಡಿಯುತ್ತಿದೆ.

ವಚನಗಳು ವಚನಕಾರರ ಪರಿಪಕ್ವವಾದ ಅಂತರಂಗದಿಂದ ಹೊಮಮಿದ ಅನುಭಾವಾಮೃತದ ಅಣಿಮುತ್ತುಗಳು; ಬೆಳಕಿನ ಬಿತ್ತುಗಳು. ಇವುಗಳಲ್ಲಿ ರಸವಿದೆ, ಧ್ವನಿಯಿದೆ. ಕಾವ್ಯ ಸೌಂದರ್ಯವಿದೆ. ರಸ, ಧ್ವನಿ, ಸೌಂದರ್ಯಗಳೊಂದಿಗೆ ವಚನಗಳಲ್ಲಿ ತತ್ವವು ಬೆರೆತಿರುವುದರಿಂದ ಅವುಗಳಿಗೊಂದು ವಿನೂತನವಾದ, ವಿಶಿಷ್ಟವಾದ ‘ಕಳೆ’ ಬಂದಿದೆ. ಈ ಕಳೆ ಬೇರೆ ಕಾವ್ಯಗಳಲ್ಲಿ ಕಂಡುಬರುವುದಿಲ್ಲ.

ಮಾನವ ಕಲ್ಯಾಣವೇ ವಚನಕಾರರ ಗುರಿಯಾಗಿತ್ತು. ಸಕಲ ಜೀವರಾಶಿಗೆ ಲೇಸಗೈಯಲೆಂದೇ ಅವರು ಮಹಾಮಣಿಹವನ್ನು ಹೊತ್ತು ಬಂದಿದ್ದರು. ಆದುದರಿಂದ ಅವರು ಸಕಲರೂ ತಿಳಿಯುವಂತೆ ಸರ್ವಸಾಮಾನ್ಯನೂ ಅದರ ‘ಸವಿ’ಯನ್ನರಿತು ಆಚರಣೆಯಲ್ಲಿ ತಂದುಕೊಳ್ಳುವಂತೆ ಸುಲಭವಾಗಿ, ತಿಳಿಯಾಗಿ, ಸಹೃದಯತೆಯಿಂದ, ಅಂತಃಕರಣದಿಂದ ತಮ್ಮ ಅನುಭಾವವನ್ನು ಹೇಳಿದರು; ಮನಂಬುಗುವಂತೆ ವಿವರಿಸಿದರು. ಇದರಿಂದ ಕನ್ನಡ ಭಾಷೆಯು ಸಂಪ್ರದಾಯದ ತನ್ನ ಉಕ್ಕಿನ ಪರೆನ್ನು ಕಳಚಿಕೊಂಡು ಜನರ ಬಗೆವಗಲು ಸರಳವಾಯಿತು; ಶುದ್ಧವಾಯಿತು. ಅನುಬಾವವನ್ನು ವಿವರಿಸಿ ಹೇಳುವಾಗ ಹೊಸ ಹೊಸ ಉಪಮೆ, ರೂಪಕ, ದೃಷ್ಟಾಂತ ಮುಂತಾದ ಅಲಂಕಾರಗಳು ವಚನಕಾರರ ಪ್ರತಿಭೆಯಲ್ಲಿ ಮಿಂದು ಹೊರಬಂದವು. ಅವರ ಆತ್ಮದ ಸೌಂದರ್ಯ ಭಾಷೆಗಿಳಿಯಿತು. ಲಿಂಗಾಂಗ ಸಾಮರಸ್ಯದ ತಿಳಿವೆಳಗು ರಸವಾಗಿ ವಚನ ಕೊಡಗಳಲ್ಲಿ ಸಂಚಯವಾಯಿತು. ಕನ್ನಡವಾಣಿ ಅನುಭಾವದ ಅಮೃತವಾಣಿಯಾಯಿತು. “ದೇವವಾಣಿಗೆ ಜನವಾಣಿಯಾಗುವುದು ಅಸಾಧ್ಯವಾದಾಗ ಜನವಾಣಿಯನ್ನೇ ದೇವವಾಣಿಯ ಮಟ್ಟಕ್ಕೇರಿಸಿದ ಪವಾಡ ವೀರಶೈವ ವಚನಕಾರರದು.”[1]

ವಚನಸಾಹಿತ್ಯದಲ್ಲಿ ಬಸವಣ್ಣನವರ ವಚನಗಳು ವಿಶಿಷ್ಟ ಮಾದರಿಯವು.[2] “ವಚನ ಸಾಹಿತ್ಯದಲ್ಲಿ ಒಟ್ಟಾರೆ ಕಂಡುಬರುವ ಮುಖ್ಯ ಅಥವಾ ವಿಶೇಷ ಲಕ್ಷಣಗಳನ್ನೆಲ್ಲ ಒಂದೆಡೆ ಕಾಣಬೇಕೆಂದರೆ ಅವೆಲ್ಲ ಸಮಗ್ರವಾಗಿ ಗೋಚರವಾಗುವುದು ಬಸವಣ್ಣನವರ ವಚನಗಳಲ್ಲಿಯೇ”[3] “ಇಡಿಯ ವಚನ ಸಾಹಿತ್ಯಕ್ಕೆ ಎಲ್ಲಂದಿಂದಲೂ ಏಕಮೇವ ಪ್ರತಿನಿಧಿಯೆಂದರೆ ಬಸವಣ್ಣನವರ ವಚನಗಳು. ಅವುಗಳಲ್ಲಿ ಮಿಡಿಯುವ ಅವರ ವಾಣಿ ಅಮೃತವಾಣಿ: ಅಧರಕ್ಕೂ ಸಿಹಿ ಉದರಕ್ಕೂ ಸಿಹಿ; ರಸಪರಿಪಾಕವೆಂದು ಅಮೃತ, ಶಾಶ್ವತ ಸಾಹಿತ್ಯವೆಂದು ಅಮೃತ” ಎಂದು ಲಿಂ. ಪ್ರೊ. ಶಿ.ಶಿ. ಬಸವನಾಳರು ಹೇಳಿದ್ದಾರೆ.

ಬಸವಣ್ಣನವರ ವಚನಗಳಲ್ಲಿ ಬರುವ ರೂಪಕ, ಉಪಮೆ, ದೃಷ್ಟಾಂತ ಮುಂತಾದ ಅಲಂಕಾರಗಳು ನೇರವಾಗಿ ಜೀವನದಿಂದ ಎತ್ತಿಕೊಂಡವು. ಅವೆಲ್ಲ ಸತ್ವದಿಂದ, ಜೀವಕಳೆಯಿಂದ ತುಂಬಿವೆ. ಉಪಮೆಗಳಲ್ಲಿಯಂತೂ ಬಸವಣ್ಣನವರನ್ನು ಮೀರಿಸುವವರಿಲ್ಲ, “ಉಪಮಾ ಕಾಳಿದಾಸಸ್ಯ ಎಂದು ಸಂಸ್ಕೃತ ಸಾಹಿತ್ಯ ವಿಮರ್ಶಕರು ಹೇಳುವದುಂಟಷ್ಟೇ. ಈ ಉಪಮಾಲಂಕಾರದ ಪ್ರಯೋಗಕ್ಕೆ ಕನ್ನಡ ಸಾಹಿತ್ಯದಲ್ಲಿ ಬಸವಣ್ಣನವರಿಗೆ ಪ್ರಥಮಸ್ಥಾನ ದೊರೆಯಬೇಕಾಗಿದೆ. ಅವರು ಕೊಡುವ ಉಪಮಾನಗಳು ಬಹಳ ಸಹಜವಾದುವು; ಬಹಳ ಅರ್ಥಗರ್ಭಿತವಾದುವು; ಬಹಳ ಪರಿಣಾಮಕಾರಿಯಾದುವು”[4] ಎಂದು ದಿ.ಎಂ.ಆರ್. ಶ್ರೀನಿವಾಸಮೂರ್ತಿಗಳು ಹೇಳಿದ್ದಾರೆ.

ಉಪಮೆಗಳಂತೆ ರೂಪಕ ನಿರ್ಮಾಣದಲ್ಲಿಯೂ ಬಸವಣ್ಣನವರು ಹೆಸರಾಗಿದ್ದಾರೆ. ರೂಪಕ ಸಾಮ್ರಾಟರೆಂದು ಅವರನ್ನು ಕರೆಯಬಹುದು. ಪ್ರಾಣಿಗಳನ್ನು, ಸಸ್ಯಗಳನ್ನು ರೂಪಕ ನಿರ್ಮಾಣಕ್ಕಾಗಿ ಅವರು ಬಳಸಿಕೊಂಡ ರೀತಿ ಹೊಚ್ಚ ಹೊಸದು.

ಬಸವಣ್ಣನವರ ವಚನಗಳಲ್ಲಿ ಬರುವ ಬಾಳೆಯ ದೃಷ್ಟಾಂತ, ಉಪಮೆ, ರೂಪಕಗಳು ಅತ್ಯಂತ ಅರ್ಥಗರ್ಭಿತವೂ ತತ್ವಪೂರ್ಣವೂ ಆಗಿವೆ. ಆ ಅಲಂಕಾರಗಳ ಅರ್ಥ ಸೌಂದರ್ಯವನ್ನು ತಿಳಿದುಕೊಳ್ಳುವುದಕ್ಕಿಂತ ಮುಂಚೆ ‘ಬಾಳೆ’ಯ ಬಗ್ಗೆ ಅರಿತುಕೊಳ್ಳುವುದು ಒಳ್ಳೆಯದು. ಇದರಿಂದ ನಾವು ತಿಳಿದು ಕೊಳ್ಳಬೇಕಾದ ಅಲಂಕಾರಗಳ ಅರ್ಥವಿವರಣೆಗೆ ಅನುಕೂಲವಾಗುವುದು.

‘ಕದಳಿ’ ಎಂಬ ಶಬ್ದ ವಚನಗಳಲ್ಲಿ ಬಹಳ ಕಡೆಗೆ ಬರುತ್ತದೆ. ವಚನ ಶಾಸ್ತ್ರದಲ್ಲಿ ಈ ಶಬ್ದಕ್ಕೆ ಬಹಳ ಮಹತ್ವವಿದೆ. ಕದಳಿ ಎಂಬ ಕದಲೀ ಎಂಬ ಸಂಸ್ಕೃತ ಶಬ್ದದ ತದ್ಭವವಾಗಿದೆ. ಶಬ್ದಕೋಶದ ಪ್ರಕಾರ ಕದಳಿಗೆ ಬಾಳೆಯ ಗಿಡ, ಆನೆ, ಧ್ವಜ, ಶಿವ, ಕತ್ತಲೆ, ನೆಟ್ಟಡವಿ ಮೂಲಿಗ ಎಂದು ನಾನಾರ್ಥಗಳಾಗುತ್ತವೆ. “ಶಿವಶರಣರು ಜೀವನದ ಪರಮಾದರ್ಶವನ್ನು. ಆ ಬಾಳಬಟ್ಟೆಯ ಪರಮಾಗಮವನ್ನು ಕದಳಿ ಎಂಬ ಒಂದು ಪದದಿಂದ ಸೂಚಿಸುವರು”[5] ಎಂದು ನವಕಲ್ಯಾಣ ಮಠದ ಶ್ರೀ ಕುಮಾರಸ್ವಾಮಿಗಳವರು ಅಭಿಪ್ರಾಯ ಪಟ್ಟಿದ್ದಾರೆ.

ಕದಳಿ ಎಂಬುದನ್ನು ಶಿವಶರಣರು ಅನೇಕ ಅರ್ಥಗಳಲ್ಲಿ ಬಳಸಿದ್ದಾರೆ. ಸಂದರ್ಭಕ್ಕೆ ತಕ್ಕಂತೆ ಇದರ ಅರ್ಥ ಬೇರೆಯಾಗುತ್ತದೆ. ಅಕ್ಕಮಹಾದೇವಿಯವರ ಒಂದು ವಚನದಲ್ಲಿ ಕದಳಿಯ ನಾನಾರ್ಥಗಳು ದೊರಕುತ್ತವೆ.

ಕದಳಿ ಎಂಬುದು ತನು, ಕದಳಿ ಎಂಬುದು ಮನ,
ಕದಳಿಯೆಂಬುದು ವಿಷಯಂಗಳು;
ಕದಳಿಯೆಂಬುದು ಭವ ಘೋರಾರಣ್ಯ!
ಕದಳಿಯೆಂಬುದು ಗೆದ್ದು ತವೆ ಬದುಕಿ ಬಂದು
ಕದಳಿಯ ಬನದಲ್ಲಿ ಭವಹರನ ಕಂಡೆನು.
ಭವಗೆಟ್ಟು ಬಂದೆಯಾ ಮಗಳೆ’ – ಎಂದು
ಕರುಣದಿಂದ ತೆಗೆದು ಬಿಗಿದಪ್ಪಿದೊಡೆ
ಚೆನ್ನಮಲ್ಲಿಕಾರ್ಜುನನ ಹೃದಯಕಮಲದಲ್ಲಿ ಅಡಗಿದೆನು.”[6]

ಮೇಲಿನ ವಚನದಲ್ಲಿ ಕದಳಿ ಆರು ವಿಧವಾದ ಅರ್ಥದಲ್ಲಿ ಪ್ರಯೋಗವಾಗಿದೆ. ಕದಳಿಯ ಬನ ಎಂದು ಅಕ್ಕನವರು ಈ ವಚನದಲ್ಲಿ ಹೇಳಿರುವದು – ಅಂತರಂಗದ ಕದಳಿಯ ಬನಕ್ಕೂ ಬಹಿರಂಗದ ಕದಳಿಯ ಬನಕ್ಕೂ ಕೂಡಿಯೇ ಅರ್ಥವಾಗುತ್ತದೆ. ಬಹಿರಂಗ ಕದಳಿಯ ಬನು ಇರುವುದು ಶ್ರೀಶೈಲದಲ್ಲಿ. ಕದಳಿಯ ಬನವೆಂದರೆ ಬಾಳೆಯ ಬನ. ಮಹಾದೇವಿ ಅಕ್ಕಗಳು ಮತ್ತು ಅಲ್ಲಮ ಪ್ರಭು ದೇವರು ಬಯಲಾದುದು ಸ್ರೀಶೈಲದ ಈ ಕದಳಿಯ ಬನದಲ್ಲಿಯೇ.

ಇತ್ತೀಚೆಗೆ ಹಲವಾರು ಭಕ್ತರು, ಮಹಾಸ್ವಾಮಿಗಳು ಶ್ರೀ ಶೈಲದ ಕದಳಿ ಬನಕ್ಕೆ ಹೋಗಿಬಂದಿದ್ದಾರೆ; ಅದನ್ನು ಕುರಿತು ಬರೆದಿದ್ದಾರೆ. ಅಲ್ಲಿ ಸುಂದರವಾದ ಬಾಳೆಯ ಬನಗಳಿವೆಯೆಂದು ಕದಳಿಯನ್ನು ಕಂಡುಬಂದವರು ವರ್ಣಿಸಿದ್ದಾರೆ. ಕದಳಿ ಯಾತ್ರೆಯನ್ನು ಮಾಡಿಬಂದ ಶ್ರೀ ಹೆಚ್. ತಿಪ್ಪೇರುದ್ರಸ್ವಾಮಿಯವರು ಅಲ್ಲಿರುವ ಬಾಳೆಗಳನ್ನು ಕೆಳಗಿನಂತೆ ಬಣ್ಣಿಸಿದ್ದಾರೆ.

ಗುಹೆಯಿಂದ ಜಿನಗುತಿಹ ರಸದೊರತೆ |
ಕರುಣ ರಸದಂದದಲಿ ಕೆಳಗಿಳಿದು ನೀರುಣಿಸನೀಯುತಿದೆ |
ಬಾಳನರಳಿಸುವಂತೆ ಬೆಳೆದಿರುವ ಬಾಳೆಗಳಿಗೆ |
ಧರ್ಮದಾಶ್ರಯದೊಳಗೆ ಬೆಳೆಯುತಿಹ ಪುಣ್ಯಪುರುಷನ ತೆರದಿ |
ನಳನಳಿಸಿ ಬೆಳೆಯುತಿವೆ ಬಾಳೆಗಳು |
ಬಾಳೆಗಾಗಿಯೆ ಇಲ್ಲಿ ಪರ್ವತವು ಆನಂದದಭಿಷೇಕಗೈಯುತಿದೆ ||[7]

‘ಬಾಳೆ’ ಎಂಬುವ ಅರ್ಥದಲ್ಲಿಯೇ ಕದಳಿ ಹೆಚ್ಚಾಗಿ ಪ್ರಯೋಗವಾಗಿದೆ.

ಶರೀರ ಎಂಬ ಅರ್ಥದಲ್ಲಿಯೂ ಕದಳಿಯನ್ನು ಅನೇಕ ಶರಣರು ತಮ್ಮ ವಚನಗಳಲ್ಲಿ ಪ್ರಯೋಗಿಸಿದ್ದಾರೆ:

ಕದಳಿ ಎಂಬುದು ತನು
ಕರ್ಮವೆಂಬ ಕದಳಿ ಎನಗೆ, ಕಾಯವೆಂಬ ಕದಳಿ ನಿಮಗೆ
– ಮಹಾದೇವಿಯಕ್ಕಗಳು

“- ಎನಗೆ ಅಂಗೈಯ ನಾಮ ಕಾಯವೆಂಬ ಕದಳಿ
ಕಾಯವೆಂಬ ಕದಳಿಯ ಹೊಕ್ಕು ಪ್ರಾಣವೆಂಬ ಗಹ್ವರದಲ್ಲಿ…”
ಕಾಯವೆಂಬ ಕದಳಿಯ ಹೊಕ್ಕು ಸುಳಿದಾಡುವ
ಮಹಾಮಹಿಮಂಗೆ ಇಹಲೋಕವೇನು? ಪರಲೋಕವೇನು?”
ಕಾಯವೆಂಬ ಕದಳಿಯ ಗೆಲ್ಲಬಲ್ಲವನಾರನೂ ಕಾಣೆನು
– ಅಲ್ಲಮ ಪ್ರಭು

ಕಾಯವೆಂಬ ಕದಳಿಯ ಹೊಕ್ಕು ಜೀವಪರಿವಾರ ನೆಲೆಯನರಿದು
ಕಾಯವೆಂಬ ಕದಳಿಯ ಹೊಕ್ಕು ನೂನ ಕದಳಿಯ ದಾಂಟಿ
– ಲಿಂಗಮ್ಮನವರು

ಇಷ್ಟದಲ್ಲಿ ನೋಟ; ಜ್ಞಾನದಲ್ಲಿ ಕೂಟ,
ಕೂಟ ಏಕಾರ್ಥವಾದಲ್ಲಿ ಕಾಯವೆಂಬ ಕದಳಿಯ ಬಿಟ್ಟುದು
– ಮೋಳಿಗೆಯ ಮಹಾದೇವಿಯವರು

ಬಸವಣ್ಣನವರು ತಮ್ಮ ವಚನಗಳಲ್ಲಿ ಕದಳಿ ಎಂಬ ಪದವನ್ನು ಪ್ರಯೋಗಿಸಿಲ್ಲ. ಆದರೆ ‘ಬಾಳೆ’ ಎಂಬ ಪದವನ್ನು ಪ್ರಯೋಗಿಸಿದ್ದಾರೆ. ಕದಳಿ ಎಂಬುದುದನ್ನು ಬಾಳೆ ಎಂದು ಅಣ್ಣನವರು ಪ್ರಯೋಗಿಸಿದ್ದಾರೆಂದು ಇಲ್ಲಿರುವ ಅರ್ಥ ಸಾಮ್ಯದಿಂದ ಖಚಿತವಾಗುತ್ತದೆ. ಬಸವಣ್ಣನವರಿಗೆ ಕನ್ನಡ ಪದಗಳೆಂದರೆ ಬಹಳ ಇಷ್ಟ. ಕನ್ನಡ ಪದವಿದ್ದಲ್ಲಿ ಅದರ ಬದಲಾಗಿ ಸಂಸ್ಕೃತ ಪದವನ್ನು ಅವರು ಬಳಸಲು ಹೋಗಿಲ್ಲವೆಂಬುದು ಅವರ ವಚನಗಳ ಅಭ್ಯಾಸದಿಂದ ತಿಳಿದು ಬರುತ್ತದೆ.

‘ಕದಳಿ’ ಎಂಬ ಸಂಸ್ಕೃತ ಪದಕ್ಕೆ ನಾನಾರ್ಥಗಳಿವೆ. ಆದರೆ ಆ ಶಬ್ದ ‘ಬಾಳೆ’ ಎಂಬ ಶಬ್ದದಷ್ಟು ಸುಂದರವೂ ಸತ್ಯವುಳ್ಳುದೂ ಆಗಿಲ್ಲ. ವಸ್ತುವಿನ ಗುಣಧರ್ಮವೇ ಮೈವೆತ್ತು ಬಂದಂತಿರುವ ಶಬ್ದಗಳು ಕನ್ನಡದಲ್ಲಿ ವಿಪುಲವಾಗಿವೆ. ಅವುಗಳಲ್ಲಿ ‘ಬಾಳೆ’ ಎಂಬುದು ಒಂದು. ಬಾಳ್‌(ಬಾಳು) ಎಂಬ ಧಾತುವಿನಿಂದ ನಿಷ್ಪನ್ನವಾಗಿದೆ ಈ ಶಬ್ದ. ಬಾಳೆಯ ಗಿಡಕ್ಕೆ ಹಣ್ಣಾದರೆ ಮುಗಿಯಿತು. ಅಲ್ಲಿಗೆ ಅದರ ಬಾಳುವೆ ಬಾಳೆ ಫಲ ಕೊಡುವುದು ಒಂದೇ ಸಾರೆ. ಒಮ್ಮೆ ಫಲಕೊಟ್ಟ ಮೇಲೆ ಅದು ಬಾಳುವುದಿಲ್ಲ. ಅದರ ಜೀವನ ಅಲ್ಲಿಗೆ ಮುಗಿಯುವುದು. ಅದುದರಿಂದ ಅದಕ್ಕೆ ‘ಬಾಳೆ’ ಎಂದು ಹೇಳುವುದು. ಇರುವೆ, ಅಳಿಯ ಮುಂತಾದ ಶಬ್ದಗಳಲ್ಲಿಯೂ ಇಂಥ ಅರ್ಥಸಂಪತ್ತಿ ಅಡಗಿದೆ.

ಬಸವಣ್ಣನವರು ‘ಬಾಳೆ’ ಎಂಬ ಪದವನ್ನು ತಮ್ಮ ವಚನಗಳಲ್ಲಿ ಮೂರು ಕಡೆಗೆ ಪ್ರಯೋಗಿಸಿದ್ದಾರೆ. ಎರಡು ಕಡೆಗೆ ದೇಹ ಎಂಬ ಅರ್ಥದಲ್ಲಿ ಈ ಪದ ಪ್ರಯೋಗವಾಗಿದೆ.

ಶರಣರು ಜಗತ್ತನ್ನು ಮಾಯೆ, ಮಿಥ್ಯೆ ಎಂದು ಭಾವಿಸುವುದಿಲ್ಲ; ಅದು ಶಿವನಂತೆ ಸತ್ಯವೆಂದು ನಂಬುತ್ತಾರೆ. ಸೃಷ್ಟಿಯ ಸಕಲ ವಸ್ತುಗಳೂ ಲಿಂಗಮಯವೆಂದು ತಿಳಿದು ಅವರು ಆಚರಿಸುತ್ತಾರೆ. ಇದರಂತೆ ‘ದೇಹ’ವನ್ನು ಮಾಯೆಯ ಸೀಮೆಯೆಂದೂ ಅನಿತ್ಯವೆಂದೂ ಕಾಮಾದಿ ಅರಿಷಡ್ವರ್ಗಗಳ ತವರೆಂದೂ ಜರೆದು ಅದನ್ನ ದುರುಳ ವೇದಾಂತಿಗಳಂತೆ ಅಲಕ್ಷ್ಯ ಮಾಡುವುದಿಲ್ಲ – ಶರಣರು.

ದೇಹವಿಲ್ಲದೆ ಈ ಜೀವನದಲ್ಲಿ ಮನುಷ್ಯ ಏನನ್ನೂ ಸಾಧಿಸಲಾರ; ಸಾಧಿಸುವುದು ಸಾಧ್ಯವಿಲ್ಲ. ಮಾನವನ ಪರಮ ಗುರಿ ಮೋಕ್ಷ. ಈ ಮೋಕ್ಷಕ್ಕೆ ಆತ್ಮೋನ್ನತಿ ಅವಶ್ಯಕ. ಈ ಆತ್ಮೋನ್ನತಿಯನ್ನು ದೇಹ ಬಿಟ್ಟು ಸಾಧಿಸುವುದು ಸಾಧ್ಯವೇ? ಎಂದಿಗೂ ಸಾಧ್ಯವಿಲ್ಲ. ಇದರಂತೆ ದುರ್ಬಲ, ರೋಗಿಷ್ಠ ದೇಹದಿಂದಲೂ ಮೋಕ್ಷದ ಗಳಿಕೆ ಸಾಧ್ಯವಿಲ್ಲ.

ದೇಹ ಅನಿತ್ಯ, ಮಾಯೆಯಿಂದ ಕೂಡಿದುದು. ಹೌದು, ಇದನ್ನು ಒಪ್ಪಿಕೊಳ್ಳೋಣ. ಆದರೆ ಇದನ್ನು ಬಿಟ್ಟು ಏನನ್ನೂ ಮಾಡಲು ಬರುವಂತಿಲವಲ್ಲ! ಸಾಯುವತನಕ ಇದರ ಸಂಗ ತಪ್ಪಿದ್ದಲ್ಲವಲ್ಲ! ಹೀಗಿರುವಾಗ ದೇಹದ ಬಗ್ಗೆ ಅಲಕ್ಷಮಾಡುವುದು ಒಳ್ಳೆಯದೇ? ದೇಹವನ್ನು ಅಲಕ್ಷಿಸಿದವರು ಲೋಕದಲ್ಲಿ ಯಾವ ಮಹಾತ್ಕಾರ್ಯವನ್ನೂ ಮಾಡದೆ ಹೋಗಿದ್ದಾರೆ; ಇಷ್ಟೇ ಅಲ್ಲ, ಅವರು ನಾನಾ ದುಃಖಗಳಿಗೆ ಭಾಜನರಾಗಿ ಹಾಳಾಗಿದ್ದಾರೆ. ಆದುದರಿಂದ ದೇಹವನ್ನು ಉತ್ತಮವಾಗಿಟ್ಟುಗೊಳ್ಳುವದು ಮನುಷ್ಯನ ಪ್ರಥಮ ಕರ್ತವ್ಯ. ಮೋಕ್ಷದ ಮಾತು ಬೇಡ; ಅದಂತಿರಲಿ. ಅದು ಸಕಲರಿಗೆ ಎಲ್ಲಿ ಸಾಧ್ಯ? ಕಾಯಕ ಮಾಡಿ ಸುಖವಾಗಿ ಬಾಳಲಿಕ್ಕಾದರೂ ದೇಹ ಚೆನ್ನಾಗಿರಬೇಡವೇ? ಸಂಸಾರದ ಸವಿಯನ್ನು ಸವಿಯಲು ದೇಹ ಆರೋಗ್ಯದಿಂದಿರಬೇಡವೇ? ಆರೋಗ್ಯವುಳ್ಳ ದೇಹದಲ್ಲಿ ಆರೋಗ್ಯವುಳ್ಳ ಮನಸ್ಸು ವಾಸಿಸುತ್ತದೆ ಎಂದು ವೈದ್ಯಶಾಸ್ತ್ರ ಹೇಳುತ್ತದೆ. ದೇಹದ ಆರೋಗ್ಯವಿಲ್ಲದಿದ್ದರೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ದುಸ್ಸಾಧ್ಯ; ಮಾನಸಿಕ ಅನಾರೋಗ್ಯ ಸರ್ವರೋಗ ಸರ್ವ ತಾಪತ್ರಯಗಳ ತವರು.

ಸಂಸಾರಕ್ಕೂ ಆಧ್ಯಾತ್ಮಕ್ಕೂ ಎಲ್ಲಕ್ಕೂ ದೇಹವೇ ಮುಖ್ಯವಾದುದರಿಂದ ಶರಣರು ಅದರ ಬಗ್ಗೆ ಹೆಚ್ಚು ಲಕ್ಷವಹಿಸಿದ್ದಾರೆ. ಅವರ ದೃಷ್ಟಿಯಲ್ಲಿ ದೇಹ ಕೇವಲ ಮಾಂಸ, ಮಜ್ಜೆ, ಎಲುವುಗಳಿಂದ ತುಂಬಿದುದೂ ಅಲ್ಲ; ಅದು ಪರಶಿವನು ವಾಸಿಸುವ ಮಂದಿರ.

ಬಸವಣ್ಣನವರು ದೇಹವೇ ದೇವಾಲಯವೆಂದರು. “ಕೂಡಲ ಸಂಗಮದೇವನೊಲಿಸಬಂದ ಪ್ರಸಾದ ಕಾಯವ ಕೆಡಿಸಲಾಗದು”. ಎಂದು ಘಂಟಾ ಘೋಷವಾಗಿ ಸಾರಿದರು.

ಕಾಯದಿಂದ ಲಿಂಗ ದರುಶನ
ಕಾಯದಿಂದ ಜಂಗಮ ದರುಶನ
ಕಾಯದಿಂದ ಪ್ರಸಾದ ಸಂಪತ್ತು
ಕೂಡಲ ಚೆನ್ನಸಂಗಯ್ಯ
ಕಾಯದಲ್ಲಿ ನಿಮ್ಮುವ ಕಂಡೆನಯ್ಯಾ.”

ಎಂದು ಷಟ್‌ಸ್ಥಲ ಚಕ್ರವರ್ತಿ ಚೆನ್ನಬಸವಣ್ಣನವರು ಕಾಯದ ಮಹತಿಯನ್ನು ಸ್ಪಷ್ಟವಾಗಿ ಹೇಳಿದ್ದಾರೆ.

“…… ಕರಸ್ಥಲದ ಲಿಂಗವನರ್ಚಿಸಿ ಪೂಜಿಸಿ
ವರವ ಬೇಡಿದರೆ ತನುವ ತೋರಿದರು.
ತನುವಿವಿಡಿದು ಮಹಾ ಘನವ ಕಂಡೆ

ಎಂದು ನುಡಿದು ತನುವಿನ ಮಹತ್ವವನ್ನು ಬಿತ್ತರಿಸಿದ್ದಾರೆ ಹಡಪದಪ್ಪಣ್ಣನವರ ಪತ್ನಿ ಲಿಂಗಮ್ಮನವರು.

ಪ್ರಭುದೇವರು ಬಸವಣ್ಣನವರಿಗೆ ಹೀಗೆ ಹೇಳುತ್ತಾರೆ:

ಆದೊಡಾಲಸಿ ಕೇಳು ಭಕ್ತಿಯ |
ಹಾದಿಗೊಂದೇ ಕೀಲು ದಿಟ ಬೇ |
ಕಾದುದೀ ತನು, ತನುವಿಡಿದು ಕಾಬುದು ಸಮಸ್ತವನು ||
ಆದರಿಸಿಯೀ ತನುವ ಲಿಂಗೋ
ಪಾದಿಯಲಿ ಜೋಗೈಸಿಕೊಳುತಲಿ
ಸಾಧಿಸುವುದು ಸಮಾಧಿಯನು ಬಸವಣ್ಣ ಕೇಳೆಂದ ||[8]

ಭಕ್ತಿಯ ಹಾದಿಗೆ ಒಂದೇ ಕೀಲು, ಅದು ತನು; ಅದನ್ನು ಹಿಡಿದೇ ಸರ್ವವನ್ನು ಕಾಣಬೇಕು. ಆದುದರಿಂದ ಈ ತನುವನ್ನು ಲಿಂಗೋಪಾದಿಯಲಿ ಜೋಗೈಸಿಕೊಳ್ಳಬೇಕು, ಇದನ್ನು ತಿದ್ದಿ ಲಿಂಗದಂತೆಯೇ ಮಾಡಬೇಕು.

ಇಂಥ ಮಹತ್ವವಿರುವ ಸರ್ವಸಿದ್ಧಿಗೂ ಮುಖ್ಯವಾಗಿರುವ ಈ ದೇಹವನ್ನು ‘ಬಾಳೆಗೆ’ ಹೋಲಿಸುವದರಲ್ಲಿ ಯಾವ ಔಚಿತ್ಯವಿದೆ? ದೇಹ – ಬಾಳೆ ಇವುಗಳ ರೂಪಕ ನಿರ್ಮಾಣದಲ್ಲಿ ಯಾವ ವೈಶಿಷ್ಟ್ಯವಿದೆ? ‘ದೇಹ – ಬಾಳೆ’ ಇವೆರಡರಲ್ಲಿರುವ ಸಾದೃಶ್ಯ ಸಂಪತ್ತು ಯಾವುದು?

ಅನೇಕ ಶರಣರು ದೇಹಕ್ಕೆ ಕದಳಿ ಎಂದಿದ್ದಾರೆ. ಆದರೆ ಇವೆರಡರಲ್ಲಿರುವ ಸಾದೃಶ್ಯ ಸಂಪತ್ತಾಗಲೀ, ಗುಣಾವಗುಣಗಳಾಗಲೀ ಅವರು ವಿವರಿಸಿ ಹೇಳಿಲ್ಲ. ಬಸವಣ್ಣನವರ ವಚನಗಳಲ್ಲಿ ಮಾತ್ರ ಇದು ಸ್ಪಷ್ಟವಾಗುತ್ತದೆ.

ಬಸವಣ್ಣನವರು ಅನೇಕ ಸಸ್ಯಗಳನ್ನು ಉಪಮೆಗಳನ್ನಾಗಿ, ರೂಪಕಗಳನ್ನಾಗಿ ಉಪಯೋಗಿಸಿದ್ದಾರೆ. ಅವುಗಳಲ್ಲೆಲ್ಲ ಬಾಳೆಯ ಉಪಮಾನ, ರೂಪಕಗಳೇ ಅತ್ಯಂತ ಶ್ರೇಷ್ಠವಾಗಿವೆ; ಅರ್ಥಪೂರ್ಣವಾಗಿವೆ. ಬಾಳೆಯ ಇಂಥ ರೂಪಕ ಕನ್ನಡ ಸಾಹಿತ್ಯದಲ್ಲಿಯೇ ಇಲ್ಲ. ಪ್ರಪಂಚದ ಯಾವುದೇ ಭಾಷೆಗೆ ಈ ರೂಪಕವನ್ನು ಒಯ್ದರೆ ಕನ್ನಡದ ಸತ್ವಸೌಂದರ್ಯ ಗೊತ್ತಾಗಿ, ಆಯಾ ಭಾಷೆಯವರು ಇದು ತಮ್ಮ ಭಾಷೆಗೆ ಸಿಕ್ಕ ಅಮೂಲ್ಯ ಕಾಣಿಕೆಯೆಂದು ಹೆಮ್ಮೆ ಪಡುವರು.

ಬಸವಣ್ಣನವರ ಈ ಮೂರು ವಚನಗಳಲ್ಲಿ ‘ಬಾಳೆ’ ಪದ ಪ್ರಯೋಗವಾಗಿದೆ.

.        ಚೇಳಿಂಗೆ ಬಸುಱಾಯಿತ್ತೆ ಕಡೆ; ಬಾಳೆಗೆ ಫಲವಾಯಿತ್ತೆ ಕಡೆ, ನೋಡಾ !
ರಣರಂಗದಲ್ಲಿ ಕಾದುವ ಓಲೆಯಕಾಱಂಗೆ ಓಸರಿಸಿತ್ತೆ ಕಡೆ!
ಮಾಡುವ ಭಕ್ತಂಗೆ ಮನಹೀನವಾದರೆ ಅದೇ ಕಡೆ,
ಕೂಡಲ ಸಂಗಮದೇವಾ ![9]

.        ಲಿಂಗವ ಪೂಜಿಸಿದ ಬಳಿಕ ಜಂಗಮಕ್ಕಂಜಲೇ ಬೇಕು.
ದಕ್ಕ ನುಂಗಿದಂತೆ ಬೆಱೆತುಕೊಂಡಿರಬೇಡ :
ಬೀಗಿ ಬೆಳೆದ ಗೊನೆವಾಳೆಯಂತೆ ಬಾಗಿಕೊಂಡಿದ್ದಡೆ
ಬೇಡಿದ ಪದವಿಯನೀವ ಕೂಡಲ ಸಂಗಮದೇವ.[10]

.        ಮಾಡುವ ಭಕ್ತನ ಕಾಯ ಬಾಳೆಯ ಕಂಭದಂತಿರಬೇಕು :
ಮೆಲ್ಲಮೆಲ್ಲನೆ ಹೊರೆಯೆತ್ತಿ ನೋಡಿದರೆ
ಒಳಗೆ ಕೆಚ್ಚಿಲ್ಲದಿರಬೇಕು.
ಮೇಲಾವ ಫಲವ ನಮ್ಮವರು ಬೀಜ ಸಹಿತ ನುಂಗಿದರು:
ಎನಗಿನ್ನಾವ ಭವವಿಲ್ಲ, ಕಾಣಾ,
ಕೂಡಲ ಸಂಗಮದೇವಾ.[11]

ಮೊದಲನೆಯ ಮತ್ತು ಎರಡನೆಯ ವಚನಗಳಲ್ಲಿ ಅನುಕ್ರಮವಾಗಿ ‘ಬಾಳೆ’ ದೃಷ್ಟಾಂತ ಮತ್ತು ಉಪಮೆಯಾಗಿ ಪ್ರಯೋಗವಾಗಿದೆ; ಮೂರನೆಯ ವಚನದಲ್ಲಿ ರೂಪಕವಾಗಿದೆ. ಇಡಿಯ ವಚನವೇ ರೂಪಕವಾಗಿದೆ. ಎರಡನೆಯ ಮತ್ತು ಮೂರನೆಯ ವಚನಗಳಲ್ಲಿ ಬಾಳೆ ದೇಹವೆಂಬ ಅರ್ಥದಲ್ಲಿ ಪ್ರಯೋಗವಾಗಿದೆ.

ಭಕ್ತನ ಮನಸ್ಸು ಭಕ್ತಿ ಮಾಡುವಲ್ಲಿ ಆನಂದದಿಂದಲೂ ಉತ್ಸಾಹದಿಂದಲೂ ತುಂಬಿರಬೇಕು. ಅದು ಹೀನವಾಗಬಾರದು; ಮಲಿನವಾಗಬಾರದು. ಹೀನವಾದ ಮನಸ್ಸು ಒಡೆದ ಗಡಿಗೆಯಂತೆ. ಅದರಲ್ಲಿ ಭಕ್ತಿರಸ ಹೇಗೆ ನಿಲ್ಲುವುದು? ಸರ್ವ ಅವಯವಗಳ ಚೇಷ್ಟೆಗೆ ಮನವೇ ಬೀಜ. ಈ ಮನ ಶುದ್ಧವಿರಬೇಕು. ಮನಸ್ಸು ಶುದ್ಧವಾಗಲು ಭಕ್ತಿ ಬೇಕು. ಭಕ್ತಿ ಸುಮ್ಮನೆ ಅಳುವಡುವುದಿಲ್ಲ. ಗರಗಸದಂತೆ ಹೋಗುತ್ತಲೂ ಕೊರೆಯುವುದು, ಬರುತ್ತಲೂ ಕೊರೆಯುವುದು. ಭಕ್ತ ಶಾಂತನಾಗಿರಬೇಕು; ತನ್ನ ಕುರಿತು ಬಂದ ಠಾವಿನಲ್ಲಿ ಸಮಾಧಾನಿಯಾಗಿರಬೇಕು; ಭೂತಹಿತ ವಚನದ ನುಡಿಯಬೇಕು. ಈ ಎಲ್ಲ ಕಾರ್ಯಗಳಿಗೆ ಮನಸ್ಸೇ ಮೂಲವಾದುದು. ಆ ಮನಸ್ಸೇ ಹೀನವಾದರೆ ಮುಗಿಯಿತಲ್ಲ! ಇನ್ನೆಲ್ಲಿಯ ಭಕ್ತಿ? ಇನ್ನೆಲ್ಲಿಯ ಸಾಧನೆ? ಮನಹೀನವಾದ ಕ್ಷಣವೇ ಭಕ್ತಿ ಅವನಿಂದ ಬಿಟ್ಟು ಹೋಗುವುದು. ಭಕ್ತನ ಭಕ್ತಿಗೆ ಮನಹೀನವಾಗುವುದೇ ಕಡೆ ಎಂಬುದನ್ನು ಸಮರ್ಥಿಸಲು ಕೊಟ್ಟ ದೃಷ್ಟಾಂತಗಳು ಯಾರು. ಬಸುರಾದ ಚೇಳು ಮರಿಗಳನ್ನು ಹಾಕುವದಿಲ್ಲ, ಅದರ ಹೊಟ್ಟೆಯೇ ಒಡೆದು ಹೋಗಿ ಮರಿಗಳು ಹೊರಬರುವವು. ಸರಿ, ಅಲ್ಲಿಗೆ ಚೇಳಿನ ಜೀವನ ಮುಗಿಯಿತು. ಯುದ್ಧರಂಗದಲ್ಲಿ ಕಾದುವ ವೀರ ಹಿಂಜರಿದರೆ ಬದುಕಬಲ್ಲನೇ? ಅದೇ ನಿಮಿಷಕ್ಕೆ ವೈರಿಯ ಕೈಯಲ್ಲಿ ಅವನ ಮರಣ ಖಂಡಿತ. ಅಲ್ಲಿಗೆ ಅವನ ಬಾಳುವೆ ಮುಗಿಯಿತು. ಬಾಳೆಗೆ ಫಲವಾದರೆ ಮುಗಿಯಿತು. ಅಲ್ಲಿಗೆ ಅದರ ಬಾಳುವೆ ಹರಿಗಡಿಯಿತು. ಚೇಳು, ಓಲೆಕಾರ ಈ ದೃಷ್ಟಾಂತಗಳಿಗಿಂತಲೂ ಬಾಳೆಯ ದೃಷ್ಟಾಂತ ಸಜೀವವಾದುದು, ಅರ್ಥಪೂರ್ಣವಾದುದು, ಸಹಜವಾದುದು.

ಎರಡನೆಯ ವಚನದಲ್ಲಿ ಬಾಳೆಯನ್ನು ಬಹು ಸೂಚ್ಯವಾಗಿ ತನುವಿಗೆ ಹೋಲಿಸಿದೆ. ಲಿಂಗ – ಜಂಗಮದಲ್ಲಿ ಭೇದವನೆಣಿಸಬಾರದು. ಲಿಂಗಕ್ಕಿಂತ ಜಂಗಮವೇ ಹೆಚ್ಚಿನದು. ಆದುದರಿಂದ “ನಾನು ಲಿಂಗಪೂಜೆಯ ಮಾಡುವೆನಯ್ಯ ಜಂಗಮ ಮನೆಗೆ ಬರಲೆಂದು” ಎಂದು ಶರಣರು ನುಡಿದರು, ಅದರಂತೆ ಆಚರಿಸಿದರು. ಜಂಗಮನೆಂದರೆ ಯಾರು? ಎಂಥವನು? – “ಉಭಯ ಕುಲವಳಿದು ಸುಳಿಯ ಬಲ್ಲದಾತ ಜಂಗಮ.” “ಒಡಲಿಲ್ಲದಾತ ಜಂಗಮ, ಆಚಾರವೇ ಜಂಗಮ” ಎಂದು ಚೆನ್ನಬಸವಣ್ಣನವರ ವಚನವಿದೆ. ಇಂಥ ಜಂಗಮನಿಗೆ ಭಕ್ತ ಅಂಜಲೇಬೇಕು. ಎಂದರೆ ಕಿಂಕರನಾಗಿರಬೇಕು, ಕಂಟಮಟ್ಟ ತಿಂದು ಸೆಟೆದು ಕೊಂಡವರಂತೆ ಬಿಮ್ಮೆ ಬೀಗಿಕೊಂಡಿರಬಾರದು ಭಕ್ತ. ಬೀಗಿ ಬೆಳೆದಿದ್ದರೂ ಗೊನೆಬಿಟ್ಟ ಬಾಳೆ ಬಾಗಿಕೊಂಡಿರುತ್ತದೆ; ಭಕ್ತ ಹಾಗೆ ಬಾಗಿಕೊಂಡಿರಬೇಕು. ಬಹು ಸುಂದರ ಸಹಜ ವಿಚಾರಪೂರ್ಣ ಉಪಮಾನವಿದು. ಭಕ್ತ ಬಾಳೆಯಂತೆ ಸಮೃದ್ಧಿಯಾಗಿ ಬೆಳೆಯಬೇಕು; ಬೆಳೆದು ಭಕ್ತಿಯ ಫಲಬಿಡಬೇಕು. ಫಲಬಿಟ್ಟು ಬಾಗಿರಬೇಕು. ಬಾಳೆಯ ಗೊನೆ ನೆಟ್ಟಗೆ ನಿಂತಿರುವುದಿಲ್ಲ ಗಿಡದ ಮೇಲೆ; ಅದು ನೆಲದ ಕಡೆಗೆ ಮೊಗಮಾಡಿ ಬಾಗಿಕೊಂಡಿರುತ್ತದೆ. ಮನುಷ್ಯನ ಶರೀರವೆಲ್ಲ ಬಾಗುವದು ಬೇಕಾಗಿಲ್ಲ, ಅವನ ತಲೆ ಬಾಗಿದರೆ ಸಾಕು. ಇದನ್ನೇ ಈ ವಚನದಲ್ಲಿ ಸುಂದರ ಸಾದೃಶ್ಯದಿಂದ ಹೇಳಲಾಗಿದೆ. ಬಾಳೆಯ ದಿಂಡು ಶರೀರವಿದ್ದಂತೆ; ಅದರ ಗೊನೆ ಶಿರವಿದ್ದಂತೆ.

ವಿನಯವಿಲ್ಲದ, ಹಮ್ಮು ಬಿಮ್ಮು ಇರುವ ಭಕ್ತ ಭಕ್ತನೇ ಅಲ್ಲ. ಭಕ್ತಿ ಮತ್ತು ಹಮ್ಮು ಬಿಮ್ಮುಗಳು ಒತ್ತಟ್ಟಿಗೆ ಕೊಡಲಾರವು, ಕತ್ತಲೆ – ಬೆಳಕುಗಳಂತೆ! ವಿನಯ ಸರ್ವಗುಣಗಳ ತವರು. ಬಸವಣ್ಣನವರ ವಿನಯಲೋಕ ವಿಖ್ಯಾತವಾದುದು. “ಎನಗಿಂತ ಕಿರಿಯರಿಲ್ಲ. ಶಿವಭಕ್ತರಿಗಿಂತ ಹಿರಿಯರಿಲ್ಲ.” “ಮಾವಿನ ಕಾಯಿಯೊಳಗೊಂದು ಎಕ್ಕೆಯ ಕಾಯಿ ನಾನಯ್ಯಾ.” “ಗಿಡದ ನೆರಳಲ್ಲಿದ್ದು ತನ್ನ ನೆರಳನರಸಬಹುದೇ?” “ನಾನು ಬಚ್ಚಬರಿಯ ಬಸವ.” “ಕೀಳಾಗಲಲ್ಲದೆ ಮೇಲಾಗಲೊಲ್ಲೆನು. ಕೀಳಿಂಗಲ್ಲದೆ ಹಯನು ಕರೆಯದು.” “ಬಾಗಿದ ತಲೆಯ ಮುಗಿದ ಕೈಯಾಗಿರಿಸು” – ಈ ಮಾತುಗಳು ಅಣ್ಣನವರ ವಿನಯ ಶ್ರೀಯನ್ನು ಸಾರಿ ಹೇಳುತ್ತವೆ. ಶಿವನು ಮೆಚ್ಚುವುದು ವಿನಯವುಳ್ಳವರನ್ನೇ. “ಸದುವಿನಯವೇ ಸದಾಶಿವನ ಒಲುಮೆ.” ಗೊನೆವಾಳೆಯಂತೆ ಬಾಗಿದ್ದರೆ ಶಿವನು ಬೇಡಿದ್ದನ್ನು ಕೊಡುವನು. ಅಣ್ಣನವರು ಜಂಗಮ ಪ್ರೇಮಿಗಳು, ‘ಜಂಗಮ ಪ್ರಾಣಿ’ಗಳು, ಜಂಗಮವನ್ನು ಅವರಷ್ಟು ಸೇವಿಸಿದವರು ಶರಣರಲ್ಲಿ ಇನ್ನೊಬ್ಬರಿಲ್ಲ. ಅಣ್ಣನವರ ವಿನಯ ಮೇಲಿನ ಮಾತುಗಳಿಂದ ಗೊತ್ತಾಗಿದೆ. ಇದನ್ನು ನೆನೆದು ಈ ವಚನವನ್ನೋದಿದರೆ ಇದು ಅವರ ಜೀವನಕ್ಕೆ ಬರೆದ ಭಾಷ್ಯದಂತೆ ಇದೆಯೆಂದು ಮನದಟ್ಟಾಗದೇ ಇರದು. ನಡೆದುದನ್ನೇ ನುಡಿದು ಅಣ್ಣನವರು ತಮ್ಮ ಜೀವನಕ್ಕೆ ಭಾಷ್ಯ ಬರೆದಿದ್ದಾರೆಂದು ತಿಳಿದರೆ ಏನೂ ತಪ್ಪಿಲ್ಲ.

ಮೂರನೆಯ ವಚನ ಶರಣನ ಅನುಭಾವ ಜೀವನದ ಸಾಕಾರ ರೂಪದಂತಿದೆ. ಅಂತೆಯೇ ಇಡಿಯ ವಚನ ರೂಪಕವಾಗಿದೆ. ಬಿಡಿ ಬಿಡಿಯಾಗಿ ನೋಡದೆ ಇಡಿಯ ವಚನದ ಭಾವವನ್ನು ಶರಣನ ಜೀವನಕ್ಕೆ ಸಂಬಂಧಿಸಿ ನೋಡಿದರೆ ಅದೊಂದು ದಿವ್ಯ, ಅರ್ಥವತ್ತಾದ ರೂಪಕವೆಂದು ಮನದಟ್ಟಾಗುವುದು. ಇಂಥ ರೂಪಕಗಳ ಸೃಷ್ಟಿ ಅಸಾಮಾನ್ಯ ಪ್ರತಿಭೆಯಿದ್ದವರಿಗೇನೇ ಸಾಧ್ಯ.

ಈ ವಚನದಲ್ಲಿ ಬಾಳೆಗೂ ಭಕ್ತನಿಗೂ ಎಲ್ಲ ದೃಷ್ಟಿಯಿಂದ ಅಭೇದ ಕಲ್ಪಿಸಲಾಗಿದೆ. ಈ ವಚನಾರ್ಥದ ಒಂದೊಂದೇ ಪರೆಯನ್ನುಚ್ಚುತ್ತ ಹೋದರೆ ಅದರಲ್ಲಡಗಿರುವ ಅರ್ಥಗೌರವ, ಸೊಗಸು, ಸೌಂದರ್ಯಗಳು ಹೃದಯಕ್ಕೆ ವೇದ್ಯವಾಗುವವು.

೧. ಭಕ್ತನ ಕಾಯ ಬಾಳೆಯ ಕಂಬದಂತಿರಬೇಕು : ಬಾಳೆಯ ಕಂಬ ಮಿದುವಾಗಿರುತ್ತದೆ, ಹಗುರಾಗಿರುತ್ತದೆ, ಸುಂದರವೂ ಆಗಿರುತ್ತದೆ. ಭಕ್ತನ ದೇಹ ಭಕ್ತಿಯಿಂದ ಮಿದುವಾಗಿರುತ್ತದೆ. ಭಕ್ತಿಯ ಗರಗಸ ಆ ದೇಹವನ್ನು ಕೊರೆದೂ ಕೊರೆದೂ ಕಾಮಾದಿ ಅರಿಷಡ್ಗುಣಗಳನ್ನೂ ಮಲತ್ರಯಗಳನ್ನೂ ಅಳಿದಿರುತ್ತದೆ. ದುರ್ಗುಣಗಳ ಕಾಠಿನ್ಯ ಕಳೆದು ಸುಗುಣಗಳ ಮೃದುತ್ವ ದೇಹಕ್ಕೆ ಪ್ರಾಪ್ತವಾಗಿರುತ್ತದೆ. ಪಕ್ವಗೊಂಡ ಅಂತರಂಗದ ತೇಜಸ್ಸು ಹೊರ ಚಿಮ್ಮಿ ಭಕ್ತನ ದೇಹ ಚೆಲುವಾಗಿರುತ್ತದೆ; ಅಂಗಗುಣವಳಿದು ಲಿಂಗಗುಣ ಪಡೆದಿರುತ್ತದೆ; ಮಾಂಸ, ಪಿಂಡ ಹೋಗಿ ಮಂತ್ರಪಿಂಡವಾಗಿರುತ್ತದೆ.

೨. ಮೆಲ್ಲಮೆಲ್ಲನೆ ಹೊರೆಯೆತ್ತಿ ನೋಡಿದರೆ ಒಳಗೆ ಕೆಚ್ಚಿಲ್ಲದಂತಿರಬೇಕು. ಬಾಳೆಯ ಕಂಭವನ್ನು ಸುಲಿಯುತ್ತ ಹೋದರೆ ಕೊನೆಗೆ ಏನೂ ಉಳಿಯುವುದಿಲ್ಲ, ಈರುಳ್ಳಿಯಂತೆ. ಏಕೆಂದರೆ ಅದರೊಳಗೆ ಕೆಚ್ಚೇ, ಕಠಿನ ವಸ್ತುವೇ ಇಲ್ಲ. ಭಕ್ತನ ಕಾಯ ಹೀಗೆಯೇ ಇರಬೇಕು, ಹೀಗೆಯೇ ಇರುತ್ತದೆ. ಇಲ್ಲದಿದ್ದರೆ ಆತ ಭಕ್ತನಾಗಲಾರ. ಭಕ್ತನ ಕಾಯ ಕಣ್ಣಿಗೆಕಂಡರೂ ಅದು ಅಕಾಯವಾಗಿರುತ್ತದೆ. ಗುರು ಸೇವೆಯಿಂದ, ತ್ರಿವಿಧ ಲಿಂಗಪೂಜೆಯಿಂದ, ಜಂಗಮಾರ್ಚನೆಯಿಂದ; ಶುದ್ಧ ಭಕ್ತಿಯಿಂದ ಭಕ್ತನ ಕಾಯ ತನ್ನ ಗುಣಗಳನ್ನು ಕಳೆದುಕೊಳ್ಳುತ್ತದೆ. ಅಂಗವ ಲಿಂಗಮುಖದಲ್ಲಿ ಅರ್ಪಿಸಿ ಅಂಗವನಂಗವಾಗುತ್ತದೆ. ಮನವರಿದು ಲಿಂಗಮುಖಕ್ಕರ್ಪಿಸಿ ಮನಲೀಯವಾಗುತ್ತದೆ. ಅಂಗಭಾವ ಮನೋಭಾವವಳಿದ ಕಾರಣ ಕಾಯ ಅಕಾಯವಾಗುತ್ತದೆ. ಹೇಗೆ ಪರೀಕ್ಷಿಸಿ ನೋಡಿದರೂ ಶರಣ ಕಾಯವಿಡಿದಂತೆ ಕಂಡರೂ ಅಕಾಯನಾಗಿರುತ್ತಾನೆ. ಬಯಲೊಡಲಿಗನಾಗಿರುತ್ತಾನೆ. “ಮೆಲ್ಲ ಮೆಲ್ಲನೆ ಹೊರೆಯೆತ್ತಿ ನೋಡಿದರೆ ಒಳಗೆ ಕೆಚ್ಚಿಲ್ಲದಂತಿರಬೇಕು.” ಇದನ್ನು ದೇಹಕ್ಕೆ ಅನ್ವಯಿಸಿಕೊಂಡು ಅರ್ಥೈಸಿದಷ್ಟೂ ಸುಖವೆನಿಸುತ್ತದೆ. ಅಂಗಗುಣಗಳೇ ದೇಹಕ್ಕೆ ಕೆಚ್ಚು. ಅವು ಅಳಿದರೆ ಕೆಚ್ಚೆಲ್ಲಿ? ಅಂಗ ಲಿಂಗವಾದ ಮೇಲೆ ಕೆಚ್ಚೂ ಇಲ್ಲ ರೂಪವೂ ಇಲ್ಲ. ಸರ್ವಾಂಗ ಲಿಂಗಿಯಾದ ಶರಣನ ದೇಹ ಕಂಗೆ ತೋರಿದರೂ ಅದು ನಿರ್ದೇಹವಾಗಿರುತ್ತದೆ.

೩. “ಮಾಡುವ ಭಕ್ತನ ಕಾಯ”. ‘ಮಾಡುವ’ ಎಂಬುದಕ್ಕೆ ಏನರ್ಥ? ಭಕ್ತಿ ಮತ್ತು ಕಾಯಕ – ಇವೆರಡೂ ಅರ್ಥಗಳು ಮಾಡುವ ಎಂಬ ಪದದಲ್ಲಿ ಅಡಗಿವೆ. ಭಕ್ತಿ ಜ್ಞಾನ ಕ್ರಿಯೆ ಇವು ಮೂರರ ಸಂಗಮವೇ ಷಟ್ ಸ್ಥಲಾಚರಣೆಯ ಜೀವ. ಇವುಗಳಲ್ಲಿ ಯಾವುದೊಂದು ಲೋಪವಾದರೂ ಆಚರಣೆ ಅಪೂರ್ಣವಾಗುತ್ತದೆ. ಕ್ರಿಯೆ ಇಲ್ಲದ ಭಕ್ತಿ ಹೆಳವನಾಗುತ್ತದೆ. ಅದರಂತೆ ಜ್ಞಾನವಿಲ್ಲದಿದ್ದರೆ ಅದು ಕುರುಡಾಗುವುದು. ಭಕ್ತಿ – ಜ್ಞಾನಗಳ ಬಳಕೆ ಆಚರಣೆ ಕ್ರಿಯೆಯಿಂದಲೇ ಅಲ್ಲವೇ? ಈ ಕ್ರಿಯೆಯೇ ಕಾಯಕ. ಶುದ್ಧ ಕಾಯಕವೇ ಕೈಲಾಸ. ಇಂಥ ಭಕ್ತಿ – ಜ್ಞಾನಗಳಿಂದೊಡಗೂಡಿದ ಸತ್ಯ ಶುದ್ಧ ಕಾಯಕ ಮಾಡುವ ಭಕ್ತನ ಕಾಯ ಬಾಳೆಯ ಕಂಬದಂತಿರುತ್ತದೆ.

ಬಿಕ್ಕೆ ಬೇಡುವುದು ಪಾಪ, ಎಲ್ಲರೂ ದುಡಿದೇ ತಿನ್ನಬೇಕು. ಗುರು – ಲಿಂಗ – ಜಂಗಮ ಯಾರಾದರೂ ಆಗಲಿ ಕಾಯಕ ಮಾಡಲೇಬೇಕು. “ಅಮರೇಶ್ವರ ಲಿಂಗವಾಯಿತ್ತಾದರೂ ಕಾಯಕದೊಳಗು.” ಆಯ್ದಕ್ಕಿ ಮಾರಯ್ಯಗಳ ಕಾಯಕವಾಣಿ ಇದು. ಕಾಯಕ ಮಾಡದಿದ್ದರೆ ಜೀವನ್ಮುಕ್ತಿ ಇಲ್ಲ. ಭಕ್ತ ನಿರಂತರ ಕಾಯಕ ಮಾಡುತ್ತಿರಬೇಕು. ಆದುದರಿಂದ “ಮಾಡುವ ಭಕ್ತ” ಎಂದಿದ್ದಾರೆ ಬಸವಣ್ಣನವರು. “ನಮ್ಮ ಕೂಡಲಸಂಗನ ಶರಣರಿಗೆ ಮಾಡಿ ಮಾಡಿ ಧನ ಸವೆದು ಬಡವಾದರೆ ಆ ಭಕ್ತನು ಆ ಲಿಂಗಕ್ಕೆ ಪೂಜೆಯಹನು” ಎಂಬ ಅಣ್ಣನವರ ಮಾತು ಮಾಡುವ ಭಕ್ತನ ಕಾಯ ಕೆಚ್ಚಿಲ್ಲದುದಿರುತ್ತದೆ ಎಂಬ ಭಾವವುಳ್ಳದೇ ಆಗಿದೆ.

೪. ಫಲಬಿಟ್ಟ ಬಾಳೆ ಬಾಗಿರುವದು. ಹಾಗೆ ಭಕ್ತ ವಿನಯದಿಂದ ‘ಬಾಗಿದ ತಲೆಯ ಮುಗಿದ ಕೈ’ಯವನಾಗಿರುತ್ತಾನೆ. ವಚನದಲ್ಲಿ ಈ ಭಾವದ ವಿಷಯವಿಲ್ಲದಿದ್ದರೂ ನಾವು ಅದನ್ನು ಭಾವಿಸಿ, ಕಲ್ಪಿಸಿ ಅರಿಯಬೇಕಾಗುತ್ತದೆ.

೫. ಭಕ್ತ – ಭವಿ ಈ ಶಬ್ದಗಳಿಗೆ ವಚನಕಾರರು ಅರ್ಥವಿಸಿದ್ದು ಹೀಗಿದೆ: ಭಕ್ತನಿಗೆ ಇದೆ ಜನ್ಮ ಕೊನೆ. ಭವಿಗೆ ಅನಂತ ಜನ್ಮಗಳುಂಟು. ಭವ ಎಂದರೆ ಜನ್ಮ. ಜನ್ಮ ಇದ್ದವನೇ ಭವಿ.

ಮುನ್ನ ಹುಟ್ಟಿದುದಕ್ಕೆ ಕೃಪೆಮಾಡು ಲಿಂಗವೇ !
ಇನ್ನು ಹುಟ್ಟಿದೆನಾದೊಡೆ
ಕೂಡಲ ಸಂಗಮದೇವಾ ನಿಮ್ಮಾಣೆ

ಅಣ್ಣನವರು ಈ ವೀರ ಭಾಷೆಯಲ್ಲಿ ಭವವಿಲ್ಲದವನೇ ಭಕ್ತನೆಂದು ಧ್ವನಿಪೂರ್ಣವಾಗಿ ಹೇಳಿರವರು. ಭಕ್ತ ಭವರಹಿತ ಎಂಬ ಮಾತಿನ ಸಮರ್ಥನೆ ಈ ವಚನದಲ್ಲಿ “ಮೇಲಾದ ಫಲವ ನಮ್ಮವರು ಬೀಜ ಸಹಿತ ನುಂಗಿದರು” ಎಂಬ ಮಾತಿನಿಂದಾಗುತ್ತದೆ. “ಬೀಜ ಸಹಿತ ತಿಂದರು” ಈ ಮಾತಿನಲ್ಲಿ ಅರ್ಥಸಂಪತ್ತಿಯ ಜೊತೆಗೆ ಕಾವ್ಯ ಸೌಂದರ್ಯವೂ ಇದೆ. ಇದ್ದುದನ್ನೇ ಇದ್ದಂತೆ ಹೇಳಲಾಗಿದೆ ಇಲ್ಲಿ. ಅಲಂಕಾರವಿಲ್ಲ, ಏನೇನೂ ಇಲ್ಲ. ಆದರೂ ಸೌಂದರ್ಯವಿದೆ. ಸಹಜ ಸೌಂದರ್ಯ; ಬೀಜ ಸಹಿತ ತಿನ್ನುವ ಫಲಗಳು ಇನ್ನಾವಾದರೂ ಇರಬಹುದು. ಆದರೆ ಅವು ಬಾಳೆಯಂತೆ ಇಲ್ಲ. ಬಾಳೆಯೊಳಗಿನ ಬೀಜ ತೆಗೆಯಬಾರದು, ತೆಗೆದರೆ ನಾಟಿಸಬಾರದು. ಆದುದರಿಂದ ಈ ಹಣ್ಣು ಭವವಿಲ್ಲದ್ದು; ಈ ಹಣ್ಣೇ ಭಕ್ತ! ಈ ಭಕ್ತನೆಂಬ ಬಾಳೆ ಹಣ್ಣನ್ನು ಬೀಜ ಸಹಿತ ಶಿವನು ನುಂಗಿದನು. ಇನ್ನು ಭವದ ಅಂಜಿಕೆಯೆಲ್ಲಿ?

“ಮೇಲಾದ ಫಲವ ಬೀಜ ಸಹಿತ ನಮ್ಮವನು ನುಂಗಿದರು”. ಈ ಮಾತನ್ನು ಹಿಂಜಿದಷ್ಟೂ ಅರ್ಥ ಗೌರವ ಹೆಚ್ಚುತ್ತ ಹೋಗುತ್ತದೆ.

ಇಷ್ಟೆಲ್ಲ ಅನುಭಾವದ, ಆಧ್ಯಾತ್ಮದ ದೃಷ್ಟಿಯಿಂದ ನೋಡಿದುದಾಯಿತು – ಈ ರೂಪಕವನ್ನು; ಲೌಕಿಕ ದೃಷ್ಟಿಯಿಂದ ಒಂದಷ್ಟನ್ನು ನೋಡುವಾ.

ಬಾಳೆಯ ಗಿಡ ಬಹು ಸುಂದರ. ಅದೂ ಗೊನೆ ಬಿಟ್ಟಾಗ್ಗೆ ಅದರ ಸೌಂದರ್ಯ ನೂರ್ಮಡಿ ಹೆಚ್ಚುವುದು. ರಂಭಾಸ್ತಂಭಗಳ ಉಪಮಾನ ಸಾಹಿತ್ಯದಲ್ಲಿ ವಿಪುಲ ಸೌಂದರ್ಯದ, ಸಮೃದ್ಧಿಯ, ಸಂಪತ್ತಿನ, ಮಂಗಳದ ಕುರುಹು – ಈ ಗಿಡ. ಮಂಗಳ ಕಾರ್ಯಗಳಲ್ಲಿ ಮನೆಯ ಅಲಂಕಾರ ಬಾಳೆಯಿಂದ ಮಾಡುತ್ತಾರೆ. ಮದುವೆ ಮಂಟಪ, ಪೂಜಾ ಮಂಟಪ ಮುಂತಾದವುಗಳನ್ನು ಫಲ ಬಿಟ್ಟ ಬಾಳೆಯ ಗಿಡದಿಂದಲೇ ಅಲಂಕರಿಸುತ್ತಾರೆ. ಇದರಂತೆ ಭಕ್ತನು ಭಕ್ತಿಯೆಂಬ ಪ್ರಭೆಯುಳ್ಳ ಚೆಲುವನು, ಮಂಗಳಕರನು, ಶಿವನ ಮಹಾಮನೆಯಾದ ಈ ಲೋಕಕ್ಕೆ ಅವನು ಅಲಂಕಾರ ಪ್ರಾಯನು; ಭಕ್ತಿ, ಜ್ಞಾನ, ವೈರಾಗ್ಯ, ಸದಾಚಾರವೆಂಬ ಸಂಪತ್ತಿನ ಆಗರ ಈ ಭಕ್ತ.

ಬಾಳೆ ಮಕ್ಕಳಿಂದ ಮುದುಕರವರೆಗೂ ಪ್ರಿಯವಾದ ಹಣ್ಣು. ಬಲು ಮಿದು. ಈ ಹಣ್ಣು ತಿನ್ನಲು ಆಯಾಸವೇ ಇಲ್ಲ. ಹಲ್ಲಿಲ್ಲದವರೂ ಇದನ್ನು ಮೆಲ್ಲುವರು. ಬಲು ರುಚಿ, ಬಲು ಹಿತ ಈ ಹಣ್ಣು. ಇದರಂತೆ ಭಕ್ತನು ಸರ್ವರಿಗೂ ಪ್ರಿಯನಾದವನು; ಅವನ ಭಕ್ತಿಯ ಹಣ್ಣು ಸರ್ವರ ಹೃದಯಕ್ಕೂ ಆಪ್ಯಾಯನಕರ.

ಬಾಳೆಯ ಹಣ್ಣು ಬಡವ ಬಲ್ಲಿದ ಎಲ್ಲರಿಗೂ ಸುಲಭದಲ್ಲಿ ದೊರಕುವ ಹಣ್ಣು. ಬೆಲೆ ಕಡಿಮೆ, ಆಹಾರಾಂಶ ಹೆಚ್ಚು. ಭಕ್ತ ಸರ್ವರಿಗೂ ಸುಲಭ, ಅವನ ಭಕ್ತಿಗೆ ಬೆಲೆಯೇ ಇಲ್ಲ. ಅಮೂಲ್ಯವಾದ ಆ ಭಕ್ತಿಯ ತನಿವಣ್ಣನ್ನು ಆತ ಸರ್ವರಿಗೂ ಉಚಿತವಾಗಿ ಹಂಚುವನು.

ಬಾಳೆ ಸರ್ವ ಕಾಲದಲ್ಲಿಯೂ ಬೆಳೆಯುವ ಹಣ್ಣು. ಪ್ರತಿದಿನವೂ ದೊರಕುವ ಹಣ್ಣಿದು. ಇದು ಅಮರ ಫಲ. ‘ಬಾಳೆ’ ಎಂದು ಹೆಸರು ಪಡೆದಿದ್ದರೂ ಯಾವಾಗಲೂ ಬಾಳುವದಿದು. ಬಾಳೆಯ ದಿಂಡುಗಳು ಅಳಿಯುತ್ತವೆ ಆದರೆ ಹಣ್ಣು ನಿರಂತರವಾಗಿ ಇರುತ್ತದೆ. ಇದರಂತೆ ಭಕ್ತನು ಅಮರ. ಅವನು ಹುಟ್ಟು ಸಾವುಗಳನ್ನು ಗೆದ್ದವನು. ಅವನ ಕಾಯ ಮರೆಯಾದರೂ ಅವನ ಭಕ್ತಿ ಮರೆಯಾಗದು; ಅದು ಅಮರ. ಲೋಕ ಭಕ್ತರಿಲ್ಲದಂತೆ ಭಕ್ತಿಯಿಲ್ಲದಂತೆ ಆಗುವದು ಸಾಧ್ಯವಿಲ್ಲ. ಭಕ್ತರ ಕಾಯಗಳು ಮರೆಯಾಗುತ್ತವೆ. ಆದರೆ ಭಕ್ತ ಹರಿಗಡಿಯುವದಿಲ್ಲ. ಅದು ಬಾಳೆಯ ಹಣ್ಣಿನಂತೆ ಲೋಕದಲ್ಲಿ ಎಲ್ಲ ಕಾಲದಲ್ಲಿಯೂ ಇರುತ್ತದೆ.

ಬಸವಣ್ಣನವರಿಗೆ ‘ಭಕ್ತಿ ಭಾಂಡಾರಿ’ ಎಂಬ ಹೆಸರಿದೆ. ಇದು ಬಿರುದಲ್ಲ; ಅವರ ಭಾಕ್ತಿಕ ಜೀವನಕ್ಕೆ ಅನ್ವರ್ಥವಾಗಿ ಬಂದುದು. ಅವರ ಅಂಕಿತ ನಾಮವೇ ಇದು ಎನ್ನುವಷ್ಟರ ಮಟ್ಟಿಗೆ ಈ ಹೆಸರು ಬಳಕೆಯಲ್ಲಿ ಬಂದಿತು. ಭಕ್ತಿಯನ್ನೇ ನಡೆದು, ನುಡಿದು, ಉಸಿರಾಡಿದ ಇಂಥ ಭಕ್ತಿಭಾಂಡಾರಿಗಲ್ಲದೇ ಇನ್ನಾರಿಗೆ ಸಾಧ್ಯ ಇಂಥ ವಚನ ರಚನೆ. ಅವರ ಜೀವನದ ಪ್ರತಿಕೃತಿಯಾಗಿದೆ ಈ ವಚನ.

[1] ಲಿಂ.ಶಿ.ಶಿ. ಬಸವನಾಳರು ಅವರಿಂದ ಸಂಪಾದಿತವಾದ – ಬಸವಣ್ಣನವರ ಷಟ್‌ಸ್ಥಲದ ವಚನಗಳು, ಪ್ರಸ್ತಾವನೆ, ಪುಟ (ii)

[2] ಅದೇ ಪ್ರಸ್ತಾವನೆ, ಪುಟ (ii)

[3] ಯುಗಪ್ರವರ್ತಕ ಬಸವಣ್ಣನವರು, ಮುನ್ನುಡಿ ಪುಟ (iii)

[4] ವಚನ ಧರ್ಮಸಾರ, ಪುಟ ೨೧೮.

[5] ಕದಳಿಯ ವಚನಗಳು, ಮುನ್ನುಡಿ ಪುಟ ೩.

[6] ಕದಳಿಯ ವಚನಗಳು, ಮುನ್ನುಡಿ ಪುಟ ೩.

[7] ಉಡುತಡಿಯ ಮಹಾದೇವಿಯಕ್ಕನವರ ಸಾಹಿತ್ಯ, ಅನುಬಂಧಗಳು, ಪುಟ ೨೪೩.

[8] ಪ್ರಭುಲಿಂಗಲೀಲೆ: ಸಾಧಕಾಂಗದ ಗತಿ, ಪದ್ಯ ೧೩.

[9] ಲಿಂ.ಶಿ.ಶಿ. ಬಸವನಾಳರು ಅವರಿಂದ ಸಂಪಾದಿತವಾದ – ಬಸವಣ್ಣನವರ ಷಟ್‌ಸ್ಥಲದ ವಚನಗಳು, ಪುಟ ೧೭೮, ವಚನ ೬೬೪.

[10] ಅದೇ ಪುಟ ೫೦, ವಚನ ೧೮೯.

[11] ಅದೇ ಪುಟ ೧೩೬, ವಚನ ೫೨೩.