ಮನುಷ್ಯ ಜೀವನ ಸಂಕೀರ್ಣವಾದುದು; ನಮ್ಮ ಮತ ಧರ್ಮಗಳು, ಶಾಸ್ತ್ರಗಳು, ಸಂಪ್ರದಾಯಗಳು, ನಂಬುಗೆಗಳು, ದೈವಗಳು, ಪರಿಸರ, ಪ್ರಕೃತಿ, ಸಮಾಜ ಈ ಸಂಕೀರ್ಣತೆಯನ್ನು ಇನ್ನಷ್ಟು ಹೆಚ್ಚಿಸಿವೆ. ಈ ತಿರುಗಣಿ ಮಡುವಿನಿಂದ ಮನುಷ್ಯ ಪಾರಾಗಿ ಮೇಲೇಳಲು ಅವಕಾಶವಿಲ್ಲದಂತಾಗಿದೆ. ಅಂತೆಯೇ ಅವನು ಸ್ವಂತಿಕೆಯನ್ನು ಕಳೆದುಕೊಂಡು ಮತ, ಧರ್ಮ, ಶಾಸ್ತ್ರ, ಸಂಪ್ರದಾಯ, ದೈವ, ನಂಬುಗೆಗಳಲ್ಲಿ ಹರಿದುಹಂಚಿಹೋಗಿದ್ದಾನೆ. ಅಥವಾ ಹೀಗೆ ಹೇಳಬಹುದು: ಮಾನವನ ವ್ಯಕ್ತಿತ್ವವನ್ನು ವಿಕಾಸಗೊಳಿಸಿ ಅವನನ್ನು ದೈವತ್ವದ ಮಟ್ಟಕ್ಕೆ ಏರಿಸುವ ಸಾಧನೆಗಳೆಲ್ಲ, ಶಕ್ತಿ ಸಾಮರ್ಥ್ಯಗಳೆಲ್ಲ ಅವನನ್ನು ಕಾಲಕೆಳಗೆ ಹಾಕಿ ನುಚ್ಚು ನೂರು ಮಾಡಿ ದೆವ್ವದ ಕುಣಿತ ಕುಣಿದಿದೆ, ಕುಣಿಯುತ್ತಿವೆ. ಇದು ಶತ ಶತಮಾನಗಳಿಂದ ನಡೆದು ಬಂದಿದೆ.

ಧರ್ಮ, ದೇವರು, ಶಾಸ್ತ್ರಗಳ ಹೆಸರು ಮುಂದೆ ಮಾಡಿ ‘ಬುದ್ಧಿವಂತ’ ಎನಿಸಿಕೊಳ್ಳುವ ಕೆಲವು ಜನ ತಮ್ಮ ಮೂಗಿನ ನೇರಕ್ಕೆ ಎಲ್ಲವನ್ನು ಅರ್ಥಯಿಸಿ ಸಮಾಜದ ಬಹುಭಾಗವನ್ನು ಅಜ್ಞಾನದಲ್ಲಿಟ್ಟು ಆಳ್ವಿಕೆ ನಡೆಸಿತು ಎಂಬ ಮಾತನ್ನು ಈಗ ಎಲ್ಲರೂ ಒಪ್ಪುತ್ತಾರೆ. ಈ ಬುದ್ಧಿವಂತ ಜನರಿಂದ ದೇವರು ಧರ್ಮಶಾಸ್ತ್ರ ಸಂಪ್ರದಾಯ ಎಲ್ಲವೂ corrupt ಆದವು. ‘ನಿಜವಾದುದು’ ಮರೆಯಾಯಿತು; ‘ನಕಲಿ’ ಮರೆಯತೊಡಗಿತು. ಜೀವನದ ಮೌಲ್ಯಗಳು ಹೆಸರಿಗೆ ಉಳಿದುಕೊಂಡವು. ಕೆಲವರ ಸೊತ್ತಾಗಿ ಈ ಬುದ್ಧಿವಂತ ಜನ ಪುಣ್ಯ, ಪಾಪ, ಕರ್ಮ, ಸ್ವರ್ಗ, ನರಕಗಳನ್ನು ಸೃಷ್ಟಿಸಿತು; ಬದುಕಿನ ಬೆಲೆ ತಾರದ ಸಂಪ್ರದಾಯಗಳನ್ನು ಜಾರಿಗೊಳಿಸಿತು. ಈ ಜನ ಹುಟ್ಟಿಸಿದ ದೇವರು ಜನರ ಸುಲಿಗೆಗಾರರಾದರು; ಇವರ ಧರ್ಮ ಶೋಷಣೆಗೆ ಅನುಕೂಲವೊದಗಿಸಿತು; ಇವರ ಜ್ಯೋತಿಷ್ಯ ಜನರಲ್ಲಿ ಭಯವನ್ನುಂಟು ಮಾಡಿತು. ಒಟ್ಟಾರೆ ಜನಾಂಗ ನಿಸ್ಸತ್ವವಾಯಿತು, ನಿರ್ವೀರ್ಯವಾಯಿತು. ಸ್ವಂತಿಕೆ ಅದಕ್ಕೆ ಉಳಿಯಲೇ ಇಲ್ಲ, ಸ್ವತಂತ್ರ ವಿಚಾರಕ್ಕೆ ಆಸ್ಪದವೇ ಇರಲಿಲ್ಲ. ಎಲ್ಲ ಕೆಲಸಕ್ಕೂ ಪರಾವಲಂಬನ, ತನ್ನ ಅನುಭವಕ್ಕೆ ಬೆಲೆಯಿಲ್ಲದಾಯಿತು. ಕುಳಿತರೆ, ನಿಂತರೆ, ಎದ್ದರ, ಮಲಗಿದರೆ, ಉಂಡರೆ, ತಿಂದರೆ, ನಡೆದರೆ, ಎಲ್ಲವನ್ನೂ currupt ಆದ ದೇವರ ಧರ್ಮದ ಜ್ಯೋತಿಷ್ಯದ ಸಂಪ್ರದಾಯದ ಮಾರ್ಗದರ್ಶನದಲ್ಲಿ ಮಾಡಿ ಸಮಾಜ ಅಂತಸ್ಸತ್ವವನ್ನು ಕಳೆದುಕೊಂಡಿರಿ.

ಹನ್ನೆರಡನೆಯ ಶತಮಾನದಲ್ಲಿ ಶರಣರು ಮಾನವ ಜೀವನಕ್ಕೆ ಹೊಸ ಮೌಲ್ಯಗಳನ್ನು ಬರಿಸಿದರು, ಆಗ ಸ್ವತಂತ್ರ ವಿಚಾರ ಮಾಡುವ ಶಕ್ತಿ ಜನರಿಗೆ ದೊರಕಿತು. ಜೊಳ್ಳು ಸಂಪ್ರದಾಯಗಳು ಮರೆಯಾದವು. ದೇವರು ಧರ್ಮದ ನಿಜವಾದ ಸ್ವರೂಪವನ್ನು ಶರಣರು ಜನರ ಮುಂದಿಟ್ಟರು. ಸ್ವರ್ಗ, ನರಕ, ಕರ್ಮ, ಪುಣ್ಯ, ಪಾಪ, ಕೈಲಾಸ, ವೈಕುಂಠ ಮುಂತಾದವುಗಳ ಅಸಂಗತ ಕಲ್ಪನೆಗೆ ಶರಣರು ತೆರೆ ಎಳೆದರು. ಜನರಲ್ಲಿ ಹೊಸ ಶಕ್ತಿ ಸಂಚಾರವಾಯಿತು. ಹೊಸ ನಿಟ್ಟಿನಿಂದ ಅವರು ಚಿಂತನೆಗೈಯ ತೊಡಗಿದರು. ಅವರ ಚಿಂತನೆಯ ಫಲವೆಂಬಂತೆ ವಚನಗಳು ಮೂಡಿ ಬಂದವು. ಆ ವಚನಗಳಲ್ಲಿ ಮನುಷ್ಯ ಸಮರ್ಥವಾಗಿ ಬದುಕುವ ಸ್ಪಷ್ಟವಾದ ಚಿತ್ರಗಳಿವೆ. ಅಂಥ ಸ್ಪಷ್ಟ ಚಿತ್ರಗಳನ್ನು ಕೊಡುವ ವಚನಗಳಲ್ಲಿ ಬಸವಣ್ಣನವರ ಒಂದು ವಚನ ಅತ್ಯಂತ ಮಹತ್ವವುಳ್ಳದಾಗಿದೆ, ಆ ವಚನ ಹೀಗಿದೆ :

ಸುಖಬಂದರೆ ಪುಣ್ಯದ ಫಲವೆನ್ನೆನು,
ದುಃಖ ಬಂದರೆ ಪಾಪದ ಫಲವೆನ್ನೆನು,
ನೀ ಮಾಡಿದೊಡಾಯಿತ್ತೆಂದೆನ್ನೆನು,
ಕರ್ಮಕ್ಕೆ ಕರ್ತೃವೆ ಕಡೆಯೆಂದೆನ್ನೆನು
ಉದಾಸೀನವಿಡಿದು ಶರಣೆನ್ನೆನು,
ಕೂಡಲಸಂಗಮದೇವಾ, ನೀ ಮಾಡಿದುಪದೇಶವು ಎನಗೀ ವರಿಯಲಿ:
ಸಂಸಾರವ ಸವೆಯೆ ಬಳಸುವೆನು.[1]

ಇಲ್ಲಿ ಚಿತ್ರಿತವಾದುದು ನಿಜವಾದ ಜೀವನ; ಮಾನವ ಹೀಗೆ ಬದುಕಬೇಕು. ಆದರೆ ಇಲ್ಲಿಯ ಗಟ್ಟತನ ಶರಣ ಜೀವನಕ್ಕೇನೇ ಸಾಧ್ಯವೇನೋ ಎನಿಸುತ್ತದೆ, ಹಾಗೇನೂ ಇಲ್ಲ. ಒಬ್ಬ ಸಾಮಾನ್ಯ ವ್ಯಕ್ತಿಯೂ ಈ ಜೀವನ ಬದುಕಬಲ್ಲ. ಇಷ್ಟೇ ಅವನು ಪೂರ್ವಾಶ್ರಮಗಳನ್ನು ಕಳಚಿಕೊಂಡು ಸ್ವತಂತ್ರ ವಿಚಾರದ ನೆಲೆಗಟ್ಟಿನ ಮೇಲೆ ನಿಲ್ಲಬೇಕು; ಪ್ರತಿಯೊಂದನ್ನು ಪರಾಮರ್ಶಿಸಿ ಒಪ್ಪುವ ಮನೋಭಾವವುಳ್ಳವನಾಗಿರಬೇಕು. ಶರಣರ ‘ದಾರಿ’ಯಲ್ಲಿ ಬಂದರೆ ಇದೆಲ್ಲ ಸುಲಭ ಸಾಧ್ಯವಾಗುತ್ತದೆ.

‘ಪುಣ್ಯಪಾಪ’ – ಈ ವಿಚಾರಗಳು ಮನುಷ್ಯನನ್ನು ಬಹಳ ಗೊಂದಲಕ್ಕೀಡು ಮಾಡಿವೆ. ಇವುಗಳ ಹಿಂದೆ ಕರ್ಮ ಸಿದ್ಧಾಂತವೊಂದು ಭೂತಾಕಾರವಾಗಿ ನಿಂತಿದೆ. ಹೀಗೆ ಮಾಡಿದರೆ ಹೀಗೆ, ಹಾಗೆ ಮಾಡಿದರೆ ಹಾಗೆ ಇದು ಹಿಂದಿನ ಜನ್ಮದ ಫಲ ಎಂಬ ವಿಚಾರ ದಾರಿತಪ್ಪಿಸುತ್ತದೆ. ನಿಮಿಷ ನಿಮಿಷಕ್ಕೆ ಈ ಪುಣ್ಯ – ಪಾಪಗಳು ಕಣ್ಮುಂದೆ ಸುಳಿದು ಭಯವನ್ನು ಹುಟ್ಟಿಸುತ್ತವೆ; ಸ್ವತಂತ್ರವಾಗಿ ಬದುಕಲು ಇವು ಆಸ್ಪದ ಕೊಡುವುದೇ ಇಲ್ಲ. ನಮ್ಮ ಎಲ್ಲ ಕೃತ್ಯಗಳೂ ಇವುಗಳ ಚಿಕ್ಕ ರಂಧ್ರಗಳಲ್ಲಿ ಹಾದು ಹೋಗಲೇ ಬೇಕು. ಹೀಗೆ ಹೀಗೆ ಮಾಡು ಪುಣ್ಯ ಬರುತ್ತದೆ ಎಂದು ಕರ್ಮಗಳನ್ನು ಜನರ ಮೇಲೆ ಹೇರುವ ಸಂಪ್ರದಾಯ ಎಂದಿನಿಂದಲೂ ಇದೆ. ಹೀಗೆ ಮಾಡದಿದ್ದರೆ ಪಾಪ ಬರುವುದು ಖಂಡಿತ ಎಂಬ ಕತ್ತಿ ಆವಾಗಲೂ ತಲೆಯ ಮೇಲೆ ಅಲುಗಾಡುತ್ತಿರುತ್ತದೆ. ಆದರೆ ಈ ಪುಣ್ಯ ಪಾಪಗಳು ನಿಜವಾಗಿಯೂ ಏನು? ‘ಪುಣ್ಯಪಾಪಂಗಳೆಂಬವು ತಮ್ಮ ಇಷ್ಟವು ಕಂಡಿರೊ, ಅಯ್ಯಾ ಎಂದೆಡೆ ಸ್ವರ್ಗ ಎಲ್ಲವೊ ಎಂದೆಡೆ ನರಕ.’[2] “ಮನಸಿನ ಕಾರ್ಯವೇ ಪುಣ್ಯ ಪಾಪ ನೋಡಯ್ಯಾ…”[3] ಎಂಬುದು ಶರಣರ ವಾಣಿ. ಮಾಡಿ ನೀಡಿ ಪುಣ್ಯಗಳಿಸುತ್ತೇನೆಂಬುದು ಹುಸಿ. “ಮಣ್ಣು ಕೊಟ್ಟ ಪುಣ್ಯವ ಪಡೆದನೆಂಬವನ ಭಾಷೆ ಹೊಲ್ಲ ಹೊಲ್ಲ. ……ಜ್ಯೋತಿಯ ಬೆಳಗಿ ಪಾಪವ ಕಳೆವೆನೆಂಬವರ ಭಾಷೆ ಹೊಲ್ಲ ಹೊಲ್ಲ…”[4] ಎನ್ನುತ್ತಾರೆ ಸಿದ್ಧರಾಮದೇವರು. ಅವರ ಇನ್ನೊಂದು ವಚನದಲ್ಲಿ ಹೀಗೆ ಹೇಳುತ್ತಾರೆ: “ಸುಖಕ್ಕೆ ದೈವವೆಂದು, ದುಃಖಕ್ಕೆ ವಿಧಿಲಿಪಿಯೆಂದು, ಸುಖಕ್ಕೆ ಪುಣ್ಯವೆಂದು; ದುಃಖಕ್ಕೆ ಪ್ರಾರಬ್ಧವೆಂದು ನುಡಿವರಯ್ಯ ಸಿದ್ಧಾಂತಿಗಳು. ಸುಖವೇ ದೈವವೆನಲಾಗಿ ಮಾಡುವ ಕ್ರಿಯೆಯಲರಿಯಬಂದಿತು. ಸುಖವು ದೈವವಲ್ಲ; ದವವದು ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಕೂಡುವ ಕೂಟವು.”[5]

ಪುಣ್ಯಪಾಪದ, ಸುಖದುಃಖದ ತಿಳವಳಿಕೆ ಹೀಗಿರಲು ಕರ್ಮಫಲದಿಂದ ಪುಣ್ಯ ಪಾಪ, ಸುಖದುಃಖ ಎಂದು ಹೇಳಿ, ಆ ಕರ್ಮಫಲವನ್ನು ಇಲ್ಲದಂತೆ ಮಾಡುತ್ತಿವೆ. ದುಃಖದೂರ ಮಾಡುತ್ತಿವೆ, ಪುಣ್ಯವನ್ನು ಬರಿಸುತ್ತೇವೆ ಎಂದು ಶೋಷಿಸುವ ಅನೇಕ ಉಪಾಯಗಳನ್ನು ಜನರ ಮುಂದಿಟ್ಟು ಹೆಜ್ಜೆ ಹೆಜ್ಜೆಗೆ ಅವರನ್ನು ಭಯಗೊಳ್ಳುವಂತೆ ಮಾಡಲಾಗಿದೆ.

ಪುಣ್ಯ – ಪಾಪಗಳ, ಸರಿಯಾದ ಕಲ್ಪನೆಯಿದ್ದವನು ಜೀವನ ಹೇಗೆ ಬರುವುದೋ ಹಾಗೆಯೇ ಅದನ್ನು ಸ್ವೀಕರಿಸುತ್ತಾನೆ. ಇದು ಸುಖ, ಪುಣ್ಯದ ಫಲ ಎಂದು ಹಿಗ್ಗುವುದಿಲ್ಲ. ಇದು ದುಃಖ ಪಾಪದ ಫಲ ಎಂದು ಆಳುವುದಿಲ್ಲ. ಧೀರನಾಗಿ ಜೀವನವನ್ನು ಇದ್ದುದಿದ್ದಂತೆ ಸ್ವೀಕರಿಸಿ ತನ್ನ ಸದಾಚಾರದಿಂದ, ಸುವಿಚಾರದಿಂದ ಅದನ್ನು ಸಿಂಗರಿಸುತ್ತಾನೆ.

ಭಾರತೀಯ ಸಂಪ್ರದಾಯಗಳು ದೈವವಾದವನ್ನು ಹರಿಡ ಜನರ ಗಂಡಸುತನವನ್ನೇ ಕಳೆದುಬಿಟ್ಟಿವೆ. ಎಲ್ಲವನ್ನೂ ದೈವದ ಹೆಸರಿಗೆ ಸೇರಿಸುವದು ಏನಾದರೂ ದೇವರಿಯಿಂದಲೇ ಆಯಿತು ಎನ್ನುವ ಭಾವನೆ ಶುದ್ಧ ಅಪಾಯದ್ದು; ಮನುಷ್ಯನ ಶಕ್ತಿ ಸಾಮರ್ಥ್ಯಕ್ಕೆ ಇಲ್ಲಿ ಕೊಡಲಿಪೆಟ್ಟು ಬೀಳುತ್ತದೆ. ದೈವವಾದಿ ಎಂದೆಂದಿಗೂ ಹೇಡಿ; ಅವನು ವೀರನಾಗಿ ಮೆರೆಯಲಾರ; ಜೀವನವನ್ನು ಭೋಗಿಸಲಾರ. ಅವನೇ ನಿಷ್ಕ್ರಿಯ, ನಿರ್ವೀರ್ಯ. “ಕೂಡಲಸಂಗ ಬರೆದ ಬರಹವ ತಪ್ಪಿಸಲಾಗದು” ಎಂಬ ತಿಳುವಳಿಕೆಯಿದೆ. ಆದರೆ ಈ ಮಾತು ಹೇಡಿತನ್‌ಲಕ್ಷಣವಲ್ಲ. ದೇವರು ಸರ್ವಶಕ್ತ, ಸರ್ವಜ್ಞ ನಿಜ. ಆದರೆ ಭಕ್ತ ಕಡಿಮೆ ಏನಲ್ಲ; ದೇವನಲ್ಲಿ ‘ಶಕ್ತಿ’ ಇದ್ದರೆ ಇವನಲ್ಲಿ ‘ಹೋರಾಟ’ವಿದೆ. “ಜಂಬೂದ್ವೀಪ ನವಖಂಡ ಪೃಥ್ವಿಯೊಳಗೆ ಎರಡಾಳಿನ ಭಾಷೆ ಕೇಳಿರಣ್ಣಾ, ಕೊಲುವೆನೆಂಬ ಭಾಷೆ ದೇವನದಾದರೆ’ ಗೆಲುವೆನೆಂಬ ಭಾಷೆ ಭಕ್ತನದು.”[6] ಇಂಥ ‘ಫಲ’ವಿದ್ದವನು ಎಂದೂ “ನೀ ಮಾಡಿದೊಡೆ ಆಯಿತ್ತು” ಎನ್ನನು. ಜೀವನ ಸಹಜ; ಇಲ್ಲಿಯ ಆಗು – ಹೋಗುಗಳು ಸಹಜ, ಕಾಲಕ್ಕೆ ತಕ್ಕಂತೆ ಅವು ನಡೆಯುತ್ತವೆ; ನಡೆಯಲೇಬೇಕು. ಅವನ್ನೆಲ್ಲ ದೇವರಿಗೆ ಆರೋಪಿಸುತ್ತ ಹೋಗುವುದು ಸಲ್ಲ. ಹಾಗೆ ಮಾಡುತ್ತ ಹೋದರೆ ಮನುಷ್ಯ ಸ್ವಂತಿಕೆ ಕಳೆದುಕೊಂಡು ಸಂಪ್ರದಾಯಗಳಿಗೆ ದಾಸನಾಗಿ ಹೇಡಿಯಾಗುತ್ತಾನೆ. ಹೇಡಿಗೆ ದೇವರೆಂದೂ ಒಲಿಯುವುದಿಲ್ಲ. ಸಹಜವಾಗಿ ನಡೆಯುವ ಜೀವನವನ್ನು ಸಹಜವಾಗಿ ಒಪ್ಪಿಕೊಳ್ಳಬೇಕು; ಇಲ್ಲಿ ದೇವರು ಧರ್ಮದ ಮಾತು ಸಲ್ಲ.

ಎಲ್ಲಕ್ಕೂ – ಕರ್ಮಕ್ಕೂ – ದೇವರೇ ಕಡೆ; ಅವನಿಂದಲೇ ಕರ್ಮ ನೀಗುವುದು, ಅವನು ಮಾಡಿದರೆ ಎಲ್ಲ ಆಗುವುದು ಎಂಬುದೂ ಹೇಡಿತನದ ಲಕ್ಷಣ. “ನೀನೊಲಿದರೆ ಕೊರಡು ಕೋನರುವುದಯ್ಯ” ಎಂಬ ಮಾತು ನಿಜ. ಆದರೆ ಆ ಮಾತಿನಲ್ಲಿ ವಿವೇಕವಿದೆ, ಎಚ್ಚರವಿದೆ; ಅದು ಹೇಡಿಯಾಗಿ “ನೀನೇಗತಿ” ಎಂದು ಅಂದ ಮಾತಲ್ಲ. ಭಕ್ತಿಯ ಕಾವಿನಲ್ಲಿ ದೇವರ ಒಲುಮೆ ಅರಳುತ್ತದೆ. ಈ ಭಕ್ತಿಯ ಕಾವು ಇರುವವನು ಎಂದೂ ಕರ್ಮಕ್ಕೆ ಕರ್ತೃವೇ ಕಡೆ ಎನ್ನುವುದಿಲ್ಲ. “ಕರ್ಮ ಫಲಗೂಡಿ ಕೂಡಲಸಂಗಯ್ಯಂಗೆ ಆತ್ಮ ನೈವೇದ್ಯ”[7] ಮಾಡುವ ಭಕ್ತನ ಭಕ್ತಿ ತನ್ನತನ ಇಲ್ಲದ್ದಲ್ಲ. ಆದರೆ ಈ ತನ್ನತನದಲ್ಲೇ ‘ದೇವ’ ಒಡಮೂಡಿ ನಿಲ್ಲುತ್ತಾನೆ; ಈ ತನ್ನತನವೇ ‘ದೇವ’ನಾಗಿ ಅರಳುತ್ತದೆ ಎಂದೂ ಅನ್ನಬಹುದು.

“ಉದಾಸೀನವಿಡಿದು ಶರಣೆನ್ನೆನು” ಎನ್ನುವ ಮಾತು ಎಂದು ಮಾತೆನ್ನಬಹುದೇ? ಬಹಳ ಅರ್ಥ ಅದರಲ್ಲಿ ಹುದುಗಿದೆ. ತಿಳುವಳಿಕೆ, ಎಚ್ಚರಿಕೆ, ಕೆಚ್ಚು, ವಿವೇಕ – ಎಲ್ಲ ಈ ಮಾತಿನಲ್ಲಿ ಸಮಾವೇಶಗೊಂಡಿವೆ; ಅಲ್ಲದೆ ಶರಣನ ಜೀವನದ ನಿಜ ಚಿತ್ರ ಇಲ್ಲಿದೆ.

ಎಲ್ಲವೂ ದೇವರಿಂದಲೇ, ನಮ್ಮ ಕೈಯಲ್ಲೇನಿದೆ, ನಮ್ಮ ಕರ್ಮಕ್ಕೆ ತಕ್ಕ ಫಲ ಮುಮತಾಗಿ ವಿಚಾರವಿದ್ದಾಗ ಏನು ಮಾಡಿದರೆ ಏನಿದೆ? ಅವನು ಮಾಡಿದ್ದೇ ಆಗುವುದಲ್ಲಾ ಎಂಬ ಭಾವ ಮನುಷ್ಯನನ್ನು ಉದಾಸೀನನನ್ನಾಗಿ ಮಾಡುವುದು; ಈ ಔದಾಸಿನ್ಯ ಅವನ ಪತನ. ಉದಾಸೀನದಿಂದ ದೇವರನ್ನು ನೆನೆವುದು ಮಹಾಘಾತುಕ ಕೆಲಸ; ಇಂಥ ಆತ್ಮವಂಚನೆ ಮತ್ತೆಲ್ಲಿಯೂ ಇಲ್ಲ. ಶರಣೆನ್ನದಿದ್ದರೆ ನಡೆಯುವುದಿಲ್ಲವಲ್ಲ, ಯಾಕೆಂದರೆ ಎಲ್ಲವೂ ಅವನ ಕೈಯಲ್ಲಿದೆ! ನಮಗೆ ಶರಣೆನ್ನದೆ ಬೇರೆ ಯಾವ ದಾರಿಯಿದೆ ಎಂಬುದೂ ಉದಾಸೀನವೇ; ಇಂತಹ ಭಾವವಿರುವಲ್ಲಿ ಭಕ್ತಿಯಿಲ್ಲ, ಕಾಯಕವಿಲ್ಲ, ವಿಚಾರವಿಲ್ಲ; ಧೈರ್ಯವಂತೂ ಮೊದಲೇ ಇಲ್ಲ. ಸುಖ ಬಂದರೆ ಪುಣ್ಯದ ಫಲವೆನ್ನದ, ದುಃಖ ಬಂದರೆ ಪಾಪ ಫಲವೆನ್ನದ, ಭಕ್ತಿಯ ಕೂರಲಗನೆತ್ತಿ ಹೋರಾಟಕ್ಕೆ ನಿಂತ ಭಕ್ತ ಶರಣೆನ್ನುತ್ತಾನೆ – ಸಂತೋಷದಿಂದ ; ಉದಾಸೀನದಿಂದಲ್ಲ. ಈ ಭಕ್ತನಿಗೆ ಆಸೆ ಆಮಿಷಗಳಿಲ್ಲ, ದೇವರೇ ಸರ್ವಕ್ಕೆ ಕಡೆ ಎಂಬ ದುರ್ಬಲ ಮನೋಭಾವವಿಲ್ಲ. ಈತನದು ವೀರತನದ ಶರಣು.

ಈ ಉಪದೇಶ ಯಾರು ಮಾಡಿದ್ದು? ದೇವರೇ ಮಾಡಿದ್ದಂತೆ. “ನೀಮಾಡಿದುಪ ದೇಶವು ಎನಗೀಪರಿಯಲಿ” ಎನ್ನುತ್ತಾರೆ ಬಸವಣ್ಣನವರು. ಇಂಥ ಉಪದೇಶ ಮಾಡಿದ ದೇವರು ನಿಜವಾದ ದೇವರು.” ಆವಾಗಲೂ ಲೋಗರಮನೆಯ ಕಾಯ್ದುಕೊಂಡಿಪ್ಪ ದೈವದಂತಲ್ಲ ಈ ದೈವ. “ಹೋಗೆಂದರು ಹೋಗದ ಕರಕನಿಷ್ಠದ ದೈವ” ವಿದಲ್ಲ. ಭಕ್ತರನಾಶ್ರಯಿಸಿಕೊಂಡು ಅವರನ್ನು ಪೀಡಿಸುವ, ಶೋಷಿಸುವ, ಶೋಷಕರ ಕೈಗೊಂಬೆಯಾಗಿರುವ ದೈವವಿದಲ್ಲ. ಭಕ್ತನಿಗೆ ಸ್ವಂತಿಕೆಯನ್ನಿತ್ತು, ವೀರತನದಿಂದ ಅವನನ್ನು ಹೋರಾಟಕ್ಕೆ ಹಚ್ಚುವ ದೈವವಿದು.

ಈ ಉಪದೇಶದಂತೆ “ಸಂಸಾರ ಸವೆಯೆ ಬಳಸುವೆನು” ಎನ್ನುತ್ತಾರೆ ಬಸವಣ್ಣನವರು. ಅವರ ಬಳಕೆಯಿಂದ ಸಂಸಾರ ಸವೆಯುತ್ತದೆ; ಕೊನೆಗದು ಇಲ್ಲವಾಗುತ್ತದೆ; ಸಾಮರಸ್ಯವಾಗುತ್ತದೆ.

[1] ಶಿ.ಶಿ. ಬಸವನಾಳ : ಬಸವಣ್ಣನವರ ವಚನಗಳು, ವಚನ ಸಂಖ್ಯೆ ೩೯೪.

[2] ಶಿ. ಶಿ. ಬಸವನಾಳ : ಬಸವಣ್ಣನವರ ವಚನಗಳು, ವಚನ ಸಂಖ್ಯೆ ೨೪೦.

[3] ಹಳಕಟ್ಟಿ : ವಚನಶಾಸ್ತ್ರಸಾರ ಭಾಗ ೩, ಪುಟ ೬, ವಚನ ೨೭.

[4] ಹಳಕಟ್ಟಿ : ವಚನಶಾಸ್ತ್ರಸಾರ ಭಾಗ ೩, ಪುಟ ೬, ವಚನ ೨೭.

[5] ಹಳಕಟ್ಟಿ : ವಚನಶಾಸ್ತ್ರಸಾರ ಭಾಗ ೩, ಪುಟ ೭, ವಚನ ೩೦.

[6] ಶಿ. ಶಿ. ಬಸವನಾಳ : ಬಸವಣ್ಣನವರ ವಚನಗಳು, ವಚನ ಸಂಖ್ಯೆ ೬೭೭.

[7] ಶಿ. ಶಿ. ಬಸವನಾಳ : ಬಸವಣ್ಣನವರ ವಚನಗಳು, ವಚನ ಸಂಖ್ಯೆ ೭೭೩.