ಹರಿಹರ ಕ್ರಾಂತಿಕವಿ; ಕನ್ನಡ ಸಾಹಿತ್ಯದ ಮಾರ್ಗವನ್ನೇ ಬದಲಿಸಿದ ಯುಗಪುರುಷ ಹಳೆಯದನ್ನೂ, ಉಪಯುಕ್ತವಲ್ಲದುದನ್ನೂ ಪ್ರತಿಭಟಿಸಿ, ಹೊಸತನ್ನೂ ಸರ್ವಜನೋಪಯೋಗಿಯಾದುದನ್ನೂ ನಿರ್ಮಿಸಿದ ಎದೆಗಾರ. “ಪರಂಪರೆಯನ್ನು ವಿರೋಧಿಸುವವರಿಗೆ, ನೂತನ ಮಾರ್ಗ ಹುಡುಕುವವರಿಗೆಲ್ಲ ಹರಿಹರನು ಶಿಕ್ಷಾಗುರುವಾಗಿ ನಿಂತಿದ್ದಾನೆ. ಹೀಗಾಗುವುದಕ್ಕೆ ಕಾರಣಗಳು ಎರಡು: ಒಂದು ಆತನ ಜೀವನ ದೃಷ್ಟಿ ಇನ್ನೊಂದು ಆತನ ಕಾವ್ಯಸೃಷ್ಟಿ. ಜೀವನದಲ್ಲಿಯೂ ಕಾವ್ಯದಲ್ಲಿಯೂ ಅವನು ಹೊಸಮಾರ್ಗವನ್ನು ತುಳಿದನು. ಅಲ್ಲಿ ಯಾರೊಡನೆಯೂ ಅವನು ಒಡಂಬಡಿಕೆಯನ್ನು ಮಾಡಿಕೊಳ್ಳಲಿಲ್ಲ.”[1]

ಛಂದಸ್ಸು, ವ್ಯಾಕರಣ, ವಸ್ತು, ಪ್ರಕಾರ, ಶೈಲಿ – ಮುಂತಾಗಿ ಹಲವು ವಿನೂತನಗಳನ್ನು ಸಾಹಿತ್ಯದಲ್ಲಿ ತಂದ ಹರಿಹರ ಮಹಾಕವಿ ಗದ್ಯದ ಬಳಕೆಯಲ್ಲಿಯೂ ವಿನೂತನತೆಯನ್ನು ಮೆರೆದಿದ್ದಾನೆ. ರಗಳೆಗೆ ವಿಶೇಷ ಸ್ಥಾನ ಕೊಟ್ಟಂತೆ ಆತ ಗದ್ಯಕ್ಕೂ ತನ್ನ ಕಾವ್ಯಗಳಲ್ಲಿ ವಿಶೇಷ ಸ್ಥಾನವನ್ನು ಕೊಟ್ಟಿದ್ದಾನೆ. ಹಾಗೆ ನೋಡಿದರೆ ಹರಿಹರನ ವೈಶಿಷ್ಟ್ಯ, ಆತನ ಕಾವ್ಯದ ಮಹೋಜ್ವಲತೆ ಆತನ ಗದ್ಯದಲ್ಲಿಯೇ ಹೆಚ್ಚು ಕಂಡುಬರುತ್ತವೆ.

ಹರಿಹರತನ ಎನ್ನುವುದು ಎರಡು ಕವಲುಗಳಲ್ಲಿ ಮಿಂಚಿದೆ. ಒಂದು ರಗಳೆಯಲ್ಲಿ, ಇನ್ನೊಂದು ಗದ್ಯದಲ್ಲಿ. ಇದನ್ನು ಇನ್ನೂ ಬಗೆದು ನೋಡಿದರೆ ‘ಹರಿಹರತನ’ ಗದ್ಯದಲ್ಲಿ ಮಡುಗಟ್ಟಿದೆ ಎಂದು ಕಾಣದಿರದು.

ಹರಿಹರ ಗದ್ಯವನ್ನು ಇಷ್ಟೇಕೆ ಹಚ್ಚಿಕೊಂಡ? ತನ್ನ ಕಾವ್ಯಶಕ್ತಿಯನ್ನು ಆಂತರ್ಯದ ಬೆಳಕನ್ನು ಅದಕ್ಕೇಕೆ ಧಾರೆಯೆರೆದ? ಹೀಗೆ ಕೇಳುವಾಗ ರಗಳೆಯನ್ನು ಆತ ಕಡೆಗಣಿಸಿದ್ದಾನೆಂದಲ್ಲ; ಅದರಲ್ಲಿ ಆತ ಸೀಮಾಅಪುರುಷ. ಆದರೆ ಗದ್ಯವೆಂದರೆ ಆತನ ಮನಸ್ಸು ಕುಣಿಯುತ್ತದೆ. ಇದಕ್ಕೆ ಕಾರಣ ಹುಡುವುದು ಅಸಾಧ್ಯವೇನೂ ಅಲ್ಲ.

ಆತನ ಕಾವ್ಯ ಜನರ ಕಾವ್ಯ; ಸಮಸ್ತ ಜನರನ್ನು ಮುಟ್ಟಿ ತಟ್ಟಿ ಎಚ್ಚರಿಸುವ ಕಾವ್ಯ. ಅಂಥ ಕಾವ್ಯ ಸುಲಭ ಧಾಟಿಯಲ್ಲಿರಬೇಕು; ಅದರಲ್ಲಿ ತಾನು ಹೇಳುವ ಶಿವಭಕ್ತರ ಚರಿತ್ರೆಗಳು ತಡೆಯಿಲ್ಲದೇ ಸಾಗಬೇಕು; ಅವು ನೂತನ ಮಾರ್ಗವನ್ನೂ ಸೃಷ್ಟಿಸಬೇಕು. ಈ ದೃಷ್ಟಿಯಿಂದ ರಗಳೆಯೇ ಅದಕ್ಕೆ ತಕ್ಕುದೆಂದು ಆತ ಭಾವಿಸಿದ. ಅಲ್ಲಿಯವರೆಗೆ ಕೀಳುದೊತ್ತಿನಂತೆ ಚಂಪೂ ಕಾವ್ಯಗಳಲ್ಲಿ ಬದುಕಿದ್ದ ರಗಳೆಗೆ ಮಹಾರಾಣಿಯ ಪಟ್ಟ ದೊರಕಿತು. ಶಿವಭಕ್ತಿಯನ್ನು, ಶರಣರ ನಿರ್ಮಲ ಚರಿತ್ರೆಗಳನ್ನು ಬಿತ್ತರಿಸುವ ಮಹಾಮಣಿಹ ಅದಕ್ಕೆ ದಕ್ಕಿತು.

ಶಿವಶರಣರ ಮಹಾ ಆಂದೋಲನಕ್ಕೆ ತೀರ ಹತ್ತಿರವಾಗಿ ಬದುಕಿದವನು ಹರಿಹರ; ಅವರ ಪ್ರಭಾವದಲ್ಲಿ ಸಂಪೂರ್ಣ ಮಿಂದವ. ಅವರ ಕ್ರಾಂತಿಯನ್ನು ಮುಂದುವರಿಸಲು ತನ್ನ ಜೀವಿತವನ್ನು ಮೀಸಲಾಗಿಟ್ಟವ. ಶಿವಶರಣರಜ ಮಹಾಕ್ರಾಂತಿಯಿಂದ ಸಾಮಾಜಿಕ, ಧಾರ್ಮಿಕ, ಆರ್ಥಿಕ ರಂಗಗಳಲ್ಲಿ ಬದಲಾವಣೆ ಸಾಹಿತ್ಯದಲ್ಲಿಯೂ ಒಂದು ಅಪೂರ್ವ ಬದಲಾವಣೆ ಮೈದೋರಿತು. ಆ ಬದಲಾವಣೆ: ವಚನಗಳ ಸೃಷ್ಟಿ. ಆಡುಮಾತಿಗೆ ಹತ್ತಿರವಾದ ಆ ವಚನಗಳ ಭಾಷೆ, ಗದ್ಯ, ಲಯ, ವಿನ್ಯಾಸ, ಅವುಗಳಲ್ಲಿ ಮೈದೋರಿದ ನಿತ್ಯ ಜೀವನದ ದೃಷ್ಟಾಂತ, ರೂಪಕ, ದೇಸಿ ಮುಂತಾದವು ಸಹಜ ಕ್ರಾಂತಿಕಾರಿಯಾದ, ಹೊಸಜೀವನದ ತುಡಿತವುಳ್ಳ ಹರಿಹರನಿಗೆ ಆಪ್ಯಾಯವೆನಿಸಿದವು; ಪ್ರೇರಣೆಯಾದವು. ಅಂತೆಯೇ ಆತ ಗದ್ಯ ಸೃಷ್ಟಿಗೆ ಮನಸೋತು ಕೈಹಾಕಿದ. ಹಾಗಾದರೆ ಕೇವಲ ಗದ್ಯದಲ್ಲಿಯೇ ಆತ ಕಾವ್ಯ ಬರೆಯಬಹುದಿತ್ತಲ್ಲ ಎಂಬ ಪ್ರಶ್ನೆ ಏಳುವುದು ಸಹಜ. ಶಿವಶರಣರಿಂದ ಪ್ರಭಾವಿತನಾದರೂ ಅವರ ಗದ್ಯಕ್ಕೆ ಮನಸೋತರೂ ಆತ ‘ತನ್ನತನ’ವೆಂಬುದೊಂದು ಉಳ್ಳವನಾಗಿದ್ದ. ಆ ‘ತನ್ನತನ’ ಆತನಿಂದ ಒಂದು ಹೊಸಕಾವ್ಯ ಮಾರ್ಗವನ್ನು ಸೃಷ್ಟಿಸಿತು. ಇಲ್ಲಿ ಡಾಕ್ಟರ್‌ ಹಿರೇಮಲ್ಲೂರು ಈಶ್ವರನ್ ಅವರು ಹೇಳಿದ ಈ ಮಾತುಗಳನ್ನು ನೆನೆಯಬಹುದು: “ಚಂಪೂ ಕೃತಿಗಳಲ್ಲಿ ಹಿಂದಿನವರು ಗದ್ಯ ಪದ್ಯಗಳೆರಡನ್ನೂ ಬೆರೆಸಿದರು. ಹರಿಹರನು ರಗಟಾ ಕಾವ್ಯಗಳಲ್ಲಿ ಆವರಂತೆಯೇ ಗದ್ಯ ಪದ್ಯಗಳನ್ನು ಬೆರೆಸಿ ‘ರಗಳೆಯ ಕಾವ್ಯಗಳು ಜನಸಾಮಾನ್ಯರ ಚಂಪೂ’ ಎಂದು ಉದ್ಘೋಷಿಸಿದನು. “ಹೀಗೆ ಬಿತ್ತರದ ಕನ್ನಡ ಕಾವ್ಯಪ್ರಪಂಚದಲ್ಲಿ ಆದಿ ಪಂಪನಿಂದ ಮೊದಲುಗೊಂಡು ಪರಂಪರಾನುಗತವಾಗಿ ಬಂದಿದ್ದ ಕನ್ನಡ ಕಾವ್ಯ ಮಾರ್ಗವನ್ನು ತಡೆಗಟ್ಟಿ ‘ಚಂಪೂ ಕೃತಿ ರಚನೆಯೇ ಕೃತಿರಚನೆ’ ಎಂಬ ಅಭಿಪ್ರಾಯವನ್ನು ಅಷ್ಟಕ್ಕೇ ನಿಲ್ಲಿಸಿ ಗದ್ಯ ಪದ್ಯ ಸಮ್ಮಿಶ್ರವಾದ ರಗಳೆಯ ಕಾವ್ಯಗಳನ್ನು ಬರೆದದ್ದು ಎರಡನೆಯ ಮೈಲಿಗಲ್ಲು”[2]

ಹರಿಹರನಿಗಿಂತ ಹಿಂದೆ ಒಂದೆರಡು ಗದ್ಯಕೃತಿಗು ಇದ್ದುವು. ಶಾಸನಗಳಲ್ಲಿ ಗದ್ಯದ ಬಳಕೆ ಇತ್ತು. ಚಂಪೂಕಾವ್ಯಗಳಲ್ಲಿ ಗದ್ಯ ಇದ್ದೇ ಇತ್ತು. ಆದರೆ ಪದ್ಯಕ್ಕಿದ್ದ ಬೆಲೆ ಗದ್ಯಕ್ಕಿರಲಿಲ್ಲ. ಗದ್ಯವೇ ಕವಿಯ ಒರೆಗಲ್ಲು ಎಂಬ ಸೂಕ್ತಿ ಇದ್ದರೂ ಕವಿಗಳು ಪದ್ಯಗಳಲ್ಲಿಯೇ ಕಾವ್ಯಗಳನ್ನು ಬರೆದು, ಗದ್ಯವನ್ನು ತಮ್ಮ ಕಾವ್ಯಗಳಲ್ಲಿ ಕೀಳುದೃಷ್ಟಿಯಿಂದ ಅಲ್ಲದಿದ್ದರೂ ಒಲ್ಲದ ಮನಸ್ಸಿನಿಂದ ಬಳಸಿಕೊಂಡರು ಎನ್ನಬಹುದು. ಚಂಪೂಕಾವ್ಯಗಳಲ್ಲಿ ಬಳಕೆಯಾಗುತ್ತಿದ್ದ ಗದ್ಯ ಇಂಥದೇ. ಮುಂದಿನ ಸಂಗತಿಗೆ ಸಂಬಂಧವನ್ನು ಕಲ್ಪಿಸಲೋ, ತಮ್ಮ ಪಾಂಡಿತ್ಯವನ್ನು ಪ್ರದರ್ಶನ ಮಾಡಲೋ, ವರ್ಣನೆಗೋ ಇಂಥದೇ ಇನ್ನಾವುದೋ ಮಹತ್ವವಿಲ್ಲದುದಕ್ಕೆ ಚಂಪೂಕಾರರು ಗದ್ಯವನ್ನು ಬಳಸಿದರು. ಆದರೆ ಇದಕ್ಕೆ ಪಂಪ ಅಪವಾದವಾಗಿದ್ದಾನೆ. ಆತ ಗದ್ಯವನ್ನು ಬಹುಸಮರ್ಥವಾಗಿ, ಔಚಿತ್ಯಪೂರ್ಣವಾಗಿ ಉಪಯೋಗಿಸಿದ ಅದಕ್ಕೆ ಒಂದು ಪ್ರೌಢತ್ವವನ್ನು ವ್ಯಂಜನತ್ವವನ್ನೂ ತಂದುಕೊಟ್ಟ. ಆದರೆ ಮುಂಬಂದ ಕವಿಗಳು ಆತನ ಮಾರ್ಗವನ್ನು ಗದ್ಯದ ದೃಷ್ಟಿಯಿಂದ ಅನುಸರಿಸಲಿಲ್ಲ. ಆದುದರಿಂದ ಚಂಪೂಕಾವ್ಯಗಳ ಗದ್ಯ ಔಚಿತ್ಯ ಕಳೆದುಕೊಂಡಿತು; ಬಡವಾಯಿತು.

ಚಂಪೂಕವಿಗಳಲ್ಲದೆ ಇಡಿಯ ಕೃತಿಗಳನ್ನೇ ಗದ್ಯದಲ್ಲಿ ಬರೆದವರು ಇಬ್ಬರು. ಒಬ್ಬ ವಡ್ಡಾರಾಧನೆಯ ಶಿವಕೋಟ್ಯಾಚಾರ್ಯ; ಇನ್ನೊಬ್ಬ ತ್ರಿಷಷ್ಟಿಶಲಾಕಾಪುರುಷದ ಕರ್ತೃ ಚಾವುಂಡರಾಯ. ವಡ್ಡಾರಾಧನೆಯ ಕರ್ತೃ ಪಂಪನಿಗಿಂತ ಹಿಂದಿನವರು.[3] ಶಿವಕೋಟ್ಯಾಚಾರ್ಯನ ವಡ್ಡಾರಾಧನೆ ಕನ್ನಡದ ಮೊದಲ ಗದ್ಯಕೃತಿ;[4] ಒಂದು ಉತ್ತಮ ಕೃತಿ. ಸತ್ವಯುತ ದೇಶಿಯಿಂದ ಕೂಡಿದ ಭಾಷೆ ಅದರದು; ಬಹುಕಲಾವಂತಿಕೆಯ ಕಥೆಗಾರಿಕೆ ಶಿವಕೋಟ್ಯಾಚಾರ‍್ಯನದು.

ಚಾವುಂಡರಾಯ ಪುರಾಣ ಇನ್ನೊಂದು ಗದ್ಯ ಕೃತಿ. ಇದು ಪಂಪನ ತರುವಾಯ ಬಂದುದು. ಇದು ವಡ್ಡಾರಾಧನೆಯಷ್ಟು ಉತ್ತಮ ಕೃತಿಯಲ್ಲ. ಆ ನಯಗಾರಿಕೆ, ಆ ಕಲಾವಂತಿಕೆ, ಆ ಭಾಷೆಯ ಮಾರ್ದವತೆ, ಸೊಗಸು ಇದಕ್ಕೆ ಇಲ್ಲವಾದರೂ ಇದಕ್ಕೆ ಇದರದೇ ಆದ ಸ್ಥಾನವಿದೆ. ಇದು ಮುಖ್ಯವಾಗಿ ಧರ್ಮವನ್ನು ಶಾಸ್ತ್ರವನ್ನು ಹೇಳುವ ಕೃತಿ.

ಹರಿಹರನು ಹಿಂದಿನ ಈ ಗದ್ಯ ಕಾವ್ಯಗಳನ್ನು ನೋಡಿರಬೇಕು. ಚಂಪೂ ಕಾವ್ಯಗಳಲ್ಲಿ ಅಷ್ಟೊತ್ತಿಗೆ ನಿಸ್ಸತ್ವವಾಗಿದ್ದ ಗದ್ಯ ಆತನಿಗೆ ತಿಳಿದ ವಿಷಯವೇ ಆಗಿತ್ತು.

ಹಿಂದಿನ ಗದ್ಯ ಕೃತಿಗಳೂ ಚಂಪೂ ಕಾವ್ಯಗಳೂ ಜನಸಂಪರ್ಕದಿಂದ ಬಹುದೂರ ಉಳಿದಿದ್ದುವು. ಆ ಕೃತಿಗಳು ಜನಸಾಮಾನ್ಯರ ಆಸೆ ಆಕಾಂಕ್ಷೆಗಳನ್ನು ಆದರಿಸಲಿಲ್ಲ; ಅಂತೆಯೇ ಆ ಕೃತಿಗಳ ವಸ್ತು ಪೌರಾಣಿಕವಾಗಿತ್ತು, ದೇವಲೋಕವಾಗಿತ್ತು; ಇಲ್ಲವೇ ರಾಜರಾಣಿಯರ ವೈಭವವಿಲಾಸವಾಗಿತ್ತು. ಈ ಕವಿಗಳಿಗೆ ತಮ್ಮ ಕೃತಿಗಳಲ್ಲಿ ತಮ್ಮ ಸ್ವಂತ ಅನಿಸಿಕೆಗಳನ್ನು, ಅಭಿಪ್ರಾಯಗಳನ್ನು ಹೇಳಲೂ ಅವಕಾಶವಿರಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ಶಿವಶರಣರು ಸಾಮಾಜಿಕ ಆಂದೋಳನ ಹಾಡಿ ಸಾಹಿತ್ಯವನ್ನು ಜನರ ಹತ್ತಿರ ತಂದರು; ಸಮಾಜದ ಸಮಸ್ತ ಮನಸ್ಸನ್ನು ಎಚ್ಚರಿಸಿದರು. ಶೋಷಣೆಗೊಳಗಾದವರಲ್ಲಿ ಪ್ರತಿಭಟನಾಶಕ್ತಿಯನ್ನು ತುಂಬಿದರು. ಆಗ ಎಚ್ಚೆತ್ತ ಸಮಸ್ತ ಜನರ ಮನಸ್ಸಿನ ಅಭಿವ್ಯಕ್ತಿಗೆ ಒಂದು ಹೊಸಭಾಷೆ ಬೇಕಾಗಿತ್ತು. ಆ ಆಂದೋಲನದಲ್ಲಿ ಸಮಸ್ತರ ಅಭಿವ್ಯಕ್ತಿಯ ಮಾಧ್ಯಮವಾಗಿ ಆಡುಮಾತಿನ ಎಲ್ಲ ಶಕ್ತಿಯನ್ನೊಳಗೊಂಡ ವಚನಗಳು ಸೃಷ್ಟಿಯಾದವು. ಹಿಂದಿನ ಗದ್ಯಕೃತಿಗಳಿಗೂ ಇವುಗಳಿಗೂ ಯಾವ ದೃಷ್ಟಿಯಿಂದಲೂ ಸಂಬಂಧವಿಲ್ಲ; ಶರಣರು ಯಾರ ಅನುಕರಣೆಯನ್ನೂ ಮಾಡಲಿಲ್ಲ.

ಶರಣರ ವಚನಗಳ ಈ ಗದ್ಯ ನಿಜವಾಗಿ ಹರಿಹರನ ಮೇಲೆ ಪ್ರಭಾವಮಾಡಿದ್ದು; ಆತ ಅವುಗಳನ್ನೇ ಮಾದರಿಯಾಗಿಟ್ಟುಕೊಂಡನೆಂದು ಹೇಳಲು ಅಡ್ಡಿಯಿಲ್ಲ. ತನ್ನ ಕಾವ್ಯಗಳಲ್ಲಿ ಗದ್ಯ ಮತ್ತು ಪದ್ಯ ಎರಡರಲ್ಲೂ ಆತ ಶರಣರ ವಚನಗಳನ್ನು ಅನುವಾದಿಸುವುದು, ಕೆಲವು ಕಡೆ ವಚನಗಳ ಸಾಲುಗಳನ್ನು ಇದ್ದಕ್ಕಿದ್ದಂತೆಯೇ ಬಳಸಿಕೊಳ್ಳುವುದು ಇದಕ್ಕೆ ಒಳ್ಳೆಯ ನಿದರ್ಶನ.[5]

ಶರಣರ ವಚನಗಳಲ್ಲಿಯ ಮೊನಚು, ಸೊಗಡು, ಸತ್ವ, ನೇರತನ, ಅವರು ಜೀವನದಿಂದ ಎತ್ತಿಕೊಳ್ಳುವ ದೃಷ್ಟಾಂತ, ರೂಪಕ, ಉಪಮೆ ಮುಂತಾದವುಗಳನ್ನು ಹರಿಹರ ಅನುಕರಣೆ ಮಾಡಿದ. ಆದರೆ ಭಾಷೆಯ ದೃಷ್ಟಿಯಿಂದ ತನ್ನದೇ ಆದ ದಾರಿ ನಿರ್ಮಿಸಿಕೊಂಡ. ಹರಿಹರ ಮೂಲತಃ ಕವಿ; ವಚನಕಾರರು ಮೂಲತಃ ಸಮಾಜ ಸುಧಾರಕರು. ಅವರು ನಮಗೆ ತಕ್ಕಂತೆ ಭಾಷೆ ನಿರ್ಮಿಸಿಕೊಂಡರೆ ಹರಿಹರ ತನ್ನ ಕಾವ್ಯಕ್ಕೆ ತಕ್ಕಂತಹ ಭಾಷೆಯನ್ನು ನಿರ್ಮಿಸಿಕೊಂಡ. ವಚನಗಳಿಗಿಂತಲೂ ಹರಿಹರನದು ತುಸು ಬಿಗಿಯಾದ ಭಾಷೆ. ಆದರೆ ಜನರಿಗೆ ಸುಲಭವಾಗಿ ಅರ್ಥವಾಗುವ ಭಾಷೆ. ವಚನಗಳಂತೆ ಚಿಕ್ಕ ಚಿಕ್ಕ ವಾಕ್ಯಗಳು ಹರಿಹರನವು. ಒಮ್ಮೊಮ್ಮೆ ಒಂದೆರಡು ಶಬ್ಧಗಳೇ ಒಂದು ವಾಕ್ಯವಾಗಿ ಬಿಡುತ್ತದೆ; ಈ ಸನ್ನಿವೇಶದ ಯಥಾರ್ಥತೆಯನ್ನು ಸಾರುತ್ತವೆ. ಬಸವಣ್ಣನನ್ನು ಮಂಗಳವಾಡಕ್ಕೆ ಹೋಗೆಂದು ಶಿವನು ಹೇಳಿದಾಗ ಬಸವನು ಈ ಮಾತುಗಳನ್ನಾಡುತ್ತಾರೆ. “…..ಸಾರ್ದರಂ ಸೈರಿಸೆಂಬರೆ? ಶಿಶುವನಿರಿವರೇ? ಪಶುವಂ ಕೊಲುವರೆ? ಎನ್ನಂ ಬಿಡುವರೆ? ಕರುಣಿ ಕರುಣಿ ಕರುಣಂ ಲೇಸಾಯ್ತು; ಅರ್ಚಿಸಿತಕ್ಕೆ ಫಲವಾಯ್ತು.” ಇಲ್ಲಿ ಇವೆಲ್ಲ ಶಬ್ಧಗಳನ್ನು ಕೂಡಿಸಿ ಒಂದು ವಾಕ್ಯ ಮಾಡಬಹುದು; ಇದರಲ್ಲಿರುವ ವಾಕ್ಯಖಂಡಗಳನ್ನು ಒಂದೊಂದು ಸಂಪೂರ್ಣ ವಾಕ್ಯಗಳಂತೆ ಪರಿಗಣಿಸಬಹುದು. ಬಸವನ ಮನದ ಉದ್ವೇಗ ಎಷ್ಟು ಸಹಜವಾಗಿ ಎಷ್ಟು ಸ್ಫುಟವಾಗಿ ಮೂಡಿಬಂದಿದೆ ಇಲ್ಲಿ!

ಹರಿಹರನ ಗದ್ಯ ಕನ್ನಡ ಸಾಹಿತ್ಯದಲ್ಲಿ ವಿನೂತನವಾದುದು. ಅದು ಯಾರ ಅನುಕರಣೆಯೂ ಅಲ್ಲ; ಆದರೆ ಮುಂದಿನವರಿಗೆ ಮಾರ್ಗದರ್ಶಿಯಾದುದು. ದುರ್ದೈವದಿಂದ ಆತನ ಮಾರ್ಗದಲ್ಲಿ ಗದ್ಯದ ದೃಷ್ಟಿಯಿಂದ ಯಾರೂ ನಡೆಯಲಿಲ್ಲ. ಹಾಗೆ ನಡೆದಿದ್ದರೆ ಇನ್ನೂ ಇದರಲ್ಲಿ ಹೊಸ ಹೊಸ ಪ್ರಯೋಗಗಳಾಗಿ ಅದರದೇ ಒಂದು ಪರಂಪರೆ ಬೆಳೆದು ಬರಬಹುದಾಗಿತ್ತು.

ಹರಿಹರನ ಗದ್ಯ ರಗಳೆಗಳ ನಡುವೆ ಏಕತಾನತೆಯನ್ನು ಕಳೆಯಲು ಬಂದುದೆಂದು ಬಹುಜನರ ಅಭಿಪ್ರಾಯವಾಗಿದೆ. ನಮಗೆ ಹಾಗೆನಿಸುವುದಿಲ್ಲ. ಆತ ದೊಡ್ಡ ರಗಳೆಗಳನ್ನು ಪೂರ್ಣರಗಳೆಗಳಲ್ಲಿಯೇ ಬರೆದಿದ್ದರೂ ಅಂಥ ಏಕಾತಾನತೆಯಾಗಲೀ ಬೇಸರವಾಗಲೀ ಓದುಗನಿಗೆ ಬರಲು ಸಾಧ್ಯವಿರಲಿಲ್ಲ. ಇದರ ನಿದರ್ಶನಕ್ಕೆ ನಡುವೆ ಬರುವ ಗದ್ಯವನ್ನು ಬಿಟ್ಟು ರಗಳೆಯೊಂದನ್ನೇ ಓದಿ ನೋಡಬಹುದು. ಚರಿತ್ರೆ ಸಣ್ಣದಾಗಿದ್ದರೆ ಕೇವಲ ರಗಳೆಯನ್ನು ದೊಡ್ಡದಾಗಿದ್ದರೆ ರಗಳೆ ಮತ್ತು ಗದ್ಯವನ್ನು ಬಳಸಬೇಕೆಂದು ಯೋಜಿಸಿಯೇ ಆತ ಹಾಗೆ ಬರೆದಿರಬೇಕು. ಮೇಲಾಗಿ ಆತನಿಗೆ ಗದ್ಯ ಪ್ರಿಯವಾಗಿತ್ತು ಎಂಬುದನ್ನು ಮರೆಯುವಂತಿಲ್ಲ.

ನಡುಗನ್ನಡ ಭಾಷೆಯ, ಸಹಜ ಅಲಂಕಾರಗಳಿಂದ ಕೂಡಿದ ಗದ್ಯ ಅದು. ಶೃಂಗಾರವೇ ಆಗಲಿ, ಭಕ್ತಿಯೇ ಆಗಲಿ, ವೈರಾಗ್ಯವೇ ಆಗಲಿ, ಸಾಮರಸ್ಯವೇ ಆಗಲಿ, ಕಾಮಕದನ ಲೀಲೆಯೇ ಆಗಲಿ, ವೀರವೇ ಆಗಲಿ, ಮೃದುಹಾಸ್ಯವೇ ಆಗಲಿ, ಉದ್ವೇಗ, ತುಡಿತ, ಸ್ಥೈರ್ಯ, ಸ್ಫುಟತೆ – ಯಾವುದೇ ಆಗಲಿ ಈ ಗದ್ಯ ಪಡಿಮೂಡಿಸುವ ಶಕ್ತಿಯುಳ್ಳುದು.

ಹರಿಹರನ ಗದ್ಯವನ್ನು ಕುರಿತು ಶ್ರೀ. ಎಚ್. ದೇವಿರಪ್ಪನವರು ಹೀಗೆ ಹೇಳುತ್ತಾರೆ: “ಹರಿಹರನ ಗದ್ಯವಾದರೋ ಕಂಪುಪೆಂಪುಗಳನ್ನುಳ್ಳ ಬನಿಯುಳ್ಳ ಹೊಸಗನ್ನಡ. ಅವನ ಸುದೀರ್ಘಕೃತಿಗಳಲ್ಲಿ ಪದ್ಯಕ್ಕಿರುವಂತೆಯೇ ಗದ್ಯಕ್ಕೂ ಸಮಾನಸ್ಥಾನ. ಜನತೆಯ ನಾಲಗೆಯ ಮೇಲೆ ನಲಿಯುತ್ತಿದ್ದ ಅರ್ಥಯುಕ್ತ ಕಾಂತಿದೀಪ್ತ ಸಂಸ್ಕೃತ ಪದಗಳ ಹದವರಿತ ಮಿಶ್ರಣದಿಂದ ಅವನ ಕನ್ನಡ ಗದ್ಯ ಹೊಸಬೆಡಗನ್ನೂ ಸಾಮರ್ಥ್ಯವನ್ನೂ ಸುಗಮನವನ್ನೂ ಪಡೆಯಿತು. ಜನಪದದ ಶಬ್ಧ ಭಂಡಾಗಾರದಲ್ಲಿದ್ದ ಆಣಿಮುತ್ತಿನಂತೆ ಸತ್ವಪೂರ್ಣವಾದ ‘ಹೊಸ’ ಮಾತುಗಳನ್ನೂ ಪಡೆನುಡಿ ಜಾಣ್ಣುಡಿಗಳನ್ನೂ ಒಳಗೊಂಡು ಜನಪದದ ವಾಕ್ಯರಚನಾರೀತಿಯನ್ನೂ ಅಳವಡಿಸಿಕೊಂಡು ಸರ್ವಾಂಗಸುಂದರವಾಯಿತು. ಅದರಲ್ಲಿ ಒಂದಕ್ಕೊಂದು ಅಂಟಿಕೊಳ್ಳದ ಬಿಡಿಬಿಡಿಯಾದ ರಸಾತ್ಮಕ ವಾಕ್ಯಗಳುಂಟು, ಹೃದಯಂಗಮವಾದ ವರ್ಣನೆಗಳುಂಟು, ಸಾರ್ಥಕವಾದ ಅಲಂಕಾರಗಳುಂಟು, ಸ್ವಾರಸ್ಯವಾದ ಸಂಭಾಷಣೆಗಳುಂಟು. ಪದ್ಯ ಭಾಗದಲ್ಲಿರುವಂತೆ ಆಯಾ ಕಥೆಯಲ್ಲಿನ ಮುಖ್ಯಘಟನೆಗಳ ಸುದೀರ್ಘ ಸರಸ ನಿರೂಪಣೆ ಇದೆ ಅಲ್ಲಿ, ಪರಿಣಾಮಕಾರಿಯಾದ ಸಮುನ್ನತ ಭಾವಾನುಭಾವಗಳ ರಸಪ್ರತಿಪಾದನೆಯಿದೆ. ನಂಬಿಯಣ್ಣನ ರಗಳೆಯ ವೃದ್ಧ ಮಹೇಶ್ವರ ಪ್ರಸಂಗದ ನಿರೂಪಣೆ ಅಂಥ ಗದ್ಯದ ಅತ್ಯುತ್ತಮತರ ಪಡಿ”[6]

ಹರಿಹರನ ಗದ್ಯವನ್ನು ಕುರಿತು ಡಿ.ಎಲ್. ನರಸಿಂಹಾಚಾರ್ಯರ ಅಭಿಪ್ರಾಯ ಹೀಗಿದೆ:

“ಹಿಂದಿನ ಕನ್ನಡ ಸಾಹಿತ್ಯದಲ್ಲಿ ಗದ್ಯ ಕಾವ್ಯಗಳು ಕಡಿಮೆ. ವಚನಕಾರರ ಕಾಲಕ್ಕೆ ಗದ್ಯ ಸ್ವಲ್ಪ ತಲೆಯೆತ್ತಿಕೊಂಡಿತು. ಆಡುವ ಮಾತನ್ನು ಅವರು ಬಳಸಲು ತೊಡಗಿದ್ದರಿಂದ ಕನ್ನಡ ಗದ್ಯ ಕಳೆಗೂಡಲು ಕಾರಣವಾಯಿತು. ಹರಿಹರನ ಕೈಯಲ್ಲಿ ಅದಕ್ಕೆ ಮಹೋನ್ನತಿ ಉಂಟಾಯಿತು. ಅದಕ್ಕೆ ಪ್ರಾಣ ಬಂದು ಎಂಥ ಭಾವವನ್ನಾಗಲೀ ಯಾವ ರಸವನ್ನಾಗಲೀ ಚಿಮ್ಮಿಸಲು ಸಮರ್ಥವಾಯಿತು. ನಂಬಿಯಣ್ಣ, ಬಸವರಾಜ, ಮಹಾದೇವಿಯಕ್ಕ ಇವರ ಕಥೆಗಳಲ್ಲಿರುವ ಗದ್ಯ ಉತ್ಕೃಷ್ಟವಾದದ್ದು. ಪ್ರಕೃತ ನಂಬಿಯಣ್ಣನ ಕಥೆಯಿಂದ ಒಂದು ಗದ್ಯಭಾಗವನ್ನು ಇಲ್ಲಿ ಕೊಡಬಹುದು”[7]

(ಇದೇ ಗದ್ಯಭಾಗವನ್ನೇ ಎಚ್. ದೇವಿರಪ್ಪನವರು ಉದಾಹರಿಸುತ್ತಾರೆ)

ನಂಬಿಯಣ್ಣನ ಮದುವೆಯ ಸಂಭ್ರಮ. ಆತ ಮುಮದೆ ಪರವೆ ಮತ್ತು ಸಂಕಿಲಿಯರನ್ನು ಕೈ ಹಿಡಿಯಬೇಕಾಗುತ್ತದೆ. ಅದು ಕಾರಣದಿಂದ ನರಸಿಂಗಮನೆಯವರು ಗೊತ್ತುಮಾಡಿದ ಹೆಣ್ಣಿನೊಡನೆ ನಡೆಯುವ ಮದುವೆಯನ್ನು ಕೆಡಿಸಲು ಶಿವನು ಮಹಾವೃದ್ಧನಾಗಿ ಕೈಲಾಸದಿಂದ ಮದುವೆಯ ಮಂಟಪಕ್ಕೆ ಬಂದು ಗಲಾಟೆ ಎಬ್ಬಿಸುತ್ತಾನೆ:

ಮೆಲ್ಲ ಮೆಲ್ಲನೆಲ್ಲವಂ ನೋಡುತೆ ಮನದೊಳು ನಗುತೆ ಕೋಲನೂರು ಕೆಮ್ಮುತೆ ಕೆಮ್ಮಿ ಕೆಮ್ಮಿ ಕೆಮ್ಮುತೆ ಸಾಲ್ಗೊಂಡಿರ್ದ ತುಪ್ಪದ ಕೊಡಂಗಳೊಳು ನಾಲ್ಕರೆಡನೆಡಹಿ ನಮಃ ಶಿವಾಯಯೆಂಬ ವೃದ್ಧ ಧ್ವನಿ ಪುಟ್ಟೆ ಕೊಡಂಗಳ ಮೇಲ್ಪೊಡೆಬಿರ್ದು ಕುಳ್ಳಿರ್ದರ ಮುಖದೊಳಂ ಕಣ್ಣೊಳಂ ಮೆಯ್ಯೊಳಂ ತುಪ್ಪಂ ಚೆಲ್ಲೆ ಎಲ್ಲರೆದ್ದು ಮಲ್ಲಳಿಗೊಂಡು ಗೋಳೆಂದು ಬಿದ್ದಿರ್ದ ವೃದ್ಧ ಮಾಹೇಶ್ವರನಂ ಮುಂಕೊಂಡೆತ್ತಲನುವಾಗಿ ಮೆಲ್ಲ ಮೆಲ್ಲನೆನೆಗಪಿ ನಿಂದಿರಿಸಲೊಂದೆರಡಡಿಯನಿಟ್ಟು ದಡ ದಡಿಸಿ ನೋಡುವ ಜನವೆಲ್ಲಂ ಎಲೆಲೆ ವೃದ್ಧಂ ಬಿದ್ದ ಬಿದ್ದನಾ ಬಿದ್ದನೆಂಬಲ್ಲಿಂ ಮುನ್ನಂ ನಿಲಲಾರದೆ ಹಳಿಲನೆ ಗಳಿಗೆವಟ್ಟಲ ಮೇಲೆ ಬೀಳೆ ಕಳಸಿಗೆಯೊಡೆದು ಗಳಿಗೆವಟ್ಟಲು ಮುರಿದು ತಂಡುಲಂ ಚೆಲ್ಲಿ ಜೋಯಿಸರೆಲ್ಲಂ ಕೆದರಿ ಪೋಗೆ ಬಿದ್ದೇಳಲಾರದೆ ಹಮ್ಮೈಯಿಸಿದಂತಿರೆ ಪರಿತಂದು ಕಣ್ಣೊಳಂ ಬಾಯೊಳಂ ನೀರಂ ತಳಿದೆಂತಕ್ಕೆ ಎಚ್ಚರಿಸಿ ಎತ್ತುವರ ಕೈಯ ಬಾಯೊಳೆ ಜೀವಂ ಹಿಡಿದಡೆ ಮುಟ್ಟಿದವರ ಭಾರಂ ತನ್ನ ಮೇಲೆಂಬ ವೃದ್ಧನಂ ನೋಡಬಾರದು ನುಡಿಸಲರಿದು ಪಿಡಿದಡೆ ಕೈಯೊಳಗೆ ಬಿಟ್ಟೂಡೆ ತುಪ್ಪದ ಕೊಡನ ಮೇಲಲ್ಲದೆ ಬೀಳನೀ ವೃದ್ಧಬ್ರಾಹ್ಮಣನನೀ ಮುಪ್ಪಿನ ಮುರುಳನೀ ಗೌತಮನ ಗೋವನೀ ಬ್ರಹ್ಮೇತಿಕಾರನನಾರ್ಪೊಗೀಸಿದರಾರ್ಥಂದರಿದೆಮಗವಶಕುನಂ ಇನ್ನೇನೀ ಮದುವೆ ಹಸನಾಗದೆನ್ನುತ್ತೆಲ್ಲರುಂ ಮೆಲ್ಲನೆ ಕೈಯುಮಂ ಕಾಲುಮಂ ಪಿಡಿದೆತ್ತಿಕೊಂಡು ಪೋಗಿ ತಮ್ಮಾಯುಷ್ಯ ಭೌಷ್ಯಗಳಂ ಪೊರಗಿಡುವಂತೆ ಚಪ್ಪರದ ಹೊರಗೆ ಮೆಲ್ಲನಿಳುಪೆ ವಿಪ್ರನಂ ಪುಗಲೀಯದಿರಿ ವೃದ್ಧನಂ ಪುಗಿಸದಿರಿ ಎಂದು ಬಾಗಿಲವೊಂದಿರ ನದುಹುತ್ತೆ ಕದವನಿಕ್ಕಿ ಒಳಗೆ ಪೊಗುವೈಸಕ್ಕವರಿಂ ಮುನ್ನವೆಯ್ತಂದೊಳಗಂ ಪೊಕ್ಕು ತೋರಣದ ತಳಿರಂ ಪರಿದು ಶಿವದಿಡುತಿರವಲರ್ಕಂಡು ಬೆರಗಾಗಿ ಈಗಲ್ಲಿಂತು ಪೊರಗಿರಿಸಲಾಗಳಂತೆ ಬಂದು ಮುಂದಿರ್ದಪನೀ ವೃದ್ಧಂ ಕಿರುಕಳನಲ್ಲಂ ಕಾರಣಿಕನಾಗಲೆವೇಳ್ಕುಮೆಂದು ನೋಡುತ್ತಿರೆಯಷ್ಟಿಯ ಕೋಲಿಂ ಭೃಂಗಾರಿಗಳ ನಿರಿದೊಡೆವುತ್ತಂ ಜಗಲಿಯಂ ದರಿಗೆಡಹುತಂ ಮಂಗಲಮನಮಂಗಲಂ ಮಾಡುತಂ ಇರಲಲ್ಲಿಯ ಪಿರಿಯರುಂ ಕೇಳದಂತೆ ಮತ್ತೆ ಮತ್ತೆ ಶಿವದಿಡುತ್ತೆನ್ನ ತೊತ್ತಿನ ಮಗನಂ ಕುಮಾರನೆಂದು ಸತ್ಕುಲಜನೆಂದು ಬಗೆದು ಹೆಣ್ಣಂ ಕೊಟ್ಟು ನಿಮ್ಮ ಕುಲಮಂ ಕೆಡಿಸಿಕೊಳ್ಳದಿರಿ, ನಾನಪ್ಪಡೆ ಮದುವೆಯನಾಗಲೀಯೆಂ ನೀವಿದರೂದ್ಯಂತವನೇನೆಂದರಿಯರಿವಂ ನರಸಿಂಗಮೊನೆಯರ್ಪೆತ್ತ ಮಗನಲ್ಲಂ ಕೊಂಡು ಸಾಕಿದ ದತ್ತಪುತ್ರಂ ಶಿವಬ್ರಾಹ್ಮಣಂ ಸೌಂದರಪೆರುಮಾಲೆಯಲ್ಲಂ ನಂಬಿಯಣ್ಣನೆಂದು ಪೆಸರು ಎನ್ನ ತೊತ್ತಿನ ಮಗನದಕ್ಕೆ ಪ್ರಯಾಣಪತ್ರವುಂಟೆಂದಟ್ಟಾಸುರಂ ಮಸಗಲು ತಾಯಿತಂದೆಗಳು ಕಮಡು ಕೌತುಕಂಬಟ್ಟುಯೆಮಗೆ ಮದುವೆ ಅಂತಿರ್ಕೆ ಮುನ್ನವೀ ಬ್ರಾಹ್ಮಣನ ಬ್ರಹ್ಮಹತ್ಯಾ ದೋಷಂ ತಪ್ಪಿದೆ ಸಾಲ್ಗುಮೆಂದು ಅಯ್ಯಾ ಚಿತ್ತೈಸೆಮ್ಮ ಮಾತಂ ಸೀಂತಡೊಳಗಾಗಿ ಮಹಾಪ್ರತಿಷ್ಠೆಗಳಂ ಮಾಣ್ದು ಕಳೆವರಲ್ಲದೆ ಪ್ರತ್ಯಕ್ಷ ಶಿವನಂದತಿರ್ದ ನೀವೇ ಬಂದು ತುಪ್ಪದ ಕೊಡನನಡೆಹಿ ಕೆಡಹಿ ತೋರಣದ ತಳಿರಂ ಹರಿದು ತರಿದು ಗಳಿಗೆವಟ್ಟಲನೊಡೆದು ಕೆಡೆದು ಮೊರೆಯಿಟ್ಟು ಶಿವದಿಟ್ಟು ವೇದಿಕೆಯಂ ದರಿಗೆಡಹಿ ಕುಲಂ ಪೊಲಲವೆಂದ ಬಳಿಕ ಇನ್ನಾವ ಮೊಗಮಂ ಮುಂದಿಟ್ಟು ಮದುವೆಯಂ ಮಾಡಿದಪೆವದಂತಿರ್ಕೆ ನೀವಿಲ್ಲಿಂದಂ ಹದುಳಂ ಹೋದಡೆ ಸಾವಿರ ಮದುವೆಯ ಮಾಡಿದ ಸಂತಸಂ ಅದಲ್ಲದೆ ನೀವಱಸುವ ನಂಬಿಯಣ್ಣಂ ಬನದೊಳೈದನೆ ಅವರೊಡನಾಡಿಕೊಂಬುದೆಮ್ಮಂ ಕಾಡಲಾಗದು. ನಿಮ್ಮಡಿಗಳು ಬಿಜಯಂಗೆಯ್ವುದು, ಸ್ವಾಮೀ ಎನಲಲ್ಲಿಂ ತಳರ್ದು….”[8]

“ತೂಕ ಮಾಡಿ ಆರಿಸಿದ ಉಚಿತ ಪದಪ್ರಯೋಗ, ಕಿವಿಗೆ ಇಂಪಾದ ಸರಣಿ, ನಿರೂಪಣೆ, ಸಂದರ್ಭಕ್ಕೆ ತಕ್ಕಂತೆ ವಾಕ್ಯಗಳ ವೈವಿಧ್ಯ – ಇವೆಲ್ಲ ಉತ್ತಮ ಗದ್ಯದಲ್ಲಿರಬೇಕಾದ ಲಕ್ಷಣಗಳು. ಮೇಲಿನ ಗದ್ಯಭಾಗದಲ್ಲಿ ಈ ಗುಣಗಳ ಜೊತೆಗೆ ಕವಿಯ ಸ್ಫೂರ್ತಿ ಅವೇಶಗಳು ಸೇರಿ ಅದು ಜೀವಂತವಾಗಿ ಕಳಕಳಿಸುತ್ತದೆ.”[9]

ಹರಿಹರನ ಗದ್ಯವನ್ನು ಕುರಿತು ವಿ.ಸೀತಾರಾಮಯ್ಯನವರ ಅಭಿಪ್ರಾಯ ಹೀಗಿದೆ: “ಹರಿಹರನಲ್ಲಿ ಬರುವ ಸರಳ ಗದ್ಯದ ರಚನೆ ರಸ ನಿರ್ಮಾಣ ಮಾಡುವ ಮತ್ತೊಂದು ಪ್ರಕಾರ. ಇದರ ಲಯ ಅರ್ಥವಂತಿಕೆ ರಚನಾಕೌಶಲ ಇದನ್ನು ಸ್ವತಂತ್ರವಾದ ಒಂದು ನಿರ್ಮಾಣ ಕಲೆಯ ಎತ್ತಿಗೆ ಏರಿಸುತ್ತದೆ. ರಗಳೆಗೆ ಹೇಗೆ ಈತನು ಒಂದು ಸ್ಥಾನವನ್ನು ತಂದುಕೊಟ್ಟನೋ ಹಾಗೆಯೇ ಕನ್ನಡ ಗದ್ಯದ ಚರಿತ್ರೆಗೂ ಒಂದು ಹೊಸಸ್ಥಾನವನ್ನೂ ಕಾವನ್ನು ಗದ್ಯದಲ್ಲಿ ರಸಸಾಧನೆ ಸಾಧ್ಯವೆಂಬುದನ್ನೂ ತೋರಿಸಿಕೊಟ್ಟ”[10] ಇವರೇ ಇನ್ನೊಂದು ಕಡೆ ಹೀಗೆ ಹೇಳಿದ್ದಾರೆ:

“ನಮ್ಮ ಗದ್ಯದ ಚರಿತೆಯಲ್ಲಿ ಗದ್ಯದ ಒನಪನ್ನೂ ವಿಲಾಸವನ್ನೂ ಹರಿಹರ ಬೆಳೆಸಿರುವ ರೀತಿ ಚಂಪೂ ಗದ್ಯದ ಹತ್ತು ಮೈಲಿ ಮುಂದೆ ಹೋಗಿ ನಡೆದ ಹೆಜ್ಜೆಯಂತಿದೆ. ಅಷ್ಟು ಸರಳ, ತಿಳಿ, ಧಾರಾಳ ಇಚ್ಛಾವಿಲಾಸದ್ದು ಅಲ್ಲಿನ ಕಲೆಯ ಕೌಶಲ. ಕೌಶಲವೆಂಬುದಕ್ಕಿಂತ ಒಂದು ಸಹಜಗುಣ ಎಂಬಂತಹುದು. ಶೀಲಶೈಲಿಯಾಗುತ್ತದೆ ನಿಜವಾಗಿ.”[11]

ಬಸವಣ್ಣ ಮನೆಬಿಟ್ಟು ಹೋದುದು ಏಕೆ? ಆಗ ಆತನ ಭಾವನೆಗಳೆಂತಿದ್ದುವು?

“…….ಜನನದ ಬಳಿವಿಡೆದೆಂತಕ್ಕೆ ಬಂದ ಜವ್ವನಂ ಶಿವಪೂಜೆಯಲ್ಲಿ ಸವೆಯವೇ ಳ್ಕಮಿಂತಲ್ಲಲ್ಲಿ ಶಿವಭಕ್ತಿಯುಂ ಕರ್ಮವುಂ ಎಂದುಮೊಂದಾಗಿರದೆಂದೊಲ್ಲದೆ ಪರಮ ವೈರಾಗ್ಯಯುಕ್ತಂ ಶಿವಲಿಂಗಾರ್ಚನಾಸಕ್ತಚಿತ್ತಂ ಕರ್ಮಲತೆಯಂತಿರ್ದ ಜನ್ನಿವಾರಮಂ ಕಳೆದು ಬಿಸುಟು ಹೋತಿನಗಂಟಲಂ ಬಿಗಿದಂತಿರ್ದ ಮೌಂಜಿಯಂ ಪರಿದು ಬಿಸುಟು, ನವ್ಯದುಕೂಲಮಂ ತೆಗೆದುಟ್ಟು ದಿವ್ಯವಸ್ತ್ರಮಂ ಪೊದೆದು ಮನೆನೆಳಲಂ ನೆನೆಯದೆ, ಅರ್ಥಮಂ ಲೆಕ್ಕಿಸದೆ, ವೃತ್ತಿಯಂ ವಿಚಾರಿಸದೆ, ಬಂಧುಗಳಂ ಬಗೆಯದೆ, ಪುರಜನಮಂ ಪರಿಕಿಸದೆ, ಹರಭಕ್ತಿಯೊಳಾತುರದಿಂ ಬಾಗವಾಡಿಯಂ ಪೊಱಮಟ್ಟು ಪೂರ್ವಾದಿಶಾಭಿಮುಖನಾಗಿ ಕಿಱುದಂತರಂ ನಡೆದು ಬಂದು….”[12]

ಇಲ್ಲಿ ಪ್ರತಿಷ್ಠಿತ ವ್ಯವಸ್ಥೆಯನ್ನು ಕುರಿತ, ಜಡ್ಡುಗಟ್ಟಿ ಸಾಮಾಜಿಕ ಪರಂಪರೆಗಳ ಕುರಿತ ಸಮರ್ಥ ಪ್ರತಿಭಟನೆ ಇದೆ; ಜೀವನದ ನಿಶ್ಚಿತ ಧ್ಯೇಯದ ಕಲ್ಪನೆ ಇದೆ. ಅತ್ಯಂತ ಧ್ವನಿಪೂರ್ಣಗದ್ಯವಿದು. ಕರ್ಮಲತೆಯಂತಿರ್ದ ಜನ್ನಿವಾರ, ಹೋತಿನ ಗಂಟಲಂ ಬಿಗಿದಂತಿರ್ದ ಮೌಂಜಿ – ಕಟುವ್ಯಂಗ್ಯವೆನಿಸಿದರೂ ಅರ್ಥಪೂರ್ಣ ಉಪಮಾನಗಳು; ಬಸವಣ್ಣ ನಂಬಿದ್ದ ಶಿವಭಕ್ತಿಗೆ ಇವು ಆಗದವು. ಕಳೆದುಬಿಸುಟು, ಪರಿದು ಬಿಸುಟು ಎಂಬಲ್ಲಿಯ ದೃಢತೆಯ ಕ್ರಿಯೆ ಒಂದು ಪರಂಪರೆಯನ್ನು ಅಲ್ಲಗಳೆದು, ಅದು ಕಳೆದುಕೊಂಡ ಮೌಲ್ಯಗಳಿಂದಾಗಿ ಅದನ್ನು ನಿರಾಕರಿಸಿ ಮುಂದುವರಿವ ತುಡಿತವನ್ನು ಸ್ಫುಟವಾಗಿ ಅಭಿವ್ಯಕ್ತಗೊಳಿಸುತ್ತದೆ. ನವ್ಯದುಕೂಲಮಂ ತೆಗೆದುಟ್ಟು – ಎಂಬುದು ಆತನ ಹೊಸಕಲ್ಪನೆಯ ನವವಿಚಾರದ, ವಿನೂತನ ಭಕ್ತಿಯನ್ನು ಧನಿಸುತ್ತದೆ; ಆತನ ಭವಿಷ್ಯಕ್ಕೆ ಕನ್ನಡಿ ಹಿಡಿಯುತ್ತದೆ.

ಬಸವಣ್ಣ ಮನೆಬಿಟ್ಟು ಬಂದುದು ಆತನ ಜೀವನದ ಮಹಾಯೋಗ. ಅದನ್ನು ಹರಿಹರ ವೀರ‍್ಯವತ್ತಾಗಿ ಚಿತ್ರಿಸಿದ್ದಾನೆ. ಕಪ್ಪಡಿ ಸಂಗಮಕ್ಕೆ ಬಸವಣ್ಣ ಬಂದ ಪ್ರಸಂಗ ಆತನ ಜೀವನದ ಬಹು ಮುಖ್ಯಘಟ್ಟ. ಅದನ್ನು ಹರಿಹರ ತಾನೇ ಬಸವಣ್ಣನೋ, ಆ ಅನುಭವಗಳೆಲ್ಲ ತನ್ನವೋ ಎಂಬಂತೆ ಅಷ್ಟು ತಾದಾತ್ಮ್ಯನಾಗಿ ಚಿತ್ರಿಸುತ್ತಾನೆ ಈ ಗದ್ಯದಲ್ಲಿ.

ಮಲಪ್ರಹರಿ ಕೃಷ್ಣವೇಣಿಗಳ ಸಂಗಸುಖಮಂ ಪಿಂಗದಾ ಕೂಡಲಸಂಗಮೇಶ್ವರ ನಿರ್ಪ ಕಪ್ಪಡಿಯ ಸಂಗಮಮಂ ಪೊಕ್ಕು ಕೇರಿಕೇರಿಯೊಳು ನಡೆತಪ್ಪಾಗಳು, ಶಂಕರಾಲಯಮಂ ಭೋಂಕನೇ ಕಂಡು, ಪೂರ್ವಸ್ಮರಣ ಕೈಗೂಡಿ, ಕಣ್ಬಂದಂತೆ, ಉಸಿರ್ ಬಂದೆಂತೆ ಪರಿತಂದು, ರಂಗಮಂಟಪದೊಳು ಧೊಪ್ಪನೆ ಬಿದ್ದೆಂತಕ್ಕೆದ್ದು, ನಿಂದು ದೇವ ದೇವಾ ಆನಾಥನಾಥ ಅನಿಮಿತ್ಯ ಬಂಧುವೆ, ತಾಯ್ತಂದೆ, ಬಂಧುಬಳಗವೆ, ಕುಲವೆ, ಬಲವೆ, ಛಲವೆ, ತವರೆ, ಕಣ್ಣೆ, ಗತಿಯೆ, ಮತಿಯೆ, ಪುಣ್ಯವೆ, ಪ್ರಾಣವೆ ಕಾವುದು ಕಾವುದೆಂಬೆ ಎನ್ನುತ್ತೆನುತೆ, ಅನುತಾಪವೊಳಗೇರಿ, ಭವದ ಬೇಗೆ ಬೆಂಬತ್ತಿ, ಕರಣಂ ಕಾಹೇರಿ, ಹರಣಂ ಕುಕ್ಕುಳಂಗುದಿದು, ಗದಗದುಪಾಗಿ, ಕಣ್ಗಳಂ ಮುಚ್ಚಿ, ಸೆರೆಬಿಗಿದು, ದಡದಡಿಸಿ ದೊಪ್ಪನೆ ಬಿದ್ದು ಸಂಗ ಶರಣೆನುತೆ ಮತ್ತೆ ಮತ್ತೆ ಮೂರ್ಛಿಸೆ ಕಂಡು ಹರಂ ಕರುಣದಿಂದ ನೋಡಿ, ಬಸವನ ಚಿತ್ತದೊಳ್ಪೊಕ್ಕು ಅಂಜದಿರಂಜದಿರ್ಮಗನೆ ಭವದ ಮಾಲೆಯ ಹೊದ್ದಲೀಯದೆ ಸಲಹಿದಪೆಂ, ನೆಲಂ ಮೆಚ್ಚೆ ಮರಿದಪೆನೆಂದು ಬೆಸಸಿ ನಿಜಲಿಂಗಕ್ಕೆ ಬಿಜಯಂಗೆಯ್ವುದುಂ…..”[13]

ಬಸವನ ಉದ್ವೇಗ, ಅನುತಾಪ, ಭಕ್ತಿಯಪರಾಕಾಷ್ಠತೆ ಮತ್ತು ಸಂಗಮೇಶ್ವರನ ಅಭಯ – ಇವು ನಮ್ಮ ಕಣ್ಮುಂದೆ ನಿಲ್ಲುವಂತೆ, ಎದೆಗೆ ಮುಟ್ಟುವಂತೆ ಇಲ್ಲಿ ಚಿತ್ರಿತವಾಗಿವೆ. ಕಣ್‌ಬಂದಂತೆ ಉಸಿರ್‌ಬಂದಂತೆ ಎನ್ನುವುದು ನಿಜಕ್ಕೂ ಬಸವಣ್ಣನಿಗೆ ಹೊಸ ಕಣ್ಣು ಮೂಡಿದವು, ಹೊಸ ಜೀವ ಬಂತು ಎಂಬುದನ್ನು ನಿಚ್ಚಳವಾಗಿ ಸಾರುತ್ತದೆ. ಪೂರ್ವಸ್ಮರಣೆಯಾದ ಬಳಿಕ ಹಳೆಯದು ಕಳೆದು ಹೊಸು ಬರಲೇಬೇಕಲ್ಲ. ಕುಲವೆ, ಛಲವೆ, ತವರೆ, ಕಣ್ಣೆ, ಗತಿಯೆ, ಮತಿಯೆ – ಈ ಮಾತುಗಳು ಬಸವಣ್ಣನ ಉದ್ವೇಗದ ತೀವ್ರತೆಯೊಂದಿಗೆ ಅವನ ಸರ್ವಸಮರ್ಪಣಭಾವವನ್ನೂ ಪಡಿಮೂಡಿಸುತ್ತವೆ. ತಾಯ್ತಂದೆ ಬಂಧುಬಳಗವೆ – ಎಂಬ ಶಬ್ಧಗಳು ತಂದೆ ನೀನು ತಾಯಿ ನೀನು ಬಂಧು ನೀನು ಬಳಗ ನೀನು ಎಂಬ ಬಸವಣ್ಣನವರ ವಚನವನ್ನು ನೆನಪಿಗೆ ತರುತ್ತವೆ.

ಮಹಾದೇವಿಯಕ್ಕನ ರಗಳೆಯ ಗದ್ಯದ ಒಂದು ತುಣುಕು:

ಒಂದು ದಿನವರಸನೊಡತಣ ಸುರತಶ್ರಾಂತಿಯಿಂ ಮಹದೇವಿಯರ್ಬಳಲ್ದು ಮರೆದೊರಗಿರೆ ಪಲಂಬರ್ಮಾಹೇಶ್ವರರ್ದೂರ ದೇಶಾಂತರದಿಂದ ಬಳಲ್ದು ಬಂದು ಪುರಮಂ ಪೊಕ್ಕರಮನೆಯ ಬಾಗಿಲೊಳು ನಿಂದು ಪಡಿಯರಂಗೆ ಸೂಚಿಸಲವಂ ಬಂದರಸಂಗೆ ಬಿನ್ನೈಸೆ ಭಕ್ತರ್ಭಕ್ತರೆಂದು ಕುಂದದೆ ಹೋದುದೊಂದುಂ ದಿನವಾದಡುಂ ದೇವಿಯರು ಸುಖನಿದ್ರೆಯೊಳಿರ್ಕೆ ಪೋಗು ಪೋಗು ಸಮಯವಿಲ್ಲ ಸಮಯವಿಲ್ಲೆಂದು ಬಂದ ಪಡಿಯರನಂ ಕೌಶಿಕಂ ಗಜರಿ ಗರ್ಜಿಸಿ ನುಡಿಯ ತೊಟ್ಟನೆ ನಿದ್ರೆ ಕೆಟ್ಟೆದ್ದು ಕೆಟ್ಟಂ ಕೆಟ್ಟಿನಾರನೆಂದಪ್ಪೆ ಶಿವಭಕ್ತರನೆ ಬೆಂದೆಂ ಬೆಂದೆಂ ಶಿವ ಶಿವಾ ಸುಡುಸುಡು ಕೆಟ್ಟ ಭವಿಯೆ, ಫಡಫಡ ಪಚ್ಚಪಸಿಯ ಪಾತಕನೆ, ನಿನ್ನ ಸಂಗದಿಂ ಭಕ್ತರನಿಂದೆಯಂ, ಕೇಳ್ವಂತಾದು ದಿನ್ನೇವೆನ್ನಿನ್ನೇವೆನೆನುತ್ತೇಳ್ವುದುಂ ಮಹದೇವಿಯರ ಚರಣದೊಳ್ಕೌಶಿಕರಾಜಂ ಬಿಳ್ದೀ ಒಂದಪರಾಧಮಂ ಸೈರಿಸುವುದೆಂದು ದೈನ್ಯದಿಂ ನುಡಿಯೆ, ನಿನ್ನ ಮೂರು ತಪ್ಪಿನೊಳೊಂದು ತಪ್ಪು ಸಂದುದೇಳೇಳು ಮುನಿಸಿಲ್ಲೇಳೆನುತ್ತೆ ವಿಳಾಸಿನಿಯರ ಕೈವಿಡಿದು ಗಳಗಳನೆ ನಡೆತಂದು ಪೊಱಗೆ ನಿಂದಿರ್ದ…..”[14]

ಮಹಾದೇವಿಯ ಸಂತಾಪ, ಬೇಗುದಿ, ಸಿಟ್ಟು, ಸೆಡವು, ಕೌಶಿಕನ ದೈನ್ಯ, ವನ ಸ್ಥಿತಿಯನ್ನು ಕಂಡು ಮಹದೇವಿ ಕ್ಷಮಿಸುವುದು ಎಷ್ಟು ಸಹಜವಾಗಿ ಮೂಡಿವೆ ಇಲ್ಲಿ! ಸ್ವಲ್ಪದರಲ್ಲಿ ಕವಿ ಅತ್ಯಂತ ಮಹತ್ವದ ಮಹದೇವಿಯ ಮತ್ತು ಕೌಶಿಕನ ಜೀವನದ ನಿರ್ಣಾಯಕ ಘಟ್ಟಗಳಲ್ಲೊಂದಾದ ಭಾಗವನ್ನು ಏನೊಂದು ಅಲಂಕಾರವಿಲ್ಲದೆ, ಆಡಂಬರವಿಲ್ಲದೆ ಸಾಮಾನ್ಯ ಶಬ್ಧಗಳಿಂದ ಚಿತ್ರಿಸಿ ತನ್ನ ಕಥನ ಕೌಶಲವನ್ನು ಮೆರೆದಿದ್ದಾನೆ.

ಮಹದೇವಿಯ ಜೀವನದ ಇನ್ನೊಂದು ಸನ್ನಿವೇಶ: ಆಕೆ ಒಲ್ಲದ ಮನಸ್ಸಿನಿಂದ ಕೌಶಿಕನಲ್ಲಿಗೆ ಹೋಗುತ್ತಾಳೆ; ಆಕೆಯ ಇದ್ದ ಇರವೇ ಕೌಶಿಕನಿಗೆ ಅಪ್ಯಾಯನವಾಗುತ್ತದೆ.

ಶೈವಸುಖಪ್ರಸಂಗಕ್ಕೆ ಕಂಟಕಂ ಬಪ್ಪಂತೆ ಕೌಶಿಕರಾಜನ ವಿಳಾಸಿನಿಯರ್ ಬರೆ ಮಹದೇವಿಯರ ಮನದನುರಾಗವಿಳಿವಂತೆ ಪ್ರಭಾಕರಂ ಪಶ್ಚಿಮವಾರ್ಧಿಯೊಳಿಳಿಯೆ, ಮನದುಮ್ಮಳಂ ಕವಿವಂತೆ ತಮಂ ಕವಿಯೆ, ಶರಣರಂ ಪಿಂಗಲಾರದಂಗಲಾಚಿ ಸಂಸಾರಕ್ಕೆ ಸುರುಳ್ದು ಕಾಮಕ್ಕೆ ಕೆರಳ್ದು ಅಲ್ಪಸುಖಕ್ಕೆ ತೆರಳ್ದು ಮನವಲ್ಲದ ಮನದೊಳೆಂತಕ್ಕೆ ಮಹೇಶ್ವರರಂ ಮಹಮನೆಗೆ ಬಿಜಯಂ ಗೆಯ್ಯವೇಳ್ದು ಬಿನ್ನಪಂಗೆಯ್ದು ಕರ್ರನೆ ಕಂದಿ ಸುರ್ರನೆ ಸುಯ್ದು ಸುಮ್ಮಾನವುಡುಗಿ ನಡೆವುತ್ತಯ್ಯೋ ಶಿವನೆ ಉಳಿವ ಕರೆವ ನೇಹವುಂಟೆ, ಸಂಸಾರಕ್ಕಂ ನಿಮ್ಮಲ್ಲಿಗೆಡೆಯಾಡುವ ಭಕ್ತಿಯುಂಟೆ, ಏನಯ್ಯಾ ಶಿವನೆ, ಏನಂ ಪೇಳ್ವೆನೀ ಲಜ್ಜೆಯ ಮಾತನೆಂದು ಚೆನ್ನಮಲ್ಲಿಕಾರ್ಜುನಂಗೆ ಮೊರೆಯಿಟ್ಟು ಮುಳಿದು ಗೀತಮಂ ಪಾಡುತ್ತೆ ಭಂಡಾರದ ಮನೆಯಲ್ಲಿಗೆ ಬಂದಾಭರಣಮಂ ತೆಗೆದು ಬಿಸುಟು ಮೈಲಿಗೆಯನ್ನುಟ್ಟು ದುಮ್ಮಾನಮಂ ತೊಟ್ಟು ನಿರ್ವೇದಮಂ ಮುಂದಿಟ್ಟು ಸಿಂಗರಕ್ಕೆ ಸಲ್ಲದೆ ತಾಂಬೂಲಮನೊಲ್ಲದೆ ಪರಿಮಳದೊಳು ನಿಲ್ಲದೆ ಕೈಗೊಟ್ಟು ಬರ್ಪ ಕೆಳದಿಯರ ಮೇಲೆ ಕರಪಲ್ಲವಮನಿಟ್ಟು ಮೆಲ್ಲ ಮೆಲ್ಲನೆ ನಡೆತಪ್ಪಾಗಳು, ಸಜ್ಜೆಯ ಮನೆಯೊಳಾಸೆಗೆಯ್ವುತ್ತಿಪ್ಪ ಕೌಶಿಕರಾಜಂ ಹಾವುಗೆಯ ದನಿಗೆ ಭಾವರಸಂ ದಳವೇರೆ ನೆಲನುಗ್ಘಡಣೆಗೆ ನಲವು ಬಲವೇರೆ ನಡೆತಂದು ಮಹದೇವಿಯರು ಸಿರಿಮಂಚದೊಳು ಮೆಯ್ಯನೀಡಾಡೆ ಮಾಸಿದ ರೂಪು ಮನೋಹರಮಾಗೆ ಅವಯವದ ಚೆಲುವಾಭರಣವನೇಳಿಸೆ ಕಾಯಮರೀಚಿ ದೂಕೂಲಮಂ ಮರೆಯಿಸೆ ಸಹಜಾಮೋದನುಲೇಪವನಿಳಿಕೆಯ್ಯೆ ನಿಜಶ್ವಾಸಂ ವೀಳೆಯಮನುಲ್ಲಂಘಿಸೆ ನೂಂಕುವಂಗಸೊಂಕು ಅಲಿಂಗನದ ಸುಖಮಂ ನೂರ್ಮಡಿಸೆ ಸ್ವಭಾವ ಸರಸಾಂಗಂ ಸುರತಾಮೃತಾಬ್ಧಿಯಂ ಸೂಸೆ ಪರುಷದ ಪುತ್ಥಳಿಯ ಮುನಿಸಿನ ಸೋಂಕು ಕರ್ಬೊನ್ನ ಪ್ರತಿಮೆಗೆ ವರ್ಣೋತ್ಕರ್ಷವೆಂಬಂತೆ ಮಹದೇವಿಯರು ದಾಸೀನಮೆ ಕೌಶಿಕರಾಜಂಗೆ ಕಾಮಸಾಮ್ರಾಜ್ಯಮಾಗಿರೆ…”[15]

ಈ ಗದ್ಯ ಹರಿಹರನ ಅತ್ಯಂತ ಉತ್ಕೃಷ್ಟ ಗದ್ಯಕ್ಕೆ ಸಾಕ್ಷಿ. ಒಂದು ಕಡೆ ವೈರಾಗ್ಯ, ಒಲ್ಲದ ನೇಹ, ಇನ್ನೊಂದು ಕಡೆ ಕಾಮಾತುರತೆ, ವಿಷಮಸಂಬಂಧ. ಇದನ್ನು ಸಮುಚಿತ ಶಬ್ಧಗಳಿಂದ ಅಲಂಕಾರಗಳಿಂದ, ಸಂಯಮದಿಂದ ಚಿತ್ರಿಸಿ ಹರಿಹರ ಕನ್ನಡ ಗದ್ಯ ಲೊಕದಲ್ಲಷ್ಟೇ ಅಲ್ಲ ವಿಶ್ವದ ಗದ್ಯಲೋಕದಲ್ಲಿ ಒಂದು ಹಿರಿಯ ಸ್ಥಾನಗಳಿಸಿಕೊಂಡಿದ್ದಾನೆ.

ಮಹದೇವಿ ಮೈಲಿಗೆಯುಟ್ಟಳಂತೆ, ದುಮ್ಮಾನತೊಟ್ಟಳಂತೆ, ನಿರ್ವೇದ ಮುಂದಿಟ್ಟಳಂತೆ. ಆಕೆಯ ಕಾಮವಿಮುಖತೆಯ ಸಹಜ ಚಿತ್ರವಿದು. ಇಷ್ಟು ತೀವ್ರವಾಗಿ, ಗಾಢವಾಗಿ, ಅರ್ಥಪೂರ್ಣವಾಗಿ ಆಕೆಯ ಮೋಹಕ್ಕೆ ಒಲ್ಲದ ಮನಸ್ಸನ್ನು ಬೇರೆ ಶಬ್ಧಗಳಿಂದ ಚಿತ್ರಿಸುವುದು ಸಾಧ್ಯವಿಲ್ಲ. ಇಲ್ಲಿ ಶಬ್ದಗಳ, ಮತ್ತೆ ಮತ್ತೆ ಆವೇಶದಿಂದ, ಉತ್ಸಾಹದಿಂದ ಹರಿಹರ ಬಳಸುವ ಶಬ್ಧಗಳ ಸರಮಾಲೆಗಳಿಲ್ಲ. ಉತ್ಸಾಹದಲ್ಲಿದ್ದು ಆತ ತೋರಿದ ಸಂಯಮ ಅನುಪಮ ಇಲ್ಲಿ ಯಾವ ಒಂದು ಶಬ್ಧವನ್ನು ತೆಗೆದು ಹಾಕುವಂತಿಲ್ಲ. ಒಂದು ಶಬ್ಧ ತೆಗೆದು ಹಾಕಿದರೆ ಇಡಿಯ ಚಿತ್ರದ ಭಾವರಸ ಹಾಳಾಗುತ್ತದೆ. ವಿರಸ – ಸರಸಗಳ ಸಮ್ಮಿಳನದ ಚಿತ್ರ ಅದ್ಭುತವಾಗಿದೆ. ‘ಪರುಷದ ಪುತ್ಥಳಿಯ ಮುನಿಸಿನ ಸೋಂಕು ಕರ್ಬೊನ್ನ ಪ್ರತಿಮೆಗೆ ವರ್ಣೋತ್ಕರ್ಷವೆಂಬಂತೆ’ ಎಂಬ ಉಪಮಾಲಂಕಾರ ಅತಿಸಹಜವಾಗಿ ಉಪಯೋಗವಾಗಿ ಇಡಿಯ ಸನ್ನಿವೇಶಕ್ಕೆ ಜೀವಕಳೆ ತುಂಬಿದೆ. ಈ ಅಲಂಕಾರ ಮಹಾದೇವಿಯ ವಿಮುಖತೆಯನ್ನು ಕೌಶಿಕನ ಆತುರತೆಯನ್ನು ತೋರಿ ಆ ವಿಮುಖತೆ ಮತ್ತು ಕಾಮುಕತೆಗಳನ್ನು ಬೆಸೆದ ರೀತಿ ಅಪೂರ್ವವಾದುದು.

ಗದ್ಯದಲ್ಲಿ ಹರಿಹರ ಹೆಣೆಯುವ ಸಂಭಾಷಣೆ ಅತಿಸೊಗಸಿನದು; ಹಿತವಾದುದು, ಸಹಜವಾದುದು.

ತಿರುವತ್ತಿಯೂರ ಸಿವಾಲಯದಲ್ಲಿ ಸಂಕಿಲೆಯನ್ನು ಕಂಡ ಬಳಿಕ, ಅವಳು ತನಗೆ ಬೇಕು, ಕೊಡಿಸು ಎಂದು ನಂಬಿಯಣ್ಣ ಹಟ ಹಿಡಿಯುವನು. ಆಗ ಶಿವ ಮತ್ತು ನಂಬಿಯಣ್ಣನ ನಡುವೆ ನಡೆಯುವ ಸಂಭಾಷಣೆ ಇದು:

ಇತ್ತಲ್ನಂಬಿಯಣ್ಣಂ ಪ್ರದಕ್ಷಿಣಮಂ ಕಳೆದು ತಿರುಗಿ ಬಂದೈದಾರಡಿಯೊಳೇಳೆಂಟವಸ್ಥೆಗೊಂಡು ಶಿವನಲ್ಲಿಗೈತಂದೆಲೆಯೆಲೆದೇವಾ. ಪ್ರಮಾಣಪತ್ರಮಂ ಕೊಡುವ ಕೊಡು ಕೊಟಟ ಬಳಿಕಂ ಮಾತಾಡೆಂಬ ಬಳಲ್ನುಡಿಯಂ ಕೇಳ್ದು ಶಿವಂ ಕೌತುಕಂಬಟ್ಟಿದೇನಿದೇ ನೆಲೆ ಮಗನೆ ನಂಬಿ ನಿಷ್ಕಾರಣಂ ಮುನಿಯದೆ ಕಾರಣಮಂಪೇಳ್ದು ಬಳಿಕ ಮುಳಿವುದೆನೆ, ದೇವರದೇವ, ನಿಮ್ಮರವಮನೆಯ ಪರಿ ಸೂತ್ರದೊಳೊರ್ವ ಸಂಕಿಲೆನಾಚಿಯರೆಂಬನರ್ಘರತ್ನಮಂ ಕಂಡನೆನಗಾಕನ್ನಿಕೆಯಂ ಮಾಡಿಕೊಡುವುದೆನೆ ಶಿವಶಿವ ಶಿವಯೆಂದು ಶಿವಂ ಕಿವಿಯಂ ಮುಚ್ಚಿಕೊಳುತ್ತಿದಾವ ದುರಳತನವಿದಾವ ಮೂರ್ಖತ್ವವಿದಾವರಸುತನವಿದಾವ ಪಾಪದ ಸರಸವಿದಂ ನುಡಿಯದಿರವರ ಕುಲಕ್ಕೆ ಕನ್ನಡಿ ಕಲ್ಮಷಂ ಮಾರ್ತಂಡಂ ಮಲಿನಂ ಮಾತನಾಡದಿರ್ ಅವಳಂ ಶೈಶವಕಾಲದೊಳು ಮುನ್ನೋರ್ವ ರಾಜಪುತ್ರಂ ತನಗೆಂದು ಪೆಸರ್ಗೊಂಡವಂ ಸತ್ತಡವನೆ ಗಂಡನದೇ ಬಾಳೆಂದು ಸರ್ವಶುಚಿಯಾಗಿ ಕಟ್ಟುಬಟ್ಟೆಯಾಗಿ ನಡೆಯಿಸುತಿರ್ದಪರೀ ಮಾತನವರ ಮಾತೆಪಿತರು ಕೇಳ್ದಡೆನ್ನುವಂ ನಿನ್ನುಮನಿರಲೀಯರು ಮರುಳುಮಗನೇ ಇದಂ ಬಿಡು ಬಿಡು ಬಿಟ್ಟುಕಳೆಯೆಂದು ಮನದೊಳು ಸಂತೋಷಂಬಡುತ್ತಂ ಮಾತಿನೊಳಂಜಲೆಂದೊಲಿದು ನುಡಿಯೆ ನಂಬಿಯಣ್ಣಂ ಕೇಳ್ದು ಬಲ್ಲೆಬಲ್ಲೆನಿದೆಲ್ಲವಂ ಕೊಳ್ಳೆಕೊಳ್ಳೆನೀ ಪಗಟನೆನಗೆ ಸಂಕಿಲೆ ಬೇಡ ಪ್ರಮಾಣಪತ್ರವೇ ಸಾಲ್ಗುಂ ಕೊಡು ಕೊಡುಯೆಂದು ಕಾಮಗಿಚ್ಚಿಲಿ ಬಿದ್ದ ಕೀಡಿಯಂತೆ ಮಿಡುಕಿ ಬಿದ್ದು ಸಿಡಿಮಿಡಿಗೊಂಡು ಮೊಲೆಗುಡದ ತಾಯ ಕಾಲ ಬಾಯೊಳು ಶಿಶು ನಾಲಗೆಗಿತ್ತಳುವಂತೆ ರಂಗ ಮಂಟಪದೊಳು ಪೊರಳ್ದು ಹೊಡಕರಿಸಲಾಱದ ಕಿಂಕುರ್ವಾಣಂ ಕೈಮಿಕ್ಕು ತೊತ್ತುಗೊಂಡ ತವರೆ ಆಳ್ಗೊಂಡರಸ ಮನಂಗೊಂಡ ಮಹಿಮನೆ ಸುರತಂಗೊಂಡರವೆಣ್ಣೆಯೆಂದು ಮರುಗಿ ಮೊರೆಯಿಟ್ಟೊರಲುವ ನಂಬಿಯಂ ಶಂಭು ಕರುಣಿಸಿ ನೋಡಿ ಹೋ ಹೋ ಮಗನೆ ಇನಿತಾಸುರವೇಕಂಜದಿರಂಜದಿರ್ ಮೆಲ್ಲನೆ ಪೋಗಿ ವಿಚಾರಿಸಿ ಬಂದಪನೇಳೇಳೆಂಬ ಮಾತಿನೊಡನೆ ಹರಣಂ ಬಂದು ಹಸರಿಸಿ ಕುಳ್ಳಿರ್ದ ನಂಬಿಯ ಮೈಯಂತಡವಿ ಪ್ರಸಾದದ ಚಿಲುಪಾಲನೂಡಿ ಬಾಯ ತಂಬುಲಮನಿತ್ತು ಚಂದನ ಜವಾದಿ ಪರಿಮಳದ್ರವ್ಯಮಂ ಬೀಳುಡೆಸಹಿತಂ ಕೊಟ್ಟು ನೀನಿಲ್ಲಿರೆಂದು ಪ್ರಭಾಕರನಂ ಪಶ್ಚಿಮಾಬ್ಧಿಗೆ ಪೋಗಲೆವೇಳ್ದು[16]

ನಂಬಿ – ಶಿವರ ಆತ್ಮೀಯತೆ ಇಲ್ಲಿ ಜಿನುಗುತ್ತಿದೆ. ನಂಬಿಯ ಹಟ, ಮುನಿಸು, ಶಿವನ ತಿಳಿಹೇಳುವಿಕೆ, ಪ್ರೀತಿ, ಕೊನೆಗೆ ಹೋಗಿಬರುವೆ ಅಂಜದಿರೆಂದು ಹೇಳುವ ಅಭಯ ಸಹಜವಾಗಿ ಚಿತ್ರಗೊಂಡಿವೆ. ಇಲ್ಲಿಯ ಭಾಷೆ ಆಡು ಭಾಷೆ ಹತ್ತಿರವಾಗಿದೆ: ಮಾತುಮಾತಿಗೆ ನಂಬಿ ‘ಪ್ರಮಾಣಪತ್ರ’ ಕೂಡು ಎಂದು ಕೇಳುವಲ್ಲಿ ಬಲುಸೊಗಸಿದೆ. ‘ನಂಬಿಯನ್ನು ನಿಮಗೆ ತೊತ್ತಾಗಿ ಕೊಟ್ಟಿದ್ದೇವೆ, ನೀವಿವನನ್ನು ನಡೆಯಿಸಿಕೊಳ್ಳಿರಿ’ ಎಂದು ನಂಬಿಯ ಹಿರಿಯರು ಶಿವನಿಗೆ ಬರೆದು ಕೊಟ್ಟುದೇ ಪ್ರಮಾಣಪತ್ರ. ಶಿವನು ಆ ಪತ್ರದಂತೆ ನಂಬಿಯನ್ನು ಸಮರ್ಥವಾಗಿ ನಡೆಯಿಸಿಕೊಳ್ಳಬೇಕು. ಅದಾಗದಿದ್ದರೆ ಕೈಲಾಗುವುದಿಲ್ಲವೆಂದು ಒಪ್ಪಿಕೊಂಡು ಪ್ರಮಾಣ ಪತ್ರವನ್ನು ಮರಳಿ ಕೊಡಬೇಕು. ಶಿವನು ನಡೆಯಿಸಿಕೊಳ್ಳುವುದೆಂದರೆ ನಂಬಿ ಕೇಳಿದ್ದನ್ನೆಲ್ಲಾ ಮಾಡಬೇಕೆಂಬುದೇ ನಂಬಿಯ ಅಭಿಪ್ರಾಯ.

‘ಅವರ ಕುಲಕ್ಕೆ ಕನ್ನಡಿ ಕಲ್ಮಷಂ, ಮಾರ್ತಂಡಂ ಮಲಿನಂ’ ಎನ್ನುವುದು ಅವರ ಶುಚಿತನವೇನೆಂಬುದನ್ನು ವಿನೂತನವಾಗಿ ಹೇಳುವುದು. ಅವರಿಗೀಮಾತು ಗೊತ್ತಾದರೆ ನನ್ನನ್ನೂ ನಿನ್ನನ್ನೂ ಇರಗೊಡರು ಎಂಬ ಮತು ಎಷ್ಟು ಸಹಜ! ಸಾಮಾನ್ಯರ ಮಾತಿನಂತೆಯೇ ಇವೆ ಈ ಮಾತುಗಳು. ಶಿವನಿಗೆ ‘ಸುರತಂಗೊಂಡರೆವೆಣ್ಣೆ ಎಂದು ನಂಬಿ ಬೈವುದು ಬಲು ಹಿತವಾಗಿ ಕಾಣುತ್ತದೆ; ಅಷ್ಟೇ ವ್ಯಂಜಕವಾಗಿದೆ. ನೀನು ಕೈಲಾಗದವ, ಹೆಣ್ಣಾದವ, ಪೂರ್ಣಗಂಡಸು ನೀನಲ್ಲ ಎಂಬ ವ್ಯಂಗ್ಯ ಇಲ್ಲಿದೆ.

ಹರಿಹರನ ಗದ್ಯದಲ್ಲಿ ಬರುವ ವರ್ಣನೆಗಳು ಹೊಸಮಾದರಿಯವು.

ನಂಬಿಯಣ್ಣನಿಗೆ ಹೆಣ್ಣು ನೋಡಲು ಮಂತ್ರಿ ತುಂಬುರ ಮಣಮಂದ ಪುತ್ತೂರಿಗೆ ಹೋದಾಗ ಅಲ್ಲಿ ಕಂಡ ಒಬ್ಬ ಮುಗ್ಧೆಯ ವರ್ಣನೆಯಿದು:

“…..ಬಾಲ ಮುಗ್ಧೆ ಹರೆಯಂ ಕಿರಿದು ಯೌವನಂ ಪಿರಿದಾಗಿ ಮುಖವೆಲ್ಲಂ ಕಣ್ಣು, ಬೆನ್ನೆಲ್ಲಂ ಮುಡಿ, ಉರವೆಲ್ಲಂ ಮೊಲೆ, ಪಿಂತೆಲ್ಲಂ ನಿತಂಬಂ, ನಡೆಯೆಲ್ಲಂ ಮೃದು, ನುಡಿಯೆಲ್ಲಂ ಜಾಣು, ನೋಟವೆಲ್ಲಂ ಸುಧೆ, ಚರಿತ್ರವೆಲ್ಲಂ ಕುಲವೆನಿಸಿ….”[17]

ನಮ್ಮ ಹಳೆಯ ಕವಿಗಳೆಲ್ಲ ಹೇಳಿದ್ದನ್ನೆ ಹೇಳುವರು ಮುಖ, ಕಣ್ಣು, ಉರ, ಪಿಂತು, ನಡೆ – ಎಲ್ಲವಕ್ಕೆ ಚಂದ್ರ, ಮೀನು, ಚಾತಕ, ಮರಳದಿನ್ನೆ, ಹಂಸ – ಇವೇ ಮತ್ತೆ ಮತ್ತೆ ಕೇಳಿ ಬೇಸತ್ತಾಗ ಈ ವರ್ಣನೆ ಅದೆಷ್ಟು ಹಿತವೆನಿಸುತ್ತದೆ!

ಇನ್ನೊಂದು ವರ್ಣನೆ: ಸಿಂಗರಿಸುವ ಮುಂಚೆ ಸಂಕಿಲೆನಾಚಿಗೆ ರತಿಮಂಗಳೆ ಹೇಳುವ ಮಾತುಗಳಿವು:

“…..ಎಲೆ ಮುಗ್ಧೆ ನಿನ್ನವಯವಂಗಳ ಚೆಲ್ವಿಂಗಾಭರಣಂ ಮರೆ, ನಿನ್ನ ಸೌಕುಮಾರ್ಯಕ್ಕೆ ಹೂದೊಡಿಗೆ ಹೊರೆ, ನಿನ್ನ ಮುಖಮಂಡಲಕ್ಕೆ ಶಶಿಮಂಡಲವುಪ್ಪಾರತಿಯ ಪಾತ್ರೆ, ನಿನ್ನ ಲೋಚನಕ್ಕೆಳಮಿಂಚು ಹೊಱಗು, ನಿನ್ನ ನಳಿತೋಳ್ಗೆಳಲತೆ ಮಾಡಿ ಮಿಕ್ಕವು, ನಿನ್ನ ಕೊರ್ವಿದ ಕುಚಂಗಳ್ಗೆ ಪೊಣರ್ವಕ್ಕಿ, ಗವಸಣಿಗೆ, ನಿನ್ನ ನಡುವಿಂಗೆ ನಳಿನತಂತು ನಿರೋಧಂ, ನಿನ್ನ ಬೆರಲ್ಗರಲಂಬಾಗದ ವಸ್ತು, ನಿನ್ನ ನಾಭಿವಳಯಕ್ಕೆ ಪೂಗೊಳಂ ಪುಸಿ, ನಿನ್ನ ನಿತಂಬಕ್ಕೆ ಪುಳಿನ ಸ್ಥಳಂ ಪಳಿವು, ನಿನ್ನ ಬಟ್ಟದೊಡೆಗೆ ಬಾಳೆ ಬಹಿಷ್ಕಾರಂ, ನಿನ್ನ ಕಿರುದೊಡೆಗೆ ಕಾಮನದೊಣೆ ತೊಣೆಯಲ್ಲಂ, ನಿನ್ನ ಪದತಳಕ್ಕೆ ಕೆಂದಾವರೆ ಕರ್ಕಶಂ, ಇಂತು ನಿನ್ನ ರೂಪು ಯೌವನಮಪ್ರತಿಹತಪ್ರಾಯಂ, ಸಿಂಗರಂ ಸೊಗಸದು ಕೇಳು; ನಿನ್ನ ನಂಬಿಯಣ್ಣಂ ಮಾಳ್ಪ ಶಿವಪೂಜಾರಸಪೂರಿತ ಕುಸುಮಕರಂಡಗೆಯಂತಿರ್ದ ನಿನಗೆ ನಿಸ್ಸಾರವಸ್ತುಗಳು ಉಪಮಾನವಲ್ಲ…”[18]

ಹಳೆಯದನ್ನೇ ಹೊಸದಾಗಿ ಹೇಳುವ ಕಲೆ ಇಲ್ಲಿದೆ. ಅವೇ ಉಪಮಾನಗಳು. ಆದರೆ ಅವೆಲ್ಲ ಹೊಸಜೀವ ಪಡೆದಿವೆ; ನೂತನತೆಯನ್ನು, ಸೊಗಸನ್ನು ಉಸಿರಾಡಿಸುತ್ತವೆ, ಸಂಕಿಲೆಯನ್ನು ಕುಸುಮ ಕರಂಡಗೆಯೆಂದು ಕರೆದುದು ಬಹು ಔಚಿತ್ಯಪೂರ್ಣ. ಇಂಥ ಉಪಮಾನ ಬೇರೆ ಕಡೆ ಕಾಣಬರದು. ಬಹುಧ್ವನಿಪೂರ್ಣ ಉಪಮಾನವಿದು. ಆಕೆ ನಂಬಿಯಣ್ಣನ ಇಹಕ್ಕೂ ಪರಕ್ಕೂ ಅನುಕೂಲೆ; ಅವನ ಭಕ್ತಿಯ ನೆಲೆ, ಯೋಗ – ಭೋಗದ ಸಾಮರಸ್ಯವನ್ನು ಹರಿಹರನು ಒಂದು ಉಪಮಾನದಿಂದ ಸ್ಪಷ್ಟಗೊಳಿಸಿದ್ದಾನೆ.

ಹರಿಹರನ ಗದ್ಯ ನಯಗಾರಿಕೆಗೆ, ಕಲಾವಂತಿಕೆಗೆ ಪ್ರಸಿದ್ಧ. ಅತಿಸೂಕ್ಷ್ಮವಾದ, ಬಹು ಅರ್ಥಪೂರ್ಣವಾದ, ಧ್ವನಿಯಿಂದ ಕೂಡಿದ, ನವುರಾದ ಚಿಕ್ಕ ಚಿಕ್ಕ ಮಾತುಗಳನ್ನು ಆತ ಬಳಸುವಲ್ಲಿ ಬಲ್ಲಿದ, ಹೊಸತನ ಹರಿಹರನ ಜಾಯಮಾನ. ‘ಹರಿಹರತನ’ವೆಂಬುದೇ ಹೊಸದು. ಉಡಿಸಿ, ತೊಡಿಸಿ, ಹೂಮುಡಿಸಿ ಮಕ್ಕಳನ್ನು ಪ್ರೀತಿಸುವುದು ವಾಡಿಕೆ. ಹರಿಹರನ ಉಡಿಸುವಿಕೆ, ತೊಡಿಸುವಿಕೆ ಬೇರೆಯದೇ. ನಂಬಿಯಣ್ಣನನ್ನು ಪಡೆದು ನರಸಿಂಗಮೊನೆಯರು ಪ್ರೀತಿಸಿದ್ದು ಹೀಗೆ:

“……ಕುಮಾರನಂ ಕಣ್ತೀವಿ ನೋಡಿ ನೋಡಿ, ತೆಗೆದಪ್ಪಿಯಪ್ಪಿ ಮುಂಡಾಡಿ ಕೊಂಡಾಡಿ, ಸವಿಗಳ ಮಾಡಿ, ಸುಕುಮಾರತೆಯ ನುಡಿಸಿ, ಕಾಂತಿಗಳಂ ತೊಡಿಸಿ, ಪರಿಮಳಮಂ ಸೂಡಿಸಿ, ನೇಹಮಂ ಕಾಪಿಟ್ಟು ನೆನಹಿನೊಳಚ್ಚೊತ್ತಿ, ಮನದೊಳು ತೂಪಿರಿದು ಚೆಲುವಂ ಸಲಹುವಂತೆ. ಸುಮುಹೂರ್ತಮಂ ಸಾಗಿಸುವಂತೆ….”[19]

ಸುಕುಮಾರತೆಯನ್ನು ಉಡಿಸುವುದು, ಕಾಂತಿಗಳನ್ನು ತೊಡಿಸುವುದು, ಪರಿಮಳವನ್ನು ಮುಡಿಸುವುದು, ಸ್ನೇಹವನ್ನೇ ಕಾಪಿಡುವುದು – ಹರಿಹರನಿಗೇ ಸಾಧ್ಯ. ಈ ಮಾತುಗಳು ನರಸಿಂಗ ಮೊನೆಯರ ಆಳವಾದ ಪ್ರೀತಿಯನ್ನು ಸಾರುತ್ತವೆ. ಸಾಹಿತ್ಯದಲ್ಲಿ ಇಂಥ ಮಾತುಗಳು ವಿರಳ.

ಇನ್ನೊಂದು ಅರ್ಥಪೂರ್ಣ ಸಾರ್ಥಕ ಉಪಮಾನ:

“………ಆದಯ್ಯಂ ಸಂದೇಹಿಸುತ್ತಂ ಶಂಕಿಸುತ್ತಂ ಮನೆಗೆ ಬಂದಿರುಳುದಾವರೆಯಂತೆ ಹಗಲ ಚಂದ್ರನಂತೆ ಬಾಡಿರ್ದ ಪದ್ಮಾವತಿಯಂ ಬೆಸಗೊಳಲ್ನುಡಿಯಲಮ್ಮದೆ…..[20]

ಪದ್ಮಾವತಿ ಹಗಲಚಂದ್ರನಂತೆ ಬಾಡಿರ್ದಳಂತೆ. ಕಾಂತಿಯಿದ್ದರೂ ಇರದಂತಾದ ಹಗಲಚಂದ್ರನ ಉಪಮಾನ ಇಲ್ಲಿ ಅತ್ಯಂತತ ಸಾರ್ಥಕವೆನಿಸಿದೆ.

“……..ಜೇಡರದಾಸಿಮಯ್ಯ ಬಂದು ಮೈಯಿಕ್ಕಿನಿಂದು ಕೈಮುಗಿದು ರವಿಯ ಹತ್ತಿರ ಚಂದ್ರಮಂ ಕುಳ್ಳಿರ್ಪಂತೆ ಕೆಲದೊಳು ಕುಳ್ಳಿರ್ದು…..[21]

ಶಂಕರದಾಸಮಯ್ಯ ಜೇಡರದಾಸಮಯ್ಯನನ್ನು ಕಾಣಲು ಮುದನೂರಿಗೆ ಬಂದು ರಾಮನಾಥ ಮಂದಿರದಲ್ಲಿ ಇಳಿದುಕೊಂಡಿದ್ದ. ಆಗ ಜೇಡರದಾಸಿಮಯ್ಯ ಬಂದು ಮೈಯಿಕ್ಕಿ ಶಂಕರದಾಸಮಯ್ಯನ ಹತ್ತಿರ ಕುಳಿತುಕೊಂಡ ‘ಆತ ರವಿಯ ಹತ್ತಿರ ಚಂದ್ರ ಕುಳಿತಂತೆ ಕುಳಿತ’ ಎಂಬುದು ಅವರಿಬ್ಬರ ವ್ಯಕ್ತಿತ್ವವನ್ನು ಸ್ಫುಟಗೊಳಿಸಿದೆ. ಸ್ವಂತ ಬೆಳಕಿದ್ದವ ರವಿ – ಶಂಕರದಾಸಿಮಯ್ಯ; ರವಿಯ ಬೆಳಕಿನಿಂದ ಬೆಳಗಿದವ ಚಂದ್ರ – ಜೇಡರದಾಸಿಮಯ್ಯ. ಮುಂದಿನ ಚರಿತ್ರೆ ಈ ಉಪಮಾನವನ್ನು ಇನ್ನೂ ಸ್ಫುಟಗೊಳಿಸುತ್ತದೆ.

ರೇವಣ್ಣಸಿದ್ಧ “ಮುಗಿಲ ಮರೆಯ ಸೂರ್ಯನಂತೆ, ಮಾಸಿದ ಪುರುಷದಂತೆ ಗವಸಣಿಗೆಯಿಕ್ಕಿದ ಬೆಳಗಿನಂತೆ ಮುಸುಕಿರ್ದ ಸಾಮರ್ಥ್ಯದಂತೆ ಮೈಗರೆದ ಶಿವಜ್ಞಾನದಂತೆ….”[22] ಇದ್ದನಂತೆ ಇಲ್ಲಿಯವು ಸಮರ್ಥ ಉಪಮಾನಗಳು; ಮಾಸಿದ ಪರುಷದಂತೆ ಎನ್ನುವುದು ಬಲುಹಿತವಾಗಿದೆ.

ಬಿಜ್ಜಳನಿಗೆ ಬಸವಣ್ಣ ನುಡಿವ ಈ ಮಾತುಗಳಲ್ಲಿ ದಿನಬಳಕೆಯ ನುಡಿಯ ಘಾಟು ಇದೆ.

“….ಶಿವನ ಮನೆಯ ತೊತ್ತಿನ ಮನೆಯ ತೊತ್ತಪ್ಪ ಮಾಯೆಯಾಡಿಸುವ ಮಣ್ಣರೂಪು, ಕಪ್ಪಡದ ಹಾಹೆ, ಕಲ್ಲಜಂತ್ರ, ಹುಲ್ಲಬೊಂಬೆ, ತೆಗೆತೆಗೆ ಸಡಿಫಡ….”[23]

ಕಂಬಳಿನಾಗಿದೇವನ ಮನೆಗೆ ಹೋಗಿದ್ದುದು ಅನುಚಿತ ಎಂದು ಬಿಜ್ಜಳ ಕೇಳಿದರೆ ಬಸವಣ್ಣನ ಉತ್ತರ ಇದು:

“….ಎರಗಿವಿಯ ಮರುಳೆ, ನಾರಣಕ್ರಮಿತರ ಕೇರಿಯಂ ಹೊಕ್ಕೆನೆ, ಮುಕುಂದಭಟ್ಟರ ಮನೆಯಲುಂಡೆನೆ, ಸೌರಿಪೆದ್ದಿಗಳಂ ಸಾರಿನಿಂದನೆ, ದಾಮೋದರ ಭಟ್ಟರಂ ಪ್ರೇಮದಿಂ ಸೋಂಕಿದೆನೆ, ಘಯಿಸರ ವಾಸನೆಯುಂಟೆ?……”[24]

ಪ್ರಶ್ನೆಗೆ ಪ್ರಶ್ನೆಯಾದರೆ ಈ ಮಾತುಗಳು ತುಂಬ ಮೊನಚಾಗಿದೆ. ಅರ್ಥಗರ್ಭಿತವಾಗಿವೆ; ಬಸವಣ್ಣ ಅನುಚಿತ ಕಾರ್ಯ ಮಾಡಿಲ್ಲವೆಂದು ಸೂಚಿಸುತ್ತವೆ; ಅಲ್ಲದೆ, ಕಂಬಳಿನಾಗಿದೇವ ಸಾಮಾನ್ಯವಲ್ಲ, ಆತ ಇವರೆಲ್ಲರಿಗಿಂತ ಹಿರಿಯ, ಶ್ರೇಷ್ಠ ಎಂಬುದನ್ನೂ ಈ ಪ್ರಶ್ನೆಗಳು ಪಡಿನುಡಿಯುತ್ತವೆ. ಈ ಮಾತುಗಳಲ್ಲಿ ಒಂದು ಹೊಸತನವಿದೆ; ಕಂಬಳಿನಾಗಿದೇವ ಮಹಾಭಕ್ತ ಎಂದು ಹೇಳಲು ಬಳಸಿದ ಈ ಮಾತುಗಳು ಹರಿಹರನ ವಿನೂತನತೆಗೆ ಸಾಕ್ಷಿಯಾಗಿವೆ. ಸತ್ವಪೂರ್ಣವಾದ, ಅರ್ಥಪೂರ್ಣವಾದ, ಸಹಜವಾದ ಗದ್ಯದ ಬಳಕೆ ಇಲ್ಲಿ ಆಗಿದೆ ಎಂಬುದು ಓದುಗರಿಗೆ ಮನವರಿಕೆಯಾಗದೆ ಇರದು.

ಪದ್ಮಾವತಿ ಮಲುಹಣನನ್ನು ಮನೆಯಿಂದ ಹೊರಗೆ ಹಾಕಿದ ಸನ್ನಿವೇಶ ತುಂಬ ಸಹಜವಾಗಿದೆ. ವೇಶ್ಯೆಯರ ಸ್ವಭಾವ, ವ್ಯಾಪರ ಈ ಗದ್ಯದಲ್ಲಿ ಚೆನ್ನಾಗಿ ವರ್ಣಿತವಾಗಿದೆ.

“…..ಮಗಳ ಮೋಹಕ್ಕೆ ಪದ್ಮಾವತಿ ಬೆರಗಾಗಿ ಕೈಯರ್ಥಮಂ ಸೆಳೆದು ಕೊಂಡಂತೆ ಮಲಮಲಂ ಮರುಗಿ, ಮಗಳ ದಾಕ್ಷಿಣ್ಯಕ್ಕೆ ಮತ್ತಂ ಕೆಲವುದಿನವಿರಿಸಿ ಸೈರಿಸಲಾರದೆ, ಮಲುಹಣೆಯನಂದಂದಿಂಗೆ ಕರೆಕರೆದಗಲ್ಕೆಯನಭ್ಯಾಸಂ ಮಾಡಿ ಮಲುಹಣನಂ ಸೆಜ್ಜೆಯ ಮನೆಯೊಳು ಮೂದಲಿಸಿ ಕುಳ್ಳಿರ್ದೆಡೆಯೊಳು ಕುಸುರಿದರುದು ನಿಂದೆಡೆಯೊಳು ನೀರಂ ಚೆಲ್ಲಿ ಮನೆಯ ಮುಂದೆ ಸುಳಿವ ಹೊಸ ಹರೆದಯ ಸಂಪನ್ನರಪ್ಪ ರಾಜಪುತ್ರರುಟ್ಟುಡಗೆಯಂ ತೊಟ್ಟ ತೊಡಗೆಯಂ ಕಂಡು ಅವರಂ ಪೊಗಿಸುವೆನೆಂದು, ಸೈರಿಸಲಾರದೆ ಮನಂ ಬೆದರಿ ಹಲುದಿಂದು ಅವುಡಂ ಕಚ್ಚಿ ವಿಳಾಸಿನಿಯರಂ ನಿಃಕಾರಣಂ ಬಡಿದು ಕಾಳುಜಗಳಮಂ ತೆಗೆದು ಬೇನೆಯಿಲ್ಲದೆ ನರಳ್ದು ಸಾವಿಲ್ಲದೆ ಶೋಕಂಗೆಯ್ದು ಬರಿ ಸಾಲಕ್ಕೆ ಹುಸಿದಗಹಂ ಕೊಟ್ಟು ಕಳಿದ ಹೂವಂ ಬಿಸುಡುವಂತೆ ಮಲುಹಣನಂ ಮನೆಯಿಂ ಪೊರಮಡಿಸಿ ನಿಸ್ಸರಂನೀಕರಿಸಿ ಸಸ್ಸರನಿದಿರ್ಗೊಳಲೆಂದು ಪದ್ಮಾವತಿ ಮಲುಹಣೆಯಂ ಮಲುಹಣನಂ ವಿರಹಸಂತಾಪದ ಚಿಂತೆಯಂ ತಿಳುಪಿ ಬೋದಿಸುತ್ತಮಿರಯಿರೆ[25]

ಹರಿಹರನ ಗದ್ಯದ ಬಗ್ಗೆ ಎಷ್ಟು ಹೇಳಿದರೂ ಸಾಲದೆನಿಸುತ್ತದೆ; ಎಷ್ಟು ಉದಾಹರಣೆ ಕೊಟ್ಟರೂ ತೃಪ್ತಿಯೆನಿಸುವುದಿಲ್ಲ. ದಿ.ಎಂ.ಆರ್. ಶ್ರೀಯವರ ಮಾತುಗಳೊಂದಿಗೆ ಈ ಲೇಖನವನ್ನು ಮುಗಿಸುತ್ತೇನೆ:

“ಹರಿಹರನ ಪದ್ಯಶೈಲಿಗಿಂತಲೂ ಗದ್ಯ ಶೈಲಿ ಉತ್ತಮವಾದುದು. ಕಥೆ ದೊಡ್ಡವಾಗಿರುವ ಸಂದರ್ಭದಲ್ಲಿ ಒಂದು ಸ್ಥಳವನ್ನು ಪದ್ಯದಲ್ಲಿಯೂ ಒಂದು ಸ್ಥಳವನ್ನು ಗದ್ಯದಲ್ಲಿಯೂ ಬರೆಯುತ್ತಾನೆ. ಗದ್ಯದಲ್ಲಿ ಕಥೆಯನ್ನು ಹಿಂದೆ ಚಾವುಂಡರಾಯನು ಹೇಳಿದ್ದನು. ಆದರೆ ಹರಿಹರನ ಮನೋಹರವಾದ ಶೈಲಿ ಅಲ್ಲಿ ಕಂಡುಬರುವುದಿಲ್ಲ. ಕನ್ನಡ ಸಾಹಿತ್ಯದಲ್ಲಿ ಎಲ್ಲಿಯೂ ಆ ಗದ್ಯದ ಓಟ, ಸೊಗಸು, ಬಿಗಿ, ಶಕ್ತಿ ಕಂಡುಬರುವುದಿಲ್ಲವೆಂದು ಧಾರಾಳವಾಗಿ ಹೇಳಬಹುದು. ಹರಿಹರನು ಹೀಗೆ ಹೊಸ ಮಾದರಿಯ ಗದ್ಯ ನಿರ್ಮಾಣಕನಾಗಿ ಸಾಹಿತ್ಯ ಪ್ರಪಂಚದಲ್ಲಿ ಒಬ್ಬ ಅಭಿನವ ಬ್ರಹ್ಮನಾಗಿದ್ದಾನೆ.”

[1] ಡಾ || ಹಿರೇಮಲ್ಲೂರು ಈಶ್ವರನ್‌: ಹರಿಹರನ ಕೃತಿಗಳು ಒಂದು ಸಂಖ್ಯಾನಿರ್ಣಯ, ಪುಟ ೪೬೨. ಪ್ರ: ಮೈಸೂರು ವಿಶ್ವವಿದ್ಯಾಲಯ – ೧೯೭೧.

[2] ಅದೇ ಪುಟ ೪೬೪.

[3] ಈತನ ಕಾಲನಿರ್ಣಯ ಇನ್ನೂ ತೊಡಕಿನದೇ ಆಗಿದೆ.

[4] ಕವಿರಾಜಮಾರ್ಗಕಾರ ಹೇಳುವ ಗದ್ಯಕವಿಗಳಲ್ಲಿ ಯಾರದಾದರೂ ಕೃತಿ ಉಪಲಬ್ಧವಾಗಿದ್ದರೆ ಮೊದಲಪಟ್ಟ ಅವರಿಗೆ ಹೋಗಬಹುದಿತ್ತು.

[5] ಇಲ್ಲಿ ಈ ಮಾತುಗಳನ್ನು ನೆನೆಯಬಹುದು: ‘ಪದ್ಯಕ್ಕಿಂತಲೂ ಗದ್ಯವು ಶ್ರೇಷ್ಠವೆಂದು ಹೇಳುತ್ತಾರೆ. ಆ ಮಾತಿಗೆ ಉತ್ತಮ ನಿದರ್ಶನ ಹರಿಹರನ ಗದ್ಯ. ಆತನ ಗದ್ಯಶೈಲಿಯನ್ನು ಪರಿಣಾಮಕಾರಕವಾದ ಆವರ್ತನ ಶೈಲಿಯೆಂದು ಕರೆಯಬಹುದು. ಬಾಣನ ಗದ್ಯಕ್ಕೆ ಸರಿದೊರೆಯಾದ ಗದ್ಯ ಅವನದು, ಆದರೆ ಅಲ್ಲಿ ಕ್ಲಿಷ್ಟತೆ ಇಲ್ಲ; ಸಾರಳ್ಯವಿದೆ, ಜಟಿಲ ಪದಬಂಧವಿಲ್ಲ; ತಿಳಿಮಾತುಗಳಿವೆ. ಹರಿಹರನ ಗದ್ಯದ ಮೇಲೆ ವಚನ ಸಾಹಿತ್ಯದ ಪ್ರಭಾವ ಬಿದ್ದಿರುವುದರಿಂದ ಅಲ್ಲಿ ವಚನ ಶೈಲಿಯ ಲಕ್ಷಣಗಳಿವೆ. ಆತನ ಗದ್ಯವು ಸ್ವಚ್ಛಂದ ಕಾವ್ಯಶೈಲಿಯೇ ಆಗಿರುತ್ತದೆ.” (ಡಾ || ಹಿರೇಮಲ್ಲೂರು ಈಶ್ವರನ್: ಹರಿಹರನ ಕೃತಿಗಳು ಒಂದು ಸಂಖ್ಯಾ ನಿರ್ಣಯ, ಪುಟ ೪೮೪))

[6] ಶ್ರೀ ಹೆಚ್. ದೇವಿರಪ್ಪ : ಶರಣ ಚರಿತ ಮಾನಸಂ, ಪುಟ xxxvii, ಪ್ರಕಾಶನ ಗೌರಿಶಂಕರ ಬುಕ್‌ ಡಿಪೋ ಮೈಸೂರು, – ೧೯೬೮

[7] ಡಿ.ಎಲ್.ಎನ್: ಹರಿಹರ, ಪುಟ ೪೯, ಮೈಸೂರು ವಿಶ್ವವಿದ್ಯಾಲಯ, ೧೯೭೨, ಆರನೆಯ ಮುದ್ರಣ.

[8] ಡಾ || ಆರ್‌.ಸಿ. ಹಿರೇಮಠ, (ಸಂ), ಹಂಪೆಯ ಹರಿಹರದೇವಕೃತಿ ಪುರಾತನರ ರಗಳೆಗಳು, ಪುಟ ೪೫ – ೩೪೬, ಪ್ರಕಾಶನ, ಕ.ವಿ. ವಿದ್ಯಾಲಯ ಧಾರವಾಡ – ೧೯೭೩.

[9] ಡಾ || ಡಿ.ಎಲ್. ನರಸಿಂಹಾಚಾರ್: ಹರಿಹರ, ಪುಟ ೫೨, ಮೈ.ವಿ.ವಿದ್ಯಾನಿಲಯ – ೧೯೭೨.

[10] ವಿ.ಸೀತಾರಾಮಯ್ಯ: ಹರಿಹರದೇವ, ಪುಟ ೧೭೯ – ೧೮೦, ಐ.ಬಿ. ಎಚ್.ಪ್ರಕಾಶನ – ೧೯೭೪

[11] ಅದೇ ಪುಟ ೧೭೯, ಅಡಿ ಟಿಪ್ಪಣಿ.

[12] ಡಾ || ಎಸ್.ಸುಂಕಾಪುರ (ಸಂ): ಹಂಪೆಯ ಹರಿಹರದೇವಕೃತ ನೂತನ ಪುರಾತನರ ರಗಳೆಗಳು ಪುಟ ೩೦ ಕ.ವಿ. ವಿದ್ಯಾಲಯ – ೧೯೭೬

[13] ಅದೇ ಪುಟ ೩೦

[14] ಅದೇ ಪುಟ ೧೩೬.

[15] ಅದೇ ಪುಟ ೧೩೫.

[16] ಡಾ || ಆರ್.ಸಿ. ಹಿರೇಮಠ, (ಸಂ) ಹಂಪೆಯ ಹರಿಹರದೇವಕೃತಿ ಪುರಾತನರ ರಗಳೆಗಳು, ಪುಟ ೧೮೪ – ೧೮೫
ಪ್ರಕಾಶನ: ಕ.ವಿ. ವಿದ್ಯಾಲಯ ಧಾರವಾಡ – ೧೯೭೩.

[17] ಅದೇ ಪುಟ ೧೩೬.

[18] ಅದೇ ಪುಟ ೧೯೪.

[19] ಅದೇ ಪುಟ ೧೨೮.

[20] ಡಾ || ಎಸ್. ಸುಂಕಾರಪುರ(ಸಂ): ಹಂಪೆಯ ಹರಿಹರದೇವಕೃತ ನೂತನ ಪುರಾತನರ ರಗಳೆಗಳು, ಪುಟ ೩೨೨.
ಕ.ವಿ. ವಿದ್ಯಾಲಯ ಧಾರವಾಡ – ೧೯೭೬

[21] ಅದೇ ಪುಟ ೨೫೩.

[22] ಅದೇ ಪುಟ ೧೬೧.

[23] ಅದೇ ಪುಟ ೬೫.

[24] ಅದೇ ಪುಟ ೭೫.

[25] ಡಾ || ಎಸ್.ಸುಂಕಾಪುರ (ಸಂ): ಹಂಪೆಯ ಹರಿಹರದೇವಕೃತ ಶಿವಭಕ್ತಿ ಮಹಿಮಾ ರಗಳೆಗಳು, ಪುಟ ೧೦೨. ಪ್ರ: ಕ.ವಿ.ವಿ – ಧಾರವಾಡ – ೧೯೭೬ ಹರಿಹರದೇವ, ಪುಟ ೨೧೦. ಪ್ರಕಾಶಕರು ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು – ೧೯೭೯