ಒಂದು ಪ್ರಶಾಂತ ಸ್ಥಳದಲ್ಲಿ ಕುಳಿತು ಲಿಂಗಪೂಜೆ ಮುಗಿಸುವನು. ಹುಲ್ಲು ಕೊಯ್ದು ಎತ್ತಿನೊಳು ಹೇರಿತಂದು ಅರಮನೆಯ ಲಾಯದಲ್ಲಿ ಹಾಕಿ ಮನೆಗೆ ಬಂದು ತಮ್ಮರಸಿಯರು ಮಾಡಿದ ಅಂಬಳಕವನ್ನು ಲಿಂಗಕ್ಕರ್ಪಿಸಿ ಸೇವಿಸುವನು. ಹೀಗೆ ಅರವತ್ತು ವರ್ಷಗಳು ಕಳೆದುವು. ಶಿವನಿಗೆ ಆತನನ್ನು ಜಗದೊಳಗೆ ಮೆರೆಸುವ ಇಚ್ಛೆಯಾಯಿತು. ಮಾದಾರ ಚೆನ್ನನೊಡನೆ ಅಂಬಲಿಯನ್ನುಂಡು ಕರಿಕಾಲ ಚೋಳನ ಷಡ್ರಸಾನ್ನಗಳನ್ನು ಒಲ್ಲೆನೆಂದ. ಮಾದರ ಚೆನ್ನನ ಹೆಸರು ಕೇಳಿ ಚೋಳ ಅವನನ್ನು ಹುಡುಕುತ್ತ ನಡೆದ. ಹಿರಿಯ ಕೇರಿಗೆ ಬಂದು ಮಾದರ ಚೆನ್ನನ ಕಾಲಿಗೆರಗಿದ.

ಆಗ ಚೆನ್ನಯ್ಯ,

ಏನಯ್ಯ ಚೋಳನೃಪ ನೀನಿಂತು ಬರ್ಪರೇ
ಭಾನುಕುಲದರ್ಪಣನೆ ನೀನಿಂತು ಬರ್ಪರೇ
ಏನ್ನ ಕುಲವಂ ನೋಡದಿಂತು ಬರ್ಪರೆ ಚೋಳ

ಎನ್ನಲು, ಅದಕ್ಕೆ ಚೋಳ,

“………….ದೇವ ದೇವನೊಲಿದವನ ಕುಲಂ ಸತ್ಕುಲಂ
ಘನಮಹಿಮನೊಲಿದ ಜಾತಿಯೆ ಜಾತಿ ನಿರ್ಮಲಂ
ಶರ್ವನೊಡನುಂಡ ನಿಮ್ಮಯ ಜಾತಿಗಾಂ ಸರಿಯೆ
ಸರ್ವಜ್ಞ ನಿಮ್ಮ ಕೆರ್ಪಿಂಗೆನ್ನ ಶಿರ ಸರಿಯೆ

ಎನ್ನುತ್ತಾನೆ.

ಲೋಕದ ಚರಿತ್ರೆಯಲ್ಲಿ ಇನ್ನೊಂದು ಇಂಥ ಘಟನೆ ಕಂಡುಬರುವುದಿಲ್ಲ, ಕುಲಜಾತಿ ಸೀಮೆಗಳನ್ನು ಮೀರಿ ಮಾನವತೆಯನ್ನು, ಅದಕ್ಕೆ ಪೋಷಕವಾದ ಭಕ್ತಿ ನಿಷ್ಠೆಗಳನ್ನು ಸಾರುವ ಇಂಥ ಚರಿತ್ರೆ ಶರಣರದೇ. ಅದನ್ನು ಹರಿಹರ ಅತ್ಯಂತ ಕುಸುರಿನಿಂದ, ಕಲಾತ್ಮಕವಾಗಿ ಕಡೆದು ನಿಲ್ಲಿಸಿದ್ದಾನೆ. ಇಲ್ಲಿ ಬರುವ ಚೆನ್ನ, ಚೋಳ, ಶಿವ – ಎಲ್ಲರೂ ಸಮಸ್ತ ಮಾನವರ ಅಂತರಂಗವನ್ನು ಬೆಳಗಿಬಿಡುತ್ತಾರೆ.

ಅಲ್ಲಮಪ್ರಭುವಿನದು ಮೇರುಸದೃಶ ವ್ಯಕ್ತಿತ್ವ. ಆತನ ಲಿಂಗಪೂಜೆಯ ವರ್ಣನೆಯನ್ನು ಹರಿಹರನಿಂದಲೇ ಕೇಳಬೇಕು. ರೂಪಕವೆಂದರೆ ಇದಕ್ಕೆನ್ನಬೇಕು; ಇದಕ್ಕೆ ಸರಿದೊರೆಯಾದುದು ನಮ್ಮ ಸಾಹಿತ್ಯಲೋಕದಲ್ಲಿ ಇಲ್ಲ.

ಇರುತೆ ಲಿಂಗಕ್ಕೆ ನೋಟದೊಳೆ ಮಜ್ಜನಕರೆದು
ಅರಲ್ದಕ್ಷಿಯೆಂಬ ಹೂವಿಂದೆ ಪೂಜೆಯ ಮೆರೆದು
ನರುಸುಯ್ಯ ಕಂಪಿಂದೆ ನವಧೂಪಮಂ ಕೊಟ್ಟು
ನೆರೆ ಮನದ ಬೆಳಗಿನಾರತಿಯೆತ್ತಿ ಪೊಡಮಟ್ಟು
ನಿಟ್ಟೆಯಿಂ ನೇಹಮುಮನಾರೋಗಿಸಲ್ಕೊಟ್ಟು
ಕಟ್ಟಳ್ಕಱಚಲಿತಾನಂದಮಂ ಮುಂದಿಟ್ಟು
ಸಕಳ ಸುಖಮಂ ಕಣ್ಗಳಿಂದ ಕೈಗೂಡುತಂ
ಸಕಳ ಭೋಗಂಗಳಂ ನೋಟದಿಂ ನೀಡುತಂ
….. ….. ….. ….. ….. ….. ….. ….. …..”

ಮಹಾದೇವಿಯಕ್ಕನ ಪೂಜೆಯಿದು:

ಕರತಳಕ್ಕೆ ಬಂದ ಮಲ್ಲಿನಾಥನಂ ಸಮರ್ಥೆ ನೋಡಿ
ಹರುಷದಿಂದ ಉರದೊಳೊತ್ತಿ ಕಣ್ಣೊಳೊತ್ತಿ ಮತ್ತೆ ನೋಡಿ
ಮುದ್ದನಿತ್ತು ನಲ್ಲಸುಖಕೆ ಬಲ್ಲದೊಂದು ಸೊಲ್ಲ ಹಾಡಿ
ಮುದ್ದ ನುಡಿವುದೇನು ಈಗ ಚೆನ್ನಮಲ್ಲಿನಾಥ ನೋಡಿ
….. ….. ….. ….. ….. ….. ….. ….. …..
….. ….. ….. ….. ….. ….. ….. ….. …..
ಭಾವದೊಳಗೆ ನಿಂದ ಮೂರ್ತಿಯಂ ಮುಸುಂಕಲರ್ಚಿಸುತ್ತೆ
ತನ್ನ ರೂಪು ಲಿಂಗದೊಳಗೆ ಲಿಂಗರೂಪು ಹೃದಯದೊಳಗೆ
ಭಿನ್ನವಿಲ್ಲದುಭಯದೊಳಗೆ ತೋಱಲರ್ಚಿಸುತ್ತಲೊಳಗೆ
….. ….. ….. ….. ….. ….. ….. ….. …..”

ಹರಿಹರನ ಕಥಾಕುಸುರಿನ ಅತ್ಯಂತ ಶ್ರೇಷ್ಠ ಮಾದರಿ ಶಿವನು ನಂಬಿಯಣ್ಣನಿಗೆ ‘ಕುಂಟಣಿ’ಯಾದುದು. ಭಕ್ತಿಯನ್ನು ಪ್ರೇಮವನ್ನು ಕಾಮವನ್ನು ಪ್ರಣಯವನ್ನು ಒಗ್ಗೂಡಿಸಿ ಬದುಕಿ ಬಾಳು ನಂಬಿಯಣ್ಣನದು. ಆತನ ಚರಿತ್ರೆಯನ್ನು ಹರಿಹರ ತುಂಬಾ ಚಲುವಿನಿಂದ ಕಂಡರಿಸಿದ್ದಾನೆ.

ತಿರುವತ್ತಿಯೂರ ದೇವಾಲಯದಲ್ಲಿ ನಂಬಿ ಸಂಕಿಲಿಯನ್ನು ಕಂಡು, ಆಕೆಯನ್ನು ತನಗೆ ಮಾಡಿಕೊಡಬೇಕೆಂದು ಶಿವನನ್ನು ಕೇಳಿದ. ಶಿವನಿಗೆ ಒಳಗೊಳಗೆ ಸಂತೋಷ; ಹೊರಗೆ ಮುನಿಸು, “ಏನು ಮಾತಿದು ನಂಬಿ? ಅವರು ಕುಲಕ್ಕೆ ಕನ್ನಡಿ ಕಲ್ಮಷಂ, ಮಾರ್ತಂಡಂ ಮಲಿನಂ. ಅಲ್ಲದೆ, ಅವಳ ಶೈಶವದ ಕಾಲದಲ್ಲಿ ಓರ್ವ ರಾಜಪುತ್ರನಿಗೆ ಕೊಡಬೇಕೆಂದಾಗಿತ್ತು. ಅವನು ತಈರಿದ. ಅಂದಿನಿಂದ ಸಂಕಿಲಿ ಅವನೊಡನಿದ್ದುದೇ ಬಾಳೆಂದು ಜೀವಿಸಿದ್ದಾಳೆ. ಈ ಮಾತನ್ನು ಅವರ ಮಾತೆಪಿತರು ಕೇಳಿದರೆ ನನ್ನನ್ನೂ ನಿನ್ನನ್ನೂ ಇರಗೊಡರು” ಎಂದ ಶಿವ. ಅದಕ್ಕೆ ನಂಬಿ, “ನನಗೆ ಸಂಕಿಲಿ ಬೇಡ, ಪ್ರಮಾಣಪತ್ರ ಕೊಡು” ಎಂದು ಕಾಮಗಿಚ್ಚಿನಲಿ ಬಿದ್ದ ಕೀಡಿಯಂತೆ ಮಿಡುಕಿ ಬಿದ್ದು, ಸಿಡಿಮಿಡಿಗೊಂಡು ರಂಗಮಂಟಪದಲ್ಲಿ ಬಿದ್ದು ಹೊರಳಾಡಿದ. ಶಿವನಿಗೆ ಕರುಣೆ ಬಂದು, ಹೋ ಹೋ ಮಗನೆ, ಇನಿತಾಸುರವೇಕಂಜದಿರಂಜದಿರ್. ಮೆಲ್ಲನೆ ಪೋಗಿ ವಿಚಾರಿಸಿ ಬಂದಪೆವೇಳೇಳೂ” ಎಂದ. ಪ್ರಭಾಕರನನ್ನು ಪಶ್ಚಿಮಾಭಿದ್ಧಿಗೆ ಕಳಿಸಿ ಪ್ರಣಯ ಜನ ಪ್ರಾಣಾಮೃತನಾದ ಶಿವ ಜಂಗಮರೂಪಿನಿಂದ ಸಂಕಿಲಿನಾಚಿಯ ಮನೆಗೆ ಬಂದ. ಆಕೆಯ ತಾಯಿ ಶಿವದೇವಿ ಆತನನ್ನು ಕನಕಮಣಿ ಭದ್ರಾಸನದಲ್ಲಿ ಕುಳ್ಳಿರಿಸಿದಳು. ಮೆಲ್ಲನೆ ಶಿವ ಸಂಕಿಲಿ ಎಲ್ಲಿ? ಎಂದು ಕೇಳಿದನು. “ಆಕೆ ಇಂದು ಶಿವಾಲಯದಿಂದ ಬಂದು ಮರುಳಂತೆ ಮರನಂತೆ ಜಡರಂತೆ ಆಗಿದ್ದಾಳೆ” ಎಂದಳು. ಅದಕ್ಕೆ ಶಿವನು, “ಅದು ಕಾರಣದಿಂ ಬಂದೆವು. ಎಮ್ಮ ಮಗನ ರೂಪಂ ಕಂಡು ಸಂಕಿಲಿಯ ಮನಂ ಕಲಕಿತು ಎಂದ”. ಅದಕ್ಕೆ ಆಕೆ, “ನಿಮ್ಮಡಿಗಳ ಮಗನೋರ್ವಂ: ಗಜಮುಖನೋರ್ವಂ; ಷಣ್‌ಮುಖನೋರ್ವಂ; ದಕ್ಷಾಧ್ವರಧ್ವಂಸಿಯೋರ್ವಂ; ಯೆನ್ನ ಮಗಳು ಸೋಲುವಂತಪ್ಪ ಮಕ್ಕಳಾರೆ” ಎಂದು ಬಿನ್ನವಿಸಿದಳು. “ಈಗಳೀಮರ್ತ್ಯದೊಳಗೊರ್ವ ಪೊಸಮಗನಂ ಸೌಂದರನೆಂಬವನಂ ಪಡೆದೆವು. ಆಥನಂ ಸಂಕಿಲಿಯೊಳು ನೆರೆವುದಕ್ಕೆ ನಿಮ್ಮಲ್ಲಿಗೆ ಬಂದೆವು” ಎಂದು ಭಕ್ತಜನಲೀಲಾಲೋಲ ಚಿತ್ತಂ ಶಿವದೇವಿಯರ್ಗೆ ಬೆಸಸಿದ.

ಶಿವದೇವಿಗೆ ಸಂತೋಷವಾಯಿತು. “ಕರುಣಿಪುದು ಕೂಡುವುದು ಸಂಕಿಲಿಯನಾತನೊಳು” ಎಂದಳು. ಅದಕ್ಕೆ ಆತ “ಇಷ್ಟು ತೀವ್ರ ಬೇಡ. ನಿನಗೆ ಗೊತ್ತಿಲ್ಲ, ತಿರುವಾರೂರೊಳಗೆ ಆತನಿಗೆ ಇನ್ನೊಬ್ಬ ಸತಿಯಿದ್ದಾಳೆ. ಅವಳಲ್ಲಿಗೆ ಹೋಗದಂತೆ ಭಾಷೆ ತೆಗೆದುಕೊಳ್ಳಬೇಕು. ಆ ಮೇಲೆ ಇವರನ್ನು ಒಂದುಗೂಡಿಸಬೇಕು. ಆತನನ್ನು ನಿಮ್ಮಲ್ಲಿಗೆ ಕಳಿಸುವೆನು. ನೀವು ಆತನಿಂದ ಭಾಷೆ ತೆಗೆದುಕೊಳ್ಳಿರಿ – ” ಎಂದು ಹೇಳಿ, ದಿನಕರನಿಗೆ ಉದಯಿಸಲು ಅಪ್ಪಣೆ ಮಾಡಿ ಶಿವ ಹೋದ. “ಕಂಡದ್ದನ್ನು ಬಯಸುವೆ. ಹೋಗು, ತುಂಬುರನ ಜೊತೆಗೆ ಅವರ ಮನೆಗೆ ಹೋಗು” ಎಂದು ಶಿವ ನುಡಿದ. ನಂಬಿಯಣ್ಣ ಸಿಂಗಾರಮಾಡಿಕೊಂಡು ಹೊರಟ. ಶಿವದೇವಿ ಆದರದಿಂದ ಬರಮಾಡಿ ಕೊಂಡಳು. ತುಂಬುರನನ್ನು ಪಕ್ಕಕ್ಕೆ ಕರೆದು “ಇವರ ಮನಸ್ಸು ಮುಂದೆ ಚಂಚಲಗೊಳ್ಳಬಹುದು. ಅದಕ್ಕಾಗಿ ದೇವರ ಮುಂದೆ ಸಂಕಿಲಿಯನ್ನು ಬಿಡುವುದಿಲ್ಲವೆಂದು ಇವರು ಭಾಷೆ ಕೊಡಲಿ” ಎಂದಳು. ತುಂಬುರ ನಂಬಿಗೆ ಹೇಳಿದ. ಆತ ದೇವಾಲಯಕ್ಕೆ ಬಂದು “ಶಿವನೇ ನೀನು ಒಂದೊಂದನ್ನೇ ಮಾಡುವೆ, ಶಿವದೇವಿ ಸೂರುಳು ಬೇಡಿದ್ದಾಳೆ. ಅದಕ್ಕಾಗಿ ನೀನು, ದೇವಿಯರು, ಷಣ್ಮುಖ, ಗಣಪತಿ ಸಹಿತವಾಗಿ ಅಲ್ಲಿ ಮುಂದಿರುವ ಮರದಡಿಯಲ್ಲಿ ಇರಹೋಗಿರಿ. ನಾನಿಲ್ಲಿ ದೇವಾಲಯದಲ್ಲಿ ಸೂರುಳುಗೊಡವೆ” ಎಂದ. ಅದಕ್ಕೆ ಶಿವ ಒಪ್ಪಿ ಮಡದಿ – ಮಕ್ಕಳೊಡನೆ ಮರದಡಿಗೆ ಹೋದ.

ಸಂಕಿಲಿನಾಚಿ ಸಹಿತ ಶಿವದೇವಿ ದೇವಾಲಯಕ್ಕೆ ಬರುತ್ತಿದ್ದಳು. ನಡುದಾರಿಯಲ್ಲಿ ಶಿವ, ನಂಬಿಯರಿಯದಂತೆ, ಶಿವದೇವಿಯನ್ನು ಕಂಡು, “ನಾವು ಮಂದಿರದ ಮುಂದಿನ ಮರದಲ್ಲಿರುವೆವು. ನೀವು ಅಲ್ಲೇ ಭಾಷೆ ತೆಗೆದುಕೊಳ್ಳಿರಿ, ದೇವಾಲಯದಲ್ಲಿ ಬೇಡ, ಈ ಶಿವಾಲಯದ ಮುಂದಿರುವ ಮರದಡಿಯಲ್ಲಿ ನಿಂತು ಶಿವನರಿವಂತೆ ಸಂಕಿಲಿಯನ್ನು ಬಿಡೆನೆಂದು ಭಾಷೆ ಕೊಟ್ಟರೆ ಸಾಕು” ಎಂದಳು. ಅದನ್ನು ಕೇಳಿ ಸೌಂದರನಿಗೆ ಎಲ್ಲಿಲ್ಲದ ಕೋಪ ಬಂತು. ಇದು ಶಿವನ ಕೆಲಸವೇ ಎಂಧು ತಿಳೀದುಕೊಂಡ. ಸರಿ. ನಿಂತವರೆಲ್ಲರ ಮುಂದೆ ಲಜ್ಜೆದೊರೆದು ಭಾಷೆಗೊಟ್ಟ “ಇನ್ನು ನಾವು ಹೋಗಬಹುದೇ ನಂಬಿ” ಎಂದು ಶಿವ ಕೇಳಿದ. ಅದನ್ನು ಕೇಳಿಯೂ ಕೇಳದಂತೆ ನಂಬಿ ಮಂದಿರಕ್ಕೆ ಬಂದು ಸಾವಿರಹೊನ್ನು ಪಡೆದ.

ಇಲ್ಲಿ ಮಾನವೀಯತೆ ನಮ್ಮನ್ನು ಸೆರೆಹಿಡಿಯುತ್ತದೆ. ನಂಬಿ ಶಿವರ ಸ್ನೇಹ ಸಲುಗೆ, ಮಾತು, ಕೋಪ, ಸೆಡವು ನಮ್ಮನ್ನು ಮೆಚ್ಚಿಸುತ್ತವೆ. ಪ್ರಣಯಕ್ಕೆ, ಕಾಮಕ್ಕೆ, ಶಿವಭಕ್ತಿ ಸೋಂಕಿ ಈ ಸನ್ನಿವೇಶ ಅಮೃತಮಯವಾಗಿದೆ. ಯೋಗ – ಭೋಗ ಇಲ್ಲಿ ತೊಡಕಿಲ್ಲದ ಸಮರಸ ಹೊಂದಿದೆ.

ಇಂಥದೇ ಮಾನವೀಯ ದೃಷ್ಟಿ ಕಾರಿಕಾಲಮ್ಮೆಯರ ಚರಿತ್ರೆಯಲ್ಲಿ ಕಂಡು ಬರುತ್ತದೆ. ಮೈಯಲ್ಲ ಎಲುವಾಗಿ ತಲೆಯೂರಿ ಬರುವ ಕಾರಿಕಾಲುಮ್ಮೆಯನ್ನು ಪಾರ್ವತಿ ಕಂಡು ನಡುಗಿ, “ದೇವಾ, ಇದೊಂದು ಮರುಳೀಬಂದುದೆಲೆ ದೇವಾ” ಎಂದು ಹಿಂದಕ್ಕೆ ಸರಿದು ಶಂಭುವನ್ನು ಬಿಗಿದಪ್ಪಿದಳು. ಆಗ ಶಿವ,

ಅಲ್ಲಲ್ಲ ಎಲೆ ಗಿರೆಜೆ ಕಾರಿಕಾಲಮ್ಮೆಯರು
ಅಲ್ಲಲ್ಲ ಗೌರಿ ನಿಮ್ಮತ್ತೆ ನಮ್ಮವ್ವೆಯರು
ಎನ್ನಯ ಜನನಿಯೆನಗೆ ಹಣ್ಣಿತ್ತ ಹಿತವೆಯರು
ಎನ್ನವ್ವೆ ನಿಮ್ಮತ್ತೆ ಕಾರಿಕಾಲಮ್ಮೆಯರು
ಮರುಳೆಂಬರೇ ವಿಚಾರಂ ನಿನಗೆ ತೋಱದೆನೆ
ಮರುಳೆನಲ್ಲಾಗದೆಲೆ ದೇವಿ ಪೊಡಮಡುವುದು…” ಎಂದ.

ಈ ಮಾತುಗಳು ಎಷ್ಟು ಹಿತವಾಗಿವೆ; ಅಷ್ಟು ಅಪ್ಯಾಯಮಾನವಾಗಿವೆ. ಶಿವನ ಮಾತುಗಳು ಲೌಕಿಕರಂತೆ ಇವೆ. ಅಂತೆಯೆ ಅವು ನಮ್ಮನ್ನು ರಂಜಿಸುತ್ತವೆ. ಆತನ ಮಾತುಗಳು ಕಾರಿಕಾಲಮ್ಮೆಯ ಭಕ್ತಿಗೆ ಕಳಶವಿಟ್ಟವೆ.

ನಂಬಿಯಣ್ಣನದೊಂದು ರೀತಿಯ ಪ್ರಣಯ ಜೀವನವಾದರೆ ಮಲುಹಣನದೊಂದು ಬಗೆಯ ಪ್ರಣಯ ಜೀವನ. ಪ್ರಣಯಜನಪ್ರಾಣಮಿತ್ರನಾದ ಶಿವ ಇಲ್ಲಿಯೂ ನಮಗೆ ಮೆಚ್ಚುಗೆಯಾಗುತ್ತಾನೆ. ಅಲ್ಲದೆ ಕವಿ ಮಲುಹಣನ ಪಾತ್ರವನ್ನು ಕಂಡರಿಸಿದ ರೀತಿ ಅದ್ಭುತವಾದುದು; ಮಾನವರಿಗೆ ಆದರ್ಶವಾದುದು; ಆದರ್ಶವೆಂದರೆ ಕೇವಲ ಹೇಳಲಿಕ್ಕಲ್ಲ, ಅನುಕರಣೆಗೆ ಬರುವಂಥದು.

ಮಲುಹಣೆಯನ್ನಗಲಿದ ಮಲುಹಣನ ವಿರಹ ಸ್ಥಿತಿ ಎಂತಹುದು? ‘ಪೊಕ್ಕ ಕೊಳನುಕ್ಕಿ ನೆರೆ ಬತ್ತಿ ಬರಿದಾದುಪುದು; ಮಿಕ್ಕು ಮುಟ್ಟಿದ ಪಲ್ಲವಂಗಳುರೆ ಸೀದಪುವು’. ಇಂಥ ಸ್ಥಿತಿಯಲ್ಲಿ ಆತ ಮಲುಹಣೆಯ ಮನೆಯ ಮುಂದೆ ರಾತ್ರಿಯೆಲ್ಲ ನಿಂತ; ಮೈತುಂಬ ಮಂಜು ಮುಸುಕಿತು. ಒಳಗೆ ಮಲುಹಣ ವಿರಹಕ್ಕೆ ಪಕ್ಕಾಗಿ, ತಾಪಕ್ಕೆ ತಂಪಾಗಿ ಇದ್ದನಂತೆ. ಆತನ ದುರವಸ್ಥೆಯನ್ನು ಕಂಡು ಮಲುಹಣೆ,

ಎನ್ನ ಮೇಲಿಕ್ಕುವಾ ಚಿತ್ತದಾತುರತೆಯಂ
ಪನ್ನಗಾಭರಣನೊಳು ಮಾಳ್ಪುದೆನ್ನೂಲುಮೆಯಂ
ಎಂದಳು. ಮಲುಹಣ ಅದಕ್ಕೊಪ್ಪಿ,
“….
ವಿರಹಮಂ ತೆಗೆದು ಹರನ ಮೇಲಿಕ್ಕಿದಂ
ತನಿನೇಹಮಂ ಶಿವನ ಮೆಲ್ಲಡಿಗೆ ಸಾರ್ಚಿದಂ

ಇದು ಭಕ್ತಿ; ಅಂತಸ್ಸತ್ವವುಳ್ಳ ಭಕ್ತಿ. ಪ್ರಣಯ, ಕಾಮ, ಪ್ರೇಮ, ಮೋಹ ಏನಿದ್ದರೂ ಅದರ ಹಿಂದೆ ಇಂಥ ಭಕ್ತಿ ಇದ್ದರೆ ಏನು ಸಾಧ್ಯವಾಗದು?

ಮಲುಹಣ ವಿಜಯೇಶ್ವರನ ಮಂದಿರಕ್ಕೆ ಬಂದು
“……..
ಕುದಿಕುದಿವ ಕರಣಂಗಳೊಳು ಬಣ್ಣಿಸಲು
ಬಂದು ವಿರಹ ಸ್ತೋತ್ರವೀಶನೊಳು ಸೇರಿಸಲು

ಶಂಕರ ಮೆಚ್ಚಿ ಬಂದು,

ಮೆಚ್ಚಿದೆಂ ಬೇಡಿಕೊಳ್ಳೆಲವೊ ಮಲುಹಣಂ ಎನಲು
ಚಚ್ಚರಂ ಮಲುಹಣೆಯ ನೀವುದೆನಗೆಂದೆನಲು

ಶಿವ ಕರುಣಿಸಿದ. ಶಿವ ಪ್ರತ್ಯಕ್ಷವಾದಾಗ ಆ ಸಾಕ್ಷಾತ್ಕಾರಕ್ಕೆ ಮೂಲವಾದ ಮಲುಹಣಿಯನ್ನು ಮಲುಹಣ ಮರೆಯಲಾರದ್ದು ಒಂದು ಮಹತ್ವದ ಮಾತು. ಕೈಹಿಡಿದ ಹೆಂಡಂದಿರಿಂದ ಬುದ್ಧಿಗಲಿತು ದೈವಸಾಕ್ಷಾತ್ಕಾರವಾದಾಗ ಆ ಹೆಂಡಂದಿರನ್ನೇ ಮರೆತವರು ಲೋಕದಲ್ಲಿದ್ದಾರೆ. ಆದರೆ ಆ ಪಂಥ ಶರಣರದಲ್ಲ, ಶಿವಭಕ್ತರದಲ್ಲ. ಶಿವನ ಕರುಣೆಯಾದ ಮೇಲೆ ನೂರು ವರ್ಷ ಮಲುಹಣ ಮಲುಹಣಿಯರು ಬದುಕಿದ ಬಾಳು ಸರ್ವಕಾಲಕ್ಕೂ ಸರ್ವರಿಗೂ ಆದರ್ಶವಾದುದು.

ಕಾಮಮುಂ ಕ್ರೋಧಮುಂ ಕಾಮಾರಿಗರ್ಪಿತಂ
ನೇಮಮುಂ ಪ್ರೇಮಮುಂ ಶಂಕರಂಗರ್ಪಿತಂ
ನೋಟಮುಂ ಬೇಟಮುಂ ಪುರಹರಂಗರ್ಪಿತಂ
ಕೂಟಮುಂ ತೃಪ್ತಿಯುಂ ತ್ರಿಣಯನಂಗರ್ಪಿತಂ
ಕಂಡುದುಂ ಕೊಡವುದುಂ ಈಶ್ವರಂಗರ್ಪಿತಂ
ಕೊಂಡುದುಂ ಸವಿದುದುಂ ಶಂಕರಂಗರ್ಪಿತಂ” –

ಆಗಿ ನೂರು ವರ್ಷ ಬಾಳಿದರು.

ಹರಿಹರನ ಭಕ್ತರೆಲ್ಲ ಕಾಯಕವಂತರೇ; ಸರ್ವ ಕಾಯಕದವರೂ ಇಲ್ಲಿದ್ದಾರೆ. ಕುಂಬಾರ, ಜೇಡರ, ಸಿಂಪಿಗ, ಮುಚ್ಚಿಗ, ಬೇಟೆಗಾರ, ಕೂಲಿಯಾಳು, ದನಕಾಯುವವ, ಅಗಸ, ಒಕ್ಕಲಿಗ, ವ್ಯಾಪಾರಿ, ತಿಲಕಾಯಕದವ, ಮೀನುಗಾರ, ಅರಸ, ಮಂತ್ರಿ – ಹೀಗೆ ಈ ಪ್ರಪಂಚ ದೊಡ್ಡದು. ಸಾಮಾನ್ಯ ಕೆಲಸವನ್ನು ಕಾಯಕ ಮಟ್ಟಕ್ಕೆ ಏರಿಸಿದ್ದು, ಸಾಮರಸ್ಯದ ಮಟ್ಟಕ್ಕೆ ಮುಟ್ಟಿಸಿದ್ದು ಶರಣರ, ಭಕ್ತರ ಹಿರಿಮೆ. “ಮಾಡುವ ಮಾಟದಲ್ಲಿಯೇ ಬೇರೊಂದು ಪರಿಯನರಿಯಬೇಕುಎಂಬುದು ಈ ಕಾಯಕದ ಗುಟ್ಟು. ಪ್ರಾಮಾಣಿಕತೆ, ತಾದಾತ್ಮ್ಯತೆ, ಪ್ರೀತಿಗಳನ್ನು ನಾವು ಈ ಕಾಯಕಗಳಲ್ಲಿ ಕಾಣುತ್ತೇವೆ. ಎಲ್ಲ ಕಾಯಕಗಳು ಸಮಾನವಾದವು, ಪವಿತ್ರವಾದವು ಎಂಬುದನ್ನು ಈ ಕಾಯಕವಂತರು ಅಚರಿಸಿ ತೋರಿಸಿದ್ದಾರೆ.

ಈ ಲೇಖನದ ಮೊದಲಿಗೆ ಹೇಳಿದಂತೆ ಭಕ್ತಿ – ಕಾಯಕಗಳು ಕೂಡಿಯೇ ನಡೆಯುತ್ತವೆ. ಅವು ಒಂದನ್ನು ಬಿಟ್ಟು ಇನ್ನೊಂದಿರಲು ಸಾಧ್ಯವಿಲ್ಲ. (ಭಕ್ತನಾದವನು ಕಾಯಕವಂತನಾಗಲೇಬೇಕು; ಕಾಯಕವಂತನು ಭಕ್ತನಾಗಿರಲೇ ಬೇಕು. ಕಾಯಕವುಳ್ಳ ಈ ಭಕ್ತರು ದಾಸೋಹಿಗಳಾಗಿರುವುದು ಸರ್ವಸಾಮಾನ್ಯ.)

ಸಾಮಾನ್ಯ ಕೆಲಸದವ ತನ್ನ ಭಕ್ತಿ, ಪ್ರಾಮಾಣಿಕತೆ, ತಾದಾತ್ಮ್ಯತೆ ಮುಂತಾದವುಗಳಿಂದ ಹೇಗೆ ಸಮಾಜಕ್ಕೆ, ಲೋಕಕ್ಕೆ ಆದರ್ಶಪುರುಷನಾಗುತ್ತಾನೆಂಬುದನ್ನು ಹರಿಹರ ಸೊಗಸಾಗಿ, ಅರ್ಥಪೂರ್ಣವಾಗಿ ಚಿತ್ರಿಸುತ್ತಾನೆ; ಆತನ ಇನ್ನೊಂದು ವೈಶಿಷ್ಟ್ಯವೆಂದರೆ ಕಾಯಕಗಳನ್ನು ರೂಪಕ ಮಾಡಿ ಹೇಳುವುದು. ಶರಣರ ತಮ್ಮ ಕಾಯಕಗಳನ್ನು ತಮ್ಮ ವಚನಗಳ್ಲಿ ತಮ್ಮ ಆಧ್ಯಾತ್ಮದ ಬದುಕಿಗೆ ಹೊಂದಿಸಿ ರೂಪಕಗಳನ್ನಾಗಿ ಮಾಡಿ ಹೇಳಿದ್ದಾರೆ. ಆ ಶರಣರ ದಾರಿಯಲ್ಲಿಯೇ ನಡೆದ ಹರಿಹರ ಆ ಕೆಲಸವನ್ನು ಅತ್ಯಂತ ಸಮರ್ಪಕವಾಗಿ ಮಾಡಿದ್ದಾನೆ. ಹರಿಹರನಂಥ ಕಾಯಕದ ರೂಪಕಗಳು ಪ್ರಪಂಚದ ಸಾಹಿತ್ಯದಲ್ಲಿಯೇ ವಿರಳ. ಮೂಲ ಪುರಾತನರ ಚರಿತ್ರೆಗಳುಳ್ಳ ತಮಿಳು ಗ್ರಂಥಗಳಲ್ಲಿ ಹರಿಹರನಂಥ ರೂಪಕಗಳಿಲ್ಲ. ಇದು ಹರಿಹರನ ಹೊಸ ಸೃಷ್ಟಿ. “…..ವೃತ್ತಿಗಳಲ್ಲಿ ತತ್ತ್ವಮಯವಾಗಿ ಪೆರಿಯ ಪುರಾಣದಲ್ಲಿ ಮಾಡಿಲ್ಲ; ಸ್ಕಂದಪುರಾಣದಲ್ಲಿಯೂ ಮಾಡಿಲ್ಲ. ಇದು ಹರಿಹರನು ಕನ್ನಡ ಸಾಹಿತ್ಯಕ್ಕೆ ಕೊಟ್ಟಿರುವ ತತ್ವಭಂಡಾರ. ಕಾಯಕಗಳಿಂದ ಜೀವನ ಮಾಡುತ್ತಿದ್ದ ಭಕ್ತರಿಗೆಲ್ಲ ವೇದಾಂತ – ಸಿದ್ಧಾಂತಗಳ ಸಾರವನ್ನು ಆಯಾ ಕಾಯಕಗಳ, ಕ್ರಿಯಾ – ಕಲಾಪಗಳ ಮೂಲಕವೇ ಬೋಧಿಸಿದ ಮಹಾಗುರು ಹರಿಹರ. …..ಪೆರಿಯ ಪುರಾಣದ ಕಥೆಗಳು ತನ್ನ ವೀರಶೈವ ಭಕ್ತಿಯ ಮಟ್ಟಕ್ಕೆ ಏರಲಾರವೆಂದು ಬೋಧೆಯಾದಾಗ ಆ ಕಥೆಗಳನ್ನು ತನ್ನ ಕಾರ್ಯಕ್ಕೆ ಅನುಕೂಲಿಸುವಂತೆ ನಿಸ್ಸಂಕೋಚವಾಗಿ ಮಾರ್ಪಡಿಸಿದ್ದಾನೆ.”[1]

ಇಳೆಯಾಂಡ ಗುಡಿಮಾರ ಒಬ್ಬ ಒಕ್ಕಲಿಗ; ಆತನ ಒಕ್ಕಲುತನ ಹೀಗಿತ್ತು:

ಸಮಚಿತ್ತವೆಂಬ ಭೂಮಿಯನೆ ಹಸನಾಗಿರಿಸಿ
ಅಮರ್ದ ಶಂಕರನ ನೆನಹೆಂಬ ನೇಗಿಲನಿರಿಸಿ
ಅರಿವರ್ಗವಾಱುವಂ ಹೂಡುವೆತ್ತಂ ಮಾಡಿ
ಗರ್ವಿಸುವಹಂಕಾರಮುಮನಚ್ಚುವಂ ಮಾಡಿ
ಸರ್ವೇಶ ನಿಷ್ಠೆಯಂ ತಳಿವ ಬೀಜಂ ಮಾಡಿ
ಸುರುಚಿರ ಶಿವಜ್ಞಾನ ಶಶಿಕರಂ ಸೋಂಕುತಿರೆ
ಹರನ ಪರಮಾನಂದ ರಸದ ಮಳೆ ಕೊಳುತುಮಿರೆ
ಬಿತ್ತಿ ಬೆಳೆವಂ ಶಿವನ ಸದ್ಭಕ್ತಿಸಸಿಗಳಂ
ಕಿತ್ತು ಕಳೆವಂ ಮೊಳೆವ ಪಾಪಾದಿ ಕಳೆಗಳಂ
ಇಂತು ತನ್ನೊಳಗೆ ಭಕ್ತ್ಯಾರಂಬವಂ ಮಾಳ್ಪ
ಅಂತೆಲ್ಲರರಿಯೆ ಹೊರಗಾರಂಬವಂ ಮಾಳ್ಪ

ಕೈಕೊಂಡ ಕಾಯಕ ಒಳಗೂ ಹೊರಗೂ ಬೇಳಗುವಂತಹದು; ಇಹಪರವನ್ನು ಬೆಸೆಯುವಂತಹುದು.

ಇಳೆಯಾಂಡ ಗುಡಿಮಾರ ದಾಸೋಹಿ. ಭಕ್ತರಿಗೆ ನೀಡಿ ಮಾಡಿ ಸುಖಪಡುವ ಸುಮ್ಮಾನಿ. ಇದ್ದುದನ್ನೆಲ್ಲ ಭಕ್ತರಿಗೆ ಕೊಟ್ಟ; ಬಡತನ ಬಂತು. ಆದರೆ ಕೊಡುವ ಗುಣ ಅಳಿಯಲಿಲ್ಲ, ಮನೆಯಿಲ್ಲದಿರ್ದರೇನು? ಧನವಿಲ್ಲದಿರ್ದರೇನು? ತನುವಿದೆ ಅದರಲ್ಲಿ ಅರ್ಧ ಕೊಡುವೆ; ಹರಣವಿದೆ ಅದರಲ್ಲಿ ಅರ್ಧಕೊಡುವೆ ಎಂಬ ಛಲ ಆತನದು.

ಇಂಥ ಸ್ಥಿತಿಯಲ್ಲಿ ಶಿವ ಪರೀಕ್ಷೆಗೆಂದೇ ಬಂದ. ಮುಪ್ಪಿನ ವೇಷ ತೊಟ್ಟ, ಭೋರೆಂದು ಜಡಿವ ಮಳೆ – ಇಳೆಯಾಂಡ ಗುಡಿಮಾರನ ಸಂಸಾರಕ್ಕಾಗಲೇ ಎರಡು ಮೂರು ದಿನ ಉಪವಾಸವಾಗಿತ್ತು. ಚಳಿ ಹತ್ತಿ ಅವರು ನಡುಗುತ್ತಿದ್ದರು; ಹೊದೆಯಲು ಬಟ್ಟೆಗಳಿರಲಿಲ್ಲ. “ಹಾಸಲುಂ ಹೊದೆಯಲುಂ ಹರನ ನಾಮವೆಯವರ್ಗೆ”. ಶಿವನನ್ನು ಒಳಗೆ ಕರೆದು, ಇಬ್ಬರಿರುವಷ್ಟರ ಸ್ಥಳದ ಮಾಳಿಗೆಯನ್ನು ಕೆಡವಿ, ಜಂತೆಯನ್ನು ತೆಗೆದು ಬೆಂಕಿಯನ್ನು ಮಾಡಿದರು; ಚಳಿ ಕಾಯಿಸಿದರು. ಆ ಬಳಿಕ ಶಿವ ತನಗೆ ಹಸಿವೆ ಎಂದ; ಮನೆಯಲ್ಲಿ ಒಂದು ಕಾಳೂ ಇಲ್ಲ. ಹೆಂಡತಿಯ ಹೇಳಿಕೆಯಂತೆ ಇಳೆಯಾಂಡ ಗುಡಿಮಾರ ಹೊಲದಲ್ಲಿ ಬಿತ್ತಿದ್ದ ಮೊಳಕೆಯೊಡೆದ ಬೀಜಗಳನ್ನು ಆರಿಸಿ ತರಲು ಹೊರಟ. ಭಾರಿ ಮಳೆ, ಗುಡುಗು, ಸಿಡಿಲು ಯಾವುದಕ್ಕೂ ಹೆದರದೆ ಆತ ಬೀಜಗಳನ್ನು ಆರಿಸಿ ತಂದ; ಆತನರಸಿ ಓಗರ ಮಾಡಿದಳು. ಮಗನನ್ನು ಬಾಳೆಯೆಲೆ ತರಲು ಕಳಿಸಿದರು. ಆತ ಅಲ್ಲಿ ಹಾವು ಕಚ್ಚಿ ಸತ್ತು ಬಿದ್ದ. ಇಳೆಯಾಂಡ ಗುಡಿಮಾಯ ಆ ಸುದ್ದಿಯನ್ನು ಶಿವನಿಗೆ ಹೇಳಲಿಲ್ಲ. ಹೇಳಿದರೆ ಆತ ಉಣಲಾರ. ಆದರೆ ಶಿವ ನೀನು ಮತ್ತು ನಿನ್ನ ಮಗ ನನ್ನೊಡನೆ ಊಟಕ್ಕೆ ಕುಳಿತು ಕೊಳ್ಳಿರಿ ಎಂದ. ಗುಡಿಮಾರನಿಗೆ ಸಂಕಟಸಮಯ, ಮಗನಿಲ್ಲ; ಸತ್ತನೆಂದು ಹೇಳಿದರೆ ಶಿವ ಉಣ್ಣನು. ಕರೆದು ನೋಡುವೆ, ಬರದಿದ್ದರೆ ಶಿರವನೊಪ್ಪಿಸುವೆನೆಂದು ಮಗನನ್ನು ಕರೆದ. ನಿದ್ರೆಯಿಂದೆಚ್ಚತ್ತವನಂತೆ ಮಗ ಎದ್ದು ಬಂದ.

ಭಕ್ತಿ ಕಾಯಕ ದಾಸೋಹಗಳ ಸುಂದರ ಸಮನ್ವಯವನ್ನು ನಾವು ಈ ರಗಳೆಯಲ್ಲಿ ಕಾಣುತ್ತೇವೆ.

ತಿರುಕುರುಂಪೆತೊಂಡರ ಕಾಯಕವನ್ನು ಹರಿಹರನು ಬಹು ಅರ್ಥಪೂರ್ಣ ರೂಪಕ ಮಾಡಿ ಚಿತ್ರಿಸಿದ್ದಾನೆ.

ಪಾಪವೆಂಬ ಮಲಿನ ಮನದ ಸೀರೆಯಂ ತೆರಳ್ಚಿ ಕಟ್ಟಿ
ಕೋಪವೆಂಬ ಕತ್ತೆ ನಿಲಲು ಬೆನ್ನ ಮೇಲೆ ಮಾಣದೊಟ್ಟಿ
ನಡೆದು ಭವನ ಭಕ್ತಿರಸದ ಹೊಳೆಯ ತಡಿಯ ಬಳಿಗೆ ಬಂದು
ಮೃಡನೆ ಶರಣೆನುತ್ತೆ ದೇಹವೆಂಬ ಕಲ್ಲ ಬಳಿಗೆ ಬಂದು
ತಾಪತ್ರಯಗಳೆಂಬ ಕಿಚ್ಚಿನಿಂದ ಕುದಿಸೆ ಕುದಿವುತಿರಲು
ಕಾಪವಾಱೆ ವಸ್ತ್ರಕುಲಮನಲ್ಲಿ ಪಿಡಿದು ತೊಳೆವುತಿರಲು
ಒಗೆದನೊಗೆದನಮಮ ಹರನ ಪರಮಭಕ್ತಿ ರಸದೊಳೊಗೆದ
ನೊಗೆದನೊಗೆದನಾಹ ದೇಹಭಾವವಳಿದ ಸುಖದೊಳೊಗೆದ
ಒಗೆದ ದನಿಯನಾಲಿಸಿದರ ಪಾಪವೋಡಿಹೋಗಲೊಗೆದ
ಒಗೆಯೆ ಸಿಡಿದ ಹನಿಗಳೆಯ್ದಿದವರೆ ಮುಕ್ತರಾಗಲೊಗೆದ
ಏಕನಿಷ್ಠೆಯಿಂದ ತಿರುಹಿ ಮುರುಹಿ ಹಿಡಿದು ಹಿಂಡಿ ಹಿಳಿದು
ಏಕನಭವನೆಂಬ ದಿಟದ ಬಿಸಿಲಲೊಣಗಿಸುತ್ತೆ ಹಿಡಿದು
ಪುರಹರ ಪ್ರಸಾದದಿಂದ ರಂಜಿಸುತ್ತ ಗಂಜಿಯಿಟ್ಟು
ಶರಣಸಂಗದಿಂದೆ ಘಟ್ಟಿಸುತ್ತ ಹೊಳಹನೊಪ್ಪವಿಟ್ಟು
ಪರಮನಂಘ್ರಿಗಳಿಗೆ ಬಿಚ್ಚದಂತೆ ಮಡಿಸಿ ಗಳಿಗೆ ಮಾಡಿ
ತಿರುಕುರುಂಪೆ ತೊಂಡರೆಸೆವ ಮನದ ಮಡಿಯನೊಂದುಗೂಡಿ
ಸಕಳಭಕ್ತ ಜನಕೆ ಮನದ ಮಡಿಯನೀವುತಿರ್ಪನಲ್ಲಿ
ಸಕಳ ಶರಣಕುಲಕೆ ಸಿಂಗರಂಗಳೀವುತಿರ್ಪನಲ್ಲಿ
ಎನಿತುಪಾಸವಾದಡದಲ್ಲಿ ಬಳಲದಳಲದೊಗೆವನೊಲಿದು
ಎನಿದು ಸಗುತಿಗುಂದೆ ಕುಂದದನಿತು ಮಿಗಿಲನೊಗೆವನೊಲಿದು

ತಿರುಕುರುಂಪೆತೊಂಡ ಅಗಸ. ಆತನ ಕಾಯಕ ‘ಕೈಲಾಸ’ವಾಗಿದೆ ಇಲ್ಲಿ. ನಿಜಕ್ಕೂ ಇಂಥ ರೂಪಕ ಬೇರೆ ಕಂಡುಬರುವುದಿಲ್ಲ. ‘ದೇಹಭಾವವಳಿದು ಹರನ ಪರಮ ಭಕ್ತಿರಸದಲ್ಲಿ’ ಆತ ಒಗೆದನಂತೆ. ಕುದಿಸುವುದು, ಒಗೆಯುವುದು, ತಿರುಹಿ ಹಿಂಡುವುದು, ಒಣಗಿಸುವುದು, ಗಂಜಿಹಾಕುವುದು, ಘಟ್ಟಿಸಿ ಹೊಳಪನಿಡುವುದು, ಬಿಚ್ಚದಂತೆ ಮಡಿಸಿ ಗಳಿಗೆ ಮಾಡುವುದು – ಅಗಸನ ಕೆಲಸಗಳೆಲ್ಲ ಕಣ್ಮುಂದೆ ಕಟ್ಟುತ್ತವೆ; ಜೊತೆಗೆ ಅವು ನಮ್ಮ ಅಂತರಂಗವನ್ನು ಶೋಧಿಸುತ್ತವೆ; ಈ ಒಗೆವ ಕೆಲಸ ನಮ್ಮ ಒಳಗೂ ನಡೆವಂತೆ ನಾವು ಅನುಭವಿಸುತ್ತೇವೆ.

ಕುಂಬಾರ ಗುಂಡಯ್ಯ ಕಾಯಕದ ದೃಷ್ಟಿಯಿಂದ ಲೋಕೋತ್ತರ ವ್ಯಕ್ತಿ. ಕಾಯಕದಲ್ಲಿ ಅಂಥ ತನ್ಮಯತೆ ಬೇರೆ ಕಡೆ ಕಂಡುಬರುವುದಿಲ್ಲ. ಆತನ ಕಾಯಕವನ್ನು ಕವಿ ಹೀಗೆ ರೂಪಕ ಮಾಡುತ್ತಾನೆ :

ಆಧಾರವೆಯಾಧಾರಮದಾಗಿರೆ
ವೇಧೆಯೆ ಚಕ್ರದ ಮೊಳೆ ತಾನಾಗಿರೆ
ಮಿಗೆ ಷಟ್ ಚಕ್ರಮೆ ಚಕ್ರಮದಾಗಿರೆ
ಸೊಗಯಿಪ ನಾಭಿಯೆ ನಾಭಿಯದಾಗಿರೆ
ಕನಸಿನ ಕಾಯಂ ಮೃತ್ತಿಕೆಯಾಗಿರೆ
ನೆನಹಂ ಚಟೆದಾರಂಗಳವಾಗಿರೆ
ನಿಷ್ಠೆಯೆ ಪಿಡಿವುರದಂಡಮದಾಗಿರೆ
ಮುಟ್ಟಿ ತಿರುಗುವುದು ಜೀವನಮಗಿರೆ
ಮಾಡುವ ಭಕ್ತಿ ಕಟಾಹಮದಾಗಲು
ಕೂಡಿದ ಕರಣದೆ ಮರ್ದಿಸುತಾಗಲು
…. …. …. …. …. …. …. …. ….
…. …. …. …. …. …. …. …. ….
ಇಂತೊಳಗಣ ಘಟಕಾಯಕಮೊಪ್ಪಲು
ಸಂತತ ಹೊಡಿಗಣ ಮಾಟಮದೊಪ್ಪಲು

ಒಳಗೂ ಘಟಕಾಯಕ; ಹೊರಗೂ ಘಟಕಾಯಕ. ಈ ಕಾಯಕದಿಂದ ಬೇರೊಂದು ಮಾಟದ ಸಿದ್ಧಿ. ಬೇರೊಂದು ಅಂದರೆ ‘ಬೇರೆ’ ಎಂದಲ್ಲ; ಅದು ಅದೇ. ಆ ಮಾಟಕ್ಕೂ ಈ ಮಾಟಕ್ಕೂ ವ್ಯತ್ಯಾಸವಿಲ್ಲ.

ಕುಂಬಾರಗುಂಡಯ್ಯ ಹೊಸ ಘಟಗಳನ್ನು ಮಾಡಿ ಅವುಗಳನ್ನು ಬಾರಿಸುವ ಸೊಗಸೇ ಸೊಗಸು. ಆ ಶಬ್ದ ಸೊಗಸಿಗೆ ಶಿವ ಕುಣಿದ; ಸಚರಾಚರವೆಲ್ಲ ಕುಣಿಯಿತು.

ತಿರುನಾಳ್ವೋವ ಸಾಮಾನ್ಯ ಕಲಿ ಕೆಲಸದವ. ಆತ “ಕುಲದೊಳು ಕಿರಿಯಂ, ಮನದೊಳು ಪಿರೆಯಂ; ನೆಲದೊಳು ಕಿರಿಯಂ ಪರದೊಳು ಪಿರೆಯಂ.” ಪೊನ್ನಾಂ ಬಲದ ತಿರುನಾಳಿಗೆ ಹೋಗಬೇಕೆಂಬುದು ಆತನ ಬಯಕೆ. ಆದರೆ ಅದು ಹನ್ನೆರಡು ವರ್ಷಗಳವರೆಗೆ ಸಾಧ್ಯವಾಗಲಿಲ್ಲ. ನಿತ್ಯ ನಾಳೆ ಹೋಗಬೇಕೆನ್ನುತ್ತಿದ್ದ. ಬೆಳಗಾದರೆ ಸಾವಿರ ಕೆಲಸ ಬರುತ್ತಿದ್ದವು. ಆತನಿಗೆ ತಿರುನಾಳಿನ ಹುಚ್ಚೇ ಹಿಡಿದಂತಾಯಿತು. “ಕೀಳ್ವುದು ಕಳೆ, ನೆನೆವುದು ಪೊನ್ನಾಂಬಲ, ಉಳ್ವದು ಕೆಯ್ಯಿ, ಕಾಣ್ಬುದು ಪೊನ್ನಾಂಬಲ; ಎಲ್ಲವೂ ಪೊನ್ನಾಂಬಲವೇ ಆಯಿತು. ಕಾಯಕ ಹೊರಗಿದ್ದರೆ ಒಳಗೆ ಪೊನ್ನಾಂಬಲದ ಹಂಬಲ. ಕಡೆಗೊಮ್ಮೆ ಪೊನ್ನಾಂಬಲದಲ್ಲಿ ನಡೆಯುವ ಪಂಗುನಿಯ ತಿರುನಾಳ್ ಮಹೋತ್ಸವಕ್ಕೆ ನೆಲ್ಲು ಮೂಟೆಗಳನ್ನು ಹೊತ್ತೊಯ್ಯುವ ಬಿಟ್ಟಿ ಕೆಲಸ ದೊರಕಿತು. ಆತನ ಸಂತೋಷ ಹೇಳತೀರದು. ಪೊನ್ನಾಂಬಲಕ್ಕೆ ಹೋದ. ಶಿವನ ಮೆರವಣಿಗೆಯನ್ನು ನೋಡಿ ಕುಣಿಯತೊಡಗಿದ. ಶಿವ ಅವನನ್ನು ಕರೆತರಲು ಪೂಜಾರಿಯನ್ನು ಕಳಿಸಿದ; ಪೂಜಾರಿ ಅವನನ್ನು ಮುಟ್ಟದೆ ಹಿಂದಿರುಗಿದ. ಶಿವ ನಂದೀಶನನ್ನು ಕಳಿಸಿ ಅವನನ್ನು ಕರೆತರಿಸಿದ. ಆಗ ಎಲ್ಲರೂ ತಿರುನಾಳ್ಪೋವರಿಗೆ ಅಡ್ಡಬೀಳುತ್ತಾರೆ.

ತಿರುನಾಳಿನ ಹಬ್ಬದ ನೆನಪಿನಲ್ಲಿ ಆ ಭಕ್ತ ‘ತಿರುನಾಳ್ಪೋವ’ ಎಂಬ ಹೆಸರನ್ನೇ ಪಡೆದುಕೊಂಡ. ಒಬ್ಬ ಕೂಲಿಯವ ತನ್ನ ಕಾಯಕ ನಿಷ್ಠೆಯಿಂದ ಸಾಕ್ಷಾತ್ಕಾರ ಪಡೆಯುತ್ತಾನೆ. ನಿತ್ಯವೂ ನಾಳೆ ಹೋಗಬೇಕೆನ್ನುತ್ತಾನೆ. ಆದರೆ, ಬೆಳಗಾದರೆ ಯಾವುದೋ ಕೆಲಸ ಗಂಟುಬೀಳುತ್ತದೆ. ಆತ ಆ ಕೆಲಸಕ್ಕೆ ಬೇಸರಿಯುವುದಿಲ್ಲ.ಪ್ರಾಮಾಣಿಕವಾಗಿ ಅದನ್ನು ಮಾಡುತ್ತಾನೆ, ಪ್ರೀತಿಯಿಂದ ಮಾಡುತ್ತಾನೆ. ಜೊತೆಗೆ ಆ ಕಾಯಕದಲ್ಲಿ ತನ್ಮಯನಾದಾಗ ಅಂತರಂಗ ಪೊನ್ನಾಂಬಲೇಶನನ್ನು ನೆನೆಯುತ್ತಿರುತ್ತದೆ; ಪೊನ್ನಾಂಬಲೇಶನ ತಿರುನಾಲ ಉತ್ಸವ ನೋಡಲು ಹಾತೊರೆಯುತ್ತಿರುತ್ತದೆ; ಅವನ ಕಾಯಕ ಮತ್ತು ಆ ನೆನಹು ಒಂದೇಯಾಗುತ್ತದೆ. ಹೀಗೆ ಕಾಯಕ ಅಂತರಂಗವನ್ನೂ ಬಹಿರಂಗವನ್ನೂ ಬೆಳಗಿ ಸಾಕ್ಷಾತ್ಕಾರಕ್ಕೆ ಭಕ್ತನನ್ನು ಅಣಿಗೊಳಿಸುತ್ತದೆ; ಅಣಿಗೊಳಿಸುತ್ತದೆ ಏನು, ಆ ಕಾಯಕವೇ ಸಾಕ್ಷಾತ್ಕಾರವಾಗಿ ಪರಿಣಮಿಸುತ್ತದೆ.

ಹರಿಹರನ ಕಾವ್ಯಗಳಲ್ಲಿ ಕಂಡುಬರುವ ಭಕ್ತಿ ಮತ್ತು ಕಾಯಕಗಳನ್ನು ಅರಿಯಲು ಮಾಡಿದ ಕಿರುಪ್ರಯತ್ನ ಈ ಲೇಖನ. ಇದಕ್ಕಾಗಿ ದೀರ್ಘ ಅಧ್ಯಯನ ನಡೆಯಬೇಕು. ಆತನ ರಗಳೆಗಳನ್ನು ಬಿಡಿಬಿಡಿಯಾಗಿ ನೋಡಬೇಕು, ಇಡಿಯಾಗಿಯೂ ನೋಡಬೇಕು; ಭಕ್ತಿ ಮತ್ತು ಕಾಯಕಗಳ ಸಮಗ್ರ ಪರಿಚಯ ಆಗ ಸಾಧ್ಯವಾಗುತ್ತದೆ.

ಎಲ್ಲರ ಭಕ್ತಿಯನ್ನು ಆತ ಒಂದೇ ದೃಷ್ಟಿಯಿಂದ ನೋಡಿದರೂ ಶರಣರ ಮತ್ತು ಪುರಾತನರ ಭಕ್ತಿಯಲ್ಲಿರುವ, ಪೂಜೆಯಲ್ಲಿರುವ ವ್ಯತ್ಯಾಸವನ್ನು ಆತ ಸೂಕ್ಷ್ಮವಾಗಿ ಗ್ರಹಿಸಿ ನಿರೂಪಿಸುತ್ತಾನೆ. ಭಕ್ತಿಯ ಮೂಲಧನ ಒಂದೇಯಾದರೂ ಆಚರಣೆಯ ದೃಷ್ಟಿಯಿಂದ ಪುರಾತನರು ಮತ್ತು ಶರಣರಲ್ಲಿ ವ್ಯತ್ಯಾಸ ಇದ್ದೇ ಇದೆ. ಇಷ್ಟಲಿಂಗ, ಕಾಯಕ, ದಾಸೋಹ ಮುಂತಾದವು ಶರಣರ ಕೊಡುಗೆಗಳು. ಇವು ಪುರಾತನರಲ್ಲಿ ಕಂಡುಬರುವುದಿಲ್ಲ. ಅವರಲ್ಲಿ ಕಾಯಕವಿದೆ; ನೋಡುವ ನೀಡುವ ಗುಣವಿದೆ; ಆದರೆ ಅವು ಶರಣರ ಕಾಯಕ ಮತ್ತು ದಾಸೋಹಗಳ ಮೌಲ್ಯಕ್ಕೆ ಏರವು. ಆದರೆ ಹರಿಹರ ಶರಣರ ಕಾಯಕ ಮತ್ತು ದಾಸೋಹಗಳನ್ನು ಪುರಾತನರಿಗೆ ಆರೋಪಿಸುತ್ತಾನೆ. ಮೂಲ ಪೆರಿಯಪುರಾಣದ ಚರಿತ್ರೆಗಳನ್ನು ನೋಡಿದರೆ ಈ ಮಾತು ಸ್ಪಷ್ಟವಾಗುತ್ತದೆ. ಆದರೂ ಹರಿಹರನಿಗೆ ಶರಣರ ಮತ್ತು ಪುರಾತನರ ಸರಿಯಾದ ಚರಿತ್ರೆಗಳ ತಿಳುವಳಿಕೆಯಿತ್ತು. ಶರಣರ ಭಕ್ತಿ ಮತ್ತು ಕಾಯಕಗಳನ್ನು ಪುರಾತನರಿಗೆ ಆರೋಪಿಸಿದ್ದರೂ ಅವರಿಬ್ಬರಲ್ಲಿರುವ ವ್ಯತ್ಯಾಸ ಸೂಕ್ಷ್ಮವಾಗಿ ಅವಲೋಕಿಸಿದರೆ ಕಂಡುಬರದೆ ಇರದು.

ಗಿರಿಜಾ ಕಲ್ಯಾಣದಲ್ಲಿ ಕಂಡುಬರುವ ಭಕ್ತಿ, ಶರಣರ ಭಕ್ತಿ, ಪುರಾತನರ ಭಕ್ತಿ; ಮಲುಹಣ, ಮಳೆಯರಾಜ, ಓಹಿಲ, ಸಾಮವೇದಿ ಮುಂತಾದವರ ಭಕ್ತಿ ಮತ್ತು ಕಾಯಕಗಳನ್ನು ಅರಿಯಲು ದೀರ್ಘ ಅಧ್ಯಯನ ಅವಶ್ಯಕ. ಶರಣರ ಪ್ರಭಾವ ಹರಿಹರನ ಮೇಲಾದುದರಿಂದ ಆತನ ಎಲ್ಲ ಕಾವ್ಯಗಳಲ್ಲಿಯೂ ಶರಣರ ತತ್ವಗಳು ನುಸುಳಿಬರುವುದು ಸ್ವಾಭಾವಿಕ. ಹಾಗೆ ನುಸುಳಿವೆ. ಅವುಗಳನ್ನು ವಿಂಗಡಿಸಿ ನೋಡುವುದು ಕಷ್ಟ – ಆದರೂ ಆ ಕೆಲಸ ಆಗಬೇಕಾದುದೆಂದು ನಮ್ಮ ಅಭಿಪ್ರಾಯ.

ಗಿರಿಜೆಗೆ ಹರಿಹರ ‘ಹೊಂಗಡಗದ ಲಿಂಗವಂತೆ’ ಎನ್ನುತ್ತಾನೆ. ಇಳಿಯಾಂಡ ಗುಡಿಮಾರರ ಕಾಯಕ, ಭಕ್ತಿ, ದಾಸೋಹ, ಅಚ್ಚ ಕಲ್ಯಾಣದ ಶಿವಶರಣರಂತಿವೆ. ಒಂದು, ಹರಿಹರ ಯಾವುದೇ ಕಾವ್ಯ ಬರೆಯಲಿ ಶರಣರ ಮೌಲ್ಯಗಳನ್ನು, ತತ್ವಗಳನ್ನು ಆ ಕಾವ್ಯಗಳಿಂದ ದೂರಿಟ್ಟು ಬರೆಯಲು ಅವನಿಗೆ ಸಾಧ್ಯವಾಗಲಿಲ್ಲ. ಎರಡು, ಆತ ಮೊದಲು ಶರಣರ ರಗಳೆಗಳನ್ನು ಬರೆದು ಆ ಬಳಿಕ ಗಿರಿಜಾ ಕಲ್ಯಾಣ ಮತ್ತು ಪುರಾತನರ ರಗಳೆಗಳನ್ನು ಬರೆದಿರಬೇಕು. ಮೊದಲಿಗೆ ಪುರಾತನರ ರಗಳೆಗಳನ್ನು ಬರೆದಿದ್ದರೆ ಇಷ್ಟು ಧಾರಾಳವಾಗಿ ಶರಣರ ಮೌಲ್ಯಗಳನ್ನು ಅವುಗಳಲ್ಲಿ ಸೇರಿಸುತ್ತಿರಲಿಲ್ಲ. ಶರಣರ ರಗಳೆಗಳನ್ನು ಬರೆದು ಬರೆದು ಅವರ ಮೌಲ್ಯಗಳು ರಕ್ತಗತವಾಗಿ, ಆ ಬಳಿಕ ಪುರಾತನರ ರಗಳೆ ಬರೆಯುವಾಗ ಆ ಮೌಲ್ಯಗಳು ತಾವೇ ತಾವಾಗಿ ಆ ರಗಳೆಗಳಲ್ಲಿ ಸೇರಿರಬೇಕು. ಇದು ನಮ್ಮ ಅನಿಸಿಕೆ. ಯಾವುದೂ ಆತನ ಸಮಗ್ರ ಕಾವ್ಯಗಳ ಅಧ್ಯಯನದಿಂದ ಸಿದ್ಧವಾಗಬೇಕಾದುದು. ಅಂಥ ಅಧ್ಯಯನ ನಡೆಯಲೆಂದು ನಮ್ಮ ಆಸೆ.

[1] ಹರಿಹರದೇವ : ಎಂ.ಆರ್. ಶ್ರೀಯವರ ಲೇಖನ, ಪುಟ ೨೦೪. ಪ್ರಕಾಶನ: ಕನ್ನಡ ಸಾಹಿತ್ಯ ಪರಿಷತ್ತು – ೧೯೭೯