ಮಹಾಕವಿ ಹರಿಹರ ಕನ್ನಡದ ಸಾಹಿತ್ಯದಲ್ಲಿ ವಿನೂತನ ಸಂಪ್ರದಾಯಗಳನ್ನು ಸ್ಥಾಪಿಸಿದ ಯುಗಪುರುಷ. ಮೊಟ್ಟಮೊದಲಿಗೆ ಕಾವ್ಯವನ್ನು ಜನರ ಹತ್ತಿರಕ್ಕೆ ತಂದವನು ಆತ. ಆತನ ಕಾವ್ಯಗಳು ಸಮಾಜದ ಸಮಸ್ತ ಜನರ ಮನಗಳನ್ನು ತಟ್ಟಿದುವು, ಮುಟ್ಟಿದುವು, ಎಚ್ಚರಗೊಳಿಸಿದುವು, ಶೋಷಣೆಗೆ ಒಳಪಟ್ಟವರು ಪ್ರತಿಷ್ಠಿತ ಸ್ವಾರ್ಥಮಯ ವ್ಯವಸ್ಥೆಯ ವಿರುದ್ಧ ಎದ್ದು ನಿಂತು ಪ್ರತಿಭಟಿಸುವ ಶಕ್ತಿಯುಳ್ಳವರಾದರು – ಆತನ ಕಾವ್ಯಗಳ ಅಭ್ಯಾಸದಿಂದ.

ಹರಿಹರನ ಕಾವ್ಯಗಳಿಗೆ ಈ ಶಕ್ತಿ ಒದಗಿಬರಲು ತುಸು ಹಿಂದೆಯೇ ಆದ ಶರಣರ ಮಹಾಕ್ರಾಂತಿಯೇ ಕಾರಣ. ಶರಣರು ಲೊಕಕ್ಕೆ ನೀಡಿದ ಭಕ್ತಿ, ಕಾಯಕ, ಇಷ್ಟಲಿಂಗ, ದಾಸೋಹ ಸರ್ವಸಮಾನತೆ ಮುಂತಾದ ಹೊಸ ಮೌಲ್ಯಗಳನ್ನು ಜನರ ಜೀವನದಲ್ಲಿ ಅನುಷ್ಠಾನಗೊಳಿಸುವ ಮಹಾಮಣಿಹವನ್ನು ಆತನು ತನ್ನ ಕಾವ್ಯಗಳ ಮುಖಾಂತರ ಕೈಗೊಂಡನು. ಅಂತೆಯೇ ಪೋಗೆನೆ ಪೋಪೆ, ಬಾರೆಲೆವೊ ಬಾರೆನೆ, ಜೀಯ, ಹಸಾದವೆಂದು ಬೆಳ್ಳಾಗುತೆ ಬರ್ಪ…. ಕಷ್ಟವೃತ್ತಿಯಂ ನೀಗಿ, ಅರಸರ ಸೇವೆಯನ್ನು ತೊರೆದು, ದೋರಸಮುದ್ರದಿಂದ ಹಂಪೆಗೆ ಬಂದು ಕಾವ್ಯ ಸೃಷ್ಟಿಗೆ ಮೊದಲು ಮಾಡಿದ; ಶರಣರ ಕ್ರಾಂತಿಯನ್ನು ಮುಂದುವರಿಸಲು ಕಟಿಬದ್ಧನಾದ.

ಹರಿಹರನ ಜಾಯಮಾನ ಮುಖ್ಯವಾಗಿ ಭಕ್ತಿಯದು, ಉತ್ಸಾಹದ್ದು. ಅಂತೆಯೆ ಆತನಿಗೆ ಭಕ್ತಕವಿ ಎನ್ನುತ್ತಾರೆ; ಆತನ ಕಾವ್ಯದ ಶೈಲಿ ಉತ್ಸಾಹದ ಶೈಲಿ ಎನ್ನುತ್ತಾರೆ. ಈ ಭಕ್ತಿ ಮತ್ತು ಉತ್ಸಾಹಗಳು ಆತನ ಕಾವ್ಯಕ್ಕೆ ವಿನೂತನ ಮೆರಗನ್ನು ಕೊಟ್ಟಿವೆ. ಕಾವ್ಯವನ್ನು ಒಂದು ಹೊಸ ನಿಟ್ಟಿಗೆ ನಡೆಸಿವೆ; ಹೊಸ ಕ್ಷಿತಿಜವನ್ನು ತೆರೆದಿವೆ. ಈ ಭಕ್ತಿಯೇ ಆತನಿಗೆ ತನ್ನ ಸಮಕಾಲೀನರನ್ನು, ಜಾತಿಮತ ಪಂಥ ನೋಡದೆ, ಭಕ್ತಿಯನ್ನು ನೋಡಿ – ಸಮಗಾರನಿಂದ ಹಿಡಿದು ಅರಸರವರೆಗೆ ತನ್ನ ಕಥಾನಾಯಕರನ್ನಾಗಿ ಆರಿಸಿಕೊಳ್ಳಲು ಎಡೆಮಾಡಿಕೊಟ್ಟಿದೆ; ಕನ್ನಡ ಸಾಹಿತ್ಯದಲ್ಲಿ ನಡೆದ – ಅದೂ ಮೊದಲಿಗೆ ನಡೆದ ಅದ್ಭುತ ಕ್ರಾಂತಿಯಿದು.

ಭಕ್ತಿ ಎಂದರೆ ಹರಿಹರನಿಗೆ ಎಲ್ಲಿಲ್ಲದ ಉತ್ಸಾಹ, ಆತನ ಕಾವ್ಯಗಳೆಲ್ಲ ಭಕ್ತಿಯ ಮಡುಗಳೇ ಆಗಿವೆ. ಪಂಪಾಶತಕವಂತೂ ಆತನ ದೈನ್ಯತೆಯನ್ನು, ಆರ್ತತೆಯನ್ನು ಭಕ್ತಿಯನ್ನು ವ್ಯಕ್ತಮಾಡಲಿಕ್ಕೇ ಹುಟ್ಟಿದ್ದು. ಪುಷ್ಪರಗಳೆ ಆತನ ಭಕ್ತಿಯ, ಪೂಜೆಯ, ಸಮರ್ಪಣ ಭಾವನೆಯ ಪರಾಕಾಷ್ಠೆಯನ್ನು ಸಾರುತ್ತದೆ. ಹರಿಹರ ಆರಿಸಿಕೊಂಡ ಕಥಾನಾಯಕರೆಲ್ಲ ಭಕ್ತರೇ. ಆದರೆ ಅವರ ಭಕ್ತಿಯ ಪರಿಯು ಬೇರೆ. ಶರಣರು, ಪುರಾತನರು ಆಚರಿಸಿದ ಭಕ್ತಿ ಲೋಕದಲ್ಲಿ ವಿಶಿಷ್ಟವಾದುದು. ವಿನುತನವಾದುದು. ಈ ಭಕ್ತಿಯ ಇನ್ನೊಂದು ವೈಶಿಷ್ಟ್ಯವೆಂದರೆ ಕಾಯಕವನ್ನು ಎತ್ತಿ ಹಿಡಿಯುವುದು; ದಾಸೋಹವನ್ನು ಮಾಡಹಚ್ಚುವುದು. ಭಕ್ತಿ ಎಂದರೆ ಸಾಕು. ಅದರಲ್ಲಿ ಕಾಯಕ ಮತ್ತು ದಾಸೋಹಗಳು ಅಡಕವಾಗಿವೆಯೆಂದೇ ಅರ್ಥ.

ಮಾತಿನ ಮಾತಿನಲ್ಲಿಪ್ಪುದೆ ಭಕ್ತಿ?
ಮಾಡಿ ತನುಸವೆಯದನ್ನಕ್ಕ, ಮನ
ಸವೆಯದನ್ನಕ್ಕ
ಧನ ಸವೆಯದನ್ನಕ್ಕ ಅಪ್ಪುದೇ ಭಕ್ತಿ?
…. ….. …… …… ….. ….. ….”
ಭಕ್ತಿ ವಿಶೇಷವ ಮಾಡುವರೆ ಹತ್ತು ಬೆರಳುಗಳುಂಟು;
ಹಾಸಿ ದುಡಿದರೆ ತನಗುಂಟು ತನ್ನ ಪ್ರಮಥರಿಗುಂಟು;
…. ….. …… …… ….. ….. ….”

ಎಂಬ ಬಸವಣ್ಣನವರ ವಚನಗಳು ಭಕ್ತಿ, ಕಾಯಕ, ದಾಸೋಹಗಳನ್ನು ಬಿಂಬಿಸುತ್ತವೆ. ಇಂಥ ಭಕ್ತಿಯನ್ನು ಹರಿಹರ ಆಚರಿಸಿದ ಮತ್ತು ಅಂಥ ಭಕ್ತಿಯುಳ್ಳ ಪುರಾತನರ, ಶರಣರ ಚರಿತ್ರೆಗಳನ್ನು ರಚಿಸಿದ. ಸ್ವತಃ ತಾನೇ ಭಕ್ತನಾದುದರಿಂದ ತನ್ನ ಕಾವ್ಯಗಳಲ್ಲಿ ಅತ್ಯಂತ ತಾದಾತ್ಮ್ಯನಾಗುವುದರಿಂದ ಆ ಕಾವ್ಯಗಳು ಓದುಗರ ಅಂತರಂಗದ ಕದಗಳನ್ನು ತೆರೆಯುತ್ತವೆ; ಸಾಮರಸ್ಯದ ಸುಖವನ್ನು ನೀಡುತ್ತವೆ.

ಹರಿಹರನ ಕಥಾನಾಯಕರೆಲ್ಲ ಕಾಯಕವಂತರು, ಸಮಾಜದ ಎಲ್ಲ ಸ್ತರಗಳಿಂದ ಎಲ್ಲ ವರ್ಗಗಳಿಂದ, ಎಲ್ಲ ಜಾತಿಗಳಿಂದ ಬಂದವರು ಅವರು. ಹೀಗೆ ಸಮಾಜದ ಸಮಸ್ತವರ್ಗದ ಕಾಯಕವಂತರನ್ನು ಕಥಾನಾಯಕರನ್ನಾಗಿ ಆರಿಸಿಕೊಂಡ ಮೊದಲ ಕೀರ್ತಿ ಹರಿಹರನಿಗೆ ಸಲ್ಲುತ್ತದೆ. ಈ ಕೆಲಸವನ್ನು ಈ ಮೊದಲೇ ಆಗಿಹೋದ ಕವಿಗಳು ಮಾಡಲಿಲ್ಲ; ಆಗಿನ ಕಾಲದ ಸಾಮಾಜಿಕ ಪರಿಸ್ಥಿತಿಯನ್ನರಿಯಲು ಇಂಬಿಲ್ಲದಾಯಿತು.

ಹರಿಹರ ಪುರಾತನರ ಮತ್ತು ಶಿವಶರಣರ ಭಕ್ತಿಯನ್ನು ಚಿತ್ರಿಸುವಾಗ ಅವರವರ ನಿಲುವಿಗೆ ತಕ್ಕಂತೆ, ಆ ಕಾಲದ ಸಂಪ್ರದಾಯಕ್ಕೆ ತಕ್ಕಂತೆ ಚಿತ್ರಿಸುತ್ತಾನೆ. ಉಗ್ರವಾದ, ಕಠಿಣವಾದ ಭಕ್ತಿ ಪುರಾತನರದು; ಮೃದುವಾದ, ನಯವಾದ ಭಕ್ತಿ ಶರಣರದು. ಇವುಗಳ ವ್ಯತ್ಯಾಸ ಹರಿಹರನಿಗೆ ಗೊತ್ತಿದೆ. ಅಂತೆಯೇ ಅವರವರ ಭಕ್ತಿಯನ್ನು ಅವರವರ ಅಂತಸ್ತಿಗೆ ತಕ್ಕಂತೆ ಚಿತ್ರಿಸುತ್ತಾನೆ.

ಇನ್ನೊಂದು ಸಮಸ್ಯೆ ಇಲ್ಲಿ ಎದ್ದು ನಿಲ್ಲುತ್ತದೆ. ಅದು ಇಷ್ಟಲಿಂಗ ಮತ್ತು ಸ್ಥಾವರ ಲಿಂಗಕ್ಕೆ ಸಂಬಂದಪಟ್ಟುದು. ಹರಿಹರ ಬದುಕಿದ್ದು ಲಿಂಗ ಪೂಜೆಯ ದೃಷ್ಠಿಯಿಂದ ಒಂದು ಸಂಕ್ರಮಣಾವಸ್ಥೆಯ ಕಾಲ. ಶರಣರ ಇಷ್ಟಲಿಂಗ ಪೂಜೆಯು ಸಾರ್ವತ್ರಿಕವಾಗಿದ್ದರೂ ಸ್ಥಾವರಲಿಂಗಪೂಜೆ ಇನ್ನೂ ಬಳಕೆಯಲ್ಲಿತ್ತು. ಶರಣರ ತತ್ವಗಳನ್ನು ನಂಬಿದ ಹರಿಹರನ ಪುಷ್ಪರಗಳೆ, ಸ್ಥಾರ ಲಿಂಗಪೂಜೆ ಸೂಚಿಸುತ್ತದೆ. ಬಸವಣ್ಣನವರು ಕಪ್ಪಡಿಸಂಗಮದಲ್ಲಿರುವಾಗ ಸ್ಥಾವರ ಲಿಂಗಪೂಜೆಯನ್ನು ಮಾಡಿದರೆಂದೇ ಹರಿಹರನ ನಂಬುಗೆ; ಆತ ಅದನ್ನೇ ಹೇಳುತ್ತಾನೆ. ಆದರೆ ಇಷ್ಟಲಿಂಗ ಪೂಜೆ ಮತ್ತು ಸ್ಥಾವರಲಿಂಗ ಪೂಜೆಗಳ ವ್ಯತ್ಯಾಸ ಆತನಿಗೆ ಗೊತ್ತಿಲ್ಲದಿಲ್ಲ. ಆತನ ಕಾವ್ಯಗಳನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿದರೆ ಈ ಮಾತು ಮನದಟ್ಟಾಗುವುದು. ಬಸವಣ್ಣ ಸಂಗಮೇಶನಿಂದ ನಿರೂಪ ಪಡೆದು ಮಂಗಳವಾಡಕ್ಕೆ ಹೋಗುವಾಗ ಇಷ್ಟಲಿಂಗ ಧರಿಸಿಕೊಂಡು ಹೋದನೆಂದು ಹರಿಹರ ಬಸವರಾಜ ದೇವರ ರಗಳೆಯ ನಾಲ್ಕನೆಯ ಸ್ಥಲದಲ್ಲಿ ಸ್ಪಷ್ಟವಾಗಿ ಹೇಳಿದ್ದಾನೆ. ಆ ಸನ್ನಿವೇಶವನ್ನು ಬಹು ಅರ್ಥಪೂರ್ಣವಾಗಿ ವರ್ಣಿಸಿದ್ದಾನೆ.[1] ಪುರಾತನರ ಸ್ಥಾವರಲಿಂಗ ಪೂಜೆ ಮತ್ತು ಶರಣರ ಇಷ್ಟಲಿಂಗ ಪೂಜೆ ಇವುಗಳ ವ್ಯತ್ಯಾಸವನ್ನು ಹರಿಹರ ಖಂಡಿತವಾಗಿ ಅರಿತುಕೊಂಡಿದ್ದ. ಬಸವಣ್ಣ, ಮಹಾದೇವಿಯಕ್ಕ, ಪ್ರಭುದೇವ, ಕೇಶಿರಾಜದಣ್ಣಾಯಕ ಮುಂತಾದವರ ಇಷ್ಟಲಿಂಗ ಪೂಜೆಯ ವರ್ಣನೆ ಬಹು ಸೊಗಸಾಗಿದೆ. ಅಂತೆಯೇ ತಿರುನೀಲಕಂಠ ಮುಂತಾದ ಪುರಾತನರ ಸ್ಥಾವರಲಿಂಗ ಪೂಜೆಯೂ ತುಂಬ ಸೊಗಸಾಗಿದೆ.

ಸ್ಥಾವರಲಿಂಗವೇ ಇರಲಿ, ಇಷ್ಟಲಿಂಗವೇ ಇರಲಿ ಭಕ್ತನ ಭಕ್ತಿ ಒಂದೇ ಎಂಬುದು ಕವಿಯ ನಿರ್ಧಾರ.

ಭರದಿಂ ಲಿಂಗಾರ್ಚನಂಮಾಡುವ ಶಿವಕುಲವೊಂದೇ. ಶಿವಾಚಾರಮಂ
ದ್ಗುರು ದೇವನಂ ಪೇಳ್ದನೆಂತಂತವರವರೊಲವಿಂ ಸ್ವೇಚ್ಛೆಯಿಂ ಶರ್ವನಂ ಶಂ
ಕರನಂಸವೇಶನಂಪೂಜಿಸುವುದಱೊಳೆಯಂತಾಯಿತಿಂತಾಯಿತೆಂದೆ
ಲ್ಲರು ಮೆಂದಾಪೇಕ್ಷೆಯಿಂ ನೀಂ ಕಿಡದೆ ನೆನೆವಿರೂಪಾಕ್ಷನಂಕಾಂಕ್ಷೆಯಿಂದಂ[2]

ಈ ಅರ್ಚನೆಯ ಹಿಂದಿರುವ ಭಕ್ತಿಯಲ್ಲಿ ಹರಿಹರ ವ್ಯತ್ಯಾಸ ಕಂಡಿಲ್ಲ; ಈ ವ್ಯತ್ಯಾಸವನ್ನು ಬಸವಾದಿ ಪ್ರಥಮರೂ ಕಂಡಿಲ್ಲ. ನಂಬಿ ಮುಂತಾದ ಪುರಾತನರನ್ನು ಅವರು ಹೃದಯದುಂಬಿ ನೆನೆಯುತ್ತಾರೆ.

“……ಅವನು (ಹರಿಹರ) ವಿವಿಧ ಶೈವ ಸಂಪ್ರದಾಯಗಳ ವಿಭಿನ್ನ ಸ್ವರೂಪ ಲಕ್ಷಣಗಳನ್ನರಿತುಕೊಂಡು ಅವುಗಳಿಗೆಲ್ಲ ಸರ್ವಸಮ್ಮತವಾದ ಜೀವನದರ್ಶನವನ್ನು ತನಗಾಗಿ ರೂಪಿಸಿಕೊಂಡವನಾಗಿದ್ದನೆನ್ನಬಹುದು. ಪಂಪಾವಿರೂಪಾಕ್ಷನಲ್ಲಿಟ್ಟ ಅನನ್ಯ ಭಕ್ತಿ, ಶಿವಶರಣರ ಲೋಕೋತ್ತರ ಜೀವನದ ಮನನ ಹಾಗೂ ಸಂಕೀರ್ತನಗಳನ್ನುತನ್ನ ಜೀವಿತಕ್ಕೂ ಕಾವ್ಯಕ್ಕೂ ಧ್ಯೇಯಸೂತ್ರವಾಗಿಟ್ಟುಕೊಂಡ ಆತ ಆ ಉದ್ದೇಶಕ್ಕಾಗಿಯೇ ತನ್ನ ಕವಿತ್ವಶಕ್ತಿಯನ್ನು ಧಾರೆಯೆರೆದ. ಸಮಾಹಿತಚಿತ್ತದಿಂದ ಕಾವ್ಯ ರಚಿಸುವುದು ಅವನ ಪಾಲಿಗೆ ನಿತ್ಯದ ಶಿವಾರ್ಚನೆಯೆ ಆಗಿದ್ದಿತೆನ್ನಬಹುದು. ಅವನ ಶ್ರದ್ಧೆಯಲ್ಲಿ ಶಿವನೇ ಸರ್ವೇಶನೆಂಬುದಂತು ಸರಿಯೆ; ಶಿವಾರ್ಚಕರೂ ಅವನ ಭಾವನೆಯಲ್ಲಿ ಮೂಜಗದಲ್ಲೆ ಸರಿಸಾಟಿಯಿಲ್ಲದ ಪವಿತ್ರಾತ್ಮರು”.[3]

ಹರಿಹರನ ಶಿವಭಕ್ತರು ಮತ್ತು ಅವನ ಶಿವ ಬಹು ವಿಶಿಷ್ಟರು; ಅವರ ಸಂಬಂಧ ಅನ್ಯೋನ್ಯವಾದುದು. ಶಿವ ಇಲ್ಲಿ ಸಾಮಾನ್ಯವಾಗಿ, ಮಾನವಂತನಾಗಿ, ಆತ್ಮೀಯನಾಗಿ, ಅಷ್ಟೇ ಪರೋಕ್ಷವಾಗಿ ವರ್ತಿಸುವ ರೀತಿ ಲೋಕೋತ್ತರವಾದುದು. ಇವರ ಆತ್ಮೀಯತೆ, ಅನ್ಯೋನ್ಯತೆಯನ್ನು ಇನ್ನೊಂದು ಕಡೆ ನೋಡೋಣ. ಇಗ ಇಲ್ಲಿ ಇವರಿಬ್ಬರ ದೃಷ್ಟಿಯಲ್ಲಿ ಈ ಧರೆ ಎಂಥದೆಂಬುದನ್ನು ನೋಡಬೇಕಾದುದು.

ಶಿವಭಕ್ತರು ಈ ಭೂಮಿಯನ್ನು ಕೀಳೆಂದು ಭಾವಿಸುವುದಿಲ್ಲ. ಈ ಸಂಸಾರವನ್ನು ನಿಸ್ಸಾರವೆಂದಾಗಲಿ, ಕೆಡುಕಿನದೆಂದಾಗಲಿ ತಿಳಿಯುವುದಿಲ್ಲ. ಶಿವಭಕ್ತಿ ಮಾಡಲಿಕ್ಕೆ ಶಿವನೊಡನೆ ಒಂದಾಗಲಿಕ್ಕೆ ತಕ್ಕ ಸ್ಥಳ ಇದು.

ಹರಿಹರನ ಶರಣರು, ಪುರಾತನರು ಈ ಧರೆಗೆ ಬರಲು ಅವರು ಕೈಲಾಸದಲ್ಲಿ ಎನೋ ತಪ್ಪು ಮಾಡಿದ್ದು ಕಾರಣವಾಗುತ್ತದೆ. ಕೈಲಾಸದ ತಪ್ಪನ್ನು ತಿದ್ದಿಕೊಳ್ಳಲು ಕೈಲಾಸ ತಕ್ಕ ಸ್ಥಳವಲ್ಲ; ಅದನ್ನು ತಿದ್ದಿಕೊಳ್ಳಲು ತಕ್ಕ ಸ್ಥಳ ಈ ಭೂಮಿ. ಅಂತೆಯೇ ಕೈಲಾಸದಲ್ಲಿ ತಪ್ಪು ಮಾಡಿದವರು ಈ ಭೂಮಿಗೆ ಬರುತ್ತಾರೆ. ಬರುವಗ ಶಿವನನ್ನಗಲಿ ಬರಲು ಶೋಕಿಸುತ್ತಾರೆ. ಆಗ ಶಿವ ಅವರಿಗೆ ಅಭಯ ಕೊಡುತ್ತಾನೆ. ಅದು ಬಹು ಮಹತ್ವವಾದುದು. ನಂಬಿಯಣ್ಣ ಕೈಲಾಸದಲ್ಲಿ ಮಾಡಿದ ತಪ್ಪಿಗೆ ಈ ಭೂಮಿಗೆ ಬರಬೇಕಾಗುತ್ತದೆ. ಆಗ ಆತ

ನರನಾದ ಬಳಿಕವೆತ್ತಣದು ಇತ್ತಣ ಬರವು
ಮಿಗೆ ಪೊಲ್ಲದಲ್ಲಿ ಪುಟ್ಟುವುದಕ್ಕೆ ನಾಂ ದೇವ
ಕಾಮದುಬ್ಬರವಲ್ಲಿ ಕೋಪದುಬ್ಬರವಲ್ಲಿ
ಮಾತೋ ಲೋಭಮೋಹಂಗಳೂಳಿಗವಲ್ಲಿ
…. …… …….. ……. …… …… ……. ……
ಎಂತು ಪುಟ್ಟುವನೆಂದು ಬಿನ್ನಪಂ ಗೈಯುತಿರೆ”.

ಆಗ ಶಿವ ನುಡಿಯುತ್ತಾನೆ :

“(ಕಂತು ಮದಹರನೆಂದನಗಜೆ ಮುಯ್ಯಾನುತಿರೆ)
ಪೋಗು ಮರ್ತ್ಯದೊಳು ಪುಟ್ಟಂಜಲೇಕೆಲೆ ಮಗನೆ
ರಾಗದಿಂ ನಿನ್ನೊಡನೆ ಬರ್ಪೆ ನಾನೆಲೆ ಮಗನೆ
ಮಾಡಿತೆಲ್ಲಂ ಪೂಜೆಯಾಗಿ ಕೈಕೊಂಡಪೆಂ
ಹಾಡಿತೆಲ್ಲಂ ಸ್ತುತಿಗಳಾಗಿ ಕೈಕೊಂಡಪೆಂ
ನಿನ್ನ ಸುಖವೇ ಸುಖಂ ನಿನ್ನ ನಲಿವೇ ನಲಿವು
…. …. …. …. …. …. …. …. …. ….
ಹೋಗಿ ಸುಖದಿಂದಿರ್ಪುದಿರದೆ ಬರ್ಪುದು ಮಗನೆ”.

ಇದರಂತೆಯೇ ಬಸವಣ್ಣ ಮಂಗಳವಾಡಕ್ಕೆ ಹೋಗಲು ಒಲ್ಲೆನೆಂದಾಗ –

ಕಂದ ಬೇಡಯ್ಯ ಬೇಡಯ್ಯ ನೇಹದ ನಿಧಿಯೆ
ಹಿಂದುಗೊಂಡೇ ಬಪ್ಪೆನೆನ್ನ ಸುಕೃತದ ಸುಧೆಯೆ
ಮನದೊಳಗೆ ಕರದೊಳಗೆ ತನುವಿನೊಳಗಿರ್ದಪೆಂ

ಎಂದು ಮಾತುಕೊಡುತ್ತಾನೆ. ಇಲ್ಲಿ ಶಿವನು ಭಕ್ತರ ಭಕ್ತಿಗೆ ಮೆಚ್ಚಿ ಮಾತು ಕೊಡುವುದು, ಭಕ್ತರ ಭಕ್ತಿ, ನಿಷ್ಠೆ ಎಂಥದು ಎಂಬುದರ ಜೊತೆಗೆ ಈ ಭೂಮಿಯ ಮಹತ್ವವೂ ತಿಳಿದು ಬರುತ್ತದೆ.

ಈ ಭೂಮಿಗೆ ಬಂದಬಳಿಕ, ಭಕ್ತಿಯ ಸಾಧನೆಯಾಗಿ ಕೊನೆಗೆ ಶಿವನು ಕೈಲಾಸಕ್ಕೆ ಕರೆದರೆ ಇಲ್ಲಿಂದ ಹೋಗಲಿಕ್ಕೆ ಅವರು ಒಲ್ಲರು. ಬಸವನನ್ನು ಶಿವನು,

ನಡೆಬಸವ ಕೈಲಾಸಗಿರಿಗೆ ಪುಷ್ಪಕದೊಳಗೆ
ಪೊಡಯೊಳಗಿರುವು ಸಾಲ್ವದು ಬಾ ಮಗನೆ ನಿನಗೆ ಎಂದು ಕರೆದ.

ಅದಕ್ಕೆ ಬಸವ:

ಸಂಗಯ್ಯ ಬಾ ಎಂದು ಕರೆವೆ ನೀನೆನ್ನುವಂ
ಹಿಂಗಲೀಯದು ಶರಣಗೋಷ್ಠಿ ಕೇಳೆನ್ನುವಂ
ಶರಣರೊಕ್ಕುದಱ ಸವಿ ಕೈಲಾಸದೊಳಗುಂಟೆ
ಶರಣಸಂಗದ ಸುಖಂ ಕೈಲಾಸದೊಳಗುಂಟೆ
ಇಲ್ಲಿಯ ಸುಖ ದೇವ ಅಲ್ಲಿಯುಳ್ಳಡೆ ಲೇಸು
ಅಲ್ಲೆನ್ನೆನಿಲ್ಲಿಯೆ ನಿಂದು ಹೋಹುದು ಲೇಸು
ಎಂದು ಬಿನ್ನೈಸೆ ಬಸವಂ ಬಾರದುದನರಿದು
ಇಂದುಧರ ಸರಿಧನಾ ನಿಜನಿವಾಸಕೆ ನಲಿದು

ಹೀಗೆ ಭಕ್ತರು ಮರ್ತ್ಯವನ್ನು ಪ್ರೀತಿಸಿದು, ಅದನ್ನು ಮಹವನ್ನಾಗಿ ಮಾಡಿದರು, ಅವರಿಗೆ ಕೈಲಾಸಕ್ಕಿಂತಲೂ ಇದು ಹಿರಿದೆನಿಸಿತು.

ಭಕ್ತರು ಎಂಥ ಗುಣವುಳ್ಳವರು ಎಂಬುದಕ್ಕೆ ಹರಿಹರ ಚಿತ್ರಿಸಿದ ಬಸವಣ್ಣನ ವ್ಯಕ್ತಿತ್ವವನ್ನು ನೋಡಿದರೆ ಸಾಕೆನಿಸುತ್ತದೆ.

“ಎಲೆ ಬಸವಾ, ಬಸವಣ್ಣಾ, ಬಸವಯ್ಯಾ, ಬಸವರಸಾ, ಬಸವರಾಜಾ, ಬಸವದೇವಾ, ಕೇಳಯ್ಯಾ, ನಿಮ್ಮ ನೇಮವಿದಾರ್ಗುಂಟು, ಗುರುಲಿಂಗದೊಳೆರಡಿಲ್ಲದಿಪ್ಪೆ, ಶರಣರಂ ಸಂಗನೆಂದೆ ಕಾಣ್ಬೆ, ಬಂದ ಭಕ್ತರನತ್ಯಾದರಿಪೆ, ಬಪ್ಪಭಕ್ತರಂ ಹರುಷದೊಳಿದಿರ್ಗೊಂಬೆ, ಬೇಡಿದ ಶರಣರ್ಗಿಲ್ಲೆನ್ನದೀವೆ, ಬೇಡಲೊಲ್ಲದವರ್ಗೆ ಮಿಗಿಲಾಗಿ ಆರಾಧಿಪೆ, ಜಾಗ್ರಸ್ವಪ್ನ ಸುಷುಪ್ರಿಯವಸ್ಥಾತ್ರಯಂಗಳೊಳು ಶರಣರಂ ಸಂಗನೆಂದಲ್ಲದೆ ಕಾಣೆ, ನಿಚ್ಚ ಶಿವರಾತ್ರಿಯನಚ್ಚರಿಯಿಂ ಮಾಳ್ಪೆ, ಜಂಗಮ ಪ್ರಾಣಿಯಾಗಿರ್ಪೆ, ಶಿವಲಿಂಗಾರ್ಪಿತವಲ್ಲದುದನಾಘ್ರಾಣಿಸೆ, ನೋಡೆ, ನುಡಿಯೆ, ಮುಟ್ಟೆ, ಕೇಳೆ, ಜಂಗಮದಲ್ಲಿ ಜಾತಿಯನಱಸೆ; ಪ್ರಸಾದದಲ್ಲಿ ಅಪವಿತ್ರತೆಯನರಿಯೆ; ಪರಾಂಗನೆಯರಂ ಹೆತ್ತ ತಾಯ್ಗಳೆಂಬೆ; ಪರದ್ರವ್ಯಮಂ ಕಲ್ಬಿಷಮೆಂದು ಮುಟ್ಟಿ; ನಡೆದು ತಪ್ಪೆ; ನುಡಿದು ಹುಸಿಯೆ; ಹಿಡಿದು ಬಿಡೆ; ಬಿಟ್ಟು ಹಿಂಗಲೀಯೆ; ಕೊಟ್ಟು ನೆನೆಯೆ; ನಟ್ಟು ಕೀಳೆ; ಮುಟ್ಟೆಪೆರವಿಂಗೆ; ಕೂಡಿ ತಪ್ಪೆ; ನೋಡಿ ನಿರಾಕರಿಸೆ; ನೆನೆದು ಮರೆಯೆ; ಮನದೊಳೋವರಿಯಿಲ್ಲ; ಬುದ್ಧಿಯೊಳು ವಿಸಂಚವಿಲ್ಲ; ಅಹಂಕಾರದೊಳು ಗರ್ವವಿಲ್ಲ; ಚಿತ್ತದೊಳು ಹೊರೆಯಿಲ್ಲ; ಕಾಮವಿಲ್ಲ, ಕೋಪದ ಮಾತೇಕೆ? ಲೋಭದ ಗಾಳಿ ತೀಡದು; ಮೋಹಕ್ಕೆ ತೆರಹಿಲ್ಲ! ಮುದದ ಸೊಗಡು ಹೊದ್ದದು; ಮತ್ಸರಕ್ಕಿಂಬಿಲ್ಲ! ಬಸವರಾಜಾ, ನಿನ್ನ ಗುಣಂಗಳಂ ಬಣ್ಣಿಸಲೆಮ್ಮಳವಲ್ಲ; ಈಶನ ಮಿಸಲಪ್ಪ ಭಕ್ತ ನಿನಗೆಣೆಯಿಲ್ಲ…..”[4]

ಇಲ್ಲಿ ಬಸವಣ್ಣನಿಗೆ ಹೇಳಿದ ಎಲ್ಲ ವಿಶೇಷಣಗಳು ಭಕ್ತರಲ್ಲಿರತಕ್ಕುವೇ, ಭಕ್ತರು ನಿಜಕ್ಕೂ ಅರ್ಥವಿಲ್ಲದ ಸಂಪ್ರದಾಯಗಳನ್ನು ಮೀರಿ ನಿಂತವರು. ಇದನ್ನು ಹರಿಹರ ಮಹಾದೇವಿಯಕ್ಕನ ರಗಳೆಯಲ್ಲಿ ನಿರೂಪಿಸಿದ್ದಾನೆ. ದಂಪತಿಗಳು ದೇವರಲ್ಲಿ ಮಕ್ಕಳನ್ನು ಕೇಳುವಾಗ ಗಂಡು ಮಗುವನ್ನೇ ಕೇಳುವುದು ಹಿಂದಿನಿಂದ ಬಂದ ರೂಢಿ. ಗಂಡುಮಗುವಿಲ್ಲದಿದ್ದರೆ ಮೋಕ್ಷವಿಲ್ಲವೆಂದು ಒಂದು ಅರ್ಥಹೀನ ಉಕ್ತಿಯೂ ಇದೆ. ಇದಕ್ಕೆ ಅಪವಾದ ಭಕ್ತರು, ಶರಣರು. ಮಹಾದೇವಿಯಕ್ಕನ ತಂದೆ – ತಾಯಿಗಳು ಒಂದು ದಿನ ಶಿವ ನಿಳಯಕ್ಕೆ ಬಂದು ಗಿರಿಜಾತೆಗೆ:

ದೇವಿಯೆಮಗೊರ್ವ ಪುತ್ರಿಯನೀವುದೆಲೆ ತೇಯೆ:
ನಾವು ನಿಮ್ಮಯ ಹೆಸರನಿಟ್ಟಪೆವು ಒಲಿದೀಯೆ;
ಅವನಿಗತಿ ರೂಪಸಂಪನ್ನೆಯಂ ಚೆನ್ನೆಯಂ;
ಶಿವನ ಸದ್ಭಕ್ತಿಯೊಳಭಿನ್ನೆಯಂ ಕನ್ನೆಯಂ,
ಕರುಣಿಸುವುದೆಂದು…..” ಬೇಡಿಕೊಂಡರು.

ಅವರು ಗಂಡುಮಗುವನ್ನು ಬೇಡಲಿಲ್ಲ, ಹೆಣ್ಣುಮಗುವನ್ನು ಬೇಡಿದರು. ‘ಅಪುತ್ರಸ್ಯಗತಿರ್ನಾಸ್ತಿ’ ಎಂಬ ಮಾತನ್ನು ಮೀರಿ ನಿಂತರು. ಯಾವ ಗಂಡಿಗೆ ಕಡಿಮೆ ಮಹಾದೇವಿ?

ಬಸವಣ್ಣ ಲಿಂಗಕ್ಕೆ ಕೇದಗೆಯನ್ನು ಏರಿಸಿದ್ದೂ ಒಂದು ಅರ್ಥಹೀನ ಸಂಪ್ರದಾಯವನ್ನು ಮೀರಿದ ಘಟನೆಯೇ. ಪುರಾತನರಲ್ಲಿ ಕಂಡುಬರುವ ತೀವ್ರತರವಾದ ಭಕ್ತಿನಿಷ್ಠೆಗಳು ಅನಿಷ್ಠ ಸಂಪ್ರದಾಯಗಳ ವಿರೋಧವನ್ನು ವ್ಯಕ್ತಪಡಿಸುತ್ತವೆ. ಮೌನವಾಗಿ ಶೋಷಣೆಯನ್ನು ಅಲ್ಲಗೆಳೆಯುತ್ತವೆ. ಇದು ಶರಣರಲ್ಲಿ ಸಾಮೂಹಿಕ ಪ್ರತಿಭಟನೆಯಾಗಿ ನಿಲ್ಲುತ್ತದೆ, ಕ್ರಾಂತಿಯ ಕಿಡಿ ಕಾರುತ್ತದೆ.

ಹರಿಹರನ ಭಕ್ತರ ಪ್ರಪಂಚ ವಿಶಾಲವಾದುದು; ಮುಗ್ಧರು, ವಿದಗ್ಧರು, ವಿರಹಿಗಳು, ಜಾಣರು, ಅರಸರು, ಮಂತ್ರಿಗಳು, ವ್ಯಾಪಾರಿಗಳು, ಶ್ರೀಮಂತರು, ಪ್ರಣಯಿಗಳು, ಒಕ್ಕಲಿಗರು, ಕೂಲಿಯಾಳುಗಳು, ಅಗಸರು, ಬೆಸ್ತರು, ಕುಂಬಾರರು, ತಿಲಕಾಯಕದವರು, ಬೇಟೆಗಾರರು, ವೀರರು, ಜಟ್ಟಿಗಳು, ಯೋಗಿಗಳು, ಜ್ಞಾನಿಗಳು, ವೀರವ್ರತಿಗಳು, ನಾರಿಯರು – ಹೀಗೆ ಸಮಾಜದ ಸಮಸ್ತ ಸ್ತರದವರುಂಟು. ಇವರೆಲ್ಲರ ಭಕ್ತಿ ಮತ್ತು ಕಾಯಕಗಳನ್ನು ಹರಿಹರ ತಾದಾತ್ಮ್ಯನಾಗಿ ವರ್ಣಿಸುತ್ತಾನೆ.

ರುದ್ರಪಶುಪತಿ ಒಬ್ಬ ಮುಗ್ಧ ಭಕ್ತ. ಈತನ ದೃಷ್ಟಿಯಲ್ಲಿ ಶಿವನು ಚೆಲುವನು, ಸುಕುಮಾರನು; ಶಿವನು ಉಗ್ರನು ಎಂಬ ಭಾವ ಆತನಲ್ಲಿ ಎಂದೂ ಸುಳಿದು. ಒಂದು ದಿನ ಶಿವನು ವಿಷವನ್ನುಂಡನೆಂದೂ ಅದು ಇನ್ನೂ ಆತನ ಗಂಟಲಲ್ಲಿರುವುದೆಂದೂ ಪುರಾಣಕಾರರಿಂದ ಕೇಳಿದ. ಆತನಿಗೆ ಎಲ್ಲಿಲ್ಲದ ತಾಪವಾಯಿತು. ದೇವತೆಗಳೆಲ್ಲ ಏಕೆ ಸುಮ್ಮನಿದ್ದಾರೆ? “ಬೆಳ್ದಿಂಗಳಂ ಕೊಳ್ಳಿ ಮುಟ್ಟಿತಿನ್ನೇನಯ್ಯ, ಆಳ್ದಂಗೆ ವಿಷಧರತ್ವಂ ಬಂದುದೆಂತಯ್ಯ” ಎಂದು ಹಲುಬಿದ. ಪಾರ್ವತಿಯರೂ ಸುಮ್ಮನಿದ್ದಾರಲ್ಲ ಎಂದು ಮರುಗಿದ. ಆಕೆ ವಿಷವ ನುಂಗುವಾಗ ಏಕೆ ಬೇಡವೆನ್ನಲಿಲ್ಲ? ಈಗ ನಾನದನ್ನು ಬಿಡಿಸುವೆ ಎಂದು ಪಂಚಾಕ್ಷರಿ ಮಂತ್ರ ಜಪಿಸುತ್ತ ಸಮುದ್ರಕ್ಕೆ ಬಂದ. ಕಂಠಮಟ್ಟ ನೀರಲ್ಲಿ ನಿಂತು ಪಂಚಾಕ್ಷರಿ ಮಂತ್ರ ಜಪಿಸತೊಡಗಿದ. ಜಲಚರಗಳು ಆತನ ಮೈಮುತ್ತಿದವು; ಮಜ್ಜೆ – ಮಾಂಸಗಳನ್ನು ಹರಿದು ತಿಂದವು “ಅಸ್ಥಿಯುಳಿದದು ಪುಣ್ಯರೂಪು ತಾನೆಂಬಂತೆ, ಅಸ್ಥಿಮಾಲಾಧರಂಗರ್ಪಿತವಿದೆಂಬಂತೆ; ಆಯುತೀರ್ದಡೆ ನಿಷ್ಠೆ ತೀರಲೀಯದೆ ಪಿಡಿಯೆ, ಕಾಯಮಳಿದಡೆ ಮನಂ ನೇಹಾವಾಱದೆ ಪಿಡಿಯೆ……” ಆತನ ನಿಷ್ಠೆಯನ್ನು ಮುಗ್ಧ ಭಕ್ತಿಯಿಂದ ಕಂಡು ಶಿವನು ಗಿರಿಜೆಗೆ ನುಡಿದ. “ಅಂದಿನ ಮಹಾವಿಷ ಕಂಠಭೂಷಣವಾಯ್ತು, ಇಂದಿನ ಪ್ರೇಮಲತೆ ಕೊರಲಪಾಶಮದಾಯ್ತು” ಗಿರಿಜೆಯನ್ನು ಕಾಣದಂತೆ ನಿಲ್ಲಿಸಿ, ಶಿವ ತಾನೊಂದು ವೇಷವನ್ನು ಧರಿಸಿ ಬಂದು, ರುದ್ರಪಶುಪತಿಯೊಡನೆ ಮಾತಿಗೆ ತೊಡಗಿ ಶಿವನನ್ನು ಕುರಿತು ಕಟಕಿಯಾಡಿದನು. ಅದನ್ನು ಕೇಳಿ ಸೈರಿಸಲಾರದೆ ರುದ್ರಪಶುಪತಿ “ಎಲೆಲೆ ಶಿವನಿಂದ ಅಡಗಡಗೆನ್ನುತ್ತಂ ಮೇಲೆ, ಜಲವನಭಿಮಂತ್ರಿಸುತ್ತಿಟ್ಟನಾತನ ಮೇಲೆ’.[5] ಶಿವನ ವರ್ಷ ಬಿಟ್ಟು ಹೋಯಿತು. “ಆವನಾದಡದೇನು ಕೃತ್ರಿಮಂ ಗೆಲ್ವುದೇ, ದೇವನಾದಡದೇನು ಪುಸಿದಿಟಕೆ ನಿಲ್ವುದೆ?” ಶಿವ ತನ್ನ ನಿಜ ರೂಫದಲ್ಲಿ ಪ್ರತ್ಯಕ್ಷನಾದ. ಆದರೆ ಆತನ ಕೊರಳಲ್ಲಿ ವಿಷವಿರಲಿಲ್ಲ. ರುದ್ರಪಶುಪತಿ ಸಮುದ್ರದಿಂದ ಹೊರಬಂದು, ಶಿವನ ಕೊರಳನ್ನು ಮುಟ್ಟಿ, ಪಂಚಾಕ್ಷರಿಯಿಂದ ಮಂತ್ರಿಸಿ ತೂಪಿರಿದ. ಮತ್ತೆ “ಇಂಥ ಕೆಲಸ ಮಾಡಬೇಡ. ಇನ್ನಗಲೆನೆಂದುವುಂ ಮಾಡಲೀಯಂ ನೋಡ” ಎಂದು ನುಡಿದ ಈ ಮುಗ್ಧತೆ, ಈ ಆತ್ಮೀಯತೆ ಬಹು ಅಪ್ಯಾಯಮಾನ.

ಕಣ್ಣಪ್ಪ ಇನ್ನೊಬ್ಬ ಮುಗ್ಧ ಭಕ್ತ. ಆತ ರುದ್ರಪಶುಪತಿಗಿಂತಲೂ ಮುಗ್ಧ. ರುದ್ರಪಶುಪತಿಗಾದರೋ ಒಮದು ಬಗೆಯ ಮನೆತನದ ಸಂಸ್ಕಾರವಿದೆ; ಪುರಾಣ ಪುಣ್ಯಕಥೆ ಕೇಳುವ ಅವಕಾಶಗಳಿವೆ. ಕಣ್ಣಪ್ಪನಿಗೆ ಇಂಥವುಗಳಿಲ್ಲ, ಕಾಡಿನಲ್ಲಿ ಆತನ ವಾಸ. ದೇವರ ಹೆಸರೂ ಆತನಿಗೆ ಸರಿಯಾಗಿ ಗೊತ್ತಿಲ್ಲ. ‘ನನ್ನವನೆ’ ಎನ್ನುತ್ತಾನೆ. ಈ ‘ನನ್ನವನೆ’ ಎನ್ನುವಲ್ಲಿ ಇರುವ ಆತ್ಮೀಯತೆ. ಭಕ್ತಿ, ಪ್ರೇಮ ಯಾವ ಹೆಸರಿನಿಂದ ಕರೆದರೂ ಉಂಟಾಗುವುದು ಸಾಧ್ಯವಿಲ್ಲ. ದೇವಾಲಯದಲ್ಲಿ ಹೊಕ್ಕ ಮೃಗ ಸಿಕ್ಕ ಕೂಡಲೇ ಆತನಿಗೆ ಶಿವನಲ್ಲಿ ಎಲ್ಲಿಲ್ಲದ ನಿಷ್ಠೆ ಪ್ರೀತಿ ಭಕ್ತಿಗಳು ಬೆಳೆಯುತ್ತವೆ. ಮುಂದೆ ಶಿವನಿಗೆ ತನ್ನ ಕಣ್ಣುಗಳನ್ನು ಕಿತ್ತಿಡುವಾಗ ಈ ನಿಷ್ಠೆ ಪ್ರೇಮ ಭಕ್ತಿಗಳು ಪರಾಕಾಷ್ಠೆಗೆ ಮುಟ್ಟುತ್ತವೆ. ಕಣ್ಣಪ್ಪನ ರಗಳೆ ತಿಳಿಮನಕ್ಕೆ, ನಿರ್ಮಲಭಕ್ತಿಗೆ ಯಾವಾಗಲೂ ಜಯವಿದೆ, ಡಾಂಭಿಕತನ ಮತ್ತು ಕರ್ಮದ ಸಂಪ್ರದಾಯಗಳಿಂದ ಯಾವಾಗಲೂ ಕೇಡಿದೆ ಎಂಬ ಸತ್ಯವನ್ನು ಸಾರುತ್ತದೆ.

ಮೊದಲು ಪಾರ್ವನು ಮಾಡಿದ ಪೂಜೆಯನ್ನು ಕಣ್ಣಪ್ಪ ಕೆರಹುಗಾಲಿನಿಂದ ಕೆಡಿಸಿ. ಬಾಯೆಂಜಲ ನೀರನೆರೆದು, ಮುಡಿದ ಹೂಮುಡಿಸಿ ಹಸಿಮಾಂಸ ಎಡೆಮಾಡುವನು. ಇದನ್ನು ಕಂಡು ಗಿರಿಜೆ ಹೇಸಿ ಪಾರ್ವನನ್ನು ಹೊಗಳಿ, ಕಣ್ಣಪ್ಪನನ್ನು ತಿರಸ್ಕರಿಸಿ ನುಡಿದಳು. ಆಗ ಶಿವನು.

ಪಾರ್ವನಗ್ಘವಣಿ ತಿಳಿ ಮನ ಕದಡು ಎಲೆ ಗೌರಿ
ಪಾರ್ವನರ್ಚನೆಯಿನಿದು ಮನವತಿ ವಿಷಂ ಗೌರಿ
…. …. …. …. …. …. …. …. …. …. …. …. …. ….
ಅವನ (ಕಣ್ಣಪ್ಪ) ಕೈಯೊಳು ಹೊಲಸು ಮನದೊಳಮೃತಂ ಗೌರಿ
ಅವನ ಮುಖದೊಳು ಜಲಂ ಮನದೊಳಗ್ಘಣಿ ಗೌರಿ
ಅವನ ಮಂಡೆಯ ಹೂವು ಮನದ ಪರಿಮಳವೆನೆಗೆ
ಅವನ ಕಾಲಾಟವತಿ ನೇಹದರ್ಚನೆಯೆನಗೆ
ಎನ್ನವನೆಯೆಂಬ ಸವಿ ನುಡಿಯೆನಗೆ ಮಂತ್ರವದು
ಎನ್ನವನು ಕೂರ್ತು ಮಾಡುವುದು ಶಿವತಂತ್ರವದು
ತೋರಿದಪೆನೊಚ್ಚಿ ಸೈರಿಸು ಎನ್ನಭಕ್ತನಂ
ತೋರಿದಪೆನೀಗಳೇ ನೀಪೊಗಳ್ವ ಪಾರ್ವನಂ– ಎಂದನು.

ಇದಾದ ಏಳನೆಯ ದಿನದಂದು ಶಿವನ ಒಂದು ಕಣ್ಣೊಡೆದು ನೆತ್ತರು ಸೋರತೊಡಗುತ್ತದೆ. ಅದನ್ನು ಕಂಡ ವಿಪ್ರ.

ಅರಸಿಂಗೆ ಕೇಡಿತ್ತೊ ದೇಶಕ್ಕೆ ಪೊಲ್ಲದೋ
ಹರನೆ ಬಲ್ಲಂ ಮಹೋತ್ಪಾತವೇನಪ್ಪುದೋ
ಎಂದು ವಿಪ್ರಂ ನೋಡಲಮ್ಮದೆ ಮನಂಗುಂದಿ
ಬಂದು ಪಟ್ಟಣಕೆ ಪೇಳ್ದಂ ಕೌತುಕದೊಳೊಂದಿ

ಇದು ವಿಪ್ರನ ರೀತಿ. ಶಿವನಿಗಾದ ನೋವು ನರಳಿಕೆ ಅವನ ಹೃದಯಕ್ಕೆ ತಿಳಿಯದು. ಅದರಿಂದ ದೇಶಕ್ಕೆ ಎನೋ ಕೆಟ್ಟದು ಬರುವುದೆಂಬುದೇ ಆತನಿಗೆ ಚಿಂತೆ. ಅದನ್ನು ಜನರಿಗೆ ಹೇಳಿ ಅವರನ್ನು ಪೂಜೆಯ ಹೆಸರಿನಲ್ಲಿ ಶೋಷಣೆ ಮಾಡಲು ಆತನು ಸಮರ್ಥ. ಆದರೆ ಕಣ್ಣಪ್ಪನ ರೀತಿಯೇ ಬೇರೆ. ಆತ ಶಿವನ ಸ್ಥಿತಿಯನ್ನು ಕಂಡು ಮರಗುತ್ತಾನೆ; ಅಳುತ್ತಾನೆ. ‘ಉಟ್ಟ ಸೀರೆಯಿಂದೂದುತ್ತೆ ಒತ್ತುತ್ತ’ ಸಂತೈಸುತ್ತಾನೆ. ಕಡೆಗೆ ತನ್ನ ಕಣ್ಣನ್ನೇ ಕಿತ್ತಿಡುತ್ತಾನೆ. ಅದು ಸರಿ ಹೋಯಿತು; ಮತ್ತೆ ಇನ್ನೊಂದು ಕಣ್ಣಲ್ಲಿ ರಕ್ತ ಒಸರತೊಡಗುವುದು, ಆಗ:

ಇನ್ನಂಜೆನಿನ್ನಂಜೆ ಇನ್ನೊಂದು ಕಣ್ಣುಂಟು
ಎನ್ನವನೆಯೆನ್ನವನೆ ಬಳಿಕ ನೀನೆನಗುಂಟು….”

ಎಂದು ತನ್ನ ಇನ್ನೊಂದು ಕಣ್ಣನ್ನು ಕಿತ್ತಿಡುತ್ತಾನೆ.

ಈ ರಗಳೆಯಲ್ಲಿ ಹರಿಹರನ ಕಥಾನಿರೂಪಣೆ ಅತಿ ಕುಸುರಿನದು. ಕಣ್ಣಪ್ಪನ ಮುಗ್ಧ ಭಕ್ತಿಯನ್ನು ನಾವು ನಮ್ಮ ಮೈಮನಗಳಲ್ಲಿ ತುಂಬಿಕೊಳ್ಳುತ್ತೇವೆ: ‘ಶಿವ’ ಸಾಕ್ಷಾತ್ಕಾರ ನಮಗೂ ಆಗುತ್ತದೆ.

ಸೇದಿರಾಜನ ಚರಿತ್ರೆ ಇನ್ನೊಂದು ಬಗೆಯದು. ಆತನ ಭಕ್ತಿ ವೀರ ಭಕ್ತಿ. ಆತನದು ತಿರುನಾವಲೂರು. ಅವನ ರಾಜ್ಯಭಾರವನ್ನು ಹರಿಹರ ಸುಂದರ ರೂಪಕದಲ್ಲಿ ಹೇಳುತ್ತಾನೆ:

ಭಕ್ತರೊಳು ಭಕ್ತಿ ಮನ್ನೆಯವನೊಲಿದೆತ್ತುವಂ
ಭಕ್ತಿಗಡ್ದಂ ಬರ್ಪ ಮಾಯೆಯಂ ಮುತ್ತುವಂ
ಅರ್ಪಿನಿಂದ ದುರಿತ ರಿಪುಕುಲವನೆಬ್ಬಟ್ಟುವಂ
ತೋರ್ಪ ದಶವಾಯುಗಳ ಬಿಡದೊತ್ತಿ ಕಟ್ಟುವಂ
ಕೂರ್ಪಿನಿಂದಂ ಮಾಯೆಗುಪ್ಪರಂಗಟ್ಟುವಂ
ದರ್ಪದಿಂದಂತಃಕರಣವ ಕಿತ್ತೆತ್ತುವಂ
ಒಳಗಣರಿವರ್ಗದೊಡನನುದಿನಂ ಕಾಳೆಗಂ
ಘುಳುಘುಳಿಪ ತಾಪತ್ರಯದ ಜಗಳದೂಳಿಗಂ
ಪರಿವಿಂದ್ರಿಯಾದಿಗಳ ಬೆಂಬುಯ್ಯಲಂ ಪೋಪ
ಉರವಣಿಪ ವಿಷಯಾದಿಗಳ ಬೇಟೆಯಂ ಪೋಪ
ಒಲವಿಂ ವಿವೇಕ ಪ್ರಧಾನನಂ ನಚ್ಚಿರ್ಪ
ನಲವಿಂದೆ ಬುದ್ಧಿಮಂತ್ರಿಯ ಮನಂ ಬೆಚ್ಚಿರ್ಪ
ಶ್ರೀ ಶಿವಜ್ಞಾನವೆಂಬಾಪ್ತನಂ ನಚ್ಚಿರ್ಪ
ಓಸರಿಸದಭವ ಭಕ್ತ್ಯಂಗನೆಯ ಮಚ್ಚಿರ್ಪ”.

ಇಂಥ ಈಶ್ವರನ ಮನ್ನೆಯನಾದ ಸೇದಿರಾಜನಿಗೆ ಒಬ್ಬ ದಾಯಾದಿಯಿದ್ದ. ಅವನು ಇವನನ್ನು ಸೋಲಿಸಲು ಸೈನ್ಯದೊಡನೆ ಬಂದು ತಾನೇ ಸೋತು ಹೋದ. ಕೊನೆಗೆ ಕಪಟವನ್ನು ಚಿಂತಿಸಿದ. ಶಿವಭಕ್ತನ ವೇಷ ಧರಿಸಿಕೊಂಡು ಬಂದ. ಕವಳಿಗೆಯಲ್ಲಿ ಘುಳುಘಳಿಸುವ ಅಲಗನಿಟ್ಟುಕೊಂಡಿದ್ದ. ‘ನಿನಗೆ ಯಾರೂ ಅರಿಯದ ಆಗಮದ ರಹಸ್ಯವನ್ನು ತಿಳಿಸುವೆ’ನೆಂದು ಸೇದಿರಾಜನನ್ನು ಏಕಾಂತದಲ್ಲಿ ಕುಳ್ಳಿರಿಸಿಕೊಂಡ. ಮಧ್ಯರಾತ್ರಿ ಸೇದಿರಾಜ ಶೈವಾಗದು ಬೋಧಿಸೆಂದು ಮೈಯಿಕ್ಕಿದ. ಆ ದುಷ್ಟ ದಾಯಾದಿ ಕವಳಿಗೆಯಲ್ಲಿಯ ಅಲಗನ್ನು ತೆಗೆದು ನಡುಬೆನ್ನಿನಲ್ಲಿರಿದ. ಆ ಬಳಿಕ ಹೆದರಿದ. ‘ರೆಮೆಟ್ಟಿ ನಡುಗಿ ಬೆಂಬಿಳ್ದನಾಪಾತಕಂ”. ಸೇದಿರಾಜ ನೊಂದುಕೊಳ್ಳಲಿಲ್ಲ. ಆ ಕಪಟ ವೇಷದ ಭಕ್ತನಿಗೆ ಧೈರ್ಯ ಹೇಳಿದ.

ಇರಿದಲಗು ಕಾಣಬಾರದೆ ತೆಱದೆ ಮುಸುಕಿಟ್ಟು
ನೆರೆ ಧೈರ್ಯ ಮೂರ್ತಿ ಸಿಂಹಾಸನದೊಳಳವಟ್ಟು” –

ಕಂಪಿಸುವ ಆ ಭಕ್ತನನ್ನು ತನ್ನ ಪಕ್ಕದಲ್ಲಿ ಕುಳ್ಳಿರಿಸಿಕೊಂಡ. ಬೆಳಗಪ್ಪ ಜಾವದಲ್ಲಿ ಅಮಾತ್ಯನನ್ನು ಕರೆಸಿದ. “ಇವರು ನನಗೆ ಶೈವಾಗಮ ಬೋಧಿಸಿದರು. ಇವರಿಗೆ ಕವಳಿಗೆ ತುಂಬ ಪೊಸವೊಂಗಳನ್ನು ಕೊಟ್ಟು ಕಳಿಸು” ಎಂದು ಬೆಸಸಿದನು.

ಉದಯವಾಯಿತು. ಮಡದಿ – ಮಕ್ಕಳನ್ನು ಹರಭಕ್ತರನ್ನು ಮಾನ್ಯರನ್ನು ಕರೆಸಿದ. ಪರಮ ಧೈರ್ಯದ ಮೊದಲ ಗವಸಣಿಗೆ ತೆಗೆದಂತೆ, ಹರನ ಕಾಂತಿಯ ಜವನಿಕೆಯ – ನೋಸರಿಸುವಂತೆ ಮುಸುಕನ್ನು ತೆಗೆದ. ಎಲ್ಲರೂ ನಟ್ಟ ಅಲಗನ್ನು ಕಂಡು ಬೆಚ್ಚಿ ಬಿದ್ದರು. ಸಾತ್ವಿಕನೊಬ್ಬನು ಬೆನ್ನಿನಿಂದ ಎದೆಗೆ ಹಾಯ್ದು ಪಾರಾದ ಅಲಗನ್ನು” ಈಶ ಪ್ರತಿಷ್ಠೆಯ ಶಲಾಕೆಯನುರ್ಚುವ ತರದೆ” ತೆಗೆದ. ಆಗ ಶಿವ ಪ್ರತ್ಯಕ್ಷನಾದ.

ಸೇದಿರಾಜನ ನಿಷ್ಠೆ, ತಾಳ್ಮೆ, ಔದಾರ್ಯಗಳನ್ನು ನಾವು ನಿಮಿಷ ನಿಮಿಷಕ್ಕೆ ಅನುಭವಿಸುವೆವು.

ಇದು ಮಾದಾರ ಚೆನ್ನಯ್ಯನ ಇರವು.

ಒಳಗೆ ಭಕ್ತಿಯ ಗುಂಪು ಹೊರಗೆ ಜಾತಿಯ ಸೊಂಪು
ಒಳಗೆ ಮುಕ್ತಿಯ ಗುಂಪು ಹೊರಗೆ ಜನ್ಮದ ಪೆಂಪು.”

ಇಂಥ ಚೆನ್ನಯ್ಯ,

ನೆಲದ ಮರೆಯೊಳಗೆ ತೊಳಗುವ ನಿಧಾನದ ತೆರದೆ
ಪೆರರೆಯದಂತೊಳಗೆ ಲಿಂಗಾರ್ಚನೆಯೊಳಿರ್ಪ

ಆತನದು ಗುಪ್ತ ಭಕ್ತಿ. ತನ್ನ ಕಾಯಕದೊಂದಿಗೇ ಆತನ ಲಿಂಗಪೂಜೆ ನಡೆಯುತ್ತಿತ್ತು. ಚೋಳನ ಕುದುರೆಗಳಿಗೆ ಹುಲ್ಲು ತರಲು ಉದಯದಲ್ಲಿ ಕಾನನಕ್ಕೆ ಹೋಗುವನು. ಅಲ್ಲಿ:

ಕಂಡ ಚೆಲ್ವಕ್ಷಿಮುಖದಿಂದೆ ಲಿಂಗಾರ್ಪಿತಂ
ಕೊಂಡ ಸವಿ ನಾಲಗೆಯ ರುಚಿಯಿಂದಲರ್ಪಿತಂ
ಕೇಳ್ದ ಸವಿನುಡಿ ಕಿವಿಯ ಮುಖದಿಂದಲರ್ಪಿತಂ
ತಾಳ್ದ ಗಂಧಂ ನಾಸಿಕದ ಮುಖದೊಳರ್ಪಿತಂ
ಸೋಂಕಿದ ಮೃದು ದ್ರವ್ಯವಂಗದಿಂದರ್ಪಿತಂ
ಮುಂಕೊಳಿಸಿ ನೆನೆದ ರುಚಿ ಮನದಿಂದಲರ್ಪಿತಂ

ಪ್ರಸಾದ ತತ್ವದ ಪರಾಕಾಷ್ಠೆಯಿದು, ಚೆನ್ನಯ್ಯ ಪ್ರಸಾದತತ್ವವನ್ನೇ ಬದುಕಿದ ಮಹಾನುಭಾವ.

[1] ಡಾ || ಎಂ.ಎಸ್. ಸುಂಕಾಪುರ (ಸಂ) : ಹರಿಹರನ ನೂತನ ಪುರಾತನರ ರಗಳೆಗಳು. ಪುಟ ೪೦ ಪ್ರಕಾಶಕರು : ಕ.ವಿ.ವಿ. ಧಾರವಾಡ, ೧೯೭೬

[2] ಶಿ.ಶಿ.ಬಸವನಾಳ (ಸಂ) : ರಕ್ಷಾಶತಕ ಮತ್ತು ಪಂಪಾಶತಕ, ಪುಟ ೩೧. ಪದ್ಯ ೭೨, ಪ್ರಕಾಶಕರು : ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ, ಧಾರವಾಡ ೧೯೫೨.

[3] ಡಾ || ಎಂ.ಎಸ್. ಸುಂಕಾಪುರ (ಸಂ): ಹರಿಹರನ ನೂತನ ಪುರಾತನರ ರಗಳೆಗಳು. ಪ್ರಸ್ತಾವನೆ ಪುಟ ೧. ಪ್ರಕಾಶಕರು : ಕ.ವಿ.ವಿ. ಧಾರವಾಡ, ೧೯೭೬

[4] ಡಾ || ಎಂ.ಎಸ್. ಸುಂಕಾಪುರ (ಸಂ) : ಹರಿಹರನ ನೂತನ ಪುರಾತನರ ರಗಳೆಗಳು, ಪುಟ ೬೨.

[5] ಇಂಥದೇ ಪ್ರಸಂಗ ಗಿರಿಜಾಕಲ್ಯಾಣದಲ್ಲಿ ಬರುತ್ತದೆ. ಪತಿನಿಂದೆಯನ್ನು ಕೇಳಲಾರದೆ ಗಿರಿಜೆ ಕಪಟವಟುವಿಗೆ ವಿಭೂತಿಯಿಂದ ಹೊಡೆಯುವಳು ಆಗ “ಪೋದುದು ವಟುವೇಷಂ, ಶಿವನಾದೊಡದೇಂ ಪುಸಿ ದಿಟಕ್ಕೆ ನಿಲ್ವುದೆ ಜಗದೊಳ್,” ಬಹುಸುಂದರ, ಅರ್ಥಪೂರ್ಣವಾದ, ಧ್ವನಿಪೂರ್ಣವಾದ, ಸನ್ನಿವೇಶವಿದು. “ಈ ಸನ್ನಿವೇಶ ಅಸಹಜ, ಗಿರಿಜೆಯ ವರ್ತನೆ ಒರಟು” ಎಂದು ಕೆಲ ವಿಮರ್ಶಕರು ಬರೆದಿದ್ದಾರೆ, ಅವರು ಹೀಗೆ ಬರೆದು ಕವಿಗೆ ಅನ್ಯಾಯ ಮಾಡಿದ್ದಾರೆ. ಕುಮಾರಸಂಭವ ಗಿರಿಜೆಗೂ ಗಿರಿಜಾಕಲ್ಯಾಣದ ಗಿರಿಜೆಗೂ ಹೋಲಿಸಿದುದೇ ಹೀಗೆಬರೆಯಲು ಕಾರಣವಂತೆ. ಹೀಗೆ ಹೋಲಿಸುವುದೇ ತಪ್ಪು; ಹೋಲಿಸಿದರೂ ಕವಿಯ ಜಾಯಮಾನ, ಸನ್ನಿವೇಶದ ಅರ್ಥತಿಳಿದು ಕೊಳ್ಳದೆ ಹಾಗೆ ಬರೆಯುವುದು ಇನ್ನೂ ತಪ್ಪು. ಗಿರಿಜೆ ಹಾಗಿ ವಿಭೂತಿಯಿಂದಿಡುವಾಗ ಆಕೆಯ ಹೃದಯದಲ್ಲಾದ ತಳಮಳ, ಆ ಹಿಂದಿನ ಸನ್ನಿವೇಶ ಇವುಗಳ ಸಮಗ್ರ ಪರಿಚಯ ಸರಿಯಾಗಿ ಆದರೆ ಆ ವಿಮರ್ಶಕರು ಬರದುದು ತಪ್ಪೆಂದು ಅನಿಸದಿರದು.