ಬಸವಪೂರ್ವಯುಗದ ಶರಣರೆಂದರೆ ಯಾರು? ಇವರಲ್ಲಿ ಯಾರು ಯಾರು ಸಮಾವೇಶವಾಗುತ್ತಾರೆ? ತಮಿಳುನಾಡಿನ ಪುರಾತನರು ಇವರಲ್ಲಿ ಬರುವರೆ? ಷೋಡಶರು, ತೇರಸರು, ದಶಗುಣರು ಇವರಲ್ಲಿ ಒಳಗೊಳ್ಳುವರೇ? ಬಸವಣ್ಣನವರು ‘ಆದ್ಯರು’ ಎನ್ನುವರಲ್ಲ; ಇವರು ಯಾರು? ಇವರು ಶೈವರೇ? ವೀರಶೈವರೇ?.

ಬಸವಣ್ಣನವರು ತಮ್ಮ ಹಿಂದೆ ಇದ್ದ ಶೈವರನ್ನೂ ವೀರಶೈವರನ್ನೂ ಅರವತ್ತು ಮೂವರು ಪುರಾತನರನ್ನೂ ನೆನೆಯುತ್ತಾರೆ. ಚೋಳ, ಚೇರಮ, ಕಣ್ಣಪ್ಪ, ನಂಬಿ, ಸಿರಿಯಾಳ, ಚಂಗಳೆ ಮುಂತಾದ ಪುರಾತನರನ್ನೂ ಜೇಡರದಾಸಿಮಯ್ಯ, ಕೆಂಭಾವಿ ಭೋಗಣ್ಣ, ಮಾದರ ಚೆನ್ನಯ್ಯ, ತೆಲಗು ಜೊಮ್ಮಯ್ಯ ಮುಂತಾದ ಶರಣರನ್ನೂ ಭಕ್ತಿಯಿಂದ ಸ್ಮರಿಸುತ್ತಾರೆ. ಇವರೆಲ್ಲ ಬಸವಣ್ಣನವರಿಗಿಂತ ಹಿಂದಿನವರು. ಎಂದರೆ ಇವರೆಲ್ಲ ಬಸವಪೂರ್ವಯುಗದ ಶರಣರಲ್ಲಿ ಸಮಾವೇಶರಾಗುವರೇ? ಹಾಗಾದರೆ ಈ ಸಂಖ್ಯೆ ಬಹು ದೊಡ್ಡದಾಗುವುದು.

ಬಸವಣ್ಣನವರಿಗೆ ಭಕ್ತರೆಂದರೆ ಮುಗಿಯಿತು: ಅವರು ಶೈವರಿರಲಿ, ವೀರಶೈವರಿರಲಿ, ಪುರಾತನರಿರಲಿ, ಒಟ್ಟು ಅವರು ಶಿವನ ಭಕ್ತರಾಗಿರಬೇಕು, ಅವರನ್ನು ಹೃದಯತುಂಬಿ ನೆನೆಯುವರು. ಅವ ವಚನಗಳುದ್ದಕ್ಕೂ ಇದನ್ನು ಕಾಣಬಹುದು. ಆದರೆ ಇವರೆಲ್ಲರನ್ನೂ ಬಸವಪೂರ್ವಯುಗದ ಶರಣರಲ್ಲಿ ಸಮಾವೇಶಗೊಳಿಸವುದು ಸಾಧ್ಯವಿಲ್ಲ; ಅದು ಸಾಧುವೂ ಅಲ್ಲ.

ಬಸವಾದಿ ಶರಣರು ಕಾಯಕ, ದಾಸೋಹ, ಇಷ್ಟಲಿಂಗ ಮೂಲವಾಗಿಟ್ಟುಕೊಂಡು, ಸಕಲಜೀವರ ಲೇಸನ್ನು ಬಯಸಿ ಒಂದು ಹೊಸ ಸಮಾಜವನ್ನು ರಚನೆ ಮಾಡಿದರು. ಇಂಥ ಸಮಾಜರಚನೆಯ ಪ್ರಯತ್ನ ಅವರಿಗಿಂತ ಹಿಂದೆ ನಡೆದಿತ್ತು. ಅನೇಕರು ಈ ಕಾರ್ಯದಲ್ಲಿ ಭಾಗಿಯಾಗಿದ್ದರು. ಹೆಚ್ಚು ವೈಯಕ್ತಿಕವಾಗಿ, ಸ್ವಲ್ಪಮಟ್ಟಿಗೆ ಸಾಮೂಹಿಕವಾಗಿ ಇವರು ಶ್ರಮಿಸಿ ಜನಜೀವನಕ್ಕೆ ಹೊಸದನ್ನು ಕೂಡಮಾಡಿದರು. ಇವರನ್ನು ಮಾತ್ರ ಬಸವಪೂರ್ವಯುಗದ ಶರಣರಲ್ಲಿ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಬಸವಯುಗದ ಕ್ರಾಂತಿಗೆ ಇವರು ನಾಂದಿಯಾಗಿ, ಮುಂಬೆಳಕಾಗಿ ನಿಲ್ಲುತ್ತಾರೆ. ಇವರ ತತ್ವಗಳ ತಳಹದಿಯ ಮೇಲೆಯೇ ಮುಂಬಂದ ಬಸವಾದಿಶರಣರು ವಿಶಾಲವಾದ, ವಿನೂತನವಾದ ಒಂದು ಸಮಾಜವನ್ನು ನಿರ್ಮಿಸಿದರು.

ಕಾಯಕ, ದಾಸೋಹ, ಇಷ್ಟಲಿಮಗ ಮುಂತಾದವು ಬಸವಪೂರ್ವಯುಗದಲ್ಲಿ ಖಂಡಿತವಾಗಿ ಇದ್ದವು: ಶರಣರ ವಚನಗಳಲ್ಲಿ ಮತ್ತು ಕೇಶಿರಾಜ ದಣ್ಣಾಯಕನ ಕಂದಗಳಲ್ಲಿ ಇವುಗಳ ಸ್ಪಷ್ಟ ಚಿತ್ರವಿದೆ. ಷಟ್‌ಸ್ಥಲದ ಹೊಳಹೂ ಅಲ್ಲಿದೆ. ಮುಂದೆ ಬಸವಣ್ಣನವರ ಕಾಲದಲ್ಲಿ ಇವುಗಳಿಗೆ – ಕಾಯಕ, ದಾಸೋಹ, ಇಷ್ಟಲಿಂಗ ಮುಂತಾದವುಗಳಿಗೆ – ವಿಶಿಷ್ಟವಾದ, ವ್ಯಾಪಕವಾದ ಅರ್ಥ ಬಂದಂತೆ ಕಾಣುತ್ತದೆ.

ಜಾತಿ ನಿಮೂರ್ಲನ, ಸರ್ವಸಮಾನತೆ, ಒಬ್ಬ ದೇವರಲ್ಲಿ ನಂಬುಗೆ, ಯಜ್ಞಯಾಗಾದಿಗಳ ವಿರೋಧ, ಸಕಲಜೀವರಲ್ಲಿ ದಯೆ ಪ್ರೀತಿ, ಸತ್ಯಶುದ್ಧ ಕಾಯಕ, ಕಾಯಕಗಳಲ್ಲಿ ಮೇಲುಕೀಳಿಲ್ಲದಿರುವಿಕೆ, ಇಷ್ಟಲಿಂಗಧಾರಣೆ ಮುಂತಾದ ತತ್ವಗಳಿಗೆ ಬದ್ಧರಾಗಿ ಒಂದು ಹೊಸ ಸಮಾಜದ ರಚನೆಯ ಗುರಿಯತ್ತ ಸಾಗಿದವರನ್ನೆಲ್ಲ ಬಸವಪೂರ್ವಯುಗದ ಶರಣರಲ್ಲಿ ಸಮಾವೇಶಗೊಳಿಸುವುದು ನಮಗೆ ಉಚಿತವೆನಿಸುತ್ತದೆ. ಹೀಗಿದ್ದಾಗ ಇವರಲ್ಲಿ ತಮಿಳುನಾಡಿನ ಪುರಾತನರು ಸೇರ್ಪಡೆಯಾಗುವುದಿಲ್ಲ. ಷೋಡಶರು, ತೇರಸರು, ದಶಗಣರು ಇವರಲ್ಲಿ ಕೆಲವು ಸಮಾವೇಶವಾಗುತ್ತಾರೆ.[1]

ಬಸವಪೂರ್ವಯುಗ ಇನ್ನೂ ದೀರ್ಘವಾದ ಸಂಶೋಧನೆಗೆ ಒಳಪಡಬೇಕಾದ ಯುಗ. ಈಗಿನ ಮಟ್ಟಿಗೆ ಕೆಳಗೆ ಕಾಣಿಸಿದವರು ಬಸವಪೂರ್ವ ಯುಗದ ಶರಣರೆಂದು ಗುರುತಿಸಿ ಹೇಳಬಹುದು. ಸಂಶೋಧನೆ ಮುಂದುವರಿದಾಗ ಈ ಸಂಖ್ಯೆಯಲ್ಲಿ ಹೆಚ್ಚುಕಡಿಮೆಯಾಗಬಹುದು.

೧. ದೇವರ ದಾಸಿಮಯ್ಯ
೨. ಸುಗ್ಗಲೆ
೩. ಮಾದಾರಚೆನ್ನಯ್ಯ
೪. ಡೋಹರ ಕಕ್ಕಯ್ಯ
೫. ಶ್ರೀಪತಿಪಂಡಿತ
೬. ಶಂಕರದಾಸಿಮಯ್ಯ
೭. ಶಿವದಾಸಿ
೮. ಜೇಡರ ದಾಸಿಮಯ್ಯ
೯. ದುಗ್ಗಳೆ
೧೦. ಢಕ್ಕೆಯ ಬೊಮ್ಮಣ್ಣ
೧೧. ಕೊಂಡಗುಳಿ ಕೇಶಿರಾಜ
೧೨. ಗಂಗಾದೇವಿ
೧೩. ವಂಶವರ್ಧನ
೧೪. ತೆಲಗು ಜೊಮ್ಮಯ್ಯ
೧೫. ಲಕುಮಾದೇವಿ
೧೬. ಕೆಂಭಾವಿ ಭೋಗಣ್ಣ
೧೭. ಚಂದಿಮರಸ
೧೮. ನಿಜಗುಣ
೧೯. ಮೆರೆಮಿಂಡ ದೇವ
೨೦. ಗೊಗ್ಗವ್ವೆ
೨೧. ವೈಜಕವ್ವೆ
೨೨. ಮಾರುಡಿಗೆಯ ನಾಚಯ್ಯ
೨೩. ಸಿಂಗಿದೇವ
೨೪. ಕೋವೂರು ಬ್ರಹ್ಮಯ್ಯ
೨೫. ಬಾಹೂರು ಬೊಮ್ಮಯ್ಯ
೨೬. ಇಳೆಹಾಳ ಬೊಮ್ಮಯ್ಯ
೨೭. ರಾಗದ ಸಂಕಣ್ಣ
೨೮. ಕುಂಬಾರ ಗುಂಡಯ್ಯ
೨೯. ಕೇತಲದೇವಿ
೩೦. ಮಲ್ಲರಸ
೩೧. ನಂದಿಕೇಶ್ವರ
೩೨. ಅನಿಮಿಷದೇವ
೩೩. ಬಳ್ಳೇಶ ಮಲ್ಲಯ್ಯ
೩೪. ರೇವಣ ಸಿದ್ಧ
೩೫. ಶಾಂಭವಿ ದೇವಿ
೩೬. ರೇಕಮ್ಮ
೩೭. ಸೌಂದರದೇವಿ
೩೮. ಆಗಮದೇವಿ
೩೯. ಚಾಮಲೆ

. ದೇವರ ದಾಸಿಮಯ್ಯ

ಸದ್ಯದ ಮಟ್ಟಿಗೆ ದೊರೆತ ಆಧಾರಗಳಿಂದ ದೇವರದಾಸಿಮಯ್ಯ ಬಸವಪೂರ್ವಯುಗದ ಪ್ರಥಮ ಶರಣನಾಗುತ್ತಾನೆ; ಸುಗ್ಗಲೆ ಶರಣ (ವೀರಶೈವ) ಧರ್ಮಕ್ಕೆ ಆಶ್ರಯಕೊಟ್ಟ ಪ್ರಥಮ ರಾಣಿಯಾಗುತ್ತಾಳೆ. ಮತ್ತು ಮಾದಾರಚೆನ್ನಯ್ಯ ಪ್ರಥಮ ವಚನಕಾರನಾಗುತ್ತಾನೆ.

ದೇವರ ದಾಸಿಮಯ್ಯ ಮತ್ತು ಜೇಡರದಾಸಿಮಯ್ಯ ಇವರಿಬ್ಬರ ಬಗ್ಗೆ ಈಚೆಗೆ ಗೊಂದಲವುಂಟಾಗಿದೆ. ಇವರಿಬ್ಬರು ಒಂದೇ ಎಂದು ಕೆಲವರು, ಬೇರೆ ಬೇರೆ ಎಂದು ಕೆಲವರು ವಾದಿಸುತ್ತಾರೆ. ಇವರಿಬ್ಬರು ಒಂದೇ ಅಲ್ಲ: ಖಂಡಿತವಾಗಿ ಅವರು ಬೇರೆ ಬೇರೆ. ತವನಿಧಿ ಪಡೆದವ ಮುದನೂರ ಜೇಡರದಾಸಿಮಯ್ಯ, ಶಂಕರದಾಸಿಮಯ್ಯನ ಸಮಕಾಲೀನ. ಜೈನರನ್ನು ಜಯಿಸಿ, ಘಟಸರ್ಪವನ್ನು ಉತ್ತರಲಿಂಗಗೈದು ಪವಾಡ ಮೆರೆದವ ದೇವರದಾಸಿಮಯ್ಯ; ಈತ ಪೊಟ್ಟಣಕೆರೆಯಲ್ಲಿ ಆಳುತ್ತಿದ್ದ ಚಾಳುಕ್ಯ ಎರಡನೆಯ ಜಯಸಿಂಹನ ರಾಣಿ ಸುಗ್ಗಲೆಯ ಗುರು. ಇವರಿಬ್ಬರು ಬೇರೆ ಬೇರೆ ಎಂದು ಗುರುತಿಸಿ, “ವಸ್ತು ಸ್ಥಿತಿ ಹೀಗಿದ್ದರೂ ಇವರಿಬ್ಬರೂ ಒಬ್ಬನೇ ಎಂದು ಪಂಡಿತರು ಸಾಮಾನ್ಯವಾಗಿ ಒಪ್ಪಿಕೊಂಡಿರುವರು. ಈ ಪ್ರಶ್ನೆಯನ್ನು ಆತ್ಯಂತಿಕವಾಗಿ ಬಿಡಿಸಲು ಈಗ ಸಾಕಷ್ಟು ಸಾಮಗ್ರಿಯಿಲ್ಲದ ಕಾರಣ ಪಂಡಿತರ ಅಭಿಪ್ರಾಯವನ್ನು ತಾತ್ಪೂರ್ತಿಕವಾಗಿ ಒಪ್ಪಿಕೊಂಡು ದಾಸಿಮಯ್ಯನನ್ನು ಕುರಿತ ಶಾಸನಗಳನ್ನು ಇಲ್ಲಿ ಗಮನಿಸಬಹುದು” ಎಂದಿದ್ದಾರೆ. ಡಾ|| ಎಂ.ಎಂ. ಕಲಬುರ್ಗಿಯವರು.[2] ಇವರಿಬ್ಬರೂ ಖಂಡಿತ ಬೇರೆ ಬೇರೆ ಎಂದು ಶ್ರೀ ಎಚ್. ದೇವಿರಪ್ಪನವರು ಸಾಧಾರಗಳೊಂದಿಗೆ ಸಿದ್ಧಪಡಿಸುತ್ತಾರೆ.[3] ನಮ್ಮ ಅಭಿಪ್ರಾಯವೂ ನಿಶ್ಚಯವಾಗಿ ಇವರು ಬೇರೆ ಬೇರೆ ಎಂಬುದೇ ಆಗಿದೆ.

ಜೇಡರದಾಸಿಮಯ್ಯನನ್ನು ಕುರಿತು ದೊರಕುವ ಶಾಸನ ಮುಂತಾದ ಆಧಾರಗಳಂತೆ ದೇವರದಾಸಿಮಯ್ಯನನ್ನು ಕುರಿತು ದೊರಕುವುದಿಲ್ಲ. ಆತ ಎಲ್ಲಿಯವ? ಉತ್ತರಲಿಂಗ ಪವಾಡಮಾಡಿ ಎಲ್ಲಿಗೆ ಹೋದ ಎಂಬುದು ತಿಳಿಯುವುದಿಲ್ಲ. ಬಹುಶಃ ಆತ ಆಂಧ್ರಪ್ರದೇಶದವನಾಗಿರಬೇಕು; ಆತ ತಿರುಗಾಡಿದ ಸ್ಥಳಗಳೆಲ್ಲ ಆಂಧ್ರದೇಶಕ್ಕೆ ಸೇರಿದುವೇ.

ಜೇಡರದಾಸಿಮಯ್ಯ ಮತ್ತು ದೇವರದಾಸಿಮಯ್ಯ ಇವರಿಬ್ಬರ ಇಷ್ಟದೇವರು ರಾಮನಾಥನೆ. ಆದಕಾರಣ ಇವರಿಬ್ಬರು ಒಂದೇ ಎಂದು ನಂಬಲು ಕಾರಣವಾಗಿರಬೇಕು. ಯಾವ ವಚನಗಳ ಕಟ್ಟುಗಳಲ್ಲಿಯೂ ದೇವರದಾಸಿಮಯ್ಯ ಎಂಬ ಹೆಸರು ಬರುವುದಿಲ್ಲ; ಜೇಡರದಾಸಿಮಯ್ಯ ಅಥವಾ ದಾಸಿಮಯ್ಯ ಎಂದು ಬರುತ್ತದೆ.[4] ಈಗ ದೊರೆತ ಜೇಡರದಾಸಿಮಯ್ಯನಿಗೆ ಸಂಬಂಧಿಸಿದ ಹತ್ತು ಶಾಸನಗಳಲ್ಲಿ ಒಂದರಲ್ಲಿಯೂ ‘ದೇವರದಾಸಿಮಯ್ಯ’ ಎಂದಿಲ್ಲ. ಬಸವಣ್ಣ, ಹರಿಹರ, ಮಲ್ಲಿಕಾರ್ಜುನ ಪಂಡಿತಾರಾಧ್ಯ, ಬ್ರಹ್ಮಶಿವ, ಅಂಬಿಗರ ಚೌಡಯ್ಯ, ಲಕ್ಕಣ್ಣದಂಡೇಶ ಇವರೆಲ್ಲರೂ ಜೇಡರದಾಸಿಮಯ್ಯನೆಂದೇ ಎನ್ನುತ್ತಾರೆ; ದೇವರದಾಸಿಮಯ್ಯ ಎಂದಲ್ಲ. ವಸ್ತ್ರದ ಪವಾಡ, ತವನಿಧಿಯ ಪವಾಡ ಹೇಳುವಾಗ ಬಸವಣ್ಣ ಜೇಡರದಾಸಿಮಯ್ಯನೆಂದೇ ಹೇಳುತ್ತಾನೆ. ಹರಿಹರನಲ್ಲಿ ಇಲ್ಲದ ಈ ದೇವರದಾಸಿಮಯ್ಯ ಮೊದಲು ಬಸವಪುರಾಣದಲ್ಲಿ (ತೆಲುಗು ಬಸವಪುರಾಣಕೂಡ) ಕಾಣಿಸಿಕೊಳ್ಳುತ್ತಾನೆ. ಬಸವಪುರಾಣದಲ್ಲಿ ಇವರಿಬ್ಬರು ಬೇರೆ ಬೇರೆ ಎಂದು ಖಚಿತವಾಗಿ ಚಿತ್ರಿತವಾಗಿದೆ: ತವನಿಧಿಯ ಪವಾಡದಾತ ಜೇಡರದಾಸಿಮಯ್ಯ.[5] ಉತ್ತರಲಿಂಗದ ಪವಾಡದಾತ ದೇವರದಾಸಿಮಯ್ಯ.[6] ಆದರೆ ಬಸವಪುರಾಣದ ತರುವಾಯ ಬಂದ ಶೂನ್ಯಸಂಪಾದನೆಕಾರರು, ಭೈರವೇಶ್ವರ ಕಥಾಮಣಿಸೂತ್ರರತ್ನಾಕರದ ಲೇಖಕ ಶಾಂತಲಿಂಗದೇಶಿಕ, ಗಣೇಶಪುರಾಣದ ಕವಿ ಮೊದಲಾದವರು ಜೇಡರದಾಸಿಮಯ್ಯನಿಗೆ ದೇವರದಾಸಿಮಯ್ಯನನ್ನು ತಳುಕುಹಾಕಿ ಗೊಂದಲವನ್ನುಂಟುಮಾಡಿದ್ದಾರೆ.

ಸುಗ್ಗಲೆ ಚಾಳುಕ್ಯ ಎರಡನೆಯ ಜಯಸಿಂಹನ ಪಟ್ಟದರಾಣಿ; ಈತ ಪೊಟ್ಟಲ ಕೆರೆಯಲ್ಲಿ ಕ್ರಿ.ಶ. ೧೦೧೫ ರಿಂದ ೧೦೪೪ ರವರೆಗೆ ರಾಜ್ಯವಾಳಿದ. ಮಾನ್ಯ ಖೇಟದಿಂದ ಪೊಟ್ಟಲಕೆರೆಗೆ ರಾಜಧಾನಿಯನ್ನು ವರ್ಗಾಯಿಸಿದವನು ಇವನೇ. ಈತನಿಗೆ ಜಗದೇಕಮಲ್ಲ ಎಂಬ ಬಿರುದು ಇತ್ತು. ಬಸವಪುರಾಣ ಮತ್ತು ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರರತ್ನಾಕರದಲ್ಲಿ ಈತನನ್ನು ದೇಸಿಂಗರಾಯ ಎಂದು ಕರೆಯಲಾಗಿದೆ; ಸುಗ್ಗಲೆಯೊಂದಿಗೆ ಈತನ ಹೆಸರು ಬರುವುದರಿಂದ ಮತ್ತು ಪೊಟ್ಟಲಕೆರೆಯಲ್ಲಿ ದೇಸಿಂಗರಾಯ ಆಳುತ್ತಿದ್ದನೆಂದು ಹೇಳುವುದರಿಂದ ಜಯಸಿಂಹ (ಇಮ್ಮಡಿ) ನೇ ದೇಸಿಂಗರಾಯನೆಂದು ನಂಬಲಡ್ಡಿಯಿಲ್ಲ. ಇಮ್ಮಡಿ ಜಯಸಿಂಹನಿಗೆ ದೇಸಿಂಗರಾಯ ಎಂಬ ಇನ್ನೊಂದು ಹೆಸರೂ ಇದ್ದಿರಬೇಕು. ಅದು ಬಸವಪುರಾಣದ ಕರ್ತೃವಿಗೂ ಶಾಂತಲಿಂಗದೇಶಿಕನಿಗೂ ಗೊತ್ತಿರಬೇಕು.

ವಿಸ್ತಾರವಾಗುತ್ತಿರುವ ರಾಜ್ಯಕ್ಕೆ ಮುನ್ನ ಖೇಟರಾಜಧಾನಿ ಕೇಂದ್ರವಾಗುವುದಿಲ್ಲವೆಂದು ಭಾವಿಸಿ ಜಯಸಿಂಹ ಪೊಟ್ಟಲಕೆರೆಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡಂತೆ ಕಾಣುತ್ತದೆ. ಚೋಳರಾಜ ರಾಜೇಂದ್ರ ಕ್ರಿ.ಶ. ೧೦೧೯ರಲ್ಲಿ ಮಾನ್ಯಖೇಟವನ್ನು ಸುಟ್ಟನೆಂದು ಅವನ ಚರಿತ್ರೆ ಹೇಳುತ್ತದೆ.[7] ಎಂದರೆ ೧೦೧೯ ರ ತರುವಾಯವೇ ಜಯಸಿಂಹ ಪೊಟ್ಟಲಕೆರೆಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿರಬೇಕು. ಆದರೆ ಎಂದು ಎಂಬುದು ಖಚಿತವಾಗಿ ಹೇಳಲು ಬರುವುದಿಲ್ಲ. ಕ್ರಿ.ಶ. ೧೦೩೩ ಮತ್ತು ೧೦೪೩ರ ಶಾಸನ ಮತ್ತು ದಾಖಲೆಗಳಲ್ಲಿ ಉಕ್ತವಾಗಿರುವ ಆಂಧ್ರಪ್ರದೇಶದ ಮೇದಕ್ ಜಿಲ್ಲೆಯಲ್ಲಿರುವ ಪೊಟಂಚರುವೇ ಪೊಟ್ಟಲಕೆರೆಯೆಂದು ಗುರುತಿಸಲಾಗಿದೆ.[8] ಎಂದರೆ ಕ್ರಿ.ಶ. ೧೦೩೫ ರಿಂದ ೧೦೪೩ರ ಒಳಗಿನ ಅವಧಿಯಲ್ಲಿ ದೇವರದಾಸಿಮಯ್ಯ ಪೊಟ್ಟಲಕೆರೆಗೆ ಬಂದಿರಬೇಕು. ಆ ಬಳಿಕ ಆತ ಎಲ್ಲಿಗೆ ಹೋದ? ಏನಾದನೆಂಬುದು ಬಸವಪುರಾಣವಾಗಲೀ ಇನ್ನಿತರ ಕೃತಿಗಳಾಗಲೀ ಹೇಳುವುದಿಲ್ಲ.

ಜೇಡರದಾಸಿಮಯ್ಯ ಮತ್ತು ದೇವರದಾಸಿಮಯ್ಯ ಇಬ್ಬರೂ ಒಂದೇ ಎಂದರೆ ಇನ್ನೊಂದು ತೊಡಕುಬರುತ್ತದೆ. ಶಂಕರದಾಸಿಮಯ್ಯ ಜೇಡರದಾಸಿಮಯ್ಯನ ಸಮಕಾಲೀನ. ಈತ ಆರನೆಯ ವಿಕ್ರಮಾದಿತ್ಯನ ತಮ್ಮ ಮೂರನೆಯ ಜಯಸಿಂಹ ಯುವರಾಜನಾಗಿದ್ದಾಗ ಎಂದರೆ ೧೦೭೬ – ೧೧೨೭ರ ಅವಧಿಯಲ್ಲಿ ಕಲ್ಯಾಣಕ್ಕೆ ಹೋದುದು ಎಂದ ಮೇಲೆ ಈತನ ಸಮಕಾಲೀನನಾದ ಜೇಡರದಾಸಿಮಯ್ಯ (ಈತನನ್ನೇ ದೇವರದಾಸಿಮಯ್ಯನೆಂದು ಭಾವಿಸಿದರೆ) ಕ್ರಿ.ಶ. ೧೦೩೫ – ೧೦೪೩ರ ಅವಧಿಯಲ್ಲಿ ಪೊಟ್ಟಲಕೆರೆಗೆ ಹೋಗುವುದು ಹೇಗೆ ಸಾಧ್ಯ? ಅಲ್ಲದೆ ಜೇಡರದಾಸಿಮಯ್ಯನಿಗೆ ಸಂಬಂಧಿಸಿದ ಕ್ರಿ.ಶ.೧೧೪೮ರ ಒಂದು ಶಾಸನ ದೊರಕಿದೆ.[9] ಇದಕ್ಕಿಂತ ತುಸುಹಿಂದೆ ಆತ ಬದುಕಿದ್ದನೆಂದು ಊಹಿಸಲು ಅವಕಾಶವಿದೆ. ಆದುದರಿಂದ ತವನಿಧಿ ಮತ್ತು ವಸ್ತ್ರದ ಪವಾಡ ಮೆರೆದ ಮುದನೂರ ಜೇಡರದಾಸಿಮಯ್ಯ ಬೇರೆ, ಪೊಟ್ಟಲಕೆರೆಗೆ ಎರಡನೆಯ ಜಯಸಿಂಹನ ಪಟ್ಟದರಸಿ ಸುಗ್ಗಲೆಯ ಬಿನ್ನಹದ ಮೇರೆಗೆ ಹೋಗಿ ಜೈನರನ್ನು ವಾದದಲ್ಲಿ ಸೋಲಿಸಿ ಉತ್ತರಲಿಂಗದ ಪವಾಡವನ್ನು ಮೆರೆದ ದೇವರದಾಸಿಮಯ್ಯ ಬೇರೆ.

ಸುಗ್ಗಲೆ

ದೇವರದಾಸಿಮಯ್ಯನಿಂದ ದೀಕ್ಷೆಪಡೆದ ಸುಗ್ಗಲೆ ಇಮ್ಮಡಿ ಜಯಸಿಂಹನ ಪಟ್ಟದರಾಣಿ; ಮೊಟ್ಟಮೊದಲಿಗೆ ಲಿಂಗವಂತ ಧರ್ಮಕ್ಕೆ ರಾಜಾಶ್ರಯವಿತ್ತ ಧೀರೆ. ಅಲ್ಲದೆ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಪತಿಯಿಂದ ದೂರಸರಿಯಲು ಹಿಂಜರಿಯದ ವೀರಸರಣೆ. ‘ಸತಿಗೆ ಪತಿಯೇ ಗುರು, ಬೇರೆ ಗುರುವಿಲ್ಲ, ಪತಿಯ ದೈವವೇ ಸತಿಯ ದೈವ’ವೆಂದು ಜಯಸಿಂಹ ಹೇಳಿದರೆ ಶರಣಧರ್ಮಿಯಾದ ಸುಗ್ಗಲೆ ಅದನ್ನು ಒಪ್ಪಿಕೊಳ್ಳಲಿಲ್ಲ.[10] ಶರಣಧರ್ಮದಲ್ಲಿ ಪತಿಯೇ ಗುರುವಲ್ಲ, ಪತಿಯೇ ದೈವವಲ್ಲ, ಪತಿ ಆಚರಿಸಿದ ಧರ್ಮವನ್ನೇ ಸತಿ ಆಚರಿಸಬೇಕೆಂಬ ಕಟ್ಟಳೆಯಿಲ್ಲ. ಆದುದರಿಂದ ಸುಗ್ಗಲೆ ಧೀರಳಾಗಿ ಪತಿಗೆ ಎದುರಾಗಿ ನಿಂತಳು. ದೇವರದಾಸಿಮಯ್ಯನನ್ನು ಕರೆಸಿ ಜೈನರೊಡನೆ ವಾದಿಸಲು ಬೇಡಿಕೊಂಡಳು. ಕೊನೆಗೆ ಉತ್ತರೇಶ್ವರಲಿಂಗದ ಪವಾಡ ನಡೆದಮೇಲೆ ಎರಡನೆಯ ಜಯಸಿಂಹ ತಾನೂ ಸುಗ್ಗಲೆಯ ಧರ್ಮವನ್ನು ಅನುಸರಿಸಿದನೆಂದು ತೋರುತ್ತದೆ.

ದೇವರದಾಸಿಮಯ್ಯನಿಗಿಂತ ಹಿಂದೆ ಶರಣರು ಇದ್ದಂತೆ ಮತ್ತು ಶರಣಧರ್ಮವು ಪ್ರಚಾರವಾದಂತೆ ದಾಖಲೆಗಳೇನೂ ದೊರಕುವುದಿಲ್ಲ. ಶರಣಧರ್ಮದ ಮುಂಬೆಳಕಾಗಿ ಬಂದ ದೇವರದಾಸಿಮಯ್ಯನ ಹಿಂದೆ ಇದರ ಹೊಳಹುಗಳು ಇರಬೇಕು. ಮೊಟ್ಟಮೊದಲಿಗೇ ಶರಣಧರ್ಮಕ್ಕೆ ರಾಜಾಶ್ರಯ ನೀಡಿ ಅದನ್ನು ಬಲಗೊಳಿಸುವ ಭಾಗ್ಯ ಸುಗ್ಗಲೆಯದಾಯಿತು. ಕ್ರಿ.ಶ. ೧೦೨೦ ರಿಂದ ಶರಣಧರ್ಮ ಖಚಿತವಾಗಿ ಬೆಳೆದು ನಾಡಿನಲ್ಲಿ ಒಂದು ಹೊಸಹುಟ್ಟಿಗೆ ಕಾರಣವಾಯಿತೆಂದು ಸುಗ್ಗಲೆ ಮತ್ತು ದೇವರದಾಸಿಮಯ್ಯನವರ ಚರಿತ್ರೆ ಸ್ಪಷ್ಟಗೊಳಿಸುತ್ತದೆ.

ಸುಗ್ಗಲೆ ಧಾರ್ಮಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಅನೇಕ ಮಹತ್ಕಾರ್ಯಗಳನ್ನು ಸಾಧಿಸಿದಳು. ಆಕೆಯ ಕೀರ್ತಿ ನಾಡಿನ ತುಂಬ ಹಬ್ಬಿತು. ಆಕೆ ತನ್ನ ಜೀವಿತದಲ್ಲೊಂದೇ ಕೀರ್ತಿಯನ್ನು ಪಡೆಯಲಿಲ್ಲ; ಮುಂದೆ ಶತಶತಮಾನಗಳವರೆಗೂ ಆಕೆಯ ಆದರ್ಶ ಸತೀತ್ವವನ್ನು ಶಾಸನಕಾರರೂ ಕವಿಗಳೂ ಹೊಗಳಿ ಹಾಡಿದರು. ಕ್ರಿ.ಶ. ೧೦೨೯ರ ದೇವೂರ ಶಾಸನ ೧೧೮೨ರ ಕೆರೆಸಂತೆಯ ಶಾಸನ ಮತ್ತು ಬೇಲೂರು ಹಳೇಬೀಡುಗಳ ಶಾಸನಗಳಲ್ಲಿ ಆಕೆಯ ವ್ಯಕ್ತಿತ್ವ ಅರಳಿನಿಂತಿದೆ.

ಕಲ್ಯಾಣಚಾಳುಕ್ಯರ ಆರನೆಯ ವಿಕ್ರಮಾದಿತ್ಯನೇ (೧೦೭೬ – ೧೧೨೭) ಕಾಲ ಶರಣರ ಹುಟ್ಟು ಬೆಳವಣಿಗೆಯ ದೃಷ್ಟಿಯಿಂದ ಬಹುಸಮೃದ್ಧವಾದುದು. ಮಾದಾರಚೆನ್ನಯ್ಯ, ಡೋಹರಕುಕ್ಕಯ್ಯ, ಶ್ರೀಪತಿಪಂಡಿತ, ಶಂಕರದಾಸಿಮಯ್ಯ, ಶಿವದಾಸಿ, ಜೇಡರದಾಸಿಮಯ್ಯ, ದುಗ್ಗಳೆ, ಢಕ್ಕೆಯ ಬೊಮ್ಮಣ್ಣ, ಕೆಂಭಾವಿ ಭೋಗಣ್ಣ, ಚಂದಿಮರಸ, ನಿಜಗುಣ, ವಂಶವರ್ಧನ, ಕೇಶಿರಾಜ, ತೆಲುಗು ಜೊಮ್ಮಯ್ಯ, ಲಕುಮಾದೇವಿ, ಬಾಹೂರ ಬೊಮ್ಮಯ್ಯ, ಇಳೆಹಾಸ ಬೊಮ್ಮಯ್ಯ, ರಾಗದ ಸಂಕಣ್ಣ ಮುಂತಾದವರೆಲ್ಲ ತುಸು ಹೆಚ್ಚು ಕಡಿಮೆ ಆರನೆಯ ವಿಕ್ರಮಾದಿತ್ಯನ ಕಾಲದಲ್ಲಿಯವರೇ. ಇವರ ಕಾಲನಿರ್ಣಯ ಮಾಡುವಾಗ ಒಬ್ಬರದೇ ಪ್ರತ್ಯೇಕವಾಗಿ ನಿರ್ಣಯಿಸಲು ಸಾಧ್ಯವಿಲ್ಲ. ಒಬ್ಬರದು ಇನ್ನೊಬ್ಬರಲ್ಲಿ ತಳುಕು ಹಾಕಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ಜೇಡರ ದಾಸಿಮಯ್ಯನ ಮೂರು ವಚನಗಳು ನಮ್ಮ ಕಾರ್ಯಕ್ಕೆ ಬಹಳ ಅನುಕೂಲವಾಗಿವೆ.

ಕೀಳು ಡೋಹರ ಕಕ್ಕಯ್ಯ
ಕೀಳು ಮಾದಾರ ಚನ್ನಯ್ಯ
ಕೀಳು ಓಹಿಲದೇವಯ್ಯಕೀಳು ಉದ್ಭಟದೇವಯ್ಯ
ಕೀಳಿಂಗಲ್ಲದೆ ಹಯನುಕರೆಯದು ನೋಡಾ
ಮೇಲಾಗಿ ಕರ್ಮದಲೋಲಾಡಲಾರದೆ
ಕೀಳಾಗಿ ಬದುಕಿದೆನಯ್ಯಾ ರಾಮನಾಥ[11]

ನಂಬಿದ ಚೆನ್ನನ ಅಂಬಲಿಯನುಂಡ
ಕೆಂಭಾವಿಯ ಭೋಗಯ್ಯನ ಹಿಂದಾಡಿಹೋದ
ಕುಂಭದ ಗತಿಗೆ ಕುಕಿಲಿರಿದು ಕುಣಿದ
ನಂಬದೆ ಕರೆವರ ಹಂಬಲನೊಲ್ಲನೆಮ್ಮ ರಾಮನಾಥ[12]

ನೆರೆ ನಂಬಿ ಕರೆದಡೆ ನರಿ ಕುದುರೆಯಾಗಿ ಹರಿಯವೇ?
ಜಗವೆಲ್ಲ ಅರಿಯಲು ತೊರೆಯೊಳಗೆ ಬಿದ್ದ
ಲಿಂಗ ಕರೆದಡೆ ಬಂತುಕರಸ್ಥಲಕ್ಕೆ
ನಂಬದೆ ಕರೆದವರ ಹಂಬಲನೊಬ್ಬ ರಾಮನಾಥ[13]

ಡೋಹರ ಕಕ್ಕಯ್ಯ ಮಾದಾರ ಚೆನ್ನಯ್ಯ ಕೆಂಭಾವಿ ಭೋಗಯ್ಯ, ಕುಂಭದ ಗತಿಗೆ ಕುಲಕಿರಿದು ಶಿವನನ್ನು ಕುಣಿಸಿದ ಕುಂಬಾರ ಗುಂಡಯ್ಯ ಮತ್ತು ತೊರೆಯೊಳಗೆ ಬಿದ್ದ ಲಿಂಗವನ್ನು ಕರೆದು ಕರಸ್ಥಲಕ್ಕೆ ತಂದುಕೊಂಡ ಕೊಂಡಗುಳಿ ಕೇಶಿರಾಜ ಇವರನ್ನು ಜೇಡರದಾಸಿಮಯ್ಯ ಭಕ್ತಿಯಿಂದ ನೆನೆದಿದ್ದಾನೆ. ಇವರಲ್ಲಿ ಕೊಂಡಗುಳಿ ಕೇಶೀರಾಜ ಮತ್ತು ಕೆಂಭಾವಿ ಭೋಗಣ್ಣ ಆತನಿಗೆ ಸಮಕಾಲೀನರಾಗಿ ಉಳಿದವರು ಹಿಂದಿನವರಾಗುತ್ತಾರೆ ಮತ್ತು ಮಾದಾರ ಚೆನ್ನಯ್ಯ ತೀರ ಹಿಂದಿನವನಾಗಿ ಎಲ್ಲರಿಗಿಂತ ಹಿರಿಯನೆನಿಸುತ್ತಾನೆ. ಜೇಡರ ದಾಸಿಮಯ್ಯನ ಕಾಲನಿರ್ಣಯವಾದರೆ ಇವರ ಮತ್ತು ಇನ್ನಿತರ ಶರಣರ ಕಾಲನಿರ್ಣಯಕ್ಕೆ ಅನುಕೂಲವಾಗುತ್ತದೆ ಮತ್ತು ಕೊಂಡಗುಳಿ ಕೇಶೀರಾಜನ ಕಾಲನಿರ್ಣಯವು ಬಹಳಷ್ಟು ಶರಣರ ಕಾಲನಿರ್ಣಯಕ್ಕೆ ಸಹಾಯಕಾರಿಯಾಗುತ್ತದೆ. ಇವರ ವಿವೇಚನೆ ಮುಂದೆ ಮಾಡಲಾಗುವುದು.

ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ ಮತ್ತು ಶ್ರೀಪತಿಪಂಡಿತ

ಮಾದಾರ ಚೆನ್ನಯ್ಯ ಕರಿಕಾಲ ಚೋಳನ ಕಾಲದಲ್ಲಿದ್ದನು. ಕರಿಕಾಲ ಚೋಳನೆಂಬ ಬಿರುದು ವೀರರಾಜೇಂದ್ರ, ಪರಾಕೇಸರಿ ಅಧಿರಾಜೇಂದ್ರ ಮತ್ತು ಒಂದನೆಯ ಕುಲೋತ್ತುಂಗ ಈ ಮೂವರಿಗೂ ಇತ್ತು. ಇವರಲ್ಲಿ ಚೆನ್ನಯ್ಯ ಯಾರ ಕಾಲದಲ್ಲಿದ್ದನೆಂಬುದೇ ಪ್ರಶ್ನೆ. ಫ.ಗು. ಹಳಕಟ್ಟಿಯವರು “ಇವನು ಒಂದನೆಯ ಕುಲೋತ್ತುಂಗನ ಕಾಲದಲ್ಲಿದ್ದನು…. ಚಾಳುಕ್ಯ ರಾಜನಾದ ಆರನೆಯ ವಿಕ್ರಮಾದಿತ್ಯನ ಕೂಡ ಅವನು (ಕರಿಕಾಲ ಚೋಳ) ಅನೇಕ ತುಮುಲ ಯುದ್ಧಗಳನ್ನು ನಡೆಸಿದನು. ಆದರೆ ಕಡೆಗೆ ವಿಕ್ರಮಾದಿತ್ಯ ಅವನ ಮಗಳನ್ನು ಲಗ್ನವಾಗಿ ಉಭಯರು ಸಂಧಾನ ಮಾಡಿಕೊಂಡಂತೆ ತೋರುತ್ತದೆ. ಆ ಕಾಲದಲ್ಲಿ ಕನ್ನಡಿಗರಿಗೂ ತಮಿಳರಿಗೂ ಅನೇಕ ರೀತಿಯಿಂದ ನಿಕಟ ಸಂಬಂಧವಿದ್ದಿತು. ಅನೇಕ ಶಿವಶರಣರು ತಮಿಳು ದೇಶಕ್ಕೆ ಹೋಗಿ ಅಲ್ಲಿ ತಮ್ಮ ಶಿವಾನುಭವದ ನಡೆಯನ್ನು ಪಸರಿಸಿದ್ದೂ ಕಂಡುಬರುತ್ತದೆ. ಆದ್ದರಿಂದ ಚೆನ್ನಯ್ಯನು ಇವರಂತೆಯೇ ಕರ್ನಾಟಕವನ್ನು ಬಿಟ್ಟು ಕಾಂಚಿ ಪಟ್ಟಣಕ್ಕೆ ಹೋಗಿ ಅಲ್ಲಿ ವಾಸಮಾಡಿದನೆಂದು ತೋರುತ್ತದೆ”[14] ಎಂದು ಅಭಿಪ್ರಾಯ ಪಡುತ್ತಾರೆ. ಆದರೆ ಆರನೆಯ ವಿಕ್ರಮಾದಿತ್ಯ ಲಗ್ನವಾದುದು ವೀರರಾಜೇಂದ್ರನ ಮಗಳನ್ನು. ಒಂದನೆಯ ಕುಲೋತ್ತುಂಗನ ಮಗಳನ್ನಲ್ಲ. ಆ ಮದುವೆ ಕ್ರಿ.ಶ. ೧೦೭೦ ಕ್ಕಿಂತ ಮುಂಚೆ ಆಗಿರಬೇಕು.[15] ಆಗಿನ್ನೂ ಆರನೆಯ ವಿಕ್ರಮಾದಿತ್ಯ ರಾಜನಾಗಿರಲಿಲ್ಲ. ಚೆನ್ನಯ್ಯ ೧೦೭೦ರ ತರುವಾಯವಾಗಲಿ ಅಥವಾ ಮೊದಲೇ ಆಗಲೀ ಕರ್ನಾಟಕದಿಂದ ತಮಿಳುನಾಡಿಗೆ ಹೋಗಿರಬೇಕು. ಕರ್ನಾಟಕದ ಯಾವ ಭಾಗದಲ್ಲಿ ಆತ ಇದ್ದನೆಂಬುದು ತಿಳಿದು ಬರುವುದಿಲ್ಲ. ಆತ ಕರಿಕಾಲ ಚೋಳ ಒಂದನೆಯ ಕುಲೋತ್ತುಂಗನ ಕಾಲದಲ್ಲಿಯೂ (೧೦೭೦ ರಿಂದ ೧೧೭೦) ಕಂಚಿಯಲ್ಲಿಯೇ ಇರಬೇಕು. ಪೆರಿಯ ಪುರಾಣವನ್ನು ಬರೆಸಿದ ಶ್ರೇಷ್ಠ ಶಿವಭಕ್ತನಾದ ಈ ಒಂದನೆಯ ಕುಲೋತ್ತುಂಗ ಕರಿಕಾಲ ಚೋಳನೊಡನೆ ಚೆನ್ನಯ್ಯನ ಸಂಬಂಧಬಂದುದು ಈತನ ಲಾಯದ ಕುದುರೆಗಳಿಗೆ ಚೆನ್ನಯ್ಯ ಹುಲ್ಲು ತರುವಾ ಕ ಬಾಡಿಗನಾಗಿದ್ದ. ಈ ಕಾಲದಲ್ಲಿಯೇ ಚೆನ್ನಯ್ಯನ ಗುಪ್ತಭಕ್ತಿ ಶಿವನಿಂದ ಬಯಲಾದುದು. ಈ ಪವಾಡ ಕ್ರಿ.ಶ. ೧೧೦೦ ರಲ್ಲಿ ಜರುಗಿದ್ದುದೆಂದು ಇಟ್ಟುಕೊಳ್ಳಬಹುದು.

ಮಾದಾರ ಚೆನ್ನಯ್ಯ ತಮಿಳು ನಾಡಿಗೆ ಹೋಗುವುದಕ್ಕಿಂತ ಮುಂಚೆ (೧೦೭೦) ಪ್ರಬುದ್ಧನಾಗಿರಬೇಕು. ಈತ ಕ್ರಿ.ಶ. ೧೦೪೦ ಕ್ಕಿಂತ ಆಚೆಯವನಲ್ಲ ಮತ್ತು ೧೦೩೦ ಕ್ಕಿಂತ ಈಚೆ ಬಾಳಿರುವ ಸಾಧ್ಯತೆಗಳಿಲ್ಲ. ಆತ ಕಲ್ಯಾಣಕ್ಕೆ ಬಂದಿರುವನೆಂಬುದಕ್ಕೆ ಆಧಾರಗಳಿಲ್ಲ.

ಡೋಹರ ಕಕ್ಕಯ್ಯ ಮಾಳವದಿಂದ ಬಂದವನೆಂದು ಡಾ|| ಹಳಕಟ್ಟಿಯವರು ಹೇಳುತ್ತಾರೆ.[16] ಇದಕ್ಕೆ ಏನು ಆಧಾರವೋ ಅವರು ಹೇಳಿಲ್ಲ. ಆತ ಕಲ್ಯಾಣಕ್ಕೆ ಬರುವುದಕ್ಕೆ ಮುಂಚೆ ಲಕ್ಕಣ್ಣ ದಂಡೇಶ ಹೇಳುವಂತೆ ಬೆಜವಾಡದಲ್ಲಿದ್ದನೆಂದೇ ಭಾವಿಸಬೇಕಾಗುತ್ತದೆ. ಶಿವತತ್ತ್ವ ಚಿಂತಾಮಣಿಯನ್ನು ಬಿಟ್ಟರೆ ಕಲ್ಯಾಣಕ್ಕೆ ಬರುವ ಮುಂಚಿನ ಆತನ ಚರಿತ್ರೆ ಬೇರೆಲ್ಲಿಯೂ ದೊರಕುವುದಿಲ್ಲ. ಈತನ ಚರಿತ್ರೆಯೊಂದಿಗೆ ಶ್ರೀಪತಿ ಪಂಡಿತನ ಚರಿತ್ರೆಯೂ ಹೆಣೆದುಕೊಂಡಿದೆ. ಅದನ್ನು ಶಿವತತ್ತ್ವ ಚಿಂತಾಮಣಿ ಹೀಗೆ ವರ್ಣಿಸುತ್ತದೆ :

ಧರೆಯೊಳುತ್ತಮ ಬೆಜ್ಜವಾಡಪುರದೊಳಗೊರ್ವ
ಪರಮ ಮಾಹೇಶ್ವರರು ಪಂಡಿತಾರಾಧ್ಯರಿರೆ
ಕರೆದನವರಂ ಡೋಹಕಕ್ಕಯ್ಯನೊಂದು ದಿನ ಭಕ್ತರುತ್ಸಹ ಪರ್ವಕೆ
ಶರಣರಿಂ ಮನ್ನಣೆಯ ಕೈಕೊಂಡು ಬರುತಿರಲು
ಜರೆವುತಾ ದ್ವಿಜವರ್ಗ ಕುಲಕೆ ಹೊರಗೆಂದೆನಲು
ತರುಣಾಗ್ನಿಹೋತ್ರದವರಗ್ನಿಯಂತೆಗೆದವನ ಚರಣಾಂಬುಜಕ್ಕೆ ಶರಣು.[17]

ಪಟ್ಟಿವಸ್ತ್ರದೊಳಗ್ನಿಯಂ ತೆಗೆದು ಗಂಟಿಕ್ಕಿ
ಕಟ್ಟಿದನು ಶಮಿಯ ವೃಕ್ಷದ ಮೇಲುಗೊಂಬಿನಲಿ
ಕೆಟ್ಟಿತಾದ್ವಿಜರ ಹೋಮಾಗ್ನಿ ಪ್ರತಿಪ್ರತಿಗ್ರಹದಿ ಕಂಡು ಪರಿತಾಪದಿಂದ
ಸೃಷ್ಟಿಯೊಳು ಪಂಡಿತಾರಾಧ್ಯನೇ ಶಿವನೆನುತ
ಬಟ್ಟೆಯೊಳ್ ನಿಂದು ಮೈಯಿಕ್ಕುತಿರಲೆಲ್ಲರಿಗೆ
ಕೊಟ್ಟ ನಿಮ್ಮಗ್ನಿಯಂ ಮುನ್ನಿನಂತೆಬುವನ ಚರಣಾಂಬುಜಕ್ಕೆ ಶರಣು.[18]

ಮೇಲಿನ ಎರಡು ಪದ್ಯಗಳಲ್ಲಿ ವರ್ಣಿತರಾದ ಪಂಡಿತಾರಾದ್ಯರೆಂದರೆ ಶ್ರೀಪತಿ ಪಂಡಿತರೇ. ಅವರೇ ಅಗ್ನಿ ಪವಾಡವನ್ನು ಮಾಡಿದ್ದು.

ಶ್ರೀಪತಿ ಪಂಡಿತರು ಬೆಜವಾಡದಲ್ಲಿದ್ದರು. ಕಕ್ಕಯ್ಯನು ಅಲ್ಲಿಯೇ ಇದ್ದ. ಕಕ್ಕಯ್ಯನ ಮನೆಯಲ್ಲಿ ಶ್ರೀಪತಿಪಂಡಿತರು ಪ್ರಸಾದ ಸೇವಿಸಿದುದರಿಂದ ಬ್ರಾಹ್ಮಣರು ರೊಚ್ಚಿಗೆದ್ದರು. ಬ್ರಾಹ್ಮಣನು ಡೋಹಾರನ ಮನೆಯಲ್ಲಿ ಉಣ್ಣುವುದೆಂದರೇನು? ಆಗ ಶಿವಭಕ್ತರೇ ಕುಲಜರೆಂದು ಹೇಳಿ ಶ್ರೀಪತಿಪಂಡಿತರು ಅಗ್ನಿ ಪವಾಡವನ್ನು ಮಾಡಿದರು. ಬ್ರಾಹ್ಮಣರು ಶರಣಾಗತರಾದರು. “ಶ್ರೀಪತಿಪಂಡಿತರು ಅಂತ್ಯಜನಾದ ಗೋಡಗರಿ ಮಲ್ಲಯ್ಯನ ಮನೆಯಲ್ಲಿ ಊಟ ಮಾಡಿದರು. ಆದ ಕಾರಣ ಅಗ್ನಿ ಪವಾಡ ನಡೆಯಿತು” ಎಂದು ಡಾ|| ಹಳಕಟ್ಟಿಯವರು ಹೇಳುತ್ತಾರೆ.[19] ಈ ಗೋಡಗರಿ ಮಲ್ಲಯ್ಯ ಯಾರೋ ತಿಳಿಯದು. ಭೈರವೇಶ್ವರ ಕಥಾಮಣಿಸೂತ್ರರತ್ನಾಕರದಲ್ಲಿ ಅಗ್ನಿಪವಾಡಕ್ಕೆ ಕಾರಣ ಬೇರೆ ಹೇಳಿದೆ.[20] ಇಲ್ಲಿಯೂ ಕಕ್ಕಯ್ಯನ ವಿಷಯವಿಲ್ಲ. ಬಸವೇಶ್ವರ ಪುರಾಣ ಕಥಾಸಾಗರದಲ್ಲಿ ಕಲ್ಯಾಣದಲ್ಲಿ ಒಬ್ಬ ಮುಚ್ಚಿಗನ ಮನೆಯಲ್ಲಿ ಶ್ರೀಪತಿಪಂಡಿತರು ಉಂಡುದುದಕ್ಕೆ ಅಗ್ನಿಪವಾಡ ನಡೆಯಿತೆಂದು ಹೇಳಲಾಗಿದೆ.[21] ಇಲ್ಲಿಯೂ ಕಕ್ಕಯ್ಯನ ವಿಷಯವಿಲ್ಲ.

ಶ್ರೀಪತಿಪಂಡಿತರ ಅಗ್ನಿ ಪವಾಡ ಕ್ರಿ.ಶ. ೧೦೭೬ ರಿಂದ ೧೧೨೭ರ ವರೆಗೆ ಆಳಿದ ಚಾಲುಕ್ಯ ಆರನೆಯ ವಿಕ್ರಮಾದಿತ್ಯನ ದಂಡನಾಯಕನಾದ ಅನಂತ ಪಾಲನ ಕಾಲದಲ್ಲಿ ನಡೆಯಿತೆಂದು ಹಳಕಟ್ಟಿಯವರು ಹೇಳುತ್ತಾರೆ.[22]

ಹೆಚ್. ದೇವೀರಪ್ಪನವರು ಇದೇ ಕಾಲವನ್ನು ಸೂಚಿಸಿ “ಕ್ರಿ.ಶ. ೧೧೨೦ರ ಸುಮಾರಿನಲ್ಲಿಯೂ ಡೋಹರ ಕಕ್ಕಯ್ಯ ಇದ್ದನೆಂದು ಊಹಿಸಬೇಕಾಗುತ್ತದೆ” ಎನ್ನುತ್ತಾರೆ.[23] ದಂಡನಾಯಕನಾದ ಅನಂತಪಾಲ ಬೆಜವಾಡವನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದು ಕ್ರಿ.ಶ. ೧೦೯೫ ರಿಂದ ೧೧೧೮ರವರೆಗೆ ಆಳಿದನೆಂದು ತಿಳಿಯುತ್ತದೆ.[24] ಕ್ರಿ.ಶ. ೧೧೧೬ ರಲ್ಲಿ ಅನಂತಪಾಲನೆಂಬ ದಂಡನಾಯಕ ಗುಂಟೂರ ಸುತ್ತಮುತ್ತಲ ಪ್ರದೇಶವನ್ನು ಆಳುತ್ತಿದ್ದನೆಂದು ಪಿ.ಬಿ. ದೇಸಾಯಿಯವರ ಹೇಳಿಕದೆ.[25]() ಇವನೇ ಬೆಜವಾಡವನ್ನು ರಾಜಧಾನಿಯಾಗಿ ಮಾಡಿಕೊಂಡ ಅನಂತ ಪಾಲನೆಂಬುದು ಸ್ಪಷ್ಟ.

ಜೇಡರ ದಾಸಿಮಯ್ಯನ ವಚನದಲ್ಲಿ ಉಕ್ತನಾದ – ಅಗ್ನಿಪವಾಡಕ್ಕೆ ಕಾರಣನಾದ – ಡೋಹರ ಕಕ್ಕಯ್ಯ ಬಸವಣ್ಣನವರ ಸಮಕಾಲೀನನಲ್ಲ. ಏಕೆಂದರೆ ಆಗ ಜೇಡರ ದಾಸಿಮಯ್ಯನಿರಲಿಲ್ಲ. ಆತ ಅಗ್ನಿ ಪವಾಡಕ್ಕೆ ಕಾರಣನಾದ ಕಕ್ಕಯ್ಯ, ಆದರೆ ಈ ಕಕ್ಕಯ್ಯನೂ ಬಸವ ಸಮಕಾಲೀನ ಕಕ್ಕಯ್ಯನೂ ಒಂದೇ ಕಕ್ಕಯ್ಯ ಬಹು ದೀರ್ಘಕಾಲ ಬದುಕಿದನೆಂದು ತೋರುತ್ತದೆ. ಚನ್ನಯ್ಯನನ್ನು ಕಕ್ಕಯ್ಯನನ್ನು ಒಂದೇ ವಚನದಲ್ಲಿ ಜೇಡರದಾಸಯ್ಯ ನೆನೆದಿರುವುದರಿಂದ ಅವರಿಬ್ಬರೂ ಅವನಿಗಿಂತ ಹಿಂದಿನವರು, ಹಿರಿಯವರು ಎಂದು ನಂಬಲಿಕ್ಕೆ ಆಸ್ಪದ ಉಂಟಾಗುತ್ತದೆ.

ಬೆಜವಾಡದ ಮಲ್ಲೇಶ್ವರ ದೇವಾಲಯದಲ್ಲಿ ಅಗ್ನಿಪವಾಡ ಹೇಳುವ ಶಾಸನವಿದೆ. ಆದರೆ ವರ್ಷವನ್ನು ಸೂಚಿಸುವ ಭಾಗ ಸವೆದು ಹೋಗಿದೆಯಾದುದರಿಂದ ಅದು ಯಾವ ಕಾಲದ್ದೆಂದು ನಿಶ್ಚಿತವಾಗಿ ಗೊತ್ತಾಗುವುದಿಲ್ಲ. ಡಾ|| ಎಂ.ಎಂ. ಕಲಬುರ್ಗಿಯವರ ಶಾಸನಗಳಲ್ಲಿ ಶಿವಶರಣರ ಗ್ರಂಥದಲ್ಲಿಯೂ ಈ ಶಾಸನದ ಕಾಲವನ್ನು ತೋರಿಸಿಲ್ಲ.25() ಶ್ರೀಪತಿಪಂಡಿತರು ಅಗ್ನಿಪವಾಡವನ್ನು ತೋರಿಸಿದುದು ಪಲ್ಲಿಕೇತನ ಶಾಸನಗಳಿಂದ ತಿಳಿದು ಬರುತ್ತದೆಂದು ಎಚ್.ದೇವೀರಪ್ಪನವರು ಹೇಳುತ್ತಾರೆ. ಆದರೆ ಅವರು ಆ ಶಾಸನದ ಕಾಲವನ್ನು ಹೇಳಿಲ್ಲ.[26]

ಆಂಧ್ರದಲ್ಲಿ ವೀರಶೈವದ ಹೊಸ ಹುಟ್ಟನ್ನು ಶರಣ ಪರಂಪರೆಯನ್ನು ನೆಲೆಗೊಳಿಸಿದವರಲ್ಲಿ ಮೊದಲಿಗರು ಶ್ರೀಪತಿಪಂಡಿತರು. ಆಂಧ್ರದ ಅನೇಕ ಕಾವ್ಯಗಳಲ್ಲಿ ಅವರ ಚರಿತ್ರೆಯಿದೆ.

ಶ್ರೀಪತಿಪಂಡಿತರು ಕರ್ನಾಟಕ್ಕೆ ಬಂದಂತೆ ಕಾಣುವುದಿಲ್ಲ. ಆದರೆ ಡೋಹರ ಕಕ್ಕಯ್ಯ ಕಲ್ಯಾಣಕ್ಕೆ ಬಂದು ಶರಣರ ಆಂದೋಲನದಲ್ಲಿ ಭಾಗಿಯಾಗುತ್ತಾನೆ. ಕಾತರವಳ್ಳಿಯ ಕದನದಲ್ಲಿಯೂ ಆತ ಭಾಗಿಯಾಗಿದ್ದಂತೆ ತಿಳಿದುಬರುತ್ತದೆ. ಕ್ರಿ.ಶ. ೧೦೭೦ ರಿಂದ ೧೧೬೨ರ ತರುವಾಯವೂ ಆತ ಬದುಕಿದ್ದನೆಂದು ಹೇಳಬಹುದು.

ಬೆಜವಾಡವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಕ್ರಿ.ಶ. ೧೦೯೫ ರಿಂದ ೧೧೧೮ರವರೆಗೆ ಆಳಿದ ಅನಂತಪಾಲನ ಕಾಲದಲ್ಲಿಯೇ ಅಗ್ನಿಪವಾಡ ನಡೆದುದು ಎಂದು ನಂಬಲಡ್ಡಿಯಿಲ್ಲ. ಅದು ಕ್ರಿ.ಶ. ೧೧೦೦ ರಿಂದ ೧೧೧೦ ರ ಅವಧಿಯಲ್ಲಿ ನಡೆದಿರುವ ಸಾಧ್ಯತೆಯಿದೆ. ಪವಾಡ ನಡೆಯುವ ಕಾಲಕ್ಕಾಗಲೇ ಕಕ್ಕಯ್ಯ ಪ್ರೌಢನಾಗಿ ಪ್ರಸಿದ್ಧನಾಗಿರಬೇಕು. ಸುಮಾರು ಆಗ ಆತನಿಗೆ ೩೦ ರಿಂದ ೩೫ ವರ್ಷಗಳಾದರೂ ಆಗಿರಬೇಕು. ಆದುದರಿಂದ ೧೦೭೦ ರಷ್ಟು ಹಿಂದಕ್ಕೆ ಆತನ ಜನನ ಹೋಗುತ್ತದೆ. ಕ್ರಿ.ಶ. ೧೧೬೨ರ ತರುವಾಯವೂ ಆತ ಬದುಕಿದ್ದುದು ಶರಣರ ಆಂದೋಲನದಿಂದ ಖಚಿತವಾಗಿ ತಿಳಿದುಬರುತ್ತದೆ. ಶ್ರೀಪತಿಪಂಡಿತರು ಕಕ್ಕಯ್ಯನಿಗಿಂತ ತುಸು ದೊಡ್ಡವರಾಗಿರಬೇಕು. ಆದರೆ ಅವರು ಎಲ್ಲಿಯವರೆಗೆ ಬದುಕಿದರೆಂಬುದು ತಿಳಿಯಲು ಸಾಧನಗಳಿಲ್ಲ. ೧೧೨೦ ರವರೆಗೆ ಬದುಕಿರಲು ಸಾಧ್ಯವಿದೆ. ಪಲ್ಲಿಕೇತನ ಶಾಸನ ಮತ್ತು ಕರ್ನೂಲ್‌ಜಿಲ್ಲೆಯ ಪಾಸಿಮಲ್ ಊರಿನ ಮಾಣಿಕೇಶ್ವರ ದೇವಾಲಯದಲ್ಲಿರುವ ಶಾಸನ ಮತ್ತು ಆಂಧ್ರ ಕಾವ್ಯಗಳ ಶ್ರೀಪಂಡಿತರ ಚರಿತ್ರೆ ದೊರಕುವ ಕಾವ್ಯಗಳ – ಅಧ್ಯಯನ ನಡೆಸಿದರೆ ಶ್ರೀಪತಿಪಂಡಿತರ ಸಮಗ್ರ ಜೀವನ ಅರಿತುಕೊಳ್ಳಲು ಅನುಕೂಲವಾಗಬಹುದು.

[1] ಷೋಡಶರು, ತೇರಸರು, ದಶಗಣರ ಹೆಸರುಗಳು ಪಾಲ್ಕುರಿಕೆ ಸೋಮನಾಥ ವಿರಚಿತ ಗಣಸಹ್ರದಲ್ಲಿ ಉಲ್ಲೇಖಗೊಂಡಿದೆ. ಪ್ರಮಥಗಣ ೪೬೫, ರುದ್ರಗಣ ೧೭೧, ಅಮರಗಣರು ೨೩೪, ದಶಗಣರು ೧೦, ತೇರಸರು ೧೩, ಷೋಡಶರು ೧೬, ತ್ರಿಷಷ್ಠಿ ಪುರಾತನರು ೬೩, ಯೋಗಾಚಾರ್ಯರು ೨೮- ಎಂದು ಅದರಲ್ಲಿ ವಿಭಾಗ ಮಾಡಲಾಗಿದೆ. ಯಾವತತ್ವದ ಆಧಾರದಮೇಲೆ ಈ ವಿಭಾಗ ಮಾಡಿರುವರೆಂಬುದು ತಿಳಿಯದು.
ಷೋಡಶರು ತೇರಸರು ಮತ್ತು ದಶಗಣದವರಲ್ಲಿ ಕೆಲವರು ಬಸವ ಸಮಕಾಲೀನರಿದ್ದಾರೆ; ಕೆಲವರು ಬಸವೋತ್ತರ ಯುಗದವರಿದ್ದಾರೆ. ಬಸವಪೂರ್ವ ಯುಗದವರಲ್ಲಿ ಕೆಲವರು ಶೈವರಿದ್ದಾರೆ. ಷೋಡಶರಲ್ಲಿರುವ ಕೇತಲದೇವಿ ಕುಂಬಾರ ಗುಂಡಯ್ಯನ ಹೆಂಡತಿಯಾಗಿರಬಹುದೇ? ತೇರಸರಲ್ಲಿ ಬಸವಣ್ಣನವರ ಹೆಸರಿದೆ. ಹರಿಹರ ಕೃತ ಮಾರುಡಿಗೆ ನಾಚಯ್ಯನ ರಗಳೆಯಲ್ಲಿ ತೇರಸರು ಬರುತ್ತಾರೆ. ಅವರು ಯಾರು? ಪಾಲ್ಕುರಿಕೆ ಸೋಮನಾಥ ಹೇಳುವ ತೇರಸರು ಯಾರು? ನಾಚಯ್ಯನ ರಗಳೆಯಲ್ಲಿ ಕೇವಲ ತೇರಸರು ಎಂದಿದೆ; ಪಾಲ್ಕುರಿಕೆ ಸೋಮನಾಥ ಹೇಳಿದಂತೆ ಇಲ್ಲಿ ಆ ಹದಿಮೂರು ಜನರ ಹೆಸರುಗಳನ್ನು ಬಿಡಿ ಬಿಡಿಯಾಗಿ ಹೇಳಿಲ್ಲ. ಪಾಲ್ಕುರಿಕೆ ಸೋಮನಾಥ ಹೆಸರಿಸುವ ದಶಗಣದ ಸಿಂಗಿದೇವ, ಮಾರುಡಿಗೆಯ ನಾಚಯ್ಯನ ಕಾಲದಲ್ಲಿದ್ದನೆಂದು ತೋರುತ್ತದೆ. ಮಾರುಡಿಗೆಯ ನಾಚಯ್ಯ ಸಿಂಗಿದೇವನಿಗೆ ಉಪದೇಶ ಮಾಡಿದ್ದು ಇಲ್ಲಿ ವರ್ಣಿತವಾಗಿದೆ.
ಷೋಡಶರು, ತೇರಸರು, ದಶಗಣರು ಬೇರೆ ಬೇರೆ ಕಾಲದಲ್ಲಿ ಜೀವಿಸದ್ದವರು. ಆದರೆ ಇವರೆಲ್ಲ ಪಾಲ್ಕುರಿಕೆ ಸೋಮನಾಥನಿಗಿಂತ ಆಚೆಯವರು.
ಷೋಡಶರು, ತೇರಸರು ಮತ್ತು ದಶಗಣದವರಲ್ಲಿ ಕೆಲವರನ್ನು ಡಾ|| ಎಂ.ಎಂ. ಕಲಬುರ್ಗಿಯವರು ಶಾಶನಗಳಲ್ಲಿ ಗುರುತಿಸಿದ್ದಾರೆ- (ಶಾಸನಗಳಲ್ಲಿ ಶಿವಶರಣರು ಪುಟ-೩೦-೩೩)

[2] ಡಾ|| ಎಂ.ಎಂ. ಕಲಬುರ್ಗಿ: ಶಾಸನಗಳಲ್ಲಿ ಶಿವಶರಣರು, ಪುಟ ೩೫. ದ್ವಿತೀಯ ಅವೃತ್ತಿ ೧೯೭೮, ಪ್ರಕಾಶಕರು ಜಗದ್ಗುರು ತೋಂಟದಾರ‍್ಯಮಠ, ಗದಗ, ಇದೇ ಅಭಿಪ್ರಾಯಕ್ಕೆ ಇದೇ ಲೇಖಕರ ಕೊಂಡಗುಳಿ ಕೇಶಿರಾಜನ ಕೃತಿಗಳು ಪ್ರಸ್ತಾವನೆ ಪುಟ. vii ಅಡಿ ಟಿಪ್ಪಣಿ ನೋಡಿರಿ. ಪ್ರಕಾಶಕರು ಮೂರು ಸಾವಿರ ಮಠ, ಹುಬ್ಬಳ್ಳಿ (೧೯೭೮).

[3] ಹೆಚ್.ದೇವಿರಪ್ಪ ಮತ್ತು ಆರ್. ರಾಚಪ್ಪ : ಜೇಡರದಾಸಿಮಯ್ಯನ ವಚನಗಳು,
ಪ್ರಸ್ತಾವನೆ ಪುಟ xxxix -xxx – ಪ್ರಕಾಶಕರು ತರಳುಬಾಳು ಪ್ರಕಾಶನ ಸಿರಿಗೆರೆ.

[4] ಅದೇ ಪುಟ (ಪ್ರಸ್ತಾವನೆ) xi

[5] ಡಾ|| ಆರ್.ಸಿ. ಹಿರೇಮಠ : ಬಸವಪುರಾಣ, ಸಂಧಿ ೨೨,
ಧಾರವಾಡ ಮುರುಘಾಮಠ ಪ್ರಕಟಣೆ, ೧೯೭೧.

[6] ಅದೇ ಸಂಧಿ ೫೦

[7] Dr. P.B. Desai : A history of Karnataka Page 188 Published by K V Dharawad-1970

[8] ಅದೇ ಪುಟ ೧೮೮

[9] ಡಾ|| ಎಂ. ಎಂ. ಕಲಬುರ್ಗಿ : ಶಾಸನಗಳಲ್ಲಿ ಶಿವಶರಣರು, ಪುಟ ೩೫

[10] ಡಾ|| ಆರ್.ಸಿ. ಹಿರೇಮಠ (ಸಂ): ಬಸವಪುರಾಣ, ಸಂಧಿ ೫೦,
ಪದ್ಯಗಳು ೫, ೬, ೭, ೮, ಮತ್ತು ೯

[11] ಡಾ|| ಎಂ.ಎಸ್. ಸುಂಕಾಪುರ (ಸಂ) : ಸಕಲಪುರಾತನದ (ವಚನಗಳು ಭಾಗ೨, ಪುಟ ೩೪೦ ವಚನ ೯೭೮ (ಕ.ವಿ.ವಿ. ಧಾರವಾಡ ಪ್ರಕಟಣೆ)

[12] ಅದೇ ಪುಟ ೩೨೫, ವಚನ ೯೧೭.

[13] ಅದೇ ಪುಟ ೩೨೫, ವಚನ ೯೧೬.

[14] ಡಾ. ಫ.ಗು. ಹಳಕಟ್ಟಿ : ಶಿವಶರಣರ ಚರಿತ್ರೆಗಳು ಭಾಗ , ಪುಟ ೧೪೦, ಪ್ರಥಮ ಮುದ್ರಣ.

[15] Dr. P.B. Desai : A history of Karnataka Page 171 first edition – 1970.

[16] ಡಾ. ಫ.ಗು. ಹಳಕಟ್ಟಿ : ೭೭೦ ಅಮರಗಣಾಧೀಶ್ವರರ ಚರಿತ್ರೆಗಳು, ಪುಟ ೧೪೦, ಮೊ.ಮು. ೧೯೫೪.

[17] ಪಂಡಿತ ಎಸ್. ಬಸಪ್ಪ (ಸಂ): ಲಕ್ಕಣ್ಣ ದಂಡೇಶನ ಶಿವತತ್ವ ಚಿಂತಾಮಣಿ, ಸಂಧಿ ೩೭. ಪದ್ಯ ೧೨೭-ಮೊ.ಮು.೧೯೬೦.

[18] ಅದೇ ಸಂಧಿ ೩೭, ಪದ್ಯ ೧೨೮.

[19] ಡಾ. ಫ.ಗು. ಹಳಕಟ್ಟಿ : ಶಿವಶರಣರ ಚರಿತ್ರೆಗಳು ಭಾಗ , ಪುಟ ೩೩೬.

[20] ಡಾ|| ಆರ್.ಸಿ. ಹಿರೇಮಠ ಮತ್ತು ಡಾ|| ಎಂ.ಎಸ್. ಸುಂಕಾಪುರ (ಸಂ): ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರ ರತ್ನಾಕರ ಭಾಗ, ಪುಟ ೪೩೨-೩೩.

[21] ಎಸ್.ಉಮಾಪತಿ (ಸಂ): ಬಸವೇಶ್ವರ ಪುರಾಣ ಕಥಾಸಾಗರ, ಪುಟ ೫೯.

[22] ಡಾ. ಫ.ಗು. ಹಳಕಟ್ಟಿ : ಶಿವಶರಣರ ಚರಿತ್ರೆಗಳು ಭಾಗ , ಪುಟ ೩೮೮.

[23] ಹೆಚ್.ದೇವಿರಪ್ಪ ಮತ್ತು ಆರ್.ರಾಚಪ್ಪ (ಸಂ) : ಜೇಡರದಾಸಿಮಯ್ಯನ ವಚನಗಳು, ಪ್ರಸ್ತಾವನೆ ಪುಟ xxv

[24] ಡಾ. ಫ.ಗು. ಹಳಕಟ್ಟಿ : ಶಿವಶರಣರ ಚರಿತ್ರೆಗಳು ಭಾಗ ೨, ಪುಟ ೩೩೮.

[25] (ಅ) Dr. P.B. Desai : A history of Karnataka Page 177
(ಬ) ಡಾ|| ಎಂ. ಎಂ. ಕಲಬುರ್ಗಿ : ಶಾಸನಗಳಲ್ಲಿ ಶಿವಶರಣರು, ಪುಟ ೪೭, ಎರಡನೆಯ ಮುದ್ರಣ.

[26] ಹೆಚ್.ದೇವಿರಪ್ಪ ಮತ್ತು ಆರ್. ರಾಚಪ್ಪ: ಜೇಡರದಾಸಿಮಯ್ಯನ ವಚನಗಳು, ಪ್ರಸ್ತಾವನೆ ಪುಟ : xv.