ಕೆಂಭಾವಿ ಭೋಗಣ್ಣ, ಚೆಂದಿಮರಸ, ನಿಜಗುಣ, ಕ್ರಿಯಾಶಕ್ತಿ ದೇವರು ಕಂಬಾರ ಗುಂಡಯ್ಯ, ಕೇತಲದೇವಿ

ಜೇಡರ ದಾಸಿಮಯ್ಯನ ವಚನದಲ್ಲಿ ಉಕ್ತನಾದ ಕೆಂಭಾವಿ ಬೋಗಣ್ಣ ಕಾಲನಿರ್ಣಯಕ್ಕೆ ಇದುವರೆಗೆ ಯಾವ ಪ್ರಬಲವಾದ ಸಾಧನ ದೊರಕಿಲ್ಲ. ಕೆಂಭಾವಿಯಲ್ಲಿ ಆಗ ಆಳುತ್ತಿದ್ದ ಮತ್ತು ಭೋಗಣ್ಣನನ್ನು ಊರಿನಿಂದ ಹೊರಗೆ ಹಾಕಿದ ಚೆಂದಿಮರಸನ ಬಗ್ಗೆಯು ಕಾಲನಿರ್ಣಯಕ್ಕೆ ಏನೂ ದೊರಕುವುದಿಲ್ಲ. ಸದ್ಯಕ್ಕೆ ಬೋಗಣ್ಣನನ್ನು ಜೇಡರ ದಾಸಿಮಯ್ಯನ ಸಮಕಾಲೀನನೆಂದೇ ಇಟ್ಟುಕೊಳ್ಳಬಹುದು. ಬೋಗಣ್ಣನ ವಚನಗಳ ಬಗ್ಗೆಯೂ ಒಂದು ಖಚಿತ ನಿರ್ಣಯಕ್ಕೆ ಬರಲು ಸಾಧ್ಯವಿಲ್ಲದ ಗೊಂದಲವಿದೆ. ಭೋಗಣ್ಣನವೆಂದು ಹೇಳುವ ಇಪ್ಪತ್ತೆರಡು ವಚನಗಳು ದೊರಕಿವೆ.[1] ಈ ವಚನಗಳು ಕೆಂಭಾವಿ ಭೋಗಣ್ಣನವೇ ಎಂದು ಹೇಳಲು ಬರುವಂತಿಲ್ಲ. ಪ್ರಸಾದಿ ಭೋಗಣ್ಣ, ಚಾಳುಕ್ಯ ಬೋಗಣ್ಣ ಹೀಗೆ ಇನ್ನೂ ಇಬ್ಬರೂ ಭೋಗಣ್ಣರಿದ್ದಾರೆ. ಹಳಕಟ್ಟಿಯವರು ಅಂಕಿತಗಳನ್ನು ಹೇಳುವಾಗ ‘ಚೆನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗ’ – ಇದು ಪ್ರಸಾದಿ ಭೋಗಣ್ಣನ ಅಂಕಿತವೆಂದು ಹೇಳಿದ್ದಾರೆ.[2] ‘ನಿಜಗುರುಭೋಗಸಂಗ’ ಎಂಬುದು ಭೋಗಣ್ಣನದೆಂದು ಹೇಳಿದ್ದಾರೆ.[3] ಡಾ|| ಸುಂಕಾಪುರರು ಸಂಪಾದಿಸಿದ ಸಕಲ ಪುರಾತನರ ವಚನಗಳು ಭಾಗ – ೩ ರಲ್ಲಿರುವ ಭೋಗಣ್ಣನ ವಚನಗಳಲ್ಲಿ ಅಂಕಿತ ಒಂದೇ ತೆರನಾಗಿಲ್ಲ. “ಕೆಲವು ಕಡೆ ನಿಜಗುರು ಭೋಗೇಶ್ವರ” ಎಂದಿದೆ. ಇನ್ನೂ ಕೆಲವ ವಚನಗಳಲ್ಲಿ ‘ನಿಜಗುರುಭೋಗಸಂಗ’ ಎಂದಿದೆ. ಈ ವ್ಯತ್ಯಾಸ ಗೊಂದಲಕ್ಕೆ ಕಾರಣವಾಗುತ್ತದೆ. ಅಲ್ಲದೆ ಹಳಕಟ್ಟಿಯವರ ಗ್ರಂಥದಲ್ಲಿ (ಅಂಕಿತ ಹೇಳುವಾಗ) ಮತ್ತು ಸಕಲ ಪುರಾತನರ ವಚನಗಳಲ್ಲಿ ಕೇವಲ ‘ಭೋಗಣ್ಣ’ ಎಂದಿದೆ. ಕೆಂಭಾವಿ ಭೋಗಣ್ಣ ಎಂದಿಲ್ಲ, ಅಲ್ಲದೆ ಹಳಕಟ್ಟಿಯವರು ಕೆಂಭಾವಿ ಭೋಗಣ್ಣನ ಚರಿತ್ರೆಯಲ್ಲಿ ಆತನು ವಚನಗಳನ್ನು ಬರೆದಿದ್ದಾನೆಂದು ಹೇಳಿಲ್ಲ.[4] ಸದ್ಯಕ್ಕೆ ಆ ಇಪ್ಪತ್ತೆರಡು ವಚನಗಳು ಆತನವೇ ಎಂದು ಇಟ್ಟುಕೊಂಡರೂ ಇನ್ನೊಂದು ತೊಡಕುಂಟಾಗುತ್ತದೆ. ಆ ವಚನಗಳಲ್ಲಿ ಅಲ್ಲಮ, ಅಜಗಣ್ಣ, ಬಸವಣ್ಣ, ಚೆನ್ನಬಸವಣ್ಣ ಇವರ ಹೆಸರುಗಳು ಬರುತ್ತವೆ. ಎಂದರೆ ಭೋಗಣ್ಣ, ಬಸವಣ್ಣನವರಿಗೆ ಹಿರಿಯ ಸಮಕಾಲೀನನಾಗಿ ಬದುಕಿ ವಚನ ರಚಿಸಿರಬೇಕೆಂದು ಊಹಿಸಬೇಕಾಗುತ್ತದೆ. ವಚನಗಳು ಆತನವೇ ಎಂದು ಖಚಿತವಾಗುವವರೆಗೆ ಆತನು ಬಸವ ಪೂರ್ವದವನೆಂದು ಭಾವಿಸಬೇಕಾಗುತ್ತದೆ. “ಬಸವೇಶ್ವರನು ತನ್ನ ವಚನಗಳಲ್ಲಿ ಕೆಂಭಾವಿ ಭೋಗಣ್ಣನನ್ನು ಬಹಳವಾಗಿ ಹೊಗಳಿದ್ದಾನೆ. ಮತ್ತು ಗಣಸಹಸ್ರದಲ್ಲಿಯೂ ಆತನ ಹೆಸರು ಬಂದಿರುತ್ತದೆ. ಆದ್ದರಿಂದ ಇವನು ಪುರಾತನ ಕಾಲದವನಾಗಿದ್ದಾನೆ.[5]

ಚಂದಿಮರಸ ಮತ್ತು ನಿಜಗುಣರ ಕಾಲವು ತೊಡಕಿನದ್ದಾಗಿದೆ. ಆದರೆ ಹಳಕಟ್ಟಿ ಮುಂತಾದವರು ಬಸವ ಪೂರ್ವದವರೆಂದೇ ಹೇಳುತ್ತಾರೆ. ಇವರ ವಚನಗಳಲ್ಲಿ ಬಸವಣ್ಣನವರ ಅಥವಾ ಅವರ ಸಮಕಾಲೀನರ ಹೆಸರುಗಳಿಲ್ಲ. ಅಲ್ಲದೆ ಇವರ ವಚನಗಳು ಭಾಷಾ ಶೈಲಿ ಮುಂತಾದವುಗಳ ದೃಷ್ಟಿಯಿಂದ ಮೊದಲ ಹಂತದ ವಚನಗಳಂತೆ ಇವೆ. ಹರಿಹರನ ರಗಳೆಯ ಪ್ರಕಾರ ಚಂದಿಮರಸ ಕೆಂಭಾವಿಯ ಅರಸು. ವಿಪ್ರರ ಮಾತು ಕೇಳಿ ಭೋಗಣ್ಣನನ್ನು ಅರಸ ಊರಿಂದ ಹೊರಹಾಕಿ, ಆ ಬಳಿಕ ಪಶ್ಚಾತ್ತಾಪವಾಗಿ ಆತನನ್ನು ಮರಳಿ ಕರೆತಂದ. “ಜ್ಞಾನೋದಯವಾಗಿ ವೀರಶೈವಧರ್ಮ ಸ್ವೀಕರಿಸಿದ, ರಾಜ್ಯ ತೊರೆದು ಚಿಮ್ಮಲಿಗೆಗೆ ಹೋಗಿ ನಿಜಗುಣನಿಂದ ದೀಕ್ಷೆ ಪಡೆದು ಅಲ್ಲಿಯೇ ಉಳಿದ” ಎಂದು ಹಳಕಟ್ಟಿಯವರು ಬರೆದಿದ್ದಾರೆ.[6] ಆದರೆ ಹರಿಹರನ ರಗಳೆಯಲ್ಲಿ ಚಂದಿಮರಸ ದೀಕ್ಷೆ ಹೊಂದಿ ವೀರಶೈವನಾಗುವುದಿಲ್ಲ. ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರದಲ್ಲಿ “……ಚಂದಿಮರಸರು ವಿಪ್ರಾಚಾರವ ಬಿಟ್ಟು ಶಿವಭಕ್ತಿಯಾಚಾರವನಾಚರಿಸಿ, ಗುರುಕೃಪೆಯಿಂದ ನಿಜವನರಿದು ಚಿಮ್ಮಲಿಗೆಯ ಚೆನ್ನರಾಮನೆಂಬ ತಮ್ಮಿಷ್ಟ ಲಿಂಗದಲ್ಲಿ ಸ್ವಯಪರವೆಂಬುದನ್ನರಿಯದೆ ನಿತ್ಯಾನಂದ ಸುಖದಲ್ಲಿದ್ದರು…..” ಎಂದು ಹೇಳಿದೆ.[7] ಹರಿಹರನ ರಗಳೆಯಂತೆ ಕೆಂಭಾವಿಯ ಚೆಂದಿಮರಸ ವಚನಕಾರ ಚೆಂದಿಮರಸನಲ್ಲ. ಆದರೆ ಇದಕ್ಕೆ ವಿರುದ್ಧವಾಗಿ ಶಾಂತಲಿಂಗದೇಶಕ ಕೆಂಭಾವಿಯ ಚಂದಿಮರಸನೇ ಸಿಮ್ಮಲಿಗೆಯ ಚಂದಿಮರಸನೆಂದು ಹೇಳುತ್ತಾನೆ. ಇದರಲ್ಲಿ ಯಾವುದು ಸತ್ಯ? ನಿರ್ಧರಿಸುವುದು ಕಷ್ಟ. “ವೀರಶೈವ ಪುರಾಣಗಳಲ್ಲಿ ಆಣತಿ ಚಂದಯ್ಯ, ನುಲಿಯ ಚಂದಯ್ಯ, ಸಿಗುರ ಚಂದಯ್ಯ, ಸಿಮ್ಮಲಿಗೆಯ ಚಂದಯ್ಯ – ಎಂದು ಅನೇಕ ಚಂದಯ್ಯಗಳ ಪ್ರಸ್ತಾಪವಿದೆ. ಇವರಲ್ಲಿ ಸಿಮ್ಮಲಿಗೆಯ ಚಂದಯ್ಯನು ಸಿಮ್ಮಲಿಗೆಯ ಚಂದಯ್ಯನೇ ಹೊರತು ಡಿ.ಎಲ್. ನರಸಿಂಹಾಚಾರ್ಯರು ಊಹಾಧಾರವಾಗಿ ಅಭಿಪ್ರಾಯ ಪಟ್ಟಿರುವಂತೆ ಅವನೆಂದಿಗೂ ಕೆಂಭಾವಿಯ ಚೆಂದಿಮರಸನಾಗಲಾರ. ಕೆಂಭಾವಿಯ ಚೆಂದಿಮರಸನು ಶಿವಶರಣನಲ್ಲ. ಶಿವಶರಣ ಹಂತಕ” ಎಂದು ಡಾ|| ಎಲ್. ಬಸವರಾಜು ಅವರು ಅಭಿಪ್ರಾಯಪಡುತ್ತಾರೆ.[8] ನಮ್ಮದು ಇದೇ ಅಭಿಪ್ರಾಯವಾಗಿದೆ.

ನಿಜಗುಣನ ಊರು (ಈಗ ಚಿಮ್ಮಲಗಿ ಎಂದು ರೂಢವಾಗಿರುವ) ಸಿಮ್ಮಲಿಗೆ. ಇದು ವಿಜಾಪುರ ಜಿಲ್ಲೆಯಲ್ಲಿ ಕೃಷ್ಣಾ ನದಿಯ ದಂಡೆಯ ಮೇಲಿದೆ. ಈತ ದೊಡ್ಡ ಯೋಗಿ; ವಚನಕಾರ. ಸಿಮ್ಮಲಿಗೆಯಲ್ಲಿ ನಿಜಗುಣೇಶ್ವರಲಿಂಗವೆಂಬ ಈತನ ದೇವಸ್ಥಾನವಿದೆ; ಅಲ್ಲಿ ಈತನ ಶಿಷ್ಯನಾದ ಚಂದಿಮರಸನ ಗುಡಿಯೂ ಇದೆ.

ಕವಿ ಚರಿತ್ರೆಕಾರರು ನಿಜಗುಣನ ಕಾಲವನ್ನು ಕ್ರಿ.ಶ. ೧೧೬೦ ಎಂದೂ ಚಂದಿಮರಸನ ಕಾಲವನ್ನು ಕ್ರಿ.ಶ. ಸುಮಾರು ೧೦೨೦ ಅವಧಿಯಲ್ಲಿ ಚಂದಿಮರಸ ಮತ್ತು ನಿಜಗುಣರು ಬದುಕಿದ್ದರೆಂದು ಹೇಳಬಹುದು.

ಕುಂಬಾರ ಗುಂಡಯ್ಯನನ್ನು ಜೇಡರ ದಾಸಿಮಯ್ಯ ತನ್ನ ವಚನದಲ್ಲಿ ನೆನೆದಿರುವುದರಿಂದ ಈತ ಆತನ ಸಮಕಾಲೀನನೋ ಅಥವಾ ಹಿಂದಿನವನೋ ಆಗುವನು. ಈತನ ಕಾಲ ನಿರ್ಣಯಕ್ಕೆ ಬೇರೆ ಯಾವ ಸಾಧನಗಳೂ ಇಲ್ಲ.

ಈತನ ಹೆಂಡತಿ ಕೇತಲದೇವಿ. ಆಕೆ ವಚನಕಾರ್ತಿ. ಆಕೆಯ ಒಂದೇ ವಚನ ಉಪಲಬ್ಧವಿದೆ. ವ್ರತವನ್ನು ಕುರಿತು ಬರೆದ ಈ ವಚನ ‘ಹದಮಣ್ಣಲ್ಲದೆ ಮಡಕೆಯಾಗಲಾರದು’ ಎಂಬ ಮಾತಿನಿಂದ ಕೇತಲದೇವಿ ತನ್ನ ಕಾಯಕವನ್ನು ಸೂಚಿಸುತ್ತಾಳೆ. ಕುಂಬಾರರೇ ಈ ಮಾತು ಹೇಳಬೇಕು. ಆಕೆಯ ಅಂಕಿತ ಕುಂಭೇಶ್ವರಾ, ಇದು ಆಕೆಯ ಕುಂಬಾರಳೆಂಬುದಕ್ಕೆ ಸಾಕ್ಷಿಯಾಗಿದೆ. ಹರಿಹರನ ರಗಳೆಯಲ್ಲಿ ಈಕೆಯ ಹೆಸರು ಬರುವುದಿಲ್ಲ. ಆದರೆ ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರರತ್ನಾಕರದ ಕರ್ತೃ ಕುಂಬಾರ ಗುಂಡಯ್ಯನ ಹೆಂಡತಿ ಕೇತಲದೇವಿ ಎಂದು ಸ್ಪಷ್ಟವಾಗಿ ಹೇಳಿದ್ದಾನೆ. ಅಲ್ಲದೆ ವಚನಗಳ ಕಟ್ಟುಗಳಲ್ಲಿ ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿಯ ವಚನ ಎಂದಿದೆ. ಕುಂಬಾರ ಗುಂಡಯ್ಯ ಮತ್ತು ಕೇತಲ ದೇವಿ ಬಸವಪೂರ್ವ ಯುಗದವರು. ಇವರು ಉತ್ತರ ಭಾಗದಲ್ಲಿರುವ ‘ಭಲ್ಲುಕೆ’ ಎಂದು ಹರಿಹರ ಹೇಳುತ್ತಾನೆ.[9] ಉತ್ತರ ದೇಶದ ‘ಬಲಿಕೆ’ ಎಂದು ಶಾಂತಲಿಂಗ ದೇಶಿಕ ಹೇಳುತ್ತಾನೆ.[10] ಎರಡೂ ಒಂದೇ. ಭಲ್ಲುಕೆ ಅಥವಾ ಬಲಿಕೆ ಈಗಿನ ಬೀದರ್ ಜಿಲ್ಲೆಯಲ್ಲಿರುವ ತಾಲೂಕ ಸ್ಥಳವಾದ ಭಾಲ್ಕಿ ಇರಬೇಕೆಂದು ಪಂಡಿತರ ಅಭಿಪ್ರಾಯವಾಗಿದೆ.

ಮೆರತಿ ಮಿಂಡದೇವ ಮತ್ತು ಗೊಗ್ಗವ್ವೆ

ಇವರಿಬ್ಬರ ಕಾಲನಿರ್ಣಯ ಕಷ್ಟದ್ದು. ನಂಬಿಯಣ್ಣನ ಸಮಕಾಲೀನನಾದ ಮೆರತಿ ಮಿಂಡದೇವನೇ ಈ ವಚನಕಾರ ಮೆರತಿ ಮಿಂಡದೇನೆಂದು ಡಾ|| ಹಳಕಟ್ಟಿಯವರು ಅಭಿಪ್ರಾಯಪಡುತ್ತಾರೆ.[11] ಇದನ್ನು ನಂಬಿದರೆ ವಚನ ರಚನೆ ಎಂಟನೇ ಶತಮಾನದಲ್ಲಿಯೇ ಪ್ರಾರಂಭವಾಗಿತ್ತೆಂದು ಒಪ್ಪಿಕೊಳ್ಳಬೇಕಾಗುತ್ತದೆ. ಇದಕ್ಕೆ ಆಧಾರಗಳಿಲ್ಲ. ಕವಿ ಚರಿತ್ರೆಕಾರರು ಈತನ ಕಾಲವನ್ನು ಕ್ರಿ.ಶ.೧೧೦೦ ಎಂದು ಹೇಳುತ್ತಾರೆ.[12] ಇದಕ್ಕೆ ಅವರು ಆಧಾರ ಕೊಟ್ಟಿಲ್ಲ.

ಮೆರೆತಿ ಮಿಂಡಯ್ಯನ ವಚನಗಳಲ್ಲಿ ಕಲ್ಯಾಣದ ಯಾವ ಶರಣನ ಹೆಸರು ಬರುವುದಿಲ್ಲ – ಎಂಬುದು ಆತ ಬಸವ ಪೂರ್ವದವನೆನ್ನಲಿಕ್ಕೆ ಪ್ರಬಲವಾದ ಕಾರಣವಾಗುತ್ತದೆ. ಆದರೆ ಆತನ ವಚನಗಳನ್ನು ಅಭ್ಯಸಿಸಿದರೆ ಆತ ಬಸವ ಯುಗದವನೇನೋ ಎಂಬ ಸಂಶಯ ಬರುತ್ತದೆ. ಇಷ್ಟಲಿಂಗ, ಕಾಯಕ ಮುಂತಾದ ವಿಷಯಗಳನ್ನು ಆತ ಸೊಗಸಾಗಿ ಹೇಳುತ್ತಾನೆ. ಇಷ್ಟಲಿಂಗದ ಬಗ್ಗೆಯಂತೂ ಬಹು ಸೊಗಸಾಗಿ, ಮಾರ್ಮಿಕವಾಗಿ ಮಾತನಾಡುತ್ತಾನೆ. ಬಸವಪೂರ್ವ ಯುಗದಲ್ಲಿ ಇಷ್ಟ ಲಿಂಗದ ಬಗೆಗೆ ತೀವ್ರವಾದ ಜಿಜ್ಞಾಸೆ ನಡೆದುದು ಕೇಶಿರಾಜನ ಕಂದಗಳಿಂದ ತಿಳಿದು ಬರುತ್ತದೆ. ಮೆರೆತಿ ಮಿಂಡಯ್ಯನಲ್ಲಿಯೂ ಅಂಥ ಜಿಜ್ಞಾಸೆ ಕಂಡು ಬರುತ್ತದೆ. ಕವಿ ಚರಿತ್ರಕಾರರು ಹೇಳಿದ ಕಾಲವನ್ನು ಒಪ್ಪಿಕೊಳ್ಳಬಹುದು. ಮತ್ತು ಅವನು ಬಸವಣ್ಣನವರ ಹಿರಿಯ ಸಮಕಾಲೀನನೂ ಆಗಿರಬೇಕು ಎಂದು ಹೇಳಬೇಕಿನಿಸುತ್ತದೆ. ಅವನ ವಚನಗಳನ್ನು ದೃಷ್ಟಿಯಲ್ಲಿಟ್ಟುಕೊಂಡು.

“ಗೊಗ್ಗವ್ವ ಕೇರಳ ದೇಶದ ಅವಲೂರಿನವಳು, ಧೂಪದ ಕಾಯಕ ಮಾಡುತ್ತಿದ್ದಳು, ಚೇರಮ ನಂಬಿಯರ ಸಮಕಾಲೀನಳು” ಎಂದು ಶಾಂತಲಿಂಗದೇಶಿಕ ಹೇಳುತ್ತಾನೆ. ಇದನ್ನೇ ಹಳಕಟ್ಟಿಯವರು ತಮ್ಮ ಶಿವಶರಣೆಯರ ಚರಿತ್ರೆಯಲ್ಲಿ ಬರೆದಿದ್ದಾನೆ. ಆದರೆ ವಚನಕಾರ್ತಿ ಗೊಗ್ಗವ್ವೆ ಈಕೆಯಾಗಲಾರಳು. ಕವಿ ಚರಿತ್ರೆಕಾರರು ಈಕೆಯ ಕಾಲವನ್ನು ಕ್ರಿ.ಶ. ೧೧೬೦ ಎಂದು ಹೇಳಿದ್ದಾರೆ. ಉಪಲಬ್ಧವಿರುವ ಈಕೆಯ ಆರು ವಚನಗಳಲ್ಲಿ ಕಲ್ಯಾಣದ ಶರಣರ ಹೆಸರುಗಳಿಲ್ಲ. ಈಕೆ ಧೂಪ ಕಾಯಕ ಮಾಡುತ್ತಿದ್ದಳೆಂದು ಶಾಂತಲಿಂಗ ದೇಶಿಕ ಹೇಳುವುದನ್ನು “ಭಕ್ತರು ಜಂಗಮದಲ್ಲಿ ಕಟ್ಟಿ ಹೊರಲೇಕೆ? ಧೂಪ ಹೊಗೆ ಎತ್ತ ಹೋದಡೂ ಸರಿ – ಇದು ಸತ್ಯವೆಂದೇ ನಾಸ್ತಿನಾಥ[13] ಎಂಬ ವಚನ ಪುಷ್ಟೀಕರಿಸುತ್ತದೆ. ಅಲ್ಲದೆ ಈಕೆಯ ಅಂಕಿತ ‘ನಾಸ್ತಿನಾಥ’ ಎಂಬುದನ್ನು ಶಾಂತಿಲಿಂಗ ದೇಶಿಕ ಖಚಿತಗೊಳಿಸುತ್ತಾನೆ. ಮೆರೆತಿ ಮಿಂಡದೇವನಂತೆ ಗೊಗ್ಗವ್ವೆಯೂ ನಂಬಿಯ ಸಮಕಾಲೀನಳಲ್ಲ. ಬಸವ ಪೂರ್ವ ಯುಗಕ್ಕೆ ಮತ್ತು ಬಸವ ಯುಗಕ್ಕೆ ಸೇತುವೆಯಾಗಿ ನಿಲ್ಲುವವರಲ್ಲಿ ಈಕೆಯೂ ಒಬ್ಬಳಾಗುವಳೆಂದು ಹೇಳಬಹುದು.

ವೈಜಕವ್ವೆ, ಬಾಹೂರ ಬೊಮ್ಮಯ್ಯ, ಮಾರುಡಿಗೆಯ ನಾಚಯ್ಯ, ಕೋವೂರ ಬ್ರಹ್ಮಯ್ಯ, ಸಿಂಗಿದೇವ

ಇವರೆಲ್ಲ ಜೈನರೊಡನೆ ಹೋರಾಡಿದವರು ವೈಜಕವ್ವೆಯನ್ನುಳಿದು ನಾಲ್ಕು ಜನ ಪೆರ್ಮಾಡಿರಾಯ (ಚಾಲುಕ್ಯ ಆರನೆಯ ವಿಕ್ರಮಾದಿತ್ಯ)ನ ಕಾಲದವರು. ವೈಜಕವ್ವೆಯ ಕಾಲ ನಿರ್ಣಯಕ್ಕೆ ಹರಿಹರನ ರಗಳೆ ಮತ್ತು ಭೈರವೇಶ್ವರ ಕಥಾಮಣಿಸೂತ್ರರತ್ನಾರಕದಿಂದ ಏನೂ ಸಹಾಯಕವಾಗುವುದಿಲ್ಲ. ಆದರೆ ಈಕೆ ಬಸವಪೂರ್ವದವಳು. ಡಾ|| ಎಂ.ಎಂ. ಕಲಬುರ್ಗಿಯವರು ತಾಳಿಕೋಟೆಯ ಶಾಸನ (೧೧೮೪)ದಲ್ಲಿ ಬರುವ ಪರಿಯಳಿಗೆಯು ವೈಜಕವ್ವೆಯನ್ನು ಸೂಚಿಸುತ್ತದೆ ಎಂದು ಹೇಳಿ ವೈಜಕವ್ವೆಯನ್ನು ಬಸವಪೂರ್ವ ಯುಗದವಳೆಂದು ಗುರುತಿಸಿದ್ದಾರೆ.[14] “ವೈಜಕವ್ವೆಯ ಹೆಸರು ಗಣಸಹಸ್ರದಲ್ಲಿ ಬಂದಿದೆ. ಆದ್ದರಿಂದ ಅವಳು ಪುರಾತನಳೂ. ಅವಳು ವೀರಶೈವ ಚಳವಳಿಯ ಆರಂಭಕಾಲದಲ್ಲಿದ್ದಂತೆ ತೋರುತ್ತದೆ. ಬಹುಶಃ ಬಸವೇಶ್ವರನಕ್ಕಿಂತಲೂ ಕೆಲಕಾಲ ಹಿಂದಿನವಳಿರಬೇಕು”.[15]

ಬಾಹೂರ ಬೊಮ್ಮಯ್ಯ ಕಲ್ಯಾಣದ ಹತ್ತಿರದ ಬಾಹೂರಿನವನು. ಇವನು ತೋಟ ಮಾಡುವ ಕಾಯಕ ಮಾಡುತ್ತಿದ್ದನೆಂದು ಡಾ|| ಹಳಕಟ್ಟಿಯವರು ಹೇಳುತ್ತಾರೆ.[16] ಆದರೆ ಹರಿಹರನ ರಗಳೆಯಲ್ಲಿ ಈತನ ಕಾಯಕ ಉಲ್ಲೇಖಗೊಂಡಿಲ್ಲ. ಪೆರ್ಮಾಡಿರಾಯನ ಸೊಕ್ಕಿನ ಆನೆಯನ್ನು ನಿಶ್ಚಲವಾಗಿ ನಿಲ್ಲಿಸಿದ್ದು; ಕಲ್ಲನಂದಿಗೆ ಕಬ್ಬು ತಿನ್ನಿಸಿದ್ದು, ಜೋಳದ ರಾಶಿಯಿಂದ ಶಿವನ ಧ್ವನಿಯನ್ನು ಬರಿಸಿದ್ದು – ಈ ಪವಾಡಗಳು ಹರಿಹರನ ರಗಳೆಯಲ್ಲಿ ವರ್ಣಿತವಾಗಿವೆ.[17] ಈತನ ಆರನೆಯ ವಿಕ್ರಮಾದಿತ್ಯನ ಕಾಲದಲ್ಲಿದ್ದುದು ಹರಿಹರನ ರಗಳೆಯಿಂದ ತಿಳಿಯುತ್ತದೆ. ಅಲ್ಲದೆ ಈತ ಬಸವಣ್ಣನವರ ಹಿರಿಯ ಸಮಕಾಲೀನವನು ಆಗಿದ್ದನು. ಅದಕ್ಕೆ ಆತನ ವಚನಗಳೇ ಸಾಕ್ಷಿ. ತನ್ನ ವಚನಗಳಲ್ಲಿ ಬೊಮ್ಮಯ್ಯ, ಚೆನ್ನಬಸವಣ್ಣ, ಅಲ್ಲಮಪ್ರಭುಗಳನ್ನು ನೆನೆಯುತ್ತಾನೆ. ‘ಸಂಗನ ಬಸವಣ್ಣಪ್ರಿಯ ಬ್ರಹ್ಮೇಶ್ವರಲಿಂಗ’ ಸಂಗನ ಬಸವಣ್ಣ ಸಾಕ್ಷಿಯಾಗಿ ಬ್ರಹ್ಮೇಶ್ವರಲಿಂಗ – ಹೀಗೆ ಆತ ಬ್ರಹ್ಮೇಶ್ವರ ಎಂಬ ತನ್ನ ಅಂಕಿತದೊಂದಿಗೆ ‘ಸಂಗನ ಬಸವಣ್ಣ’ನ ಹೆಸರನ್ನು ಗಂಟುಹಾಕಿಕೊಂಡಿದ್ದಾನೆ. ಶಾಂತಲಿಂಗದೇಶಿಕ ಬ್ರಹ್ಮೇಶ್ವರಲಿಂಗ ಈತನ ಅಂಕಿತವೆಂದು ಹೇಳುತ್ತಾನೆ.[18] ಹಳಕಟ್ಟಿಯವರು ವಚನ ಶಾಸ್ತ್ರಸಾರ ಭಾಗ – ೧ ರಲ್ಲಿ ಈತನ ಅಂಕಿತವನ್ನು ಗುರುತಿಸಿಲ್ಲ. ಸಂಗನ ಬಸವಣ್ಣ + ಬ್ರಹ್ಮೇಶ್ವರಲಿಂಗ :[19] ಇಷ್ಟು ಮಾತ್ರವಿದೆ. ಮುಂದೆ ವಚನಕಾರನ ಹೆಸರಿಲ್ಲ.

ಬಸವಪೂರ್ವ ಯುಗ ಮತ್ತು ಬಸವಯುಗಕ್ಕೆ ಸೇತುವೆಯಾಗಿ ನಿಂತವರಲ್ಲಿ ಬಾಹೂರ ಬೊಮ್ಮಯ್ಯ ಒಬ್ಬ.

ಮಾರುಡಿಗೆಯ ನಾಚಯ್ಯ, ಜೈನರೊಡನೆ ಹೋರಾಡಿ ಗೆದ್ದ ವೀರಶರಣ. ಕಲಬುರಗಿ ಜಿಲ್ಲೆಯಲ್ಲಿರುವ ಮಾರುಡಿಗೆ ಈತ ಹೋರಾಡಿದ ಊರು. ಈತನ ಕಾಲ ತಿಳಿಯುವುದಿಲ್ಲ. ಈತನ ಜೊತೆಗೆ ತೇರಸರು ಹೋರಾಡಿ ಕೈಲಾಸ ಸೇರಿದರು ಎಂದು ತಿಳಿದು ಬರುತ್ತದೆ.[20] ಈ ತೇರಸರು ಯಾರು? ಇವರ ಹೆಸರುಗಳು ಹರಿಹರನ ರಗಳೆಯಲ್ಲಿ ಉಲ್ಲೇಖಿಸಲ್ಪಟ್ಟಿಲ್ಲ. ಪಾಲ್ಕುರಿಕೆ ಸೋಮನಾಥ ಹೇಳುವ ತೇರಸರು ಮಾರುಡಿಗೆಯ ನಾಚಯ್ಯನೊಡಗೂಡಿ ಜೈನರೊಡನೆ ಹೋರಾಡಿ ತೇರಸಲು ಒಂದೆಯೇ? ಬೇರೆಯೇ? ಈ ಕಗ್ಗಂಟು ಬಿಚ್ಚುವುದು ಕಷ್ಟ. ಈ ನಾಚಯ್ಯ ಸಿಂಗೀದೇವ ಎಂಬವನಿಗೆ ಉಪದೇಶ ಮಾಡುತ್ತಾನೆ. ಈ ಸಿಂಗೀದೇವ ಯಾರು? ದಶಗಣರಲ್ಲಿ ಒಬ್ಬನೆ? ಅಲ್ಲವೆ? ಯಾವುದು ಹೇಳಲು ಬರದು. ಗಾಣಿಗನಾದ ಈ ನಾಚಯ್ಯ ಬಸವೇಶ್ವರನ ತರುವಾಯ ಪ್ರಸಿದ್ಧಿಗೆ ಬಂದಂತೆ ತೋರುತ್ತದೆ[21] ಎಂದು ಹರಕಟ್ಟಿಯವರು ಹೇಳುವುದು ಸಮಂಜಸವಲ್ಲವೆಂದು ನಮ್ಮ ಅಭಿಪ್ರಾಯ. ಬಸವೇಶ್ವರನಿಗಿಂತ ಹಿಂದೆ ವೀರಶೈವ ಅರಳುತ್ತಿರುವ ಕಾಲಕ್ಕೆ ಪರವಾದಿಗಳೊಡನೆ ಹೋರಾಡಿದವರಲ್ಲಿ ಅಗ್ರಗಣ್ಯ ನಾಚಯ್ಯ, ಮಾರುಡಿಗೆಯ ನಾಚಯ್ಯ ಮತ್ತು ಸಿಂಗಿದೇವ. ಬಸವಪೂರ್ವದವರೆಂದು ಡಾ|| ಕಲಬುರ್ಗಿಯವರು ಸರಿಯಾಗಿ ಗುರುತಿಸಿದ್ದಾರೆ.[22]

ನಾಚಯ್ಯ ಇಷ್ಟಲಿಂಗ ಪೂಜಕನೂ ಹೌದು ಸ್ಥಾವರಲಿಂಗ ಪೂಜಕನೂ ಹೌದು. ಇದು ಆಗಿನ ಕಾಲದ ಸಂಪ್ರದಾಯವಾಗಿತ್ತು. ಈತನ ನಾಲ್ಕು ವಚನಗಳು ಉಪಲಬ್ಧವಿವೆ. ‘ನಾಚಯ್ಯಪ್ರಿಯಮಲ್ಲಿನಾಥ’ ಈತನ ಅಂಕಿತ. ಸಿಂಗಿದೇವನು ವಚನಕಾರನೆಂದು ಆತನ ಅಂಕಿತವು ನಾಚಯ್ಯಪ್ರಿಯಮಲ್ಲಿನಾಥ ಎಂದೂ ತಪ್ಪು ಕಲ್ಪನೆಯಾಗಿ ಗೊಂದಲವುಂಟಾಗಿದೆ. ಡಾ|| ಎಂ.ಎಸ್. ಸುಂಕಾಪುರ ಅವರು ಸಂಪಾದಿಸಿದ ಸಕಲ ಪುರಾತನರ ವಚನಗಳು ಭಾಗ – ೩ ರಲ್ಲಿ ದಶಗಣ ಸಿಂಗಿದೇವನವೆಂದು ನಾಲ್ಕು ವಚನ ಪ್ರಕಟಿಸಿದ್ದಾರೆ.[23] ಮುಂದೆ ಅವೇ ನಾಲ್ಕು ವಚನಗಳು ನಾಚಯ್ಯನವೆಂದು ಪ್ರಕಟಿಸಿದ್ದಾರೆ.[24] ಅಂಕಿತವೊಂದೇ, ವಚನಗಳು ಅವೇ! ಹೀಗೇಕೆ ಪ್ರಕಟಿಸಿದರೋ? ಸೋಜಿಗ! ಅಂಕಿತವನ್ನು ಗುರುತಿಸುವಾಗ ಹಳಕಟ್ಟಿಯವರು ಕ್ರಿ.ಶ. ೧೯೨೩ ರಲ್ಲಿ ಪ್ರಕಟಿಸಿದ ವಚನಶಾಸ್ತು ಭಾಗ – ೧ ರಲ್ಲಿ (ಪುಟ ೬೦೪) ‘ನಾಚಯ್ಯಪರಿಯಮಲ್ಲಿನಾಥ’ ಎಂಬುದು ದಶಗಣ ಸಿಂಗಿದೇವನದೆಂದೂ ಹೇಳಿದ್ದಾರೆ. ಆದರೆ ತರುವಾಯ ಪ್ರಕಟವಾದ ಶಿವಶರಣರ ಚರಿತ್ರೆಗಳು ಭಾಗ – ೨ ರಲ್ಲಿ (ಪುಟ ೨೫೬) ‘ನಾಚಯ್ಯಪ್ರಿಯಮಲ್ಲಿನಾಥ’ ಎಂಬ ಅಂಕಿತ ವಚನಗಳು ನಾಚಯ್ಯನವೆಂದೇ ಹೇಳಿ ಅಡಿಟಿಪ್ಪಣಿಯಲ್ಲಿ ಹೀಗೆ ಬರೆದಿದ್ದಾರೆ. ೧೯೨೩ ರಲ್ಲಿ ಪ್ರಸಿದ್ಧವಾದ ವಚನಶಾಸ್ತ್ರಸಾರ ಭಾಗ – ೧ ಇದರಲ್ಲಿಯ ಮುದ್ರಿಕೆಗಳ ಕೈಬರಹದ ನಮ್ಮ ಮೂಲ ಟಿಪ್ಪಣಿಗಳಲ್ಲಿ ಈ ಮುದ್ರಿಕೆಯಿದ್ದ ವಚನಕಾರನು ‘ದಶಗುಣಸಿಂಗಿದೇವ’ ಅಥವಾ ‘ನಾಚಯ್ಯ’ ಎಂದಿದೆ. ಈ ಹೆಸರಿನ ಮುಂದೆ ಸಂಶಯಯುಕ್ತ ಚಿಹ್ನವಿದೆ. ಆದ್ದರಿಂದ ನಾವು ‘ದಶಗುಣಸಿಂಗಿದೇವ’ ಈತನು ವಚನಕಾರನೆಂದು ಆ ಗ್ರಂಥದಲ್ಲಿ ಕಾಣಿಸಿದ್ದೇವೆ. ಆದರೆ ಈ ಮುದ್ರಿಕೆಯುಳ್ಳ ವಚನಕಾರನು ನಾಚಯ್ಯನೆಂದು[25] ಈ ಚರಿತ್ರೆಯಲ್ಲಿ ಉಲ್ಲೇಖವಾದ ಅವನ ಇಷ್ಟದೇವತೆಯ ಹೆಸರಿನಿಂದ ತಿಳಿದುಬರುತ್ತದೆ. ಮಾರುಡಿಗೆಯ ನಾಚಯ್ಯನ ಇಷ್ಟದೇವತೆ ‘ಮಲ್ಲಿನಾಥ’ ಎಂಬುದು ಹರಿಹರನ ರಗಳೆಯಿಂದ ಸ್ಪಷ್ಟವಾಗುತ್ತದೆ. ಆದುದರಿಂದ ಸಿಂಗಿದೇವ ವಚನಕಾರನಲ್ಲ. ‘ನಾಚಯ್ಯಪ್ರಿಯಮಲ್ಲಿನಾಥ’ ಎಂಬ ಅಂಕಿತದ ನಾಲ್ಕು ವಚನಗಳು ಮಾರುಡಿಗೆಯ ನಾಚಯ್ಯನವೇ. ಡಾ|| ಎಲ್. ಬಸವರಾಜು ಅವರದೂ ಇದೇ ಅಭಿಪ್ರಾಯವಾಗಿದೆ.[26]

ಕೋವೂರು ಬ್ರಹ್ಮಯ್ಯ ಜೈನರೊಡನೆ ಹೋರಾಡಿದ ವೀರ. ಕೋವೂರು ಕಲ್ಯಾಣದ ಉತ್ತರ ದಿಕ್ಕಿನಲ್ಲಿತ್ತು. ಅಲ್ಲಿ ಚಾಳುಕ್ಯ ಕುಲಯುತನಾದ ಬ್ರಹ್ಮಯ್ಯನಿದ್ದನೆಂದು ಹರಿಹರನ ಕೋವೂರ ಬೊಮ್ಮ ತಂದೆಯ ರಗಳೆಯಿಂದ ತಿಳಿದು ಬರುತ್ತದೆ. ಆತನೊಡನೆ ಮುನ್ನೂರು ಮಹೇಶ್ವರರಿದ್ದರು. ಇವರು ಶೂರರು. ಆತ ಅಂಬುಧಾರ ರಾಮಾನಾಥನ ಭಕ್ತ; ಸ್ಥಾವರಲಿಂಗ ಪೂಜಕ. ಇಷ್ಟಲಿಂಗದ ವಿಷಯ ಈತನ ಚರಿತ್ರೆಯಲ್ಲಿ ಬರುವುದಿಲ್ಲ. ಬಸವಪೂರ್ವದವನೋ, ಬಸವೋತ್ತರ ಯುಗದವನೋ ಎಂದು ಅನುಮಾನಪಟ್ಟು ಕೊನೆಗೆ “ಅವನು ಬಹುಶಃ ಬಸವೇಶ್ವರನಕ್ಕಿಂತಲೂ ಈಚಿನವನಾಗಿರಬೇಕು” ಎನ್ನುತ್ತಾರೆ ಹಳಕಟ್ಟಿಯವರು.[27] ಕೋವೂರು ಬ್ರಹ್ಮಯ್ಯ ಅಂಬುಧಾರರಾಮನಾಥ ಬಂದುದನ್ನು ಕಂಡು “ದಾಸಿಮಯ್ಯನ ತವನಿಧಿ ಭಾಸುರವಾದುದೇ? ನಂಬಿಯ ಬೆಂಬಳಿಯಿಂಬುಗೊಂಡುದೆ? ಭೋಗಯ್ಯನ ಭಾಗ್ಯಂ ಬಳಿ ಸಂದುದೇ? ಕುಂಬಾರಗುಂಡಯ್ಯನ ನೃತ್ಯದ ಫಲಂ ನಡೆತಂದುದೇ?” – ಎಂದು ಬಣ್ಣಿಸುತ್ತಾನೆ.[28] ದಾಸಿಮಯ್ಯ, ನಂಬಿ ಭೋಗಯ್ಯ, ಗುಂಡಯ್ಯ ಇವರೆಲ್ಲ ಬಸವಪೂರ್ವದವರು. ಇವರನ್ನು ನೆನೆಯುವ ಬ್ರಹ್ಮಯ್ಯ ಅವರಿಗಿಂತ ಈಚಿನವನಾಗಿರಬೇಕು. ಆದರೆ ಆತ ಬಸವಣ್ಣನವರ ಪೂರ್ವದವನಿದ್ದು ಡೋಹರ ಕಕ್ಕಯ್ಯ ಮುಂತಾದವರಂತೆ ಬಸವಣ್ಣನವರ ಹಿರಿಯ ಸಮಕಾಲೀನನಾಗಿರಲು ಸಾಧ್ಯವಿದೆ.

ಇಳೆಹಾಳ ಬೊಮ್ಮಯ್ಯ ಮತ್ತು ರಾಗದ ಸಾಂಕ

ಇಳೆಹಾಳ ಬೊಮ್ಮಯ್ಯ ಒಕ್ಕಲಿಗ; ಪರಮ ದಾಸೋಹಿ. ಪೆರ್ಮಾಡಿ ಎಂಬ ಹೆಸರಿರುವ ಆರನೆಯ ವಿಕ್ರಮಾದಿತ್ಯನ ಕಾಲದಲ್ಲಿದ್ದನು. ಇಳೆಹಾಳು ಈತನ ಊರು. ಬಾಗಲಕೋಟೆ ಗ್ರಾಮದಿಂದ ೧೦ ಮೈಲುಗಳ ಮೇಲೆ ಘಟಪ್ರಭಾ ನದಿಯ ದಂಡೆಯ ಮೇಲೆ ಇರುವ ಈಗಿನ ಇಲ್ಲಾಳವೇ ಇಳೆಹಾಳವೆಂದು ಡಾ|| ಹಳಕಟ್ಟಿಯವರು ಗುರುತಿಸಿದ್ದಾರೆ.[29] “ಇಳೆಹಾಳವೆಂಬ ಪುರದಲ್ಲಿ ಬೊಮ್ಮಯ್ಯನೆಂಬ ಸದ್ಭಕ್ತನು ಮುನ್ನೂರಿಪ್ಪತ್ತು ಮಾರು ಹೊಲನ ಪೆರ್ಮಾಡಿರಾಯನಲ್ಲಿ ಕಮ್ಮತವಗೈಯ್ದು ಕೋರನಿಕ್ಕುವಾಗ ಮಿಕ್ಕಾದ ದವಸದಲ್ಲಿ ಗುರುಲಿಂಗ ಜಂಗಮಕ್ಕೆ ದಾಸೋಹವ ಮಾಡುತ್ತ…..” ಇದ್ದ.[30]

ರಾಗರಸಾಂಕ ಬಿರುದಿನ ರಾಗದ ಸಂಕಣ್ಣ ವಿಕ್ರಮಾದಿತ್ಯನ ಕಾಲದವನೆಂಬುದು ರಾಗರಸಾಂಕನ ರಗಳೆಯಿಂದ ತಿಳಿದು ಬರುತ್ತದೆ ಎಂದು ಡಾ|| ಹಳಕಟ್ಟಿಯವರು ಹೇಳುತ್ತಾರೆ. ಈ ರಗಳೆ ಯಾವುದೋ ತಿಳಿಯದು.[31] ಆದರೆ ಭೈರವೇಶ್ವರ ಕಥಾಮಣಿಸೂತ್ರರತ್ನಾಕರ (ಭಾಗ – ೨, ಪುಟ ೨೭೧) ದಲ್ಲಿ ರಾಗರಸಾಂಕ ಮಧುರೆಯಲ್ಲಿ ಪಾಂಡ್ಯನ ಕಾಲಕ್ಕೆ ಇದ್ದನೆಂದು ಹೇಳಿದೆ. ಆದರೆ ಎರಡೂ ಕಡೆ ಸ್ಪರ್ಧೆಗಾಗಿ ಬರುವ ಗಾಯಕ ಗೌಳ ದೇಶದವನೇ.

ಮಲ್ಲರಸ, ಅನಿಮಿಷದೇವ, ನಂದಿಕೇಶ ಮತ್ತು ಬಳ್ಳೇಶ ಮಲ್ಲಯ್ಯ

ಮಲ್ಲರಸ ಖಂಡಿತವಾಗಿ ಬಸವಪೂರ್ವ ಯುಗದವನು. ತನ್ನ ಮಗನಾದ ಸಕಲೇಶ ಮಾದರಸನನ್ನು ಬಸವಣ್ಣನವರ ಜೊತೆಗೆ ಕ್ರಾಂತಿಯಲ್ಲಿ ಭಾಗಿಯಾಗಲು ಕಲ್ಯಾಣಕ್ಕೆ ಕಳುಹಿಸಿದ ಮಹಾತ್ಮನೀತ.

ಈ ತಂದೆ ಮಕ್ಕಳ ಬಗ್ಗೆ ಕಥಾಂತರಗಳಿವೆ. ಇವರಿಬ್ಬರೂ ಬೇರೆ ಬೇರೆ ಕೈಲಾಸದ ಸಹನೇಶ ಮತ್ತು ಗಗನೇಶರು ಬೇರೆ ಬೇರೆ ರಾಜರಾಗಿ ಹುಟ್ಟಿದರು. ಬೇರೆ ಬೇರೆ ಕಡೆ ಆಳಿದರು ಎಂದು ಭೈರವೇಶ್ವರ ಕಥಾಮಣಿಸೂತ್ರರತ್ನಾಕರದಲ್ಲಿ[32] ಮತ್ತು ಡಾ|| ಹಳಕಟ್ಟಿಯವರ ಶಿವಶರಣರ ಚರಿತ್ರೆ ಭಾಗ – ೧ರಲ್ಲಿ ಹೇಳಿದೆ.[33] ಇದು ತಪ್ಪು ಕಲ್ಪನೆಗೆ ಎಡೆಕೊಡುತ್ತದೆ. ಆದರೆ ಅದೇ ಶಿವಶರಣರ ಚರಿತ್ರೆಯಲ್ಲಿ ಹಳಕಟ್ಟಿಯವರು ಸರಿಯಾದ ಚರಿತ್ರೆ ಬರೆದಿದ್ದಾರೆ.[34]

ಮಲ್ಲರಸ ಮತ್ತು ಮಾದರಸ ತಂದೆ – ಮಕ್ಕಳೆಂದು ಪದ್ಮರಾಜಪುರಾಣದಲ್ಲಿ ಹೇಳಿದೆ. ಇದು ಅಧಿಕೃತ. ಯಾಕೆಂದರೆ ಈ ಪುರಾಣ ಮಾದರಸರ ಮನೆತನದ ಚರಿತ್ರೆಯಾಗಿದೆ ಮತ್ತು ಆ ಮನೆತನದ ಕವಿಯೇ ಅದನ್ನು ಬರೆದಿದ್ದಾನೆ.

ಕಲ್ಲುಕುರಿಕೆಯ ದೊರೆಯಾದ ಮಲ್ಲರಸ ವೈರಾಗ್ಯ ತಾಳಿ ಮಗನಾದ ಮಾದರಸನಿಗೆ ಪಟ್ಟ ಕಟ್ಟಿ ಶ್ರೀಶೈಲಕ್ಕೆ ಹೋದ. ಕೆಲವು ವರ್ಷಗಳ ಬಳಿಕ ಮಾದರಸನೂ ಶ್ರೀಶೈಲಕ್ಕೆ ಹೋದ. ಆಗ ಮಲ್ಲರಸ, “ನೀನು ಇನ್ನೂ ೫೦ ವರ್ಷ ಈ ಭೂಮಿಯಲ್ಲಿರಬೇಕಾಗಿದೆ. ನಮ್ಮ ಬಸವಾದಿ ಪ್ರಮಥರು ಶಿವಭಕ್ತಿ ವಿಸ್ತಾರಕ್ಕಾಗಿ ಕಲ್ಯಾಣದಲ್ಲಿ ಬಂದಿರುವರು. ನೀನು ಅವರೊಡನೆ ಇದ್ದು ಶಿವಭಕ್ತಿಯನ್ನು ಮೆರೆಯುತ್ತಾ ಈ ಕಾಲಾವಧಿಯನ್ನು ಕಳೆ” ಎಂದು ಮಗನಾದ ಮಾದರಸನನ್ನು ಕಲ್ಯಾಣಕ್ಕೆ ಕಳುಹಿಸಿದನು.[35]

ಸಕಲೇಶ ಮಾದರಸ ಬಸವಣ್ಣನವರ ಹಿರಿಯ ಸಮಕಾಲೀನನಾಗಿ ಬದುಕಿದನೆಂದು ನಂಬಲಾಗಿದೆ. ಸುಮಾರು ಕ್ರಿ.ಶ. ೧೧೫೦ ರ ತರುವಾಯ ಆತ ಕಲ್ಯಾಣಕ್ಕೆ ಬಂದಿರಬೇಕು. ಆಗ ಆತನಿಗೆ ಸಾಕಷ್ಟು ವಯಸ್ಸಾಗಿರಬೇಕು. ಅಂಬೆಯಲ್ಲಿ ಮಗನಾದ ಮಾಯಿದೇವನನ್ನು ಬಿಟ್ಟು ಶ್ರೀಶೈಲಕ್ಕೆ ಬಂದಿದ್ದ ಮಾದರಸನ ವಯಸ್ಸು ಆಗ ಐವತ್ತಾದರೂ ಆಗಿರಬೇಕು. ಆತನ ತಂದೆಯಾದ ಮಲ್ಲರಸನಿಗೆ ಎಂಬತ್ತಕ್ಕಿಂತ ಹೆಚ್ಚು ವಯಸ್ಸಾಗಿತೆಂದು ನಂಬಲಡ್ಡಿಯಿಲ್ಲ. ಬಸವಾದಿ ಶರಣರು ಹುಟ್ಟುವುದಕ್ಕಿಂತ ಮುಂಚೆಯೇ ಮಲ್ಲರಸ ಹುಟ್ಟಿ ಮುಂದಿನ ಕ್ರಾಂತಿಗೆ ಮಗನಾದ ಮಾದರಸನನ್ನು ಸಿದ್ಧಗೊಳಿಸಿದನೆಂಬುದರಲ್ಲಿ ಸಂದೇಹವಿಲ್ಲ.

ಅಲ್ಲಮಪ್ರಭುವಿಗೆ ಇಷ್ಟಲಿಂಗ ಕೊಟ್ಟ ಅನಿಮಿಷದೇವ ಆತನಿಗಿಂತಲೂ ಹಿರಿಯ. ಆತ (ಅನಿಮಿಷ ದೇವ) ಐಹೊಳೆಯ ಅರಸ. ಈ ಅರಸನಿಗೆ ಲಿಂಗದೀಕ್ಷೆ ಕೊಟ್ಟವನು ನಂದಿಕೇಶ್ವರ ಪ್ರಭು, ಯೌವನಕ್ಕೆ ಬಂದಾಗ ಅನಿಮಿಷನಿಂದ ಇಷ್ಟಲಿಂಗ ದೊರಕುತ್ತದೆ. ಅಷ್ಟೊತ್ತಿಗಾಗಲೇ ಅನಿಮಿಷನಿಗೆ ಅರವತ್ತಕ್ಕೂ ಹೆಚ್ಚು ವಯಸ್ಸಾಗಿರಬೇಕು. ಮತ್ತು ಅನಿಮಿಷನಿಗೆ ಇಷ್ಟಲಿಂಗ ಕೊಟ್ಟ ನಂದಿಕೇಶ್ವರ ಅವನಿಗಿಂತಲೂ ಹೆಚ್ಚು ವಯಸ್ಸಿನವನಾಗಿರುವುದು ಸಹಜ. ಖಚಿತವಾಗಿ ಇವರ ಕಾಲ ಹೇಳಲಿಕ್ಕೆ ಬರದಿದ್ದರೂ ನಂದಿಕೇಶ್ವರ ಮತ್ತು ಅನಿಮಿಷ ದೇವ ಬಸವಪೂರ್ವದವರೆಂದು ನಂಬಲು ಏನೂ ಆತಂಕವಿಲ್ಲ.

ಬಸವಪುರಾಣದಲ್ಲಿ ಬಂದಿಕಾರರನ್ನು ಭಕ್ತರನ್ನಾಗಿ ಮಾಡಿದಾಗ ಇಂಥ ಘಟನೆಗಳು ಹಿಂದೆ ಅನೇಕ ನಡೆದವು ಎಂದು ಕವಿ ಬಳ್ಳೇಶ ಮಲ್ಲಯ್ಯನ ಪವಾಡ ಹೇಳುತ್ತಾನೆ.[36] ಇದರಿಂದ ಈತ ಬಸವನಿಗಿಂತ ಹಿಂದಿನವನಿರಬೇಕು.[37]

ಇಲ್ಲಿ ಇನ್ನೊಂದು ಮಾತು ಗಮನಾರ್ಹವಾದುದು. ಬಂದಿಕಾರರನ್ನು ಭಕ್ತರನ್ನಾಗಿ ಮಾಡಿದ ಸಂಧಿಯಲ್ಲಿ ಗೊಲ್ಲರ ಮೇಟಿ ಮತ್ತು ಮೊರಟದ ಬಂಕಯ್ಯನವರು ಬಸವಪೂರ್ವದವರೆಂವಂತೆ ಹೇಳಲಾಗಿದೆ. ಅಲ್ಲದೆ ಈ ಸಂಧಿಯಲ್ಲಿ ಅನೇಕ ಬಸವಪೂರ್ವದ ಶರಣರ ಹೆಸರುಗಳು ಬರುತ್ತವೆ, ಅವು ಅಭ್ಯಾಸ ಯೋಗ್ಯ ಬಳ್ಳೇಶ ಮಲ್ಲಯ್ಯನ ಉಪಲಬ್ಧವಿರುವ ಎಂಟು ವಚನಗಳಲ್ಲಿ ಬಸವಾದಿ ಪ್ರಮಥರ ಹೆಸರುಗಳಿಲ್ಲ.

ರೇವಣಸಿದ್ದೇಶ್ವರ, ರೇಕಮ್ಮ, ಶಾಂಭವೀದೇವಿ, ಸೌಂದರೀದೇವಿ, ಆಗಮಮೋಹಿನಿ ಮತ್ತು ಚಾಮಲೆ

ರೇವಣಸಿದ್ಧೇಶ್ವರನ ಕಾಲನಿರ್ಣಯ ಬಹುತೊಡಕಿನದು. ಇದೊಂದು ಕಗ್ಗಂಟಾಗಿ ಬಿಚ್ಚ ಹೋದಷ್ಟೂ ಕಗ್ಗಂಟಾಗುತ್ತ ನಡೆದಿದೆ. ಆದುದರಿಂದ ಇದರ ನಿರ್ಣಯ ಈವರೆಗೂ ಆಗಿಲ್ಲ. ರೇವಣಸಿದ್ಧೇಶ್ವರರ ಅಲೌಕಿಕತೆ ಮತ್ತು ಲೌಕಿಕತೆ ಎರಡೂ ಕೂಡಿ ಸಂಶೋಧಕರಿಗೆ ತೊಡಕನ್ನೊಡ್ಡಿವೆ. ಅಲ್ಲದೆ ಕರ್ನಾಟಕದಲ್ಲಿ ಅನೇಕ ರೇವಣಸಿದ್ಧರು ಆಗಿ ಹೋಗಿದ್ದಾರೆ. ಪುರಾಣೋಕ್ತ ರೇವಣಸಿದ್ಧ ೧೪೦೦ ವರ್ಷ ಬದುಕಿದ. ಆತ ಬ್ರಹ್ಮಚಾರಿ, ಲಿಂಗೋದ್ಭವ, ಸ್ಥಾವರಲಿಂಗ ಸ್ಥಾಪಕ. ಇದನ್ನೆಲ್ಲಾ ಲೆಕ್ಕಕ್ಕೆ ತೆಗೆದುಕೊಂಡರೆ ಆತ ವೀರಶೈವನಾಗದೆ ಶೈವನಾಗಿರಬೇಕು ಎನ್ನಿಸುತ್ತದೆ. ಹರಿಹರನ ರಗಳೆಯಲ್ಲಿ ಚಿತ್ರಿತವಾದ ರೇವಣಸಿದ್ಧನೂ ವೀರಶೈವಕ್ಕಿಂತ ಶೈವಕ್ಕೆ ಹತ್ತಿರವಾಗುತ್ತಾನೆ. ಆದರೆ ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರರತ್ನಾಕರ ಮುಂತಾದ ಗ್ರಂಥಗಳ ಪ್ರಕಾರ ಆತನನ್ನು ವೀರಶೈವನೆಂದು ಪರಿಗಣಿಸಬೇಕಾಗುತ್ತದೆ. ಆದುದರಿಂದ ಪುರಾಣೋಕ್ತ ರೇವಣಸಿದ್ಧ – ಎಂದರೆ ಪಮಚಾಚಾರ್ಯರಲ್ಲೊಬ್ಬನಾದ ರೇವಣಸಿದ್ಧ ಮತ್ತು ಹರಿಹರಾದಿ ಕವಿಗಳ ಕಾವ್ಯಗಳಲ್ಲಿ ಉಕ್ತವಾಗಿರುವ ರೇವಣಸಿದ್ಧ ಇವರಿಬ್ಬರೂ ಭಿನ್ನರೋ ಅಭಿನ್ನರೋ ಎಂಬುದರ ಬಗ್ಗೆ ಪಂಡಿತರಲ್ಲಿ ತೀವ್ರ ಭಿನ್ನಾಭಿಪ್ರಾಯಗಳಿವೆ. ಕೆಲವು ಶಾಸನಗಳಲ್ಲಿ ಉಕ್ತನಾಗಿರುವ ರೇವಣಸಿದ್ಧನ ಬಗ್ಗೆಯೂ ಖಚಿತವಾಗಿ ಹೇಳಲು ಆಧಾರ ಸಾಲವು. ಕ್ರಿ.ಶ. ೧೦೦೦ದ ಬಯಿರು ಶಾಸನದಲ್ಲಿ ಉಕ್ತನಾಗಿರುವ ರೇವಣಸಿದ್ಧ ಪಂಚಾಚಾರ್ಯ ರೇವಣಸಿದ್ಧ ಮತ್ತು ಸಿದ್ಧರಾಮನ ಜನನದ ಭವಿಷ್ಯ ಹೇಳಿದ ರೇವಣಸಿದ್ಧ ಒಬ್ಬನೇ ಎಂದು ಶ್ರೀಮಲ್ಲಿಕಾರ್ಜುನರು ಅಭಿಪ್ರಾಯಪಡುತ್ತಾರೆ.[38] ಕಾಲದ ದೃಷ್ಟಿಯಿಂದ ಇದು ಸರಿಯೆನಿಸುವುದಿಲ್ಲ. ಸಿರಿವಾಳ ಶಾಸನದ ಬಗ್ಗೆಯೂ (೧೧೮೭) ಖಚಿತ ಅಭಿಪ್ರಾಯಪಡಲು ಬರುವುದಿಲ್ಲ :

“….. ಮೇಲಣ ಪದ್ಯಗಳಲ್ಲಿ ಬಂದ ಮಹಿಮೆಗಳನ್ನು ವೀರಶೈವ ಕಾವ್ಯಗಳು ಸಿದ್ಧರಾಮನ ಜನನವನ್ನು ಸೂಚಿಸಿದ ರೇವಣಸಿದ್ಧನಿಗೂ ಆರೋಪಿಸುವುದರಿಂದ ಈ ಇಬ್ಬರೂ ಅಭಿನ್ನ”[39] ಎಂದು ಡಾ|| ಎಂ.ಎಂ. ಕಲಬುರ್ಗಿಯವರು ಅಭಿಪ್ರಾಯಪಡುತ್ತಾರೆ. ಇದನ್ನು ಒಪ್ಪುವುದು ಕಷ್ಟ. ಶಾಂತಿಮಯ್ಯಗಳ ಪುತ್ರ ರೇಣುಕಾಚಾರ್ಯರೆಂಬುದಕ್ಕೆ ಶಾಂತಿಮಯ್ಯಗಳ ಶಿಷ್ಯ ರೇವಣಸಿದ್ಧರೆಂದು ಪಂಡಿತರು ವಿವರಣೆ ನೀಡಿದರೂ ಈ ಶಾಸನೋಕ್ತ ರೇವಣಸಿದ್ಧ ಮತ್ತು ಹರಿಹರನ ರಗಳೆಯ ಸಿದ್ದರಾಮನ ಜನನ ಸೂಚಿಸುವ ರೇವಣಸಿದ್ಧ ಒಂದೇ ಎಂದು ನಂಬಲು ಆಗುವುದಿಲ್ಲವೆಂದೇ ನಮ್ಮ ಅಭಿಪ್ರಾಯ.

ರೇವಣಸಿದ್ಧ ೧೪೦೦ ವರ್ಷ ಬದುಕಿದ ಎಂದು ನಂಬುವುದು ಸಾಧ್ಯವಿಲ್ಲ. ಆದರೆ ಆತ ಎಷ್ಟು ದಿನ ಬದುಕಿದ? ಯಾವಾಗ ಬದುಕಿದ ಎಂಬುದು ಮುಖ್ಯ ಹರಿಹರ ತನ್ನ ರೇವಣಸಿದ್ಧೇಶ್ವರ ರಗಳೆಯಲ್ಲಿ ಆತ ಬಿಜ್ಜಳನ ಕಾಲಕ್ಕೆ ಮಂಗಳವಾಡಕ್ಕೆ ಬಂದಂತೆ ಮತ್ತು ಬಿಜ್ಜಳನ ಮಗಳನ್ನು ಮದುವೆಯಾದಂತೆ ವರ್ಣಿಸಿದ್ದಾನೆ. ಕರ್ನಾಟಕದ ಇತಿಹಾಸದಲ್ಲಿ – ಕಳಚುರ್ಯ ವಂಶದಲ್ಲಿ ಇಬ್ಬರು ಬಿಜ್ಜಳರಿದ್ದಾರೆ. ಒಂದನೆಯ ಬಿಜ್ಜಳ ಕ್ರಿ.ಶ. ೧೦೫೭ ರಲ್ಲಿ ಮಂಗಳವಾಡದಲ್ಲಿ ಆಳುತ್ತಿದ್ದ. ಎರಡನೆಯ ಬಿಜ್ಜಳ ೧೧೩೦ ರಲ್ಲಿ ಮಹಾಮಂಡಲೇಶ್ವರನಾಗಿ ಮಂಗಳವಾಡದಲ್ಲಿಯೇ ಆಳುತ್ತಿದ್ದ. ರೇವಣಸಿದ್ಧ ಈ ಇಬ್ಬರು ಬಿಜ್ಜಳರಲ್ಲಿ ಯಾರ ಕಾಲಕ್ಕೆ ಮಂಗಳವಾಡಕ್ಕೆ ಬಂದಿದ್ದ? ಮತ್ತು ಯಾರ ಮಗಳನ್ನು ಮದುವೆಯಾಗಿದ್ದ?

ಒಂದನೆಯ ಬಿಜ್ಜಳ ೧೦೫೭ ರಿಂದ ೧೦೬೭ರವರೆಗೆ ಆಳಿದನೆಂದು ಊಹಿಸಲವಕಾಶವಿದೆ. ಇವನು ಚಡಚಣದ ಶಾಸನದಂತೆ ಕ್ರಿ.ಶ. ೧೦೫೭ ರಲ್ಲಿ ಮಂಗಳವಾಡದಲ್ಲಿ ಆಳುತ್ತಿದ್ದ – ಮಹಾಮಂಡಲೇಶ್ವರನಾಗಿ.[40] ಆತನ ಮಗ ಕನ್ನರ ೧೦೬೭ರಲ್ಲಿ ಮಹಾಮಂಡಲೇಶ್ವರನಾಗಿದ್ದನೆಂದು ಅದೇ ಚಡಚಣದ ಇನ್ನೊಂದು ಶಾಸನದಿಂದ ತಿಳಿದು ಬರುತ್ತದೆ.[41] ಹತ್ತು ವರ್ಷಗಳ ವರೆಗೆ ಮೊದಲ ಬಿಜ್ಜಳ ಆಳಿರಬೇಕು. ಎರಡನೆಯ ಬಿಜ್ಜಳನ ಕಾಲ ೧೧೩೦ ರಿಂದ ೧೧೬೮ ಎಂದಿದ್ದರೂ ಅವನು ಕ್ರಿ.ಶ. ೧೧೨೭ ರಲ್ಲಿಯೇ ತನ್ನ ತಂದೆ ಪೆರ್ಮಾಡಿಯ ಕಾಲದಲ್ಲಿಯೇ ಮಹಾಮಂಡಲೇಶ್ವರ ಪದವಿಯ ಅಧಿಕಾರವನ್ನು ಅನುಭವಿಸುತ್ತಿದ್ದ.[42]

೧೪೦೦ ವರ್ಷ ರೇವಣಸಿದ್ಧ ಬದುಕಿದನೆಂಬುದು ಅತಿಶಯೋಕ್ತಿ. ಆದರೆ ಆತ ದೀರ್ಘಕಾಲ ಬದುಕಿದನೆಂದು ಹೇಳಬಹುದು. ಇದರಿಂದ ಆತ ಮಂಗಳವಾಡಿಗೆ ಇಬ್ಬರ ಬಿಜ್ಜಳರ ಕಾಲದಲ್ಲಿಯೂ ಬರಲು ಸಾಧ್ಯವಾಗುವುದು. ರೇವಣ್ಣ ಸಿದ್ಧ ಒಟ್ಟು ನಾಲ್ಕು ಸಲ ಮಂಗಳವಾಡಕ್ಕೆ ಬರುವನು[43] ಮೊದಲ ಸಲ ಬಂದು ಮಂಗಳವಾಡದಲ್ಲಿ ಮಾಯಿದೇವಿ ಮನೆಯಲ್ಲಿ ಸೇವಕನಾಗುವನು. ಲಂಕೆಗೆ ಹೋಗಿ ಮತ್ತೆ ಮಂಗಳವಾಡಕ್ಕೆ ಬಂದು ಬಿಜ್ಜಳನ ಅರಮನೆಯನ್ನು ಸುಡುವನು. ಬಿಜ್ಜಳನ ಗರ್ವ ಕಳೆವನು. ಅಲ್ಲಿಂದ ಕೊಲ್ಲಾಪುರಕ್ಕೆ ಹೋಗಿ ಮತ್ತೆ ಮಾಯಿದೇವಿಯ ಮಗಳು ರೇವಣದೇವಿಯನ್ನುಳಿಸಲು ಮಂಗಳವಾಡಿಗೆ ಬರುವನು; ಬಿಜ್ಜಳನ ಮಗಳನ್ನು ಮದುವೆಯಾಗುವನು. ಆ ಬಳಿಕ ಚೋಳ, ಚೋರ, ಮಲೆಯಾಳ ದೇಶಗಳಿಗೆ ಹೋಗಿ ಅಲ್ಲಿಯ ರಾಜಪುತ್ರಿಯರನ್ನು ಮದುವೆಯಾಗಿ ಮರಳಿ ಮಂಗಳವಾಡಕ್ಕೆ ಬಂದು ಕೆರೆ ಕಟ್ಟಿಸುವನು. ಅದೇ ಕಾಲಕ್ಕೆ ರುದ್ರಮುನಿಯ ಜನನವಾಗುವುದು. ರುದ್ರಮುನಿ ದೊಡ್ಡವನಾದ ಬಳಿಕ ಮಂಗಳವಾಡದಿಂದ ಹೊರಟು ಹಾವಿನಹಾಳ ಕಲ್ಲಯ್ಯನಿಗೆ ರುದ್ರಮುನಿಯಿಂದ ದೀಕ್ಷೆ ಕೊಡಿಸಿ, ಸೊನ್ನಾಲಿಗೆಗೆ ಬಂದು ಚಾಮಲೆಗೆ ಸಿದ್ಧರಾಮನ ಜನನದ ಭವಿಷ್ಯ ಹೇಳಿ, ಅಷ್ಟಾಷಷ್ಟಿ ತೀರ್ಥಗಳನ್ನು ಸಂದರ್ಶಿಸಿ ಕೊನೆಗೆ ಕೊಲ್ಲಿಪಾಕಕ್ಕೆ ಬಂದು ಕೈಲಾಸಕ್ಕೆ ಹೋಗುವನು.

ಹರಿಹರನ ರಗಳೆಯಂತೆ ಸಿದ್ಧರಾಮನ ಜನನಕ್ಕಿಂತ ಮುಂಚೆಯೇ ಹಾವಿನಹಾಳ ಕಲ್ಲಯ್ಯನಿಗೆ ರುದ್ರಮುನಿಯಿಂದ ದೀಕ್ಷೆಯಾಗುತ್ತದೆ. ಅಷ್ಟರಲ್ಲಿ ರುದ್ರಮುನಿ ಯೌವ್ವನಿಗನಾದರೂ ಆಗಿರಬೇಕು. ಮಂಗಳವಾಡದ ಹ್ತಿರ ಕೆರೆ ಕಟ್ಟಿಸುವ ಕಾಲಕ್ಕೆ ರುದ್ರಮುನಿಯ ಜನನವಾಗುತ್ತದೆ. ಬಿಜ್ಜಳನ ಮಗಳನ್ನು ಮದುವೆಯಾದ ಅನೇಕ ವರ್ಷಗಳ ಬಳಿಕ ರೇವಣಸಿದ್ಧ ಚೋಳ ಪುತ್ರಿಯನ್ನು ಮದುವೆಯಾಗುವನು. ಆ ಮದುವೆ ೧೧೦೦ರ ತರುವಾಯ ಆಗಿರಬೇಕು ಎಂದರೆ ೧೧೦೦ರ ತರುವಾಯವೇ. ರುದ್ರಮುನಿ ಹುಟ್ಟಿದ್ದು. ಕಲ್ಲಯ್ಯನಿಗೆ ದೀಕ್ಷೆ ಕೊಟ್ಟ ಕೆಲ ದಿನಗಳಲ್ಲಿಯೇ ರೇವಣ್ಣಸಿದ್ಧರು ಕೊಲ್ಲಿಪಾಕಿಗೆ ಹೋಗುವರು. ಕಲ್ಲಯ್ಯನಲ್ಲಿಗೆ ಹೋಗಲು ಅವರು ಮಂಗಳವಾಡವನ್ನು ಬಿಟ್ಟದ್ದು ೧೧೨೭ – ೩೦ರ ಸುಮಾರಿಗೆ ಎಂದಿಟ್ಟುಕೊಳ್ಳುವುದಕ್ಕೆ ಅಡ್ಡಿಯಿಲ್ಲ. ಆಗ ಎರಡನೆಯ ಬಿಜ್ಜಳ ಮಂಗಳವಾಡದಲ್ಲಿರುತ್ತಾನೆ. ಇದನ್ನು ಒಪ್ಪಿಕೊಂಡರೆ ರುದ್ರಮುನಿ ಹಾವಿನಹಾಳ ಕಲ್ಲಯ್ಯ ಮತ್ತು ರೇವಣಸಿದ್ಧರ ನಾಲ್ವರ ಹೆಂಡಂದಿರು ಬಸವಣ್ಣನವರ ಹಿರಿಯ ಸಮಕಾಲೀನರಾಗುತ್ತಾರೆ. ಸಿದ್ಧರಾಮ ೧೧೩೦ ರಲ್ಲಿ ಹುಟ್ಟಿ ೧೧೬೦ರಲ್ಲಿ ಕಲ್ಯಾಣಕ್ಕೆ ಬಂದಿರಬೇಕೆಂದು ಊಹಿಸಬೇಕಾಗುತ್ತದೆ.

ರೇವಣಸಿದ್ಧ ಅನೇಕ ರಾಜಪುತ್ರಿಯರನ್ನು ಮದುವೆಯಾದನೆಂದು ಕಾವ್ಯದಲ್ಲಿ ಹೇಳಿದೆ. ಇವರಲ್ಲಿ ನಾಲ್ವರ ಹೆಸರುಗಳು ಗೊತ್ತಾಗಿವೆ : ರೇಕಮ್ಮ ಶಾಂಭವೀದೇವಿ, ಸೌಂದರೀ ದೇವಿ ಮತ್ತು ಆಗಮಮೋಹಿನಿ ಇವರು ನಾಲ್ವರೂ ವಚನ ರಚಿಸಿದ್ದಾರೆ. ಡಾ|| ಸುಂಕಾಪುರರು ಸಂಪಾದಿಸಿದ ಸಕಲ ಪುರಾತನರ ವಚನಗಳು ಸಂಪುಟ – ೩ ರಲ್ಲಿ ರೇವಣಸಿದ್ಧಯ್ಯಗಳ ಪುಣ್ಯಸ್ತ್ರೀ ರೇಕಮ್ಮಗಳ ವಚನವೊಂದು ಅಚ್ಚಾಗಿದೆ. ‘ಶ್ರೀಗುರುಸಿದ್ದೇಶ್ವರ’ ಎಂಬುದು ಈಕೆಯ ಅಂಕಿತ. ಡಾ|| ಹಳಕಟ್ಟಿಯವರು[44] ಡಾ|| ಎಲ್. ಬಸವರಾಜು ಅವರೂ[45] ‘ಶ್ರೀಗುರುಸಿದ್ದೇಶ್ವರ’ ಎಂಬುದು ರೇಕಮ್ಮನ ಅಂಕಿತವೆಂದು ಗುರುತಿಸಿದ್ದಾರೆ. ಮತ್ತು ಈಕೆ ರೇವಣಸಿದ್ಧಯ್ಯಗಳ ಪತ್ನಿ ಎಂದು ಹೇಳಿದ್ದಾರೆ. ಕವಿ ಚರಿತ್ರೆಕಾರರು ಈಕೆ ರೇವಣಸಿದ್ಧಯ್ಯನ ಹೆಂಡತಿ ಎಂದು ಹೇಳಿ, ಅಂಕಿತ ಸರಿಯಾಗಿ ಗುರುತಿಸಿ, ಈಕೆಯ ಕಾಲ ಸುಮಾರು ೧೫೦೦ ಎಂದು ಹೇಳಿದ್ದಾರೆ.[46] ಇದಕ್ಕೆ ಏನು ಆಧಾರವೋ ತಿಳಿಯದು.

ಇನ್ನುಳಿದ ಮೂವರ ವಚನಗಳು ಮುಕ್ತ ಕಂಠಾಭರಣದಲ್ಲಿ ಮಾತ್ರ ದೊರಕುತ್ತವೆ. ಅವುಗಳನ್ನು ಚೆನ್ನಮಲ್ಲಿಕಾರ್ಜುನರು ತಾವು ಸಂಪಾದಿಸಿದ ಸಕಲ ಪುರಾತನರ ವಚನದಲ್ಲಿ ಸೇರಿಸಿದ್ದಾರೆ. ಸಿಂಹವಿಕ್ರಮ ಚೋಳನ ಮಗಳು ಶಾಂಭವೀ ದೇವಿ, ಈಕೆಯ ಅಂಕಿತ ‘ಶಾಂಭವಿಲಿಂಗ’. ಈಕೆಯ ನಾಲ್ಕು ವಚನಗಳು ಉಪಲಬ್ಧವಿವೆ. ರಾಜೇಂದ್ರ ಚೋಳನ ಮಗಳು ಸೌಂದರೀದೇವಿ; ಈಕೆಯ ಅಂಕಿತ ‘ಶ್ರೀಗುರುಸೋಮಲಿಂಗ’. ಒಂದು ವಚನ ದೊರಕಿದೆ. ವೀರರಾಜೇಂದ್ರನ ಮಗಳು ಆಗಮಮೋಹಿನಿ; ಈಕೆಯ ಅಂಕಿತ ‘ಎನ್ನಾಗಮಮೋಹಿನಿಅಣ್ಣ’. ಒಂದು ವಚನವು ಉಪಲಬ್ಧವಿದೆ. ಶಾಂಭವೀದೇವಿಯ ವಚನದಲ್ಲಿ ಅಲ್ಲಮಪ್ರಭುವಿನ ಹೆಸರು ಮತ್ತು ಸೌಂದರೀದೇವಿಯ ವಚನಗಳಲ್ಲಿ ಅಪ್ಪಣ್ಣನ ಹೆಸರುಗಳಿವೆ.[47] ಇವರು ಬಸವಾದಿ ಪ್ರಮಥರಿಗೆ ಹಿರಿಯ ಸಮಕಾಲೀನರಾಗುವರು. ರೇಕಮ್ಮ ಮತ್ತು ಆಗಮಮೋಹಿನಿ ಇವರು ಮೊದಲೇ ಲಿಂಗೈಕ್ಯರಾದರೋ ಬಸವಣ್ಣನವರ ಕಾಲದಲ್ಲಿದ್ದರೋ ತಿಳಿಯದು.

ನಾಲ್ವರು ರೇವಣ್ಣಸಿದ್ಧರ ಹೆಂಡಂದಿರಲ್ಲಿ ಮೂವರ ತಂದೆಯರ ಹೆಸರುಗಳು ಗೊತ್ತಾಗಿವೆ : ರೇಕಮ್ಮನನ್ನು ಬಿಟ್ಟು ಈಕೆ ಬಿಜ್ಜಳನ ಮಗಳಾಗಿರಬೇಕು. ಒಂದನೆಯ ಬಿಜ್ಜಳನ ಮಗಳೇ ಆಗಿರಬೇಕು. ಆದರೆ ಇದಕ್ಕೆ ಐತಿಹಾಸಿಕ ಆಧಾರಗಳಾಗಲಿ ವಚನಗಳ ಆಧಾರಗಳಾಗಲಿ ಇಲ್ಲ.

ರುದ್ರಮುನಿ ಚೋಳರಾಜೇಂದ್ರನ ಪುತ್ರಿಯ ಮಗನೆಂದು ಹರಿಹರನ ಹೇಳಿಕೆ.[48] ರಾಜೇಂದ್ರ ಚೋಳನ ಮಗಳು ಸೌಂದರೀದೇವಿ ಎಂಬುದು ಮುಕ್ತಿಕಂಠಾಭರಣದಿಂದ ತಿಳಿಯುತ್ತದೆ.[49] ಸೌಂದರಿಯ ಗರ್ಭದಿಂದ ರುದ್ರಮುನಿ ಹುಟ್ಟಿದನೆಂದು ಸಿದ್ಧನಂಜೇಶನ ಅಭಿಪ್ರಾಯ.[50]

ಮೇಲಿನ ವಿವೇಚನೆಯಿಂದ ರೇವಣ್ಣಸಿದ್ಧ ೧೦೫೦ ರಿಂದ ೧೧೩೦ರ ವರೆಗೆ ಜೀವಿಸಿದ್ದನೆಂದು ನಂಬಲಡ್ಡಿಯಿಲ್ಲ. ನಮಗೆನಿಸುವ ಮಟ್ಟಿಗೆ ಪಂಚಾಚಾರ್ಯ ರೇವಣಸಿದ್ಧ ಮತ್ತು ಹರಿಹರ ವರ್ಣಿಸುವ ರೇವಣ್ಣಸಿದ್ಧ ಇಬ್ಬರೂ ಒಂದೇ. ಪುರಾಣ ಕಲ್ಪನೆಯಂತೆ ಆತನ ಹುಟ್ಟನ್ನು ಲಿಂಗೋದ್ಭವ ಎಂದು ವರ್ಣಿಸಿದೆ: ಆತ ಮೊದಲು ಶೈವನಾಗಿದ್ದು ಆ ಬಳಿಕ ವೀರಶೈವಕ್ಕೆ ವಾಲಿರುವ ಸಾಧ್ಯತೆಯಿದೆ. ವೀರಶೈವ ತತ್ತ್ವದಂತೆ ಆತ ಮದುವೆಯಾಗಿ ಸಂಸಾರ ಮಾಡಿ ಮಗನನ್ನು ಪಡೆದ. ಕಲ್ಯಾಣದ ಶರಣ ಮಹಾ ಆಂದೋಲನಕ್ಕೆ ಮುಂಬೆಳಕಾಗಿ, ಆ ಮಹಾ ಆಂದೋಲನದಲ್ಲಿ ಭಾಗವಹಿಸಲು ರುದ್ರಮುನಿ ಮತ್ತು ಕಲ್ಲಯ್ಯನಂಥ ಶರಣಶ್ರೇಷ್ಠರನ್ನು ನಿರ್ಮಿಸಿದ. ಮುಂಬಂದ ಪುರಾಣಕಾರರು ಆತನನ್ನು ಪವಾಡ ಪುರುಷನನ್ನಾಗಿ ಮಾಡಿ ಆತನ ಸುತ್ತ ನಂಬಲಾರದಂತಹ ಸಂಗತಿಗಳನ್ನು ಹೆಣೆದರೆಂದು ಕಾಣುತ್ತದೆ.

ರೇವಣಸಿದ್ಧರ ಭಕ್ತೆಯಾಗಿ, ಸಿದ್ಧರಾಮನಿಗೆ ಲಿಂಗಮುದ್ರೆಯ ಭೂಮಿಯನ್ನು ಕೊಟ್ಟ ಚಾಮಲೆ, ಸೊನ್ನಲಾಪುರದಲ್ಲಿ ಆಳುತ್ತಿದ್ದ ಅನಂತಪಾಲನೆಂಬ ರಾಜನ ಸತಿ.[51] ಈಕೆಯ ಹೆಸರು ಗಣಸಹಸ್ರದಲ್ಲಿ ಬಂದಿದೆ. ಮಹಾಶರಣೆಯಾದ ಈಕೆ ಬಸವಪೂರ್ವ ಮತ್ತು ಬಸವಯುಗ ಎರಡರಲ್ಲಿಯೂ ಇದ್ದವಳು.

[1] ಡಾ|| ಎಂ.ಎಸ್. ಸುಂಕಾಪುರ: ಸಕಲ ಪುರಾತನರ ವಚನಗಳು ಭಾಗ , ಪುಟ ೨೦೬.

[2] ಡಾ|| ಫ.ಗು. ಹಳಕಟ್ಟಿ : ವಚನ ಶಾಸ್ತ್ರಸಾರ ಭಾಗ , ಪುಟ ೬೦೩.

[3] ಅದೇ ಪುಟ ೨೩.

[4] ಡಾ|| ಫ.ಗು. ಹಳಕಟ್ಟಿ : ಶಿವಶರಣರ ಚರಿತೆಗಳು ಭಾಗ , ಪುಟ ೨೦-೨೩. ಪ್ರಥಮ ಮುದ್ರಣ ೧೯೪೪.

[5] ಅದೇ ಪುಟ ೨೩.

[6] ಅದೇ ಪುಟ ೨೩-೨೪.

[7] ಡಾ|| ಆರ್.ಸಿ.ಹಿರೇಮಠ ಮತ್ತು ಡಾ|| ಎಂ.ಎಸ್. ಸುಂಕಾಪುರ : ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರ ರತ್ನಾಕರ ಭಾಗ, ಪುಟ ೨೩೯.

[8] ಡಾ|| ಎಲ್.ಬಸವರಾಜು : ಶಿವದಾಸಗೀತಾಂಜಲಿ, ಪುಟ ೩೧೯.

[9] ಡಾ|| ಎಂ.ಎಸ್. ಸುಂಕಾಪುರ : ಹರಿಹರನ ಶಿವಭಕ್ತಿ ಮಹಿಮಾ ರಗಳೆಗಳು, ಪುಟ ೨೧೧.

[10] ಡಾ|| ಆರ್.ಸಿ. ಹಿರೇಮಠ ಮತ್ತು ಡಾ|| ಎಂ.ಎಸ್. ಸುಂಕಾಪುರ : ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರ ರತ್ನಾಕರ ಭಾಗ, ಪುಟ ೨೫೪.

[11] ಡಾ|| ಫ.ಗು.ಹಳಕಟ್ಟಿ : ಶಿವಶರಣರ ಚರಿತ್ರೆಗಳು ಭಾಗ , ಪುಟ ೧೪೯-೧೫೦.

[12] ಆರ್.ನರಸಿಂಹಚಾರ್ : ಕವಿಚರಿತೆ ಸಂಪುಟ , ಪುಟ ೨೨೬. ಪರಿಶೋಧಿತ ಮುದ್ರಣ ೧೯೬೧

[13] ಆರ್.ಸಿ.ಹಿರೇಮಠ : ಶಿವಶರಣೆಯರ ವಚನಗಳು (ಸಮಗ್ರ ಸಂಪುಟ), ಪುಟ ೩೭೮, ವಚನ ೧೮೭.

[14] ಶಾಸನಗಳಲ್ಲಿ ಶಿವಶರಣರು, ಪುಟ ೩೩, (ದ್ವಿತೀಯ ಆವೃತ್ತಿ ೧೯೭೮).

[15] ಡಾ|| ಫ.ಗು.ಹಳಕಟ್ಟಿ : ಶಿವಶರಣೆಯರ ಚರಿತ್ರೆಗಳು, ಪುಟ ೧೬.

[16] ಡಾ|| ಫ.ಗು.ಹಳಕಟ್ಟಿ : ಶಿವಶರಣರ ಚರಿತ್ರೆಗಳು, ಭಾಗ ೧, ಪುಟ ೧೧.

[17] ಡಾ|| ಎಂ.ಎಸ್.ಸುಂಕಾಪುರ: ಹರಿಹರನ ನೂತನ ಪುರಾತನ ರಗಳೆಗಳು, ಪುಟ ೪೦೪-೪೨೧.

[18] ಡಾ|| ಆರ್.ಸಿ.ಹಿರೇಮಠ ಮತ್ತು ಡಾ|| ಎಂ.ಎಸ್. ಸುಂಕಾಪುರ : ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರ ರತ್ನಾಕರ ಭಾಗ, ಪುಟ ೪೪೮.

[19] ಡಾ|| ಫ.ಗು.ಹಳಕಟ್ಟಿ : ವಚನ ಶಾಸ್ತ್ರಸಾರ ಭಾಗ , ಪುಟ ೬೦೮.

[20] ಡಾ|| ಎಂ.ಎಸ್.ಸುಂಕಾಪುರ : ಹರಿಹರನ ನೂತನ ಪುರಾತನ ರಗಳೆಗಳು, ಪುಟ ೩೦೩.

[21] ಡಾ|| ಫ.ಗು.ಹಳಕಟ್ಟಿ : ಶಿವಶರಣರ ಚರಿತ್ರೆಗಳು ಭಾಗ , ಪುಟ ೨೫೬.

[22] ಡಾ|| ಎಂ.ಎಂ.ಕಲಬುರ್ಗಿ : ಶಾಸನಗಳಲ್ಲಿ ಶಿವಶರಣರು, ಪುಟ ೩೨. ದ್ವಿತೀಯ ಆವೃತ್ತಿ ೧೯೭೮.

[23] ಸಕಲ ಪುರಾತನರ ವಚನಗಳು ಭಾಗ , ಪುಟ ೧೨೮ (ಕ.ವಿ.ವಿ. ಪ್ರಕಟಣೆ).

[24] ಅದೇ ಪುಟ ೧೩೫.

[25] ಡಾ|| ಫ.ಗು.ಹಳಕಟ್ಟಿ : ಶಿವಶರಣರ ಚರಿತ್ರೆಗಳು ಭಾಗ , ಪುಟ ೨೫೬, ಅಡಿ ಟಿಪ್ಪಣಿ.

[26] ಡಾ|| ಎಲ್. ಬಸವರಾಜು ; ಶಿವದಾಸಗೀತಾಂಜಲಿ, ಪುಟ ೩೩೭.

[27] ಶಿವಶರಣರ ಚರಿತ್ರೆಗಳು ಭಾಗ , ಪುಟ ೨೫೧.

[28] ಡಾ|| ಎಂ.ಎಸ್. ಸುಂಕಾಪುರ : ಹರಿಹರನ ನೂತನ ಪುರಾತನ ರಗಳೆಗಳು, ಪುಟ ೩೬೮.

[29] ಶಿವಶರಣರ ಚರಿತ್ರೆಗಳು ಭಾಗ , ಪುಟ ೨೭೨.

[30] ಡಾ|| ಆರ್.ಸಿ. ಹಿರೇಮಠ ಮತ್ತು ಡಾ|| ಎಂ.ಎಸ್.ಸುಂಕಾಪುರ : ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರ ರತ್ನಾಕರ ಭಾಗ, ಪುಟ ೧೮೮.

[31] ಶಿವಶರಣರ ಚರಿತ್ರೆಗಳು ಭಾಗ , ಪುಟ ೧೪೯

[32] ಡಾ|| ಆರ್.ಸಿ.ಹಿರೇಮಠ ಮತ್ತು ಡಾ|| ಎಂ.ಎಸ್. ಸುಂಕಾಪುರ : ಭೈರವೇಶ್ಚರ ಕಾವ್ಯದ ಕಥಾಮಣಿಸೂತ್ರ ರತ್ನಾಕರ ಭಾಗ, ಪುಟ ೨೭೫-೭೬.

[33] ಡಾ|| ಫ.ಗು. ಹಳಕಟ್ಟಿ : ಶಿವಶರಣರ ಚರಿತ್ರೆಗಳು ಭಾಗ , ಪುಟ ೩೫-೩೭.

[34] ಅದೇ ಪುಟ ೨೯-೩೦.

[35] ಡಾ|| ಆರ್.ಸಿ.ಹಿರೇಮಠ : ಪದ್ಮರಾಜಪುರಾಣ, ಸಂಧಿ ೨.

[36] ಡಾ|| ಆರ್.ಸಿ.ಹಿರೇಮಠ : ಬಸವಪುರಾಣ, ಸಂಧಿ ೨.

[37] “ಈತನು ಬಸವೇಶ್ವರನಿಗಿಂತ ಪ್ರಾಚೀನನೆಂದು ತೋರುತ್ತದೆ. ಬಸವೇಶ್ವರನು ಬದನೇಕಾಯಿ ಲಿಂಗವಾದ ಪವಾಡವನ್ನು ಮೆರೆದನೆಂಬ ಸಂದರ್ಭದಲ್ಲಿ ಪಾಲ್ಕುರಿಕೆ ಸೋಮನಾಥನು ಅದಕ್ಕೆ ಅದಕ್ಕೆ ಹಿಂದೆ ಆದ ಕೆಲವು ಶರಣರ ಕಥೆಗಳನ್ನು ಹೇಳುತ್ತ ಬಳ್ಳೇಶಮಲ್ಲಯ್ಯನ ಶ್ರದ್ಧಾಭಕ್ತಿಯಿಂದ ಉಳ್ಳವು ಲಿಂಗವಾದ ಪೂರ್ವಕಥೆಯನ್ನು ಕಲ್ಯಾಣದ ಜನರು ಸ್ಮರಿಸಿಕೊಂಡು ಕಿವಿಯಲ್ಲಿ ಕೇಳಿದುದನ್ನು ಕಣ್ಣಾರೆ ಕಂಡಂತಾಯಿತೆಂದರೆಂಬಂತೆ (ತೆ.ಬು.ಪುಟ ೯೭-೯೮) ಬರೆದಿರುವನು. (ಡಾ|| ಎಲ್. ಬಸವರಾಜು : ಶಿವದಾಸ ಗೀತಾಂಜಲಿ, ಪುಟ ೩೨೯)

[38] ಡಾ|| ಎಂ. ಎಂ. ಕಲಬುರ್ಗಿ : ಶಾಸನಗಳಲ್ಲಿ ಶಿವಶರಣರು, ಪುಟ ೪೮, ದ್ವಿತೀಯ ಆವೃತ್ತಿ

[39] ಅದೇ ಪುಟ ೫೦

[40] South Indian Inscriptions (S.I.I) vol xx No 37.

[41] Annual Report On south indian epigraphy (A.R.S.I) 1937-38, Bombay Karnataka Collect (B.K.) No 21.

[42] Dr. P.B.Desai : Basaveshwara And His Times Page 26-27.

[43] ಡಾ|| ಎಂ.ಎಸ್. ಸುಂಕಾಪುರ : ಹರಿಹರನ ನೂತನ ಪುರಾತನರ ರಗಳೆಗಳು, ರೇವಣಸಿದ್ದೇಶ್ವರ ರಗಳೆ, ಪುಟ ೧೫೩-೧೭೯.

[44] ವಚನಶಾಸ್ತ್ರಸಾರ ಭಾಗ , ಪುಟ ೬೦೭.

[45] ಶಿವದಾಸ ಗೀತಾಂಜಲಿ, ಪುಟ ೩೫೫.

[46] ಆರ್. ನರಸಿಂಹಾಚಾರ್ : ಕವಿಚರಿತೆ, ಸಂಪುಟ ೩, ಪುಟ ೩೫೬.

[47] ಚೆನ್ನಮಲ್ಲಿಕಾರ್ಜುನ : ಸಕಲಪುರಾತನರ ವಚನ, ಪುಟ ೧೯೩.

[48] ಡಾ|| ಎಂ.ಎಸ್. ಸುಂಕಾಪುರ : ಹರಿಹರನ ನೂತನ ಪುರಾತನರ ರಗಳೆಗಳು, ಪುಟ ೧೭.

[49] ಚೆನ್ನಮಲ್ಲಿಕಾರ್ಜುನ : ಸಕಲಪುರಾತನರ ವಚನ, ಪುಟ ೧೯೩.

[50] ಸಂ.ಶಿ. ಭೂಸನೂರು ಮಠ : ಗುರುರಾಜ ಚಾರಿತ್ರ, ಸಂಧಿ ೨, ಪದ್ಯ ೯.

[51] ಡಾ|| ಆರ್.ಸಿ. ಹಿರೇಮಠ ಮತ್ತು ಡಾ|| ಎಂ.ಎಸ್. ಸುಂಕಾಪುರ : ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರ ರತ್ನಾಕರ ಭಾಗ, ಪುಟ ೧೪೯ ಮತ್ತು ೨೩೭.