ಎಲ್ಲವೂ ಬಸವಣ್ಣನವರ ಕಾಲದಲ್ಲಿಯೇ ಆಯಿತು ಎಂಬ ಒಂದು ಕುರುಹು ನಂಬಿಗೆಯಿದೆ. ಮೂವತ್ತೊಂಬತ್ತು ಜನ ಶರಣರ ಜೀವನ ಮತ್ತು ಕಾಲವನ್ನು ಕುರಿತು ನಡೆಸಿದ ವಿವೇಚನೆಯಿಂದ ಈ ನಂಬಿಗೆ ನಿಜಕ್ಕೂ ಕುರುಡು ಎಂಬುದು ಸಿದ್ಧವಾಗುತ್ತದೆ. ಬಸವಯುಗದಲ್ಲಿ ನಡೆದ ಧಾರ್ಮಿಕ, ಸಾಮಾಜಿಕ, ಸಾಹಿತ್ಯಿಕ ಮುಂತಾದ ಕ್ರಾಂತಿಗಳ ಮೂಲವನ್ನು ಬಸವಪೂರ್ವ ಯುಗದಲ್ಲಿ ಸ್ಪಷ್ಟವಾಗಿಜ ಕಾಣಬಹುದಾಗಿದೆ, ಶೋಷಣೆಗೆ, ಒಳಗಾಗಿ ಅರ್ಥಕಳೆದುಕೊಂಡ ಮೌಲ್ಯಗಳೊಂದಿಗೆ ನಿರ್ಜೀವವಾಗಿ ಬದುಕಿದ ಜನತೆಗೆ ಒಂದು ಹೊಸಹುಟ್ಟನ್ನು ನೀಡಲು ಶರಣರು ಸಾರ್ವತ್ರಿಕವಾದ ಕ್ರಾಂತಿಯನ್ನು ಕೈಕೊಂಡುದು ಐತಿಹಾಸಿಕ ಸತ್ಯ. ಸಮಗ್ರಕ್ರಾಂತಿಯ ಹೊಳಹು ಇಲ್ಲಿ ಕಂಡುಬರುತ್ತದೆ. ದಕ್ಷಿಣಭಾರತದ ಬಹುಭಾಗದಲ್ಲಿ ಹರಡಿದ್ದ ಈ ಶರಣರು ಸಾಮೂಹಿಕವಾಗಿ ಒಂದು ಸ್ಥಳದಲ್ಲಿ ನಿಂತು (ಬಸವಯುಗದಂತೆ) ಕಾರ್ಯಪ್ರವೃತ್ತರಾಗದಿದ್ದರೂ ಅಲ್ಲಲ್ಲಿ ಕೆಲವರು ಕೂಡಿ ಕೆಲಸಮಾಡಿದ್ದು ಉಂಟು. ಆದರೆ ಒಬ್ಬೊಬ್ಬರೇ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಮೂಹಿಕವಾಗಿ ಮಾಡುವ ಕೆಲಸವನ್ನೇ ಸಮರ್ಥವಾಗಿ ಮಾಡಿದ್ದನ್ನು ಅರಿತಾಗ ಆಶ್ಚರ್ಯವಾಗದಿರದು. ವಿಶೇಷವೆಂದರೆ ಇವರೆಲ್ಲರ ಧ್ಯೇಯ ಒಂದೆಯಾಗಿತ್ತು; ಧೋರಣೆ ಒಂದೆಯಾಗಿತ್ತು. ಎಲ್ಲರೂ ಜಾತಿನಿರ್ಮೂಲನ, ವರ್ಗವರ್ಣಗಳ ವಿರೋಧಕ್ಕೆ ಕೈಹಾಕಿದ್ದಾರೆ; ಸರ್ವಸಮಾನತೆಯನ್ನು ಪ್ರತಿಪಾದಿಸಿದ್ದಾರೆ; ದುಡಿಮೆಗೆ ಬೆಲೆ ಕೊಟ್ಟಿದ್ದಾರೆ; ಶೋಷಣೆಯ ವಿರುದ್ಧ ಬಂಡೆದ್ದಿದ್ದಾರೆ; ಒಂದು ಹೊಸಸಮಾಜ ನಿರ್ಮಾಣದತ್ತ ಸಾಗಿದ್ದಾರೆ. ಇದರಂತೆಯೇ ಒಂದು ಹೊಸಧರ್ಮದ ಉದಯಕ್ಕೆ ಕಾರಣರಾಗುತ್ತಾರೆ – ಎಂದು ಹೇಳಿದರೆ ತಪ್ಪಲ್ಲವೆನಿಸುತ್ತದೆ. ಈ ಹೊಸಸಮಾಜ ಮತ್ತು ಹೊಸಧರ್ಮ ಬಸವಯುಗದಲ್ಲಿ ಪರಿಪೂರ್ಣವಾಗಿ ಅರಳಿನಿಲ್ಲುವುದಕ್ಕೆ ಇವುಗಳ ಬೇರುಗಳು ವಿಶಾಲವಾಗಿ ವ್ಯಾಪಕವಾಗಿ ಬಸವಪೂರ್ವಯುಗದಲ್ಲಿ ಹರಡಿದ್ದನ್ನೂ ನಿಚ್ಚಳವಾಗಿ ಕಾಣಬಹುದಾಗಿದೆ.[1]

ಈ ಹೊಸಹುಟ್ಟಿಗೆ ಕಾರಣರಾದವರು ಜೀವನದ ಎಲ್ಲ ರಂಗಗಳಿಂದ, ಎಲ್ಲ ವೃತ್ತಗಳಿಂದ ಬಂದವರಾಗಿದ್ದಾರೆ: ರಾಣಿ, ರಾಜ, ಮಂತ್ರಿ, ಗುರು, ಪಂಡಿತ, ಕವಿ, ಯೋಗಿ, ನೇಕಾರ, ಸಿಂಪಿಗ, ಮುಚ್ಚಿಗ, ಬೇಟೆಗಾರ, ಕಬಾಡಿಗ, ಡೋಹರ, ಜನಪದಕಲಾವಿದ (ದುರುಗಮುರುಗಿ), ಬಿದಿರಕಾಯಕದವ, ಕುಂಬಾರ, ಒಕ್ಕಲಿಗ, ತೋಟಿಗ, ಗಾಣಿಗ, ಸಂಗೀತಗಾರ, ವ್ಯಾಪಾರ, ಧೂಪದಕಾಯಕದವ(ಳು) – ಹೀಗೆ ಸರ್ವರೂ ಈ ನವನಿರ್ಮಾಣದಲ್ಲಿ ಭಾಗಿಗಳಾಗಿದ್ದಾರೆ. ಗಂಡಸರೊಂದೇ ಅಲ್ಲ ಹೆಂಗಸರೂ – ರಾಣಿಯರಿಂದ ಹಿಡಿದು ಸಾಮಾನ್ಯ ಹೆಂಗಸರವರೆಗೂ ಈ ನವನಿರ್ಮಾಣದಲ್ಲಿ ಭಾಗಿಗಳಾಗಿದ್ದುದು ವಿಶೇಷದಲ್ಲಿ ವಿಶೇಷ; ಇವರಿಗೆ ಸಾಮಾಜಿಕ, ಧಾರ್ಮಿಕ ಮುಂತಾಗಿ ಸರ್ವಬಗೆಯ ಸ್ವಾತಂತ್ರ್ಯಗಳಿದ್ದವು. ಅಷ್ಟೇ ಅಲ್ಲ ಪುರುಷರಿಗಿಂತಲೂ ಇವರು ಒಂದು ಕೈಮೇಲು ಎಂಬುದು ಕಂಡುಬರುತ್ತದೆ.

ಬಸವಪೂರ್ವಯುಗದ ಶರಣರಲ್ಲಿ ಮೊದಲ ಕವಿಯಾಗಿ ಕಾವ್ಯರಚಿಸಿದವನು ಕೊಂಡಗುಳಿಕೇಶಿರಾಜ. ಮಂತ್ರಮಹತ್ವದ ಕಂದ, ಲಿಂಗಸ್ತ್ರೋತ್ರದ ಕಂದ – ೧, ಲಿಂಗಸ್ತ್ರೋತ್ರದ ಕಂದ – ೨, ಶೀಲಮಹತ್ವದಕಂದ ಮತ್ತು ನವರತ್ನಮಾಲಾ – ಇವು ಈತನ ಕೃತಿಗಳು. ವೀರಶೈವಸಾಹಿತ್ಯಕ್ಕೂ ಇವನೇ ಮೊದಲ ಕವಿ.

ವಚನ ರಚಿಸಿದ ಶರಣರಲ್ಲಿ ಮೊದಲಿಗ ಮಾದಾರಚೆನ್ನಯ್ಯನಾಗುತ್ತಾನೆಂಬುದು ನಮ್ಮ ಅಭಿಪ್ರಾಯ. ಖಂಡಿತವಾಗಿ ಈತ ಬಸವಣ್ಣನವರ ಸಮಕಾಲೀನನಾಗಿರಲಿಲ್ಲ; ಅದಕ್ಕೆ ಯಾವ ಕಟ್ಟಿ ಆಧಾರಗಳೂ ಇಲ್ಲ. ಬಸವಣ್ಣನವರು ಕಲ್ಯಾಣಕ್ಕೆ ಬರುವ ಪೂರ್ವದಲ್ಲಿಯೇ ಈತ ಲಿಂಗೈಕ್ಯನಾಗಿರಬೇಕು. ಈತನ ವಚನಗಳ ಶೈಲಿ ನಯವಾಗಿಲ್ಲ; ಸೌಂದರ್ಯಕಡಿಮೆ. ಈ ದೃಷ್ಟಿಯಿಂದ ಚೆನ್ನಯ್ಯನ ವಚನಗಳು ಮೊದಲ ಹಂತದವೆಂದು ಹೇಳಲಡ್ಡಿಯಿಲ್ಲ. “ಆದರೆ ರೂಪಕ, ಉಪಮಾನ, ನೇರಹೇಳುವಿಕೆ, ದಿಟ್ಟನಿಲುವು, ಅತಿಸೂಕ್ಷ್ಮ ವಿಚಾರಗಳನ್ನು ಒಳಗೊಳ್ಳುವ ಭಾಷೆ – ಇವುಗಳನ್ನು ನೋಡಿದರೆ ವಚನ ರಚನೆ ಪ್ರಾರಂಭವಾಗಿ ಆಗಲೇ ಬಹಳ ಕಾಲವಾಗಿರಬೇಕು ಎನಿಸುತ್ತದೆ. ಆದರೆ ನಮಗೀಗ ದೊರಕಿದ ವಚನಗಳಲ್ಲಿ ಮಾದಾರಚೆನ್ನಯ್ಯನವೇ ಮೊದಲ ವಚನಗಳು. ಸಧ್ಯಕ್ಕೆ ಈತನೇ ಮೊದಲ ವಚನಕಾರ.”[2]

ಬಸವಣ್ಣನವರು ಅನೇಕ ಹಿಂದಿನ ವಚನಕಾರರನ್ನು ನೆನೆದು ಅವರ ವಚನಗಳನ್ನು ಅನುಕರಣ – ಅನುವಾದ ಮಾಡುತ್ತಾರೆ. ಅವರ ಮತ್ತು ಚೆನ್ನಯ್ಯನ ಒಂದೆರಡು ವಚನಗಳಲ್ಲಿ ತೀವ್ರಸಾಮ್ಯತೆ ಕಂಡುಬರುತ್ತದೆ.

ಸಾಂಖ್ಯ ಸ್ವಪಚ, ಅಗಸ್ತ್ಯಕಬ್ಬಿಲ, ದೂರ್ವಾಸ ಮುಚ್ಚಿಗ,
ದಧೀಚಿ ಕೀಲಿಗ, ಕಸ್ಯಪ ಕಮ್ಮಾರ, ರೋಮಜ ಕಂಚುಗಾರ,
ಕೌಂಡಿಲ್ಯ ನಾವಿದನೆಂಬುದನರಿದ ಮತ್ತೆ
ಕುಲವುಂಟೆಂದು ಛಲಕ್ಕೆ ಹೋರಲೇಕೆ?
ಇಂತೀ ಸಪ್ತ ಋಷಿಯರುಗಳೆಲ್ಲರೂ
ಸತ್ಯದಿಂದ ಮುಕ್ತರಾದುದನರಿಯದೆ
ಅಸತ್ಯದಲ್ಲಿ ನಡೆದು ವಿಪ್ರರು ನಾವು ಘನವೆಂದು
ಹೋರುವ ಹೊತ್ತು ಹೋಕರ ಮಾತೇತಕ್ಕೆ?
ಕೈಯುಳಿಕತ್ತಿ ಅಡಿಗುಂಟಕ್ಕಡಿಯಾಗಬೇಡ
ಅರಿನಿಜಾತ್ಮರಾಮ ರಾಮನ
 – (ಮಾದಾರ ಚೆನ್ನಯ್ಯ)

“ವ್ಯಾಸಬೋಯಿತಿಯಮಗ, ಮಾರ್ಕಂಡೇಯ ಮಾತಂಗಿಯಮಗ,
ಮಂಡೋದರಿ ಕಪ್ಪೆಯ ಮಗಳು!
ಕುಲವನರಸದಿಂಭೋ, ಕುಲದಿಂದ ಮುನ್ನೇನಾದಿರಿಂ ಭೋ!
ಸಾಕ್ಷಾತ್ ಅಗಸ್ತ್ಯ ಕಬ್ಬಿಲ, ದೂರ್ವಾಸ ಮುಚ್ಚಿಗ, ಕಸ್ಯಪ ಕಮ್ಮಾರ,
ಕೌಂಡಿನ್ಯನೆಂಬ ಋಷಿ ಮೂರುಭುವನವರಿಯೇ ಸಾವಿದ ಕಾಣಿಬೋ
ನಮ್ಮ ಕೂಡಲಸಂಗನ ವಚನವಿಂತೆಂದುದು:
ಸ್ವಪಚೋಪಿಯಾದಡೇನು, ಶಿವಭಕ್ತನ ಕುಲಜಂ ಭೋ:
– (ಬಸವಣ್ಣ)

ಇಲ್ಲಿ ಬಸವಣ್ಣನವರು ಚೆನ್ನಯ್ಯನಿಂದ ಪ್ರಭಾವಿತರಾದುದು ನಿಜ. “ಆದರೆ ಯಾರಿಂದ ಯಾರು ಪ್ರಭಾವಿತರು ಎಂಬುದನ್ನು ನಿರ್ಣಯಿಸುವುದು ಅಷ್ಟು ಸುಲಭದ ಕೆಲಸವಲ್ಲ. ಜೇಡರದಾಸಿಮಯ್ಯನ ಕಾಲ ನಿರ್ಣಯವಾಗದ ಹೊರತು ಕಕ್ಕಯ್ಯ ಮತ್ತು ಚೆನ್ನಯ್ಯರ ಕಾಲ ನಿರ್ಣಯವಾಗುವುದಿಲ್ಲ”[3] ಎಂದು ಹೇಳುತ್ತಾರೆ ಡಾ|| ಎಂ. ಚಿದಾನಂದ ಮೂರ್ತಿಯವರು. ಜೇಡರದಾಸಿಮಯ್ಯನ ಕಾಲದ ಬಗ್ಗೆ ಇದ್ದ ತೊಡಕುಗಳು ಈಗ ದೂರಾಗಿ, ಜೇಡರದಾಸಿಮಯ್ಯ ಬೇರೆ ಮತ್ತು ದೇವದಾಸಿಮಯ್ಯ ಬೇರೆ ಎಂದು ಖಚಿತವಾಗಿ ಅವರಿಬ್ಬರ ಕಾಲ ನಿರ್ಣಯವಾಗಿದೆ. ಆದುದರಿಂದ ಚೆನ್ನಯ್ಯ ಜೇಡರದಾಸಿಮಯ್ಯನಿಗಿಂತ ಹಿಂದಿನವನಾಗಿ, ಬಸವಣ್ಣನವರಿಗಿಂತ ತೀರಾ ಹಿಂದಿನವನಾಗುತ್ತಾನೆ.

ವಚನ ಸೃಷ್ಟಿಯ ಬಗ್ಗೆ ಇಲ್ಲಿ ಹೇಳಲೇಬೇಕಾಗಿದೆ; ಇದು ಬಸವಪೂರ್ವದಲ್ಲಿ ಆದುದು ನಿಜ. ಬಸವಪೂರ್ವ ಯುಗದಲ್ಲಿ ಒಟ್ಟು ೧೭ ಜನ ವಚನಕಾರರಿದ್ದಾರೆ; ಇವರಲ್ಲಿ ಐದು ಜನ ವಚನಕಾರ್ತಿಯರಿದ್ದಾರೆ. ವಚನದ ಪ್ರಾರಂಭ ಹೇಗಾಯಿತು ಎಂದು ಹೇಳುವುದು ಕಷ್ಟವಾದರೂ ಇದು ಯಾವುದರದೇ ಅನುಕರಣವಾಗಿರದ ಸ್ವತಂತ್ರ ಮೂಲವಾಗಿದೆ. “ಈ ವಚನವನ್ನು ಇವರು ಎಲ್ಲಿಂದಲೋ ಎರವು ತರಲಿಲ್ಲ; ತಾವು ನಿಂತ ನೆಲದ ಸತ್ವದಿಂದಲೇ ಅದನ್ನು ಸೃಷ್ಟಿಸಿದರು…… ಹಿಂದಿನ ಯಾವ ಸಾಹಿತ್ಯ ಪ್ರಕಾರದಿಂದಲೂ – ತ್ರಿಪದಿ, ಚಂಪೂ, ಗದ್ಯ, ಒಡಬು, ಕಾರ್ನಿಕ, ಅಪ್ಪಣೆ ಬಿರುದಾವಳಿ ಮುಂತಾದವು – ಅವರು ಪ್ರಭಾವಿತರಾಗಿಲ್ಲ; ಸ್ಫೂರ್ತಿ ಪಡೆದಿಲ್ಲ; ಅವುಗಳನ್ನೇ ಸುಧಾರಿಸಿ ಬಳಸಿಲ್ಲ. ಇವೆಲ್ಲ ಅವರ ವಚನಗಳಲ್ಲಿ ಹುಡುಗಿ ತೆಗೆಯುವ ಜಾಣತನದ ಪ್ರದರ್ಶನ ಈಗ ನಡೆದಿದೆಯೆಂದು ನಮಗೆನಿಸುತ್ತದೆ. ಅವರು ಆಡು ನುಡಿಯನ್ನು ಬಳಸಿ ಹೊಸತನ್ನೇ ಮಾಡಿದರು. ವಚನಕ್ಕೆ ಸೂಳ್ನುಡಿ ಎಂದುದರ ಔಚಿತ್ಯವನ್ನರಿಯಬೇಕು. ವಚನ ಎಂಬ ಹೆಸರು ಆಮೇಲೆ ಬಂದುದು. ಸೂಳ್ನುಡಿಯೆಂದರೆ ಸರದಿಯಂತೆ ನುಡಿಯುವುದು. ಅನುಭಾವಿಗಳು ಕುಳಿತು ಮಾಡಿದ ಸಂಭಾಷಣೆ ಅವು ಸಹಜ ಮಾತುಗಳು. ಸಹಜತೆಯೇ ಕಲಾತ್ಮಕತೆಯಾಗಿ ಅಭಿವ್ಯಕ್ತಿ ಮೋಹಕವಾಗುತ್ತಿತ್ತು; ಹೃದ್ಯವಾಗುತ್ತಿತ್ತು. ಒಣ ವೇದಾಂತವಲ್ಲದ ಕಾರಣ ಓಜಸ್ಸು, ಕಾಂತಿ, ಮಾಧುರ್ಯ, ಮಾರ್ದವ ಆಡು ನುಡಿಗಳಲ್ಲಿ ಒಡ ಮೂಡುತ್ತಿದ್ದುವು. ಮುದ್ರಿಕೆ ಪಡೆದು ಸೂಳ್ನುಡಿ (ವಚನ)ಗಳಾಗುತ್ತಿದ್ದವು,. ಲಯ ಬದ್ಧವಾಗಿರುವ ಕಾರಣ ಹಾಡಲು ಬರುತ್ತಿರಬೇಕೆಂದು ತೋರುತ್ತದೆ. ಮುಂದೆ ಇವುಗಳಿಗೆ ‘ಗೀತೆ’ ಎಂದು ಕರೆಯುವ ರೂಢಿಯುಂಟಾಗಿರಬೇಕು.[4]

ಬಸವಣ್ಣನವರ ಕಾಲದ ಅನುಭವ ಮಂಟಪದ ಬೇರುಗಳು ಬಸವಪೂರ್ವ ಯುಗದಲ್ಲಿ ಬಿಟ್ಟಿವೆ ಎಂಬುದಕ್ಕೆ ‘ಸೂಳ್ನುಡಿ’ ಎಂಬ ಪದ ಬಳಕೆಯಲ್ಲಿದ್ದುದೇ ಸಾಕ್ಷಿ. ಅನುಭವ ಮಂಟಪವೆಂಬುದು ಒಂದು ಕಲ್ಲಿನ ಮಂಟಪವಲ್ಲ. ಇಬ್ಬರಿಂದ ಹಿಡಿದು ಅನೇಕ ಜನ ಶರಣರು ಕೂಡಿ ನಡೆಸಿದ ಅನುಭಾವ ಗೋಷ್ಠಿ – ಅದು ಎಲ್ಲಿಯೇ ನಡೆಯಲಿ – ಅನುಭವ ಮಂಟಪವೆನಿಸುತ್ತದೆ. “ಅನುಭಾವ ಉಳ್ಳವರ ಕಂಡು ತುರ್ಯ ಸಂಭಾಷಣೆಯ ಬೆಸಗೊಳ್ಳದಿದ್ದರೆ ನರಕದಲ್ಲಿಕ್ಕಯ್ಯ ರಾಮನಾಥ” ಎಂಬ ಜೇಡರದಾಸಿಮಯ್ಯನ ವಚನ ಅನುಭಾವ ಗೋಷ್ಠಿಗಳು ನಡೆಯುತ್ತಿದ್ದುವೆಂಬುದಕ್ಕೆ ಸಾಕ್ಷಿಯಾಗಿದೆ. ಅಲ್ಲದೆ, ಶಂಕದಾಸಿಮಯ್ಯ ಮತ್ತು ಜೇಡರದಾಸಿಮಯ್ಯ ಮುದನೂರಿನಲ್ಲಿ, ಕೊಂಡುಗಳಿ ಕೇಶಿರಾಜ ಮತ್ತು ತೆಲುಗು ಜೊಮ್ಮಯ್ಯ ಕಲ್ಯಾಣದ ಉಪನಗರದಲ್ಲಿ ಮತ್ತು ಶಿವಪುರದ ವಂಶವರ್ಧನನ ಮನೆಯಲ್ಲಿ ಕೊಂಡಗುಳಿ ಕೇಶಿರಾಜ ಮತ್ತು ಇತರ ನೂರಾರು ಶರಣರು ಅನುಭಾವ ಗೋಷ್ಠಿಗಳನ್ನು ನಡೆಸಿದ್ದು ನಮಗೆ ಹರಿಹರನ ರಗಳೆಗಳಿಂದ ತಿಳಿದು ಬಂದಿದೆ. ಇದೇ ರೀತಿಯಾಗಿ ಈ ವಚನಕಾರರು ಜನರೊಡನೆ ಬೆರೆತು, ಆತ್ಮೀಯರಾಗಿ ಅವರೊಡನೆ ಇಂಥ ಗೋಷ್ಠಿಗಳನ್ನು ನಡೆಸುತ್ತಿದ್ದರೆಂದು ನಂಬಬಹುದು. ಇದು ಅಲ್ಲದೇ ನವಿಲೆ, ಮುದನೂರು, ಕೊಂಡಗುಳಿ, ಕೆಂಭಾವಿ – ಇವೆಲ್ಲ ಸ್ಥಳಗಳು ಬಹಳ ದೂರ ಇರದುದರಿಂದ ಈ ವಚನಕಾರರು ಸಮಕಾಲೀನರಾದುದರಿಂದ ಅವರು ಒಮ್ಮೆಯಾದರೂ ಒತ್ತಟ್ಟಿಗೆ ಕೂಡಿ ಅನುಭಾವ ಗೋಷ್ಠಿ ನಡೆಸಿರಬೇಕು ಎಂದು ಊಹಿಸಲವಕಾಶವಿದೆ.

ಬಸವಪೂರ್ವ ಯುಗದ ಶರಣ ಧರ್ಮದ ಲಕ್ಷಣಗಳನ್ನು ಹರಿಹರಾದಿ ಕವಿಗಳ ಕಾವ್ಯಗಳಲ್ಲಿ ಮತ್ತು ಶರಣರು ಬರೆದ ಕಾವ್ಯ ಮತ್ತು ವಚನಗಳಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಈ ಕೆಲಸವನ್ನು ಡಾ|| ಎಂ. ಚಿದಾನಂದಮೂರ್ತಿಯವರು ಮತ್ತ ಡಾ|| ಎಂ.ಎಂ. ಕಲಬುರ್ಗಿಯವರು ಮಾಡಿದ್ದಾರೆ.[5] ಕೆಲವು ಲಕ್ಷಣಗಳು ಇವು:

ಯಾವ ಜಾತಿಯವರಿದ್ದರೂ, ಯಾವ ವೃತ್ತಿಯವರಿದ್ದರೂ, ಲಿಂಗದೀಕ್ಷೆಯನ್ನು ಪಡೆಯವಲಕಾಶವಿತ್ತು.

ಶಿವನೊಬ್ಬನೇ ದೇವರು – ಎಂಬುದು ಅವರ ಬಲವಾದ ನಂಬುಗೆ. ಕ್ಷುದ್ರದೇವತೆಗಳನ್ನು ಮನ್ನಿಸುತ್ತಿರಲಿಲ್ಲ; ಅಲ್ಲದೆ ಅವುಗಳ ನಾಶಕ್ಕೂ ಕೈಹಾಕಿದ್ದುಂಟು.

ರಾಜರನ್ನು ಲೆಕ್ಕಿಸದೆ ಶಿವಭಕ್ತಿಯನ್ನು ಮೆರೆಯುತ್ತಿದ್ದರು. ರಾಜರನ್ನು ಧೈರ್ಯವಾಗಿ ಎದುರಿಸುತ್ತಿದ್ದರು. ಶಿವ ದ್ರೋಹವಾದರೆ ಹಿಂಸೆಗೂ ಇಳಿದದ್ದುಂಟು (ತೆಲುಗು ಜೊಮ್ಮಯ್ಯನ ಚರಿತ್ರೆ).

ಕುಲನೋಡದೆ ಗುಣನೋಡುತ್ತಿದ್ದರು; ರಾಜನಿಗೆ ಹೆದರದೆ ಹೊಲೆಯನನ್ನು ಮನೆಹೊಗಿಸಿ ಭೋಗಣ್ಣ ಊರನ್ನು ತೊರೆದುಹೋದ.

ಭಕ್ತರಲ್ಲಿ ಸರ್ವಸಮಾನತೆಯಿತ್ತು; ವರ್ಣ ಪುರಸ್ಕರಿಸುವ ಮತ್ತು ಕರ್ಮಪ್ರಧಾನವಾದ ವೈದಿಕಮತವನ್ನು ಎಲ್ಲರೂ ವಿರೋಧಿಸಿದರು. ಕುಲಜಾತಿಗಳ ಭೇದವಾಗಲೀ, ಕಾಯಕದಲ್ಲಿ ಮೇಲು – ಕೀಳಾಗಲೀ ಅವರಲ್ಲಿ ಇರಲಿಲ್ಲ.

ಶಿವಭಕ್ತರಲ್ಲಿ ಮಾಂಸಾಹಾರಿಗಳಿದ್ದರು; ತೆಲುಗುಜೊಮ್ಮಯ್ಯ ಇದಕ್ಕೆ ಉದಾಹರಣೆಯಾಗಿ ನಿಲ್ಲುತ್ತಾನೆ.

ಸ್ಥಾವರಲಿಂಗ ಮತ್ತು ಇಷ್ಟಲಿಂಗ ಎರಡರ ಪೂಜೆಯೂ ಇತ್ತು; ಒಬ್ಬ ಭಕ್ತ ಎರಡನ್ನೂ ಮಾಡುತ್ತಿದ್ದ; ಇಷ್ಟಲಿಂಗವನ್ನು ಅಂಗೈಯಲ್ಲಿಟ್ಟು ಪೂಜಿಸುವುದು ಮತ್ತು ಪೀಠದಲ್ಲಿಟ್ಟು ಪೂಜಿಸುವುದು – ಎರಡೂ ರೂಢಿಯಲ್ಲಿದ್ದವು.

ಇಷ್ಟಲಿಂಗವು ಕಳದುಹೋದರೆ ಪ್ರಾಣಕಳೆದುಕೊಳ್ಳುವ ಪದ್ಧತಿಯಿತ್ತು.

ಶಿವಭಕ್ತರು ಸೇರಿ ಶಿವಗೋಷ್ಠಿಗಳನ್ನು ನಡೆಸುತ್ತಿದ್ದರು. ಈ ಶಿವಭಕ್ತರಲ್ಲಿ ಸರ್ವಕಾಯಕದವರೂ ಇದ್ದರು.

ಇಷ್ಟಲ್ಲದೆ ಈ ಯುಗದ ಇನ್ನೊಂದು ಮಹತ್ವದ ಲಕ್ಷಣವೆಂದರೆ ವೈಷ್ಣವರೊಡನೆ, ಹೆಚ್ಚಾಗಿ ಜೈನರೊಡನೆ ಹೋರಾಟ; ವಾದ, ಚರ್ಚೆ, ದೇವರದಾಸಿಮಯ್ಯ ಚರ್ಚೆಯಿಂದ ಜೈನರನ್ನು ಸೋಲಿಸಿದ; ಶಂಕರದಾಸಿಮಯ್ಯ ವಿಷ್ಣು ಪ್ರತಿಮೆಯನ್ನು ಸುಟ್ಟ; ಧರ್ಮದ ಉಳಿವಿಗಾಗಿ ಉತ್ಕರ್ಷಕ್ಕಾಗಿ ವೈಜಕವ್ವೆ, ಮಾರುಡಿಗೆಯ ನಾಚಯ್ಯ, ಸಿಂಗಿದೇವ, ಕೋವೂರಬ್ರಹ್ಮಯ್ಯ, ಬಾಹೂರಬೊಮ್ಮಯ್ಯ ಮೊದಲಾದವರು ಪ್ರಾಣಗಳನ್ನು ಪಣಕ್ಕೆ ಹಚ್ಚಿ ಹೋರಾಡಿದರು.

* * *

ಶರಣಧರ್ಮಕ್ಕೆ ವೀರಶೈವ ಅಥವಾ ಲಿಂಗಾಯತ ಎಂಬ ಹೆಸರುಗಳು ಬಸವಯುಗದಲ್ಲಿ ಬಂದುವೆಂಬ ತಪ್ಪು ಅಭಿಪ್ರಾಯವಿದೆ. ಈ ಹೆಸರುಗಳು ಬಸವಪೂರ್ವಯುಗದಲ್ಲಿಯೇ ಪ್ರಚಲಿತವಾಗಿದ್ದವು. ಕೇಶಿರಾಜನ ಕಂದಗಳಲ್ಲಿ ಇವು ಸ್ಪಷ್ಟವಾಗಿ ಗೋಚರಿಸುತ್ತವೆ.

ವರ ವೀರಶೈವ ಸಿದ್ಧವ
ಪರಿಯಾಯಗಳಿಂದಲಱುದು ಗುರು ಮಹಿಮೆಗಳಂ[6]
“…………
……………………
ಅಂಗೀಕರಿಪುದು ಶೀಲವ
ಲಿಂಗಾಯತವಂತದೀಗ ಹನ್ನೊಂದನೆಯದು[7]

ಇಷ್ಟಲಿಂಗ, ಕಾಯಕ, ದಾಸೋಹ, ಪ್ರಸಾದ, ಜಂಗಮ, ಗುರು, ಭಕ್ತ, ಭವಿ, ಮಹೇಶ್ವರ, ಶೀಲ – ಮೊದಲಾದ ವೀರಶೈವ ಪಾರಿಭಾಷಿಕ ಶಬ್ಧಗಳು ಬಳಕೆಯಲ್ಲಿದ್ದುವು; ಅಲ್ಲದೆ ಇವುಗಳ ಆಚರಣೆ ಕಟ್ಟುನಿಟ್ಟಾಗಿತ್ತು.

ಕೊಂಡಗುಳಿಕೇಶಿರಾಜ, ಜೇಡರದಾಸಿಮಯ್ಯ ಮತ್ತು ಮೆರೆಮಿಂಡದೇವ ಇಷ್ಟಲಿಂಗವನ್ನು ಕುರಿತು ಸೊಗಸಾಗಿ, ಅರ್ಥಪೂರ್ಣವಾಗಿ ಮಾತನಾಡುತ್ತಾರೆ. ವೀರಶೈವಧರ್ಮಕ್ಕೆ ತಳಹದಿಯಾದ – ಶರಣರು ಮಾನವಲೋಕಕ್ಕೆ ಕೊಟ್ಟ ಮಹತ್ವದ ಕೊಡುಗೆಯಾದ – ಕಾಯಕದ ಬಗ್ಗೆಯಂತೂ ಕೇಶಿರಾಜ ಮತ್ತು ಢಕ್ಕೆಯಬೊಮ್ಮಣ್ಣ ಬಹು ಸಮರ್ಥವಾಗಿ ಹೇಳುತ್ತಾರೆ.

ಬಸವಾದಿ ಶರಣರು ಯಾವ ಅರ್ಥದಲ್ಲಿ ಕಾಯಕವನ್ನು ಬಳಸಿದರೋ ಅದೇ ಅರ್ಥ ಕೇಶಿರಾಜನಲ್ಲಿ ಕಂಡುಬರುತ್ತದೆ.

ಆವ ಕೆಲಸಗಳ ಮಾಡಲು
ದೇವನ ಮುಖಕದನು ಸವೆಸಲದು ಕರ ಲೇಸುಂ
ಆವ ಸೇವೆಗಳ ಮಾಡಲು
ದೇವನದೆಂದಂಬನಾವನದು ಕಾಯಕವುಂ[8]

ಬಸವಪೂರ್ವದ ಶರಣರು ಸಮಾಜದ ಬಗ್ಗೆ ಬಲತ್ತರವಾದ ಕಾಳಜಿಯುಳ್ಳವರಾಗಿದ್ದರು. ವರ್ಗ – ವರ್ಣರಹಿತವಾದ, ಸರ್ವಸಮಾನತೆಯುಳ್ಳ ಒಂದು ಸುಭದ್ರ ಸಮಾಜ ರಚನೆಗೆ ಅವರು ಶ್ರಮಿಸಿದರು. ಈ ಸಮಾಜದ ಚಿತ್ರ ಅವರ ಕಾವ್ಯ ಮತ್ತು ವಚನಗಳಲ್ಲಿ ಸ್ಪಷ್ಟವಾಗಿ ಮೂಡಿದೆ.

ಕುಟುಂಬಗಳೂ ವ್ಯಕ್ತಿಗಳೂ ಸಶಕ್ತವಾದರೆ ಸಮಾಜ ಸಶಕ್ತವಾಗುವುದು. ಆದುದರಿಂದ ವ್ಯಕ್ತಿಯ ಬೆಳವಣಿಗೆಗೆ ವೈಚಾರಿಕ ಸ್ವಾತಂತ್ರ್ಯವನ್ನು ಇವರು ತಂದುಕೊಟ್ಟರು. ಸಂಪ್ರದಾಯದ, ಡಂಭಾಚಾರದ ಪೊರೆಯನ್ನು ಬಿಚ್ಚಿ ಸ್ವತಂತ್ರವಾಗಿ ಉಸಿರಾಡಿಸಲು ಅನುವು ಮಾಡಿಕೊಟ್ಟರು. ವ್ಯಕ್ತಿಯ ಶೀಲದಬಗ್ಗೆ ಪ್ರಾಶಸ್ತ್ಯ ನೀಡಿದರು. ಶೀಲವೆಂದರೆ ಸದಾಚಾರ, ಅರಿತು ಬಾಳುವುದು – ಎಂದರ್ಥವೇ ಹೊರತು ಕರ್ಮಠತನದ ಕಟ್ಟಾಚಾರವಲ್ಲ. ಶೀಲವನ್ನೇ ಕುರಿತು ಕೇಶಿರಾಜ ‘ಶೀಲಮಹತ್ವದ ಕಂದ’ ಎಂಬ ಚಿಕ್ಕ ಕಾವ್ಯವನ್ನೇ ಬರೆದಿರುವನು. ಶೀಲಗಳನ್ನು ಹೇಳುವಾಗ ಕಾಯಕವನ್ನು ಹೇಳಿದ್ದು ಅತಿ ಮಹತ್ವದ್ದೆನಿಸುತ್ತದೆ. ವಚನಕಾರ್ತಿಯರಂತೂ ಹೆಚ್ಚಾಗಿ ಶೀಲವನ್ನೇ ಕುರಿತು ಹೇಳುತ್ತಾರೆ. “ಲಿಂಗಬಾಹ್ಯನ, ಆಚಾರಭ್ರಷ್ಟನ, ವ್ರತತಪ್ಪುಕನ…. ಕಂಡಡೆ ಶಕ್ತಿಯುಳ್ಳಡೆ ಸಂಹಾರವ ಮಾಡುವುದು” (ರೇಕಮ್ಮ ಶಿ.ವ.ಪುಟ ೩೮೬)[9] ಎನ್ನುತ್ತಾಳೆ ರೇಕಮ್ಮ. ‘ಹದಮಣ್ಣಲ್ಲದೆ ಮಡಕೆಯಾಗಲಾರದು. ವ್ರತಹೀನನ ಬೆರಯಲಾಗದು. ಬೆರೆದಡೆ ನರಕತಪ್ಪದು. ನಾನೊಲ್ಲೆ ಬಲ್ಲೆನಾಗಿ ಕುಂಭೇಶ್ವರಾ (ಕೇತಲದೇವಿ ಶಿ.ವ. ೩೯೭) ಎಂಬುಉದ ಕುಂಬಾರಗುಂಡಯ್ಯನ ಹೆಂಡತಿ ಕೇತಲದೇವಿಯ ಅಭಿಪ್ರಾಯ. ಕುಟುಂಬದ ಮೂಲಭೂತ ಘಟಕಗಳಾದ ಸತಿಪತಿಗಳು ಒಂದಾಗಿ ಬಾಳಲು ಕಲಿಸಿದರು. “ಸತಿಪತಿಗಳೊಂದಾದ ಭಕ್ತಿಹಿತವಪ್ಪುದು ಶಿವಂಗೆ (ಜೇ.ದಾ.ವ.೫೫).[10] “ಗಂಡಭಕ್ತನಾಗಿ ಹೆಂಡತಿ ಭವಿಯಾದಡೆ ಉಂಟ ಊಟವಿಬ್ಬರಿಗೂ ಸರಿಭಾಗ: ಸತ್ತನಾಯ ತಂದಿಟ್ಟಮೇಲೆ ಇಳುಹಿ ಒಬ್ಬರೊಪ್ಪಚ್ಚಿ ಹಂಚಿಕೊಂಡು ತಿಂದಂತೆ ಕಾಣಾ ರಾಮನಾಥ” (ಜೇ.ದಾ.ವ. ೭೦) “ದರ್ಶನತಪ್ಪುಕ ಪ್ರಥಮಪಾತಕ, ಸ್ಪರ್ಶನತಪ್ಪುಕ, ದ್ವಿತೀಯಪಾತಕ, ಗುರುತಪ್ಪುಕ ತೃತೀಯಪಾತಕ, ಪರದಾರ ಚತುರ್ಥಪಾತಕ, ಮಾಂಸಾಹಾರ ಪಂಚಮಹಾಪಾತಕ. ಈ ಐವರೊಡನೆ ನುಡಿಯಲಿಲ್ಲಯ್ಯ ರಾಮನಾಥ (ಜೇ.ದಾ.ವ. ೯೭). ಹೀಗೆ ಕುಟುಂಬವನ್ನು ವ್ಯಕ್ತಿಯನ್ನು ಶುದ್ಧೀಕರಿಸಿದರು.” “ಬರು ಸಟಗನಭಕ್ತಿ ದಿಟವೆಂದು ನಂಬಬೇಡ; ಮಠದೊಳಗಣ ಬೆಕ್ಕು ಇಲಿಯ ಕಂಡು ಪುಟನೆಗೆದಂತಾಯಿತು ರಾಮನಾಥ” (ಜೇ.ದಾ.ವ. ೫೩). “ಹರುದ ಗೋಣಿಯಲೊಬ್ಬ ಕಳವೆಯ ತುಂಬಿದ. ಇರುಳೆಲ್ಲಾ ನಡೆದನಾ ಸುಂಕಕ್ಕಂಜಿ. ಕಳವೆಯಲ್ಲಾ ಹೋಗಿ ಬರು ಗೋಣಿ ಉಳಿಯಿತ್ತು. ಅಳಿಮನದವನ ಭಕ್ತಿ ಇಂತಾಯಿತ್ತು ಕಾಣಾ ರಾಮನಾಥ” (ಜೇ.ದಾ.ವ. ೧೧೪).

“ಹಂದಿ ಶ್ರೀಗಂಧವ ಪೂಸಿದಡೇನು ಗಂಧರಾನಾಗಬಲ್ಲುದೇ? ಹೊರ ವೇಷದ ವಿಭೂತಿ ರುದ್ರಾಕ್ಷಿಯ ಪೂಸಿದಡೇನು ಭಕ್ತನಾಗಬಲ್ಲನೇ?” (ಜೇ.ದಾ.ವ. ೮೯). “ಮನಮುಟ್ಟದ ಪೂಜೆ ಮಣ್ಣಗೋಡೆಯ ತೊಳೆದು ನಿರ್ಮಲವನರಸುವಂತೆ” (ಮೆರೆತಿಮಿಂಡಯ್ಯ – ಸ.ಪು.ವ.ಭಾ.೧.ವ. ೩೬೦).[11] ಇಂಥ ಡಂಭಾಚಾರದ ಅಳಿಮನದ ಭಕ್ತಿಯನ್ನು ಹಳಿದರು, ಅಳಿಸಿದರು. ಇದೊಂದು ರೀತಿಯ ಹೀನ ಭಕ್ತಿಯಾದರೆ, ಸಮಾಜದಲ್ಲಿ ಇದಕ್ಕಿಂತ ಕೀಳುತರದ ಭಕ್ತಿಯ ಆಚರಣೆಯವರಿದ್ದರು: ಅವರು ಕೂಲಿ ಇಟ್ಟು ದೇವರನ್ನು ಪೂಜಿಸುತ್ತಿದ್ದರು. ಆ ರೂಢಿಯನ್ನವರು ಕಟುವಾಗಿ ಟೀಕಿಸಿದರು. “ಸತಿಯರ ಸಂಗವನು, ಅತಿಶಯದ ಗ್ರಾಸವನು, ಪೃಥಿವಿಗೀಶ್ವರ ಪೂಜೆಯನು ಅರಿವುಳ್ಳೊಡೆ ಹೆರರ ಕೈಯಿಂದ ಮಾಡಿಸುವರೇ ರಾಮನಾಥ?” (ಜೇ.ದಾ.ವ. ೧೧೮). ಕುಲಜಾತಿಗಳ ಮೂಲೋತ್ಪಾಟನಕ್ಕೆ ಕೈಹಾಕಿದರು. ಮಾದಾರಚೆನ್ನಯ್ಯ, ಡೋಹರಕಕ್ಕಯ್ಯ, ಕೆಂಭಾವಿಬೋಗಣ್ಣ ಇವರ ಚರಿತ್ರೆ ಕುಲಜಾತಿಗಳನ್ನು ಅಳಿಸುವ ಮಹಾಹೋರಾಟವೇ ಆಗಿದೆ. “ಕೀಳಿಂಗಲ್ಲದೆ ಹಯನಕರೆಯದು” (ಜೇ.ದಾ.ವ. ೭೯) ಎಂದು ನುಡಿದು, ಘನತೆ ಕುಲಜಾತಿಯಿಂದಲ್ಲ ಎಂಬುದನ್ನು ಮನದಟ್ಟುಮಾಡಿಕೊಟ್ಟರು. “ವೇದಶಾಸ್ತ್ರಕ್ಕೆ ಹಾರುವನಾಗಿ, ವೀರವಿತರಣಕ್ಕೆ ಕ್ಷತ್ರಿಯನಾಗಿ, ಸರ್ವವನಾರೈದು ನೋಡುವಲ್ಲಿ ವೈಶ್ಯನಾಗಿ ವ್ಯಾಪಾರದೊಳಗಾಗಿ, ಕೃಷಿಯ ಮಾಡುವುದಕ್ಕೆ ಶೂದ್ರನಾಗಿ, ಇಂತೀ ಜಾತಿಗೋತ್ರದೊಳಗಾದ ನೀಚ ಶ್ರೇಷ್ಠವೆಂಬ ಎರಡು ಕುಲವಲ್ಲದೆ ಹೊಲೆಹದಿನೆಂಟು ಜಾತಿ ಎಂಬ ಕುಲವಿಲ್ಲ. ಬ್ರಹ್ಮವನರಿದಲ್ಲಿ ಬ್ರಾಹ್ಮಣ, ಸರ್ವಜೀವಹತ್ಯಕ್ಕೊಳಗಾದಲ್ಲಿ ಸಮಗಾರ (ಮಾದಾರಚೆನ್ನಯ್ಯ ಸ.ಪು.ವ. ಭಾಗ – ೩ – ೪೩೯.)[12] “ಆವ ಕುಲವಾದಡೂ ಅರಿದಲ್ಲಿಯೇ ಪರತತ್ವಭಾವಿ, ಮರಿದಲ್ಲಿಯೇ ಮಲಮಾಯಾ ಸಂಬಂಧಿ (ಮಾ.ಚ.ಸ.ಪು.ವ.ಭಾಗ – ೩, ೪೪೦) “ಆಚಾರವೇ ಕುಲ, ಅನಾಚಾರವೇ ಹೊಲೆ (ಮಾ.ಚೆ.ಸ.ಪು.ವ.ಭಾಗ – ೩ – ೪೪೨) “ಮಡದಿಯ ಪ್ರಾಣಕ್ಕೆ ಮೊಲೆಮುಡಿ ಇದ್ದಿತ್ತೆ? ಒಡೆಯರ ಪ್ರಾಣಕ್ಕೆ ಇದ್ದಿತ್ತೆ ಯಜ್ಞೋಪವೀತ? ಕಡೆಯಲ್ಲಿದ್ದ ಅಂತ್ಯಜನು ಹಿಡಿದಿದ್ದನೇ ಪ್ರಾಣದಲ್ಲಿ ಹಿಡಿಗೋಲ?” (ಜೇ.ದಾ.ವ. – ೩) ಹೀಗೆ ಆತ್ಮೀಯವಾಗಿ ತಿಳಿವಳಿಕೆ ನೀಡಿದರು. ಹೆಣ್ಣು ಗಂಡಿನಲ್ಲಿರುವ ಅಂತರವನ್ನು ಅಳಿಸಲು ಹೋರಾಡಿದರು; ಹೆಣ್ಣುಕೀಳೆಂಬ ಭಾವವನ್ನು ಅಲ್ಲಗೆಳೆದು ಅವಳಿಗೂ ಸಾಮಾಜಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಸ್ವಾತಂತ್ರ್ಯವನ್ನು ಕೊಟ್ಟರು. “ನಿಡಿದೊಂದು ಕೋಲನು ಕಡಿದು ಎರಡುಮಾಡಿ, ಡಿಯ ಹೆಣ್ಣಮಾಡಿ, ಒಡತಣದ ಗಂಡಮಾಡಿ ನಡುವೆ ಹೊಸೆದಡೆ ಹುಟ್ಟಿದ ಕಿಚ್ಚು ಹೆಣ್ಣೋ ಗಂಡೋ ರಾಮನಾಥ” (ಜೇ.ದಾ.ವ. – ೧). “ಮೊಲೆಮುಡಿ ಬಂದಡೆ ಹೆಣ್ಣೆಂಬರು; ಮೀಸೆ ಕಾಸೆ ಬಂದಡೆ ಗಂಡೆಂಬರು. ಈ ಉಭಯದ ಜ್ಞಾನ ಹೆಣ್ಣೋ ಗಂಡೋ ನಾಸ್ತಿನಾಥ?” (ಗೊಗ್ಗವ್ವೆ. ಶಿ.ವ.ಪು. ೩೭೮ ವ. ೧೮೫) ಕೀಳು ಕುಲದವರಿಗೆ ದೀಕ್ಷೆ ಕೊಟ್ಟು ಅವರ ಮನೆಯಲ್ಲಿ ಉಣ್ಣದೆ ಪಡಿ ತರುವ ಜನರಿಂದ ಜಾತೀಯತೆ ನಿತ್ಯನೂತನವಾಗಿ ಬೆಳೆದು ಬಲಗೊಳ್ಳುತ್ತಿತ್ತು. ಅವರು ತಾವು ಕಟ್ಟಿದ ಸಮಾಜದಲ್ಲಿಯೇ ಇದ್ದರು. ಅಂಥವರನ್ನು ಕಂಡು ಛೀ ಹಾಕಿದರು: “ನರದೇಹವ ತೊಟ್ಟು ತಾ ಗುರುವೆಂದು ಇವರಿಗೆ ಇಷ್ಟ ಕೊಟ್ಟು ಅವರ ಮನೆಯಲ್ಲಿ ಒಲ್ಲದೆ ಅಕ್ಕಿ ತುಪ್ಪವನೀಸಿಕೊಂಡು ಅಟ್ಟುಕೊಂಡು ಉಂಬ ಮಿಟ್ಟಿಯ ಭಂಡರ ಕೈಯಲ್ಲಿ ಕಟ್ಟಿಸಿಕೊಂಡ ಲಿಂಗ ದೃಷ್ಟದಿ ಶ್ರವಕಾಯ. ಇದನರಿತು ಅಲ್ಲಿ ಹೊಕ್ಕು ಉಂಡವಂಗೆ ಕರಟನ ಕೈಯ ಕೀಟಕ ಆಕಾಕೂಳು. ಘಟಿತಮಯ ಐಘಟದೂರ ರಾಮೇಶ್ವಲಿಂಗವು ಅವರ ಒಲ್ಲನಾಗಿ” (ಮೆರೆತಿಮಿಂಡಯ್ಯ) – ಸ.ಪು.ವ. ಭಾಗ -೧-೩೩೬) ಸಮಾಜದ ಸ್ವಾಸ್ಥ್ಯಕ್ಕೆ ಶೀಲ ಮುಖ್ಯವೆಂದು ಸಾರಿದರು: ಗಂಡನುಳ್ಳಮ್ಮನ ಗೌರಿ ಎಂದು ಕಂಡರೆ ಭೂಮಂಡಲಕ್ಕೆ ಅರಸಾಗಿ ಹುಟ್ಟುವನಾತನು.” (ಜೇ.ದಾ.ವ. ೬೬) “ಶಿವಭಕ್ತರು ತಮ್ಮ ನಿಜಕೈಲಾಸಕ್ಕೆ ಹೋದರೆ ಅವರರಸಿಯ ಪಾರ್ವತಿ ಸರಿ ಎಂದು ಕಾಣಬೇಕು” (ಜೇ.ದಾ.ವ. ೯೧) ಸಮಾಜದ ಸುಭದ್ರತೆಗೆ, ಸುರಕ್ಷತೆಗೆ ಅರ್ಥಮುಖ್ಯ. ಅದನ್ನು ಸತ್ಯಶುದ್ಧವಾಗಿ ದುಡಿದೇ ಗಳಿಸಬೇಕು. ಎಲ್ಲ ದುಡಿಮೆಗಳು ಪವಿತ್ರವಾದವು; ಅವುಗಳಲ್ಲಿ ಮೇಲು – ಕೀಳಿಲ್ಲ. “ಆವ ಸ್ವಕಾಯಕದಿಂದಾದಡು ಆಗಲಿ ಭಾವಶುದ್ಧವಾಗಿ ಮಾಡುವುದೇ ಜಂಗಮಪೂಜೆ” (ಢಕ್ಕೆಯಬೊಮ್ಮಣ್ಣ ಸ.ಪು.ವ.ಭಾಗ -೧-೮೪೫). “ಅಸಿಯಾಗಲಿ ಕೃಷಿಯಾಗಲಿ, ವಾಚಕ, ವಾಣಿಜಮಸಿಯಾಗಲಿ, ಮಾಡುವಲ್ಲಿ ಹುಸಿಯಿಲ್ಲದಿರಬೇಕು. ಅದು ಅಸಮಾಕ್ಷನ ಬರವು, ಪಶುಪತಿ ಇರವು; ಐಘಟದೂರ ರಾಮೇಶ್ವರಲಿಂಗ ತಾನೆ. (ಮೆರತಿಮಿಂಡಯ್ಯ) ಸ.ಪು.ವ.ಭಾಗ -೧-೩೨೫) “ಮಾಡುವ ಕ್ರೀಯಲ್ಲಿ ಅರಿವು ಹೀನನಾಗಬೇಡ” (ಮೆ.ಮಿ.ಸ.ಪು.ವ.ಭಾಗ. ೧-೧-೩೯೯). ಹೀಗೆ ದುಡಿಮೆಯನ್ನು ದೈವತ್ವಕ್ಕೇರಿಸಿದರು; ಆರ್ಥಿಕ ಸ್ವಾವಲಂಬನೆಯುಂಟುಮಾಡಿದರು.

ಈ ಶರಣರು ನಡೆಯಲು ಬಾರದ ಆದರ್ಶಗಳನ್ನು ಜನರ ಮುಂದಿಡಲಿಲ್ಲ. ತಾವು ನಡೆದುದನ್ನೇ ನುಡಿದರು; ಬೋಧಿಸಿದರು. ಅವರ ಆಧ್ಯಾತ್ಮ ನಿತ್ಯವ್ಯವಹಾರದೊಂದಿಗೆ ಕೂಡಿಕೊಂಡು ಹೋಗುವಂಥದಿದ್ದುದರಿಂದ ಜನತೆಗೆ ಹಿಡಿಸಿತು. ಅರಿವು – ಆಚರಣೆ ಇವೆರಡು ಬೇರೆಯಾಗಿರದೆ ಒಂದೇಯಾಗಿರಬೇಕೆಂದು ತಿಳಿಸಿ ಜನತೆಯಲ್ಲಿ ಆ ನಡೆಯನ್ನು ತಂದುಕೊಟ್ಟರು. ಇವೆರಡು ಬೇರೆಯಾದರೆ ಅನಾಹುತ; ವ್ಯಕ್ತಿ ದ್ವಂದ್ವಮಯನಾಗಿ ಸ್ವಂತಕ್ಕೆ ಘಾತುಕನಾಗಿ, ಸಮಾಜಕ್ಕೆ ಮಹಾಘಾತುಕನಾಗುತ್ತಾನೆ. “ಮದೋನ್ಮತ್ತನಲ್ಲಿ ಶ್ರುತಿ, ಸ್ಮೃತಿ ತತ್ವ ಸರ್ವಸಾರಯುಕ್ತಿಯ ಲೇಖವಿದ್ದಡೇನು? ಕ್ರೀಶುದ್ಧತೆಯಿಲ್ಲದವನ ವಾಚಾಯುಕ್ತಿ ಮೃತ್ತಿಕೆಯ ತೆಪ್ಪವ ಮಚ್ಚಿ ಕೆಟ್ಟವನಿರವಾಯಿತ್ತು.” (ಢ.ಬೊ.ಸ.ಪು.ವ.ಭಾಗ – ೧ – ೪೨). “ಭಕ್ತಯನರಿಯಬೇಕು, ಸತ್ಯದಲ್ಲಿ ನಡೆಯಬೇಕು” (ಢ.ಬೊ.ಸ.ಪು.ವ.ಭಾಗ – ೧ – ೪೯). ಆಚಾರ – ಅರಿವು ಒಂದಾದವನ ಇರವು ಇದು: “ಕ್ರೀ ಭಾವ ಶುದ್ಧತೆ ಆದವನಿರವು ಬೆಂಕಿಕಾಷ್ಠವ ಕೂಡಿ ದ್ವಂದ್ವವಾಗಿ ಉರಿದು ಹಿಂಗಿ ನಂದಿದಂತಿರಬೇಕು.” (ಮೆ.ಮಿಂ.ಸ.ಪು.ವ.ಭಾಗ – ೧ – ೩೮೬) ಅನುಭಾವವೆಂಬುದು ಬರಿಯ ಬಾಯಿ ಮಾತಲ್ಲ, ಅದು ಮೈಗೂಡಬೇಕು. ಆಗ : “ಅಖಂಡಿತವ ಕಂಡೆನೆಂಬೆ, ಕಂಡಡೆಯಖಂಡಿಯಾಗಿ ಬ್ರಹ್ಮಾಂಡವಿರಬೇಕು” (ತೆಲುಗುಜೊಮ್ಮಯ್ಯ.ಸ.ಪು.ವ.ಭಾಘ – ೩ – ೨೪೮). ಅಂದಿನ ಜನಜೀವನದಲ್ಲಿ ನೂರಾರು ದೇವರುಗಳಿದ್ದವು; ಕ್ಷುಲ್ಲಕದೇವತೆಗಳಂತೂ ಲೆಕ್ಕವಿಲ್ಲದಷ್ಟಿದ್ದವು. ಇವು ಜನರ ವಿಚಾರಶಕ್ತಿಯನ್ನೇ ಕೆಡಿಸಿದ್ದವು. ಇವೆಲ್ಲವುಗಳನ್ನು ಹೊಡೆದು ಹಾಕಿ ಏಕದೇವೋಪಾಸನೆಯನ್ನು ಆಚರಣೆಯಲ್ಲಿ ತಂದರು. ಈ ತತ್ವವನ್ನು ಜನಜೀವನಕ್ಕೆ ಇಳಿಸುವುದರಲ್ಲಿಯೇ ಶಂಕರದಾಸಿಮಯ್ಯನ ಜೀವನ ಸಾರ್ಥಕಗೊಂಡಿತು.

ಸಾಹಿತ್ಯ ಸೃಷ್ಟಿಯ ಉದ್ದೇಶವಿಟ್ಟುಕೊಂಡೇ ಈ ವಚನಕಾರರು ಸೂಳ್ನುಡಿಗಳನ್ನು ಬರೆಯಲಿಲ್ಲ. ಆದರೆ ಲಿಂಗ ಮುಟ್ಟಿ ಲಿಂಗವಾಗುವಂತೆ – ತನು ಮನ ಗುಣ ನಾಸ್ತಿಯಾಗಿ= ಸಾಹಿತ್ಯ ಲಿಂಗ ಗುಣವುಳ್ಳುದಾಯಿತೆಂದು ಹೇಳಬಹುದು. “ಜಗತ್ತಿನ ಸಾಹಿತ್ಯದಲ್ಲಿ ಇವುಗಳನ್ನು ಹೋಲುವ ರೂಪ ಕಡಿಮೆ, ಕನ್ನಡದಲ್ಲಿಯಂತೂ ಅಪೂರ್ವ”[13] ಈ ಮಾತು ಸಮಗ್ರ ವಚನ ಸಾಹಿತ್ಯವನ್ನು ಕುರಿತು ಹೇಳಿದ್ದಾದರೂ ಪ್ರಾರಂಭದ – ಬಸವಪೂರ್ವಯುಗದ ವಚನಗಳಿಗೂ ಅದು ಅನ್ವಯಿಸುತ್ತದೆ. ಭಾಷೆ ಇದರಿಂದ ಅನುಭಾವದ ಎತ್ತರಕ್ಕೆ ಏರಿತು; ಅತಿಸೂಕ್ಷ್ಮ ತತ್ವಗಳನ್ನೂ ಒಳಗೊಳ್ಳುವ ಶಕ್ತಿಯನ್ನು ಗದ್ಯ ಪಡೆಯಿತು. ಮಹಾಕಾವ್ಯಗಳು ಮಾಡಲಾರದ ಕೆಲಸವನ್ನು ಈ ವಚನಕಾವ್ಯಗಳು ಮಾಡಿದುವೆನ್ನಬಹುದು; ಜನಜೀವನದಲ್ಲಿ ಹಾಸುಹೊಕ್ಕಾಗಿ ಬೆರೆತು, ಅವರ ಮನದ ಅಂಗಳದಲ್ಲಿ ಶಿವದ ಜ್ಯೋತಿ ಹಚ್ಚಿ, ಮಾನವತೆಯಲ್ಲಿ ದೇವತ್ವವನ್ನು ಅರಳಿಸಿದವು. ದೇಶಿಯನ್ನು ಇವರಂತೆ ಸಮರ್ಥವಾಗಿ ಬಳಸಿಕೊಂಡವರು ಕಡಿಮೆ. ದೃಷ್ಟಾಂತ, ಉಪಮಾನ, ಉದಾಹರಣೆಗಳು ನೇರ ಜನಜೀವನದಿಂದ ಎತ್ತಿದವುಗಳು. ಅತೀಂದ್ರೀಯ ಅನುಭವವನ್ನೊಳಗೊಂಡ ಗದ್ಯ ಇದು : “ನೀರೋಳಗಣ ಕಿಚ್ಚಿಗೆ ನೀರೇ ತಾಯಿ; ಕಲ್ಲೊಳಗಣ ಕಿಚ್ಚಿಗೆ ಕಲ್ಲೇ ತಾಯಿ; ಮರದೊಳಗಣ ಕಿಚ್ಚಿಗೆ ಮರನೇ ತಾಯಿ. ಅವು ಹೊರಹೊಮ್ಮಿದಾಗ ತಾಯ ತಿಂದು ತಾವು ತಲೆದೋರುವಂತೆ, ಕುರುಹಿಂದ ಅರಿವನರಿತು ಅರಿವು ಕುರುಹು ನಷ್ಟವ ಮಾಡಿ ನಿಂದಲ್ಲಿಯೇ ಐಘಟದೂರ ರಾಮೇಶ್ವರಲಿಂಗವು ಅಂಗವ ಅರಿತು ನಿಂದನಿಲುವು” (ಮೆ.ಮಿ.ಸ.ಪು.ವ.ಭಾಗ – ೧ – ೩೪೫). “ಅಂಗ ನಿರಂಗವ ಕೂಡಿ ಸಂಘಟಿಸುವಾಗ ಚಂದನ ಗಂಧದಂತೆ ಕ್ರೀಜ್ಞಾನಭೇದ. ಅದಱಂಗವ ತಿಳಿದಲ್ಲಿ ಕಾಲಾಂತಕ ಭೀಮೇಶ್ವರಲಿಂಗವನರಿದುದು” (ಢ.ಬೊ.ಸ.ಪು.ವ.ಭಾಗ – ೧ – ೮೬೭) ಒಂದು ಸಾಮಾನ್ಯ ಉದಾಹರಣೆಯಿಂದ ಮಹತ್ತನ್ನು ಮನವೊಗಿಸುವ ರೀತಿಯಿದು: “ಘಟವನೊಡೆದು ಬಯಲನೋಡುವುದೇಕೆ? ಆ ಘಟದೊಳಗಿಪ್ಪುದೇ ಬಯಲೆಂದರಿದಡೆ ಸಾಲದೆ? ತನ್ನನಳಿದು ಘನವ ನೋಡಲೇಕೆ? ತಾನೇ ಘನವೆಂದರಿದಡೆ ಸಾಲದೆ?” (ಜೇ.ದಾ.ವ. – ೧೦೦) ಆರ್ಥವತ್ತಾದ ಉಪಮಾನ: “ಉರಿವ ಕೆಂಡದ ಮೇಲೆ ತೃಣವ ತಂದಿರಿಸಿದರೆ ಆ ತೃಣವ ಕೆಂಡ ನುಂಗಿದಂತೆ – ಗುರುಚರಣದ ಮೇಲೆ ತನುತೃನವನಿಳುಹಿದರೆ ಆತನ ಸರ್ವಾಂಗವೆಲ್ಲ ಲಿಂಗ ಕಾಣಾ ರಾಮನಾಥ” (ಜೇ.ದಾ.ವ. – ೭೮) ಇಲ್ಲಿದೆ ಜೀವಂತ ದೃಷ್ಟಾಂತ: “ಕಡೆಗೀಲಿಲ್ಲದ ಬಂಡಿ ಹೊಡೆಗೆಡುವುದು ಮಾಬುದೆ? ಕಡೆಗೀಲು ಬಂಡಿಗಾಧಾರ. ಕಡುದರ್ಪವೇರಿದ ಒಡಲೆಂಬ ಬಂಡಿಗೆ ಮೃಡಶರಣರ ನುಡಿಗಡಣವೇ ಕಡೆಗೀಲು ರಾಮನಾಥ” (ಜೇ.ದಾ.ವ. – ೮೫). ಕಡೆಗೀಲು ಎಂಬ ಸಾಮಾನ್ಯ ಶಬ್ಧವಿಲ್ಲಿ ಅನುಭಾವದ ಉಸಿರಾಡಿಸುತ್ತಿದೆ. ಸೂಕ್ಷ್ಮತತ್ವಗಳನ್ನು ಸುಂದರ ಉದಾಹರಣೆಗಳಿಂದ ತಿಳಿಯಲು ಬಲು ಸುಲಭ ಮಾಡಲಗಿದೆ ಇಲ್ಲಿ; “ಇಂದುವಿನ ಬೆಳಗಿನಿಂದ ಇಂದುವನು, ಭಾನುವಿನ ಬೆಳಗಿನಿಂದ ಭಾನುವನು, ದೀಪದ ಬೆಳಗಿನಿಂದ ದೀಪವ ಕಾಂಬಂತೆ, ತನ್ನ ಬೆಳಗಿನಿಂದ ತನ್ನನೇ ಕಂಡು ನಿಂದ ನಿಲುವು ನೀನೇ ಸಿಮ್ಮಲಿಗೆಯ ಚೆನ್ನರಾಮಾ” (ಚಂದಿಮರಸ.ಸ.ಪು.ವ.ಭಾಗ – ೨ – ೮೧೫)[14] ಕ್ರಿಯಾಜ್ಞಾನಗಳ ಸಂಬಂಧವನ್ನು, ಕುರುಹಾದರೂ ಅದು ನಿರಾಕಾರ ಮತ್ತು ಅರಿವೆ ಕುರುಹು ಎಂಬುದನ್ನು ಈ ವಚನ ಮನಮುಟ್ಟುವಂತೆ ವಿವರಿಸುತ್ತದೆ: “ಸತ್ಕೀಯೆಂಬುದೆ ಜ್ಞಾನ, ಜ್ಞಾನದೊಡಲೆ ಕ್ರೀ, ಸುಗಂಧವನಿರಿಸಿಕೊಂಡಿಪ್ಪ ಕರಂಡದಂತೆ. ಆ ಒಡಲಲ್ಲದೆ ಗಂಧವಿರಬಲ್ಲುದೇ? ಐಘಟದೂರ ರಾಮೇಶ್ವರಲಿಂಗವು ಕುರುಹಾಗಿ ಅರಿವ ಇರಿಸಿಕೊಂಡಿತ್ತು” (ಮೆ.ಮಿ.ಸ.ಪು.ವ.ಭಾಗ – ೧ – ೩೮೨). ಈ ವಚನಕಾರರ ರೂಪಕಗಳು ಹೊಚ್ಚಹೊಸವು; ಅರ್ಥಪೂರ್ಣವಾದುವು. ಅದರಲ್ಲಿಯೂ ಕಾಯಕಗಳನ್ನು ರೂಪಕ ಮಾಡಿ ಅನುಭಾವ ಹೇಳುವ ಕಲೆ ಇವರಿಂದಲೇ ಪ್ರಾರಂಭವಾಯಿತೆನ್ನಬಹುದು. “ಉಂಕಿಯ ನಿಗುಚಿ” (ಜೇ.ದಾ.ವ. – ೨) ಎಂಬ ಜೇಡರದಾಸಿಮಯ್ಯನ ವಚನ, “ಸ್ಥೂಲಸೂಕ್ಷ್ಮಕಾರಣವೆಂಬ ಮೂರು ಕಂಬವನೆಟ್ಟು” (ಸ.ಪು.ವ.ಭಾಗ – ೩ – ೩೪೮) ಎಂಬ ಮಾದಾರಚೆನ್ನಯ್ಯನ ವಚನ, “ತನುವೆಂಬ ಮೊರದಲ್ಲಿ ಮಾಯಾಗುಣವೆಂಬ ಮರಿಯ ಹಿಡಿದು” (ಸ.ಪು.ವ.ಭಾಗ – ೧ – ೩೮೪) ಎಂಬ ಢಕ್ಕೆಯ ಬೊಮ್ಮಣ್ಣನ ವಚನ – ಇವು ಶ್ರೇಷ್ಠರೂಪಕಗಳು: ವಿಶ್ವಸಾಹಿತ್ಯಕ್ಕೆ ಸಲ್ಲುವ ಕಾಣಿಕೆಗಳು. ಕಿರಿದರಲ್ಲಿ ಹಿರಿದರ್ಥ ಹೇಳುವ ಇವರ ಸಾಮರ್ಥ್ಯ ಅಸಾಧಾರಣವಾದುದು: “ಆಸೆಯೆಂಬುದೆ ಮಾರಿ ನಿರಾಸೆಯೆಂಬುದೇ ದೇವಪದ” (ಢ.ಬೊ.ಸ.ಪು.ವ.ಭಾಗ – ೧ – ೮೫೪), “ಸುಗಂಧಮಂದಿರದಲ್ಲಿ ಮರುತಸಂಧಿಸಿದಂತೆ” (ಢ.ಬೊ.ಸ.ಪು.ವ.ಭಾಗ – ೧ – ೮೫೯). “ಜೀವಕೆಟ್ಟು ಪರಮನಾದಂತೆ” (ಢ.ಬೊ), “ಅಸು ಆತ್ಮನ ಕಟ್ಟುವ ಗೊತ್ತು” (ಮೆ.ಮಿ.ಸ.ಪು.ವ.ಭಾಗ – ೧ – ೩೬೨), “ಸುಖಬೆಳೆದು ವಿಚಾರಕ್ಕೊಳಗು” (ಮೆ.ಮಿ.ಸ.ಪು.ವ.ಭಾಗ – ೧ – ೩೦೫), “ನೀನೆನ್ನಂತೊಮ್ಮೆ ಒಡಲುಗೊಂಡು ನೋಡಾ” (ಜೇ.ದಾ.ವ. – ೨೬), “ಕೀಳಿಂಗಲ್ಲದೇ ಹಯನ ಕರೆಯದು” (ಜೇ.ದಾ.ವ. – ೭೯), “ಜಗೆಬಜೆಯಲ್ಲದ ಮನಕ್ಕೆ ಸಹಜವ ತೆಲುಗೇಶ ತೋರಿದ” (ತೆಲುಗುಜೊಮ್ಮಯ್ಯ ಸ.ಪು.ವ.ಭಾಗ – ೩ – ೨೪೯), “ಕಳ್ಳ ಕದ್ದ ಗಜವೆಲ್ಲಿ ಅಡಗಿ ಮಾರೂದು ಹೇಳಾ?” (ನಿಜಗುಣಯೋಗಿ – ಸ.ಪು.ವ.ಭಾಗ – ೩ – ೨೭೮). ದೇಶಿಗೆ ಇವು ಕೆಲವು ಉದಾಹರಣೆಗಳು: “ಜಂಬೂಕ ತಿಂದ ಹಡುವ ಮಿಕ್ಕು ಹುಳಿತದ ತಾ ತಿಂದಂತೆ (ಮೆ.ಮಿ.ಸ.ಪು.ವ.ಭಾಗ – ೧ – ೩೧೪), “ಗಿಂಡೆಯ ಉದಕ ಉಭಯ ಸಂದಿಯಲ್ಲಿ ಬಾಹಂತೆ”, “ಬಾಗಿಲ ಪೂಜಿಸಿದ ಜಾರೆ ಲಕ್ಷಣದಂತಾಗಬೇಡ”, “ಮರಕ್ಕೆ ಮೂರು ಗೋಟು” (ಢ.ಬೊ.ಸ.ಪು.ವ.ಭಾಗ – ೧ – ೯೧೦, ೯೧೪, ೮೪೮), “ಜಳ್ಳುತೂರಿದಲ್ಲಿ ಭತ್ತವುಂಟೇ?”, “ಕಬ್ಬುನ ಹುಳಿವಡಿನ್ನೇವೆ?”, “ಹುಲುಸರವಿಯಿಂದ ಕರಕಷ್ಟ”, “ಕಚ್ಚುವರು ಬೊಗಳುವುರು” (ಜೇ.ದಾ.ವ.), “ಎಳ್ಳಿಗೆ ಎಣ್ಣೆ ಮುಳ್ಳಿಗೆ ಮೊನೆ” (ಢ.ಬೊ.ಸ.ಪು.ವ.ಭಾಗ – ೧ – ೮೩೯), “ದೋಟಿಯನಿಕ್ಕು” (ಢ.ಬೊ.ಸ.ಪು.ವ.ಭಾಗ – ೧ – ೮೭೪).

[1] ನೆನೆಯಬಹುದು : “ವೈದಿಕ ಧರ್ಮದ ಕರ್ಮಕಾಂಡವನ್ನೂ ಅರ್ಥವಿಹೀನವಾದ ಆಚರಣೆಗಳನ್ನೂ ವಿರೋಧಿಸಿ ಸಿಡಿದು ನಿಂತ ಬಸವಪೂರ್ವದ ವೀರಶೈವ ಧರ್ಮದ ಪ್ರಾರಂಭಿಕ ಸೂತ್ರಗಳಲ್ಲಿ ಜೀವಕಾರುಣ್ಯ, ಮಾನವೀಯತೆ, ಕೌಟುಂಬಿಕ ಜೀವನದಲ್ಲಿ ನೆಮ್ಮದಿ, ಸತ್ಯಶುದ್ಧ ಕಾರ್ಯಾಚರಣೆ, ಸರಳವೂ ಶಾಂತಿಯುತವೂ ಆದ ಜೀವನಾದರ್ಶನ, ಸ್ವಧರ್ಮ ನಿಷ್ಠೆ, ಲಿಂಗಪೂಜೆ, ಜಂಗಮದಾಸೋಹ, ಕಾಯಕ ನಿಷ್ಠೆ- ಇವೇ ಮೊದಲಾದ ಸಾಮಾನ್ಯ ವಿಷಯಗಳು ಪ್ರತಿಪಾದಿತವಾಗಿರುವುದನ್ನು ಕಾಣುತ್ತೇವೆ……………….
ಬಸವಯುಗದಲ್ಲಿ ನಾವು ಕಾಣುವ ವರ್ಣ, ವರ್ಗರಹಿತ ಸಾಮಾಜಿಕ ಕಲ್ಪನೆ, ಹೆಣ್ಣು, ಗಂಡುಗಳ ನಡುವಿನ ಕೀಳು ಮೇಲೆನ್ನದ ಸಮಾನಭಾವ, ಸಮರಸ ದಾಂಪತ್ಯ, ವಾರ-ತಿಥಿ-ಲಗ್ನ-ಶುಭದಿನ-ತಾರಾಬಲ-ಚಂದ್ರಬಲ-ನವಗ್ರಹಬಲ- ಶುಭ ಅಶುಭ ಶಕುನ ಇತ್ಯಾದಿ ಮೂಢನಂಬಿಕೆಗಳ ಖಂಡನೆ; ಕ್ಷೇತ್ರಯಾತ್ರೆ- ಪಾಪ – ಪುಣ್ಯೆ ಇವೇ ಮೊದಲಾದುವುಗಳ ಬಗೆಗಿರುವ ಪೂಜ್ಯ ಭಾವನೆಗಳ ಬಗೆಗೆ ತಿರಸ್ಕಾರ: ಕಾಯಕ ತತ್ವವೇ ಮೊದಲಾದ ಪ್ರಮುಖ ವಿಷಯಗಳನ್ನೂ ಬಸವಪೂರ್ವಯುಗದಲ್ಲಿಯೇ ನಾವು ಕಾಣುತ್ತೇವೆ.”
(ಡಾ|| ಎಸ್.ವಿದ್ಯಾಶಂಕರ : ಬಸವಪೂರ್ವಯುಗದ ವೀರಶೈವದ ಅಧ್ಯಯನಕ್ಕೊಂದು ಆಕರಲೇಖನ : ಸಾಧನೆ : ಸಂಪುಟ ೮, ಸಂಚಿಕೆ ೪ ಅಕ್ಟೋಬರ್-ಡಿಸೆಂಬರ್ ೧೯೭೯-ಬೆಂಗಳೂರು ವಿಶ್ವವಿದ್ಯಾಲಯ-ಬೆಂಗಳೂರು.

[2] ಶಾಂತರಸ : ಮೊದಲ ವಚನಕಾರ ಮಾದಾರಚೆನ್ನಯ್ಯ, ಪುಟ ೧೩, ಶಿವಶಕ್ತಿ ಪ್ರಕಾಶನ, ರಾಯಚೂರು ೧೯೭೭.

[3] ಡಾ|| ಎಂ. ಚಿದಾನಂದಮೂರ್ತಿ : ಸಾಮಾನ್ಯರಿಗೆ ಸಾಹಿತ್ಯ ಚರಿತ್ರೆ; ವಚನ ಸಾಹಿತ್ಯ ಪುಟ ೧೩.

[4] ಸಮಗ್ರಕನ್ನಡ ಸಾಹಿತ್ಯ ಚರಿತ್ರೆ ಸಂಪುಟ : ಶಾಂತರಸರ ಲೇಖನ : ವಚನ ಸಾಹಿತ್ಯದ ಪ್ರಾರಂಭಕಾರರು ಪುಟ ೬೭ – ಪ್ರಕಾಶಕರು : ಬೆಂಗಳೂರು ವಿಶ್ವವಿದ್ಯಾಲಯ ಬೆಂಗಳೂರು.

[5] (i) ಡಾ|| ಎಂ. ಚಿದಾನಂದಮೂರ್ತಿ : ಸಾಮಾನ್ಯರಿಗೆ ಸಾಹಿತ್ಯ ಚರಿತ್ರೆ : ವಚನ ಸಾಹಿತ್ಯ ಪುಟ ೩೦-೩೨
(ii) ಡಾ|| ಎಂ. ಎಂ. ಕಲಬುರ್ಗಿ : ಕೊಂಡಗುಳಿಕೇಶಿರಾಜನ ಕೃತಿಗಳು, ಪ್ರಸ್ತಾವನೆ ಪುಟ ೧೪

[6] ಡಾ|| ಎಂ. ಎಂ. ಕಲಬುರ್ಗಿ : ಕೊಂಡಗುಳಿಕೇಶಿರಾಜನ ಕೃತಿಗಳು, ಪುಟ ೫೯, ಪದ್ಯ ೧.

[7] ಅದೇ ಪುಟ ೬೪, ಪದ್ಯ ೩೩.

[8] ಅದೇ ಪುಟ ೭೩, ಪದ್ಯ ೯೮.

[9] ಡಾ|| ಆರ್.ಸಿ.ಹಿರೇಮಠ : ಶಿವಶರಣೇಯರ ವಚನಗಳು (ಸಮಗ್ರ ಸಂಪುಟ) ಪುಟ ೩೮೬.

[10] ಎಚ್.ದೇವಿರಪ್ಪ ಮತ್ತು ಆರ್. ರಾಚಪ್ಪ : ಜೇಡರದಾಸಿಮಯ್ಯನ ವಚನಗಳು, ವಚನ ೫೫.

[11] ಡಾ|| ಆರ್.ಸಿ. ಹಿರೇಮಠ : ಸಕಲಪುರಾತನರ ವಚನಗಳು ಭಾಗ , ವಚನ ೩೬೦.

[12] ಡಾ|| ಎಂ.ಎಸ್. ಸುಂಕಾಪುರ : ಸಕಲಪುರಾತನರ ವಚನಗಳು ಭಾಗ , ವಚನ ೪೩೯.

[13] ಡಾ|| ರಂ.ಶ್ರೀ ಮುಗುಳಿ: ಕನ್ನಡ ಸಾಹಿತ್ಯ ಚರಿತ್ರೆ ಐದನೆಯ ಮುದ್ರಣ ೧೯೭೧, ಪುಟ ೧೫೮.

[14] ಡಾ|| ಎಂ.ಎಸ್. ಸುಂಕಾಪುರ : ಸಕಲಪುರಾತನರ ವಚನಗಳು ಭಾಗ , ವಚನ ೮೧೫.