ಜೇಡರದಾಸಿಮಯ್ಯ, ಶಂಕರದಾಸಿಮಯ್ಯ ಮತ್ತು ಕೊಂಡಗುಳಿ ಕೇಶಿರಾಜ

ಕೊಂಡಗುಳಿ ಕೇಶಿರಾಜನ ಉಲ್ಲೇಖ ಜೇಡರದಾಸಿಮಯ್ಯನ ವಚನದಲ್ಲಿ ಬಂದಿರುವುದರಿಂದ ಆತ ಕೇಶಿ ರಾಜನ ತರುವಾಯದವನಿರಬೇಕೆಂದು ಹೇಳುವವರು ಇದ್ದಾರೆ. ಹಾಗೇನೂ ಇಲ್ಲ. ಅವರಿಬ್ಬರು ಸಮಕಾಲೀನರೇ ಆಗುತ್ತಾರೆ. ಕೆಂಭಾವಿ ಮತ್ತು ಕೊಂಡುಗುಳಿ ಮುದೆನೂರಿಗೆ ಬಹಳ ದೂರ ಇಲ್ಲ. ಆದುದರಿಂದ ಭೋಗಣ್ಣ ಮತ್ತು ಕೇಶಿರಾಜರ ಪವಾಡಗಳು ಮುದೆನೂರಿಗೆ ಮುಟ್ಟಲು ಬಹಳ ದಿನ ಹಿಡಿದಿರಲಿಕ್ಕಿಲ್ಲ. ಕೇಶಿರಾಜ, ವಂಶವರ್ಧನ ಮತ್ತು ಕೇಶಿರಾಜ ತೆಲುಗು ಜೋಮಯ್ಯ ಕೂಡಿ ಶಿವಾನುಭವ ಮಾಡಿದಂತೆ ಭೋಗಣ್ಣ ಜೇಡರದಾಸಿಮಯ್ಯ ಮತ್ತು ಕೇಶಿರಾಜ ಕೂಡಿ ಶಿವಾನುಭವ ಮಾಡಿರಬೇಕೆಂದು ಊಹಿಸಲವಕಾಶವಿದೆ.

ಕಲ್ಬುರ್ಗಿ ಜಿಲ್ಲೆಯ ಸುರಪುರ ತಾಲೂಕಿಗೆ ಸೇರಿದ ಮುದೆನೂರು, ಜೇಡರ ದಾಸಿಮಯ್ಯನ ಊರು. ಅಲ್ಲಿ ರಾಮನಾಥ ದೇವಾಲಯ ಮತ್ತು ಆತನಿಗೆ ಸಂಬಂಧಪಟ್ಟ ಶಾಸನಗಳಿವೆ. ಆತನನ್ನು ಕುರಿತಂತೆ ಹತ್ತು ಶಾಸನಗಳು ದೊರಕಿವೆ. ಇವುಗಳಲ್ಲಿ ಕ್ರಿ.ಶ. ೧೧೪೮ರ ಶಾಸನವೇ ತೀರ ಹಿಂದಿನದು.[1] “ಪಿರಿಯಗೊಬ್ಬೂರಿನ ಶೇಷಮಹಾಜನಂಗಳ ದಿವ್ಯ ಪಾದ ಪದ್ಮಾರಾಧಕರು ಶ್ರೀ ರಾಮೇಶ್ವರ ದೇವರ ಗಂಧವಾರಣರ್ ಜಾಡ ಕುಲತಿಲಕ ಜಾಡರ ದಾಸಿಮಯ್ಯ ಪ್ರಿಯಪುತ್ರುಮಪ್ಪ ಸಕಲ ಜಾಡಗೊತ್ತಳಿಗಳು” ಗೊಜ್ಜೇಶ್ವರ ದೇವರಿಗೆ ದತ್ತಿ ನೀಡಿದ ವಿಷಯ ಈ ಶಾಸನದಲ್ಲಿ ಉಲ್ಲೇಖವಾಗಿದೆ. ಪ್ರಿಯಪುತ್ರರುಮಪ್ಪ ಜಾಡಗೊತ್ತಳಿಗಳು ಎಂಬುದನ್ನು ವಿಶ್ಲೇಷಿಸಿ ಹೆಚ್. ದೇವೀರಪ್ಪನವರು “ಪ್ರಿಯ ಮಿತ್ರರು ಎಂಬುದು ಇಲ್ಲಿ ಗಮನಾರ್ಹವಾದುದು. ಪುತ್ರ, ಸುತ, ಮಗ, ಎಂಬ ಮಾತುಗಳನ್ನು ಶಿಷ್ಯ, ಪ್ರಶಿಷ್ಯ, ಪ್ರಶಿಷ್ಯನ ಶಿಷ್ಯ ಎಂಬ ಅರ್ಥಗಳಲ್ಲಿ ಶಾಸನಗಳಲ್ಲಿಯೂ ಸಾಹಿತ್ಯದಲ್ಲಿಯೂ ಬಳಸಿರುವುದಕ್ಕೆ ಅನೇಕ ನಿದರ್ಶನಗಳಿವೆ. ಆದರೆ ‘ಪ್ರಿಯಪುತ್ರ’, ಪ್ರಿಯಶಿಷ್ಯ, ‘ವರಸುತ’ ಮುಂತಾದ ವಿಶೇಷಣ ಸಹಿತವಾದ ಪದಗಳಿದ್ದರೆ ಅಂತಹವಕ್ಕೆ ‘ಖಾಸಾಶಿಷ್ಯ’ ಎಂದೇ ಅರ್ಥೈಸಬೇಕಾಗುತ್ತದೆ. ಗೊಬ್ಬೂರಿನ ಜಾಡಗೊತ್ತಳಿ ಜೇಡರ ದಾಸಿಮಯ್ಯನಿಂದಲೇ ನೇರವಾಗಿ ಉಪದೇಶ ಪಡೆದವರು…..”[2] ಎನ್ನುತ್ತಾರೆ. ಇದರಿಂದ ಜೇಡರ ದಾಸಿಮಯ್ಯ ಬದುಕಿರುವಾಗಲೇ ಈ ಶಾಸನ ಆದುದೆಂದು ಅವರ ಅಭಿಪ್ರಾಯವಿದ್ದಂತೆ ತೋರುತ್ತದೆ. ಆದರೆ ಅವರ ವಿಶ್ಲೇಷಣೆಗೆ ಗಟ್ಟಿ ಆಧಾರಗಳಿಲ್ಲ, ಉದಾಹರಣೆಗಳಿಲ್ಲ. ಪ್ರೀತಿಯವರು, ಬೇಕಾದವರು ಎಂದು ಅರ್ಥ ಮಾಡಬಹುದೇ ಹೊರತು ಖಾಸಾ, ಸ್ವಂತ ಎಂದು ಅರ್ಥ ಮಾಡಲಿಕ್ಕಾಗುವುದಿಲ್ಲ : ಕ್ರಿ.ಶ. ೧೧೪೮ರಲ್ಲಿ ದತ್ತಿ ನೀಡಿದ ಇವರು ದಾಸಿಮಯ್ಯನ ನೇರವಾದ ಶಿಷ್ಯರಾಗಿರದೆ ಪರಂಪರೆಯ ಶಿಷ್ಯರಾಗಿರಬೇಕು….. ಎಂಬ ಡಾ|| ಎಂ.ಎಂ. ಕಲಬುರ್ಗಿಯವರ ಅಭಿಪ್ರಾಯ ಸರಿಯಾದುದು.[3] ಜೇಡರ ದಾಸಿಮಯ್ಯನ ಶಿಷ್ಯ ಸಂಪ್ರದಾಯ, ಬೆಳೆದು ಸುಮಾರು ಒಂದೂವರೆ ತಲೆಮಾರಿನ ಬಳಿಕ ಕ್ರಿ.ಶ. ೧೧೪೮ ರಲ್ಲಿ ಈ ಶಾಸನ ಹುಟ್ಟಿರಬೇಕು ಮತ್ತು ಆ ಶಿಷ್ಯ ಸಂಪ್ರದಾಯ ಕ್ರಿ.ಶ. ೧೨೦೧ರ (ಗೀಜಗನೂರು ಶಾಸನದಂತೆ) ವರೆಗೆ ಮುಂದುವರೆದಿರಬೇಕೆಂದು ಅಭಿಪ್ರಾಯಪಡಬಹುದು.[4] ಆದರೆ ೧೧೪೮ರ ವರೆಗೆ ಜೇಡರ ದಾಸಿಮಯ್ಯ ಬದುಕಿದ್ದನೆಂದು ಹೇಳಲಿಕ್ಕಾಗುವುದಿಲ್ಲ.

ತೊರೆಯೊಳಗೆ ಬಿದ್ದಲಿಂಗ ಕೈಗೆ ಬಂದ ಕೇಶೀರಾಜನ ಪವಾಡ ಸುಮಾರು ೧೧೨೦ ರಲ್ಲಿ ನಡೆದಿರಲು ಸಾಧ್ಯ. ಆ ಪವಾಡದ ಸುದ್ಧಿ ದಾಸಿಮಯ್ಯನಿಗೆ ಮುಟ್ಟಲು ಬಹಳ ದಿನ ಹಿಡಿದಿಲ್ಲ. ತಿಂಗಳೊಪ್ಪತ್ತಿನಲ್ಲಿಯೇ ಆ ಪವಾಡವನ್ನು ಕೇಳಿ ಆತ ಅದನ್ನು ವಚನದಲ್ಲಿ ವರ್ಣಿಸಿರಬೇಕು.

ಕೊಂಡಗುಳಿ ಕೇಶೀರಾಜನ ಎರಡು ಶಾಸನಗಳು ಅವನ ಜೀವನದ ನಿಶ್ಚಿತ ಕಾಲವನ್ನು ಹೇಳಲು ಸಹಾಯಕವಾಗಿದೆ. ಅವರೆಡೂ ಶಾಸನಗಳು ಆತನ ಊರಾದ ಡೋಣಿಕೊಂಡಗುಳಿಯಲ್ಲಿವೆ. ಮೊದಲ ಶಾಸನದ ಕಾಲ ಕ್ರಿ.ಶ. ೧೧೦೭.[5] ಆಗ ಕೇಶಿರಾಜ ಶಾಸನದಲ್ಲಿ ಹೇಳಿದ ಪ್ರಕಾರ ಆರನೆಯ ವಿಕ್ರಮಾದಿತ್ಯನ ಮಂತ್ರಿಯಾಗಿದ್ದ. ಎರಡನೆಯ ಶಾಸನದ ಕಾಲ ಕ್ರಿ.ಶ.೧೧೩೨.[6] ಈ ಶಾಸನದ ಪ್ರಕಾರ ಆತ ಆಗ ಮಂತ್ರಿಯಿದ್ದಿಲ್ಲವೆಂದು ತಿಳಿದು ಬರುತ್ತದೆ. ಮೊದಲನೆಯ ಶಾಸನ ಆರನೆಯ ವಿಕ್ರಮನ ಕಾಲದ್ದು. ಎರಡನೆಯ ಶಾಸನ ಮೂರನೆಯ ಸೋಮೇಶ್ವರನ ಕಾಲದ್ದು. ೧೧೦೭ ರಿಂದ ೧೧೩೨ ರವರೆಗೆ ಕೇಶೀರಾಜ ಬದುಕಿದ್ದನೆಂಬುದು ಖಚಿತ. ಏಕೆಂದರೆ ಆ ಶಾಸನಗಳೆರಡೂ ಆತನ ಕಾಲಕ್ಕೆ ಆದುವೆ.

ಆದರೆ ಕೇಶಿರಾಜನ ಪವಾಡ ನಡೆದುದು ಯಾವಾಗ? ವಿಕ್ರಮಾದಿತ್ಯನೊಡನೆ ಮನಸ್ತಾಪವಾಗಿ ಆತ ಮಂತ್ರಿ ಪದವಿ ತ್ಯಜಿಸಿ ವಂಶವರ್ಧನನಲ್ಲಿಗೆ ಹೋಗುತ್ತಾನೆ. ಕೆಲವು ದಿನಗಳ ಬಳಿಕ ಅರಸನ ಕೇಳಿಕೆಯಂತೆ ಮತ್ತೆ ಮಂತ್ರಿ ಪದವಿ ಸ್ವೀಕರಿಸುತ್ತಾನೆ. ಇದಾದ ಬಳಿಕ ತೆಲುಗು ಜೊಮ್ಮಯ್ಯನನ್ನು ಕಾಣಲು ಹೋಗಿ ಮರಳಿ ಬರುವಾಗ ನದಿಯಲ್ಲಿ ಲಿಂಗ ಬಿದ್ದು ಮತ್ತೆ ಮರಳಿ ಕೈಗೆ ಬಂದ ಪವಾಡ ನಡೆಯಿತು. ಇದು ಆತ ಇನ್ನೂ ಮಂತ್ರಿ ಪದವಿಯಲ್ಲಿದ್ದಾಗಲೇ ನಡೆಯಿತು. ಆರನೆಯ ವಿಕ್ರಮಾದಿತ್ಯ ೧೧೨೭ರವರೆಗೆ ಆಳಿದ. ಆ ಬಳಿಕ ಕೇಶಿರಾಜ ಮಂತ್ರಿಯಾಗಿದ್ದನೋ ಇಲ್ಲವೋ ತಿಳಿಯದು. ೧೧೩೨ರ ಶಾಸನದಿಂದ ಆತ ಆಗ ಮಂತ್ರಿಯಾಗಿದ್ದಿಲ್ಲವೆಂದು ತಿಳಿಯುತ್ತದೆ. ಆದುದರಿಂದ ಆತ ಆರನೆಯ ವಿಕ್ರಮಾದತ್ಯನ ತರುವಾಯ ಮಂತ್ರಿಯಾಗಿರಲಿಲ್ಲವೆಂದೇ ಭಾವಿಸಬೇಕಾಗುತ್ತದೆ. ತೊರೆಯೊಳಗೆ ಬಿದ್ದ ಲಿಂಗದ ಪವಾಡ ೧೧೨೭ರ ಒಳಗೆಯೇ ನಡೆದುದೆಂದು ತಿಳಿಯಬೇಕಾಗುವುದು. ಈ ಮೊದಲೇ ಹೇಳಿದಂತೆ ಅದು ೧೧೨೦ರಲ್ಲಿ ನಡೆದುದೆಂದು ಇಟ್ಟುಕೊಂಡರೆ ಅದನ್ನು ವರ್ಣಿಸಿದ ದಾಸಿಮಯ್ಯ ಕೇಶಿರಾಜನ ಸಮಕಾಲೀನಾಗುವನು : ಕೇಶಿರಾಜ ೧೧೩೨ ರವರೆಗೆ ಬದುಕಿದ ದಾಖಲೆ ದೊರಕುವಂತೆ ಈತನ ಬಗ್ಗೆ ಅಂಥ ದಾಖಲೆ ಏನೂ ಇಲ್ಲ. ಆದರೆ ೧೧೩೦ರ ಆಚೆ ಆತ ಜೀವಿಸಿಲ್ಲ.

ನವಲಿ ಚಿತ್ತಾಪುರದ (ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲ್ಲೂಕು) ಶಂಕರ ದಾಸಿಮಯ್ಯ ಮುದೆನೂರಿಗೆ ಹೋಗಿ ಜೇಡರ ದಾಸಿಮಯ್ಯನೊಡನೆ ಶಿವಗೋಷ್ಠಿ ನಡೆಸಿ, ಆತನ ಅಹಂಕಾರ ಕಳೆದುದನ್ನು ಹರಿಹರ ಶಂಕರ ದಾಸಿಮಯ್ಯನ ರಗಳೆಯಲ್ಲಿ ವರ್ಣಿಸುತ್ತಾನೆ. ಇದರಿಂದ ಶಂಕರದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಸಮಕಾಲೀನರೆಂಬುದು ಸಿದ್ಧವಾಗುತ್ತದೆ. ಆತ ಮುದೆನೂರಿಗೆ ಹೋದುದು ಯಾವಾಗ ಎಂಬುದು ಖಚಿತ ತಿಳಿಯುವುದಿಲ್ಲ. ಆದರೆ ಆತ ಮುದೆನೂರಿನಲ್ಲಿ ಇರುವಾಗಲೆ ಕಲ್ಯಾಣದಿಂದ ಕರೆಬರುತ್ತದೆ.[7] ಕಲ್ಯಾಣಕ್ಕೆ ಹೋದ ಕಾಲ ಯಾವುದೆಂದು ಹೇಳಲು ಆಧಾರಗಳಿವೆ.

ಶಂಕರ ದಾಸಿಮಯ್ಯ ಕಲ್ಯಾಣಕ್ಕೆ ಹೋದುದು ಮೂರನೆಯ ಜಯಸಿಂಹ ಯುವರಾಜನಾಗಿದ್ದಾಗ. ಹರಿಹರ ಹೇಳುವ ಜಯಸಿಂಹ ಈತನೇ ಇರಬೇಕು. ಈತ ಆರನೆಯ ವಿಕ್ರಮಾದಿತ್ಯನ ತಮ್ಮ; ಬೇರೆ ಬೇರೆ ಪ್ರಾಂತ್ಯಗಳಿಗೆ ಅಧಿಪತಿಯಾಗಿದ್ದ ಮತ್ತು ಅನೇಕ ವರ್ಷಗಳವರೆಗೆ ಕಲ್ಯಾಣದಲ್ಲಿ ಯುವರಾಜನಾಗಿದ್ದ.

ಜಯಸಿಂಹ ಒಮ್ಮೆ ಅಣ್ಣನ ವಿರುದ್ಧ ದಂಗೆಯೆದ್ದಂತೆ ತಿಳಿದು ಬರುತ್ತದೆ. ಬಹುಶಃ ಅದೇ ಕಾಲಕ್ಕೆ ವಿಕ್ರಮಾದಿತ್ಯ ಇವನ್ನು ಯುವರಾಜ ಪಟ್ಟದಿಂದ ತೆಗೆದು ತನ್ನ ಮಗನಾದ ಮಲ್ಲಿಕಾರ್ಜುನನನ್ನು ಯುವರಾಜನನ್ನಾಗಿ ಮಾಡಿದ. ಜಯಸಿಂಹ ಯುವರಾಜನಾಗಿದ್ದ ಕೊನೆಯ ದಿನಾಂಕ ಕರಿ.ಶ. ೧೯೮೨, ಡಿಸೆಂಬರ್ ೨೫ ಎಂದು ಡಾ|| ಪಾಂಡುರಂಗರಾವ್ ದೇಸಾಯಿಯವರು ಗುರುತಿಸಿದ್ದಾರೆ.[8]

ಎಂದರೆ ಜಯಸಿಂಹ ಡಿಸೆಂಬರ್ ೨೫, ೧೦೮೨ರವರೆಗೆ ಯುವರಾಜನಾಗಿದ್ದ; ಇದಕ್ಕಿಂತ ಮುಂಚೆ ಶಂಕರದಾಸಿಮಯ್ಯ ಕಲ್ಯಾಣಕ್ಕೆ ಹೋಗಿರಲು ಸಾಧ್ಯ. ವಿಕ್ರಮಾದಿತ್ಯ ಪಟ್ಟಕ್ಕೆ ಬಂದ ಕೂಡಲೇ ತಮ್ಮನಾದ ಜಯಸಿಂಹನಿಗೆ ಯುವರಾಜ ಪಟ್ಟ ಕಟ್ಟಿರಬೇಕು. ಎಂದರೆ ಕ್ರಿ.ಶ. ೧೦೭೬ ರಿಂದ ೧೦೮೨ರ ಅವಧಿಯಲ್ಲಿ ಶಂಕರದಾಸಿಮಯ್ಯ ಕಲ್ಯಾಣಕ್ಕೆ ಹೋದನೆಂಬುದು ಖಚಿತವಾಗುತ್ತದೆ.

೧೦೮೨ರ ಹೊತ್ತಿಗೆ ಶಂಕರದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಪ್ರೌಢರಾಗಿರಬೇಕು; ಪ್ರಸಿದ್ಧರಾಗಿರಬೇಕು. ಅವರಿಗೆ ಆಗ ೩೦, ೩೫ ವರ್ಷಗಳಾದರೂ ಇರಬೇಕು. ಹಾಗಾದರೆ ೧೦೫೦ ಮತ್ತು ತುಸು ಅದರಾಚೆ ಹುಟ್ಟಿರುವ ಸಂಭವವಿದೆ. ಜೇಡರದಾಸಿಮಯ್ಯ ಕೇಶಿರಾಜನ ಪವಾಡದ ವರ್ಣನೆಯಿಂದ ೧೧೩೦ರ ವರೆಗೆ ಬದುಕಿರಲು ಸಾಧ್ಯವಾದ ವಿಷಯ ಹಿಂದೇ ನೋಡಿದೆವು. ಶಂಕರದಾಸಿಮಯ್ಯ ೧೦೭೬ರ ತರುವಾಯ ಮುದೆನೂರಿಗೆ ಮತ್ತು ಕಲ್ಯಾಣಕ್ಕೆ ಹೋದುದು ತಿಳಿದು ಬರುವುದಲ್ಲದೆ ಆ ಬಳಿಕ ಆತ ಪೆಂಬೇರಮೈಲಾರ, ಭೈರವ ಮೊದಲಾದ ಕ್ಷುದ್ರ ದೇವತೆಗಳಿಂದ ಸೇವೆ ಮಾಡಿಸಿಕೊಂಡು ನವಿಲೆಗೆ ಮರಳಿ ಬಂದ ವಿಷಯ ಹರಿಹರ ಹೇಳುತ್ತಾನೆ. ಆದರೆ ಆತನ ಕೊನೆಯ ದಿನಗಳ ಖಚಿತ ಕಾಲ ತಿಳಿದು ಬರುವುದಿಲ್ಲ.

ಶಂಕರದಾಸಿಮಯ್ಯನವೆಂದು ಹೇಳಲಾದ ಎರಡು ವಚನಗಳು ಶೂನ್ಯ ಸಂಪಾದನೆಯಲ್ಲಿ ದೊರಕುತ್ತವೆ.[9] ಅವುಗಳಲ್ಲಿ ಈತ ಬಸವಣ್ಣ ಮತ್ತು ಪ್ರಭುದೇವರನ್ನು ಹೊಗಳಿದ್ದಾನೆ. ಇದು ಅಸಂಭವ, ಇದನ್ನೊಪ್ಪಿದರೆ ಆತ ಬಸವಣ್ಣನವರ ಹಿರಿಯ ಸಮಕಾಲೀನನಾಗುತ್ತಾನೆ. ಆದರೆ ಇದಕ್ಕೆ ಬಲವಾದ ಆಧಾರಗಳಿಲ್ಲ. ಆತನ ವಚನಗಳು ಶೂನ್ಯಸಂಪಾದನೆಯಲ್ಲದೆ ಬೇರೆ ಮತ್ತಾವಕಡೆಗೂ ದೊರಕುವುದಿಲ್ಲ. ಡಾ|| ಹಳಕಟ್ಟಿಯವರು ಒಂದು ಕಡೆ ಆತನ ಅಂಕಿತ ಗುರುತಿಸಿದ್ದಾರೆ.[10] ಇನ್ನೊಂದು ಕಡೆ “……… ಶೂನ್ಯ ಸಂಪಾದನಾಕಾರನು ಸಂದರ್ಭಕ್ಕನುಸರಿಸಿ ತಾನೇ ವಚನಗಳನ್ನು ರಚಿಸಿ ತನ್ನ ಗ್ರಂಥದಲ್ಲಿ ಸೇರಿಸುವುದರಿಂದ ಈ ವಚನಗಳು ದೃಢವಾಗಿ ಅವನವೇ ಎಂದು ಹೇಳಲು ಬರಲಾರದು….”[11] ಎಂದಿದ್ದಾರೆ. ಸಾಕಷ್ಟು ಆಧಾರಗಳು ಇಲ್ಲವಾದುದರಿಂದ ಶೂನ್ಯಸಂಪಾದನೆಯಲ್ಲಿರುವ ವಚನಗಳು ಶಂಕರದಾಸಿಮಯ್ಯನವು ಅಲ್ಲವೆಂದೇ ಹೇಳಬೇಕಾಗುತ್ತದೆ.

ಇದೇ ರೀತಿ ಜೇಡರ ದಾಸಿಮಯ್ಯನ ಹೆಂಡತಿ ದುಗ್ಗಳೆಯದೆಂದು ಹೇಳುವ ಒಂದು ವಚನವಿದೆ.[12] ಅದರಲ್ಲಿ ಆಕೆ ಬಸವಣ್ಣ, ಪ್ರಭುದೇವ ಸಿದ್ಧರಾಮ, ಚನ್ನಬಸವಣ್ಣ, ಅಜಗಣ್ಣ – ಈ ಐವರನ್ನೂ ನೆನೆಯುತ್ತಾಳೆ. ಇದೂ ಸಂದಿಗ್ಧಕ್ಕೆ ಎಡೆ ಕೊಡುವ ವಿಚಾರವೇ. ದಾಸಯ್ಯಪ್ರಿಯರಾಮನಾಥ ಎಂಬ ಅಂಕಿತವಿರುವ ಈಕೆಯ ವಚನ ಮಿಶ್ರ ಸ್ತೋತ್ರದಲ್ಲಿ ಮಾತ್ರವಿದೆ; ಬೇರೆ ಕಡೆ ಎಲ್ಲಿಯೂ ಇಲ್ಲ. “…… ದಾಸಯ್ಯಪ್ರಿಯರಾಮನಾಥನೆಂಬ ತಮ್ಮಿಷ್ಟ ಲಿಂಗದಲ್ಲಿ ಲಿಂಗೈಕ್ಯವ ಪಡೆದು ನಿತ್ಯಾನಂದ ಸುಖದಿಂದರ್ಪಳು”[13] ಎಂದು ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರದ ಕರ್ತೃ ಹೇಳುವಲ್ಲಿಯ ‘ದಾಸಯ್ಯಪ್ರಿಯರಾಮನಾಥ’ ಎಂಬುದು ಆಕೆಯ ಅಂಕಿತವೆಂದು ಕೆಲವರು ಹೇಳುವಂತೆ ನಂಬಿದರೂ ಆಕೆ ವಚನ ಬರದಂತೆ ಪುರಾವೆ ಇಲ್ಲ.

ಢಕ್ಕೆಯ ಬೊಮ್ಮಣ್ಣ

ಢಕ್ಕೆಯ ಬೊಮ್ಮಣ್ಣ ದುರುಗಮುರುಗಿ (ಬುರುಬುರು ಸುಂಕಲಮ್ಮ) ಕಾಯಕದ ಶರಣ, ಈತನ ಮಾರಿ ಜ್ಞಾನದ ಸಂಕೇತವಾಗಿತ್ತು.

ಶಂಕರದಾಸಿಮಯ್ಯನಿಗೆ ಕ್ಷುಲ್ಲಕ ದೈವಗಳನ್ನು ಸುಟ್ಟುರುಹಿದುದರಿಂದ ಬಂದ ಅಹಂಕಾರವನ್ನು ಢಕ್ಕೆಯ ಬೊಮ್ಮಣ್ಣ ಕಳೆದ; ಈ ಘಟನೆ ಶಂಕರದಾಸಿಮಯ್ಯನ ಕೊನೇಗಾಲದಲ್ಲಿ ನಡೆದಿರಬೇಕು. ಈ ಘಟನೆ ಹರಿಹರನ ಶಂಕರದಾಸಿಮಯ್ಯನ ರಗಳೆ ಮತ್ತು ಬಸವಪುರಾಣಗಳಲ್ಲಿ ಇಲ್ಲ. ಹದಿನಾರನೆಯ ಶತಮಾನದಿಂದ ಢಕ್ಕೆಯ ಬೊಮ್ಮಣ್ಣನ ಚರಿತ್ರೆ ಕಣ್ಣಿಗೆ ಬೀಳುತ್ತದೆ. ವೀರಶೈವಾಮೃತ ಮಹಾಪುರಾಣ, ಪ್ರೌಢರಾಯನ ಕಾವ್ಯ, ಭೈರವೇಶ್ವರಕಾವ್ಯದ ಕಥಾಮಣಿಸೂತ್ರರತ್ನಾಕರ, ಗುರುರಾಜಚಾರಿತ್ರ ಮುಂತಾದ ಕಾವ್ಯಗಳಲ್ಲಿ ಈತನ ಚರಿತ್ರೆ ಮುಖ್ಯವಾಗಿ ಶಂಕರದಾಸಿಮಯ್ಯನ ಅಹಂಕಾರ ಕಳೆದ ಘಟನೆ ದೊರಕುತ್ತವೆ. ಢಕ್ಕೆಯ ಬೊಮ್ಮಣ್ಣನ ಕಾಲವನ್ನು ಕವಿಚರಿತ್ರೆಕಾರರು ಕ್ರಿ.ಶ. ೧೧೬೦ ಎಂದು ಹೇಳಿದ್ದಾರೆ.[14] ಈತ ತನ್ನೊಂದು ವಚನದಲ್ಲಿ ಬಸವಣ್ಣ, ಚೆನ್ನಬಸವಣ್ಣ, ಮಡಿವಾಳಯ್ಯ, ಚಂದಯ್ಯ, ಗಟ್ಟಿವಾಳಯ್ಯ, ಅಜಗಣ್ಣ – ಇವರನ್ನು ನೆನೆಯುತ್ತಾನೆ. ಆದುದರಿಂದ ಈತ ಶಂಕರದಾಸಿಮಯ್ಯನಿಗೆ ಕಿರಿಯ ಸಮಕಾಲೀನನಾಗಿ ಬಸವಣ್ಣನವರಿಗೆ ಹಿರಿಯ ಸಮಕಾಲೀನನಾಗಿದ್ದನೆಂದು ಹೇಳುವುದಕ್ಕೆ ಅವಕಾಶವಿದೆ. ಇದು ಸಾಧ್ಯವೆಂದು ತೋರುತ್ತದೆ. ಈತ ಕ್ರಿ.ಶ. ೧೧೦೦ ರಲ್ಲಿ ಹುಟ್ಟಿ ೧೧೬೨ರ ತರುವಾಯವೂ ಜೀವಿಸಿರಬೇಕು. ೧೧೨೫ರ ಸುಮಾರಿನಲ್ಲಿ ಶಂಕರದಾಸಿಮಯ್ಯನ ಕೊನೆಗಾಲದಲ್ಲಿ ಆತನ ಅಹಂಕಾರ ಕಳೆದಿರಬೇಕು.

ತೆಲುಗು ಜೊಮ್ಮಯ್ಯ

ತೆಲುಗು ಜೊಮ್ಮಯ್ಯ ಬೇಟೆಗಾರನಾಗಿದ್ದನೆಂದೂ ಅಲ್ಲದೆ ಆರನೆಯ ವಿಕ್ರಮಾದಿತ್ಯನಲ್ಲಿ ತಿಂಗಳಿಗೆ ಸಾವಿರಹೊನ್ನು ಪಡೆಯುವ ಮಂತ್ರಿಯಾಗಿದ್ದನೆಂದೂ ಹರಿಹರನ ತೆಲುಗುಜೊಮ್ಮಯ್ಯನ ರಗಳೆಯಿಂದ ತಿಳಿದು ಬರುತ್ತದೆ. ಕೊಂಡಗುಳಿ ಕೇಶಿರಾಜ ಈತನನ್ನು ಕಾಣಲು ಹೋಗಿದ್ದುದು ಹರಿಹರನ ಕೇಶಿರಾಜ ರಗಳೆಯಲ್ಲಿ ಮತ್ತು ತೆಲುಗು ಜೊಮ್ಮಯ್ಯನ ರಗಳೆಯಲ್ಲಿ ಉಲ್ಲೇಖಗೊಂಡಿದೆ. ಇವರಿಬ್ಬರೂ ಸಮಕಾಲೀನರು. ವಿಕ್ರಮಾದಿತ್ಯನ ಪಿರಿಯರಸಿ ಲಕುಮಾದೇವಿ ಈತನ ಶಿಷ್ಯೆ.

ಒಂದು ದಿನ ಅರಮನೆಯಲ್ಲಿ ಶಿವನನ್ನು ನಿಂದಿಸಿದ ಪುರಾಣ ಭಟ್ಟನನ್ನು ಜೊಮ್ಮಯ್ಯ ಕೊಂದ; ವಿಚಾರಣೆಗೆ ವಿಕ್ರಮಾದಿತ್ಯ ಜೊಮ್ಮಯ್ಯನನ್ನು ಓಲಗಕ್ಕೆ ಕರೆಸಿದ. ‘ಅರಸನಿಗೆ ಜೊಮ್ಮಯ್ಯ ನಮಸ್ಕರಿಸುವುದಿಲ್ಲ’ ಇದರಿಂದ ಅರಸನಿಗೆ ಆತನ ಮೇಲೆ ಹೆಚ್ಚು ಕೋಪ ಬರಬಹುದು. ಅದನ್ನು ತಡೆಯಬೇಕು ಎಂದು ಬಗೆದು ಲಕುಮಾದೇವಿ ಸಿಂಹಾಸನದ ಹಿಂದೆ ತನ್ನ ಪ್ರಾಣಲಿಂಗವನ್ನು ಅಂಗೈಯಲ್ಲಿ ಹಿಡಿದು ನಿಂತಳು. ಲಿಂಗವನ್ನು ನೋಡಿದ ತಕ್ಷಣ ಆತ ನಮಸ್ಕರಿಸುವನು. ಆದರೆ ಅರಸ ತನಗೆ ನಮಸ್ಕರಿಸಿದನು ಎಂದು ತಿಳಿದು ಕೋಪವಡಗಿಸಿಕೊಳ್ಳುವನು ಎಂದು ಬಗೆದ ಲಕುಮಾದೇವಿಯ ವಿಚಾರಕ್ಕೆ ಜೊಮ್ಮಯ್ಯನ ನಡೆ ವಿರುದ್ಧವಾಯಿತು. ಆತ ‘ಭವಿಯಹಿಂದೇಕೆ ನಿಂತಿರುವೆ, ಮುಂದೆ ಬಾ’ ಎಂದು ಕರೆದೊಡನೆ ಲಿಂಗ ಮುಂದೆ ಬಂದು ಬಯಲು ಸಿಂಹಾಸನ ಮಾಡಿಕೊಂಡು ನಿಂತಿತು. ಆಗ ಅದಕ್ಕೆ ಜೊಮ್ಮಯ್ಯ ಪೊಡಮಟ್ಟ; ಅರಸನಿಗೆ ಆತ ನಮಸ್ಕರಿಸಲಿಲ್ಲ.

ಜೊಮ್ಮಯ್ಯ ತೆಲಗು ದೇಶದವನಾಗಿರಬೇಕು; ಆಮೇಲೆ ಕರ್ನಾಟಕಕ್ಕೆ ಬಂದಿರಬೇಕು ಎಂದು ಡಾ|| ಹಳಕಟ್ಟಿಯವರು ಊಹಿಸಿದ್ದಾರೆ. ಹರಿಹರನ ರಗಳೆಯಲ್ಲಿ ಆತ ಕಲ್ಯಾಣದಲ್ಲಿರುತ್ತಿದ್ದ, ಆತನ ಸಾಮರ್ಥ್ಯಕ್ಕೆ ಮೆಚ್ಚಿ ವಿಕ್ರಮಾದಿತ್ಯ ದೊರೆ ಕಲ್ಯಾಣಕ್ಕೆ ಯೋಜನಾಂತರದಲ್ಲಿ ಪನ್ನಿಚ್ಛಾಸಿರ ಹೊನ್ನಿನ ಆದಾಯವೀವ ಶಿವಪುರವನ್ನು ಒಂದು ಅರಮನೆಯನ್ನು ಕಟ್ಟಿಸಿಕೊಟ್ಟನೆಂದು ಹೇಳಿದೆ.

ತೆಲಗು ಜೊಮ್ಮಯ್ಯ ವಚನ ರಚಿಸಿದ್ದಾನೆ; ಆದರೆ ಇದರ ಬಗ್ಗೆ ವಾದವಿದೆ. ತೆಲುಗೇಶಮಸಣಯ್ಯ ಮತ್ತು ತೆಲಗುಜೊಮ್ಮಯ್ಯ – ಈ ಎರಡೂ ಹೆಸರುಗಳ ನಡುವೆ ಮತ್ತೂ ಅಂಕಿತಗಳ ನಡುವೆ ಗೊಂದಲ ಉಂಟಾಗಿದೆ. ಇಲ್ಲಿಯವರೆಗೆ ‘ತೆಲುಗೇಶ’ ಎಂಬ ಅಂಕಿತವುಳ್ಳ ವಚನಗಳು ಜೊಮ್ಮಯ್ಯನವೆಂದೇ ನಂಬಲಾಗಿತ್ತು. ಈ ಅಂಕಿತ ತೆಲುಗೇಶಮಸಣಯ್ಯನದ್ದೆಂದು ಡಾ|| ಎಲ್. ಬಸವರಾಜು ಅಭಿಪ್ರಾಯಪಟ್ಟಿದ್ದಾರೆ.[15] ಸಕಲ ಪುರಾತನರ ವಚನಗಳು ಭಾಗ – ೩ರಲ್ಲಿ ತೆಲುಗೇಶ್ವರ ಅಂಕಿತದ ನಾಲ್ಕು ವಚನಗಳು ತೆಲುಗೇಶ್ವರ ಮಸಣಯ್ಯನವುಗಳೆಂದು ಅಚ್ಚಿಸಿದ್ದಾರೆ.[16] ಶೂನ್ಯಸಂಪಾದನೆಯಲ್ಲಿ ತೆಲುಗೇಶ್ವರ ಅಂಕಿತದ ಒಂದು ವಚನವನ್ನು ತೆಲುಗು ಜೊಮ್ಮನದ್ದೆಂದು ಹೇಳಿದೆ.[17] ಈ ವಚನ ಸಕಲ ಪುರಾತನರ ವಚನಗಳು ಭಾಗ – ೩ರಲ್ಲಿ ಇಲ್ಲ. ಅಲ್ಲದೆ ಹಳಕಟ್ಟಿಯವರು ತೆಲಗು ಜೊಮ್ಮಯ್ಯ ಮತ್ತು ತೆಲುಗೇಶ ಮಸಣಯ್ಯನವರ ವಚನಗಳೆಂದು ಗುರುತಿಸಿದ ವಚನಗಳಲ್ಲಿ ಇಲ್ಲ. ಶೂನ್ಯಸಂಪಾದನೆಯ ಈ ವಚನ ಪ್ರಕ್ಷಿಪ್ತವಿರಬೇಕೆ? ಅದನ್ನು ಒಪ್ಪಿಕೊಂಡರೆ ತೆಲಗು ಜೊಮ್ಮಯ್ಯ ಬಸವ ಸಮಕಾಲೀನನಾಗುತ್ತಾನೆ. ಅದು ಸಾಧ್ಯವಿಲ್ಲ, ಶೂನ್ಯಸಂಪಾದನೆಕಾರ ಸಂದರ್ಭಕ್ಕೆ ತಕ್ಕಂತೆ ವಚನ ರಚಿಸುತ್ತಾನೆ ಎಂದು ಹಳಕಟ್ಟಿಯವರು ಹೇಳುತ್ತಾರೆ; ಏನೇ ಇರಲಿ ಆತ (ಶೂನ್ಯಸಂಪಾದನೆಕಾರ) ಅಂಕಿತವನ್ನು ಮಾತ್ರ ಖಚಿತವಾಗಿ ಗುರುತಿಸುತ್ತಾನೆಂದು ಪಂಡಿತರು ನಂಬುತ್ತಾರೆ. ‘ಭೀಮನಾಥ’ ಜೊಮ್ಮಯ್ಯನ ಇಷ್ಟ ದೇವರು; ಅದೇ ಅಂಕಿತ ಆತನದಾಗಬೇಕು ಎಂದು ವಾದಿಸುವವರಿದ್ದಾರೆ.[18] ಶರಣರು ಇಷ್ಟ ದೇವರನ್ನೇ ಅಂಕಿತ ಮಾಡಿಕೊಂಡಿದ್ದಾರೆ. ಆದರೆ ಒಂದೆರಡು ಅಪವಾದವಿರಲು ಸಾಧ್ಯ.

ಇಲ್ಲಿ ನಮ್ಮ ನೆರವಿಗೆ ಹಳಕಟ್ಟಿಯವರು ಮತ್ತು ಶಾಂತಲಿಂಗದೇಶಿಕ ಒದಗಿ ಬರುತ್ತಾರೆ. ಹಳಕಟ್ಟಿಯವರು ‘ತೆಲುಗೇಶ್ವರಾ’ ಎಂಬುದು ತೆಲುಗು ಜೊಮ್ಮಯ್ಯನ ಅಂಕಿತವೆಂದು[19] ಮತ್ತು ಶಂಭುತೆಲುಗೇಶ್ವರ ಎಂಬ ಅಂಕಿತ ತೆಲುಗೇಶ ಮಸಣಯ್ಯನದೆಂದು[20] ಗುರುತಿಸಿದ್ದಾರೆ. ಅಲ್ಲದೆ ಶಿವಶರಣರ ಚರಿತ್ರೆಗಳು ಭಾಗ – ೧ರಲ್ಲಿ ಮಸಣಯ್ಯನ ಚರಿತ್ರೆ ಹೇಳಿ ಶಂಭುತೆಲುಗೇಶ್ವರ ಎಂಬ ಅಂಕಿತದ ಒಂದು ವಚನ ಕೊಟ್ಟಿದ್ದಾರೆ;[21] ಶಿವಶರಣರ ಚರಿತ್ರೆಗಳು ಭಾಗ – ೩ರಲ್ಲಿ ತೆಲಗು ಜೊಮ್ಮಯ್ಯನ ಚರಿತ್ರೆ ಬರೆದು ‘ತೆಲುಗೇಶ್ವರ’ ಎಂಬ ಅಂಕಿತದ ನಾಲ್ಕು[22] ವಚನಗಳನ್ನು ಕೊಟ್ಟಿದ್ದಾರೆ. ಈ ಎರಡೂ ಅಂಕಿತಗಳ ಐದೂ ವಚನಗಳು ಡಾ|| ಸುಂಕಾಪುರರು ಸಂಪಾದಿಸಿದ ಸಕಲ ಪುರಾತನರ ವಚನಗಳು ಮೂರರಲ್ಲಿ ತೆಲುಗೇಶ್ವರ ಮಸಣಯ್ಯನವೆಂದು ಅಚ್ಚಿಸಿದ್ದಾರೆ.

ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರರತ್ನಾಕರದಲ್ಲಿ ತೆಲುಗೇಶ ಮಸಣಯ್ಯ “ಶಂಭುತೆಲುಗೇಶ” ನೆಂಬ ತಮ್ಮಿಷ್ಟ ಲಿಂಗದಲ್ಲಿ ನಿರ್ವಯಲನೆಯ್ದಿದರು ಎಂದು ಹೇಳಿವೆ.[23] ಎಂದರೆ ‘ಶಂಭುತೆಲುಗೇಶ’ ಎಂಬುದು ತೆಲುಗೇಶ ಮಸಣಯ್ಯಗಳ ಅಂಕಿತವೆಂದು ಸಿದ್ಧವಾಯಿತು. ಇನ್ನೊಂದು ಬಲವಾದ ಆಧಾರ ಇಲ್ಲಿ ದೊರಕುತ್ತದೆ; ಮಸಣಯ್ಯನ ವಚನವನ್ನೇ ಮಸಣಯ್ಯನಿಗೆ ಆರೋಪಿಸಿ ಶಾಂತಲಿಂಗದೇಶಿಕ ಹೇಳುತ್ತಾನೆ. ಆ ವಚನ ಹೀಗಿವೆ:

ಹಳಮದಿಯ ಸೀರೆಯನುಟ್ಟು, ಬಳಹದೋಲೆಯ ಕಿವಿಯಲ್ಲಿಕ್ಕಿ
ಮೊಳೆಯ ಡಂಗೆಯ ಪಿಡಿದು ಗುರುಗುಂಜಿ ದಂಡೆಯ ಕಟ್ಟಿ
ತುತ್ತುರುತುರು ಎಂಬ ಕೊಳಲು ಬಾರಿಸುತ್ತ
ಅಪಳಚಪಳನೆಂಬ ಉಲಿವ ಘಂಟೆಯ ಕಟ್ಟಿ
ತುತ್ತುರು ಜಂಗುಳಿ ದೈವಗಳನೆಲ್ಲವ ಹಿಂಡುಮಾಡಿ
ಕಾವ ನಮ್ಮ ಶಂಭುತೆಲುಗೇಶ್ವರ ಮನೆಯ ಗೋವಳನೀತ[24]

ತೆಲುಗೇಶ ಮಸಣಯ್ಯ ದನಗಾಹಿ. ಮೇಲಿನ ವಚನ ತನ್ನನ್ನು ಕುರಿತೇ ಹೇಳಿಕೊಂಡಂತೆ ಇದೆ.

ಶಾಂತಲಿಂಗದೇಶಿಕನ ಹೇಳಿಕೆ ಇದು :

“…..ವೀರಶೈವ ದೀಕ್ಷೆಯಂ ಪಡೆದು, ಗೋವಕಾವಕಾಯಕದಲ್ಲಿರುತಿರ್ದು, ಶಿವಭಕ್ತರ ಗೋವುಗಳ ಕಾಯ್ದು ತಂದು ಮನೆಯ ಕೂಡಿ, ಅವರು ಕೊಟ್ಟ ಕಾಯಕದಿಂದ ಜಂಗಮ ದಾಸೋಹವ ಮಾಡುತ್ತಿರಲು ಬಳಿಕ ಒಂದು ದಿನ ಹಳದಿಯ ಕಪ್ಪಡವನ್ನುಟ್ಟು, ಮೊಳೆಯ ದಂಡವಂ ಪಿಡಿದು, ಗುಲಗಂಜಿಯ ದಂಡೆಯ ಕೊರಳಲ್ಲಿ ಕಟ್ಟಿ ತುತ್ತುರುತುರುಎಂಬ ಕೊಳಲು ಬಾರಿಸುತ್ತಅಪಳಚಪಳ ಎಂದುಲಿಯುವ ಘಂಟೆಯ ಕಟ್ಟಿ, ಜಂಗುಳಿ ದೈವಂಗಳೆಂಬ ಪಶುಗಳ ಕಾಯ್ವ ತುರುವಳ, ಶಿವಭಕ್ತರ ಮನೆಯ ತುರುವಳ ನಾನೆಂದು ಕೊಳಲನೂದಿ ತುರುಗಳ ಕಾಯುತ್ತಿರಲೊಂದು ದಿನ……[25]

ಮೇಲಿನ ವಿವೇಚನೆಯಿಂದ ತೆಲುಗೇಶ ಮಸಣಯ್ಯನ ಅಂಕಿತ ‘ಶಂಭುತೆಲುಗೇಶ್ವರ’ ಎಂದೂ ಆತನದು ಒಂದೇ ವಚನ ಉಪಲಬ್ಧವಿರುವುದೆಂದೂ ಸ್ಪಷ್ಟವಾಗುತ್ತದೆ.

ಇನ್ನುಳಿದ ‘ತೆಲುಗೇಶ’ ಎಂಬ ಅಂಕಿತದ ಮೂರೂ ವಚನಗಳು ತೆಲಗು ಜೊಮ್ಮಯ್ಯನವೆಂದು ನಂಬಲು ಯಾವ ಆತಂಕವೂ ಇಲ್ಲ.

ಬಸವಣ್ಣನವರು ಜೊಮ್ಮಯ್ಯನನ್ನು ತಮ್ಮ ವಚನಗಳಲ್ಲಿ ಎರಡು ಸಲ ಸ್ಮರಿಸಿದ್ದಾರೆ.

“……ತೆಲುಗು ಜೊಮ್ಮಯ್ಯಂಗೆ ಒಲಿದ ದೇವಾ. ಎನ್ನನ್ನೇಕೊಲ್ಲೆಯಯ್ಯ[26]

“……ಮಾದಾರ ಚೆನ್ನಯ್ಯಂಗೆ, ಢೋಹರ ಕಕ್ಕಯ್ಯಂಗೆ ತೆಲುಗುಜೊಮ್ಮಯ್ಯಂಗೆ ಒಲಿದಾತ ಮತ್ತೊಬ್ಬ ದೇವೆ ಅಯ್ಯಾ?”[27]

ವಂಶವರ್ಧನ

‘ವಂಶವರ್ಧನ’ ಬಿದಿರು ಕಾಯಕದವನು. ಕಲ್ಯಾಣದ ಹತ್ತಿರದ ‘ಶಿವಪುರ’[28] ಈತನ ಊರು. ಮಂತ್ರಿ ಪದವಿಯನ್ನು ತ್ಯಜಿಸಿ ಕೊಂಡಗುಳಿ ಕೇಶಿರಾಜ ನೇರವಾಗಿ ತನ್ನರಸಿ ಗಂಗಾದೇವಿಯರೊಡನೆ ವಂಶವರ್ಧನನಲ್ಲಿಗೆ ಹೋದ. ವಂಶವರ್ಧನನನ್ನು ಹರಿಹರ ಹೀಗೆ ವರ್ಣಿಸುತ್ತಾನೆ: “……ಕೃತಯುಗದ ಧರ್ಮಂ ಗೂಳೆಯಂದೆಗೆದಿರ್ಪಂತೆ, ಪುಣ್ಯವೊಬ್ಬುಳಿಗೊಂಡಂತೆ, ಸಂಸಾರಮಂ ಸೋಂಕದ ಮೀಸಲಭಕ್ತಿ ಒಸರಿಸಿದಂತಿರ್ದ ಬಿದಿರಕಾಯಕದ ವಂಶವರ್ಧನನೆಂಬ ಸದುಭಕ್ತನ ಶಿವಪುರದ ಮುಂದೆ ನಡೆತಪ್ಪಾಗಳು…..[29]

ಶಿವಭಕ್ತಿ ಗುಡಿಸಲಂತಿರ್ದ ವಂಶವರ್ಧನನ ಗುಡಿಸಲಿನಲ್ಲಿ ಕೆಲದಿನ ಕೇಶಿರಾಜ ಗಂಗಾದೇವಿ ಸಹಿತವಿದ್ದು ಶಿವಗೋಷ್ಠಿ ನಡೆಸಿದರು. ವಂಶವರ್ಧನನಿಗೆ ಹೆಂಡತಿ ಇದ್ದಳೆಂದು ರಗಳೆಯಿಂದ ತಿಳಿಯುತ್ತದೆ. ಆದರೆ ಆಕೆಯ ಹೆಸರು ಗೊತ್ತಾಗುವುದಿಲ್ಲ. ಅದೇ ಅರಳುತ್ತಿರುವ ಶರಣ ಧರ್ಮಕ್ಕೆ ಸದ್ದಿಲ್ಲದೆ ಸೇವೆ ಸಲ್ಲಿಸಿದವರು ವಂಶವರ್ಧನ ಮತ್ತು ಆತನ ಹೆಂಡತಿ. ಇವರನ್ನೂ ಇಂದು ಶರಣರೆಂದು ಗುರುತಿಸಬೇಕಾಗಿದೆ.

ಶಿವದಾಸಿ, ದುಗ್ಗಳೆ, ಗಂಗಾದೇವಿ ಮತ್ತು ಲಕುಮಾದೇವಿ

ಎಲ್ಲ ಶರಣರ ಹೆಂಡದಿಂರೂ ಶರಣೈಯರಾಗಿರುವುದು ಶರಣ ಧರ್ಮದ ಒಂದು ವೈಶಿಷ್ಟ್ಯ, ಅಲ್ಲೊಂದು ಇಲ್ಲೊಂದು ಅಪವಾದವಿಲ್ಲವೆಂದಲ್ಲ. ಆದರೆ ಒಂದು ಹೊಸ ಧರ್ಮ, ಹೊಸ ಸಮಾಜ ನಿರ್ಮಾಣದ ಆಂದೋಲನ ಪ್ರಾರಂಭಿಸಿದ ಬಸವ ಪೂರ್ವ ಯುಗದ ಈ ಶರಣರು, ದಂಪತಿಗಳು ಕೂಡಿ ಶ್ರಮಿಸಿದ್ದು ಅಪೂರ್ವ; ಇದು ಮುಂದೆ ಕಲ್ಯಾಣದ ಕ್ರಾಂತಿಯ ಕಾಲಕ್ಕೆ ನೂರು ನೂರು ಸಂಖ್ಯೆಯಲ್ಲಿ ಶರಣ ದಂಪತಿಗಳು ಕೂಡಿ ಹೋರಾಡಿದ್ದು ಕಂಡುಬರುತ್ತದೆ. ಪ್ರಪಂಚದ ಯಾವ ಹೋರಾಟದಲ್ಲಿಯೂ ಇಂಥ ಉದಾಹರಣೆ ಸಿಕ್ಕುವುದಿಲ್ಲ.

ಈ ಶರಣ ಧರ್ಮದಲ್ಲಿ ಇನ್ನೊಂದು ವೈಶಿಷ್ಟ್ಯ: ಹೆಂಡಂದಿರು ಗಂಡಂದಿರಿಗೆ ದಾಸಿಯರಲ್ಲ, ಸಮಾನರು. ಅವರಿಗೆ ಧಾರ್ಮಿಕ ಸ್ವಾತಂತ್ರ್ಯವುಂಟು, ವಿಚಾರ ಸ್ವಾತಂತ್ರ್ಯವುಂಟು. ಶಂಕರದಾಸಿಮಯ್ಯನ ಹೆಂಡತಿ ಶಿವದಾಸಿ ಗಂಡನ ಜೊತೆಗೇ ಇದ್ದು ಆತನ ಯೋಗಕ್ಷೇಮ ನೋಡಿಕೊಳ್ಳುತ್ತಾಳೆ. ಅಹಂಕಾರದಿಂದ ಶವನಿಧಿ ನಾಶವಾದಾಗ ದುಗ್ಗಳೆ ಜೇಡರ ದಾಸಿಮಯ್ಯನಿಗೆ ಬುದ್ದಿ ಹೇಳುತ್ತಾಳೆ. ಗಂಡನನ್ನು ಶಂಕರದಾಸಿಮಯ್ಯನಲ್ಲಿಗೆ ಕರೆದುಕೊಂಡು ಹೋಗಿ ಕ್ಷಮೆ ಬೇಡುತ್ತಾಳೆ. ಹರಿಹರ ಈಕೆಯನ್ನು, “ಶಿವಭಕ್ತಿ ಸಂಪನ್ನೆ, ಅಗ್ಗಳದ ದುಗ್ಗಳೆ…. ಶಾಂತಿಭೂಷಣೆ, ಶಿವೈಕ್ಯನಿಷ್ಠಾಸಿದ್ಧಿ” ಎಂದು ಕರೆಯುತ್ತಾನೆ. ಕೊಂಡಗುಳಿ ಕೇಶಿರಾಜನ ಹೆಂಡತಿ ಗಂಗಾದೇವಿ ಶರಣ ತತ್ತ್ವಗಳ ಸಹಕಾರ ಮೂರ್ತಿ. ಕೇಶಿರಾಜ ದಣ್ಣಾಯಕರು ಮಂತ್ರಿಪದವಿ ತ್ಯಜಿಸಿ ಬರುತ್ತಿರುವುರೆಂಬ ವಾರ್ತೆ ಕೇಳುತ್ತಲೆ “….. ಪೆರ್ಮಾಡಿ ರಾಯನ ಸೋಮ್ಮಪ್ಪ ಕಟಕ ಮಕುಟಕೇಯುರಾದಿ ಸರ್ವಾಭರಣಂ ಮೊದಲಾದ ಸಕಲ ವಸ್ತುವಂ ಭಂಡಾರಮಂ ವಜ್ರಮಾಣಿಕ್ಯಮೌಕ್ತಿಕಾದಿ ರತ್ನಂಗಳುಮಂ ಕಾಪಿನವರ್ಗೊಪ್ಪಿಸಿಕೊಟ್ಟು ನೇತ್ರಮನುಟ್ಟು, ಭಸಿತಮನಿಟ್ಟು ಕರಮಕಮಲಸ್ಥಿತ ಶಿವಲಿಂಗ ಸಂಪನ್ನೆಯಾಗಿ ನಿಳಯಂ ಪೊರಮೊಟ್ಟು ರತ್ನದೊಡನೆ ಕಾಂತಿ, ಚಂದ್ರನೊಡನೆ ಬೆಳ್ದಿಂಗಳ್ ತರಣಿಯೊಡನೆ ಕಿರಣಂಗಳೇಕನಿಷ್ಠೆಯೊಡನೆ ಶಿವಭಕ್ತಿ ಬರ್ಪಂತೆ ದಣ್ಣಾಯಕರೊನಡೆ ಅರಸಿ ಗಂಗಾದೇವಿಯ ರ್ಬರುತಿರೆ….”

ಗಂಗಾದೇವಿ ಸಂಪತ್ತಿಗೆ ಆಸೆಪಡದೆ ಅಧಿಕಾರಕ್ಕೆ ಬಾಯಿಬಿಡದೆ ಗಂಡ ಹೇಳುವ ಮುನ್ನವೇ ಆತನಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಸರ್ವವನ್ನೂ ತ್ಯಜಿಸಿ ಹೊರಟು ಬಿಡುತ್ತಾಳೆ. ಗಂಗಾದೇವಿ ಸಮಯ ಪ್ರಜ್ಞೆಯುಳ್ಳಾಕೆ. ವಂಶವರ್ಧನ ಮುಂತಾದ ಶರಣರೊಡನೆ ಕೇಶಿರಾಜ ಏಳು ದಿನ ಹಗಲು ರಾತ್ರಿ ಶಿವಗೋಷ್ಠಿಯಲ್ಲಿ ಮೈಮರೆತಿರಲು ಆಗ “ಹರಭಕ್ತಿಯಂ ಶಿವಜ್ಞಾನಾಂಗನೆಯೆಚ್ಛರಿಸಲ್ಬಪ್ಪಂತೆ ಗಂಗಾದೇವಿಯರ್ಬಂದು ದೇವಾದೇವಾ ಸೋಮನಾಥಂಗೇಳುದಿನಂ ಶರಣಸಂಗ ಸುಖಮುಖಾ ರೋಗಣೆಯೋಗಿರ್ದುದಿನ್ನೆಮಗೆಲ್ಲರರೆವಂತೆ ಆರೋಗಿಸಲ್ಪ್ರಸಾದಮಂ ಕರುಣಿ ಸವೇಳ್ಕುಂ……..” ಎಂದು ಗಂಗಾದೇವಿ ಎಚ್ಚರಿಸುತ್ತಾಳೆ.

ತೆಲಗು ಜೊಮ್ಮಯ್ಯನ ಶಿಷ್ಯೆಯಾಗಿ ಶರಣ ಧರ್ಮಕ್ಕೆ ಪ್ರೋತ್ಸಾಹವಿತ್ತ ಆರನೆಯ ವಿಕ್ರಮಾದಿತ್ಯನ ಪಿರಿಯರಸಿ ಲಕುಮಾದೇವಿಯನ್ನು ನಾವಿಂದು ಒಬ್ಬ ಶರಣೆಯೆಂದು ಗುರುತಿಸಬೇಕಾಗಿದೆ. ಶರಣ ಧರ್ಮಕ್ಕೆ ಆಶ್ರಯ ನೀಡಿದ ಪ್ರಥಮ ರಾಣಿ ಸುಗ್ಗಲೆಯಾದರೆ ಎರಡನೆಯ ರಾಣಿ ಲಕುಮಾದೇವಿಯಾಗುತ್ತಾಳೆ. ಜೊಮ್ಮಯ್ಯನಿಗೆ ಹೊಸ ಪರಿಯ ವಸ್ತ್ರಗಳನ್ನು, ಚಂದನ ಕರ್ಪೂರ ಧೂಪಗಳನ್ನೂ ಪೊಚ್ಚಪೂಸ ಪೂಗಳನ್ನು ಕಳುಹಿಸುತ್ತಿದ್ದಳು. ಆಕೆ “ಶಿವಲಿಂಗ ಸಂಪನ್ನೆ, ಜಂಗಮಸ್ನೇಹಿ, ಲಿಂಗಾರ್ಚನಾನಿರತೆ, ಪೆರ್ಮಾಡಿರಾಯನರಸಿ, ಸತ್ಯಭಕ್ತೆ…..” ಎಂದು ಹರಿಹರ ವರ್ಣಿಸುತ್ತಾನೆ. ಜೊಮ್ಮಯ್ಯನಿಗೆ ಕೆಡುಕಾಗದಿರಲೆಂದು ತನ್ನ ಪ್ರಾಣಲಿಂಗವನ್ನು ಸಿಂಗರಿಸಿ ಮಾಣಿಕ್ಯ ಸಿಂಹಾಸನವೆರಸಿ ಅರಸನರಿಯದಂತೆ ಆತನ ಸಿಂಹಾಸನದ ಹಿಂದೆ ಪಿಡಿದಿದ್ದಳು.

ತೆಲುಗು ಜೊಮ್ಮಯ್ಯನ ರಗಳೆಯಲ್ಲಿ ಲಕುಮಾದೇವಿಯೆಂದು ವರ್ಣಿತಳಾದ ಈಕೆಯನ್ನು ಶಾಸನಗಳು ಲಕ್ಷ್ಮಾದೇವಿ ಲಕ್ಷ್ಮೀದೇವಿ, ಪರಿಯರಸಿ ಲಕ್ಷ್ಮೀಮಹಾದೇವಿ, ಪಿರಿಯರಸಿ ಲಕ್ಷ್ಮಾದೇವಿ ಎಂದು ಕರೆದಿವೆ. ವಿಕ್ರಮಾದಿತ್ಯನಿಗೆ ಹದಿನಾರು ಜನ ಪ್ರಮುಖ ರಾಣಿಯರು, ಇವರಲ್ಲಿ ಲಕುಮಾದೇವಿ ಹೆಚ್ಚು ಪ್ರಸಿದ್ಧಿ ಪಡೆದವಳು; ಪ್ರಜಾಕೋಟಿಗೆ ಬೇಕಾದವಳು.

ಲಕುಮಾದೇವಿ ಉತ್ತಮ ಆಡಳಿತಗಾರಳು; ಆಕೆ ಅನೇಕ ಪ್ರಾಂತ್ಯಗಳನ್ನು ಆಳಿದ್ದನ್ನು ಶಾಸನಗಳಲ್ಲಿ ಉಲ್ಲೇಖಗೊಂಡಿದೆ: ಕ್ರಿ.ಶ. ೧೦೮೦ರಲ್ಲಿ ಡೋಣಿ (ಈಗಿನ ಮುಂಡರಗಿ ತಾಲೂಕ)ಯನ್ನು, ಕ್ರಿ.ಶ. ೧೦೮೪ ರಲ್ಲಿ ಕಲ್ಯಾಣವನ್ನು, ಕ್ರಿ.ಶ. ೧೦೯೫ – ೯೬ ರಲ್ಲಿ ಹದಿನೆಂಟು ಅಗ್ರಹಾರ ಮತ್ತು ಡಂಬಳವನ್ನು ಕ್ರಿ.ಶ.೧೧೧೦ – ೧೧ ರಲ್ಲಿ ನಿಡಸಂಗಿಯನ್ನು ಈಕೆ ಆಳುತ್ತಿದ್ದಳು.

ಲಕುಮಾದೇವಿಯ ತಂದೆ ತಾಯಂದಿರು ಕಂಕೋಜ – ಮಸಣಿಕವೆಯರೆಂದು ಖೇಡಗಿ ಶಾಸನದಿಂದ ತಿಳಿದು ಬರುತ್ತದೆ; ಖೇಡಗಿ ಗ್ರಾಮದಲ್ಲಿ ತಂದೆಯ ಹೆಸರಿನಲ್ಲಿ ಕಂಕೇಶ್ವರ ದೇವಾಲಯ ಕಟ್ಟಿಸಿ ಭೂಮಿ ನಿವೇಶನ ಹೂದೋಟಗಳನ್ನು ದಾನ ಮಾಡಿದ್ದು ಆ ಶಾಸನದಲ್ಲಿ ಉಕ್ತವಾಗಿದೆ.[30] ಇದೇ ರೀತಿ ಬೇರೆ ದೇವಾಲಯಗಳನ್ನು ನಿರ್ಮಿಸಿದ್ದು ಅಲ್ಲಿಯ ಸ್ಥಾನಾಚಾರ್ಯರಿಗೆ ಗ್ರಾಮಗಳನ್ನು ದಾನಕೊಟ್ಟುದು ಇನ್ನಿತರ ಶಾಸನಗಳು ಹೇಳುತ್ತವೆ. ಇವೇ ಶಾಸನಗಳಲ್ಲಿ ಆಕೆಯನ್ನು ಮಹಾದಾನವಿನೋದಿನಿ, ದಾನಚಿಂತಾಮಣಿ ಎಂದು ಕರೆಯಲಾಗಿದೆ.

[1] ಡಾ|| ಎಂ. ಎಂ. ಕಲಬುರ್ಗಿ : ಶಾಸನಗಳಲ್ಲಿ ಶಿವಶರಣರು, ಪುಟ ೩೫.
ಎರಡನೆಯ ಮುದ್ರಣ ೧೯೭೦. ಆದರೆ ಈ ಗ್ರಂಥದ ಎರಡನೆಯ ಮುದ್ರಣದಲ್ಲಿ (೧೯೭೮- ಪ್ರಕಾಶಕರು ತೋಂಟದಾರ್ಯಮಠ ಗದಗ) ಕ್ರಿ.ಶ. ೧೧೪೮ ರಲ್ಲಿ “ದತ್ತಿನೀಡಿದ ಇವರು ದಾಸಿಮಯ್ಯನ ನೇರವಾದ ಶಿಷ್ಯರೇ ಆಗಿರಬೇಕು” ಎಂದು ತಮ್ಮ ಅಭಿಪ್ರಾಯವನ್ನು ಬದಲಿಸಿದ್ದಾರೆ. (ಪುಟ ೩೫)

[2] ಹೆಚ್.ದೇವಿರಪ್ಪ ಮತ್ತು ಆರ್. ರಾಚಪ್ಪ : ಜೇಡರದಾಸಿಮಯ್ಯನ ವಚನಗಳು. ಪ್ರಸ್ತಾವನೆ ಪುಟ : xxiii.

[3] ಡಾ|| ಎಂ. ಎಂ. ಕಲಬುರ್ಗಿ : ಶಾಸನಗಳಲ್ಲಿ ಶಿವಶರಣರು, ಪುಟ ೩೬.
ಮೊದಲ ಮುದ್ರಣ ೧೯೭೦. ಆದರೆ ಈ ಗ್ರಂಥದ ಎರಡನೆಯ ಮುದ್ರಣದಲ್ಲಿ (೧೯೭೮-ಪ್ರಕಾಶಕರು ತೋಂಟದಾರ್ಯಮಠ ಗದಗ) ಕ್ರಿ.ಶ. ೧೧೪೮ ರಲ್ಲಿ “ದತ್ತಿನೀಡಿದ ಇವರು ದಾಸಿಮಯ್ಯನ ನೇರವಾದ ಶಿಷ್ಯರೇ ಆಗಿರಬೇಕು” ಎಂದು ತಮ್ಮ ಅಭಿಪ್ರಾಯವನ್ನು ಬದಲಿಸಿದ್ದಾರೆ. (ಪುಟ ೩೫)

[4] ದೇವರದಾಸಿಮಾರ್ಯ ಪ್ರಶಸ್ತಿ: ಗೋವಿಂದಪೈ ಲೇಖನ, ಪುಟ ೧೯೨-೯೩-(೧೯೫೩)

[5] ಡಾ|| ಎಂ. ಎಂ. ಕಲಬುರ್ಗಿ : ಶಾಸನಗಳಲ್ಲಿ ಶಿವಶರಣರು, ಪುಟ ೪೦.
ಎರಡನೆಯ ಮುದ್ರಣ.

[6] ಅದೇ ಪುಟ ೪೨.

[7] ಡಾ|| ಎಂ.ಎಸ್. ಸುಂಕಾಪುರ : ಹರಿಹರ ದೇವಕೃತ ನೂತನ ಪುರಾತನರ ರಗಳೆಗಳು. ಪುಟ ೨೫೬

[8] Dr. P.B. Desai: A history of Karnataka Page 174 The last Date Known of Yuvaraja Jayasimha is 1082 A.D. December 25, which is also The earliest date of yuvraja Mallikarjuna Son of Vikramaditya.

[9] ಸಂ.ಶಿ. ಭೂಸನೂರಮಟ (ಸಂ) ಶೂನ್ಯ ಸಂಪಾದನೆ ಪುಟ, ೪೨೩-೪೨೪

[10] ಡಾ|| ಫ.ಗು. ಹಳಕಟ್ಟಿ : ವಚನ ಶಾಸ್ತ್ರಸಾರ ಭಾಗ , ಪುಟ ೬೦೪.

[11] ಡಾ|| ಫ.ಗು. ಹಳಕಟ್ಟಿ : ಶಿವಶರಣರ ಚರಿತ್ರೆಗಳು ಭಾಗ , ಪುಟ ೧೨೩-೧೨೪.

[12] ಡಾ|| ಎಲ್.ಬಸವರಾಜು : ದೇವರದಾಸಿಮಯ್ಯನ ವಚನಗಳು, ಪ್ರಸ್ತಾವನೆ ಪುಟ xxxvi.

[13] ಡಾ|| ಆರ್.ಸಿ. ಹಿರೇಮಠ ಮತ್ತು ಡಾ|| ಎಂ.ಎಸ್.ಸುಂಕಾಪುರ (ಸಂ): ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರ ರತ್ನಾಕರ ಭಾಗ, ಪುಟ ೩೮೮.

[14] ಆರ್.ನರಸಿಂಹಚಾರ್ : ಕರ್ನಾಟಕ ಕವಿಚರಿತೆ ಸಂಪುಟ , ಪುಟ ೨೦೫ ಪರಿಶೋದಿತ ಮುದ್ರಣ ೧೯೯೧.

[15] ಡಾ|| ಎಲ್.ಬಸವರಾಜು : ಶಿವದಾಸಗೀತಾಂಜಲಿ ಪುಟ ೩೨೧ (ಈತನ ಆರಾಧ್ಯ ಭೀಮನಾಥನೆಂದು ತಿಳಿದು ಬರುವುದು ಈತನ ಅಂಕಿತ ‘ಭೀಮನಾಥ’ ಎಂದಿರಬಹುದೇ ಹೊರತು ‘ತೆಲುಗೇಶ್ವರಾ’ ಎಂದಿರಲಾರದು. ತೆಲುಗು ಬಸವಪುರಾಣ (ಪುಟ ೩೮೯) ಮತ್ತು ಶೂನ್ಯಸಂಪಾದನೆ (ಪುಟ ೨೧೭) ಗಳಿಂದ ಈತ ಬಸವೇಶ್ವರನ ಸಮಕಾಲೀನನೆಂಬ ತಪ್ಪು ಕಲ್ಪನೆಗೆ ಆಸ್ಪದವಾಗುವುದು; ಆದರೆ ಈ ಜೊಮ್ಮಣ್ಣನು ಬಸವನಿಗಿಂತ ಪ್ರಾಚೀನನು.)

[16] ಡಾ|| ಎಂ.ಎಸ್. ಸುಂಕಾಪುರ : ಸಕಲಪುರಾತನ ವಚನಗಳು ಭಾಗ , ಪುಟ ೧೨೬-೧೨೭.

[17] ಸಂ.ಶಿ. ಭೂಸನೂರಮಠ : ಶೂನ್ಯಸಂಪಾದನೆ, ಪುಟ ೨೧೭.

[18] ಡಾ|| ಎಲ್. ಬಸವರಾಜು : ಶಿವದಾಸಗೀತಾಂಜಲಿ, ಪುಟ ೩೨೧.

[19] ಡಾ|| ಫ.ಗು. ಹಳಕಟ್ಟಿ : ವಚನ ಶಾಸ್ತ್ರಸಾರ ಭಾಗ , ಪುಟ ೬೦೩.

[20] ಅದೇ ಪುಟ ೬೦೭.

[21] ಡಾ|| ಫ.ಗು. ಹಳಕಟ್ಟಿ : ಶಿವಶರಣರ ಚರಿತ್ರೆಗಳು ಭಾಗ , ಪುಟ ೭೮.

[22] ಡಾ|| ಫ.ಗು. ಹಳಕಟ್ಟಿ : ಶಿವಶರಣರ ಚರಿತ್ರೆಗಳು ಭಾಗ , ಪುಟ ೯೬.
(ಇಲ್ಲಿ ಕೊಟ್ಟ ನಾಲ್ಕು ವಚನಗಳಲ್ಲಿ ಒಂದು ಶೂನ್ಯಸಂಪಾದನೆಯಲ್ಲಿದ್ದುದು ಸೇರಿದೆ.)

[23] ಡಾ|| ಆರ್.ಸಿ. ಹಿರೇಮಠ ಮತ್ತು ಡಾ|| ಎಂ.ಎಸ್. ಸುಂಕಾರಪು: ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರ ರತ್ನಾಕರ ಭಾಗ, ಪುಟ ೨೩೮.

[24] ಡಾ|| ಎಂ.ಎಸ್. ಸುಂಕಾಪುರ : ಸಕಲಪುರಾತನರ ವಚನಗಳು ಭಾಗ , ಪುಟ ೧೨೭.

[25] ಡಾ|| ಆರ್.ಸಿ. ಹಿರೇಮಠ ಮತ್ತು ಎಂ.ಎಸ್. ಸುಂಕಾಪುರ : ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರ ರತ್ನಾಕರ ಭಾಗ, ಪುಟ ೨೩೮.

[26] ಶಿ.ಶಿ. ಬಸವನಾಳ; ಬಸವಣ್ಣನವರ ಷಟ್ಸ್ಥಲ ವಚನಗಳು, ಪುಟ ೧೩೫, ವಚನ ೫೧೯.

[27] ಅದೇ ಪುಟ ೧೨೪, ವಚನ ೪೭೪.

[28] ತೆಲುಗುಜೊಮ್ಮಯ್ಯನಿಗೆ ಆರನೆಯ ವಿಕ್ರಮಾದಿತ್ಯ ಒಂದು ‘ಶಿವಪುರ’ ವನ್ನು ರಚಿಸಿಕೊಟ್ಟನೆಂದು ಹರಿಹರನ ತೆಲುಗು ಜೊಮ್ಮಯ್ಯ ರಗಳೆಯಲ್ಲಿದೆ. ಅದು ಯಾವ ಶಿವಪುರ? ವಂಶವರ್ಧನನ ಈ ಶಿವಪುರ ಯಾವುದು?

[29] ಡಾ|| ಎಂ.ಎಸ್. ಸುಂಕಾಪುರ : ನೂತನ ಪುರಾತನರ ರಗಳೆಗಳು, ಪುಟ ೧೯೦.

[30] SII-xx 94 ಖೇಡಗಿ (ತಾಲೂಕಾ ಇಂಡಿ.)