ಈಗ ಕನಸುಮನಸಿನಲ್ಲಿ – ಸರ್ವದರಲ್ಲಿ ನಲ್ಲನ ನೆನಹೇ ನೆನಹು. ಆತ ಬಂದೇ ಬರುವನೆಂದು ನಂಬಿ ಮನೆಯನ್ನು ಸಿಂಗಾರ ಮಾಡುತ್ತಾಳೆ; ಗಿಳಿಗೆ ಹಂಜರವಿಕ್ಕಿ, ಸೊಡರಿಂಗೆಣ್ಣೆಯನೆರೆದು ಬತ್ತಿಯನಿಕ್ಕಿ ಜ್ಯೋತಿ ಮುಟ್ಟಿಸುತ್ತಾಳೆ. ತನ್ನನ್ನು ಸಿಂಗರಿಸಿಕೊಂಡು ಹೀಗೆ ಹೇಳುತ್ತಾಳೆ.

ಅರಿಷಿನವನೆ ಮಿಂದು, ಹೊಂದೊಡಿಗೆಯನೆ ತೊಟ್ಟು,
ಪುರುಷನ ಒಲವಿಲ್ಲದ ಲಲನೆಯಂತಾಗಿರ್ದೆನಯ್ಯಾ !
ವಿಭೂತಿಯನೆ ಹೂಸಿ, ರುದ್ರಾಕ್ಷಿಯನೆ ಕಟ್ಟಿ,
ಶಿವ ನಿಮ್ಮೊಲವಿಲ್ಲದಂತೆ ಆಗಿರ್ದೆನಯ್ಯಾ !
ಕೆಟ್ಟು ಬಾಳುವರಿಲ್ಲಾ ಎಮ್ಮವರ ಕುಲದಲ್ಲಿ;
ನೀನೊಲಿದಂತೆ ಸಲಹಯ್ಯಾ ಕೂಡಲ ಸಂಗಮದೇವಾ.

ರಾತ್ರಿ ಕಳೆದು ಆತನ ನೆನಹಿನಿಂದಲೇ ಉದಯವಾಗುತ್ತದೆ. ಮಿಂದು ಮಡಿಯುಟ್ಟು ಬಾಗಿಲಿಗೆ ನಿಂದು,

ಉದಯದಲೆದ್ದು ನಿಮ್ಮ ನೆನೆವೆನಯ್ಯಾ:
ಕಸದಗೆದು ಚಳೆಯ ಕೊಟ್ಟು
ನಿಮ್ಮ ಬರುವ ಹಾರುತಿರ್ಪೆನಯ್ಯಾ.
ಹಸೆ ಹಂದರವನಿಕ್ಕಿ ನಿಮ್ಮಡಿಗಳಿಗೆ
ಎಡೆಮಾಡಿಕೊಂಡಿಪ್ಪೆನಯ್ಯಾ;
ಚೆನ್ನಮಲ್ಲಿಕಾರ್ಜುನಯ್ಯಾ, “ನೀನಾವಾಗ ಬಂದಿಹೆಯೆಂದು.”

“ಬಾರಯ್ಯ, ಚನ್ನಮಲ್ಲಿಕಾರ್ಜುನಯ್ಯಾ, ನಿನ್ನ ಬರುವೆನ್ನ ಸುದಿನ ಬರುವು, ಬಾರಯ್ಯಾ; ನೀನು ಬಂದಹೆಯೆಂದು ಬಾಯಾರಿ ಬಳಲಿಪ್ಪೆನಯ್ಯಾ” ಎಂದು ಆಕೆ ಗೋಗರೆಯುತ್ತಾಳೆ.

ಆಕೆ ಆಸತ್ತಗಳು, ಬೇಸತ್ತಳು. ಒಮ್ಮೆ ಕಾಮನ ಕಾಲು ಹಿಡಿದಳು; ಒಮ್ಮೆ ಚಂದ್ರಮನಿಗೆ ಸೆರಗೊಡ್ಡಿ ಬೇಡುವಳು, ‘ಸುಡಲೀ ವಿರಹವು, ಚೆನ್ನಮಲ್ಲಿಕಾರ್ಜುನನೊಲ್ಲದ ಕಾರಣ ಎಲ್ಲರಿಗೆ ಹಂಗಿತಿಯಾದೆನವ್ವಾ” ಎಂದು ದುಃಖಿಸುತ್ತಾಳೆ.

ದಿನಗಳೆದಂತೆಲ್ಲ ವಿರಹದುರಿಯಲ್ಲಿ ಬೆಂದ ಆಕೆಯ ನಿಷ್ಠೆ ಮತ್ತಷ್ಟು ಗಟ್ಟಿಗೊಂಡಿತು. ಮನದಲ್ಲಿ ಶಿವನ ನೆನಹು ತುಂಬಿತು. ಕಿವಿಯಲ್ಲಿ ಆತನ ಕೀರ್ತಿ ತುಂಬಿತು, ವಚನದಲ್ಲಿ ಆತನ ನಾಮಾಮೃತ ತುಂಬಿತು, ನಯನದಲ್ಲಿ ಆತನ ಮೂರುತಿ ತುಂಬಿತು, ಆತನ ಚರಣಕಮಲದಲ್ಲಿ ತುಂಬಿಯಾಗುವ ಆಸೆ; ಆದರೆ ಆ ಚರಣಕಮಲಗಳ ಸುಳಿವೇ ಇಲ್ಲ.

ಅವಳ ಭಾವರತಿ ಬಲಗೊಂಡಿತು. ನಲ್ಲನ ನೆನಹಿನ ಮಧು ಅಂಗಾಂಗಗಳಲ್ಲಿ ಹರಿದು ಕಾಯ ದಂಡಿಗೆಯಾಯಿತು. ಶಿರ ಸೋರೆಯಾಯಿತು. ನರಗಳು ತಂತಿಯಾದುವು. ಆದರೆ ಉರದಲ್ಲಿ ಒತ್ತಿ ಬಾರಿಸುವ ವೈಣಿಕ ಇನ್ನೂ ಬರಲಿಲ್ಲ.

ಬಾರನೇತಕವ್ವಾ ನಮ್ಮನೆಯಾತ?
ತೋರನೇತಕವ್ವಾ ತನ್ನ ದಿವ್ಯರೂಪವ ?
ಬೀರನೇತಕವ್ವಾ ಅತಿ ಸ್ನೇಹವ?
ಇನ್ನೆಂತು ಸೈರಿಸುವೆನವ್ವಾ
ಹೇಗೆ ತಾಳುವೆನವ್ವಾ?
ತನುತಾಪಗೊಳ್ಳುತಿದೆ; ಮನ ತಲ್ಲಣವಾಗುತಿದೆ,
ಅಖಂಡೇಶ್ವರನೆಂಬ ನಲ್ಲನ ತೋರಿಸಿ
ಎನ್ನ ಪ್ರಾಣವನುಳುಹಿಸಿಕೊಳ್ಳಿರವ್ವಾ.

ಎಂದು ಧರೆಗಗನ – ಕರಗುವಂತೆ ಮೊರೆಯಿಡುವಳು; ರೋಧಿಸುವಳು. ಅದು ಅರಣ್ಯರೋದನವಾಯಿತು. “ನಾನಿಮ್ಮ ನೆನೆವೆನು, ನೀವೆನ್ನನರಿಯಿರಿ” ಎಂದು ಪ್ರಲಾಪಿಸಿ ನಲ್ಲನಮೇಲೆ ಮುಳಿಸುಗೊಳ್ಳುತ್ತಾಳೆ. ಅವನು ಕಟುಕ. ದಾಸಯ್ಯನ ಹೆಂಡತಿಯ ವಸ್ತ್ರವ ಬೇಡಿದನು; ಸಿರಿಯಾಳನ ಮಗನ ಬಾಣಸವನುಂಡನು. ನಂಬಿದವರ ಗೋಣ ಕೊಯ್ದನು. ಕೂರಂಬಿನಲೆಚ್ಚ ನರನನ್ನು ಹರಸಿ, ಅರಳಂಬಿನಲೆಚ್ಚ ಕಾಮನನುರುಹಿದನು. ತರಕಟ ಕಾಡಿಸುವ ನಗಿಸುವನೊಳ್ಳಿದನೇ? ಅವನಲ್ಲಿ ಒಳಿತೇನಿದೆ? ಎಂದು ಮುನಿಸಿನಿಂದ ಅವನನ್ನು ಬೈಯುತ್ತಾಳೆ. ಮರುನಿಮಿಷಕ್ಕೆ ಮುನಿಸು ಮಾಯವಾಗಿ, ಪ್ರೀತಿ ಮೈದೋರುತ್ತದೆ. ತಾನು ಹಾಗೆ ಆಡಿಕೊಂಡುದು ತಪ್ಪೆಂದು ಬಗೆಯುತ್ತಾಳೆ.

ಕಣ್ಣಕೋಪಕ್ಕೆ ಮುಂದರಿಯದೆ ನುಡಿದೆ:

ಮನಮೆಚ್ಚಿ ಮರುಳಾದೆ………………..
ಎನ್ನ ಮುನಿಸು ಎನ್ನಲ್ಲಿಯೇ ಅಡಗಿತ್ತು.
ಇನ್ನು ಬಾರಯ್ಯಾ, ಕೂಡಲಸಂಗಮದೇವಾ.

ಎಂದು ಒಲುಮೆದೋರಿ ಬೇಡಿಕೊಂಡಳು. ಆದರೇನು? ಶಿವನು ಒಲಿದು ಬರಲಿಲ್ಲ. ಇಷ್ಟು ಸುಲಭದಲ್ಲಿ ಅವನೊಲಿವನೇ? ಬರುಬರುತ್ತ ಆಕೆಗೆ ಒಂದು ರೀತಿಯ ಕೆಚ್ಚು ಮೂಡಿ ಒಲುಮೆ ಇನ್ನಷ್ಟು ಗಟ್ಟಿಗೊಳ್ಳುತ್ತದೆ.

ನಿನ್ನರಿಕೆಯ ನರಕವೇ ಮೋಕ್ಷ ನೋಡಯ್ಯಾ
……………………………………………………
ನೀ ಕಟ್ಟಿ ಕೆಡಹಿದ ಬಂಧವೇ ನಿರ್ಬಂಧ ನೋಡಯ್ಯ

ಎಂದು ಮನಸ್ಸಿಗೆ ನೆಮ್ಮದಿ ತಂದುಕೊಂಡು.

ಅಯ್ಯಾ, ನೀ ಕೇಳಿದರೆ ಕೇಳು, ಕೇಳದಿದ್ದೊಡೆ ಮಾಣು
ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯಾ

ಎಂದು ಆತನನ್ನು ಕುರಿತು ಹಾಡುತ್ತಾಳೆ, ಒಲುಮೆ ದೋರುತ್ತಾಳೆ, ಏಗೈದರೂ ಆತನ ಸುಳಿವಿಲ್ಲ.

ಆರೂ ಇಲ್ಲದವಳೆಂದು ಆಳಿಗೊಳಲು ಕಂಡೆಯಯ್ಯಾ !
ಏನಮಾಡಿದೊಡೆಯೂ ಅನಂಜುವಳಲ್ಲ.
ತರಗೆಲೆಯ ಮೆಲಿದು ಅನಿಹೆನು, ಸುರಗಿಯಮೇಲೊರಗಿ ಆನಿಹೆನು.
ಚೆನ್ನಮಲ್ಲಿಕಾರ್ಜುನಯ್ಯಾ ಕರಕರ ಕಾಡಿನೋಡಿದೊಡೆ
ಒಡಲನೂ ಪ್ರಾಣವನೂ ನಿಮಗೊಪ್ಪಿಸಿ ಶುದ್ಧಳಹೆನು

ಎಂದು ನುಡಿದು ಮನಸ್ಸಿನಲ್ಲಿ ಏನು ನೆನೆದಳೊ? ಮನೆ ತೊರೆದಳು, ಊರು ತೊರೆದಳು, ಹಾಗೆ ಊರುಬಿಟ್ಟು ಹೋಗದಿರೆಂದ ಗೆಳತಿಯರಿಗೆ, “ನೊಂದ ನೋವ ನೋಯದವರೆತ್ತಬಲ್ಲರು? ಚೆನ್ನಮಲ್ಲಿಕಾರ್ಜುನಯ್ಯನಿರಿದಲಗು ಒಡಲಲ್ಲಿ ಮುರಿದು ಹೊರಳುವೆನ್ನಳಲನು ನೀವೆತ್ತ ಬಲ್ಲಿರೆ?” ಎಂದು ನುಡಿದು ನಡೆದಳು. “ಎಲ್ಲಿಗೆ ಹೋಗುವೆ? ಏನು ಮಾಡುವೆ? ಏನುಣ್ಣುವೆ? ಎಲ್ಲಿರುವೆ?” ಎಂದು ಗೆಳತಿಯರು ಮತ್ತೆ ಬಿಡದೆ ಕೇಳಿದರು. ಅವರಿಗೆ ಹೀಗೆ ಉತ್ತಿರಿಸಿದಳು:

ಹಸುವಿಂಗೆ ಭಿಕ್ಷವುಂಟು;
ತೃಷೆಗೆ ಹಳ್ಳದಲ್ಲಿ ಸುಚಿತ್ತವಾದ ಆಗ್ಭವಣಿವುಂಟು;
ಕಟ್ಟಿಕೊಂಬರೆ ತಿಪ್ಪೆಯಮೇಲೆ ಅರಿವೆವುಂಟು;
ಶಯನಕ್ಕೆ ಹಾಳು ದೇಗುಲವುಂಟು;
ನನ್ನ ಸಮಸಖಿಯಾಗಿ ನಿಮ್ಮ ಜ್ಞಾನವುಂಟು
ಚೆನ್ನಮಲ್ಲಿಕಾರ್ಜುನಾ ಆತ್ಮಸಂಗಾತಕ್ಕೆ ನೀನೆನಗುಂಟು

ಊರು ತೊರೆದು ಹೋದಳು. ಅಡವಿ ಸುತ್ತಿದಳು; ಗಿರಿಗಹ್ವರಗಳಲ್ಲಿ ಸುಳಿದಳು. ಆತನ ಕುರುಹು ಎಲ್ಲಿಯೂ ಕಾಣಲಿಲ್ಲ. ಆದರೆ ಕಷ್ಟಗಳು ಹೆಚ್ಚಿದವು. ಆಕೆಯ ಅಂತರಂಗ ಕೆಚ್ಚಿನಿಂದ ಮೊರೆಯಿತು; “ಮನೆಮನೆ ಕೈಯೊಡ್ಡಿ ಬೇಡುವಂತೆ ಮಾಡು, ಬೇಡಿದೊಡೆ ಇಕ್ಕದಂತೆ ಮಾಡು.” ಆದರೂ ನಾನಂಜುವವಳಲ್ಲ. ಬಂದದ್ದೆಲ್ಲ ಬರಲಿ; ಎಲ್ಲಕ್ಕೂ ಎದೆಯೊಡ್ಡುವೆ. “ಕಿಡಿಕಿಡಿ ಕೆದರಿದೊಡೆ ಹಸಿವು ತೃಷೆ ಅಡಗಿತೆಂಬೆ; ಮುಗಿಲು ಹರಿದು ಬಿದ್ದೊಡೆ ಮಜ್ಜನಕ್ಕೆರೆದರೆಂಬೆ; ಗಿರಿ ಮೇಲೆಬಿದ್ದೊಡೆ ಎನಗೆ ಪುಷ್ಪ ಪೂಜೆ ಎಂಬೆನು; ಚೆನ್ನಮಲ್ಲಿಕಾರ್ಜುನಯ್ಯ ಶಿರಹರಿದು ಬಿದ್ದೊಡೆ ಪ್ರಾಣ ನಿಮಗರ್ಪಿತವೆಂಬೆನು” ಎಂದು ವೀರಭಾಷೆಯನ್ನು ತೊಟ್ಟು ನಲ್ಲನನ್ನು ಅರಸುತ್ತ ನಡೆದಳು. ಘೋರಾರಣ್ಯ ಹೊಕ್ಕಳು; ದಿನ್ನೇಯೇರಿದಳು. ತೆವರನಿಳಿದಳು, ಹೊಳೆ ದಾಟಿದಳು. ನಲ್ಲನ ವಿರಹ ಹೆಚ್ಚಾಗಿ ಸಕಲ ಸಚರಾಚರಕ್ಕೆ ಮೊರೆಯಿಟ್ಟಳು :

ಚಿಲಿಪಿಲಿ ಎಂದೋದುವ ಗಿಳಿಗಳಿರಾ, ನೀವು ಕಾಣಿರೇ ನೀವು ಕಾಣಿರೆ?
ಸರವೆತ್ತಿ ಪಾಡುವ ಕೋಗಿಲೆಗಳಿರಾ, ನೀವು ಕಾಣಿರೇ ನೀವು ಕಾಣಿರೆ?
ಎರಗಿ ಬಂದಾಡುವ ತುಂಬಿಗಳಿರಾ, ನೀವು ಕಾಣಿರೇ ನೀವು ಕಾಣಿರೆ?
ಕೊಳನ ತಡಿಯೊಳಾಡುವ ಅಂಚೆಗಳಿರಾ, ನೀವು ಕಾಣಿರೇ ನೀವು ಕಾಣಿರೆ?
ಗಿರಿಗಹ್ವರದೊಳಗಾಡುವ ನವಿಲುಗಳಿರಾ, ನೀವು ಕಾಣಿರೇ ನೀವು ಕಾಣಿರೆ?
ಚೆನ್ನಮಲ್ಲಿಕಾರ್ಜುನನೆಲ್ಲಿರ್ದಿಹನೆಂದು ಬಲ್ಲೊಡೆ
ನೀವು ಹೇಳಿರೇ, ನೀವು ಹೇಳಿರೇ.
ಅಳಿಸಂಕುಳವೇ, ಮಾಮರವೇ, ಬೆಳುದಿಂಗಳೇ, ಕೋಗಿಲೆಯೇ
ನಿಮ್ಮನಿಮ್ಮನೆಲ್ಲರನೊಂದು ಬೇಡುವೇನು
ಎನ್ನೊಡೆಯ ಚೆನ್ನಮಲ್ಲಿಕಾರ್ಜುನದೇವರ ಕಂಡರೆ
ಕರೆದು ತೋರಿರೇ.

ಶರಣಸತಿಯ ಸರ್ವಾಂಗಗಳು ವಿರಹದುರಿಯಲ್ಲಿ ಬೆಂದು ಶುದ್ಧವಾದುವು. ಆಕೆ ಕರಣದ ಕತ್ತಲೆ ಕಳೆದು ಬೆಳಗನುಟ್ಟುಕೊಂಡಳು. ಐದು ಮಾನವಕುಟ್ಟಿ ಒಂದು ಮಾನವ ಮಾಡಿದಳಿ. ಮದವಳಿಯಿತು, ನಿಜವುಳಿಯಿತು. ಆಗ ಸರ್ವವೂ ಆಕೆಗೆ ಶಿವನಾಗಿ ತೋರಹತ್ತಿತು:

ವನವೆಲ್ಲ ನಿವೇ ವನದೊಳಗಣ ತರುವೆಲ್ಲ ನೀವೆ;
ತರುವಿನೊಳಗಾಡುವ ಖಗಮೃಗವೆಲ್ಲ ನೀವೆ,
ಚೆನ್ನಮಲ್ಲಿಕಾರ್ಜುನಾ, ಸರ್ವಭರಿತನಾಗಿ ಮುಖದೋರಾ !

‘ಕತ್ತಲೆ ಸತ್ತು ಬೆಳಕು ಬೀದಿವರಿಯಿತ್ತು’. ಲಿಂಗಪತಿಗೆ ಕೊನೆಗೆ ಒಲುವೆ ಮೂಡಿತು. ಸರ್ವ ಸೌಂದರ‍್ಯಕ್ಕೆ ತವರಾದ ಆತ ತನ್ನ ಚೆಲುವಿನ ನಿಲುವನ್ನು ನಲ್ಲೆಗೆ ತೋರಿದ.

ಹೊಳೆವ ಕೆಂಜೆಡೆಗಳ, ಮಣಿಮುಕುಟ, ಒಪ್ಪುವ ಸುಲಿಪಲ್ಲ,
ನಗೆಮೊಗವ ಕಂಗಳ ಕಾಂತಿಯಿಂ ಈರೇಳು ಭುವನವ ಬೆಳಗುವ
ದಿವ್ಯಸ್ವರೂಪನ ಕಂಡು, ಎನ್ನ ಕಂಗಳ ಬರ ಹಿಂಗಿತ್ತಿಂದು;
ಗಂಡಗಂಡರೆಲ್ಲರ ಹೆಂಡಿರಾಗಿ ಆಳುವ ಗುರುವನ ಕಂಡೆ ನಾನು;
ಜಗವಾದಿಶಕ್ತಿಯೊಳು ಬೆರೆಸಿ ಮಾತನಾಡುವ ಪರಮಗುರು
ಚೆನ್ನಮಲ್ಲಿಕಾರ್ಜುನನ ನಿಲವ ಕಂಡು ಬದುಕಿದೆನು !

ಹರನೇ ನೀನೆನಗೆ ಗಂಡನಾಗಬೇಕೆಂದು ಅನಂತಕಾಲ ತಪಸಿದ್ದ ಆಕೆಯ ಕರುಳ ಕಲಮಲಕ್ಕೆ ನಿಂದು ಅಂತಃಕರುಣದ ಅಮೃತ ಹರಿದುಬಂದಿತು.

ಹೊನ್ನ ಹಾವುಗೆ ಮೆಟ್ಟಿದವನ, ಮಿಡಿ ಮುಟ್ಟಿದ ಕೆಂಜೆಡೆಯವನ;
ಮೈಯಲ್ಲಿ ವಿಭೂತಿಯ ಧರಿಸಿದವನ,
ಕರದಲ್ಲಿ ಕಪಾಲವ ಪಿಡಿದವನನ,
ಅರ್ಧನಾರಿಯಾದವನ, ಬಾಣನ ಬಾಗಿಲ ಕಾಯ್ದವನ;
ನಂಬಿಗೆ ಕುಂಟಣಿಯಾದವನ;
ಚೋಳಂಗೆ ಹೊನ್ನಮಳೆ ಕರೆದವನ;
ಎನ್ನ ಮನಕ್ಕೆ ಬಂದವನ, ಸದ್ಭಕ್ತರ ಹೃದಯದಲ್ಲಿಪ್ಪನ;
ಮಾಡಿದ ಪೂಜೆಯಲೊಪ್ಪುವನ, ಕೂಡಲಸಂಗಯ್ಯನೆಂಬವನ.

ಇಂಥ ಸಾದೃಶ್ಯವಪ್ಪ ವರನಿಗೆ ಶರಣಸತಿಯನ್ನು ಶಿವಶರಣರು ಕೊಟ್ಟರು. ಮದುವೆಯ ಸಂಭ್ರಮ ನಡೆಯಿತು. ಗದ್ದಲವೋ ಗದ್ದಲ, ಸೊಗಸೋ ಸೊಗಸು. ಬಲುಸುಂದರವಾದ ಹಂದರ; ಪಚ್ಚೆಯ ನೆಲಗಟ್ಟು, ಕನಕದ ತೋರಣ, ವಜ್ರದ ಕಂಬ, ಪವಳದ ಚಪ್ಪರ, ಮದುಮಗ ಸಿದ್ಧನಿದ್ದಾನೆ. ಮದುವಳಿಗೆ ಬರಲಿಲ್ಲವಲ್ಲಾ. ಇನ್ನೂ ಹಂದರಕ್ಕೆ. ಆಕೆಗೆ ಶೃಂಗಾರ ನಡೆದ ಎಂತಹ ಶೃಂಗಾರವದು !

ಮಂಗಳವೇ ಮಜ್ಜನವೆನಗೆ;
ವಿಭೂತಿಯೇ ಒಳಗುಂದದ ಅರಿಷಿನವೆನಗೆ;
ದಿಗಂಬರವೇ ದಿವ್ಯಾಂಬರವೆನಗೆ;
ಶಿವಪಾದರೇಣುವೇ ಅನುಲೇಪನವೆನಗೆ;
ರುದ್ರಾಕ್ಷಿಯೇ ಮೈದೊಡಿಗೆಯೆನಗೆ;
ಶರಣರ ಪಾದಂಗಳೇ ತೊಂಡಿಲ ಬಾಸಿಗವೆನಗೆ;
ಚೆನ್ನಮಲ್ಲಿಕಾರ್ಜುನನೇ ಗಂಡನೆನಗೆ;
ಅನು ಚೆನ್ನಮಲ್ಲಿಕಾರ್ಜುನಂಗೆ ಮದುವಳಿಗೆ;
ಎನಗೆ ಬೇರೆ ಶೃಂಗಾರವೇಕೆ ಹೇಳಿರವ್ವಾ?

ಹೀಗೆ ಶೃಂಗಾರವಾಗಿ ಆಕೆ ಮದುವೆ ಮಂಟಪಕ್ಕೆ ಬಂದಳು. ಶಿವಶರಣರು ಕಂಕಣ ಕೈದಾರೆ ಕಟ್ಟಿ, ಸ್ಥಿರ ಸೇಸೆಯನಿಕ್ಕಿ ಚೆನ್ನಮಲ್ಲಿಕಾರ್ಜುನನೊಡನೆ ಆಕೆಯ ಮದುವೆಯ ಮಾಡಿದರು. ಮದುವೆ ಮಂಟಪದಲ್ಲಿ ಗಂಡನನ್ನು ಆಕೆ ಕದ್ದು ನೋಡಿದ್ದೇ ನೋಡಿದ್ದು.

ನಿಮ್ಮ ನೋಟವನಂತಸುಖ ಕೂಟ ಪರಮಸುಖ
ಅವುಟುಕೋಟಿ ರೋಮಂಗಳೂ ಕಂಗಳಾಗಿ ನೋಡುತ್ತಿದ್ದೆನು.

ಎಂದು ಆಕೆ ಆಮೇಲೆ ಮುದ್ದಿನಿಂದ ನಲ್ಲನಿಗೆ ಹೇಳಿದಳು.

ಮದುವೆ ಮುಗಿಯಿತು. ಎಲ್ಲ ಶರಣರು ಕೂಡಿ ಆಕೆಯನ್ನು ಗಂಡನಮನೆಗೆ ಕಳುಹಿಸಿದರು.

ವಿವಾಹವ ಮಾಡಿದಿರಿ, ಸಯವಪ್ಪ ಗಂಡಂಗೆ ಕೊಟ್ಟಿರಿ,
ಚೆನ್ನಮಲ್ಲಿಕಾರ್ಜುನನ ಕೈವಿಡಿದು,
ನಿಮ್ಮ ತಲೆಗೆ ಹೂವ ತಹೆನಲ್ಲದೆ ಹುಲ್ಲತಾರೆನು, ಶರಣಾರ್ಥಿ.

ಎಂದು ಭಕ್ತಿಯಿಂದ ಶರಣರಿಗೆ ನುಡಿದು ಆಕೆ ಗಂಡನ ಮನೆಗೆ ಹೋದಳು. ಆ ದಿವ್ಯಕೂಟದ ಸಮಯ ಬಂದಿತು. ಅರಸರು ಮಂಚಕ್ಕೆ ಬಂದರು.

ನೋಡು ನೋಡಯ್ಯಾ ಗಂಡನೆ,
ಎನ್ನ ಕಂಗಳುಪ್ಪರಿಗೆಯಮೇಲೆ ಕುಳ್ಳಿರ್ದು ಸಕಲ ವಿಚಿತ್ರವ,
ಆಡು ಆಡಯ್ಯಾ ಗಂಡನೆ, ಎನ್ನ ಮನದ ಕೊನೆಯಲ್ಲಿ
ಮಹಾಜ್ಞಾನದುಯ್ಯಾಲೆಯ ಕಟ್ಟಿ ಮನಬಂದ ಪರಿಯಲ್ಲಿ
ಕೂಡು ಕೂಡಯ್ಯಾ ಗಂಡನೆ, ಎನ್ನ ಸತ್ಕಲೆಗಳಿಂದ ಸವಿತೋರಿಸಿ,
ಅಖಂಡೇಶ್ವರಾ.

ಹೀಗೆ ಕೂಡೆಂದು ಗಂಡನನ್ನು ಕೇಳಿದಳು. ಗಂಡನ ಸಂಗದಲ್ಲಿ ಆಕೆ ಯಾರೂ ಕಾಣದ ಸುಖಪಡೆದಳು. ಆ ಸಂಗ, ಆ ಸುಖ ಎಂತಹುದು !?

ಕಾಮಸಂಗ ನಿಸ್ಸಂಗವಾಗಿ ಇನ್ನಾವ ಸಂಗವನರಿಯೆನಯ್ಯಾ
ಮಿಗೆವೊಲಿದೆನಾಗಿ ಅಗಲಲಾರೆನು;
ನಗಮೊಗದರಸಾ, ಅವಧಾರು ! ಕೂಡಲಸಂಗಮದೇವಾ
ಬಗಿದುಹೋಗುವೆ ನಾನಿಮ್ಮ ಮನವನು !

ಇಂಥ ಸೊಗೆಬಾಳಿನಲ್ಲಿಯೂ ಮುನಿಸು ಬೇಸರ ಉಂಟು. ಅದಿಲ್ಲದಿದ್ದರೆ ನಿಜವಾದ ಸುಖದ ಅರಿವು ಆಗದು. ಅಗಲಿಕೆ ಸುಖದ ಜೀವನದಲ್ಲಿ ಬೇಕು – ಸುಖಕ್ಕೆ ಸುಖ ಒದಗಿಸಲು.

‘ಕೂಡಿ ಕೂಡುವ ಸುಖದಿಂದ ಒಪ್ಪಚ್ಚಿ ಅಗಲಿ ಕೂಡುವ ಸುಖಲೇಸು.’ ಆದರೆ ಆಕೆ ಬಯಸಿದ ಅಗಲಿಕೆ ಎಂತಹುದು? “ಒಚ್ಚತ ಅಗಲದಿರಲಾರೆನವ್ವಾ! ಕಾಣದಿರಲಾರೆನವ್ವಾ, ಎನ್ನದೇವ ಚೆನ್ನಮಲ್ಲಿಕಾರ್ಜುನನಗಲಿ ಅಗಲದ ಸುಖವೆಂದಿಪ್ಪುದೋ?” ಅಂಥ ಅಗಲಿ – ಅಗಲದ ಕಾಲವೂ ಬಂದಿತು. ನಲ್ಲ ಮುನಿಸು ತಾಳದ; ಮರೆಯಾದ. ಮತ್ತೆ ವಿರಹ. ಈ ವಿರಹದಲ್ಲಿ ಕಂಡ, ಉಂಡ ಸುಖದ ನೆನಹು ಇದೆ. ನಲ್ಲನಿಗಾಗಿ ಈಗ ಮಧುರ ವೇದನೆಯಲ್ಲಿ ಕಳವಳಿಸುತ್ತಾಳೆ.

ಏಕೆ ಮುನಿದ ಆತ? “ಕಂಗಳ ಬಲದಲ್ಲಿ ಮುನಿದಿಹನೆಂಬೆನೆ ಕಂಗಳುತನ್ನನಲ್ಲದೆ ನೋಡವು; ಮನದ ಬಲದಲ್ಲಿ ಮುನಿದಿಹೆನೆಂಬೆನೆ ಮನದೊಡೆಯನು ತಾನು” ಅಗಲಿಕೆಯ ಬೇಗೆಯಲ್ಲಿ ಬೇಯಹತ್ತಿದಳು. ಕನಸಿನಲ್ಲಿಯಾದರೂ ಕಾಣಬೇಕೆಂದರೆ ಅದೂ ಸಾಧ್ಯವಿಲ್ಲದಾಗಿದೆ.

ಅಗಲಿದ ಗಂಡನ ಕನಸಿನಲಪ್ಪಿ ಸುಖಿಯಾದಿರವ್ವಾ !
ಕಂಡ ಕನಸು ದಿಟವಾದಡೆ ಅವ ನಮ್ಮ ನಲ್ಲ,
ಮನಸುಳ್ಳವರು ನಿವು ಪುಣ್ಯಗೈದಿರವ್ವಾ !
ಮಹಾಲಿಂಗ ಗಜೇಶ್ವರದೇವನಗಲಿದಡೆ ನಿದ್ರೆ ಎಮಗಿಲ್ಲ,
ಕನಸೆಲ್ಲಿಂದ ಬಹುದವ್ವಾ.

ಬಹು ಕಷ್ಟದ ಪರಿಸ್ಥಿತಿ, ಎರೆಯಂತೆ ಕರಗಿದಳು, ಮಳಲಂತೆ ಜರೆದಳು. ಅವುಗೆಯ ಕಿಚ್ಚಿನಂತೆ ಸುಳಿಸುಳಿದು ಬೆಂದಳು.

ಆಲಿಕಲ್ಲು, ಮರದ ಗಿರಿಯಲಿಹ ಮಗಮಗಿಸುವ ಗಾಳಿ
ಉಂಡು ಉರವಣಿಸುವ ಪಕ್ಷಿಗಳು, ಸರಗೈವ ಕೋಗಿಲೆ,
ಗಗನದ ಚಂದ್ರಮನೀವತ್ತ ಸಾರಿರೇ !
ಅಗಲಲಾರೆನು ಸಖಿಯೆ ! ಬೆಳುದಿಂಗಳು ಬಿಸಿಲಾಯಿತ್ತು,
ಅಗಲಲಾರೆನೆನ್ನಿನಿಯನ ! ದಶಾವಸ್ಥೆಗೊಂಡೆನು,
ಮಹಾಲಿಂಗ ಗಜೇಶ್ವರನುಳಿದಡೆ !

ದಶಾವಸ್ಥೆ ! ಒಡಲನೂ ಪ್ರಾಣವನೂ ಒಲಿದವನಿಗೊಪ್ಪಿಸುವ ಅವಸ್ಥೆ. ಇಂಥ ಅವಸ್ಥೆಯಲ್ಲಿಯೂ ಸರಣಸತಿ “ಬಲ್ಲಿದ ಹಗೆಯುವ ತೆಗೆವನ್ನಬರ, ಬಡವರ ಪ್ರಾಣ ಹೋದಂತಾಗಬಾರ”ದೆಂದು ನಲ್ಲಿನಿಗೆ ಎಚ್ಚರಿಕೆ ಕೊಟ್ಟರು. ಆತ ಎಲ್ಲಿ ಹೋಗಿದ್ದ? ಮುನಿಸು ತಾಳಿ ಎಲ್ಲಿ ಮರೆಯಾಗಿದ್ದ ? ದಂಡುಮಂಡಲಕ್ಕೆ ಹೋಗಿದ್ದಾನೆ ? ಇಲ್ಲ. ಆಕೆಯ ತನು – ಮನದಲ್ಲಿದ್ದು ತೋರದಂತಿದ್ದ ! ಆಕೆ ಕೊಟ್ಟ ಎಚ್ಚರಕ್ಕೆ ಎಚ್ಚೆತ್ತ, ಮೈದೋರಿದ. “ಅಂದಿನಿರುಳಿನಲ್ಲಿ ಚೆಲ್ಲವಾಡುತ ಬಂದು ಮೆಲ್ಲನೆ ಕೈವಿಡಿದ.” ಆಕೆಗೆ ಬೇಡವೇ ಮುನಿಸು? ಬರುವುದಿಲ್ಲವೇ ಆಕೆಗೆ ಮುನಿಸು ತಾಳಲು ? ಮುನಿಸು ಆಕೆಯಲ್ಲಿ ಮೈದೋರಿತು. ಮೊಗದಿರುಹಿ ಮಾತನಾಡದೆ ಕುಳಿತಳು. ಆತ ಒಲಿಸಬಂದಷ್ಟೂ ಮುನಿಸು ಹೆಚ್ಚಾಯಿತು. ಅಲ್ಲಿಂದೆದ್ದು ಹೋದಳು. ಏನಾಯಿತು ? ಆಕೆಯ ಬಾಯಿಯಿಂದಲೇ ಕೇಳುವಾ :

ನಲ್ಲನನೊಲ್ಲೆನೆಂದು ಮುನಿದು ನಾನಡಗಲು
ಅಡಲುವ ಠಾವೆಲ್ಲಾ ತಾನೇ ! ಎಲೆಗವ್ವಾ !
ನಲ್ಲನಿಲ್ಲದೆಡೆಯಿಲ್ಲ; ಅಗಲಿಕೆಗಿಂಬಿಲ್ಲ;
ಮುನಿದು ನಾನೇನಾಗುವೆನು?
ಶರಣುಗತಿಯಾಗುವೆನು, ಉರಿಲಿಂಗದೇವನ.

ಸರೆ, ಆಕೆಯ ಮುನಿಸು ದೂರಾಯಿತು; ಒಲುಮೆ ಚಿಮ್ಮಿತು. ನಲ್ಲನಲ್ಲೆಯರು ಒಂದಾದರು. ಶರಣಸತಿ ಲಿಂಗಪತಿಯರ ಸುಖದ ಸೀಮೆ ಎಂತಹುದು ! ಕೂಟದ ಸೊಗಸು ಎಂತಹುದು :

ಲೇಸುಹಾಸು, ನೋಟವಾಭರಣ, ಆಲಿಂಗನ ವಸ್ತು,
ಚುಂಬನವಾರೋಗಣೆ, ಲಲ್ಲೆವಾತು ತಾಂಬೂಲ.
ಲವಲವಿಕೆಯೇ ಅನುಲೇಪನವೆನಗೆ
ಚೆನ್ನಮಲ್ಲಿಕಾರ್ಜುನನ ಕೂಟ ಪರಮ ಸುಖವವ್ವಾ.

ಎಲೆ ಅವ್ವಾ ಎನ್ನ ನಲ್ಲನ ಕೂಡಿದ ಕೂಟವ
ಇದಿರಿಂಗೆ ಹೇಳಬಾರದವ್ವಾ !
ನೀವೆಲ್ಲಾ ನಿಮ್ಮ ನಲ್ಲನ ಕೂಡಿದ ಸುಖವ
ಬಲ್ಲಂತೆ ಬಣ್ಣಿಸಿರಿ !
ಉರಿಲಿಂಗದೇವ ಬಂದೆನ್ನ ಸೀರೆಯ ಸೆರಗ
ಹಿಡಿಯಲೊಡನೆ ನಾನೋ ತಾನೋ ಏನೆಂದರಿಯೆನವ್ವಾ !

ಕಾಣುತ್ತ ಕಾಣುತ್ತ ಕಂಗಳ ಮುಚ್ಚಿದೆ ನೋಡವ್ವಾ;
ಕೇಳುತ್ತ ಕೇಳುತ್ತ ಮೈಮರೆದೊರಗಿದೆ ನೋಡವ್ವಾ;
ಹಾಸಿದ ಹಾಸಿಗೆಯ ಹಂಗಿಲ್ಲದೆ ಹೋಯಿತ್ತು ಕೇಳವ್ವಾ;
ಚೆನ್ನಮಲ್ಲಿಕಾರ್ಜುನ ದೇವರದೇವನು ಕೂಡುವ ಕೂಟವ
ನಾನೇನಂದರಿಯದೆ ಮರೆದೆ, ಕಾಣವ್ವಾ.

ಒಂದು ವಿಪರೀತ ಹೇಳುವೆ ಚಿತ್ತವೊಲಿದು ಲಾಲಿಸಿರವ್ವಾ!
ಎನ್ನ ತನುವಿನೊಳಗೆ ತನುವನಿಟ್ಟು ಮಹಾತನುವ ಮಾಡಿದ.
ಎನ್ನ ಮನದೊಳಗೆ ಮನವನಿಟ್ಟು ಘನಮನವ ಮಾಡಿದ.
………………………………………………………
………………………………………………………
ಎನ್ನ ವಿಷಯಂಗಳೊಳಗೆ ತನ್ನ ವಿಷಯಂಗಳನಿಟ್ಟು

ನಿರ್ವಿಷಯಂಗಳ ಮಾಡಿದನಾಗಿ
ಅಖಂಡೇಶ್ವರನೆಂಬ ನಲ್ಲನೊಳಗೆ
ಕರ್ಪುರವೇಣ್ಣು ಉರಿಪುರುಷನನಪ್ಪಿ
ರೂಪಳಿದಂತಾದೆನು, ಕೇಳಿರವ್ವಾ.

ಶರಣರು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬಹಳ ಮಹತ್ವ ಕೊಡುತ್ತಿದ್ದರು. ಅನುಭವಮಂಟಪದಲ್ಲಿ ಚರ್ಚೆ ನಡೆಯುತ್ತಿತ್ತು. ಶರಣರು ಧೈರ್ಯದಿಂದ ತಮ್ಮ ವಿಚಾರಗಳನ್ನು ಮಂಡಿಸುತ್ತಿದ್ದರು. ಅಂಬಿಗರ ಚೌಡಯ್ಯ ‘ಶರಣಸತಿ – ಲಿಂಗಪತಿ’ ಎಂಬುದನ್ನು ಒಪ್ಪಿಲ್ಲ; ಅದನ್ನು ತನ್ನ ವಚನವೊಂದಲ್ಲಿ ವಿರೋಧಿಸಿದ್ದಾನೆ. ಅದನ್ನು ಯಾರೂ ಖಂಡಿಸಿಲ್ಲ.

ಇದು ವಚನ :

ಶರಣ ಸತಿ ಲಿಂಗಪತಿ ಎಂಬದು
ಶರಣ ಹೆಣ್ಣಾದ ಪರಿಯನ್ನೆಂತು?
ಲಿಂಗ ಗಂಡಾದ ಪರಿಯನ್ನೆಂತು?
ನೀರು ನೀರು ಕೂಡಿ ಬೆರೆದಲ್ಲಿ
ಭೇದಿಸಿ ಬೇರೆ ಮಾಡಬಹುದೇ?
ಗಂಡು ಹೆಣ್ಣು ಯೋಗವಾದಲ್ಲಿ
ಆತುರ ಹಿಂಗೆ ಫಟ ಬೇರೆಯಾಯಿತ್ತು. ಇದು ಕಾರಣ
ಶರಣ ಸತಿಲಿಂಗಪತಿ ಎಂಬ ಮಾತು ಮೊದಲಿಂಗೆ
ಮೋಸ, ಲಾಭಕ್ಕದೀನವುಂಟೆ? ಎಂದನಂಬಿಗರ ಚೌಡಯ್ಯ

ಸಮಗ್ರ ವಚನ ಸಾಹಿತ್ಯದ ಜನಪ್ರಿಯ ಆವೃತ್ತಿ, ಸಂಕೀರ್ಣ ಸಂಪುಟ –
೧. ಪ್ರಥಮ ಮುದ್ರಣ ೧೯೯೭.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಪುಟ ೮೭ – ೮೪,
ವಚನ ೨೪೭.