‘ಶರಣಸತಿ ಲಿಂಗಪತಿ’ ಎಂಬುದು ಒಂದು ಮಧುರಭಾವ. ಈ ಮಧುರಭಾವಕ್ಕೆ “ಸತಿಪತಿ ಭಾವ” ಎಂದೂ ಹೆಸರಿದೆ. ಶಿವನೇ ಗಂಡ ತಾನೇ ಹೆಂಡತಿಯೆಂದು ಭಾವಿಸಿ ಭಕ್ತ ಆಚರಿಸುವನು. “ಸತಿಪತಿ ಭಾವದ” ಆಚರಣೆ ಶರಣ ಸ್ಥಲಕ್ಕೆ ಸಂಬಂಧಪಟ್ಟಿದೆ. ಶರಣ ಸ್ಥಲದಲ್ಲಿಯೇ ಭಕ್ತನಿಗೆ ಈ ಭಾವ ಮೈದೋರುವುದು. ಶರಣ ಸ್ಥಲ ಷಟ್‌ಸ್ಥಲದಲ್ಲಿ ಐದನೆಯ ಸ್ಥಲ.

ಜೀವನು ಶಿವನಾಗುವುದೇ ವೀರಶೈವದ ಗುರಿ. ಈ ಗುರಿಯು ಷಟ್‌ಸ್ಥಲದ ಆಚರಣೆಯಿಂದ ಸಾಧಿಸುವುದು.

ಷಟ್‌ಸ್ಥಲದ ಆಚರಣೆಯಲ್ಲಿ ಪೂಜ್ಯ – ಪೂಜಕನು ಒಬ್ಬನೆ. ಅವನು ಶಿವನು. “ದೇವನು ತಾನೇ ಮಾನವನಾಗಿ ಪೂಜೆಮಾಡಿ, ಮತ್ತೆ ತಾನೇ ದೇವನಾಗಿ ಪೂಜೆಗೊಳ್ಳುವ ನವೀನ ತತ್ವ ಷಟ್‌ಸ್ಥಲಾಂತರ್ಗತವಾಗಿದೆ. ಈ ತತ್ವವೇ ಷಟ್‌ಸ್ಥಲದ ಜೀವ ಜೀವಾಳ. ಈ ತತ್ವದ ಆಚರಣೆಯು ವೈಜ್ಞಾನಿಕವಾಗಿದೆ; ಮನುಷ್ಯ ಜೀವನಕ್ಕೆ ಸುಲಭವಾಗಿ ಹೊಂದಿಕೊಳ್ಳುವಂತಹದೂ ಆಗಿದೆ.

ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ – ಇವೇ ಷಟ್‌ಸ್ಥಲಗಳು. ಅಲ್ಲಮಪ್ರರಭು ದೇವರು ತಮ್ಮ ಒಂದೇ ವಚನದಲ್ಲಿ ಈ ಆರು ಸ್ಥಲಗಳನ್ನು ಕುರಿತು ಬಹುಸುಂದರವಾಗಿ, ಮಾರ್ಮಿಕವಾಗಿ ಹೇಳಿದ್ದಾರೆ.

ವಿಶ್ವಾಸದಿಂ ಭಕ್ತನಾಗಿ, ವಿಶ್ವಾಸದೊಳಗಣ ನಿಷ್ಠೆಯಿಂ ಮಹೇಶ್ವರನಾಗಿ,
ನಿಷ್ಠೆಯೊಳಗಣ ಸಾವಧಾನದಿಂ ಪ್ರಸಾದಿಯಾಗಿ,
ಸಾವಧಾನದೊಳಗಣ ಸ್ವಾನುಭವದಿಂ ಪ್ರಾಣಲಿಂಗಿಯಾಗಿ.
ಸ್ವಾನುಭವದೊಳಗಣ ಅರಿವಿನಿಂ ಶರಣನಾಗಿ
ಅರಿವು ನಿಜದಲ್ಲಿ ಸಮರಸಭಾವವನೈದಿದ ನಿರ್ಭಾವೆ ಪದದೋಳು
ನಿಂದ ಭೇದವೇ ಐಕ್ಯಸ್ಥಲ ಕಾಣಾ, ಗುಹೇಶ್ವರಾ

ವಿಶ್ವಾಸದಿಂದ, ನಿಷ್ಠೆಯಿಂದ ಕಾಯಕಗೈಯುತ್ತ ಭಕ್ತ ಶಿವನಿಗೆ ಮೊರೆಹೋಗುತ್ತಾನೆ. ಇದೇ ಭಕ್ತಸ್ಥಲ. ಈ ನಿಷ್ಠೆ ಗಟ್ಟಿಗೊಳಿಸಿ, ಹರಿದಾಡುವ ಮನಸ್ಸನ್ನು ಒತ್ತಟ್ಟಿಗೆ ನಿಲಿಸಿ ಭಕ್ತ ಉಪಾಸನೆಯನ್ನು ಬಲಗೊಳಿಸುತ್ತಾನೆ. ಇದೇ ಮಹೇಶ್ವರ ಸ್ಥಲ. ಉಪಾಸನೆಯಲ್ಲಿ ಮುಂದುವರಿದಂತೆ, ಭಕ್ತನ ಮನಸ್ಸು ವಿಕಾಸಗೊಂಡು ದಾಸೋಹಂಭಾವ ಬೆಳೆದು, ಎಲ್ಲವೂ ಶಿವಪ್ರಸಾದವೆಂಬ ನಂಬುಗೆ ಹುಟ್ಟಿ ಬಲಗೊಳ್ಳುತ್ತದೆ. ಇದೇ ಪ್ರಸಾದಿಸ್ಥಲ. ಹೀಗೆ ದಾಸೋಹಂಭಾವದಿಂದ ಮುಂದುವರಿದ ಭಕ್ತ ಅಂತರ್ಮುಖಿಯಾಗಿ, ಪಿಂಡಾಂಡದಲ್ಲಿ ಬ್ರಹ್ಮಾಂಡವನ್ನು ಅರಿವಿನ ಕಂಗಳಿಂದ ಕಾಣುತ್ತಾನೆ. ಪ್ರಾಣವೇ ಲಿಂಗವೆಂದು ಅನುಭವಿಸಿ ಪ್ರಾಣಲಿಂಗ ಪೂಜೆಯನ್ನು ಕೈಕೊಳ್ಳುತ್ತಾನೆ. ಇದೇ ಪ್ರಾಣಲಿಂಗಿ ಸ್ಥಲ. ಪ್ರಾಣಲಿಂಗಾನುಸಂಧಾನದಿಂದ ಮುಂದುವರಿದಂತೆಲ್ಲ ಭಕ್ತ ತನಗೂ ಶಿವನಿಗೂ ಇರುವ ಭೇದವನ್ನು ಕಳೆದುಕೊಳ್ಳುತ್ತಾನೆ. ತಾನು ಆ ಪರಾತ್ಪರ ಶಕ್ತಿ ಚಿದಂಶವು ಎಂಬ ಅರಿವು ಅರಳಿ, ಮಲತ್ರಯಗಳಿಂದ, ಕರ್ಮ ಬಂಧನಗಳಿಂದ ಬಿಡುಗಡೆ ಪಡೆಯುತ್ತಾನೆ. ಇದೇ ಶರಣ ಸ್ಥಲ. ಮುಂದುವರಿದು ಭಕ್ತ ತಾನು ಬೇರೆಯಲ್ಲ. ಲಿಂಗ ಬೇರೆಯಲ್ಲ ಎಂಬ ಅನುಭಾವವನ್ನು ಬಲಗೊಳಿಸಿಕೊಂಡು ತಾನೇ ಲಿಂಗವಾಗುತ್ತಾನೆ. ಇದೇ ಐಕ್ಯ ಸ್ಥಲ.

ಶರಣ ಸ್ಥಲದಲ್ಲಿಯೇ “ಸತಿಪತಿ ಭಾವ” ಏಕೆ ಮೈದೋರುವುದು? ಶರಣನ ಇರವು ಆಚರಣೆಯನ್ನು ತಿಳಿದುಕೊಂಡರೆ ಈ ಪ್ರಶ್ನೆಗೆ ಉತ್ತರ ತಾನಾಗಿಯೇ ದೊರೆಯುವುದು.

ಭಕ್ತನು ಶರಣಸ್ಥಲದಲ್ಲಿ ಆನಂದ ಭಕ್ತಿಯನ್ನು ಆಚರಿಸುತ್ತ ಕೇವಲ ಆನಂದಮಯನಾಗಿ ಸೃಷ್ಟಿಯಲ್ಲಿ ಎಲ್ಲೆಡೆಗೆ ಆನಂದವನ್ನೇ ಕಾಣುತ್ತಾನೆ. ಈ ಆನಂದವನ್ನು ಆತ ತನ್ನ ನಡೆನುಡಿಯಿಂದ ಸಕಲರಿಗೂ ಹಂಚುತ್ತಾನೆ.

ಶರಣ ಸಕಲ ಬಂಧನಗಳಿಂದಲೂ ಮುಕ್ತ. ನೀರ ತಾವರೆಯಂತೆ ಆತ ಸಂಸಾರದಲ್ಲಿ ಇದ್ದೂ ಇಲ್ಲದಂತಿರುತ್ತಾನೆ. ವಚನಕಾರರು ಶರಣನ ನಿಲುವನ್ನು ಬಹು ಸೊಗಸಾಗಿ ವರ್ಣಿಸಿದ್ದಾರೆ.

“ಹಿರಿದು ಕಿರಿದೆಂಬ ಶಬ್ದವಡಗಿದಡೆ ಆತನೇ ಶರಣ.” “ಅರಿವು ಮರಹಿಲ್ಲದ ಘನವು ಶರಣ.” “ಅರಿದು ಬರೆದ ಶರಣ ನಿಮ್ಮ ಪ್ರತಿಬಿಂಬದಂತಿಪ್ಪನು, ಗುಹೇಶ್ವರಾ.” “ಕಂಗಳ ಕರುಳ ಕೊಯ್ದವರು, ಮನದ ತಿರುಳ ಹುರಿದವರು, ಮಾತಿನ ಮೊದಲ ಬಲ್ಲವರು ಶರಣರು.” “ಶಿಶುಕಂಡ ಕನಸಿನಂತಿರಪ್ಪರು.” “ಬಯಲ ಬಣ್ಣವವಮಾಡಿ, ಸ್ವಯವ ನಿಲವಮಾಡಿ ಸುಳಿವಾತ ಶರಣ.” “ಶರಣ ದೇಹಿಯಲ್ಲ, ನಿರ್ದೇಹಿಯಲ್ಲ, ಬೋಧಕನಲ್ಲ, ನಿರ್ಬೋಧಕನಲ್ಲ, ಕಾಮಿಯಲ್ಲ, ನಿಃಕಾಮಿಯಲ್ಲ. ಆಸೆ ಹಿಡಿದು ಬಂದ ಆಮಿಷನಲ್ಲ, ಅವಗುಣಿಯಿಲ್ಲದ ನಿಗುಣಿ.” “ಶರಣ ಕುಲಮದವಳಿದಾತ, ವಿಧಿವಶ ಬಿಟ್ಟಾತ, ಹಮ್ಮು ಸೊಮ್ಮಿನ ಸಂಬಂಧ ಬಿಟ್ಟು ಕಿಂಕರರ ಕಿಂಕರನಾದಾತ; ಹೆಪ್ಪನೆರೆದ ಹಾಲು ಕೆಟ್ಟು ತುಪ್ಪವಾದಂತೆ ಆತನ ಇರುವು.” ಇಂತಪ್ಪ ಶರಣನ ಸರ್ವಾಂಗ ಲಿಂಗಮಯವಾಗಿರುತ್ತದೆ; ನಡೆ ನುಡಿಯೆಲ್ಲ ಲಿಂಗಮಯವಾಗಿರುತ್ತದೆ. ಚನ್ನಬಸವಣ್ಣನವರ ಅಮರವಾಣಿ ಈ ಬಗ್ಗೆ ಹೀಗಿದೆ.

ಲಿಂಗ ಮುಂತಾಗಿಯೇ ನಡೆವನಾ ಶರಣ
ಲಿಂಗ ಮುಂತಾಗಿಯೇ ನುಡಿವನಾ ಶರಣ
ಲಿಂಗ ಮುಂತಾಗಿಯೇ ತೃಪ್ತನಾ ಶರಣ
ಲಿಂಗಕಾಯ ಶರಣ ಶರಣಕಾಯಲಿಂಗ
ಇದುಕಾರಣ ಕೂಡಲಚೆನ್ನಸಂಗಯ್ಯಾ
ನಿಮ್ಮ ಶರಣ ಸರ್ವಾಂಗಲಿಂಗಿ.

ಹೀಗೆ ನಡೆ – ನುಡಿ ಸರ್ವವೂ ಲಿಂಗಮಯವಾದ ಶರಣನು ಚಿತ್ ಸ್ವರೂಪವು. ಆ ಚಿತ್ ಸ್ವರೂಪವೇ ಲಿಂಗದ ಅಭಿನ್ನ ಚಿಚ್ಛಕ್ತಿ. ಅದು ಕಾರಣ ಈ ಚಿಚ್ಛಕ್ತಿಯೇ ಸತಿಯೆನಿಸಿ, ಲಿಂಗವೇ ಪತಿಯೆನಿಸುವದು. ಇಂತು ಶರಣಸತಿ ಲಿಂಗಪತಿ ಎಂಬ ಭಾವ ಭಕ್ತನಲ್ಲಿ ಮೈದೋರುವದು. ಚಿದ್ಭನಲಿಂಗವೆಂಬ ಪತಿಗೂ ಚಿತ್‌ಸ್ವರೂಪವೆಂಬ ಶರಣಸತಿಗೂ ಎಂದೆಂದೂ ವಿಯೋಗವಿಲ್ಲ. ಚಿನ್ನ ಚಿನ್ನದ ಬಣ್ಣದಂತೆ, ರತ್ನ ರತ್ನದ ಕಾಂತಿಯಂತೆ ಅಭಿನ್ನವಾದುದು ಅವರ ಇರವು. ಅದ್ವಯರು ಆ ಸತಿಪತಿಗಳು. ಅಭಿನ್ನ ಜ್ಞಾನದಿಂದ ಲಿಂಗವು ತಾನಾಗಿ ಎರಡಿಲ್ಲದ ಅದ್ವಯ ಜ್ಞಾನಾನಂದವನ್ನು ಶರಣನು ಪಡೆದಿರುವನು. ಈ ಅದ್ವಯಾನಂದವೇ ರೂಪಾದ ಶರಣನ ಭಕ್ತಿ ಆನಂದ ಭಕ್ತಿಯೆನಿಸುವುದು.

ಭಕ್ತ ಗಂಡೇ ಇರಲಿ, ಹೆಣ್ಣೇ ಇರಲಿ; ಅಭಿನ್ನ ಜ್ಞಾನದಿಂದುಂಟಾದ ಅದ್ವಯಾನಂದವನ್ನನುಭವಿಸುತ್ತಿರುವಾಗ್ಗೆ ತಾನು ಹೆಣ್ಣೆಂದೇ ಶಿವನ ಸತಿಯೆಂದೇ ಭಾವಿಸುತ್ತಾನೆ. ತಾನು ಸತಿಯೆಂಬ ಭಾವ ಇಲ್ಲಿ ಸಹಜವಾಗಿ ಮೂಡಿಬರುತ್ತದೆ. ಭಕ್ತ ಈ ಭಾವವನ್ನು ಕೃತ್ರಿಮವಾಗಿ, ಒತ್ತಾಯದಿಂದ ತಂದುಕೊಳ್ಳುವುದಿಲ್ಲ. ಕನ್ನೆಯಲ್ಲಿ ಅಡಗಿರುವ ಸ್ನೇಹಭಾವ ಯೌವನದಲ್ಲಿ ಅವಳಿಗರಿಯದಂತೆಯೇ ಅಕೃತ್ರಿಮವಾಗಿ ಮೂಡಿ ಅಂಗಾಂಗದಲ್ಲಿ ಚಿಮ್ಮಿ ಹೊರಸೂಸುವಂತೆ ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ ಸ್ಥಲಗಳಲ್ಲಿ ಭಕ್ತನ ಭಕ್ತಿ ವಿಕಾಸಗೊಂಡು, ಸರ್ವಾಂಗವೂ ಲಿಂಗಮಯವಾಗಿ ಚಿದ್‌ದೃಕ್ ಉಂಟಾಗಿ ಭಕ್ತ ಚಿತ್‌ಸ್ವರೂಪನೆನಿಸಿದಾಗ “ಶರಣಸತಿ ಲಿಂಗಪತಿ” ಭಾವ ಆತನರಿಯದಂತೆಯೇ ಮೂಡಿ ನಿಲ್ಲುತ್ತದೆ. ತಾವು ಶಿವನಿಗೆ ಹೇಗೆ ಸತಿಯಾದೆವೆಂಬುದನ್ನು ಷಣ್ಮುಖ ಸ್ವಾಮಿಗಳು ಹೃದಯಂಗಮವಾಗಿ ಹೇಳಿದ್ದಾರೆ :

ಪುರುಷನೆಂದು ಕರೆವತಿರ್ಪುದು ಜಗದವರೆಲ್ಲ ಎನ್ನ,
ನಾನು ಪುರುಷನಲ್ಲವಯ್ಯಾ,
ಅದೆಂತೆಂದೊಡೆ:
ಹೊರಗಣ ಸಾಕಾರವೇ ನೀನು,
ಒಳಗಣ ನಿರಾಕಾರವೇ ನಾನು,
ಹೊರಗಣ ಸಾಕಾರದ ಪುರುಷ ರೂಪೇ ನೀವಾಗಿ
ಒಳಗಣ ನಿರಾಕಾರ ಸ್ತ್ರೀರೂಪೇ ನಾನಾಗಿ
ನಿಮಗೆ ರಾಣಿವಾಸವಾದೆನಯ್ಯಾ ಅಖಂಡೇಶ್ವರಾ

ಇಲ್ಲಿಯ ಸತಿಪತಿ ಭಾವ ಕೇವಲ ಆತ್ಮಿಕವಾದುದು; ದೈಹಿಕ ಭಾವನೆಗೆ ಇಲ್ಲಿ ಎಷ್ಟೂ ಆಸ್ಪದವಿಲ್ಲ. ನಿರ್ದೇಹಿಯಾದ ಲಿಂಗನಿಗೆ ಸತಿಯಾಗ ಬಯಸುವವರೂ ನಿರ್ದೇಹರೇ ಆಗಬೇಕಲ್ಲ; ಹಾಗಲ್ಲದಿದ್ದರೆ ಅದ ‘ಕೂಟ’ ಹೇಗೆ ಸಾಧ್ಯ? ಎಲ್ಲ ದ್ವಂದ್ವಗಳನ್ನು ಮೆಟ್ಟಿ, ಅರಿಷಡ್ವರ್ಗಗಳನ್ನು ಹೂಳಿ, ಅತ್ತಲಿತ್ತ ಹರಿವ ಮನದ ಶಿರವ ನರಿದು, ಅಂಗಗುಣವಳಿದು ಲಿಂಗಗುಣ ಒಳಕೊಂಡರೆ ಶರಣ ಸತಿಯಾಗಲು ಯೋಗ್ಯನಾಗುತ್ತಾನೆ. ಇದನ್ನು ಮಹಾದೇವಿಯಕ್ಕನವರು ಬಹು ಸೊಗಸಾಗಿ ಹೇಳಿದ್ದಾನೆ.

ಅಂಗವ ಲಿಂಗಮುಖದಲ್ಲಿ ಅರ್ಪಿಸಿ ಅಂಗವನಂಗವಾಯಿತ್ತು
ಮನವನರಿದು ಲಿಂಗಕ್ಕರ್ಪಿಸಿ ಮನಲೀಯವಾಯಿತು.
ಅಂಗಭಾವ ಮನೋಭಾವವಳಿದ ಕಾರಣ
ಎನ್ನ ಕಾಯವಕಾಯವಯಿತ್ತು
ಎನ್ನ ಆಕಾಯದ ಸುಖಭೋಗವ ಲಿಂಗವೇ ಭೋಗಿಸುವನಾಗಿ
ಶರಣಸತಿ ಲಿಂಗಪತಿಯಾದೆನು. ಇದು ಕಾರಣ
ಚೆನ್ನಮಲ್ಲಿಕಾರ್ಜುನನೆಂಬ ಗಂಡನ ಒಳಹೊಕ್ಕು ಬೆರೆಸಿದೆನು.

ಅಕಾಯ ಶರಣಸತಿಯರು ಅಕಾಯ ಶಿವನೊಡನೆ ಗೈವ ಸರಸಸಲ್ಲಾಪ, ತಾಳುವ ಮುನಿಸು, ಅನುಭವಿಸುವ ವಿರಹ, ಮಾಡಿಕೊಳ್ಳುವ ಶೃಂಗಾರ, ಅಲಂಕಾರ ಅನುಪಮವಾದುದು, ವರ್ಣನೆಗೆ ನಿಲುಕದುದು. ಶರಣಸತಿಯರ ಹಾವಭಾವ, ವಿಲಾಸ, ವಿರಹ, ವಿಪ್ರಲಂಭ ಸಂಸಾರದಲ್ಲಿ ಮುಳುಗಿರುವ ರಸಿಕರೆಂಬಂತೆ ಕಂಡರೂ ಅಲ್ಲಿ ವಿಷಯ ವಾಸನೆಯಿಲ್ಲ, ಇಂದ್ರಿಯ ಚಾಪಲ್ಯವಿಲ್ಲ. ತಮ್ಮ ಹಾವಭಾವ ವಿಲಾಸಗಳನ್ನು ವಿವರಿಸಲು ಅವರು ಸಂಸಾರಿಗಳು, ಸಾಮಾನ್ಯರು ಬಳಸುವ ಶಬ್ದಗಳನ್ನೇ ಬಳಸುತ್ತಾರೆ. ಆದರೆ ಅಲ್ಲಿ ಸಾಮಾನ್ಯ ಭಾವವಿರುವುದಿಲ್ಲ; ಅದು ಅಸಮಾನ್ಯ ಭಾವವೂ ಅಲ್ಲ. ನಿರ್ಭಾವ ಭಾವವದು. ಶರಣರ ವಾಕ್‌ಪುರುಷದಿಂದ ಆ ಸಾಮಾನ್ಯ ಶಬ್ದಗಳು ಅವರ ನಿರ್ಭಾವ ಸೌಂದರ್ಯವನ್ನು ಹೇಳಲು ಯೋಗ್ಯವಾಗುತ್ತವೆ; ಆತ್ಮ ಸಂಸ್ಕಾರ ಹೊಂದಿ ಅವು ಶರಣರ ಸಮರಸಾನಂದವನ್ನು ಹೊರಸೂಸಲು ಅಂತಸ್ಸತ್ವವನ್ನು ಪಡೆಯುತ್ತವೆ.

ಲೋಕದ ಅನುಭಾವ ಚರಿತ್ರೆಯಲ್ಲಿ ಸತಿಪತಿ ಭಾವದ ಕುರುಹುಗಳು. ಬಹು ಹಿಂದಿನಿಂದಲೂ ಕಂಡುಬರುತ್ತವೆ. ಇಲ್ಲಿ ಬೌದ್ಧರ “ಸಹಜೀಯ ತತ್ವ’, “ವೈಷ್ಣವರ ಮಧುರ ಭಕ್ತಿ’, ‘ಇಸ್ಲಾಮ ಧರ್ಮದ “ಸೂಫಿತತ್ವ” ಇವುಗಳನ್ನು ಹೆಸರಿಸಬಹುದು. ಇವುಗಳಲ್ಲಿ ಕಾಣುವ ಸತಿಪತಿ ಭಾವಕ್ಕೂ ಶರಣರ ಸತಿಪತಿ ಭಾವಕ್ಕೂ ಬಹಳ ಅಂತರವಿದೆ. ‘ಅಂಗವನಂಗ ಮಾಡಿಕೊಂಡು, ಮನಲಿಂಗದಲ್ಲಿ ಲೀಯಗೊಳಿಸಿ’ ‘ತಾನಭವನಾಗಿ ಅಭವನ ಭಕ್ತಿಗೈಯುವ’ ಶರಣನ ಸತಿಪತಿ ಭಾವದ ಎತ್ತರಕ್ಕೆ ಇನ್ನುಳಿದ ಸತಿಪತಿ ಭಾವದ ತತ್ವಗಳು ಏರುವುದಿಲ್ಲ.

‘ಸಹಜೀಯ’ ತತ್ವದಲ್ಲಿ ಐಂದ್ರಿಕ ಪ್ರೀತಿಯೇ ಮೂಲ. ಸತಿ – ಪತಿಗಳು ಪ್ರೇಮ ಪೂಜಾರಿಗಳು. ಇದು ಮರ್ತ್ಯದ ಪ್ರೇಮ. ಗಂಡ – ಹೆಂಡಿರು ಈ ಮರ್ತ್ಯ ಪ್ರೇಮ. ಐಂದ್ರಿಕ ಪ್ರೀತಿಯನ್ನೇ ಬೆಳೆಸಿ, ಶುದ್ಧಗೊಳಿಸಿ ಮೋಕ್ಷ ಸಂಪಾದಿಸಬೇಕು. ಇಲ್ಲಿ ವಾಸನೆಗೆ ಪೂರ್ಣ ಎಡೆಯುಂಟು. ಇಂದ್ರಿಯಗಳ ವ್ಯಾಪಾರಕ್ಕೆ ಸಂಪೂರ್ಣ ಅವಕಾಶವುಂಟು.

ಸೂಫೀ ತತ್ವದಲ್ಲಿ ‘ಅಂಗ ಅನಂಗವಾಗುವ’ ಕುರುಹುಗಳು ಕಾಣಬರುವುದಿಲ್ಲ. ಮರ್ತ್ಯಪ್ರೇಮವೇ ಈ ತತ್ವಕ್ಕೆ ನಾಂದಿ. ಈ ತತ್ವದಲ್ಲಿ ದೇವನಿಗೆ ಸತಿಯೆಂದೂ ಭಕ್ತನಿಗೆ ಪತಿಯೆಂದೂ ಸಂಬೋಧಿಸಲಾಗುತ್ತದೆ. ಉರ್ದೂ ಕಾವ್ಯ ಲೋಕದಲ್ಲಿ ಸೂಫೀ ತತ್ವ ತಾನೇ ತಾನಾಗಿದೆ. ಅನುಭಾವದ ಅಂತಿಮ ಸೀಮೆ, ಅಕಾಯಪ್ರೀತಿ, ಸೌಂದರ್ಯಗಳು ಇಲ್ಲಿಯೂ ಕಂಡುಬರುವುದಿಲ್ಲ.

ವೈಷ್ಣವರ ‘ಮಧುರ ಭಕ್ತಿ’ಯಲ್ಲಿಯೂ ‘ತಾನಭವನಾಗಿ ಅಭವನ ಭಕ್ತಿಗೈಯುವ’ ತತ್ವವಿಲ್ಲ; ಮಾರ್ಗವಿಲ್ಲ. ಮೂಲತಃ ಶರಣರ ಭಕ್ತಿಗೂ ವೈಷ್ಣವರ ಭಕ್ತಿಗೂ ವ್ಯತ್ಯಾಸವಿದೆ. ದಾಸ್ಯ, ಸಖ್ಯ, ವಾತ್ಸಲ್ಯ, ಮಧುರ ಮತ್ತು ಶಾಂತ ಇವು ವೈಷ್ಣವ ಭಕ್ತಿಯ ಐದು ಭಾವಗಳು. ಈ ಭಾವಗಳು ಶರಣರ ಭಕ್ತಿಯಲ್ಲಿ ಕಾಣುತ್ತವೆ. ಆದರೆ ಅವರ ಭಕ್ತಿ ಇನ್ನೂ ಹಲವಾರು ಹೊಸ ತತ್ವಗಳನ್ನೊಳಗೊಂಡಿದೆ. ಶರಣರ ಭಕ್ತಿ ಕುರುಡಲ್ಲ; ಅದಕ್ಕೆ ಅರಿವಿನ ಕಂಗಳಿವೆ. ಶರಣರ ಭಕ್ತಿ ಹೆಳವನಲ್ಲ; ಅದಕ್ಕೆ ಕ್ರಿಯೆಯ ಕಾಲ್ಗಳಿವೆ. ಜ್ಞಾನ, ಕ್ರಿಯೆಗಳಿಂದ ಕೂಡಿದ ಈ ಭಕ್ತಿ ಒಂದು ವಿಶಾಲವಾದ, ವಿನೂತನವಾದ, ಜೀವಂತವಾದ, ಸತ್ವಪೂರ್ಣವಾದ ಸರ್ವಾಂಗ ಸುಂದರ ಸ್ವಾವಲಂಬಿ ಸಮಾಜವನ್ನು ಕಟ್ಟಿತು. “ಮಾತಿನ ಮಾತಿನಲ್ಲಿಪ್ಪುದೇ ಭಕ್ತಿ, ಮಾಡಿ ತನು ಸವೆಯದನ್ನಕ್ಕ, ಮನ ಸವೆಯದನ್ನಕ್ಕ, ಧನ ಸವೆಯದನ್ನಕ್ಕ,?” “ಭಕ್ತಿ ವಿಶೇಷವ ಮಾಡುವರೆ ಹತ್ತು ಬೆರಳುಗಳುಂಟು, ಹಾಸಿ ದುಡಿದರೆ ತನಗುಂಟು, ತನ್ನ ಪ್ರಮಥರಿಗುಂಟು” ಎಂಬ ಅಣ್ಣನವರ ಮಾತುಗಳಲ್ಲಿ ಭಕ್ತ ಕಾಯಕ ಮಾಡಬೇಕು ಎಂದು ಒತ್ತಿ ಹೇಳಲಾಗಿದೆ. ಕಾಯಕ ಭಕ್ತಿಯ ಜೀವ. “ಕಾಗೆ ಒಂದಗುಳ ಕಂಡರೆ ಕೂಗಿ ಕರೆಯದೆ ತನ್ನ ಬಳಗವನು, ಶಿವ ಭಕ್ತನಾಗಿ ಭಕ್ತಿ ಪಕ್ಷವಿಲ್ಲದಿದ್ದರೆ ಕಾಗೆ ಕೋಳಿಗಳಿಗಿಂತ ಕರಕಷ್ಟ” ಎಂಬ ಮಾತುಗಳಲ್ಲಿ ಕಾಯಕದಿಂದ ಗಳಿಸಿದುದನ್ನು ಸಮಾಜಕ್ಕೆ, ಗುರುಲಿಂಗ ಜಂಗಮಕ್ಕೆ ಅರ್ಪಿಸಬೇಕೆಂದು ಸ್ಪಷ್ಟವಾಗಿದೆ. ಇಂಥ ಭಕ್ತಿಮಾಡುವ ಭಕ್ತನ ದೇಹ ಬಾಳೆಯ ಕಂಬದಂತೆ ಕೆಚ್ಚಿಲ್ಲದಂತಾಗುತ್ತದೆ; ಮೇಲಾದ ಫಲವ ಬೀಜಸಹಿತ ಶಿವನಿಗರ್ಪಿಸಿ ಭಕ್ತ ಭವರಹಿತನಾಗುತ್ತಾನೆ. ಇಂಥ ಭಕ್ತಿ ಬೇರೆಲ್ಲಿಯೂ ಕಾಣಸಿಗುವುದಿಲ್ಲ.

ಶರಣರ ಭಕ್ತಿಯಲ್ಲಿ ವಿಕಾಸತತ್ವ ಅಡಗಿದೆ; ಜೀವಿ ಉಪಾಸನೆಯಿಂದ ಶಿವನಾಗುವನು. ಶ್ರದ್ಧಾ, ನಿಷ್ಠೆ, ಅವಧಾನ, ಅನುಭವ, ಆನಂದ, ಸಮರಸ – ಈ ಆರು ವಿಧ ಭಕ್ತಿಗಳ ಆಚರಣೆಯಿಂದ ಭಕ್ತ ಲಿಂಗನಾಗಿ ಲಿಂಗದೊಡನೆ ಸಾಮರಸ್ಯ ಪಡೆಯುತ್ತಾನೆ.

ವೈಷ್ಣವರ ‘ಸತಿಪತಿ ಭಾವ’ ದಲ್ಲಿಯೂ ಶರಣರ ಆಳ, ಎತ್ತರಗಳಿಲ್ಲ. ‘ಸತಿಪತಿ ಭಾವಕ್ಕೆ “ಮಧುರಭಕ್ತಿ”, “ನಾಮಮಹಾತ್ಮ್ಯ” ಎಂದವರು ಕರೆಯುತ್ತಾರೆ. ಮೀರಾಬಾಯಿ, ರಂಗನಾಯಕಿ ಇವರು ಮಧುರ ಭಕ್ತಿಗೆ ಹೆಸರಾದವರು. ಇವರಿಬ್ಬರಿಗೂ ಸಗುಣ, ಸಾಕಾರ ಕೃಷ್ಣನೇ ಪ್ರಿಯ. ಅಕ್ಕಮಹಾದೇವಿಯಂತೆ ಮೀರಾಬಾಯಿಗೆ ಚಿಕ್ಕಂದಿನಲ್ಲಿಯೇ ದೇವರಲ್ಲಿ ಒಲುಮೆ ಮೂಡಿತು. ಕೃಷ್ಣನೇ ಗಂಡನೆಂದು ಮೀರಾಬಾಯಿ ನಂಬಿ, ಆ ನಂಬುಗೆ ಬಲಗೊಳಿಸಿ ಸಂಸಾರ ತ್ಯಾಗ ಮಾಡಿದಳು. ಆದರೆ ಕಾಯವಕಾಯವ ಮಾಡಿಕೊಂಡು ಶರಣ ಸತಿಯಾದ ಮಾಹಾದೇವಿಯಕ್ಕನ ನಿಲುವು ಮೀರಾಬಾಯಿಗೆ ಸಾಧ್ಯವಾಗಲಿಲ್ಲ. ರಂಗನಾಯಕಿಯು ತನ್ನನ್ನು ನಾನಾ ರೀತಿಯಾಗಿ ಶೃಂಗರಿಸಿಕೊಂಡು ಶ್ರೀರಂಗನ ಉಪಾಸನೆ ಮಾಡುತ್ತಿದ್ದಳು. ಶ್ರೀರಂಗನ ವಿಗ್ರಹದೊಂದಿಗೆ ಅವಳ ಮದುವೆಯಾಗುತ್ತದೆ. ಆ ವಿಗ್ರಹದಲ್ಲಿ ಶ್ರೀರಂಗನನ್ನು ಕಂಡ ಅವಳು ನಿರಾಕಾರ ಶ್ರೀರಂಗನನ್ನು ನೋಡ ಬಯಸಲಿಲ್ಲ. ತನ್ನ ಆತ್ಮಕ್ಕಿಂತಲೂ ರಂಗನಾಯಕಿ ತನ್ನ ದೇಹವನ್ನು ಸುಂದರಗೊಳಿಸಿ ಶ್ರೀರಂಗನಿಗೆ ಅರ್ಪಿಸಿದಳು.

ಬಸವಣ್ಣ, ಉರಿಲಿಂಗದೇವ, ಗಜೇಶ ಮಸಣಯ್ಯ, ಷಣ್ಮುಖಸ್ವಾಮಿ, ಘನಲಿಂಗಿದೇವ, ಅಕ್ಕಮಹಾದೇವಿ, ಸತ್ಯಕ್ಕ ಮೊದಲಾದವರ ಸತಿಪತಿ ಭಾವದ ವಚನಗಳು ಅತ್ಯಂತ ಸೊಗಸಾಗಿವೆ. ಎಲ್ಲರಿಗಿಂತಲೂ ಮಹಾದೇವಿಯಕ್ಕನವರ ಸತಿಪತಿಭಾವದ ವಚನಗಳಲ್ಲಿ ಸೌಂದರ್ಯ ಸೀಮೆಗೆ ಮುಟ್ಟಿದೆ. ಮುಪ್ಪಿನ ಷಡಕ್ಷರಿಯ ಹಾಡುಗಬ್ಬಗಳಲ್ಲಿ ಈ ಭಾವ ಚೆಲುವಿನ ಹೊನಲಾಗಿ ಹರಿದಿದೆ.

ಶರಣಸತಿಯ ಸೌಂದರ್ಯ, ವಿರಹ, ಶೃಂಗಾರ, ಪ್ರಳಾಪ, ಕಳವಳ, ಆನಂದ, ಸಮರಸ ಇವುಗಳ ಒಂದು ‘ನುಡಿಚಿತ್ರ’ವನ್ನು ಇಲ್ಲಿ ಕೊಟ್ಟಿದೆ. ಎಲ್ಲ ಶರಣರ ಶರಣೆಯರ ವಚನಗಳನ್ನು ಈ ನುಡಿಚಿತ್ರಕ್ಕೆ ಬಳಸಿಕೊಂಡಿದೆ.

ದೇವರಾಯದಲ್ಲಿ ಶರಣಸತಿಗೆ ಒಲವು ಚಿಕ್ಕಂದಿನಲ್ಲಿಯೇ ಉಂಟಾಗಿತ್ತು. ಕನ್ಯೆತನವಿರುವಾಗ ಮೊಗ್ಗೆಯಲ್ಲಿ ಪರಿಮಳವಿದ್ದಂತೆ ಅಡಗಿದ್ದ ಸ್ನೇಹ ಯೌವನದಲ್ಲಿ ಮನಮುಟ್ಟಿ ತನುಮುಟ್ಟಿ ಹೊರಚಿಮ್ಮಿತು. ಆಕೆಯ ನಲ್ಲ ಎಂಥವನು? ಅವನ ರೂಪ, ಕುರುಹುಗಳನ್ನು ಅವಳ ವಾಣಿಯಲ್ಲಿಯೇ ಕೇಳುವಾ.

ಪೊಳೆವ ಕೆಂಜೆಡೆಗಳ ಮೇಲೆ ಎಳವೆಳುದಿಂಗಳು.
ಫಣಾಮಣಿ ಕರ್ಣಕುಂಡಲ ನೋಡವ್ವಾ!
ರುಂಡಮಾಲೆಯ ಕೊರಳ ಗರುವನ ಕಂಡರೆ ಒಮ್ಮೆ ಬರಹೇಳವ್ವಾ!
ಗೋವಿಂದನ ನಯನವವನ ಉಂಗುಟದ
ಮೇಲಿಪ್ಪುದು, ಚೆನ್ನಮಲ್ಲಿಕಾರ್ಜುನದೇವಂಗಿದು ಕುರುಹವ್ವಾ.

ಶರಣಸತಿಯ ನಲ್ಲನಿಗೆ ಹೊಳೆವ ಕೆಂಜೆಡೆಗಳಿವೆ; ಆ ಜಡೆಗಳ ಮೇಲೆ ಬಾಲಚಂದ್ರ. ಏನು ಸೌಂದರ್ಯವಿದು ! ಅವನಿಗಾಗಿ ಹಗಲಿರುಗಳು ಹಂಬಲ. ತನ್ನ ಪ್ರೇಮ ಅವನನ್ನೆಳೆತರುವುದೆಂದು ಆಕೆ ನಂಬಿದ್ದಾಳೆ. ಅವನು ಬರಲೊಲ್ಲ. ಏಕೆ ಬರಲೊಲ್ಲ? ಏಕೆ? ಇದನ್ನೇ ಶರಣಸತಿ ತೋಡಿಕೊಳ್ಳುತ್ತಾಳೆ.

ಭಾವನೇಕೆ ಬಾರನೆನ್ನ ಮನೆಗೆ?
ಹರಿಯ ಮಗನನುರುಹಿದ ಗರ್ವದ ಭಾವನೇಕೆ
ಬಾರನೆನ್ನ ಮನೆಗೆ?
ಅಸುರರ ಪುರವ ಸುಟ್ಟ ವೀರಭಾವನೇಕೆ
ಬಾರನೆನ್ನ ಮನೆಗೆ?
ದಕ್ಷನ ಸಿರವನರಿದು ಯಾಗವ ಕೆಡಿಸಿ
ಕುರಿದಲೆಯ ಹತ್ತಿಸಿ, ಬಿನ್ನಾಣದ ಬಲುಹ ಮೆರೆದ
ಏಕೋಭಾವನೇಕೆ ಬಾರನೆನ್ನ ಮನೆಗೆ?
ಹರಿಯ ನಯನದ ಪೂಜೆ ಚರಣದಲ್ಲೊಪ್ಪಿತ್ತೆಂಬ
ದುರುಳತನವು ತನಗೆ ಬೇಡವ್ವಾ!
ಪರವಧುವಿಂಗಳುಪಿದ ಇಲ್ಲವೆಂಬ ವಿಗಡತನದ ದುರುಳತನ ಬೇಡವ್ವಾ!
ಆತನ ಕರೆದು ತಾರವ್ವಾ.
ಶಂಭು ಜಕ್ಕೇಶ್ವರನ ನೆರೆದು ನೋಡುವೆನು.

ಲಿಂಗಪತಿಗೆ ಆಕೆಯ ಕರುಳ ಕಲಮಲ ಮುಟ್ಟಲಿಲ್ಲ. ಆಕೆಗೆ ದಿನಗಳೆದಂತೆಲ್ಲ ಲಿಂಗಪತಿಯ ಚಿಂತೆ ಹಿಚ್ಚಾಯಿತು. ಸಂಗಯ್ಯ ಒಲಿವನೋ ಒಲಿಯನೋ ಎಂಬ ಒಂದೇ ಒಂದು ಚಿಂತೆ ಆಕೆಗೆ. ಅದೇ ಹಾಸಿಗೆ, ಅದೇ ಹೊದಿಕೆ. “ಎನಗೆ ನಿಮ್ಮ ನೆನಹಾದಾಗಲೆ ಉದಯ; ನಿಮ್ಮ ಮರಹಾದಾಗಲೆ ಅಸ್ತಮಾನ. ಎನಗೆ ನಿಮ್ಮ ನೆನಹೇ ಜೀವ, ನಿಮ್ಮ ನೆನಹೆ ಪ್ರಾಣ” ಎಂದು ಮೊರೆಯಿಡುತ್ತಾಳೆ. “ಕಳವಳದ ಮನ ತಲೆಕೆಳಗಾದುದವ್ವಾ! ಸುಳಿದು ಬೀಸುವ ಗಾಳಿ ಉರಿಯಾಯಿತವ್ವಾ. ಬೆಳುದಿಂಗಳು ಬಿಸಿಯಾಯಿತ್ತು ಕೆಳದಿ. ಹೊಳಲ ಸುಂಕಿಗನಂತೆ ತೊಳಲುತ್ತಿಹೆನವ್ವಾ, ತಿಳುಹಿ ಬುದ್ಧಿಯ ಹೇಳಿ ಕರೆತಾರೆಲೆಗೆ, ಚೆನ್ನಮಲ್ಲಿಕಾರ್ಜುನಂಗೆ ಎರಡರ ಮುನಿಸವ್ವಾ” – ಎಂದು ಆಕೆ ವಿರಹದುರಿಯಲ್ಲಿ ವಿಲಿವಿಲಿ ಒದ್ದಾಡುತ್ತಾಳೆ.

ಎಲ್ಲ ಕಾಲದಲ್ಲಿಯೂ ಎಲ್ಲ ಅವಸ್ಥೆಯಲ್ಲಿಯೂ ನಲ್ಲನ ಧ್ಯಾನವೇ. ನಲ್ಲನ ಚಿಂತೆಯಲ್ಲಿ ಆಕೆ ಬಡವಾಗುತ್ತಿದ್ದಾಳೆ:

ನಲ್ಲನ ಕಾಣದೆ
ತಲ್ಲಣಗೊಳುತಿರ್ಪುದ ನೊಡಾ ಎನ್ನ ಮನವು!
ಜಾಗ್ರಾವಸ್ಥೆಯಲ್ಲಿ
ನಲ್ಲನ ಚಿಂತೆಯಿಂದೆ ಸುಳಿವುತಿರ್ದೆನವ್ವಾ!
ಸ್ವಪ್ನಾವಸ್ಥೆಯಲ್ಲಿ
ನಲ್ಲನ ಚಿಂತೆಯಿಂದೆ ಕಳವಳಿಸುತಿರ್ದೆನವ್ವಾ!
ಸುಷುಪ್ತಾವಸ್ಥೆಯಲ್ಲಿ
ನಲ್ಲನ ಚಿಂತೆಯಿಂದೆ ಮೈಮರೆದಿರ್ದೆನವ್ವಾ!
ಸರ್ವಾವಸ್ಥೆಯಲ್ಲಿ
ಅಖಂಡೇಶ್ವರನೆಂಬ ನಲ್ಲನ ಕೂಡಬೇಕೆಂಬ ಭ್ರಾಂತಿಯಿಂದೆ
ಬಡವಾಗುತಿರ್ದೆನವ್ವಾ!

ಶರಣಸತಿಯ ದುಃಖ ಹೇಳಬರದು. ತನಗಿದ್ದ ತವಕ ಆತನಿಗಿಲ್ಲವೆಂಬ ವ್ಯಥೆ ಮನದಳಲನ್ನು ನೂರ್ಮಡಿಗೊಳಿಸಿದೆ. ಆಪ್ತ ಸಖಿಯರಿಲ್ಲ. ಬರಿದೆ ಯೌವನ ಹೋಗುವುದೆಲ್ಲಾ! ಆತನನ್ನು ಯಾರು ಕರೆತಂದು ನೆರಹಬೇಕು?

ಇನಿಯಂಗೆ ತವಕವಿಲ್ಲ! ಎನಗೆ ಸೈರಣೆಯಿಲ್ಲ!
ಮನದಿಚ್ಚೆಯನರಿವ ಸಖಿಯರಿಲ್ಲ.
ಇನ್ನೇವೆನವ್ವಾ! ಮನುಮಥವೈರಿಯ ಅನುಭಾವದಲ್ಲಿ
ಎನ್ನ ಮನ ಸಿಲುಕಿ ಬಿಡದು !
ಇನ್ನೇನ ಮಾಡುವೆನೆಲೆ, ಕರುಣವಿಲ್ಲದೆ ತಾಯಿ,
ದಿನ ವೃಥಾ ಹೋಯಿತ್ತಾಗಿ? ಯೌವನ ಸರವಾಗದಮನ್ನ
ಪಿನಾಕಿಯ ನೆರಹವ್ವಾ ಶಂಭುಜಕ್ಕೇಶ್ವರನ.

ಶರಣಸತಿಯ ಕಳವಳ ಸಾಸಿರ್ಮಡಿಯಾಯಿತು. ಬಾಳೇ ಆಕೆಗೆ ನೀರಸವೆನಿಸಹತ್ತಿತು. ಆಕೆ ತನ್ನ ಸ್ಥಿತಿಯನ್ನು ಹೀಗೆ ಹೇಳಿಕೊಳ್ಳುತ್ತಾಳೆ.

ಋತುಕಾಲ ತಪ್ಪಿದ ಕೋಗಿಲೆಯಂತೆ ನುಡಿಯದಂತಿರ್ದಳಲ್ಲಾ !
ಪರಿಮಳ ತಪ್ಪಿದ ಭ್ರಮರನಂತೆ ಸುಳಿಸುಳಿಗೊಳ್ಳುತ್ತಿರ್ದಳಲ್ಲಾ !
ಫಲವು ತಪ್ಪಿದೆ ಬಂಜೆ ಬನದೊಳಗಣ ಅರಗಿಳಿಯಂತಿದ್ದಾಳಲ್ಲಾ !
ದುರದುರದ ಜವ್ವನದಲ್ಲಿ ತೋರಣದೆಲೆಯಂತಾದಳಲ್ಲಾ !
ಮಹಾಲಿಂಗ ಗಜೇಶ್ವರನ ನೆರೆವ ಭರದಿಂದ ಮರುಳುಗೊಂಡಳಲ್ಲಾ !

ಎಂತಹ ಹೃದಯವಿದ್ರಾವಕ ಸ್ಥಿತಿಯಿದು ! ಇಂತಹ ಸ್ಥಿತಿಯಲ್ಲಿ ಗಾಯಕ್ಕೆ ಉಪ್ಪೆರಚಿದಂತೆ ಯಾರೋ ‘ಲಿಂಗಪತಿಯನ್ನು ಬಿಟ್ಟು ಬೇರೆಯವರಿಗೆ ಮನವೆಳಸಲು’ ಹೇಳಿರಬೇಕು. ಆಗ ಶರಣಸತಿಗಾದ ಮಾನಸಿಕ ನೋವು ಅಪಾರ. ಆಕೆ ಇಂತು ನುಡಿವಳು :

ಮನಕ್ಕೆ ಮನೋಹರವಲ್ಲದ ಗಂಡರು
ಮನಕ್ಕೆ ಬಾರರು, ಕೇಳವ್ವಾ ಕೆಳದೀ,
ಪನ್ನಗಭೂಷಣರಲ್ಲದ ಗಂಡರು
ಇನ್ನೆನಗಾಗದ ಮೊರೆ ನೋಡವ್ವಾ !
ಕನ್ನೆಯಂದಿನ ಕೂಟ; ಚಿಕ್ಕಂದಿನ ಬಾಳುವೆ.
ನಿಮ್ಮಾಣೆಯಯ್ಯಾ ಕೂಡಲಸಂಗಮದೇವಾ !

ಚಿಕ್ಕಂದಿನಿಂದಲೂ ಪನ್ನಗಭೂಷಣನಲ್ಲಿಯೇ ಆಕೆಯ ಮನ ನಟ್ಟಿದೆ. ಆತನನ್ನು ಬಿಟ್ಟು ಬೇರೊಬ್ಬನನ್ನು ಆಕೆ ಒಲ್ಲಳು. “ಪರಪುರುಷರ ಮುಖವ ನೋಡದಂತೆ ಮಾಡಾ; ಬಳಿಕ ನೀ ಹೇಂಗಿರಿಸಿದಂತೆ ಇರಿಸಾ” ಎಂದು ನಲ್ಲನಲ್ಲಿ ಅನನ್ಯ ಭಕ್ತಿಯಿಂದ ಮೊರೆಯಿಡುತ್ತಾಳೆ. ಶರಣಸತಿಯ ತಾಯಿಯೇ ಬೇರೊಬ್ಬನನ್ನು ಒಲಿಸೆಂದು ಹೇಳಿದಳು. ಆಗ ಶರಣಸತಿ ಕಿಡಿಕಿಡಿಯಾಗಿ ನಿನ್ನ ತಾಯಿತನ ಒಲ್ಲೆನೆಂದು ಹೀಗೆ ನುಡಿಯುತ್ತಾಳೆ :

ಮನಮನ ತಾರ್ಕಣೆಯಗೊಂಡು ಅನುಭವಿಸಲು
ನೆನಹೇ ಘನವಹುದಲ್ಲದೆ ಅದು ಹವಣದಲ್ಲಿ ನಿಲುವುದೇ ?
ಎಲೆ ಅವ್ವಾ ! ನೀನು ಮರುಳವ್ವೆ !
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯಗೊಲಿದು
ಸಲೆ ಮಾರುವೋದೆನು.
ನಿನ್ನ ತಾಯಿತನನೊಲ್ಲೆ ಹೋಗೇ!

ತಾಯಿಯಾದರೇನು? ಗೆಳತಿಯಾದರೇನು? ಯಾರಾದರೇನು? ಮಲ್ಲಿಕಾರ್ಜುನನನ್ನು ಬಿಡಹೇಳಿದರೆ ಸುಮ್ಮನಿರಬಹುದೇ? ತಾಯಿತನಕ್ಕಿಂತಲೂ ಅವನೊಲುಮೆ ಹಿರಿದು. ಪೂರ್ವಾಶ್ರಮ ಕಳೆದು ಮಲ್ಲಿಕಾರ್ಜುನನನ್ನು ಪ್ರೇಮಿಸಿದ ಬಳಿಕ ನಂಟು ಭಕ್ತಿ ಹೇಗೆ ಸಾಧ್ಯ? ನಂಟುಭಕ್ತಿ ನಾಯಕ ನರಕ! ಅಂತೆಯೇ ಶರಣಸತಿ “ನಿನ್ನ ತಾಯಿತನವನ್ನೊಲ್ಲೆ ಹೋಗೇ”? – ಎಂದು ನಿರ್ಧಾರದಿಂದ ಹೇಳಿದಳು.

ಪರಗಂಡರು ಆಕೆಗೆ ಏಕೆ ಬೇಡ ? ಆಕೆಯ ಬಾಯಿಂದಲೇ ಕೇಳುವಾ :

ಎರದ ಮುಳ್ಳಿನಂತೆ ಪರಗಂಡರೆನಗವ್ವಾ,
ಸೋಂಕಲಮ್ಮೆ, ಸುಳಿಯಲಮ್ಮೆ;
ನಂಬಿನಚ್ಚಿ ಮಾತಾಡಲಮ್ಮೆನವ್ವಾ,
ಚೆನ್ನಮಲ್ಲಿಕಾರ್ಜುನನಲ್ಲದುಳಿದ ಗಂಡರ ಉರದಲ್ಲಿ
ಮುಳ್ಳುಟೆಂದು ನಾನಪ್ಪಲಮ್ಮೆನವ್ವಾ !

ಉರದಲ್ಲಿ – ಪರಂಗಡರ ಉರದಲ್ಲಿ – ಮುಳ್ಳುಂಟಂತೆ ! ಎಂತಹ ಮುಳ್ಳದು ? ಭವದ ಮುಳ್ಳು. ಭವವುಳ್ಳವನೇ ಭವಿ. ಅಂತೆಯೇ ಆಕೆ ಭವಿಯಾದ ಪರಗಂಡರನೊಲ್ಲಳಲು. ಹಾಗಾದರೆ ಆಕೆಯ ಗಂಡ ಎಂಥವನು? ಆಕೆ ಎಂಥವನಿಗೊಲಿದಿದ್ದಾಳೆ ?

ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗಾನೊಲಿದೆ;
ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ
ಚೆಲುವಂಗೆ ನಾನೊಲಿದೆ, ಎಲೆ ಅವ್ವಗಳಿರಾ !
ಭವವಿಲ್ಲದ ಭಯವಿಲ್ಲದ ನಿರ್ಭಯ ಚೆಲುವಂಗೊಲಿದೆ ನಾನು,
ಸೀಮೆಯಿಲ್ಲದ ನಿಸ್ಸೀಮಂಗೊಲಿದೆ ನಾನು; ಚೆನ್ನಮಲ್ಲಿಕಾರ್ಜುನನೆಂಬ
ಗಂಡಂಗೆ ಮಿಗೆಮಿಗೆ ಒಲಿದೆ, ಎಲೆ ಅವ್ವಗಳಿರಾ!

ಈ ರೂಪಿಲ್ಲದ ರೂಪವಂತ, ಕುರುಹಿಲ್ಲದ ಚೆಲುವ ಆಕೆಯ ಮನಸ್ಸನ್ನು ಮಾರುಗೊಂಡಿದ್ದಾನೆ; ಆಕೆಯ ಹೃದಯವನ್ನು ಸೂರೆಗೊಂಡಿದ್ದಾನೆ. ಯಾರು ಏನೇ ಹೇಳಿದರೂ ಲಿಂಗಪತಿಯನ್ನುಳಿದು ಆಕೆ ಇನ್ನೊಬ್ಬರಿಗೆ ಮರುಳಾಗಳು. ಆಕೆ ತನ್ನ ನಲ್ಲನಲ್ಲಿ ಪ್ರಳಾಪಿಸುತ್ತ ಹೀಗೆ ಮೊರೆಯಿಡುತ್ತಾಳೆ.

ಸಂಸಾರವೆಂಬ ಶ್ವಾನನಟ್ಟಿ ಮೀಸಲ ಬೀಸರ ಮಾಡದಿರಯ್ಯಾ,
ಎನ್ನ ಚಿತ್ತವು ನಿಮ್ಮ ಧ್ಯಾನವಯ್ಯಾ;
ನೀವಲ್ಲದೆ ಮತ್ತೇನನೂ ಅರಿಯೆನು,
ಕನ್ನೆಯಲ್ಲಿ ಕೈವಿಡಿದೆನು, ನಿಮ್ಮಲ್ಲಿ ನೆರೆದೆನು,
ಮನ್ನಿಸು ಕಂಡಾ, ಮಹಾಲಿಂಗವೇ,
ಸತಿಯಾನು, ಪತಿನೀನು, ಅಯ್ಯಾ;
ಮನೆಯೊಡೆಯ ಮನೆಯ ಕಾಯ್ದಿಪ್ಪಂತೆ
ನೀನೆನ್ನ ಮನವ ಕಾಯ್ದಿಪ್ಪ ಗಂಡನು !
ನಿಮಗೋತ ಮನವನನ್ಯಕ್ಕೆ ಹರಿದರೆ
ನಿನ್ನಭಿಮಾನ ಹಾನಿ, ಕೂಡಲಸಂಗಮದೇವಾ.

ಎಷ್ಟು ಪರಿಯಿಂದ ಶಿವನನ್ನು ಬೇಡಿಕೊಂಡರೂ ಆತ ಒಲಿಯದಾಗಿದ್ದಾನೆ. ಯಾರನ್ನು ಮೊರೆಹೋದರೆ ಆತ ಸಿಕ್ಕುವನು?

ಎನ್ನ ಆಪತ್ತು ಸುಖದುಃಖ ಇನ್ನಾರಿಗೆ ಹೇಳುವೆ?
ಶರಣಸ್ಥಲದವರಿಗೆ ಹೇಳಿದರೆ ಮಚ್ಚರ!
ಸವತಿ ಸಕ್ಕರೆಬೇವು ಬೆಲ್ಲವುಂಟೆ ?
ಇನ್ನಾರಿಗೆ ಹೇಳುವೆ ?

ಎಂದು ಆಕೆ ದುಃಖಿಸುತ್ತಾಳೆ. ಆಕೆಯ “ಶರಣಸ್ಥಲದವರಿಗೆ ಹೇಳಿದರೆ ಮಚ್ಚರ” ಎಂಬ ಮಾತಿನಲ್ಲಿ ಎಂತಹ ಧ್ವನಿಯಿದೆ ! ಈ ಸ್ಥಲದಲ್ಲಿಯೇ ನಲ್ಲನ ನೆನಹು, ವಿರಹ. ಆದುದರಿಂದ ಆ ಸ್ಥಲದವರೆಲ್ಲ ಸವತಿಯಾದರಲ್ಲ. ಸವತಿರು ಒಬ್ಬರಿಗೊಬ್ಬರು ಪ್ರೀತಿಯಿಂದ ಕಾಣುವರೆ ? ಬೇವು ಬೆಲ್ಲವಾಗಬಹುದೇ ? ಮೇಲಾಗಿ ಈ ಸ್ಥಲವಲ್ಲದವರಿಗೆ ಹೇಳಿದರೆ ವಿರಹವ್ಯಥೆ ಅವರಿಗೆ ಹೇಗೆ ತಿಳಿವುದು ?