ಒಂದೇ ಸ್ಥಳದಲ್ಲಿ ಒಂದೇ ಕಾಲಕ್ಕೆ ಒಂದೇ ಧ್ಯೇಯ ಸಾಧನೆಗಾಗಿ ಸಾವಿರಾಗು ಜನ ಕೂಡಿ ಸಕಲಜೀವರ ಲೇಸಿಗಾಗಿ ಚಿಂತನೆ ಮಾಡಿ ವೈಚಾರಿಕ ಕ್ರಾಂತಿಯಿಂದ ಒಂದು ಹೊಸಹುಟ್ಟನ್ನು ತಂದರು – ಕಲ್ಯಾಣದ ಶರಣರು. ನಡೆಯೇ ನುಡಿಯಾದ ಅವರ ವಚನಗಳಲ್ಲಿ ಈ ಹೊಸಹುಟ್ಟು ಹುದುಗಿದೆ; ಅದರ ಸ್ಪಷ್ಟ ಚಿತ್ರ ಶೂನ್ಯ ಸಂಪಾದನೆಯಲ್ಲಿದೆ.

ಶೂನ್ಯ ಸಂಪಾದನೆ ಕೇವಲ ಒಂದು ಆಧ್ಯಾತ್ಮಿಕ ಗ್ರಂಥವಲ್ಲ; ಹಾಗೆ ತಿಳಿದರೆ ಅದು ಬಾಲಿಸತನದ ಪರಮಾವಧಿ. ಮಾನವ ಜೀವನದ ಸಮಗ್ರ ದೃಷ್ಟಿ ಅಲ್ಲಿದೆ; ಎಲ್ಲಂದದಿಂದ ಜೀವ ಪರಿಪುಷ್ಪಗೊಂಡು ಪರಿಪೂರ್ಣತೆ ಪಡೆವ ಮಾರ್ಗ ಅಲ್ಲಿದೆ. ಎಲ್ಲವನ್ನೂ ಸಾಮರಸ್ಯದ ಮಟ್ಟಕ್ಕೆ ಏರಿಸುವ ಕಲೆ ಅಲ್ಲಿದೆ. ಆತ್ಯಂತಿಕ ಗುರಿ ಶೂನ್ಯ ಸಂಪಾದನೆಯಾಗಿದ್ದರೂ ಸಾಧನೆಯ ಮಾರ್ಗಗಳು ಅನಂತ, ಭಿನ್ನ ಭಿನ್ನ ಇಲ್ಲಿಯ ಇನ್ನೊಂದು ವೈಶಿಷ್ಟ್ಯವೆಂದರೆ ಧ್ಯೇಯ ಮತ್ತು ಸಾಧನೆಗಳಲ್ಲಿ ಭಿನ್ನತೆ ಕಂಡರೂ ಅಭಿನ್ನತೆ ಇರುವುದು. ಧ್ಯೇಯದಷ್ಟೇ ಉನ್ನತವಾದುದು, ಪವಿತ್ರವಾದುದು ಸಾಧನೆ. ಇನ್ನೂ ಒಂದು ಸೂಕ್ಷ್ಮತೆ ಇಲ್ಲಿದೆ: ಪ್ರಜ್ಞಾಪೂರ್ವಕವಾಗಿ ಸಾಧಕ ನಾನು ಇಂತಹುದೇ ಧ್ಯೇಯದತ್ತ ನಡೆದಿದ್ದೇನೆ – ಎಂದು ಅದರ ಕಡೆಗೆ ನಿಮಿಷ ನಿಮಿಷಕ್ಕೆ ಲಕ್ಷ್ಯಹಾಕುವುದಿಲ್ಲ. ಧ್ಯೇಯ ಮತ್ತು ಸಾಧನೆ ಬೇರೆಯಾದಾಗ ಹೀಗೆ ಮಾಡಬೇಕಾಗುತ್ತದೆ. ಶರಣರಲ್ಲಿ ಹೀಗಿಲ್ಲ. ಅವರ ಧ್ಯೇಯ ಮತ್ತು ಸಾಧನೆಗಳನ್ನು ಬೇರ್ಪಡಿಸಲು ಬರುವುದಿಲ್ಲ. ಧ್ಯೇಯ, ಸಾಧನೆಯಲ್ಲಿ ನಿಮಿಷ ನಿಮಿಷಕ್ಕೆ ಬಲಗೊಳ್ಳುತ್ತದೆ, ಬಲಿಯುತ್ತದೆ, ಅರಳುತ್ತದೆ; ಕೊನೆಗೆ ಪರಿಪೂರ್ಣವಾಗುತ್ತದೆ. ಉದಾಹರಣೆಗೆ; ‘ಕಾಯಕವೇ ಕೈಲಾಸ’ ಎಂಬುದು. ಕಾಯಕ ಸಾಧನೆಯೊಂದೇ ಅಲ್ಲ; ಧ್ಯೇಯವೂ ಹೌದು; ಅಂತೆಯೇ ಅದು ಸಾಮರಸ್ಯದ ಮಟ್ಟಕ್ಕೆ ಏರುತ್ತದೆ. ಅದು ಮಾಡುವ ಮಾಟವೂ ಹೌದು; ಬೇರೊಂದು ಪರಿಯ ಅನುಭಾವವೂ ಹೌದು.

ಶೂನ್ಯ ಸಂಪಾದನೆ ಶರಣರ ತತ್ವಗಳ, ಸಿದ್ಧಾಂತಗಳ, ಅನುಭಾವದ ಒಂದು ಪ್ರಾತಿನಿಧಿಕ ಗ್ರಂಥ ಎಂದು ಹೇಳಬಹದು. ಇಲ್ಲಿ ಕೆಲವೇ ವ್ಯಕ್ತಿಗಳು ನಮ್ಮ ಕಣ್ಣು ಮುಂದೆ ಸುಳಿಯುತ್ತಾರೆ. ಆದರೆ ಅವರ ಅನುಭಾವದಲ್ಲಿ ಸಕಲಶರಣರ ಅನುಭಾವ ಸಮಾವೇಶವಾಗಿದೆ. ಶೂನ್ಯಸಂಪಾದನೆಕಾರ ಆರಿಸಿಕೊಂಡ ಪಾತ್ರಗಳಲ್ಲಿ, ಜೋಡಿಸಿದ ಸನ್ನಿವೇಶಗಳಲ್ಲಿ ಸಮಗ್ರ ಶರಣರ ವೈಚಾರಿಕ ಥಾರೆ ಹರಿದಿದೆ, ಅನಭಾವ ಮಡುಗಟ್ಟಿದೆ. ಸರ್ವರೂ ಸರ್ವಕಾಲಕ್ಕೂ ಆಚರಿಸಲು ಬರುವ “ನಡೆ” ಇಲ್ಲಿದೆ. ಇದೇ ಶೂನ್ಯ ಸಂಪಾದನೆಯ ವೈಶಿಷ್ಟ್ಯ.

ಶೂನ್ಯಸಂಪಾದನೆಯ ಪಾತ್ರಗಳು ವೈವಿಧ್ಯಮಯವಾಗಿವೆ. ಹೆಣ್ಣು, ಗಂಡು, ಸಂನ್ಯಾಸ, ಸಂಸಾರಿ, ಸಿದ್ಧ ಎಲ್ಲ ಬಗೆಯವರಿದ್ದಾರೆ. ಮಂತ್ರಿ, ದಂಡನಾಯಕ, ಮಡಿವಾಳ, ನುಲಿಹೊಸೆವವ, ಕಟ್ಟಿಗೆ ಹೊಡೆವವ, ಅಕ್ಕಿಆರಿಸುವವ, ನೃತ್ಯಗಾರ, ಬಹುರೂಪಿ, ಕಿನ್ನರಿ ಬಾರಿಸುವವ, ಒಕ್ಕಲಿಗ – ಹೀಗೆ ಹಲವು ಬಗೆಯ ಕಾಯಕದವರಿದ್ದಾರೆ. ಯೋಗಿಗಳಿದ್ದಾರೆ, ಪ್ರಸಾದಿಗಳಿದ್ದಾರೆ, ಭೂತಂಗಳೊಳನುಕಂಪ ತೋರುವ ಸಮಾಜ ಸೇವಕರಿದ್ದಾರೆ.

ಇವರೆಲ್ಲರೂ ಮಣ್ಣಿನ ಮಕ್ಕಳು. ಇಲ್ಲದ ಆದರ್ಶಗಳನ್ನು ನೆಮ್ಮಿ ಮೇಲೆ ನೋಡಿ ಕಾಲಕಳೆವವರಲ್ಲ. ವಾಸ್ತವವನ್ನು ಅರಿತವರು; ಅದನ್ನು ಬಿಡದವರು. ಈ ನೆಲದ ಸತ್ವ ಬಲ್ಲವರು; ಆ ಸತ್ವವನ್ನು ಮೈಗೂಸಿಕೊಂಡವರು. ಅಲ್ಲದೆ ಈ ಮಣ್ಣಿನಲ್ಲಿ ‘ಮಹಾಂತ’ನನ್ನು ಕಂಡವರು; ಮೃತ್ತಿಕೆಯಲ್ಲಿ ಮೃತ್ಯುಂಜಯತೆಯನ್ನು ಬೆಳೆದವರು.

ಶೂನ್ಯಸಂಪಾದನೆಯ ಮುಖ್ಯಪಾತ್ರ ಅಲ್ಲಮ. ಕೇಂದ್ರವ್ಯಕ್ತಿ ಆತ. ಆತ ಪರಿಪೂರ್ಣ, ಅಖಂಡ ಜ್ಯೋತಿ, ಅವಿರಳಾನಂದ. ಉಳಿದ ಪಾತ್ರಗಳು ಅಪರಿಪೂರ್ಣವೇನಲ್ಲ. ಪರಿಪೂರ್ಣತೆಯತ್ತ ಸಾಗಿದುವು; ಕೊನೆಗೆ ಅಲ್ಲಮನೇ ಆಗುವಂಥವು.

ಬಾಳಿನ ಎಲ್ಲ ಬಗೆಯ ಸ್ವಭಾವಗಳನ್ನು ಇಲ್ಲಿ ಕಾಣುತ್ತೇವೆ; ಹಲವು ಬಗೆಯ ವ್ಯಕ್ತಿತ್ವಗಳನ್ನು ಇಲ್ಲಿ ನೋಡುತ್ತೇವೆ. ಈ ವೈವಿಧ್ಯತೆ ಬೆರಗುಪಡಿಸುವಂಥದು. ಈ ವೈವಿಧ್ಯತೆಯಲ್ಲಿ ಏಕತೆ ಇದೆ. ಆದರೆ ಆ ಏಕತೆ ವೈವಿಧ್ಯಕ್ಕೆ ಮಾರಕವಾಗಿಲ್ಲ; ಅವು ಒಂದಕ್ಕೊಂದು ಪೂರಕವಾಗಿವೆ.

ಅಲ್ಲಮನ ಔನ್ನತ್ಯ, ಆತನ ಸಿಡಿಲುವಾಣಿ, ಎಂತಹವಾದವೇ ಇರಲಿ ಅದನ್ನು ಲೀಲಾಲಜಾಲವಾಗಿ ಗೆದೆವ ಶಕ್ತಿಸಂಪನ್ನತೆ – ಉಳಿದ ಪಾತ್ರಗಳನ್ನು ಮಸುಕುಗೊಳಿಸಿಲ್ಲ; ಮಸುಕುಗೊಳ್ಳುವ ಪಾತ್ರಗಳೂ ಅವಲ್ಲ.

ಇಲ್ಲಿರುವ ವಿಚಾರ ಸ್ವಾತಂತ್ರ್ಯ ಅದ್ವಿತೀಯವಾದುದು. ಬಹುಶಃ ಬೇರೆ ಕಡೆಗೆ ಕಾಣ ಸಿಗದು. ಎಲ್ಲವನ್ನೂ ಪ್ರಭಾವಿತಗೊಳಿಸುವ, ಕೊನೆಗೆ ಎಲ್ಲವನ್ನೂ ತನ್ನೊಳಗು ಮಾಡಿಕೊಳ್ಳುವ ಅಲ್ಲಮನ ಕಣ್ಣುಕುಕ್ಕಿಸುವ ಬೆಳಕಿನಲ್ಲಿಯೂ ಈ ಪಾತ್ರಗಳ ವಿಚಾರ ಸ್ವಾತಂತ್ರ್ಯದ ಬೆಳಕನ್ನು ಸ್ಪಷ್ಟವಾಗಿ ಗುರುತಿಸಬಹುದು. ಈ ವಿಚಾರ ಸ್ವಾತಂತ್ರ್ಯವನ್ನೇ ಅಲ್ಲಮ ಬೆಳೆಸಲು ನಾಡಿನ ತುಂಬ ಸಂಚರಿಸಿದ; ಜನರ ವೈಚಾರಿಕ ವ್ಯಭಿಚಾರವನ್ನು, ವೈಚಾರಿಕ ದಾಸ್ಯವನ್ನು ಹೋಗಲಾಡಿಸಿದ; ಮನೋದೌರ್ಬಲ್ಯವನ್ನು ನೀಗಿಸಿದ.

ಇಲ್ಲಿಯ ಪಾತ್ರಗಳಲ್ಲಿಯ ಇನ್ನೊಂದು ವೈಶಿಷ್ಟ್ಯವೆಂದರೆ ಭಿನ್ನಾಭಿಪ್ರಾಯ. ಭಿನ್ನಾಭಿಪ್ರಾಯ ಜೀವನದ ಬೆಳವಣಿಗೆಯ ತಾಯಿಬೇರು. ಇದನ್ನರಿತ ಶರಣರು ಎಂದೂ ತಮ್ಮ ಅಭಿಪ್ರಾಯವನ್ನು ಮಂಡಿಸಲು ಹಿಂಜರಿಯಲಿಲ್ಲ.

ಅಲ್ಲಮಪ್ರಭು ಸರ್ವಶಕ್ತ. ಆತನವಾದದ ಮುಂದೆ ಯಾರೂ ನಿಲ್ಲುವುದಿಲ್ಲ. ಇದು ಗೊತ್ತು. ಆದರೆ ಒಂದೇ ಏಟಿಗೆ ಸೋಲುವುದೇ? ವೀರನಾಗಿ ಯುದ್ಧಮಾಡಬೇಕು. ಸೋಲು – ಗೆಲುವು ವ್ಯಕ್ತಿತ್ವದ, ಶಕ್ತಿಯ ನಿರ್ಣಯ ಮಾಡುವುದಿಲ್ಲ. ಧೀರತನದ ಹೋರಾಟ ಶಕ್ತಿಯ ವ್ಯಕ್ತಿತ್ವದ ದರ್ಶನ ಮಾಡಿಸುತ್ತದೆ. ಶರಣರು ಭಿನ್ನಾಭಿಪ್ರಾಯಕ್ಕೆ ಬಹು ಬೆಲೆ ಕೊಟ್ಟವರು. ಅಲ್ಲಮನಂತೂ ಭಿನ್ನಾಭಿಪ್ರಾಯವಿಲ್ಲದವರನ್ನು ಮೆಚ್ಚುತ್ತಲೇ ಇರಲಿಲ್ಲ. ಭಿನ್ನಾಭಿಪ್ರಾಯ ಜೀವಂತ ಜನಾಂಗದ ಲಕ್ಷಣ. ಆದರೆ ಇದು ಹಟಮಾರಿತನದ್ದಾಗಬಾರದು. ಸತ್ಯವನ್ನು ಸ್ಫುಟಗೊಳಿಸುವಂತಹುದಾಗಬೇಕು. ಸಿದ್ಧರಾಮ, ಗೋರಕ್ಷ ಮುಂತಾದವರ ಭಿನ್ನಾಭಿಪ್ರಾಯ ಇದೇ ಬಗೆಯದು.

ಅಲ್ಲಮನ ಆಗಮನಕ್ಕಿಂತ ಮುಂಚೆ ಸಿದ್ಧರಾಮ ತನ್ನಷ್ಟಕ್ಕೆ ತಾನೆ ಮಹಾಂತ; ಬಹು ಔನ್ನತ್ಯದ ವ್ಯಕ್ತಿತ್ವ ಆತನದು. ಈ ಔನ್ನತ್ಯದಲ್ಲಿಯೂ ದೋಷ ಕಂಡ ಅಲ್ಲಮ. ಗುಡಿಗುಂಡಾರ ಕಟ್ಟಿಸಿ – ಭೂತಂಗಳೊಳನುನಂಪೆ ತೋರಿಸುವ ಭರದಲ್ಲಿ ಅಂತರಂಗದಿಂದ ತುಸು ದೂರಾಗಿದ್ದ ಸಿದ್ಧರಾಮ ಎಂದರೆ ಈ ನೆಲದಲ್ಲಿ ನಿಂತು ಆಧ್ಯಾತ್ಮ ಮರೆತಿದ್ದ; ಯೋಗದಲ್ಲಿ ನಿರತನಾಗಿ ನೆಲವನ್ನು ಮರೆತಿದ್ದ – ಹಲಸು ಸಲ ಇವೆರಡರ ಸಮನ್ವಯ ಸಿದ್ಧಿಸಿರಲಿಲ್ಲ. ಇವೆರಡರ ಸಮನ್ವಯ ಇಷ್ಟಲಿಮಗದಿಂದ ಸಾಧಿಸುತ್ತದೆ. ಆದರೆ ಸಿದ್ಧರಾಮ ಇದನ್ನು ಒಪ್ಪಲಿಲ್ಲ. ಆತನ ವಾದ, ಭಿನ್ನಾಭಿಪ್ರಾಯ ಪ್ರಭುವನ್ನು ದಂಗುಗೊಳಿಸಿತು. ಈ ಆಸಾಮಿ ಇಲ್ಲಿ ಮಣಿಯುವುದಿಲ್ಲವೆಂದು ಕಲ್ಯಾಣಕ್ಕೆ ಕರೆತಂದ. “ಆಕಾಶದಲಡುವ ಪಟಕ್ಕಾದರು ಸೂತ್ರವಿರಬೇಕು……. ಅಂಗಕ್ಕೆ ಲಿಂಗಸಂಗವಿಲ್ಲದೆ ನಿಸ್ಸಂಗವಾಗಬಾರದು” ಎಂದು ಚೆನ್ನಬಸವಣ್ಣ ನುಡಿದ. ನೆಲಮುಗಿಲನ್ನು ಅಂಗಲಿಂಗವನ್ನು ಸಮನ್ವಯಗೊಳಿಸುವ ಆ ತತ್ವವನ್ನು ಒಪ್ಪಿ ಸಿದ್ಧರಾಮ ಇಷ್ಟಲಿಂಗ ಗ್ರಹಿಸಿದ.

ಇಷ್ಟಲಿಂಗದ ಪ್ರಸ್ತಾಪ ನುಲಿಯಚಂದಯ್ಯನ ಜೀವನದಲ್ಲಿಯೂ ಬರುತ್ತದೆ. ಆದರೆ ಇಲ್ಲಿಯದು ಸಿದ್ಧರಾಮನಂಥ ಸಮಸ್ಯೆಯಲ್ಲ, ಆದರೂ ಕೊನೆಯ ಪರಿಣಾಮ ಒಂದೇ. ಇಷ್ಟಲಿಂಗ ಸ್ಥೂಲಕಾಯವಿರುವವರೆಗೆ ಬೇಕೇಬೇಕು. ಪ್ರಾಣಲಿಂಗ ಭಾವಲಿಮಗಗಳ ಪೂಜೆ ಇಷ್ಟಲಿಂಗವಿಲ್ಲದೆ ಸಾಧ್ಯವಿಲ್ಲ. ಒಪ್ಪುವ ಮಾತು. ಆದರೆ ನುಲಿಯ ಚಂದಯ್ಯ ಜಂಗಮ ಪ್ರೇಮಿ. ಲಿಂಗಕ್ಕಿಂತಲೂ ಜಂಗಮಸೇವೆ ಹೆಚ್ಚಿನದೆಂದು ಆತ ತಿಳಿದಿದ್ದ. ತತ್ವದ ತಿಕ್ಕಾಟ ಇಲ್ಲಿದೆ. ಯಾವುದು ದೊಡ್ಡದು? ಯಾವುದು ಸಣ್ಣದು? ಹೇಳಬಾರದು. ಶರಣರದು ಸಾಮರಸ್ಯದ ಸಮನ್ವ ದೃಷ್ಟಿ. ಗುರುಲಿಂಗ ಜಂಗಮ ಮುಂತಾದುವುಗಳಲ್ಲಿ ಹೆಚ್ಚುಕಡಿಮೆ ಇಲ್ಲ, ಎಲ್ಲವೂ ಸಮಾನ. ಇವುಗಳಲ್ಲಿ ಒಂದು ಕಡಿಮೆಆದರೆ ನಡೆಯದು; ಸಾಧನೆಗೆ ಚ್ಯುತಿ ಬರುವುದು. ಈ ತಾತ್ವಿಕ ದೃಷ್ಟಿಯಲ್ಲದೆ ಇಲ್ಲಿ ಇಹಜೀವನ ಬೆಳಗುವ, ಮನುಷ್ಯ ಸಾಧಿಸಲೇಬೇಕಾದ ಕೆಲವು ಮಾತುಗಳು ಸ್ಪಷ್ಟವಾಗುತ್ತವೆ. ಸತ್ಯವಂತನಾಗಿ, ಧೀರನಾಗಿ ಸರ್ವ ಜೀವರ ಲೇಸಿಗಾಗಿ ಕಾಯಕಗೈದು ಜೀವಿಸುವವನಿಗೆ ದೇವರೆಂಬುದು ಒಂದು “ಕಿಂಚಿತ್ತು”. ಅವನು ಸರ್ವಶಕ್ತ, ನಿಜ. ಆದರೆ ಸತ್ಯಕ್ಕೆ ವಿರೋಧಿಯಾಗಿ ದೇವರು ಬಂದರೆ ಅವನನ್ನು ದಿಟ್ಟತನದಿಂದ ಎದುರಿಸಬೇಕಾಗುತ್ತದೆ. ಅಲ್ಲದೆ, ದೇವರೂ ಈ ನೆಲದಲ್ಲಿ ಕಾಯಕಮಾಡಿಯೇ ಜೀವಿಸಬೇಕಾಗುತ್ತದೆ. ಲಿಂಗವನ್ನು ದುಡಿಸುವ ಶರಣರ ಜೀವನ ತತ್ವ ಇಂದಿನ ಬಾಳಿಗೆ ಆಪ್ಯಾಯನಕರವಾಗಿದೆ. ಲಿಂಗದುಡಿರ. ಆದರೆ ಲಿಂಗವಿರಹಿತ ಜಂಗಮಪೂಜೆ ಸಲ್ಲದು. ಸರ್ವ ಸಮನ್ವಯ ಬೇಕು. ಅಂತೆಯೇ ಚಂದಯ್ಯ ಲಿಂಗವನ್ನು ಸ್ವೀಕರಿಸಿದ.

ಸ್ವಾತ್ಮ ವಿಮರ್ಶೆಯ ಜೊತೆಗೆ ಇತರರ ಬಗ್ಗೆ ಆರೋಗ್ಯಕರವಾದ ವಿಮರ್ಶೆಯನ್ನೂ ನಾವು ಶೂನ್ಯಸಂಪಾದನೆಯ ಪಾತ್ರಗಳಲ್ಲಿ ಕಾಣುತ್ತೇವೆ. ತಪ್ಪನ್ನು ಒಪ್ಪಿಕೊಳ್ಳುವುದು, ಒಳಿತನ್ನು ಸ್ವೀಕರಿಸುವುದು, ಎಂಥ ದೊಡ್ಡವರೇ ಆಗಿರಲಿ, ಅವರಲ್ಲಿ ತಪ್ಪಿದ್ದರೆ ಒಡನೆ ಅದನ್ನು ನುಡಿದು ತೋರಿಸುವುದು – ಈ ಪಾತ್ರಗಳಲ್ಲಿ ಕಂಡುಬರುತ್ತದೆ. ಅಳಲನ್ನು ಸಂತಯಿಸಬಂದವನಲ್ಲಿ ಮುಕ್ತಾಯಕ್ಕನಿಗೆ ಗೌರವವಿದೆ. ಆದರೆ ಆತನ “ತನ್ನ ಬಣ್ಣನೆ” ಅತಿಯಾದಾಗ ಆಕೆ ದಿಟ್ಟತನದಿಂದ ನುಡಿಯುತ್ತಾಳೆ :

ಅದ್ವೈತವನೆಲೆಗೊಳಿಸಿ ಎರಡಳಿದೆನೆಂಬವರು ಶಿಶು ಕಂಡ
ಕನಸಿನಂತಿರಬೇಕಲ್ಲದೆ, ನುಡಿದು ಹೇಳುವನ್ನಕ್ಕರ ಭಿನ್ನವಲ್ಲದೇನು ಹೇಳಾ?
…..
ನೆರೆಯರಿತು ಮರೆಯ ಬಲ್ಲರೆ ಎನ್ನ ಅಜಗಣ್ಣನಂತೆ ಶಬ್ದ
ಮುಗ್ಧವಾಗಿರಬೇಕಲ್ಲದೆ ಶಬ್ದಸಂದಣಿಯ ಮಾತು ಸಯವಲ್ಲ ನೋಡಾ
ಪ್ರಭುವೇ.” ಆತನ ವ್ಯಕ್ತಿತ್ವಕ್ಕೆನೇ, ಸಾಧನೆ ಸಿದ್ಧಿಗೇನೇ ಪ್ರಶ್ನೆ ಹಾಕುತ್ತಾಳೆ.

ಲಿಂಗವಿಡಿದು ಅರಿದರಿವು ಅರಿವಲ್ಲ. ಗುರುವಿಡಿದು ಲಿಂಗವುಂಟೆಂಬುದು ಕಲ್ಪಿತ.
ತನ್ನಿಂದ ತಾನಹುದಲ್ಲದೆ ಗುಹೇಶ್ವರ ಲಿಂಗದಲ್ಲಿ ಹಂಗು ಹರಿಯದನ್ನಕ್ಕರ
ತಾನಾಗಬಾರದು ಕಾಣಾ ಚೆನ್ನಬಸಣ್ಣಾಎಮದು ಅಲ್ಲಮನೆಂದಾಗ,
ಗುರುವಿಲ್ಲದ ಲಿಂಗ ನಿನಗೆಲ್ಲಿಯದಯ್ಯಾ? ಕೊಂಡೆ ನಿಮ್ಮಯ್ಯನ, ಕೊಂಡೆ
ಲಿಂಗವನು! ಅಂದು ನಿನಗೆ ಅನಿಮಿಷ ಗುರುವಾದುದನರಿಯಾ? ಕೂಡಲ
ಚೆನ್ನಸಂಗಯ್ಯನಲ್ಲಿ ಮೂರುಲೋಕವಱುಯೆ ಅಲ್ಲಮ ವ್ರತಗೇಡಿ!” ಎನ್ನುತ್ತಾನೆ
ಚೆನ್ನಬಸವಣ್ಣ.

ಮುಕ್ತಾಯಕ್ಕನಾಗಲಿ, ಚೆನ್ನಬಸಣ್ಣನಾಗಲಿ ನುಡಿದ ಕಟುನುಡಿಗಳಿಂದ ಅಲ್ಲಮನ ವ್ಯಕ್ತಿತ್ವಕ್ಕೇನೂ ಬಾಧೆ ಇಲ್ಲ, ಇದರಿಂದ ಆತನ ವ್ಯಕ್ತಿತ್ವ ಇನ್ನೂ ಉಜ್ವಲಗೊಳ್ಳುತ್ತದೆ, ಆದರೆ ಅವರ ದಿಟ್ಟತನ ಇಲ್ಲಿ ನೋಡಬೇಕಾದುದು.

ದಾಂಪತ್ಯ ಮಧುರವಾದರಷ್ಟೇ ಸಾಲದು; ಅದು ವೈಚಾರಿಕ ನೆಲೆಗಟ್ಟಿನ ಮೇಲೆ ನಿಂತಿರಬೇಕು; ಅಭಿಪ್ರಾಯ ಸ್ವಾತಂತ್ರ್ಯ ಇಬ್ಬರಿಗೂ ಬೇಕು. ಅಲ್ಲದೆ ಒಬ್ಬರನ್ನೊಬ್ಬರು ತಿದ್ದಿಕೊಂಡು ನಡೆಯಬೇಕು. ಇಂಥ ದಾಂಪತ್ಯದ ಆಯ್ದಕ್ಕಿ ಮಾರಯ್ಯ ಲಕ್ಕಮ್ಮನದು ಮತ್ತು ಮೋಳಿಗೆ ಮಾರಯ್ಯ ಮತ್ತು ಮಹಾದೇವಿಯವರದು.

“ಹೆಣ್ಣು ಸಾಕ್ಷಾತ್ ಕಮಲಸಿದ್ಧಮಲ್ಲಿಕಾರ್ಜುನ” ಎಂಬ ವಚನದ ಆಚಾರ ಇವರ ಜೀವನದಲ್ಲಿದೆ. ಲಕ್ಕಮ್ಮ ಮಹಾದೇವಿಯವರು ಗಂಡಂದಿರಿಗೆ ಲಿಂಗಾಂಗ ಸಾಮರಸ್ಯದ ನಿಲವನ್ನು ತೋರಿಸಿಕೊಡುತ್ತಾರೆ. ಅಲ್ಲದೆ ಲಕ್ಕಮ್ಮ ತನ್ನ ನಡೆಯಿಂದ ಕಾಯಕಕ್ಕೆ ಬರೆದ ಭಾಷ್ಯ ಅಮೋಘವಾದುದು. ತತ್ವದ ಚರ್ಚೆಗಿಂತಲೂ ಆಕೆಗೆ ತತ್ವದ ಆಚರಣೆ ಹೆಚ್ಚಿನದು. ಅಂತೆಯೇ ಆಕೆ ಮಹಾಮನೆಯಲ್ಲಿ ತತ್ವಚರ್ಚೆಯಲ್ಲಿ ತೊಡಗಿದ್ದ ತನ್ನ ಗಂಡನಿಗೆ,

“ಕಾಯಕ ನಿಂದಿತ್ತು ಹೋಗಯ್ಯಾ ಎನ್ನಾಳ್ದನೆ, ಭಾವಶುದ್ಧವಾಗಿ ಮಹಾಶರಣರ ತಿಪ್ಪೆಯ ತಪ್ಪಲು ಅಕ್ಕಿಯ ತಂದು ನಿಶ್ಚೈಸಿ ಮಾಡಬೇಕು ಮಾರಯ್ಯ ಪ್ರಿಯ ಅಮರೇಶ್ವರಲಿಂಗಕ್ಕೆ. ಬೇಗಹೋಗು ಮಾರಯ್ಯ” ಎನ್ನುತ್ತಾಳೆ.

ನಿತ್ಯಕ್ಕಿಂತ ಹೆಚ್ಚಿಗೆ ಅಕ್ಕಿತಂದ ಗಂಡನನ್ನು ಗದರುತ್ತಾಳೆ, ಆಕೆಯ ಒಂದೊಂದು ಮಾತೂ ಕಾಯಕತತ್ವದ ಖಣಿ:

ಆಸೆಯೆಂಬುದು ಅರಸಿಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯಾ?
ರೋಷವೆಂಬುದು ಯಮದೂತರಿಗಲ್ಲದೆ ಅಜಾತರಿಗುಂಟೆ ಅಯ್ಯಾ?
ಈಸಕ್ಕಿಯಾಸೆ ನಿಮಗೇಕೆ? ಈಶ್ವರನೊಪ್ಪ ಮಾರಯ್ಯ ಪ್ರಿಯ ಅಮರೇಶ್ವರಲಿಂಗಕ್ಕೆ
ದೂರ ಮಾರಯ್ಯ
………..
ಎಂದಿನಂದವೆ ಸಾಕು. ಮತ್ತೆ ಕೊಂಡು ಹೋಗಿ ಅಲ್ಲಿಯೇ ಸರಿ.
ಮಾರಯ್ಯಪ್ರಿಯ ಅಮರೇಶ್ವರಲಿಂಗ ಕೊಟ್ಟ ಕಾಯಕವೆ ಸಾಕು ಮಾರಯ್ಯ.”

ಮಾರಯ್ಯಎನಗೆ ಅರಿವು ಕರಿಗೊಂಬ ಅರಿವೆಲ್ಲಿ, ಅಮರೇಶ್ವರಲಿಂಗದಲ್ಲಿ
ಹೇಳಾ” – ಎಂದು ಕೇಳುತ್ತಾನೆ. ಇದಕ್ಕೆ

ಮಾಡಿ ನೀಡಿ ಹೋಹನೆಂಬಾಗ ಕೈಲಾಸವೇನು ಕೈಕೂಲಿಯೇ?
ಮುಂದೊಂದ ಕಲ್ಪಿಸದೆ, ಹಿಂದೊಂದ ಭಾವಿಸದೆ, ಸಲೆಸಂದಿದ್ದಾಗಲೆ
ಮಾರಯ್ಯಪ್ರಿಯ ಅಮರೇಶ್ವರಲಿಮಗವಿದ್ದ ಠಾವೆ ಕೈಲಾಸ.”

ಕೂಟಕ್ಕೆ ಸತಿಪತಿ ಎಂಬ ನಾಮವಲ್ಲದೆ ಅರಿವಿಂಗೆ
ಬೇರೊಂದೊಡಲುಂಟೆ? ಬೇರೊಂದಡಿಯಿಡದಿರು, ಮಾರಯ್ಯ ಪ್ರಿಯ
ಅಮರೇಶ್ವರಲಿಂಗವನರಿಯ ಬಲ್ಲರೆಎಂದು ಹೇಳುತ್ತಾಳೆ.”
ಹೀಗೆ ಆಕೆ ಗಂಡನಿಗೆ ಲಿಂಗಾಂಗ ಸಾಮರಸ್ಯವನ್ನು ತಿಳಿಸಿಕೊಡುತ್ತಾಳೆ.

ಹೆಣ್ಣು ಸನ್ಯಾಸಿನಿಯಾಗಿ ಜೀವಿಸಬಲ್ಲಳು – ಸಮರ್ಥವಾಗಿ ಜೀವಿಸಬಲ್ಲಳು ಎಂಬುದನ್ನು ಅಕ್ಕನ ಜೀವನ ಸಾರಿ ಹೇಳುತ್ತದೆ. ಆಕ್ಕ ಏರಿದ ಎತ್ತರ ಕಂಡು ಪ್ರಭು ಆಶ್ಚರ್ಯಗೊಳ್ಳುತ್ತಾನೆ. ಆಕೆ ಅನುಭಾವದ ಚರ್ಚೆಯಲ್ಲಿ ಸೋಲಲಿಲ್ಲ. ಒಂದು ದೃಷ್ಟಿಯಿಂದ ಸೋತವನು ಪ್ರಭುವೇ.

ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ ಮುಂತಾದವುವುಗಳ ದೃಷ್ಟಿಯಿಂದ ಹೆಣ್ಣು ಏರಿದ ಎತ್ತರ ಗಳಿಸಿದ ಸಿದ್ಧಿಯನ್ನು ಇಲ್ಲಿನ ಶರಣೆಯರು ವ್ಯಕ್ತಪಡಿಸುತ್ತಾರೆ.

ಅರಿವಿಗೆ ಚಿಕ್ಕವರೇನು? ದೊಡ್ಡವರೇನು? ಒಟ್ಟು ಜ್ಞಾನ ದೊಡ್ಡದು; ಅನುಭಾವ ದೊಡ್ಡದು. ಅಂತೆಯೇ ಚಿಕ್ಕವನಾದ ಚನ್ನಬಸವಣ್ಣನಿಂದ ಬಸವಣ್ಣನಿಗೆ ಉಪದೇಶ ಮತ್ತು ಸಿದ್ಧರಾಮನಿಗೆ ಲಿಂಗದೀಕ್ಷೆಯಾಗುತ್ತದೆ. ಬಸವ, ಚೆನ್ನಬಸವ, ಕಿನ್ನಿರಯ್ಯ, ಮರುಳಶಂಕರದೇವ ಮುಂತಾದವರ ವ್ಯಕ್ತಿತ್ವಗಳು ಇಲ್ಲಿ ಅರಳಿನಿಂತಿವೆ.

ಈ ಪಾತ್ರಗಳಲ್ಲಿ ಕೆಲವು ಅಪೂರ್ವ ವೈಶಿಷ್ಟ್ಯಗಳಿವೆ:

೧. ಹೊರನೋಟಕ್ಕೆ ಇಲ್ಲಿ ಕೇವಲ ಆಧ್ಯಾತ್ಮದ ಚರ್ಚೆಯೇ ನಡೆದಿದೆ ಎಂದು ತೋರುತ್ತದೆ. ಆದರೆ ನಿಜಸ್ಥಿತಿ ಹಾಗಿಲ್ಲ. ಎಲ್ಲರೂ ತಂತಮ್ಮ ಕಾಯಕಗಳ ನಿಲುವಿನಲ್ಲಿಯೇ ಆಧ್ಯಾತ್ಮದ ಚರ್ಚೆಮಾಡುತ್ತಾರೆ. ಲೌಕಿಕ ಮರೆತಿಲ್ಲ.

೨. ಒಬ್ಬರನೊಬ್ಬರು ಹೊಗಳುವ ಕೆಲಸವೇನೂ ಇವರಿಗೆನಿಸುತ್ತದೆ. ಆದರೆ ಅದು ಹಾಗಿಲ್ಲ; ಅದು ಅವರವರ ನಿಜದಸ್ಥಿತಿಯ ನಿರೂಪಣೆ. ಇದ್ದುದನ್ನು ಹೊಗಳಿ ಮೆಚ್ಚಬೇಕಲ್ಲ. ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ಅವರಲ್ಲಿರುವ ಅವಗುಣಗಳನ್ನೂ ಬಯಲಿಗಿಡುತ್ತಾರೆ. ತಾವೇ ತಮ್ಮತಮ್ಮ ದೌರ್ಬಲ್ಯ ದೋಷಗಳನ್ನು ಬಿಚ್ಚಿಡುತ್ತಾರೆ.

೩. ಅವರ ಹೊಗಳಿಕೆ ವ್ಯರ್ಥವಾದುದೂ ಅಲ್ಲ, ಅರ್ಥವಿಲ್ಲದುದೂ ಅಲ್ಲ.

ಬಸವಣ್ಣಾ ನಿನ್ನ ಕಂಡು ಎನ್ನ ತನು ಬಯಲಾಯಿತ್ತು,
ಬಸವಣ್ಣಾ ನಿನ್ನ ಮುಟ್ಟಿ ಮುಟ್ಟಿ ಎನ್ನ ಕ್ರೀ ಬಯಲಾಯಿತ್ತು;
ಬಸವಣ್ಣಾ ನಿನ್ನ ನೆನೆ ನೆನೆದು ಎನ್ನ ಮನ ಬಯಲಾಯಿತ್ತು;
ಬಸವಣ್ಣಾ ಮಹಾನುಭಾವವಂ ಕೇಳಿಕೇಳಿ ಎನ್ನ ಭವಂ ನಾಸ್ತಿಯಾಯಿತ್ತು,
ನಮ್ಮ ಗುಹೇಶ್ವರಲಿಂಗದಲ್ಲಿ ನೀನು ಅಜಾತನೆಂಬುದ
ನೆಲೆ ಮಾಡಿ ಭವಪಾಶಂಗಳ ಹರಿದಿಪ್ಪೆಯಾಗಿ
ನಿನ್ನ ಸಂಗದಿಂದಲಾನು ಬದುಕಿದೆನು

ಎಂದು ಪರಿಪೂರ್ಣವಾದ ಅಲ್ಲಮಪ್ರಭು ನುಡಿಯಬೇಕಾದರೆ ಬಸವಣ್ಣ ಗಳಿಸಿದ ಔನ್ನತ್ಯ ಎಂತಹುದು ಎಂಬುದರ ಅರಿವಾಗುತ್ತದೆ. ಹೀಗೆ ಹೊಗಳಿದ ಪ್ರಭುವೇ ಸಿದ್ಧರಾಮನೊಂದಿಗೆ ಮಹಮನೆಗೆ ಬಂದಾಗ ಬಸವಣ್ಣನನ್ನು ಶರಣರನ್ನು ಕಟುವಾಗಿ ಟೀಕಿಸುತ್ತಾನೆ.

೪. ಎಲ್ಲರ ಧ್ಯೇಯ ಒಂದು. ಒಬ್ಬರನ್ನು ತಿಳಿದರೆ ಇನ್ನೊಬ್ಬರನ್ನು ತಿಳಿಯಬಹುದು. ಅಷ್ಟು ಅವರಲ್ಲಿ ಸಾಮ್ಯ. ಆದರೂ ಅವರಲ್ಲಿ ಭಿನ್ನತೆಗೆ ಅವಕಾಶವಿಲ್ಲದಿಲ್ಲ.

“ಕಲ್ಯಾಣವೆಂಬ ಮಹಾಘನದೊಳಗೆ ಬಸವಣ್ಣನು ನಾನು ಕೂಡಿ ಹದುಳಿದೆವು ಕಾಣಾ ಕಲಿದೇವಯ್ಯ” ಎಂಬ ತನ್ನ ಮತ್ತು ಬಸಣ್ಣನ ಸಾಮರಸ್ಯ ಭಾವವನ್ನು ಮಡಿವಾಳ ಮಾಚಿದೇವ ಹೇಳಿದಾಗ ಪ್ರಭುದೇವ ಹೇಳುತ್ತಾನೆ:

ಒಂದು ಮಾಡಹೋದರೆ ಮತ್ತೊಂದಾಯಿತ್ತೆಂಬುದು ಎನಗಾಯಿತ್ತು ನೋಡ
ಮಡಿವಾಳನ ಪರಿಯನೊರೆದು ನೋಡಿದರೆ
ನಿನ್ನ ಪೂರ್ವಾಪರವೆನಗರಿಯ ಬಂದಿತ್ತು.
ನಿನ್ನ ಪೂರ್ವಾಪರ ಸಂಗವಮಾಡ ಬಂದರೆ
ಎನ್ನ ಪರ್ವಾಪರವೆನಗರಿಯ ಬಂದಿತ್ತು, ನೋಡಾ!
ಮಹಾಜ್ಞಾನಿಗಳ ಸಂಗದಿಂದ ಉಭಯಸಂಗ ಸಿದ್ಧಿ ಎಂಬುದು
ದಿಟವಾಯಿತ್ತು ನೋಡಾ, ಬಸವಣ್ಣಾ
ಗುಹೇಶ್ವರನ ಶರಣ ಮಡಿವಾಳನ ಪಾದಕ್ಕೆ
ನಮೋ ನಮೋ ಎನುತಿರ್ದೆನು.”

ಇದಕ್ಕೆ ಬಸವರಾಜದೇವರು ಮಡಿವಾಳ ತಂದೆಗಳ ಶ್ರೀಪಾದದ ಘನವನು ಚೆನ್ನಬಸವಣ್ಣ ತೋರಿದನಾಗಿ ಅರಿದು ಸುಖಿಯಾದೆನೆಂದು ಬಿನ್ನೈಸುವನು. ಆಗ ಒಬ್ಬರನೊಬ್ಬರು ಹೇಗೆ ಅರಿತರೆಂಬುದು ತಿಳಿದು ಬರುತ್ತದೆ.

ಅಯ್ಯಾ ಎನ್ನ ಕಾಯದಲ್ಲಿ ಮಡಿವಾಳನ ತೋರಿದ
ಎನ್ನ ಮನದಲ್ಲಿ ತನ್ನ ನಿಲುವ ತೋರಿದ
ಎನ್ನ ಅಱೆವಿನಲ್ಲಿ ನಿಮ್ಮ ತೋರಿದ
ಇಂತೀ ತ್ರಿವಿಧ ಸ್ವಾಯತವನು ಎನ್ನ
ಸರ್ವಾಂಗರಲ್ಲಿ ಪ್ರತಿಷ್ಠಾಪಿಸಿ ತೋರಿದ
ಕೂಡಲಸಂಗಮ ದೇವಯ್ಯಾ, ಚೆನ್ನಬಸವಣ್ಣನ ಕರುಣದಿಂದ ಮಡಿವಾಳನೆಂಬ
ಪರುಷ ಸಾಧ್ಯವಾಯಿತ್ತೆನಗೆ.”