ಪ್ರಪಂಚಕ್ಕೆ ಬಸವಾದಿ ಶಿವಶರಣರು ಕೊಟ್ಟ ವಿನೂತನವಾದ ಮಹಾ ಕೊಡುಗೆ ಕಾಯಕ. ಸರ್ವರೂ ಸರ್ವಕಾಲಕ್ಕೂ ಆಚರಿಸಿ, ಇಹ – ಪರವನ್ನು ಸಾಧಿಸಲು ಬರುವ ಈ ಮೌಲ್ಯವನ್ನು ಹಿಂಜಿ ಹಿಂಜಿ ನೋಡಿದರೆ ಅದರ ಘನತೆ, ವ್ಯಾಪಕತೆ ಗೋಚರಿಸುವುದು. ಲೋಕದ ಸರ್ವ ಅನಿಷ್ಟಗಳನ್ನೂ ಇಲ್ಲವಾಗಿಸಿ, ಸೌಖ್ಯ ಶಾಂತಿಗಳನ್ನು ಈ ಒಂದು ತತ್ವದಿಂದಲೇ ಸಾಧ್ಯವಿದೆ.

ಸರ್ವ ವೃತ್ತಿಗಳು ಭಾವಶುದ್ಧಿಯಿಂದ ಮಾಡಿದರೆ ಕಾಯಕವೆನಿಸುವುವು. ಕಾಯಕಗಳಲ್ಲಿ ಮೇಲು – ಕೀಳಿಲ್ಲ. ಎಲ್ಲ ಕಾಯಕಗಳೂ ಪವಿತ್ರವಾದುವು. ಎಲ್ಲರೂ ಕಾಯಕ ಮಾಡಿಯೇ ಜೀವಿಸಬೇಕು. ಭಿಕ್ಷೆ ಬೇಡುವುದು ಶರಣರ ದೃಷ್ಟಿಯಲ್ಲಿ ಪಾಪ. ದಾಸೋಹಂಭಾವದಿಂದ ಕಾಯಕ ಮಾಡಬೇಕು. ಕಾಯಕವನ್ನು ಪ್ರೀತಿಸಿ ಅದರಲ್ಲಿ ತಾದಾತ್ಮ್ಯ ಹೊಂದಬೇಕು. ಕಾಯಕದಲ್ಲಿ ಹೆಚ್ಚಿನ ಫಲಾಪೇಕ್ಷೆ ಇಲ್ಲ. ದುಡಿಮೆಗೆ ತಕ್ಕಷ್ಟು ಫಲ. ನಿತ್ಯ ಕಾಯಕ, ನಿತ್ಯ ದಾಸೋಹ; ಸೋಮಾರಿತನಕ್ಕೆ ಎಡೆಯಿಲ್ಲ. ‘ನೇಮದ ಕೂಲಿ ಅಂದಿನ ನಿತ್ಯ ನೇಮದಲ್ಲಿ ಸಂದಿರಬೇಕು.’ ಸತ್ಯಶುದ್ದ ಕಾಯಕವೇ ದೇವಪೂಜೆ, ಕೈಲಾಸ; ಅದುವೇ ಸರ್ವಸ್ವ.

ಇಂಥ ಕಾಯಕದ ತಳಹದಿಯ ಮೇಲೆ ಶರಣರು ಕಟ್ಟಿದ ಸಮಾಜ ಸ್ವಾವಲಂಬಿಯಾಗಿತ್ತು; ವರ್ಗ, ವರ್ಣ, ಮೇಲು, ಕೀಳು, ಜಾತಿ, ಮತ, ಪಂಥ, ಬಡವ, ಬಲ್ಲಿದ – ಇವುಗಳಿಂದ ದೂರವಾಗಿತ್ತು. ವ್ಯಕ್ತಿಯ ಆತ್ಮೋನ್ನತಿ, ಸಮಾಜದ ಸರ್ವಾಂಗೀಣ ಪ್ರಗತಿ ಎರಡೂ ಒಮ್ಮಿಗೇ ಸಾಧಿಸುತ್ತಿದ್ದುವು ಶರಣರ ಈ ಸಮಾಜ ವ್ಯವಸ್ಥೆಯಲ್ಲಿ.

ಸತ್ಯ ಶುದ್ಧ ಆಚರಣೆಯಿಂದ ಸರ್ವ ವೃತ್ತಿಗಳು ಕಾಯಕವೆನಿಸಿದಂತೆ ಸರ್ವಕಲೆಗಳೂ ಕಾಯಕವೆನಿಸಿದುವು. ಕಲೆಗಳನ್ನು ಕಾಯಕ ಮಟ್ಟಕ್ಕೇರಿಸಿ ಶರಣರು ಅವುಗಳನ್ನು ಉಳಿಸಿ ಬೆಳೆಸಿದರು. ಸಂಗೀತ, ವಾದ್ಯ, ನೃತ್ಯ, ನಾಟಕ, ಗಮಕ, ಹಾಸ್ಯ – ಮುಂತಾದ ಎಲ್ಲ ಕಲೆಗಳಲ್ಲಿಯೂ ಶರಣರು ಬಲ್ಲಿದರಾಗಿದ್ದರು.

ವಚನಗಳಲ್ಲದೆ ಶರಣರು ಹಾಡುಗಳನ್ನೂ ರಚಿಸಿದ್ದಾರೆ. ವಚನಗಳನ್ನು ಮತ್ತು ಹಾಡುಗಳನ್ನು ಅವರು ಸಂಗೀತಕ್ಕೆ ಅಳವಡಿಸಿ ಹಾಡುತ್ತಿದ್ದರು. ರಾಗಗಳ ಹೆಸರಿಂದೊಡಗೂಡಿದ ಶಿವಶರಣರ ಎಷ್ಟೋ ವಚನಗಳು ಮತ್ತು ಹಾಡುಗಳು ದೊರಕಿವೆ.[1]

ಎನ್ನ ಕಾಯವ ದಂಡಿಗೆಯ ಮಾಡಯ್ಯಾ;
ಎನ್ನ ಸಿರವ ಸೋರೆಯ ಮಾಡಯ್ಯಾ;
ಎನ್ನ ನರವ ತಂತಿಯ ಮಾಡಯ್ಯಾ;
ಎನ್ನ ಬೆರಳ ಕಡ್ಡಿಯ ಮಾಡಯ್ಯಾ;
ಬತ್ತೀಸ ರಾಗವ ಹಾಡಯ್ಯಾ; ಉರದಲೊತ್ತಿ ಬಾರಿಸು,
ಕೂಡಲ ಸಂಗಮದೇವಾ[2]

ಮೇಲಿನ ವಚನದಿಂದ ಬತ್ತೀಸರಾಗಗಳ ಕಲ್ಪನೆ ಬಸವಣ್ಣನವರಿಗಿತ್ತೆಂದು ವಿದಿತವಾಗುತ್ತದೆ.

ದೇಶಾಕ್ಷಿಯಲ್ಲದ ರಾಗ, ಉಪ್ಪಿಲ್ಲದೂಟ ಸಪ್ಪೆ ಕಾಣಿರಣ್ಣಾ;
ಅಯ್ಯಾ, ಮಿಕ್ಕಿನ ರಾಗ. ಶಿವನಲ್ಲದ ದೈವ ಫಲವಿಲ್ಲ ಕಾಣಿರಣ್ಣಾ;
ಅಯ್ಯಾ, ಮಿಕ್ಕಿನ ತುಂಬುರ ನಾರದರು ಶಿವನ ಕೇಳಿಸುವ ರಾಗ
ಮಹಾಲಿಂಗ ಗಜೇಶ್ವರನ ನಚ್ಚಿನ ರಾಗ.[3]

ಗಜೇಶ ಮಸಣಯ್ಯನಿಗೆ “ದೇಶಾಕ್ಷಿರಾಗ” ಅತ್ಯಂತ ಪ್ರೀತಿಯ ರಾಗ. ಉಪ್ಪಿಲ್ಲದ ಸಪ್ಪೆಯೂಟವಿದ್ದಂತೆ ದೇಶಾಕ್ಷಿ ರಾಗವಿಲ್ಲದ ಸಂಗೀತ ಕೂಟ.

ಕೋಟ್ಯನು ಕೋಟಿ ಜಪವನು ಮಾಡಿ
ಕೋಟಲೆಗೊಳ್ಳಲದೇಕೆ ಮನವೇ?
ಕಿಂಚಿತು ಗೀತವೊಂದನಂತ ಕೋಟಿ ಜಪ!
ಜಪವೆಂಬುದೇಕೆ ಮನವೇ?
ಕೂಡಲ ಸಂಗನ ಶರಣರ ಕಂಡು,
ಆಡಿ, ಹಾಡಿ ಬದುಕು ಮನವೇ?”[4]

ಜಪಕ್ಕಿಂತ ಗೀತಕ್ಕೆ, ಹಾಡಿಗೆ ಬಸವಣ್ಣನವರು ಕೊಟ್ಟ ಮಹತ್ವ ಈ ವಚನದಿಂದ ತಿಳಿದು ಬರುತ್ತದೆ.

ಗೀತ, ಹಾಡು ಇದ್ದಲ್ಲಿ ಸಂಗೀತ, ತಾಳ, ಲಯ ಇಲ್ಲದೆ ಇರುತ್ತದೆಯೇ? ವಚನ ನುಡಿಯುವುದಕ್ಕಿಂತ ಹೆಚ್ಚಾಗಿ ಶರಣರು ಅವುಗಳನ್ನು ರಾಗಬದ್ಧವಾಗಿ ತಾಳ ಲಯಗಳಿಂದ ಭಾವಪೂರ್ಣವಾಗಿ ಹಾಡುತ್ತಿದ್ದರು.

ಶರಣರ ಸಂಗೀತಕ್ಕೆ ಭಕ್ತಿಯೇ ತಳಹದಿಯಾಗಿತ್ತು. ಭಕ್ತಿಯಿಲ್ಲದ ರಾಗ ಪರಿಣಾಮ ಮಾಡದು. ಈ ಭಕ್ತಿಯಿಲ್ಲದಾಗ ಶಿವನು “ನಾದ ಪ್ರಿಯನಲ್ಲ”.

ತಾಳಮಾನ ಸರಿಸವನರಿಯೆ, ಓಜೆ ಬಜಾವಣೆಯ ಲೆಕ್ಕವನರಿಯೆ,
ಅಮೃತಗಣ ದೇವಗಣವರಿಯೆ
ಕೂಡಲ ಸಂಗಮದೇವಾ, ನಿನಗೆ ಕೇಡಿಲ್ಲವಾಗಿ
ಅನುವೊಲಿದಂತೆ ಹಾಡುವ[5]

ತಾಳ, ಓಜೆ, ಬಜಾವಣೆ, ಗಣ – ಇವುಗಳಿದ್ದರೂ ಭಕ್ತಿಯಿಲ್ಲದಿದರೆ ವ್ಯರ್ಥ. ಭಕ್ತಿಯಿದ್ದ ಹಾಡು “ಕೇಡಿಲ್ಲದ ಹಾಡು”; ಈ ಕೇಡಿಲ್ಲದ ಹಾಡನ್ನೇ ಶರಣರು ಹಾಡಿದ್ದು. ಓಜೆ ಬಜಾವಣೆ ಅರಿಯೆನೆಂದು ಹೇಳಿದ ಬಸವಣ್ಣನವರು ಸಂಗೀತಜ್ಞರೆಂದು ಅವರ ಅನೇಕ ವಚನಗಳಲ್ಲಿಯೇ ಕಂಡುಬರುತ್ತದೆ. ಇಲ್ಲಿ ಹೀಗೆ ಹೇಳಿಕೊಂಡುದು ಭಕ್ತಿ, ಒಲುಮೆ ಮುಖ್ಯವೆಂಬುದನ್ನು ಸ್ಪಷ್ಟಪಡಿಸಲು.

ಸಂಗೀತದಿಂದ, ವಾದ್ಯ ವಾದನದಿಂದ ಶಿವನನ್ನೊಲಿಸಿದ ಶರಣರು ಅನೇಕರಿದ್ದಾರೆ: ಸಕಳೇಶ ಮಾದರಸ, ಕಿನ್ನರಿ, ಬಮ್ಮಯ್ಯ, ರಾಗದ ಸಂಕಣ್ಣ, ಸಿದ್ಧ ಬುದ್ಧಯ್ಯ, ಭದ್ರಗಾಯಕ, ಕಂಕರಿ ಕಕ್ಕಯ್ಯ ಮುಂತಾದವರು.

ಶರಣರು ಬಳಸುತ್ತಿದ್ದ ವಾದ್ಯಗಳು ಅವರ ಹೆಸರಿನೊಂದಿಗೇ ಪ್ರಸಿದ್ಧವಾಗಿವೆ; ಸಕಲೇಶ ಮಾದರಸನ ವೀಣೆ, ಕಕ್ಕಯ್ಯನ ಕಂಕರಿ, ಬಸವನ ದಂಡಿಗೆ, ಬ್ರಹ್ಮಯ್ಯನ ಕಿನ್ನರಿ, ಬಾಹೂರ ಬ್ರಹ್ಮಯ್ಯನ ತಾಳ, ಬೊಮ್ಮಯ್ಯನ ಢಕ್ಕೆ ಮುಂತಾಗಿ.

ಸಕಲೇಶ ಮಾದರಸ

ಸಕಲೇಶ ಮಾದರಸ ವೀಣೆಯನ್ನು ನುಡಿಸಿ ಶಿವನನ್ನು ಒಲಿಸಿದ ಶರಣ. ರಾಗಕ್ಕೆ ತಕ್ಕಂತೆ, ಹಾಡಿಗೆ ತಕ್ಕಂತೆ, ಭಾವಕ್ಕೆ ತಕ್ಕಂತೆ ರಾವಣ ವೀಣೆ, ರುದ್ರ ವೀಣೆ, ಕೂರ್ಮ ವೀಣೆ, ಕೈಲಾಸ ವೀಣೆ, ಗೌರೀ ವೀಣೆ, ಸ್ವಾಯಂಭು ವೀಣೆ, ಕಿನ್ನರಿ ವೀಣೆ, ಪಿನಾಕಿ ವೀಣೆ, ಆಕಾಶ ವೀಣೆ, ಬ್ರಹ್ಮ ವೀಣೆ, ಲಾವಣ್ಯ ವೀಣೆ, ಸಾರಂಗ ವೀಣೆ, ಮುಂತಾಗಿ ಮೂವತ್ತೆರಡು ವೀಣೆಗಳನ್ನು ಆತ ನುಡಿಸುವುದರಲ್ಲಿ ಆತ ಪ್ರವೀಣನಾಗಿದ್ದ.

ಕಿನ್ನರಿಯ ಬ್ರಹ್ಮಯ್ಯ

ಕಿನ್ನರಿಯ ಬ್ರಹ್ಮಯ್ಯ ಹುಟ್ಟು ಸಂಗೀತಜ್ಞ. ಜನಪದ ಕವಿ ಸಾವಳಿಗೇಶ ಈತನನ್ನು ಕುರಿತು ಹೀಗೆ ಹಾಡಿದ್ದಾನೆ.

ಸಂಗೀತ ವಿದ್ಯೆಯದು ಸಂಗಡವೆ ಬಂದದ್ದು
ಲಿಂಗಿಗಳ ಹಿರಿಮೆ ಹಾಡುತಲಿ | ಕಲ್ಯಾಣ
ಲಿಂಗಮಂಟಪವ ಕೂಡಿದನು.”[6]

ಕಿನ್ನರಿಯನ್ನು ಹಿಡಿದು ಹಾಡಿ ತ್ರಿಪುರಾಂತಕ ದೇವರನೊಲಿಸಿ ಕೇಡಿಲ್ಲದ ಪದವಿಯನ್ನು ತಾನೂ ಪಡೆದು ಜನಗಳೂ ಆ ಪದವಿಯನ್ನು ಪಡೆಯುವಂತೆ ಸಂಗೀತದಿಂದ ಬೋಧಿಸಿದ – ಬ್ರಹ್ಮಯ್ಯ.

ಶಿವಕೊಟ್ಟ ಕಿನ್ನರಿಯ ಭದೊಳಗೆ ನುಡಿಸುತಲಿ
ಶಿವಬೋಧೆ ಜನಕೆ ಮಾಡುತಲಿ | ಬೊಮ್ಮಯ್ಯ
ಭವಿಗಳಿಗೆ ಊದಿ ಶಿವ ಮಂತ್ರ[7]

ರಾಗದ ಸಂಕಣ್ಣ

ರಾಗದ ಸಂಕಣ್ಣನ ಸಂಗೀತ ಅದ್ಭುತ ಪವಾಡವನ್ನೇ ಎಸಗುತ್ತದೆ. ಕಲ್ಯಾಣದ ಚಾಳುಕ್ಯ ಚಕ್ರವರ್ತಿ ವಿಕ್ರಮಾದಿತ್ಯನ ಆಸ್ಥಾನ ಸಂಗೀತವಿದುಷ ಈತ. ನಿತ್ಯ ಆಸ್ಥಾನದಲ್ಲಿ ಹಾಡಿ ಹನ್ನೆರಡು ವರಹಗಳನ್ನು ಪಡೆಯುತ್ತಿದ್ದ. ಆಸ್ಥಾನದ ಇನ್ನಿತರ – ಅದ್ವಿತೀಯರೆಂದೆನಿಸಿದ ೦ – ಸಂಗೀತಗಾರರಿಗಿಂತ ವಿಕ್ರಮಾದಿತ್ಯ ಸಂಕಣ್ಣನಿಗೆ ಹೆಚ್ಚು ಗೌರವ ಕೊಡುತ್ತಿದ್ದ. ಅದಕ್ಕೆ ಕಾರಣವೆಂದರೆ : ಸಂಕಣ್ಣನ ಸಂಗೀತ ಭಕ್ತಿಯ ಕಂಪಿನಿಂದ ಕೂಡಿತ್ತು, ಈ ಭಕ್ತಿಯ ಆಧಿಕ್ಯದಿಂದ ಸಂಕಣ್ಣ ಗೌಳದೇಶದ ಗಾಯಕನೊಡನೆ ಸಂಗೀತ ಸ್ಪರ್ಧೆಯಲ್ಲಿ ಗೆದ್ದು ದೊರೆಯಿಂದ ‘ರಾಗ ರಸಾಂಕ’ ಎಂಬ ಬಿರುದನ್ನು ಗಳಿಸಿದ.

ಕುಂಬಾರ ಗುಂಡಯ್ಯ

ಕಾಯಕವೆ ಶಿವಭಕ್ತಿ ಕಾಯಕವೆ ಶಿವಭಜನೆ
ಕಾಯಕವೆ ಲಿಂಗ ಶಿವಪೂಜೆಶಿವಯೋಗ
ಕಾಯಕವೆ ಕಾಯ್ವ ಕೈಲಾಸ[8]

ಇಂಥ ಕಾಯಕ ಜೀವಿಯಾದಾತ ಕುಂಬಾರ ಗುಂಡಯ್ಯ. ಆತ ತಾನು ಮಾಡಿದ ಮಡಕೆಗಳನ್ನು ಬಾರಿಸಿ ಭಕ್ತಿಯಿಂದ ಕುಣಿಯುತ್ತದ.* ಆತನ ಭಕ್ತಿಗೆ, ಆತನ ಮಡಕೆಗಳ ಬಾಜನೆಗೆ ಮೆಚ್ಚಿ ಮಾರುಹೋದ ಶಿವ ಕೈಲಾಸದಿಂದಿಳಿದು ಬಂದ; ಮಡಕೆಯ ಶಬ್ದಕ್ಕೆ ಕುಣಿಯತೊಡಗಿದ. ಶಿವ ಕುಣಿಯುವುದನ್ನು ಕಂಡು ಸಕಲ ದೇವತೆಗಳೂ ಕುಣಿಯತೊಡಗಿದರು.

“…………………………………………..
ಶಿವನ ಕಂಡಾ ಭಕ್ತಂ ಕುಣಿಯಲು
ಶಿವಭಕ್ತನ ಕೂಡಭವಂ ಕುಣಿಯಲು
ಈರ್ವರನೀಕ್ಷಿಸಿ ಗಣಪತಿ ಕುಣಿಯಲು
ಸರ್ವ ಸ್ಥಾವರ ಜಂಗಮವಾಡಲು…….
ಮಡಕೆಯ ಶಬ್ದಕ್ಕಾಡುತ್ತಿರ್ದಂ………”[9]

ಸಕಲ ಸಚರಾಚರ ಲಾಸ್ಯಮಯವಾಯಿತು. ತನ್ನ ಕುಣಿತದಿಂದ ಶಿವನನ್ನೂ ಗಣಪತಿಯನ್ನೂ ಸಕಲ ಸಚರಾಚರವನ್ನೂ ಕುಣಿಯ ಹಚ್ಚಿದ ಮಹಾತ್ಮ ಕುಂಬಾರ ಗುಂಡಯ್ಯ.

ಸಕಲೇಶ ಮಾದರಸ ಮತ್ತು ಕಿನ್ನರಿ ಬೊಮ್ಮಯ್ಯ ವಚನಕಾರರಾಗಿದ್ದಾರೆ. ಬಾರಿಸುವುದರಿಂದ, ಹಾಡುವುದರಿಂದ ಸಂಗೀತ ಲೋಕಕ್ಕೆ ಹೊಸ ಕಳೆಯಿತ್ತಂತೆ ಅವರು ವಚನಗಳಿಂದ ಸಾಹಿತ್ಯ ಲೋಕವನ್ನೂ ಬೆಳಗಿದ್ದಾರೆ, ಶ್ರೀಮಂತಗೊಳಿಸಿದ್ದಾರೆ.

ಸಕಲೇಶ ಮಾದರಸನ ಅಮೃತವಾಣಿ ಇದು :

ಆಸೆಯಿಂದ ಬಿಟ್ಟು ಕಿರಿಯರಿಲ್ಲ;
ನಿರಾಸೆಯಿಂದ ಬಿಟ್ಟು ಹಿರಿಯರಿಲ್ಲ;
ದಯೆಯಿಂದ ಬಿಟ್ಟು ಧರ್ಮವಿಲ್ಲ;
ವಿಚಾರದಿಂದ ಬಿಟ್ಟು ಸಹಾಯಿಗಳಿಲ್ಲ;
ಸಚರಾಚರಕ್ಕೆ ಸಕಳೇಶ್ವರದೇವರಿಂದ ಬಿಟ್ಟು ದೈವವಿಲ್ಲ.

ಕಿನ್ನರಿ ಬೊಮ್ಮಯ್ಯನ ಅನಭವವಾಣಿ ಇದು :

ನಿನ್ನ ಹರೆಯದ ರೂಹಿನ ಚೆಲುವಿನ ನುಡಿಯ ಜಾಣೆನ, ಸಿರಿಯ
ಸಂತೋಷದ, ಕುರಿತುರಗ ರಥ ಪದಾತಿಯ ನೆರವಿಯ,
ಸತಿ ಸುತರ ಬಂಧುಗಳ ಸಮೂಹದ
ನಿನ್ನ ಕುಲದಭಿಮಾನದ ಗರ್ವವ ಬಿಡು !
ಮರುಳಾಗದಿರು
……………………………………………
……………………………………………
ಅಂತಕನ ದೂತರು ಬಂದು ಕೈವಿಡಿದೆಳೆದೊಯ್ಯುವಾಗ
ನುಡಿಗೆಡೆಯಿಲ್ಲ
ಕೇಳೋ ನರನೆ! ಎನ್ನ ಮಹಾಲಿಂಗ ತ್ರಿಪುರಾಂತಕ
ದೇವರ ಪೂಜಿಸಿಯಾದರೆ
ಕೇಡಿಲ್ಲದ ಪದ ದೊರಕೊಂಬುದು ಮರುಳೆ.

ತೊಗಲು ಗೊಪ್ಪೆಯ ಆಟ, ಕಿಳ್ಳಿಕ್ಯಾತರಿ ಆಟ, ಭೃಂಗಿಯವರ ವಿವಿಧ ವೇಷ, ದೊಂಬರಾಟ, ಕೋಡಂಗಿಯಾಟ, ಜಾತಿಗಾರ ವಿನೋದಾವಳಿ – ಮುಮತಾದುವು ಶುದ್ಧ ಜಾನಪದ ಕಲೆಗಳು. ವಿಚಾರಿಸಿ ನೋಡಿದರೆ ಇವೇ ನಿಜವಾದ ಕಲೆಗಳು; ಇನ್ನುಳಿದ ಕಲೆಗಳಿಗೆ ಇವು ಮೂಲವಾದುವುಗಳು. ಕನ್ನಡ ನೆಲದ ಸತ್ವ, ಗುಣ, ಈ ನಾಡಿನ ಸಂಸ್ಕೃತಿ ಈ ಕಲೆಗಳಲ್ಲಿ ಅಡಗಿದೆ. ಇಂಥ ಮಹತ್ವವಾದ ಕಲೆಗಳು ಹೊಟ್ಟೆ ಹೊರೆಯುವ ಸಾಧನಗಳಾಗಿದ್ದುವು; ಜನರ ದೃಷ್ಟಿಯಲ್ಲಿ ಇವು ಅತಿ ಕೀಳೆನಿಸಿದ್ದುವು. ಅತಿ ಸಾಮಾನ್ಯ ಜನರ ರಂಜನೆಗೆ ವಿಷಯಗಳಾದ ಈ ಕಲೆಗಳು ಅವರನ್ನು ಅಳಿಸಿ, ನಗಿಸಿ, ಹೃದಯಕ್ಕೆ ಸಂಸ್ಕಾರ ಬರಿಸಿ, ಅವರ ಜೀವನ ತಿದ್ದಿ ತೀಡುವಂಥವು. ಆದರೆ ಆ ಕಾಲದಲ್ಲಿ ಇವುಗಳಿಗೆ ದೊರಕಿದ ಸ್ಥಾನ “ಶೂದ್ರತನ”.

ಜನರ ದೃಷ್ಟಿಯಲ್ಲಿ ಕೀಳೆನಿಸಿದ ಈ ಕಲೆಗಳನ್ನು ಶರಣರು ಕಾಯಕಗಳನ್ನಾಗಿ ಆರಿಸಿಕೊಂಡರು. ಇದರಿಂದ ಆ ಕಲೆಗಳಿಗೆ ಹೊಸಜೀವ ಬಂದಿತು. ನಾಡಿನಲ್ಲಿ ಜಾನಪದ ಕಲೆಗಳಿಗೆ ಪುನರುಜ್ಜೀವನವಾಯಿತು; ಅವು ಹೊಸ ಕ್ಷಿತಿಜವನ್ನು ಪಡೆದವು. ಜಾನಪದ ಕಲೆಗಳ ಒಂದು ಹೊಸ ಸಂಪ್ರದಾಯವೇ ನಿರ್ಮಾಣವಾಯಿತು. ಈ ಸಂಪ್ರದಾಯ ನಿರ್ಮಾಣಕ್ಕೆ ಕಾರಣರಾದವರು: ಢಕ್ಕೆಯ ಬೊಮ್ಮಣ್ಣ, ಬಹುರೂಪಿ ಚೌಡಯ್ಯ, ಕಂಕರಿ ಕಕ್ಕಯ್ಯ, ಕಲಕೇತ ಬೊಮ್ಮಯ್ಯ, ಸಿದ್ಧದೇವಮ್ಮ, ಶಿವಮಾಯಿದೇವಿ, ವೀರದೇವಮ್ಮ, ಜಕ್ಕೆಯರ ಬ್ರಹ್ಮಯ್ಯ ಮುಂತಾದ ಶರಣರು.

ಢಕ್ಕೆಯ ಬೊಮ್ಮಣ್ಣ

ಬುಟ್ಟಿಯಲ್ಲಿ ಅಥವಾ ಮೊರದಲ್ಲಿ ಮಾರಿದೇವತೆಯನ್ನಿಟ್ಟುಕೊಂಡು, ಉದ್ಧವಾದ ಬಾರುಕೋಲಿನಿಂದ ತಮ್ಮ ಮೈಗೆ ಹೊಡೆದುಕೊಳ್ಳುತ್ತ, ಡೊಳ್ಳು ಬಾರಿಸಿ ಕುಣಿಯುತ್ತ ಭಿಕ್ಷೆ ಬೇಡಲು ಬರುವವರಿಗೆ “ಬುರು ಬುರು ಸುಂಕಲಮ್ಮ” ಮತ್ತು “ದುರುಗಮುರುಗಿ”ಯವರೆಂದು ಹೆಸರು. ಇವರು ಸಮಾಜದಲ್ಲಿ ಏನೇನೂ ಬೆಲೆಯಿಲ್ಲದವರು. ಹೊಟ್ಟೆ ಕೂಳಿಗಾಗಿ ಈ ವೃತ್ತಿ ಕೈಕೊಂಡವರು, ಇಂಥದೇ ವೃತ್ತಿಯನ್ನು ಢಕ್ಕೆಯ ಬೊಮ್ಮಣ್ಣ ಕಾಯಕವನ್ನಾಗಿ ಮಾಡಿಕೊಂಡಿದ್ದ.

ಢಕ್ಕೆಯ ಬೊಮ್ಮಣ್ಣ ಶಂಕರದಾಸಮಯ್ಯನ ಸಮಕಾಲೀನ; ಆತನಲ್ಲಿ ತಲೆದೋರಿದ ಅಹಂಭಾವವನ್ನು ಕಳೆದ ಮಹಿಮ.

ತಲೆಗೆ, ಟೊಂಕಕ್ಕೆ ಬೇವಿನ ಎಲೆಯನ್ನು ಕಟ್ಟಿಕೊಂಡು, ಮೊರದಲ್ಲಿ ಮಾರಿಯ ಮೂರ್ತಿಯನ್ನಿಟ್ಟುಕೊಂಡು, ಡೊಳ್ಳು ಬಾರಿಸುತ್ತ ಕುಣಿಯುತ್ತ ಢಕ್ಕೆಯ ಬೊಮ್ಮಣ್ಣ ಓಣಿಯಲ್ಲಿ ತಿರುಗುವನು. ಅಲ್ಲಲ್ಲಿ ಮಾರಿಯನ್ನಿಳಿಸಿ, ಕುಣಿದು, ಡೊಳ್ಳು ಬಾರಿಸಿ ಶಿವಾನುಭವ ತತ್ವಗಳನ್ನು ಶರಣರ ಸೂಳ್ನುಡಿಗಳನ್ನು ಜನರೆದೆಗೆ ಇಳಿಸುವನು.

ಢಕ್ಕೆಯ ಬೊಮ್ಮಣ್ಣನ “ಮಾರಿ” ಜ್ಞಾನಶಕ್ತಿಯ ಸಂಕೇತವಾಗಿತ್ತು. ಶರಣನಾದವನು ಇದಿರಿಟ್ಟು ಪೂಜಿಸಬಾರದು. ಆದುದರಿಂದ ಮಾರಿಯನ್ನು ಹೊತ್ತು ತಿರುಗುವುದನ್ನು ಕೆಲವರು ಆಕ್ಷೇಪಿಸಿದರು – ಬೊಮ್ಮಣ್ಣನ ಅಂತಸ್ತನ್ನು ತಿಳಿಯದೆ. ಆಗ ಬೊಮ್ಮಣ್ಣ ಮಾರಿ ಬೇರೆಯಲ್ಲ ತನ್ನ ಇಷ್ಟಲಿಂಗ ಬೇರೆಯಲ್ಲವೆಂಬುದನ್ನು ತೋರಿಸಲು, ಮಾರಿಯನ್ನು ತನ್ನ ಇಷ್ಟಲಿಂಗದಲ್ಲಿ ಅಡಗಿಸಿ, ಆ ಲಿಂಗವನ್ನು ಅಂಗೈಯಲ್ಲಿಟ್ಟು ಮಾರಿಯಂತೆ ಕುಣಿಸಿದನು.

ಶಂಕರ ದಾಸಮಯ್ಯ ಶಿವನಿಂದ ಹಣೆಗಣ್ಣನ್ನು ಪಡೆದಿದ್ದ; ಪರವಾದಿಗಳನ್ನು ಜಯಿಸಿದ್ದ; ಉಜ್ಜಯಿನಿಯ ಮಹಾಕಾಳಿಯಿಂದ ಕೊಡೆವಿಡಿಸಿಕೊಂಡಿದ್ದಲ ಇಷ್ಟಲ್ಲದೆ ದೇವರ ದಾಸಮಯ್ಯನ ಅಹಂಭಾವವನ್ನು ಅಳಿಸಿದ್ದ. ಆದರೆ, ಇವೆಲ್ಲವುಗಳಿಂದ ತನ್ನಲ್ಲಿಯೇ ಅಹಂಭಾವವನ್ನು ಬೆಳೆಕೊಂಡಿದ್ದ. ಅದನ್ನು ಢಕ್ಕೆಯ ಬೊಮ್ಮಣ್ಣ ಕಳೆಯಬೇಕಾಯಿತು.

ಢಕ್ಕೆಯ ಬೊಮ್ಮಣ್ಣ ಶಂಕರದಾಸಮಯ್ಯನ ಅಂಗಳಕ್ಕೆ ಬಂದು ಕುಣಿದು ‘ಕಾಯಕ’ ಬೇಡಿದ. ಕ್ಷುಲ್ಲಕ ದೇವವಿರೋಧಿ ಶಂಕರದಾಸಮಯ್ಯ. ಬೊಮ್ಮಣ್ಣನ ಹೊಲಬರಿಯದೆ ಮಾರಿಯನ್ನು ಸುಡಲು ಹಣೆಗಣ್ಣನ್ನು ತೆರೆದ, ಆದರೆ ಆದುದೇನು? ಆ ಮಾರಿಕವ್ವೆ ಸಂಕರದಾಸಮಯ್ಯನ ಉರಿಗಣ್ಣನ್ನೇ ನುಂಗಿಬಿಟ್ಟಳು.

ಕೊನೆಗೆ ಶಂಕರದಾಸಮಯ್ಯನಿಗೆ ಢಕ್ಕೆಯ ಬೊಮ್ಮಣ್ಣನ ಕಾಯಕದ ಹೊಲಬು, ಆತನ ನಿಲುವು ತಿಳಿಯಿತು; ಮೈತುಂಬಿಕೊಂಡಿದ್ದ ಅಹಂಕಾರ ಮಾಯವಾಯಿತು; ಬೊಮ್ಮಣ್ಣನ ಅಡಿಗೆರಗಿದ. ಆಗ ಆ ಮಾರಿದೇವತೆ ಆತನ ಕಣ್ಣನ್ನು ಉಗುಳಿಬಿಟ್ಟಿತು.

ಈ ಪವಾಡ ಏನೇ ಇರಲಿ, ಕ್ಷುಲ್ಲಕ ದೈವವೆನಿಸಿದ ಮಾರಿಕವ್ವೆಯನ್ನು ಇಷ್ಟಲಿಂಗದ ಪದವಿಗೇರಿಸಿ, ರಿಂಗಣಗುಣಿವ, ಡೊಳ್ಳು ಬಾರಿಸುವ ಯಾಚಕ ವೃತ್ತಿಯನ್ನು ಕಾಯಕವನ್ನಾಗಿಸಿದ ಪವಾಡ ಹಿರಿದು.

ಢಕ್ಕೆಯ ಬೊಮ್ಮಣ್ಣ ವಚನಕಾರನಿದ್ದಾನೆ. “ಕಾಲಾಂತಕ ಭೀಮೇಶ್ವರ ಲಿಮಗ” ಎಂಬುದು ಆತನ ಅಂಕಿತ.

ಶರಣರು ತಮ್ಮ ಕಾಯಕವನ್ನು ರೂಪಕ ಮಾಡಿಕೊಂಡು ತತ್ವ ಹೇಳುವಲ್ಲಿ ಬಲ್ಲಿದರು. ಕಾಯಕವು ಬಾಳನ್ನು ಕೈಲಾಸ ಮಾಡಿದಂತೆ ಸಾಹಿತ್ಯವನ್ನು ರಸ ಕೈಲಾಸ ಮಾಡಿದೆ.

ಬೊಮ್ಮಣ್ಣ ಈ ವಚನ ನೋಡಿರಿ :

ಕಾಯಕವೆಂಬ ಢಕ್ಕೆಯ ಮೇಲೆ
ಜೀವವೆಂಬ ಹೊಡಿ ಚೆಂಡು ಬೀಳೆ
ತ್ರಿವಿಧ ತಾ, ತಾ ಎಂಬಾಸೆ
ಹಿಂ. ಡಿ, ಡಿಂ, ಡಿ, ಎನ್ನುತ್ತಿದೆ
ಇಂತೀ ಉಲುಹಿನ ಭೇದದಲ್ಲಿ
ಹೊಲಬುದಪ್ಪದೆ ಗೆಲಬೇಕುಕಾಲವೆಂಬ ಮಾರಿಯ
ಕಾಲಾಂತಕ ಭೀಮೇಶ್ವರ ಲಿಂಗವನರಿಯ ಬಲ್ಲಡೆ[10]

ಕಾಯಕವೇ ಢಕ್ಕೆ, ಅದರಲ್ಲಿ ಓಡಾಡುವ ಚೆಂಡು ಜೀವ; ಆ ಜೀವದ ಆಸೆ, ಆಕಾಂಕ್ಷೆಗಳು ಅನಂತ; ಅವುಗಳಿಂದ ಪಡುವ ಯಾತನೆಗೆ ಇತಿಮಿತಿಯಿಲ್ಲ; ಈ ಯಾತನೆಯಿಂದ ದೂರವಾಬೇಕಾದರೆ ಹೊಲಬುದಪ್ಪದೆ ಇರಬೇಕು. ಮಾರಿಯನ್ನು ಗೆಲಬೇಕು – ಬಹು ಸೊಗಸಾದ ಭಾವ ಮೇಲಿನ ವಚನದಲ್ಲಿ ಅಡಗಿದೆ.

ಆವ ಸ್ವಕಾಯಕದಿಂದಾದಡೂ ಭಾವ ಶುದ್ಧವಾಗಿ
ಮಾಡುವುದೇ ಜಂಗಮ ಪೂಜೆ;
ನಿಯಮ ಕ್ರೀ ತಪ್ಪದೆ ಮಾಡುವುದೇ ದೇವಪೂಜೆ[11]

– ಈ ಮಾತುಗಳು ಕಾಯಕದ ಹಿರಿಮೆಯನ್ನು, ಅರ್ಥವ್ಯಾಪ್ತಿಯನ್ನು ಅರುಹುತ್ತವೆ. ಕಾಯಕದ ವ್ಯಾಖ್ಯೆ ಇದಕ್ಕಿಂತಲೂ ಸುಂದರವಾಗಿ ಅರ್ಥವತ್ತಾಗಿ ಬೇರೆಲ್ಲಿಯೂ ಕಾಣಬರುವುದಿಲ್ಲ.

“….ಬಲ್ಲ ಬಲ್ಲವರೆಲ್ಲರ ತನ್ನಲ್ಲಿಯೇ ಅಡಗಿಸುತ,
ಅರಿದವರೆಲ್ಲರಿಗೆ ದೇವಿಯಾಗಿ,
ಮರೆದವರಿಗೆ ಮಾರಿಯಾಗಿ
ಮೊರದೊಳಗೆ ಕೊಂಡು ಬಂದಿದ್ದೇನೆ…..”[12]

ಬೊಮ್ಮಣ್ಣನ ಮಾರಿಕವ್ವೆ ಇಂಥವಳು. ಅರಿದವರಿಗೆ ದೇವಿ, ಮರೆದವರಿಗೆ ಮಾರಿ. “ಮೊರಕ್ಕೆ ಮೂರು ಕೊಟ್ಟು” ಇವಳನ್ನು ಗೆದೆಯುವುದು ಹೇಗೆ?

“ಢಕ್ಕೆಯ ಧ್ವನಿಗೇಳಿ ಬೆಚ್ಚಿಬೀಳುವುದಕ್ಕೆ ಮುನ್ನವೇ ಕಾಲಾಂತಕ ಭೀಮೇಶ್ವರ ಲಿಂಗವನ್ನು” ಅರಿಯಬೇಕು.

ಮಹಾದೇವನ ಮರೆದವರಿಗೆ
ಮಾಯಾಂಗನೆ ಮಾರಿಯಾದಳು;
ಸತ್ಕ್ರಿಯ ಸಜ್ಜನಯುಕ್ತಿಯಿಂದ
ಸದಾಶಿವನನರಿಯಲಾಗಿ ಉಮಾದೇವಿಯಾದಳು[13]

ಬೊಮ್ಮಣ್ಣನ ಈ ಮಾತುಗಳು ಸರ್ವಕಾಲಕ್ಕೂ ಸರ್ವರೂ ಅರಿತು ಆಚರಿಸಬೇಕಾದ ಮಾತುಗಳು.

ಬಹುರೂಪಿ ಚೌಡಯ್ಯ

‘ಬಹುರೂಪಿ’ ಎಂದರೆ ನಟ, ಡೊಂಬ ಎಂದರ್ಥ. ನಾನಾರೀತಿಯ ವೇಷ ಹಾಕಿ ನಟಿಸುವವರಿಗೆ ಜಾತಿಗಾರರೆಂದೂ ಹೆಸರು. ಚೌಡಯ್ಯ ನಟನೂ ಡೊಂಬನೂ ಆಗಿದ್ದನು.

ರೇಕಳಿಕೆಯಲ್ಲಿ ಚೌಡಯ್ಯ ಹುಟ್ಟಿ ಬೆಳೆದ. ಜಾತಿಗಾರ ವಿದ್ಯೆ ಅವನು ಬೆಳೆದಂತೆ ಅವನೊಡನೆ ಬೆಳೆಯಿತು. ನೀಲಗಿರಿ ಪ್ರಾಂತದಲ್ಲಿ ಚೌಡಯ್ಯ ಬಹುದಿನಗಳವರೆಗೆ ಬಹುರೂಪವನ್ನಾಡಿದ. ಆತ ಶಿವಲೀಲೆ ಆಡಿದರೆ ನಾಡೆಲ್ಲ ಹೂವಾಯ್ತು, ಮೂಡಿ ಶಿವಭಕ್ತಿ ಹಣ್ಣಾಯ್ತು. ಆತನ ಬಹುರೂಪವನ್ನು ಪುರವೆದ್ದು ನೋಡುತ್ತಿತ್ತು, ಪುರವೆದ್ದು ಕೇಳುತ್ತಿತ್ತು.

ಚೌಡಯ್ಯನ ಕೀರ್ತಿಕೇಳಿ, ಕಾಡಸಿದ್ಧರು, ನಾಡ ಬುಡುಬುಡುಕಿಗಳು, ಶಂಖಯ್ಯಗಳು, ಸುಡುಗಾಡು ಸಿದ್ಧರು ಬಂದರು; ಆತನ ಶಿಷ್ಯರಾದರು. ಆತನ ಮೇಳ ದೊಡ್ಡದಾಯಿತು. ಶಿವಮತ ಹಬ್ಬಿಸಲು, ಶಿವನ ಅಪ್ಪಣೆ ಪಡೆದು, ಶಿವಕಳೆಯು ಸಿಡಿದು ಹುಟ್ಟಿದಂತಿದ್ದರು – ಆತನ ಮೇಳದವರು.

ನೀಲಗಿರಿ ಪ್ರಾಂತದ ಕೊಟಗಿರಿಯಲ್ಲಿ ಚೌಡಯ್ಯ ಗಾನ ವಿದ್ಯಾಗಜೇಂದ್ರ ಸಿಂಹನಾದ ಅಚ್ಯುತನನ್ನು ಮತ್ತು ಭರತ ವಿದ್ಯಾಶರಭ ಭೇರುಂಡನಾದ ಯಕ್ಷನಾಥನನ್ನು ಸಂಗೀತ ಮತ್ತು ಬಹುರೂಪ ಸ್ಪರ್ಧೆಯಲ್ಲಿ ಜಯಿಸಿದನು. ಆ ಬಳಿಕ ಆತ ಶಿವನ ಪಂಚವಿಂಶತಿ ಲೀಲೆಗಳನ್ನು, ಕೋಳೂರು ಕೊಡಗೂಸು, ಮಾದಾರ ಚೆನ್ನ, ಬಡಿಹೋರಿ ಬೊಮ್ಮಯ್ಯ, ಕಾರಿಕಾಲೆಮ್ಮ, ಅಮ್ಮವ್ವೆ ಮುಂತಾದ ಶರಣರ ಚರಿತ್ರೆಗಳನ್ನು ನಾಟಕಕ್ಕೆ ಅಳವಡಿಸಿ ಪ್ರದರ್ಶಿಸುತ್ತ ಕಲ್ಯಾಣಕ್ಕೆ ಬಂದನು; ಕೊನೆಯ ವರೆಗೆ ಅಲ್ಲಿಯೇ ಉಳಿದ.

ರೇಕನಾಥಾಚಾರ್ಯ ಚೌಡಯ್ಯನ ದೀಕ್ಷೆಯ ಗುರು; ನಾಗಿನಾಥಾಚಾರ್ಯ ಆತನ ಮೋಕ್ಷದಗುರು. ಚೌಡಯ್ಯ ಇಬ್ಬರನ್ನೂ ತನ್ನ ಅಂಕಿತದಲ್ಲಿ ಸ್ಮರಿಸಿ ಅಮರರನ್ನಾಗಿಸಿದ್ದಾನೆ.

ಶಿವಪಾರಿಜಾತ ಮತ್ತು ರಾಮಕ್ರಿಯಾರಾಗ ಕಲೆಯ ಲೋಕಕ್ಕೆ ಚೌಡಯ್ಯನ ಕೊಡುಗೆಗಳು.

ಚೌಡಯ್ಯ ಕುಣಿದು ಹಾಡಿದರೆ ಏನಾಯ್ತು?

ಚೌಡಯ್ಯ ರೂಪಗಳ ಆಡಿ ಕುಣಿಯಲು ಲೋಕ
ನೋಡಿ ಶಿವಮತದ ಬೆಳೆ ಬಂತು | ಜಗವೆಲ್ಲ
ನೀಡಿ ಕಾಯಕಕೆ ಹಣಗೂಡಿ[14]

ಶಿವನು ಬಂದು ಕೈಲಾಸಕ್ಕೆ ಚೌಡಯನನ್ನು ಕರೆಯುತ್ತಾನೆ; ಕೊಡೆ ಹಿಡಿಯುತ್ತೇನೆ ಎನ್ನುತ್ತಾನೆ, ಆದರೆ ಚೌಡಯ್ಯ ಕೊಟ್ಟ ಉತ್ತರವೇನು?

ಬೇಡೆನೆಗೆ ಕೈಲಾಸ, ನೀಡೆನಗೆ ಶಿವಭಕ್ತಿ
ಮಾಡುವೆನು ಸೇವೆ ಶಿವಮತಕೆ | ಶರಣರಿಗೆ
ನಾಡ ಕಾಯಕವೆ ಕೈಲಾಸ[15]

ನಾಡ ಕಾಯಕವೆಂದರೆ ರಾಷ್ಟ್ರವನ್ನು ಬಲಗೊಳಿಸುವ ಕಾಯಕವೇ ಶರಣರಿಗೆ ಕೈಲಾಸ. ಜಾತಿಗಾರ ಕಲೆಯನ್ನು, ಡೊಂಬರಾಟವನ್ನು ರಾಷ್ಟ್ರವನ್ನು ಕಟ್ಟುವ ನಾಡಕಾಯಕವಾಗಿಸಿದ – ಚೌಡಯ್ಯ.

ಚೌಡಯ್ಯ ವಚನ ರಚಿಸಿದ್ದಾನೆ. ಆತನ ಅಂಕಿತ : “ರೇಕಣ್ಣಪ್ರಿಯನಾಗಿನಾಥ”.

ಎಲ್ಲರಂತೆ ಚೌಡಯ್ಯ ಕಾಯಕದ ರೂಪದಿಂದ ಶರಣ ಧರ್ಮವನ್ನೂ ತತ್ವಗಳನ್ನೂ ಲೋಕಕ್ಕೆ ಸಾರಿದ್ದಾನೆ.

ಚೌಡಯ್ಯ ಆಡಿದ ಆಟವೆಂತಹುದು? ಅದರಿಂದ ಆತ ಕೊಟ್ಟ ಸಂದೇಶವೇನು?

ಮೆಟ್ಟಿದ ಹೆಜ್ಜೆಯ ಮೆಟ್ಟದೆ ಆಡಬೇಕು.”
ಐವರು ಕಟ್ಟಿದ ಕಟ್ಟಳೆಯ ಮೀರಿ
ನಾನಾಡುವೆ ಬಹುರೂಪವ
ಷಡುಚಕ್ರವಳಯದಲ್ಲಿ ನಾನಾಡುವೆ ಬಹುರೂಪ
ಉರಿಯುಂಡ ಕರ್ಪೂರದಂತೆ ನಾನಾಡುವೆ ಬಹುರೂಪ[16]
ಎಂಬತ್ತುನಾಲ್ಕು ಲಕ್ಷ ಬಹುರೂಪ
ಚಂದಚಂದದಲ್ಲಿ ಆಡಿ ಬಂಧುಗಳ ಮೆಚ್ಚಿಸೆಬಂದೆ.
ಅವರು ಬಹುರೂಪದಂದವನರಿಯರು.
ರೇಕಣ್ಣಪ್ರಿಯ ನಾಗಿನಾಥನಲ್ಲಿ
ಬಹುರೂಪದಂದ ವಿಚ್ಛಂದವಾಯಿತ್ತು.”[17]

ಕಲಕೇತ ಬೊಮ್ಮಯ್ಯ

ಕೋಡಂಗಿಯಾಟವಾಡುವುದು, ಭೃಂಗಿ ಕುಣಿತ ಕುಣಿಯುವುದು – ಭಿಕ್ಷೆಯ ವೃತ್ತಿಗಳಲ್ಲಿ ಇವೆರಡು ಸೇರುತ್ತವೆ. ಇವುಗಳಿಗೆ ‘ಕಲಕೇತ’ ಎಂಬ ಹೆಸರಿತ್ತೆಂದು ತೋರುತ್ತದೆ. ಇದನ್ನು ಬೊಮ್ಮಯ್ಯ ಕಾಯಕವನ್ನಾಗಿ ಮಾಡಿಕೊಂಡಿದ್ದ.

ಕಲಕೇತ ಬೊಮ್ಮಯ್ಯ ಕಲ್ಯಾಣ ಪಟ್ಟದಲ್ಲಿ ಹುಟ್ಟಿ ಬೆಳೆದ. ಬಸವಾದಿ ಪ್ರಮಥರು ಕಟ್ಟಿದ ಅನುಭವ ಮಂಟಪದ ತತ್ವಜಿಜ್ಞಾಸೆಯಲ್ಲಿ ಬೊಮ್ಮಯ್ಯ ಭಾಗಿಯಾಗುತ್ತಿದ್ದ. ಶರಣರ ತತ್ವಗಳನ್ನು ತನ್ನ ಕಾಯಕದ ಮೂಲಕ ಬಿತ್ತರಿಸುತ್ತಿದ್ದ.

ಆತನ ವೇಷ ಭೂಷಣ ಹೀಗಿತ್ತು :

ಮುಂದಲೆಯಲ್ಲಿ ಯಾವಾಗಲೂ ಅಲುಗಾಡುವ ಕೂದಲಿನ ಮುಡಿ, ಹಣೆಯಲ್ಲಿ ವಿಭೂತಿ, ಕಿವಿಯಲ್ಲಿ ಕೆಂದಳಿರು, ಕಾವಿಯ ಉಡುಪು, ಎಡದ ಅಡಿಯಲ್ಲಿ ಅಂದುಗೆ, ಬಲಪಾದದಲ್ಲಿ ಗೆಜ್ಜೆ, ದಕ್ಷನ ತಲೆಯ ಕೋಡಿನ ತೆರದಿ ತಗರಿನ ಬಲಿದ ಕೊಂಬು ಎಡಗೈಯಲ್ಲಿ, ಬಲಗೈಯಲ್ಲಿ ಬಲವಾದ ಬೆತ್ತ.

ಕಾಲಂದುಗೆ, ಗೆಜ್ಜೆಗಳು ಘಿಲ್‌ ಘಿಲ್ ಎಂದು ಉಲಿಯುತ್ತಿರಲು. ಬಲಗೈಯ ಬೆತ್ತ ತಿರುಹುತ್ತ. ಕೋಡಗದಟವನಾಡುತ್ತ, ಭೃಂಗಿಯಂತೆ ಕುಣಿಯುತ್ತ, “ಧರಾದ್ರನಿಟಿಲಾಗ್ನಿಯ ಟಗರು ಬಂದ”, “ದುಗ್ಗಳವ್ವೆಯ ಮಗ ಬಂದ,” “ಸಂಗಳವ್ವನ ತಮ್ಮ ಬಂದ,” “ಅಮ್ಮಗಳಿರಾ, ಅಕ್ಕಗಳಿರಾ” ಎನ್ನುತ್ತ, ಭಕ್ತರನ್ನು ನಗಿಸುತ್ತ, ಆ ನಗೆಯಲ್ಲಿ ಶರಣರ ತತ್ವಗಳನ್ನು ಅರಳಿಸುತ್ತ ಮನೆ ಮನೆಗೆ ಹೋಗುವನು. ಕಾಯಕದಿಂದ ಬಂದುದರಲ್ಲಿ ತೃಪ್ತನಾಗಿ ಗುರುಲಿಂಗ ಜಂಗಮರ ದಾಸೋಹ ಮಾಡುವನು.

ಕಲ್ಯಾಣದಲ್ಲಿ ಕಿನ್ನರಿ ಬೊಮ್ಮಯ್ಯ ಹೆಸರಾಂಗ ಗಾಯಕನಾಗಿದ್ದ. ಆತನ ಭಕ್ತಿ, ಔದಾರ್ಯಗಳ ಮನೆಮಾತಾಗಿದ್ದವು. ಬೇಡಿದವರಿಗೆ ಬೇಡಿದ್ದನ್ನಿತ್ತು ತೃಪ್ತಿ ಪಡಿಸುವಲ್ಲಿ ಆತ ಬಲ್ಲಿದ.

ಒಮ್ಮೆ ಹರಕೆಯ ಕುರಿಯ ಹಗರಣದಿಂದಾಗಿ ಆತನ ಕೋಪಕ್ಕೆ ಒಬ್ಬ ವಿಟ ಆಹುತಿಯಾಗುತ್ತಾನೆ. ಅರಸನ ಹತ್ತಿರ ದೂರು ಹೋಗುತ್ತದೆ. ಕಿನ್ನರಿ ಬೊಮ್ಮಯ್ಯನ ಮಾತಿಗೆ ಸಾಕ್ಷಿಬೇಕಾಗುತ್ತದೆ. ಆಗ ಸಾಕ್ಷಾತ್ ತ್ರಿಪುರಾಂತಕೇಶ್ವರನೇ ಬಂದು ಸಾಕ್ಷಿ ನುಡಿಯುತ್ತಾನೆ. ಆತನ ಹಿರಿಮೆಗೆಯಿದು :

ಜೋಡು ಕೈಗಳ ಮುಗಿದು ಹಾಡಿದರು ಜನರೆಲ್ಲ
ನಾಡೊಳಗೆ ಹಿರಿಮೆ ಶರಣನದುಪಶುಪಕ್ಷಿ
ಕಾಡೊಳಗೆ ಹಾಡಿ ನಲಿದಾಡಿ.”[18]

ಈ ಘಟನೆಯಿಂದ ಕಿನ್ನರಿ ಬೊಮ್ಮಯ್ಯನಲ್ಲಿ ಒಂದು ತೆರ ಹಮ್ಮು ಬೆಳೆಯಿತು. ಅದನ್ನು ನಿವಾರಿಸಿದ ಮಹಾತ್ಮ – ಕಲಕೇತ ಬೊಮ್ಮಯ್ಯ.

ಒಬ್ಬ ಬಡವ ಕಿನ್ನರಿ ಬೊಮ್ಮಯ್ಯನಲ್ಲಿಗೆ ಬೇಡಲು ಹೋಗುತ್ತಿರುವುದನ್ನು ಕಂಡು ಕಲಕೇತಯ್ಯ, “ಆತನೇನು ಕೊಟ್ಟಾನು? ನಾನು ಕೊಡುವೆ, ತೆಗೆದುಕೋ” ಎಂದು ತನ್ನ ಕೈಯಲ್ಲಿಯ ಕೊಂಬಿನಿಂದ ಹೊನ್ನಿನ ಮಳೆಗರೆದನು. ಅಷ್ಟು ಹೊನ್ನು ಒಯ್ಯಲು ಬಡವನಿಗಾಗಲಿಲ್ಲ. ಆದುದರಿಂದ ಅವನು ಆ ಹೊನ್ನನ್ನು ಹೊತ್ತೊಯ್ಯಲು ಸೇವಕರನ್ನು ಕಳಿಸಬೇಕೆಂದು ಬಸವಣ್ಣನವರನ್ನು ಕೇಳಿದನು. ಈ ಸುದ್ದಿ ಕೇಳಿ ಕಿನ್ನರಯ್ಯ ನಾಚಿದ; ಕಲಕೇತಯ್ಯನ ಹತ್ತಿರ ಬಂದು ಆತನ ಅಡಿಗೆರಗಿದ.

ಕಲಕೇತ ಬೊಮ್ಮಯ್ಯ ವಚನ ರಚನೆಯಿಂದ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾನೆ. ಆತನ ಅಂಕಿತ : “ಮೇಖಲೇಶ್ವರಲಿಂಗ”.

ತನ್ನ ಕಾಯಕದ ಹೊಲಬನ್ನು ಕಲಕೇತ ಬೊಮ್ಮಯ್ಯ ಕೆಳಗಿನ ವಚನದಲ್ಲಿ ಸೊಗಸಾಗಿ ಹೇಳಿದ್ದಾನೆ :

ಜಗಕ್ಕಹುದಾದುದನಿತ್ತು
ಜಗಕ್ಕಲವಾದುದ ತೊಟ್ಟು
ಜಗ ಹಿಡಿದುದ ಬಿಟ್ಟು
ಜಗ ಒಲ್ಲದುದ ತೊಟ್ಟು
ತಾನರಿದುದ ಮರೆದು, ಮರವೆಗೊಡಲಾದುದನಂದು
ಉಭಯದ ಕೋಡ ಕಿತ್ತು
ನಲಿದೊಲವಿನ ಹೊಲವ ಬಿಟ್ಟು ಕೊಂಬಿನ ಗಿಲಿಕೆಯಲ್ಲಿ ಒಲಿದಾಡುವೆ
ಜಗಭಂಡರಂಗಣದಲ್ಲಿ ತುಳಿದಾಡುತ್ತಲಿರಬೇಕು
ಮೇಖಲೇಶ್ವರಲಿಂಗವನೊಡಗೂಡುತ್ತಲಿರಬೇಕು.”[19]

ಬಯಸಿ ಬೇಡಿ ಕಾಯಕ ಮಾಡಬಾರದೆಂದು, ಪ್ರತಿಫಲ ದೊರಕದಿದ್ದರೆ ನಿಂದಿಸಬಾರದೆಂದು ಕಲಕೇತಯ್ಯ ಹೇಳುತ್ತಾನೆ.

ಬೇಡಲೇತಕ್ಕೆ ಕಾಯಕವ ಮಾಡಿಹೆನೆಂದು?
ಕೊಡದೊಡೆ ಒಡಗೂಡಿ ಬಯ್ಯಲೇತಕ್ಕೆ?
ಒಡೆಯರು ಭಕ್ತರಿಗೆ ಮಾಡಿಹೆನೆಂದು ಗಡಿತಗಡಿಳಲ್ಲಿ
ಕವಾಟ ಮಂದಿರ ಮುಂದೆ ಸಂದಿಗೊಂದಿಗಳಲ್ಲಿ
ನಿಂದು ಕಾಯಲೇತಕ್ಕೆ?
ಗುಣ ಕಾಯಕದಂದವೆ?
ಗುಣ ಹೊಟ್ಟೆಗೆ ಕಾಣದ ಸಂಸಾರದ ಘಟ್ಟದ ನಿಲುವೂ, ಉಭಯ
ಭ್ರಷ್ಟಂಗೆ ಕೊಟ್ಟ ದ್ರವ್ಯ
ಮೇಖಲೇಶ್ವರಲಿಂಗಕ್ಕೆ ಮುಟ್ಟದೆ ಹೋಯಿತ್ತು[20]

ಕಂಕರೀ ಕಕ್ಕಯ್ಯ:

‘ಕಂಕರೀ’ – ಅದೊಂದು ಚೌಡಿಕೆಯಂಥ ವಾದ್ಯ – ಚೌಡಿಕಿಯವರು, ಜೋಗಿತಿಯವರು ಕನ್ನಡ ನಾಡಿನಲ್ಲಿ ಪರಿಚಿತರು. ಚೌಡಿಕಿ ಬಾರಿಸಿ, ಹಾಡಿ, ಕುಣಿದು ಭಿಕ್ಷೆ ಎತ್ತುವರು ಇವರು. ಹೆಚ್ಚಾಗಿ ಇವರೆಲ್ಲ ಎಲ್ಲಮ್ಮನ ಭಕ್ತರು.

ಬಸವಣ್ಣನವರ ಕಾಲದಲ್ಲಿ ಕಲ್ಯಾಣದಲ್ಲಿ ಕಕ್ಕಯ್ಯನೆಂಬ ಶರಣನಿದ್ದ. ಆತ ಕಂಕರೀ (ಚೌಡಿಕಿ) ಬಾರಿಸಿ, ಕುಣಿದು, ಶರಣರ ತತ್ವಗಳನ್ನು ಜನರ ಜೀವನದಲ್ಲಿ ಬಿತ್ತುವ ಕಾಯಕ ಕೈಗೊಂಡಿದ್ದ. ಚೌಡಿಕಿ ಬಾರಿಸಿ ಕುಣಿದು ಭಿಕ್ಷೆ ಬೇಡುವ ಕೀಳು ವೃತ್ತಿ ಕಕ್ಕಯ್ಯನಿಂದ ಕಾಯಕದ ಮಟ್ಟಕ್ಕೇರಿತು.

ಒಮ್ಮೆ ಶಿವನಿಗೆ ಕಕ್ಕಯ್ಯನನ್ನು ಪರೀಕ್ಷಿಸುವ ಮನಸ್ಸಾಯಿತು. ಸರೆ. ಜಂಗಮ ರೂಪು ಧರಿಸಿ ಶಿವ ಧರೆಗಿಳಿದ : ಓಣಿಯೊಂದರಲ್ಲಿ ಕಕ್ಕಯ್ಯ ಕಂಕರೀ ನುಡಿಸುತ್ತ ಹಾಡುತ್ತಿದ್ದ. ಅಲ್ಲಿಗೆ ಜಂಗಮರೂಪಿ ಶಿವ ಬಂದ. ಕಂಕರಿಯ ನಾದಕ್ಕೆ ಮಾರು ಹೋಗಿ ಕುಣಿಯತೊಡಗಿದ. ಆ ಜಂಗಮ ಕುಣಿಯುವುದನ್ನು ನೋಡಿ ಕಕ್ಕಯ್ಯ ಇನ್ನಷ್ಟು ಸೊಗಸಾಗಿ ಬಾರಿಸತೊಡಗಿದ. ಅದಕ್ಕೆ ತಕ್ಕಂತೆ ಶಿವ ಇನ್ನಷ್ಟು ಸೊಗಸಾಗಿ ಕುಣಿಯತೊಡಗಿದ. ಅವರಿಬ್ಬರಲ್ಲಿ ಸ್ಪರ್ಧೆಗೆ ಮೊದಲಾಯಿತು. ಕಂಕರಿಯ ಧ್ವನಿ ಮೇಲುಗೈಯಾಗುವಷ್ಟರಲ್ಲಿ ಶಿವ ವಿನುತನಗತಿಯಿಂದ ನಾಟ್ಯವಾಡುತ್ತಿದ್ದ. ಶಿವನ ನಾಟ್ಯ ಮೇಲಾಗುವುದೇನೋ ಎನ್ನುವಷ್ಟರಲ್ಲಿ ಕಂಕರೀಯ ನಾದ ಮಾಧುರ್ಯ ವಾತಾವರಣಕ್ಕೆ ಜೋಮು ಹಿಡಿಸುತ್ತಿತ್ತು.

ಹೀಗೆ ಅವರಿಬ್ಬರು ಮೂರು ದಿನ ಹಗಲು ರಾತ್ರಿ ಸ್ಪರ್ಧೆ ನಡೆಸಿದರು. ಕೊನೆಗೆ ಶಿವನೇ ಸೋತ. ಕುಣಿಯಲಾರದೆ ನೆಲಕ್ಕೊರಗಿದ. ಆಗ ಕಕ್ಕಯ್ಯ ಇನ್ನೂ ಕುಣಿಯ ಬಾ ಎಂದು ಆತನನ್ನು ಹಿಡಿದು ಎಬ್ಬಿಸಹೋದ. ಮೈಯಲ್ಲಿ ಮಿಂಚು ಹರಿದಾಡಿತು.

ಶಿವನು ತನ್ನ ನಿಜರೂಪವನ್ನು ತೋರಿಸಿದ. ಕಕ್ಕಯ್ಯನ ಭಕ್ತಿಗೆ, ಆತನ ಕಂಕರೀ ವಾದನೆಗೆ ಮೆಚ್ಚಿದ.

“ಕಕ್ಕಯ್ಯ, ಈ ಭವದ ಬಾಳು ಸಾಕು, ನಡೆ ಕೈಲಾಸಕ್ಕೆ” ಎಂದ ಶಿವ. “ಶಿವನೇ ಕೈಲಾಸಕ್ಕಂತೂ ನಾನು ಬರುವುದಿಲ್ಲ : ಇಲ್ಲಿರುವ ಸುಖ ಅಲ್ಲೆಲ್ಲಿದೆ? ಇರಲಿ, ಈಗ ನೀನು ನನ್ನ ಕಾಯಕ (ಪ್ರತಿಫಲ) ಕೊಡು; ಮೂರು ದಿನಗಳಿಂದ ನನ್ನ ದಾಸೋಹ ನಿಂತಿದೆ.” ಎಂದ ಕಕ್ಕಯ್ಯ.

“ನಾನು ಮೂರು ದಿನ ಕುಣಿದೆ. ನಿಜವಾಗಿ ನೋಡಿದರೆ ನೀನೆ ನನಗೆ ಕಾಯಕ ಕೊಡಬೇಕು” ಶಿವ ಉತ್ತರವಿತ್ತ.

ಕಕ್ಕಯ್ಯ ನುಡಿದ : “ಶಿವನೇ ನಿನ್ನ ಮಾತನ್ನು ಕೇಳಿ ಶರಣರು ನಗುವರು.”

“ಏಕೆ?”

“ನಿನಗೆ ಕಾಯಕ ಹೇಗೆ ಸಿಕ್ಕುವುದು?”

“ಏಕೆ ಸಿಕ್ಕಬಾರದು?”

“ಕಾಯಕ ಸಿಕ್ಕುವುದು ಈ ಭೂಮಿಯಲ್ಲಿ ವಾಸಿಸುವವರಿಗೆ ಮಾತ್ರ. ದೇವಲೋಕದವರಿಗೆ ಎಂದೂ ಕಾಯಕ ಸಿಕ್ಕುವುದಿಲ್ಲ. ಏಕೆಂದರೆ ಅವರೆಲ್ಲ ಸೋಮಾರಿಗಳು. ದುಡಿದವರಿಗೆ ತಕ್ಕ ಪ್ರತಿಫಲ. ನೀನು ನಿನ್ನ ಗಣಗಳು ಎಂದು ದುಡಿದಿದ್ದೀರಿ? ಎಲ್ಲಿ ದುಡಿದಿದ್ದೀರಿ? ತೋರಿಸು. ನೀನೀಗ ಕಾಯಕವೆಂಬ ಪವಿತ್ರ ಭಾವನೆಯಿಂದ ಕುಣಿಯಲಿಲ್ಲ; ನನ್ನನ್ನು ಪರೀಕ್ಷಿಸಲು ಕುಣಿದೆ. ಹೀಗಿರಲು ನಿನಗೆ ಪ್ರತಿಫಲವೇಕೆ? ಕಾಯಕ ತೆಗೆದುಕೊಂಡು ನೀನು ಯಾರಿಗಾಗಿ ದಾಸೋಹ ಮಾಡುವೆ? ನಿನಗೆ ಕಾಯಕ ಬೇಕಾಗಿದ್ದರೆ – ಈ ಭೂಮಿಯಲ್ಲಿ ವಾಸ ಮಾಡು; ನಮ್ಮೊಡನೆ ಒಂದಾಗಿರು; ಸತ್ಯಶುದ್ಧನಾಗಿ ದುಡಿ. ಆಗ ನಿನಗೆ ಕಾಯಕದ ಫಲ ದೊರಕುವುದು. ಹೊತ್ತಾಯಿತು; ದಾಸೋಹ ನಿಂತಿದೆ. ನನ್ನ ಕಾಯಕಕ್ಕೆ ಸಲ್ಲಬೇಕಾದುದನ್ನು ಬೇಗ ಕೊಡು” ಎಂದು ಕಕ್ಕಯ್ಯ.

ಶಿವ ಆತನಿಗೆ ಕಾಯಕ ಕೊಟ್ಟು ಕೈಲಾಸಕ್ಕೆ ಹೋದ. ಕಕ್ಕಯ್ಯ ದಾಸೋಹ ನಡೆಸಲು ಮನೆಗೆ ಹೋದ.

ಈ ಪವಾಡ ಏನೇ ಇರಲಿ, ಇಲ್ಲಿರುವ ತತ್ವ ಮಾತ್ರ ವಿನೂತನ, ಲೋಕ ಕಲ್ಯಾಣಕಾರಕ, ಆಪ್ಯಾಯನಕರ. ಈ ಭೂಮಿ, ಈ ಸಂಸಾರ, ಈ ಬಾಳಿನ ಬಗ್ಗೆ ಪ್ರೀತಿ, ಗೌರವಗಳು ಬೇಕು. ಅವಿಲ್ಲದಿದ್ದರೆ ಮನುಜ ಬಾಳು ದುರ್ಧರವಾಗುವುದು. ಬಾಳನ್ನೂ, ಭೂಮಿಯನ್ನೂ ಪ್ರೀತಿಸಿ ಗೌರವಿಸಲು ಶರಣರು ಜನರಿಗೆ ತಮ್ಮ ನಡೆ – ನುಡಿಯಿಂದ ಕಲಿಸಿಕೊಟ್ರೆಂಬುದು ಈ ಘಟನೆ ಸಾರಿ ಹೇಳುತ್ತದೆ. ಶಿವನಾದರೇನು? ಯಾರಾದರೇನು? ದುಡಿಯಬೇಕು. ದುಡಿದವನಿಗೆ ಪ್ರತಿಫಲ – ಎಂಬ ನೀತಿ ಆರ್ಥಿಕ ವಿಷಮತೆಗೆ ಸರಿಯಾದ ಮದ್ದಾಗಿದೆ.

ವೀರ ದೇವಮ್ಮ, ಸಿದ್ಧದೇವಮ್ಮ, ಶಿವಮಾಯಿದೇವಿ :

ಈ ಶಿವಶರಣೆಯರು ಶಿವಾನುಭವ ತತ್ವಗಳನ್ನು ಚೆನ್ನಾಗಿ ತಿಳಿದಿದ್ದರು. ಅವುಗಳನ್ನು ತಮ್ಮ ಕಾಯಕಗಳಿಂದ ಪ್ರಸಾರಗೊಳಿಸುತ್ತಿದ್ದರು. ಇವರು ಬಸವಣ್ಣನವರ ಸಮಕಾಲೀನರು, ಕಲ್ಯಾಣ ಪಟ್ಟದಲ್ಲಿಯೇ ಹುಟ್ಟಿ ಬೆಳೆದವರು.

ವೀರದೇವಮ್ಮ ಶರಣರ ವಚನಗಳನ್ನು ಭಾವಪೂರ್ಣವಾಗಿ ಓದುವುದರಲ್ಲಿ, ಹಾಡುವುದರಲ್ಲಿ ಪ್ರವೀಣೆ. ಆಕೆ ಮನೆಮನೆಗೆ ಹೋಗಿ ವಚನಗಳನ್ನು ಕೇಳುವವರ ಹೃದಯಗಳಿಗೆ ಅರ್ಥವೇದ್ಯವಾಗುವಂತೆ ಉಗ್ಗಡಿಸುತ್ತಿದ್ದಳು. ಆಕೆಗೆ “ಉಗ್ಗಡಿಸುವ ಕನ್ನೆ ವೀರಾದೇವಿ” ಎಂದು ಜನ ಕರೆಯುತ್ತಿದ್ದರು.

ಪದ್ಯಗಳನ್ನು ಹಾಡಿ ಮನೆಮನೆ ತಿರುಗಿ ಭಿಕ್ಷೆ ಬೇಡುವ ವೃತ್ತಿಗಳು ಹಲವಿವೆ. ಅಂಥ ವೃತ್ತಿಯನ್ನೇ ವೀರದೇವಮ್ಮ ಕಾಯಕವನ್ನಾಗಿ ಆರಿಸಿಕೊಂಡಿದ್ದಳು. ಈ ಪದ್ಯಗಳ ಹಾಡುಗಾರಿಕೆ ಮೋಹಕವಾಗಿರುತ್ತದೆ.

[1] ಶ್ರೀ ಎಲ್. ಬಸವರಾಜು ಅವರಿಂದ ಸಂಪಾದಿತವಾದ – “ಶಿವದಾಸ ಗೀತಾಂಜಲಿ” ನೋಡಿರಿ.

[2] ಶ್ರೀ ಬಸವಣ್ಣನವರ ಷಟ್‌ಸ್ಥಲದ ವಚನಗಳು – ವಚನ ೫೦೧.

[3] ಶಿವದಾಸ ಗೀತಾಂಜಲಿ – ಪ್ರಸ್ತಾವನೆ, ಪುಟ ೯೭.

[4] ಶ್ರೀ ಬಸವಣ್ಣನವರ ಷಟ್‌ಸ್ಥಲದ ವಚನಗಳು – ವಚನ ೨೭೮.

[5] ಶ್ರೀ ಬಸವಣ್ಣನವರ ಷಟ್‌ಸ್ಥಲದ ವಚನಗಳು – ವಚನ ೪೯೬.

[6] ಡಾ. ಗದ್ದಿಗಿರಮಠರ ಕನ್ನಡ ಜಾನಪದ ಗೀತೆಗಳು : ಹಂತಿಯ ಹಾಡು, ಪುಟ ೨೫೫.

[7] ಡಾ. ಗದ್ದಿಗಿರಮಠರ ಕನ್ನಡ ಜಾನಪದ ಗೀತೆಗಳು : ಹಂತಿಯ ಹಾಡು, ಪುಟ ೨೫೬.

[8] ಡಾ. ಗದ್ದಿಗಿರಮಠರ ಕನ್ನಡ ಜಾನಪದ ಗೀತೆಗಳು : ಹಂತಿಯ ಹಾಡು, ಪುಟ ೩೦೮.

* ಗಡಿಗೆಯೆಂದರೆ ಘಟವಾದ್ಯ.

[9] ಡಾ. ಹಳಕಟ್ಟಿ ಸಂಪಾದಿತ ಹರಿಹರನ ರಗಳೆಗಳು, ಪುಟ ೨೫೮.

[10] ಡಾ. ಹಳಕಟ್ಟಿಯವರ ಶಿವಶರಣರ ಚರಿತ್ರೆಗಳು ಭಾಗ ೩ – ಪುಟ ೧೪೪.

[11] ಡಾ. ಹಳಕಟ್ಟಿಯವರ ಶಿವಶರಣರ ಚರಿತ್ರೆಗಳು ಭಾಗ ೩ – ಪುಟ ೧೪೪.

[12] ಡಾ. ಹಳಕಟ್ಟಿಯವರ ಶಿವಶರಣರ ಚರಿತ್ರೆಗಳು ಭಾಗ ೩ – ಪುಟ ೧೪೫.

[13] ಡಾ. ಹಳಕಟ್ಟಿಯವರ ಶಿವಶರಣರ ಚರಿತ್ರೆಗಳು ಭಾಗ ೩ – ಪುಟ ೧೪೭.

[14] ಡಾ. ಗದ್ದಿಗಿಮಠರ ಕನ್ನಡ ಜಾನಪದ ಗೀತೆಗಳು : ಹಂತಿಯ ಹಾಡು, ಪುಟ ೨೯೬.

[15] ಡಾ. ಗದ್ದಿಗಿಮಠರ ಕನ್ನಡ ಜಾನಪದ ಗೀತೆಗಳು : ಹಂತಿಯ ಹಾಡು, ಪುಟ ೨೯೬.

[16] ಸರ್ವ ಪುರಾತನರ ವಚನಗಳು ತಾಳವೋಲೆ ಕಟ್ಟು.

[17] ಸರ್ವ ಪುರಾತನರ ವಚನಗಳು ತಾಳವೋಲೆ ಕಟ್ಟು.

[18] ಡಾ. ಗದ್ದಿಗಿಮಠರ ಕನ್ನಡ ಜಾನಪದ ಗೀತೆಗಳು : ಪುಟ ೨೬೦.

[19] ಡಾ. ಹಳಕಟ್ಟಿಯವರ ಶಿವಶರಣರ ಚರಿತ್ರೆಗಳು ಭಾಗ ೧ – ಪುಟ ೭೭.

[20] ಡಾ. ಹಳಕಟ್ಟಿಯವರ ಶಿವಶರಣರ ಚರಿತ್ರೆಗಳು ಭಾಗ ೧ – ಪುಟ ೭೭.