ಒಂದೇ ಧ್ಯೇಯಕ್ಕಾಗಿ, ಒಂದೇ ಕಾಲದಲ್ಲಿ, ಒಂದೇ ಸ್ಥಳದಲ್ಲಿ ಸಾವಿರಾರು ಜನ ಕೂಡಿ ಕ್ರಾಂತಿ ಮಾಡಿದುದು ಲೋಕದ ಇತಿಹಾಸದಲ್ಲಿ ಹನ್ನೆರಡನೆಯ ಶತಮಾನದ ಕಲ್ಯಾಣದ ಶರಣರನ್ನುಳಿದ ಇನ್ನೊಂದು ಉದಾಹರಣೆ ಇಲ್ಲ. ಅವರ ಕ್ರಾಂತಿ ವೈಚಾರಿಕ ಕ್ರಾಂತಿ. ಅದು ಮೇಲಿನಿಂದ ಇಳಿದು ಬಂದುದಲ್ಲ; ಮಣ್ಣಿನಿಂದ ಜಿಗಿದು ಬಂದುದು; ಅದು ಕೆಲವರಿಗಾಗಿ ಅಲ್ಲ, ಸಕಲ ಜೀವರಾಶಿಗಳಿಗಾಗಿ ಆದುದು. ನಿರ್ಮಲ ಮನಸ್ಸಿನಿಂದ, ಲೋಕಹಿತದ ಕಳಕಳಿಯಿಂದ ಶರಣರ ಜೀವನ. ತತ್ವ ಮತ್ತು ಅವರ ಆಚರಣೆಗಳನ್ನು ಹೊಕ್ಕು ನೋಡಿದರೆ – ಇಂದಿನ ಅಷ್ಟೇ ಏಕೆ ಸರ್ವಕಾಲಕ್ಕೂ – ಸರ್ವಾಂಗ ಸುಂದರ ಜೀವನಕ್ಕೆ ಬೇಕಾಗುವ ಮೌಲ್ಯಗಳು ಅವುಗಳ ಆಚರಣೆಯ ಮರ್ಮಗಳು ಅಲ್ಲಿರುವುದನ್ನು ಮನಗಾಣಬಹುದು. ಈಗ ಮನಗಾಣುವಿಕೆಗೆ ಎರಡು ರಈತಿಯಿಂದ ಆತಂಕವಾಗಿದೆ. ಒಂದು: ಅತಿ ಅಭಿಮಾನ, ಅರಿವಿರದ ದುರಾಭಿಮಾನ, ತತ್ವ ತಿಳಿಯದ ಒಣ ಅಭಿಮಾನ. ಎರಡು: ಅಭಿಮಾನಶೂನ್ಯತೆ ಜೊತೆಗೆ ದ್ವೇಷದ ಮನೋಭಾವ. ಇವುಗಳೊಡನೆ ಇನ್ನೂ ಒಂದು ಸೇರಿಕೊಂಡಿದೆ – ಶರಣರ ತತ್ವಗಳನ್ನು ತಿಳಿದವರ ನಿಷ್ಕ್ರೀಯತೆ. ಹೀಗಾಗಿ ಶರಣರ ತತ್ವಗಳು ನಮ್ಮ ಬಾಳಿಗೆ ಇಳಿಯದಾಗಿವೆ.

ಶರಣರು ತೆರೆದ ಕಣ್ಣಿನಿಂದ ಸಮಗ್ರ ಜೀವನವನ್ನು ನೋಡಿದರು. ಅದರಲ್ಲಿದ್ದ ಲೋಪ – ದೋಷಗಳನ್ನು ಕಂಡರು; ಅದಕ್ಕೆ ತಕ್ಕ ಚಿಕಿತ್ಸೆಯನ್ನು ಕೈಗೊಂಡರು. ಇಡಿಯಾಗಿ ಬದುಕನ್ನು ಸತ್ವಯುತವಾಗಿ, ಶುದ್ಧವಾಗಿ, ಸುಂದರವಾಗಿ ಮಾಡಿ ಏಕಕಾಲಕ್ಕೆ ಲೌಕಿಕ ಪಾರಮಾರ್ಥಗಳೆರಡನ್ನೂ ಬದುಕುವ ತತ್ವಗಳನ್ನು – ಹೊಸತತ್ವಗಳನ್ನು ಆವಿಷ್ಕಾರಗೊಳಿಸಿದರು. ತಮ್ಮ ದರ್ಶನಕ್ಕೆ ನಿಲುಕಿದುದನ್ನು ಆಚರಣೆಯಲ್ಲಿ ತಂದು ಚೊಕ್ಕ ನಾಣ್ಯ ಮಾಡಿ ಅದು ಸರ್ವಕಾಲದಲ್ಲಿಯೂ ಚಲಾವಣೆಯಲ್ಲಿರುವಂತೆ ಮಾಡಿದರು. ಅನುಭಾವ, ಕಾಯಕ, ದಾಸೋಹ ಮುಂತಾದ ವಿನೂತನ ಮೌಲ್ಯಗಳನ್ನು ಜನಜೀವನಕ್ಕೆ ಇತ್ತರು. ಭಕ್ತಿ, ಜ್ಞಾನ, ಕರ್ಮ ಇವುಗಳಿಗೆ ಹೊಸತನವಿತ್ತು. ಅರ್ಥವ್ಯಾಪ್ತಿ ತಂದುಕೊಟ್ಟು ಅವುಗಳ ಸಮನ್ವಯವನ್ನು ಸಾಧಿಸಿದರು – ನೂತನ ರೀತಿಯಲ್ಲಿ.

ಹೀಗೆ ವಿನೂತನ ತತ್ವಗಳನ್ನು ಆವಿಷ್ಕಾರಗೊಳಿಸಿ, ಮಹಾಮಣಿಹವನ್ನು ಪೂರಯಿಸಿದ ಶರಣರ ಕಾರ್ಯವ್ಯಾಪ್ತಿಗೆ ‘ಸಹಕಾರ’ ಜೀವ – ಜೀವಾಳವಾಗಿತ್ತು. ಒಬ್ಬ ಇನ್ನೊಬ್ಬನಿಗೆ, ಇನ್ನೊಬ್ಬ ಮತ್ತೊಬ್ಬನಿಗೆ, ವ್ಯಷ್ಟಿ ಸಮಷ್ಟಿಗೆ, ಸಮಷ್ಟಿ ವಷ್ಟಿಗೆ, ಸರ್ವರು ಸರ್ವರ ಹಿತಕ್ಕಾಗಿ, ನೀನೂ ಬದುಕು, ಇತರರನ್ನೂ ಬದುಕಗೊಡು – ಮುಂತಾದ ಇಂದಿನ ಜಗತ್ತಿನ ಘೋಷಣೆಗಳು ಎಂಟನೂರು ವರ್ಷಗಳ ಹಿಂದೆಯೇ ಶರಣರ ಜೀವನದಲ್ಲಿ ತತ್ವಗಳಾಗಿ ಅನುಷ್ಠಾನಕ್ಕೆ ಬಂದಿದ್ದವು. ಸಂಘ, ಸಂಗ, ಸಮುದಾಯ ಮುಂತಾದವುಗಳಿಗೆ ಶರಣರು ಬಹು ಮಹತ್ವವನ್ನು ಕೊಟ್ಟಿದ್ದಾರೆ. ಕೂಡಿ – ಅದೂ ಭಾವ ಭಕ್ತಿ ವಿಚಾರ ವಿಶ್ವಾಸಗಳಿಂದ ಕೂಡಿ ಮಾಡುವುದರಲ್ಲಿ ಮಹಾಶಕ್ತಿ ಅಡಗಿದೆ. ಇದರಿಂದ ಅದ್ಭುತಗಳು, ಲೋಕಹಿತಗಳನ್ನು ಸುಲಭದಲ್ಲಿ ಸಾಧಿಸಬಹುದು. ಶರಣರು ಇದನ್ನು ಮಾಡಿದರು.

ಸಂಗದಿಂದಲ್ಲದೆ ಅಗನಿ ಹುಟ್ಟಿದು
ಸಂಗದಿಂದಲ್ಲದೆ ಮೊಳಕೆ ಮೈದೋರದು.”
ಕೂಡಲಸಂಗಮ ದೇವರನರಿವೊಡೆ ಶರಣರ ಸಂಗವೇ
ಮೊದಲು

ಮುಂತಾದ ಮಾತುಗಳು ಸಹಕಾರದ ಮೇಲ್ಮಯನ್ನು ಸಾಂಗಿಕ ಶಕ್ತಿಯ ಹಿರಿಮೆಯನ್ನು ಸಾರುತ್ತವೆ.

ಕಲ್ಯಾಣದಲ್ಲಿ ಕ್ರಾಂತಿಯ ಕಿಡಿ ಹೊತ್ತಿಕೊಂಡಾಗ ಅನಿರೀಕ್ಷಿತವಾಗಿ ಬಸವಣ್ಣನವರು ಕಲ್ಯಾಣವನ್ನು ಬಿಟ್ಟುಹೋಗುವ ಪ್ರಸಂಗ ಬಂತು. ಆಗ ಅಣ್ಣನವರು ಚೆನ್ನಬಸವಣ್ಣನವರನ್ನು ಕರೆದು ಹೇಳಿದ ವಚನ ಹೃದ್ಭೇದಕವಾಗಿದ್ದರೂ ಶರಣರ ವಿಶಾಲವಾದ ಕಾರ್ಯಕ್ಷೇತ್ರಕ್ಕೆ ಸಹಕಾರ ತಳಹದಿಯಾಗಿತ್ತೆಂಬುದು, ಸಾಂಘಿಕ ಶಕ್ತಿಮೂಲವಾಗಿತ್ತೆಂಬುದು ಅದರಿಂದ ತಿಳಿದುಬರುತ್ತದೆ.

ನಾವು ಬಂದ ಕಾರ್ಯಕ್ಕೆ ನೀವು ಬಂದಿರಿ;
ನೀವು ಬಂದ ಕಾರ್ಯಕ್ಕೆ ನಾನು ಬಂದೆ;
ನಾನೂ ನೀವೂ ಬಂದ ಕಾರ್ಯಕ್ಕೆ ಬಂದಾತನಲ್ಲಮಪ್ರಭುದೇವರು.
ಮುಂದೆ ಕೆಲವು ದಿನಕ್ಕೆ ಕಲ್ಯಾಣವೆಂಬುದು ಪ್ರಣತೆಯಾಯಿತ್ತು;
ನಾನು ತೈಲವಾದೆನು; ನೀವು ಬತ್ತಿಯಾದಿರಿ;
ಪ್ರಭುದೇವರು ಜ್ಯೋತಿಯಾದರು.
ಪ್ರಣತಿ ಒಡೆಯಿತ್ತು; ತೈಲವರತಿತ್ತು, ಜ್ಯೋತಿ ಬಯಲಾಯಿತು.”[1]

ಬಸವ, ಅಲ್ಲಮ, ಚೆನ್ನಬಸವ ಈ ಮೂವರ ಧ್ಯೇಯ ಒಂದು. ಆ ಧ್ಯೇಯ ಸಾಧನೆಗೆ ಅವರಲ್ಲಿಯ ಸಹಕಾರ ಅನುಪಮವಾದುದು. ಈ ವಚನದಲ್ಲಿ ಬರುವ ರೂಪಕ ಬಹು ಅರ್ಥಪೂರ್ಣ. ಪ್ರಣತೆ, ಎಣ್ಣೆ, ಬತ್ತಿ, ಜ್ಯೋತಿ – ಇವುಗಳಲ್ಲಿ ಸಹಕಾರವಿಲ್ಲದಿದ್ದರೆ ಬೆಳಕು ಹುಟ್ಟುವುದು ಅಸಾಧ್ಯ. ಇದರಂತೆ ಶರಣರು ಒಟ್ಟುಗೂಡಿ ಸಹಕಾರದಿಂದ ಜೀವಿಸಿ ಲೋಕಕ್ಕೆ ಬೆಳಕು ಕೊಟ್ಟರು. ಇಲ್ಲಿ ಇನ್ನೊಂದು ಮಾತನ್ನೂ ನೆನಯಬಹುದು; ಬಸವನಿಗೆ ಸಹಾಯಕರಾಗಿ ಕೈಲಾಸದಿಂದ ಪ್ರಮಥಗಣಂಗಳೆಲ್ಲಬ ಭುವಿಗೆ ಬರುತ್ತಾರೆ ಎಂದು ಚಾಮರಸ ಕವಿ ಹೇಳುತ್ತಾನೆ.

ಸಹಕಾರವೆಂದರೆ ಒಬ್ಬರಿಗೊಬ್ಬರು ನೆರವು ನೀಡುವುದು; ಸರ್ವರು ಸರ್ವರಿಗೆ ಸಹಾಯವಾಗುವುದು; ಕೂಡಿ ಬಾಳುವುದು. ಈ ಸಹಕಾರವನ್ನು ಶರಣರು ಕೇವಲ ಲೌಕಿಕ ದೃಷ್ಟಿಯಿಂದ ಒಂದೇ ಕಂಡಿಲ್ಲ; ಪಾರಲೌಕಿಕ ದೃಷ್ಟಿಯಿಂದಲೂ ಕಂಡಿದ್ದಾರೆ. ಶರಣರ ಎಲ್ಲ ಕೆಲಸಗಳಲ್ಲಿಯೂ ಲೌಕಿಕ ಪರಮಾರ್ಥ ಎರಡರ ದೃಷ್ಟಿಯಿದೆ. ಅಲ್ಲದೆ ಅವರು ಲೌಕಿಕ ಮತ್ತು ಪಾರಮಾರ್ಥ ಈ ಎರಡನ್ನು ಬೇರೆ ಬೇರೆ ಎಂದು ಭಾವಿಸಿಯೇ ಇಲ್ಲ. ಎರಡನ್ನು ಸಮನ್ವಯಗೊಳಿಸಿ ಒಂದೇ ಮಾಡಿ ಬಾಳಿದರು. ಇಂಥ ಸಮನ್ವಯಕ್ಕೆ ಸಹಕಾರ ಜೀವನ ಜೀವಾಳವಾಗಿತ್ತು ಎಂಬುದನ್ನು ಮರೆಯಲಾಗದು.

ಶರಣರು ಕೇವಲ ಹೊಸ ತತ್ವಗಳನ್ನು ಹೇಳಿಯಷ್ಟೇ ಹೋಗಲಿಲ್ಲ; ಅವುಗಳನ್ನು ಆಚರಣೆಯಲ್ಲಿ ತಂದು ತೋರಿಸಿದರು – ಅದೂ ಒಂದು ಹೊಸ ಸಮಾಜವನ್ನು ಕಟ್ಟಿ, ಅದರ ದ್ವಾರ ಆಚರಿಸಿ ತೋರಿಸಿದ್ದರು.

ಶರಣರು ಕಟ್ಟಿದ ಸಮಾಜ ಒಂದು ಸುಭದ್ರ ಸಶಕ್ತ ಸುಂದರ ಸಮಾಜ. ಕಾಯಕ ಆ ಸಮಾಜದ ನೆಲೆಗಟ್ಟಾಗಿದೆ. ಭಕ್ತಿ, ಜ್ಞಾನ, ದಾಸೋಹ, ಸಾಮರಸ್ಯ ಮುಂತಾದವು ಆ ಸಮಾಜ ಸೌಧದ ವಿವಿಧ ಅಂತಸ್ತುಗಳು. ಸಹಕಾರ – ಮಗ್ಗದಲ್ಲಿ ಎಲ್ಲಕಡೆ ಓಡಾಡುವ ದಾರದ ಕಂಡಿಯಂತೆ – ಸಮಾಜದ ಸರ್ವ ಅಂಗಗಳಲ್ಲಿ ಓಡಾಡಿ ಒಂದನ್ನೊಂದು ಬೆಸೆವ ಜೀವನಾಡಿಯಾಗಿದೆ.

ಒಂದು ಸಮಾಜ ಸುಭದ್ರವಾಗಿ ಜೀವಿಸಬೇಕಾದರೆ ಅದರ ಆರ್ಥಿಕ ಸ್ಥಿತಿ ಚೆನ್ನಾಗಿರಬೇಕು. ಆರ್ಥಿಕ ಸ್ಥಿತಿ ಚೆನ್ನಾಗಿರಬೇಕಾದರೆ ಸಮಾಜದ ಪ್ರತಿಯೊಬ್ಬ ವ್ಯಕ್ತಿ ಕಳಕಳಿಯಿಂದ ದುಡಿಯಬೇಕು. ಇಷ್ಟೇ ಅಲ್ಲ, ಆ ಸಮಾಜದಲ್ಲಿ ಸರ್ವ ವಿಧದ ಕಾಯಕಗಳು ಬಳಕೆಯಲ್ಲಿರಬೇಕು. ಪ್ರತಿಯೊಬ್ಬನೂ ತನ್ನ ಕಾಯಕವನ್ನು ಸಮಾಜದ, ಲೋಕದ ಹಿತದೃಷ್ಟಿಯಿಂದ ಮಾಡಬೇಕು; ಸತ್ಯಶುದ್ಧನಾಗಿ ಪ್ರಾಮಾಣಿಕವಾಗಿ ದುಡಿಯಬೇಕು. ಸರ್ವವಿಧದ ಕಾಯಕವುಳ್ಳ ಸಮಾಜದ ಸರ್ವ ಸದಸ್ಯರಲ್ಲಿ ಸಹಕಾರ ಭಾವನೆಯಿದ್ದರೆ ಮಾತ್ರ ಸರ್ವ ಕಾಯಕಗಳು ಸುಸೂತ್ರವಾಗಿ ಸಾಗಿ ಸಮಾಜ ಬಲಗೊಳ್ಳುವುದು. ವೈಯಕ್ತಿಕ ಲಾಭ ಹಾನಿಗಳ ದೃಷ್ಟಿ ಇಲ್ಲಿ ಗೌಣ. ಶರಣರು ನಿರ್ಮಿಸಿದ ಸಮಾಜದಲ್ಲಿ ಇಂದಿಗೂ ಸಮಗಾರನಿಂದ ಹಿಡಿದು ಆಚಾರ್ಯರವರೆಗೆ ಕಾಯಕವುಳ್ಳವರಾಗಿದ್ದಾರೆ. ಇವರಲ್ಲಿ ಇವರ ಕಾಯಕಗಳಲ್ಲಿ, ಅಂತಸ್ತುಗಳಲ್ಲಿ – ಇಂದು ತುಸು ಭೇದ ಕಂಡರೂ ಭೇದ ಇರಲಿಲ್ಲ; ಇರಬಾರದು.

ಕಾಯಕ ಸಹಕಾರ ಜೀವನಕ್ಕೆ ಮೂಲವಾದುದ. ದುಡಿಮೆ ಇಲ್ಲದಿರೆ ಅರ್ಥವಿಲ್ಲ; ಅರ್ಥವಿಲ್ಲದಿರೆ ಬದುಕಿಲ್ಲ. ಕಾಯಕದಲ್ಲಿ ಶರಣರು ಸಹಕಾರ ಕಲ್ಪಿಸಿ ಸಮಾಜವನ್ನು ಊರ್ಜಿತ ಸ್ಥಿತಿಗೆ ತಂದರು. ಇಂದಿನ ಜೀವನದಲ್ಲಿ ಕಾಯಕದಲ್ಲಿ ಸಹಕಾರ ಲೋಪವಾಗಿದೆ. ಲಾಭ ಬರುವ ಒಂದು ಉದ್ಯೋಗವಿದ್ದರೆ ಇನ್ನಿತರರೂ ಅದನ್ನೇ ಮಾಡಿ ಸರ್ವರಿಗೂ ಸಮಾಜಕ್ಕೂ ಹಾನಿಯನ್ನುಣ್ಣಿಸುತ್ತಾರೆ. ಇಲ್ಲಿ ಮೂಲಭೂತವಾದ ಒಂದು ದೋಷವಿದೆ. ಅದು ಸ್ವಂತದ ಲಾಭದ ಸೃಷ್ಟಿ. ಆದುದರಿಂದಲೇ ಕಾಯಕದಲ್ಲಿ ಏರುಪೇರಾಗಿ, ಮೇಲುಕೀಳಾಗಿ ಸಹಕಾರವಿಲ್ಲದೆ ಎಲ್ಲರೂ ಹಾನಿಗೊಳಗಾಗುವ ಸ್ಥಿತಿಯಿದೆ. ಮೇಲಾಗಿ ಸತ್ಯ ಶುದ್ಧ ಪ್ರಾಮಾಣಿಕತೆಯ ಕೊರತೆಯೂ ವಿಪುಲವಾಗಿದೆ. ಶರಣರ ಸಮಾಜದಲ್ಲಿ ಸ್ವಂತದ ಲಾಭದ ದೃಷ್ಟಿ ಇಲ್ಲವೇ ಇಲ್ಲ. ಅವರ ಕೇಂದ್ರ ಸಮಾಜವಾಗಿದೆ; ಸಮುದಾಯ ಲಾಭದ ದೃಷ್ಟಿ ಅವರದು. ಅಂತೆಯೇ ಆಗ ಸರ್ವರೂ ಸಮಾಜ ಸರ್ವಶಕ್ತವಾಗುವಂತೆ ಮೇಲು – ಕೀಳಿನ ಭಾಔನೆಯಿಲ್ಲದೆ, ಸ್ವಂತ ಲಾಭದ ಆಸೆಯಿಲ್ಲದೆ ಸರ್ವ ಜೀವರ ಲೇಸಿಗೆ ಕಾಯಕ ಮಾಡುತ್ತಿದ್ದರು; ಆದುದರಿಂದ ಅವರ ಕಾಯಕಗಳು ಸಹಕಾರದಿಂದ ನಡೆಯುತ್ತಿದ್ದವು.

ಭಕ್ತಿ ದಾಸೋಹ ಇವು ಸಹಕಾರಕ್ಕೆ ಇನ್ನೊಂದು ಹೆಸರು. ಭಕ್ತಿ ಎಂದರೆ ಕೇವಲ ವಿನಯ ವಿಶ್ವಾಸವೊಂದೇ ಅಲ್ಲ; ಶರಣರ ದೃಷ್ಟಿಯಲ್ಲಿ ಅದು ಜ್ಞಾನದಿಂದ ಕೂಡಿ, ಕ್ರಿಯೆಯಿಂದ ನಡೆದು, ದಾಸೋಹದಲ್ಲಿ ವಿಸ್ತಾರವಾಗುತ್ತದೆ.

ಮಾತಿನ ಮಾತಿನಲಪ್ಪುದೇ ಭಕ್ತಿ?
ಮಾಡಿ ತನು ಸವೆಯದನ್ನಕ್ಕ, ಮನ ಸವೆಯದನ್ನಕ್ಕ,
ಧನ ಸವೆಯದನ್ನಕ್ಕ ಅಪ್ಪುದೇ ಭಕ್ತಿ?”

ಭಕ್ತಿ ವಿಶೇಷವ ಮಾಡುವರೆ ಹತ್ತು ಬೆರಳುಗಳುಂಟು;
ಹಾಸಿ ದುಡಿದರೆ ತನಗುಂಟು ತನ್ನ ಪ್ರಥಮರಿಗುಂಟು….”

ಅಣ್ಣನವರ ಈ ವಚನಗಳು ಭಕ್ತಿ ಎಂದರೆ ಕಾಯಕವೆಂದೇ ಹೇಳುತ್ತವೆ.

ವಂಚನೆಯಿಲ್ಲದಿಪ್ಪುದೇ ಭಕ್ತಿ….”
ಹರಿವ ನದಿಯ ತೆರನ ಹೋಲಬಲ್ಲರೆ ಭಕ್ತಿ….”
ಕಾಗೆಯೊಂದಗುಳ ಕಂಡರೆ ಕರೆಯದೇ ತನ್ನ ಬಳಗವನು?…
…..
ಶಿವ ಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದರೆ ಕಾಗೆಕೋಳಿಯಿಂದ ಕರಕಷ್ಟ….”
ನಾನು ಆರಂಬವ ಮಾಡುವೆನಯ್ಯಾ ಶಿವಪೂಜೆಗೆಂದು….”

ಅಣ್ಣನವರ ಈ ವಚನಗಳು ದುಡಿದುದನ್ನು ಒಬ್ಬನೇ ಅನುಭೋಗಿಸಬೇಡ, ಗುರು ಲಿಂಗಜಂಗಮಕ್ಕೂ ನೀಡು ಎಂದು ಸಾರುತ್ತವೆ. ಇಲ್ಲಿ ಭಕ್ತಿ ದಾಸೋಹವಾಯಿತು.

ದಾಸೋಹ ಸಹಕಾರವನ್ನೇ ಉಸಿರಾಡಿಸುತ್ತದೆ. ಎಲ್ಲರ ಸಹಕಾರವಿದ್ದರೆ ಸಮಾಜದ ಬದುಕು. ಸಹಕಾರವೆಂದರೆ ಬಾಯಿಮಾತಲ್ಲ. ದುಡಿಮೆಯಿಂದ ಕೊಡುಗೆಯಿಂದ ಸಹಕಾರ ಬೇಕು. ಭಕ್ತಿ, ದಾಸೋಹಗಳಿಂದ ಅವರೊಗೆ ಬೇಕಾದುದು ಇವರು, ಇವರಿಗೆ ಬೇಕಾದುದು ಅವರು ಪಡೆಯಬಹುದು.

ಶರಣರ ಸಮಾಜದಲ್ಲಿ ಗುರು – ಲಿಂಗ – ಜಂಗಮರು ಪ್ರಮುಖ ಸ್ಥಾನದಲ್ಲಿರುವವರು. ಆದರೆ ಅವರೆಲ್ಲರೂ ಸಹಕಾರದ ತತ್ವದಿಂದ ದುಡಿವವರು; ಸತ್ಯ ಶುದ್ಧ ಕಾಯಕವುಳ್ಳವರು. ಪರರ ಹಂಗಿನಲ್ಲಿ ಬದುಕುವವರಲ್ಲ. ದೇವರಾಗಲಿ ಮನುಷ್ಯನಾಗಲಿ ಯಾರೇ ಆಗಲಿ ಶರಣರ ಸಮಾಜದಲ್ಲಿ ಕಾಯಕ ಮಾಡಿಯೇ ಬದುಕಬೇಕು. ಇಲ್ಲದಿರೆ ಅಲ್ಲಿ ಅವರಿಗೆ ಸ್ಥಾನವಿಲ್ಲ.

ಗುರುವಾದಡೂ ಕಾಯಕದಿಂದಲೇ ಜೀವನ್ಮುಕ್ತಿ
ಲಿಂಗವಾದಡೂ ಕಾಯಕದಿಂದಲೇ ಶಿಲೆಯ ಕುಲ ಹರಿವುದು
ಜಂಗಮವಾದಡೂ ಕಾಯಕದಿಂದಲೇ ವೇಷದ ಪಾಶ ಹರಿವುದು
ಇದು ಚೆನ್ನಬಸವಣ್ಣ ಪ್ರಿಯ ಚಂದೇಶ್ವರಲಿಂಗದ ಅರಿವು[2]

ನುಲಿಯ ಚಂದಯ್ಯಗಳ ಈ ವಚನ ಗುರು – ಲಿಂಗ – ಜಂಗಮರು ಕಾಯಕ ಮಾಡಲೇಬೇಕು, ಆದರಿಂದಲೇ ಅವರಿಗೆ ಸದ್ಗತಿ ಎಂದು ಸಾರುತ್ತದೆ.

ತತ್ವಗಳನ್ನು ಆವಿಷ್ಕಾರಗೊಳಿಸುವ ಅರಿವಿನ ಆಗರವಾದ ಗುರು, ತತ್ವದ ಸಾಕಾರವಾದ ಲಿಂಗ, ತತ್ವಗಳ ಪ್ರಸಾರಕನಾದ ಜಂಗಮ – ಇವರೆಲ್ಲರೂ ಕಾಯಕನಿರತರು. ಇವರು ಮಾಡುವುದೆಲ್ಲ ಸತ್ಯಶುದ್ಧಕಾಯಕ. ಇವರಿಗೆ ಭಕ್ತ ಮಾಡುವ ನೇಮ ನೀಡುವ ನೇಮ ಭಿಕ್ಷೆಯಲ್ಲ; ಅದು ಅವರ ಕಾಯಕದ ಪ್ರತಿಫಲ. ತತ್ವದ ದುಡಿಮೆ ಇವರದು; ಅರ್ಥದ ದುಡಿಮೆ ಉಳಿದವರದು. ಇವೆರಡರ ಅಮನ್ವಯಕ್ಕೆ ಸಹಕಾರವಿಲ್ಲದಿದ್ದರೆ ನಡೆದೀತೆ? ಇಲ್ಲಿ ಇನ್ನೊಂದು ಸೂಕ್ಷ್ಮವೂ ಇದೆ. ಅಂತೆಯೇ ಅದು ಸತ್ಯಶುದ್ಧವೆನಿಸುತ್ತದೆ; ಕಾಯಕವೇ ಕೈಲಾಸವೆನಿಸುತ್ತದೆ.

ತತ್ವವಿದರ, ಆಚಾರ್ಯರ ಮತ್ತು ಉತ್ಪಾದಕರ ನಡುವೆ ಸಹಕಾರ ಇಲ್ಲದೆ ಹೋದರೆ ನಾನಾರೀತಿಯ ಅನರ್ಥಗಳುಂಟಾಗುವವು. ನಮ್ಮ ಇಂದಿನ ಬದುಕು ಇದಕ್ಕೆ ಸರಿಯಾದ ಉದಾಹರಣೆ. ಯೋಜನೆ ಮಾಡುವವರಲ್ಲಿ, ಯೋಜನೆ ಕಾರ್ಯರೂಪಕ್ಕೆ ತರುವವರಲ್ಲಿ, ಯೋಜನೆಗಾಗಿ ದುಡಿವವರಲ್ಲಿ ಸಹಕಾರವಿದೆಹೋಗಿ ನಾವಿಂದು ಅರ್ಥದ ಅವನತಿಯ ಜೊತೆಗೆ ನೈತಿಕ ಅಧಃಪತನವನ್ನು ಅನುಭವಿಸುತ್ತಿರುವೆವು. ವೇದ ಓದುವವ, ದೇಶ ರಕ್ಷಿಸುವವ, ವ್ಯಾಪಾರ ಮಾಡುವವ, ಕೃಷಿಕರ್ಮಗೈಯುವವ – ಇವರಲ್ಲಿ ಸಹಕಾರವಿಲ್ಲದಿದ್ದುದರಿಂದ ಜಾತಿಗಳಾದವು, ಮೇಲುಕೀಳುಗಳಾದವು, ಮಾನವತೆ ಲೋಪವಾಯ್ತು. ಈ ಕಾರಣದಿಂದ ನಮ್ಮ ದೇಶ ಎಂದೂ ಆರ್ಥಿಕ ಸುಭದ್ರತೆಯನ್ನು ಕಾಣಲಿಲ್ಲ. ಅಂತೆಯೇ ಶರಣರು ಕಾಯಕಗಳಲ್ಲಿ ಸಹಕಾರ ಸಾಧಿಸಿದರು. ಕಾಕವೊಂದರಿಂದಲೇ ಜಾತಿ, ಮತ, ಪಂಥ, ವರ್ಗ, ವರ್ಣಗಳನ್ನು ಅಳಿಸಿದರು; ಸರ್ವಸಮಾನತೆ ತಂದರು. “ದೇವಸಹಿತ ಮನೆಗೆ ಬಂದರೆ ಕಾಯಕವಾವುದೆಂದು ಬೆಸಗೊಳ್ಳದ” ನಿರ‍್ಮಲ ಸಹೃದಯ ಸಮಾನತೆಯನ್ನು ಜನತೆಯಲ್ಲಿ ಬಳಕೆಗೆ ತಂದರು. ಕಾಯಕಗಳಲ್ಲಿ ಒಂದನ್ನೊಂದು ಬಿಗಿವ ತಂತುವಾದ – ಸಹಕಾರವಿಲ್ಲದಿದ್ದರೆ ಸಮಾನತೆಯನ್ನಾಗಲೀ ಆರ್ಥಿಕೋನ್ನತಿಯನ್ನಾಗಲಿ ಸಾಧಿಸುವುದು ಎಂದಿಗೂ ಸಾಧ್ಯವಿಲ್ಲ.

ಶರಣರ ‘ಸಹಕಾರ’ ಅನಂತಮುಖವಾದುದು; ಅದು ನಮ್ಮ ಅವಯವಗಳ ಕಾರ್ಯಗಳಲ್ಲಿ ನೆರವಾಗುತ್ತದೆ. ತ್ರಿವಿಧಪೂಜೆ, ತ್ರಿವಿಧ ದಾಸೋಹಗಳಲ್ಲಿ ಉಸಿರಾಡಿಸುತ್ತದೆ. ಅಷ್ಟಾವರಣ, ಪಂಚಾಚಾರ, ಷಟ್‌ಸ್ಥಲಗಳಲ್ಲಿ ಸಂಚರಿಸುತ್ತದೆ. ಇಷ್ಟೇ ಅಲ್ಲ, ಲೌಕಿಕ ಪಾರಮಾರ್ಥಿಕ ಎರಡನ್ನೂ ಏಕಗೊಳಿಸುವಲ್ಲಿ ಪಾತ್ರವಾಡುತ್ತದೆ; ಕೊನೆಗೆ ಅದು ಸಾಮರಸ್ಯದ ಮಟ್ಟಕ್ಕೆ ಏರಿ ನಿಲ್ಲುತ್ತದೆ.

ಕಣ್ಣು, ಕಿವಿ, ಮೂಗು, ನಾಲಗೆ, ತೊಗಲು – ಈ ಐದು ಲಿಂಗಗಳು, ನೋಡುವ, ನುಡಿವ, ಮೂಸುವ, ಕೇಳುವ, ಗೈಯುವ – ಕೆಲಸಗಳಲ್ಲಿ ಸಹಕಾರವನ್ನು ಶರಣರು ತಾತ್ವಿಕವಾಗಿ ಕಲ್ಪಿಸಿದ್ದಾರೆ. ಇಂದ್ರಿಯಗಳಲ್ಲಿ ಈ ಸಹಕಾರ ಸಾಧ್ಯವಾದಾಗ ಮಾತ್ರ ಲೌಕಿಕ ಜೀವನದಲ್ಲಿ ಸರ್ವ ವಿಧದ ಗಳಿಕೆ; ಅಲ್ಲದೆ ಆಧ್ಯಾತ್ಮಿಕದಲ್ಲಿ ಮುನ್ನಡೆ. ಇದರಂತೆ ಅಂತಃಕರಣ ಚತುಷ್ಟಯಗಳಲ್ಲಿಯೂ ಸಹಕಾರವುಂಟು. ಇಷ್ಟ ಪ್ರಾಣ ಭಾಔಲಿಂಗಗಳ ಪೂಜೆಯಂತೂ ಒಂದಕ್ಕೊಂದರ ಸಹಕಾರದಿಂದಲೇ ಸಾಧ್ಯ. ಸ್ಥೂಲದಿಂದ ಸೂಕ್ಷ್ಮಕ್ಕೆ ಏರಿ, ಸೂಕ್ಷ್ಮದಿಂದ ಕಾರಣಕ್ಕೆ ಮುಟ್ಟಲು ತ್ರಿವಿಧಪೂಜೆಯ ರಹಸ್ಯದ, ತತ್ವಮನದ ಸಹಕಾರ ಅವಶ್ಯಕ. ಅಷ್ಟೇ ಅಲ್ಲ, ಕಾರಣದಿಂದ ಸಾಮರಸ್ಯ ಸಾಧಿಸಲೂ ಅತಿಸೂಕ್ಷ್ಮವಾದ ಸಾಮರಸ್ಯ ಬೇಕು.

ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷಿ ಹಾಗೂ ಮಂತ್ರ – ಈ ಅಷ್ಟಾವರಣಗಳಲ್ಲಿ ಮಿಡಿವ ಸಹಕಾರದ ಅರಿವು ಭಕ್ತನಿಗಿರುತ್ತದೆ. ಈ ತಾತ್ವಿಕ ಸಹಕಾರ ಭಕ್ತಿಯ ಮಾರ್ಗದಲ್ಲಿ ಬೆಳಕನ್ನು ಚೆಲ್ಲುತ್ತದೆ. ಬಹಿರಂಗದ ಸಹಕಾರ ಒಂದೇ ಇದ್ದರೆ ಸಾಲದು. ಅಂತರಂಗದ ತತ್ವದ ಸಹಕಾರ ಬೇಕೆಬೇಕು. ಬುದ್ಧಿ ಹೃದಯಗಳ ಸಾಮರಸ್ಯವಂತೂ ಜೀವನೋನ್ನತಿಗೆ ಅತ್ಯಾವಶ್ಯಕ. ಈ ಸಾಮರಸ್ಯ ಬರಬೇಕಾದರೆ ಅವೆರಡರಲ್ಲಿ ಸಹಕಾರದ ಭಾವ ಬೆಳೆಯಲೇಬೇಕು. ವ್ಯಕ್ತಿಗೆ ಮತ್ತು ಸಮಾಜಕ್ಕೆ ಇದರಿಂದ ಕಲ್ಯಾಣವಿದೆಯೆಂಬ ಭಾವ ಸಹಕಾರದ ಜೀವ; ಇಂಥ ಭಾವ ಬೆಳೆಯುವವರೆಗೆ ಬುದ್ಧಿ ಹೃದಯಗಳೇ ಆಗಲಿ, ಏನೇ ಆಗಲಿ ಅವುಗಳಲ್ಲಿ ಸಾಮರಸ್ಯ ಸಾಧ್ಯವಾಗುವುದಿಲ್ಲ. ಶರಣರ ಸಮಾಜದಲ್ಲಿ ವ್ಯಕ್ತಿ – ಚ್ಯಕ್ತಿಯಲ್ಲಿ, ವದಯಷ್ಠಿ – ಸಮಷ್ಠಿಯಲ್ಲಿ, ತತ್ವ – ಆಚರಣೆಯಲ್ಲಿ, ಇಹಪರದಲ್ಲಿ ಸಾಮರಸ್ಯ ಸಾಧಿಸುವ ಮುಖ್ಯ ಗುರಿಯಿದೆ; ಈ ಗುರಿಗೆ ಬೆಳಕಿನ ದಾರಿಯೇ ಸಹಕಾರ.

ಶರಣರು ಜೀವನದಲ್ಲಿ ಸಹಕಾದಿಂದ ಕೆಟ್ಟುದನ್ನೂ ಒಳ್ಳೆಯದನ್ನಾಗಿಸಿದರು; ಬಾಳಿಗೆ ಸಹಕಾರಿಯಾಗುವಂತೆ ಮಾಡಿದರು. ಉದಾಹರಣೆಗೆ ಅರಿಷಡ್ವರ್ಗಗಳನ್ನೇ ತೆಗೆದುಕೊಳ್ಳಬಹುದು. ಅವು ಮೂಲತಃ ಕೆಟ್ಟವು. ಆದರೆ ಮಣ್ಣಿನ ಮಕ್ಕಳಾದ ನಮಗೆ ಅವು ಬೇಕು; ಅರಿವಿಲ್ಲದೆ ಬದುಕು ನಿರ್ವೀರ್ಯವಾಗುತ್ತದೆ; ನಿರ್ಜೀವವಾಘುತ್ತದೆ; ಅರ್ಥಹೀನವಾಗುತ್ತದೆ. ಶರಣರು ಅವುಗಳನ್ನು ಬಯ್ಯುವುದಿಲ್ಲ, ದುರುವುದಿಲ್ಲ, ಹತ್ತಿರಕ್ಕೆ ಕರೆಯುತ್ತಾರೆ. ತಮ್ಮ ಸಹಕಾರಭಾವದ ಸಂಜೀವಿನಿಯಿಂದ ಅವುಗಳನ್ನು ಉದಾತ್ತೀಕರಿಸುತ್ತಾರೆ. ಅವುಗಳನ್ನಪ್ಪಿಕೊಳ್ಳುತ್ತಾರೆ. ಅವು ಅವರಿಗೆ ಲಿಂಗಾಂಗ ಸಾಮರಸ್ಯದತ್ತ ಸಾಗಲು ಶಕ್ತಿಯೊದಗಿಸುತ್ತವೆ – ಸಹಕಾರದ ತನಿಭಾವನೆಯಿಂದ.

…. …. …. ….
ಶಿವಭಕ್ತಿಯುಳ್ಳವಂಗೆ,
ಕಾಮಬೇಕು, ಕ್ರೋಧಬೇಕು
…. …. …. ….
…. …. …. ….
ಬೇಕೆಂಬುದಕಾವ್ಯ ಗುಣ:
ಕಾಮ ಬೇಕು ಲಿಂಗದಲ್ಲಿ;
ಕ್ರೋಧ ಬೇಕು ಕರಣಂಗಳಲ್ಲಿ;
ಲೋಭ ಬೇಕು ಪಾದೋದಕ ಪ್ರಸಾದದಲ್ಲಿ;
ಮೋಹ ಬೇಕು ಗುರುಲಿಂಗಜಂಗಮದಲ್ಲಿ;
ಮದ ಬೇಕು ಶಿವಾಚಾರದಿಂದ ಘನವಿಲ್ಲವೆಂಬಲ್ಲಿ;
ಮತ್ಸರ ಬೇಕು ಹೊನ್ನು ಹೆಣ್ಣು ಮಣ್ಣಿನಲ್ಲಿ
ಇಂತಿ ಷಡ್ಗುಣವಿರಬೇಕು.[3]

ಬಸವಣ್ಣನವರ ಭಕ್ತಿಯ ಭಾಷೆ, ಚೆನ್ನ ಬಸವಣ್ಣನರ ಆಚಾರಗಳು, ಇನ್ನಿತರ ಶರಣ ಶರಣೆಯರ ನೀತಿ ಮತ್ತು ಶೀಲ ಸಂಪಾದನೆಯ ವಚನಗಳಲ್ಲಿ ಸಹಕಾರ ತತ್ವ ತಾನೇ ತಾನಾಗಿದೆ.

ಇದು ಬಸವಣ್ಣನವರ ಭಾಷೆ:

“….ಸ್ವಚರಿತ್ರದ ಭಾಷೆಯನುವನು ವಂಚಿಸಿದ ಭಾಷೆ[4]
ಮೃಡನನಾದಡೆಯೊಂದು ಬಾರಿಗೆ
ಕಡಗಿ ಬೇಡದ ಭಾಷೆಯೇನಾ
ದಡೆ ಬಯಸಿದೊಡವೆಗಳನಡಿಯಿಡದೀವುದು ಭಾಷೆ[5]
ಅಚಲಿತ ದಾಸೋಹವನವಿರತಂ ಮಾಡುವುದು ಭಾಷೆ[6]
ಹರಶರಣ ಪರತತ್ವಭಾವದಿ
ಬೆರಸಿಚಲಿಸುವ ಭಾಷೆಯೆಂದುಂ[7]

“…. …. …. ….
ಸಕಲ ಶಿವಶರಣರ್ಗೆ ಸಂತೋಷವಂ ಪಟ್ಟಿಸುವುದೇ ಆರನೆಯ ಆಚಾರ.
…. …. …. ….
ಸಕಲ ಜೀವಿಗಳಿಗೆ ಹಿತವ ಬಯಸುವುದೇ ಹದಿನಾಲ್ಕನೆಯ ಆಚಾರ.
ಸರ್ವರಿಗೆ ಹಿತವ ಮಾಡುವುದೇ ಹದಿನೈದನೆಯ ಆಚಾರ.
…. …. …. ….
ತನ್ನ ನಿಜವಿಚಾರವ ತಾ ಮರೆಯದೆ ಷಟ್ಸ್ಥಲದವರಿಗೆ ಅರುಹ
ತನ್ನಂತೆ ಮಾಡುವುದೇ ನಾಲ್ವತೊಂಬತ್ತನೆಯ ಆಚಾರ[8]

ಶೀಲ ಸಂಪಾದನೆಯ ವಚನಗಳಂತೂ ಸಹಕಾರವನ್ನು ಸ್ಪಷ್ಟವಾಗಿ ಸಾರುತ್ತವೆ. ಶೀಲವೆಂದರೆ ಸಹಕಾರ, ಶೀಲವೆಂದರೆ ಪರಬ್ರಹ್ಮ ಎಂದು ಹೇಳುತ್ತಾರೆ ವಚನಕಾರರು. ಅಂತರಂಗ – ಬಹಿರಂಗ, ವ್ಯಷ್ಟಿ – ಸಮಷ್ಟಿ ಇವುಗಳಲ್ಲಿ ಶೀಲ ಸಂಯೋಜಿಸಿ, ಸಹಕಾರ ಉಂಟುಮಾಡಿ ಆತ್ಯಂತಿಕ ಗುರಿಯನ್ನು ಮುಟ್ಟುವ ಮಾರ್ಗ ಶೀಲಸಂಪಾದನೆಯ ವಚನಗಳಲ್ಲಿ ಕಂಡುಬರುತ್ತದೆ. ಅಕ್ಕಮ್ಮನ ಈ ವಚನದಲ್ಲಿ ಇದನ್ನು ಮನಗಾಣಬಹುದು:

“…. …. …. ….
ಲಿಂಗವಂತ ಲಿಂಗ ಮುಂತಾಗಿ ನಡೆವ ಶೀಲವೆಂತುಟೆಂದಡೆ
ಆಸ್ತಿ, ಕೃಷಿ, ವಾಣಿಜ್ಯ, ವಾಚಕ ಮುಂತಾದ ಕಾಯಕಂಗಳ ವಿವರನವರಿತು
ಪಾಪ ಪುಣ್ಯ ಬಹುಕಾಯಕಮಂ ಕಂಡು, ತನ್ನ ವಂಶದ ಸ್ವಜಾತಿಯಂ
ಬಿಟ್ಟು,
ಶಿವಭಕ್ತರೆ ಬಂಧುಗಳಾಗಿ ಶಿವಾಧಿಕವ್ಯ ದಿಕ್ಕಾಗಿ ಕೊಂಡ ಗಮನಕ್ಕೆ
ಕಾಯಲಿಂಗ ಮನವರಿಕೆಯಾಗಿ, ತ್ರಿಕರಣ ಶುದ್ಧಾತ್ಮನಾಗಿ
ಅಂಗಕ್ಕೆ ಆಚಾರ, ಮನಕ್ಕೆ ಅರಿವು, ಅರಿವಿಂಗೆ ಜ್ಞಾನ
ನಿರ್ಧಾರವಾಗಿ ಕರಿಗೊಂಡುದೆ ವ್ರತ.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಎಡದೆರಪಿಲ್ಲದ ನೇಮ[9]

ಬಸವಣ್ಣ ಕೈಗೊಂಡ ಮಣಿಹದಲ್ಲಿ ಕೊನೆಯವರಿಗೂ ಸಹಕರಿಸಿ ನಿಲ್ಲಬೇಕು; ಅದುವೇ ನೇಮ, ಶೀಲ ಎನ್ನುತ್ತಾಳೆ ಏಲೇಶ್ವರದ ಅಕ್ಕಮ್ಮ ತನ್ನ ಇನ್ನೊಂದು ವಚನದಲ್ಲಿ. ಇಲ್ಲಿ ಬಂದಿರುವ “ಭಾವದ ಶೀಲ” ಎಂಬ ಮಾತು ಅಚ್ಚ ಸಹಕಾರವನ್ನೇ ಹೇಳುತ್ತದೆ. ಶೀವೆಂದರೆ ನಡೆ ಆಚಾರ. ಭಾವವೆಂದರೆ ವಿಚಾರ, ಭಕ್ತಿ. ವಿಚಾರದ ಅಥವಾ ಭಕ್ತಿಯ ನಡೆ ಎಂದರೆ ಸಹಕಾರವೇ. ವ್ಯಷ್ಟಿಯಿಂದ ಸಮಷ್ಟಿಯವರೆಗೆ, ಸಾಂತದಿಂದ ಅನಂತದವರೆಗೆ ಶಿವಶರಣರಲ್ಲಿದ್ದ ಸಹಕಾರವನ್ನು ಅಕ್ಕಮ್ಮನ ಈ ವಚನ ಸ್ಪಷ್ಟಪಡಿಸುತ್ತದೆ:

ಏಳುನೂರೆಪ್ಪತ್ತು ಅಮರಗಣಂಗಳಿಗೆಲ್ಲಕ್ಕೂ ತಮ್ಮ ತಮ್ಮ ಭಾವದ ಶೀಲ.
ಗಂಗೆ ವಾಳುಕ ಸಮ ರುದ್ರರೆಲ್ಲಕ್ಕೂ ತಮ್ಮ ತಮ್ಮ ಮನಕ್ಕೆ ಸಂದ ನೇಮ.
ಮರ್ತ್ಯಕ್ಕೆ ಬಂದ ಪ್ರಮಥರೆಲ್ಲರೂ ತಾವು ಬಂದುದನರಿದು
ಮುಂದಿನ ಪಯಣಕ್ಕೆ ಎಂದೆಂಬುದ ಕಂಡು,
ಬಸವಣ್ಣನ ಮಣಿಹ ಎಂದಿಂಗೆ ಸಲೆಸಂದು ನಿಂದಿಹ ವೇಳೆಯನರಿವನ್ನಕ್ಕ
ತಾವು ಕೊಂಡ ವ್ರತದಲ್ಲಿ ಭಯಭಂಗವಿಲ್ಲದೆ ನಿಂದಿರಬೇಕು;
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದೊಳಗಹನ್ನಕ್ಕ[10]

ಇಂದಿನ ಕಾಲದಲ್ಲಿ ಸಹಕಾರ ಸಂಘ, ಸಹಕಾರ ಸಂಸ್ಥೆ, ಸಹಕಾರ ಬ್ಯಾಂಕು ಹೀಗೆ ನಾನಾ ವಿಧವಾಗಿ ಸಹಕಾರದ ಜಾಲವೇ ಹಬ್ಬಿದೆ. ಶಿವಶರಣರೂ ಸಹಕಾರ ಸಂಘಗಳನ್ನು ಕಟ್ಟಿದ್ದರು. ಸಹಕಾರ ಬ್ಯಾಂಕುಗಳನ್ನು ಸ್ಥಾಪಿಸಿದ್ದರು. ಆದರೆ ಅವುಗಳ ರೂಪ ಬೇರೆಯಾಗಿತ್ತು. ಇಂದಿನ ಸಹಕಾರ ಲೌಕಿಕವೊಂದನ್ನೇ ಸಾಧಿಸುತ್ತಿದ್ದರೆ, ಅಂದಿನ ಶರಣರ ಸಹಕಾರ ಲೌಕಿಕ – ಪಾರಮಾರ್ಥ ಎರಡನ್ನೂ ಸಾಧಿಸುತ್ತಿತ್ತು.

ಆರ್ಥಿಕವಾಗಿ ಶರಣರು ಸಹಕಾರ ಸಂಘಗಳನ್ನು ಕಟ್ಟಿದ್ದು ಕಾವ್ಯಗಳ ಮೂಲಕವಾಗಲೀ ವಚನಗಳ ಮೂಲಕವಾಗಲೀ ತಿಳಿದುಬಂದಿಲ್ಲ. ಅವರು ಕಟ್ಟಿದ್ದರೂ ಕಟ್ಟಿರಬೇಕು. ದುಡಿಮೆಗೆ ದಾಸೋಹಕ್ಕೆ ಎಲ್ಲಿಲ್ಲದ ಮಹತ್ವ ಕೊಟ್ಟವರು ಅರ್ಥದ ಕೂಡಿಕೆ ಮತ್ತು ಅದರ ಬಳಕೆಗೆ ಒಂದು ಸುವ್ಯವಸ್ಥೆ ಮಾಡಿರಲೇಬೇಕು. ಅರ್ಥ ಮಂತ್ರಿಯಾದ ಬಸವಣ್ಣನವರ ಮಂತ್ರಿ ಜೀವನವನ್ನು ಕುರಿತು ಸಂಶೋಧನೆಯಾದಾಗ ಬಹುಶಃ ಶರಣರು ಸಹಕಾರ ಆರ್ಥಿಕ ರಂಗದಲ್ಲಿ ಆಡಿದ ಪಾತ್ರ ಬಯಲಿಗೆ ಬಂದೀತು.

ಅನುಭವಮಂಟಪ ಶಿವಶರಣರ ಕೇಂದ್ರ ಸಹಕಾರ ಸಂಘದಂತಿತ್ತು; ಅದನ್ನು ಕೇಂದ್ರ ಬ್ಯಾಂಕೆಂದರೂ ಸರಿ. ಅದರ ಮೂಲ ಬಂಡವಾಳ ಭಕ್ತಿ, ಜ್ಞಾನ, ಕರ್ಮ, ವೈಚಾರಿಕತೆ, ಶರಣರು ತಮ್ಮ ಸಾಧನೆಯಿಂದ ಅನುಭಾವ, ಭಕ್ತಿ, ಜ್ಞಾನ, ವಿಚಾರ ಮುಂತಾದ ಮೌಲ್ಯಗಳನ್ನು ಗಳಿಸಿ ಅನುಭವ ಮಂಟಪದಲ್ಲಿ ಒಟ್ಟು ಕೂಡಿಸುತ್ತಿದ್ದರು; ಅಲ್ಲಿಂದ ಆ ಮೌಲ್ಯಗಳನ್ನು ವಚನಗಳ ರೂಪದಲ್ಲಿ ರಾಷ್ಟ್ರದ ತುಂಬ ಪ್ರಸಾರಗೊಳಿಸುತ್ತಿದ್ದರು. ಬೇಕಾದವರು ಅಲ್ಲಿಗೆ ಬಂದು ಅವುಗಳನ್ನು ಪಡೆಯಬಹುದಾಗಿತ್ತು. ತಮ್ಮ ಭಕ್ತಿ, ಅನುಭಾವಗಳನ್ನು ಅಲ್ಲಿ ಸೇರಿಸಬಹುದಾಗಿತ್ತು.

ಅನುಭವ ಮಂಟಪ ಸಹಕಾರದ ಕೇಂದ್ರವಾದರೆ ನಾಡಿನ ತುಂಬ ಇದ್ದ ಮಠಗಳು ಉಪಕೇಂದ್ರಗಳಂತಿದ್ದವು. ಸಾವಿರಗಟ್ಟಲೆ ನಾಡಿನಲ್ಲಿ ಮಠಗಳಿದ್ದವು. ಸಮಾಜದವರು ತಮ್ಮ ದುಡಿಮೆಯ ಒಂದಿಷ್ಟು ಭಾಗವನ್ನು ದಾಸೋಹದ ರೂಪದಲ್ಲಿ ಈ ಮಠಗಳಿಗೆ ಕೊಡುತ್ತಿದ್ದರು. (ಇದೇ ಶೇರು ಬಂಡವಾಳ). ಹೀಗೆ ಕೊಡುವುದು ಭಿಕ್ಷೆ ಎನಿಸುತ್ತಿರಲಿಲ್ಲ. ಅದೊಂದು ಬಗೆಯ ಅರ್ಪಣೆ ಮಾಡುವ ಅಧಿಕಾರ. ಇದನ್ನು ಪಡೆಯುವವರು ಕೈಯೊಡ್ಡಿ ಬೇಡುವವರಾಗಿರಲಿಲ್ಲ. ಅವರು ಮಠಾಧಿಪತಿಗಳೂ, ಯೋಗಿಗಳೂ, ವಿದ್ಯಾನಿಧಿಗಳೂ, ಧನ್ವಂತರಿಗಳೂ ಆಗಿರುತ್ತಿದ್ದರು. ಸಮಾಜ ಕೊಟ್ಟುದನ್ನು ಅವರು ಸಮಾಜಕ್ಕಾಗಿಯೇ ಸದ್ವಿನಿಯೋಗ ಮಾಡುತ್ತಿದ್ದರು. ಮಠಗಳು ಸಾರ್ವತ್ರಿಕ ಶಿಕ್ಷಣಾಲಯಗಳಾಗಿದ್ದವು; ಪ್ರೌಢ ವ್ಯಾಸಂಗದ ಕೇಂದ್ರಗಳಾಗಿದ್ದವು; ಔಷಧಾಲಯಗಳಾಗಿದ್ದವು; ಸಮಾಜದ ನ್ಯಾಯಾಲಯಗಳಾಗಿದ್ದವು; ದೂರ ದೂರ ದೇಶಗಳಿಗೆ ತತ್ವಪ್ರಚಾರಕ್ಕೆ ಜಂಗಮರನ್ನು ಕಳಿಸುವ ಜಂಗಮಧಾಮಗಳಾಗಿದ್ದವು. ಭಕ್ತ – ಮಹೇಶ ಇವರ ಸಹಕಾರದ ಯಂತ್ರವಾದ ಮಠಗಳು ಸಮಾಜದ ಸರ್ವೋನ್ನತಿಗೆ ಶ್ರಮಿಸುತ್ತಿದ್ದವು. ಇಂದಿಗೂ ಲಿಂಗವಂತ ಮಠಗಳು ಈ ಕೆಲಸವನ್ನು ನಾಡಿನಲ್ಲಿ ನಡೆಸಿವೆ.

ಭಾವ, ಭಕ್ತಿ, ವಿಚಾರ, ಜ್ಞಾನ, ಹೃದಯ, ಬುದ್ಧಿ, ವೈರಾಗ್ಯ, ಅಂತರಂಗ, ಬಹಿರಂಗ ಇವುಗಳ ಜೊತೆಗೆ ಆರ್ಥಿಕವಾಗಿಯೂ ಜೀವಂತ ಸಹಕಾರವುಳ್ಳವರಾದುದರಿಂದ ಶರಣರು ಲೋಕದಲ್ಲಿ ಯಾರೂ ಸಾಧಿಸದ ಕ್ರಾಂತಿಯನ್ನು ಸಾಧಿಸಿದರು. ಆ ಕ್ರಾಂತಿ, ಆ ವಿಚಾರ, ಆ ಸಹಕಾರ – ಎಲ್ಲವನ್ನೂ ಶುದ್ಧ ಬುದ್ಧಿಯಿಂದ ಶುದ್ಧ ಹೃದಯದಿಂದ ತಿಳಿದು ಆಚರಿಸುವುದು ನಮ್ಮನ್ನೇ ಕೂಡಿದೆ. ಇದಕ್ಕೂ ನಮ್ಮ ಕರಣಗಳಲ್ಲಿ ಅದರ ಜೊತೆಗೆ ನಮ್ಮ ನಮ್ಮಲ್ಲಿ ಸಹಕಾರ ಭಾವನೇ ಬೇಕು.

[1] ಚೆನ್ನಪ್ಪ ಉತ್ತಂಗಿ : ಅನುಭವ ಮಂಟಪದ ಐತಿಹಾಸಿಕ ಕಥೆ – ಪುಟ ೧೧೦.

[2] ಹಳಕಟ್ಟಿ ಸಂಪಾದಿತ : ವಚನಶಾಸ್ತ್ರ ಭಾಗ , ಪುಟ ೩೬, ವಚನ ೧೭೦.

[3] ಡಾ. ಆರ್.ಸಿ.ಹಿರೇಮಠ ಸಂಪಾದಿತ : ಚೆನ್ನಬಸವಣ್ಣನವರ ವಚನಗಳು, ವಚನ ೮೭.

[4] ಡಾ.ಆರ್.ಸಿ.ಹಿರೇಮಠ ಸಂಪಾದಿತ : ಬಸವಪುರಾಣ ಸಂಧಿ ೬, ಪದ್ಯ ೧.

[5] ಅದೇ ಸಂಧಿ ೬, ಪದ್ಯ ೨.

[6] ಅದೇ ಸಂಧಿ ೬, ಪದ್ಯ ೩.

[7] ಅದೇ ಸಂಧಿ ೬, ಪದ್ಯ ೫.

[8] ಡಾ. ಆರ್.ಸಿ.ಹಿರೇಮಠ ಸಂಪಾದಿತ : ಚೆನ್ನಬಸವಣ್ಣನವರ ವಚನಗಳು, ವಚನ ೧೧೨.

[9] ಡಾ.ಆರ್.ಸಿ.ಹಿರೇಮಠ ಸಂಪಾದಿತ : ಶಿವಶರಣೆಯರ ವಚನಗಳು. ಪುಟ ೪೮೧, ವಚನ ೪೭.

[10] ಅದೇ ಪುಟ ೪೭೧, ವಚನ ೨೭.