ವಚನಕಾರರು ಅನೇಕ ‘ಹೊಸತು’ಗಳನ್ನು ಸೃಷ್ಟಿಸಿದರು. ಬದುಕಿಗೆ ಹೊಸ ಆಯಾಮಗಳನ್ನು ಹೊಸ ದಿಗಂತಗಳನ್ನು ತೆರೆದರು. ಇದರಂತೆ ಕಾಯಕ, ಭಕ್ತಿ, ದಾಸೋಹ, ಅನುಭಾವ ಮುಂತಾದ ಶಬ್ದಗಳಿಗೆ ಹೊಸ ಅರ್ಥವನ್ನು, ವ್ಯಾಪ್ತಿಯನ್ನು ಕಲ್ಪಿಸಿ ಅವು ಸುಲಭದಲ್ಲಿ ಅನುಷ್ಠಾನಕ್ಕೆ ಬರುವಂತೆ ಮಾಡಿದರು. ಈಗ ಭಕ್ತಿಯೆಂಬುದೊಂದನ್ನೇ ಕುರಿತು ವಿಚಾರಿಸುವಾ.

ಭಕ್ತಿಯೆಂದರೆ ನಿಷ್ಠೆ, ನಂಬುಗೆ, ಪ್ರೀತಿ ಮುಂತಾದ ಅರ್ಥಗಳು ಇವೆ. ಇವು ಮನುಷ್ಯನಿಗೆ ಬೇಕಾದುವೇ. ಆದರೆ ವಚನಕಾರರು ಭಕ್ತಿಗೆ ದುಡಿಮೆಯೆಂಬ ಅರ್ಥವ್ಯಾಪ್ತಿಯನ್ನು ಕೊಟ್ಟುದು ಸೋಜಿಗವೆನಿಸಿದರೂ ಸಹಜವಾದುದು. ಮತ್ತು ಸತ್ಯವಾದುದು. ಕಾಯಕವೆಂದರೆ ದುಡಿಮೆ. ಕಾಯ ಸವೆಸಿ, ಶ್ರಮವಹಿಸಿ, ಬೆವರು ಸುರಿಸಿ ಮಾಡುವ ಕ್ರಿಯೆ. ಅಂದರೆ ಕಾಯಕವೆಂಬುದು ದುಡಿಮೆಯೇ ಆದಾಗ ಭಕ್ತಿಗೆ ದುಡಿಮೆಯೆಂದು ಹೇಳುವಲ್ಲಿ ಏನರ್ಥವಿದೆ ಎಂದು ಮೂಗು ಮುರಿಯುವವರೇನು ಕಡಿಮೆಯಿಲ್ಲ. ಸಹಸ್ರಾರು ವರ್ಷಗಳಿಂದ ಜಿಡ್ಡು ಗಟ್ಟಿಹೋದ ಬದುಕನ್ನು ಅರ್ಥಪೂರ್ಣ ಮಾಡದ ಭಕ್ತಿಗೆ ಅವರು ಕ್ರಿಯೆಯ ದೀಕ್ಷೆಯನ್ನು ಕೊಟ್ಟರು. ಕಾಯಕ ಮತ್ತು ದಾಸೋಹ ಇವೆರಡನ್ನು ಭಕ್ತಿಯಲ್ಲಿ ಸಮಾವೇಶಗೊಳಿಸಿದರು.

ಸತ್ಯಶುದ್ಧವಾಗಿ ಜೀವನವನ್ನು ಪ್ರೀತಿಸುತ್ತ ದುಡಿಯುವುದು ಮತ್ತು ದುಡಿಮೆಯ ಫಲದಲ್ಲಿ ಒಂದು ಭಾಗವನ್ನು ಸಮಾಜಕ್ಕೆ ಕೊಡುವುದು. ಇದಿಷ್ಟು ಕಾಯಕ, ಭಕ್ತಿ, ದಾಸೋಹಗಳಲ್ಲಿ ಅಡಗಿದೆ. ಬಸವಣ್ಣನವರು ಭಕ್ತಿಯ ಬಗ್ಗೆ ಹೇಳಿದ, ಅದರಂತೆ ನಡೆದ ಅವರ ವಚನಗಳು ಬಹಳ ಅರ್ಥಪೂರ್ಣವಾಗಿವೆ. ಅವರ ವಚನಗಳನ್ನೇ ನಾನಿಲ್ಲಿ ಬಳಸಿಕೊಳ್ಳುತ್ತಿದ್ದೇನೆ.

“ಮಾತಿನ ಮಾತಿನಲ್ಲಪ್ಪುದೇ ಭಕ್ತಿ? ಮಾಡಿ ತನು ಸವೆಯದನ್ನಕ್ಕ, ಮನ ಸವೆಯದನ್ನಕ್ಕ, ಧನ ಸವೆಯದನ್ನಕ್ಕ ಅಪ್ಪುದೇ ಭಕ್ತಿ? ಕೂಡಲ ಸಂಗಮದೇವಾ ಎಲುದೋರೆ ಸರಸವಾಡುವನು ಸೈರಿಸದನ್ನಕ್ಕ ಅಪ್ಪುದೇ ಭಕ್ತಿ? ಮಾತಿನ ಮಾತು ಎಂದರೆ ವೇದಶಾಸ್ತ್ರಗಳ ಮಾತು ಎಂದರ್ಥ. ಅವು ಬರಿಯ ಮಾತುಗಳೇ ಹೊರತಾಗಿ ಕ್ರಿಯೆಗಳಲ್ಲ. ಇಂಥ ಬರಿಯ ಮಾತಿನ ಭಕ್ತಿಯಿಂದ ಯಾರಿಗೆ ಲಾಭ? ಭಕ್ತನಿಗೂ ಇಲ್ಲ. ಸಮಾಜಕ್ಕೂ ಇಲ್ಲ; ಎಂದರೆ ದುಡಿ. ತನು ಸವೆಸಿ ದುಡಿ, ಮನ ಸವೆಸಿ ದುಡಿ, ಧನ ಸವೆಸಿ ದುಡಿ. ಆಮೇಲೆ ಅದರ ಫಲವನ್ನು ತನಗೂ ಸಮಾಜಕ್ಕೂ ಸವೆಸು ಎಂಬ ವಿಶಿಷ್ಟ ಅರ್ಥ ಈ ವಚನದಲ್ಲಿದೆ.

ಪ್ರೇಮ, ನಿಷ್ಠೆ, ನಂಬುಗೆ, ಛಲ, ಜೀವನಕ್ಕೆ ಬೇಕೆ ಬೇಕು. ಇವುಗಳಿಲ್ಲದೆ ಜೀವನ ಅರ್ಥ ಪೂರ್ಣವಾಗುವುದಿಲ್ಲ. ಇವುಗಳನ್ನು ಮೈಗುಡಿಸಿಕೊಂಡೇ ಭಕ್ತಿ ಮಾಡಬೇಕು ಎಂದರೆ ದುಡಿಯಬೇಕು.

ಕಾಯಕದ ಫಲ ದುಡಿದವನಿಗೊಂದೇ ಅಲ್ಲ. ಅದರ ಒಂದು ಭಾಗ ಸಮಾಜಕ್ಕೆ ಮುಟ್ಟಲೇಬೇಕು. ಅಂದರೆ ದುಡಿಮೆ ವ್ಯಕ್ತಿಯದ್ದಾಗಿದ್ದರೂ ಭಕ್ತಿಯ ದೃಷ್ಟಿಯಲ್ಲಿ ನೋಡಿದಾಗ ಅದು ಸಮಷ್ಟಿಯದೇ ಆಗಿರುತ್ತದೆ. ಬಸವಣ್ಣನವರ ಈ ವಚನವನ್ನು ಅವಲೋಕಿಸುವಾ, “ಭಕ್ತಿ ವಿಶೇಷವ ಮಾಡುವರೆ ಹತ್ತು ಬೆರಳುಗಳುಂಟು: ಹಾಸಿ ದುಡಿದರೆ ತನಗುಂಟು ತನ್ನ ಪ್ರಥಮರಿಗುಂಟು. ಮಾರಿ ತಂದೆಗಳಂತೆ ಎನಗೇಕಹುದಯ್ಯ? |ರತ್ನದ ಸಂಕಲೆಯನಿಕ್ಕಿ ಕಾಡಿಹೆ, ಕೂಡಲ ಸಂಗಮದೇವಾ | ಶವಧೋ ! ಶಿವಧೋ!!”

ಮೈಮುರಿದು ದುಡಿದರೆ ಅಂದರೆ ಭಕ್ತಿ ಮಾಡಿದರೆ ತನಗೂ ಮತ್ತು ಪ್ರಥಮರಿಗೂ ಬದುಕಲು ಬೇಕಾದ ಸೌಕರ್ಯಗಳು ದೊರಕುತ್ತವೆ. ಬಸವಣ್ಣನಿಗೆ ಬಿಜ್ಜಳನ ಆಸ್ಥಾನದಲ್ಲಿ ಪ್ರಧಾನಿಯಾದ ಕಾಯಕ ರತ್ನದ ಬೇಡಿಕೆಯಾಗಿದೆಯಂತೆ. ಕಾಡಿನಿಂದ ಕಟ್ಟಿಗೆ ಕಡಿದು, ತಂದು ಮಾರಿ ಜೀವಿಸುವ ಮೋಳಿಗೆಯ ಮಾರಯ್ಯನಂಥ ಕಾಯಕ ತನ್ನದಲ್ಲವಲ್ಲ ಎಂಬ ಹಳಹಳಿ ಬಸವಣ್ಣನಿಗೆ. ಪ್ರಮುಖವಾಗಿ ಕಾಯ ಬಳಲಿಸಿ, ಬೆವರು ಸುರಿಸಿ ದುಡಿಯುವುದೇ ಭಕ್ತಿ ಮತ್ತು ಕಾಯಕ. ಬುದ್ದಿಜೀವಿಗಳಾಗಿ ದುಡಿಯುವ ವಚನಕಾರರು ದಿನದಲ್ಲಿ ಒಂದಷ್ಟಾದರೂ ದೇಹಬಳಲಿಸಿ ಕಾಯಕ ಮಾಡುತ್ತಿದ್ದರೆಂದು ವಚನಶಾಸ್ತ್ರವನ್ನು ಆಳವಾಗಿ ಅಭ್ಯಾಸ ಮಾಡಿದವರ ಅನಿಸಿಕೆಗಳಿವೆ.

ದಾಸೋಹವೆಂದರೆ ಈ ಮೊದಲೇ ಹೇಳಿದಂತೆ ಶ್ರಮದ ಫಲದ ಒಂದು ಭಾಗವನ್ನು ಸಮಾಜಕ್ಕೆ ನೀಡುವುದು (ಶ್ರಮದ ಫಲವೊಂದೇ ಅಲ್ಲ ಬುದ್ಧಿ, ವಿದ್ಯೆ, ಮಾರ್ಗದರ್ಶನ ಮುಂತಾದ ಏನೆಲ್ಲವನ್ನೂ ಸಮಾಜಕ್ಕೆ ಧಾರೆಯೆರೆಯುವದೂ ದಾಸೋಹದಲ್ಲಿ ಸಮಾವೇಶವಾಗುತ್ತದೆ.)

ಬಸವಣ್ಣನವರ ಈ ವಚನ ದಾಸೋಹದ ವ್ಯಾಖ್ಯೆಯನ್ನು ಸಮರ್ಥವಾಗಿ ಮಾಡುತ್ತದೆ. “ಕಾಗೆಯೊಂದಗುಳಕಂಡರೆ ಕರೆಯದೇ ತನ್ನ ಬಳಗವನ್ನು? ಕೋಳಿಯೊಂದು ಗುಟುಕು ಕಂಡರೆ ಕೂಗಿ ಕರೆಯದೇ ತನ್ನ ಕುಲವೆಲ್ಲವ? ಶಿವಭಕ್ತನಾಗಿ ಭಕ್ತಿ ಪಕ್ಷವಿಲ್ಲದಿದ್ದರೆ ಕಾಗೆಕೋಳಿಯಿಂದ ಕರಕಷ್ಟ ಕೂಡಲ ಸಂಗಮದೇವಾ |”

ಭಕ್ತಿಯ ವ್ಯಾಪ್ತಿಯನ್ನು ಬಸವಣ್ಣ ತನ್ನ ಒಂದು ವಚನದಲ್ಲಿ ಬಹಳ ಅರ್ಥವತ್ತಾಗಿ ಹೇಳಿದ್ದಾನೆ. ಭಕ್ತಿ ಎಂದೂ ವ್ಯಕ್ತಿ ನಿಷ್ಠವಾದುದಲ್ಲ. ಹಾಗಾದರೆ ಅದು ಸ್ವಾರ್ಥದ ಮಡುವಾಗುತ್ತದೆ. ಸಕಲ ಕಾಲಕ್ಕೂ ಭಕ್ತಿ ಸಮಷ್ಠಿಯಾಗಬೇಕೆಂಬುದೇ ವಚನಕಾರರ ಸ್ಪಷ್ಟವಾದ ನಿಲುವು. “ಹರಿವ ನದಿಯ ತೆರನ ಹೋಲಬಲ್ಲರೆ ಭಕ್ತಿ, ಕೂಡಿ ಸಯಿಧಾನವ ನೀಡಬಲ್ಲರೆ ಭಕ್ತಿ; ನೀಡಿ ಮಿಕ್ಕುದ ಕಾಯ್ದು ಕೊಂಡಿರಬಲ್ಲರೆ ಕೂಡಿಕೊಂಡಿಪ್ಪ ನಮ್ಮ ಕೂಡಲ ಸಂಗಮದೇವಾ” ಹರಿಯುವ ನದಿಯಂತೆ ಭಕ್ತಿ ಇರಬೇಕೆಂಬ ಹೋಲಿಕೆ ಹಿಗ್ಗಿಸಿದಷ್ಟೂ ಅರ್ಥವಾಗುತ್ತದೆ. ಪ್ರಶಾಂತವಾಗಿ ನದಿ ಹರಿಯುತ್ತಿರುತ್ತದೆ. ಇದು ಅದರ ನಿರಂತರ ಕ್ರಿಯೆ; ಕಾಯಕ. ಈ ಹರಿಯುವ ನದಿಯಿಂದ ಸಕಲ ಜೀವರಾಶಿಗಳಿಗೆ ಲಾಭವುಂಟು. ನೀರಡಿಸಿದವರಿಗೆ, ಕೃಷಿಕನಿಗೆ, ಬಟ್ಟೆಕೊಳೆ ತೊಳೆಯುವವನಿಗೆ ಹೀಗೆ ಈ ಲಾಭದ ಎಣಿಕೆ ಅನಂತವಾಗುತ್ತದೆ. ಕೊನೆಗೆ ನದಿ ತನ್ನ ಗಂತ್ಯವಾದ ಸಮುದ್ರಕ್ಕೆ ಸೇರುತ್ತದೆ.

ಭಕ್ತಿ ಮತ್ತು ಭಕ್ತನನ್ನು ಕುರಿತು ಇನ್ನೂ ಒಂದೆರಡು ಮಾತುಗಳನ್ನು ಬಸವಣ್ಣನಿಂದ ಕೇಳಬೇಕು. “ಭಕ್ತಿಯೆಂಬುದ ಮಾಡಬಾರದು, ಗರಗಸದಂತೆ ಹೋಗುತ್ತ ಕೊಯ್ವುದು, ಬರುತ್ತ ಕೊಯ್ವುದು” ಎಂದರೆ ಮೈಮನಸ್ಸುಗಳ ಶುದ್ಧೀಕರಣ ಇದರಿಂದ ಆಗುತ್ತದೆ. ವೀರನಾದವನಿಗೆ ಮಾತ್ರ ಇಂಥ ಶುದ್ಧೀಕರಣ ಮಾಡಿಕೊಳ್ಳುವುದು ಸಾಧ್ಯ. ಅವನೇ ಭಕ್ತ. ಇನ್ನೊಂದು ವಚನದಲ್ಲಿ, “ಓಡಾವಾತ ಲೆಂಕನಲ್ಲ, ಬೇಡುವಾತ ಭಕ್ತನಲ್ಲ” ಎನ್ನುತ್ತಾನೆ ಬಸವಣ್ಣ. ಭಕ್ತನಾದವನು ದುಡಿದು ವೀರನಾಗಿಯೇ ಜೀವಿಸಬೇಕು. “ಅರ್ಥ ಪ್ರಾಣ ಅಭಿಮಾನದಲ್ಲಿ ವಂಚನೆ ಇಲ್ಲದಿರುವುದೇ ಭಕ್ತಿ. ಇದ್ದುದ ವಂಚನೆ ಮಾಡದಿಪ್ಪುದೇ ಭಕ್ತಿ” ಅಸಂಗ್ರಹ ಭಕ್ತಿಯ ಜೀವ ಜೀವಾಳ, “ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ ಇಂದಿಂಗೆ ನಾಳಿಂಗೆ ಬೇಕೆಂದೆನಾದರೆ ನಿಮ್ಮಾಣೆ.” “ಧನವನಿರಿಸಬಾರದು. ಇರಿಸಿದರೆ ಭವಬಪ್ಪುದು ತಪ್ಪದು”. ಅದನ್ನು ಸಮಾಜಕ್ಕೆ ಸವಿಸಲೇಬೇಕು. ………..ನಮ್ಮ ಕೂಡಲ ಸಂಗನ ಶರಣರಿಗೆ | (ಸಮಾಜಕ್ಕೆ) ಮಾಡಿ ಮಾಡಿ ಧನವ ಸವೆದು ಬಡವಾದರೆ ಆ ಭಕ್ತನು ಆ ಲಿಂಗಕ್ಕೆ ಪೂಜೆಯಹನು.