ಪ್ರಾಚೀನ ಭಾರತದ ಶಿಕ್ಷಣ ಧಾರ್ಮಿಕವಾಗಿತ್ತು; ಆಗಿನ ಗುರುಕುಲಗಳು, ವಿದ್ಯಾಕೇಂದ್ರಗಳು ಈ ಮಾತಿಗೆ ಸಾಕ್ಷಿ; ಬೌದ್ಧ ವಿಹಾರಗಳೂ ಜೈನ ಬಸದಿಗಳೂ ಇದಕ್ಕೆ ಇನ್ನಷ್ಟು ಸಾಕ್ಷಿಯನ್ನೊದಗಿಸುತ್ತವೆ. ಇದೇ ಪರಿಸ್ಥಿತಿ ಕರ್ನಾಟಕದಲ್ಲಿತ್ತು.

ಕರ್ನಾಟಕದಲ್ಲಿ ಗುರುಕುಲ ಪದ್ಧತಿ ಇತ್ತು ಎಂಬುದಕ್ಕೆ ಆಧಾರಗಳು ದೊರಕುವುದಿಲ್ಲ; ಸಾರ್ವಜನಿಕರ ನೆರವಿನಿಂದ, ದೊರೆ ಅಥವಾ ಶ್ರೀಮಂತರ ಸಹಾಯದಿಂದ ಸ್ಥಾಪನೆಗೊಂಡ ವಿದ್ಯಾಕೇಂದ್ರಗಳಿದ್ದವು. ಇವು ಅಗ್ರಹಾರ, ಬ್ರಹ್ಮಪುರಿ ಮತ್ತು ಘಟಿಕಾಸ್ಥಾನ ಎಂದು ಮೂರು ಬಗೆಯಾಗಿದ್ದವು. ಇವಲ್ಲದೆ ಪ್ರಾಚೀನ ಕರ್ನಾಟಕದ ದೇವಸ್ಥಾನಗಳು ವಿದ್ಯಾಕೇಂದ್ರಗಳೂ ಆಗಿದ್ದುವೆಂಬುದಕ್ಕೆ ವಿಪುಲವಾದ ಶಾಸನಾಧಾರಗಳು ಸಿಕ್ಕುತ್ತವೆ. ಅಲ್ಲದೆ ಜೈನರ ಬಸದಿಗಳೂ ವಿದ್ಯಾ ಕೇಂದ್ರಗಳಾಗಿದ್ದುವು. ಬೌದ್ಧರ ವಿಹಾರಗಳೂ ಈ ನಾಡಿನಲ್ಲಿದ್ದವೆಂಬುದಕ್ಕೆ ಹಲವು ಕುರುಹುಗಳಿವೆ.

ಪ್ರಾಥಮಿಕ, ಪ್ರೌಢ ಮತ್ತು ಸ್ನಾತಕ ಶಿಕ್ಷಣ ಈ ಕೇಂದ್ರಗಳಲ್ಲಿ ದೊರೆಯುತ್ತಿತ್ತು. ಹಲವು ಹತ್ತೆಂಟು ವಿಷಯಗಳು ಇಲ್ಲಿ ಪಠ್ಯ ವಿಷಯಗಳಾಗಿದ್ದವು. ಆದರೆ ಈ ಎಲ್ಲ ವಿದ್ಯಾಕೇಂದ್ರಗಳಲ್ಲಿ ಶಿಕ್ಷಣ ಸಾರ್ವಜನಿಕರಿಗೆ ಮುಕ್ತವಾಗಿತ್ತೇ ಅಥವಾ ಕೆಲವೇ ಜನರಿಗೆ ಸೀಮಿತವಾಗಿತ್ತೇ ಎಂಬ ವಿಷಯವನ್ನು ಕುರಿತು ಚರ್ಚಿಸುವುದು ಅವಶ್ಯಕವಾಗಿದೆ.

ಇಂದು ಯಾವುದಕ್ಕೆ ನಾವು Mass Education ಎಂದು ಕರೆಯುತ್ತೇವೆ. ಅದು ಪ್ರಾಚೀನ ಭಾರತದಲ್ಲಿ ಎಲ್ಲಿಯೂ ಅಸ್ತಿತ್ವದಲ್ಲಿದ್ದ ಕುರುಹುಗಳಿಲ್ಲ; ಕರ್ನಾಟಕವೂ ಇದಕ್ಕೆ ಅಪವಾದವಾಗಿಲ್ಲ. ವರ್ಗ, ವರ್ಣಗಳಿಂದ ಕೂಡಿದ ಸಮಾಜ ತನ್ನ ಶಿಕ್ಷಣ ಕ್ರಮವನ್ನು, ಶಿಕ್ಷಣದ ಉದ್ದೇಶವನ್ನು ಅದಕ್ಕೆ ತಕ್ಕಂತೆ ರೂಪಿಸಿತ್ತು. ಧರ್ಮ, ದೇವರು, ತತ್ವಜ್ಞಾನ ಮುಂತಾದವುಗಳಿಂದ ವಂಚಿತವಾ ಕೆಳವರ್ಗಗಳು, ಕೆಳಜಾತಿಗಳು ಶಿಕ್ಷಣದಿಂದಲೂ ವಂಚಿತವಾಗಿದ್ದುವು. ನಾಲಂದಾ, ತಕ್ಷಶಿಲೆ, ವಲ್ಲಭಿ, ನಾಗಾಯಿ ಮುಂತಾದ ಶಿಕ್ಷಣದ ಮಹಾಕೇಂದ್ರಗಳಲ್ಲಿ ಅಭ್ಯಸಿಸುತ್ತಿದ್ದ ವಿದ್ಯಾರ್ಥಿಗಳಲ್ಲಿ ಬಹುಪಾಲು ಬ್ರಾಹ್ಮಣರೇ ಆಗಿದ್ದರು; ಕ್ಷತ್ರಿಯರ ಸಂಖ್ಯೆ ಕಡಿಮೆಯಾಗಿತ್ತು; ವೈಶ್ಯರ ಹೆಸರು ಕೇಳಿಬರುವುದು ಕ್ವಚಿತ; ಇನ್ನು ಕೆಳವರ್ಗದವರು ಶಿಕ್ಷಣ ಪಡೆದ ವಿಷಯ ಯಾವ ಕಾಲಕ್ಕೂ ಎಲ್ಲಿಯೂ ಬರುವುದಿಲ್ಲ. ಕರ್ನಾಟಕದ ಎಲ್ಲ ಅಗ್ರಹಾರಗಳಲ್ಲಿ, ಬ್ರಹ್ಮಪುರಿಗಳಲ್ಲಿ, ಘಟಿಕಾಸ್ಥಾನಗಳಲ್ಲಿ, ದೇವಸ್ಥಾನಗಳಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ.

ಪ್ರಾಚೀನ ಕರ್ನಾಟಕದಲ್ಲಿ ಬೋಧಭಾಷೆ ಮಾತೃಭಾಷೆಯಾಗಿರಲಿಲ್ಲ; ಸಂಸ್ಕೃತವಾಗಿತ್ತು. ಬೋಧನ ವಿಷಯಗಳೆಲ್ಲ ಸಂಸ್ಕೃತ ಸಾಹಿತ್ಯಕ್ಕೆ ಸಂಬಮಧಪಟ್ಟುವಾಗಿದ್ದವು; ಹೆಚ್ಚಾಗಿ ವೈದಿಕ ಧರ್ಮಕ್ಕೆ ಸಂಬಂಧಿಸಿದುವಾಗಿದ್ದವು; ಕಾವ್ಯ, ಶಾಸ್ತ್ರ, ಅಲಂಕಾರ, ಗಣಿತ, ಮೀಮಾಂಸೆ, ತರ್ಕ, ಜ್ಯೋತಿಷ್ಯ ಏನು ಕಲಿತರೂ ಸಂಸ್ಕೃತದಲ್ಲೇ ಕಲಿಯಬೇಕಾಗಿತ್ತು; ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಯಾವ ಬೆಲೆಯೂ ಇರಲಿಲ್ಲ. “ಪ್ರಾಚೀನ ಕರ್ನಾಟಕದ ವಿದ್ಯಾಭ್ಯಾಸದ ಪದ್ಧತಿಯು ಕನ್ನಡ ಸಾಹಿತ್ಯವನ್ನೂ ಕನ್ನಡ ಭಾಷೆಯನ್ನೂ ಬಹುಮಟ್ಟಿಗೆ ಉಪೇಕ್ಷಿಸಿದೆ.”[1]

ಬಹುಮೋಜಿನ ಸಂಗತಿಯೆಂದರೆ ಸಂಸ್ಕೃತ ಸಾಹಿತ್ಯವನ್ನೆಲ್ಲ ಕನ್ನಡ ಲಿಪಿಯಲ್ಲಿ ಬರೆದುಕೊಂಡೇ ಕಲಿಯುತ್ತಿದ್ದರು. ಈ ಪದ್ಧತಿ ಮೊನ್ನೆ ಮೊನ್ನೆಯವರೆಗೂ ಬಳಕೆಯಲ್ಲಿತ್ತು. ಈಗಲೂ ಕೆಲವುಕಡೆ ಇದೆ. ಕನ್ನಡ ಲಿಪಿಯನ್ನು ಕಲಿಸಲು ಉಪಾಧ್ಯಾಯರುಗಳಿರುತ್ತಿದ್ದರೆಂದು ಶಾಸನಗಳಿಂದ ತಿಳಿದುಬರುತ್ತದೆ. “ತಾಳಗುಂದದ ಶಾಸನವೊಂದರಲ್ಲಿ ವೇದಾಧ್ಯಯನ ಮುಂತಾದವುಗಳಿಗೆ ಕೊಟ್ಟ ದತ್ತಿಗಳ ಜೊತೆಯಲ್ಲಿ ‘ಕನ್ನಡಕ್ಷರ ಸಿಕ್ಷೆಗೂ’ ದತ್ತಿಯನ್ನು ಬಿಟ್ಟುಕೊಟ್ಟಂತೆ ಹೇಳಿದೆ; ಬಹುಶಃ ಆ ಕಾಲದಲ್ಲಿ ಬಾಲಕರಿಗೆ ಮೊದಲು ಕನ್ನಡ ಅಕ್ಷರಗಳನ್ನು ಕಲಿಸುತ್ತಿದ್ದಂತೆ ಕಾಣುತ್ತದೆ.”[2] ಆದರೆ ಈ ಶಿಕ್ಷಕನಿಗೆ ಹೆಚ್ಚು ಗೌರವವೇನೂ ಇರಲಿಲ್ಲ. ಕ್ಷೌರಿಕನಿಗಿಂತ ಅವನಿಗೆ ತುಸು ಹೆಚ್ಚು ಮರ್ಯಾದೆ, ಅಷ್ಟೆ. ಅದೇ ತಾಳಗುಂದದ ಶಾಸನದಲ್ಲಿ ಬ್ರಾಹ್ಮಣರ ಉಗುರುಗಳನ್ನು ತೆಗೆವ ನಾವಿದನಿಗೆ ನಾಲ್ಕು ಗದ್ಯಾಣಗಳನ್ನೂ ಕನ್ನಡ ಉಪಾಧ್ಯಾಯನಿಗೆ ಐದು ಗದ್ಯಾಣಗಳನ್ನೂ ಬಿಟ್ಟುಕೊಟ್ಟಂತೆ ಹೇಳಿದೆ.[3]

ಮಾತೃಭಾಷೆಗೆ ಮಾನ್ಯತೆಕೊಟ್ಟು ಶಿಕ್ಷಣ ಸಾರ್ವತ್ರಿಕವಾಗಲು ಕಾರಣರಾದವರು ಕಲ್ಯಾಣದ ಶಿವಶರಣರು; ಅವರು ಧಾರ್ಮಿಕ, ಆಮಾಜಿಕ, ಆರ್ಥಿಕ ಮುಂತಾದ ರಂಗಗಳಲ್ಲಿ ಕ್ರಾಂತಿಯೆಸಗಿ ವರ್ಗರಹಿತವಾದ, ವರ್ಣರಹಿತವಾದ, ಸರ್ವಸಮಾನತೆಯ ಒಂದು ಸಮಾಜ ರಚನೆಗೆ ಕೈ ಹಾಕಿದರು; ಆ ಸಮಾಜ ರಚನೆಗೆ ಪೋಷಕವಾಗುವಂತೆ ಶಿಕ್ಷಣಕ್ರಮವೂ ಪಠ್ಯ ವಿಷಯಗಳೂ ಬೋಧನಾ ಪದ್ಧತಿಗಳೂ ಬೇರೆಯಾದವು. ಶಿಕ್ಷಣಕ್ಕೆ ಅಂಟಿದ ಜಾತೀಯತೆ. ಸಂಕುಚಿತತೆ ದೂರಾಯಿತು. Mass Education (ಸಾರ್ವತ್ರಿಕ ಶಿಕ್ಷಣ) ಪ್ರಾರಂಭವಾಯಿತು. ಇಂಥ ಒಂದು ಪ್ರಯತ್ನ ಪ್ರಾಚೀನ ಭಾರತದಲ್ಲಿ ಎಲ್ಲಿಯೂ ಆದಂತೆ ಕಂಡುಬರುವುದಿಲ್ಲ.

ಕರ್ನಾಟಕದಲ್ಲಿ ಶರಣರು ಬರುವುದಕ್ಕಿಂತ ಮುಂಚೆ ಕಾಳಮುಖರ ಅನೇಕ ಮಠಗಳಿದ್ದವು; ಅವು ದೊಡ್ಡ ವಿಕೇಂದ್ರಗಳಾಗಿದ್ದವು. ಶರಣರ ಧಾರ್ಮಿಕ ಕ್ರಾಂತಿಯಿಂದ ಈ ಕಾಳಾಮುಖ ಮಠಗಳೆಲ್ಲ ಶೈವದಿಂದ ವೀರಶೈವಕ್ಕೆ ಪರಿವರ್ತನೆಗೊಂಡವು; ಶರಣರ ಸಮಾಜದ ನಿರ್ಮಾಣದಲ್ಲಿ ಈ ಮಠಗಳು ಬಹು ಮಹತ್ತರ ಪಾತ್ರವಹಿಸಿದವು; ಅಂತೆಯೆ ವಿದ್ಯಾಭ್ಯಾಸದ ಕ್ರಮವನ್ನೂ ಬದಲಾಯಿಸಿದವು. ಪಠ್ಯ ವಿಷಯಗಳು ಬದಲಾದ ಸಮಾಜಕ್ಕೆ ಅನುಗುಣವಾಗುವಂತೆ ಬದಲಾದವು; ಬೋಧಭಾಷೆ ಕನ್ನಡವಾಯಿತು. ಶಿಕ್ಷಣ ಸಾರ್ವಜನಿಕರಿಗೆ ನಿಲುಕಿತು; ಸರ್ವರೂ ಜಾತಿ ತ ಪಂಥಗಳೆನ್ನದೆ ಈ ಮಠಗಳಲ್ಲಿ ಶಿಕ್ಷಣ ಪಡೆಯತೊಡಗಿದರು.[4]

ಶರಣರ ಹೊಸ ಸಮಾಜದ ರಚನೆಗನುಗುಣವಾಗಿ ಊರೂರಿಗೆ ಮಠಗಳಾದವು. ಈ ಮಠಗಳು ವಿದ್ಯಾಕೇಂದ್ರಗಳಾಗಿದ್ದವು. ಹೀಗೆ ನಾಡಿನ ಉದ್ದಗಲಕ್ಕೂ ಶಿಕ್ಷಣ ಪ್ರಸಾರಗೊಂಡಿತು. ಶಿಕ್ಷಣವಲ್ಲದೆ ಈ ಮಠಗಳಲ್ಲಿ ವೃತ್ತಿ ಶಿಕ್ಷಣವೂ ನೀಡಲಾಗುತ್ತಿತ್ತು. ಈ ವಿಷಯದಲ್ಲಿ ಖ್ಯಾತ ಸಂಶೋಧಕರಾದ ಡಾ|| ಜಿ.ಎಸ್. ದೀಕ್ಷಿತರು ಬಹು ಅಮೂಲ್ಯವಾದ ಅಭಿಪ್ರಾಯ ಕೊಟ್ಟಿದ್ದಾರೆ.

“ವೀರಶೈವ ಮತದಿಂದ ೧೧ನೇ ಮತ್ತು ೧೨ನೇ ಶತಮಾನಗಳಿಂದ ಕರ್ನಾಟಕದಲ್ಲಿ ಮತ್ತು ಅದರ ನೆರೆಹೊರೆಯ ಪ್ರಾಂತಗಳಲ್ಲಿ ಲೋಕಶಿಕ್ಷಣಕ್ಕೆ ಬೆಂಬಲ ದೊರೆಯಿತು. ಇದರ ಪ್ರಮುಖರು ಎಲ್ಲರಿಗೂ ತಿಳಿಯುವಂತೆ ಕನ್ನಡದಲ್ಲಿ ಅದರಲ್ಲಿಯೂ ಸುಲಭ ಶೈಲಿಯಲ್ಲಿ ಬರೆದರು. ವಚನಗಳು ಗಹನವಾದ ತತ್ವಗಳನ್ನು ಕೂಡ ಅತ್ಯಂತ ಉದ್ಬೋಧಕವಾದ ರೀತಿಯಲ್ಲಿ ಸಾಮಾನ್ಯ ಜನರಿಗೆ ತಿಳಿಸಿ ಹೇಳುತ್ತವೆ. ಅನೇಕ ವಚನಕಾರರು ಸಮಾಜದಲ್ಲಿ ಬೇರೆ ಬೇರೆ ವೃತ್ತಿಗಳನ್ನು ಅವಲಂಬಿಸಿದವರ ಕುಲಕ್ಕೆ ಸೇರಿದವರಾಗಿದ್ದರಿಂದ ಅವರ ಕೃತಿಗಳೆಲ್ಲ ಬಹುಜನ ವರ್ಗಗಳಿಗೆ ಸಹಜವಾಗಿಯೇ ಇಷ್ಟವಾದವು.

“ವಚನಗಳಲ್ಲದೇ ವೀರಶೈವ ಮಠಗಳೂ ಈ ಲೋಕ ಶಿಕ್ಷಣ ಪ್ರಚಾರಕಾರ್ಯವನ್ನು ಮಾಡಿದವು. ಹಿಂದೆ ಕಾಳಮುಖರ ವಶಗಳಲ್ಲಿದ್ದ ಮಠಗಳು ಸಾವಕಾಶವಾಗಿ ವೀರಶೈವರ ಕೈಯೊಳಗೆ ಬಂದವು. ಬಳ್ಳಿಗಾವೆ ಮತ್ತು ಹೂಲಿಗಳ ಮಠಗಳೇ ಇದಕ್ಕೆ ಸಾಕ್ಷಿಯಾಗಿವೆ. ಕಾಳಮುಖ ಮಠಗಳಲ್ಲಿ ಹಿಂದೆ ಉಚ್ಚಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದ್ದರೆ ೧೨ನೇ ಶತಮಾನದಿಂದ ಮುಂದೆ ವೀರಶೈವ ಮಠಗಳಲ್ಲಿ ಅದರ ಜೊತೆಗೆ ಪ್ರಾಥಮಿಕ ಮತ್ತು ವೃತ್ತಿಶಿಕ್ಷಣಗಳಿಗೂ ಹೆಚ್ಚಾಗಿ ಅವಕಾಶ ದೊರೆಯಿತು. ವೀರಶೈವ ಮಠಗಳು ಹಳ್ಳಿ ಹಳ್ಳಿಗಳಲ್ಲಿ ಸ್ಥಾಪನೆಯಾದ್ದರಿಂದ ವಿದ್ಯಾಪ್ರಸಾರವು ಮೊದಲಿಗಿಂತ ಹೆಚ್ಚಾಯಿತು.

“ವೀರಶೈವ ಮಠಗಳಲ್ಲಿ ಮುಖ್ಯವಾಗಿ ಮೂರು ವಿಧ: ಓದಿಸುವ ಮಠ, ಸಾಲಿಮಠ ಮತ್ತು ವಿರಕ್ತ ಮಠ. ಮೊದಲಿನ ಎರಡು ಮಠಗಳಲ್ಲಿ ಓದು ಬರಹಗಳನ್ನು ಕಲಿಸುತ್ತಿದ್ದರೆ ಎರಡನೆಯದರಲ್ಲಿ ಇವುಗಳ ಜೊತೆಗೆ ವೃತ್ತಿಗಳಿಗೂ ಸ್ಥಾನವಿತ್ತು. ಈ ವೃತ್ತಿಗಳಲ್ಲಿ ನೂಲುವುದು, ನೇಯುವುದು, ಒಕ್ಕಲುತನ ಮತ್ತು ವೈದ್ಯಕೀಯ ಶಾಸ್ತ್ರಗಳು ಸೇರಿದ್ದವು. ಇವೆರಡರಲ್ಲಿ ಶಿಕ್ಷಣ ಮುಗಿಸಿದವನಿಗೆ ವಿರಕ್ತ ಮಠಗಳಲ್ಲಿ ಪ್ರವೇಶವಿತ್ತು. ಈ ಎಲ್ಲಾ ಬೆಳವಣಿಗೆಗಳು ಕಾಲಕ್ರಮೇಣ ಆದವು.”

“ಹೀಗೆ ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕದಲ್ಲಿ ಶಿಕ್ಷಣ ಪ್ರಸಾರದಲ್ಲಿ ಮಹತ್ವದ ಕ್ರಾಂತಿಗೆ ನಾಂದಿ ಆಯಿತೆಂದು ಹೇಳಬಹುದು. ಇದರ ಪರಿಣಾಮವಾಗಿ ಮಾತೃಭಾಷೆಯಲ್ಲಿ ಶಿಕ್ಷಣ, ವೃತ್ತಿಗಳಿಗೆ ಪ್ರಾಶಸ್ತ್ಯ, ಸಮಾಜದಲ್ಲಿ ಸಮಾನತೆ, ನೀತಿಬೋಧೆ ಇವುಗಳಿಗೆ ಪುರಸ್ಕಾರವು ವಿದ್ಯಾಭ್ಯಾಸ ಪದ್ಧತಿಯಲ್ಲಿ ಹೆಚ್ಚಿತು.”[5]

ಶರಣರ ಹೊಸ ಸಮಾಜದ ನಿರ್ಮಾಣದಿಂದ ಸ್ತ್ರೀ ಶಿಕ್ಷಣಕ್ಕೆ ಮಹತ್ವ ಬಂತು. ಪ್ರಾಚೀನ ಭಾರತದಲ್ಲಿ ಸ್ತ್ರೀಯರ ಶಿಕ್ಷಣ ಸಂಪೂರ್ಣ ಉಪೇಕ್ಷಿಸಲಾಗಿತ್ತು. ಅಲ್ಲಲ್ಲಿ ಒಂದೆರಡು ಸ್ತ್ರೀಯರ ಹೆಸರು ಸಾಹಿತ್ಯದಲ್ಲಿ ಕೇಳಿಬರುತ್ತದೆ; ಆದರೆ ಆ ಸಂಖ್ಯೆ ಇಲ್ಲವೆಂಬುದರಲ್ಲಿ ಗಣನೆಯಾಗುತ್ತವೆ. ಶರಣರು ಹೆಣ್ಣಿಗೆ ಕೊಟ್ಟ ಸಮಾನತೆ ಮತ್ತು ಸ್ವಾತಂತ್ರ್ಯಗಳಿಂದ ಆಕೆ ವಿವಿಧ ರಂಗದಲ್ಲಿ ಹೆಸರು ಗಳಿಸಿದಳು. ಜಾತಿ ಕುಲವೆನ್ನದೆ ಸರ್ವ ಸ್ತ್ರೀಯರಿಗೆ ಶಿಕ್ಷಣ ದೊರಕಿ ಅವರು ಸಾಹಿತ್ಯದಲ್ಲಿ ಬಹು ಎತ್ತರದ ಸ್ಥಾನ ಗಳಿಸಿದರು. ಈ ಬಗ್ಗೆ ಡಾ|| ಎಂ. ಚಿದಾನಂದ ಮೂರ್ತಿಯವರು ಹೀಗೆ ಹೇಳುತ್ತಾರೆ:

“…… ಹೀಗೆ ರಾಜಮನೆತನಗಳ ಮತ್ತು ಶ್ರೀಮಂತರ ಮನೆಗಳ ಸ್ತ್ರೀಯರು ತಕ್ಕಮಟ್ಟಿಗೆ ವಿದ್ಯಾವತಿಯರಾಗುತ್ತಿದ್ದರು…. ಉಳಿದ ಸಾಮಾನ್ಯ ಸ್ತ್ರೀಯರು ವಿದ್ಯಾವತಿಯರಾಗುವ ವಿಷಯದಲ್ಲಿ ಸಮಾಜವು ಬಹುಮಟ್ಟಿಗೆ ಔದಾಶೀನ್ಯವನ್ನು ತೋರಿದೆ. …… ನಮಗೆ ತಿಳಿದಮಟ್ಟಿಗೆ ಯಾವ ಸ್ತ್ರೀ ಲೇಖಕಿಯೂ ಶಾಸನವನ್ನು ರಚಿಸಿಲ್ಲ.

“ಕನ್ನಡ ಸಾಹಿತ್ಯ ಚರಿತ್ರೆಯೂ ಇದನ್ನೇ ಪೋಷಿಸುತ್ತದೆ. ಕವಿ ಚರಿತೆಯ ಪ್ರಕಾರ ಹನ್ನೆರಡಯ ಶತಮಾನದ ಪೂರ್ವಾರ್ಧದಲ್ಲಿದ್ದ ನಾಗಚಂದ್ರನ ಸಮಕಾಲೀನಳಾದ ಕಂತಿಯೇ ಕನ್ನಡದ ಮೊದಲ ಕವಯತ್ರಿ. ಕಂತಿಯ ಕಾಲವು ಖಚಿತವಾಗಿ ಗೊತ್ತಿಲ್ಲ. ಬಹುಶಃ ಅವಳು ಇನ್ನೂ ಈಚಿನವಳು ಮತ್ತು ಬಹುತೇಕ ಕಲ್ಪಿತ ವ್ಯಕ್ತಿ. ಕನ್ನಡದಲ್ಲಿ ಕೃಷಿಮಾಡಿದ ಮೊತ್ತಮೊದಲ ಸ್ತ್ರೀಯರೆಂದರೆ ವೀರಶೈವ ಶರಣೆಯರು. (೧೨ನೇ ಶ.) ವರ್ಣಾಶ್ರಮದ ಕಟ್ಟುಗಳನ್ನು ಕತ್ತರಿಸಿಹಾಕಿದ ವೀರಶೈವ ಧರ್ಮವು ಸ್ಮೃತ್ಯಾದಿಗಳನ್ನು ವಿರೋಧಿಸಿ ನಿಂತು ಸ್ತ್ರೀಯರು ವಿಷಯದಲ್ಲಿ ಉದಾರವಾಗಿ ನಡೆದುಕೊಂಡಿತು. ಈ ಔದಾರ‍್ಯದ ಫಲವಾಗಿ ಸ್ತ್ರೀಯರು ಧರ್ಮಗ್ರಂಥಗಳನ್ನು ಅಭ್ಯಸಿಸಿ ಪುರುಷರಂತೆ ತಾವೂ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದರು. ಇದೊಂದು ಅತ್ಯಪೂರ್ವ ಘಟನೆ.”[6]

ಶರಣರಿಂದ, ವೀರಶೈವ ಮಠಗಳಿಂದ ಶಿಕ್ಷಣ ಸರ್ವರಿಗೆ ಲಭ್ಯವಾಯಿತು. ಕನ್ನಡ ಭಾಷೆ ಬೆಳೆಯಿತು; ಕನ್ನಡ ಸಾಹಿತ್ಯಕ್ಕೆ ಪ್ರೋತ್ಸಾಹ ಸಿಕ್ಕಿತು; ಅದು ಹೊಸಮಾರ್ಗದಲ್ಲಿ ಮುನ್ನಡೆಯಿತು. ಹರಿಹರ ರಾಘವಾಂಕರು ಇದಕ್ಕೆ ಕಾರಣ ಪುರುಷರಾದರು. ಮುಂದೆ ವಿಜಯನಗರ ಸಾಮ್ರಾಜ್ಯದ ಕಾಲಕ್ಕೆ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಲೋಕ ಮೆಚ್ಚುವಂತೆ ಬೆಳೆದವು. ಸರ್ವಜ್ಞನಂಥ ಗಂಡುಕವಿ ಊರೂರು ಮನೆಮನೆ ತಿರುಗಿ ತ್ರಿಪದಿಯಲ್ಲಿ ಸಾರಿದ ಜ್ಞಾನಕ್ಕೆ ಶರಣರ ಕ್ರಾಂತಿಯಿಂದ ಶಿಕ್ಷಣ ಸಾಮಾನ್ಯರವರೆಗೆ ಮುಟ್ಟಿದ್ದೇ ಕಾರಣವೆಂದು ವಿಶ್ವಾಸದಿಂದ ಹೇಳಬಹುದು.

[1] ಡಾ|| ಎಂ.ಚಿದಾನಂದಮೂರ್ತಿ : ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಪುಟ ೨೪೨.

[2] ಅದೇ ಪುಟ ೨೨೮.

[3] ಅದೇ ಪುಟ ೨೨೮.

[4] ಶಿಕ್ಷಣದ ಈ ಹೊಸಕ್ರಮಕ್ಕೆ ಅನುಭವಮಂಟಪವೇ ಮೂಲವೆಂದು ಊಹಿಸಲು ಅವಕಾಶವಿದೆ. ಅದು ಲೋಕಶಿಕ್ಷಣದ ಕೇಂದ್ರವಾಗಿತ್ತು. ಸರ್ವ ಕಾಯಕದವರೂ ಅಲ್ಲಿ ಕೂಡುತ್ತಿದ್ದರು; ಅವರಲ್ಲಿ ಬಹುಪಾಲು ಜನ ವಚನ ರಚಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ನೋಡಿದರೆ ಅವರಿಗೆ ಶಿಕ್ಷಣದ ಅನುಕೂಲ ಕಲ್ಪಿಸಲಾಗಿತ್ತೆಂದು ಭಾವಿಸಬಹುದು. ಈ ನಿಟ್ಟಿನಲ್ಲಿ ಸಂಶೋಧಕರಿಗೆ ಒಂದು ಹೊಸ ಕ್ಷಿತಿಜ ದೊರಕುವ ಸಾಧ್ಯತೆ ಇದೆ.

[5] ಡಾ|| ಜಿ.ಎಸ್. ದೀಕ್ಷಿತ : ಪ್ರಾಚೀನ ಕರ್ನಾಟಕದ ಶಿಕ್ಷಣಕ್ರಮ, ಪುಟ ೪೭ – ೪೮ ಪ್ರಕಾಶಕರು ಪ್ರಸಾರಾಂಗ ಕ.ವಿ.ವಿ. ಧಾರವಾಡ.

[6] ಡಾ|| ಎಂ.ಚಿದಾನಂದಮೂರ್ತಿ : ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಪುಟ ೨೪೨.