ಶ್ರೀಮತ್ ಕಾಶೀವಿಲಾಸ ಕ್ರಿಯಾಶಕ್ತಿದೇವರು ವಿಜಯನಗರ ಸಾಮ್ರಾಜ್ಯ ಸ್ಥಾಪಕರಾದ ಸಂಗಮವಂಶದ ದೊರೆಗಳ ಕುಲಗುರು; ರಾಜಗುರು; ಹಿಂದೂಧರ್ಮ ರಕ್ಷಣೆಗೆ ಮೀಸಲಾದ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಮೂಲಪ್ರೇರಕ; ಹರಿಹರ. ಬುಕ್ಕ ಮತ್ತು ಅವರ ತಮ್ಮಂದಿರಿಗೆ ತನ್ನ ತಪಶ್ಯಕ್ತಿಯಿಂದ, ರಾಜಕಾರಣ ನೈಪುಣ್ಯದಿಂದ ಸಕಲವಿಧದ ನೆರವಿತ್ತವ. ತನ್ನ ಮಧುರಾವಿಜಯ ಸಂಸ್ಕೃತ ಕಾವ್ಯದಲ್ಲಿ ಗಂಗಾದೇವಿ ಆತನನ್ನು ಭಕ್ತಿಯಿಂದ ಸ್ತುತಿಸುತ್ತಾಳೆ:

ಅಸಾಧಾರಣ ಸಾರ್ವಜ್ಞಂ ವಿಲಸತ್ಸರ್ವ ಮಂಗಲಂ
ಕ್ರಿಯಾಶಕ್ತಿ ಗುರುಂ ವಂದೇ ತ್ರಿಲೋಚನಮಿವಾಪರಂ

[1]

ಈತ ಅಸಾಧಾರಣ ಪಂಡಿತ, ಅಸೀಮ ಪ್ರತಿಭಾನ್ವಿತ, ರಾಜಕಾರ್ಯಬಲ್ಲಿದ; ಶಾಪಾನುಗ್ರಹಶಕ್ತಿಯುಳ್ಳಾತ. ಅರಸರಿಗೆ, ಮಂತ್ರಿಗಳಿಗೆ, ದಂಡನಾಯಕರಿಗೆ ಮಾರ್ಗ ದರ್ಶಕನಾಗಿದ್ದನು. ಈತನನ್ನು ಕುರಿತು ಅನೇಕ ಶಾಸನಗಳಿವೆ.

ಫೆಬ್ರುವರಿ ೧೩, ೧೩೪೭ (ಶಾ.ಶ. ೧೩೬೮, ವ್ಯಯ ಸಂ. ಮಾಘ ದಶಮಿ ರವಿವಾರ) ರ ಸೊರಬದ ಶಾಸನ;[2] ಇದು ತಾಮ್ರಶಾಸನ, ಸಂಸ್ಕೃತ ಭಾಷೆಯಲ್ಲಿದೆ:

“…..ಕಿರಿಯನಾದ ಮಾರಪ್ಪ ಭೂಪನು ಪಶ್ಚಿಮರಾಜ್ಯವನ್ನು ದೊರಕಿಸಿ ಗೋಮಾಂತಕ ಮತ್ತು ಬನವಸೆ ನಾಡುಗಳನ್ನು ಸುಖದಿಂದ ಆಳುತ್ತಿದ್ದನು. …..ಈ ರಾಜನ ಅಧಿರಾಜ್ಯವೆಂಬ ಗಹನವಾದ ಸಮುದ್ರಕ್ಕೆ ಕರ್ಣಧಾರನೂ ಬುದ್ಧಿಯಲ್ಲಿ ಬೃಹಸ್ಪತಿಯನ್ನು ಕೂಡ ಹಿಮ್ಮೆಟ್ಟಿಸುವವನೂ ಆದ ಮಾಧವನೆಂಬುವನು ಈತನ ಮಂತ್ರಿಯಾಗಿದ್ದನು. ಈ ಮಾಧವ ಮಂತ್ರಿಯ ಗುರುವು ಕ್ರಿಯಾಶಕ್ತಿಯು. ಅವನು ತೇಜಸ್ಸಿನಲ್ಲಿ ಸಾಕ್ಷಾತ್ ತ್ರಯಂಬಕನು. ಭಾರ್ಗವನಿಗೆ ಶಂಕರನು ಗುರುವಾಗಿದ್ದಂತೆ ವೈರಿಗಳನ್ನು ಜಯಿಸುವ ಮಾಧವನಿಗೆ ಕ್ರಿಯಾಶಕ್ತಿಯು ಗುರುವೂ ಮಾರ್ಗದರ್ಶಕನೂ ಆಗಿದ್ದನು. ಮೂರು ವೇದಗಳನ್ನು ಪುರಾಣಾಗಮಗಳನ್ನು ಸಮಾಲೋಚಿಸಿ ಲೋಕಹಿತಕ್ಕಾಗಿ ಮತ್ತು ಮಂತ್ರಿ ಮಾಧವನ ಪ್ರೀತಿಗಾಗಿ ತ್ರಯಂಬಕ ಶಾಸನೋಕ್ತ ಸಮಸ್ತ ಶೈವಾಗಮಸಾರ ಸಂಗ್ರಹವನ್ನು ರಚಿಸಿದನು…..”

ಶಿಕಾರಿಪುರ ತಾಲೂಕಾ ಹಾರೋಮುಚ್ಚಳ್ಳಿ ಅಗ್ರಹಾರದ (ಕನ್ನಡಶಾಸನ ಗ್ರಂಥ ನಂ.೭, ಶಾಸನ ಸಂಖ್ಯೆ ೨೮೧) ಶಾಸನ;[3] ಇದು ಸಂಸ್ಕೃತದಲ್ಲಿದೆ. ಇದರ ಕಾಲ ನವೆಂಬರ‍್ ೪, ಸೋಮವಾರ ೧೩೬೮ (ಶಕ ವರ್ಷ ೧೨೯೧ ಕೀಲಕ ಸಂ. ಕಾರ್ತಿಕ ವದ್ಯ ಅಷ್ಟಮಿ ಸೋಮವಾರ) ದೇವತೆಗಳ ಸ್ತೋತ್ರ….. ಬುಕ್ಕ ಭೂಪಾಲನ ವರ್ಣನೆ…. ಮಾಧವ ಮಂತ್ರಿ ಮತ್ತು ಕ್ರಿಯಾಶಕ್ತಿಗಳ ಹೊಗಳಿಕೆ. (ಸೊರಬದ ಶಾಸನದಲ್ಲಿಯ ಮಾಧವನೇ ಇವನು).

“……ಮಹಾರಾಜಾಧಿರಾಜ ರಾಜ ಪರಮೇಶ್ವರ ಪೂರ್ವಸಮುದ್ರಾಧಿಪತಿ ಬುಕ್ಕಭೂಪಾಲನು ವಸುಂಧರೆಯೆಂಬ ವಧುವಿನ ಕಂಠದೋಪಾದಿಯಲ್ಲಿರುವ ಹೇಮಕೂಟದ ಸುತ್ತು ಮುಕ್ತಹಾರದಂತೆ ಶೋಭಿಸುವ ತುಂಗಭದ್ರೆಯ ಮಧ್ಯೆ ನಾಯಕರತ್ನದಂತೆ ರಾರಾಜಿಸುವ ನೂತನ ವಿಜಯನಗರ ಸಿಂಹಾಸನವನ್ನೇರಿ ರಾಜಭಾರಮಾಡುತ್ತಿದ್ದನು. ಸಾಮಂತ ರಾಜರಿಂದ ಸೇವಿಸಲ್ಪಡುವ ಆ ಬುಕ್ಕ ಮಹಾರಾಜನ ಶೌರ್ಯವೇ ಜಗತ್ತನ್ನು ರಕ್ಷಿಸುವುದಕ್ಕಾಗಿ ಶರೀರವನ್ನು ಧರಿಸಿ ಪವಿತ್ರ ಪುರುಷಾಕಾರವಾದಂತೆ ಶ್ರೀಮನ್ ಮಾಧವಾಮಾತ್ಯನಿದ್ದನು. ಆ ಬುಕ್ಕ ಭೂಪತಿಯ ಆದೇಶದಂತೆ ಪಶ್ಚಿಮ ಸಮುದ್ರ ಪರ್ಯಂತ ರಾಜ್ಯವನ್ನು ಬೆಳೆಸಿ ಅದರ ಆಧಿಪತ್ಯವನ್ನು ಅಂಗೀಕರಿಸಿ ಆ ರಾಜ್ಯದ ಯೋಗಕ್ಷೇಮವನ್ನು ನೋಡುತ್ತಿದ್ದನು. ಶ್ರೀಮತ್ ಕಾಶೀವಿಳಾಸ ಕ್ರಿಯಾಶಕ್ತಿ ಶಿವದೇಶಿಕನಿಂದ ಉಪದೇಶವನ್ನು ಪಡೆದು ಶುದ್ಧಶೈವಾಮ್ನಾಯವರ್ತನಿಜೇಷ್ಟಲಿಂಗ ವೃತಾಧಿಷ್ಠಾನನಾಗಿದ್ದನು. ದೇವ ದೇವನಾದ ಶ್ರೀ ಮತ್ರ‍್ಯಂಬಕನಾಥನನ್ನು ನಿತ್ಯ ನೈಮಿತ್ತಿಕ ಆತ್ಮಕ್ರಿಯಾನೇಮಗಳಿಂದ ಜಪಿಸುತ್ತಿದ್ದನು…..” ಕ್ರಿಯಾಶಕ್ತಿದೇವ ಮಾಧವಮಂತ್ರಿಗೆ ಇಷ್ಟಲಿಂಗ ಕೊಟ್ಟ ವರ್ಣನೆ ಮೇಲಿನ ಶಾಸನದಲ್ಲಿದೆ.

ಹರಿಹರದ (Epigraphia karnatica vol. XI No. 23) ಶಾಸನ[4]: ಕಾಲ ಕ್ರಿ.ಶ. ೧೪೧೦; ಒಂದನೆಯ ದೇವರಾಯನ ಅರಸುತನ. ಈ ಶಾಸನದಲ್ಲಿ ಎರಡು ಭಾಗಗಳಿವೆ, ಮೊದಲಭಾಗ ಸಂಸ್ಕೃತದಲ್ಲಿದೆ; ಎರಡನೆಯ ಭಾಗ ಕನ್ನಡದಲ್ಲಿದೆ. ಇದರಲ್ಲಿ ಕ್ರಿಯಾಶಕ್ತಿಯನ್ನು ಹೀಗೆ ಹೊಗಳಿದೆ : “…..ಕೋಟಿಪಾಟನ ಪ್ರಚಟಿತ ಪ್ರತಾಪ ವಿದಳಿತ ಸಕಲಜನಾನುತಾಪ ಶ್ರೀಸ್ವಯಂಭೂ ತ್ರಿಯಂಬಕ ಚರಣಾರವಿಂದಾರಾಧಕ ಶ್ರೀ ಮದ್ರಾಯ ರಾಜಗುರು ಮಂಡಲಾಚಾರ್ಯ ಆಚಾರ್ಯವರ್ಯ ಅಭಂಗರಾವುತ್ತರಾಯ ತಪೋರಾಜ್ಯಲಕ್ಷ್ಮೀ ನಿಜನಿವಾಸಕಾಯ ಶ್ರೀ ಕ್ರಿಯಾಶಕ್ತಿ ಗುರುವರ ಚರಣ ಪರಿಚರಣ ಪ್ರಸಾದಾಸಾದಿತ ಮಹಿತ ಸರ್ವಜ್ಞ ಸಾಮ್ರಾಜ್ಯವೈಭವ ಸಮಾಜ ಶ್ರೀ ಮದ್ರಾಜಾಧಿರಾಜ ಪರಮೇಶ್ವರ ವೀರಪ್ರತಾಪ ದೇವರಾಜ…..”

ಚೆನ್ನರಾಯಪಟ್ಟಣ ತಾಲೂಕಾ ಹುಲಿಕೇರಿ (Epigraphia Karnatica no.256) ಶಾಸನ.[5] ಇದರ ಕಾಲ ಕ್ರಿ.ಶ. ೧೩೭೮. ಭಾಷೆ ಸಂಸ್ಕೃತ, ಇದು ತಾಮ್ರಶಾಸನ. ಶಾಸನ ಪ್ರಾರಂಭದ ಪದ್ಯ :

ವಿರೂಪಾಕ್ಷ ಸಾಕ್ಷಾತ್ಕುಲಪರಮದೈವಂ ಕುಲಗುರುಃ |
ಕ್ರಿಯಾಶಕ್ತ್ಯಾಚಾರ್ಯ ಕಲಿಕಲಭ ಕಂಠೀರವಯಶಃ ||
ಜಗದ್ರಕ್ಷಾ ಶಿಕ್ಷಾಕರವಿಭವಸಾ……ಸ್ಯ ಸಚಿವಃ
ಸಏವಾ ಭೂದ್ವಂಶ ಕ್ರಮಪರಿಗತತಿಸ್ಸೈವ ನಗರೀ ||

“ದೇವತೆಗಳ ಸ್ತೋತ್ರ…… ಸಂಗಮನ ಮಕ್ಕಳ ವರ್ಣನೆ…. ಬುಕ್ಕರಾಯನ ವರ್ಣನೆ….. ಅವನು ವಿಜಯನಗರವನ್ನು ಕಟ್ಟಿಸಿದನು….. ಅದರ ವರ್ಣನೆ…. ಬುಕ್ಕ ಹೊನ್ನಾಯಿಯರ ಮಗ ಇಮ್ಮಡಿ ಹರಿಹರ…… ಅವನ ಕುಲಗುರು ಕ್ರಿಯಾಶಕ್ತಿ…. ಜಂಬೂರನ್ನು ಹೊನ್ನಲಾಪುರವೆಂದು ಕರೆದು ದತ್ತಿಬಿಟ್ಟ ವಿವರ…..”

ಹೀಗೆ ಮೊದಲಿನಿಂದಲೂ ಕ್ರಿಯಾಶಕ್ತಿಯು ವಿಜಯನಗರ ಸಾಮ್ರಾಜ್ಯದ ಅರಸರಿಗೆ ಕುಲಗುರುವಾಗಿ, ರಾಜಗುರುವಾಗಿ, ಸಾಮ್ರಾಜ್ಯ ಸ್ಥಾಪನೆಗೆ ಪ್ರೇರಕನಾಗಿದ್ದಾನೆ. ವಸ್ತುಸ್ಥಿತಿ ಹೀಗಿದ್ದರೂ ವಿದ್ಯಾರಣ್ಯನೇ ಕುಲಗುರು, ಆತನೇ ಸಾಮ್ರಾಜ್ಯಸ್ಥಾಪನೆಗೆ ಪ್ರೇರಕ ಎಂದು ಹೇಳುವುದು, ಬರೆಯವುದು ಇತಿಹಾಸಕ್ಕೆ ಸತ್ಯಕ್ಕೆ ಅಪಚಾರ ಮಾಡಿದಂತಲ್ಲವೇ? ವಿದ್ಯಾರಣ್ಯರು ಪ್ರೇರಕರಲ್ಲ, ಅವರು ರಾಜಗುರುಗಳಲ್ಲ ಎಂಬುದು ಸಿದ್ಧವಾಗಿ ಬಹಳ ದಿನಗಳಾದವು; ಅದು ಹಳಸಿದ ಮಾತು. ಈ ಹಳಸಿದ್ದನ್ನೇ ಜನರಿಗೆ ಉಣಬಡಿಸಬರುವವರು ಇತಿಹಾಸವನ್ನು ಸರಿಯಾಗಿ ಅಭ್ಯಸಿಸಬೇಕು. ವಿದ್ಯಾರಣ್ಯರಂತೆ ವಿದ್ಯಾತೀರ್ಥರಾಗಲಿ ಭಾರತೀತೀರ್ಥರಾಗಲೀ ಸಂಗಮವಂಶದ ಅರಸರಿಗೆ ಸಾಮ್ರಾಜ್ಯ ಸ್ಥಾಪಿಸಲು ನೆರವಾಗಿಲ್ಲ; ಇವರೆಲ್ಲ ತರುವಾಯದಲ್ಲಿ ಬಂದವರು. ಡಾ. ಪಿ.ಬಿ. ದೇಸಾಯಿ ಮತ್ತು ಡಾ. ಸಾಲೆತೊರೆ ಮುಂತಾದ ಇತಿಹಾಸತಜ್ಞರು ಈ ವಿಷಯವನ್ನು ಆಧಾರಗಳಿಂದ ಸಿದ್ಧಗೊಳಿಸಿದ್ದಾರೆ. ಶಾಸನ, ಕಾವ್ಯ, ಇತಿಹಾಸ, ದಾಖಲೆ – ಯಾವುದರಲ್ಲಿಯೂ ವಿದ್ಯಾರಣ್ಯ ರಾಜಗುರುವಾಗಿದ್ದು ಸಾಮ್ರಾಜ್ಯ ಸ್ಥಾಪನೆಗೆ ನೆರವಾದ ಉಲ್ಲೇಖವಿಲ್ಲ. ಆಗ ವಿದ್ಯಾರಣ್ಯ ವಿಜಯ ನಗರದಲ್ಲಿ ಇರಲೇ ಇಲ್ಲ : “The evidence available shows that vidyaranya came into contact with vijayanagara tow decades after the traditional date of its foundation in 1336 A.D.[6] ಡಾ. ಸಾಲೆತೊರೆಯವರ ಅಭಿಪ್ರಾಯ ಹೀಗಿದೆ. As regards the legend of his having helped harihara in the construction of the capital and of the dogs and the hare, we may dismiss it as an invention of later age, realizing nevertheless that popular fancy may have attributed to Madhava Vidyaranya, because of his vast learning and wide celebrity…..”[7] ಡಾ. ಪಿ.ಬಿ. ದೇಸಾಯಿಯವರ ಹೇಳಿಕೆ : “kasi Vilas Kriyasakti of the pasupata school was the royal preceptor and advisor of Bukka.”[8] ಈ ಮಾತನ್ನು ನಾವು ಹಿಂದೆ ಉದಾಹರಿಸಿದ ಶಾಸನಗಳು ಸಮರ್ಥಿಸುತ್ತವೆ.

ವಿಜಯನಗರಕ್ಕೆ ವಿದ್ಯಾನಗರವೆಂದು ಹೆಸರಿಟ್ಟು ಕರೆದುದು ಎಂದು ಹೇಳುವ ಮಾತೂ ಸುಳ್ಳು. ಅದಕ್ಕೆ ವಿದ್ಯಾನಗರವೆಂಬ ಹೆಸರನ್ನು ಬಳಸಿದ್ದು ಕ್ರಿ.ಶ. ೧೫೩೧ ರಿಂದ ಈಚೆಗೆ. ಈ ನಗರಕ್ಕೆ ವಿಜಯದ ಸಂಕೇತವಾಗಿ ‘ವಿಜಯ’ ಮತ್ತು ‘ವಿಜಯನಗರ’ ಎಂದೇ ಕರೆಯಲಾಗಿದೆ. ವಿಜಯನಗರ ಹರಿಹರನ ಕಾಲಕ್ಕೆ (ಹುಕ್ಕ) ಅಸ್ತಿತ್ವದಲ್ಲಿಯೇ ಇರಲಿಲ್ಲ. ಇದನ್ನು ಬುಕ್ಕ ದೊರೆ ಕ್ರಿ.ಶ. ೧೩೬೮ ರಲ್ಲಿ ನಿರ್ಮಿಸಲು ಪ್ರಾರಂಭಿಸಿದ ಮತ್ತು ಅದು ಎರಡನೆಯ ಹರಿಹರನ ಕಾಲಕ್ಕೆ ಕ್ರಿ.ಶ. ೧೩೭೮ ರಲ್ಲಿ ಮುಗಿಯಿತು.[9] ಎರಡನೆಯ ಹರಿಹರನ ಆಳ್ವಿಕೆಯಲ್ಲಿ (೧೩೭೮) ವಿಜಯ ನಗರದ ನಿರ್ಮಾಣದ ಮುಕ್ತಾಯಘಟ್ಟದಲ್ಲಿ ವಿದ್ಯಾರಣ್ಯ ವಿಜಯನಗರಕ್ಕೆ ಬಂದಂತೆ ತೋರುತ್ತದೆ.[10] ಇದೇ ಆತ ವಿಜಯನಗರಕ್ಕೆ ಮೊದಲ ಸಲ ಬಂದುದು. ಆದುದರಿಂದ ಸಾಮ್ರಾಜ್ಯಸ್ಥಾಪನೆಯ ಕಾಲಕ್ಕೆ ಆತ ಅಲ್ಲಿ ಇರಲಿಲ್ಲ ಮತ್ತು ಅವನಿಂದ ನೆರವು ದೊರಕಿಲ್ಲ.

“……….All these stories speak of the intimate relationship of the founders with the great asectic Vidyaranya. Epigrapical and contemporary evidance, however, belie such an assumption. For the Fact was that the family priest of the founders was at first kasivilas kriyasakti pandita, and not vidyaranya.”[11]

ಆದುದರಿಂದ ವಿಜಯನಗರ ಸಾಮ್ರಾಜ್ಯದ ಪ್ರೇರಕ ಮತ್ತು ಸಹಾಯಕ ಕಾಶೀವಿಲಾಸ ಕ್ರಿಯಾಶಕ್ತಿಯೇ, ವಿದ್ಯಾರಣ್ಯನಲ್ಲ. ಎಂ.ವಿ. ಕೃಷ್ಣರಾವ್ ಮತ್ತು ಎಂ. ಕೇಶವಭಟ್ಟರ ಹೇಳಿಕೆ ಇದು: “……..ಈ ಬುಕ್ಕರಾಜನೇ ವಿಜಯನಗರ ಸಾಮ್ರಾಜ್ಯಕ್ಕೆ ಬೀಜಾವಾಪ ಮಾಡಿದವನೆಂದು ಇತ್ತೀಚಿಗಿನ ಅನ್ವೇಷಣೆಗಳಿಂದ ತಿಳಿದುಬಂದಿದೆ, ಅವನ ಕುಲಗುರುವಾಗಿದ್ದ ಕ್ರಿಯಾಶಕ್ತಿದೇಶಿಕರು ವಿಜಯನಗರ ಸ್ಥಾಪನೆಗೆ ಮೂಲ ಪ್ರೇರಕರಾಗಿದ್ದರು.”[12]

ಕಾಶೀವಿಲಾಸ ಕ್ರಿಯಾಶಕ್ತಿ ಮತ್ತು ವಿದ್ಯಾರಣ್ಯ ಇಬ್ಬರು ಒಂದೇ ಎಂದು ಪ್ರತಿಪಾದನೆ ಮಾಡುವವರೂ ಇಲ್ಲದಿಲ್ಲ. ಆದರೆ ಸಾಕಷ್ಟು ಆಧಾರಗಳಿಲ್ಲದೆ ಅವರು ಸೋತಿದ್ದಾರೆ. “The attempt made by some to identify kriyasakti acharya with vidyaranya fails to carry any convicton with it.”[13] ಆದರೆ ಅವರಿಬ್ಬರು ಒಂದೇ ಆಗಿದ್ದರು ಎಂದು ಇನ್ನೂ ಮೊಂಡುವಾದ ಮಾಡುವವರಿದ್ದಾರೆ. ಎಂ. ವಿ., ಕೃಷ್ಣರಾವ್ ಮತ್ತು ಎಂ. ಕೇಶವಭಟ್ಟರ “ವಿದ್ಯಾರಣ್ಯನಿಗೆ ಪೂರ್ವದಲ್ಲಿ ಕ್ರಿಯಾಶಕ್ತಿ ಎಂಬ ಹೆಸರಿದ್ದಿತು” ಎಂದು ಹೇಳುವ ಸಾಹಸ ಮಾಡಿದ್ದಾರೆ.[14] ಈ ನಿಟ್ಟಿನಲ್ಲಿ ಟಿ. ಎನ್. ಮಲ್ಲಪ್ಪನವರ ವಾದ ಬಹು ವಿಚಿತ್ರವಾಗಿದೆ.[15] ಅವರು ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಮೂಲಪ್ರೇರಣೆ ಆಂಧ್ರದಿಂದಲೇ ಬಂತೆಂಬ ಹಳೆಯ ಅಸತ್ಯದ ವಾದವನ್ನು ಮುಂದಿಡುತ್ತಾರೆ. ಹಂಪೆಯಲ್ಲಿಯೂ ಆಂಧ್ರದಲ್ಲಿ ನಾನಾಕಡೆ ಇದ್ದಂಥ ಗೋಲಕೀ ಮಠವಿತ್ತಂತೆ, ಅದರ ಹೆಸರು ವಿರೂಪಾಕ್ಷ ಮಠ….. ಈ ಮಠ ಸ್ವಾಮಿ ವಿದ್ಯಾರಣ್ಯ, ಈತನೇ ಕ್ರಿಯಾಶಕ್ತಿದೇವ….. ಈ ಕ್ರಿಯಾಶಕ್ತಿವಿದ್ಯಾರಣ್ಯ ಆಂಧ್ರದಿಂದ ಬಂದ ಶುದ್ಧ ಶೈವ….. ಶೃಂಗೇರಿಯಲ್ಲಿ ಮೂಲ ಶಂಕರಾಚಾರ‍್ಯ ಪೀಠವಿರಲಿಲ್ಲ………. ಅದು ವಿಜಯನಗರಕ್ಕಿಂತ ಹಿಂದೆ ಇರಲಿಲ್ಲ….. ಕಂಚಿಯಿಂದ ವಿದ್ಯಾತೀರ್ಥ ಮತ್ತು ಆಂಧ್ರದಿಂದ ಭಾರತೀತೀರ್ಥರು ಬಂದರು……….. ಅವರು ಹರಿಹರ ಬುಕ್ಕರಿಗೆ ಗುರುಗಳು. ಅವರೇ ಶೃಂಗೇರಿ ಮಠ ಸ್ಥಾಪಿಸಿ ಕ್ರಿ.ಶ. ೧೩೪೬ ರಲ್ಲಿ ಕ್ರಿಯಾಶಕ್ತಿ ವಿದ್ಯಾರಣ್ಯರನ್ನು ಪಟ್ಟಕ್ಕೆ ಕುಳ್ಳಿರಿಸಿದರು. ಹರಿಹರ ಕ್ರಿ.ಶ. ೧೩೮೦ ರಲ್ಲಿ ಶೃಂಗೇರಿಯಲ್ಲಿ ಮಠ ಅಗ್ರಹಾರ ಕಟ್ಟಿಸಿ ತನಗೆ ಮಾಡಿದ ಸಹಾಯವನ್ನು ನೆನೆದು – ವಿದ್ಯಾರಣ್ಯರನ್ನು ಅದರ ಮೊದಲ ಜಗದ್ಗುರುವನ್ನಾಗಿ ಮಾಡಿದ.[16] ಟಿ.ಎನ್. ಮಲ್ಲಪ್ಪನವರ ಈ ಸಂಶೋಧನೆ ಹೆಚ್ಚು ಊಹೆಯಿಂದ ಕೂಡಿದೆ, ಆದುದರಿಂದ ನಂಬಲರ್ಹವಲ್ಲ.

ಕ್ರಿಯಾಶಕ್ತಿ ಮತ್ತು ವಿದ್ಯಾರಣ್ಯ ಇಬ್ಬರೂ ಬೇರೆ. ಕ್ರಿಯಾಶಕ್ತಿಯೇ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಮೂಲಪ್ರೇರಕ ಎಂಬುದು ಶಾಸನಗಳಿಂದ ಸಿದ್ಧವಾಗುತ್ತದೆ.

 

[1] Madhuravijayam intr. PP.15 – 6 (Dr. B.A. Saletore : Social & Political Life in the Vijayanagara Empire page 109)

[2] Epigraphia karnatica Vol VIII, No. 375 Sorab (ವೀರಶೈವ Volume IV, No. 4 ರಲ್ಲಿ ಡಾ. ನಂದಿಮಠರ ರಾಯ ರಾಜಗುರು ಕ್ರಿಯಾಶಕ್ತಿ ಎಂಬ ಲೇಖನ ಪುಟ ೨೭).

[3] ವೀರಶೈವ Volume IV, No. 4 ಪುಟ ೨೮.

[4] ವೀರಶೈವ Volume IV, No. 4 ಪುಟ ೨೯.

[5] ವೀರಶೈವ Volume IV, No. 4 ಪುಟ ೩೧.

[6] Dr. P.B. Desai : A history of Karnataka, page 326.

[7] Dr. B.A. Saletore : Social and Political Life in the vijayanagar Empire, Page 110.

[8] Dr. P.B. Desai : A history of Karnataka, page 344.

[9] Dr. B.A. Saletore : Social and Political Life in the vijayanagar Empire, Page 112.

[10] Dr. B.A. Saletore : Social and Political Life in the vijayanagar Empire, Page 106.

[11] Dr. B.A. Saletore : Social and Political Life in the vijayanagar Empire, Page 112.

[12] Dr. B.A. Saletore : Social and Political Life in the vijayanagar Empire, Page 26.

[13] ಕರ್ನಾಟಕ ಇತಿಹಾಸ ದರ್ಶನ ಪುಟ, ೩೫೯.

[14] Dr. Venkatasubbaiah, Q J.M.S. VIII Page 188, seq, (Dr. B.A. Saletore : Social and Political Life in the vijayanagar Empire, Page 109, 1934)

[15] ಕರ್ನಾಟಕ ಇತಿಹಾಸ ದರ್ಶನ ಪುಟ, ೩೫೯.

[16] The Quarterly Journal of the Mystic Society Vol. LIX, Nos 1 to 4 : and vol.LX Nos. 1 to 4 : T.N. Mallappa : ‘Establisher of Vijayanagar Empire.