ವಚನಕಾರ ಮಾರಯ್ಯಗಳು ಹನ್ನೊಂದು ಜನರಿದ್ದಾರೆ. ಈ ಸಂಖ್ಯೆ ಕಡಿಮೆಯೇನೂ ಅಲ್ಲ. ಇವರಲ್ಲಿ ಹಲವರ ಚರಿತ್ರೆ ದೊರಕುವುದಿಲ್ಲ. ಆದರೆ ಪ್ರತ್ಯಕ್ಷ ಅವರ ವಚನಗಳಿರುವುದರಿಂದ ಶರಣರ ಕ್ರಾಂತಿಗೆ ಅವರ ಹೋರಾಟದ ಕಾಣಿಕೆ ಏನು ಎಂಬುದು ಖಚಿತವಾಗಿ ತಿಳಿದು ಬರುತ್ತದೆ. ಇವರು ಕ್ರಾಂತಿಗೆ ಬಲ ನೀಡಿದರಲ್ಲದೆ ಕನ್ನಡ ಸಾಹಿತ್ಯಕ್ಕೆ ವಚನದಂಥ ಅಪೂರ್ವ ರಚನೆಯನ್ನೂ ನೀಡಿದರು. ವಚನಕಾರ ಮಾರಯ್ಯಗಳಲ್ಲಿ ಕೆಲವರ ಕಾಯಕ ತಿಳಿದುಬರುವುದಿಲ್ಲ. ಇನ್ನಿತರ ವಚನಕಾರರಂತೆ ಅವರ ವಚನಗಳಿಂದಲೂ ಕಾಯಕವಾಗಲಿ ಚರಿತ್ರೆಯಾಗಲಿ ಗೊತ್ತಾಗುವುದಿಲ್ಲ. ಆದರೆ ಅವರು ಕಾಯಕವಂತರಾಗಿರಲೇಬೇಕು. ಅರುವಿನ ಮಾರಿತಂದೆ ಬಸವಣ್ಣನವರ ಸಮಕಾಲೀನ. ಕವಿಚರಿತೆಕಾರರು ಈತನ ಕಾಲ ೧೧೬೦ ಎಂದು ಹೇಳುತ್ತಾರೆ. ಈತನೊಬ್ಬ ಶ್ರೇಷ್ಠ ಅನುಭಾವಿ, ಉತ್ತಮ ವಚನಕಾರ. ಈತನ ೩೦೧ ವಚನಗಳು ದೊರಕಿವೆ. ಈತನ ಅಂಕಿತ ಸದಾಶಿವಮೂರ್ತಿಲಿಂಗ. ಈತ ತನ್ನ ವಚನಗಳಲ್ಲಿ ತನ್ನ ಹೆಸರು ಹೇಳಿಕೊಂಡಿರುವುದನ್ನು ಹಿಂದೆಯೇ ನೋಡಿದ್ದೇವೆ, ಈ ಶರಣನ ವಚನಗಳಲ್ಲಿ ವೀರಶೈವ ಎಂಬ ಶಬ್ದ ಬಳಕೆಯಾಗಿದೆ. ೧೨ನೆಯ ಶತಮಾನದ ಬಸವ ಸಮಕಾಲೀನರ ವಚನಗಳಲ್ಲಿ ಈ ಶಬ್ದದ ಬಳಕೆ ಹೆಚ್ಚು ಕಂಡುಬರುವುದಿಲ್ಲ.

ಅಂಗಲಿಂಗ ಆತ್ಮನಲ್ಲಿ ನಿಂದು ಸಂಯೋಗವ ಮಾಡಬೇಕು.
ಮಾಡಿದಲ್ಲಿ ಕೂಡಿದ ಕಾರಣ
ವೀರಶೈವನೆಂಬ ಹೆಸರಾಯಿತ್ತು, ಸದಾಶಿವಮೂರ್ತಿ ಲಿಂಗವನರಿತಲ್ಲಿ

[1]
ಸ್ಥಾವರಲಿಂಗ ಶುದ್ಧ ಶೈವಮಾರ್ಗ, ಶೈವಲಿಂಗಪೂಜೆ ಸಿಂಹಾಸನ,
ಪೂರ್ವಶೈವಲಿಂಗಪೂಜೆ ಸಂಕಲ್ಪ ನಿರಾವರಣ
ವೀರಶೈವ ಲಿಂಗಪೂಜೆ ಅಂಗದ ಮೇಲೆ ಹಿಂಗದೆ ಧರಿಸಿಹುದುವ, ಇವೆಲ್ಲವು
ಸರಿ; ಶೈವಪೂಜೆ ಆದೆಂತೆಂದಡೆ:
ಇಷ್ಟಲಿಂಗ ಜೀವನ ಅಂಗ ಉಭಯಕೂಡಿ ಲೀಯವಾಗಿದ್ದುದು,
ಶೈವಭೇದಂಗಳಿಗೆ ಹೊರಗು, ಸದಾಶಿವಮೂರ್ತಿಲಿಂಗಕ್ಕೆ ಒಳಗು[2]

ಮೇಲಿನ ಎರಡು ವಚನಗಳಲ್ಲಿ ಶೈವ, ವೀರಶೈವದ ಸ್ಪಷ್ಟ ಕಲ್ಪನೆ ಮೂಡಿ ನಿಂತಿದೆ. ಭಕ್ತಿಹೀನನಿಗೆ ಯಾವ ಕಾಲಕ್ಕೂ ತತ್ತ್ವ ಅಳವಡುವುದಿಲ್ಲ. ಭಕ್ತಿಯುಳ್ಳವತಿಳಿದು ನಡೆಯುವಾಗ ಗುರುಲಿಂಗ ಜಂಗಮದ ಗುಣವನ್ನು ತಿಳಿಯಬೇಕು. ವಸ್ತು ಶುದ್ಧವಾಗಿಲ್ಲದಿದ್ದರೆ, ಪೂಜಿಸುವ ಭಕ್ತನ ಚಿತ್ತ ಶುದ್ಧವಾಗುವುದಿಲ್ಲ ಎಂಬ ಈತನ ವಚನ ಮನನೀಯವಾಗಿದೆ.

ಭಕ್ತಿಹೀನ ಭಕ್ತಿಯ ಮಾಡುವಲ್ಲಿ ಗುರುಲಿಂಗ ಜಂಗಮದ ಇರವ ಸಂಪಾದಿಸಲಿಲ್ಲ,
ಭಕ್ತಿಯುಳ್ಳವ ಅರಿತು ಭಕ್ತಿಯ ಮಾಡುವಲ್ಲಿ ಗುರುವಿನಲ್ಲಿ ಗುಣವನಱಸಬೇಕು,
ಲಿಂಗದಲ್ಲಿ ಲಕ್ಷಣವನರಸಬೇಕು, ಜಂಗಮದಲ್ಲಿ ವರಕ್ತಿಯನರಸಬೇಕು, ಅದೆಂತೆಂದಡೆಗೆ,
ತ್ರಿವಿಧವು ತನ್ನಯ ಪ್ರಾಣವಾದ ಕಾರಣ, ಪರುಷ ಶುದ್ಧವಾಗಿಯಲ್ಲದೆ
ಲೋಹದ ಕುಲವ ಕೆಡಿಸದು:
ತಾ ಹಿಡಿದು ಆರಾಧಿಸುವ ವಸ್ತು ಶುದ್ಧವಾಗಿದೆಯಲ್ಲದೆ ಪೂಜಿಸುವ
ಭಕ್ತನ ಚಿತ್ತ ಶುದ್ಧವಿಲ್ಲ;
ಸದಾ ಶಿವಮೂರ್ತಿಲಿಂಗ ಶುದ್ಧವಾಗಿಯಲ್ಲದೆ ಎನ್ನಂಗ ಶುದ್ಧವಿಲ್ಲ[3]

ಅರಿದವನ ಸಹವಾಸ ಹಿತ: ಅಜ್ಞಾನಿಯ ಸಂಗ ಸಲ್ಲದು: ಬರಿಯ ಮಾತಿನಿಂದ ಲಾಭವಿಲ್ಲೆಂಬ ಅರ್ಥದ ಈತನ ವಚನ ಬಹು ಅರ್ಥಪೂರ್ಣವಾಗಿದೆ.

ಕಲ್ಲು ಕಲ್ಲು ತಾಕಿದಲ್ಲಿ ಕಿಚ್ಚಿನ ಕಿಡಿಯಲ್ಲದೆ,
ಹೆಂಟೆ ಶಿಲೆ ಹೋರಿದಲ್ಲಿ ಉಂಟೇ?
ಅರಿದವನಲ್ಲಿ ಒಡಗೂಡುವ ಸುಖವಲ್ಲದೆ,
ಬರಿಯನಲ್ಲಿ, ಅರೆವು ಹೀನನಲ್ಲಿ, ಅರುವಿನ ಕುರುಹ ಮರೆದಾಡುವನಲ್ಲಿ,
ಸುರೆಯ ಮಡಕೆಯ ಪೂಜಿಸಿ ಕುಡಿವವನಂತಾಗಬೇಡ; ಬರಿಯ ವಾಚಾ
ಸಿದ್ಧಿಯಲ್ಲಿ ಅರಿದಹನೆಂದು
ಅವ ಕೊಟ್ಟರಿವಿನ ಕುರುಹ ಮರೆಯಬೇಡ, ಮರೆಯಲ್ಲಿ ಬೆಳಗು ತೋರುತ್ತದೆ,
ಸದಾಶಿವಮೂರ್ತಿ ಲಿಂಗದಲ್ಲಿ.[4]

ಕಲ್ಲು ಕಲ್ಲು ಹಾಯ್ದರೆ ಕಿಡಿ, ಅದರಂತೆ ಅರಿವುಳ್ಳವ ಇನ್ನೊಬ್ಬ ಅರಿವುಳ್ಳವನೊಡನೆ ತತ್ವ ಸಂಭಾಷಣೆಗೈದರೆ ಅನುಭಾವದ ಕಿಡಿ ಹೊರಡುವುದು. ಹೆಂಟಿ ಶಿಲೆಯಂತೆ ಜ್ಞಾನಿ ಅಜ್ಞಾನಿಯೊಡನೆ ಸಂಭಾಷಿಸದರೆ ಕಿಡಿಯೆಲ್ಲಿ? ಹೆಂಟಿ ಒಡೆದು ಪುಡಿಯಾಗುತ್ತದೆ; ಬಹು ಅರ್ಥಗೌರವವುಳ್ಳ ಉದಾಹರಣೆ. ಇದರಂತೆ ಸುರೆಯ ಮಡಿಕೆಯ ಪೂಜಿಸಿ ಕುಡಿದವನಂತಾಗಬೇಡ ಎಂಬ ಉದಾಹರಣೆಯೂ ಅರ್ಥಪೂರ್ಣವಾಗಿದೆ. ‘ಬ್ರಹ್ಮವನರಿತ್ತಲ್ಲಿ ಮತ್ತೆ ಸುಮ್ಮನೆ ಇರಬೇಕು, ಎಂಬ ಈತನ ಮಾತು ಸೊಗಸಾಗಿದೆ; ಅದು ಹೇಳಬಾರದು, ಹೇಳಲಿಕ್ಕೆ ಹೋದರೆ ಯದ್ವಾತದ್ವಾ ಆದೀತು. ಅನುಭಾವ ಕೂಸ ಕಂಡ ಕನಸು, ಮೂಕ ಮೆದ್ದ ಬೆಲ್ಲ ಅಲ್ಲವೆ? ಆತ್ಮಕ್ಕೆ ದರ್ಶಿಸಿದ್ದು ನಾಲಗೆಗೆ ನಿಲುಕದು. ವಚನಕಾರರಲ್ಲಿ ಲೋಕೋತ್ತರರಾದ ಇಬ್ಬರು ದಂಪತಿಗಳಿದ್ದಾರೆ. ಮೋಳಿಗೆ ಮಾರಯ್ಯ ದಂಪತಿಗಳು ಮತ್ತು ಆಯ್ದಕ್ಕಿ ಮಾರಯ್ಯ ದಂಪತಿಗಳು. ಅವರಿಬ್ಬರೂ ಕಾಯಕ ಪ್ರಿಯರು. ಈ ದಂಪತಿಗಳು ಲೋಕ ಬೆಳಗುವಂಥ ಕಾಯಕತತ್ವ ನಿಡಿದ್ದಲ್ಲದೆ, ಅನುಭಾವವೂ ಕಾಯಕವೂ ಬೇರಲ್ಲವೆಂದು ನಡೆದು ತೋರಿಸಿದರು. ಇಬ್ಬರು ಮಾರಯ್ಯನವರು ತಮ್ಮ ಹೆಂಡಿರಿಂದ ಲಿಂಗಾಂಗ ಸಾಮರಸ್ಯದ ರಹಸ್ಯವನ್ನು ಅರಿತುಕೊಂಡರು.

ಆಯ್ದಕ್ಕಿ ಮಾರಯ್ಯ ಬಸವಣ್ಣನವರ ಸಮಕಾಲೀನ. ಈತನ ಕಾಯಕ ಬಹು ವಿಶಿಷ್ಟವಾದುದು, ಅದರಲ್ಲಿ ರಾಷ್ಟ್ರದ ಸಂಪತ್ತು ಹಾಲಾಗಬಾರದೆಂಬ ಕಳಕಳಿಯಿದೆ. ಹೆಸರೇ ಹೇಳುವಂತೆ ಆತ ಅಕ್ಕಿ ಆಯುವಾತ. ಬಸವಣ್ಣನವರ ಮನೆಯೊಂದರಲ್ಲಿಯೇ ಚೆಲ್ಲಿದ ಅಕ್ಕಿಯನ್ನು ಆತ ಆಯ್ದುಕೊಂಡು ಬರುತ್ತಿದ್ದನೆಂಬುದು ಶುದ್ಧ ಅಸಂಗತ. ಭಕ್ತರು ಕುಟ್ಟುವಾಗ, ಬೀಸುವಾಗ, ವ್ಯಾಪಾರ ಮಾಡುವಾಗ ಚೆಲ್ಲಿದ ಕಾಳುಗಳನ್ನು ಆತ ಆರಿಸಿ ತರುತ್ತಿದ್ದ. ಹೀಗಿದ್ದರೇನೇ ಆತನ ಕಾಯಕಕ್ಕೆ ಮಹತ್ವ, ಕೇವಲ ಬಸವಣ್ಣನವರ ಮನೆಯೊಂದರಲ್ಲಿಯೇ ಚೆಲ್ಲಿದ ಅಕ್ಕಿಯನ್ನಷ್ಟೇ ಆಯ್ದು ತರುತ್ತಿದ್ದನೆಂಬುದರಲ್ಲಿ ಅರ್ಥವಿಲ್ಲ. ಈತನಿಗಾಗಿ ನಿತ್ಯ ಅಲ್ಲಿ ಅಕ್ಕಿಯನ್ನು ಚೆಲ್ಲುತ್ತಿದ್ದರೇ? ಚೆಲ್ಲಿದ ಅಕ್ಕಿಯನ್ನು ಆಯ್ದರೆ ಅನೇಕ ಕುಟುಂಬಗಳು ಬದುಕಬಹದೆಂದು ಮಾರಯ್ಯ ತೊರಿಸಿದ. ವ್ಯವಹರಿಸುವಾಗ ಹಾಗೆ ಚೆಲ್ಲುವುದು ಸಹಜ. ಚೆಲ್ಲಿ ಹೋದುದನ್ನು ಹಾಗೆಯೇ ಬಿಡಬಾರದು, ಆಯ್ದುಕೊಳ್ಳಬೇಕು. ದೇಶದ ಆ ಸಂಪತ್ತು, ಹಾಳಾಗಬಾರದು ಎಂಬುದು ಮಾರಯ್ಯನ ತತ್ವ. ಈತನ ಅಂಕಿತ ಅಮರೇಶ್ವರ ಲಿಂಗ. ಮಾರಯ್ಯ ಕಾಯಕದ ಬಗ್ಗೆ ಹೇಳಿದ ವಚನ ಸರ್ವಕಾಲಕ್ಕೂ ಅನುಕರಣೀಯವಾಗಿದೆ:

ಕಾಯಕದಲ್ಲಿ ನಿರತನಾದರೆ ಗುರುದರ್ಶನವಾದರೂ ಮರೆಯಬೇಕು,
ಲಿಂಗಪೂಜೆಯಾದರೂ ಮರೆಯಬೇಕು,
ಜಂಗಮ ಮುಂದಿದ್ದರೂ ಹಂಗು ಹರೆಯಬೇಕು
ಕಾಯಕವೇ ಕೈಲಾಸವಾದ ಕಾರಣ ಅಮರೇಶ್ವರಲಿಂಗವಾಯಿತ್ತಾದಡೂ
ಕಾಯಕದೊಳಗು[5]

ಈ ಮಾತಿಗೆ ಪ್ರಭುದೇವರು ಏನೇ ಎತ್ತಲಿ, ಕಾಯಕ ನಿಷ್ಠೆಯುಳ್ಳವರಿಗೆ ಈ ವಚನ ದಾರಿದೀಪವಾಗಿದೆ.

ಕನ್ನದ ಮಾರಿತಂದೆಗಳ ಕಾಲ ಕ್ರಿ.ಶ.೧೧೬೦ ಎಂದು ಕವಿ ಚರಿತೆಕಾರರು ಹೇಳುತ್ತಾರೆ. ಈ ವಚನಕಾರರ ಬಗ್ಗೆ ಏನೂ ಚರಿತ್ರೆ ತಿಳಿದು ಬಂದಿಲ್ಲ. ಈತನ ಮೂರು ವಚನಗಳು ದೊರಕಿವೆ. ಆ ಮೂರು ವಚನಗಳಲ್ಲಿ ಕನ್ನದ ರೂಪದ ಬಳಸುತ್ತಾನೆ ಹಾಗಾದರೆ ಈತ ಕನ್ನ ಕೊರೆಯುತ್ತಿದ್ದನೇ? ಅದುವೇ ಆತನ ಕಾಯಕವೇ? ಕನ್ನ ಕೊರೆಯುವುದು ಕಾಯಕವಾಗಬಲ್ಲುದೇ? ಆತನ ಸಂಪೂರ್ಣ ಚರಿತ್ರೆ ದೊರಕುವವರೆಗೆ ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕುವುದಿಲ್ಲ. ಕನ್ನದ ಮಾರಿತಂದೆ ತನ್ನ ಮೂರುವಚನಗಳಲ್ಲಿ ಅಂಕಿತ ತುಸು ಭಿನ್ನಗೊಳಿಸಿ ಹೇಳುತ್ತಾನೆ. ಅರ್ಥ ಒಂದೇ; ಆದರೆ ಸಂದರ್ಭಕ್ಕೆ ತಕ್ಕಂತೆ ವೈಶಿಷ್ಟ್ಯ ಅಲ್ಲಿ ಉಂಟಾಗುತ್ತದೆ. ‘ಮದನಂಗದೂರ ಮಾರೇಶ್ವರಾ’ ಮಾರನವೈರಿ ಮಾರೇಶ್ವರಾ’ ‘ಮದನವೈರಿ ಮಾದೇಶ್ವರಾ’ ಇವೇ ಆ ಅಂಕಿತಗಳು. ಎರಡು ವಚನಗಳು ಬೆಡಗಿನ ರೂಪದಲ್ಲಿವೆ. ಕೆಳಗಿನ ವಚನ ಗೂಢ ಅರ್ಥದಿಂದ ಕೂಡಿವೆ.

ಕತ್ತಲೆಯಲ್ಲಿ ಕನ್ನವನಿಕ್ಕಿದಡೆ ಎನಗೆಕತ್ತಿಯ ಕೊಟ್ಟ ಕರ್ತೃವಿಂಗೆ ಭಂಗ
ಅವರು ಮರೆಯದಿರ್ದಲ್ಲಿ ಮನೆಯ ಹೊಕ್ಕಡೆ
ಎನ್ನ ಚೋರತನದ ಅರಿಕೆಗೆ ಭಂಗ
ಮರೆದಿರ್ದವರ ಎಬ್ಬಿಸಿ ಅವರಿಗೆ ಅವರೊಡವೆಯ
ತೋರಿ ಎನ್ನೊಡವೆಯ ತಂದೆ ಮದನ ವೈರಿ ಮಾರೇಶ್ವರಾ.[6]

ಕಂಭದ ಮಾರಿತಂದೆ ಕ್ರಿ.ಶ.೧೫೦೦ರಲ್ಲಿ ಇದ್ದಿರಬೇಕೆಂದು ಕವಿಚರಿತೆಕಾರರು ಅಭಿಪ್ರಾಯ ಪಡುತ್ತಾರೆ. ಆದರೆ ಈತ ಬಸವಣ್ಣನವರ ಸಮಕಾಲೀನನೆಂದೇ ನಮ್ಮ ಅಭಿಪ್ರಾಯ. ಬಸವ, ಚೆನ್ನಬಸವ, ಪ್ರಭುದೇವರ ಹೆಸರುಗಳು ಈತನ ವಚನದಲ್ಲಿ ಬರುತ್ತವೆ. ಈತನ ಚರಿತ್ರೆ ತಿಳಿದುಬಂದಿಲ್ಲ. ಈತನ ವಚನಗಳಿಂದ ಈತ ಮೀನುಗಾರನೆಂದು ತಿಳಿಯುತ್ತದೆ. ಈತನ ಹದಿನೈದು ವಚನಗಳು ಉಪಲಬ್ಧವಿವೆ. ‘ಕದಂಬಲಿಂಗ’ ಈತನ ಅಂಕಿತ. ತನ್ನ ಕಾಯಕವನ್ನು ಕಂಭದ ಮಾರಯ್ಯ ಈ ವಚನದಲ್ಲಿ ರೂಪಕ ಮಾಡಿದ್ದಾನೆ. ಇದೊಂದು ಬೆಡಗಿನ ವಚನ:

ವೇದಕಲ್ಲಿಯಾಗಿ, ಶಾಸ್ತ್ರಮಣಿಯಾಗಿ, ಪುರಾಣ ತೊಡಕಿನ ಬಂಧದ ನೂಲಾಗಿ,
ಶಾಸ್ತ್ರ ಪಸರದಲ್ಲಿ ಆಯತವ ಮಾಡಿ ಗುರುವೆಂಬ ತಡಿಯಮೆಟ್ಟಿ,
ನಾಭಿಮಧ್ಯವೆಂಬ ಜಲವಹೊಕ್ಕು
ಮಹಾಸ್ಥಳಕುಳ ವಿವರಂಗಳೆಂಬ ಮಡುವಿಗೆ ಇಡಲಾಗಿ ಅಡಗಿದ ಮತ್ಸ್ಯವೆದ್ದಿತ್ತು.
ಬಲೆಯ ಹೊಲಬು ಕಂಡು ಅದು ಸ್ಥೂಲಕ್ಕೆ ಸೂಕ್ಷ್ಮವಾಗಿ,
ಸೂಕ್ಷ್ಮಕ್ಕೆ ಸ್ಥೂಲವಾಗಿ ಕಲ್ಲಿಯ ದ್ವಾರದಲ್ಲಿ
ಅಲ್ಲಿಯ ನುಸುಳುತ್ತ, ಕಲ್ಲಿಗೆ ಹೊರಗಾಗುತ್ತ ಮತ್ತಾಕಲ್ಲಿಗೆ ಒಳಗಾಗುತ್ತ
ಮತ್ತಾಸ್ಥಳಕುಳಂಗಳಲ್ಲಿ ಕೂಡುತ್ತ
ಸ್ಥಲಂಗಳನರಿದು ಹೊರಗಾಗುತ್ತ ಭಾವಜ್ಞನಾಗಿ ಭಾವ ವಿರಹಿತನಾದೆಯಲ್ಲಾ
ಮಾವನ ಮಗಳಿಗೆ ಅಣ್ಣನಾದೆಯಲ್ಲಾ ಚೆನ್ನ ಕದಂಬಲಿಂಗಾ[7]

ಏಸು ಜನುಮಂಗಳಲ್ಲಿ ಹುಟ್ಟಿ ಬಂದರೂ, ಏನು ಮಾಡಿದರೂ ಯಾವುದು ಅಲ್ಲ, ಯಾವುದು ಹೌದು ಎಂಬುದನ್ನು ತಿಳಿಯಬೇಕು. ಮತ್ತು ತತ್ಕಾಲದ ನೀತಿಯನ್ನರಿಯಬೇಕು – ಎಂಬುದು ಕೆಳಗಿನ ವಚನದಲ್ಲಿ ಸುಂದರವಾಗಿ ನಿರೂಪಿತವಾಗಿದೆ:

ನಾನಾ ಜನ್ಮಂಗಳಲ್ಲಿಯೂ ಬಂದಡೆ, ನಾನಾಯುಕ್ತಿಯಲ್ಲಿ ನುಡಿದೆಡೆ,
ನಾನಾ ಲಕ್ಷಣಂಗಳಲ್ಲಿ ಶ್ರುತ ದೃಷ್ಟ ಅನುಮಾನಂಗಳ ಲಕ್ಷಿಸಿ ನುಡಿದಲ್ಲಿ
ಏನನಬಹುದು, ಏನನಲ್ಲಾಯೆಂಬ ಠಾವನರಿಯಬೇಕು.
ಮಾತಬಲ್ಲೆನೆಂದು ನುಡಿಯದೆ, ನೀತಿವಂತನೆಂದು ಸುಮ್ಮನಿರದೆ,
ತತ್ಕಾಲದ ನೀತಿಯನರಿದು
ಸಾತ್ವಿಕ ಲಕ್ಷಣದಲ್ಲಿಪ್ಪಾತನ ಲಕ್ಷಣವೇ ನಿರೀಕ್ಷಣ ಕದಂಬಲಿಂಹಾ,[8]

ಕೂಗಿನ ಮಾರಿತಂದೆ ಬಸವಣ್ಣನವರ ಸಮಕಾಲೀನನು, ಕೂಗು ಹಾಕುವುದು ಈತನ ಕಾಕವೆಂದು ಕಾಣುತ್ತದೆ. ಶರಣರು ಕ್ರಾಂತಿಯ ತರುವಾಯ ಕಲ್ಯಾಣ ಬಿಟ್ಟುಹೋದರು; ಆಗ ಬಿಜ್ಜಳನ ಸೈನ್ಯ ಅವರ ಬೆನ್ನಟ್ಟಿತು. ಆ ಸೈನ್ಯ ಸಮೀಪ ಬಂದ ತಕ್ಷಣವೇ ಮಾರಯ್ಯ ಕೂಗು ಹಾಕಿ ಶರಣರನ್ನು ಯುದ್ಧಕ್ಕೆ ಅಣಿಮಾಡುತ್ತಿದ್ದ. ತಾನೂ ಶರಣ ಸೈನ್ಯದಲ್ಲಿದ್ದು ಹಂಗುದೊರೆದು ಕಾದಿದ. ಶರಣರು ಕಲ್ಯಾಣದಲ್ಲಿದ್ದಾಗ ಆತ ಎಂಥ ಕಾಯಕ ಮಾಡುತ್ತಿದ್ದನೆಂಬುದು ತಿಳಿಯದು. ಆತನ ಹನ್ನೊಂದು ವಚನಗಳು ದೊರಕಿವೆ. ‘ಮಹಾಮಹಿಮ ಮಾರೇಶ್ವರಾ’ ಎಂಬುದು ಆತನ ಅಂಕಿತ. ಆದರೆ ಆತನ ಅಂಕಿತದ ಹಿಂದೆ ವಚನಗಳಲ್ಲಿ ಕೂಗಿನ ಕುಲವಿಲ್ಲ, ಕೂಗಿನ ಕುಲಕ್ಕೆ ಹೊರಗಾಯಿತು, ಕೂಗಿನ ದನಿಗೆ ಹೊಱಗು, ಕೂಗಿಂದತ್ತ ನಮೋ, ಕೂಗಿನ ಕುಲಕ್ಕೆ ಹೊಱಗಲ್ಲ – ಎಂದು ಹೇಳುತ್ತಾನೆ. ಒಂದು ವಚನದಲ್ಲಿ ಮಾತ್ರ ಕೂಗಿನ ಹೊಱಗು ಮುಂತಾಗಿ ಯಾವುದೂ ಇಲ್ಲ, ಅದು ಆತನ ವಚನ ಹೌದೋ ಅಲ್ಲವೋ? ಕೂಗಿನ ಕುಲ, ಕೂಗಿನ ದನಿ ಮುಂತಾದವುಗಳಿಗೆ ಅನಿತ್ಯವಾದ ದೇಹ, ಸಂಸಾರ, ವಿಷಯಸುಖ ಎಂದು ಅರ್ಥಮಾಡಬಹುದಾಗಿದೆ.

ನಾರಿಯೂ ಮರನೂ ಕೂಡಿ ಬಾಗಲಿಕ್ಕಾಗಿ ಶರಚರಿಸುವುದಕ್ಕೆಡೆಯಾಯಿತ್ತು[9]

ಎಂದು ಆತ ಕೊಡುವ ಉದಾಹರಣೆಯಿಂದ ಆತ ಯೋಧನಿದ್ದನೆಂದು ಊಹಿಸಬಹುದು.

ನಿಜ ತತ್ವವನರಿದವನ, ಮತ್ತು ಅರಿಯದವನ ವಿಚಾರ ರಚನೆ ಎಂತಹದು ಎಂಬುದನ್ನು ಹೃದಯಂಗಮ ಉದಾಹರಣೆಗಳಿಂದ ಕೆಳಗಿನ ವಚನದಲ್ಲಿ ತಿಳಿಸುತ್ತಾನೆ:

ಅಪ್ಪುವಿನ ಶಿಲೆಯ ಉಳಿಯ ಮೊನೆಯಲ್ಲಿ ಚಿತ್ರಿಸಬಹುದೆ?
ಅರಗಿನ ಘಟವ ಉರಿಯ ಮೊನೆಯಲ್ಲಿ ಅಕ್ಷರವ ಬರೆಯಬಹುದೇ?
ಮೃತ್ತಿಕೆಯ ಹರಿಗೋಲನೇರಿ ನದಿಯ ತಪ್ಪಲಿಗೆ ಹೋಗಬಹುದೆ?
ನಿಜ ನಿಶ್ಚಯವನರಿಯದವನ ವಾಚಾರಚನೆ ಇಷ್ಟಲ್ಲದಿಲ್ಲ.
ನಿಜ ತತ್ವವನರಿದವನ ವಾಚಾರಚನೆ ಕುರುಹೆಂತುಟೆಂದಡೆ:
ಶಿಲಯೊಳಗಣ ಸುರಭಿಯಂತೆ; ಪ್ರಳಯದೊಳಗಾಗದ ನಿಜನಿವಾಸದಂತೆ,
ಆಯುಧ ಘಾಯದಂತೆ, ಸುಘಾಯದ ಸುಖದಂತೆ,
ಇಂತೀ ಭಾವರಹಿತವಾದ ಭಾವಜ್ಞನ ತೆರ,
ಕೂಗಿಂಗೆ ಹೊರಗು ಮಹಾ ಮಹಿಮ ಮಾರೇಶ್ವರಾ

ನಗೆಯಮಾರಿತಂದೆ ಬಸವಣ್ಣನವರ ಸಮಕಾಲೀನ. ಆತನ ಕಾಯಕ ನಗಿಸುವುದು. ಬೇರೆ ಬೇರೆ ಕಾಯಕಗಳು ಆತನಿಗೆ ಸರಿಬರದೆ ಹೋಗಿ ನಗೆಯ ಕಾಯಕ ಕೈಕೊಂಡನಂತೆ; ಕೆಳಗಿನ ವಚನ ಇದನ್ನು ಹೇಳುತ್ತದೆ:

ಭಕ್ತನಾಗಿ ಹುಟ್ಟಿದ್ದು ಮತ್ತೊಬ್ಬರಲ್ಲಿ ಬೇಡುವುದೆ ಕಷ್ಟ;
ಹೊತ್ತು ಹೋರಿ ಭೂಮಿಯ ಅಗೆವಲ್ಲಿ
ಮೊತ್ತದ ಜೀವಂಗಳು ಸತ್ತುದ ದೃಷ್ಟವ ಕಂಡಲ್ಲಿಯೆ,
ಮಾಡುವ ಮಾಟ ನಷ್ಟ,
ಇದನರಿತು ವಿರಕ್ತನಾಗಿ ಹೋದಲ್ಲಿ.
ಮತ್ತೊಬ್ಬರ ಅಪ್ಪ ಅಣ್ಣ ಎಂದು ಚಿತ್ತವ ಕಲಕುವುದು ಕಷ್ಟ,
ಹೊತ್ತ ದೇಹಕ್ಕೆ ನಗೆಯ ಚಿತ್ತದ ಕಾಯಕ, ಇದನೊಪ್ಪುಗೊ ಆತುರವೈರಿ
ಮಾರೇಶ್ವರಾ,[10]

ಶಿವನು ಈತನನ್ನು ಪರೀಕ್ಷೆ ಮಾಡಿದ ಕಥೆ ಬಹು ಸೊಗಸಾಗಿದೆ: ಒಂದು ಹೊಳೆ ತುಂಬಿ ಹರಿಯುತ್ತಿತ್ತು. ಯಾವುದೋ ಊರಿಗೆ ಕಾಯಕಕ್ಕೆ ಹೋಗಿದ್ದ ಮಾರಯ್ಯ ಆ ಹೊಳೆಯನ್ನು ಹೇಗೆ ದಾಟಬೇಕೆಂದು ಯೋಚಿಸುತ್ತಿರಲು ಅಲ್ಲಿಗೆ ಶಿವ ವೃದ್ಧ ಜಂಗಮನಾಗಿ ಮುದಿ ಎತ್ತು ಗಿರಿಜೆಯೊಡನೆ ಬಂದ. ‘ನೀನು ಎಲ್ಲಿಗೆ ಹೋಗುವೆ?’ ಎಂದು ಮಾರಯ್ಯನನ್ನು ಶಿವ ಕೇಳಿದ. ‘ಹಾದರವಳ್ಳಯಲಿರ್ದು, ಕಣ್ಣೂರ ನೋಡಿ, ಕನ್ನೆವಳ್ಳಿಗೆ ಕಾಯಕಕ್ಕೆ ಹೋಗುತ್ತಿಹೆ’ ಎಂದ ಮಾರಯ್ಯ ‘ಹಾಗಾದರೆ ಹೊಳೆ ಹೇಗೆ ದಾಟುವೇ?, ಎಂದು ಕೇಳಿದ ಶಿವ. ‘ನೀನು, ನಿನ್ನ ಹೆಣ್ಣು, ನಿನ್ನ ಹೆಂಡತಿ ಹೇಗೆ ದಾಟುವಿರಿ?’ ಎಂದು ಶಿವನನ್ನು ಕೇಳಿದ ಮಾರಯ್ಯ. ‘ನಾನು ಎತ್ತಿನ ಮೇಲೆ ಕೂಡ್ರುವೆ, ನನ್ನ ಹೆಂಡತಿ ನನ್ನ ಹೆಗಲ ಮೇಲೆ ಕೂಡ್ರುವಳು, ಹೀಗೆ ದಾಟುವೆವು ಸುಲಭವಾಗಿ’ ಎಂದ ಶಿವ. ಅದಕ್ಕೆ ಮಾರಯ್ಯ ‘ಹಾಗಾದರೆ ನಾನು ನಿನ್ನ ಹೆಂಡತಿಯ ಹೆಗಲ ಮೇಲೆ ಕುಳಿತು ದಾಟುವೆ’ ಎಂದ. ಆ ಮಾತು ಕೇಳಿ ಶಿವನಕ್ಕ. ಕೂಡಲೇ ಮಾರಯ್ಯ ಕಾಯಕ ಕೇಳಿದ.

ಇಲ್ಲಿ ಶಿವ ಏಕೆ ನಕ್ಕ? ಮಾರಯ್ಯ ಹಾಗೇಕೆ ಹೇಳಿದ? ನಿನ್ನ ಸತಿಯ ಹೆಗಲ ಮೇಲೆ ಕುಳಿತು ದಾಟುವೆನೆಂಬುದು ಉದ್ಧಟತನದ ಮಾತಲ್ಲವೆ? ಇದರಲ್ಲಿ ಸೂಕ್ಷ್ಮವಿದೆ. ಎತ್ತಿನ ಮೇಲೆಯೇ ಶಿವ ಮತ್ತು ಪಾರ್ವತಿ ಇಬ್ಬರೂ ಕುಳಿತುಕೊಳ್ಳಬಹುದು. ಹೀಗಿರಲು ಶಿವನ ಹೆಗಲ ಮೇಲೆ ಪಾರ್ವತಿ ಕೂಡ್ರುವ ಅವಸರವೇನಿದೆ? ಶಿವ ಚೇಷ್ಟೆ ಮಾಡಿದ. ಅದನ್ನರಿತ ಮಾರಯ್ಯ ತಾನೂ ಚೇಷ್ಟೆಮಾಡಿ, ‘ನಿನ್ನ ಹೆಂಡತಿಯ ಹೆಗಲಮೇಲೆ ಕುಳಿತು ಬರುವೆ’ ಎಂದ. ಈ ಮೊದಲೇ ಆತ ನಿನ್ನ ಹೆಣ್ಣು, ನಿನ್ನ ಹೆಂಡತಿ, ನೀನು ಹೇಗೆ ದಾಟುವಿರಿ ಎಂದು ಕೇಳುವಾಗ ಕುಚೇಷ್ಟೆ ಮಾಡಿದ್ದ. ಇಲ್ಲಿ ಹೆಣ್ಣು ಎಂದರೆ ತಲೆಯಲ್ಲಿರುವ ಗಂಗೆ. ಶಿವ ವೇಷ ಮರೆಯಿಸಿಕೊಂಡರೂ ನಿಜವಾದ ಭಕ್ತ ಆತನನ್ನು ನಿಜರೂಪದಲ್ಲಿ ಕಾಣಬಹುದು.

ನಗೆಯ ಮಾರಿತಂದೆಗಳ ವಚನಗಳು ನೂರು ಉಪಲಬ್ಧವಿವೆ. ಆತನ ಅಂಕಿತ ‘ಅತುರವೈರಿ ಮಾರೇಶ್ವರಾ’, ಆದರೆ ‘ಅತುರವೈರಿಗೆ’ ಬದಲಾಗಿ ಕೆಲವು ವಚನಗಳಲ್ಲಿ, ‘ಮನಸಿಜವೈರಿ ಮಾರೇಶ್ವರಾ;, ಮಾರಮಥನಾ ಮಾರೇಶ್ವರಾ’, ‘ಸಾರಥಿಯ ಪತಿಯೊಡೆಯಸುತವೈರಿ ಮಾರೇಶ್ವರಾ’ – ಎಂದು ಬಳಸುತ್ತಾನೆ. ಇದರಿಂದ ಅತುರವೈರಿ ಎಂದರೆ ಶಿವನೆಂದೇ ಅರ್ಥವಾಗುತ್ತದೆಂದು ಊಹಿಸಬಹುದು. ಆತುರ ಎಂದರೆ ಕಾಮ ಎಂದೇ ಅರ್ಥಯಿಸಬೇಕಾಗುತ್ತದೆ.

ನಗೆಯ ಮಾರಿತಂದೆಯ ವಚನಗಳ ಭಾಷೆ ತೀರ ಸಾದಾ; ಆಡುಮಾತಿಗೆ ಹತ್ತಿರವಾದುದು; ಅಷ್ಟೇ ಪ್ರಖರ ವಿಚಾರಗಳು. ಖಂಡಿತವಾದಿ ಈತ. ಮಾರಯ್ಯ ಅಶ್ಲೀಲವೆನಿಸುವ ಪದಗಳ್ನು ಉಪಯೋಗಿಸುತ್ತಾನೆ.

ಅವಳನವನೇರಿ ಕಳಚಿತ್ತು ಬಿಂದು
ಇವರೆಲ್ಲರ ಕಂಡು ನಾನವಳಿಗೆ ಹೋಗಲಾಗಿ
ಮಾತಿಂಗೆ ಮಾತು ಸರಿ, ತೂತಿಂಗೆ ತೂತು ಸರಿ
ಮಾಡುವರ ಮಾಟಕ್ಕಂಜಿ, ತೂತ ಬಿಟ್ಟಡೆ
ಅವಳವಳ ಸಂದಿಯೊಳಗೆ ಅಡಗಿದ ಭವದ ಅಂದವ ಹೇಳಾ
ಹೆಣ್ಣಿನ ಮೇಲಿನ ಮೋಹ ಯೋನಿ ಕಂಡಾಗ ದಣಿಯಿತ್ತು
ಅಣ್ಣನ ಹೆಂಡಿರ ತಮ್ಮ ಹಾಕಿಕೊಂಡು ಕೊಡದಿರಲಾಗಿ

ಈ ಮಾತುಗಳು ಸಂದರ್ಭಕ್ಕೆ ತಕ್ಕಂತೆ ಉಪಯೋಗವಾಗಿ, ಅಶ್ಲೀಲ ಮರೆಯಿಸಿ ಅರ್ಥಗೌರವವನ್ನು ಹೆಚ್ಚಿಸುತ್ತವೆ. ‘ತೂತು’ ಎಂಬ ಶಬ್ದವನ್ನು ಸಂಸಾರ, ಹುಟ್ಟು, ಮೋಹವ್ಯಾಮೋಹ, ಕಾಮ ಮುಂತಾದ ಅರ್ಥಗಳಲ್ಲಿ ಈತ ತನ್ನ ವಚನಗಳಲ್ಲಿ ೨೦ ಸಲ ಬಳಸಿದ್ದಾನೆ.

ಕಿಂಚಿತ್ತು ತೂತಿಗಾಗಿ ಆತನ ಬಿಡದಿರು; ‘ತೂತ ತರಿ, ಸಂದೇಹದ ಭವವನರಿ
ಅವರಿಗೆ ಅದು, ನನಗಿದು ತೂತಿನ ಹಾದಿಯೆ

ನಗೆಮಾರಿ ತಂದೆಯ ಉಳಿದ ವಚನಗಳನ್ನು ನೆನಪಿಡದಿದ್ದರೂಅಡ್ಡಿಯಿಲ್ಲ, ಒಂದು ವಚನವಂತು ಮರೆಯಲು ಸಾಧ್ಯವಿಲ್ಲ. ಸಂಸ್ಕೃತ ಭಾಷೆ ಮತ್ತು ಪುರೋಹಿತ ವರ್ಗದವರನ್ನು ಕುರಿತು ಆಡಿದ ಆ ವಚನ ಆ ಕಾಲದ ಜನಜೀವನಕ್ಕೆ ಕನ್ನಡಿ ಹಿಡಿದಿದೆ. ಸಾಮಾನ್ಯರನ್ನು ದೊಡ್ಡ ಜಾತಿಯವರು ಹೇಗೆ ಶೋಷಣೆಗೆ ಒಳಗು ಮಾಡುತ್ತಿದ್ದರೆಂಬುದು ಇದರಿಂದ ತಿಳಿಯುತ್ತದೆ.

ಕಲ್ಲಿಯ ಹಾಕಿ ನೆಲ್ಲವ ತುಳಿದು ಗುಬ್ಬಿಯ ಸಿಕ್ಕಿಸುವ ಕಳ್ಳನಂತೆ,
ವಾಗದ್ವೈತವ ಕಲಿತು,
ಸಂಸ್ಕೃತದ ಮಾತಿನ ಪಸರದ ಮುಂದೆ ಇಕ್ಕಿಕೊಂಡು,
ಮತ್ಸ್ಯದ ವಕ್ತ್ರದಲ್ಲಿ ಗ್ರಾಸವ ಹಾಕುವನಂತೆ,
ಅದೇತರ ನುಡಿ? ಮಾತಿನ ಮರೆ ಆತುರವೈರಿ ಮಾರೇಶ್ವರಾ[11]

ಅಗಲವಾಗಿ ನೆಲ್ಲನ್ನು ಹರವಿ ಅದರ ಮೇಲೆ ಬಲೆಯನ್ನು ಹಾಸಿ ಗುಬ್ಬಿಗಳನ್ನು ಹಿಡಿಯುತ್ತಾರೆ, ಕಳ್ಳರು. ಇವರಂತೆ ಪುರೋಹಿತರು ಕಳ್ಳರು. ಅವರ ಬಲೆ ಎಂತಹದು? ಈ ಜನ ಮಾತಿನ ಅದ್ವೈತದಿಂದ ಸಂಸ್ಕೃತ ಭಾಷೆಯನ್ನು ಉಪಯೋಗಿಸಿ, ಮಂತ್ರ ಹೇಳಿ ಮುಗ್ದ ಜನರನ್ನು ಮೋಸಗೊಳಿಸುತ್ತಾರೆ. ಅವರನ್ನು ಶೋಷಣೆಗೀಡು ಮಾಡುತ್ತಾರೆ. ಇದೇ ಅವರಬಲೆ. ವಾಗದ್ವೈತ, ಸಂಸ್ಕೃತ, ಮಂತ್ರಗಳನ್ನು ಗುಬ್ಬಿ ಬಲೆಗೆ ಹೋಲಿಸಿದ್ದು ಮತ್ತು ಪುರೋಹಿತರನ್ನು ಕಳ್ಳರಿಗೆ ಹೋಲಿಸಿದ್ದು ಅತ್ಯಂತ ಅರ್ಥಪೂರ್ಣವಾದುದು. ಸಾಹಿತ್ಯಲೋಕದಲ್ಲಿ ಈ ಹೋಲಿಕೆ ಹೊಸದು. ಬೇರೆ ಕಡೆಗೆ ಕಂಡುಬರದು. ನಗೆಮಾರಿ ತಂದೆಗಿರುವ ಸಾಮಾಜಿಕ ಕಳಕಳಿ, ಸಾಮಾನ್ಯರ ಬಗೆಗಿದ್ದ ಅನುಕಂಪ, ದೊಡ್ಡ ಜಾತಿಯವರ ಬಗೆಗಿದ್ದ ರೋಷ ಇಲ್ಲಿ ಎದ್ದು ಕಾಣೂತ್ತದೆ. ಇನ್ನೊಂದು ವಚನದಲ್ಲಿ ಇದೇ ಭಾವಿಸಿದೆ. ಆದರೆ ಅದರ ನಿರೂಪಣೆ ಬೇರೊಂದು ರೀತಿಯದಾಗಿದೆ.

ಸಮತೆ ಸಮಾಧಾನ ಹೇಳುವ ಪುಸ್ತಕ ಎತ್ತಿನ ಮೇಲೆ, ಹೊಯಿವ ದೊಣ್ಣೆ
ಕೈಯಲ್ಲಿ, ಲೇಸಾಯಿತ್ತು ಈತನಿರವು.
ಮಾತಿನಲ್ಲಿ ಆಗಮ, ಮನದಲ್ಲಿ ತೂತಿನ ಕುಡುಕೆಯ ಆಸೆ, ಇದು ನೀತಿಯಲ್ಲ,
ಆತುರವೈರಿ ಮಾರೇಶ್ವರಾ[12]

ಅದರ ಮೂರು ನಾಲ್ಕೇ ಸಾದಾ ಮಾತುಗಳಲ್ಲಿ ಗಹನವಾದ ಆಧ್ಯಾತ್ಮ ವಿಚಾರವನ್ನು ಮನಮುಟ್ಟುವಂತೆ ಹೇಳುವ ಕಲೆಯೂ ಮಾರಯ್ಯನಿಗೆ ಗೊತ್ತಿದೆ.

ಕಂಗಳ ಮುಂದಳ ಕಾಮವ ಕೊಂದು, ಮನದ ಮುಂದಳ ಆಸೆಯ ತಿಂದು,
ಆತನನರಿ, ಆತುರವೈರಿ ಮಾರೇಶ್ವರಾ[13]

ಮನಸಂದ ಮಾರಿತಂದೆಗಳ ಕಾಲ ಕ್ರಿ.ಶ.೧೧೬೦ ಎಂದು ಕವಿಚರಿತೆಕಾರರು ಹೇಳುತ್ತಾರೆ. ಈತನ ವಚನಗಳು ೧೦೦. ‘ಮನಸಂದಿತ್ತು ಮಾರೇಶ್ವರಾ’ ಎಂಬುದು ಈತನ ಅಂಕಿತ. ಅನುಭಾವದ ದೃಷ್ಟಿಯಿಂದ ಈತನ ವಚನಗಳು ಮೇಲ್ಮಟ್ಟದವಾಗಿದೆ. ಹೇಳುವ ಮಾತು ನೇರ, ಆಡಂಬರವಿಲ್ಲ. ಚಿಕ್ಕ ಮಾತು, ಚಿಕ್ಕ ವಚನಗಳು, ಕೊಡುವ ಉದಾಹರಣೆ ಉಪಮಾನಗಳು ಜೀವಂತವಾದುವು. ‘…ಅವನ ವಚನಗಳು ಗಾತ್ರದಲ್ಲಿ ಚಿಕ್ಕವಾದರೂ ಅವುಗಳ ಸರಳತೆ ಅಭಿವ್ಯಕ್ತಿಗೆ ಒಂದು ಹಿರಿತನವನ್ನು ತಂದುಕೊಟ್ಟಿವೆ…’[14] ಎನ್ನುತ್ತಾರೆ ಡಾ|| ಎಂ.ಚಿದಾನಂದಮೂರ್ತಿಯವರು.

ಅಂಗಲಿಂಗಗಳ, ಇಷ್ಟಪ್ರಾಣಗಳ ಒಂದಾಗುವಿಕೆಯ ಬಗ್ಗೆ ಸುಂದರ ಉಪಮಾನದಿಂದ ಮನಸಂದ ಮಾರಿತಂದೆಈ ವಚನದಲ್ಲಿ ಹೇಳಿದ್ದಾನೆ:

ಅಂಗಕ್ಕೆ ಕುರುಹೆಂಬುದು ಲಿಂಗ, ಆತ್ಮಂಗೆ ಅರಿವೆಂಬುದೊಂದು ಲಿಂಗ,
ಪರುಷ ಲೋಹದಂತೆ ಕೂಡುವನ್ನಬರ ಉಭಯನಾಮರೂಪವಾಯಿತ್ತು
ಕುಡಿದ ಮತ್ತೆ ಪರುಷವೆಂಬ ನಾಮವಿಲ್ಲ,
ಲೋಹವೆಂಬ ಕುರುಹಿಲ್ಲ, ಹೇಮವೆಂಬ ನಾಮವಾಯಿತ್ತುಇಷ್ಟಪ್ರಾಣ
ಹಾಗಾದಲ್ಲಿ ಮನಸಂದಿತ್ತು ಮಾರೇಶ್ವರಾ[15]

ಲಿಂಗವನ್ನು ಹಾವಿಗೆ, ಅಗ್ನಿಗೆ ಹೋಲಿಸಿ ಹೇಳುವ ಈ ವಚನವೂ ಅಂಗ ಲಿಂಗಗಳ ಕೂಟದ ಭೇದವನ್ನು ಮನೋಜ್ಞವಾಗಿ ಹೇಳುತ್ತದೆ:

ಹರಿವ ಹಾವು, ಉರಿವ ಕಿಚ್ಚೆಂದಡೆ ಮುಟ್ಟುವವರಿಗೆ ಭೀತಿಯಲ್ಲವೆ?
ಅರಿದು ಹಿಡಿದಡೆ ಉರಗ ಹೊರಳೆಗೆ ಸರಿ. ಸ್ತಂಭಕ್ಕೆ ಅಗ್ನಿಚಂದನದ ಮಡು.
ಲಿಂಗವ ಹಿಡಿಯ ಬಲ್ಲಡೆ ಅಂಗ ನಿರಂಗದ ಕೂಟ,
ಉಭಯದ ಸಂಗವನರಿದಲ್ಲಿ ಮನಸಂದಿತ್ತು ಮಾರೇಶ್ವರಾ[16]

ಕಾಯಕದ ಬಗ್ಗೆ ಮನಸಂದ ಮಾರಿತಂದೆ ಲೋಕಕ್ಕೆ ಒಂದು ಮಹಾ ಸಂದೇಶವನ್ನು ಕೊಟ್ಟಿದ್ದಾನೆ. ಕಾಯಕವಿಲ್ಲದ ಜೀವನ ಸಲ್ಲ. ಕಾಯಕವಿಲ್ಲದಿದ್ದರೆ ಅರಿವೇ ಇಲ್ಲ. ದುಡಿಯದೆ, ಕೊಡುವವರ ಮನೆಗೆ ಮತ್ತೆ ಮತ್ತೆ ಹೋಗಿ ಬೇಡುವುದು ಚಂದವಲ್ಲ.

ಕಾಯವಿಡಿದಿಹನ್ನಬರ ಶಿವಭಕ್ತಂಗೆ ಕಾಯಕವೆ ಕೈಲಾಸ.
ಕಾಯಕವಿಲ್ಲದವನ ಅರಿವು ವಾಯವಾಗಿತ್ತು.
ಅಡುಗೂಲಿಯ ಮನೆಯಂತೆ ಗಡಿಗೆಯ ಗಂಜಿಯಾಸೆ ಬೇಡ.
ಕೊಡುವರೆಂದೊಬ್ಬರ ಮನೆಗೆ ಅಡಿಗಡಿಗೆ ಹೋಗಬೇಡ.
ಇಂತಿವರಿಡಿಯ ಕಾಬುದಕ್ಕೆ ಮೊದಲೆ ಅಡಗಿದೆಯಲ್ಲಾ,
ಮನಸಂದಿತ್ತು ಮಾರೇಶ್ವರಾ[17]

ಮಾರೇಶ್ವರೊಡೆಯರ ಕಾಲ ಕ್ರಿ.ಶ.೧೧೬೦ ಎಂದು ಕವಿಚರಿರೆಕಾರರು ಹೇಳುತ್ತಾರೆ. ಈತನ ಚರಿತ್ರೆ ತಿಳಿದುಬಂದಿಲ್ಲ. ಈತನ ಅಂಕಿತ ‘ಮಾರೇಶ್ವರಾ’. ಈತನವು ಕೇವಲ ಮೂರು ವಚನಗಳು ದೊರಕಿವೆ. ಅವುಗಳಲ್ಲಿಯೂ ಏನೂ ವಿಶೇಷವಿಲ್ಲ, ಮೂರು ವಚನಗಳು ಒಂದು ರೀತಿಯ ಬೆಡಗಿನ ವಚನಗಳೇ, ಇಲ್ಲಿ ಒಂದು ವಚನ ಉದಾಹರಿಸಿದೆ:

ಸತ್ಯದ ಹಿರಿಯರ ಕತ್ತಲೆ ಕಚ್ಚಿ ಹುತ್ತವನೇರಿತ್ತಲೈದಾರೆಯಲ್ಲಾ.
ಅಲ್ಲದ ಚೇಳಿನ ಚೆಲ್ಲಕ್ಕೆ ಹೋಗಿ ಇವರೆಲ್ಲರೂ ನಾಣುಗೆಟ್ಟರಲ್ಲಾ.
ಇವರೆಲ್ಲರ ಕಾರ್ಯ ಇಲ್ಲಿಯೇ ಉಳಿಯಿತ್ತು. ಬಲ್ಲವರಾರೋ ಮಾರೇಶ್ವರಾ[18]

ಮೋಳಿಗೆಯ ಮಾರಯ್ಯ ಬಸವ ಸಮಕಾಲೀನ ಶರಣರಲ್ಲಿ ಮಹಾಪುರುಷ. ಅರಸೊತ್ತಿಗೆಯನ್ನು ಬಿಟ್ಟುಬಂದು ಬಡತನವನ್ನು ಅಪ್ಪಿಕೊಂಡ ಮಹಿಮ. ನಿತ್ಯ ಕಾಡಿಗೆ ಹೋಗಿ ಕಟ್ಟಿಗೆ ಕಡಿದು ಹೊರೆಕಟ್ಟಿ ಮಾಇ ಜೀವಿಸಿದ ಆತನ ಜೀವನ ದಿವ್ಯ ಜೀವನ; ಆ ಜೀವನ ಶರಣಧರ್ಮದ ಸಾರವಾಗಿದೆ. ಬಸವಣ್ಣನಂಥವರನ್ನೇ, ಅನುಭವವಾಗಿಸಿ ಜೀವಿಸಿದ ಶ್ರೇಷ್ಠ ಶರಣ.

ಮೋಳಿಗೆ ಮಾರಯ್ಯನ ವಚನಗಳು ೮೧೯. ‘ನಿಃಕಳಂಕ ಮಲ್ಲಿಕಾರ್ಜುನಾ’ ಎಂಬುದು ಆತನ ಅಂಕಿತ. ‘ಅವನ ಅಂಕಿತತದಂತೆ ಅವನ ಸ್ವಭಾವ, ಅವನ ಸ್ವಭಾವದಂತೆ ಅವನ ವಚನಗಳು…ವಚನಗಳಲ್ಲಿ ಭಾಷೆಯ ಅಬ್ಬರವಿಲ್ಲ, ಭಾವದ ಜಟಿಲತೆಯಿಲ್ಲ. ಒಂದು ಬಗೆಯ ಮೃದುತ್ವಗುಣ ಅವನ ವಚನಗಳಲ್ಲಿ ಸರ್ವವ್ಯಾಪ್ತಿಯಾಗಿದೆ.[19] ಇನ್ನೊಬ್ಬರ ಹಂಗಿಗೆ ಅಡಿಯಾಳಾದರೆ ಹಿರಿಯತನ ಉಳಿಯುವುದಿಲ್ಲವೆಂಬುದು ಈ ವಚನದಲ್ಲಿ ಸೊಗಸಾಗಿ ಮೂಡಿದೆ:

ವೇದವ ಕಲಿತು, ಶಾಸ್ತ್ರವನೋದಿ,
ನಾನಾ ಪುರಾಣಂಗಳಲ್ಲಿ ಪರಿಣತೆಯಾದೆವೆಂದು
ಶ್ರುತಿ ಸ್ಮೃತಿಗಳಲ್ಲಿ ಪರತತ್ವವ ನೋಡಿ ಕಂಡಿವೆಹೆಂದು ಹೇಳುತ್ತಿರ್ಪ
ಹಿರಿಯರೆಲ್ಲರೂ, ಇಕ್ಕುವ ದಾತಾರನ ಬಾಗಿಲು ಕಾಯ್ದು, ಚಿಕ್ಕಮಕ್ಕಳಾದರು.
ದೃಷ್ಟವ ಬೋಧಿಸುವ ಹಿರಿಯರೆಲ್ಲರೂ ಕೆಟ್ಟರಲ್ಲಾ!
ಉತ್ತರದ ಬಲೆಗೆ ಸಿಕ್ಕದ ಮೂಷಕನಂತೆ;
ಇರ್ವದೃಷ್ಟವ ಕಂಡು ಮತ್ತೆ ಹಿರಿಯರೆಂದು ಹೋರುತ್ತಿರ್ಪ ಮಿಟ್ಟಿಯ
ಭಂಡರು ನೋಡಾ, ನಿಃಕಳಂಕ ಮಲ್ಲಿಕಾರ್ಜುನಾ[20]

ಒಡೆಯ ಆಳು ಎಂಬ ಭೇದ ಒಳ್ಳೆಯದಲ್ಲ ಎಂದು ಹೇಳುವ ಈವಚನ ಮಾರಯ್ಯ ದೊರೆ ಇದ್ದುದು ನಿಶ್ಚಯ ಎಂಬುದನ್ನು ಸಾರುವಂತಿದೆ.

ಆಳಿನಪಮಾನ ಆಳ್ದಂಗೆಂದಲ್ಲಿ, ಆಳ್ದನ ಅಪಮಾನ ಆಳಿಗೆ ಬಂದಲ್ಲಿ,
ಉಭಯದ ನೋವು ಒಂದೆಂದು ತಿಳಿದಲ್ಲಿ,
ಕರ್ತನ ಭೃತ್ಯ ನುಡಿದನೆಂದು ಹೊತ್ತು ಹೋರಲೇತಕ್ಕೆ?
ತನ್ನ ಮನೆ ಬೇವಲ್ಲಿ ಕೆಡಹಿ ಕಿತ್ತಡೆ ಕೇಡೆ?
ನಾನೊಡೆಯ ಇವನಡಿಗನೆಂದು ಪಡಿಪುಚ್ಚವ
ಮಾಡುವನ್ನಕ್ಕ ಅದು ತುಡುಗುಣಿಯ ಸವಿತ.
ನೊಡೆಯನಲ್ಲ ನಾನಾಡಿಗನಲ್ಲ ನಿಃಕಳಂಕ ಮಲ್ಲಿಕಾರ್ಜುನಾ[21]

ಕೆಲವು ಉದಾಹರಣೆ, ಉಪಮಾನಗಳು ಆತ ಮಹಾಯೋಧನಿದ್ದನೆಂದೂ ದೊರೆಯಿದ್ದನೆಂದೂ ತಿಳಿಸುತ್ತವೆ.

ಹಿಡಿತೆಯ ಹಿಡಿದು ಇರಿಯಬೇಕಲ್ಲದೆ ಮೊನೆಯ ಹಿಡಿದು ಇರಿವವರುಂಟೆ’?
ರಣಕ್ಕೆ ಅಲಗೇರೆದಲ್ಲಿ ಹಲುಬಿದೆಡೆ ಬಿಡುವರೆ’?
ಬಲುಗಯ್ಯನೊಡನೆ ಹಗೆವಡೆದು ಕೊಲೆಗಂಜಲೇಕೆ’?
ಹೆಣನ ಕಂಡಂಜುವಂಗೆ ರಣದ ಸುದ್ದಿಯೇಕೆ’?
ಆಳಾಗಿದ್ದು ಅರಸನಾಗಬಹುದಲ್ಲದೆ ಅರಸಾಗಿದ್ದು ಆಳಾಗಬಾರದು’.
ರಾಜರಲ್ಲಿ ಹೊಕ್ಕು ಮತ್ತೆ ಅವರ ಆಗುಚೇಗೆಯ ಹೇಳಬೇಕು.’
ಇರು ಎಂಬುದಕ್ಕೆ ಮುನ್ನವೆ ಒಡಲು ಹರಿಯಿತ್ತೆ’?

ಮೋಳಿಗೆಯ ಮಾರಯ್ಯನೂ ತನ್ನ ವಚನದಲ್ಲಿ ವೀರಶೈವ ಶಬ್ದವನ್ನು ಬಳಸಿದ್ದಾನೆ.

ಸತ್ತಿಗೆ ಕಾಯಕದ ಮಾರಿತಂದೆಯು ಕ್ರಿ.ಶ. ೧೫೦೦ರಲ್ಲಿ ಇದ್ದನೆಂದು ಕವಿಚರೆತೆಗಾರರು ಹೇಳುತ್ತಾರೆ. ಆದರೆ ಆತನ ವಚನದಲ್ಲಿ ಬರುವ ‘ಎನ್ನಂಗದ ಸತ್ತಿಗೆಯ ಕಾಯಕ ಬಸವಣ್ಣಂಗೆ ನೆಳಲು ಹಿಂಗಿದಾಗವೇ ಕಾಯಕ ನಿಂದುದೆಂಬ ಭಾಷೆ…’ ಎಂಬ ಮಾತಿನಿಂದ ಆತ ಬಸವಣ್ಣನವರ ಸಮಕಾಲೀನನೆಂದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಅಲ್ಲದೆ ಈತ ಬಸವಣ್ಣನಿಗೆ ಸತ್ತಿಗೆ ಹಿಡಿಯುತ್ತಿದ್ದನೆಂದು ಗುರುರಾಜ ಚರಿತ್ರೆಯಲ್ಲಿ ಹೇಳಿದೆ.[22]

ಸತ್ತಿಗೆ ಕಾಯಕದ ಮಾರಿತಂದೆಯ ೧೦ ವಚನಗಳು ದೊರಕಿವೆ. ಈತನ ಅಂಕಿತ ಐಘಂಟೇಶ್ವರಲಿಂಗ, ತನ್ನ ಕಾಯಕವನ್ನು ಈ ಕೆಳಗಿನ ವಚನದಲ್ಲಿ ರೂಪಕ ಮಾಡಿದ್ದಾನೆ.

ತತ್ವದ ಕಾವು, ನಿಜ ನಿಶ್ಚಯದ ಬಿದಿರು, ಭಕ್ತಿಜ್ಞಾನ ವೈರಾಗ್ಯ ಇಂತೀ ತ್ರಿವಿಧ
ಮುಪ್ಪುರಿಗೂಡಿದ ನೂಲಿನಲ್ಲಿ ಕಟ್ಟುಗಳ ಕಟ್ಟಿ ಅಹಂಕಾರ ಗರ್ವದ ನಿರುತವ ಬಿಡಿಸಿ
ಭಕ್ತಿ ಸತ್ಯಕ್ಕೆ ತೆಲವಾಗುವಂತೆ ಭಾಗ ಒಪ್ಪವ ಮಾಡಿ
ಕರ್ಕಶ ಮಿಥ್ಯವೆಂಬ ಸಿಗುರೆದ್ದರೆ ಕೆತ್ತಿಹಾಕಿ,
ಛತ್ರಕ್ಕೆ ಹೆಚ್ಚು ಕುಂದಿಲ್ಲದ ವರ್ತುಳಾಕಾರಕ್ಕೆ
ಚಿತ್ತವಸ್ತುವಿನಲ್ಲಿ ತೊಲಗದಂತೆ ಸಚ್ಚಿದವಾಗಿ ಅಷ್ಟಾವಧಾನಗಳೆಂಬ ಕಪ್ಪಡವ ಕವಿಸಿ
ಚತುಷ್ಟಯಂಗಳೆಂಬ ಸೆಱಗು ತಪ್ಪದೆ ಕತ್ತರಿಸಿ ಚಿತ್ತಹೆರೆಹಿಂಗದ ಲೆಕ್ಕಣಿಕೆಯಲ್ಲಿ
ಚಿತ್ರವ ಬರೆದು ಅಧಮ ಊರ್ಧ್ವವೆಂಬುದಕ್ಕೆ ಬಲುತೆಕ್ಕೆಯನಿಕ್ಕಿ
ಸರ್ವವರ್ಮಂಗಳೆಂಬ ಬೆಣಗೀಲನಿಕ್ಕಿ
ಹಿಡಿವುತ್ತಿದ್ದೆ ಛತ್ರವ ನೆಳಲಿಲ್ಲದಂತೆ, ಐಘಂಟೇಶ್ವರ ಲಿಂಗಕ್ಕೆ ಬಿಸಿಲು
ಮಳೆ ಗಾಳಿಗೆ ಹೊರಗಾಗಬೇಕೆಂದು[23]

ಹೆಂಡದ ಮಾರಯ್ಯ ಬಸವಣ್ಣನವರ ಸಮಕಾಲೀನ. ಹೆಸರೇ ಹೇಳುವಂತೆ ಆತನ ಕಾಯಕ ಹೆಂಡ ಮಾರುವುದು. ಆದರೆ ಆತನ ಕಾಯಕದ ರೀತಿಯೇ ಬೇರೆ. ಹೆಂಡ ಕುಡಿಯಲು ಬಂದವರಿಗೆ ಹೆಂಡ ಕುಡಿಸುತ್ತ ಶರಣರ ತತ್ವಗಳನ್ನು ಹೇಳುತ್ತಿದ್ದ. ಹೆಂಡ ಕುಡಿಯುವುದರಿಂದ ಆಗುವ ಅನಾಹುತಗಳನ್ನು ಬಿತ್ತರಿಸುತ್ತಿದ್ದ. ಹೆಂಡ ಕುಡಿಯಲು ಬಂದವರು ಅವನ ಉಪದೇಶಕ್ಕೆ ಬಂದು ಹೆಂಡ ಕುಡಿಯುವುದನ್ನು ತೊರೆದರು.

ಹೆಂಡದ ಮಾರಯ್ಯನ ೧೨ ವಚನಗಳು ದೊರಕಿವೆ. ಧರ್ಮೇಶ್ವರಲಿಂಗ ಎಂಬುದು ಅವನ ಅಂಕಿತ. ವಚನಗಳು ಸಹಜ ಸುಂದರವಾಗಿವೆ. ತನ್ನಕಾಯಕವನ್ನು ರೂಪಕ ಮಾಡಿ ಹೇಳುವ ವಚನಗಳು ಅತ್ಯಂತ ಸೊಗಸಾಗಿವೆ; ಈ ರೂಪಕಗಳಲ್ಲಿ ಹೊಸತನವು ಇದೆ.

ನಾ ಮಾರಬಂದ ಸುಧೆಯ ಕೊಂಬವರಾರೂ ಇಲ್ಲ.
ಹೊರಗಣ ಭಾಜನಕ್ಕೆ ಒಳಗಣ ಇಂದ್ರಿಯಕ್ಕೆ,
ಉಂಡುದಣಿಯ ಕಂಡುದಣಿದು ಸಂದೇಹಬಿಟ್ಟು ದಣಿದು,
ಕಂಡುದ ಕಾಣದೆ, ಸಂದೇಹದಲ್ಲಿ ಮರೆಯದೆ,
ಆನಂದವೆಂಬುದ ಆಲಿಂಗನವಂ ಮಾಡಿ ಕಂಗಳಂ ಮುಚ್ಚಿ
ಮತ್ತಮಾಕಂಗಳಂ ತೆರೆದು ನೋಡಲಾಗಿ
ಧರ್ಮೇಶ್ವರಲಿಂಗವು ಕಾಣಬಂದಿತ್ತು[24]

ಮಣ್ಣೆಂಬ ಘಟದ ಮಧ್ಯದಲ್ಲಿ ಹೊನ್ನೆಂಬ ಸುರೆಹುಟ್ಟಿತ್ತು.
ಹೆಣ್ಣೆಂಬ ಬಟ್ಟಲಲ್ಲಿ ಅಂತು ಈಂಟಲಾಗಿ ಲಹರಿ ತಲಿಗೇರಿತ್ತು.
ಉನ್ಮತ್ತದಲ್ಲಿ ಮಗ್ನರಾದವರೆಲ್ಲರು ಅರುಹಿರಿಯರೆಂತಪ್ಪರೋ?
ಭಕ್ತಿವಿರಕ್ತಿಯೆಂಬುದು ಇತ್ತಲೆ ಉಳಿಯಿತ್ತು,
ಧರ್ಮೇಶ್ವರಲಿಂಗದತ್ತ ಮುಟ್ಟಿದಡಂತಿಲ್ಲ[25]

ಕೊನೆಯದಾಗಿ ಒಂದು ಮಾತು ಹೇಳದೆ ಇರುವುದಕ್ಕೆ ಆಗಲಾರದ್ದಾಗಿದೆ. ಈ ಮಾತು ಇಂದು ಜಿಜ್ಞಾಸೆಗೆ ಒಳಗಾಗಬೇಕು. ಆದರಿಂದ ಸತ್ಯ ಹೊರಬೀಳುವುದು; ನಿಜವಾದ ಇತಿಹಾಸ ಬೆಳಕಿಗೆ ಬರುವುದು. ಆ ಮಾತೆಂದರೆ: ಕಳ್ಳರು, ಮೀನುಗಾರರು, ಹೆಂಡಮಾರುವವರು, ಅಕ್ಕಿ ಆಯುವವರು, ಛತ್ರಿ ಹಿಡಿಯುವವರು, ಕೂಗು ಹಾಕುವವರು, ಕೋತಿಯಾಡಿಸುವವರು, ದುರುಗಮುರುಗಿಯವರು, ಒಕ್ಕಲಿಗರು – ಎಂದರೆ ತೀರ ಸಾಮಾನ್ಯ ಕಾಯಕದವರು, ತೀರ ಎಂದರೆ ತೀರ ಸಾಮಾನ್ಯರು ಅನುಭಾವವನ್ನು ಅಳವಡಿಸಿಕೊಂಡು ವಚನ ಬರೆಯುವ ಹಂತಕ್ಕೆ ಮುಟ್ಟಿದ್ದು ಹೇಗೆ? ಆಗ ಶಿಕ್ಷಣ ಕೇವಲ ದೊಡ್ಡ ಜಾತಿಯವರಿಗಷ್ಟೇ ಮೀಸಲಾಗಿತ್ತು. ವೇದ ಕೇಳಿದರೆ ಅಂಥವರ ಕಿವಿಯಲ್ಲಿ ಕಾಸೀಸ ಸುರಿಯುವ ಕಾಲ ಅದು. ಹಾಗಿದ್ದಾಗ ಇವರಿಗೆ ಶಿಕ್ಷಣ ಕೊಟ್ಟವರು ಯಾರು? ಅನುಭಾವದ ಹಾದಿತೋರಿಸಿದವರು ಯಾರು? ಶರಣರು ಎನ್ನಬಹುದು. ಆದರೆ ಈ ಶರಣರೆಂದರೆ ಎಲ್ಲ ಅವರೆ ಅಲ್ಲ! ಇವರನ್ನು ಬಿಟ್ಟು ಶರಣರು ಮತ್ತೆ ಯಾರು? ಸಾವಿರ ಸಾವಿರ ಸಂಖ್ಯೆಯ ಜನರಿಗೆ ಶಿಕ್ಷಣ ಕೊಡುವ, ಅನುಭಾವದ ವಿದ್ಯೆಯನ್ನು ತಿಳಿಸುವ ಕಾರ್ಯಕ್ರಮ ಯಾರು ಹೇಗೆ ಹಾಕಿಕೊಂಡಿದ್ದರು? ಸ್ವಲ್ಪ ಕಾಲದಲ್ಲಿಯೇ ಲಕ್ಷ ಸಂಖ್ಯೆಯ ಶರಣರು ಒಂದು ಧ್ಯೇಯಕ್ಕೆ ತಮ್ಮನ್ನು ಅರ್ಪಿಸಿಕೊಂಡು ಒಂದು ಮಹಾಕ್ರಾಂತಿ ಮಾಡಿದರಲ್ಲಾ! ಅದು ಹುಟ್ಟಿ ಬಂದುದು ಹೇಗೆ? ಸರ್ವರನ್ನು ಮುಟ್ಟಿದ್ದು ಹೇಗೆ? ಎಲ್ಲಕ್ಕಿಂತ ಹೆಚ್ಚಾಗಿ ಅಜ್ಞಾನಿಗಳು, ಅವಿದ್ಯಾವಂತರು, ನಿಕೃಷ್ಟರನ್ನು ಎಚ್ಚರಿಸಿ ಅವರನ್ನು ಶರಣ ಮಟ್ಟಕ್ಕೆ ಏರಿಸಿದ್ದು ಹೇಗೆ? ಇದರ ಸಮಗ್ರ ಇತಿಹಾಸ ಬಯಲಿಗೆ ಬರಬೇಕು. ಆಗ ಶರಣರ ಕ್ರಾಂತಿ ಇನ್ನಷ್ಟು ಉಜ್ವಲವಾಗಿ ಕಂಡು ಬರುವುದು. ಮತ್ತು ಲೋಕದಲ್ಲಿ ಅದನ್ನು ಸಾರಿದಾಗ ಅದಕ್ಕೆ ಬೆಲೆ ಇನ್ನೂ ಹೆಚ್ಚಾಗಿ, ಜನ ತಂತಾನೆ ಅದರ ಅನುಷ್ಠಾನಕ್ಕೆ ತೊಡಗಲು ಸಾಧ್ಯವಾದೀತು.

ಪ್ರಾಚೀನ ಗ್ರಂಥಗಳು        ಸಹಾಯಕ ಸಾಹಿತ್ಯ
ಗುರುರಾಜ ಚಾರಿತ್ರ (ಸಂ. ಸಂ.ಶಿ. ಭೂಸನೂರಮಠ)
ಚೆನ್ನಬಸವ ಪುರಾಣ  –
ಪ್ರಭುದೇವರ ಶೂನ್ಯ ಸಂಪಾದನೆ (ಸಂ. ಸಂ.ಶಿ. ಭೂಸನೂರಮಠ)
ಪ್ರೌಢದೇವರಾಯನ ಕಾವ್ಯ (ಸಂ. ಸಂ.ಶಿ. ಭೂಸನೂರಮಠ)
ಬಸವಣ್ಣನವರ ಷಟ್‌ಸ್ಥಲದ ವಚನಗಳು (ಸಂ. ಶಿ.ಶಿ. ಬಸವನಾಳ)
ಬಸವಪುರಾಣ (ಸಂ. ಡಾ|| ಆರ್.ಸಿ. ಹಿರೇಮಠ)
ಭೈರವೇಶ್ವರ ಕಾವ್ಯದ ಕಥಾಮಣಿ (ಸಂ. ಡಾ|| ಆರ್.ಸಿ. ಹಿರೇಮಠ
ಸೂತ್ರರತ್ನಾಕರಭಾಗ ೧ ಮತ್ತು ೨ ಡಾ|| ಎಂ.ಎಸ್. ಸುಂಕಾಪುರ)
ಸಕಲ ಪುರಾತನರ ವಚನಗಳು ಸಂಪುಟ ೧ ಸಕಲ ಪುರಾತನ ವಚನಗಳು ಸಂಪುಟ ೧ ಮತ್ತು ೨ (ಡಾ|| ಎಂ.ಎಸ್. ಸುಂಕಾಪುರ)
ಶಿವತತ್ವ ಚಿಂತಾಮಣಿ (ಸಂ. ವಿದ್ವಾನ್ ಎಸ್. ಬಸಪ್ಪ)
ಶಿವದಾಸ ಗೀತಾಂಜಲಿ (ಸಂ. ಡಾ|| ಎಲ್. ಬಸವರಾಜು)
ಶಿವಶರಣೆಯರ ವಚನಗಳು (ಸಂ. ಡಾ|| ಆರ್.ಸಿ. ಹಿರೇಮಠ)
ಆಧುನಿಕ ಗ್ರಂಥಗಳು  
ಗುಂಜಾಳ. ಎಸ್.ಆರ್. (ಬಸವಣ್ಣನವರವಚನ ಪದಪ್ರಯೋಗಕೋಶ)
ಚಿದಾನಂದಮೂರ್ತಿ ಸಾಮಾನ್ಯರಿಗೆ ಸಾಹಿತ್ಯಚರಿತ್ರೆ,
ವಚನಸಾಹಿತ್ಯ ನರಸಿಂಹಚಾರ್. ಆರ್. ಕರ್ನಾಟಕ ಕವಿಚರಿತೆ ಭಾಗ ೧, ೨, ೩
ಶಾಮರಾಯ ತ.ಸು. ಶಿವಶರಣ ಕಥಾರತ್ನಕೋಶ
ಸಿದ್ದಯ್ಯ ಪುರಾಣಿಕ ಶರಣ ಚರಿತಾಮೃತ
ಹಳಕಟ್ಟಿ ಫ.ಗು ಶಿವಶರಣ ಚರಿತ್ರೆಗಳು ಭಾಗ ೧, ೨, ೩
ಹಳಕಟ್ಟಿ ಫ.ಗು ಶಿವಶರಣೆಯರ ಚರಿತ್ರಗಳು
ಹಳಕಟ್ಟಿ ಫ.ಗು ಅಮರಗಣಾಧೀಶ್ವರರ ಚರಿತ್ರೆಗಳು

 – – – –
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

[1] ಡಾ|| ಆರ್.ಸಿ.ಹಿರೇಮಠ (ಸಂ): ಸಕಲ ಪುರಾತನರ ವಚನಗಳು, ಪುಟ ೧, ಪುಟ ೧೧೭, ವಚನ ೪೪೫.

[2] ಡಾ|| ಆರ್.ಸಿ.ಹಿರೇಮಠ (ಸಂ): ಸಕಲ ಪುರಾತನರ ವಚನಗಳು, ಪುಟ, ೧, ಪುಟ ೧೧೭, ವಚನ ೪೪೬.

[3] ಡಾ|| ಆರ್.ಸಿ.ಹಿರೇಮಠ (ಸಂ): ಸಕಲ ಪುರಾತನರ ವಚನಗಳು, ಸಂಪುಟ ೧, ೧೭೫, ವಚನ ೬೭೩.

[4] ಡಾ|| ಆರ್.ಸಿ.ಹಿರೇಮಠ (ಸಂ): ಸಕಲ ಪುರಾತನರ ವಚನಗಳು, ಸಂಪುಟ ೧. ಪುಟ ೧೦೮, ವಚನ ೪೧೪.

[5] ಸಂ. ಶಿ.ಭೂಸನೂರು ಮಠ (ಸಂ): ಶೂನ್ಯ ಸಂಪಾದನೆ, ಪುಟ ೨೫೯.

[6] ಡಾ|| ಎಂ.ಎಸ್.ಸುಂಕಾಪುರ (ಸಂ): ಸಕಲ ಪುರಾತನ ವಚನಗಳು, ಸಂಪುಟ ೩, ಪುಟ ೬೦, ವಚನ ೧೨೩.

[7] ಡಾ|| ಎಂ.ಎಸ್.ಸುಂಕಾಪುರ (ಸಂ): ಸಕಲ ಪುತಾತನರ ವಚನಗಳು, ಸಂಪುಟ ೩, ಪುಟ೫೨, ವಚನ ೧೦೬.

[8] ಡಾ|| ಎಂ.ಎಸ್.ಸುಂಕಾಪುರ (ಸಂ): ಸಕಲ ಪುರಾತನ ವಚನಗಳು, ಸಂಪುಟ ೨, ಪುಟ ೫೫, ವಚನ ೧೧೨.

[9] ಡಾ|| ಎಂ.ಎಸ್.ಸುಂಕಾಪುರ(ಸಂ): ಸಕಲ ಪುರಾತನ ವಚನಗಳು, ಸಂಪುಟ ೩, ಪುಟ ೬೦, ವಚನ ೧೭೪.

[10] ಡಾ|| ಎಂ.ಎಸ್.ಸುಂಕಾಪುರ(ಸಂ): ಸಕಲ ಪುರಾತನ ವಚನಗಳು, ಸಂಪುಟ ೨, ಪುಟ ೪೧೪, ವಚನ ೧೧೮೪.

[11] ಡಾ|| ಎಂ.ಎಸ್.ಸುಂಕಾಪುರ(ಸಂ): ಸಕಲ ಪುರಾತನ ವಚನಗಳು, ಸಂಪುಟ ೨, ಪುಟ ೪೨೯, ವಚನ ೧೩೪೪.

[12] ಡಾ|| ಎಂ.ಎಸ್.ಸುಂಕಾಪುರ(ಸಂ): ಸಕಲ ಪುರಾತನ ವಚನಗಳು, ಸಂಪುಟ ೨, ಪುಟ ೪೨೩, ವಚನ ೧೨೨೧.

[13] ಡಾ|| ಎಂ.ಎಸ್.ಸುಂಕಾಪುರ (ಸಂ): ಸಕಲ ಪುರಾತನ ವಚನಗಳು. ಸಂಪುಟ ೨, ಪುಟ ೪೧೭, ವಚನ ೧೧೯೬.

[14] ಸಾಮಾನ್ಯರಿಗೆ ಸಾಹಿತ್ಯ ಚರಿತ್ರೆ : ವಚನಸಾಹಿತ್ಯ ಪುಟ ೧೨೪.

[15] ಡಾ||ಆರ್.ಸಿ.ಹಿರೇಮಠ(ಸಂ): ಸಕಲ ಪುರಾತನ ವಚನಗಳು ಪುಟ ೩೬೨, ವಚನ ೧೩೪೩.

[16] ಡಾ||ಆರ್.ಸಿ.ಹಿರೇಮಠ (ಸಂ): ಸಕಲ ಪುರಾತನರ ವಚನಗಳು, ಸಂಪುಟ , ಪುಟ ೩೨೫, ವಚನ ೧೪೦೨.

[17] ಡಾ||ಆರ್.ಸಿ.ಹಿರೇಮಠ (ಸಂ): ಸಕಲ ಪುರಾನತರ ವಚನಗಳು, ಸಂಪುಟ , ಪುಟ ೩೬೪, ವಚನ ೧೩೫೪.

[18] ಡಾ||ಎಂ.ಎಸ್.ಸುಂಕಾಪುರ(ಸಂ): ಸಕಲ ಪುರಾತನರ ವಚನಗಳು ಸಂಪುಟ , ಪುಟ ೨೫೧, ವಚನ ೪೫೦.

[19] ಡಾ|| ಎಂ.ಚಿದಾನಂದಮೂರ್ತಿ : ಸಾಮಾನ್ಯರಿಗೆ ಸಾಹಿತ್ಯ ಚರಿತ್ರೆ : ವಚನ ಸಾಹಿತ್ಯ, ಪುಟ ೧೦೪-೧೦೫

[20] ಡಾ|| ಆರ್.ಸಿ.ಹಿರೇಮಠ (ಸಂ): ಸಕಲ ಪುರಾತನರ ವಚನಗಳು ಸಂಪುಟ , ಪುಟ ೬೧೧, ವಚನ ೨೧೩೪.

[21] ಡಾ|| ಆರ್.ಸಿ.ಹಿರೇಮಠ (ಸಂ): ಸಕಲ ಪುರಾತನರ ವಚನಗಳು ಸಂಪುಟ , ಪುಟ ೪೯೯, ವಚನ ೧೮೧೭.

[22] ಸಿದ್ದನಂಜೇಶ : ಗುರುರಾಜ ಚಾರಿತ್ರ ಸಂಧಿ ೭, ಪದ್ಯ ೧೬.

[23] ಡಾ|| ಎಂ.ಎಸ್.ಸುಂಕಾಪುರ(ಸಂ): ಸಕಲ ಪುರಾತನರ ವಚನಗಳು ಸಂಪುಟ , ಪುಟ ೩೦೮, ವಚನ ೫೫೧.

[24] ಡಾ|| ಎಂ.ಎಸ್.ಸುಂಕಾಪುರ (ಸಂ): ಸಕಲ ಪುರಾತನರ ವಚನಗಳು ಸಂಪುಟ , ಪುಟ ೩೪೩, ವಚನ ೬೪೩.

[25] ಡಾ|| ಎಂ.ಎಸ್.ಸುಂಕಾಪುರ (ಸಂ): ಸಕಲ ಪುರಾತನರ ವಚನಗಳು ಸಂಪುಟ , ಪುಟ ೩೪೪, ವಚನ ೬೪೬.