ಶಿವಶರಣರು ಗೈದ ಕ್ರಾಂತಿಯಲ್ಲಿ ನಮಗೆ ನಿಲುಕದ ಎಷ್ಟೋ ಹೊಸ ಕ್ಷಿತಿಜಗಳು ಹುದುಗಿವೆ; ಇವುಗಳನ್ನು ತೆರೆದಿಡಲು ನಾವಿಂದು ಶಿವಶರಣರನ್ನು ಅನೇಕ ಹೊಸ ನಿಟ್ಟಿನಿಂದ ಅಭ್ಯಾಸ ಮಾಡಬೇಕಿದೆ. ಅವರ ಹೆಸರುಗಳು ಮತ್ತು ಅವರ ಅಂಕಿತಗಳ ಅಭ್ಯಾಸದಿಂದ ಅವರ ಕ್ರಾಂತಿಯ ಜೀವಜೀವಾಳವನ್ನು, ಅದು ಸರ್ವರನ್ನು ಮುಟ್ಟಿದ ಬಗೆಯನ್ನೂ ಅರಿಯಬಹುದು.

ಶರಣರ ಕ್ರಾಂತಿ ಸಮಾಜದ ಸರ್ವಸ್ತರದವರನ್ನು ಮುಟ್ಟಿ ಎಚ್ಚರಿಸಿತು. ಬಹುಶಃ ಭಾರತದ ಯಾವ ಕ್ರಾಂತಿಯೂ ಹೀಗೆ ಸಮಾಜದ ಸರ್ವಸ್ತರದವರನ್ನು ಮುಟ್ಟಿ ಎಚ್ಚರಿಸಿದ್ದು ಕಂಡುಬರುವುದಿಲ್ಲ. ಶರಣರ ಹೆಸರುಗಳನ್ನು ತೆಗೆದುಕೊಂಡರೆ ಸಾಕು – ಅವರು ಯಾವ ಯಾವ ಸ್ತರದಿಂದ, ಯಾವ ಯಾವ ನಿಟ್ಟಿನಿಂದ, ಯಾವ ಯಾವ ವರ್ಗವರ್ಣಗಳಿಂದ ಬಂದವರೆಂಬುದು ಮನದಟ್ಟಾಗುತ್ತದೆ. ಅತ್ಯಂತ ಶ್ರೇಷ್ಠಜಾತಿ ಎಂದು ಹೇಳಿಕೊಳ್ಳುತ್ತಿದ್ದ ಬ್ರಾಹ್ಮಣರಿಂದ ಹಿಡಿದು ಅತ್ಯಂತ ಕೀಳುಜಾತಿಯವನೆಂದು ಬಗೆಯಲಾಗುತ್ತಿದ್ದ ಅಂತ್ಯಜನವರೆಗೂ ಈ ಕ್ರಾಂತಿಯಲ್ಲಿ ಭಾಗವಹಿಸಿದವರ ಹೆಸರುಗಳು ದೊರಕುತ್ತವೆ. ಮತ್ತು ಅವರ ಪೂರ್ವಾಶ್ರಮವೂ ತಿಳುದುಬರುತ್ತದೆ. ಎಲ್ಲೋ ಕೆಲವರನ್ನು ಬಿಟ್ಟರೆ ಉಳಿದವರೆಲ್ಲ ತಮ್ಮ ಮುನ್ನಿನ ಕಾಯಕವಿಟ್ಟುಕೊಂಡೇ ಶರಣಧರ್ಮದಲ್ಲಿ ಸೇರಿದರು. ಇದರಿಂದ ಮಹೋಪಕಾರವಾಯಿತು. ಆ ವೃತ್ತಿಗಳೆಲ್ಲ – ಅವು ಏನೇ ಇರಲಿ, ಎಂಥವೇ ಇರಲಿ – ಪವಿತ್ರವೆನಿಸಿದವು. ಕೇಳೆಂದು ಬಗೆಯಲಾಗುತ್ತಿದ್ದ ವೃತ್ತಿಳೆಲ್ಲ ಕಾಯಕದ ಮಟ್ಟಕ್ಕೇರಿ ಲಿಂಗಾಂಗಸಾಮರಸ್ಯ ಪಡೆಯಲು ಸಾಧನವೆನಿಸಿದವು. ಮತ್ತು ಸಮಾಜದ ಆರ್ಥಿಕ ನೆಲೆಗಟ್ಟನ್ನು ಭದ್ರಗೊಳಿಸಿದವು.

ಇನ್ನೊಂದು ಬಹುಮುಖ್ಯ ಸಂಗತಿಯೆಂದರೆ ಶರಣಧರ್ಮಕ್ಕೆ ಬರುವಾಗ ಜನರು ತಮ್ಮ ಹೆಸರುಗಳನ್ನು ಬದಲಾಯಿಸಿಕೊಳ್ಳದಿರುವುದು. ಇದಕ್ಕೆ ಮೋಳಿಗೆಯ ಮಾರಯ್ಯನೊಬ್ಬನ ಅಪವಾದವಾಗಿದ್ದಾನೆ. ಅವರೆಲ್ಲ ಮುನ್ನಿನ ತಮ್ಮ ಹೆಸರುಗಳನ್ನು ಹಾಗೆಯೇ ಉಳಿಸಿಕೊಂಡದ್ದು, ಅವರ ಕ್ರಾಂತಿ ಸರ್ವರನ್ನೂ ಮುಟ್ಟಿ, ಸರ್ವಸಮತಾಭಾವದ ಒಂದು ಸುಂದರ ಸುಭದ್ರ ಸಮಾಜ ರಚನೆಗೊಂಡುದರ ಅಭ್ಯಾಸಕ್ಕೆ ಅನುಕೂಲವಾಗಿ ಪರಿಣಮಿಸಿದೆ.

ಹಾಗೆ ನೋಡಿದರೆ, ಈ ಕ್ರಾಂತಿಯಲ್ಲಿ ದೊಡ್ಡ ಜಾತಿಯವರೆಂದು ಹೇಳಿಕೊಳ್ಳುತ್ತಿದ್ದವರ ಸಂಖ್ಯೆ ತೀರಾ ಕಡಿಮೆಯಿದೆ; ಬೆರಳ ಮೇಲೆ ಎಣಿಸುವಷ್ಟಿದೆ. ಶೂನ್ಯ ಸಿಂಹಾಸನಕ್ಕೆ ಅಧಿಪತಿಯಾದ ಅಲ್ಲಮಪ್ರಭು ನಟ್ಟುವರ ಜಾತಿಗೆ ಸೇರಿದವನು. ಶರಣರಲ್ಲಿ ಅತ್ಯಂತ ಶ್ರೇಷ್ಠರೆನಿಸಿಕೊಳ್ಳುವವರಾದ ಚೆನ್ನಯ್ಯ ಮತ್ತು ಕಕ್ಕಯ್ಯ ಮಾದಿಗ ಮತ್ತು ಡೋಹರ ಜಾತಿಗೆ ಸೇರಿದವರು. ಶರಣಧರ್ಮಕ್ಕೆ ಸೇರಿ ಇವರೆಲ್ಲ ತಮ್ಮ ಪೂರ್ವದ ಜಾತಿಗಳನ್ನು ಅಳಿಸಿಕೊಂಡರು. ಸ್ವಾರಸ್ಯದ ಸಂಗತಿಯೆಂದರೆ ಇವರ ಹೆಸರಿಗೆ ಅಂಟಿಕೊಂಡ ಮಡಿವಾಳ, ಡೋಹರ, ಮಾದರ, ಹಡಪದ, ಬಹುರೂಪಿ, ಮೇದಾರ, ಅನಾಮಿಕ, ತಳವಾರ, ಹೆಂಡದ ಮುಂತಾದುವು ಅವರ ಕಾಯಕಗಳನ್ನು ಸಾರುವುದಲ್ಲದೆ ಅವರ ಘನತೆಗೆ ಕಳಶವಿಟ್ಟಿವೆ. ಡೋಹರ ಕಕ್ಕಯ್ಯ, ಮಾದಾರಚೆನ್ನಯ್ಯ, ಬಹುರೂಪಿ ಚೌಡಯ್ಯ, ಹಡಪದ ಅಪ್ಪಣ್ಣ ಎಂಬುದರಿಂದ ನಮಗೆ ಅವರ ಪೂರ್ವದ ಜಾತಿಯ ವಾಸನೆ ಬಡಿಯುವುದಿಲ್ಲ; ಬಸಲಾಗಿ ಅವರಲ್ಲಿ ಪೂಜ್ಯಭಾವನೆ ಉಂಟಾಗುತ್ತದೆ. ಇದು ಶರಣರ ಕ್ರಾಂತಿಯು ನಮಗಿತ್ತ ಮಧುರಫಲ.

ಶಿವಶರಣರ ಹೆಸರುಗಳನ್ನು ನೋಡಿದರೆ, ಅಂದಿನ ಇಡಿಯ ಭಾರತೀಯ ಸಮಾಜ ಈ ಕ್ರಾಂತಿಯಲ್ಲಿ ಭಾಗವಹಿಸಿತ್ತೆಂದು ತಿಳಿದುಬರುವುದು. ನನ್ನಯ್ಯ, ಮರುಳು ಶಂಕರದೇವ, ಮಹಾದೇವ ಭೂಪಾಲ, ಬೊಂತಾದೇವಿ, ಮಲ್ಲಿಕಾರ್ಜುನ ಪಂಡಿತಾರಾಧ್ಯ, ಶ್ರೀಪತಿಪಂಡಿತ ಮುಂತಾದವರನ್ನು ನೆನೆದರೆ ಈ ಕ್ರಾಂತಿಯಲ್ಲಿ ಭಾರತದ ಬೇರೆ ಬೇರೆ ಭಾಗಗಳವರೂ ಭಾಗವಹಿಸಿದ್ದು ಕಂಡು ಬರುತ್ತದೆ. ಒಂದು ದೃಷ್ಟಿಯಿಂದ ಶರಣರ ಹೆಸರುಗಳ ಅಧ್ಯಯನ ಅಂದಿನ ಭಾರತೀಯ ಸಮಾಜದ ಅಧ್ಯಯನವೇ ಆಗುವುದು. ಈ ನಿಟ್ಟಿನ ಅಧ್ಯಯನ, ಅಭ್ಯಾಸ, ಸಂಶೋಧನೆ ಇಂದು ನಡೆಯಬೇಕಾದುದು ಅವಶ್ಯವಿದೆ.

ಸಾವಿರ ಸಂಖ್ಯೆಯ ಶರಣರ ಹೆಸರುಗಳಲ್ಲಿ ಕೆಲವು ಹೆಸರು ಹೆಚ್ಚು ಬಳಕೆಯಲ್ಲಿದ್ದಂತೆ ಕಂಡುಬರುತ್ತದೆ; ಹೆಚ್ಚು ಜನ ಈ ಹೆಸರುಳ್ಳವರಾಗಿದ್ದಾರೆ. ಮಾರಯ್ಯ, ಬೊಮ್ಮಯ್ಯ, ಚಿಕ್ಕಯ್ಯ – ಈ ಹೆಸರುಗಳು ಅತ್ಯಂತ ಜನಪ್ರಿಯ ಹೆಸರುಗಳಾಗಿರಬಹುದು. ಈ ಹೆಸರಿನವರ ಸಾಮಾಜಿಕ ಅಧ್ಯಯನ ಹಲವು ಹತ್ತು ಹೊಸ ಸಂಗತಿಗಳನ್ನು ಬಯಲಿಗಿಡಬಹುದು. ಬೊಮ್ಮಯ್ಯ ಎಂಬುದು ಹೆಚ್ಚು ಜೈನರಲ್ಲಿ ಪ್ರಚಾರವಿರುವ ಹೆಸರು; ಜೈನರು ಶರಣಧರ್ಮಕ್ಕೆ ಪರಿವರ್ತನೆಗೊಂಡ ಇತಿಹಾಸವನ್ನು ಈ ಹೆಸರುಗಳು ಬಿಚ್ಚಿಡಬಹುದು. ಢಕ್ಕೆಯ ಬೊಮ್ಮಯ್ಯ, ಕನ್ನದ ಬ್ರಹ್ಮಯ್ಯ – ಮುಂತಾದವರ ಹೆಸರುಗಳು ಅನ್ಯಜಾತಿಯವರೂ(ಜೈನರನ್ನುಳಿದು), ಅದರಲ್ಲಿ ಕೀಳೆಂದು ಭಾವಿಸಲಾಗುತ್ತಿದ್ದ ಜಾತಿಯವರೂ ಈ ಹೆಸರನ್ನು ಇಟ್ಟುಕೊಳ್ಳುತ್ತಿದ್ದರೆಂದು ತಿಳಿಸುತ್ತವೆ. ಹತ್ತಿಪ್ಪತ್ತು ಬೊಮ್ಮಯ್ಯರುಗಳಲ್ಲಿ ಸಕಲ ಕಾಯಕದವರೂ ದೊರಕುತ್ತಾರೆ.

ಬೊಮ್ಮಯ್ಯನಂತೆ ‘ಮಾರಯ್ಯ’ ಎಂಬ ಹೆಸರೂ ಆ ಕಾಲಕ್ಕೆ ಬಹಳ ಪ್ರಚಾಲಿತದಲ್ಲಿತ್ತು. ೨೫ ಜನ ಶಿವಶರಣರು ಈ ಹೆಸರಿನವರಿದ್ದಾರೆ. ಇವರಲ್ಲಿ ೧೧ ಜನ ವಚನಕಾರರಿದ್ದಾರೆ. ವಿವಿಧ ವೃತ್ತಿಯವರಾದ ಇವರ ಹೆಸರು ಆ ಕಾಲಕ್ಕೆ ಬಹಳ ಜನಪ್ರಿಯವಾಗಿರಬೇಕು; ಇಲ್ಲದಿದ್ದರೆ ಇಷ್ಟೊಂದು ಜನ ಆ ಹೆಸರನ್ನು ಏಕೆ ಇಟ್ಟುಕೊಳ್ಳುತ್ತಿದ್ದರು? ಶರಣರಲ್ಲಿ ಇವರ ಹೆಸರಿನವರೇ ಹೆಚ್ಚು ಜನರಿದ್ದಾರೆ. ಇವರ ಸಮಗ್ರ ಅಧ್ಯಯನ ಒಂದು ಮಹತ್ವದ ಸಾಮಾಜಿಕ ಅಧ್ಯಯನವಾಗುವುದರಲ್ಲಿ ಸಂದೇಹವಿಲ್ಲ. ಆದರೆ ನನ್ನ ಈ ಬರವಣಿಗೆ ಆ ನಿಟ್ಟಿಗೆ ಒಂದು ತೋರುಬೆರಳು, ಅಷ್ಟೇ.

‘ಮಾರಯ್ಯ’ ಎಂಬ ಹೆಸರು ಹೇಗೆ ಬಂದಿದೆ? ಯಾವ ದೇವತೆಯ ಹೆಸರುಗಳನ್ನು ಇದು ಸೂಚಿಸುತ್ತದೆ? ನಮ್ಮ ಪೂರ್ವಿಕರು (ಅಂತೆಯೇ ನಾವು) ಬಹುಮಟ್ಟಿಗೆ ತಮ್ಮ ಮಕ್ಕಳಿಗೆ ಹೆಸರಿಡುವಾಗ ತಮಗೆ ಇಷ್ಟವಾದ ದೇವತೆಗಳ ಹೆಸರುಗಳನ್ನೆ ಇಡುತ್ತ ಬಂದಿದ್ದಾರೆ. ವೃತ್ತಿಯಿಂದ, ಗುಣದಿಂದ, ಅನ್ವರ್ಥದಿಂದ ಬಂದ ಹೆಸರುಗಳೂ ಉಂಟು; ಆದರೆ ನಮ್ಮ ಹೆಸರುಗಳಲ್ಲಿ ಹೆಚ್ಚಿನವು ದೇವತೆಗಳ ಹೆಸರುಗಳೇ ಆಗಿವೆ. ಕೆಳವರ್ಗದ ಹೆಸರುಗಳೆಲ್ಲ ಆಯಾ ವರ್ಗದ – ಅವರು ನಂಬಿ ಪೂಜಿಸುವ ದೇವತೆಗಳ ಹೆಸರುಗಳೇ ಆಗಿರುತ್ತವೆ; ಇವರಲ್ಲಿ ಗುಣದಿಂದ ಅನ್ವರ್ಥದಿಂದ ಬಂದ ಹೆಸರುಗಳು ಕಡಿಮೆ.

ಮಾರಯ್ಯ, ಮಾರಣ್ಣ, ಮಾರಗೌಡ, ಮಾರಭಕ್ತ, ಮಾರರೂಪ, ಮಾರ, ಮಾರೇಶ್ವರ, ಮಾರಿತಂದೆ – ಹೀಗೆ ಈ ಹೆಸರು ಬಳಕೆಯಲ್ಲಿತ್ತು. ೨೫ ಜನ ಶರಣರಲ್ಲಿ ಒಬ್ಬಳು ಶರಣೆಯಿದ್ದಾಳೆ; ಅವಳ ಹೆಸರು ಹುಣಜಿಯ ಮಾರವ್ವೆ.

ಮಾರಯ್ಯ ಎಂಬುದು ಮನ್ಮಥನಿಂದ ಬಂದುದೋ? ಅಥವಾ ಮಾರಿದೇವತೆಯಿಂಬ ಬಂದದೋ? ಈಗಿನ ಹಿಂದೂ ಸಮಾಜದಲ್ಲಿ ಅನೇಕರು ಮಾರೆಣ್ಣ, ಮಾರೆಪ್ಪ, ಮಾರೆಮ್ಮ ಎಂದು ಹೆಸರಿಡುತ್ತಾರೆ. ಆದರೆ ಇವರೆಲ್ಲ ಮಾರಿದೇವತೆಯನ್ನು ಪೂಜಿಸುವವರೇ ಆಗಿದ್ದಾರೆ. ಮಾರಿದೇವತೆಯನ್ನು ಪೂಜಿಸಿದ ಮೇಲುವರ್ಗದವರಲ್ಲಿ ಈ ಹೆಸರು ಬಳಕೆಯಲ್ಲಿಲ್ಲ, ಇಲ್ಲವೇ ಇಲ್ಲ. ಈಗಿನ ಸಮಾಜದ ಅಧ್ಯಯನ ನಡೆಸಿದರೆ ಈ ಹೆಸರಿನವರೆಲ್ಲ ಮಾರಿದೇವತೆಯ ಭಕ್ತರೇ, ಮತ್ತು ಆ ದೇವತೆಯ ಹೆಸರೇ ನಮಗೆ ನಮ್ಮ ಮಕ್ಕಳಿಗೆ ಇಟ್ಟಿರುವುದು ಖಚಿತವಾಗುತ್ತದೆ.

ಆದರೆ ಶರಣರ ಆ ಹೆಸರು ಮಾರಿದೇವತೆಯಿಂದ ಬಂದುದಲ್ಲವೆಂದು ಹೇಳಲು ಆಧಾರಗಳಿವೆ. ಶರಣರ ಅಂಕಿತಗಳಲ್ಲಿ ಮಾರೇಶ್ವರಾ (ಮಾರೇಶ್ವರರೊಡೆಯ), ಮದನವೈರಿಮಾರೇಶ್ವರಾ(ಕನ್ನದ ಮಾರಿತಂದೆ), ಮನಸಿಜವೈರಿ ಮಾರೇಶ್ವರಾ, ಆತುರವೈರಿಮಾರೇಶ್ವರಾ (ನಗೆಯ ಮಾರಿತಂದೆ) ಮುಂತಾದ ಹೆಸರುಗಳು ಮನ್ಮಥನಿಗೆ ಸಂಬಂಧಪಟ್ಟುವೆಂದು ಖಚಿತಗೊಳಿಸುತ್ತವೆ. ಮಾರ+ಈಶ್ವರಾ=ಮಾರೇಶ್ವರಾ ಎಂದಾಗುತ್ತದೆ. ಇಲ್ಲಿಯ ಪದ ಖಂಡಿತವಾಗಿ ಕಾಮನ ಹೆಸರೇ ಅಲ್ಲದೆ ಮದನವೈರಿ, ಮನಸಿಜವೈರಿ ಈ ಹೆಸರುಗಳು ಇವನ ವೈರಿಯಾದ ಶಿವನಿಗೆ ಸಂಬಂಧಿಸಿದವು.

ಆದರೆ ಇಲ್ಲಿ ಇನ್ನೊಂದು ಸಂಶಯಕ್ಕೆ ಸಾರಿಯಿದೆ. ಈ ಮಾರಯ್ಯಗಳಿಗೆ ‘ಮಾರಿತಂದೆ’ ಎಂದೂ ಕರೆಯಲಾಗಿದೆ, ಬಸವಣ್ಣನವರು ತಮ್ಮ ಒಂದು ವಚನದಲ್ಲಿ ‘ಮಾರಿತಂದೆಗಳಂತೆ ಎನಗೇಕಹುದಯ್ಯಾ?’[1] ಎಂದಿದ್ದಾರೆ ಈ ಮಾತು ಮೋಳಿಗೆ ಮಾರಯ್ಯನನ್ನು ಕುರಿತು ಹೇಳಿದ್ದು. ಬಸವಪುರಾಣದಲ್ಲಿ[2] ಮೋಳಿಗೆ ಮಾರಯ್ಯನಿಗೆ ‘ಮಾರಿದೇವ’ ಎಂದಿದೆ. ಕೆಲವು ವಚನಗ ಕಟ್ಟುಗಳಲ್ಲಿ ಕಂಬದ ಮಾರಿ ತಂದೆ, ಕನ್ನದ ಮಾರಿತಂದೆ, ಮನಸಂದ ಮಾರಿತಂದೆ, ಅಱುವಿನ ಮಾರಿತಂದೆ, ನಗೆಯ ಮಾರಿತಂದೆ ಎಂದು ದೊರಕುತ್ತದೆ. ಈ ಹೆಸರು ಸಂದೇಹಕ್ಕೆ ಎಡೆಕೊಡುತ್ತದೆ. ಮಾರ ಎಂಬುದು ಮೂಲವಾದರೆ ‘ಮಾರತಂದೆ’ ಎಂದೇ ಆಗಬೇಕು – ಮಾರಗೌಡ, ಮಾರಭಕ್ತ ಆದಂತೆ; ಅದು ಮಾರಿತಂದೆ ಆಗುವುದು ಸಾಧ್ಯವಿಲ್ಲ. ಹಾಗಾದರೆ ಮಾರಿತಂದೆ ಎಂಬುದು ಹೇಗೆ ಬಂತು? ಇದನ್ನು ಬಳಸಿದವರು ಈ ಹೆಸರು ಮಾರಿದೇವತೆಯಿಂದ ಬಂದುದಿರಬೇಕೆಂದು ತಿಳಿದಿದ್ದರೋ? ಬಸವಣ್ಣನವರು ತಮ್ಮ ಇನ್ನೊಂದು ವಚನದಲ್ಲಿ ತಂಗಟೂರು ಮಾರಯ್ಯ ಎಂದು ಬಳಸುತ್ತಾರೆ. ಬಸವಪುರಾಣದಲ್ಲಿ ಒಂದುಕಡೆ ಮೋಳಿಗೆ ಮಾರಯ್ಯನಿಗೆ ಮಾರಿತಂದೆ ಎಂದ ಕವಿ ಹಲವು ಕಡೆಗಳಲ್ಲಿ ಮಾರವಿಭು, ಮಾರದೇವ, ಮಾರಯ್ಯ ಎಂದಿದ್ದಾನೆ. ಭೈರವೇಶ್ವರ ಕಥಾಮಣಿಸೂತ್ರರತ್ನಾಕರದ ಕವಿ ನಗೆಮಾರಿತಂದೆಗೆ ನಗೆಯ ಮಾರಯ್ಯ ಎನ್ನುತ್ತಾನೆ. ಹಾಗಾದರೆ ಮಾರಿತಂದೆಯ ಪ್ರಯೋಗ ಯಾವ ಅರ್ಥದಲ್ಲಿ ಬಂದಿದೆ? ಮಾರಿತಂದೆ ಎನ್ನುವಲ್ಲಿ ‘ಮಾರಿ’ ಎಂಬ ಪದ ಖಂಡಿತವಾಗಿ ಮಾರಿದೇವತೆಯನ್ನೇ ಸೂಚಿಸುತ್ತದೆ. ತಂದೆ ಎಂಬ ಪದ ಪ್ರಯೋಗವಾದಾಗ ಮಾತ್ರ ಮಾರಿ ಎಂಬ ಪದ ಬರುತ್ತದೆ. ಉಳಿದೆಡೆಗಳಲ್ಲಿ ಮಾರ ಎಂಬ ಪದ ಪ್ರಯೋಗವೇ ಇದೆ. ಕ್ವಚಿತ್ತಾಗಿ ಮಾರಿದೇವ ಎಂಬ ಪ್ರಯೋಗವೂ ಇದೆ.

ಮಾರಿ ಎಂಬ ಪದಕ್ಕಿಂತ ಹೆಚ್ಚಾಗಿ ಮಾರ ಎಂಬ ಪದವೇ ಬಳಕೆಯಲ್ಲಿದೆ. ಆದುದರಿಂದ ಈ ಹೆಸರು ಕಾಮನ ಹೆಸರಿನಿಂದ ಬಂದುದು ಎನ್ನದೆ ಗತ್ಯಂತರವಿಲ್ಲ. ಅಲ್ಲಲ್ಲಿ ಪ್ರಯೋಗವಾಗಿರುವ ಈ ಮಾರಿತಂದೆ, ಮಾರಿದೇವ – ಇವುಗಳಿಗೆ ಏನರ್ಥ? ಇವುಗಳ ಸಮರ್ಥನೆ ಹೇಗೆ? ಎಂಬ ಪ್ರಶ್ನೆಗಳು ಏಳುತ್ತವೆ. ಮಾರತಂದೆ, ಮಾರದೇವ ಎಂಬುದಕ್ಕಿಂತ ಉಚ್ಛಾರಕ್ಕೆ ಮಾರಿತಂದೆ, ಮಾರಿದೇವ ಎಂಬ ಹೆಸರುಗಳು ಸುಲಭ; ಜನತೆ ಹೀಗೆ ಉಚ್ಛಾರದಲ್ಲಿ ಸುಲಭದಾರಿ ಹುಡುಕಿಕೊಳ್ಳುವುದು ಅಪರೂಪವೇನಲ್ಲ. ನಾಲಗೆ ಇದ್ದುದು ನಾಲಿಗೆ, ಕಡಮೆ ಇದ್ದುದು ಕಡಿಮೆ ಆದುದು ಸರ್ವರಿಗೂ ಗೊತ್ತಿದ್ದುದೇ. ಬರಬರುತ್ತ ಜನರ ಬಳಕೆಯನ್ನೇ ವ್ಯಾಕರಣ ಒಪ್ಪಿಕೊಳ್ಳುತ್ತದೆ.

ಕಿಟೆಲ್‌ರವರು ತಮ್ಮ ಕೋಶದಲ್ಲಿ ಈ ರೀತಿ ಕೊಟ್ಟಿದ್ದಾರೆ:

ಮಾರ=ಮಾರೆ…see ನಿಡು,ಮೋಳಿಗೆ,…ಮಾರಪ್ರಭು…ಮಾರಯ್ಯ – ಅಯ್ಯ,see ಅಕ್ಕಿ, ಎಳೆಯದಂಗುಳಿಯ, ಮೋಳಿಗೆಯ…ಮಾರವಿಭು,

ಇದು ಸರಿ ಆದರೆ ಮಾರಿ ಎಂಬ ಕಡೆ ಕಿಟೆಲ್ಲರು ಹೀಗೆ ಕೊಟ್ಟಿದ್ದಾರೆ.

ಮಾರಿ…………..ಮಾರಿದೇವರು. (B.P ೩೦,೩೧ ; ೩೬,೫೮;)see ಮೋಳಿಗೆ…

ಮಾರಯ್ಯ, ಮಾರವಿಭು ಪ್ರಯೋಗಗಳು ಸರಿ ಆದರೆ ‘ಮಾರಿ’ಯಿಂದ ಮಾರಿದೇವ, ಮೋಳಿಗೆಯ ಮಾರಿದೇವ, ಮೋಳಿಗೆಯ ಮಾರಿದೇವ, ಆದುದೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ಹೆಸರಿನ ಹಿಂದಿದ್ದ ಇತಿಹಾಸ, ಪರಂಪರೆ ಅರಿಯದೆ ಕಿಟೆಲ್ಲರು ಆ ಪ್ರಯೋಗಗಳನ್ನು ಕೊಟ್ಟಿದ್ದಾರೆ ಎಂದು ಹೇಳಬಹುದು. ಉಚ್ಚಾರದ ಸೌಲಭ್ಯಕ್ಕಾಗಿಯೇ ಜನ ಮಾರದೇವ, ಮಾರತಂದೆ ಆಗುವುದನ್ನು ಮಾರಿದೇವ, ಮಾರಿತಂದೆ ಎಂದು ಮಾಡಿಕೊಂಡಿದ್ದಾರೆ ಎಂಬುದೇ ಸಮಂಜಸ.

ಬಸವಣ್ಣನವರು ತಮ್ಮ ಇನ್ನೊಂದು ವಚನದಲ್ಲಿ ‘ಮಾರಯ್ಯ’ ಎಂದು ಬಳಸುತ್ತಾರೆ.

‘…ಕುಮಾರಿ ಕೊಡಗೂಸೆಂಬವರ ಹಿಡಿದು ತಿಂಬ, ತಿರಿದುಂಬ ಮಾರಯ್ಯ,
ಬೀರಯ್ಯ, ಕೇಚರಗಾಮಿ, ಅಂತರ ಬೆಂತರ ಕಾಳಯ್ಯ ಮಾಳಯ್ಯ ಕೇತಯ್ಯಗಳೆಂಬ…’[3]

ಇಲ್ಲಿಯ ಮಾರಯ್ಯ ಖಂಡಿತವಾಗಿ ಮಾರಿದೇವತೆಯ ಹೆಸರಿನವನೇ. ಈ ಹೆಸರಿನ ಜೊತೆಗೆ ಬರುವ ಹೆಸರುಗಳೆಲ್ಲ ಕ್ಷುಲಕ ದೇವತೆಗಳವೇ. ಆದರೆ ತಂಗಟೂರುಮಾರಯ್ಯ ಮತ್ತು ಮಾರಿತಂದೆ (ಮೋಳಿಗೆ) ಈ ಹೆಸರುಗಳು ಮಾರಿದೇವತೆಯಿಂದ ಬಂದುವಲ್ಲ; ಅವು ಮನ್ಮಥನ ಹೆಸರಿನಿಂದಲೇ ಬಂದುವಾಗಿವೆ.

ಈ ಹೆಸರಿನ ಮೂಲ ಮಾರ; ಅದು ಕಾಮನ ಹೆಸರೇ. ಉಚ್ಚಾರ ಸೌಲಭ್ಯಕ್ಕಾಗಿ ಮಾರಿತಂದೆಯಾಗಿದೆ. ಅಱುವಿನ ಮಾರಿತಂದೆ ತನ್ನ ವಚನಗಳಲ್ಲಿ ತನ್ನ ಹೆಸರನ್ನು ‘ಮಾರ’ ಎಂದು ಸ್ಪಷ್ಟವಾಗಿ ಹೇಳಿಕೊಂಡಿದ್ದಾನೆ:

‘…ಅರಿವಿಂಗೆ ಶರಣು ಮರವಿಂಗೆ ಮಥನ ಮಾಡಿದಲ್ಲದೆ ಇರೆ,
ಇದು ನೀವು ಕೊಟ್ಟ ಅರುವಿನ ಮಾರನ ಇರವು[4]

‘…ಸದಾಶಿವಮೂರ್ತಿಲಿಂಗ ನೊಂದಡೂ ನೋಯಲಿ ಅರಿವಿನ ಮಾರನ ಲಿಂಗ ಹಿಂಗದ ಭಾವ;[5]

‘…ನಿಮ್ಮಯ ನಿರ್ಮಲ ಎನ್ನಯ ಮಲದೇಹವ ತೊಳೆಯಬೇಕೆಂಬುದಕ್ಕೆ ಅರಿವಿನ ಮಾರನ ಬಿನ್ನಹ, ಸದಾಶಿವಮೂರ್ತಿಲಿಂಗಕ್ಕೆ ತೆರಹಿಲ್ಲದ ಭಾವ’.[6]

ಆಯ್ದಕ್ಕಿ ಮಾರಯ್ಯನ ಹೆಂಡತಿ ಲಕ್ಕಮ್ಮ ತನ್ನ ವಚನಗಳಲ್ಲಿ ಗಂಡನ ಹೆಸರನ್ನು ಬಳಸಿದಾಗ ‘ಮಾರಯ್ಯ’ ಎಂದೇ ಅನ್ನುತ್ತಾಳೆ.

‘…ಕೈದುವ ಕೊಡುವರಲ್ಲದೆ ಕಲಿತನವ ಕೊಡುವರುಂಟೆ ಮಾರಯ್ಯ?’[7]

ಸಸಿಗೆ ನೀರೆರದಡೆ ಏಳಕುವುದಲ್ಲದೆ ನಷ್ಟಮೂಲಕ್ಕೆ
ಹೊತ್ತು ನೀರ ಹೊಯಿದಡೆ ಎಳಕುವುದೇ ಮಾರಯ್ಯ?’[8]

‘…ಬೇರೊಂದು ಠಾವುಂಟೆ ಮಾರಯ್ಯ?’[9]

ಎಂದೇ ಲಕ್ಕಮ್ಮನ ಅಂಕಿತ ‘ಮಾರಯ್ಯ ಪ್ರಿಯ ಅಮರೇಶ್ವರ ಲಿಂಗ’ ಎಂದಿದೆ. ಶೂನ್ಯ ಸಂಪಾದನೆಕಾರ ಮಾರಯ್ಯ ಮತ್ತು ಮಾರಿತಂದೆ ಎರಡೂ ಹೆಸರುಗಳನ್ನು ಬಳಸುತ್ತಾನೆ. ಮಾರನ ಇನ್ನೊಂದು ಹೆಸರಾದ ‘ಕಾಮ’ ಎಂಬ ಹೆಸರಿನ ಕೆಲ ಶರಣರು ದೊರಕುತ್ತಾರೆ:

೧. ಕಾಮಯ್ಯ      – (ಸತ್ಯ ಹೇಳುವ ವ್ರತ)
೨. ಎಲೆಗಾರ ಕಾಮಣ್ಣ – ವಚನಕಾರ – ಆತುರೇಶ್ವರ ಲಿಂಗ (ಅಂಕಿತ)
೩. ಜಗಳಗಂಟಕಾಮಣ್ಣ – ವಚನಕಾರ – ಕಾಮೇಶ್ವರ (ಅಂಕಿತ)
೪. ತಳವಾರ ಕಾಮಿದೇವ – ವಚನಕಾರ – ಕಾಮಹರಪ್ರಿಯ (ಅಂಕಿತ)
೫. ಕಾಲಕಣ್ಣಿಯ ಕಾಮಮ್ಮ – ವಚನಕಾರ – ನಿಜಲಿಂಗ (ಅಂಕಿತ)
೬. ಕಾಮಲದೇವ – (ಶಿವನಿಗೆ ಕನ್ನಡಿ ತೋರುವ ವ್ರತ)
೭. ಕಾಮಲಾಯಿ – (ವಾರನಾರಿ)

ಈ ಹೆಸರುಗಳನ್ನು ನೋಡುವುದರಿಂದ ಆ ಕಾಲದಲ್ಲಿ ಕಾಮನಿಗೆ ಸಂಬಂಧಿಸಿದಂತೆ ಹೆಸರುಗಳನ್ನಿಟ್ಟುಕೊಳ್ಳುವ ರೂಢಿ ಇತ್ತೆಂದು ಸ್ಪಷ್ಟವಾಗುತ್ತದೆ.[10] ‘ಆತುರೇಶ್ವರ ಲಿಂಗ’, ‘ಕಾಮೇಶ್ವರ’, ‘ಕಾಮಹರ ಪ್ರಿಯ’ ಈ ಅಂಕಿತಗಳೂ ಕಾಮನಿಗೆ ಸಂಬಂಧಿಸಿದಂತೆ ಆಗಿವೆ.

ಕಾಮಣ್ಣ – ಕಾಮಯ್ಯ ಇದರಂತೆ ಮದನ, ಮದನಮೋಹನ, ಎಂಬ ಹೆಸರುಗಳು ಈಗಲೂ ಬಳಕೆಯಲ್ಲಿವೆ; ಆದರೆ ಮಾರಯ್ಯ ಎಂಬ ಹೆಸರು ಬಳಕೆಯಲ್ಲಿದ್ದುದು ಕಂಡುಬರುವುದಿಲ್ಲ. ಕಾಮಣ್ಣ ಎಂಬ ಹೆಸರಿಗಿಂತಲೂ ಆ ಕಾಲದಲ್ಲಿ ಮಾರಯ್ಯ ಎಂಬ ಹೆಸರು ಹೆಚ್ಚು ಜನಪ್ರಿಯವಾಗಿ ಬಳಕೆಯಲ್ಲಿರಲು ಏನು ಕಾರಣವೋ ತಿಳಿಯದು. ಕಾಮಣ್ಣ ಎಂಬುದು ಎಷ್ಟು ಸರ್ವಸಮಾನ್ಯವಾಗಿ ಕಾಣುವುದೋ ಅಷ್ಟೇ ವಿಶಿಷ್ಟವಾದುದಾಗಿದೆ, ಮಾರಯ್ಯ ಎಂಬ ಹೆಸರು. ಕಡಮೆ ಕುಲದವರಲ್ಲಿಯೇ ಕಾಮಣ್ಣ ಎಂಬ ಹೆಸರು ಬಳಕೆಯಲ್ಲಿದ್ದುದು ಕಂಡುಬರುತ್ತದೆ. ಆದರೆ ಮದನ ಎಂಬ ಹೆಸರು ದೊಡ್ಡ ಕುಲದಲ್ಲಿ ಅದೂ ಒಂದು ವಿಶಿಷ್ಟ ಜಾತಿಯಲ್ಲಿಯೇ ಬಳಕೆಯಲ್ಲಿದೆ.

ಮಾರಯ್ಯ ಎಂಬ ಹೆಸರು ಕೂಡ ಕಡಮೆ ಜಾತಿಯವರಲ್ಲಿಯೇ ಬಳಕೆಯಲ್ಲಿದ್ದಂತೆ ಕಾಣುತ್ತದೆ. ಇವರಲ್ಲಿ ಈ ಹೆಸರು ಬಳಕೆಯಲ್ಲಿರಲು ಕಾರಣವೇನು? ಈ ಹೆಸರಿನ ಬಳಕೆಗೆ ಯಾವುದೋ ಹಿಂದೆ ಇದ್ದ ಸಂಪ್ರದಾಯವೊಂದು ಕಾರಣವಾಗಿರಬೇಕು. ತಮಿಳುನಾಡಿನಲ್ಲಿ ಈ ಹೆಸರಿನ ಕೆಲವು ಶೈವಭಕ್ತರು ಆಗಿಹೋಗಿದ್ದಾರೆ: ಇಳೆಯಾಂಡಗುಡಿಮಾರ, ನಡುಮಾರರಾಜ, ನಿಡುಗುಡಿಯ ಮಾರ, ನಿಡುಮಾರ, ಮಾರಭಕ್ತ, ಮಾರಭೂಪ, ಶೈವಭಕ್ತರಾದ ಇವರ ಹೆಸರನ್ನು ಕರ್ನಾಟಕದ ಶಿವೋಪಾಸಕರು ಇಟ್ಟಕೊಂಡಂತೆ ಕಾಣುತ್ತದೆ. ಶೈವಭಕ್ತರಾದವರು ಕಾಮನ ಈ ಹೆಸರನ್ನು ಇಟ್ಟುಕೊಳ್ಳಬೇಕು? ಇದು ವಿವರಿಸಲು ಗಡುಚಾದ ವಿಷಯ. ಇದರ ಬಗ್ಗೆ ಹೆಚ್ಚು ಸಂಶೋಧನೆ ನಡೆಯಬೇಕು. ತಮಿಳಿನ ಶಿವಭಕ್ತ ‘ಮಾರ’ರ ಮೂಲವನ್ನು ಕೆದಕಿದರೆ ಈ ನಿಟ್ಟಿನಲ್ಲೊಂದು ಸಂಶೋಧನೆಗೆ ಮಾರ್ಗ ದೊರಕೀತು.

ಶರಣರ ತರುವಾಯ ಬಂದ ಜನಾಂಗ ಶರಣರ ಹೆಸರುಗಳನ್ನು ಇಟ್ಟುಕೊಳ್ಳುವ ರೂಢಿ ತಂದಿತು. ಆದರೆ ಕೇವಲ ಕೆಲವೇ ಜನರ ಹೆಸರುಗಳು ಬಳಕೆಯಲ್ಲಿ ಬಂದುವು. ಅತ್ಯಂತ ಪ್ರಸಿದ್ಧರಾದ ಬಸವ, ಅಲ್ಲಮ, ಚೆನ್ನಬಸವ, ಸಿದ್ದರಾಮ, ಗಂಗಾಂಬೆ, ನೀಲಾಂಬೆ, ಅಕ್ಕಮಹಾದೇವಿ ಮುಂತಾದವರ ಹೆಸರುಗಳು ಹೆಚ್ಚು ಬಳಕೆಗೆ ಬಂದುವು. ದುರ್ದೈವದ ಸಂಗತಿ ಎಂದರೆ ಶರಣಧರ್ಮದ ಈ ಜನ ಆಗಿನ ಕಾಲದ ಶರಣರ ಎಲ್ಲ ಹೆಸರುಗಳನ್ನು ಬಳಕೆಗೆ ತರಲಿಲ್ಲ. ಕಡಮೆ ಕುಲದವರಾಗಿ ಶರಣಧರ್ಮಕ್ಕೆ ಬಂದವರ ಹೆಸರುಗಳನ್ನು ಮುಂಬಂಬ ಈ ಜನಾಂಗ ಇಟ್ಟುಕೊಳ್ಳಲೇ ಇಲ್ಲ. ಅತ್ಯಂತ ಪ್ರಸಿದ್ಧರಾದ ಮಡಿವಾಳ ಮಾಚಯ್ಯ, ಕಲ್ಯಾಣ ಕ್ರಾಂತಿಗೆ ಮೂಲಬೀಜವಾದ ಮಾದಾರ ಹರಳಯ್ಯ, ಶರಣಧರ್ಮಕ್ಕೆ ಕಳೆಕೊಟ್ಟ ಮೇದಾರ ಕೇತಯ್ಯ, ಡೋಹರಕಕ್ಕಯ್ಯ, ಏಲೇಶ್ವರದ ಕೇತಯ್ಯ, ಬಾಹೂರ ಬ್ರಹ್ಮಯ್ಯ, ಮಾದಾರ ಧೂಳಯ್ಯ, ಜನಪದ ಕಲೆಗಳನ್ನು ಉಳಿಸಿ ಬೆಳೆಸಿ, ಶರಣಧರ್ಮ ಪ್ರಚಾರಗೈದ ಢಕ್ಕೆಯ ಬೊಮ್ಮಯ್ಯ, ಘಟಿವಾಳಯ್ಯ, ಕಲಕೇತ ಬೊಮ್ಮಯ್ಯ, ಬಹುರೂಪಿ ಚೌಡಯ್ಯ, ಕಂಕರಿ ಕಕ್ಕಯ್ಯ ಮೊದಲಾದವರ ಹೆಸರುಗಳು ಬಳಕೆಗೆ ಬರಲಿಲ್ಲ. ಇದಕ್ಕೆ ಮುಂಬಂದವರಿಗೆ ಅಂಟಿಕೊಂಡ ಜಾತಿವಾಸನೆಯೇ ಕಾರಣವಾಗಿರಬೇಕು. ಶರಣರ ತತ್ವಗಳ ಆಚರಣೆ ಮರೆತು ಅವರು ಮತ್ತೆ ಜಾತಿವಾದಿಗಳಾದರೆಂದು ತೋರುತ್ತದೆ. ಆದುದರಿಂದ ಇವರಲ್ಲಿ ಅನೇಕ ಜಾತಿ ಉಪಜಾತಿಗಳು ಸೃಷ್ಟಿಯಾದವು, ಆದುದರಿಂದ ಇನ್ನಿತರ ಶರಣರ ಹೆಸರುಗಳು ಮರೆಯಾದಂತೆ ಮಾರಯ್ಯ ಎಂಬ ಹೆಸರು ಮರೆಯಾಯಿತು ಕಲ್ಯಾಣದ ಶರಣರ ತರುವಾಯ ಈ ಹೆಸರು ಎಲ್ಲಿಯೂ ಬಳಕೆಯಾದಂತೆ ಕಂಡು ಬರುವುದಿಲ್ಲ.

ಶರಣರ ಹೆಸರುಗಳಾದ ಚಂದಯ್ಯ, ಅಪ್ಪಣ್ಣ, ಮಂಚಣ್ಣ (ಮಂಚಯ್ಯ), ಭೋಗಣ್ಣ, ಆದೆಯ್ಯ (ಆದೆಣ್ಣ), ಕಲ್ಲಯ್ಯ, ಬಾಚಯ್ಯ, ಲಕ್ಕಪ್ಪ, ಗುಂಡಯ್ಯ ಮುಂತಾದುವು ಈಗಲೂ ಬಳಕೆಯಲ್ಲಿವೆ. ಆದರೆ ಅವು ಹೆಚ್ಚಾಗಿ ಲಿಂಗಾಯತರಲ್ಲದವರಲ್ಲಿ ಬಳಕೆಯಲ್ಲಿವೆ. ಇವುಗಳಂತೆ ಮಾರಯ್ಯ ಎಂಬ ಹೆಸರು ಒಂದು ಕಡೆಯಾದರೂ ಬಳಕೆಯಲ್ಲಿದ್ದುದು ಕಂಡುಬರುವುದಿಲ್ಲ.

ಲಿಂಗಾಯತೇತರಲ್ಲಿ ಈಗ ಬಳಕೆಯಲ್ಲಿರುವ ಮಾರೆಪ್ಪ, ಮಾರೆಮ್ಮ ಹೆಸರುಗಳು ಈ ಮೊದಲೇ ನಾನು ಹೇಳಿದಂತೆ ಅವು ‘ಮಾರ’ ಎಂಬ ಹೆಸರಿನಿಂದ ಬಂದುವಲ್ಲ; ‘ಮಾರಿ’ ಎಂಬ ಹೆಸರಿನಿಂದ ಬಂದುವು. ತೃಪ್ತಿಯಾದರೂ ಲಿಂಗಾಯತರು ಈ ಹೆಸರನ್ನಿಡುವುದಿಲ್ಲ; ಹಿಂದೆಯೂ ಇದು ಇವರಲ್ಲಿ ಬಳಕೆಯಲ್ಲಿರಲಿಲ್ಲ; ಈಗಲೂ ಇಲ್ಲ.

ಶರಣರಲ್ಲಿ ತಮ್ಮ ಪೂರ್ವಾಶ್ರಮದ ಹೆಸರುಗಳನ್ನು ಬದಲಿಸಿಕೊಂಡವರು ಕ್ವಚಿತ. ಗುಣಕರ್ಮಗಳಿಂದ ಕೆಲವರ ಹೆಸರು, ಪ್ರಸಂಗಕ್ಕೆ ತಕ್ಕಂತೆ ಇನ್ನು ಕೆಲವರ ಹೆಸರು ಬದಲಾಗಿವೆ. ಒಡಿಸ್ಸಾ ದೇಶದ ಮಾತಂಗನೆಂಬ ಬೇಡ ಚೋರವೃತ್ತಿಯನ್ನು ತೊರೆದು ಶರಣ ಜೀವಿಯಾದಾಗ ಆತನ ಗುರು ಸುಜ್ಞಾನಿದೇವ ಆತನನ್ನು ‘ನನ್ನಯ್ಯ’ ಎಂದು ಪ್ರೀತಿಯಿಂದ ಕರೆದ. ಅಲ್ಲಿಂದ ಮಾತಂಗ ಹೋಗಿ ನನ್ನಯ್ಯ ಎಂಬ ಹೆಸರೇ ಆತನಿಗೆ ಕಾಯಾಮಾಗಿ ಉಳಿಯಿತು. ಕಾಶ್ಮೀರ ದೇಶದ ಮಾಂಡವ್ಯಪುರದ ರಾಜ ಮಹಾದೇವನ ತಂಗಿ ನಿಜದೇವಿ. ಆಕೆ ಶರಣಧರ್ಮಕ್ಕೆ ಒಲಿದು ಕಲ್ಯಾಣಕ್ಕೆ ದಿಗಂಬರೆಯಾಗಿ ಹೊರಟಳು. ದಾರಿಯಲ್ಲಿ ಅವಳ ಭಕ್ತಿಗೆ ಮೆಚ್ಚಿ ಶಿವ ಅವಳಿಗೆ ಬೊಂತೆ(ಕೌದಿ)ಯೊಂದನ್ನು ಕೊಟ್ಟ; ಅವಳು ಅದನ್ನು ಹೊದೆದುಕೊಂಡಳು. ಅದಕ್ಕಾಗಿ ಅವಳಿಗೆ ಬೊಂತಾದೇವಿ ಎಂದು ಹೆಸರಾಯಿತು. ಆಫಘಾನಿಸ್ತಾನದಿಂದ ಕಲ್ಯಾಣಕ್ಕೆ ಬಂದ ಮರುಳುಶಂಕರದೇವ. ಆತನ ಹೆಸರಿನ ಹಿಂದೆ ಅಂಟಿಕೊಂಡ ವಿಶೇಷಣ ‘ಮರುಳು’ ಅಚ್ಚಗನ್ನಡ ಶಬ್ದ. ಕಲ್ಯಾಣಕ್ಕೆ ಬಂದ ಬಳಿಕ ಆತನ ಮುಗ್ದತನವನ್ನು ಕಂಡು ‘ಮರುಳು’ ಎಂಬುದು ಆತನಿಗೆ ವಿಶೇಷಣವಾಗಿ ಬಂದಿರಬೇಕು.

ಇವರೆಲ್ಲರ ಹೆಸರಿನ ಬದಲಾವಣೆ ಸಹಜ ಎನಿಸುತ್ತದೆ. ಆದರೆ ಕಾಶ್ಮೀರದೇಶದ ಮಾಂಡವ್ಯಪುರದ ಅರಸ (ನಿಜದೇವಿಯ ಅಣ್ಣ) ಮಹಾದೇವ ಭೂಪಾಲ ಮತ್ತು ಆತನ ರಾಣಿ ಗಂಗಾಂಬೆಯರು ಕಲ್ಯಾಣಕ್ಕೆ ಬಂದು ತಮ್ಮ ಹೆಸರುಗಳನ್ನು ಬದಲಿಮಾಡಿಕೊಂಡುದು ಆಶ್ಚರ್ಯಕ್ಕೆ ಕಾರಣವಾಗುತ್ತದೆ. ಬಹುಶಃ ಇವರಂತೆ ಯಾವ ಶರಣನೂ ಬೇಕೆಂದೇ ತನ್ನ ಪೂರ್ವಾಶ್ರಮದ ಹೆಸರನ್ನು ಬಿಟ್ಟು ಬೇರೆ ಹೆಸರನ್ನು ಇಟ್ಟುಕೊಂಡಿಲ್ಲ. ಬಹುಶಃ ಈ ರಾಜದಂಪತಿಗಳಿಗೆ ತಮ್ಮ ಮುನ್ನಿನ ಹೆಸರಿನೊಂದಿಗೆ ಆ ಅರಸೊತ್ತಿಗೆಯ ಹಮ್ಮು, ಬಿಮ್ಮು, ವಾಸನೆ ಉಳಿದಾವೆಂದು ಅವುಗಳನ್ನು ಕಳಚಿಕೊಂಡಿರಬೇಕು. ಹೊಸ ಹೆಸರನ್ನು ಇಟ್ಟುಕೊಳ್ಳುವಾಗ ಅವರು ಯಾವ ನೇಮವನ್ನು ಪಾಲಿಸಿದರೋ? ಗಂಗಾಂಬೆ ಹೋಗಿ ಮಹಾದೇವಿ ಆದುದು ಆಶ್ಚರ್ಯವೇನಲ್ಲ. ಆದರೆ ಮಹಾದೇವ ಭೂಪಾಲ ಹೋಗಿ (ಮೋಳೀಗೆ) ಮಾರಯ್ಯ ಆಗುವುದರಲ್ಲಿ ಆಶ್ಚರ್ಯವಿದೆ.

ಮಹಾದೇವ ಭೂಪಾಲ ಕಟ್ಟಿಗೆ ಕಡಿದು ಹೊರೆಕಟ್ಟಿ ಮಾರುವ ಕಾಯಕ ಕೈಕೊಂಡುದರಿಂದ ಆತನಿಗೆ ‘ಮೋಳೀಗೆಯ’ ಎಂಬ ಅನ್ವರ್ಥನಾಮ ಬಂದುದು ಸರಿ. ಆದರೆ ಆತ ಮಾರಯ್ಯ ಎಂಬ ಹೆಸರನ್ನೇ ಏಕೆ ಆಯ್ದುಕೊಂಡ? ಈ ವಿಷಯ ಜಿಜ್ಞಾಸೆಗೆ ತಕ್ಕುದಾಗಿದೆ.

ಆ ಕಾಲಕ್ಕೆ ಮಾರಯ್ಯ ಎಂಬ ಹೆಸರು ಜನರಲ್ಲಿ ಹೆಚ್ಚು ಬಳಕೆಯಲ್ಲಿರಬೇಕು; ಜನತೆ ಆ ಹೆಸರನ್ನು ಪ್ರೀತಿಯಿಂದ ಇಟ್ಟುಕೊಳ್ಳುತ್ತಿರವೇಕು. ಅಲ್ಲದೆ ಸಮಾಜದಲ್ಲಿ ಕೃಷಿಕೃತ್ಯ ಮುಂತಾದ ಕಾಯಕಮಾಡುವ ಜನ ಅದನ್ನು ಇಟ್ಟುಕೊಳ್ಳುತ್ತಿದ್ದಿರಬೇಕು. ಆಢ್ಯರು, ಶ್ರೀಮಂತರು, ದೊಡ್ಡ ಜಾತಿಯವರು ಆ ಹೆಸರನ್ನು ಪ್ರೀತಿಸಿ ಇಟ್ಟುಕೊಳ್ಳುತ್ತಿದ್ದಿರಲಿಕ್ಕಿಲ್ಲ. ಈ ದೃಷ್ಟಿಯಿಂದ ನೋಡಿದರೆ ಮಹಾದೇವ ಭೂಪಾಲ ಈ ಹೆಸರಿಟ್ಟುಕೊಂಡುದು ಸರಿ ಎನಿಸುತ್ತದೆ. ಸಾಮಾನ್ಯ ಜನರ ಹೆಸರಾಯಿತು; ಮೈಬೆವರು ಸುರಿಸಿ ದುಡಿವವರ ಹೆಸರಾಯಿತು; ಅಲ್ಲದೆ ಆಢ್ಯತೆಯ ಸೋಂಕೂ ಇಲ್ಲದ ಹೆಸರಾಯಿತು. ಸತ್ಯಶುದ್ಧಧದ ಕಾಯಕ ಮಾಡಿ, ಸಾಮಾನ್ಯವಾಗಿ ಬದುಕಿ, ಆಢ್ಯತೆಯಿಂದ ದೂರಿರಲು ಇಚ್ಚಿಸಿದ ಮಹಾದೇವ ಭೂಪಾಕಲನಿಗೆ ‘ಮಾರಯ್ಯ’ ಹೆಸರು ಸರಿಕಂಡುದು ಉಚಿತವೇ ಆಗಿದೆ.

ಶರಣರಲ್ಲಿ ನಮಗೆ ಕಂಡು ಬರುವ ಮಾರಯ್ಯಗಳು ಇವರು: ೧೧ ಜನ ವಚನಕಾರರಿದ್ದಾರೆ:

ಹೆಸರು   ಕಾಯಕ ಕಾಲ     ಅಂಕಿತ

೧.ಅರಿವಾಳ ಮಾರಯ್ಯ – ಯೋಧ  –           –
೨.ಅಱುವಿನಮಾರಿತಂದೆ –              –          ಕ್ರಿ.ಶ. ೧೧೬೦     ಸದಾಶಿವಮೂರ್ತಿಲಿಂಗ
೩.ಆಯ್ದಕ್ಕಿ ಮಾರಯ್ಯ – ಅಕ್ಕಿಅಯುವುದು      ಕ್ರಿ.ಶ. ೧೧೬೦     ಅಮರಲಿಂಗೇಶ್ವರ
೪.ಇಕ್ಕದ ಮಾರಯ್ಯ – ದಾನಮಾಡನೆಂಬವ್ರತ           –                       –
೫.ಕನ್ನದ ಮಾರಿತಂದೆ –    ಕನ್ನ?                 ಕ್ರಿ.ಶ. ೧೧೬೦     ಮದನವೈರಿಮಾರೇಶ್ವರ
೬.ಕಂಬದಮಾರಿತಂದೆ –    ಮೀನುಗಾರ –      ಕ್ರಿ.ಶ. ೧೧೬೦     ಕದಂಬಲಿಂಗ
೭.ಕೂಗಿನ ಮಾರಿತಂದೆ –   ಕೂಗುಹಾಕುವುದು            ಕ್ರಿ.ಶ. ೧೧೬೦     ಮಹಾಮಹಿಮ ಮಾರೇಶ್ವರಾ
೮.ಕೋಡಗದಮಾರಣ್ಣ –     ಕೋತಿಕುಣಿಸುವುದು         ಕ್ರಿ.ಶ. ೧೧೬೦     –
೯.ಗೊನೆಯ ಮಾರಯ್ಯ –                –           –                                   –
೧೦.ಚಂಡೇಶ ಮಾರಯ್ಯ –             –           –                       –
೧೧.ಜಟ್ಟಿಮಾರಯ್ಯ –       ಜಟ್ಟಿ      –                                   –
೧೨.ತಂಗಟೂರುಮಾರಯ್ಯ –         ಪಡಿಹಾರಿ           ಕ್ರಿ.ಶ. ೧೧೬೦
೧೩.ತಂಡೇಶ ಮಾರಯ್ಯ –             –          ಕ್ರಿ.ಶ. ೧೧೬೦
೧೪.ನಗೆಯ ಮಾರಿತಂದೆ –            ನಗಿಸುವ ಕಾಯಕ            ಕ್ರಿ.ಶ. ೧೧೬೦     ಆತುರವೈರಿಮಾರೇಶ್ವರಾ
೧೫.ಮಸನದ ಮಾರಿತಂದೆ –           –          ಕ್ರಿ.ಶ. ೧೧೬೦     ಮನಸಂದಿತ್ತುಮಾರೇಶ್ವರಾ
೧೬.ಮಸಣದ ಮಾರಯ್ಯ –            ದುರುಗಮುರುಗಿ  –           –
೧೭.ಮಾರಗೌಡ –            ಬೇಸಾಯ                      –                       –
೧೮.ಮಾರೇಶ್ವರೊಡೆಯ –                          ಕ್ರಿ.ಶ. ೧೧೬೦     ಮಾರೇಶ್ವರಾ
೧೯.ಮೋಳಿಗೆ ಮಾರಯ್ಯ –            ಮೋಳಿಗೆಕಾಯಕ ಕ್ರಿ.ಶ. ೧೧೬೦     ನಿಃಕಳಂಕಮಲ್ಲಿಕಾರ್ಜುನಾ
೨೦.ವೆರಲದ ಮಾರಯ್ಯ –                          –           –                       –
೨೧.ಸಗರದ ಮಾರಯ್ಯ –               –           –                       –
೨೨.ಸತ್ತಿಗೆಯ ಮಾರಿತಂದೆ –         ಕೊಡೆಹಿಡಿವಕಾಯಕ         ಕ್ರಿ.ಶ. ೧೧೬೦     ಐಘಂಟೇಶ್ವರಲಿಂಗ
೨೩.ಹಾದರದ ಕಾಯಕ ಮಾರಯ್ಯ –             –           –           –
೨೪.ಹುಣಜಿಯ ಮಾರವ್ವೆ –             –           –                       –
೨೫.ಹೆಂಡದ ಮಾರಯ್ಯ – ಹೆಂಡಮಾರುವುದು           ಕ್ರಿ.ಶ. ೧೧೬೦     ಧರ್ಮೇಶ್ವರಲಿಂಗ

ಇಪ್ಪತ್ತೈದು ಜನ ಮಾರಯ್ಯಗಳಲ್ಲಿ ವಿವಿಧದ ಕಾಯಕದವರಿದ್ದಾರೆ. ಮಹಾದೇವ ಭೂಪಾಲನನ್ನು ಬಿಟ್ಟರೆ ಯಾರೂ ದೊಡ್ಡ ಜಾತಿಯಿಂದ ಬಂದವರಿಲ್ಲ: ಎಲ್ಲರೂ ಸಾಮಾನ್ಯರೇ. ಯೋಧ, ಕನ್ನಹಾಕುವವ, ಮೀನುಗಾರ, ಅಕ್ಕಿ ಆಯುವವ, ಕೂಗು ಹಾಕುವವ, ಕೋತಿ ಕುಣಿಸುವವ, ಜಟ್ಟಿ, ಪಡಿಹಾರಿ, ನಗೆಯಕಾಯಕ, ದುರುಗಮುರುಗಿ, ಒಕ್ಕಲಿಗ ಕಟ್ಟಿಗೆಕಾಯಕದವ, ಸತ್ತಿಗೆ ಕಾಯಕದವ, ಹೆಂಡಮಾರುವವ ಇವರಲ್ಲ ತಮ್ಮ ಕಾಯಕಗಳನ್ನು ಲಿಂಗಾಂಗ ಸಾಮರಸ್ಯದ ಮಟ್ಟಕ್ಕೆ ಏರಿಸಿದವರು, ಸಾಮಾನ್ಯ ಕಾಯಕದವರೆನಿಸಿಕೊಂಡರೂ ಇವರು ಸಾಧನೆ ಸಿದ್ಧಿಗಳಲ್ಲಿ ಬಸವ, ಅಲ್ಲಮರಿಗಿಂತ ಕಡಿಮೆಯವರಲ್ಲ.

ಕೆಲವರ ಕಾಯಕಗಳು ಗೊತ್ತಾಗುವುದಿಲ್ಲ. ಆದರೆ ಅವರು ಕಾಯಕವಿಲ್ಲದವರೆಂದು ಅರ್ಥವಲ್ಲ. ಅವರ ಕಾಯಕಗಳ ಬಗ್ಗೆ ಎಲ್ಲಿಯೂ ಉಕ್ತವಾಗಿಲ್ಲ, ಅಷ್ಟೇ. ಕೆಲವರ ಕಾಯಕಗಳು ವಿಶಷ್ಟವಾಗಿವೆ. ಅಕ್ಕಿ ಆಯುವುದು: ಅಕ್ಕಿ ಆಯುವುದು, ಕೂಗು ಹಾಕುವುದು, ಕನ್ನ ಕೊರೆಯುವುದು. ಕೆಲವರ ಕಾಲ ಗೊತ್ತಾಗುವುದಿಲ್ಲ. ವಚನಕಾರ ಮಾರಯ್ಯಗಳೆಲ್ಲ ಬಸವಣ್ಣನವರ ಸಮಕಾಲಿನರೇ ಕೋಡಗದ ಮಾರಣ್ಣ ಒಬ್ಬ ಬಸವಪೂರ್ವದವನು. ಅವನು ಕೊಂಡಗುಳಿ ಕೇಶಿರಾಜನ (ಕ್ರಿ.ಶ. ೧೧೦೦) ಸಮಕಾಲೀನನು. ಕೆಲವರ ಚರಿತ್ರೆ ತೀರ ಮೊಟುಕಾಗಿ ದೊರಕುತ್ತದೆ; ಕೆಲವರ ಕೇವಲ ಹೆಸರುಗಳು ದೊರಕುತ್ತವೆ. ಅರಿವಾಳ ಮಾರಯ್ಯ ಕಾಳಗದಲ್ಲಿ ಅರಿಯದೆ ಜಂಗಮನೊಬ್ಬನನ್ನು ಕೊಂದ; ಆ ದುಃಖದಿಂದ ಶಿರವನ್ನು ಅರಿದುಕೊಳ್ಳಲು ಶಿವಮೆಚ್ಚಿ ಕೈಲಾಸ ಪದವಿಯಿತ್ತ. ಇಕ್ಕದ ಮಾರಯ್ಯನ ಹೆಂಡತಿ ಲೋಭಿ. ಆಕೆಯೊಡನೆ ತಾನೂ ದಾನ ಮಾಡೆನೆಂಬ ವ್ರತಕೊಟ್ಟ. ಶವನು ಅವನನ್ನು ಪರೀಕ್ಷಿಸಿದ, ಅದರಲ್ಲಿ ಇಕ್ಕದ ಮಾರಯ್ಯ ಗೆದ್ದ. ಶಿವನು ಅವನಿಗೆ ಕೈಲಾಸ ಪದವಿಯನ್ನು ಕರುಣಿಸಿದ. ಕೋಡಗದ ಮಾರಣ್ಣ ಕೋತಿ ಕುಣಿಸುವ ಕಾಯಕ ಮಾಡುತ್ತಿದ್ದ. ಈ ಕಾಯಕವನ್ನು ಕೇಶಿರಾಜ ದಣ್ಣಾಯಕ ಆಕ್ಷೇಪಿಸಿದ. ಮಾರಣ್ಣ ಲಿಂಗವನ್ನೇ ಕುಣಿಸಿದ. ಕೇಶಿರಾಜ ಇದೂ ಸರಿಯಿಲ್ಲವೆಂದು ಆಕ್ಷೇಪಿಸಿದ. ಆಗ ಮಾರಣ್ಣ ಪ್ರಾಣವನ್ನು ಬಿಟ್ಟ. ಶಿವ ಪ್ರತ್ಯಕ್ಷನಾಗಿ ಅವನಿಗೆ ನಿತ್ಯ ಪದವಿಯನ್ನಿತ್ತ. ಈತನ ಚರಿತ್ರ ಢಕ್ಕೆಯ ಬೊಮ್ಮಣ್ಣನನ್ನು ನೆನಪಿಗೆ ತರುತ್ತದೆ. ಚಂಡೇಶ ಮಾರಯ್ಯ ಶಿವನನ್ನು ಕರೆದು ತನ್ನ ರಾಜನಿಗೆ ತೋರಿಸಿದ.

ತಂಗಟೂರು ಮಾರಯ್ಯ ಬಸವಣ್ಣನ ಮನೆಯಲ್ಲಿ ಪಡಿಹಾರಿಯಾಗಿದ್ದ. ಒಮ್ಮೆ ಈತನ ಹೆಂಡತಿಯ ಲಿಂಗಗಳು ಪಲ್ಲಟವಾದವು. ಆದುದರಿಂದ ಪ್ರಾಣ ಲಿಂಗಿಗಳಾದ ಅವರು ಅಸು ನೀಗಿದರು. ಸತ್ಯಣ್ಣನೆಂಬ ಭಕ್ತ ಅವರ ಲಿಂಗಗಳನ್ನು ಅವರವರಿಗೆ ಧರಿಸಲು ಅವರಿಗೆ ಪ್ರಾಣ ಬಂದವು. ಬಸವಣ್ಣನವರು ಈತನನ್ನು ಬಹುಭಕ್ತಿಯಿಂದ ನೆನೆಯುತ್ತಾರೆ.

ಕಾಯದ ಗಡಣ ಕೆಲಬರಿಗುಂಟು, ಜೀವದ ಗಡಣ ಕೆಲಬರಿಗುಂಟು.
ಭಾವದ ಗಡಣ ಕೆಲಬರಿಗುಂಟು, ವಚನದ ಗಡಣ ಕೆಲಬರಿಗುಂಟು,
ಪ್ರಾಣಲಿಂಗದ ಗಡಣ ಅರಿಗೂ ಇಲ್ಲ, ಕೂಡಲಸಂಗನ ಶರಣರಲ್ಲಿ
ತಂಗಟೂರು ಮಾರಯ್ಯಂಗಲ್ಲದೆ.[11]

ತಂಡೇಶ ಮಾರಯ್ಯ ಮಲಗಿದಾಗ ಆತನ ಲಿಂಗವನ್ನು ಬಿಜ್ಜಳನು ತರಿಸಿದನು. ಆದ್ದರಿಂದ ಆತನ ಪ್ರಾಣ ಹೋಯಿತು. ಬಸವಣ್ಣ ಆತನಿಗೆ ಲಿಂಗ ಧರಿಸಲು ಮತ್ತೆ ಪ್ರಾಣ ಬಂದಿತು. ಮಸಣದ ಮಾರಯ್ಯ ದುರುಗಮುರುಗಿ (ಬುರುಬುರು ಸುಂಕಲಮ್ಮ) ಕಾಯಕದವ. ಪುಟ್ಟಿಯಲ್ಲಿ ಮಾರಿಯನ್ನು ಹೊತ್ತು. ಓಣಿಗಳಲ್ಲಿ ಅದನ್ನು ಕುಣಿಸಿ ಶಿವಾನುಭವ ಮಾಡುತ್ತಿದ್ದ. ಢಕ್ಕೆಯ ಬೊಮ್ಮಯ್ಯನಂತೆಈತನ ಚರಿತ್ರೆ ಇದೆ. ಢಕ್ಕೆಯ ಬೊಮ್ಮಯ್ಯನಿಗೆ ಮಾರಯ್ಯನೆಂದೂ ಕೆಲವು ಕಡೆ ಕರೆಯಲಾಗಿದೆ. ಅದೇ ಮಾರಯ್ಯನನ್ನು ಮಸಣದ ಮಾರಯ್ಯನೆಂದು ಶಿವತತ್ವ ಚಿಂತಾಮಣಿ ಕರ್ತೃ ಭಾವಿಸಿರುವನೋ ಏನೋ? ಮಸಣದ ಮಾರಯ್ಯನ ಚರಿತ್ರೆ ಶಿವತತ್ವ ಚಿಂತಾಮಣಿಯಲ್ಲಷ್ಟೇ ಕಂಡುಬರುತ್ತದೆ, ಬೇರೆ ಕಡೆ ಇಲ್ಲ. ಆದರೆ ಈತನಿಗೆ ಶಂಕರದಾಸಿಮಯ್ಯನ ಸಂಬಂಧ ಇರಲಿಲ್ಲ. ಢಕ್ಕೆಯ ಮಾರಯ್ಯ ಶಂಕರ ದಾಸಿಮಯ್ಯನ ಅಹಂಕಾರ ಕಳೆಯುತ್ತಾನೆ.

ಮಾರಗೌಡ ಒಕ್ಕಲಿಗ. ಒಮ್ಮೆ ಈತ ನೆಲ್ಲು ರಾಶಿ ಮಾಡುತ್ತಿರುವಾಗ ಶಿವನು ಜಂಗಮ ರೂಪದಿಂದ ಬಂದು ಅವನಿಗೆ ಕಬ್ಬಿಣವನ್ನು ಬಂಗಾರವನ್ನಾಗಿ ಮಾಡುವ ಪರುಷವನ್ನು ಕೊಡಹೋದನು. ಮಾರಗೌಡ ತನ್ನ ಮನ ಪರುಷದಿಂದ ನೆಲ್ಲು ರಾಶಿಯನ್ನೆಲ್ಲ ಹೊನ್ನ ರಾಶಿಯನ್ನಾಗಿ ಮಾಡಿ ಜಂಗಮನಿಗೆ ನೀಡಹೋದನು. ಇದರಿಂದ ಶಿವನು ನಾಚಿ ಮರೆಯಾದನು. ಸಗರದ ಮಾರಯ್ಯ ಪರವಾದಿಗಳನ್ನು ವಾದದಲ್ಲಿ ಸೋಲಿಸಿದ. ಇದರಿಂದ ಕುಪಿತರಾದ ಪರವಾದಿಗಳು ಆತನ ಮೇಲೆ ಬಿದ್ದರು. ಆಗ ಸಗರದ ಮಾರಯ್ಯ ಅವರನ್ನೆಲ್ಲ ಮಣ್ಣು ಮುಕ್ಕಿಸಿದ. ಹುಣಜೆಯ ಮಾರೆವ್ವ ಮಹಾಭಕ್ತೆ. ಶಿವನು ರಾಜನೊಡನೆ ಬಂದು ಈಕೆಗೆ ಲಿಂಗವನ್ನು ತೋರಿಸಿದನು. ಗೊನೆಯ ಮಾರಯ್ಯ, ಜಟ್ಟಿ ಮಾರಯ್ಯ, ವೆರಲದ ಮಾರಯ್ಯ, ಹಾದರ ಕಾಯಕದ ಮಾರಯ್ಯ ಮುಂತಾದವರ ಚರಿತ್ರೆ ದೊರಕಿಲ್ಲ; ಕೇವಲ ಅವರ ಹೆಸರುಗಳು ಮಾತ್ರ ದೊರಕುತ್ತವೆ.

ಈ ಶರಣರ ನಿಜವಾದ ಚರಿತ್ರೆ ದೊರಕದೆ ಒಂದು ರೀತಿಯ ಅನ್ಯಾಯವೇಆಗಿದೆ; ಅವರ ಚರಿತ್ರೆಗಳನ್ನು ನಮ್ಮ ಕವಿಗಳು ಪವಾಡಗಳಿಂದ ತುಂಬಿಬಿಟ್ಟಿದ್ದಾರೆ. ಇಷ್ಟು ಮಾತ್ರ ನಿಜ: ಇವರೆಲ್ಲ ಶರಣಧರ್ಮದ ಬೆಳವಿಗೆಗೆ ತಮ್ಮ ಜೀವನ ಮೀಸಲಿಟ್ಟವರು; ನಾಡಿಗೆ ಒಂದು ಹೊಸ ಹುಟ್ಟನ್ನು ತಂದುಕೊಡಲು ಹೋರಾಡಿದವರು; ಸಮಯ ಬಂದಾಗ ಆತ್ಮಾಪರ್ಣೆ ಮಾಡಿದವರು.

[1] ಶಿ.ಶಿ.ಬಸವನಾಳ (ಸಂ) ಬಸವಣ್ಣನವರ ಷಟ್ಸ್ಥಲದ ವಚನಗಳು, ಪುಟ ೮೫, ವಚನ ೩೨೮.

[2] ಡಾ|| ಆರ್.ಸಿ.ಹಿರೇಮಠ (ಸಂ) ಬಸವಪುರಾಣ, ಸಂಧಿ ೨೯, ಪದ್ಯ ೨೭

[3] ಶಿ.ಶಿ.ಬಸವನಾಳ (ಸಂ) ಬಸವಣ್ಣನವರ ಷಟ್ಸ್ಥಲದ ವಚನಗಳು, ಪುಟ ೧೪೬, ವಚನ ೫೫೭

[4] ಡಾ||ಆರ್.ಸಿ.ಹಿರೇಮಠ (ಸಂ): ಸಕಲ ಪುರಾತನರ ವಚನಗಳು, ಸಂಪುಟ ೧, ಪುಟ ೧೭೩, ವಚನ ೬೬೬.

[5] ಡಾ||ಆರ್.ಸಿ.ಹಿರೇಮಠ (ಸಂ): ಸಕಲ ಪುರಾತನರ ವಚನಗಳು, ಸಂಪುಟ ೧, ಪುಟ ೧೭೪, ವಚನ ೬೬೮

[6] ಡಾ||ಆರ್.ಸಿ.ಹಿರೇಮಠ (ಸಂ): ಸಕಲ ಪುರಾತನರ ವಚನಗಳು, ಸಂಪುಟ ೧, ಪುಟ ೧೭೪, ವಚನ ೬೬೯

[7] ಡಾ||ಆರ್.ಸಿ.ಹಿರೇಮಠ (ಸಂ):ಶಿವಶರಣೆಯರ ವಚನಗಳು, ಪುಟ ೩೩೩, ವಚನ ೮೫

[8] ಡಾ||ಆರ್.ಸಿ.ಹಿರೇಮಠ (ಸಂ):ಶಿವಶರಣೆಯರ ವಚನಗಳು, ಪುಟ ೩೩೩, ವಚನ ೮೮

[9] ಡಾ||ಆರ್.ಸಿ.ಹಿರೇಮಠ (ಸಂ):ಶಿವಶರಣೆಯರ ವಚನಗಳು, ಪುಟ ೩೩೩, ವಚನ ೮೮.

[10] ೧೬ನೇಯ ಶತಮಾನದಲ್ಲಿ ಮಹಾರಾಷ್ಟ್ರದ ಬೀಡ ಜಿಲ್ಲೆಯ ಕಪಿಲಧಾರಾಕ್ಷೇತ್ರದಲ್ಲಿ ‘ಮನ್ಮಥ ಸ್ವಾಮಿ’ ಎಂಬ ಶರಣರಿದ್ದರು. ಈ ಶರಣರ ನೆನಪಿಗಾಗಿ ಆ ಭಾಗದ ಜನಗಳು ಇಂದಿಗೂ ಮನ್ಮಥ ಎಂದು ಹೆಸರಿಟ್ಟುಕೊಳ್ಳುತ್ತಾರೆ.

[11] ಶಿ.ಶಿ.ಬಸವನಾಳ (ಸಂ) ಬಸವಣ್ಣನವರ ಷಟ್ಸ್ಥಲದ ವಚನಗಳು, ಪುಟ ೨೧೬, ವಚನ ೮೦೭.