ಕಲ್ಯಾಣದ ಶಿವಶರಣರು ಮುಖ್ಯವಾಗಿ ಜನಕೋಟಿಗೆ ಒಂದು ಮಹದುಪಕಾರ ಮಾಡಿದರು. ಇಲ್ಲಿ ಬದುಕಲು – ಚೆನ್ನಾಗಿ ಬದುಕಲು – ಕಲಿಸಿದರು; ಸರ್ವಕ್ಕೂ ಪರವನ್ನೇ ನಿಟ್ಟಿಸುತ್ತಿದ್ದ ಜನರ ಕಂಗಳಲ್ಲಿಯೇ ಕೈಲಾಸವಿದೆಯೆಂದು ತೊರಿಸಿದರು. ಈ ಬದುಕು ಸಾರ್ಥಕವಾಗಬೇಕು. ಇಹದಲ್ಲಿ ಸರಿಯಾಗಿ ಬಾಳದೆ, ಪುಣ್ಯದ ಹೆಸರಿನಲ್ಲಿ, ಧರ್ಮದ ಸೋಗಿನಲ್ಲಿ ಢಂಭಾಚಾರವನ್ನು ಮೆರೆದು ಪರಲೋಕದಲ್ಲಿ ನಾನು ಸುಖ ಪಡೆಯುವೆನೆಂದು ಮಾನವ ನಂಬಿದ್ದ: ಅವನನ್ನು ಹಾಗೆ ನಂಬುವಂತೆ ಮಾಡಿದ್ದುವು. ಧರ್ಮ, ಶಾಸ್ತ್ರ, ಸಂಪ್ರದಾಯಗಳು. ಇದರ ಅರ್ಥತೆಯನ್ನು ಜನರಿಗೆ ವಚನಕಾರರು ಮನದಟ್ಟು ಮಾಡಿಕೊಟ್ಟರು: ‘ಇಲ್ಲಿ ಸಲ್ಲಿದರೆ ಅಲ್ಲಿಯೂ ಸಲ್ಲುವನು’ ಎಂದು ನುಡಿದು, ನೆಡೆದು ಈ ಲೋಕದಲ್ಲಿ ಜನರಿಗೆ ಬದುಕುವುದನ್ನು ಕಲಿಸಿದರು.

ಇಲ್ಲಿ ಸಲ್ಲಬೇಕಾದರೆ – ಶಿವ ಮೆಚ್ಚುವಂತೆ, ಲೋಕ ಹೌದೆನ್ನುವಂತೆ ಸಲ್ಲಬೇಕಾದರೆ – ಬೇಕು ಸತ್ಯ ಶುದ್ಧ ಕಾಯಕ. ಇಂಥ ಕಾಯಕವಿಲ್ಲದೆ, ದುಡಿಮೆಯ ಅರ್ಥವನರಿಯದೆ ಜನರು ಸೋಮಾರಿಗಳಾಗಿ, ಬದುಕನ್ನು ಪಾಳ್ಗೆಡವಿ, ರಾಷ್ಟ್ರದ ಶಕ್ತಿಯನ್ನು ಕುಗ್ಗಿಸಿದ್ದರು. ಧರ್ಮ, ಅರ್ಥ, ಕಾಮ, ಮೋಕ್ಷ ಈ ಪುರುಷಾರ್ಥಗಳ ಗಳಿಕೆಯ ಸಾಧನವನ್ನೇ ಜನತೆ ಅರಿಯದಾಗಿದ್ದರು. ಅಂಥ ಕಾಲದಲ್ಲಿ ಶಿವಶರಣರು ಕಾಯಕದ ಮಹತ್ವವನ್ನು ಬಿತ್ತರಿಸಿದರು; ಬಾಯಿಯಿಂದಲ್ಲ, ಕೃತಿಯಿಂದ.

ಮೈಬೆವರು ಸುರಿಸಿ ದುಡಿಯುವವನಿಗೆ ಬೆಲೆಯಿಲ್ಲದೆ, ವೇದಶಾಸ್ತ್ರಗಳನ್ನು ಪಠಿಸುವವರಿಗೆ, ಕೃಷಿಕರ್ಮಗಳನ್ನು ಮಾಡದ ಪರೋಪಜೀವಿಗಳಿಗೆ ಬೆಲೆ, ಮಾನ, ಸನ್ಮಾನವಿದ್ದ ಆ ಕಾಲದಲ್ಲಿ ಶರಣರು ಮೈಬೆವರು ಸುರಿಸಿ ದುಡಿವವನೇ ಶಿವನೆಂದು ಸಾರಿದರು; ದುಡಿಮೆಗೆ ಪೂಜ್ಯಸ್ಥಾನ ಕೊಟ್ಟರು. ಇಷ್ಟೇ ಅಲ್ಲ, ಕಾಯಕವು ಲೌಕಿಕ ಮತ್ತು ಪಾರಮಾರ್ಥಿಕ ಎರಡನ್ನೂ ಸಾಧಿಸುವ ಸುಲಭಮಾರ್ಗವೆಂದುಸುರಿ ಸಾಮಾನ್ಯನೂ ಇವೆರಡನ್ನು ಸಾಧಿಸಬಲ್ಲನೆಂಬುದನ್ನು ಕೃತಿಯಿಂದ ತೋರಿಸಿದರು. ‘ಕಾಯಕವೇ ಕೈಲಾಸ’ ಹಿಗ್ಗಿಸಿದಷ್ಟೂ ಇದರರ್ಥ ವಿಶಾಲವಾಗುತ್ತ ಹೋಗುವುದು.

ಕಲೆಗಳೂ ಶಿವಶರಣರ ಕಾಯಕಗಳಾಗಿ ಬಾಳನ್ನು ಬೆಳಗಿದುವು. ಸಂಗೀತ, ಹಾಸ್ಯ, ನಗೆ, ಚಿತ್ರ, ಶಿಲ್ಪ, ನಾಟ್ಯ, ನಾಟಕ, ಕಾವ್ಯ – ಎಲ್ಲವೂ ಶರಣರನ್ನು ಆಶ್ರಯಿಸಿ ಶುದ್ಧವಾದುವು; ಶಿವನ ಪೂಜೆಯೆನೆಸೆದುವು, ಕಿನ್ನರಿ ಬೊಮ್ಮಣ್ಣ, ರಾಗದ ಸಂಗಣ್ಣ, ಕಂಕರೀ ಕಕ್ಕಯ್ಯ, ಶಿವಮಾಯಿದೇವಿ, ಸಿದ್ದದೇವಮ್ಮ, ಭದ್ರಗಾಯದ, ಕಲಕೇತ ಬೊಮ್ಮಯ್ಯ. ಢಕ್ಕೆಯ ಮಾರಯ್ಯ, ನಗೆಯ ಮಾರಿತಂದೆ, ಬಹುರೂಪಿ ಚೌಡಯ್ಯ ಮೊದಲಾದವರು ಕಲಾವಿದರಾಗಿ ಬಾಳಿದರು; ಶುದ್ಧ ಕಲೆಯಿಂದ ಶಿವನನ್ನೂ ಶುಭವನ್ನೂ ನಾಡಿನಲ್ಲಿ ಬಿತ್ತಿ ಬೆಳೆದರು.

ತೊಗಲಗೊಪ್ಪೆಯರ ಆಟ, ಕಂಕರೀ ಬಾರಸಿಸುವುದು, ಗೊಂಬೆಯಾಟ, ಜಾತಿಗಾರ, ವಿನೋದಾವಳಿ, ಡೊಂಬರಾಟ, ಬಯಲಾಟ ಇವೇ ಮೊದಲಾದ ಶುದ್ಧ ದೇಶೀಯ ಕಲೆಗಳು ಜನರ ಕಂಗಳಲ್ಲಿ ಕೀಳೆನಿಸಿದ್ದವು. ಅತಿ ಸಾಮಾನ್ಯ ಜನರ ರಂಜನೆಗೆ ವಿಷಯಗಳಾದ ಈ ಕಲೆಗಳು ಕೇವಲ ಹೊಟ್ಟೆಹೊರೆಯುವ ಸಾಧನಗಳಾಗಿದ್ದವು. ನಿಜಕ್ಕೂ ಇವೇ ಕಲೆಗಳು; ಇನ್ನುಳಿದ ಕಲೆಗಳಿಗೆ ಇವು ಮೂಲವಾದುವುಗಳು. ನೇರವಾಗಿ ಜನ ಜೀವನದಿಂದ ಹುಟ್ಟಿ ಜನಜೀವನದಲ್ಲಿ ಬೆಳೆದು, ಅವರನ್ನು ನಗಿಸಿ, ಅಳಿಸಿ, ಅವರ ಬಾಳನ್ನು ತಿದ್ದಿ ತೀಡಿ ಹಸನುಗೈಯುವಂಥವು ಈ ಜಾನಪದ ಕಲೆಗಳು. ಆದರೆ ಇವುಗಳಿಗೆ ಆಗ ದೊರಕಿದ ಸ್ಥಾನ ‘ಶೂದ್ರತನ’.

ಹೀಗೆ ಜನರಿಂದ ಕೀಳೆನಿಸಿದ ಕಲೆಗಳನ್ನು ಶರಣರು ತಮ್ಮ ಕಾಯಕಗಳನ್ನಾಗಿ ಆರಿಸಿಕೊಂಡರು. ಇದರಿಂದ ಆ ಕಲೆಗಳಿಗೆ ಹೊಸಜೀವ ಬಂತು. ಅವು ಮಾನವ ಜೀವನದ ಚರಮಗುರಿಯನ್ನು ಸಾಧಿಸುವ ಮಾರ್ಗಗಳಾದುವು. ಹೀಗೆಂದರೆ ಅವುಗಳಿಗೆ ಅಪಚಾರವೆಸಗಿದಂತಾಗುವುದು. ಗುರಿಯೂ ಸಾಧನೆಯೂ ಎಲ್ಲವೂ ಅವೇ ಆದುವು. ನಾಡಿನಲ್ಲಿ ದೇಶೀಯ ಕಲೆಗಳ ಪುನರುಜ್ಜೀವನವಾಯಿತು. ಅವುಗಳಿಗೆ ಹೊಸ ಕ್ಷಿತಿಜಗಳು ತೆರೆದು ನಿಂತುವು. ಜಾನಪದ ಕಲೆಗಳ ಒಂದು ಹೊಸ ಸಂಪ್ರದಾಯವೇ ನಿರ್ಮಾಣವಾಯಿತು.

ಜಾನಪದ ಕಲೆಗಳಲ್ಲಿ ಢಕ್ಕೆಯ ಮಾರಯ್ಯ, ಅಲ್ಲಯ್ಯ, ಕಲಕೇತ ಬೊಮ್ಮಯ್ಯ, ಕಂಕರೀ ಕಕ್ಕಯ್ಯ, ಬಹುರೂಪಿ ಚೌಡಯ್ಯ ಮುಂತದಾ ಶರಣರು ಸುಪ್ರಸಿದ್ದರು. ಬಹುರೂಪಿ ಚೌಡಯ್ಯನು ಅನೇಕ ಹೊಸ ಸಂಪ್ರದಾಯಗಳಿಗೆ ನಿರ್ಮಾತೃವೆನಿಸಿದರು.

ದಿನಮಣಿಗೆ ಪಣವೆ ಜಗವ ಬೆಳಗುವುದಕ್ಕೆ

ರೇಕಳಿಕೆ ಎಂಬ ಊರು. ಅಲ್ಲಿ ಜನಸೇವ್ಯ – ಧರ್ಮರತಿ ಎಂಬ ಬ್ರಾಹ್ಮಣ ದಂಪತಿಗಳಿದ್ದರು. ಅವರ ನಗನೇ ಚೌಡಯ್ಯ.

ಚೌಡಯ್ಯನಿಗೆ ಚಿಕ್ಕಂದಿನಿಂದಲೇ ಸಂಗೀತ ನಾಟ್ಯದಲ್ಲಿ ಆಸಕ್ತಿಯಿತ್ತು. ಯೌವನ್ನ ಬಂದು ಆತನ ಅಪ್ಪಿಕೊಳ್ಳುವಷ್ಟರಲ್ಲಿ ಜಾತಿಗಾರ ವಿದ್ಯೆ ಆತನನ್ನು ಆಶ್ರಯಿಸಿ ಸರ್ವಾಂಗ ಸುಂದರವಾಗಿ ಬೆಳೆದಿತ್ತು. ಬಹುರೂಪಗಳನ್ನು ಧರಿಸಿ ಆತ ಜನರಿಗೆ ಮುದವನ್ನೀಯುತ್ತಿದ್ದ: ಭರತವಿದ್ಯೆಯಿಂದ ರಸಿಕರ ಹೃದಯಗಳನ್ನು ರಂಜಿಸುತ್ತಿದ್ದ.

ಕಲ್ಯಾಣದ ಶಿವಶರಣರಿಂದ ಉಸಿರುವಡೆದು ವೀರಶೈವಧರ್ಮ ನಾಡಿನಲ್ಲಿ ಪಸರಿಸತೊಡಗಿತ್ತು. ಸರ್ವರನ್ನೂ ಪ್ರೀತಿಯಿಂದ, ಆದರದಿಂದ ಕಂಡ ಈ ಧರ್ಮ, ಸರ್ವರೂ ಸಮಾನರಾಗಿ ಬಾಳುವ ವಿನೂತನವಾದ ತತ್ವಗಳನ್ನೂ ನಾಡವರ ಮುಂದಿಟ್ಟಿತ್ತು. ಜನರು ಮನಮುಟ್ಟಿ ಈ ಧರ್ಮವನ್ನು ಸ್ವೀಕರಿಸತೊಡಗಿದರು. ದ್ವಜನಾದ ಚೌಡಯ್ಯ ಲಿಂಗವಂತಧರ್ಮಕ್ಕೆ ಮಾರುವೋಗಿ ಅದನ್ನು ಪ್ರೀತಿಯಿಂದ ಅಪ್ಪಿಕೊಂಡನು. ಚರಮೂರ್ತಿ ರೇಕನಾಥಾಚಾರ್ಯರಿಂದ ಚೌಡಯ್ಯನು ವೀರಶೈವ ಧರ್ಮದ ದೀಕ್ಷೆಹೊಂದಿದನು.

ಈಗ ಚೌಡಯ್ಯನ ಜಾತಿಗಾರ ಕಲೆಗೆ, ಭರತವಿದ್ಯೆಗೆ ಹೊಸಜೀವ ಬಂದಿತು; ಆತ್ಮ ಮೂಡಿತು. ಆತನ ಕಲೆ ಕಾಯಕವಾಯಿತು. ‘ಕಾಯಕವು ಹರಸೇವೆ ಜಗದೊಳಗೆ’ ಎಂದು ದೀಕ್ಷಾಗುರು ರೇಕನಾಥಾಚಾರ್ಯರು ಚೌಡಯ್ಯನಿಗೆ ಉಪದೇಶಿಸಿದರು.

ಚೌಡಯ್ಯ ಹರನ ಲೀಲೆಗಳ ರೂಪಧರಿಸಿ ಕುಣಿಯತೊಡಗಿದ. ಆತ ‘ಶಿವಲೀಲೆ ಆಡಿದರೆ ನಾಡೆಲ್ಲ ಹೂವಾಯ್ತು; ಮೂಡಿ ಶಿವಭಕ್ತಿ ಹಣ್ಣಾಯ್ತು.’ ಆತನ ಬಹುರೂಪವನ್ನು ‘ಪುರವೆದ್ದು ನೋಡುತಲಿತ್ತು, ನೋಡಿ ಮೈಮರೆಯುತ್ತಿತ್ತು.’

ಚೌಡಯ್ಯನ ಕಲೆಯ ಕೀರ್ತಿ ಎಣ್ದೆಸೆಗೆ ಹಬ್ಬಿತು. ನೂರಾರು ಕಲಾಪ್ರಿಯರು ಬಂದು ಅವನ ಶಿಷ್ಯತ್ವ ವಹಿಸಿ ಕಲೆಯ ಅಭ್ಯಾಸಕ್ಕೆ ನಿಂತರು. ಚೌಡಯ್ಯನ ಮೇಳ ದೊಡ್ಡದಾಯಿತು. ‘ಶಿವಮತವ ಹಬ್ಬಿಸಲು ಶಿವನ ಅಪ್ಪಣೆ ಪಡೆದು ಶಿವಕಳೆಯಂ ಸಿಡಿದು ಹುಟ್ಟಿದಂತಿದ್ದರು’ ಆತನ ಮೇಳದವರು. ಇಂಥ ಮೇಳದೊಂದಿಗೆ ಚೌಡಯ್ಯ ಬಹುರೂಪಗಳನ್ನಾಡುತ್ತಿದ್ದನು; ಜನರು ಮೆಚ್ಚಿ ಧನ ಮನ ನೀಡುತ್ತಿದ್ದರು. ಚೌಡಯ್ಯ ತನ್ನ ಮೇಳದೊಂದಿಗೆ ನಿತ್ಯ ದಾಸೋಹ ಮಾಡುತ್ತಿದ್ದನು.

ಚೌಡಯ್ಯ ತನ್ನ ಮೇಳದೊಡನೆ ಸಂಚಾರ ಕೈಕೊಂಡನು. ಹೋದಲ್ಲೆಲ್ಲ ಶಿವಲೀಲೆಗಳನ್ನು ಆಡಿ ತೋರಿಸಿದನು: ‘ಶಿವಗಂಗೆ ಸುತ್ತ ಹರಿದಂತೆ ಶಿವನುಡಿಯ ಸಾರಿದನು’ ಊರೂರು ತಿರುಗುತ್ತ ಚೌಡಯ್ಯನ ಮೇಳ ನೀಲಗಿರಿಪರ್ವತ ಪ್ರದೇಶದ ಕೊಟ್ಟಗಿರಿ (ಕೋಟಿಗಿರಿ)ಗೆ ಬಂದಿತು. ಅಲ್ಲಿ ಬಹುರೂಪಗಳಿಂದ ಚೌಡಯ್ಯನ ಮೇಳ ಬಹು ಜನಪ್ರಿಯವಾಗಿತ್ತು.

ಕೊಟ್ಟಗಿರಿಯ ಅರಸು ರಾಮದೇವ. ಅಚ್ಯುತನೆಂಬುವನು ಆತನ ಆಸ್ಥಾನ ಕಲಾವಿದ. ಗಾನ, ನರ್ತನ, ಜಾತಿಗಾರ ವಿದ್ಯೆಯಲ್ಲಿ ಅಚ್ಯುತ ಬಲ್ಲಿದನಾಗಿದ್ದನು. “ಗಾನವಿದ್ಯಾಗಜೇಂದ್ರಸಿಂಹ” ಎಂಬುದು ಆತನ ಬಿರುದು.

ಚೌಡಯ್ಯನ ಜನಪ್ರಿಯತೆಯಿಂದ ಅಚ್ಯುತನ ‘ಹೊಟ್ಟೆಯ ಕಿಚ್ಚು’ ಹೊರ ಬಿದ್ದಿತು. ಆ ಕಿಚ್ಚಿನ ಕೆನ್ನಾಲಗೆ ಚೌಡಯ್ಯನ ಕೀರ್ತಿಯನ್ನು ನೆಕ್ಕಿಬಿಡಲು ಹವಣಿಸಿತು.

ಸರಿ ‘ಗಾನವಿದ್ಯಾಗಜೇಂದ್ರಸಿಂಹ’ ಬಿರುದಾಂಕಿತನಾದ ಅಚ್ಯುತನು ಚೌಡಯ್ಯನೊಡನೆ ಸ್ಪರ್ಧೆಗೆ ನಿಂತನು. ಅಚ್ಯುತನ ಆಹ್ವಾನವನ್ನು ಚೌಡಯ್ಯ ಸ್ವೀಕರಿಸಿದ. ರಾಮದೇವ ಅರಸನ ಅರಮನೆಯ ಮುಂದೆ ಅಟ್ಟ (ನಾಟ್ಯರಂಗ) ಸಿದ್ದವಾಯಿತು. ಸಾವಿರಾರು ಜನರು ಈ ಸ್ಪರ್ಧೆಯನ್ನು ನೋಡಲು ನೆರೆದರು. ಇಂಥ ಸ್ಪರ್ಧೆ ಶತಮಾನಕ್ಕೊಮ್ಮೆ ನಡೆಯುವುದು.

ಅರಸನ ಸಮ್ಮುಖದಲ್ಲಿ ಸ್ಪರ್ಧೆ ಪ್ರಾರಂಭವಾಯಿತು. ಚೌಡಯ್ಯ, ಅಚ್ಯುತ ಇಬ್ಬರೂ ತುರುಸಿನಿಂದ, ಬಿರುಸಿನಿಂದ ಕುಣಿದರು; ಕುಣಿದೇ ಕುಣಿದರು. ಜಾತಿಗಾರ ವಿದ್ಯೆಯಲ್ಲಿ ‘ಹದಿನೆಂಟು ಜಾತಿಯ, ನೂರೊಂದು ಕುಲದ ವೇಷ’ವನ್ನು ತೊಟ್ಟು ಕುಣಿದರು.; ಭರತನಾಟ್ಯವಾಯಿತು; ಸಂಗೀತ ನಡೆಯಿತು. ಎಲ್ಲದರಲ್ಲಿಯೂ ಅಚ್ಯುತನಿಗೆ ಸೋಲಾಯಿತು. ಆತನ ಸೋಲಿಗೆ ಕಾರಣವಾದುದು ಅಹಂಕಾರ, ಅಚ್ಯುತನ ಕಲೆ ಖ್ಯಾತಿ, ಲಾಭಗಳ ದುರಾಸೆಯಿಂದ ಪೂರಿತವಾದುದು. ಹೀಗಿರುವಾಗ ಸೋಲು ಅದಕ್ಕೆ ಸಹಜವಾದುದು. ಚೌಡಯ್ಯನ ಕಲೆ ಕಾಯಕವಾಗಿತ್ತು, ಲಿಂಗಪೂಜೆಯಾಗಿತ್ತು. ಅದಕ್ಕೆ ಸೋಲೆಲ್ಲಿ? ಕಾಯಕವನ್ನು ಎಂದಾದರೂ ಪಣಕ್ಕೆ ಹೆಚ್ಚುವುದ? ಅಚ್ಯುತನ ಅಹಂಕಾರದ ಕೋಡು ಮರಿಯಲು ಚೌಡಯ್ಯ ಸ್ಪರ್ಧೆಗೆ ಒಪ್ಪಿದ, ಅಷ್ಟೆ. ತನ್ನ ಕಾಯಕವನ್ನು ಆತ ಪಣಕ್ಕೆ ಹಚ್ಚಲು ಎಂದೂ ಇಷ್ಟಪಟ್ಟಿರಲಿಲ್ಲ. ಅಲ್ಲದೆ, ಕಾಯಕಕ್ಕೆ ಸೋಲುಂಟೆ? ಕಾಯಕಕ್ಕಾಗಿ ಪಣವಿಲ್ಲ. ‘ದಿನಮಣಿಗೆ ಪಣವೆ ಈ ಹಗವ ಬೆಳಗುವುದಕ್ಕೆ.’

ಸೋಲುಂಡ ಅಚ್ಯುತ ರೊಚ್ಚಿಗೇಳಲಿಲ್ಲ; ಸೋತೆನೆಂದು ನೊಂದುಕೊಳ್ಳಲೂ ಇಲ್ಲ. ತನ್ನ ಸೋಲಿಗೆ ಕಾರಣವಾದುದನ್ನು ಆತ ಅರಿತುಕೊಂಡ. ಆತನಲ್ಲಿ ತಿಳಿವು ತೀಡಿತು. ‘ಜ್ಯೋತಿ ನೀ ಗುರು ಚೌಡಯ್ಯ’ ಎಂದು ಕೈಮುಗಿದಯ ಅಚ್ಯುತನ ಆತನ ಮೇಳದಲ್ಲಿ ಸೇರಿದನು.

ಚೌಡಯ್ಯ ಕೊಟ್ಟಗಿರಿಯಲ್ಲಿಯೇ ನೆಲಸಿದನು. ಆತನ ಬಹುರೂಪಗಳನ್ನು, ನಾಟ್ಯವನ್ನು ನೋಡಲು, ಸಂಗೀತವನ್ನು ಕೇಳಲು ದೂರದೂರದಿಂದ ಜನ ಬರತೊಡಗಿದರು. ಇಷ್ಟರಲ್ಲಿಯೇ ಮತ್ತೊಂದು ಸ್ಪರ್ಧೆಗೆ ಚೌಡಯ್ಯ ಅಣಿಯಾಗಬೇಕಾಯಿತು.

‘ಭತವಿದ್ಯಾಶರಭಭೇರುಂಡ’ ಎಂಬ ಬಿರುದುಳ್ಳ ಯಕ್ಷನಾಥನೆಂಬ ಇನ್ನೊಬ್ಬ ಕಲಾವಿದ ಚೌಡಯ್ಯನ ಹೆಸರು ಕೇಳಿ ಕೊಟ್ಟಗಿರಿಗೆ ಬಂದ; ಆತನೊಡನೆ ಸ್ಪರ್ಧೆಗೆ ನಿಂತ. ತನ್ನ ಜಯಪತ್ರವನ್ನು ಅರಸು ರಾಮದೇವನಿಗೆ ಕೊಟ್ಟು, ತಾನು ಸೋತರೆ ಮೂರು ದಿನ ಕಾಡಿನಲ್ಲಿ ಕತ್ತೆಗಳನ್ನು ಕಾಯುವೆನೆಂದು ಭಾಷೆಯಿತ್ತನು.

ಮತ್ತೊಮ್ಮೆ ಅರಸನ ಅರಮನೆಯಂಗಳದಲ್ಲಿ ನಾಡ ಜನ ಕೂಡಿದರು. ಯಕ್ಷನಾಥ, ಚವಡಯ್ಯ ಅಟ್ಟವನ್ನೇರಿದರು. ಕುಣಿತಕ್ಕೆ ಮೊದಲಾಯಿತು.

ಯಕ್ಷನಾಥ ಮೊದಲು ತನ್ನ ಭರತವಿದ್ಯೆಯನ್ನೆಲ್ಲ ಪ್ರದರ್ಶಿಸಿದನು. ಆ ಬಳಿಕ ಚೌಡಯ್ಯ ಕುಣಿತಕ್ಕೆ ನಿಂತನು. ಅಚ್ಯುತನಿಗಾದ ಅವಸ್ಥೆಯೇ ಯಕ್ಷನಾಥನಿಗಾಯಿತು,

ಶಿವಲೀಲೆ ಆಡುತಲಿ ಶಿವನ ತಾಂಡವ ಕುಣಿದ
ಶಿವನೆಂದು ಚೌಡ ಎದೆ ನಡುಗಿ ಜಕ್ಕಯ್ಯ
ಕವಳೇರಿ ಬಿದ್ದ ಭೂತಳಿದೆ
ಮದ್ದಲಿಯ ಸಪ್ಪುಳಕೆ ಬಿದ್ದ ಜಕ್ಕನು ಎದ್ದು
ಹುದ್ದೆ ಬೇಡೆಂದು ಎರಗಿದನು | ಚೌಡನಿಗೆ
ಉದ್ದರಿಸು ಗುರುವೆ ಸೇವಕನ
(ಹಂತಿಯ ಹಾಡು)

ಮಾತುಕೊಟ್ಟಂತೆ ಯಕ್ಷನಾಥ ಕತ್ತೆಗಳನ್ನು ಕಾದನು. ಅವನಿಗೂ ತಿಳಿವು ತೀಡಿತು. ಹರಕರುಣೆ ಸೋಲಿನ ರೂಪದಲ್ಲಿ ಬಂದಿತವನಿಗೆ, ಯಕ್ಷನಾಥ ಅಚ್ಯುತನಂತೆ ಚೌಡಯ್ಯನಿಗೆ ಆಳಾದ: ಆತನ ಮೇಳದಲ್ಲಿ ಸೇರಿದ: ಶಿವಮತಕ್ಕೆ ಕುಣಿದ.

ಚೌಡಯ್ಯನ ಹೆಸರು ಕೇಳಿ ನಾಡಿನ ಮೂಲೆ ನೂಲೆಗಳಿಂದ ಜಾತಿಗಾರ ತಂಡಗಳು ಬಂದು ಚೌಡಯ್ಯನ ಮೇಳದೊಂದಿಗೆ ಸೇರಿದುವು. ಕಾಡಸಿದ್ಧರು, ಸುಡುಗಾಡುಸಿದ್ಧರು, ಬುಡಬುಡಕಿಗಳು ನಾನಾ ರೀತಿಯವರು ಬಂದು ಚೌಡಯ್ಯನ ಮೇಳದಲ್ಲಿ ಕೂಡಿ ಕುಣಿದರು; ತಮ್ಮ ಅಂತಸ್ತನ್ನು ಹೆಚ್ಚಿಸಿಕೊಂಡರು.

ಗಣಪರ್ವ

ರಾಮಕ್ರಿಯಾ ರಾಗ ಚೌಡಯ್ಯನ ಪ್ರೀತಿಯ ರಾಗ. ಆತನ ಆತ್ಮದ ಧ್ವನಿಯೇ ಆ ರಾಗವಾಗಿ ಹೊಮ್ಮುತ್ತಿತ್ತು. ಲಿಂಗಪೂಜೆಯಲ್ಲಿ ರಾಮಕ್ರಿಯಾ ರಾಗ ಹಾಡಿ, ಸೀಮೆ ದಾಟಿ, ಸಮಾಧಿಸ್ಥಿತಿಯನ್ನು ಪಡೆಯುತ್ತಿದ್ದ ಚೌಡಯ್ಯ. ಲಿಂಗಪೂಜೆಯೆಂದರೆ ರಾಮಕ್ರಿಯಾರಾಗ, ರಾಮಕ್ರಿಯರಾಗವೆಂದರೆ ಲಿಂಗಪೂಜೆ – ಹೀಗೆ ಅವೆರಡನ್ನೂ ಬೇರೆಮಾಡಲು ಬರುತ್ತಿರಲಿಲ್ಲ. ಲಿಂಗಪೂಜೆಯ ಸಮಯವಲ್ಲದೆ ಬೇರೆ ಇನ್ನೆಲ್ಲಿಯೇ ಹಾಡಲಿ, ಶ್ರೋತೃಗಳು ‘ಶಿವನ’ ಆನಂದವನ್ನನುಭವಿಸುತ್ತಿದ್ದರು; ಚೌಡಯ್ಯ ಸಂಪೂರ್ಣ ಲಿಂಗಾನಂದವನ್ನನುಭವಿಸುತ್ತಿದ್ದ.

ತನಗೆ ಸರ್ವಸ್ವವೆನಿಸಿದ, ಲಿಂಗಪೂಜೆಯೆನಿಸಿದ ಈ ರಾಮಕ್ರಿಯೆ ರಾಗವನ್ನು ಅಗಲುವ ಹೊತ್ತು ಬಂದಿತು ಚೌಡಯ್ಯನಿಗೆ. ಆತ ಜಂಗಮಪ್ರೇಮಿ. ಆತನ ಕಾಯಕವೆಲ್ಲ ಜಂಗಮ ದಾಸೋಹಕ್ಕೆ. ಇದ್ದಕ್ಕಿದ್ದಂತೆ ಒಂದು ದಿನ ಆತನಿಗೆ ಸಾವಿರಾರು ಜಂಗಮರನ್ನು, ಭಕ್ತರನ್ನು ತಣಿಸುವ ದಾಸೋಹ ಹಬ್ಬ (ಗಣಪರ್ವ)ವನ್ನು ಆಚರಿಸಲು ಮನಸ್ಸಾಯಿತು. ಅದು ಶುದ್ಧ ಮನಸ್ಸು. ಅದರ ಬಯಕೆ ಈಡೇರಲೇಬೇಕು; ಗಣಪರ್ವ ನಡೆಯಲೇ ಬೇಕು. ಆದರೆ ಚೌಡಯ್ಯನಲ್ಲಿ ಒಂದು ಹಾಗವೂ ಇಲ್ಲ. ಹೇಗೆ ಇರಬೇಕು? ಆತ ಸತ್ಯಶುದ್ಧ ಕಾಯಕವಂತ, ನಿತ್ಯಾದಾಸೋಹಿ. ಅಸಂಗ್ರಹ ಕಾಯಕದ ಜೀವಜೀವಾಳ. ‘ಇಂದಿಗೆಂತು? ನಾಳಿಗೆಂತು? ಎಂಬ ಕಳವಳ, ಹೆದರಿಕೆಗಿಲ್ಲಿಲ್ಲ ಆಸ್ಪದ’ ‘ನೇಮದ ಕೂಲಿಯಂದಿನ ನಿತ್ಯನೇಮದಲ್ಲಿ ಸಂದಿರಬೇಕು’. ‘ಶರಣರು ನೇಮದ ಕೂಲಿಉ ಬಿಟ್ಟು ಹೇಮದಾಸೆಗೆ ಕಾಮಿಸಿ ದ್ರವ್ಯದ ಹಿಡಿವವರಲ್ಲ’. ಆದುದರಿಂದ ಚೌಡಯ್ಯನ ಮನೆ ಬರಿದು, ಆದರೆ ಮನ ಬರಿದೆ? ಹೃದಯ ಬರಿದೆ? ದ್ರವ್ಯದ ಬದತನವಿತ್ತು ಆತನಲ್ಲಿ. ಆದರೆ ಆತನಲ್ಲಿ ಭಕ್ತಿಗೆ ಬಡತನವಿತ್ತೆ? ಶ್ರದ್ಧೆಗೆ ಬಡತನವಿತ್ತೆ? ಕಾಯಕಕ್ಕೆ ಬಡತನವಿತ್ತೆ?

ಗಣಪರ್ವ ನೆರವೇರಬೇಕೆಂಬುದು ಚೌಡಯ್ಯನ ಸಿದಿಚ್ಚೆ; ಆ ಇಚ್ಚೆ ನಿರ್ಧಾರವಾಯಿತು. ಆತ ರಾಮರಸ ದೊರೆಯ ಹತ್ತಿರ ಹೋದ. ತನ್ನ ಗಣಪರ್ವಕ್ಕೆ ಹತ್ತುಸಾವಿರ ಹಣ ಸಾಲದ ರೂಪದಲ್ಲಿ ಕೊಡಲಿ ಅರಸನನ್ನು ಕೇಳಿದನು.

ಚೌಡಯ್ಯನ ಖ್ಯಾತಿ, ಕಲೆ, ಭಕ್ತಿ ಇವುಗಳನ್ನು ಅರಸ ಅರಿಯದವನಾಗಿರಲಿಲ್ಲ. ಆತನ ಬಗ್ಗೆ ಅರಸನಲ್ಲಿ ಅಪಾರ ಗೌರವವಿತ್ತು. ಆದರೆ ಹತ್ತುಸಾವಿರ ಹೊನ್ನು ಆತನಿಗೆ – ಕಡುಬಡವನಿಗೆ – ಸಾಲವಾಗಿ ಕೊಡಬಹುದೆ? ಅರಸನ ಮನಸ್ಸು ಹೊಯ್ದಾಡಿತು, ಅರಸನ ಅಂತರಂಗದ ಹೊಯ್ದಾಟವನ್ನು ಚೌಡಯ್ಯ ಅರಿತನು.

“ಅರಸೇ, ಮೂರು ವರ್ಷಗಳಲ್ಲಿ ನಿನ್ನ ಸಾಲ ತೀರಿಸುವೆ. ಇದಕ್ಕೆ ತಪ್ಪಿದರೆ ನಿನ್ನ ಈ ಋಣವನ್ನು ಇಮ್ಮಡಿಯಾಗಿ ತೀರಿಸುವೆನು.”

ಚೌಡಯ್ಯ ತನ್ನ ನಿರ್ಧಾರವನ್ನು ತಿಳಿಸಿದ.

ಅರಸನು ಹಣ ಕೊಡಲು ಒಪ್ಪಿದನು. ಆದರೆ ಹೇಗೆ?

“ಇರಿಸುವುದಕ್ಕೆ ಈಡು ಏನುಂಟು?” ಅರಸ ಕೇಳಿದ.

“ನಾನು ಶರಣರ ಮಾರ್ಗದವನು. ಸಂಗ್ರಹ ನಾನರಿಯೆನು. ಹೀಗಿರಲು ನನ್ನಲ್ಲಿ ಏನಿದೆ ಈಡು ಇಡಲು? ಆದರೆ ಒಂದು ಸೊತ್ತು ಮಾತ್ರ ಇದೆ. ಅದು ಬೆಳ್ಳಿಯಲ್ಲ, ಬಂಗಾರವಲ್ಲ. ನೀವು ಒಪ್ಪಿದರೆ ಅದನ್ನೇ ಒತ್ತೆ ಇಡುವೆ” ಎಂದ ಚೌಡಯ್ಯ.

“ಯಾವುದು ಆ ಸೊತ್ತು”?

“ರಾಮಕ್ರಿಯೆ ರಾಗ. ನನ್ನಂತೆ ಇದನ್ನು ಯಾರೂ ಹಾಡರು. ಇದಿಲ್ಲದೆ ಲಿಂಗಪೂಜೆ ನಡೆಯದು. ಆದರೆ ಜಂಗಮಪ್ರೇಮಿಯಾದ ನಾನು ಗಣಪರ್ವಕ್ಕಾಗಿ ಈ ರಾಗವನ್ನು ಒತ್ತೆ ಇಡುವೆ”

ಚೌಡಯ್ಯ ನುಡಿದನು.

ಅರಸನಿಗೆ ಇದು ಮೋಜೆನಿಸಿತು. ರಾಗವನ್ನು ಒತ್ತೆ ಇಟ್ಟುಕೊಳ್ಳುವರೆ? ಅದರಿಂದೇನು ಪ್ರಯೋಜನ? ಈ ಭಕ್ತ ಅದಿಲ್ಲದೆ ಲಿಂಗಪೂಜೆ ನಡೆಯುವುದಿಲ್ಲವೆನ್ನುತ್ತಾನೆ. ಆ ರಾಗವನ್ನು ಕೇಳಿಯಾದರೂ ನೋಡೋಣ, ಎಂದು ಯೋಚಿಸಿ,

“ಹಾಗಾದರೆ ಆ ರಾಗವನ್ನು ಹಾಡು ಚೌಡಯ್ಯ. ಅದನ್ನು ಕೇಳಿ ಸಾಲದ ಬಗ್ಗೆ ವಿಚಾರಿಸುವೆ” ಎಂದನು ರಾಮದೇವರಸ.

ಚೌಡಯ್ಯ ರಾಮಕ್ರಿಯೆರಾಗವನ್ನು ಹಾಡಿದನು. ಅರಸನು ಎಂದೂ ಅನುಭವಿಸದ ಆನಂದವನ್ನು ಆ ರಾಗವನ್ನು ಕೇಳಿ ಅನುಭವಿಸಿದನು.

ಕೇಳುತಲಿ ಅರಸನಿಗೆ ತೋಳುಗಳ ಬಲತುಂಬಿ
ತಾಳಿ ಸಪ್ತೇಳು ಸಾಗರದ ಬುಡವನ್ನು
ಏಳ್ಹೆಡೆಯ ಸರ್ಪ ಹೊತ್ತಂತೆ
(ಹಂತಿಯ ಹಾಡು)

ಇಂಥ ಅದ್ಭುತ ಚೇತನವನ್ನು ಆ ಹಾಡಿನಿಂದ ಪಡೆದ ರಾಮರಸ ಚೌಡಯ್ಯನಿಗೆ ಹತ್ತುಸಾವಿರ ಹೊನ್ನು ಕೊಟ್ಟನು; ರಾಮಕ್ರಿಯಾರಾಗವನ್ನು ಒತ್ತೆಯಿಟ್ಟುಕೊಂಡನು.

ಲಿಂಗಾರಾಧನೆಗಿಂತಲೂ ಜಂಗಮಾರಾಧನೆ ಹಿರಿದು. ವೀರಶೈವ ಈ ತತ್ವವನ್ನು ಚೌಡಯ್ಯ ನಡೆದು ತೋರಿಸಿದ. ಆ ರಾಗವಿಲ್ಲದೆ ಲಿಂಗಪೂಜೆ ನಡೆಯುತ್ತಿದ್ದಿಲ್ಲ. ಅದನ್ನೇ ಜಣಗಮಾರಾಧಾನೆಗಾಗಿ ಒತ್ತೆಯಿಟ್ಟ ಚೌಡಯ್ಯ. ಅಂದಿನಿಂದ ರಾಮಕ್ರಿಯಾರಾಗವನ್ನು ಆತ ಕನಸುಮನಸಿನ್ಲಿಯೂ ನೆನೆಯಲಿಲ್ಲ.

ಗಣಪರ್ವ ವಿಜೃಂಭಣೆಯಿಂದ ನಡೆಯಿತು. ಅಗಣಿತ ಜಂಗಮರು, ಭಕ್ತರು ಚೌಡಯ್ಯನ ಆರೋಗಣೆಯಿಂದ, ಕಲಾದಾಸೋಹದಿಂದ ತಣಿದರು.

ಹೊಸ ದೃಷ್ಟಿಹೊಸ ಸೃಷ್ಟಿ

ದಿನಗಳುರುಳಿದವು. ಚೌಡಯ್ಯನ ಮೇಳ ತನ್ನ ಪ್ರದರ್ಶನಗಳನ್ನು ನಡೆಸಿಯೇ ಇತ್ತು. ಆದರೆ ಅರಸನಲ್ಲಿ ಪತ್ತೆಬಿದ್ದ ರಾಗವನ್ನು ಬಿಡಿಸಿಕೊಂಡು ಬರುವಷ್ಟಯ ಹಣ ದೊರಕಲಿಲ್ಲ.

ಬಸವಾದಿ ಪ್ರಮಥರ ತತ್ವಪ್ರಸಾರಕ್ಕೆ, ಜನಜೀವನ ತಿದ್ದಿ ಹಸನುಗೈವುದಕ್ಕೆ ಕಲ್ಯಾಣದಿಂದ ಜಂಗಮರು, ಶರಣರು ಭಾರತದ ತುಂಬ ಸಂಚಾರ ಕೈಗೊಂಡಿದ್ದರು. ಅಂಥವರಲ್ಲಿ ನಾಗಿನಾಥಾಚಾರ್ಯನೂ ಒಬ್ಬ.

ನಾಗಿನಾಥ ಕೋಟಿಗಿರಿಗೆ ಬಂದ; ಚೌಡಯ್ಯನ ಅತಿಥಿಯಾದ. ರಾಮಕ್ರಿಯಾರಾಗದ ಖ್ಯಾತಿ ನಾಗಿನಾಥನಿಗೆ ಮುಟ್ಟಿತ್ತು. ಅದನ್ನು ಕೇಳುವ ಆಸೆಯಿಂದಲೇ ಆತ ಕೋಟಿಗಿರಿಗೆ ಬಂದಿದ್ದ. ಚೌಡಯ್ಯನಿಗೆ ಆತ ತನ್ನ ಇಚ್ಛಯನ್ನರುಹಿದ.

ರಾಮಕ್ರಿಯಾ ರಾಗ ಒತ್ತೆಬಿದ್ದ ಸಂಗತಿ ನಾಗಿನಾಥನಿಗೆ ತಿಳಿಯಿತು. ಆತ ನಿರಾಶನಾಗಲಿಲ್ಲ. ಅದನ್ನು ಕೇಳಿಯೇ ಹೋಗಲು ನಿರ್ಧರಿಸಿದ.

ನಾಗೆನಾಥಾಚಾರ್ಯ ಚೌಡಯ್ಯನಿಗೆ ಬಸವಾದಿ ಪ್ರಮಥರ ವಿನೂತನ ತತ್ವಗಳನ್ನು ತಿಳುಹಿದ; ಕಾಯಕದ ಗುಟ್ಟನ್ನು ತೋರಿದ. ಅಂತರಂಗ – ಬಹಿರಂಗ ಜೀವನದ ಸಮನ್ವಯವನ್ನು ಸಾಧಿಸುವ ಮಾರ್ಗವನ್ನರುಹಿದ. ಬಹಿರಂಗ ಕ್ರಿಯೆಯಲ್ಲಿ ಹೆಚ್ಚು ಮಗ್ನನಾದ. ಚೌಡಯ್ಯ, ‘ಮಾಡುವ ಮಾಟದಿಂದಲೇ ಬೇರೊಂದು ಪರಿಯನ್ನು ಅರಿಯಬೇಕು.’ ಮಾಡುವಂತಿರಬೇಕು; ಮಾಡದಂತಿರಬೇಕು; ಮಾಡುವ ಮಾಟದಲ್ಲಿ ತಾನಿಲ್ಲದಂತಿರಬೇಕು’ ಎಂಬುದನ್ನು ಆತ್ಮಗತ ಮಾಡಿಕೊಂಡನು. ನಾಗಿನಾಥಾಚಾರ್ಯ ಚೌಡಯ್ಯನ ಮೋಕ್ಷಗುರುವಾದನು.

ಚೌಡಯ್ಯ ಹತ್ತುಸಾವಿರ ಹೊನ್ನಿನ ಸಾಲ ತೀರಿಸಲು ವಿವಿಧ ರೂಪಗಳನ್ನು ಧರಿಸಿ ನಾಟ್ಯವಾಡಿದನು. ಆತನ ಮೇಳದವರುರಾಮಾಯಣ ಮಹಾಭಾರತ ಕಥೆಗಳನ್ನು ಆಡಿ ತೋರಿಸಿದರು. ಆದರೆ ಚೌಡಯ್ಯನ ಸಾಲ ತಿರಿಸುವಷ್ಟು ಹಣ ಅವರಿಗೆ ದೊರಕಲಿಲ್ಲ.

ನಾಗಿನಾಥಾಚಾರ್ಯ ಇದನ್ನು ಸೂಕ್ಷ್ಮದೃಷ್ಟಿಯಿಂದ ನೋಡಿದನು. ರಾಮಾಯಣ ಮಹಾಭಾರತದ ಕಥೆಗಳು ಜನರಿಗೆ ಹಿಡಿಸುತ್ತಿಲ್ಲವೆಂಬುದನ್ನು ಆತ ಅರಿತ. ಜನಕ್ಕೆ ಹೊಸತನ ಬೇಕಾಗಿತ್ತು. ನಾಗಿನಾಥ ಶರಣರ ಚರಿತ್ರೆಗಳನ್ನು ಅಭಿನಯಿಸಲು ಚೌಡಯ್ಯನಿಗೆ ತಿಳಿಸಿದನು. ಅನೇಕ ಶರಣರ ಚರಿತ್ರೆಗಳನ್ನು ಒದಗಿಸಿಕೊಟ್ಟನು. ಚೌಡಯ್ಯ ಈ ಚರಿತ್ರೆಗಳನ್ನು ಹೊಸ ಅಂದದಿಂದ ನಾಟಕಕ್ಕೆ, ನಾಟ್ಯಕ್ಕೆ ಅಳವಡಿಸಿದನು; ಹೊಸ ಮೆರುಗಿನಿಂದ ಸೋಗುಗಳು ಸಿದ್ಧವಾದುವು.

ಬಡಿಹೋರಿ ಬೊಮ್ಮಯ್ಯ, ಕೋಳೂರು ಕೊಡಗೂಸು, ಕಾರಿಕಾಲಮ್ಮೆ, ಅಮ್ಮವ್ವೆ, ಮಾದಾರ ಚೆನ್ನಯ್ಯ, ದೇವರದಾಸಿಮಯ್ಯ, ಭೋಗಣ್ಣ, ಶಂಕರ ದಾಸಯ್ಯ, ಸೌಂದನಂಬಿ, ತಿರುನೀಲಕಂಠ, ಪಿಟ್ಟವ್ವೆ ಮುಂತಾದವರ ಚರಿತ್ರೆಗಳನ್ನು ಚೌಡಯ್ಯನ ಮೇಳದವರು ಆಡಿ ತೋರಿಸಿದರು. ಆಗ ಏನಾಯ್ತು?

ಚೌಡಯ್ಯ ರೂಪಗಳ ಆಡಿ ಕುಣಿಯಲು ಲೋಕ
ನೋಡಿ ಶಿವಮತದ ಬೆಳೆ ಬಂತು | ಜಗವೆಲ್ಲ
ನೀಡಿ ಕಾಯಕಕೆ ಹಣಗೂಡಿ
ಸಾಲ ಹರಿದನು ಚೌಡ ಕಾಲದಲಿ ಅರಸನಲಿ
ಮೇಲು ರಾಗೆಂದು ಕಾಯದವ | ಹಾಡಿದನು
ಕೇಳಿ ಶಿವಲೋಕ ಬೆರಗಾಯ್ತು
(ಹಂತಿಯ ಹಾಡು)

ಹಣ ಕೂಡಿತು. ಸಾಲ ಹರಿಯಿತು. ಅಷ್ಟೇ ಅಲ್ಲ, ಶರಣಚರಿತ್ರೆಗಳ ಅಭಿನಯದಿಂದ ‘ಶಿವಮತದ ಬೆಳೆ ಬಂತು’. ರಾಮಕ್ರಿಯಾರಾಗ ಮರಳಿ ಕೈಗೆ ಬಂತು. ಮೋಕ್ಷಗುರು ನಾಗಿನಾಥಾಚಾರ್ಯನಿಗೆ ಚೌಡಯ್ಯ ಮನದಣೆಯೆ ಆ ರಾಗವನ್ನು ಹಾಡಿ ತೋರಿಸಿದ.

ಕಲ್ಯಾಣದಲ್ಲಿ ಬಯಲು

ನಾಗಿನಾಥಾಚಾರ್ಯನಿಂದ ಚೌಡಯ್ಯ ಬಸವಾದಿ ಶರಣರ ವಿಷಯ ಕೇಳಿದ್ದ; ಅನುಭವಮಂಟಪದ ವೈಭವ ಅರಿತಿದ್ದ. ಆತನಿಗೀಗ ಕಲ್ಯಾಣವನ್ನು ಕಾಣುವ ಹಂಬಲವಾಯಿತು. ತನ್ನ ಮೇಳದವರೊಂದಿಗೆ ನಾಗಿನಾಥಾಚಾರ್ಯನ ಮಾರ್ಗದರ್ಶನದಲ್ಲಿ ಆತ ಕೋಟಿಗಿರಿಯನ್ನು ಬಿಟ್ಟು ಕಲ್ಯಾಣಕ್ಕೆ ನಡೆದ.

ಕಲ್ಯಾಣದಲ್ಲಿ ನೆಲೆನಿಂತು ಚೌಡಯ್ಯಪುರಾತನ ಮತ್ತು ನೂತನ ಶರಣರ ಚರಿತ್ರೆಗಳನ್ನು ಅಭಿನಯಿಸತೊಡಗಿದ. ಶರಣರು ಆತನ ಜಾತಿಗಾರ ಕಲೆಯನ್ನು ಕಂಡು ಗೌರವಿಸಿದರು; ಪ್ರೋತ್ಸಾಯಿಸಿದರು. ಕಲ್ಯಾಣದ ರಸಿಕರಿಗೆ, ಕಲಾಭಿಮಾಣಿಗಳಿಗೆ ಚೌಡಯ್ಯ ಅಚ್ಚುಮೆಚ್ಚಿನವನಾದ.

ಕೊನೆಯುಸಿರಿನವರೆಗೂ ಚೌಡಯ್ಯ ಕಲ್ಯಾಣದಲ್ಲಿಯೇ ಉಳಿದು ಬಹುರೂಪಗಳನ್ನಾಡಿ, ಕೊನೆಗೆ ಕಲ್ಯಾಣದ ಬಯಲಿನಲ್ಲಿ ಬಯಲಾದನು.

ಅಲ್ಲಮನೆ ಮೊದಲಾಗಿ ಕಲ್ಲೆದೆಯ ಮಡಿವಾಳ
ಚೆಲ್ಲಿ ಶಿವಬೆಳಕ ಚೌಡಯ್ಯ ಲಿಂಗದೊಳು
ಸಲ್ಲಿಸುತ ಸೇವೆ ಬಯಲಾದ.
(ಹಂತಿಯ ಹಾಡು)

ವಚನವ್ಯಕ್ತಿತ್ವ

ಬಹುರೂಪಿ ಚೌಡಯ್ಯ ವಚನಗಳನ್ನು ರಚಿಸಿದ್ದಾನೆ. ಆತನ ವಚನಗಳು ತತ್ವದ ದೃಷ್ಟಿಯಿಂದ, ಸಾಹಿತ್ಯದ ದೃಷ್ಟಿಯಿಂದ ಮೇಲ್ಮಟ್ಟದವುಗಳಾಗಿವೆ. ಸರಳವಾದ ಆದರೂ ಸತ್ವಪೂರ್ಣವಾದ ಭಾಷೆ; ಅರ್ಥಪೂರ್ಣ ಉದಾಹರಣೆಗಳು; ಸುಂದರ ಉಪಮಾನಗಳು, ರೂಪಕಗಳು ಇವು ಆತನ ವಚನಗಳ ವೈಶಿಷ್ಟ್ಯಗಳು. ಶೈಲಿ ಸಹಜ, ನಿರಾಡಂಬರ. ಈ ರೂಪಕ ಎಷ್ಟು ಸೊಗಸಾಗಿದೆ;

ಅನುದಿನಂಗಳೆಂಬವು ಪಣಿತೆಯಾಗಿ,
ವರುಷವೆಂಬವು ಬತ್ತಿಯಾಗಿ,
ಜೀವ ಜ್ಯೋತಿಯಾಗಿ,
ಬೆಳಗಿನ ಬೆಳಗು, ಬೆಳಗ ಬೆಳಗಿನಲರಿಯಬೇಕು,
ಬೆಳಗುಳ್ಳಲ್ಲಿ ಆತರ ನಡೆಸಿದಂತೆ ನಡೆಯಬೇಕು
ಬೆಳಗುಳ್ಳಲ್ಲಿ ಆತ ನುಡಿಸಿದಂತೆ ನುಡಿಯಬೇಕು
ಎಣ್ಣೆಯೆಂಬೀ ಜೀವನ ಸವೆಯದ ಮುನ್ನ
ಬೆಳಗು ಕತ್ತಲೆಯಾಗದ ಮುನ್ನ
ರೇಕಣ್ಣಪ್ರಿಯ ನಾಗಿನಾಥನ ಬೆಳಗ ಬೆಳಿಗಿನಲರಿಯಬೇಕು.

‘ಬೆಳಗು ಕತ್ತಲೆಯಾಗದ ಮುನ್ನ’ ಎಂಬ ಮಾತಿನಲ್ಲಿರುವ ಅರ್ಥಸೌಂದರ್ಯ, ಅನುಭಾವದ ಸೊಗಸು ಅನುಭವಿಸಿದಷ್ಟೂ ಹಿತ.

ಗುರುವ ಮೆರೆದು ಲಿಂಗವನೊಲಿಸುವುದು ಅಸಾಧ್ಯ, ತತ್ವಕ್ಕೆ ವಿರುದ್ಧ ಎಂಬುದನ್ನು ತಿಳಿಸಲು ಉಪಮಾನಗಳ ಸುರುಳಿಯನ್ನೇ ಬಿಚ್ಚುತ್ತಾನೆ ಚೌಡಯ್ಯ. ಇವು ಜೀವಂತ ಉಪಮೆಗಳು; ಅನುಭವ, ಅನುಭಾವದ ಚಿಲುಮೆಯಿಂದ ಚಿಮ್ಮಿ ಬಂದವು:

ಕೈಮರೆದು ಕಾದುವ ಅಂಕವಿದೇನೋ?
ಭಾವವ ಮರೆದು ನೋಡುವ ನೋಟವಿದೇನೋ?
ಭಯವ ಮರೆದು ಮಾಡುವ ಭಕ್ತಿಯಿದೇನೋ?
ಏಕಾಂತದ ಸುಖವು ಲೋಕಾಂತವಿದೇನೋ?
ರೇಕಣ್ಣಪ್ರಿಯ ನಾಗಿನಾಥನಲ್ಲಿ
ಗುರುವ ಮರೆದು ಲಿಂಗವನೊಲಿಸಿಹೆನೆಂದೊಡೆ
ಗುರುವೂ ಲಿಂಗವೂ ಎರಡೂ ಇಲ್ಲ.

ಶರಣರು ತಮ್ಮ ಕಾಯಕಗಳನ್ನು ರೂಪಕ ಮಾಡಿ ತತ್ವಗಳನ್ನೂ ತಮ್ಮ ತಮ್ಮ ಸಂದೇಶವನ್ನೂ ಸಾರಿದ್ದಾರೆ. ಬಹುರೂಪಿ ಚೌಡಯ್ಯ ಇದಕ್ಕೆ ಹೊರತಾಗಿಲ್ಲ. ಕೆಳಗಿನ ವಚನಗಳಲ್ಲಿ ಬಹುರೂಪಿ ಚೌಡಯ್ಯ ಕಾಯಕವನ್ನು ಮತ್ತು ತತ್ವವನ್ನು ಸಮಾವೇಶಗೊಳಿಸಿದ್ದಾನೆ:

ಚಿತ್ತಾವಧಾನವೆಂದು ಆಡ ಬಂದೆ ಸತ್ಯಶರಣರ ಮುಂದೆ
ಶುಕ್ಲ ಶೋಣಿತವೆಂಬ ಬಾಯಕಟ್ಟೆಯ ಮೆಟ್ಟಿ
ತುಟ್ಟತುದಿಯನೇರಿ, ಕೈಯ ಬಿಟ್ಟಾಡುತ್ತಿದ್ದೇನೆ
ಮೆಟ್ಟಿದ ಹೆಜ್ಜೆಯ ಮೆಟ್ಟದೆ ನೋಡು
ನಿಷ್ಠೆವಂತರ ದೃಷ್ಟಿಪಲ್ಲಟವಾಗದೆ, ನೋಡವಿರ್ದಡೆ
ಲಾಗು ಎತ್ತಹೋಯಿತ್ತು
ರೇಕಣ್ಣಪ್ರಿಯ ನಾಗಿನಾಥಾ

ಹೆಸರಿಲ್ಲದ ಜನನಿಕೆಯ ಮರೆಯಲ್ಲಿ ಬಂದು
ಅಸುವಿನ ಬಹುರೂಪಮಂ ತೊಟ್ಟು
ಪಶುಪತಿಯ ಅವತಾರವನಾಡುತ್ತಿರಲಾಗಿ
ಹಸುಬೆಯ ತೆರೆಯ ಹರಿದು
ಅಸು ದೆಸಿಯಲ್ಲಿ ಇಲ್ಲಾ ಎಂದೆ
ರೇಕಣ್ಣಪ್ರಿಯ ನಾಗಿನಾಥನಲ್ಲಿ
ಪೊರೆಪೊರೆ ಎನುತಿರ್ದೆನು

‘ಬಹುರೂಪಿ’ ಎಂದರೆ ನಟ ಮತ್ತು ಡೊಂಬ ಎಂದು ಅರ್ಥ. ಚೌಡಯ್ಯ ನಟನೂ ಡೊಂಬನೂ ಆಗಿದ್ದನೆನಲು ಆತನ ವಚನಗಳಲ್ಲಿ ಸಾಕಷ್ಟು ಆಧಾರಗಳು ದೊರಕುತ್ತವೆ.

ಬಹುರೂಪಿ ಚೌಡಯ್ಯ ಬಸವಣ್ಣನವರನ್ನು ಹೃದಯದುಂಬಿ ಸುತ್ತಿಸಿದ್ದಾನೆ, ಈ ಕೆಳಗಿನ ವಚನದಲ್ಲಿ ಬಸವಣ್ಣನ ವ್ಯಕ್ತಿತ್ವವನ್ನು ಚಿತ್ರಿಸಿದ್ದಾನೆ:

ಕಾಮನ ಮಂದಿರದಡವಿಯಲ್ಲಿ
ಶುಕ್ಲ ಶೋಣಿತವೆಂಬ ಮಡಕೆಯನೆ ಮಾಡಿ
ಮೂತ್ರ ಶ್ಲೇಪ್ಮ ಅಮೇಧ್ಯವೆಂಬ
ಪಾಕದ್ರವ್ಯವನಾ ಮಡಕೆಯಲ್ಲಿ ನಿಶ್ಚೈಸಿ
ಮಡಕೆಯನೊಡೆದಾತ ಬಸವಣ್ಣ.
ರೇಕಣ್ಣ ಪ್ರಿಯ ನಾಗಿನಾಥಾ
ಬಸವಣ್ಣನಿಂದ ಬದುಕಿದೆನು

ಚೌಡಯ್ಯ ದೀಕ್ಷೆಯ ಗುರು ಮತ್ತು ಮೋಕ್ಷದ ಗುರು ಇಬ್ಬರನ್ನೂ ಮರೆಯಲಿಲ್ಲ. ತನ್ನ ವಚನಗಳ ಅಂಕಿತದಲ್ಲಿ ಇಬ್ಬರನ್ನೂ ನೆನಸಿದ್ದಾನೆ – ರೇಕಣ್ಣ ಪ್ರಿಯ ನಾಗಿನಾಥ ಎಂದು. ದೀಕ್ಷೆಯ ಗುರು ರೇಕನಾಥಾಚಾರ್ಯ ವೀರಶೈವವನ್ನು ತೋರಿಸಿದ; ಮೋಕ್ಷದ ಗುರು ನಾಗಿನಾಥಾಚಾರ್ಯ ವೀರಶೈವವನ್ನೇ ಬದುಕಲು ಕಲಿಸಿದ.

ಈ ಜೀವನವೊಂದು ನಾಟ್ಯರಂಗ. ನಾವೆಲ್ಲ ಅರಿತೋ, ಅರಿಯದೆಯೋ ಒತ್ತಾಯಕ್ಕೊ, ಒಲುಮೆಗೋ ಒಳಗಾಗಿ ಬಹುರೂಪಗಳನ್ನಾಡುತ್ತೇವೆ; ಆಡಲೇಬೇಕಾಗುತ್ತದೆ. ಈ ಜೀವನದಲ್ಲಿ ಬಹುರೂಪಗಳನ್ನಾಡಲು ಬಹುರೂಪಿ ಚೌಡಯ್ಯನು ನಮಗೆ ಕೊಟ್ಟ ಸಂದೇಶವೇನು? ಅದು ಇಂತಿದೆ:

ಮೆಟ್ಟಿದ ಹೆಜ್ಜೆಯ ಮೆಟ್ಟದೆ ಆಡಬೇಕು
ಐವರು ಕಟ್ಟಿದ ಕಟ್ಟಳೆಯ ಮೀರಿ ನಾನಾಡುವೆ ಬಹುರೂಪವ

ಷಡುಚಕ್ರವಳಯದಲ್ಲಿ ನಾನಾಡುವೆ ಬಹುರೂಪ
ಉರಿಯುಂಡ ಕರ್ಪುರದಂತೆ ನಾನಾಡುವೆ ಬಹುರೂಪ

ಎಂಬತ್ತುನಾಲ್ಕು ಲಕ್ಷ ಬಹುರೂಪ
ಚಂದಚಂದದಲ್ಲಿ ಅಡಿ ಬಂಧುಗಳ ಮೆಚ್ಚಿಸ ಬಂದೆ
ಅವರು ಬಹುರೂಪದಂದವನರಿಯರು
ರೇಕಣ್ಣ ಪ್ರಿಯ ನಾಗಿನಾಥನಲ್ಲಿ
ಬಹುರೂಪದಂದ ವಿಚ್ಛಂದವಾಯಿತ್ತು.

ರಾಚಯ್ಯನ ಮಗ ಸಾವಳಿಗೇಶ ಶರಣರನ್ನು ಕುರಿತು ಹಂತಿಯ ಹಾಡುಗಳನ್ನು ರಚಿಸಿದ್ದಾನೆ. ಆ ಹಾಡುಗಳು ಅರ್ಥಗರ್ಭಿತವಾಗಿದ್ದು ಶ್ರೇಷ್ಠ ಕಾವ್ಯಾಂಶಗಳಿಂದ ಕೂಡಿವೆ. ಈ ಕವಿ ಚೌಡಯ್ಯನನ್ನು ಕುರಿತು ಹೇಳುವ ಈ ಘಟನೆಯಲ್ಲಿ ಚೌಡಯ್ಯನ ಘನತೆ, ಶರಣರು ಈ ಲೋಕವನ್ನು ಎಷ್ಟು ಅಂದದಿಂದ ಕಾಯಕಗೈದು ತಿದ್ದಿದರು ಮತ್ತು ಕಾಯಕದ ನಿಜವಾದ ಅರ್ಥ ಇವೆಲ್ಲ ಧ್ವನಿತವಾಗಿವೆ.

ಚೌಡಯ್ಯನ ಭಕ್ತಿಗೆ ಮೆಚ್ಚಿ ಶಿವನು ತನ್ನ ರೂಪುದೋರಿ ಆತನನ್ನು ಕೈಲಾಸಕ್ಕೆ ಕರೆಯುತ್ತಾನೆ. ಆಗ ಚೌಡಯ್ಯ ಕೊಟ್ಟ ಉತ್ತರ ಇದು:

ಬೇಡೆನಗೆ ಕೈಲಾಸ ನೀಡೆನಗೆ ಶಿವಭಕ್ತಿ
ಮಾಡುವೆನು ಸೇವೆ ಶಿವಮತಕೆ ಶರಣರಿಗೆ
ನಾಡ ಕಾಯಕವೆ ಕೈಲಾಸ

ರಾಷ್ಟ್ರ ಕಟ್ಟುವ ಕೆಲಸವೇ ಶರಣರಿಗೆ ಕೈಲಾಸ. ಈ ಮಾತಿನ ಅರ್ಥ ಇಂದಿನ ಜನಜೀವನದಲ್ಲಿ ಇಳಿದುಬರಬೇಕು.

ಡೊಂಬರಾಟವನ್ನು, ಜಾತಿಗಾರ ಕಲೆಯನ್ನು ಕಾಯಕರೂಪದಿಂದ ಶಿವಪೂಜೆಯ ಮಟ್ಟಕ್ಕೇರಿಸಿ ಅವುಗಳ ದ್ವಾರ ‘ಸಕಲ ಜೀವಾತ್ಮರಿಗೆ ಲೇಸನೇ ಬಯಸುವ’ ಶರಣರ ತತ್ವಗಳನ್ನು ಜನರ ಬಾಳಿನಲ್ಲಿ ಬಿತ್ತಿ ಲೋಕಪೂಜ್ಯನೆನಿಸಿದನು ಬಹುರೂಪಿ ಚೌಡಯ್ಯ. ರಾಗವನ್ನು ಯೋಗವನ್ನಾಗಿಸಿದ ಮಹಾತ್ಮ ಆತ. ಜನಪದ ಕಲೆಗಳು ಚೌಡಯ್ಯನಿಂದ ಬೆಳೆದು, ಬದುಕಿ ಬಾಳಿದುವು; ಆತನಿಂದ ಅವುಗಳಿಗೆ ಕಲೆಯಲೋಕದಲ್ಲಿ ವಿಶಿಷ್ಟಸ್ಥಾನ ದೊರಕಿತು.

‘ಶಿವಪಾರಿಜಾತ’ ಮತ್ತು ರಾಮಕ್ರಿಯಾರಾಗ, ಕಲೆಯ ಲೋಕಕ್ಕೆ ಚೌಡಯ್ಯನ ಕೊಡುಗೆಗಳು. ಇನ್ನು ಯಾವ ಯಾವ ಕೊಡುಗೆಗಳು ಆತನಿಂದ ಕಲೆಯಲೋಕಕ್ಕೆ ಸಂದುವೋ? ಈ ನಿಟ್ಟಿನಲ್ಲಿ ಸಂಶೋಧನೆ ನಡೆಯಬೇಕು.

ಸಹಾಯಕ ಸಾಹಿತ್ಯ

೧. ಶೂನ್ಯ ಸಂಪಾದನೆ – (ಸಂ) ಸಂ.ಶಿ. ಭೂಸನೂರು ಮಠ

೨. ಕನ್ನಡ ಜಾನಪದ ಗೀತೆಗಳು – ಡಾ|| ಗದ್ದಿಗೆ ಮಠ

೩. ಅನುಭವ ಮಂಟಪ(ಇಂಗ್ಲಿಷ್) – ಚ. ಉತ್ತಂಗಿ

೪. ಶಿವದಾಸ ಗೀತಾಂಜಲಿ – ಸಂ. ಎಲ್.ಬಸವರಾಜು

೫. ಶರಣಚರಿತಾಮೃತ – ಸಿದ್ದಯ್ಯ ಮುರಾಣಿಕ

೬. ೨೨೦ಅಮರಗಣಾಧೀಶ್ವರರ ಚರಿತ್ರೆಗಳು – ಪಿ.ಜಿ. ಹಳಕಟ್ಟಿ

೭. ಕರ್ನಾಟಕ ಕವಿಚರಿತ್ರೆ, ಭಾಗ – ೧. – ರಾವ್‌ಬಹುದ್ದೂರ್‌ ನರಸಿಂಹಚಾರ್

೮. ಬಸವಣ್ಣನವರ ಷಟ್ಸ್ಥಳದ ವಚನಗಳು – ಸಂ. ಎಸ್.ಎಸ್. ಬಸವನಾಳ

೯. ಬೆಳಗಿನ ವಚನಗಳು – ಸಂ. ಎಂ. ಜೀವನ

೧೦. ಉಡುತಡಿಯ ಮಹಾದೇವಿಯಕ್ಕನವರ ಸಾಹಿತ್ಯ – ಸಂ. ಬಿ.ಸಿ. ಜವಳಿ ಮತ್ತು ಮಲ್ಲಾಬಾದಿ ವೀರಭದ್ರಪ್ಪ.

೧೧. ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ – ಸಂ. ಆರ್.ಸಿ. ಹಿರೇಮಠ ಮತ್ತು ಡಾ|| ಎಮ್.ಎಸ್. ಸುಂಕಾಪುರ

೧೨. ಬಸವಸ್ತೋತ್ರದ ವಚನ ಮತ್ತು ಬಸವ ಸ್ತುತಿ, ಪ್ರಶಸ್ತಿ – ಸಂ. ಡಾ|| ಎಸ್.ಎಮ್. ಹುಣಸ್ಸಾಳ್ ಮತ್ತು ಸಿ.ಎಚ್. ಅನ್ನದಾನಯ್ಯ

೧೩. ಸರ್ವಪುರಾತನ ವಚನಗಳು (ತಾಳವೋಲೆ ಕಟ್ಟು) – ಬಸವತೀರ್ಥದ ಶ್ರೀವೈರಾಗ್ಯನಿಧಿ ಚನ್ನೇಬಸವಸ್ವಾಮಿಗಳವರ ಕೃಪೆಯಿಂದ ದೊರಕಿದುದು