ಹನ್ನೆರಡನೆಯ ಶತಮಾನದಲ್ಲಿ ಕನ್ನಡನಾಡಿನಲ್ಲಿ ಶಿವಶರಣರು ಮಾಡಿ ಕ್ರಾಂತಿ ಸಮಗ್ರ ಮಾನವಕೋಟಿಗೆ ಕಲ್ಯಾಣವನ್ನು ಬರಿಸುವಂತಹುದಾಗಿತ್ತು. ಅಂತಹ ಕ್ರಾಂತಿ ಪ್ರಪಂಚದ ಇತಿಹಾಸದಲ್ಲಿ ವಿರಳ. ಭಾರತದಲ್ಲಿಯಂತೂ ಅದುವೇ ಮೊದಲನೆಯದು ಹಾಗೂ ಕೊನೆಯದು ಆಗಿದೆ.

ಪರಿಶುದ್ದರೂ ಆತ್ಮಜ್ಞಾನಿಗಳೂ ಆದ ಅಸಂಖ್ಯಾತ ಜನ ಒತ್ತಟಿಗೆ ಕೂಡಿ ಚಿಂತನೆ ಮಾಡಿ, ಚರ್ಚೆಗೈದು, ಅನುಭವದ ಒರಗಲ್ಲಿಗೆ ತಿಕ್ಕಿ ಮಾನವನ ಉನ್ನತಿಗೆ ಬೇಕಾದ ಸಾರ್ವಕಾಲಿಕವಾದ ತತ್ವಗಳನ್ನು ಕಂಡುಹಿಡಿದುದು ಬಸವಕಲ್ಯಾಣದ ಅನುಭವಮಂಟಪದಲ್ಲಿಯೇ. ಜಗತ್ತಿನ ಇತಿಹಾಸದ ಯಾವ ಪುಟವನ್ನು ತೆರೆದರೂ ಇಂಥ ಕಾರ್ಯ ನಡೆದುದರ ಉಲ್ಲೇಖ ದೊರಕುವುದಿಲ್ಲ. ಸಾಮಾಜಿಕ, ಧಾರ್ಮಿಕ, ನೈತಿಕ, ಆಧ್ಯಾತ್ಮಿಕ – ಹೀಗೆ ಎಲ್ಲಂದರಿಂದ ಮನುಷ್ಯನ ಬಾಳನ್ನು ಸುಂದರಗೊಳಿಸಲು ಹೊಸ ಮಾರ್ಗಗಳನ್ನೇ ಹಾಕಿಕೊಟ್ಟರು – ಶಿವಶರಣರು. ನಿಸ್ಪೃಹವಾಗಿ, ನಿಷ್ಪಕ್ಷಪಾತದಿಂದ ನೋಡಿದರೆ ಇಂದಿಗೂ ಅಷ್ಟೇ ಏಕೆ ಎಂದೆಂದಿಗೂ ಆ ತತ್ವಗಳು ಆ ಮಾರ್ಗಗಳು ಹೊಸದಾಗಿವೆ ಎನ್ನಿಸದಿರದು.

ಹಿಂದೆ ಶರಣರ ಆ ತತ್ವಗಳ ಪ್ರಚಾರಕ್ಕೆ, ಪ್ರಸಾರಕ್ಕೆ ಸಾಕಷ್ಟು ಸಾಧನಗಳಿರಲಿಲ್ಲ. ದುರದೃಷ್ಟದಿಂದ ಆ ತತ್ವಗಳು ಅನುಷ್ಠಾನಕ್ಕೆ ಬರುವಷ್ಟರಲ್ಲಿಯೇ ರಾಜಕೀಯ ವಿಪ್ಲವವೆದ್ದು ಶರಣರು ಮರೆಯಾಗಿ ಹೋಗಬೇಕಾಯಿತು. ಒಂದು ವೇಳೆ, ಶರಣರ ಆ ತತ್ವಗಳು ಅನುಷ್ಠಾನಕ್ಕೆ ಬಂದಿದ್ದರೆ ಭಾರತದ ಇತಿಹಾಸವೇ ಬೇರೆ ರೂಪ ತಾಳುತ್ತಿತ್ತು.

ಶರಣರ ಈ ವಿಶಿಷ್ಟಕ್ರಾಂತಿಗೆ ‘ಮೂಲಿಗ’ರಾದ ರಾಯಪೂರ್ವಾಚಾರಿಯಾದ, ವೀರಶೈವನಿರ್ಣಯ ಪರಮಾವತಾರಿಯಾದ, ಬಸವಣ್ಣನವರು ಭಾರತದ ಜೀವನಾಡಿಯನ್ನು ಸರಿಯಾಗಿ ತಿಳಿದುಕೊಂಡಿದ್ದರು. ಆ ಮಹಾಪುರುಷರು ಭಾರತದ ಜನಜೀವನವನ್ನು ತಿದ್ದಿದರೆ ಸಮಗ್ರ ಮಾನವಕೋಟಿಯ ಜನಜೀವನವನ್ನು ತಿದ್ದಿದಂತಾಗುವುದೆಂದು ಬಗೆದಿದ್ದರು. ಆ ನಿಟ್ಟಿನಲ್ಲಿ ಬಸವಣ್ಣನವರು ತಮ್ಮ ಮಣಿಹವನ್ನು ಹಮ್ಮಿಕೊಂಡಿದ್ದರು.

ಬಸವಣ್ಣನವರು ತಮ್ಮ ಆ ಮಹಾಮಣಿಹದ ಪ್ರಚಾರ, ಪ್ರಸಾರಕ್ಕೆ ಕಟ್ಟಿದ ಸಂಸ್ಥೆ ವಿನೂತನವಾದುದು; ಅದು ‘ಜಂಗಮ ಸಂಸ್ಥೆ’. ಸತ್ಯಶುದ್ಧರೂ ಮಹಾತ್ಯಾಗಿಗಳೂ ಸುಳಿದಾಡುವ ಪರಬೊಮ್ಮ ಎನಿಸಿದವರೂ ಆದ ಈ ಜಂಗಮರು ಭಾರತದ ತುಂಬ ಸಂಚರಿಸಿ ಬಸವಣ್ಣನವರ ಮಹಾಮಣೀಹದ ಪ್ರಚಾರ, ಪ್ರಸಾರದ ಜೊತೆಗೆ, ಕಲ್ಯಾಣದ ಅನುಭವಮಂಟಪದಿಂದ ಹೊರಬಿದ್ದ ನಿತ್ಯನೂತನ ತತ್ವಗಳನ್ನು ಜನರ ಮನದಲ್ಲಿ ಬಿತ್ತಿದರು; ಬಸವಣ್ಣನವರ ಘನತೆಯನ್ನು ಸಾರಿದರು; ಜನರ ಒಲವನ್ನು ಕಲ್ಯಾಣದ ಕಡೆಗೆ ತಿರುಗಿಸಿದರು. ಈ ಜಂಗಮಸಂಸ್ಥೆಯಿಂದಲೇ ಇಡಿಯ ಭಾರತ ಕಲ್ಯಾಣಕ್ರಾಂತಿಯಲ್ಲಿ ಭಾಗವಹಿಸುವಂತಾಯಿತು; ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ವಿವಿಧ ಮಟ್ಟದ, ವಿವಿಧ ಕಾಯಕದ ಜನ ಕಲ್ಯಾಣಕ್ಕೆ ಬಂದಿತು. ಕಾಶ್ಮೀರದಿಂದ ಮಹಾದೇವ ಭೂಪಾಲ, ರಾಣಿ ಮಹಾದೇವಿ ಮತ್ತು ಬೊಂತಾದೇವಿ; ಕಳಿಂಗ(ಒರಿಸ್ಸಾ)ದಿಂದ ಮಹದೇವಶೆಟ್ಟಿ ಮತ್ತು ಸುಜ್ಞಾನಿದೇವ; ಸೌರಾಷ್ಟ್ರದಿಂದ ಆದಯ್ಯ; ಆಂಧ್ರದಿಂದ ಮೈದುನ ರಾಮಯ್ಯ, ಸಕಳೇಶಮಾದರಸ ಮತ್ತು ಹಡಪದ ರೇಚಯ್ಯ; ಕುಂತಳದಿಂದ ಏಕಾಂತರಾಮಯ್ಯ; ಮಾಳವದಿಂದ ಡೋಹರ ಕಕ್ಕಯ್ಯ; ತಮಿಳುನಾಡಿನಿಂದ ತಂಗಟೂರು ಮಾರಯ್ಯ; ಗಾಂಧಾರ (ಆಫಗಾನಿಸ್ಥಾನ)ದಿಂದ ಮರುಳಶಂಕರದೇವ.

ಹೀಗೆ ಭಾರತದ ನಾನಾ ಭಾಗಗಳಿಂದ ಶರಣರು, ಭಕ್ತರು, ಮಾನವ ಕೋಟಿಯ ಕಲ್ಯಾಣಕ್ಕಾಗಿ ದೀಪದಂತೆ ಉರಿಯಲು, ಗಂಧದಂತೆ ಸವೆಯಲು ಬಯಸಿದ ಮಾನವ ಪ್ರೇಮಿಗಳು ಕಲ್ಯಾಣಕ್ಕೆ ಬಂದರು.

ಗಾಂಧಾರ (ಆಫಗಾನಿಸ್ಥಾನ)[1] ದೇಶದಲ್ಲಿ ಕಣ್ಪುತ್ತೂರು ಎಂಬುದೊಂದು ಊರು. ಅಲ್ಲಿ ನೈಸರನೆಂಬೊಬ್ಬ ಭಿಕ್ಷುಕ ವಿರಕ್ತ ಆರಮವನ್ನು ಕಟ್ಟಿಕೊಂಡು ಜೀವಿಸಿದ್ದ. ನೈಸರ ಮಹಾಕರುಣೆ, ದೈವಭಕ್ತ. ಪ್ರಸಾದದಲ್ಲಿ ಆತನಿಗೆ ಅಚಲಮಾದ ಶ್ರದ್ಧೆಯಿತ್ತು.

ಮರುಳಶಂಕರದೇವರು ನೈಸರನ ಶಿಷ್ಯರು; ಗುರುವಿನ ಜೊತೆಗೆ ಆತನ ಆಶ್ರಮದಲ್ಲಿಯೇ ಇರುತ್ತಿದ್ದರು. ಗುರುವಿನಂತೆ ಶಿಷ್ಯನಿಗೂ ಪ್ರಸಾದದ ಬಗ್ಗೆ ಭಕ್ತಿ ಶ್ರದ್ಧೆಗಳಿದ್ದವು.

ಒಂದು ದಿನ ಕಣ್ಪುತ್ತೂರಿನ ರಾಜ ಬಂದು ನೈಸರನ ಚೆನ್ನಡಿಗಳಲ್ಲಿ ತನ್ನ ಮುಂದಲೆಯನ್ನಿಟ್ಟ. ಆ ರಾಜನನ್ನು ಕುರಿತು ನೈಸರನು,

“ನೀನು ಯಾರು?” ಎಂದು ಕೇಳಿದನು ಅದಕ್ಕೆ ಆ ರಾಜನು,

“ನಾನು ಈ ಊರಿನ ಅರಸು, ನಿಮ್ಮ ಕೃಪೆಯಿಂದಲೇ ನಾನು ಮನುಷ್ಯ ಜನ್ಮವನ್ನು ಹೊಂದಿ ಅರಸನಾಗಿದ್ದೇನೆ” ಎಂದನು

“ಅದು ಹೇಗೆ?” ಎಂದು ಕೇಳಿದನು ನೈಸರ.

ಕಣ್ಪುತ್ತೂರಿನ ರಾಜ ಹೇಳಿದನು:

“ಹಿಂದಿನ ಜನ್ಮದಲ್ಲಿ ನಾನು ನಾಯಿಯಾಗಿ ಜೀವಿಸಿದ್ದೆ. ಒಂದು ದಿನ ನಾನು ಗಾಯಗೊಂಡೆ. ನೋವು ತಾಳಲಾರದೆ ದಿಕ್ಕುಗೆಟ್ಟು ಓಡಾಡಿದೆ. ಓಡಿ ಓಡಿ ಬಸವಳಿದು ಬೆಂಡಾಗಿ ನಿಮ್ಮ ಆಶ್ರಮದ ಮುಂದೆ ಬಂದು ಬಿದ್ದೆ. ನೀವು ಕರುಣೆಯಿಂದ ನನ್ನನ್ನು ನೋಡಿದಿರಿ. ಎಲೆಯಲ್ಲಿ ಭಿಕ್ಷಾನ್ನವನ್ನಕ್ಕಿ ನನ್ನ ಮುಂದಿಟ್ಟಿರಿ; ನಾನದನ್ನು ತಿಂದೆ. ನೀವು ನಿಮ್ಮ ಅಂಗೈಗಳಿಂದ ನನ್ನ ಮೈದಡವಿದಿರಿ. ಆ ಸ್ಪರ್ಶದಿಂದ ನನ್ನ ನೋವು ನಿಂತಿತು, ವೇದನೆ ಇಲ್ಲಮಾಯಿತು; ಶಾಂತಿ ಸಮಾಧಾನಗಳು ಬಂದು ನನ್ನನ್ನಾವರಿಸಿದವು; ನಾನು ಕೊನೆಯುಸಿರನ್ನೆಳೆದೆ, ನಾನು ರಾಜಮನೆತನದಲ್ಲಿ ಹುಟ್ಟಿ ಬೆಳೆದು ದೊಡ್ಡವನಾದೆ. ಈಗ ನನಗೆ ಹಿಂದಿನ ಜನ್ಮದ ಸ್ಮರಣೆಯುಂಟಾಗಿದೆ. ನಿಮ್ಮನ್ನು ಕಂಡು ಈ ವಿಷಯವನ್ನರುಹಿ ಕೃತಾರ್ಥನಾಗಬೇಕೆಂದು ಇಲ್ಲಿಗೆ ಬಂದೆ.”

ರಾಜನ ಮಾತು ಕೇಳಿ ತುಸು ಹೊತ್ತು ಮೌನ ತಾಳಿ ನೈಸರನು ನುಡಿದನು:

“ನಾನು ನಿನಗೆ ಕರುಣೆಯಿಂದ ಪ್ರಸಾದವನ್ನು ಕೊಟ್ಟೆ. ನೀನದನ್ನು ಸೇವಿಸಿದೆ, ನಿಜ. ಆದರೆ ನನ್ನಿಂದಲೇ ನಿನಗೆ ಈ ಪದವಿ, ಈ ಮನುಷ್ಯ ಜನ್ಮ ಬಂದಿರಲಿಕ್ಕಿಲ್ಲ. ಹಾಗೆ ಬರಲು ಸಾಧ್ಯವೂ ಇಲ್ಲ. ಒಂದು ವೇಳೆ ನಿನಗೆ ಈ ಮಾತು ಮನದಟ್ಟಾಗಿದ್ದರೆ ಅದಕ್ಕಾವ ಕುರುಹು?”

“ಈ ಊರ ನೀಲಕಂಠೇಶ್ವರನೇ ನನಗೆ ಈ ಮಾತನ್ನು ಹೇಳಿದ್ದಾನೆ. ಬೇಕಿದ್ದರೆ ಆತನನ್ನೇ ಕೇಳುವಾ” ಎಂದನು ಕಣ್ಪುತ್ತೂರು ದೊರೆ.

ನೈಸರ ಮತ್ತು ಆ ದೊರೆ ಇಬ್ಬರೂ ಕೂಡಿ ಆವೂರ ಅಧಿದೈವವಾದ ನೀಲಕಂಠೇಶ್ವರ ದೇಗುಲಕ್ಕೆ ಹೋದರು. ನೈಸರನ ಶಿಷ್ಯ ಮರುಳಶಂಕರದೇವರೂ ಅವರನ್ನು ಹಿಂಬಾಲಿಸಿದರು.

ದೇಗುಲಕ್ಕೆ ಮುಟ್ಟಿ ಗರ್ಭಗುಡಿಗೆ ಹೋಗಿ ಲಿಂಗದ ಮುಂದೆ ನಿಂತರು.

“ನಿಜ ನುಡಿ ನೀಲಕಂಠಾ, ಈ ರಾಜನಿಗೆ ಈ ಪದವಿ ಕೊಟ್ಟವರು ಯಾರು?” ಮೃದುಕಠೋರವಾಣಿಯಲ್ಲಿ ನೈಸರ ಕೇಳಿದನು.

“ನೈಸರಾ, ನಿನ್ನಂದಲೇ ಇವನಿಗೆ ಮನುಷ್ಯ ಜನ್ಮ ಮತ್ತು ರಾಜಪದವಿ ದೊರಕಿವೆ.” ಲಿಂಗದಿಂದ ಇನಿನುಡಿ ಹೊರಚಿಮ್ಮಿತು.

“ನನ್ನಿಂದ! ಅದು ಎಂದಿಗೂ ಸಾಧ್ಯವಿಲ್ಲ. ನಿಜ ನುಡಿ, ದೇವನಾಗಿ ಸಟೆಯನ್ನಾಡುವೆಯಾ?”

ಕಿನಿಸು ಮೈದೋರಿತ್ತು ನೈಸರನ ನುಡಿಯಲ್ಲಿ.

“ನಿನ್ನ ಪ್ರಸಾದದ ಮಹಿಮೆಯಿಂದ ಇವನಿಗೆ ಈ ರಾಜ್ಯಪದವಿ ಮತ್ತು ಮನುಷ್ಯ ಜನ್ಮ ದೊರಕಿದವು.”

ಲಿಂಗ ಮರುನುಡಿಯಿತು.

“ಛೀ, ಸುಳ್ಳಿನ ಮೋಹ ನಿನಗೂ ಬಿಡಲಿಲ್ಲ, ನೀಲಕಂಠಾ, ಪ್ರಸಾದದಿಂದ ಭವವುಂಟೆ? ಪ್ರಸಾದಿ ಮತ್ತೆ ಹುಟ್ಟುವನೆ? ಹೇಳು.”

ಎಂದು ಕೇಳಿದನು ನೈಸರ ಗಂಭೀರಮಾಣಿಯಿಂದ.

“ಇಲ್ಲ. ಪ್ರಸಾದದಿಂದ ಜೀವಿಗೆ ಮರುವುಟ್ಟಿಲ್ಲ. ನಾನೇ ಇವನಿಗೆ ಈ ಪದವಿ ಮತ್ತು ಭವವನ್ನು ಕೊಟ್ಟೆ” ಎಂದಿತು ಲಿಂಗ.

“ಏನು? ಪ್ರಸಾದಿ ಎಂದು ತಿಳಿದು ತಿಳಿದೂ ಇವನಿಗೆ ಈ ಪದವಿ ಮತ್ತು ಭವವನ್ನು ಕೊಟ್ಟೆಯಾ?”

ಎಂದು ನೈಸರ ಕನಲಿ, ಕೈಯಲ್ಲಿದ್ದ ಕೋಲಿನಿಂದ ಲಿಂಗದ ತಲೆಗೆ ಬಲವಾಗಿ ಹೊಡೆದನು. ನೀಲಕಂಠೇಶ್ವರ ಸ್ವಲ್ಪವೂ ಕೋಪಗೊಳ್ಳಲಿಲ್ಲ.

“ನೈಸರಾ, ನಿನ್ನ ಭಾಂಡಪ್ರಸಾದದ ಮಹಿಮೆಯನ್ನು ಲೋಕಕ್ಕೆ ಸಾರಲು ನಾನಿವನಿಗೆ ಈ ಪದವಿಯನ್ನೂ ಭವವನ್ನೂ ಕೊಟ್ಟೆ, ಅಷ್ಟೇ. ಪ್ರಸಾದಿಗೆ ನಿಜಕ್ಕೂ ಭವವಿಲ್ಲ. ಆತ ಭವರಹಿತ, ನಿರ್ಮುಕ್ತ, ಪ್ರಸಾದ ಕೊಡುವವನೂ ಮುಕ್ತನು, ಅದನ್ನು ಸ್ವೀಕರಿಸುವವನೂ ಮುಕ್ತನು.”

ಎಂದು ನುಡಿದು ನೀಲಕಂಠೇಶ್ವರ ಇಬ್ಬರಿಗೂ ನಿಜಮುಕ್ತಿಯನ್ನು ದಯಪಾಲಿಸಿದನು.

ಇದೆಲ್ಲವನ್ನೂ ಕಣ್ಣಾರೆ ಕಂಡ ಮರುಳಶಂಕರದೇವರಿಗೆ ಪ್ರಸಾದದ ಬಗ್ಗೆ ಭಕ್ತಿ ವಿಶ್ವಾಸಗಳುಂಟಾದುವು, ತಮ್ಮ ಜೀವನವನ್ನು ಪ್ರಸಾದಮಯವನ್ನಾಗಿ ಮಾಡಲು ಅವರು ಬಯಸಿದರು. ದಿನಗಳೆದಂತೆ ಅವರಿಗೆ ಪ್ರಸಾದದ ಬಗ್ಗೆ ಚಿಂತನೆ ಹೆಚ್ಚಾಯಿತು.

ಮರುಳಶಂಕರದೇವರು ಪ್ರಸಾದದ ಬಗ್ಗೆ ಚಿಂತನೆಯಲ್ಲಿದ್ದಾಗ ಕಲ್ಯಾಣದ ಜಂಗಮರು ಆಫಗಾಣಿಸ್ಥಾನಕ್ಕೆ ಹೋಗಿರಬೇಕು. ಆ ಜಂಗಮರಿಂದ ಅವರಿಗೆ ಬಸವಣ್ಣ ಮತ್ತು ಶಿವಶರಣರು ಹಮ್ಮಿಕೊಂಡ ಲೋಕಕಲ್ಯಾಣದ ಮಹಾಮಣಿಹ ಮತ್ತು ಅವರ ಭಕ್ತಿಯ ಸಾಧನೆ, ಪ್ರಸಾದದ ಮಹತ್ವ ತಿಳಿದಿರಬೇಕು. ಶರಣರ ಮಣಿಹದಲ್ಲಿ ಭಾಗಿಯಾಗಿ ಪ್ರಸಾದದ ಬಗ್ಗೆ ಇನ್ನೂ ಹೆಚ್ಚಿನ ಜ್ಞಾನ ಸಂಪಾದಿಸಲು ಮರುಳಶಂಕರದೇವರು ಬಸವಕಲ್ಯಾಣದ ದಾರಿ ಹಿಡಿದರಬೇಕು.?

ಪ್ರಸಾದವೆಂದರೇನು? ಊಟವೇ? ಭಾಂಡಭಾಜನವೇ? ನೈಸರನ ಆಚರಣೆಯಿಂದ ಭಿಕ್ಷಾನ್ನವೇ ಪ್ರಸಾದವೆಂದು ತೋರುವುದು. ಆದರೆ ಇದನ್ನು ಮರುಳಶಂಕರದೇವರು ಅಂತರಂಗದಲ್ಲಿ ಒಪ್ಪಿಕೊಂಡಂತಿಲ್ಲ. “ಭಾಂಡ ಪ್ರಸಾದವೊಂದೇ ಪ್ರಸಾದವಲ್ಲ; ಇದಕ್ಕಿಂತಲೂ ಹೆಚ್ಚಿನ ವಸ್ತು ಅದಾಗಿರಬೇಕು. ಹಾಗಿದ್ದರೆ ಅದು ಏನು?” ಎಂಬ ಅಂತರಂಗದ ತುಡಿತ ಚಿಂತನೆಯಲ್ಲಿ ಪರಿವರ್ತನೆಯಾಗಿ, ಪ್ರಸಾದದ ಆಳ ವಿಸ್ತಾರವನ್ನು ಅದರ ನಿಜವನ್ನು ಅರಿಯಲು ಬಯಸಿ ಮರುಳಶಂಕರದೇವರು ಕಲ್ಯಾಣದ ಕಡೆಗೆ ಅಡಿಯಿಟ್ಟರು.

ಷಟ್‌ಸ್ಥಲದಲ್ಲಿ ಪ್ರಸಾದಿಸ್ಥಲಕ್ಕೆ ಬಹುಬೆಲೆಯಿದೆ. ಭಕ್ತಿಸ್ಥಲದ ಭಕ್ತಿ ನಿಷ್ಠೆಗಳು ಮಹೇಶ್ವರ ಸ್ಥಲದಲ್ಲಿ ಗಟ್ಟಿಗೊಂಡು ಪ್ರಸಾದಿಸ್ಥಲದಲ್ಲಿ ಅವು ಮಾಗುತ್ತವೆ. ಭಕ್ತಿಗೆ, ನಿಷ್ಠೆಗೆ ಕಂಗಳು ಮುಡುತ್ತವೆ ಇಲ್ಲಿ, ಈ ಸ್ಥಲದಲ್ಲಿ. ಭಕ್ತನ ಅಂತರಂಗ ಅರಳಿ ಮಿದುವಾಗುತದೆ; ಸರ್ವಾವಯವಗಳು ಶಿವನ ಕರುಣೆಗೆ ಹಂಬಲಿಸುತ್ತವೆ. ಎಲ್ಲವೂ ಶಿವ ಕರುಣೆ, ಶಿವನ ಪ್ರಸಾದ ಎಂಬ ಭಾವ ಅಳವಡುತ್ತದೆ ಇಲ್ಲಿ.

ಇಂತು ನೈಷ್ಠಿಕಾಮುಖದಿಂದ ಆಚರಿಸಿದ ಮಾಹೇಶ್ವರನು
ನೈಷ್ಠಿಕಾ ಬಲದಿಂದ ಶಿವಪ್ರಸನ್ನತೆ ಪ್ರಸಾದತ್ವವನೆಯ್ದಿದನಾಗಿ
ಮುಂದೆ ಪ್ರಸಾದಿಸ್ಥಲವಾದುದು

ಹೀಗೆ ಅಪ್ಪಣೆಕೊಡಿಸಿದ್ದಾರೆ ತೋಂಟದ ಸಿದ್ದಲಿಂಗಶಿವಯೋಗಿಗಳು. ಮುಂದೆ ಬಹು ತಿಳಿಯಾಗಿ ಅವರು ಹೀಗೆ ತಿಳಿಸುತ್ತಾರೆ: –

ಸರ್ವಾಂಗವನು ಲಿಂಗನಿಷ್ಠೆಯಿಂದ ಗಟ್ಟಿಗೊಳಿಸಿ
ಮನವ ಉನ್ಮನಿಯಾವಸ್ಥೆಯನೆಯ್ದಿಸಿ
ಶತಪತ್ರದಲ್ಲಿ ಸೈತಿಟ್ಟು ಲಿಂಗಕ್ಕೆ ಅರ್ಪಿಸಿದ ನೈವೇದ್ಯವ
ಲಿಂಗ ನೆನಹಿನಲ್ಲಿಯೇ ಸ್ವೀಕರಿಸುವುದು
ಅಂಗಾರ್ಪಿತವ ವಿಸರ್ಜಿಸುವುದಯ್ಯಾ!

ತಟ್ಟುವ ಮುಟ್ಟುವ ಸೋಂಕುವ ಮರ್ಮವನರಿದು
ಲಿಂಗಮುಖಕ್ಕೆ ನಿವೇದಿಸಿ
ಲಿಂಗಪ್ರಸಾದವ ಸ್ವೀಕರಿಸುತಿರಬಲ್ಲರೆ
ಪ್ರಸಾದಿಸ್ಥಲವಿದೆಂಬೆನಯ್ಯಾ!
ಮಹಾಲಿಂಗಗುರು ಶಿವಸಿದ್ದೇಶ್ವರ ಪ್ರಭುವೇ

ಜ್ಞಾನಸುಜ್ಞಾನ ಪ್ರಸಾದಿಸ್ಥಲ

ಎಂದು ನುಡಿಯುತ್ತಾರೆ ರಾಣಿಮಹಾದೇವಿಯರು.

ಭಕ್ತನಿಗೆ ಈ ಸ್ಥಳದಲ್ಲಿ ಸಕಲ ವಿಶ್ವವೂ ಶಿವನ ಪ್ರಸಾದವಾಗಿ ಕಾಣುತ್ತದೆ. ಏನು ಬಂದರೂ ಅದು ಶಿವಕರುಣೆ ಎನಿಸುತ್ತದೆ. ಪ್ರಸನ್ನತೆ ಈ ಸ್ಥಲದ ಮುಖ್ಯ ಗುಣ.

“ಸೌರಾಷ್ಟ್ರ ಸೋಮೇಶ್ವರ ಲಿಂಗದ ಪ್ರಸನ್ನತೆಯೇ ಪ್ರಸಾದ” ಎನ್ನುತ್ತಾರೆ ಆದಯ್ಯನವರು. ಆ ಶಿವಪ್ರಸನ್ನತೆಯನ್ನು ಪಡೆಯಲು ಭಕ್ತ ಸತ್ಯಶುದ್ಧ ಕಾಯಕ ಕೈಗೊಂಡು, ಗುರುಲಿಂಗ ಜಂಗಮಕ್ಕೆ ದಾಸೋಹಗೈಯುತ್ತ, ಲಿಂಗಭೋಗೋಪ ಭೋಗಿಯಾಗಿ ತನ್ನ ಜೀವನವನ್ನೇ ಶಿವನಿಗೆ ಪ್ರಸಾದವನ್ನು ಮಾಡಿ ಅರ್ಪಿಸುತ್ತಾನೆ.

“………ತರ್ಕೈಸಿ ನಿಮ್ಮುವನಪ್ಪಿಕೊಂಡರೆ ನಿಶ್ಚಯ ಪ್ರಸಾದ ಕಾಣಾ ರಾಮನಾಥ” ಎಂಬ ದೇವರದಾಸಿಮಯ್ಯಗಳ ವಚನ ಭಕ್ತನ ಜೀವನ ಶಿವನಿಗೆ ಪ್ರಸಾದವಾಗಬೇಕೆಂದು ಸಾರುತ್ತದೆ.

ಪ್ರಸಾದಿಗೆ ಅರ್ಪಣವೇ ಜೀವ. ಆತ ತನ್ನ ಸರ್ವಸ್ವವನ್ನು ಶಿವನಿಗರ್ಪಿಸುತ್ತಾನೆ – ಮಹಾಪ್ರಸಾದಿಯಾಗುತ್ತಾನೆ.

ರೂಪವನರ್ಪಿಸಿ ನಿರೂಪ ಪ್ರಸಾದಿ
ತನ್ನನರ್ಪಿಸಿ ತಾನಿಲ್ಲದ ಪ್ರಸಾದಿ
ಇವೆಲ್ಲವನರ್ಪಿಸಿ ಬಯಲು ಪ್ರಸಾದಿ
ಕೂಡಲಚನ್ನ ಸಂಗಯ್ಯ
ನಿಮ್ಮ ಶರಣರು ಮಹಾಪ್ರಸಾದಿಗಳು

ಷಟ್‌ಸ್ಥಲಚಕ್ರವರ್ತಿ ಚೆನ್ನಬಸವಣ್ಣನವರ ಈ ವಚನ ಪ್ರಸಾದಿಯ ನಿಲುವಿನ ಚಿತ್ರವನ್ನು ಆತ್ಮದ ಕಂಗಳ ಮುಂದೆ ತಂದು ನಿಲ್ಲಿಸುತ್ತದೆ.

ಪ್ರಸಾದಿಗೆ ಅನರ್ಪಿತವೇ ಇಲ್ಲ. ಅವನ ಜೀವನದ ಪ್ರತಿನಿಮಿಷವೂ ಅವನ ಪ್ರತಿ ಉಸಿರೂ ಪ್ರತಿ ಕೆಲಸವೂ ಲಿಂಗಕ್ಕೆ ಅರ್ಪಿತವಾಗುತ್ತಿರುತ್ತದೆ.

ನೆಲ ತಳವಾರನಾದಡೆ ಕಳ್ಳಂಗೆ ಹೋಗಲೆಡೆಯುಂಟೇ?
ಸರ್ವಾಂಗಲಿಂಗಿಗೆ ಅನರ್ಪಿತವುಂಟೇ?
ನಿಃಕಳಂಕಮಲ್ಲಿಕಾರ್ಜುನಾ

ಮೋಳಿಗೆಮಾರಿತಂದೆಗಳ ಈ ವಚನ ಬಹುಮಾರ್ಮಿಕವಾಗಿ ಪ್ರಸಾದಿಗೆ ಅನರ್ಪಿತ ಇಲ್ಲವೇ ಇಲ್ಲವೆಂಬುದನ್ನು ತಿಳಿಸುತ್ತದೆ.

ಇಂಥ ಅರ್ಪಿತವುಳ್ಳ ಪ್ರಸಾದಿ ತನುಗುಣ ವಿರಹಿತನಾಗುತ್ತಾನೆ; ಮನಗುಣ ವಿರಹಿತನಾಗುತ್ತಾನೆ; ಅನುಪಮ ಜ್ಞಾನ ಸನ್ನಿಹಿತ ಶರಣನಾಗುತ್ತಾನೆ. ಆತ ನೋಡಿದುದೆಲ್ಲ ಪ್ರಸಾದ, ನುಡಿದುದೆಲ್ಲ ಪ್ರಸಾದ, ಸೋಂಕಿದುದೆಲ್ಲ ಪ್ರಸಾದ.

ಭಕ್ತನ ಸರ್ವಸ್ವವೂ ಪ್ರಸಾದವೆಂಬುದನ್ನು ಚೆನ್ನಬಸವಣ್ಣನವರು ಹೀಗೆ ಹೇಳುತ್ತಾರೆ:

ಜಿಹ್ವೆ ಗುರು, ಕಂಗಳು ಲಿಂಗ
ನಾಸಿಕವಾಚಾರ, ಶ್ರೋತ್ರ ಪ್ರಸಾದ,
ಹಸ್ತ ಜಂಗಮ, ಭಾವ ಮಹಾಲಿಂಗ
ಕೂಡಲಚೆನ್ನಸಂಗಯ್ಯ, ನಿಮ್ಮ ಶರಣ ಸರ್ವಾಂಗ ಪ್ರಸಾದಿ

ಹೀಗೆ ಪ್ರಸಾದದ ಅರ್ಥ ಬಹುವ್ಯಾಪಕವೂ ಗಹನವೂ ಆಗಿದೆ. ಇದನ್ನುಳಿದು ಕೇವಲ ಅನ್ನವೇ ಪ್ರಸಾದವೆಂದು ತಿಳಿಯುವುದು ತಿಳಿಗೇಡಿತನವಾಘುತ್ತದೆ. ಅನ್ನವೂ ಪ್ರಸಾದ. ಯಾವಾಗ? ಅದನ್ನು ಲಿಂಗಯ್ಯನಿಗೆ ಅರ್ಪಿಸಿದಾಗ

ಅನ್ನ ಜೀವಕ್ಕೆ ಆಧಾರ, ಅನ್ನವೇ ಸರ್ವಜಗಕ್ಕೆ ಸನ್ಮತ
ಇದು ಕಾರಣ ಅನ್ನವೇ ಪ್ರಸಾದವಲ್ಲ
ಶರಣಪ್ಪ ಸದ್ಗುರು ಸ್ವಾಮಿ ನೆತ್ತಿಯಲ್ಲಿದ್ದ ಉತ್ತಮಪ್ರಸಾದವನರುಹಿ,
ಬ್ರಹ್ಮರಂಧ್ರದಲ್ಲಿ ಪ್ರಕಾಶಿಸುತ್ತಿರ್ಪ
ಮಹಾಲಿಂಗದೊಳ್ಪಟ್ಟಿದ ಪರಮಾಮೃತವೇ ಪ್ರಸಾದ

ಆದಯ್ಯನವರ ವಚನ ಪ್ರಸಾದವಾವುದೆಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೆ.

ಆವ ಪದಾರ್ಥವಾದಡೇನು ಲಿಂಗಾರ್ಪಿತವ ಮಾಡಬೇಕು:
ಕೂಡಲಚನ್ನಸಂಗಯ್ಯ, ಲಿಂಗಾರ್ಪಿತವಲ್ಲದೆ ಕೊಂಡಡೆ
ಕೃತ ಕಲ್ಬಿಷವೆಂದುದು ನಿಮ್ಮ ವಚನ

ಹೀಗೆಂದು ಹೇಳಿದ ಚೆನ್ನಬಸವಣ್ಣನವರು ಇನ್ನೊಂದು ವಚನದಲ್ಲಿ ನಿರ್ದೋಷಿಗಳಾಗಿ ಬದುಕುವುದು ಹೇಗೆಂದು ತಿಳಿಸಿದ್ದಾರೆ:

ಮರ, ಗಿಡ, ಬಳ್ಳಿಗಳ ಬೆಳಸೆಲ್ಲವ ತರೆತರೆದು, ಪ್ರಾಣವ ಕೊಂದು
ಶರೀರವ ಹೊರೆವ ದೋಷಕ್ಕೆ ಇನ್ನಾವುದು ವಿಧಿಯಯ್ಯಾ !
ಒಂದಿಂದ್ರಿಯ ಮೊದಲಾಗಿ, ಐದಿಂದ್ರಿಯ ಕಡೆಯಾಗಿ
ಜೀವ ಜಾಲವಲ್ಲವೆ ಸಚರಾಚರವೆಲ್ಲ?
ಇದುಕಾರಣ, ಕೂಡಲಚೆನ್ನಸಂಗನ ಶರಣರು,
ಲಿಂಗಕ್ಕರ್ಪಿಸಿ, ಲಿಂಗಪ್ರಸಾದವ ಕೊಂಡು ನಿರ್ದೋಷಿಗಳಾಗಿ ಬದುಕಿದರು.

ಪ್ರಭುವಿನ ಈ ಕೆಳಗಿನ ವಚನ ಓಗರವಾವುದು? ಪ್ರಸಾದವಾವುದು? ಎಂಬುದನ್ನು ಸ್ಪಷ್ಟಪಡಿಸುತ್ತದೆ.

ತನ್ನ ಮುಟ್ಟಿ ನೀಡಿದುದೆ ಪ್ರಸಾದ
ತನ್ನ ಮುಟ್ಟಿ ನೀಡಿದುದೆ ಓಗರ
ಲಿಂಗಕ್ಕೆ ಕೊಟ್ಟು ಕೊಂಡಡೆ ಪ್ರಸಾದಿ
……….. ……………….
ಲಿಂಗಕ್ಕೆ ಸಮರ್ಪಿಸಿದ ಸಕಲ ದ್ರವ್ಯಂಗಳನು
ಲಿಂಗಸಹಿತವಾಗಿಯೇ ಭೋಗಿಸಬೇಕು

ಎನ್ನುತ್ತಾರೆ ಷಣ್ಮುಖಸ್ವಾಮಿಗಳು.

ಶರಣನ ಕಾಯ ಬರಿದೆ ಬಾಳಿ ಹೊತ್ತುಗಳೆಯಲು ಬಂದಿಲ್ಲ; ಅದು ಶಿವನನ್ನು ಒಲಿಸಲು ಬಂದಿದೆ. ಆ ಶರೀರ ಪ್ರಸಾದಶರೀರವಾದಾಗ್ಗೆ ಶಿವನೊಲುಮೆ ಸಾಧ್ಯ. ಹಾಗೆ ಪ್ರಸಾದಿಯಾಗಲು ಭಕ್ತ ಲಿಂಗಭೋಗೋಪಭೋಗಿಯಾಗಬೇಕು. ಲಿಂಗಕ್ಕೆ ಸಮರ್ಪಿಸಿ, ಲಿಂಗಸಹಿತವಾಗಿಯೇ ಭೋಗಿಸುವಾಗ ಮೌನದಿಂದಿರಬಾರದು. ತುತ್ತಿಗೊಮ್ಮೆ ಶಿವ ಶರಣು ಎನ್ನುತ್ತಿರಬೇಕು. ಇದರಿಂದ ಕರಣವೃತ್ತಿಗಳಡಗುವುವು, ಲಿಂಗ ಭೋಗೋಪಭೋಗಿಯಾದ ಪ್ರಸಾದಿ, “ಉರಿಗೂಡಿ ಕರುಗುವ ಕರ್ಪುರದ ಇರವಿನಂತಾಗುತ್ತಾನೆ” ಎಂದು ಹೇಳುವ ಮೋಳಿಗೆ ಮಹಾದೇವಿಯವರ ಪ್ರಸಾದ ವಾಣಿಯು ಪ್ರಸಾದಿಯ ನಿಜದ ನಿಲವನ್ನೇ ಮಾತಿನಲ್ಲಿ ಹಿಡಿದಿಟ್ಟಿದೆ.

ಇಂಥ ವಿಶಾಲವಾದ, ವ್ಯಾಪಕವಾದ ಅರ್ಥವುಳ್ಳ ಪ್ರಸಾದದ ಮಹಿಮೆಯನ್ನು ತಿಳಿದು ಆಚರಿಸಲು ಮರುಳಶಂಕರದೇವರು ಕಲ್ಯಾಣಕ್ಕೆ ಬಂದರು. ತಮ್ಮ ಅರಿವಿನ ಆಚಾರಕ್ಕೆ ತಕ್ಕಂಥ ಕಾಯಕವನ್ನೇ ಅವರು ಕೈಕೊಂಡರು. “ತನ್ನೊಂದುದರವನ್ನು ತುಂಬಲು ಯಾವ ಕೃತ್ಯವನ್ನು ಕೈಕೊಂಡರೂ ಜೀವಜಾಲಕ್ಕೆ ನೋವು ತಪ್ಪದು” ಎಂದು ಬಗೆದು ಶಿವಲಿಂಗ ಭಕ್ತರು ಸೇವಿಸಿದ ಶೇಷಪ್ರಸಾದವನಾವರಿಸಿದರೀ ಮಹಾತ್ಮರು. “…..ಬಸವಣ್ಣನೇ ಪ್ರಸಾದವೆಂದು ಮರುಳಶಂಕರದೇವರು ಅರಿದು ಆಚರಿಸಿದರು” – ಎಂದು ನೀಲಾಂಬಿಕೆಯವರ ವಚನವಿದೆ. ತನ್ನ ಅರಿವಿನ ಆಚಾರಕ್ಕೆ ಪ್ರಸಾದರೂಪನಾದ ಬಸವಣ್ಣನವರ ಮಹಾಮನೆಯಲ್ಲಿಯೇ ಆಶ್ರಯ ಪಡೆದರು ಮರುಳಶಂಕರದೇವರು. ಅವರ ಈ ಕೆಳಗಿನ ವಚನ ಈ ಮಾತನ್ನು ಸಮರ್ಥಿಸುತ್ತದೆ: –

ಜಂಗಮ ಪಾದೋದಕವ ಮಜ್ಜನವ ಮಾಡಿ, ಪ್ರಸಾದಾಂಬುವ ಮಾಡಿ
ಎನಗೆನ್ನ ಗುರುತಂದೆ ಶಿವಕಲ್ಯಾಣದ ಮಾಡಿದ;
ಹಿಂಗದಿರು ಕಂದಾ ಎಂದು ಕಂಕಣವ ಕಟ್ಟಿದ
ಲಿಂಗಕ್ಕೆ ಚೈತನ್ಯ ಪ್ರಸಾದವೆಂದು, ತನಗೆ ಚೈತನ್ಯ ಜಂಗಮವೆಂದು
ನನಗೆ ಚೈತನ್ಯ ಲಿಂಗವೆಂದು ನಿರೂಪಿಸಿದ.
ಜಂಗಮ ಪ್ರಸಾದ ಬಸವಣ್ಣನಿಂದಲ್ಲದೆ ದೊರಕೊಳ್ಳದೆಂದು ಬಸವಣ್ಣನ ಸಾರಿದೆ
ಬಸವಣ್ಣ ಮಡಿದುಪಕಾರವನೇನ ಹೇಳುವೆನಯ್ಯಾ
ಒಡೆಯರೊಕ್ಕುವ ತಾ ಸವಿದು, ತನ್ನೊಕ್ಕುದ ಮಿಕ್ಕುದ ತನ್ನ ಗೃಹಚರರುಂಡು
ಮಿಕ್ಕ ಶೇಷಪ್ರಸಾದವು ಎನ್ನ ಲಿಂಗಕ್ಕಾಯಿತ್ತು
ಪ್ರಸಾದಗುಂಡವೇ ಗೃಹವಾಯಿತ್ತು
ಪ್ರಸಾದಪತ್ರವೇ ಎನ್ನ ಲಿಂಗಕ್ಕೆ ಪೂಜೆ ಎನಗೆ ಹೊದಿಕೆಯಾಗಿ
ಎನ್ನ ತನು ಶುದ್ಧಪ್ರಸಾದವಾಯಿತ್ತು, ಮನ ಸಿದ್ಧಪ್ರಸಾದವಾಯಿತ್ತು
ಗುರ್ವಾಜ್ಞೆವಿಡಿದೆನಾಗಿ ಆನೆ ಪ್ರಸಿದ್ಧ ಪ್ರಸಾದಿಯಾದೆನಯ್ಯಾ
ಇನ್ನು ಬದುಕಿದೆನು ಕಾಣಾ
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ
ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ
ನಿಮ್ಮ ಶರಣ ಸಿದ್ಧರಾಮಯ್ಯನ ಕಂಡು
ಶಿಖಿಕರ್ಪೂರಯೋಗದಂತಾದೆನಯ್ಯಾ, ನಿಮ್ಮ ಧರ್ಮ,
ನಿಮ್ಮ ಧರ್ಮ, ನಿಮ್ಮ ಧರ್ಮ.

ಮೇಲಿನ ವಚನದಲ್ಲಿ ಮರುಳಶಂಕರದೇವರು ಕೈಕೊಂಡಿದ್ದ ಕಾಯಕವಾವುದೆಂಬುದು ಧ್ವನಿತವಾಗುತ್ತದೆ.

‘ಪಾದೋದಕವ ಮಜ್ಜನವ ಮಾಡಿ’, ‘ಪ್ರಸಾದಾಂಬುವ ಮಾಡಿ’, ‘ಪ್ರಸಾದ ಪತ್ರ’, ‘ಪ್ರಸಾದಗುಂಡ’ ಈ ಶಬ್ದಗಳಲ್ಲಿ ವಿಶಿಷ್ಟವಾದ ಅರ್ಥ ಹುದುಗಿದೆ; ಮರುಳಶಂಕರದೇವರ ಕಾಯಕದ ತಿರುಳು ಮತ್ತು ಅವರ ಪ್ರಸಾದಮಯ ಜೀವನದ ತತ್ವ ಈ ಅರ್ಥದ ಆತ್ಮದಲ್ಲಿ ಅಡಗಿದೆ.

ಗುರು – ಲಿಂಗ – ಜಂಗಮರ ಧೂಳೋದಕವನ್ನು ಒಂದು ದೊಡ್ಡ ಪಾತ್ರೆಯಲ್ಲಿ ಸಂಗ್ರಹಿಸಿಟ್ಟಿರುತ್ತಾರೆ. ಆ ಧೂಳೋದಕ (ಪಾದೋದಕ)ವನ್ನು ಸ್ನಾನಕ್ಕೆ ಉಪಯೋಗಿಸಲಾಗುತ್ತದೆ.

ಗುರು – ಲಿಂಗ – ಜಂಗಮರ ಪಾದಪೂಜೆಯಿಂದ ವಿಧ್ಯುಕ್ತವಾಗಿ ಪಡೆದುಕೊಂಡುದೇ ಪ್ರಸಾದಾಂಬು (ಕರುಣಪ್ರಸಾದ).

ಗುರು – ಲಿಂಗ – ಜಂಗಮರ ಪೂಜೆಗೆ ಉಪಯೋಗಿಸಿದ ಪತ್ರೆಯನ್ನು ಅಲ್ಲಿ ಇಲ್ಲಿ ಚೆಲ್ಲುವುದಿಲ್ಲ. ಅದನ್ನು ಸಂಗ್ರಹಿಸಲು ಒಂದು ಗುಂಡಿ ಮಾಡಿರುತ್ತಾರೆ. ಪೂಜೆಗೆ ಉಪಯೋಗಿಸಿದ ಪತ್ರ – ಪುಷ್ಪಗಳನ್ನು ಆ ಗುಂಡಿಯಲ್ಲಿ ಸಂಗ್ರಹಿಸಲಾಗುವುದು. ಇದುವೇ ‘ಪ್ರಸಾದ ಪತ್ರ’.[2]

ಗುರು – ಲಿಂಗ – ಜಂಗಮರಿಗೆ ಎಡೆಮಾಡಿದ ಬಳಿದ ಅಡುಗೆ ಮಾಡಿದ ಪಾತ್ರೆಗಳ ತಳದಲ್ಲಿ ಅಪ್ಪಿತಪ್ಪಿ ಉಳಿದ ಪ್ರಸಾದವನ್ನು ಚೆಲ್ಲುವುದಿಲ್ಲ. ಅದನ್ನು ಒಂದು ಗುಂಡದಲ್ಲಿ ಹಾಕುವ ವ್ಯವಸ್ಥೆಯಿದೆ. ಅದುವೇ ‘ಪ್ರಸಾದಗುಂಡ’.

ಮರುಳಶಂಕರದೇವರು ಪರಮ ಪ್ರಸಾದಿಗಳು; ಮೇಲಾಗಿ ಗುಪ್ತ ಭಕ್ತಿಯನ್ನು ಕೈಕೊಂಡವರು. ಆದುದರಿಂದ ಧೂಳೋದಕ ಅವರ ಸ್ನಾನಕ್ಕಾಯಿತು; ಆ ಪಾದೋದಕವೇ ಅವರಿಗೆ ಪ್ರಸಾದಾಂಬು ಎಂದರೆ ಕರುಣಪ್ರಸಾದವಾಯಿತು; ಈ ಪ್ರಸಾದಪತ್ರವೇ ಅವರ ಪೂಜೆಗೆ ಪತ್ರೆಯಾಯಿತು; ಪ್ರಸಾದಗುಂಡದಲ್ಲಿ ಸಂಗ್ರಹವಾದ ಭಾಂಡಪ್ರಸಾದವೇ ಅವರಿಗೆ, ಅವರ ಲಿಂಗಕ್ಕೆ ಪ್ರಸಾದವಾಯಿತು; ಆ ಪ್ರಸಾದಗುಂಡವೇ ಅವರಿಗೆ ವಾಸಗೃಹವಾಯಿತು; ಆ ಪ್ರಸಾದ ಪತ್ರವೇ ಹಾಸು ಹೊದಿಕೆಯಾಯಿತು.

ಸರ್ವಾಂಗ ಪ್ರಸಾದಿಯಾದ, ತನ್ನ ಜೀವನವನ್ನು ಪ್ರಸಾದಮಯವನ್ನಾಗಿ ಮಾಡಿಕೊಂಡ ಶರಣನಿಗೆ ಮಾತ್ರ ಈ ತೆರನ ಆಚರಣೆ ಸಾಧ್ಯ ಮರುಳಶಂಕರ ದೇವರು ಸರ್ವಾಂಗಲಿಂಗಿಗಳು, ಸರ್ವಾಂಗ ಪ್ರಸಾದಿಗಳು. ಅವರ ಜೀವನ ಪ್ರಸಾದಮಯವಾಗಿತ್ತು. ಅಂತೆಯೇ ಅವರಿಗೆ ಧೂಳೋದಕ ಕರುಣಪ್ರಸಾದವಾಯಿತು; ಪ್ರಸಾದಪತ್ರ ಪೂಜೆಗೆ ಯೋಗ್ಯವಾಯಿತು; ಭಾಂಡಪ್ರಸಾದ ಪರಮಪ್ರಸಾದವಾಯಿತು. ಮರುಳಶಂಕರದೇವರ ಈ ಕಾಯಕ ಕಾರ್ಯದ ಅತಿಸೂಕ್ಷ್ಮ ತತ್ವವನ್ನು ತಿಳಿಸುತ್ತದೆ; ಜೊತೆಗೆ ಪ್ರಸಾದದ ಸೂಕ್ಷ್ಮ ತತ್ವವನ್ನು ಹೊರಗೆಡಹುತ್ತದೆ. ಶರಣರು ನಾನಾ ಬಗೆಯ ಕಾಯಕಗಳನ್ನು ಕೈಗೊಂಡಿದ್ದರು; ಅವು ಕಾಯಕದ ನಾನಾ ಮುಖಗಳ, ಅರ್ಥವ್ಯಾಪ್ತಿಗಳ ಪರಿಚಯ ಮಾಡಿಸುತ್ತವೆ.

ಕಾಯಕದಿಂದ ಆರ್ಥಿಕ ಅಭಿವೃದ್ಧಿಯಾಗಬೇಕು. ಕಾಯಕ ಮಾಡುವವನ ದೇಹ, ಬುದ್ಧಿ, ಮನಸ್ಸು, ಹೃದಯ, ಆತ್ಮಗಳು ಶುದ್ಧಿಗೊಂಡು ವಿಕಾಸವಾಗಬೇಕು; ಅಂಗಗುಣವಳಿದು ಲಿಂಗಗುಣ ಮೈದೋರಬೇಕು. ಇಷ್ಟಲ್ಲದೆ ರಾಷ್ಟ್ರದ ಸಂಪತ್ತು ಬೆಳೆಯುವುದರ ಜೊತೆಗೆ ಅದು ವ್ಯರ್ಥಹಾಳಾಗಬಾರದೆಂಬುದರ ಕಲ್ಪನೆಯೂ ಕಾಯಕ ತತ್ವದಲ್ಲಿ ಅಡಗಿದೆ. ಆಯ್ದಕ್ಕಿಮಾರಯ್ಯಗಳ ಕಾಯಕ ಇದಕ್ಕೆ ಉತ್ತಮ ನಿದರ್ಶನವಾಗಿದೆ. ವ್ಯವಹಾರ ಮಾಡುವಲ್ಲಿ, ಕುಟ್ಟಿಬೀಸುವಲ್ಲಿ, ರಾಶಿಮಾಡುವಲ್ಲಿ ದವಸ ಧಾನ್ಯಗಳು ಚೆಲ್ಲಿಹೋಗುತ್ತವೆ; ಹುಡಿಗೂಡಿ ಹಾಳಾಗುತ್ತವೆ. ಅಂಥ ಕಾಳುಗಳನ್ನು ಆರಿಸಿ ತರುವುದೇ ಮಾರಯ್ಯಗಳ ಕಾಯಕವಾಗಿತ್ತು. ಹಾಗೆ ತಂದ ಅಕ್ಕಿ ಗುರು – ಲಿಂಗ – ಜಂಗಮರಿಗೆ ಪ್ರಸಾದವಾಯಿತ್ತು; ಇಷ್ಟಲ್ಲದೆ ರಾಷ್ಟ್ರದ ಸಂಪತ್ತು ಬರಿದೆ ಹಾಳಾಗುವುದರಿಂದ ಉಳಿಯಿತ್ತು.

ಗುರು – ಲಿಂಗ – ಜಂಗಮರಿಗೆ ಎಡೆಮಾಡಿದ ಪ್ರಸಾದದ ಒಂದಿನಿತೂ ವ್ಯರ್ಥವಾಗಬಾರದೆಂದು ಮರುಳಶಂಕರದೇವರು ಪ್ರಸಾದಗುಂಡದ ಕಾಯಕ ಕೈಗೊಂಡಿದ್ದರು. ಆಯ್ದಕ್ಕಿಮಾರಿತಂದೆಗಳ ಕಾಯಕದ ತತ್ವಗಳೇ ಇಲ್ಲಿ ಅಡಗಿವೆ.

[1] ಆಫಗಾನಿಸ್ಥಾನಕ್ಕೆ ‘ಬರ್ಬರದೇಶ’ವೆಂಬ ಹೆಸರಿತ್ತೆಂದು ಲಿಂ.ಹಳಕಟ್ಟಿಯವರು ಶಿವಶರಣರ ಚರಿತ್ರೆಯ ಮೂರನೆಯ ಭಾಗದಲ್ಲಿ ಬರೆದಿದ್ದಾರೆ.

[2] ಧೂಳೋದಕ ಪಾತ್ರೆ, ಪತ್ರ – ಪುಷ್ಪಗಳನ್ನು ಹಾಕಲು ತೋಡಿದ ಗುಂಡಿ. ಈಗಲೂ ಮಠ, ಮನೆಗಳಲ್ಲಿ ಕಾಣಬಹುದು.