ಸರ್ವಾಂಗಲಿಂಗಿಗಳಾದ ಶರಣರ ಎಲ್ಲ ಸಹಜಾಚರಣೆಗಳಲ್ಲಿ ಸಮಾಜದ, ರಾಷ್ಟ್ರದ ಉದ್ಧಾರ, ಏಳ್ಗೆ ಅಡಗಿದೆ. ಸ್ಥೂಲವಾಗಿ, ಬಹಿರಂಗದ ಆಚರಣೆಯ ದೃಷ್ಟಿಯಿಂದ ಪ್ರಸಾದದ ಬಗ್ಗೆ ವಿಚಾರಿಸಿದರೆ ಅನ್ನದ ಒಂದಗುಳೂ ಬರಿದೆ ಕೆಡುವುದಿಲ್ಲ. ಊಟ ಮಾಡುವ ಕಾಲಕ್ಕೆ ಅನ್ನವನ್ನು ಪದಾರ್ಥವನ್ನು ಚೆಲ್ಲುವುದೆಂದರೆ ರಾಷ್ಟ್ರದ ಸಂಪತ್ತನ್ನು ಹಾಳುಮಾಡಿದಂತೆ. ಇದೊಂದು ಬಗೆಯ ರಾಷ್ಟ್ರದ್ರೋಹವೇ ಸರಿ.

ಅಂತರಂಗದ ಆಚರಣೆಯಷ್ಟೇ ಪ್ರಸಾದಿಯಾದವನಿಗೆ, ಭಕ್ತನಾದವನಿಗೆ ಬಹಿರಂಗದ ಆಚರಣೆಯೂ ಮುಖ್ಯವಾಗಿರುತ್ತದೆ. ಸರ್ವಾಂಗಪ್ರಸಾದೆಯಾದರೂ ಸ್ಥೂಲವೆನಿಸುವ ಬಹಿರಂಗದ ಆಚರಣೆಯನ್ನು ಪ್ರಸಾದಿಯಾದವನು ಬಿಡಲಾರನು, ಬಿಡುವುದಿಲ್ಲ; ಬಿಡಬಾರದು. ಊಟ, ಉಡುಗೆ, ತೊಡುಗೆ, ನೋಟ, ಮಾತು – ಎಲ್ಲದರಲ್ಲಿಯೂ ಆತ ಪ್ರಸಾದಿಯಾಗಿರಬೇಕಾಗಿರುತ್ತದೆ. ಅಂತರಂಗ – ಬಹಿರಂಗದ ಆಚರಣೆಯಲ್ಲಿ ಸಾಮರಸ್ಯವುಂಟಾದಾಗ್ಗೆ ಆತ ನಿಜವಾದ ಭಕ್ತ; ನಿಜವಾದ ಪ್ರಸಾದಿ.

ಅಂತರಂಗ ಬಹಿರಂಗದ ಆಚರಣೆಯ ಸಾಮರಸ್ಯದಿಂದ ಮರುಳಶಂಕರದೇವರು ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದಿಯಾದರು.

ಮರುಳಶಂಕರದೇವರ ಕಾಯಕವೇ ಅವರ ಉಸಿರಾಗಿತ್ತು; ಪ್ರಸಾದಮಯವಾದ ಜೀವನವೇ ಕಾಯಕವಾಗಿತ್ತು.

ಒಡೆಯರು ಶರಣರು ಒಕ್ಕುಮಿಕ್ಕುದನ್ನು ಬಸವಣ್ಣನವರು ಸೇವಿಸುವರು; ಅವರು ಒಕ್ಕುಮಿಕ್ಕುದನ್ನು ಅವರ ಗೃಹಚರರು ಸೇವಿಸುವರು. ಹೀಗೆ ಗುರುಲಿಂಗ ಜಂಗಮರೆಲ್ಲರ ಅಂತಃಕರಣದಿಂದ ಹರಿದುಬಂದ ಒಕ್ಕುಮಿಕ್ಕುದು ಮರುಳಶಂಕರದೇವರು ಮತ್ತು ಅವರ ಲಿಂಗಕ್ಕೆ ಎಡೆಯಾಗುವುದು – ಇಂಥ ಪ್ರಸಾದವನ್ನು ಸೇವಿಸಿ ಅವರು ಮಾಡುತ್ತಿದ್ದ ಕಾಯಕ ಪ್ರಸಾದಕ್ಕೆ ಸಂಬಂಧಪಟ್ಟುದೇ. ಹೀಗೆ ಸೇವಿಸುವುದು ಪ್ರಸಾದ, ಕಾಯಕವು ಪ್ರಸಾದ, ಜೀವನವು ಪ್ರಸಾದವಾಗಿತ್ತು ಅವರಿಗೆ. ಬಸವಣ್ಣನವರನ್ನು ಸಾರಿ ಸರ್ವಸ್ವವೂ ಪ್ರಸಾದಮಯವಾಗಿ ಬೆಳಗಿದ ಮರುಳಶಂಕರದೇವರು ವಿನಯದಿಂದ, ಭಕ್ತಿಯಿಂದ:

…..ಬಸವಣ್ಣನಂಥ ಕ್ರಿಯಾವಂತನೆಂದರಿದು
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ
ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ
ನಿಮ್ಮ ಶರಣ ಸಂಗನ ಬಸವಣ್ಣನ ಪ್ರಸಾದವ
ಹಾಸಿ ಹೊದ್ದು ಕೊಂಡೆನಯ್ಯಾ, ನಿಮ್ಮ ಧರ್ಮ, ನಿಮ್ಮ ಧರ್ಮ, ನಿಮ್ಮ ಧರ್ಮ

ಎಂದು ನುಡಿದಿದ್ದಾರೆ.

ತಮ್ಮ ಸೇವೆ ಉಸಿರಾಗಿ, ಕಾಯಕವೇ ಜೀವವಾಗಿ, ಪ್ರಸಾದವೇ ಪ್ರಾಣವಾಗಿ ಬಸವಣ್ಣನವರ ಮಹಾಮನೆಯಲ್ಲಿ ಮರುಳಶಂಕರದೇವರು ಹನ್ನೆರಡು ವರ್ಷ ಕಾಲಕಳೆದರು. ಸದ್ದುಗದ್ದಲವಿಲ್ಲದೆ ಅವರು ಮೌನವಾಗಿ ಸಾಗಿಸಿದ್ದರು ತಮ್ಮ ಪ್ರಸಾದಮಯ ಬದುಕನ್ನು ಹೂವರಳಿದಂತಿತ್ತು ಅವರ ಕಾಯಕ. ಇದ್ದೂ ಇಲ್ಲದಂತಿದ್ದರು ಅವರು. ಅವರ ಕಡೆಗೆ ಯಾರೂ ಲಕ್ಷ್ಯ ಕೊಟ್ಟಂತಿಲ್ಲ. ಸಾವಿರಾರು ಮಂದಿ ಮಹಾಮನೆಯ ಕೆಲಸಗಾರರಲ್ಲಿ ಅವರೂ ಒಬ್ಬರಿರಬೇಕೆಂದು ಎಲ್ಲರೂ ಭಾವಿಸಿದ್ದಂತೆ ತೋರುತ್ತದೆ. ಇನ್ನೊಬ್ಬರ ಲಕ್ಷ್ಯವನ್ನು ತಮ್ಮತ್ತ ಸೆಳೆದುಕೊಳ್ಳಬೇಕೆಂಬ ಇಚ್ಛೆ ಮರುಳಶಂಕರದೇವರಿಗೂ ಇರಲಿಲ್ಲ. ಗುಪ್ತಭಕ್ತಿ ಅವರದು. ಹನ್ನೆರಡು ವರ್ಷಗಳ ಬಳಿಕ ಅವರು ಪ್ರಕಟವಾಗುವ ಸಸಮಯ ಸನ್ನಿಹಿತವಾಯಿತು. ಮರುಳಶಂಕರರು ತಾವಾಗಿಯೇ ಈ ಸಮಯ ಬಯಸಿರಲಿಲ್ಲ. ಇಹಲೋಕದ ಅವರ ಮಣಿಹ ಪೂರ್ಣವಾಗಿತ್ತು. ‘ಉರಿಗೂಡಿ ಕರಗುವ ಕರ್ಪೂರದ ಇರವಿ’ನಂತಾಗಿದ್ದರು ಅವರು. ‘ಎಲೆಗಳೆದ ವೃಕ್ಷದಂತೆ ಉಲುಹು ಅಡಗಿ’ದವರಾಗಿದ್ದರು. ಅವರು ತಮ್ಮ ಈ ವಚನದಲ್ಲಿ ತಮ್ಮ ನಿಲವನ್ನೇ ಹೇಳಿಕೊಂಡಿದ್ದಾರೆ.

ಶಿಷ್ಯನೆಂಬ ಧರೆಯ ಮೇಲೆ ಶ್ರೀಗುರುವೆಂಬ ಬೀಜವ ಬಿತ್ತಿ
ಅರಿವೆಂಬ ಗೊಬ್ಬರವನಿಕ್ಕಿ, ಜ್ಞಾನವೆಂಬ ಉದಕವನೆರೆಯಲಿಕೆ
ಲಿಂಗವೆಂಬ ಆಕಾರ ಮೊಳೆದೋರಿತ್ತು ಕಾಣಿರೇ,
ಜಂಗಮವೆಂಬ ಸಸಿ ಬಲಿದು ವೃಕ್ಷ ಪಲ್ಲವಿಸಿತ್ತು;

ಸುಜ್ಞಾನವೆಂಬ ನನೆದೋರಿ ಬಿರಿಮುಗುಳಾಯಿತ್ತು;
ಮಹಾಜ್ಞಾನವೆಂಬ ಪುಷ್ಪ ವಿಕಸಿತವಾಯಿತ್ತು;
ಖಂಡಿತವೆಂಬ ಮುಗುಳಾಯಿತ್ತು;
ಅಖಂಡಿತವೆಂಬ ಕಾಯಿಯಾಯಿತ್ತು;

ಪರಮಜ್ಞಾನವೆಂಬ ಹಣ್ಣಾಯಿತ್ತು;
ಹಣ್ಣು ಬಲಿದು ತೊಟ್ಟು ಬಿಟ್ಟು ಬಟ್ಟಬಯಲಲ್ಲಿ ಬಿದ್ದಿತ್ತು;
ಹಣ್ಣ ಕಂಡು ನಾನು ಇದೆಲ್ಲಿಯದೆಂದು ವಿಚಾರ ಮಾಡಿಕೆ
ಬಿತ್ತಿದರಾರೆಂದು ಹೇಳುವರಿಲ್ಲ;
ಬಿತ್ತಿದವನ ಸೊಮ್ಮ ನಾನು ಕೇಳಬಾರದೆಂದು
ಹಣ್ಣಕೊಂಡು ನಾನು ಬಿತ್ತಿದಾತನನರಸಿಕೊಂಡು ಹೋಗಲಿಕೆ
ನಾನೆತ್ತ ಹೋದೆನೆಂದರಿಯೆನಯ್ಯಾ,
ಶುದ್ಧ ಸಿದ್ಧ ಪ್ರಸನ್ನ ಪ್ರಭುವೆ, ಶಾಂತ ಚೆನ್ನಮಲ್ಲಿಕಾರ್ಜುನದೇವಯ್ಯಾ
ನಿಮ್ಮ ಬಿತ್ತಿದಾತನ ಪರಿಯ ನೀವೇ ಬಲ್ಲಿರಿ
ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ, ನಿಮ್ಮ ಧರ್ಮ, ನಿಮ್ಮ ಧರ್ಮ.

ಮಾಗಿದ ಮರುಳಶಂಕರದೇವರೆಂಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವ ಸಮಯಕ್ಕೆ ಆಲ್ಲಮಪ್ರಭುದೇವ ಬಂದು ತನಗೆ ಬೇಕೆಂದು ಎತ್ತಿಕೊಂಡ.

ಅಂದು ಪ್ರಭುದೇವರು ಸೊನ್ನಲಿಗೆಯ ಸಿದ್ಧರಾಮದೇವರೊಡನೆ ಕಲ್ಯಾಣಕ್ಕೆ ಬಿಜಯಮಾಡಿದರು. ಬಸವಣ್ಣ, ಮಡಿವಾಳಯ್ಯ, ಚೆನ್ನಬಸವಣ್ಣ, ಕಿನ್ನರಿ ಬೊಮ್ಮಣ್ಣ, ಹಡಪದ ಅಪ್ಪಣ್ಣ ಮುಂತಾದ ಶರಣರು ಪ್ರಭು – ಸಿದ್ಧರಾಮರನ್ನು ಸ್ವಾಗತಿಸಿ ಮಹಾಮನೆಗೆ ಕರೆತಂದರು; ಮಹಾಮನೆಯ ದ್ವಾರವಟ್ಟ ದಾಟಿ ಒಳಬಂದರು. ಪ್ರಸಾದಕುಂಡದ ಸಮೀಪ ಬಂದರು – ಪ್ರಭುದೇವರು ಪ್ರಮಥತಿಂಥಿಣಿಯೊಡನೆ.

ಪ್ರಸಾದಕುಂಡದ ತೀರದಲ್ಲಿ ಕಾಯಕದಲ್ಲಿ ನಿರತರಾಗಿದ್ದ ಮರುಳ ಶಂಕರದೇವರು ಪ್ರಭುದೇವರನ್ನು ಕಂಡು, ವಸಂತದಲ್ಲಿ ಚೂತದಿಂದ ಕಂಪು ಪೊರಮಡುವಂತೆ, ನಲಿದು ಸೂಜಿಕಲ್ಲು ಕಾಣುತ್ತ ಸೂಜಿ ಮೆಲ್ಲನೆ ತನ್ನ ಸ್ಥಾನದಿಂದೇಳುವಂತೆ, ಪ್ರಭುದೇವರ ಶ್ರೀಚರಣದತ್ತ ತಮ್ಮ ದಿಟ್ಟಿಹೂಗಳನ್ನು ಚೆಲ್ಲಿ ಎದ್ದುನಿಂತರು. ‘ಜ್ಞಾನ ಚಕ್ಷುವಿಂಗೆ ಆತ್ಮನ ನಿಲವು ತೋರಿದಂತೆ, ಅಂಜನವುಳ್ಳವರಿಗೆ ಕಡವರದಿರವು ತೋರಿದಂತೆ’ ಪ್ರಭುದೇವರಿಗೆ ಮರುಳುಶಂಕರದೇವರ ನಿಲವು ಕಂಡಿತು. ಆಗ ಪ್ರಭುದೇವರು :

…….ನಮ್ಮ ಗುಹೇಶ್ವರಲಿಂಗದ ಕಣ್ಣ ಮುಂದೆ
ನಿಮ್ಮ ಧರ್ಮದಿಂದಲೊಂದಾಶ್ಚರ್ಯದ ಕಂಡು
ಬದುಕಿದೆ ಕಾಣಾ, ಸಂಗನಬಸವಣ್ಣಾ

ಎಂದರು. ಅದಕ್ಕೆ ಬಸವಣ್ಣನವರು :

ನಿಮ್ಮದೊಂದಾಶ್ಚರ್ಯವಿಲ್ಲವೆಂದು ಶ್ರುತಿ ಹೊಗಳುತ್ತಿರಲಾಗಿ
ನೀವು ಕಂಡಾಶ್ಚರ್ಯವಾವುದೆನಗೊಮ್ಮೆ ನಿರೂಪಿಸಾ, ಪ್ರಭುವೇ

ಎಂದು ಭಿನ್ನವಿಸಿದರು. ಆಗ ಪ್ರಭುದೇವರು :

ಬೀದಿಯಲ್ಲಿ ಬಿದ್ದ ಮಾಣಿಕ್ಯವ
ಹೂಳಿರ್ದ ನಿಧಾನವನಾರಿಗೂ ಕಾಣಬಾರದು ನೋಡಾ
ಮರಣವುಳ್ಳರಿಗೆ ಮರುಜವಣಿ ಸಿಕ್ಕುವುದೇ
ಪಾಪಿಯ ಕಣ್ಣಿಗೆ ಪರುಷ ಕಲ್ಲಾಗಿಪ್ಪಂತೆ
ಇಪ್ಪರಯ್ಯಾ ಶಿವಶರಣರು
ನಮ್ಮ ಗುಹೇಶ್ವರನ ಶರಣ ಮರುಳಶಂಕರದೇವರ
ನಿಲವ ನೋಡಾ ಸಂಗನಬಸವಣ್ಣಾ.

ಎಂದು ನುಡಿದು ಮರುಳಶಂಕರದೇವರು ಹನ್ನೆರಡು ವರ್ಷ ತಮ್ಮ ನಿಜಸ್ವರೂಪವನ್ನು ಮರೆಸಿಕೊಂಡು ಪ್ರಸಾದಗುಂಡಿಯಲ್ಲಿ ಸೇವಿಸುತ್ತಿದ್ದುದನ್ನು ವಿವರಿಸಿದರು.

ಮರುಳ ಶಂಕರದೇವರು ಪ್ರಭುದೇವರ ಸನಿಹಕ್ಕೆ ಬಂದು ಸರ್ವರಿಗೂ ಶರಣು ಮಾಡಿ: –

ಗುರುವ ಕಂಡೆನು ಎನ್ನ ಭಾಗ್ಯದ
ತರುವ ಕಂಡೆನು ಎನ್ನ ಮುಕ್ತಿಯ
ಸಿರಿಯ ಕಂಡೆನು….

ಎಂದು ಹರ್ಷದಿಂದ ನುಡಿದರು. ಮುಂದುವರಿದು : –

ಜಯ ಜಯ ತ್ರಾಹಿ ತ್ರಾಹಿ ! ಗರ್ಭದೊಳಗಣ ಶಿಶು
ನವಮಾಸವ ಹಾರಿಕೊಂಡಿರ್ದಂತೆ ಇರ್ದೆನಯ್ಯಾ
ಎನ್ನ ಜನ್ನ ಸಫಲವಾಯಿತ್ತಯ್ಯಾ !
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೇ
ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ
ಬಸವರಾದೇವರ ದಯದಿಂದ
ಪ್ರಭುದೇವರ ಶ್ರೀಮೂರ್ತಿಯಂ ಕಂಡು ಬದುಕಿದೆನು
ನಿಮ್ಮ ಧರ್ಮ, ನಿಮ್ಮ ಧರ್ಮ, ನಿಮ್ಮ ಧರ್ಮ
ಶರುಣು ಶರಣಾರ್ಥಿ ಸಕಲಪುರಾತರಿಗೆ.

ಎಂದು ನಮಸ್ಕರಿಸಿದರು. ಆ ಬಳಿಕ ಪ್ರಭುದೇವರು ಮರುಳುಶಂಕರದೇವರ ನಿಲವನ್ನು ಹೊಗಳಿ ಹಾಡಿ ತೋರಿಸಿದರು ಶರಣರಿಗೆ :

ಮರುಳುಶಂಕರನೆಬನರಿವಿನ
ತಿರುಳು ಲಿಂಗಾಗಮದ ಹೊಳಹಿನ
ಹುರುಳು ನಿರ್ಮಳ ಧರ್ಮವರ್ಮದ ಚಾರುಚಾರಿತ್ರ
ನಿರುತಶಾಂತಿಯ ಚಿತ್ತವೃತ್ತಿಯ
ಪರಮಪಾವನ ಮೂರ್ತಿಯಾತನ
ಪರಿಗಳನುಪಮತರ…….

ಕಾಮದಲಿ ಕಂಗೆಡದೆ, ಕ್ರೋಧ
ಸ್ತೋಮದಲಿ ಮುಂಗೆಡದೆ, ಲೋಭದ
ಸೀಮೆಯಲಿ ಸಿಕ್ಕದೆ, ಮಿಮೋಹದ ಬಲೆಗೆ ಬಗೆಗುಡದೆ,
ಮದೋನ್ನತ ಮತ್ಸರಂಗಳ
ನೇಮಿಸದೆ ಲಿಂಗಪ್ರಸಾದ
ಪ್ರೇಮಿಯಾದ ಮಹಾತ್ಮನೀತನು…….

ಕೇಳುವಾಳೋಕಿಸುವ ರುಚಿಸುವ
ಲೀಲೆಯಂ ಕಂಪರಿವ ಸೋಂಕುವ
ಕಾಳು ವಿಷಯೇಂದ್ರಿಯದ ತವಕದ ತೆಗೆದು ತರಹರಿಸಿ
ಬಾಳಿಕೆಗೆ ನಿರ್ಬಾಧಕದ
ಮ್ಮೇಳವೆಂದೀಶಪ್ರಸಾದದ
ಮೇಲೆ ಮಚ್ಚಿದ ಮಹಿಮನೀತನು……

ಪ್ರಭುದೇವರ ಹೊಗಳಿಕೆಗೆ ಮರುಳಶಂಕರದೇವರು ಉಬ್ಬಲಿಲ್ಲ.

ಸಿಂಬಿಗೆ ರಂಭೆತನವುಂಟೆ? ಸಂಭ್ರಮವಳಿದುದಕ್ಕೆ
ನವರಸದಂಗದ ಕಳೆಯುಂಟೆ

ಎಂದು ನುಡಿದು “ಪರುಷದ ದೆಸೆಯಿಂದ ಪಾಷಾಣದ ಕುಲ ಹರಿವಂತೆ ಬಂದೆಯಲ್ಲಾ” ಎಂದು ಸಂತೋಷಿಸಿ,

……..ನಿಮ್ಮುವ ಕಾರುಣ್ಯವಾಗಿದ್ದಲ್ಲಿ ಎನಗೆಲ್ಲಿಯ ಸುಖ
ಶುದ್ಧ ಸಿದ್ಧ ಪ್ರಸನ್ನ ಪ್ರಭುವೆ
ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ
ಪ್ರಭುದೇವರಿಂದ ಬದುಕಿದೆ.

ಎಂದು ಹರ್ಷಾತಿರೆಕದಿಂದ ವಿನಯವನ್ನು ಮೆರೆದರು ಮರುಳಶಂಕರದೇವರು.

ಮರುಳಶಂಕರದೇವರ ಚಾರಿತ್ರ, ನಿಲವು. ಅವರ ಘನತೆ ಪ್ರಭುದೇವರಿಂದ ತಿಳಿದು ಎಲ್ಲ ಪುರಾತರಿಗೆ ಆಶ್ಚರ್ಯಾನಂದನವಾಯಿತು. ಬಸವರಾಜದೇವರು ಚಿಂತಾಕ್ರಾಂತರಾಗಿ ನಡನಡ ನಡುಗಿ, ‘ಇನಿತು ದಿನವೆನ್ನ ಅಂಗಳದಲ್ಲಿ ಮಹಾಲಿಂಗೈಕ್ಯನಪ್ಪ ಶರಣನಿರುತ್ತಿರಲು ಈತನ ನಿಲವನರಿಯದೆ ಕೆಟ್ಟೆನೆಂದು’ ಅನುತಾಪಪಟ್ಟರು. “ಎನ್ನ ಭಕ್ತಿ ಸಾವಿರ ನೋಂಪಿಯ ನೋಂತು ಹಾದರದಲ್ಲಿ ಅಳಿದಂತಾಯಿತು” ಎಂದು ದುಃಖಿಸಿದರು. ಮತ್ತೆ : –

ನಡುದೊರೆಯೊಳಗೆ ಹರೆಗೋಲನಿಳಿದಂತಾಯಿತ್ತೆನ್ನ ಭಕ್ತಿ
ಮರನನೇರಿ ಕೈಯಬಿಟ್ಟಂತಾಯಿತ್ತೆನ್ನ ಭಕ್ತಿ
ಶಿವಶವಾ, ಕೆಟ್ಟೆನಲ್ಲಾ ಗುರುವೇ, ಕೂಡಲಸಂಗಮದೇವಾ
ಮರುಳುಶಂಕರದೇವರ ಕೃಪೆ
ಎನ್ನಗಿನ್ನೆಂದಪ್ಪುದು ಹೇಳಾ ಪ್ರಭುವೆ
ಎಂದು ಕಳವಳದಿಂದ ಬಿನ್ನೈಸಿದರು.

ಆಗ ಪ್ರಭುದೇವರು ಹೀಗೆ ನಿರೂಪವ ಕೊಟ್ಟರು.

ಹೂಮಿಡಿಯ ಹರಿದು ಒತ್ತಿ ಹಣ್ಣಮಾಡಿಹೆನೆಂದರೆ ಹಣ್ಣಾಗಬಲ್ಲುದೆ
ಪರಿಮಳವಿಲ್ಲದ ನನೆಯನರಳಿಸಿ ಮುಡಿದಿಹೆನೆಂದರೆ ಸೌರಭವುಂಟೆ
ಶಿವಶರಣರ ನಿಲವ ಕಾಂಬ ಕಾಲಕ್ಕೆ ಕಾಣಬಹುದಲ್ಲದೆ ಎಲ್ಲಾ ಹೊತ್ತು
ಕಾಣಬಹುದೆ
ಆಹ ಕಾಲಕ್ಕೆ ತಾನೆಯಪ್ಪುದು
ಗುಹೇಶ್ವರನ ಶರಣರ ನಿಲವ ಕಂಡಬಳಿಕ
ಮಱಹು, ಬೆಳಗ ಕಂಡ ಕತ್ತಲೆಯಂತೆ ಹರಿವುದು
ನೋಡಾ ಸಂಗನ ಬಸವಣ್ಣಾ

ಪ್ರಭುದೇವರ ಸಾಂತ್ವನಪರ ಜೇನುನುಡಿಯನಾಲಿಸಿ ಬಸವಣ್ಣನವರು : –

ಮುಗಿಲ ಮರೆಯ ಮಿಂಚಿನಂತೆ, ಒಡಲ ಮರೆಯ ಆತ್ಮನಂತೆ,
ನೆಲದ ಮರೆಯ ನಿಧಾನದಂತೆ ಇಪ್ಪ ನಿಮ್ಮ ನಿಲವನಾರು ಬಲ್ಲರು
ದೇವಾ, ನಿಮ್ಮ ನಿಲವ ಹಲಕಾಲದಿಂದ ಕಂಡು ಕಂಡು ಕಡೆಗಣಿಸಿ
ಮರೆದು ಮತಿಗೆಟ್ಟು ಮರುಳಾದೆನು
ಎನ್ನ ತಪ್ಪಿಂಗೆ ಕಡೆಯಿಲ್ಲ ಕಾಣಾ,
ತ್ರಾಹಿ ತ್ರಾಹಿ, ಕಾಯಯ್ಯಾ ಕೂಡಲಸಂಗಮದೇವಾ.

ಎಂದು ನೊಂದು ನಿಮ್ಮ ಶರಣರ ನಿಲವನರಿಯೆನೆಂದು ಪ್ರಭುದೇವರಿಗೆ ಬಿನ್ನೈಸಿ ಮರುಳುಶಂಕರದೇವರ ಶ್ರೀಪಾದಕ್ಕೆ ಶರಣೆಂದರು. ಮರುಳಶಂಕರದೇವರು ಅದಕ್ಕೆ: –

……ನಿಮ್ಮ ಶರಣ ಬಸವಣ್ಣ ಲೋಕದ ಮರ್ತ್ಯನೆಂದರೆ
ಅಘೋರ ನರಕ ಕಾಣಾ
……………………………..
ನಿಮ್ಮ ಶರಣ ಬಸವಣ್ಣನ ನಿಲವಿನ ಪರಿಯ
ನೀವೇ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ

ಎಂದು ಬಸವರಾಜದೇವರನ್ನು ಕೊಂಡಾಡಿದರು. ಆಗ ಬಸವರಾಜದೇವರು ಹೃದಯವುಕ್ಕಿ ಮರುಳಶಂಕರದೇವರ ಘನವನು ಹೀಗೆ ಹೊಳಗಿ ಹಾಡಿದರು : –

ಕಂಗಳೊಳಗೆ ಕರುಳಿಲ್ಲ, ಕಾಯದೊಳಗೆ ಮಾಯವಿಲ್ಲ
ಮನದೊಳಗೆ ಅಹಂಕಾರವಿಲ್ಲ
ದೇಹವೆಂದರಿಯ, ನಿರ್ದೇಹವೆಂದರಿಯ
ಜಂತ್ರದ ಸೂತ್ರದಂತಿಪ್ಪ ನಿಬ್ಬೆರಗಿನ ಮೂರ್ತಿಯ ನೋಡಾ
ಲಿಂಗಜಂಗಮದ ಒಕ್ಕು ಮಿಕ್ಕು ಪ್ರಸಾದವ ಕೊಂಡು
ಮಿಕ್ಕುಮೀರಿ ನಿಂದ ಮಹಾಪ್ರಸಾದಿ ನೋಡಾ
ತನ್ನನರಿದಿಹರೆಂದು ಜಗದ ಕಣ್ಣಿಗೆ ಮಾಯದ ಮಂಜು ಕವಿಸೆ
ನಿಜಪದದಲ್ಲಿ ತದುಗತನಾದ
ಕೂಡಲಸಂಗಮದೇವರಲ್ಲಿ ಮರುಳಶಂಕರದೇವರ
ನಿಲವ ನೋಡಾ, ಚೆನ್ನಬಸವಣ್ಣಾ.

ಆ ಬಳಿಕ ಎಲ್ಲ ಶರಣರು ಮರುಳಶಂಕರದೇವರ ನಿಲವನ್ನು ಕೊಂಡಾಡಿದರು. ಮರುಳಶಂಕರದೇವರು ಅವರೆಲ್ಲರನ್ನು ವಿನಯದಿಂದ ಒಂದೇ ವಚನದಲ್ಲಿ ಸ್ತುತಿಸಿದರು : –

ಎನ್ನ ಜ್ಞಾನಾತ್ಮನ ಚೇತನನಯ್ಯಾ ಪ್ರಭುದೇವರು,
ಎನ್ನ ಪರಮಾತ್ಮನ ಚೇತನನಯ್ಯಾ ಸಿದ್ಧರಾಮಯ್ಯದೇವರು,
ಎನ್ನ ಚಿನ್ಮಯಾತ್ಮನ ಚೇತನನಯ್ಯಾ ಸಂಗನಬಸವಣ್ಣನು,
ಎನ್ನ ನಿರ್ಮಳಾತ್ಮನ ಚೇತನನಯ್ಯಾ ಷಡುಸ್ಥಲಬ್ರಹ್ಮಿ ಚೆನ್ನಬಸವಣ್ಣನು,
ಎನ್ನ ಮಹಾತ್ಮನ ಚೇತನನಯ್ಯಾ ಬಸವಣ್ಣನ ನಿಜಸುಖಿ ಅಪ್ಪಣ್ಣನು,
ಎನ್ನ ಜೀವಾತ್ಮನ ಚೇತನನಯ್ಯಾ ಮಡಿವಾಳ ಮಾಚಯ್ಯನು,
ಎನ್ನರಿವಿನ ಚೇತನಾತ್ಮಕನಯ್ಯಾ ಕಿನ್ನರವ್ರಹ್ಮಯ್ಯನು,
ಇಂತಪ್ಪ ಪ್ರಮಥರ ಕರುಣದಿಂದ,
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ,
ಶಾಂತ ಚೆನ್ನಮಲ್ಲಿಕಾರ್ಜುನದೇವಯ್ಯಾ ಬದುಕಿದೆನು,
ನಿಮ್ಮ ಧರ್ಮ, ನಿಮ್ಮ ಧರ್ಮ, ನಿಮ್ಮ ಧರ್ಮ.

ಮುಂದುವರಿದು ಮರುಳಶಂಕರದೇವರು ಅನುಭಾವವನ್ನು ಹೇಳಿ ತಮ್ಮ ಐಕ್ಯವನ್ನು ಸೂಚಿಸಿದರು: –

ಸಂಸಾರವೆಂಬ ಸಾಗರವ ದಾಂಟುವರೆ ಅರಿಹೆಂಬ ಹರಿಗೋಲನಿಕ್ಕಿ
ಜ್ಞಾನವೆಂಬ ಅಂಬಿಗ ಹರಿಗೋಲೊಳಗೆ ಕುಳ್ಳಿರ್ದು, ಸುಜ್ಞಾನವೆಂಬ
ಸಟ್ಟುಗವ ಪಿಡಿದು, ಮಹಾಜ್ಞಾನವೆಂಬ ಘಾತಗಳೆಯಂ ಪಿಡಿದು
ನಾನೀ ಹೊಳೆಯಂ ಕಂಡು ಅಂಬಿಗನ ಕೇಳಿದರೆ ನಾ ನಿನ್ನ ಹಾಯಿಸಿ
ಕೊಟ್ಟೇನೆಂದನು. ನಾನು ನಿನ್ನ ನಂಬಿ ಹರಿಗೋಲನೇರಿದೆನು ಕಾಣಾ
ಅಂಬಿಗರಣ್ಣಾ. ಇಂದು ನಾನು ಹರಿಗೋಲಲ್ಲಿ ಕುಳ್ಳಿರ್ದು ನಡು
ಹೊಳೆಯಲ್ಲಿ ಹೋಗಲಿಕೆ ಕಾಮವೆಂಬ ಕೊರಡು ಅಡ್ಡಬಿದ್ದಿತ್ತು.
ಕ್ರೋಧವೆಂಬ ಸುಳುಹಿನೊಳಗೆ ಸಿಕ್ಕಿತ್ತು.
ಅಹಂಕಾರವೆಂಬ ಮೀನು ಬಂದು ನಿಂದಿತ್ತು.
ಮಾಯವೆಂಬ ಮೊಸಳೆ ಬಾಯ ಬಿಡುತ್ತಿದ್ದಿತ್ತು. ಮೋಹವೆಂಬ ನೊರೆತೆರೆ ಹೆಚ್ಚಿ
ಬರುತ್ತಿದ್ದಿತ್ತು. ಲೋಭವೆಂಬ ಕಡಲು ಎಳೆದೊಯಿವುತ್ತಿದ್ದಿತು. ಮದವೆಂಬ
ಮರಹು ನೂಕುತ್ತಿದ್ದಿತ್ತು. ಮತ್ಸರವೆಂಬ ಗಾಳಿ ತಲೆಕೆಳಗು ಮಾಡುತ್ತಿದ್ದಿತ್ತು.
ಇವೆಲ್ಲವನೂ ಪರಿಹರಿಸಿ ಎನ್ನ ಹೊಳೆಯ ದಾಂಟಿಸಿದನು ಅಂಬಿಗರಣ್ಣನು.
ಹೊಳೆಯ ದಾಂಟಿಸಿದ ಕೂಲಿಯ ನನ್ನ ಬೇಡಿದರೆ,
ಕೂಲಿಯ ಕೊಡಲೇನೂ ಇಲ್ಲ ಎಂದರೆ
ಕೈಸೆರೆಯಾಗಿ ಎನ್ನ ಸೆಳೆದೊಯ್ದನಯ್ಯಾ, ಅರುವೆಯ ಕೊಟ್ಟ ಕೂಲಿಗೆ ಕಱುವ
ಕಾಯಿಸಿಕೊಂಡನಯ್ಯಾ : ಅರಿಯದೆ ಹರಿಗೋಲನ್ನೇರಿ ತೊರೆದು ದಾಂಟಿದ
ಕೂಲಿಗೆ ಕರುವ ಕಾದೆ ಕಾಣಾ, ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೇ
ಶಾಂತ ಚೆನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮ ನಂಬಿ ನಾನು ಕೆಟ್ಟು ಬಟ್ಟಬಯಲಾಗಿ
ನಿಂದೆನಯ್ಯಾ, ನಿಮ್ಮ ನಿಮ್ಮ ಧರ್ಮ, ನಿಮ್ಮ ಧರ್ಮ, ನಿಮ್ಮ ಧರ್ಮ.

ಅಲ್ಲಮಪ್ರಭು ಮರುಳುಶಂಕರದೇವರನು ಒಲಿದು ಪರಮಾನಂದದಿಂದ ನೋಡಿದರು; ನಿಜಪದವಿಯನ್ನು ಕೊಟ್ಟರು.

ಹಲವು ಯುಗಯುಗ ಜನ್ಮ ಜನ್ಮಂ
ಗಳಲಿ ಸಾಧಿಸಿ ಭೇದಿಸುವ ನಿ
ರ್ಮಳ ನಿರಾಕುಳ ಸಿದ್ಧ ಶಿವತತ್ವಾನುಭಾವನೆಯ
ಫಲವನೊಂದೇ ನಿಮಿಷದಲಿ ನೆರೆ
ನಿಲಿಸಿ ನಿಜಪದವಿಯನು ಕೊಟ್ಟನು
ಸುಲಭದಲಿ ಶಂಕರಗೆ ನಮ್ಮಯ ಗುರುಗುಹೇಶ್ವರನು

ಮರುಳಶಂಕರದೇವರು ಕೆಳಗಿನ ವಚನವನ್ನು ಹಾಡಿ ನಿರವಯವಾದರು:

……………ಅಸಂಖ್ಯಾತ ಪುರಾತನರು
ಪ್ರಭುದೇವರು ಮುಖ್ಯವಾದ ನಿಲವಿನ ಶ್ರೀಚರಣಕ್ಕೆ
ನಾನು ಶರಣಾರ್ಥಿ ಶರಣಾರ್ಥಿ ಎಂದು ಶಬ್ದಮುಗ್ಧವಾಗಿ,
ಉರಿಯುಂಡ ಕರ್ಪುರದಂತೆ ನಿಮ್ಮ ಶ್ರೀ ಚರಣವನ್ನೈದಿದೆನಯ್ಯಾ
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೇ,
ಶಾಂತ ಚೆನ್ನಮಲ್ಲಿಕಾರ್ಜುನದೇವಯ್ಯಾ
ನಿಮ್ಮ ಶರಣ ಬವಣ್ಣನ ಪ್ರಸಾದವ ಕೊಂಡು
ನಾನು ಬಸವಣ್ಣನ ಮುಂದೆ ಬಯಲಾಗಿ ಹೋದೆನಯ್ಯಾ
ನಿಮ್ಮ ಧರ್ಮ, ನಿಮ್ಮ ಧರ್ಮ, ನಿಮ್ಮ ಧರ್ಮ.

ಮರುಳಶಂಕರದೇವರ ವ್ಯಕ್ತಿತ್ವ

ಮರುಳಶಂಕರದೇವರ ಚರಿತ್ರೆ ಒತ್ತಟ್ಟಿಗೆ ಸಮಗ್ರವಾಗಿ ದೊರಕುವುದಿಲ್ಲ. ಶಾಂತಲಿಂಗದೇಶಿಕನ ‘ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರ ರತ್ನಾಕರ’ದಲ್ಲಿ ಬಹು ಸಂಕ್ಷಿಪ್ತವಾಗಿದೆ ಇವರ ಚರಿತ್ರೆ. ‘ಪ್ರಭುಲಿಂಗ ಲೀಲೆ’ ಮತ್ತು ‘ಶೂನ್ಯಸಂಪಾದನೆ’ಯಲ್ಲಿ ಈ ಶರಣರ ಸಾಧಕ, ಅನುಭಾವ ಜೀವನದ ಚಿತ್ರವಿದೆ. ಇನ್ನುಳಿದ ಪುರಾಣ ಕಾವ್ಯಗಳಲ್ಲಿ ಇವರ ಚರಿತ್ರೆ ಬರುವುದಿಲ್ಲ. ‘ಚೆನ್ನಬಸವಪುರಾಣ’ ಮುಂತಾದ ಕೆಲವು ಕಾವ್ಯಗಳಲ್ಲಿ ಇವರ ಹೆಸರಷ್ಟೇ ಬರುತ್ತದೆ. ಮರುಳಶಂಕರದೇವರು ಯಾರು? ಇವರ ತಂದೆ – ತಾಯಿ ಯಾರು? ಎಂಬುದು ತಿಳಿದುಬರುವುದಿಲ್ಲ.

ಶರಣರ ಚರಿತ್ರೆಯಲ್ಲಿ ಮರುಳಶಂಕರದೇವರ ಚರಿತ್ರೆ ಫಕ್ಕನೆ ಹೊಳೆದು ಮರೆಯಾದ ಮಿಂಚಿನಂತಿದೆ. ಇದ್ದೂ ಇಲ್ಲದಂತಿದ್ದ ಅವರು ಎಲ್ಲರ ಕಣ್ಣಿಗೆ ಬೀಳುವುದು ಅಲ್ಲಮಪ್ರಭುಗಳು ಕಲ್ಯಾಣಕ್ಕೆ ಬಂದ ಸಮಯದಲ್ಲಿ. ಅವರು ಶರಣರಿಗೆ ಕೊಟ್ಟ ಆ ದರ್ಶನವೇ ಕೊನೆಯದಾಗುತ್ತದೆ. ಆ ದರ್ಶನ ದಿವ್ಯದರ್ಶನ, ಶರಣರ ಆತ್ಮದ ಕಂಗಳನ್ನು ತೆರೆಸಿದ ದರ್ಶನ.

ಮಹಾಮನೆಯ ಕಾಯಕದಲ್ಲಿ ಹಗಲಿರುಳು ನಿರತರಾಗಿದ್ದ ಮರುಳಶಂಕರದೇವರ ಮೌನದಲ್ಲಿ ಮಹತ್ತು ಅಡಗಿತ್ತು; ಅನುಭಾವ ಹುದುಗಿತ್ತು; ಅವರು ಸಾಧಿಸಿದ ನಿಜದ ನಿಲವು ಅರಳಿತ್ತು.

ಮರುಳಶಂಕರರು ಮುಖ್ಯವಾಗಿ ಪ್ರಸಾದಿಗಳು. ಈ ಸ್ಥಲದಲ್ಲಿ ನಿಂತೆ ಅವರು ಇನ್ನುಳಿದ ಸ್ಥಲಗಳನ್ನು ಸಾಧಿಸಿದರು. ಅವರ ಅಂಕಿತ ‘ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೇ’ – ಎಂಬುದು. ಅವರು ಸರ್ವ ವಿಧದ ಪ್ರಸಾದವನ್ನು ಸಾಧಿಸಿ ಶಿವಪ್ರಸನ್ನತೆಯನ್ನು ಪಡೆದಿದ್ದರೆಂಬುದನ್ನು ತೋರಿಸುತ್ತದೆ.

ಅವರ ಈ ವಚನ ಅವರ ಜೀವನಕ್ಕೆ ಬರೆದ ಭಾಷ್ಯದಂತಿದೆ :

ಇಷ್ಟಲಿಂಗಕ್ಕೆ ಅಂಗವನರ್ಪಿತವ ಮಾಡಬೇಕು
ಪ್ರಾಣಲಿಂಗಕ್ಕೆ ಮನ ಸಮರ್ಪಿಸಬೇಕು
ಭಾವಲಿಂಗಕ್ಕೆ ತೃಪ್ತಿಯನರ್ಪಿತವ ಮಾಡಬೇಕು
ಮರ್ಮವನರಿದು ಮಾಡಬಲ್ಲೊಡೆ ಪ್ರಸಾದಿಯು

ಅದೆಂತೆಂದೊಡೆ :

ಇಷ್ಟಲಿಂಗಾರ್ಪಿತಂ ಲಿಂಗ | ಪ್ರಾಣಲಿಂಗಾರ್ಪಿತಂ ಮನಃ |
ಭಾವಲಿಂಗಾರ್ಪಿತಂ ತೃರ್ಪಿ | ಇತಿ ಭೇದಂ ವರಾನನೇ ||

ಎಂದುದಾಗಿ,

ಲಿಂಗಕ್ಕೆಯೂ ತನಗೆಯೂ ಎಡೆದೆರಹಿಲ್ಲದೆ
ಲಿಂಗಸಹಿತವಾಗಿಯೇ ಕೇಳುವ, ಲಿಂಗಸಹಿತವಾಗಿಯೇ ಘ್ರಾಣಿಸುವ,
ಲಿಂಗಸಹಿತವಾಗಿಯೇ ರುಚಿಸುವ, ಲಿಂಗಸಹಿತವಾಗಿಯೇ ನೋಡುವ,
ಲಿಂಗಸಹಿತವಾಗಿಯೇ ತೊಳಲುವ, ಬಳಲುವ, ತೊಳಗುವ
ಇಂತಪ್ಪ ಮಹಾಮಹಿಮ ಸದ್ಭಕ್ತನ ಅಂಗವೆಲ್ಲವೂ ಲಿಂಗ,
ಸಂಗವೆಲ್ಲವೂ ಲಿಂಗ, ಅಂಗಸಂಗವೆಲ್ಲರೂ ಲಿಂಗಸಂಗವಾದ ಕಾರಣ
ಅಂಗಕ್ರಿಯೆಗಳೆಲ್ಲವೂ ಲಿಂಗಕ್ರಿಯೆಗಳಾದ ಕಾರಣ
ಅಂಗಭೋಗವೆಲ್ಲವೂ ಲಿಂಗಭೋಗವಾದ ಕಾರಣ
ಇಂತಪ್ಪ ಮಹಾಮಹಿಮ ಸದ್ಭಕ್ತನ ಶ್ರೀ ಚರಣಕ್ಕೆ
ನನ್ನ ಶಿರವನಿರಿಸಿ ಪೂಜಿಸುವೆ ಕಾಣಾ
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೇ,
ಶಾಂತ ಚೆನ್ನಮಲ್ಲಿಕಾರ್ಜುನದೇವಯ್ಯ
ನಿಮ್ಮ ಸದ್ಭಕ್ತನ ನಿಲವಿನ ಪರಿಯ ನೀವೇ ಬಲ್ಲಿರಲ್ಲದೆ
ನಾನೆತ್ತಬಲ್ಲೆನಯ್ಯಾ, ನಿಮ್ಮ ಧರ್ಮ, ನಿಮ್ಮ ಧರ್ಮ, ನಿಮ್ಮ ಧರ್ಮ.

ಭಕ್ತನ ಜೀವನವೇ ಲಿಂಗಕ್ಕೆ ಪ್ರಸಾದವಾಗಬೇಕು. ಪ್ರಸಾದಿಯ ಬಾಳಿನ ಗುರಿಯೇ ತನ್ನನ್ನು ಪ್ರಸಾದರೂಪದಲ್ಲಿ ಶಿವನಿಗರ್ಪಿಸುವುದಾಗಿರುತ್ತದೆ. ಮರುಳಶಂಕರದೇವರು ತಮ್ಮನ್ನು ಹೇಗೆ ಅರ್ಪಿಸಿಕೊಂಡರೆಂಬುದು ಚೆನ್ನಬಸವಣ್ಣನವರ ಈ ವಚನದಿಂದ ತಿಳಿಯುತ್ತದೆ :

ತುದಿಮೊದಲಿಲ್ಲದ ಘನವ ನೋಡಾ,
ಒಳಹೊರಗಿಲ್ಲದ ಅನುವ ನೋಡಾ
ಗುರುಲಿಂಗಜಂಗಮ ತಾನೆಯಾಗಿ,
ಮತ್ತೆ ತಾನೆಂಬುದೇನೂ ಇಲ್ಲದ ಪರಿಯ ನೋಡಾ
ತನ್ನ ತಾ ನಿರ್ದೇಶೆಯ ಮಾಡಿಕೊಂಡು
ನಿಜಪದನೆಯ್ದಿಪ್ಪ ಪರಿಯ ನೋಡಾ
ಕೂಡಲ ಚೆನ್ನಸಂಗಮದೇವರಲ್ಲಿ ಪ್ರಸಾದಿಯಾಗಿಪ್ಪ ಮರುಳಶಂಕರದೇವರ
ನಿಲವ ನೋಡಾ

‘ತನ್ನ ತಾ ನಿರ್ದೆಶೆಯ ಮಾಡಿಕೊಂಡ’ – ಎಂದರೆ ತನ್ನನ್ನು ಇಲ್ಲದಂತೆ ಮಾಡಿಕೊಂಡ, ಎಂದರೆ ತನ್ನ ಸರ್ವಸ್ವವನ್ನು ಶಿವನಿಗರ್ಪಿಸಿದನು; ಹಾಗೆಸಗಿ ನಿಜಪದವನೆಯ್ದಿದನು. ಈ ವಚನದಲ್ಲಿ ಪ್ರಸಾದಿ ಮರುಳಶಂಕರದೇವರ ಘನತೆ, ಅವರ ವ್ಯಕ್ತಿತ್ವ ಸ್ಫುಟವಾಗಿ ಮೂಡಿನಿಂತಿದೆ.