ತಮ್ಮನ್ನು ಈ ಎತ್ತರಕ್ಕೆ ಎತ್ತಿದ್ದು ಬಸವಣ್ಣನವರ ಪ್ರಸಾದವೆಂದು ವಿನಯದಿಂದ ಎದೆದುಂಬಿ ಹೇಳಿದ್ದಾರೆ – ಮರುಳಶಂಕರದೇವರು.

…….ಪಾದತೀರ್ಥದಲಿ ಬೆಳೆಸ ಬಿತ್ತಿ,
ಕ್ರಿಯೆಯಿಂದಾದ ಬೆಳೆಸಿರಿವಂತನಾಗಿ,
ಲಿಂಗಕ್ಕಿತ್ತ, ಗುರುವಿಂಗಿತ್ತ, ಜಂಗಮಕ್ಕಿತ್ತಾತ ಬಸವಣ್ಣ
ಬಸವಣ್ಣನಿಂದ ಕ್ರಿಯಾವಂತನೆಂದರಿದು
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ,
ಶಾಂತ ಚೆನ್ನಮಲ್ಲಿಕಾರ್ಜುನದೇವಯ್ಯಾ
ನಿಮ್ಮ ಶರಣ ಸಂಗನಬಸವಣ್ಣನ ಪ್ರಸಾದವ
ಹಾಸಿ ಹೊಯ್ದುಕೊಂಡೆನಯ್ಯಾ
ನಿಮ್ಮ ಧರ್ಮ, ನಿಮ್ಮ ಧರ್ಮ, ನಿಮ್ಮ ಧರ್ಮ.

ಪ್ರಭುದೇವರು ಬಯಲೊಡಲಿಗರು; ಅವರು ಏರಿದ ಎತ್ತರಕ್ಕೆ ಯಾರೂ ಏರಿರಲಿಲ್ಲ. ಅಂಥ ಪ್ರಭುದೇವರೇ ಮರುಳುಶಂಕರದೇವರನ್ನು ಕಂಡ ಬಳಿಕ :

ಆದಿಯ ಸಂಗಮುಖಕ್ಕರ್ಪಿಸಿ, ಅನಾದಿಯ ಪ್ರಾಣಮುಖಕ್ಕರ್ಪಿಸಿ,
ಮನವೆಂಬುದ ಅರುವಿನ ಮುಖಕ್ಕರ್ಪಿಸಿ,
ತಾನೆಂಬುದ ನಿರಾಕಾರದಲ್ಲಿ ನಿಲಿಸಿ,
ಪರಿಣಾಮ ಪ್ರಸಾದದಲ್ಲಿ ತದ್ಗತನಾಗಿ,
ಪ್ರಸಾದವೇ ಪ್ರಾಣವಾಗಿ, ಪ್ರಸಾದವೇ ಕಾಯವಾಗಿ,
ಪ್ರಸಾದವೇ ಜ್ಞಾನ, ಪ್ರಸಾದವೇ ಧ್ಯಾನ,
ಪ್ರಸಾದವೇ ಲಿಂಗಭೋಗೋಪಭೋಗಿಯಾಗಿಪ್ಪ
ನಮ್ಮ ಗುಹೇಶ್ವರಲಿಂಗದಲ್ಲಿ ನಿಜಪ್ರಸಾದಿ
ಮರುಳಶಂಕರದೇವರ ನಿಲವ ನೋಡಾ ಸಂಗನಬಸವಣ್ಣಾ.

ಎಂದು ಹೇಳಬೇಕಾದರೆ ಮರುಳುಶಂಕರದೇವರು ಸಾಧಿಸಿದ ನಿಲವು ಎಂತಹದಿರಬೇಕು!

ಕಣ್ಣಿನೊಳಗಣ ಬೊಂಬೆಯ ಸೂತ್ರದ ಇರವಿನಂತೆ,
ಕುಂದಣದೊಳಡಗಿ ತೋರುವ ಮೃದುಛಾಯೆಯಂತೆ,
ನವನೀತದೊಳಡಗಿದ ಸಾರದ ಸವಿಯಂತೆ

ಮರುಳಶಂಕರರ ನಿಲವಿತ್ತು. ಆದುದರಿಂದ ಆ ನಿಲವು,

ಅಂಗವಿಲ್ಲದ ಕುರುಹು, ಭಾವವಿಲ್ಲದ ಬಯಲು, ಬೆಳಗನರಿಯದ ಜ್ಯೋತಿ.

‘ಮಹಾ ಪ್ರಸಾದಿ’ಯೆಂದು ಬಸವಣ್ಣನವರು ಮರುಳಶಂಕರರನ್ನು ಸ್ತುತಿಸುತ್ತಾರೆ.

ಕಂಗಳೊಳಗೆ ಕರುಳಿಲ್ಲ, ಕಾಯದೊಳಗೆ ಮಾಯವಿಲ್ಲ
……………………………………………………………………….
ಲಿಂಗಜಂಗಮದ ಒಕ್ಕುಮಿಕ್ಕು ಪ್ರಸಾದವ ಕೊಂಡು
ಮಿಕ್ಕುಮೀರಿ ನಿಂದ ಮಹಾಪ್ರಸಾದಿ ನೋಡಾ

ಬಸವಣ್ಣನವರ ಪ್ರಸಾದವನ್ನೇ ಹಾಸಿ ಹೊದ್ದುಕೊಂಡ ಮರುಳಶಂಕರದೇವರು ಬಸವಣ್ಣನವರಿಂದಲೇ ‘ಮಹಾಪ್ರಸಾದಿ’ ಎನಿಸಿಕೊಳ್ಳಬೇಕಾದರೆ ಸಾಮಾನ್ಯವೇ? ಪ್ರಸಾದದಲ್ಲಿ ಒಂದು ತೂಕ ಬಸವಣ್ಣನವರಿಗಿಂತ ಹೆಚ್ಚಾದರು ಮರುಳಶಂಕರದೇವರು.

ಶರಣರು ಮರುಳಶಂಕರರ ಬಗ್ಗೆ ಹೇಳಿದ ಮಾತುಗಳಲ್ಲಿ ಅವರ ವ್ಯಕ್ತಿತ್ವ ಸ್ಫುಟವಾಗಿ ಮೂಡಿ ನಿಂತಿದೆ :

ಮರುಳಶಂಕರದೇವರ ಘನವಾದ ವ್ಯಕ್ತಿತ್ವದ ವೈಶಿಷ್ಟ್ಯದಲ್ಲಿ ವೈಶಿಷ್ಟ್ಯವೆಂದರೆ ಅವರು ಕಾಯವಿಡಿದು ನಿರ್ಮಾಯರಾದುದು. ಬಸವಣ್ಣನವರಿಗೆ ಇದು ಚೋದ್ಯವಾಗಿ ತೋರಿದರೆ ಚೆನ್ನಬಸವಣ್ಣನವರಿಗೆ ಅದು ಸಹಜವಾಗಿ ತೋರಿತು. ಕಾಯವೆಂಬ ಕಂಥೆಯ ಕಳೆಯದೆ ಶರಣರು ಬಯಲಾಗಬಲ್ಲರು.

ಆದಿಯಲ್ಲಿ ಹುಟ್ಟಿತ್ತಲ್ಲ, ಅನಾದಿಯಲ್ಲಿ ಬೆಳೆಯಿತ್ತಲ್ಲ
…………………………………………………………….
ಎಂತಿರ್ದಡಂತೆ ಬ್ರಹ್ಮ ನೋಡಾ
ಮನಮನ ಲೀಯವಾಗಿ, ಘನಘನ ಒಂದಾದರೆ
ಮತ್ತೆ ಮನಕ್ಕೆ ವಿಸ್ಮಯಮಾಡಲುಂಟೆ?
ಕೂಡಲಚೆನ್ನಸಂಗನ ಶರಣರು ಕಾಯವೆಂಬ ಕಂಥೆಯ ಕಳೆಯದೆ
ಬಯಲಾದರೆ
ನಿಜವೆಂದು ಪರಿಣಾಮಿಸಬೇಕಲ್ಲದೆ
ನಂತಿಂತೆನಲುಂಟೆ ಸಂಗನಬಸವಣ್ಣಾ

ಕಾಯವೆಂಬ ಕಂಥೆಯನ್ನು ಕಳೆಯದೆ ಮರುಳಶಂಕರದೇವರು ನಿರ್ವಯಲಾದರು ಎಂಬುದು ಮೇಲಿನ ವಚನದಿಂದ ಗೊತ್ತಾಗುತ್ತದೆ.

ಮರುಳಶಂಕರದೇವರ ವ್ಯಕ್ತಿತ್ವದ ಇನ್ನೊಂದು ವೈಶಿಷ್ಟ್ಯವೆಂದರೆ ಅವರ ಜೀವನ ಶುದ್ಧ, ಸಿದ್ದ, ಪ್ರಸಿದ್ಧ ಪ್ರಸನ್ನತೆಯಿಂದ ತುಂಬಿದುದು. ಎಲ್ಲಿಯೂ ಕುಂದೆಂಬುದಿಲ್ಲ ಅವರ ಬಾಳಿನಲ್ಲಿ. ಬಸವಣ್ಣನಂಥವರೂ ಪ್ರಭುದೇವರಿಂದ ಬುದ್ಧಿ ಹೇಳಿಸಿಕೊಳ್ಳಬೇಕಾಯಿತು. ಇನ್ನುಳಿದ ಶರಣರನ್ನು ಪ್ರಭು ಅವರವರ ಅಂತಸ್ತಿಗೆ ತಕ್ಕಂತೆ ತಿದ್ದಿದ್ದಾನೆ. ಆದರೆ ಮರುಳಶಂಕರದೇವರ ಜೀವನ ತಿದ್ದಲೆಡೆಯಿಲ್ಲದುದಾಗಿತ್ತು. ಪ್ರಭುಗಳ ಮೊದಲಿನ ನೋಟಕ್ಕೇನೇ “ಜ್ಞಾನಚಕ್ಷುವಿಂಗೆ ಆತ್ಮನ ನಿಲವು ತೋರಿದಂತೆ” ಅವರ ನಿಲುಕಡೆ ಹೊಂಗಿ ತೋರಿತು. “ಅರಿವಿಂಗಸಾಧ್ಯ, ಉಪಮೆಗೆ ಕಡೆಮುಟ್ಟದು” ಎನ್ನುತ್ತಾರೆ. ಕೊನೆಗೆ ಪ್ರಭುದೇವರು ಅವರ ನಿಲವನ್ನು ಕುರಿತು ಆಡಿ, ಮಾತಾಡಿ, ನುಡಿಸಿ, ಜರಿದು, ಜಡಿದು, ಹರಸಿ ಭಕ್ತರಿಗೆ ನಿತ್ಯಪದವಿಯ ಕೊಡುವ ಪ್ರಭುದೇವರು ‘ಗುಹೇಶ್ವರನ ಶರಣ ಅಲ್ಲಯ್ಯನ ಇರವನೊಳಗೊಂಡ ಪರಮಪ್ರಸಾದಿ ಮರುಳುಶಂಕರದೇವರಿಗೆ ಪರಮಾನಂದದಿಂದ ನೋಡಿ ಸುಲಭದಲ್ಲಿ ನಿಜಪದವಿಯನ್ನು ಕೊಟ್ಟರು.

‘ಕಾಯಕದಲ್ಲಿ ನಿರತನಾದರೆ ಗುರುದರ್ಶನವಾದರೂ ಮರೆಯಬೇಕು’ ಎಂಬ ವಚನಕ್ಕಿಂತಲೂ ಒಂದು ಹೆಜ್ಜೆ ಮುಂದಿದ್ದರು ಮರುಳಶಂಕರದೇವರು. ಗುರು – ಲಿಂಗ – ಜಂಗಮ – ಪ್ರಸಾದ – ಎಲ್ಲವೂ ಕಾಯಕವಾಗಿತ್ತು ಈ ಶರಣರಿಗೆ. ಜೀವನದ ಗುರಿ. ಅರಿವು, ಆಚಾರ – ಎಲ್ಲವೂ ಒಂದಾದ ಘನತೆ ಮರುಳಶಂಕರದೇವರದು, ಈ ಎಲ್ಲವೂ ಒಂದಾದುದು ಅವರ ಕಾಯಕದಲ್ಲಿ. ಅವರ ಕಾಯಕ ಸೂರ್ಯೋದಯದಷ್ಟೇ ಹೂವರಿಳಿದಷ್ಟೇ, ಉಸಿರಾಟದಷ್ಟೇ ಸಹಜವಾಗಿತ್ತು; ಗದ್ದಲವಿಲ್ಲ, ಸದ್ದಿಲ್ಲ; ಗಡಿಬಿಡಿಯಿಲ್ಲ. ಕಾಯಕವೇ ಕೈಲಾಸವೆಂದರು ಬಸವಣ್ಣನವರು. ಕೈಲಾಸಕ್ಕಿಂತಲೂ ನೂರ್ಮಡಿ ಸಾಸಿರ್ಮಡಿ ಘನತೆವುಳ್ಳವರಾಗಿ ಬಾಳಿದ ಮರುಳಶಂಕರದೇವರು ತಾವೇ ಮಹಾಕಾಯಕವಾಗಿದ್ದರು. ಕಾಯಕವನ್ನು ಬಿಟ್ಟು ಅವರ ಜೀವನದಲ್ಲಿ ನಾವು ಇನ್ನೊಂದನ್ನು ಕಾಣುವುದಿಲ್ಲ. ಪ್ರಸಾದಸಿದ್ಧಿಗೆ ಪ್ರಸಾದಕುಂಡದ ಸೇವೆ ಕೈಕೊಂಡು ಹಗಲಿರುಳು ಎಡೆವಿಡದೆ ಕಾಯಕಗೈದ ಮರುಳಶಂಕರದೇವರು ಕೇವಲ ಪ್ರಸಾದಮಯವಾದ ಕಾಯವಾಗಿದ್ದರು. ಪ್ರಭುಗಳು ಬಂದ ಸುದ್ದಿ ತಿಳಿದು ಅವರು ಕಾಯಕ ಬಿಟ್ಟು ದ್ವಾರವಟ್ಟು ದಾಟಿ ಹೊರಗೆ ಹೋಗಲಿಲ್ಲ. ಪ್ರಭುದೇವರು ತಮ್ಮಲ್ಲಿಗೆ ಬರುವವರಿಗೆ ಕಾಯಕದಲ್ಲಿ ನಿರತರಾಗಿಯೇ ಇದ್ದರು.

ಮರುಳಶಂಕರದೇವರ ಗುಪ್ತಭಕ್ತಿ ಅಗಾಧಮಾದುದು; ಅಭೇದ್ಯವಾದುದು. ಪಂಚಪುರುಚವುಳ್ಳ ಬಸವಣ್ಣನವರಿಗೂ ಮರುಳಶಂಕರದೇವರನ್ನು ಅರಿಯುವುದು ಸಾಧ್ಯವಾಗಲಿಲ್ಲ. ಸರ್ವರ ಕಣ್ಣಿಗೆ ಆತ ಮರುಳನಂತೆ ಇದ್ದ. ಮರುಳ ವೇಷದಲ್ಲಿ ಸಾಕಾರ ಶಂಕರನನ್ನು ಯಾರೂ ಅರಿಯಲಿಲ್ಲ.

ಮರುಳಶಂಕರದೇವರು ಆಫಗಾನಿಸ್ತಾನದಿಂದ ಬಂದು ಬಸವಣ್ಣನವರ ಮಹಾಮನೆಯಲ್ಲಿ ನಿಂದರು. ಅವರಿಗೆ ಆಡಂಬರ ಬೇಕಿರಲಿಲ್ಲ. ಅಂತೆಯೇ ಅವರು ಯಾರೊಡನೆಯೂ ಹೆಚ್ಚು ಬೆರೆಯಲಿಲ್ಲ. ದೂರದಿಂದಲೇ ಮಹಾಮನೆಯ ಶರಣರ ಆಚಾರದಿಂದ ಅನುಭಾವವನ್ನು ತಿಳಿದು ತಮ್ಮೊಳಗೆ ಆಚರಿಸಿದರು – ಮರುಳರಂತಿದ್ದು. ಹನ್ನೆರಡು ವರ್ಷ ಕಳೆದರೂ ಆ ಮರುಳ ವೇಷದಲ್ಲಿ ಸಾಕಾರ ಶಂಕರನಿರುವನೆಂಬುದು ಯಾರಿಹೂ ತಿಳಿಯಲಿಲ್ಲ. “………….ತನ್ನನರಿದಿಹರೆಂದು ಜಗದ ಕಣ್ಣಿಗೆ ಮಾಯದ ಮಂಜು ಕವಿಸಿ, ನಿಜಪದದಲ್ಲಿ ತದುಗತನಾದ” – ಎಂದು ಬಸವಣ್ಣನವರು ಮರುಳಶಂಕರದೇವರ ಗುಪ್ತಭಕ್ತಿಯ ಬಗ್ಗೆ ನುಡಿದು ಆಶ್ಚರ್ಯಪಡುತ್ತಾರೆ.

ಮರುಳಶಂಕರದೇವರ ವಚನಗಳು

‘ಶೂನ್ಯ ಸಂಪಾದನೆ’ಯಲ್ಲಿ ಮರುಳಶಂಕರದೇವರ ವಚನಗಳು ಹನ್ನೊಂದಿವೆ. ಇವುಗಳಲ್ಲದೆ ಸರ್ವಪುರಾತನರ ವಚನಗಳ ಕಟ್ಟಿನಲ್ಲಿ ಹದಿನಾರು ಮತ್ತು ಚೆನ್ನಂಜೇದೇವರಿಂದ ಸಂಪಾದಿತವಾದ ಬಸವಸ್ತೋತ್ರದ ವಚನಗಳಲ್ಲಿ ಎರಡು – ಹದಿನೆಂಟು ಹೊಸವಚನಗಳು ಸಿಕ್ಕಿವೆ. ಮರುಳಶಂಕರದೇವರ ವಚನಗಳು ಒಟ್ಟು ೨೯ ಆದುವು.

ಮರುಳಶಂಕರದೇವರ ಮಾತೃಭಾಷೆ ಏನಿತ್ತೋ ತಿಳಿದಿಲ್ಲ. ಅವರು ಆಫಗಾನಿಸ್ತಾನದಿಂದ ಕಲ್ಯಾಣಕ್ಕೆ ಬಂದ ಬಳಿಕ ಕನ್ನಡ ಕಲಿತು ಬಹು ಸುಂದರವಾದ ವಚನಗಳನ್ನು ಬರೆದಿದ್ದಾರೆ. ಕನ್ನಡ ನುಡಿ, ಕನ್ನಡ ಸಂಸ್ಕೃತಿ ಅವರ ಆತ್ಮಗತವಾದಂತೆ ಕಾಣುತ್ತದೆ – ಅವರ ವಚನಗಳನ್ನು ಓದುವುದರಿಂದ.

ಮರುಳಶಂಕರದೇವರ ವಚನಗಳೆಲ್ಲ ವೀರಶೈವತತ್ವದಿಂದ, ಅನುಭಾವದಿಂದ ಕೂಡಿವೆ. ಬಸವಣ್ಣನವರ ವಚನಗಳಲ್ಲಿರುವಂತೆ ಅವರ ವಚನಗಳಲ್ಲಿ ಲೋಕನೀತಿ ಇಲ್ಲ. ಅದರಲ್ಲಿಯೂ ಪ್ರಸಾದದ ಬಗ್ಗೆ, ಅರ್ಪಣೆಯ ಬಗ್ಗೆ ಹೇಳುವ ವಚನಗಳೇ ಹೆಚ್ಚು. ಬಸವಣ್ಣನವರನ್ನು ಕುರಿತಾದ ವಚನಗಳಲ್ಲಿ ಅವರ ಸಾಧನೆ, ಸಿದ್ಧಿ, ಅನುಭಾವ ನಿಲವಿನ ಚಿತ್ರ ಅಡಗಿದೆ.

ಮರುಳುಶಂಕರದೇವರ ವಚನಗಳ ಭಾಷೆ ಮೃದು, ನೇರ, ಸರಳ, ಅಷ್ಟೇ ಸತ್ವದಿಂದ ಕೂಡಿದುದು. ಶೈಲಿ ಲಲಿತವೂ ಮೋಹಕವೂ ನಿರಾಡಂಬರವೂ ಆಗಿದೆ. ಈ ಶರಣರ ವಾಣಿ ‘ಪ್ರಸಾದ’ಮಾಣಿ. ವಚನಗಳ ಪ್ರತಿಶಬ್ದದಲ್ಲಿ ಮರುಳುಶಂಕರದೇವರು ಅನುಭವಿಸಿದ ಅನುಭಾವ, ಪ್ರಸಾದದ ಸೌಗಂಧವಿದೆ. ಇಲ್ಲಿ ಶಬ್ದಗಳಿಗೂ ಪ್ರಸಾದತ್ವ ಉಂಟಾಗಿದೆ.

“ನಿಮ್ಮುವ ಕಾರುಣ್ಯವಾಗಿದ್ದಲ್ಲಿ ಎನಗೆಲ್ಲಿಯೂ ಸುಖ” ಪ್ರಭುದೇವರನ್ನು ಕುರಿತು ಹೇಳುವ ಈ ಮಾತಿನಲ್ಲಿ ಪ್ರತಿ ಶಬ್ದಕ್ಕೂ ಆತ್ಮ ಮೂಡಿ ನಿಂತಿದೆ. ಈ ವಾಕ್ಯ ರಸವತ್ತಾದ ಬೆಳಕಿನ ಕಬ್ಬಿನ ಗಣೆ. ಇಲ್ಲಿ ಕಾವ್ಯದ ಮಹೋನ್ನತಿ ಇದೆ. ‘ಒಂದು ಮಾತೆನ್ನಬಹುದೇ ಇದನ್ನು.

ಬೆಟ್ಟವ ನೆಮ್ಮಿ ಕಟ್ಟಿಗೆಯ ತಳ್ಳುವುದು ಅದಾವಚ್ಚರಿ?
ಪ್ರಾಣಕ್ಕೆ ಹೊಣೆಯಾದಲ್ಲಿ ಕಾಡುವುದು ಅದಾವಚ್ಚರಿ?
ಸಿಂಬೆಗೆ ರಂಭೆತನವುಂಟೆ?
ಸಂಭ್ರಮವಳಿದುದಕ್ಕೆ ನವರಸದಂಗದ ಕಳೆಯುಂಟೆ?

ಈ ಸಾಲುಗಳಲ್ಲಿ ಎಂತಹ ಅನುಭವವಿದೆ! ಅನುಭಾವವನ್ನು ಹೇಳಲು ಸಾದೃಶ್ಯವಾಗಿ ದೃಷ್ಟಾಂತವಾಗಿ ಈ ಮಾತುಗಳನ್ನು ಉಪಯೋಗಿಸಿಕೊಡುದು ಮರುಳಶಂಕರದೇವರು ಅನುಭಾವಿಯೊಂದೇ ಅಲ್ಲ ರಸ ಋಷಿಗಳೆಂಬುದನ್ನು ಮನಗಾಣಿಸುತ್ತದೆ.

ಸರ್ವಾಂಗಸಾಹಿತ್ಯ ಮಹಾಲಿಂಗೈಕ್ಯರ ಸಂಗವ
ನಾನು ಮಾಡಿಹೆನೆಂದು ಹೋದಡೆ
ಉರಿಯುಂಡ ಕರ್ಪುರದಂತೆ ಎನ್ನನವಗ್ರಹಿಸಿಕೊಂಡರು
ಎಲೆಗಳೆದ ವೃಕ್ಷದಂತೆ ಉಲುಹಡಗಿಪ್ಪ ಶರಣ
ಕಂಗಳ ಕಳೆಯ ಬೆಳಗಳಿದು ಉಳಿದಾತ ಅಂಗಲಿಂಗೈಕ್ಯ
ಲಿಂಗವಂತನು ಅಂಗಸೂತಕಿಯಲ್ಲ
ಸಾಯದೆ ನೋಯದೆ ಸ್ವಯವನರಿದು ಸಂಗವ
ಮಾಡಬಲ್ಲಾತನ ಲಿಂಗವೆಂಬೆನು
ಬಂದಬಳಿಕ ಬಾರನೆಂಬ ಹಂಗು ಹರಿದು ಶರಣನು
ಎನ್ನ ತಂದೆಯಾಗಿಪ್ಪನು
ತನ್ನ ತಾನರಿದಲ್ಲದೆ ಇದಿರನರಿಯಬಾರದು

ಮೇಲಿನ ಮಾತುಗಳು ಅನುಭಾವದ ಕೆನೆಯಂತಿವೆ. ಅನುಭಾವವು ಇಲ್ಲಿ ಕಾವ್ಯಮಯವಾಗಿ, ರಸಮಯವಾಗಿ ಹೊಮ್ಮಿದೆ. ಇಂಥ ವಚನಗಳಿಗೇನೇ ಬಸವಣ್ಣನವರು, “ಹಾಲುತೊರೆಗೆ ಬೆಲ್ಲದ ಕೆಸರು, ಸಕ್ಕರೆಯ ಮಳಲು, ತವರಾಜದ ನೊರೆ, ತೊರೆಯಂತೆ ಆದ್ಯರ ವಚನವಿರಲು” ಎಂದು ಹೇಳಿದ್ದು.

“ಎಲೆಗಳೆದೆ ವೃಕ್ಷದಂತೆ ಉಲುಹು ಅಡಗಿಪ್ಪ ಶರಣ”. ಈ ವಾಕ್ಯದಲ್ಲಿರುವ ಭಾವಸೂಕ್ಷ್ಮ, ಅನುಭಾವ ಸೂಕ್ಷ್ಮವನ್ನು ಅನುಭವಿಸಿಯೇ ಅರಿಯಬೇಕು. ಇಲ್ಲಿ ಬಂದ ‘ಉಪಮಾ’ ಅನುಪಮವಾಗಿದೆ.

ಮರುಳಶಂಕರದೇವರು ಬಳಸುವ ರೂಪಕಗಳು ಬಹು ಸೊಗಸಾಗಿರುತ್ತವೆ. ಸಾಲುಗಳಲ್ಲಿ ಬರುವ ಮೂಲರೂಪಕಗಳ ಜೊತೆಗೆ ಇಡಿಯ ವಚನವೇ ರೂಪಕವಾಗಿ ಬಿಡುತ್ತದೆ. “ಸಂಸಾರವೆಂಬ ಸಾಗರದ ದಾಂಟುವರೆ, ಅರುಹೆಂಬ ಹರಿಗೋಲನಿಕ್ಕಿ” ಎಂಬ ಅವರ ದೊಡ್ಡವಚನ ರೂಪಕಗಳಿಂದ ಕೂಡಿದ ರೂಪಕ. ತಮ್ಮ ಜೀವಿತ, ಸಾಧನೆ, ಐಕ್ಯವನ್ನು ಮನಂಬುಗುವಂತೆ ಹೇಳಿದ್ದಾರೆ ಈ ವಚನದಲ್ಲಿ.

ಮರುಳಶಂಕರದೇವರ ಬೆಡಗಿನ ವಚನಗಳು ಒಂದು ರಮ್ಯ ಕಥೆಯಂತಿವೆ. ಕೆಳಗಿನ ವಚನ ಇದಕ್ಕೆ ಉತ್ತಮ ಸಾಕ್ಷಿ :

ತ್ರಿಭುವನ ಗಿರಿಯರಸರು ತ್ರೈಲೋಕ್ಯ ಪಟ್ಟಣಕ್ಕೆ ದಾಳಿಯಿನಿಕ್ಕಿದರು
ಪಟ್ಟಣವ ಸುತ್ತಿ ಮುತ್ತಿಕೊಂಡರು ಏಳು ಭೂದುರ್ಗಂಗಳು ಕೋಳುಹೋದುವು
ಅರಮನೆಯ ಹೊಕ್ಕರು; ಹನ್ನೆರಡು ಸಾವಿರ ರಾಣಿವಾಸವ ಸೆರೆಹಿಡಿದರು
ಆನೆಯ ಸಾಲಿಗೆ ಕಿಚ್ಚನಿಕ್ಕಿದರು, ಕುದುರೆಗಳ ಕಾಲ ಹರಿಯಹೊಯ್ದರು
ನಾಯಿಗಳ ಕಣ್ಣ ಕೆಡಿಸಿದರು, ಹಿರಿಯರಸನ ಹಿಡಿದುಕೊಂಡರು
ಇಪ್ಪತ್ತೈದು ತಳವಾರರ ನಿರ್ಮೂಲಿಸಿಬಿಟ್ಟರು, ಮೂವರ ಮೂಗ ಕೊಯ್ದರುಒಬ್ಬನ
ಶೂಲಕ್ಕೆ ಹಾಕಿದರು. ಪಟ್ಟಣದ ಲಕ್ಷ್ಮಿ ಹಾರಿತ್ತು
ಪಟ್ಟಣದ ಪ್ರಜೆಗಳಿಗೆ ರಣಮಧ್ಯೆ ಮರಣವಾಯಿತ್ತು
ರಣಭೂಮಿಯಲ್ಲಿ ಕಾಡುಗಿಚ್ಚೆದ್ದುರಿಯಿತ್ತು
ಆವೂರ ನಡುಗಡೆಯಲ್ಲಿ ಒಬ್ಬ ಬೇತಾಳ ನಿಂದಿರ್ದ
ಬೇತಾಳ ಮೇಲೆ ಅಕಾಲವರ್ಷ ಸುರಿಯಿತ್ತು
ವರ್ಷದಿಂ ಹದಿನಾಲ್ಕುಭುವನ ಸಚರಾಚರಂಗಳಿಗೆ ಶಾಂತಿಯಾಯಿತ್ತು
ಶಾಂತಿ ವಿಶ್ರಾಂತಿಯಲ್ಲಿ ಹುಟ್ಟಿದ ಸುಖವ ನಿಮ್ಮ ಉಂಗುಷ್ಟಾಗ್ರದಲ್ಲಿ ಕಂಡೆ
ಘನಮಹಾತ್ಮರು ಸುರಗಿಯ ಚೌಡಯ್ಯಗಳು ಬಲ್ಲರಲ್ಲದೆ
ನಾನೆತ್ತಬಲ್ಲೆನಯ್ಯಾ, ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನಪ್ರಭುವೆ
ಶಾಂತಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮ ಧರ್ಮ, ನಿಮ್ಮ ಧರ್ಮ, ನಿಮ್ಮ ಧರ್ಮ.

ತತ್ವವನ್ನು, ಅನುಭಾವವನ್ನು ಇಷ್ಟು ಸುಂದರವಾಗಿ ಬೆಡಗಿನಿಂದ ಹೇಳುವ ವಚನ ವಚನಸಾಹಿತ್ಯದಲ್ಲಿ ಇಲ್ಲವೆಂದರೆ ಹೆಚ್ಚಿನ ಮಾತಾಗಲಿಕ್ಕಿಲ್ಲ.

ತಮ್ಮ ಹುಟ್ಟು, ಮದುವೆ, ಹುಟ್ಟುಗೆಟ್ಟದು – ಇವುಗಳನ್ನು ತಾತ್ವಿಕವಾಗಿ ಮನೋಜ್ಞವಾಗಿ ಈ ವಚನದಲ್ಲಿ ಹೆಣೆದಿದ್ದಾರೆ – ಮರುಳಶಂಕರದೇವರು.

ಮಹಾಶ್ರೀಗುರುವೆ ತಂದೆ, ಮಹಾಜಂಗಮವೆ ತಾಯಿ
ಇವರಿಬ್ಬರ ಸಂಗಸಂಯೋಗದಿಂದಾನು ಹುಟ್ಟಿದೆ ನೋಡಯ್ಯಾ
ಸರ್ವಾಂಗ ಸಾಹಿತ್ಯ ನಾನು ಹುಟ್ಟಿದ ಬಳಿಕ
ತಂದೆತಾಯಿಗಳಿಬ್ಬರೂ ಲಿಂಗವೆಂಬ ಹೆಣ್ಣ ತಂದು
ಎನ್ನ ಕೊರಳಲ್ಲಿ ಕಟ್ಟಿ ಮದುವೆಯ ಮಾಡಿದರಯ್ಯಾ
ಹೆಣ್ಣಿನ ಕೈವಿಡಿದು ನಾನು ಬದುಕಿದೆನು
ಹೆಣ್ಣಿನ ಸಂಗಸಂಯೋಗದಿಂದ ಮಗುವೆಂಬ
ಮಹಾಲಿಂಗ ಹುಟ್ಟಿದನಯ್ಯಾ
ಮಗು ಹುಟ್ಟಿದ ಮುನ್ನ ಎನಗೆ ಮರಣವಾಯಿತ್ತು
ಲಿಂಗವೆಂಬ ಹೆಂಡತಿ ಮುಂಡೆಯಾದಳು
ತಂದೆ ತಾಯಿಗಳಿವರಿಬ್ಬರು ನನ್ನ ಒಂದಾಗಿ ಅಡಗಿಹೋದರು
ಇನ್ನು ಮುನ್ನಿನ ಪರಿಯಂತುಟಲ್ಲವಾಗಿ ನಾನು ಬದುಕಿದೆನು ಕಾಣಾ
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನಪ್ರಭುವೆ
ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ
ನಿಮ್ಮ ಶರಣರ ಕರುಣದಿಂದ ಎನ್ನ ಕರ್ಮ ನಿರ್ಮಳವಾಯಿತ್ತಯ್ಯಾ
ನಿಮ್ಮ ಧರ್ಮ, ನಿಮ್ಮ ಧರ್ಮ, ನಿಮ್ಮ ಧರ್ಮ.

‘ಶರಣಸತಿ ಲಿಂಗಪತಿ’ ಎಂದಿದ್ದುದು ಮೇಲಿನ ವಚನದಲ್ಲಿ ತಿರುವುಮುರುವಾಗಿದೆ. ‘ಶರಣಪತಿ ಲಿಂಗಸತಿ’ಯಾಗಿದೆ. ಈ ಭಾವ ಮರುಳಶಂಕರದೇವರ ವಚನದಲ್ಲಿಯೊಂದೇ ಬರುತ್ತದೆ. ಇದರ ಬಗ್ಗೆ ವಿಚಾರ, ಸಂಶೋಧನೆ ಅಗತ್ಯ.

ಮರುಳಶಂಕರದೇವರ ವಚನಗಳಲ್ಲಿ ‘ಲಿಂಗವಂತ’ ಎಂಬ ಶಬ್ದ ಬಹಳ ಸಲ ಬರುತ್ತದೆ. ಲಿಂಗವಂತನೆಂದರೆ ಯಾರು? ಆತ ಹೇಗಿರಬೇಕು? ಎಂಬುದನ್ನು ಈ ಶರಣರು ಬಹು ಮಾರ್ಮಿಕವಾಗಿ ಹೇಳಿದ್ದಾರೆ. ‘ವೀರಶೈವ’ ಎಂಬ ಶಬ್ದವನ್ನು ಈ ಶರಣರು ಬಳಸಿಲ್ಲ.

ಲಿಂಗಕ್ಕೆ ಲಿಂಗವೆ ಪ್ರಾಣವಾಗಿರಲು ಬಲ್ಲ
ಲಿಂಗಕ್ಕೆ ಲಿಂಗವೆ ಭೋಗವಾಗಿರಲು ಬಲ್ಲ
ಲಿಂಗಕ್ಕೆ ಲಿಂಗವೆ ಸಂಗವಾಗಿರಬಲ್ಲ
ಇಂತಪ್ಪ ಲಿಂಗವಂತನ ಸದಾಚಾರಿ ಎಂಬೆನು
ಇಂತಪ್ಪ ಲಿಂಗವಂತನ ಸರ್ವಾಂಗಲಿಂಗಿ ಎಂಬೆನು.

ಲಿಂಗವಂತನು ಲಿಂಗಸಹಿತವಾಗಿಯೇ ಕೇಳಬೇಕು; ಲಿಂಗಸಹಿತವಾಗಿಯೇ ನೋಡಬೇಕು; ಲಿಂಗಸಹಿತವಾಗಿಯೇ ರುಚಿಸಬೇಕ, ಲಿಂಗಸಹಿತವಾಗಿತೇ ಅಳಲು ಬೇಕು, ಬಳಲಬೇಕು, ತೊಳಲಬೇಕು. ಇಂತಪ್ಪ ಮಹಾಮಹಿಮ ಲಿಂಗವಂತನ ಅಂಗ ಕ್ರಿಯೆಗಳೆಲ್ಲವು ಲಿಂಗಕ್ರಿಯೆಗಳಾಗುವುವು. ಅಂಗಸಂಗವೆಲ್ಲ ಲಿಂಗಸಂಗವಾಗುವುವು.

ಮರುಳಶಂಕರದೇವರ ಅಂಕಿತದ ವಿಷಯಕ್ಕೆ ತಿಳಿದುಕೊಳ್ಳಲು ಸಾಕಷ್ಟು ಇದೆ. ಪ್ರಸಾದಿಸ್ಥಳದ ಪೂರ್ಣ ಚಿತ್ರ ಈ ಅಂಕಿತದಲ್ಲಿದೆ. ನಿಮ್ಮ ಧರ್ಮ, ನಿಮ್ಮ ಧರ್ಮ, ನಿಮ್ಮ ಧರ್ಮ – ಹೀಗೆ ಮೂರು ಸಲ ಬರುತ್ತದೆ ಈ ಶಬ್ದ. ಕೆಲವು ಕಡೆಗೆ ಎರಡೇ ಸಲ ಬರೆಯಲಾಗಿದೆ. ಅದು ತಪ್ಪು, ಮೂರು ಸಲ ಬರುವುದೇ ಸರಿ. ಶುದ್ಧ ಸಿದ್ಧ ಪ್ರಸಿದ್ಧ; ಇಷ್ಟ ಪ್ರಾಣ ಭಾವ, ಗುರು ಲಿಂಗ ಜಂಗಮ ಈ ಮೂರಕ್ಕೂ ಅನ್ವಯಿಸಲಾಗಿದೆ ನಿಮ್ಮ ಧರ್ಮ ಎಂಬುದು. “ಇವ ನಮ್ಮವ, ಇವ ನಮ್ಮವ, ಇವ ನಮ್ಮವ” ಎಂಬ ಅಣ್ಣನವರ ವಚನದಲ್ಲಿ ಧ್ವನಿತವಾಗುವ ಗುರು – ಲಿಂಗ – ಜಂಗಮ ಇಲ್ಲಿಯೂ ಧ್ವನಿತವಾಗುತ್ತಿದೆ. ಅಲ್ಲದೆ ಶುದ್ಧ ಸಿದ್ಧ ಪ್ರಸಿದ್ಧ – ಇವುಗಳಿಗಾಗಿ ಮೂರು ಸಲ ‘ನಿಮ್ಮ ಧರ್ಮ’ ಬಂದಿದೆಯೆಂಬುದು ಸ್ಪಷ್ಟವಾಗಿಯೇ ಇದೆ.

ಭಾವ, ಭಾಷೆ, ಶೈಲಿ, ಅನುಭಾವ – ಈ ಎಲ್ಲ ದೃಷ್ಟಿಗಳಿಂದ ಮರುಳಶಂಕರದೇವರ ವಚನಗಳು ಕನ್ನಡ ಸಾಹಿತ್ಯದಲ್ಲಿ ಉನ್ನತಸ್ಥಾನ ಗಳಿಸಿವೆ.

ಕೊನೆಯ ಮಾತುಗಳು :

ಮರುಳಶಂಕರದೇವರು[1] ಆಫಗಾನಿಸ್ಥಾನದಿಂದ ಬಂದರೆಂಬುದಕ್ಕೆ ಎರಡು ಆಂತರಿಕ ಆಧಾರಗಳು ದೊರಕುತ್ತವೆ.

೧. ‘ಶರಣಪತಿ – ಲಿಂಗಸತಿ’ ಈ ಭಾವ ಸೂಫಿಧರ್ಮದಲ್ಲಿದೆ. ಆಫಗಾನಿಸ್ಥಾನ ಮತ್ತು ಅದರ ನೆರೆಯ ದೇಶಗಳಲ್ಲಿ ಸೂಫಿಧರ್ಮ ಪ್ರಚಾರದಲ್ಲಿತ್ತು; ಈಗಲೂ ಇದೆ. ಇಂದಿಗೂ ಉರ್ದು ಕಾವ್ಯಲೋಕದಲ್ಲಿ ದೇವರಿಗೆ ಪ್ರೇಯಸಿಯೆಂದೇ ಕರೆಯಲಾಗುತ್ತಿದೆ. ಇದೂ ಸೂಫಿಧರ್ಮದ ಪ್ರಭಾವವೇ.

೨. ಯಾವ ಕೃತ್ಯಮಾಡಿದರೂ ಜೀವಜಾಲಕ್ಕೆ ನೋವು ತಪ್ಪದೆಂದು ಬಗೆದು ಮರುಳಶಂಕರದೇವರು ಭಕ್ತರು ಸೇವಿಸಿದ ಶೇಷ ಪ್ರಸಾದವನಾವರಿಸಿದರು. ಇದನ್ನು ವಿಚಾರಿಸಿ ನೋಡಿದರೆ ಮರುಳಶಂಕರದೇವರ ಮೇಲೆ ಬೌದ್ಧಧರ್ಮದ ಪ್ರಭಾವವಾದಂತೆ ತೋರುತ್ತದೆ. ಹಿಂದೆ ಆಫಗಾನಿಸ್ಥಾನದಲ್ಲಿ ಬೌದ್ಧಧರ್ವ ಪ್ರಚಾರದಲ್ಲಿತ್ತು. ಆ ಧರ್ಮದ ಅಹಿಂಸಾಭಾವ ಇವರಲ್ಲಿ ಮೈಗೂಡಿರಬೇಕು. ನಮ್ಮಲ್ಲಿಯೂ ಅಹಿಂಸೆಗೆ ಬೆಲೆಯಿದೆ. ಆದರೆ ಕಾಯಕ ಮಾಡುವಲ್ಲಿ, ದೇಶದ ಹಿತರಕ್ಷಣೆ ಮಾಡುವಲ್ಲಿ ಜೀವಜಾಲಕ್ಕೆ ನೋವಾಗುವುದೆಂಬ ಭಾವವಿಲ್ಲ. ಏಕೆಂದರೆ ನಮ್ಮ ಎಲ್ಲ ಕೆಲಸಗಳೂ ಲಿಂಗಾರ್ಪಿತವಾಗಿಯೇ ನಡೆಯುತ್ತವೆ. ಆದರೆ ಬೌದ್ಧರಲ್ಲಿರುವುದು ನಿಷ್ಕ್ರಿಯಾವಾದ. ಅವರು ಕ್ರಿಯೆಗೆ, ಕಾಯಕಕ್ಕೆ ಎಳ್ಳನಿತೂ ಬೆಲೆಗೊಡಲಿಲ್ಲ. ಮರುಳಶಂಕರದೇವರು ಆ ಬೌದ್ಧಧರ್ಮದ ಅಹಿಂಸೆಯಿಂದ ಪ್ರಭಾವಿತರಾಗಿರಬೇಕು; ಆದರೆ ಮರುಳಶಂಕರದೇವರು ನಿಷ್ಕ್ರಿಯಾವಂತರಾಗಲಿಲ್ಲ. ಏಕೆಂದರೆ ಲಿಂಗವಂತರ ಧರ್ಮದ ಜೀವಜೀವಾಳ ಕಾಯಕವಾಗಿವೆ. ಅಂತೆಯೇ ಮರುಳಶಂಕರದೇವರು ಪ್ರಸಾದಗುಂಡದ ಕಾಯಕವನ್ನು ಕೈಗೊಂಡರು.

ಸಹಾಯಕ ಸಾಹಿತ್ಯ

೧. ಸರ್ವಪುರಾತನರ ವಚನಗಳ ಓಲೆಗರಿ ಕಟ್ಟು ನಂ. ೩೨ ವಚನ ವಾಜ್ಞಯ ಸಂಶೋಧನಾ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

೨. ವಚನಗಳ ಓಲೆಗರಿ ಕಟ್ಟು ನಂ. ೩೭೪. ವಚನ ವಾಜ್ಞಯ ಸಂಶೋಧನಾ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

೩. ಶೂನ್ಯ ಸಂಪಾದನೆ – ಸಂ.ಶಿ. ಭೂಸನೂರಮಠ ಸಂಪಾದನೆ

೪. ಪ್ರಭುಲಿಂಗಲೀಲೆ – ಲಿಂ.ಬಸವನಾಳ ಸಂಪಾದಿತ

೫. ಶಿವಶರಣರ ಚರಿತ್ರೆಗಳು ಭಾಗ ೩ – ಲಿಂ. ಹಳಕಟ್ಟಿ

೬. ಶ್ರೀ ಸಿದ್ಧರಾಮೇಶ್ವರ ಪುರಾಣ – ಜಯದೇವಿತಾಯಿ

೭. ಶಾಂತಲಿಂಗದೇಶಿಕನ ಭೈರವೇಸ್ವರ ಕಾವ್ಯದ ಕಥಾಮಣಿಸೂತ್ರ ರತ್ನಾಕರ – ಡಾ. ಆರ್.ಸಿ.ಹಿರೇಮಠ ಸಂಪಾದಿತ

೮. ಕರ್ನಾಟಕ ಕವಿರಚರಿತೆ ಭಾಗ ೧ (ಪರಿಶೋಧಿತ ಮುದ್ರಣ) – ದಿ || ಆರ್. ನರಸಿಂಹಾಚಾರ್

೯. ಶೂನ್ಯತತ್ವವಿಕಾಸ ಮತ್ತು ಶೂನ್ಯ ಸಂಪಾದನೆ – ಡಾ. ಹೆಚ್.ತಿಪ್ಪೇರುದ್ರಸ್ವಾಮಿ

೧೦. ಶರಣರ ಅನುಭಾವ ಸಾಹಿತ್ಯ – ಡಾ.ಹೆಚ್.ತಿಪ್ಪೇರುದ್ರಸ್ವಾಮಿ

೧೧. ಶರಣ ಚರಿತಾಮೃತ – ಸಿದ್ಧಯ್ಯ ಪುರಾಣಿಕ

೧೨. ಬಸವ ಸ್ತೋತ್ರ ವಚನ ಮತ್ತು ಬಸವ ಸ್ತುತಿ ಪ್ರಶಸ್ತಿ – ಡಾ. ಎಸ್.ಎಂ. ಹುಣಸ್ಯಾಳ್ ಮತ್ತು ಹೆಚ್. ಅನ್ನದಾನಯ್ಯ ಸಂಪಾದಿತ.

೧೩. ಪಟ್‌ಸ್ಥಲ ತತ್ವದರ್ಪಣ – ವೈ. ನಾಗೇಶಶಾಸ್ತ್ರಿ

೧೪. ಲಿಂಗ ಸಕೀಲುಗಳು – ಮುರಿಗೆಪ್ಪ ವೀರಪ್ಪ ಎಲಿ

೧೫. ಲಿಂಗಲೀಲಾ ವಿಲಾಸ ಚಾರಿತ್ರ – ಸಂ. ಶಿ. ಭೂಸನೂರುಮಠ ಸಂಪಾದನೆ

೧೬. ಚೆನ್ನಬಸವಣ್ಣನವರ ವಚನಗಳು – ಡಾ.ಆರ್.ಸಿ. ಹಿರೇಮಠ ಸಂಪಾದಿತ

೧೭. ಬಸವಣ್ಣನವರ ವಚನಗಳು – ಬಸವನಾಳ ಸಂಪಾದಿತ

೧೮. ದೇವರ ದಾಸಿಮಯ್ಯನ ವಚನಗಳು – ಹಳಕಟ್ಟಿ ಸಂಪಾದಿತ

೧೯. ಅಲ್ಲಮನ ವಚನ ಚಂದ್ರಿಕೆ – ಎಲ್.ಬಸವರಾಜು ಸಂಪಾದಿತ

೨೦. ಶಿವದಾಸ ಗೀತಾಂಜಲಿ – ಎಲ್.ಬಸವರಾಜು ಸಂಪಾದಿತ

೨೧. ಅಖಂಡೇಶ್ವರ ವಚನಗಳು – ಸಿದ್ಧವೀರದೇವರು ಸಂಪಾದಿತ

೨೨. ಆದಯ್ಯನ ವಚನಗಳು – ಚೆನ್ನಪ್ಪ ಉತ್ತಂಗಿ ಸಂಪಾದಿತ

೨೩. ಮೋಳಿಗೆ ಮಾರಯ್ಯ ಮತ್ತು ರಾಣಿ ಮಹಾದೇವಿಯರ ವಚನಗಳು – ಚೆನ್ನಪ್ಪ ಉತ್ತಂಗಿ ಮತ್ತು ಎಸ್.ಎಸ್. ಭೂಸನೂರುಮಠ ಸಂಪಾದಿತ

೨೪. ತೋಂಟದ ಸಿದ್ಧಲಿಂಗೇಶ್ವರ ವಚನಗಳು – ಡಾ.ಆರ್.ಸಿ.ಹಿರೇಮಠಸಂಪಾದಿತ

೨೫. ಲಿಂಗವಂತರ ಅಮರಕೃತಿಗಳು ಮತ್ತು ಲಿಂಗವಂತ ಕವಿಗಳು – ಗುರುಸಿದ್ಧಪ್ಪ ಬಸವಪ್ಪ ಬಳ್ಳಾರಿ

೨೬. ಬಸವತತ್ವ ರತ್ನಾಕರ – ವ್ಯಾಕರಣತೀರ್ಥ ಚಂದ್ರಶೇಖರಶಾಸ್ತ್ರಿ

೨೭. A Hand book of Veerashivism – Dr. S.C. Ngndimath

೨೮. Anubhavamantapa – Rev. C.D. Uttangi

[1]ಚೆನ್ನಬಸವ ಪುರಾಣ’ದಲ್ಲಿ ಮರುಳಶಂಕರದೇವರು ಕಳಿಂಗದಿಂದ ಬಂದರೆಂದು ಹೇಳಿದೆ. ದಿ. ಪೂಜ್ಯ ಉತ್ತಂಗಿಯವರೂ ಇದನ್ನೇ ಒಪ್ಪಿದ್ದಾರೆ. ಆದರೆ ಶಾಂತಲಿಂಗದೇಶಿಕನ ‘ಭೈರವೇಶ್ವರ ಕಥಾಮಣಿ ಸೂತ್ರರತ್ನಾಕರ’ದಲ್ಲಿ ಈ ಶರಣರು ಬರ್ಬರದೇಶದಿಂದ ಬಂದರೆಂದು ಹೇಳಲಾಗಿದೆ. ಆಫಗಾನಿಸ್ಥಾನಕ್ಕೇನೇ ಹಿಂದೆ ‘ಬರ್ಬರ’ ದೇಶವೆಂಬ ಹೆಸರಿತ್ತೆಂದು ಪೂಜ್ಯ ಲಿಂ. ಹಳಕಟ್ಟಿಯವರು ‘ಶಿವಶರಣರ ಚರಿತ್ರೆಗಳು’ – ಮೂರನೆಯ ಭಾಗದಲ್ಲಿ ಬರೆದಿದ್ದಾರೆ. ಪೂಜ್ಯ ಹಳಕಟ್ಟಿಯವರ ಅಭಿಪ್ರಾಯವೇ ನಮ್ಮ ಅಭಿಪ್ರಾಯವಾಗಿದೆ. ಮೇಲೆ ತೋರಿಸಿದ ಆಂತರಿಕ ಆಧಾರಗಳನ್ನು ನೆನೆದರೆ ಮರುಳಶಂಕರದೇವರು ಆಫಗಾನಿಸ್ಥಾನದಿಂದ ಬಂದರೆಂದೇ ಖಚಿತವಾಗುತ್ತದೆ. ಅಲ್ಲದೆ ಹಿಂದೆ ಅಲ್ಲಿ ಬೌದ್ಧಧರ್ಮ ಖಿಲವಾದ ಬಳಿಕ ಶೈವಧರ್ಮ ತಲೆಯೆತ್ತಿತ್ತು. ಹಲಾಯುಧನೆಂಬ ಪುರಾತ ಆಫಗಾನಿಸ್ಥಾನದವನೇ. ಕಾಶ್ಮೀರದ ಶೈವಧರ್ಮ ಪ್ರಭಾವ ಆಫಗಾನಿಸ್ಥಾನದ ಮೇಲಾಗಿರಬೇಕು. ಸಿಂಧೂಕೊಳ್ಳದ ದ್ರಾವಿಡಸಂಸ್ಕೃತಿಯನ್ನು ನೆನೆದರೆ ಆಫಗಾನಿಸ್ಥಾನದಲ್ಲಿ ಶೈವಧರ್ಮ ಬಹು ಹಿಂದಿನ ಕಾಲದಲ್ಲಿಯೇ ಇರಬೇಕೆನಿಸುತ್ತದೆ. ಸಂಶೋಧಕರಿಗೆ ಇದೊಂದು ಹೊಸ ಕ್ಷಿತಿಜ.