“ಇದುವರೆಗೆ ವಚನಗಂಗೋತ್ರಿಯನ್ನು ಶೋಧಿಸಲಾಗಿಲ್ಲ; ಮೊದಲ ವಚನಕಾರ ಯಾರೆಂಬುದನ್ನು ಹೇಳುವುದು ಸಾಧ್ಯವಾಗಿಲ್ಲ” – ಈ ಮಾತುಗಳು ಕೇಳಿಬರುತ್ತಿವೆ.

ವಚನಗಂಗೋತ್ರಿಯ ಬಗ್ಗೆ ಈವರೆಗೂ ಏನೂ ಹೇಳಲು ಸಾಧ್ಯವಾಗಿಲ್ಲ; ಇದು ನಿಜ. “ವಚನ ಎಂದು ಹುಟ್ಟಿತು? ಇದರ ಜನಕರು ಯಾರು? ಇದರ ಮೂಲ ಏನು? ಹೇಗೆ ಬೆಳೆಯಿತು?” ಈ ಮಾತುಗಳಿಗೆ ಉತ್ತರ ಇನ್ನೂ ಹುಡಕಬೇಕಾಗಿದೆ. ಆದರೆ ಈಗ ದೊರಕಿರುವ ಆಧಾರಗಳಿಂದ ಮೊದಲ ವಚನಕಾರ ಮಾದಾರಚನ್ನಯ್ಯ ಎಂಬುದು ಸಿದ್ಧವಾಗುತ್ತದೆ.

ಬಹುದಿನಗಳವರೆಗೆ ಬಸವಯುಗದಲ್ಲಿಯೇ ವಚನರಚನೆ ಪ್ರಾರಂಭವಾಯಿತೆಂಬ ನಂಬುಗೆಯಿತ್ತು. ಜೇಡರದಾಸಿಮಯ್ಯನ ಶಾಸನಗಳು ದೊರಕಿದ ಮೇಲೆ ಬಸವಪೂರ್ವಯುಗದಲ್ಲಿ – ಜೇಡರದಾಸಿಮಯ್ಯನ ಕಾಲದಲ್ಲಿ ವಚನ ರಚನೆ ಮೊದಲಾಯಿತೆಂದು ತಿಳಿವಳಿಕೆಯುಂಟಾಯಿತು. ಈವರೆಗೆ ಬಹುಮಟ್ಟಿಗೆ ಇದೇ ನಂಬುಗೆ ನೆಲೆ ನಿಂತಿದೆ. ಆದರೆ ಜೇಡರದಾಸಿಮಯ್ಯನಿಗಿಂತಲೂ ಹಿಂದೆ ವಚನರಚನೆ ಇತ್ತು ಎಂಬುದನ್ನು ಇಂದು ದೊರಕಿದ ಆಧಾರಗಳು ಸಿದ್ಧ ಪಡಿಸುತ್ತವೆ.

ಜೇಡರದಾಸಿಮಯ್ಯನ ವಚನಗಳಲ್ಲಿ ‘ಸೂಳ್ನುಡಿ’, ‘ನುಡಿಗಡಣ’ ಎಂಬ ಪದಗಳು ಮತ್ತು “ನಿಮ್ಮ ಶರಣರ ಸೂಳ್ನುಡಿ ಇತ್ತೊಡೆ ನಿಮ್ಮನಿತ್ತೆ ಕಾಣಾ ರಾಮನಾಥ” ಎಂಬ ಮಾತು ಬಂದಿರುವುದರಿಂದ ಆತನಿಗಿಂತ ಹಿಂದೆ ವಚನರಚನೆ ನಡೆದಿತ್ತೆಂದೂ ನುಡಿಗಡಣ ಎಂಬುದರಿಂದ ಅದು ವಿಪುಲವಾಗಿತ್ತೆಂದೂ ತಿಳಿದುಬರುವುದು. “ವೀರಶೈವಧರ್ಮದ ಮತ್ತು ವಚನರಚನೆಯ ಉಗಮ ಈಗ ನಮಗೆ ತಿಳಿದಿರುವ ಆಧಾರಗಳ ಪ್ರಕಾರ ೧೧ನೆಯ ಶತಮಾನದಲ್ಲಿ ಆಯಿತೆಂದು ಹೇಳಬಹುದು.”[1] ಇದು ಡಾ|| ರಂ.ಶ್ರೀ.ಮುಗಳಿಯವರ ಅಭಿಪ್ರಾಯ. “ಈ ಆದ್ಯರ ವಚನ ಸಾಹಿತ್ಯವು ಕ್ರಿ.ಶ. ೯ – ೧೦ ಶತಮಾನದಷ್ಟು ಹಿಂದಿನದು. ಈಗ ನಮಗೆ ಉಪಲಬ್ಧವಿರುವ ಎಷ್ಟೋ ವಚನಗಳು ಪಂಪನ ಸಾಹಿತ್ಯಕ್ಕಿಂತ ಪ್ರಾಚೀನವೆಂದಾಗ ಯಾರಾದರೂ ಹುಸಿನಗುವನ್ನು ನಕ್ಕರೆ ಅವರಿಗೆ ನವನವೋನ್ಮೇಷಿತ ಸತ್ಯ ವಿಚಾರಗಳನ್ನು ಸ್ವಾಗತಿಸುವ ಪ್ರಗತಿಪರ ದೃಷ್ಟಿ ಇಲ್ಲವೆನ್ನಬೇಕಾಗುವುದ.”[2] ಇದು ಡಾ|| ಎಲ್.ಬಸವರಾಜು ಅವರ ಅಭಿಪ್ರಾಯ. ಈ ಅಭಿಪ್ರಾಯವನ್ನು ಒಪ್ಪದ ಡಾ|| ಮುಗುಳಿಯವರು, ವಚನಸಾಹಿತ್ಯವು ಇಷ್ಟು ಹಿಂದೆ ಇತ್ತೆನ್ನಲು ಆಧಾರ ಸಾಲದೆಂದು ನಮಗೆ ತೋರುತ್ತದೆ”[3] ಎಂದಿದ್ದಾರೆ.

ಹರಿಹರನ ಕೇಶಿರಾಜ ದಣ್ಣಾಯಕ ರಗಳೆಯಲ್ಲಿ ಬರುವ,

ಎಡೆಗೊಂಡು ಶವಿಗೋಷ್ಠಿಯುರ್ಬುತಿರೆ ಛಂದನೊಳ್‌‌ [4]
ಪಾಡುವ ಪುರಾತನರ ಗೀತದೊಳ್ಕರಗುತಂ [5]
ಶರಣ ಸಂಗೀತಗೋಷ್ಠಿಯೊಳೇನುವರಿಯದಿರೆ [6]
ಮಾತುಮಾತಿಂಗೆ ಪುರಾತನರ ಗೀತವಂಕುರಿಸೆ [7]

ಮತ್ತು ಶಂಕರದಾಸಿಮಯ್ಯ ರಗಳೆಯಲ್ಲಿ ಬರುವ,
ಶರಣಕುಲ ಸಂಭಾಷಿತ ಶಿವಪುರಾಣ ಶಿವಕಥಾಮೃತರಸದೊ
ಳವಗಾಹಂಗೈದು ವಿಕಸಿತಹೃದಯಕಮಲನಾಗುತ್ತೊಂದೆರಡು
ದಿನಮಿರಲಲ್ಲಿಗೆ[8]

ಈ ಮಾತುಗಳನ್ನು ನೆನೆಯಬೇಕು. ಇಲ್ಲಿ ಬರುವ ಪುರಾತನರು ಎಂದರೆ ಅರವತ್ತುಮೂವರು ಪುರಾತನರಲ್ಲ.[9] ಅವರ ಯಾವ ಗೀತೆಗಳನ್ನೂ ಈ ನೂತನ ಶರಣರು ಹಾಡಿದಂತೆ ಕಾಣುವುದಿಲ್ಲ. ಇಲ್ಲಿ ಉಕ್ತವಾದ ಪುರಾತನರೆಂದರೆ ಶಂಕರದಾಸಿಮಯ್ಯ ಮತ್ತು ಕೇಶಿರಾಜ ದಣ್ಣಾಯಕರಿಗಿಂತ ಹಿಂದೆ ಆಗಿಹೋದ ನೂತನ ಪುರಾತನರೇ (ಶರಣರೇ) ಇರಬೇಕು. ಗೀತೆ ಎಂದರೆ ವಚನವೆಂದೇ ಅರ್ಥ. ಅಣೇಕ ವೇಳೆ ವಚನಗಳಲ್ಲಿ ಗೀತೆ ಇದೇ ಅರ್ಥದಲ್ಲಿಯೇ ಪ್ರಯೋಗವಾಗುತ್ತದೆ. “ಶಿವಗೋಷ್ಠಿ, ಶರಣಸಂಗೀತಗೋಷ್ಠಿ, ಶರಣಕುಲ ಸಂಭಾಷಿತ” ಈ ಮಾತುಗಳು ಒಂದು ಪರಂಪರೆಯನ್ನು ಹೇಳುವುವು. ಶರಣರು ಒಬ್ಬರಿಗೊಬ್ಬರು ಕೂಡಿ, ಆಡಿ, ಸಂಭಾಷಿಸಿ, ಗೀತೆ ಹಾಡಿ, ವಚನ ರಚಿಸಿ ಚರ್ಚಿಸುವ ಈ ಸಂಪ್ರದಾಯ ಜೇಡರದಾಸಿಮಯ್ಯ, ಶಂಕರದಾಸಿಮಯ್ಯ, ಕೇಶಿರಾಜ ದಣ್ಣಾಯಕ, ಕೆಂಭಾವಿ ಭೋಗಣ್ಣ ಮೊದಲಾದವರಿಗಿಂತ ಬಹು ಹಿಂದೆಯೇ ಬೆಳೆದು ಬಂದಿರಬೇಕು. “ಶರಣಸಂಗೀತಗೋಷ್ಠಿ, ಶರಣಕುಲಸಂಭಾಷಿತ” ಈ ಮಾತುಗಳನ್ನು ಜೇಡರದಾಸಿಮಯ್ಯನ ಸೂಳ್ನುಡಿಯೊಂದಿಗೆ ಹೋಲಿಸಿ ನೋಡಿದರೆ ಈ ಅಭಿಪ್ರಾಯ ಇನ್ನೂ ಖಚಿತವಾಗುವುದು.

“ದಾಸಿಮಯ್ಯನಲ್ಲಿ ವಚನ ಎಂಬ ಮಾತು ಬಂದಿಲ್ಲ. ಸೂಳ್ನುಡಿ ಎಂಬ ಮಾತು ಬಂದಿದೆ… ಸೂಳ್ನುಡಿ ಎಂದರೆ ಸರದಿಯ ಪ್ರಕಾರ ಆಡುವ ಮಾತು ಎಂದರ್ಥ…. ಹೀಗೆ ಸೂಳ್ನುಡಿ ಎಂಬ ಮಾತು ಆ ಕಾಲದ ಧಾರ್ಮಿಕಜೀವನಕ್ಕೆ ಒಂದು ಕೈಗನ್ನಡಿ ಇದ್ದಂತಿದೆ. ಶಿವಶರಣರ ಗೋಷ್ಠಿಗಳು, ಅಲ್ಲಿ ನಡೆಯುತ್ತಿದ್ದ ಸಂಭಾಷಣೆ, ಸಂಭಾಷಣೆಯ ಕಾಲದಲ್ಲಿ ರಚನೆಯಾಗುತ್ತಿದ್ದ ವಚನಸಾಹಿತ್ಯ – ಇಷ್ಟನ್ನೂ ತನ್ನ ಗರ್ಭದಲ್ಲಿ ಈ ಪದ ಒಳಗೊಂಡಿರುವಂತಿದೆ.”[10]ದೇವರದಾಸಿಮಯ್ಯನ ಕಾಲದಲ್ಲಿ ಈ ಸೂಳ್ನುಡಿಯ ಸಭೆಗಳು ಸುಳಿವು ನಮಗೆ ದೊರಕುತ್ತದೆ.”[11]

ದೇವರ ದಾಸಿಮಯ್ಯನ ಎರಡು ವಚನಗಳು ಮೇಲಿನ ಮಾತುಗಳಿಗೆ ಸರ್ವರೀತಿಯ ಪುಷ್ಟಿಯೊದಗಿಸುತ್ತವೆ.

ಅನುಭಾವವಿಲ್ಲದವನ ಭಕ್ತಿ ತಲೆಕೆಳಗಾದುದಯ್ಯ
ಅನುಭಾವ ಭಕ್ತಿಗಾಧಾರ
ಅನುಭಾವ ಭಕ್ತಿಗೆ ನೆಲೆವನೆ
ಅನುಭಾವ ಉಳ್ಳವರ ಕಂಡು ತುರ್ಯಸಂಭಾಷಣೆಯ ಬೆಸಗೊಳ್ಳದಿದ್ದರೆ
ನರಕದಲ್ಲಿಕ್ಕಯ್ಯ ರಾಮನಾಥ[12]
ಮಂಡೆಯ ಬೋಳಿಸಿಕೊಂಡು ನುಡಿದು ಗೋಷ್ಠಿಯ ಕಟ್ಟಿದೊಡೇನು?
ಕಂಡಕಂಡವರಿಗೆ ಕೈಯೊಡ್ಡಿ ಬೇಡುವ
ಭಂಡಡರನೊಲ್ಲ ರಾಮನಾಥ[13]

ಮೇಲಿನ ಎಲ್ಲ ವಿವೇಚನೆಯಿಂದ ಜೇಡರದಾಸಿಮಯ್ಯನಿಗಿಂತ ಹಿಂದೆ ಶರಣಪರಂಪರೆ ಇತ್ತು; ಗೋಷ್ಠಿಗಳು ಇದ್ದುವು; ವಚನರಚನೆ ಮಿತ್ತು ಎಂದು ನಂಬಲು ಏನೂ ಅಡ್ಡಿಯಿಲ್ಲ. ಶರಣಸಂಗೀತಗೋಷ್ಠಿ ನಡೆಯಲು, ಜೇಡರ ದಾಸಿಮಯ್ಯನಂಥ ಅರ್ಥಪೂರ್ಣ ಸುಂದರ ವಚನಗಳ ರಚನೆಯಾಗಲು ಅದರ ಹಿಂದೆ ಬಹುಕಾಲದ ಒಂದು ಪರಂಪರೆ ನಡೆದುಕೊಂಡು ಬಂದಿರಲೇಬೇಕು. ಅದರೆ ಅದು ಎಷ್ಟು ಹಿಂದಿನದು ಎಂದು ನಿರ್ದಿಷ್ಟವಾಗಿ ಹೇಳಲು ಆಧಾರಗಳು ಸದ್ಯ ಇಲ್ಲದಿದ್ದರೂ ಅದು ನೂರು ವರ್ಷಗಳಷ್ಟು ಹಿಂದಿನದು ಎಂದು ಖಚಿತವಾಗಿ ಹೇಳಲು ಆಧಾರಗಳು ಇವೆ. ಸಂಶೋಧನೆ ಮುಂದುವರಿದಂತೆ ಈ ಕಾಲ ಇನ್ನೂ ಹಿಂದೆ ಹೋಗಲು ಸಾಧ್ಯತೆ ಇದೆ. ಈ ಬೆಳಿನಲ್ಲಿ ನೋಡಿದಾಗ, “ಇದರಿಂದ ಶರಣರ ಮತ್ತು ವಚನಕಾರರ ಪರಂಪರೆ ದೇವರದಾಸಿಮಯ್ಯನ ಕಾಲದಲ್ಲಿಯೇ ಸಣ್ಣ ಪ್ರಮಾಣದಲ್ಲಿ ಮೊದಲಾಯಿತೆಂದು ತೋರುತ್ತದೆ”[14] ಎಂಬ ಡಾ|| ಮುಗಳಿಯವರ ಮಾತು ನಿಲ್ಲುವುದಿಲ್ಲ ಎನಿಸುತ್ತದೆ.

ಬಸವಣ್ಣನವರು ತಮ್ಮ ವಚನಗಳಲ್ಲಿ ಜೇಡರ ದಾಸಿಮಯ್ಯ, ಡೋಹರಕಕ್ಕಯ್ಯ, ಮಾದರಚನ್ನಯ್ಯ, ತೆಲುಗುಜೋಮ್ಮಯ್ಯ ಮತ್ತು ಕೆಂಭಾವಿಭೋಗಣ್ಣ ಇವರನ್ನು ಹೃದಯತುಂಬಿ ನೆನೆಯುತ್ತಾರೆ. ಇವರೆಲ್ಲ ಬಸವಣ್ಣನವರಿಗಿಂತ ಕ್ರಿ.ಶ. ೧೧೧೬೨ಕ್ಕಿಂತ ಹಿಂದೆ ಇದ್ದವರು.

ಬಸವಣ್ಣನವರಿಗಿಂತ ಹಿಂದೆ ಜೇಡರದಾಸಿಮಯ್ಯ, ಆತನಿಗಿಂತ ತುಸು ಹಿಂದೆ ಡೋಹರಕಕ್ಕಯ್ಯ, ಆತನಿಗಿಂತ ಹಿಂದೆ ಮಾದರಚನ್ನಯ್ಯ – ಇದನ್ನು ಕಾವ್ಯ, ಇತಿಹಾಸ, ವಚನ, ಶಾಸನಗಳಿಂದ ಸಿದ್ದಗೊಳಿಸಲು ಸಾಧ್ಯವಿದೆ.

ಕ್ರಿ.ಶ. ೧೧೫೦[15] ರಲ್ಲಿದ್ದ ಬ್ರಹಶಿವ ತನ್ನ ಸಮಯಪರೀಕ್ಷೆಯಲ್ಲಿ ಜೇಡರದಾಸಿಮಯ್ಯನಿಗೆ ರಾಮನಾಥ ಬಾಗಿಲು ತೆರೆದ ಪವಾಡವನ್ನು ಗೇಲಿಮಾಡಿದ್ದಾನೆ.[16] ಕ್ರಿ.ಶ. ೧೧೫೦ಕ್ಕಿಂತ ಹಿಂದೆ ಜೇಡರದಾಸಿಮಯ್ಯ ಇದ್ದಂತಾಯಿತು; ಇಷ್ಟೇ ಅಲ್ಲ, ಆತನ ಆ ಪವಾಡ ನಡೆದು ಜನಜನಿತವಾಗಿ ಬ್ರಹ್ಮ ಶಿವನ ಕಿವಿಗೆ ಬೀಳಬೇಕಾದರೆ ಬಹಳ ವರ್ಷಗಳು ಕಳೆದಿರಬೇಕು.

ಜೇಡರದಾಸಿಮಯ್ಯನಿಗೆ ಸಂಬಂಧಿಸಿದ ಹತ್ತು ಶಾಸನಗಳು ಈಗ ದೊರಕಿವೆ.[17] ಇವು ಆತನ ಘನತೆ, ವ್ಯಕ್ತಿತ್ವ, ವ್ಯಾಪಕವಾದ ಶಿಷ್ಯಸಂತಾನ ಮತ್ತು ಆ ಶಿಷ್ಯಸಂಪ್ರದಾಯವನ್ನು ಬಿತ್ತರಿಸುತ್ತವೆ; ಅಲ್ಲದೆ ಆತನ ಕಾಲನಿರ್ಣಯಕ್ಕೆ ಹೆಚ್ಚು ಸಹಾಯಕವೂ ಆಗಿವೆ. ಈ ಹತ್ತು ಶಾಸನಗಳಲ್ಲಿ ಕ್ರಿ.ಶ. ೧೧೪೮ರ ಗೊಬ್ಬೂರಿನ ಶಾಸನವೇ ತೀರ ಹಿಂದಿನದು; ಕಾಲನಿರ್ಣಯಕ್ಕೆ ಹೆಚ್ಚು ಮಹತ್ವವುಳ್ಳುದು. “ಪಿರಿಯ ಗೊಬ್ಬೂರ ಶೇಷಮಹಾಜನಂಗಳ ದಿವ್ಯ ಶ್ರೀ ಪಾದಪದ್ಮಾರಾಧಕರ ಶ್ರೀರಾಮೇಶ್ವರದೇವರ ಗಂಧವಾರಣರ್ ಜಾಡಕುಲತಿಲಕ ಜೇಡರದಾಸಿಮಯ್ಯ ಪ್ರಿಯಪುತ್ರರುಮಪ್ಪ ಸಕಲ ಜಾಡಗೊತ್ತುಳಿಗಳು” ಗೊಜ್ಜೇಶ್ವರದೇವರಿಗೆ ದತ್ತಿ ನೀಡಿದ್ದಾರೆ. “ಪ್ರಿಯಪುತ್ರರುಮಪ್ಪ ಸಕಲ ಜಾಡಗೊತ್ತಳಿಗಳು” ಎಂಬುದನ್ನು ವಿಶ್ಲೇಷಿಸಿ ಶ್ರೀ ಎಚ್. ದೇವಿರಪ್ಪನವರು, “…ಪ್ರಿಯಪುತ್ರ, ಪ್ರಿಯಶಿಷ್ಯ, ವರಸುತ ಮುಂತಾದ ವಿಶೇಷಣ ಸಹಿತವಾದ ಪದಗಳಿದ್ದರೆ ಅಂತಹವಕ್ಕೆ ಖಾಸಾಶಿಷ್ಯ ಎಂದೇ ಅರ್ಥಯಿಸಬೇಕಾಗುತ್ತದೆ. ಗೊಬ್ಬೂರಿನ ಜಾಡಗೊತ್ತಳಿಗಳು ಜೇಡರದಾಸಿಮಯ್ಯನಿಂದಲೇ ನೇರವಾಗಿ ಉಪದೇಶ ಪಡೆದವರು”[18] ಎನ್ನುತ್ತಾರೆ. ಇದರಿಂದ ಈ ಶಾಸನ ಜೇಡರದಾಸಿಮಯ್ಯ ಬದುಕಿದ್ದಾಗಲೇ ಅದುದು ಇಲ್ಲ. ಅವರ ವಿಶ್ಲೇಷಣೆಗೆ ಗಟ್ಟಿ ಆಧಾರಗಳಿಲ್ಲ; ಪ್ರಿಯ, ವರ, ಎಂಬ ಪದಗಳು ಉಪಯೋಗವಾದಲ್ಲಿ ಖಾಸಾ ಎಂಬ ಅರ್ಥವಾಗುತ್ತದೆ ಎನ್ನಲಿಕ್ಕೆ ಎಲ್ಲಿಯೂ ಆಧಾರಗಳಿಲ್ಲ; ಉದಾಹರಣೆಗಳಿಲ್ಲ. ಪ್ರೀತಿಯವರು ಬೇಕಾದವರು ಎಂದು ಅರ್ಥ ಮಾಡಬಹುದೇ ಹೊರತು ‘ಖಾಸಾ’, ‘ಸ್ವಂತ’ ಎಂದು ಅರ್ಥಮಾಡಲಿಕ್ಕಾಗುವುದಿಲ್ಲ. “ಕ್ರಿ.ಶ೧೧೪೮ರಲ್ಲಿ ದತ್ತಿ ನೀಡಿದ ಇವರು ದಾಸಿಮಯ್ಯನ ನೇರವಾದ ಶಿಷ್ಯರಾಗಿರದೆ ಪರಂಪರೆಯ ಶಿಷ್ಯರಾಗಿರಬೇಕು”[19] ಎಂಬ ಡಾ|| ಎಂ.ಎಂ. ಕಲಬುರ್ಗಿಯವರ ಅಭಿಪ್ರಾಯ ಸರಿಯಾದುದು. ಜೇಡರದಾಸಿಮಯ್ಯನ ಶಿಷ್ಯಸಂಪ್ರದಾಯ ಬೆಳೆದು ಸುಮಾರು ಒಂದು ಒಂದುವರೆ ತಲೆಮಾರಿನ ಬಳಿಕ ೧೧೪೮ರ ಶಾಸನ ಸೃಷ್ಟಿಯಾಗಿರಬೇಕು ಮತ್ತು ಆ ಶಿಷ್ಯ ಸಂಪ್ರದಾಯ ಕ್ರಿ.ಶ. ೧೨೦೧ರವರೆಗೆ[20] ಮುಂದುವರೆದಿರಬೇಕೆಂದು ಅಭಿಪ್ರಾಯ ಪಡಬಹುದು.[21] ನಮಗೆನಿಸುವಂತೆ ಜೇಡರದಾಸಿಮಯ್ಯ ಕ್ರಿ.ಶ. ೧೦೭೦ಕ್ಕಿಂತ ಈಚೆ ಹುಟ್ಟಿದವನಲ್ಲ. ಸುಮಾರು ಕ್ರಿ.ಶ.೧೦೯೦ರಲ್ಲಿ ಪ್ರಸಿದ್ಧನಾಗಿರಬೇಕು; ಪವಾಡಗಳನ್ನು ಮೆರೆದಿರಬೇಕು; ವಚನಗಳನ್ನು ರಚಿಸರಬೇಕು. ಆತನ ಶಿಷ್ಯ ಸಂಪ್ರದಾಯ ಆಗ ಪ್ರಾರಂಭವಾಗಿರಬೇಕು.

ಜೇಡರದಾಸಿಮಯ್ಯನ ಮೂರು ವಚನಗಳು ಆತನ, ಆತನ ಸಮಕಾಲೀನರ ಮತ್ತು ಆತನ ಹಿಂದಿನ ಶರಣರ ಕಾಲನಿರ್ಣಯಕ್ಕೆ ಬಹಳ ಸಹಕಾರಿಯಾಗಿವೆ.

ಕೀಳು ಡೋಹರ ಕಕ್ಕ, ಕೀಳು ಮಾದರಚೆನ್ನ,
ಕೀಳು ಓಹಿಲದೇವ, ಕೀಳು ಉದ್ಭಟಯ್ಯ,
ಕೀಳಿಂಗಲ್ಲದೆ ಹಯನ ಕರೆಯದು ಕಾಣಾ ರಾಮನಾಥ [22]
ನಂಬಿದ ಚೆನ್ನನ ಅಂಬಲಿಯನುಂಡ
ಕೆಂಭಾವಿ ಭೋಗಯ್ಯನ ಹಿಂದಾಡಿಹೋದ
ಗುಂಡಯ್ಯನ ಕುಂಭದ ಗತಿಗೆ ಕುಕಿಲಿರಿದು ಕುಣಿದ
ನಂಬದೆ ಕರೆದವರ ಹಂಬಲನೊಲ್ಲನೆಮ್ಮ ರಾಮನಾಥ [23]
ನೆರೆನಂಬಿ ಕರೆದಡೆ ನರಿ ಕುದುರೆಯಾಗಿ ಹರಿಯವೇ?
ಜಗವೆಲ್ಲರಿಯಲು ತೊರೆಯೊಳಗೆ ಬಿದ್ದ ಲಿಂಗ
ಕರೆದರೆ ಬಂದುದು ಕರಸ್ಥಲಕ್ಕೆ!
ನಂಬದೇ ಕರೆದವರ ಹಂಬಲವನೊಲ್ಲನೆಮ್ಮ ರಾಮನಾಥ [24]

ಈ ವಚನಗಳಲ್ಲಿ ಉಕ್ತವಾದ ಕೆಂಭಾವಿ ಭೋಗಣ್ಣ, ಕುಂಬಾರರ ಗುಂಡಯ್ಯ ಮತ್ತು ಕೇಶಿರಾಜ ಇವರು ಜೇಡರದಾಸಿಮಯ್ಯನ ಸಮಕಾಲೀನರು. ಡೋಹರಕಕ್ಕ ಮತ್ತು ಮಾದಾರಚನ್ನ ಆತನಿಗಿಂತ ಹಿಂದಿನವರು.

ಮೂರನೆಯ ವಚನದಲ್ಲಿರುವ “ತೊರೆಯೊಳಗೆ ಬಿದ್ದ ಲಿಂಗವ ಕರೆದರೆ ಬಂದುದು ಕರಸ್ಥಲಕೆ” ಎಂಬ ಮಾತು ಕೊಂಡಗುಳಿ ಕೇಶಿರಾಜನ ಪವಾಡವನ್ನು ಸಾರುತ್ತದೆ.[25] ಕೊಂಡುಗುಳಿ ಕೇಶಿರಾಜ ಶಿವಾನುಭವಿಯೂ ಕವಿಯೂ ಆಗಿದ್ದನು. ಈತನ ಶೀಲ ಸೌಜನ್ಯ ಪಾಂಡಿತ್ಯ ಕಲಿತನಗಳಿಗೆ ಮೆಚ್ಚಿ ಕಲ್ಯಾಣ ಚಾಳುಕ್ಯರ ಆರನೆಯ ವಿಕ್ರಮಾದಿತ್ಯ ಈತನನ್ನು ತನ್ನ ಮಂತ್ರಿಯನ್ನಾಗಿ ಮಾಡಿಕೊಂಡಿದ್ದ.

ಕೊಂಡುಗುಳಿ ಕೇಶಿರಾಜನ ಎರಡು ಶಾಸನಗಳು ಅವನ ಜೀವನದ ನಿಶ್ಚಿತಕಾಲವನ್ನು ಹೇಳಲು ಸಹಾಯಕವಾಗಿವೆ. ಅಲ್ಲದೆ ಜೇಡರದಾಸಿಮಯ್ಯನ ಕಾಲನಿರ್ಣಯಕ್ಕೂ ಸಹಾಯಕಾರಿಯಾಗಿವೆ. ಇವೆರಡು ಶಾಸನಗಳು ಆತನ ಹುಟ್ಟೂರಾದ ಡೋಣಿಕೊಂಡಗುಳಿಯಲ್ಲಿಯೇ ದೊರಕಿವೆ. ಡೋಣಿ ಕೊಂಡಗುಳಿ ವಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನಲ್ಲಿದೆ. ಮೊದಲ ಶಾಸನದ ಕಾಲ ಕ್ರಿ.ಶ. ೧೧೦೭.[26] ಇದರಲ್ಲಿ “ಪಂಚಮಹಾಶಬ್ದ, ಸಾಮಂತಾಧಿಪತಿ, ಮಹಾಪ್ರಚಂಡ ದಂಡನಾಯಕ… ಕೇಶಿರಾಜರಸರು” ಎಂದು ಹೇಳಿದೆ. ಈ ಶಾಸನದಕಾಲಕ್ಕೆ ಕೇಶಿರಾಜ ದಂಡನಾಯಕನಾಗಿದ್ದ. ಎರಡನೆಯ ಶಾಸನದ ಕಾಲ ಕ್ರಿ.ಶ. ೧೧೩೨.[27] ಈ ಶಾಸನ ಕಲ್ಯಾಣ ಚಾಳುಕ್ಯರ ಭೊಲೋಕಮಲ್ಲಸೋಮೇಶ್ವರನ ಕಾಲಕ್ಕೆ ಸಂಬಂಧಿಸಿದ್ದು. ಇದರಲ್ಲಿ ಮೊದಲ ಶಾಸನದಲ್ಲಿರುವಂತೆ ಯಾವ ಬಿರುದುಗಳೂ ಇಲ್ಲೆ “ಶ್ರೀಮತ್ ಕೇಶಿಮಯ ದಂಡನಾಯಕರು” ಎಂದು ಕರೆಯಲಾಗಿದೆ. ಇದರಿಂದ ಈತ ಈ ಕಾಲದಲ್ಲಿ ಮಂತ್ರಿಯಾಗಿರಲಿಲ್ಲವೆಂದು ಖಚಿತವಾಗುತ್ತದೆ. ಆದರೆ ಆತ ಮಂತ್ರಿಪದವಿ ಎಂದು ಬಿಟ್ಟನೆಂಬುದು ಖಚಿತವಾಗಿ ಗೊತ್ತಾಗುವುದಿಲ್ಲ. ಆದರೆ ಆತ ಮಂತ್ರಿಯಾದ ಬಳಿಕ ಕೆಲವೇ ವರ್ಷಗಳಲ್ಲಿ ಅವನಿಗೂ ದೊರೆಗೂ ಮನಸ್ತಾಪವಾಯಿತೆಂದು ರಗಳೆಯಿಂದ ತಿಳಿಯುತ್ತದೆ. ಚಾಲುಕ್ಯ ವಿಕ್ರಮನಿಗೂ ಈತನಿಗೂ ಮನಸ್ತಾಪವಾದ ಬಳಿಕ ಮಂತ್ರಿಪದವಿ ತ್ಯಜಿಸಿ ಕೊಂಡಗುಳಿಗೆ ಹೋಗುವಾಗ ನಡುವೆ ನದಿ(ಭೀಮ)ಯಲ್ಲಿ ಆ ಪವಾಡ ನಡೆಯಿತೆಂದು ಹರಿಹರ ಹೇಳುತ್ತಾನೆ.[28] ಜೇಡರದಾಸಿಮಯ್ಯನ ಮುದನೂರಿಗೂ ಕೊಂಡಗುಳಿಗೂ ಬಹಳ ದೂರವಿಲ್ಲ. ಈ ಪವಾಡದ ಸುದ್ದಿ ತಿಳಿಯಲು ಹದಿನೈದು ದಿನಗಳಾದರೆ ಬಹಳವಾಯಿತು. ಕ್ರಿ.ಶ. ೧೧೨೦ಕ್ಕಿಂತ ಮುಂಚೆಯೇ ಕೇಶಿರಾಜ ಮಂತ್ರಪದವಿ ತ್ಯಜಿಸಿರಬೇಕು. ಅದೇ ಸುಮಾರಿಗೆ ಜೇಡರದಾಸಿಮಯ್ಯ ತನ್ನ ಅ ವಚನ ರಚಿಸಿರಬೇಕು. ಇವರಿಬ್ಬರೂ ಒಮ್ಮೆಯಾದರೂ ಕೂಡಿ ಶಿವಗೋಷ್ಠಿ ನಡೆಸಿರಬೇಕೆಂದು ಊಹಿಸಬಹುದು. “ಕೊಂಡಗುಳಿ ಕೇಶಿರಾಜ ದಣ್ಣಾಯಕ ೧೧೦೭ಕ್ಕಿಂತ ಮೊದಲು ಹುಟ್ಟಿ ಕ್ರಿ.ಶ. ೧೧೩೨ ತರುವಾಯ ಲಿಂಗೈಕ್ಯನಾಗಿರುವುದು ಸತ್ಯ.”[29]

ಈ ಮೊದಲ ವಿವೇಚನೆಯಿಂದ ಮತ್ತು ಕೊಂಡಗುಳಿ ಕೇಶಿರಾಜನ ಶಾಸನಗಳಿಂದ ಮತ್ತು ಆತನ ಪವಾಡವನ್ನು ತನ್ನ ವಚನದಲ್ಲಿ ಉಲ್ಲೇಖಿಸುವುದರಿಂದ ಜೇಡರದಾಸಿಮಯ್ಯ ಕ್ರಿ.ಶ. ೧೧೨೫ಕ್ಕಿಂತ ಈಚಿನವನಲ್ಲ ಮತ್ತು ಕ್ರಿ.ಶ. ೧೦೭೦ಕ್ಕಿಂತ ಆಚೆಯವನಲ್ಲ ಎಂದು ಒಂದು ನಿಶ್ಚಯಕ್ಕೆ ಬರಬಹುದು. ಕೇಶಿರಾಜನ ಪವಾಡವನ್ನು ಆತ ತನ್ನ ಕೊನೆಗಾಲದಲ್ಲಿ ವರ್ಣಿಸಿರಲು ಸಾಧ್ಯ.

ಡೋಹರಕಕ್ಕಯ್ಯ ಜೇಡರದಾಸಿಮಯ್ಯನಿಗಿಂತ ತುಸು ಹಿಂದಿನವ. ಈತ ಮಾಳವದಿಂದ ಬಂದವನೆಂದು ಡಾ|| ಪಿ.ಜಿ. ಹಳಕಟ್ಟಿಯವರು ಹೇಳುತ್ತಾರೆ.[30] ಇದಕ್ಕೆ ಏನು ಆಧಾರವೋ ತಿಳಿಯದು. ಬಸವಣ್ಣನವರ ಕಾಲಕ್ಕೆ ಆತ ಕಲ್ಯಾಣದಲ್ಲಿ ಇದ್ದ. ಅವರಿಗೆ ಆತ ಹಿರಿಯಸಮಕಾಲೀನ. ಕಲ್ಯಾಣಕ್ಕೆ ಬರುವ ಮುಂಚೆ ಆತ ಲಕ್ಕಣ್ಣ ದಂಡೇಶನ ಶಿವತತ್ವಚಿಂತಾಮಣಿಯಂತ ಬೆಜವಾಡದಲ್ಲಿ ಇದ್ದ. ಈ ಕಾವ್ಯ ಬಿಟ್ಟರೆ ಈತನ ಕಾಲನಿರ್ಣಯಕ್ಕೆ ಬೇರೆ ಯಾವ ಸಾಧನಗಳೂ ಇಲ್ಲ. ಶಿವತತ್ವ ಚಿಂತಾಮಣಿಯಲ್ಲಿನ ಶ್ರೀಪತಿಪಂಡಿತನ ಚರಿತ್ರೆ ಕಕ್ಕಯ್ಯನ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ. ಶ್ರೀಪತಿಪಂಡಿತ ಬೆಜವಾಡದಲ್ಲಿದ್ದ; ಕಕ್ಕಯ್ಯ ಅಲ್ಲಿಯೇ ಇದ್ದ. ಒಂದು ದಿನ ಶ್ರೀಪತಿಪಂಡಿತ ಕಕ್ಕಯ್ಯನ ಮನೆಯಲ್ಲಿ ಪ್ರಸಾದ ಸೇವಿಸಿದ. ಇದರಿಂದ ಬ್ರಾಹ್ಮಣರು ಶೂದ್ರನಾದ ಕಕ್ಕಯ್ಯನ ಮನೆಯಲ್ಲಿ ಕುಲಜನಾದ ಶ್ರೀಪತಿಪಂಡಿತ ಉಣ್ಣಬಹುದೇ ಎಂದು ರೊಚ್ಚಿಗೆದ್ದರು. ಕುಲಜರು ನಿಜವಾಗಿ ಯಾರು ಎಂಬ ವಾದ ನಡೆದು ಶ್ರೀಪತಿ ಪಂಡಿತರು ‘ಅಗ್ನಿಪವಾಡ’ ಮಾಡಿ ಬ್ರಾಹ್ಮಣರನ್ನು ಜಯಿಸಿದರು.[31] ಆದರೆ ಶ್ರೀಪತಿ ಪಂಡಿತ ಅಂತ್ಯಜನಾದ ಗೋಡಗರಿ ಮಲ್ಲಯ್ಯನ ಮನೆಯಲ್ಲಿ ಊಟಮಾಡಿದನು; ಆ ಕಾರಣದಿಂದ ಅಗ್ನಿಪವಾಡ ನಡೆಯಿತೆಂದು ಡಾ|| ಹಳಕಟ್ಟಿಯವರು ಹೇಳುತ್ತಾರೆ.[32] ಈ ಗೋಡಗರಿ ಮಲ್ಲಯ್ಯ ಯಾರೋ ತಿಳಿಯುವುದಿಲ್ಲ. ಕಕ್ಕಯ್ಯನ ಹೆಸರು ಹಳಕಟ್ಟಿಯವರ ಶ್ರೀಪತಿಪಂಡಿತನ ಚರಿತ್ರೆಯಲ್ಲಿ ಬರುವುದಿಲ್ಲ. ಶ್ರೀಪತಿಪಂಡಿತನ ಅಗ್ನಿಪವಾಡ ಕ್ರಿ.ಶ. ೧೦೯೦ರಿಂದ ೧೧೧೮ರವರೆಗೆ ಆಳಿದ ಆರನೆಯ ವಿಕ್ರಮಾದಿತ್ಯನ ದಂಡನಾಯಕನಾದ ಅಂತನಪಾಲನ ಕಾಲದಲ್ಲಿ ನಡೆಯಿತೆಂದು ಡಾ|| ಹಳಕಟ್ಟಿಯವರು ಹೇಳುತ್ತಾರೆ.[33] ಶ್ರೀ ಹೆಚ್.ದೇವಿರಪ್ಪನವರು ಇದೇ ಕಾಲವನ್ನು ಸೂಚಿಸಿ “ಕ್ರಿ.ಶ. ೧೧೨೦ರಲ್ಲಿಯೂ ಡೋಹರಕಕ್ಕಯ್ಯ ಇದ್ದನೆಂದು ಊಹಿಸಬೇಕಾಗುತ್ತದೆ” ಎನ್ನುತ್ತಾರೆ.[34] ಅಗ್ನಿಪವಾಡ ನಡೆದ ಬಳಿಕ ಡೋಹರಕಕ್ಕಯ್ಯ ಪ್ರಸಿದ್ಧಿಗೆ ಬಂದಿರಬೇಕು. ಬೆಜವಾಡದಿಂದ ಕರ್ನಾಟಕದ ಮುದನೂರಿಗೆ ಈ ಸುದ್ದಿ ಮುಟ್ಟಬೇಕಾದರೆ ಕೆಲವು ವರ್ಷಗಳಾದರೂ ಹಿಡಿದಿರಬೇಕು. ಈ ಪವಾಡ ಕ್ರಿ.ಶ. ೧೧೦೦ರ ತರುವಾಯ ಮತ್ತು ೧೧೧೦ರ ಒಳಗೆ ಆಗಿರಬೇಕು. “ಬೆಜವಾಡದ ಮಲ್ಲೇಶ್ವರ ದೇವಾಲಯದಲ್ಲಿರುವ ಅಗ್ನಿಪವಾಡ ಹೇಳುವ ಶಾಸನದಲ್ಲಿ ವರ್ಷವಿದ್ದ ಭಾಗವು ಸೆವೆದು ಹೋಗಿದೆಯಾದುದರಿಂದ ಅದು ಯಾವ ಕಾಲದ್ದೆಂದು ನಿಶ್ಚಿತವಾಗಿ ಗೊತ್ತುವುದಿಲ್ಲ.[35] ಡಾ|| ಎಂ.ಎಂ. ಕಲಬುರ್ಗಿಯವರ ‘ಶಾಸನಗಳಲ್ಲಿ ಶಿವಶರಣರು’ ಎಂಬ ಗ್ರಂಥದಲ್ಲಿ ಈ ಶಾಸನದ ಕಾಲ ತೋರಿಸಿಲ್ಲ.

ಜೇಡರದಾಸಿಮಯ್ಯ ಕಕ್ಕಯ್ಯನನ್ನು ನೆನೆದು ಕ್ರಿ.ಶ. ೧೧೧೦ರ ತರುವಾಯ ವಚನ ರಚಿಸರಬೇಕು.

ಡೋಹರಕಕ್ಕಯ್ಯ ಬಹುದೀರ್ಘಕಾಲ ಬದುಕಿದನೆಂದು ತೋರುತ್ತದೆ. ಬೆಜೆವಾಡದ ಪವಾಡದ ಕಾಲಕ್ಕೆ ಆತ ತರುಣನಾಗಿರಬೇಕು. ಮುಂದೆ ಆತ ಬಸವಣ್ಣನವರ ಸಮಕಾಲೀನನಾಗಿ ಕಾದರವಳ್ಳಿಯ ಕದನದಲ್ಲಿಯೂ ಭಾಗವಹಿಸುತ್ತಾನೆ. ಹೀಗಾಗಿ ಆತ ಸುಮಾರು ಕ್ರಿ.ಶ. ೧೧೬೦ ರಿಂದ ೧೧೬೨ರವರೆಗೆ ಜೀವಿಸಿದ್ದನೆಂದು ನಿಶ್ಚಯಿಸಬಹುದು.

ಮಾದಾರಚನ್ನಯ್ಯ ಕರಿಕಾಲಚೋಳನ ಕಾಲದಲ್ಲಿದ್ದನು.[36] ಕರಿಕಾಲಚೋಳನೆಂಬ ಬಿರುದು ವೀರರಾಜೇಂದ್ರ, ಪರಾಕೇಸರಿ ಅಧಿರಾಜೇಂದ್ರ ಮತ್ತು ಒಂದನೆಯ ಕುಲೋತ್ತುಂಗ ಈ ಮೂವರಿಗೂ ಇತ್ತು. ಇವರಲ್ಲಿ ಚೆನ್ನಯ್ಯ ಯಾರ ಕಾಲದಲ್ಲಿದ್ದನೆಂಬುದೇ ಪ್ರಶ್ನೆ. ಡಾ|| ಹಳಕಟ್ಟಿಯವರು ಇವನು ಒಂದನೆಯ ಕುಲೋತ್ತುಂಗನ ಕಾಲದಲ್ಲಿದ್ದನೆಂದು ಹೇಳುತ್ತ. “ಚಾಳುಕ್ಯ ರಾಜನಾದ ಆರನೆಯ ವಿಕ್ರಮಾದಿತ್ಯನ ಕೂಡ ಅವನು (ಕರಿಕಾಲಚೋಳ) ಅನೇಕ ತುಮುಲ ಯುದ್ಧಗಳನ್ನು ನಡೆಸಿದನು. ಆದರೆ ಕಡೆಗೆ ವಿಕ್ರಮಾದಿತ್ಯ ಅವನ ಮಗಳನ್ನು ಲಗ್ನವಾಗಿ ಉಭಯರು ಸಂಧಾನಮಾಡಿಕೊಂಡಂತೆ ತೋರುತ್ತದೆ. ಆ ಕಾಲದಲ್ಲಿ ಕರ್ನಾಟಕಸ್ಥರಿಗೂ , ತಮಿಳರಿಗೂ ಅನೇಕ ರೀತಿಯಿಂದ ನಿಕಟಸಂಬಂಧವಿದ್ದಿತು… ಅನೇಕ ಶಿವಶರಣರು ತಮಿಳು ದೇಶಕ್ಕೆ ಹೋಗಿ ಅಲ್ಲಿ ತಮ್ಮ ಶಿವಾನುಭವದ ನಡೆಯನ್ನು ಪರಿಸರಿದ್ದೂ ಕಂಡು ಬರುತ್ತದೆ. ಆದ್ದರಿಂದ ಚೆನ್ನಯ್ಯನು ಇವರಂತೆಯೇ ಕರ್ನಾಟಕವನ್ನು ಬಿಟ್ಟು ಕಾಂಚೀಪುರಕ್ಕೆ ಹೋಗಿ ಅಲ್ಲಿ ವಾಸಮಾಡಿದನೆಂದು ತೋರುತ್ತದೆ”[37] ಎಂದು ಅಭಿಪ್ರಾಯಪಡುತ್ತಾರೆ.

ಡಾ|| ಹಳಕಟ್ಟಿಯವರ ಮೇಲಿನ ಅಭಿಪ್ರಾಯ ಸರಿಯೆಂದು ತೋರುತ್ತದೆ. ಆರನೆಯ ವಿಕ್ರಮಾದಿತ್ಯ ಮತ್ತು ಕರಿಕಾಲಚೋಳರಲ್ಲಿ ಸಂಬಂಧಬೆಳೆದ ಬಳಿಕ ಎರಡೂ ನಾಡುಗಳಲ್ಲಿ ಒಂದು ಮಧುರವಾದ ಸಾಂಸ್ಕೃತಿಕ ಸಂಬಂಧ ಉಂಟಾಗಿರಲು ಸಾಧ್ಯ. ಈ ಸಂಬಂಧದಿಂದ ಅನೇಕ ಜನ ಇಲ್ಲಿಂದ ಅಲ್ಲಿಗೆ ಹೋಗಿ, ಅಲ್ಲಿಂದ ಇಲ್ಲಿಗೆ ಬಂದು ನೆಲೆಸಿರುವುದು ಸಾಧ್ಯವೆಂದು ನಂಬಬಹುದು. ಅಲ್ಲದೆ ಆ ಕಾಲದಲ್ಲಿ ಕರ್ನಾಟಕದಲ್ಲಿ ಶರಣಪರಂಪರೆ ಪ್ರಾರಂಭವಾಗಿ ಅದು ದಕ್ಷಿಣಭಾರತದಲ್ಲಿ ಹರಡಿಕೊಳ್ಳುತ್ತಿತ್ತೆಂದು ಊಹಿಸಲು ಬಲವಾದ ಆಧಾರಗಳಿವೆ. ಈ ಸಂಪ್ರದಾಯವನ್ನು ಹರಡುವ ಮಹಾಮಣಿಹ ಹೊತ್ತು ಚೆನ್ನಯ್ಯ ತಮಿಳುನಾಡಿಗೆ ಹೋಗಿರಬೇಕು. ಅಲ್ಲದೆ, ಕರಿಕಾಲಚೋಳನ ಶಿವಭಕ್ತಿ ಆತನನ್ನು ಕಾಂಚಿಗೆ ಆಕರ್ಷಿಸಿರಲೂಬಹುದು.

ಆದರೆ ಚಾಳುಕ್ಯ ಆರನೆಯ ವಿಕ್ರಮಾದಿತ್ಯ ಮದುವೆಯಾದುದು ವೀರರಾಜೇಂದ್ರನ ಮಗಳನ್ನು; ಒಂದನೆಯ ಕುಲೋತ್ತುಂಗನ ಮಗಳನ್ನಲ್ಲ. ಆ ಮದುವೆ ಕ್ರಿ.ಶ. ೧೦೭೦ಕ್ಕಿಂತ ಮುಂಚೆ ಆಗಿರಬೇಕು. ಆಗಿನ್ನೂ ಆರನೆಯ ವಿಕ್ರಮಾದಿತ್ಯ ರಾಜನಾಗಿರಲಿಲ್ಲ. ಚೆನ್ನಯ್ಯ ತಮಿಳುನಾಡಿಗೆ ಹೋಗಿರಬೇಕು. ಆತ ಕುಲೋತ್ತುಂಗನ ಕಾಲದಲ್ಲಿಯೂ ಕಂಚಿಯಲ್ಲಿಯೇ ಇರಬೇಕು. ಪೆರಿಯ ಪುರಾಣವನ್ನು ಬರೆಸಿದ ಈ ಕುಲೋತ್ತಂಗನೊಡನೆ ಚೆನ್ನಯ್ಯನ ಸಂಬಂಧ ಬಂದುದು. ಹರಿಹರ ಹೇಳುವ ಕುಲೋತ್ತುಂಗ ಇವನೇ. ಇವನು ಕ್ರಿ.ಶ. ೧೦೭೦ರಿಂದ ೧೧೨೦ರವರೆಗೆ ರಾಜ್ಯವಾಳಿದ. ಇದೇ ಅವಧಿಯಲ್ಲಿ ಚೆನ್ನಯ್ಯನ ಗುಪ್ತಭಕ್ತಿ ಬಯಲಾದುದು. ಗುಪ್ತಭಕ್ತಿ ಬಯಲಾದ ಈ ಪವಾಡ ತಮಿಳುನಾಡಿನಿಂದ ಕನ್ನಡನಾಡಿಗೆ ಬರಲು ಕೆಲವು ಕಾಲ ಹಿಡಿದಿರಬೇಕು. ಈ ಪವಾಡ ಸುಮಾರು ೧೧೦೦ರಲ್ಲಿ ಜರುಗಿದುದೆಂದು ಇಟ್ಟುಕೊಳ್ಳಬಹುದು.

ಜೇಡರದಾಸಿಮಯ್ಯ, ಡೋಹರಕಕ್ಕಯ್ಯ ಮತ್ತು ಮಾದಾರಚೆನ್ನಯ್ಯನನ್ನು ಕುರಿತು ಕ್ರಿ.ಶ.೧೧೦೦ರ ಬಳಿಕ ವಚನರಚನೆ ಮಾಡಿದನೆಂಬುದಕ್ಕೆ ಮೇಲಿನ ವಿವೇಚನೆಯಿಂದ ಪುಷ್ಟಿದೊರೆಯುತ್ತದೆ.

ಮಾದಾರಚೆನ್ನಯ್ಯ ತಮಿಳುನಾಡಿಗೆ ಹೋಗುವುದಕ್ಕೆ ಮುಂಚೆ (೧೦೭೦) ಪ್ರಸಿದ್ಧನಾಗಿರಬೇಕು. ಕ್ರಿ.ಶ.೧೦೪೦ರಲ್ಲಿ ಹುಟ್ಟಿ ಕ್ರಿ.ಶ. ೧೧೨೦ರವರೆಗೂ ಬಾಳಿರಬೇಕು.

ಹೀಗೆ ಬಸವಪೂರ್ವಯುಗದ ವಚನಕಾರರಲ್ಲಿ ಚೆನ್ನಯ್ಯ ಮೊದಲಿಗನೆನಿಸುತ್ತಾನೆ.

ಮಾದಾರಚೆನ್ನಯ್ಯನ ಜೀವನವನ್ನು ಬಗಿದುನೋಡಿದರೆ ಆತ ಕನ್ನಡನಾಡಿನ ಶರಣರು ಮಾಡಿದ ಕ್ರಾಂತಿಗೆ ಬೀಜರೂಪವೆನಿಸುತ್ತಾನೆ. ಹುಟ್ಟಿನಿಂದ ಬೆಲೆಯಿಲ್ಲ, ಯೋಗ್ಯತೆಯಿಂದ ಬೆಲೆಬರುತ್ತದೆ. ಜಾತಿಭಾವನೆ ಸಲ್ಲ, ಸರ್ವರೂ ಸಮ ಎಂಬ ತತ್ವದ ಸಾಕಾರಮೂರ್ತಿ ಆತ. ಅನುಭಾವ, ಭಕ್ತಿ, ಕಾಯಕ ಮುಂತಾದ ಹೊಸಸಮಾಜದ ಆಧಾರಸ್ತಂಭಗಳಾದ ತತ್ವಗಳ ಆಚರಣೆಯಲ್ಲಿ ಆತ ನಿಸ್ಸೀಮ.

ದೇವನೊಲ್ದನ ಕುಲಂ ಸತ್ಕುಲಂ
ಘನಮಹಿಮನೊಲ್ದನಜಾತಿಯೆ ಜಾತಿನಿರ್ಮಲಂ
ಶರ್ವನೊಡನುಂಡ ನಿಮ್ಮಯ ಜಾತಿಗಾಂ ಸರಿಯೆ
ಸರ್ವಜ್ಞ ನಿಮ್ಮ ಕೆರವಿಂಗೆನ್ನ ಶಿರ ಸರಿಯೆ[38]

ಕರಿಕಾಲಚೋಳನ ಈ ಮಾತುಗಳು ನವಮನ್ವಂತರದ ಮಂತ್ರಗಳಾಗಿವೆ; ಅಂದಿನವರೆಗೆ ನಡೆದುಬಂದ ಸಂಪ್ರದಾಯದ ತಾಯಿಬೇರನ್ನೇ ಅಲುಗಿಸಿತು ಚೆನ್ನಯ್ಯನ ಜೀವನ.

ವೇದ ನಡನಡುಗಿತ್ತು, ಶಾಸ್ತ್ರವಗಲಿ ಕೆಲಕ್ಕೆ ಸಾರಿದಿತ್ತಯ್ಯಾ!
ತರ್ಕ ತರ್ಕಿಸಲರಿಯದೆ ಮೂಗುವಟ್ಟಿದಿತ್ತಯ್ಯಾ!
ಆಗಮ ಹೆರತೊಲಗಿ ಅಗಲಿದಿತ್ತಯ್ಯಾ
ನಮ್ಮ ಕೂಡಲಸಂಗಯ್ಯನು ಚೆನ್ನಯ್ಯನ ಮನೆಯಲುಂಡ ಕಾರಣ![39]

ವೇದ, ಆಗಮ, ತರ್ಕ, ಶಾಸ್ತ್ರ – ಹಿಂದಿನ ಕಾಡುಕಟ್ಟುವ ನಂಬುಗೆಗಳೆಲ್ಲ ಏರುಪೇರಾದುವು. ಚೆನ್ನಯ್ಯ ನವಸಮಾಜದ – ಸರ್ವಸಮಾನತೆಯ, ಭಕ್ತಿ, ಅನುಭಾವ, ಕಾಯಕ, ದಾಸೋಹದ ತತ್ವಗಳಿಂದ ಕೂಡಿದ, ಸಕಲಜೀವರ ಲೇಸಬಯಸುವ ನವಸಮಾಜದ ಮುಂಬೆಳಗಾಗಿ ಜೀವಿಸಿದ ಕಾರಣಿಕ ಪುರುಷ.

ಮಾದಾರಚೆನ್ನಯ್ಯನ ವಚನಗಳು ನವಸಮಾಜದ ಸ್ಪಷ್ಟ ಹೊಳಹುಗಳನ್ನೊಳಗೊಂಡಿವೆ. ಆತನ ವಚನಗಳಲ್ಲಿ ಹೆಚ್ಚಾಗಿ ಕುಲದ ಸಮಸ್ಯೆಯೇ ಎದ್ದು ಕಾಣುತ್ತದೆ. ನವಸಮಾಜ ಮೊಟ್ಟಮೊದಲಿಗೆ ಕುಲದಸಮಸ್ಯೆಯನ್ನೇ ಬಗೆಹರಿಸಬೇಕಾಗುತ್ತು; ಸರ್ವಸಮಾನತೆ ತರುವವರೆಗೆ ಯಾವ ತತ್ವಗಳೂ ಜನಜೀವನದಲ್ಲಿ ನೆಲೆಗೊಳಿಸಲು ಸಾಧ್ಯವಿರಲಿಲ್ಲ. ಈ ಜಾತಿಯ ಸಮಸ್ಯೆ ಸಮಾಜದಲ್ಲಿ ನೂರಾರು ಸಮಸ್ಯೆಗಳನ್ನುಂಟು ಮಾಡಿತ್ತು. ಅವೆಲ್ಲವುಗಳನ್ನು ಹೊಡೆದು ಹಾಕಿ ನವಸಮಾಜ ನಿರ್ಮಾಪಕರು ಸಮಾನತೆಯನ್ನು ತರಬೇಕಾಗಿತ್ತು. ಆದುದರಿಂದ ಪ್ರತಿಯೊಬ್ಬ ವಚನಕಾರ ಕುಲದ ಸಮಸ್ಯೆ ಎತ್ತಿಕೊಳ್ಳುತ್ತಾನೆ. ಬಸವಣ್ಣನವರ ಕಾಲಕ್ಕಿಂತಲೂ ಚೆನ್ನಯ್ಯ ಹೆಚ್ಚಾದ ಸಮಸ್ಯೆಗಳನ್ನು ಎದುರಿಸಿರಬೇಕೆಂದು ಅವನ ವಚನಗಳಿಂದ ಕಂಡುಬರುತ್ತದೆ.

ವೇದಶಾಸ್ತ್ರಕ್ಕೆ ಹಾರುವನಾಗಿ, ವೀರವಿತರಣಕ್ಕೆ ಕ್ಷತ್ರಿಯನಾಗಿ
ಸರ್ವವನಾರೈದು ನೋಡುವಲ್ಲಿ ವೈಶ್ಯನಾಗಿ
ವ್ಯಾಪಾರದೊಳಗಾಗಿ ಕೃಷಿಯ ಮಾಡುವುದಕ್ಕೆ ಶೂದ್ರನಾಗಿ
ಇಂತೀ ಜಾತಿಗೋತ್ರದೊಳಗಾದ ನೀಚ ಶ್ರೇಷ್ಠವೆಂಬ
ಎರಡುಕುಲವಲ್ಲದೆ
ಹೊಲೆಹದಿನೆಂಟು ಜಾತಿ ಎಂಬ ಕುಲವಿಲ್ಲ
ಬ್ರಹ್ಮವನರಿದಲ್ಲಿ ಬ್ರಾಹ್ಮಣ
ಸರ್ವಜೀವ ಹತಕ್ಕೊಳಗಾಗಿದ್ದಲ್ಲಿ ಸಮಗಾರ
ಉಭಯವನರಿದು ಮರೆಯಲಿಲ್ಲ
ಕೈಯುಳಿಗತ್ತಿ ಅಡಿಗುಂಟಕ್ಕೆಡೆಯಾಗಬೇಡ
ಅರಿನಿಜಾತ್ಮ ರಾಮ ರಾಮನ

ಆವಕುಲವಾದಡೂ ಅರಿದಲ್ಲಿಯೇ ಪರತತ್ವಭಾವಿ
ಮರೆದಲ್ಲಿಯೆ ಮಾಯಾಮಲಸಂಬಂಧಿ
ನಡೆನುಡಿ ಸಿದ್ಧಾಂತವಾದಲ್ಲಿ ಕುಲಸೂತಕವಿಲ್ಲ
ಆಚಾರವೇ ಕುಲ ಅನಾಚಾರವೇ ಹೊಲೆ
ನರಕುಲ ಹಲವಾದಲ್ಲಿ ಯೋನಿಯ ಉತ್ಪತ್ತಿ ಒಂದೇ ಭೇದ
ಎಲ್ಲಕ್ಕೂ ನೀರು ನೆಲ ಸೂರ್ಯ ಸೋಮ ಆರೈದು ನೋಡುವ ದೃಷ್ಟಿ
ಒಂದೇ
ಸಾಂಖ್ಯ ಶ್ವಪಚ, ಅಗಸ್ತ್ಯ, ಕಬ್ಬಿಲ, ದೂರ್ವಾಸ ಮುಚ್ಚಿಗ,
ದಧೀಚಿ ಕೀಲಿಗ, ಕಶ್ಯಪ ಕಮ್ಮಾರ, ರೋಮಜ ಕಂಚುಗಾರ,
ಕೌಂಡಿಲ್ಯ ನಾವಿದನೆಂಬುದನರಿದು
ಮತ್ತೆಕುಲವುಂಟೆಂದು ಹೋರಲೇತಕ್ಕೆ?
ಇಂತೀ ಸಪ್ತ ಋಷಿಯರುಗಳೆಲ್ಲರೂ
ಸತ್ಯದಿಂದ ಮುಕ್ತರಾದುದನರಿಯದೆ
ಅಸತ್ಯದಲ್ಲಿ ನಡೆದು ವಿಪ್ರರು ನಾವು ಘನವೆಂದು
ಹೋರುವ ಹೊತ್ತು ಹೋಕರ ಮಾತೇತಕ್ಕೆ?
ಕೈಯುಳಿಗತ್ತಿ ಅಡಿಗುಂಟಕ್ಕೆಡೆಯಾಗಬೇಡ
ಅರಿನಿಜಾತ್ಮ ರಾಮ ರಾಮನ

ಮೇಲಿನ ವಚನಗಳಲ್ಲಿ ಚೆನ್ನಯ್ಯ ಕುಲಜಾತಿಗಳನ್ನು ಕುರಿತು ಬಹು ಸಮರ್ಥ ರೀತಿಯ ವಿಮರ್ಶೆ ಮಾಡಿದ್ದಾನೆ. ಕುಲದ ಮೂಲಬೇರನ್ನೇ ಕಿತ್ತೆಸೆದಿದ್ದಾನೆ.

ಚೆನ್ನಯ್ಯ ಕೆರವ ಹೊಲಿಯುವ ಕಾಯಕ ಮಾಡಿದಾತ. ಕೆಳಗಿನ ವಚನದಲ್ಲಿ ಕಾಯಕ ರೂಪಕಮಾಡಿ ಸಮಗಾರ ವೃತ್ತಿಯನ್ನು ಅನುಭಾವದ, ಸಾಮರಸ್ಯದ ಮಟ್ಟಕ್ಕೆ ಏರಿಸಿದ್ದನ್ನು ಕಾಣಬಹುದು. ಕಾಯಕವೇ ಕೈಲಾಸ, ಕಾಯಕವೇ ಸಾಮರಸ್ಯ ಎಂಬುದನ್ನು ತೋರಿ ಆತ ಬದುಕಿದ್ದಾನೆ.

ಸ್ಥೂಲಸೂಕ್ಷ್ಮಕಾರಣವೆಂಬ ಮೂರು ಕಂಬವನೆಟ್ಟು
ಆಗು ಛೇಗು ಎಂಬ ದಡಿಗೋಲಿನಲ್ಲಿ
ಆಗಡದ ಎಮ್ಮೆಯ ಚರ್ಮವ ತೆಗೆದು
ಉಭಯನಾಮವೆಂಬ ನಾರಿನಲ್ಲಿ ತಿತ್ತಿಯನೊಪ್ಪವಮಾಡಿ
ಭಾವವೆಂಬ ತಿಗುಡಿಯಲ್ಲಿ ಸರ್ವಸಾರವೆಂಬ ಕಾರದ ನೀರಹೊಯ್ದ
ಅಟ್ಟೆಯ ದುರ್ಗುಣಕೆಟ್ಟು ಮೆಟ್ಟಡಿಯವರಿಗೆ ಮೆಟ್ಟಿಸಬಂದೆ
ಮೆಟ್ಟಡಿಯ ತಪ್ಪಲಕಾಯದ ಮೆಟ್ಟಡಿಯ ಬಟ್ಟೆಯ ನೋಡಿಕೊಳ್ಳಿ
ಕೈಯುಳಿಗತ್ತಿ ಅಡಿಗುಂಟಕ್ಕೆಡೆಯಾಗಬೇಡ
ಅರಿನಿಜಾತ್ಮ ರಾಮ ರಾಮನ
ಅನುಭಾವ, ಸಾಮರಸ್ಯಕ್ಕೆ ಉದಾಹರಣೆ:
ವಸ್ತು ತನ್ನಯ ಭಾವದಲ್ಲಿ ನಿಶ್ಚಯವಾಗಿ ನಿಂದಲ್ಲಿ
ಕೃತ್ಯ ಅಕೃತ್ಯವೆಂಬ ಹೆಚ್ಚು ಕುಂದಿಲ್ಲ
………………………………….
ಉಮ್ಮಳ ದುಮ್ಮಳವೆಂಬ ಉಭಯವಳಿದ ಸುಮ್ಮಾನ ಸುಖಿಗೆ
ಕರ್ಮ ವಿಕರ್ಮವೆಂಬುದೊಂದು ಇಲ್ಲ…..

ಮಾದಾರಚೆನ್ನಯ್ಯನ ವಚನಗಳಲ್ಲಿ ಸೌಂದರ್ಯ ಕಡಿಮೆ; ಶೈಲಿ ನಯವಾಗಿಲ್ಲ. ಆದರೆ ಕೊಡುವ ಉದಾಹರಣೆ ದೃಷ್ಟಾಂತಗಳು ಸೊಗಸಾಗಿವೆ. ನೇರವಾಗಿ ಹೇಳುವುದರಿಂದ ಒರಟೂ ಹಿತವೆನಿಸುತ್ತದೆ. ಭಾಷೆಯನ್ನು ದುಡಿಸಿಕೊಳ್ಳುವಿಕೆಯಲ್ಲಿ ಹೊಸತನವಿದೆ. ಅದು ಅರ್ಥವಾಹಕವಾಗಿ, ಅನುಭಾವವಾಹಕವಾಗಿ, ಪಳಗಿದೆಯಾದರೂ ಮೃದುವಾಗಿಲ್ಲ, ಚೆಲುವಾಗಿಲ್ಲ. ಅಟ್ಟೆ, ದಡಿಗೋಲು, ಚರ್ಮ, ಮೆಟ್ಟಡಿ ಅಡಿಗೂಂಟ, ಕೈಯುಳಿಗತ್ತಿ, ತಿತ್ತಿ, ಉಮ್ಮಳ ದುಮ್ಮಳ ಮುಂತಾದ ಸಾಮಾನ್ಯ ಶಬ್ದಗಳ ಬಳಕೆಯಿಂದ ಅನುಭಾವ ಹೇಳುವುದು ತೀರಾ ಹೊಸತನ; ಚೆನ್ನಯ್ಯನಿಂದ ಭಾಷೆಗೆ ಅಂಟಿದ ಮಲಿನತೆ, ದೂರಾಗಿದೆ; ಮೈಲಿಗೆ ಮುಡಿಚೆಟ್ಟು ಮುಂತಾದ ಬಂಧನಗಳಿಂದ ಅದು ಬಿಡುಗಡೆ ಪಡೆದಿದೆ; ಅತೀಂದ್ರಿಯ ಅನುಭವ ಮೂಡಿಸುವ ಶಕ್ತಿ ಅದಕ್ಕೆ ಬಂದಿದೆ.

ರೂಪಕ, ಉಪಮಾನ, ನೇರ ಹೇಳುವಿಕೆ, ದಿಟ್ಟನಿಲುವು, ಅತಿಸೂಕ್ಷ್ಮ ವಿಚಾರಗಳನ್ನು ಒಳಗೊಳ್ಳುವ ಭಾಷೆ – ಇವುಗಳನ್ನು ನೋಡಿದರೆ ವಚನರಚನೆ ಪ್ರಾರಂಭವಾಗಿ ಆಗಲೇ ಬಹಳ ಕಾಲವಾಗಿರಬೇಕು ಎನಿಸುತ್ತದೆ. ಆದರೆ ನಮಗೀಗ ದೊರಕಿದ ವಚನಗಳಲ್ಲಿ ಇವೇ ಮೊದಲ ವಚನಗಳು; ಈತನೇ ಮೊದಲ ವಚನಕಾರ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

[1] ಡಾ|| ರಂ. ಶ್ರೀ. ಮುಗುಳಿ : ಪ್ರಾಚೀನ ಕನ್ನಡ ಸಾಹಿತ್ಯದ ರೂಪಗಳು’, ಪುಟ ೧೨೦

[2] ಡಾ|| ಎಲ್. ಬಸವರಾಜು : ಅಲ್ಲಮನ ವಚನ ಚಂದ್ರಿಕೆ’, ಪೀಠಿಕೆ, ಪುಟ ೧೧

[3] ಡಾ|| ರಂ. ಶ್ರೀ. ಮುಗುಳಿ: ಪ್ರಾಚೀನ ಕನ್ನಡ ಸಾಹಿತ್ಯದ ರೂಪಗಳು’, ಪುಟ ೧೨೧ ಅಡಿಟಿಪ್ಪಣಿ.

[4] ಬಿ.ವಿ. ಮಲ್ಲಾಫುರ ಸಂಪಾದಿತ: ಹರಿಹರನ ರಗಳೆಗಳು’, ಪುಟ ೨೯೭.

[5] ಬಿ.ವಿ. ಮಲ್ಲಾಫುರ ಸಂಪಾದಿತ: ಹರಿಹರನ ರಗಳೆಗಳು’, ಪುಟ ೨೯೭.

[6] ಬಿ.ವಿ. ಮಲ್ಲಾಫುರ ಸಂಪಾದಿತ: ಹರಿಹರನ ರಗಳೆಗಳು’, ಪುಟ ೨೯೮.

[7] ಬಿ.ವಿ. ಮಲ್ಲಾಫುರ ಸಂಪಾದಿತ: ಹರಿಹರನ ರಗಳೆಗಳು’, ಪುಟ ೩೦೩.

[8] ಬಿ.ವಿ. ಮಲ್ಲಾಫುರ ಸಂಪಾದಿತ: ಹರಿಹರನ ರಗಳೆಗಳು’, ಪುಟ ೪೧೨.

[9] ಈವರೆಗೆ ತಿಳಿದಂತೆ ತಮಿಳುನಾಡಿನ ಪುರಾತನರು ಶರಣರಂತೆ ಶಿವಗೋಷ್ಠಿಯನ್ನಾಗಲೀ ಶಿವಸಂಭಾಷಣೆಯನ್ನಾಗಲೀ ಮಾಡಿದಂತೆ ತಿಳಿದು ಬಂದಿಲ್ಲ.

[10] ಡಾ|| ಎಂ. ಚಿದಾನಂದಮೂರ್ತಿ: ಸಂಶೋಧನ ತರಂಗ’, ಭಾಗ ೧, ಪುಟ ೩೦.

[11] ಡಾ|| ರಂ. ಶ್ರೀ ಮುಗುಳಿ : ಪ್ರಾಚೀನ ಕನ್ನಡ ಸಾಹಿತ್ಯದ ರೂಪಗಳು’, ಪುಟ ೧೨೮.

[12] ಡಾ|| ಎಲ್. ಬಸವರಾಜು (ಸಂ): ದೇವರದಾಸಿಮಯ್ಯನ ವಚನಗಳು’, ಪುಟ ೯೭, ವಚನ ೧೩೦.

[13] ಡಾ|| ಎಲ್. ಬಸವರಾಜು (ಸಂ): ದೇವರದಾಸಿಮಯ್ಯನ ವಚನಗಳು’, ಪುಟ ೯೭, ವಚನ ೧೪೧.

[14] ಡಾ|| ರಂ. ಶ್ರೀ ಮುಗುಳಿ: ಪ್ರಾಚೀನ ಕನ್ನಡ ಸಾಹಿತ್ಯದ ರೂಪಗಳು’, ಪುಟ ೧೨೮.

[15] ರಾ. ಬ. ನರಸಿಂಹಾಚಾರ್: ಕರ್ನಾಟಕ ಕವಿಚರಿತೆ,’ ಭಾಗ ೧, ಪುಟ ೨೦೪ (೧೯೬೧).

[16] ದೇವರದಾಸಿಮಾರ್ಯ ಪ್ರಶಸ್ತಿ’, ಪುಟ ೧೮೦

[17] ಡಾ|| ಎಂ. ಎಂ. ಕಲಬುರ್ಗಿ: ಶಾಸನಗಳಲ್ಲಿ ಶಿವಶರಣರು’, ಪುಟ ೩೫ – ೩೮.

[18] ಎಚ್. ದೇವಿರಪ್ಪ ಮತ್ತು ಆರ್. ರಾಚಪ್ಪ: ಜೇಡರದಾಸಿಮಯ್ಯ ವಚನಗಳು’, ಪ್ರಸ್ತಾವನೆ. ಪುಟ xxiii(೧೯೭೪

[19] ಡಾ|| ಎಂ. ಎಂ. ಕಲಬುರ್ಗಿ: ಶಾಸನಗಳಲ್ಲಿ ಶಿವಶರಣರು’, ಪುಟ ೩೬(೧೯೭೦)

[20] ಅರಸಿಕೆರೆ ತಾಲ್ಲೂಕಿನ ಗೀಗಜಗನಹಳ್ಳಿ ಶಾಸನ: ಇದರಲ್ಲಿ ಜೇಡರ ದಾಸಿಮಯ್ಯನ ಮಗ ಕಾಟಿಗೌಡ ದತ್ತಿಬಿಟ್ಟ ವಿವರವಿದೆ. ಮಗ ಎಂದರೆ ಇಲ್ಲಿ ಶಿಷ್ಯನೆಂದೇ ಅರ್ಥ”. ಡಾ|| ಎಂ.ಎಂ. ಕಲಬುರ್ಗಿ: ಶಾ.ಶಿ.ಪು. ೩೨.

[21] ದೇವರ ದಾಸಿಮಯಾರ್ಯ ಪ್ರಶಸ್ತಿ’, ಪುಟ ೧೯೨ – ೧೯೩(೧೯೫೩)

[22] ಡಾ|| ಎಲ್. ಬಸವರಾಜು(ಸಂ): ದೇವರದಾಸಿಮಯ್ಯನ ವಚನಗಳು’, ಪುಟ ೯೩ ವಚನ ೧೨೬.

[23] ಡಾ|| ಎಲ್. ಬಸವರಾಜು(ಸಂ): ದೇವರದಾಸಿಮಯ್ಯನ ವಚನಗಳು’, ಪುಟ ೯೩ ವಚನ ೧೨೭.

[24] ಡಾ|| ಎಲ್. ಬಸವರಾಜು(ಸಂ): ದೇವರದಾಸಿಮಯ್ಯನ ವಚನಗಳು’, ಪುಟ ೯೩ ವಚನ ೧೨೮.

[25] ಭೀಮಾನದಿಯಲ್ಲಿ ಕುಳೀತು ಅಂಗೈಯಲ್ಲಿ ಲಿಂಗ ಹಿಡಿದು, ಕೆಂಪು ದಾಸವಾಳ ಪುಷ್ಪವೇರಿಸಿ ಕೇಶಿರಾಜ ಪೂಜಿಸುವಾಗ ಒಂದು ಗರುಡ ಆ ಲಿಂಗವನ್ನು ಹೂ ಸಹಿತ ಕಚ್ಚಿಕೊಂಡು ಹೋಯಿತು. ಆದರೆ ಆ ಲಿಂಗ ಅದರ ಬಾಯಿಂದ ಕಳಚಿ ನದಿಯಲ್ಲಿ ಬಿದ್ದಿತು. ಕೇಶಿರಾಜ ಅದನ್ನು ಹುಡುಕಿ ತೆಗೆಯಲು ದೋಣಿಯಲ್ಲಿ ಕುಳಿತು ಹೋದ. ಆತನ ಭಕ್ತಿಗೆ ಮೆಚ್ಚಿ ಹುಟ್ಟಿಲ್ಲದ ಶಿವ ಆತ ಹಾಕುತ್ತಿದ್ದ ಹುಟ್ಟಿನಲ್ಲಿಯೇ ಮೂಡಿಬಂದ. ಇದು ಆ ದಿವ್ಯ ಪವಾಡ. (ಹರಿಹರ: ‘ಕೇಶಿರಾಜ ದಣ್ಣಾಯಕ ರಗಳೆ’)

[26] ಡಾ|| ಎಂ.ಎಂ. ಕಲಬುರ್ಗಿ: ಶಾಸನಗಳಲ್ಲಿ ಶಿವಶರಣರು’, ಪುಟ ೪೨.

[27] ಜಿ.ಎಚ್. ಹನ್ನೆರಡುಮಠ: ಚಿತ್ಪ್ರಭ’, ಪು.೬೨೩ – ಹುಬ್ಬಳ್ಳಿ ಮೂರು ಸಾವಿರಮಠ ಪ್ರಕಾಶನ: || ಕಲಬುರ್ಗಿಯವರ ಲೇಖನ.

[28] ಹರಿಹರ: ಕೇಶಿರಾಜ ದಣ್ಣಾಯಕರ ರಗಳೆ

[29] ಡಾ|| ಎಂ.ಎಂ. ಕಲಬುರ್ಗಿ: ಚಿತ್ಪ್ರಭೆಯಲ್ಲಿ ಲೇಖನ, ಪುಟ. ೬೨೬.

[30] ಡಾ|| ಪಿ.ಜಿ. ಹಳಕಟ್ಟಿ: ಅಮರಗಣಾಧೀಶ್ವರರ ಚರಿತ್ರೆಗಳು,’ ಪುಟ ೮೮

[31] ವಿದ್ವಾನ್ ಪಂಡಿತ ಎಸ್.ಬಸಪ್ಪ(ಸಂ): ಶಿವತತ್ವಚಿಂತಾಮಣಿ’, ಪುಟ ೩೬೬, ಪದ್ಯಗಳು ೧೨೭, ೧೨೮, ೧೨೯ (೧೯೬೦) (ಅಗ್ನಿಯನ್ನು ಬಟ್ಟೆಯಲ್ಲಿ ಕಟ್ಟಿ ಶ್ರೀಪತಿ ಪಂಡಿತ ಶಮೀವೃಕ್ಷಕ್ಕೆ ತೂಗಹಾಕಿದ. ಆವೊತ್ತಿನಿಂದ ಯಾರ ಮನೆಯಲ್ಲಿಯೂ ಅಗ್ನಿಹೊತ್ತಲಿಲ್ಲ. ಆಗ ವೈದಿಕರು ಅವರಿಗೆ ಶರಣಾಗತರಾದರು. ಇದೇ ಆ ಪವಾಡ

[32] ಡಾ|| ಪಿ.ಜಿ. ಹಳಕಟ್ಟಿ; ಶಿವಶರಣರ ಚರಿತ್ರೆಗಳು’, ಭಾಗ ೨, ಪು. ೩೩೬.

[33] ಡಾ|| ಪಿ.ಜಿ. ಹಳಕಟ್ಟಿ: ಶಿವಶರಣರ ಚರಿತ್ರೆಗಳು’, ಭಾಗ ೨, ಪುಟ. ೩೩೮.

[34] ಎಚ್.ದೇವಿರಪ್ಪ ಮತ್ತು ಆರ್. ರಾಚಪ್ಪ: ಜೇಡರದಾಸಿಮಯ್ಯನ ವಚನಗಳು’, ಪ್ರಸ್ತಾವನೆ ಪುಟ xxv.

[35] ಡಾ|| ಪಿ.ಜಿ. ಹಳಕಟ್ಟಿ: ಶಿವಶರಣರ ಚರಿತ್ರೆಗಳು’, ಭಾಗ ೨, ಪುಟ. ೩೩೯.

[36] ಹರಿಹರ : ಮಾದಾರಚೆನ್ನಯ್ಯನ ರಗಳೆ

[37] Dr. P.B. Desai: A history of karnataka, p 171 (first edition 1970

[38] ಬಿ.ವಿ. ಮಲ್ಲಾಪುರ(ಸಂ) : ಹರಿಹರನ ರಗಳೆಗಳು : ಮಾದಾರಚೆನ್ನಯ್ಯಗಳ ಮಹಾತ್ಮೆ.’ ಪುಟ ೩೭೭

[39] ಡಾ|| ಆರ್. ಸಿ. ಹಿರೇಮಠ(ಸಂ): ಬಸವಣ್ಣನವರ ವಚನಗಳು’, ವಚನ ೭೪೯.