ಶಂಕರದಾಸಯ್ಯ ಕೀಳು ದೈವಗಳ ಸೊಕ್ಕು ಮುರಿದ, ಮಾರಕ ದೈವಗಳನ್ನು ಹಣೆಗಣ್ಣಿನುರಿಯಿಂದ ಸುಟ್ಟುರುಹಿದ. ಈ ದೈವಗಳ ಕೀಳ್ಮೆಯನ್ನು ಕಳೆದು, ಅವುಗಳನ್ನು ಉನ್ನತೀಕರಿಸುವ ಒಬ್ಬ ಮಹಾತ್ಮ ಹುಟ್ಟಿ ಬಂದ. ಆ ಮಹಾತ್ಮ ಢಕ್ಕೆಯ ಬೊಮ್ಮಣ್ಣ. ಆತ ಮಾರಿಯನ್ನು ತನ್ನ ಕಾಯಕದ ಸಾಧನವನ್ನಾಗಿ ಮಾಡಿ ಅದನ್ನು ಇಷ್ಟಲಿಂಗದ ಎತ್ತರಕ್ಕೆ ಏರಿಸಿದ ಮಹಾಮಹಿಮ.

ಢಕ್ಕೆಯ ಬೊಮ್ಮಣ್ಣನಿಗೆ ಮಾರಯ್ಯನೆಂದೂ ಹೆಸರುಂಟು. ಈ ಎರಡೂ ಹೆಸರಿನವರ ವಚನಗಳ ಅಂಕಿತ “ಕಾಲಾಂತಕ ಭೀಮೇಶ್ವರಿ ಲಿಂಗ” ಎಂದಿರುವುದರಿಂದ ಅವರಿಬ್ಬರು ಬೇರೆಯಲ್ಲ; ಒಬ್ಬ ವ್ಯಕ್ತಿಯೇ ಎಂದು ಖಚಿತವಾಗಿ ಹೇಳಬಹುದು. ಢಕ್ಕೆಯ ಬೊಮ್ಮಣ್ಣನ ಊರು ಯಾವುದು ಎಂದು ಸರಿಯಾಗಿ ತಿಳಿಯದಾಗಿದೆ. ಶಂಕರದಾಸಮಯ್ಯನ ಊರಾದ ಸ್ಕಂದ ಶಿಲೆಯೇ (ಕಂದಗಲ್ಲು) ಈತನ ಊರೆಂದು ಲಿಂ. ಡಾ. ಹಳಕಟ್ಟಿಯವರು ಅಭಿಪ್ರಾಯ ಪಡುತ್ತಾರೆ.

ಢಕ್ಕೆಯ ಬೊಮ್ಮಣ್ಣ ಶಂಕರದಾಸಮಯ್ಯನ ಕಿರಿಯ ಸಮಕಾಲೀನ. ಶಂಕರದಾಸಮಯ್ಯನಿಗೆ ಕೊನೆಯ ದಿನಗಳಲ್ಲಿ ತಲೆದೋರಿದ ಅಹಂಕಾರವನ್ನು ಢಕ್ಕೆಯ ಬೊಮ್ಮಣ್ಣ ತೊಡೆದುಹಾಕುತ್ತಾನೆ.

ಢಕ್ಕೆಯ ಬೊಮ್ಮಣ್ಣ ಮಾರಿಯನ್ನು ಕುಣಿಸುವುದನ್ನು ತನ್ನ ಕಾಯಕವನ್ನಾಗಿ ಮಾಡಿಕೊಂಡಿದ್ದ. ಟೊಂಕಕ್ಕೆ ಕೈಗೆ ಕಾಲುಗಳಿಗೆ ಬೇವಿನ ಎಲೆ ಕಟ್ಟಿಕೊಂಡು, ಎಡಗೈಯಲ್ಲಿ ಮಾರಿಯಿರುವ ಮೊರವನ್ನು ಹಿಡಿದು, ಬಲಗೈಯಿಂದ ಢಕ್ಕೆಯನ್ನು ಬಾರಿಸುತ್ತಾ ಬರುವನು. ಓಣಿಯಲ್ಲಿ ಮಾರಿಯನ್ನಿಳುಹಿ ಕುಣಿಸುವನು; ಪುರಾತನ ತತ್ವಗಳನ್ನು ಹೇಳುವರು; ಆದ್ಯರ ವಚನಗಳನ್ನು ಉಗ್ಘಡಿಸುವನು; ನೀತಿ, ವಿನಯ, ಸದಾಚಾರ ಸುವಿಚಾರಗಳನ್ನು ಜನರಿಗೆ ತಿಳಿಸಿಕೊಡುವನು. ಜನರನ್ನು ತಿದ್ದಿ, ಅವರಿಗೆ ವಿಚಾರ ಸ್ವಾತಂತ್ರ್ಯವಿತ್ತು, ಅವರನ್ನು ಸದಾಚಾರಿಗಳನ್ನಾಗಿ ಮಾಡುವನು. ಅವನ ಕಾಯಕದಿಂದ ಶಿವಾನುಭವ ಜನರ ಮನೆಮನೆಗೆ ಮನಮನಕ್ಕೆ ಮುಟ್ಟುತ್ತಿತ್ತು. ಅವನು ಸ್ವಂತಕ್ಕೆ ಒಂದು ನಡೆದಾಡುವ ಶಿವಾನುಭವ ಸಂಸ್ಥೆಯಾಗಿದ್ದ.

ಬುಟ್ಟಿಯಲ್ಲಿ ಅಥವಾ ಮೊರದಲ್ಲಿ ಮಾರಿದೇವತೆಯನ್ನಿಟ್ಟುಕೊಂಡು, ಉದ್ದವಾದ ಬಾರುಕೋಲಿನಿಂದ ತಮ್ಮ ಮೈಗೆ ಹೊಡೆದುಕೊಳ್ಳುತ್ತ, ಡೊಳ್ಳು ಬಾರಿಸಿ ಕುಣಿಯುತ್ತ ಭಿಕ್ಷೆ ಬೇಡಲು ಬರುವವರಿಗೆ “ಬುರು ಬುರು ಸುಂಕಲಮ್ಮ” ಮತ್ತು “ದುರುಗಮುರುಗಿ”ಯವರೆಂದು ಈಗ ನಾವು ಕರೆಯುತ್ತೇವೆ. ಇವರು ಸಮಾಜದಲ್ಲಿ ಏನೇನೂ ಬೆಲೆಯಿಲ್ಲದವರು. ಹೊಟ್ಟೆ ಕೂಳಿಗಾಗಿ ಈ ವೃತ್ತಿ ಕೈಕೊಂಡವರು, ಇಂಥದೇ ವೃತ್ತಿಯನ್ನು ಢಕ್ಕೆಯ ಬೊಮ್ಮಣ್ಣ ಕಾಯಕವನ್ನಾಗಿ ಮಾಡಿಕೊಂಡಿದ್ದ.

ಢಕ್ಕೆಯ ಬೊಮ್ಮಣ್ಣನ ಮಾರಿ ಜ್ಞಾನಶಕ್ತಿಯ ಸಂಕೇತವಾಗಿತ್ತು. ಆಕೆ ಅರಿದವರಿಗೆ ದೇವಿ, ಮರೆದವರಿಗೆ ಮಾರಿ. ಹೊಲಬುದಪ್ಪದೆ ಜೀವಿಸಿ ಕಾಲವೆಂಬ ಮಾರಿಯ ಗೆಲ್ಲಬೇಕಾದರೆ ಅರಿವು ಬೇಕು. ಢಕ್ಕೆಯ ಊಲುಹು ಅಡುಗುವುದಕ್ಕೆ ಮುನ್ನ ಕಾಲಾಂಕ ಭೀಮೇಶ್ವರ ಲಿಂಗವನ್ನು ಅರಿಯಬೇಕು. ಸಂದಿಲ್ಲದೆ ಕಾಡುವ ಮಾಯೆ” ಯನ್ನು ಗೆಲ್ಲಬೇಕು. ಬೊಮ್ಮಣ್ಣ ಢಕ್ಕೆ ಬಾರಿಸಿ ಮಾರಿಯನ್ನು ಗೆಲ್ಲುವ ಮರ್ಮವನ್ನು ಜನರಿಗೆ ತಿಳಿಸುತ್ತಿದ್ದ. ಇಂದು ಇಲ್ಲಿ, ನಾಳೆ ಅಲ್ಲಿ, ನಾಡಿದ್ದು ಮತ್ತೊಂದಲ್ಲಿ. ಈಗ ಓಣಿ, ಇನ್ನೊಂದು ಘಳಿಗೆಗೆ ಮತ್ತೊಂದು ಓಣಿ. ಊರೂರಿಗೆ ಓಣಿ ಓಣಿಗೇ, ಮನೆ ಮನೆಗೆ ಈ ನಡೆದಾಡುವ ಶಿವಾನುಭವ ಮಂಟಪ ಹೋಗಿ ಜನರ ಬದುಕಿನಲ್ಲಿ ‘ಶಿವ’ವನ್ನು ಬಿತ್ತುತ್ತಿತ್ತು.

ಒಂದು ದಿನ ಬೊಮ್ಮಣ್ಣ ಶಂಕರದಾಸಮಯ್ಯನ ಮನೆಯಂಗಳಕ್ಕೆ ಬಂದ. ಅಂಗಳದಲ್ಲಿ ಮಾರಿಯನ್ನಿಳುಹಿದ; ಢಕ್ಕೆಯನ್ನು ಬಾರಿಸಿದ. ‘ಮೊರಕ್ಕೆ ಮೂರು ಕೊಟ್ಟು’ ಕಳುಹಿರಿ ಎಂದ.

ಭೈರವರು, ಕಾಪಾಲಿಕರು, ಸಿದ್ಧರು ಮೊದಲಾದವರನ್ನು ಗೆದ್ದು, ಮೈಲಾರ ಕಾಳಿ ಮುಂತಾದವರಿಂದ ಸೇವೆಮಾಡಿಸಿಕೊಂಡು ಮಾರಿ, ಮಸಣಿ, ದುರ್ಗಿ, ಕಾಳರಾತ್ರಿ ಮುಂತಾದ ಕೀಳುದೈವಗಳಿಂದ ಓಲಯಿಸಿಕೊಂಡು, ಕೀಟಲೆಕೊಡುವ ಕ್ಷುಲ್ಲಕ ದೈವಗಳನ್ನು ಹಣೆಗಣ್ಣಿನುರಿಯಿಂದ ಸುಟ್ಟು ನಾಶಗೈದ ಶಂಕರದಾಸಮಯ್ಯನಿಗೆ ನಸು ಅಹಂಕಾರ ಮೈ ಮನದಲ್ಲಿ ಮೂಡಿತ್ತು. ಆತ ಬೊಮ್ಮಣ್ಣನ ಮಾರಿಗೆ ಒಲಿದು ಭಿಕ್ಷೆ(ಕಾಯಕ) ಕೊಡುವನೇ? ಮೈದೋರಿದ ಅಹಂಕಾರದಿಂದ ಯಾರು, ಏನು, ಯಾವ ಸಮಯ ಎಂಬ ವಿಚಾರ ಶಕ್ತಿಯೂ ಕುಗ್ಗಿಹೋಗಿತ್ತು. ಸರೆ. ಮಾರಿಯನ್ನು ಸುಡಲು ಹಣೆಗಣ್ಣನ್ನು ತೆರೆದ. ಅದುದೇನು? ಮಾರಿಗೆ ಉರಿತಾಕಲಿಲ್ಲ. ಇಷ್ಟೇ ಅಲ್ಲ ಶಂಕರದಾಸಮಯ್ಯನ ಉರಿಗಣ್ಣನ್ನೇ ಆಕೆ ನುಂಗಿಬಿಟ್ಟಳು. ಶಂಕರದಾಸಮಯ್ಯ ಪೆಚ್ಚಾದ, ನೆಲಕ್ಕೆ ಇಳಿದು ಹೋದ. ನಿಮಿಷಾರ್ಧದಲ್ಲಿ ಈ ಸುದ್ದಿ ಊರಲ್ಲಿ ಹಬ್ಬ ಜನ ಬಂದಿತು; ಭಕ್ತರು ಬಂದರು.

“ಉರಿಗಣ್ಣಿಗಿಂತ ಅರಿವಿನ ಕಣ್ಣು ಹೆಚ್ಚಿನದು. ಅರಿವಿನ ಕಣ್ಣು ಮುಚ್ಚಿದಾಗ ಉರಿಗಣ್ಣು ತೆರೆದರೆ ಯಾವ ಕೆಲಸಕ್ಕೂ ಬಾರದು. ಅಹಂಕಾರದಿಂದ ಅರಿವಿನ ಕಣ್ಣು ಮುಚ್ಚಿಕೊಳ್ಳುವುದು. ನೀನು ಅಹಂಕಾರಿಯಾಗಿ ನನ್ನನ್ನು ತಿಳಿಯದಾದೆ. ನನ್ನ ಈ ಮಾರಿಯನ್ನೂ ತಿಳಿಯದಾದೆ. ಈಕೆ ನನ್ನ ಜ್ಞಾನಶಕ್ತಿ; ಅರಿವಿನ ಕುರುಹು. ಈ ಕುರುಹನ್ನು ಮುಂದಿಟ್ಟುಕೊಂಡು ಜನರ ಮಾಯಾ ಬಂಧನವನ್ನು ಬಿಡಿಸುವ ಕಾಯಕ ನಾನು ಕೈಕೊಂಡಿರುವೆ” ಎಂದು ಢಕ್ಕೆಯ ಬೊಮ್ಮಣ್ಣ ನುಡಿದ. ಅದಕ್ಕೆ ಶಂಕರದಾಸಮಯ್ಯ “ನಿನ್ನಂಥ ಭಕ್ತರು ಇದಿರಿಟ್ಟು ಪೂಜಿಸುವರೇ? ಅದು ನಿನ್ನಿಂದ ಅನ್ಯವಾದ ಮೂರ್ತಿ ಎನಿಸುವುದಿಲ್ಲವೇ? ಇದೇತರ ಭಕ್ತಿ? ಭಕ್ತಿಯಲ್ಲ ಚಮತ್ಕಾರ, ಅಟಮಟತನ” ಎಂದ. ಇದು ಬೊಮ್ಮಣ್ಣನ ಉತ್ತರ.

ತನಗಿದಿರಿಟ್ಟು ಕಾಂಬುದೆಲ್ಲವು ತನಗಯ್ಯ ದೈವ,
ತಾ ಕುರುಹಳಿದು ತನಗನ್ಯವೆಂಬುದೊಂದಿಲ್ಲವಾಗಿ
ಅದು ತನಗೆ ಭಿನ್ನವಿಲ್ಲದ ದೈವ………………..”

ಬೊಮ್ಮಣ್ಣ ತ್ರಿಲಿಂಗಾನುಸಂಧಾನಿಯಾಗಿ ‘ಕುರುಹು’ ಅಳಿದುಕೊಂಡಿದ್ದಾನೆ. ಆತ ಇದ್ದೂ ಇಲ್ಲದವ. ಕಾಯವಿದ್ದರೂ ಅಕಾಯ. ಬೆಂದನುಲಿಯ ಪರಿ ಆತನ ಇರುವು. ಅಲ್ಲದೆ ಆತನಿಗೆ ಜಗತ್ತೆಲ್ಲವೂ ಲಿಂಗಮಯವಾಗಿ ಕಾಣುತ್ತದೆ. ಪ್ರತಿ ವಸ್ತುವೂ ಲಿಂಗವೆಂದೇ ಆತ ಅರಿತು ಆಚರಿಸುತ್ತಾನೆ, ಲಿಂಗಕ್ಕೆ ಕುರುಹೆಲ್ಲಿ? ಸಾಕಾರವೆನಿಸಿದರೂ ಅದು ನಿರಾಕಾರ. ಹೀಗೆ ಕುರುಹಳಿದು ಸಕಲವೂ ಲಿಂಗವೆಂದರಿತು ಆಚರಿಸುವವನಿಗೆ ಇದಿರಿಟ್ಟು ಪೂಜಿಸುವುದೆಂದರೇನು? ಬೊಮ್ಮಣ್ಣ ತನ್ನ ಮಾತಿನ ಸಮರ್ಥನೆಗೆ ಮಾರಿಯನ್ನು ತನ್ನ ಇಷ್ಟಲಿಂಗದಲ್ಲಿ ಅಡಗಿಸಿದ, ಮಾರಿಯಂತೆ ಕುಣಿಯತೊಡಗಿತು ಅದು. ಆ ಬಳಿಕ ಲಿಂಗದಿಂದ ಮಾರಿಯನ್ನು ಬೇರ್ಪಡಿಸಿದ.

ಶಂಕರದಾಸಮಯ್ಯನಿಗೆ ತಿಳಿವು ತೀಡಿತು; ತನ್ನ ತಪ್ಪಿನ ಅರಿವಾಯಿತು. ಅಹಂಕಾರ ಮಾಯವಾಯಿತು. ಶಿವಾನುಭಾವಿ ಢಕ್ಕೆಯ ಬೊಮ್ಮಣ್ಣನ ಅಂತಸ್ತನ್ನು ಆತ ಅರಿತ. ಆತನ ಮಾರಿ ಬೇರೆಯಲ್ಲ ಇಷ್ಟಲಿಂಗ ಬೇರೆಯಲ್ಲ ಎಂಬುದು ಆತನಿಗೆ ವೇದ್ಯವಾಯಿತು. ಢಕ್ಕೆಯ ಬೊಮ್ಮಣ್ಣನಿಗೆ ಶರಣುವೋದು. ಬೊಮ್ಮಣ್ಣನಿಗೆ ಪರಮಾನಂದವಾಯಿತು. ಶಂಕರದಾಸಮಯ್ಯನಂಥವರಿಗೆ ಅಹಂಕಾರ ಬಂದರೆ ಭಕ್ತಿಗೇ ಅಹಂಕಾರ ಬಂದಂತೆ; ಸ್ವಾಸ್ಥ್ಯಕ್ಕೇ ಅಹಂಕಾರ ಬಂದಂತೆ. ಲೋಕಕ್ಕೆ ಒಳಿತು ಅವರಿಂದ. ಈ ಒಳಿತಿಗೇ ಹುಳಿಹಿಂಡುತ್ತದೆ ಅಹಂಕಾರ. ಭಕ್ತರಿಗೆ ಅಹಂಕಾರ ಬಂದರೆ ಲೋಕಕ್ಕೆ ಕತ್ತಲೆಮುಸುಕಿದಂತೆ. ಜೀವನದುದ್ದಕ್ಕೂ ಬೆಳ್ಳಂಬೆಳಕಾಗಿದ್ದು ಕೊನೆಗಾಲದಲ್ಲಿ ಕತ್ತಲೆಯನ್ನು ಮೋಹಿಸುವುದೇ? ಅಂತಾಗಿತ್ತು ಶಂಕರದಾಸಮಯ್ಯನ ಸ್ಥಿತಿ. ಆತನ ಅಹಂಕಾರ ಕಳೆದು ಆತನಿಗೂ ಭಕ್ತಿಯ ಲೋಕಕ್ಕೂ ಮಹೋಪಕಾರ ಮಾಡಿದ ಢಕ್ಕೆಯ ಬೊಮ್ಮಣ್ಣ. ಶಂಕರದಾಸಮಯ್ಯ ಅಹಂಕಾರ ನೀಗಿ ಶರಣು ಬಂದ. ಕೂಡಲೇ ಆ ಮಾರಿ ತಾನು ನುಂಗಿದ ಆತನ ಹಣೆಗಣ್ಣನ್ನು ಉಗುಳಿ ಬಿಟ್ಟಿತು. ಮತ್ತೆ ಪಡೆದ ಶಂಕರದಾಸಮಯ್ಯ ತನ್ನ ಉರಿಗಣ್ಣನ್ನು.

ಶಂಕರದಾಸಮಯ್ಯನದೊಂದೇ ಅಲ್ಲ. ಜಗಕ್ಕೆ ಅಂಟಿದ ಅಹಂಕಾರವನ್ನು ತೊಡೆದು ಸುಜ್ಞಾನವ ನೀಡಲು ಬಂದಾತ ಢಕ್ಕೆಯ ಬೊಮ್ಮಣ್ಣ. “ಢಕ್ಕೆಯ ಧ್ವನಿಯುಳ್ಳನ್ನಕ್ಕ ನಿಶ್ಚೈಸಿಕೊಂಡು” ಕಾಲಾಂತಕ ಭೀಮೇಶ್ವರಲಿಂಗನರಿದು, ಆ ಲಿಂಗವೇ ತಾನಾಗಿ, ಅದನ್ನೇ ಮಾರಿರೂಪದಲ್ಲಿ ಕುಣಿಸಿ ಕೊನೆಯುಸಿರಿನವರೆಗೂ ನಾಡಿನಲ್ಲಿ ಲಿಂಗ ತತ್ವವನ್ನು ಬಿತ್ತಿ ಬೆಳೆದನು ಢಕ್ಕೆಯ ಬೊಮ್ಮಣ್ಣ.

ಈತ ತನ್ನ ಒಂದು ವಚನದಲ್ಲಿ ಸಂಗಬಸವಣ್ಣ. ಮಡಿವಾಳಯ್ಯ, ಚೆನ್ನಬಸವಣ್ಣ, ಘಟ್ಟಿವಾಳಯ್ಯ, ಚಂದಯ್ಯ, ಅಜಗಣ್ಣ – ಇವರನ್ನು ನೆನೆಯುತ್ತಾನೆ. ಇದರಿಂದ ಈತ ಬಸವಣ್ಣನವರ ಹಿರಿಯ ಸಮಕಾಲೀನ ಎಂದು ಹೇಳಬಹುದು. ಇದು ಸಾಧ್ಯವಿದೆ. ಶಂಕರದಾಸಮಯ್ಯ ತೀರ ವೃದ್ಧನಾದಾಗ ೧೦೯೦ರ ಸುಮಾರಿಗೆ ಬೊಮ್ಮಣ್ಣ ಆತನ ಅಹಂಕಾರ ಕಳೆದಿರಬೇಕು. ಆಗ ಆತನಿಗೆ ಯೌವನ. ಮುಂದೆ ಆತ ೭೦,೮೦ ವರ್ಷ ಬದುಕಿರಲು ಸಾಧ್ಯ.

ಢಕ್ಕೆಯ ಬೊಮ್ಮಣ್ಣನ ವಚನಗಳು

ಢಕ್ಕೆಯ ಬೊಮ್ಮಣ್ಣ ಅಲ್ಪವಾದುದನ್ನು ಮಹತ್ತನ್ನಾಗಿಸಬಹುದು; ಕ್ಷುಲ್ಲಕವಾದುದನ್ನು ದೈವತ್ವಕ್ಕೇರಿಸಬಹುದು ಎಂಬುದನ್ನು ಸಿದ್ಧಮಾಡಿ ತೋರಿಸಿದ. ನೋಡುವ ನೋಟ, ಮಾಡುವ ಮಾಟದಿಂದ (ಮಾಟ ಎಂದರೆ ಕಾಯಕ) ಕೀಳಾದುದನ್ನು ಉನ್ನತೀಕರಿಸಬಹುದೆಂದು ಆತನ ಜೀವನ ಸಾರಿ ಹೇಳುತ್ತದೆ. ಶಂಕರದಾಸಮಯ್ಯ ಕ್ಷುಲ್ಲಕ ದೈವಗಳನ್ನು ಸುಟ್ಟ; ಬೊಮ್ಮಣ್ಣ ಅವುಗಳ ಅಜ್ಞಾನವನ್ನು ಸುಟ್ಟು ಅವುಗಳಿಗೆ ಹೊಸ ಜೀವವಿತ್ತ. ಶಂಕರದಾಸಮಯ್ಯನಿಗೆ ಮಾರಿ – ನಾನಾರೂಪದಲ್ಲಿ ಕಾಳಿಯಾಗಿ, ಭೈರವನಾಗಿ, ಮೈಲಾರನಾಗಿ ಓಲೈಸಿತು; ಆದರಿಂದ ಅದರ ಹಿಂಸೆ, ಕ್ರೂರತನ ಕಳೆಯಿತು; ಆದರೆ ಇಷ್ಟಲಿಂಗವಾಗುವ ಭಾಗ್ಯ ಅದಕ್ಕೆ ಬರಲಿಲ್ಲ. ಢಕ್ಕೆಯ ಬೊಮ್ಮಣ್ಣನಿಂದ ಈ ಭಾಗ್ಯ ಮಾರಿಗೆ ಬಂತು. ಮಾರಿಯ ಅಂತರಂಗ ಬಹಿರಂಗ ಕೊಳೆ ಕಳೆದು ಅರಿವಿತ್ತು ಲಿಂಗಕಳೆ ತುಂಬಿ ಅದನ್ನು ಲಿಂಗವನ್ನೇ ಮಾಡಿದ ಮಹಿಮ ಬೊಮ್ಮಣ್ಣ. ಇದೊಂದು ರೂಪಕದಂತಿದೆ. ಜನರ ಜೀವನದಲ್ಲಿ ನೆಲೆಯೂರಿದ ಮಾರಿಯನ್ನು – ಅಜ್ಞಾನಿಯಾದ ಮಾರಿಯನ್ನು – ಕಳೆದು, ಅವರಲ್ಲಿ ಲಿಂಗ ಕಳೆ ತುಂಬಿದನೆಂದು ಇದರ ಅರ್ಥ. ಈ ಅರ್ಥವನ್ನೇ ಆತನ ಮೊರದ ಮಾರಿ ಸಂಕೇತಿಸುತ್ತದೆ. ಬೊಮ್ಮಣ್ಣನ ಮತದಂತೆ ಎಲ್ಲ ಕ್ಷುಲ್ಲಕ ದೈವಗಳನ್ನು ಉನ್ನತೀಕರಿಸಲು ಸಾಧ್ಯವಿದೆ.

ಎಂತಹ ಕ್ಷುಲ್ಲಕ ಕೆಲಸವನ್ನಾದರೂ ಶರಣರು ಕಾಯಕ ಮಟ್ಟಕ್ಕೇರಿಸುವರೆಂಬುದನ್ನು ಬೊಮ್ಮಣ್ಣ ಮಾಡಿತೋರಿಸಿದ್ದಾನೆ. “ಬುರು ಬುರು ಸುಂಕಲಮ್ಮ” “ದುರಗ ಮುರಿಗಿ” ಈ ಭಿಕ್ಷಾವೃತ್ತಿಗಳು ಸತ್ಯ ಶುದ್ಧ ಕಾಯಕವಾದುವು; ಅನುಭಾವ ಸಾರುವ ಮಹಾಸಾಧನವಾದುವು. “ಬುರು ಬುರು ಸುಂಕಲಮ್ಮ” “ದುರಗ ಮುರಿಗಿ” ಇವು ಒಂದು ರೀತಿಯ ಜನಪದ ಕಲೆಗಳು; ಕೀಳು ಮಟ್ಟದ ಜನರ ರಂಜನೆಗೆ ಕಾರಣವಾಗಿದ್ದವು. ಢಕ್ಕೆಯೋ, ಹಲಗೆಯೋ, ಡೊಳ್ಳೋ ಬಾರಿಸುವುದು, ಹಾಡುವುದು, ಕುಣಿಯುವುದು, ಮೊಗವಾಡ ಧರಿಸಿಕೊಳ್ಳುವುದು, ಚಮತ್ಕಾರವಾಗಿ ಪೆಟ್ಟುಬೀಳದಂತೆ ಬಾರಕೋಲಿನಿಂದ ಮೈಗೆ ಹೊಡೆದುಕೊಳ್ಳುವುದು ಅದ್ಭುತರಮ್ಯ ಘಟನೆ ವರ್ಣಿಸುವುದು – ಇದೆಲ್ಲ ಜನಪದ ಕಲೆ. ಈ ಕಲೆ ಕೀಳ್ಮಟ್ಟದ ಭಿಕ್ಷಾವೃತ್ತಿಯಾಗಿ ಪರಿಣಮಿಸಿತ್ತು. ಇದನ್ನು ಢಕ್ಕೆಯ ಬೊಮ್ಮಣ್ಣ ಇದ್ದಕ್ಕಿದ್ದಂತೆ ಎತ್ತಿಕೊಂಡು ಕಾಯಕ ಕಲೆಯನ್ನಾಗಿ ಮಾಡಿದ; ಶರಣ ಧರ್ಮದ ಉಸಿರಿತ್ತು. ಸುಜ್ಞಾನದ ಹೊದಿಕೆ ಹೊದಿಸಿ, ಸದಾಚಾರದ ಜೀವ ಕಳೆತುಂಬಿ ಈ ಕೀಳ್ಮಟ್ಟದ ಕಲೆಯನ್ನು ಲಿಂಗಪೂಜೆಯ ಸಮನಾಗಿ ಮಾಡಿದ. ಇದರಿಂದ ನಡೆದಾಡುವ ಅನುಭವ ಮಂಟಪ ರಚನೆಯಾಯಿತು; ಓಡಾಡುವ ಜ್ಞಾನದಾಸೋಹಮದಿರ ಸಿದ್ಧವಾಯಿತು; ಶರಣಧರ್ಮಕ್ಕೆ ಕೈಕಾಲು ಬಾಯಿ ಬಂದು ಅದು ಮನೆ ಮನೆ ಹೊಕ್ಕು ಪ್ರತಿಷ್ಠಾಪನೆಗೊಂಡಿತು. ಮುಂದೆ ಬೊಮ್ಮಣ್ಣನ ಆದರ್ಶವನ್ನೇ ಶರಣರು ಮುಂದುವರಿಸಿದರು. ಕಲಕೇತಬೊಮ್ಮಯ್ಯ ಬಂದ; ಬಹುರೂಪಿ (ಡೊಂಡ) ಚೌಡಯ್ಯ ಬಂದ; ಕಂಕರಿ ಕಕ್ಕಯ್ಯ ಬಂದ; ಜನಪದ ನಾಟ್ಯ ಪ್ರವೀಣೆ ಸಿದ್ಧದೇವಮ್ಮ ಬಂದಳು; ಜನಪದ ಕಥೆ ಹೇಳುವ ಶಿವಮಾಯಿದೇವಿ ಬಂದಳು. ಹೀಗೆ ನೂರಾರು ಶರಣ ಶರಣೆಯರು ಜನಪದ ಕಲೆಗಳನ್ನು ಕಾಯಕದ ಮಟ್ಟಕ್ಕೇರಿಸಿದರು – ಢಕ್ಕೆಯ ಬೊಮ್ಮಣ್ಣನ ಹೆಜ್ಜೆಗಳಲ್ಲಿ ತಮ್ಮ ಸಿರಿಮುಡಿಗಳನ್ನಿಟ್ಟು.

ಕಾಯಕದ ದೃಷ್ಟಿಯಿಂದ ಢಕ್ಕೆಯ ಬೊಮ್ಮಣ್ಣನ ವ್ಯಕ್ತಿತ್ವ ಬಹಳ ಹಿರಿದು. ದೇವರದಾಸಮಯ್ಯ ಶಂಕರದಾಸಮಯ್ಯನವರು ಕಾಯಕದಲ್ಲಿ ನಿಷ್ಠೆ, ತಾದಾತ್ಮ್ಯ ಪಾವಿತ್ರ್ಯಗಳನ್ನು ಅರುಹಿ ಆಚರಿಸಿದ್ದರು. ಢಕ್ಕೆಯ ಬೊಮ್ಮಣ್ಣನು ಕಾಯಕಕ್ಕೆ ಹೊಸ ವ್ಯಾಪ್ತಿಯನ್ನಿತ್ತ, ಹೊಸ ಜೀವವನ್ನಿತ್ತ, ಹೊಸ ಕ್ಷಿತಿಜವನ್ನು ತೆರೆದ. ಕಾಯಕದಲ್ಲಿ ಮೇಲು ಕೀಳಿಲ್ಲ; ಎಲ್ಲ ಕಾಯಗಳೂ ಸಮಾನ. ಎಲ್ಲವು ಪವಿತ್ರವಾದುವು. ಎಲ್ಲವೂ ಲಿಂಗಪೂಜೆಯಾಗಲು ಅರ್ಹವಾಗಿವೆ. ಇದು ಬೊಮ್ಮಣ್ಣನ ಹೇಳಿಕೆ.

ಆವ ಕಾಯಕವಾದರೂ
ಭಾವಶುದ್ಧವಾಗಿ ಮಾಡುವುದೇ ಜಂಗಮ ಪೂಜೆ,
ನಿಯಮ, ಕ್ರಿಯೆ ತಪ್ಪದೆ ಮಾಡುವುದೇ ದೇವಪೂಜೆ

ಇದಕ್ಕಿಂತ ಸುಂದರವಾಗಿ ಕಾಯಕದ ಅರ್ಥ ಬೇರೆಲ್ಲಿಯೂ ಕಂಡುಬರುವುದಿಲ್ಲ. “ಭಾವನಿಂದೆ ಮಾಣಿಸೆಂದು” ಬಸವಣ್ಣನವರು ಒತ್ತಟ್ಟಿಗೆ ಕೂಡಲಸಂಗನನ್ನು ಕೇಳುತ್ತಾರೆ. ಈ ಭಾವ ನಿಂದೆಯೇ ಸಕಲ ಹಗರಣಕ್ಕೆ ಕಾರಣ. ಈ ಭಾವ ಶುದ್ಧವಾಗಿರಬೇಕು. ಭಾವ ನಮ್ಮ ಬದುಕಿನ ಹರಹಿನ ತುಂಬ ಹಬ್ಬಿದೆ. ಅದಿಲ್ಲದೆ ಜೀವನವಿಲ್ಲ. ಪುಣ್ಯ, ಪಾಪ, ಒಳಿತು, ಕೆಡಕು ಎಲ್ಲಕ್ಕೂ ಈ ಭಾವವೇ ಕಾರಣ. ಲಿಂಗಪೂಜೆ ಮಾಡುವಾಗ ಭಾವ ನಿಂದೆಯುಳ್ಳದಿರಬಹುದು; ಹಿರಿಯರ ಸಾನ್ನಿಧ್ಯದಲ್ಲಿದ್ದಾಗ ಭಾವ ಕೀಳು ಬಗೆಯದಾಗಿರಬಹುದು. ದುಷ್ಟ ಕೆಲಸದಲ್ಲಿ ತೊಡಗಿದಾಗ ಈ ಭಾವ ಕೀಳು ಬಗೆಯದಾಗಿರಬಹುದು. ದುಷ್ಟ ಕೆಲಸದಲ್ಲಿ ತೊಡಗಿದಾಗ ಈ ಭಾವ ಒಳ್ಳೆಯದನ್ನು ನೆನಯಬಹುದು. ಹೀಗಾಗಿ ಅನೇಕ ಹಗರಣಗಳು, ಈ ಭಾವ ತಾನಿರುವ ಸಹಜ ಸ್ಥಿತಿಯಲ್ಲಿ ಇರದ ಕಾರಣ. ಅದಕ್ಕಾಗಿ ಇದನ್ನು ಯಾವಾಗಲೂ ಶುದ್ಧವಾಗಿಡಬೇಕು. ಹಾಗೆ ಶುದ್ಧವಾಗಿಟ್ಟು ಯಾವ ಕೆಲಸಮಾಡಿದರೂ ಅದು ಶಿವ ಪೂಜೆಯಾಗುತ್ತದೆ. ಜಂಗಮ ಪೂಜೆಯಾಗುತ್ತದೆ. ಭಾವಶುದ್ಧವಿದ್ದ ಬೊಮ್ಮಣ್ಣನ ‘ಮಾರಿ’ ಸತ್ಯಶುದ್ಧ ಕಾಯಕವಾದಳು.

ಕಾಯಕದ ಈ ವ್ಯಾಖ್ಯೆಯಿಂದ ಬೊಮ್ಮಣ್ಣ ಸಮಾಜದಲ್ಲಿ ಹೀನವಾಗಿದ್ದ – ಹೀನವಾಗಿ ಕಾಣಲಾಗುತ್ತಿದ್ದ ಎಲ್ಲ ಕೆಲಸ, ಉದ್ಯೋಗಗಳಿಗೂ ಸತ್ಯಶುದ್ಧ ಕಾಯಕವಾಗಲು ದಾರಿ ಮಾಡಿಕೊಟ್ಟ ಒಕ್ಕಲಿಗ, ಮಚ್ಚಿಗ, ಕಂಬಾರ, ಕುಂಬಾರ, ಮೇದಾರ, ಡೋಹರ, ಅಗಸ, ಹಡಪದವ ಎಲ್ಲರಿಗೂ ತಮ್ಮ ವೃತ್ತಿಯಿಂದಲೇ ತಮ್ಮ ನಿಜವನ್ನು ಸಾಧಿಸುವ ಸುಲಭಮಾರ್ಗ ದೊರಕಿತು.

ಯಾಚಕತನ ಬೊಮ್ಮಣ್ಣನ ದೃಷ್ಟಿಯಲ್ಲಿ ಅತಿಕೀಳಾದುದು. ಭಿಕ್ಷೆ ಬೇಡಬಾರದು, ಭಕ್ತನಾದವನು ಕಾಯಕದಿಂದಲೇ ಜೀವಿಸಬೇಕೆಂಬುದು ಆತನ ಖಂಡಿತ ಅಭಿಪ್ರಾಯ.

ತ್ರಿವಿಧ ದೇವ, ಕುಲ, ಜಾತಿ ಆವನಾದಡೂ ಆಗಲಿ,
ಪಂಡಿತ, ವಿದಗ್ಧ, ಜಾಣ, ಗಂಭೀರ ಸಂಪದನಾದಡೂ ಆಗಲಿ,
ಯಾಚಕತನದಲ್ಲಿ ಘಾತುಕತನದಿಂದ ಬೇಡುವುದು ಜೀವನ.
ಜೀವನದ ಮರೆದೊರಗಿರುವುದು ಮಾರಿ
ಮರವೆಯ ಹರಿದುದೇ
ಕಾಲಾಂತಕ ಭೀಮೇಶ್ವರಲಿಂಗವು.

ಪಾಂಡಿತ್ಯ ಪ್ರದರ್ಶನದಿಂದ, ಜಾಣತನದಿಂದ, ಜಾತಿಯ ಹೆಸರಿನಿಂದ ಇಂಥ ಇನ್ನೇನೋ ರೀತಿಯಿಂದ ದುಡಿಯದೆ ತಿನ್ನುವುದೆ ಭಿಕ್ಷೆ ಎಂದು ಬೊಮ್ಮಣ್ಣ ಖಂಡ ತುಂಡವಾಗಿ ಹೇಳಿದ್ದಾನೆ. ಅಷ್ಟೇ ಅಲ್ಲ ಅದು ಘಾತುಕತನದ ಬೇಡಿಕೆ ಎಂದೂ ಎಚ್ಚರಿಸಿದ್ದಾನೆ. ಇಂಥರ ಜೀವನದಲ್ಲಿ ಮಾರಿ ಮರೆದು ಒರಗಿರುತ್ತಾಳಂತೆ. ಮರೆದು ಎಂದರೆ ಏಳುವುದನ್ನೇ ಮರೆದು ಮಲಗಿರುತ್ತಾಳೆ. ಅಂದ ಮೇಲೆ ಅವರ ಏಳ್ಗೆ ಎಂತು? ಒಟ್ಟಾರೆ ಯಾಚಕತನ ಮತ್ತು ಕರ್ಮಹೀನತೆ ಇವೆರಡೂ ಅಜ್ಞಾನಕ್ಕೆ ತವರು, ಭವಕ್ಕೆ ಬೀಜ, ಮಾರಿಯ ಕಣಜ ಎಂದು ಬೊಮ್ಮಣ್ಣ ಘಂಟಾಘೋಷವಾಗಿ ಸಾರಿದ್ದಾನೆ. ಈ ಅಜ್ಞಾನ, ಭವ, ಮಾರಿ ಇವೆಲ್ಲವುಗಳ ನಾಶ ಒಂದರಿಂದಲೇ – ಅದು ಕಾಯಕ. ದುಡಿಮೆ ಇಲ್ಲದೆ ಸಮಾಜ ಬಡವಾಗಿತ್ತು, ಎಲ್ಲ ದೃಷ್ಟಿಯಿಂದ. ಆಗ ಬೊಮ್ಮಣ್ಣ ಬಂದು ಢಕ್ಕೆಯ ಧ್ವನಿಯಿಂದ ಮರೆದೊರಗಿದ ಮಾರಿಯನ್ನು ಎಚ್ಚರಿಸಿ, ಜನತೆಗೆ ಕಾಯಕದ ದೀಕ್ಷೆಯಿತ್ತು; ಅವರ ಭಾವಶುದ್ಧಗೈದು ಸರ್ವ ಉದ್ಯೋಗ ಸರ್ವ ಕೆಲಸಗಳನ್ನೂ ಕಾಯಕವನ್ನಾಗಿಸಿದ. ಮುಂದೇ ಇದೇ ಭಾವ ಬಲಿತು, ಡೋಹರ, ಹಡಪದವ, ಮಡಿವಳ, ಮುಚ್ಚಿಗ, ಅಂಬಿಗ ಸರ್ವರೂ ಕಾಯಕವಂತರಾದರು; ಸರ್ವರು ಕಾಯಕ ಮಾಡಬೇಕೆನ್ನುವ ಭಾವ, ಗುರು ಲಿಂಗ ಜಂಗಮ ಇವರೆಲ್ಲರೂ ಕಾಯಕ ಮಾಡಲೇಬೇಕು ಎನ್ನುವ ಮಟ್ಟಿಗೆ ಬೆಳೆದು ಧರ್ಮ, ದೇವರು, ದೇಶ, ಜನ ಎಲ್ಲರ ಉದ್ಧಾರಕ್ಕೆ ದಾರಿಯಾಯಿತು.

ಬೊಮ್ಮಣ್ಣ ಈ ದೇಹಕ್ಕೆ ಈ ಜೀವನಕ್ಕೆ ಬಹಳ ಮಹತ್ವ ಕೊಟ್ಟ. ಈ ದೇಹವೇ ಸರ್ವಕ್ಕೆ ಸಾಧನವೆಂದು ಉಸಿರಿದ. ಈ ದೇಹಕ್ಕೆ ‘ಢಕ್ಕೆ’ ಎಂದು ಆತ ಕರೆಯುತ್ತಾನೆ. ಬಹು ಸೊಗಸಾದ ರೂಪಕ. “ಕಾಯಕವೆಂಬ ಢಕ್ಕೆಯ ಮೇಲೆ ಜೀವವೆಂಬ ಹಿಡಿಚೆಂಡು ಬೀಳೆ ತ್ರಿವಿಧವ ತಾ ತಾ ಎಂಬಾಸೆ ಹಿಂ ಡಿಂ ಹಿಂ ಡಿಂ ಎನ್ನುತ್ತಿದೆ.” ಈ ಜೀವಕಾಯಕರು ಧ್ವನಿಗೈದು ಆಣವ ಕಾರ‍್ಮಿಕ ಮೊದಲಾದುವುಕ್ಕೆ ಭಾಜನರಾಗುವರು. ಅದನ್ನು ತಪ್ಪಿಸಿದರೆ – ತಪ್ಪಿಸುವುದೇ ಜೀವನ ತಾನೇ ಕಾಲಾಂತಕ ಭೀಮೇಶ್ವರಲಿಂಗ. ಅದನ್ನು ಹೇಗೆ ತಪ್ಪಿಸಬೇಕು? ಇಂತಿ “ಉಲುಹಿನ ಭೇದದಲ್ಲಿ ಹೊಲಬುದಪ್ಪದೆ ಗೆಲಬೇಕು”, “ಉಲುಹು” ಎಂಬುದಕ್ಕೆ ಅರ್ಥವ್ಯಾಪ್ತಿ ಬಹಳುಂಟು. ಢಕ್ಕೆ ಉಲುಹುಗೈಯುತ್ತದೆ. ಅದರಂತೆ ಜೀವನಕ್ಕೆ ಉಲುಹುಂಟು. ಈ ಉಲುಹಿನಿಂದ ಜೀವ ಮಾಯಾ ಬದ್ಧನಾಗುವನು; ಮಾರಿಗೊಳಗಾಗುವನು. ಈ ಉಲುಹನ್ನೇ ಅಳಿದಾಗ ಕಾಲಾಂತಕ ಭೀಮೇಶ್ವರನಾಗುವನು. ಉಲುಹೆಂಬ ಢಕ್ಕೆಯ ಪಿಡಿದು ಭವವೆಂಬ ಬಾಗಿಲಲ್ಲಿ ತಿರುಗಾಡುತ್ತಿದೆ ಜೀವ. ಢಕ್ಕೆಯ ದನಿ ಬಿಟ್ಟಾಗ ಭವ ಹಿಂಗುವುದು. “ಈ ಢಕ್ಕೆಯ ಉಲುಹು ಅಡಗುವುದಕ್ಕೆ ಮುನ್ನವೇ ಕಾಲಾಂತಕ ಭೀಮೇಶ್ವರಲಿಂಗವನರಿಯಬೇಕು”. “ಬೆನ್ನು ಬಾಗದ ಮುನ್ನ, ಹೊತ್ತು ಹೋಗದ ಮುನ್ನ, ಮೃತ್ಯು ಒಯ್ಯದ ಮುನ್ನ ಪೂಜಿಸು” – ಎಂದು ಅಣ್ಣ ಇದನ್ನೇ ಹೇಳಿದ್ದಾನೆ. “ಢಕ್ಕೆಯೆಂಬ – ಕಾಯದಿಂದಲೇ ಈ ಜೀವನ ಸುಂದರಮಾಡಿ – ಢಕ್ಕೆಯ ಉಲುಹು ಕಳೆದು ಕಾಲಾಂತರ ಭೀಮೇಶ್ವರಲಿಂಗವಾಗಬೇಕು” ಎಂಬ ಬೊಮ್ಮಣ್ಣನ ಜೀವನ ಸಂದೇಶ ಸರ್ವರಿಗೂ ಸರ್ವಕಾಲಕ್ಕೂ ಬೇಕಾದುದು.

ಢಕ್ಕೆಯ ಬೊಮ್ಮಣ್ಣ ಸರ್ವಯೋಗಗಳಲ್ಲಿ ಶಿವಯೋಗ ಹಿರಿದೆಂದು ಆಚರಿಸಿ ತೋರಿಸಿದ. ಹಟ, ಲಯ ಮುಂತಾದ ನಾನಾ ರೀತಿಯ ಕ್ಲಿಷ್ಟ ಯೋಗಗಳು ಸಾಮಾನ್ಯ ಜನರ ಅಂತಸ್ತಿಗೆ ನಿಲುಕದಾಗಿದ್ದವು. ಅಲ್ಲದೆ ಅವು ನಿತ್ಯ ಜೀವನಕ್ಕೆ ಬಹು ದೂರವಾಗಿದ್ದವು. ಇದು ಅಲ್ಲದೆ ಸಾರ್ವಜನಿಕವಾಗಿ ಅವು ಆಚರಣೆಗೆ ಯೋಗ್ಯವಾಗಿರಲಿಲ್ಲ; ಸಂಸಾರಿಯಾಗಿ, ಭೋಗಿಯಾಗಿ ಸಾಧಿಸಲು ಅವು ನಿಚ್ಚಳವಾಗಿ ತನ್ನ ಕಾಂಬ ಕಣ್ಣನ್ನು ಕೊಡದೆ ನಸು ಅಹಂಕಾರಯುಕ್ತವಾಗಿದ್ದುವು. ಅವುಗಳೆಲ್ಲವನ್ನು ನಿರಾಕರಿಸಿ ಢಕ್ಕೆಯ ಬೊಮ್ಮಣ್ಣ ಜನರಿಗೆ ಶಿವಯೋಗವನ್ನು ಕಲಿಸಿಕೊಟ್ಟ; ಯೋಗವನ್ನು ಸುಲಭವಾಗಿಸಿದ. ಸಂಸಾರಿಯಾಗಿರಲಿ, ಸನ್ಯಾಸಿಯಾಗಿರಲಿ, ಸಾಮಾನ್ಯನಾಗಿರಲಿ, ರಾಜನಾಗಿರಲಿ, ಭೋಗಿಯಾಗಿರಲಿ – ಯಾರೇ ಆಗಿರಲಿ ಢಕ್ಕೆಯ ಬೊಮ್ಮಣ್ಣ ಹೇಳಿದ ಯೋಗ ಸುಲಭವಾಗಿ ಆಚರಿಸಬಹುದು.

ಸ್ಥೂಲಮಯ ಸೂಕ್ಷ್ಮಮಯ ಕಾರಣಮಯಂಗಳಲ್ಲಿ
ಇಷ್ಟ ಪ್ರಾಣ ಭಾವಂಗಳಲ್ಲಿ ಉಚಿತವನರಿದು ಮಾಡುವುದೇ ಯೋಗ
ಯೋಗವ ಪ್ರಯೋಗಿಸಿ ನಿಂದಲ್ಲಿ ಕಾಲಾಂತಕ ಭೀಮೇಶ್ವರ ಲಿಂಗದಲ್ಲಿ
ಉಭಯವಳಿದ ಭಾವ.

ಢಕ್ಕೆಯ ಧ್ವನಿಯಂತೆ ಬೊಮ್ಮಣ್ಣನ ವಚನಗಳು ಸುಸ್ಪಷ್ಟ. ಪೆಟ್ಟು ಬಿದ್ದಾಗ ಢಂಢಂ ಎಂದು ಗಂಭೀರ ಧ್ವನಿ ಹೊರಟರೂ ಆ ಬಳಿಕ ಕೇಳಿಯೂ ಕೇಳಿಸದಂತಿರುವ ಜಿರ ಗುಂಯ್ ಎಂಬ ಧ್ವನಿ ಬಹಳ ಹೊತ್ತು ಇರುವುದು. ಢಂ ಸ್ವರಕ್ಕೆ ಮನದ ಕದ ಧಡಮ್ಮನೆ ತೆರೆಯುವುದು; ಆ ಬಳಿಕಿನ ಗುಂಯ್ ಧ್ವನಿಗೆ ಅರಿವು ಜಾಗೃತಗೊಂಡು ಮನವನ್ನು ದಳದಳನೆ ಅರಳಿಸುವುದು. ಬೊಮ್ಮಣ್ಣನ ವಚನಗಳೂ ಹೀಗೆಯೇ ಪರಿಣಾಮವನ್ನುಂಟುಮಾಡುತ್ತವೆ. ಆತನ ಒಡನಾಟ ಹೆಚ್ಚಾಗಿ ಸಾಮಾನ್ಯ ಜನರೊಡನೆಯಿತ್ತು. ಅವರಿಗೆ ಸ್ಪುಟವಾಗಿ ತಿಳಿಯುವಂತೆ ಆತ ವಚನಗಳನ್ನು ರಚಿಸಿದ. ಖಚಿತತೆಯನ್ನು ಖಂಡತುಂಡವಾಗಿ ಹೇಳುವ ಗುಣ ಬೊಮ್ಮಣ್ಣನದು. ಖಂಡತುಂಡವಾಗಿ ಹೇಳಿದರೂ ವಚನಗಳು ನೀರಸವಾಗಿಲ್ಲ, ತತ್ವಗಳಿಂದ ಜಟಿಲವಾಗಿಲ್ಲ. ಲಾಲಿತ್ಯ ಮಾರ್ದವತೆಗಳಿಂದ, ನಿತ್ಯ ಜೀವನದಿಂದ ಎತ್ತಿದ ಉಪಮೇ ದೃಷ್ಟಾಂಗಳಿಂದ ಈತನ ವಚನಗಳು ಭಾವಗೀತೆಗಳಂತಿವೆ.

ಅಂದಿನ ತಾತ್ವಿಕರಲ್ಲಿ, ಸಾಮಾನ್ಯ ಜನರಲ್ಲಿ ಮಾಯೆಯ ಬಗ್ಗೆ ಹೆಚ್ಚು ಜಿಜ್ಞಾಸೆ ಇದ್ದಂತೆ ಕಾಣುತ್ತದೆ; ಬೊಮ್ಮಣ್ಣ ವಚನಗಳ ಮುಖಾಂತರ ಜನರ ಸಂದೇಹಗಳಿಗೆ, ಅವರ ಪ್ರಶ್ನೆಗಳಿಗೆ ಉತ್ತರ ಕೊಟ್ಟಂತಿವೆ. ಆತನ ವಚನಗಳಲ್ಲಿ ಮಾಯೆಯ ಬಗೆಗೆ ಸಾಕಷ್ಟು ವಿಚಾರ ವಿವೇಚನೆಯಿದೆ. ಅಂದಿನವರೆಗೆ ಮಾಯೆಯ ಬಗೆಗೆ ಇದ್ದ ಕಲ್ಪನೆಗಿಂತ ಬೊಮ್ಮಣ್ಣ ಹೆಚ್ಚಿನದನ್ನು ಅತಿಸೂಕ್ಷ್ಮವಾದುದನ್ನು ಹೇಳಿದ್ದಾನೆ. ಮಾಯವಾದ, ಮಾಯೆಯ ಕಲ್ಪನೆ ಬಹು ಮಟ್ಟಿಗೆದ ಜನಜೀವನವನ್ನು ವಿಮುಖಗೊಳಿಸಿತ್ತು. ಬೊಮ್ಮಣ್ಣ ಮಾಯೆಯನ್ನು ಹಳಿಯಲಿಲ್ಲ. ಅದನ್ನು ಅಳಿಸಲು ಬೋಧಿಸಲೂ ಸಾಧ್ಯವಿಲ್ಲ. ಹಾಗೆ ಬದುಕಲು ಹೆಣಗಿದರೆ ವ್ಯರ್ಥ ಪ್ರಯಾಸವೇ ಹೊರತು ಫಲವಿಲ್ಲ. ಮಾಯಾತೀತನಾಗಲು ಮಾಯೆಯ ನೆರವು ಅಗತ್ಯ. ಸಂಸಾರ ಬೆಳಗಲು ಧರೆಯ ಬಾಳು ಸಮೃದ್ಧವಾಗಲು ಮಾಯೆ ಬೇಕು. ಅದು ಬೊಮ್ಮಣ್ಣನ ಮಾಯೆ ಬೇಕು. ಈಮಾಯೆ “ಉತ್ಪತ್ತಿ, ಸ್ಥಿತಿ, ಲಯಕ್ಕೆ ಕಾರಣಕರ್ತಳು, ಬಲ್ಲಬಲ್ಲವರೆಲ್ಲರ ತನ್ನಲ್ಲಿಯೇ ಅಡಗಿಸುವಳು”. “ಈಕೆ ಅರಿದವರೆಲ್ಲರಿಗೆ ದೇವಿ. ಮರೆದವರಿಗೆ ಮಾರಿ” ಇಂಥ ಅರಿವು ಪಡೆವ ದಾರಿ ಬೊಮ್ಮಣ್ಣ ಬೋಧಿಸಿದ. ಈ ಅರಿವನ್ನು ಪಡೆಯಲು ‘ಮಾಯೆ’ ಬೇಕು ಶಕ್ತಿಯ ರೂಪದಲ್ಲಿ.

ಮಹಾದೇವನನ್ನು ಮರೆದವರಿಗೆ
ಮಾಯಾಂಗನೆ ಮಾರಿಯಾದಳು
ಸತ್ಕ್ರೀಸಜ್ಜನ ಯುಕ್ತಿಯಿಂದ
ಸದಾಶಿವನರಿಯಲಾಗಿ ಉಮಾದೇವಿಯಾದಳು

ಅಜ್ಞಾನವೇ ಮಾಯೆ. ಎಂದರೆ ಸುಜ್ಞಾನ ಮಾಯೆಯಲ್ಲವೆಂದಾಯಿತೆಂದು ಕೇಳಬಹುದು. ಕೇವಲ ಜ್ಞಾನ ಕೆಲಸದ್ದಲ್ಲ. ಬರಿಯ ಜ್ಞಾನದಿಂದ ಮಾಯೆಯನ್ನು ಗೆದೆಯಲು ಸಾಧ್ಯವಿಲ್ಲವೆಂದು ಬೊಮ್ಮಣ್ಣನು ಬಹು ಧ್ವನಿ ಪೂರ್ಣವಾಗಿ ಇಲ್ಲಿ ಹೇಳಿದ್ದಾನೆ.

ಅರಿವು ಆಚಾರದಲ್ಲಿ ಮೂಡಿ ನಿಂದಾಗಲೇ ಅದರ ಸಾರ್ಥಕತೆ. ಅದಕ್ಕಾಗಿ ಬೊಮ್ಮಣ್ಣ ಸತ್‌ಕ್ರಿಯೆ ಮಾಡಬೇಕೆನ್ನುತ್ತಾನೆ, ಸಜ್ಜನ ಸಂಗ ಮಾಡಬೇಕೆನ್ನುತ್ತಾನೆ. ಇವೆರಡರಿಂದ ಮತ್ತು ಯುಕ್ತಿಯಿಂದ ಎಂದರೆ ಸಾರಾಸಾರ ವಿಚಾರ ಮತ್ತು ಸಮಾಯಾಚಾರದಿಂದ ಸದಾಶಿವನನ್ನು ಅರಿಯಲು ಸಾಧ್ಯ. ಈ ಅರಿವೇ ಉಮಾದೇವಿ; ಶಕ್ತಿ; ಸದಾಶಿವನಿಗೆ ಅಭಿನ್ನಳಾದಕೆ, ಸತ್ಕ್ರಿಯೆ. ಸಜ್ಜನ ಸಹವಾಸದಿಂದ ಮಾಯೆಯನ್ನು ಗೆದ್ದು, ಶಿವನನ್ನು ಅರಿಯಬಹುದೆಂಬ ಬೊಮ್ಮಣ್ಣ ಮಾತು ಸರ್ವಕಾಲಕ್ಕೂ ಸರ್ವಜನರಿಗೂ ಆಪ್ಯಾಯನಕರ ಅನುಕರಣೆಗೆ ಯೋಗ್ಯವಾದುದು. ಬೊಮ್ಮಣ್ಣ ತೋರಿಸಿದ ಮಾರ್ಗ ಸುಭವೂ, ಸರ್ವ ಸಾಮಾನ್ಯರಿಗೆ ಆಚರಣೆಗೆ ತಕ್ಕದೂ ಆಗಿದೆ. ಮಾಡುತ್ತಿರುವ ಕಾಯಕದಿಂದ ಮಾಯೆಯನ್ನು ಗೆದೆಯುವ ಮಾರ್ಗ ತೋರಿಸಿ ಬೊಮ್ಮಣ್ಣ ಅದೇ ಕಾಯಕದಿಂದ ಸ್ವಸ್ವರೂಪ ದರ್ಶನ, ಲಿಂಗಾಂಗ ಸಾಮರಸ್ಯ ಸಾಧ್ಯ ಎಂದು ಆಚರಿಸಿ ತೋರಿಸಿದನು.

ಮಾಯೆ ನಾನಾ ಜನರಿಗೆ ನಾನಾ ರೀತಿಯಾಗಿ ಕಾಡುವುದು, ಅರಿತವರು, ಅರಿಯದವರು ಎಲ್ಲರೂ ಮಾಯೆಗೆ ಒಳಗು. ಆದರೆ ಈ ಅರಿವು ನಿಶ್ಚಿತ ಅರಿವಲ್ಲ.

ಅರಿವುಳ್ಳವರಿಗೆ ಅರಿವನರಿದಿಹೆನೆಂಬುದೇ ಮಾಯೆ
ಮೂರ ಮರೆದು ಬೇರೊಂದುವ ಕಂಡನೆಂಬುದೇ ಮಾಯೆ
ನುಡುಯ ನುಡಿವವರಲ್ಲಿ ಎಡಮಾತನಾಡಿ ವಾದಿಸುವದೇ ಮಾಯೆ.
ಘಟಮಟವೆಂಬ ಮಾರಿಯ ಹೊತ್ತು
ಭವವೆಂಬ ಬಾಗಿಲಲ್ಲಿ ತಿರುಗಾಡುತ್ತಿದ್ದೇನೆ.
ಢಕ್ಕೆಯ ದಾವರಕ್ಕೆ ಸಿಕ್ಕಿ ನೊಂದೆನು.
ಇದರಚ್ಚುಗವ ಬಿಡಿಸಾ,
ಕಾಲಾಂತಕ ಭೀಮೇಶ್ವರಲಿಂಗ

ಮಾಯೆ ಯಾರನ್ನೂ ಬಿಟ್ಟಿಲ್ಲ. ದೇವ, ದಾನವ ಮಾನವರೆಲ್ಲರನ್ನೂ ಆಕೆ ಸುತ್ತಿ ಮುತ್ತಿದಾಳೆ.

ಬ್ರಹ್ಮಂಗೆ ಸರಸ್ವತಿಯಾಗಿ ಬೆನ್ನಲಿ ಬಂದಳಾ ಮಾಯೆ.
ವಿಷ್ಣುವಿಂಗೆ ಲಕ್ಷ್ಮಿಯಾಗಿ ಭವಕ್ಕೆ ತಿರುಗಿಸದಳಾ ಮಾಯೆ.
ರುದ್ರಂಗೆ ಉಮಾದೇವಿಯಾಗಿ ಶಿರ ತೊಡೆಯಲ್ಲಿ ಕಾಡಿದಳಾ ಮಾಯೆ.
ಎಳ್ಳಿಗೆ ಎಣ್ಣೆ, ಮುಳ್ಳಿಗೆ ಮೊನೆಯಾಗಿ, ಹೂವಿಂಗೆ ಗಂಧವಾಗಿ
ಅವರವರಂಗದಲ್ಲಿ ಹಿಂಗದೆ ಪ್ರತಿರೂಪವಾಗಿ
ಸಂದಿಲ್ಲದೆ ಕಾಡುತ್ತಿದ್ದಾಳೆ ಮಾಯೆ.”

“ಎಳ್ಳಿಗೆ ಎಣ್ಣೆ, ಮುಳ್ಳಿಗೆ ಮೊನೆ, ಹೂವಿಗೆ ಗಂಧ” ಈ ಮಾತುಗಳಲ್ಲಿರುವ ಅರ್ಥವ್ಯಾಪ್ತಿ, ತತ್ವ ಸೂಕ್ಷ್ಮ ಅರಿತು ಆನಂದಿಸಬೇಕು. ಮುಳ್ಳಿಗೆ ಮೊನೆಯಾಗಿ ಎಂಬ ಮಾತಂತೂ ಮುಳ್ಳಿನ ಮೊನೆಯಷ್ಟೇ ತೀಕ್ಷ್ಣವಾಗಿದೆ. ಎಲ್ಲ ವಸ್ತುಗಳಲ್ಲಿಯೂ, ಎಲ್ಲ ಜೀವರಲ್ಲಿಯೂ ಮಾಯೆ ಅವರವರ ಪ್ರತಿರೂಪವಾಗಿ ಕಾಡುತ್ತಿದ್ದಾಳೆ ಎಂಬುದು ತ್ರಿಕಾಲ ಸತ್ಯ. ಇವಳನ್ನು ಅಳಿಸಲು ಸಾಧ್ಯವಿಲ್ಲ. ಎಳ್ಳಿನಿಂದ ಎಣ್ಣೆ, ಮುಳ್ಳಿನಿಂದ ಮೊನೆ, ಹೂವಿನಿಂದ ಗಂಧ – ಅಳಿಸಲು ಸಾಧ್ಯವೇ? ಹಾಗೆ ಅಳಿಸಿದರೆ ಅವುಗಳ ಅವಸ್ಥೆ ಏನಾಗವುದು? ಅವು ಅರ್ಥಹೀನವಾಗುವುವು. ಎಣ್ಣೆ, ಮೊನೆ, ಗಂಧಗಳನ್ನು ಉನ್ನತೀಕರಿಸಬೇಕು. ಮನುಷ್ಯನ ವಾಸನೆ, ಆಸೆ ಕಾಮನೆಗಳು ಉದಾತ್ತತೆಯನ್ನು ಪಡೆದಾಗ ಅವು ಸದಾಶಿವನನ್ನು ಅರಿವ ಸಾಧನೆಗಳಾಗುತ್ತವೆ. ಇದನ್ನೇ ಬೊಮ್ಮಣ್ಣ ಆಚರಿಸಿ ತೋರಿಸಿದ.

ಈ ಮಾಯೆಯೇ ‘ಮಾರಿ’. ಈ ಮಾರಿಯಿಂದ ಜನ ಕೆಡಬಾರದೆಂದು ಬೊಮ್ಮಣ್ಣ ಮಾರಿಕವ್ವೆಯನ್ನು ಕುಣಿಸುವ ಕಾಯಕದಿಂದ ಅವರನ್ನು ಉದ್ಧರಿಸಿದ. ಈ ಮಾಯೆ ಅಥವಾ ಮಾರಿ “ಮರೆದವರ ಮನದಲ್ಲಿಟ್ಟ ಮಾರಿ; ಅರಿದವರ ಮನದಲ್ಲಿಟ್ಟ ಸ್ವಯಂ ಜ್ಯೋತಿ.”

೧. ಆವ ಕಾಯಕದಿಂದಾದಡೂ ಆಗಲಿ ಭಾವಶುದ್ಧವಾಗಿ ಮಾಡುವುದೇ ಜಂಗಮ ಪೂಜೆ.

೨. ನಿಯಮ ಕ್ರೀ ತಪ್ಪದೆ ಮಾಡುವುದೇ ದೇವ ಪೂಜೆ.

೩. ಆವ ಪ್ರಸಂಗ ಬಂದಡೂ ಖಂಡಿಸುವದೇ ಪಂಡಿತನಿರವು.

೪. ತ್ರಿವಿಧ ಬಂದು ಮುಂದೆ ನಿಂದಿರಲು ಅದರಂದವ ನೋಡದಿಪ್ಪುದೇ ನಿಸ್ಸಂಗ ಸುಸಂಗಿಯ ಇರವು.

ಈ ನಾಲ್ಕು ಮಾತುಗಳಲ್ಲಿ ಬೊಮ್ಮಣ್ಣನ ಜೀವನ ಸಿದ್ಧಾಂತದ ಸಾರ ಅಡಗಿದೆ. ಕಾಯಕವೇ ಲಿಂಗಪೂಜೆ; ಜಂಗಮ ಪೂಜೆ. ಯಾವ ಕಾಯಕವೇ ಆಗಲಿ – ಭಾವಶುದ್ಧವಾಗಿ ಮಾಡಿದರೆ ಅದು ದೇವಪೂಜೆಯಾಗುವುದು. ತನಗೂ ತನ್ನ ಸಮಾಜಕ್ಕೂ ತದ್ವಾರ ಲೋಕಕ್ಕೂ ಹಿತ ಬಯಸುವದೆಂದರೆ ಕಾಯಕ ಮಾಡುವುದೇ. ಪ್ರತಿಯೊಬ್ಬರು ಕಾಯಕ ಮಾಡಲೇಬೇಕು, ಸ್ವಹಿತ ಪರಹಿತ ಬೇಕಿದ್ದರೆ. ಇಂಥ ಕಾಯಕವಂತ ಲೋಕವಿಗುರ್ಬಣೆಗೆ ಹೆದರುವುದಿಲ್ಲ; ಹೆದರಬಾರದು. ಲೋಕ ಚೆನ್ನಾಗಿ ಬದುಕಬೇಕಾದರೆ ಅದನ್ನು ತಿದ್ದಿ ಕಾಲ ಬಂದಾಗ್ಗೆ ಸತ್ಯವನ್ನು ಎತ್ತಿ ಹಿಡಿದು ಅಸತ್ಯವನ್ನು ಅಪ್ರಿಯವೆನಿಸಿದರೂ ಖಂಡಿಸಬೇಕಾಗುತ್ತದೆ. ಪಂಡಿತನಾದವಂತನೂ – ಎಲ್ಲರೂ ಮಾಡಬೇಕಾದುದೇ – ಇದನ್ನು ಮಾಡಲೇಬೇಕು. ಇನ್ನು ವ್ಯಕ್ತಿ ಹಸನಾದರೆ ಸಮಾಜ ಹಸನಾಗುವುದು. ವ್ಯಕ್ತಿ ಹಸನಾಗುವುದೆಂದರೆ ತ್ರಿವಿಧ ಮಲಗಳು ಅಂಟದಂತೆ ಬಾಳಬೇಕು. ಈ ತ್ರಿವಿಧ ಮಲಗಳನ್ನು ಮುಂದೆ ತಂದು ಹರಡುವಳು ಮಾಯೆ’ ಅವು ಮೋಹಕವಾಗಿ ಕಾಣುವಂತೆ ಆಕೆ ಮಾಡುವಳು. ಈ ಮೋಹಕ್ಕೆಳಸಿದರೆ ಮಾಯೆ ಮಾರಿಯಾಗಿ ತ್ರಿಮಲಗಳಲ್ಲಿ ಕೆಡಹುವಳು. ಭಕ್ತನಾದವನು ಅರಿವುಗಳಿಸಿ, ಅದನ್ನು ಸತ್ಕ್ರಿಯೆಯಿಂದ ಸಜ್ಜನ ಸಹಜವಾಸದಿಂದ ಆಚರಿಸಿದರೆ ಆ ಮಾರಿ ಸ್ವಯಂಜ್ಯೋತಿಯಾಗುವಳು. ಭಾವಶುದ್ಧವಾಗಿ ಕಾಯಕಗೈದು, ಸತ್ಯ ನುಡಿದು ನಡೆದು, ತ್ರಿಮಲಗಳಿಂದ ದೂರಿದ್ದರೆ ಏನಾಗುವುದು? ಬೊಮ್ಮಣ್ಣನ ಮಾತಿನಲ್ಲಿಯೇ ಕೇಳೋಣ.

“ಇಂತಿ ದನಿ ಹೊರಗಾಯಿತ್ತು” ಎಂಬ ಮಾತಿನಲ್ಲಿ ತತ್ವ ಸೌಂದರ್ಯ, ಕಾವ್ಯ ಸೌಂದರ್ಯ, ಒಗ್ಗೂಡಿ ನಿಂದಿವೆ.

“ಢಕ್ಕೆಯ ದನಿ ಹೊರಗಾಗಿ, ಕಾಲಾಂತಕ ಭೀಮೇಶ್ವರಲಿಂಗ ಒಳಗಾಗುವ ಸುಲಭ ಮಾರ್ಗ ಬೊಮ್ಮಣ್ಣ ನಿರ್ಮಿಸಿದ. ಅದರ ಜೀವ ಜೀವಾಳ ಭಾವಶುದ್ಧವಾಗಿ ಮಾಡುವ ಕಾಯಕ.

ಬೊಮ್ಮಣ್ಣನ ವಚನಗಳು ಬಹು ಆತ್ಮೀಯತೆಯಿಂದ ತುಂಬಿವೆ. “ಅರಿದವರೆಲ್ಲರಿಗೆ ದೇವಿಯಾಗಿ, ಮರದವರಿಗೆ ಮಾರಿಯಾಗಿ ಮೊರದೊಳಗೆ ಕೊಂಡು ಬಂದಿದ್ದೇನೆ.” “ಘಟಮಟವೆಂಬ ಮಾರಿಯ ಹೊತ್ತು ಭವವೆಂಬ ಬಾಗಿಲಲ್ಲಿ ತಿರುಗಾಡುತ್ತಿದ್ದೇನೆ.” “ಢಕ್ಕೆಯ ಉಲುಹು ಅಡಗುವುದಕ್ಕೆ ಮುನ್ನವೇ ನಿಶ್ಚಯಿಸಿಕೊಳ್ಳಿ.” ಇಲ್ಲಿಯ ಆತ್ಮೀಯತೆ ಓದುಗರನ್ನು ಆ ತತ್ವದ ಆತ್ಮಕ್ಕೆ ಒಯ್ದು ಮುಟ್ಟಿಸುತ್ತದೆ.