ಬಸವಪೂರ್ವ ಯುಗದಲ್ಲಿ ಶರಣ ಸಂಪ್ರದಾಯವನ್ನು ಹಲವಂದದಿಂದ ಬೆಳೆಸಿದವರಲ್ಲಿ ತೆಲುಗು ಜೊಮ್ಮಯ್ಯನೂ ಒಬ್ಬ. ಆತನ ಚರಿತ್ರೆ ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ಕಾಯಕನಿಷ್ಠೆ, ಗಣಾಚಾರ, ಎಣೆಯಿಲ್ಲದ ಶೌರ್ಯ ಇವು ಜೊಮ್ಮಯ್ಯನಲ್ಲಿ ಎದ್ದು ಕಾಣುತ್ತವೆ. ಆತನ ಭಕ್ತಿಗಂತೂ ಬಸವಣ್ಣ ಮಾರುಹೋಗಿದ್ದಾನೆ. ತನ್ನ ಎರಡು ವಚನಗಳಲ್ಲಿ ಜೊಮ್ಮಯ್ಯನನ್ನು ಎದೆದುಂಬಿ ನೆನೆದಿದ್ದಾನೆ:

ಕಾಳಿದಾಸಂಗೆ ಕಣ್ಣನಿತ್ತೆ, ಓಹಿಲಯ್ಯನ ನಿಜಪುರಕ್ಕೊಯಿದೆ;
ನಂಬಿ ಕರೆದಡೋ ಎಂದೆ,
ತೆಲುಗು ಜೊಮ್ಮಯ್ಯಂಗೆ ಒಲಿದೆ, ದೇವಾ.
ಕೂಡಲಸಂಗಮದೇವಾ,
ಎನ್ನನೇಕೆ ಒಲ್ಲೆಯಯ್ಯಾ?[1]
ತೊತ್ತಿಂಗೆ ಬಲ್ಲಹನೊಲಿದರೆ ಪದವಿಯ ಮಾಣದೆ ಮಾಣ್ಬನೆ?
ಜೇಡರದಾಸಮಯ್ಯಂಗೊಲಿದಾತ ಮತ್ತೊಬ್ಬ ದೇವನೆ, ಅಯ್ಯಾ?
ಮಾದಾರ ಚೆನ್ನಯ್ಯಂಗೆ, ಡೋಹರಕಕ್ಕಯ್ಯಂಗೆ,
ತೆಲುಗು ಜೊಮ್ಮಯ್ಯಂಗೆ ಒಲಿದಾತ ಮತ್ತೊಬ್ಬ ದೇವನೆ, ಅಯ್ಯಾ?
ಎನ್ನಮನದ ಪಂಚೇಂದ್ರಿಯ ನಿಮ್ಮತ್ತಲಾದರೆ
ತನ್ನತ್ತ ಮಾಡುವ ಕೂಡಲಸಂಗಯ್ಯ,

ತೆಲುಗು ಜೊಮ್ಮಯ್ಯ ಹೆಸರು ಹೇಳುವಂತೆ ಆತ ತೆಲುಗು ನಾಡಿನಿಂದ ಬಂದವನಾಗಿರಬೇಕು. ಅಥವಾ ಆತನ ಹಿರಿಯರು ಕರ್ನಾಟಕಕ್ಕೆ ಬಂದು ನೆಲಿಸಿರಬೇಕು, ಅವರ ಮನೆತನಕ್ಕೆ ‘ತೆಲುಗು’ ಎಂಬ ಹೆಸರು ಉಳಿದುಕೊಂಡು ಬಂದು, ಆ ಮನೆತನದ ಪ್ರತಿಯೊಬ್ಬರೂ ತಮ್ಮ ಹೆಸರಿನೊಡನೆ ಅದನ್ನು ಉಪಯೋಗಿಸುತ್ತಿದ್ದಿರಬೇಕು. ಆದರೆ ಇದು ಯಾವುದಕ್ಕೂ ಪುರಾಣ, ರಗಳೆ, ಚರಿತ್ರೆಗಳಲ್ಲಿ ಆಧಾರಗಳಿಲ್ಲ. ಜೊಮ್ಮಯ್ಯನ ಇಷ್ಟದೈವ ಭೀಮನಾಥ. ಆಂಧ್ರ ದ್ರಾಕ್ಷಾರಾಮದ ಭೀಮೇಶ್ವರಲಿಂಗ ಸುಪ್ರಸಿದ್ಧವಿದೆ. ಆತ ಅಥವಾ ಆತನ ಮನೆತನದವರು ದ್ರಾಕ್ಷಾರಾಮದಿಂದ ಬಂದಿರಬಹುದೆಂದು ಊಹಿಸಲವಕಾಶವಿದೆ. ತೆಲುಗೇಶ್ವರಾ ಎಂಬ ಆತನ ಅಂಕಿತ ಆತ ತೆಲುಗನೆಂಬುದು ಖಚಿತಪಡಿಸುತ್ತದೆ.

ತೆಲುಗು ಜೊಮ್ಮಯ್ಯನ ಚರಿತ್ರೆ ಬಸವಪುರಾಣ, ಹರಿಹರನ ರಗಳೆ, ಭೈರವೇಶ್ವರ ಕಥಾಮಣಿ ಸೂತ್ರ ರತ್ನಾಕರ ಮುಂತಾದ ಗ್ರಂಥಗಳಲ್ಲಿದೆ. ಆದರೆ ಇವುಗಳಲ್ಲಿ ಸಾಮ್ಯವಿಲ್ಲ. ಬಸವಪುರಾಣದಲ್ಲಿ ಕೇಶಿರಾಜನ ವಿಷಯವೇ ಇಲ್ಲ; ಅಲ್ಲದೆ ಜೊಮ್ಮಯ್ಯ ಪೆರ್ಮಾಡಿರಾಯನಲ್ಲಿ ಮಂತ್ರಿಯಾದ ವಿಷಯವೂ ಇಲ್ಲ. ಆತನ ಗಣಾಚಾರವನ್ನು ಕುರಿತು ಬಸವಪುರಾಣ ಏನೂ ಹೇಳುವುದಿಲ್ಲ. ಭೈರವೇಶ್ವರ ಕಥಾಮಣಿ ಸೂತ್ರ ರತ್ನಾಕರ ಮತ್ತು ಹರಿಹರನ ರಗಳೆಯಲ್ಲಿ ಸಂಪೂರ್ಣ ಚರಿತ್ರೆಯಿದ್ದರೂ ಅದು ಘಟನೆಗಳ ದೃಷ್ಟಿಯಿಂದ ಹಿಂಚುಮುಂಚಾಗಿದೆ ಎನಿಸುತ್ತದೆ. ಬೇಟೆಗಾರನಾಗಿದ್ದ ಜೊಮ್ಮಯ್ಯ ಕೊಂಡಗುಲಿ ಕೇಶಿರಾಜನ ಸಂಪರ್ಕದಿಂದ ಶಿವಾನುಭಾವಿಯಾಗಿ, ಬೇಟೆಯಾಡುವುದನ್ನು ತೊರೆದು, ಪೆರ್ಮಾಡಿರಾಯನಲ್ಲಿ ಮಂತ್ರಿಯಾದ. ಹರಿಹರನ ರಗಳೆಯಲ್ಲಿ ಇದಕ್ಕೆ ವಿರೋಧವಾದ ರೀತಿಯಲ್ಲಿ ಚರಿತ್ರೆ ಬಂದಿದೆ. ಆತ ಬೇಟೆಯನ್ನೂ ಆಡುತ್ತಿರುತ್ತಾನೆ; ಅರಸನಲ್ಲಿ ಮಂತ್ರಿಯೂ ಆಗಿರುತ್ತಾನೆ. ಬೇಟೆಯ ಕಾಯಕವನ್ನು ಮಾಡುತ್ತಿರುವಾಗಲೇ ಆತನಿಗೆ “ಭಕ್ತರ್ಗೆ ಮಾಡಲಿಲ್ಲೆಂದುಮ್ಮಳಂ ಪುಟ್ಟಿತಂತೆ”. ಅದಕ್ಕಾಗಿ:

ಯುಕ್ತಿಯಿಂ ಸೇವಕಾವೃತ್ತಿಗೆ ಮನಂಮುಟ್ಟಿ
ಬಂದು ಪೆರ್ಮಾಡಿರಾಯನನಕ್ಕಿರಿಂ ಕಂಡು
ಒಂದು ತಿಂಗಳ್ಗೆ ಸಾವಿರ ಹೊನ್ನನೆಡೆಗೊಂಡು

ಕಾಯಕವನ್ನು ಕೈಕೊಂಡು,

ಶರಣರ್ಗೆ ಮಾಡುತಂ ಭಕ್ತಿಯಂ ಸೂಡುತಂ
ಪರಮ ಹರ್ಷ ಮಿಕ್ಕು ಸುಖದೊಳೋಲಾಡುತಂ

ಇದ್ದ. ಆದರೆ ಇಲ್ಲಿ ಆತನ ಕಾಯಕವು ಯುವುದೆಂದು ತಿಳಿಯುವುದಿಲ್ಲ. ಲಿಂ.ಹಳಕಟ್ಟಿಯವರು ಆತ ಮಂತ್ರಿಯಗಿದ್ದನೆಂದೇ ಬರೆಯುತ್ತಾರೆ. ಜೊಮ್ಮಯ್ಯನ ಕಲಿತನ, ಸ್ಪಷ್ಟ ಪ್ರಬುದ್ಧ ವಿಚಾರಗಳು, ಆತನ ವಚನಗಳು ಆತ ಮಂತ್ರಿಯಾಗಿರಲಿಕ್ಕೆ ಸಾಕ್ಷಿಯಾಗಿವೆ. ಅಲ್ಲದೆ ತಿಂಗಳಿಗೆ ಸಾವಿರ ಹೊನ್ನಿನ ಸಂಬಳ ಮಂತ್ರಿಗಲ್ಲದೆ ಸಾಮಾನ್ಯ ಅಧಿಕಾರಿಗಿರುವುದಂತೂ ಸಾಧ್ಯವಿಲ್ಲ.

ಕಲ್ಯಾಣದ ಉಪನಗರವಾದ ಶಿವಪುರದಲ್ಲಿ ತೆಲುಗು ಜೊಮ್ಮಯ್ಯ ವಾಸವಾಗಿದ್ದ. ಆತನ ಕಾಯಕ ಬೇಟೆಯಾಡುವುದು ಮತ್ತು ಮಾಂಸವನ್ನು ಮಾರುವುದು. ಶಿವಭಕ್ತನಾಗಿದ್ದರೂ ಆತ ಬೇಟೆಯಾಡುವ ಕಾಯಕ ಬಿಟ್ಟಿರಲಿಲ್ಲ. ಕಣ್ಣಪ್ಪ ಮತ್ತು ಧರ್ಮವಾಧ್ಯರೂ ಶಿವಭಕ್ತರಾಗಿ ಬೇಟೆಯಾಡುವುದನ್ನೇ ತಮ್ಮ ಕಾಯಕವನ್ನಾಗಿ ಮಾಡಿಕೊಂಡಿದ್ದರು. ಕಾಲಕ್ರಮದಲ್ಲಿ ನಾಡಿನಲ್ಲಿ ಶರಣ ಸಂಪ್ರದಾಯ, ಲಿಂಗಧರ್ಮ ಸಂಪ್ರದಾಯ ಬೆಳೆದು ಬಂದಾಗ ಈ ಜೀವ ಹಿಂಸೆಯ ಕಾಯಕ ಸರಿಯಲ್ಲವೆನಿಸಿರಬೇಕು. ಇದನ್ನೇ ಕೇಶಿರಾಜ ತೆಲುಗು ಜೊಮ್ಮಯ್ಯನಿಗೆ ಹೇಳಿರಬೇಕು.

ತೆಲುಗು ಜೊಮ್ಮಯ್ಯನ ಬೇಟೆಯ ಕಾಯಕಕ್ಕೆ ನಮ್ಮ ಪುರಾಣಗಳು ಒಂದು ಪವಾಡ ಕಥೆಯನ್ನು ಜೋಡಿಸಿಬಿಟ್ಟಿವೆ: ಶಿವಯೋಗಿ ಶಿವಾನಂದ ಶ್ರೀಶೈಲದಲ್ಲಿ ತಪಸನ್ನಾಚರಿಸುತ್ತಿದ್ದ. ವಿಹಾರಕ್ಕೆಂದು ಅಲ್ಲಿಗೆ ಬಂದ ಗಂಧರ್ವರು ಭಸ್ಮಪೂಸಿಕೊಂಡು ಸಮಾಧಿಯಲ್ಲಿ ಕುಳಿತ ಈ ಜಟಧಾರಿ ಶಿವಯೋಗಿಯನ್ನು ಕಂಡು ಮುದಿಗರಡಿ ಎಂದು ಹಾಸ್ಯ ಮಾಡಿದರು. ಇದನ್ನು ಕೇಳಿ ಕುಪಿತನಾದ ಆ ಶಿವಯೋಗಿಯ ಶಿಷ್ಯ ಪುನೀತಯ್ಯ ‘ನೀವು ಜಿಂಕೆಗಳಾಗಿರಿ’ ಎಂದು ಶಾಪವಿತ್ತ. ಸರೆ, ಅವರು ಜಿಂಕೆಗಳಾಗಿ ಕಲ್ಯಾಣದ ಹತ್ತಿರದ ಕಾಡಿನಲ್ಲಿ ಹುಟ್ಟಿದರು. ಮತ್ತೆ ಅವರಿಗೆ ವಿಮೋಚನೆಯಾಗಬೇಕಲ್ಲ. ಶಿವನು ಜೊಮ್ಮಯ್ಯನ ಕನಸಿನಲ್ಲಿ ಬಂದು,

ಎಲೆ ಮಗನೆ ಜೊಮ್ಮಯ್ಯ ನಿನಗೊಂದನರುಪವೆಂ
ನಲವಿಂದೆ ಸೂಕ್ಷ್ಮಧರ್ಮವನೊಲಿದು ತಿಳುಪುವೆಂ
ಪಟ್ಟಣದ ಕೆಲದ ಹತ್ತು ಯೋಜನದೊಳಗೆ
ಶಾಪಹತರಾಗಿ ಮೃಗವಾಗಿ ಕಾನನದೊಳಗೆ
ಕಾರಣಿಕ ಋಷಿಯರಿರ್ದಪರವರನಟ್ಟುವುದು
ಆರೈದು ಮೃಗದ ಜನನದ ಬೇಂಟೆಯಾಡುವುದು
ಮಾಯೆಯಂ ಕಳೆದು ಕೈಲಾಸಕೆ ಕಳಿಪುವುದು
ಕಾಯಮಂ ಹೊತ್ತಿರ್ಪ ಭಾರಮಂ ಇಳಿಪುವುದು

ಎಂದು ಬೆಸಸಿದ. ಅದಕ್ಕಾಗಿ ಲಿಂಗಭಕ್ತನಾದ ಜೊಮ್ಮಯ್ಯ ಬೇಟೆಯ ಕಾಯಕವನ್ನು ಕೈಕೊಂಡ. “ಸೂಕ್ಷ್ಮಧರ್ಮವನೊಲಿದು ತಿಳಿಪುವೆಂ” ಎಂಬ ಶಿವನ ಮಾತಿನಲ್ಲಿ ಧರ್ಮದ ಸೂಕ್ಷ್ಮತತ್ವವಿದೆ. ಲಿಂಗವಂತನಾದರೂ ಬೇಟೆಯಾಡು. ನಿನ್ನ ಬೇಟೆಯ ಕಾಯಕ ಇನ್ನೊಬ್ಬರ ಉದ್ಧಾರಕ್ಕೆ ಕಾರಣವಾಗುತ್ತದೆ. ಹಿಂಸೆಯೆಂದು ಹಿಂಜರಿಯಬೇಡ – ಎಂಬುದೇ ಆ ಸೂಕ್ಷ್ಮ ತತ್ವ.

ಜೊಮ್ಮಯ್ಯನ ಬೇಟೆಯ ವರ್ಣನೆಯನ್ನು ಹರಿಹರ ಮಹಾಕವಿ ಅರ್ಥವತ್ತಾದ, ಸುಂದರವಾದ ರೂಪಕದಿಂದ ವರ್ಣಿಸುತ್ತಾನೆ:

ಬೆಲ್ಲವತ್ತದ ಬಿಲ್ಲನಳವಡಲ್ಪಿಡಿಕೈಸಿ
ಬಿಲ್ಲೊಳೆಸೆವರ್ಧನಾರಿಯನೊಪ್ಪೆ ಮೇಳೈಸಿ
ಕಣಗಿಲೆಯ ಕೋಲ ತುದಿಯೊಳ್ಪೊಳೆವಲಗು ಮೆರೆಯೆ
ಎಣೆಗೂಡಿ ಹೊಗರೊಳಗೆ ಪಂಚಾಕ್ಷರಿಗಳೊಗೆಯೆ
ದಿವ್ಯ ಸರಮಂ ಕೊಂಡು ತಿರುವಾಯ್ಗಳೊಳಗಿಟ್ಟು
ನವ್ಯಭಕ್ತಂ ಮುನಿದು ನಿಮಿರ್ದು ನೀಡಡಿಯಿಟ್ಟು
ಮುಟ್ಟಿ ದೃಢಬಂಧಂ ಧನುರ್ದಂಡದೊಳಗೆ ಸಲೆ
ದೃಷ್ಟಿಯಂಬಿನ ಕೊನೆಯ ಮೊನೆಯೊಳೆಚ್ಚತ್ತು ನಿಲೆ
ಕಾರಣಿಕ ಮೃಗ ಶರೀರವನಲ್ಲಿ ಲಕ್ಷಿಸುತೆ
ಆರೈದು ಶರದ ಮೃಗದೆಡೆಯಂ ವಿವೇಕಿಸುತೆ
ಘಳಿಲನೆಚ್ಚಂ ಜೊಮ್ಮಿತಂದೆ ಮೃಗವಳುಕುತಿರೆ
ಅಳವಡೆ ಶರಂ ಶಿರಂಗೊಂಡುರ್ಚಿ ಪಾರುತಿರೆ

ತೆಲುಗು ಜೊಮ್ಮಯ್ಯನ ಭಕ್ತಿ ಪಲ್ಲವಿಸಿ ಹಬ್ಬಿತ್ತು. ಆತನ ಕೀರ್ತಿ ಎಣ್ದೆಸೆಯಲ್ಲಿ ತೀವಿತ್ತು. ಜೊಮ್ಮಯ್ಯನನ್ನು ನೋಡುವ ಆತನೊಡನೆ ಶಿವ ಗೋಷ್ಠಿ ನಡೆಸುವ ಇಚ್ಚೆಯಾಯಿತು ಪೆರ್ಮಾಡಿರಾಯನ ಮಹಾಮಂತ್ರಿಯಾಗಿದ್ದ ಕೊಂಡಗುಳಿ ಕೇಶಿರಾಜ ದಣ್ಣಾಯಕನಿಗೆ. ಭಕ್ತಿಯೂ ಬೇಟೆಯೂ ಇವೆರಡು ಹೇಗೆ ಕೂಡಿರಬಲ್ಲುವು ಎಂಬುದು ಕೇಶಿರಾಜನಿಗೆ ಅರಿದಾಯ್ತು.

ಎಲ್ಲವುಂ ಲೇಸಾಯ್ತು ಬೇಟೆಯೊಂದೇ ಪೊಲ್ಲ
ಅಲ್ಲಿ ಮಾಣಿಪೆನಭವಭಕ್ತಂಗದಲ್ಲಲ್ಲ

ಎಂದು ತಮ್ಮೂರಿಂದ ಪೊರಮಟ್ಟು ನಡೆತಂದ ಕೇಶಿರಾಜ ಶಿವಭಕ್ತರೊಡನೆ. ಶಿವಪುರವನ್ನು ಹೊಕ್ಕು ಜೊಮ್ಮಯ್ಯನ ಮನೆಯನ್ನರಸುತ್ತ ಹೋದರು. ಜೊಮ್ಮಣ್ಣನ ಮನೆ ಬಂತು. ನೋಡುವುದೇನು? ಮನೆತುಂಬ ಅಲ್ಲಿ ಇಲ್ಲಿ ಎಲ್ಲ ಕಡೆಗೆ ಮಾಂಸದ ಮುದ್ದೆಗಳು; ಶಿವದಿಡುವ ಮೃಗಗಳು. ಕೇಶಿರಾಜನಿಗೆ ಹೇಸಿಗೆಯೆನಿಸಿತು. “ಶಿವಭಕ್ತರಂ ದೂರದಿಂದೆ ಕೇಳ್ವುದು ಲೇಸು, ಪವಣಿಸಲ್ನಮ್ಮಳವೆ ಪೊಗಳುತಿರ್ಪುದೆ ಲೇಶು” ಎನಿಸಿತು ಆತನಿಗೆ. ಆಗ ಜೊಮ್ಮಯ್ಯ ಮನೆಯಲ್ಲಿರಲಿಲ್ಲ. “ನಾವು ಭೀಮೇಶ್ವರ ಮಂದಿರದಲ್ಲಿರುವೆವು. ಜೊಮ್ಮಯ್ಯನಿಗೆ ತಿಳಿಸಿರಿ” ಎಂದು ಜೊಮ್ಮಯ್ಯನ ಅರಸಿಗೆ ಹೇಳಿ ಭೀಮೇಶ್ವರನ ಮಂದಿರಕ್ಕೆ ಬಂದರು.

ತುಸು ಹೊತ್ತಿನ ಬಳಿಕ ಜೊಮ್ಮಯ್ಯ ಮನೆಗೆ ಬಂದ. ಹೆಂಡತಿ,

ಶರಣ ಸಂತತಿವೆರಸಿ ಪರಿಯರೋರ್ವರ್ಬಂದು
ಹರುಷದಿಂ ನಿಳಯದೊಳು ನಿಮ್ಮ ಬರವಂ ಕೇಳ್ದು
ಪಿಶಿತಮಾಲೆಯನಿಲ್ಲಿ ನೆರೆಕಂಡು ಪೇಸುತಂ
ಮುಸುಕು ಮೂಗಿನೊಳಿಟ್ಟು ಶಿವಶಿವನೆ ಎನ್ನತಂ

ಭೀಮನಾಥನಾಲಯದತ್ತ ಪೋದರೆಂದು ಹೇಳಿದಳು. ಒಡೆನೆಯೆ ಜೊಮ್ಮಯ್ಯ ಅಲ್ಲಿಗೆ ಹೋಗಿ ಕೇಶಿರಾಜನನ್ನೂ ಶರಣರನ್ನೂ ಮನೆಗೆ ಆಹ್ವಾನಿಸಿದ. ಮನಸ್ಸಿಲ್ಲದ ಮನಸ್ಸಿನಿಂದ ಶರಣರನ್ನು ಕೂಡಿ ಕೇಶಿರಾಜ ಜೊಮ್ಮಯ್ಯನ ಮನೆಗೆ ಹೋದ. ಎಲ್ಲರ ಲಿಂಗಪೂಜೆಯಾಯಿತು. ಆರೋಗಣೆಗೆ ಸಿದ್ಧತೆ ನಡೆಯಿತು. ದಣ್ಣಾಯಕ ಇಳಿದು ಹೋದ. ಎಲ್ಲಿ ಮಾಂಸವನ್ನೇ ಎಡೆ ಮಾಡುವರೋ ಎಂದು ಹೆದರಿದ. ಆತನ ಹೆದರಿಕೆಗೆ ತಳಬುಡವಿರಲಿಲ್ಲ. ಜೊಮ್ಮಯ್ಯನರಸಿ ಶರಣ ಕುಲಕ್ಕೆ ಹೂರಿಗೆ, ಗಾರಿಗೆ, ಪಾಯಸ, ಮಂಡಿಗೆ, ಇಡ್ಡಲಿಗೆ, ಕಳವೆಯೋಗರ ಮುಂತಾಗಿ ನಾನಾ ವಿಧವಾದ ಶಾಖಾಹಾರ ಪಕ್ವಾನ್ನಗಳನ್ನು ಎಡೆಮಾಡಿದಳು. ಕೇಶಿರಜನ ಭಯ ದೂರಾಯಿತು; ಮನ ಮುದುಗೊಂಡಿತು.

ಶರಣರೊಡನೆ ಕೇಶಿರಾಜನ ಜೊಮ್ಮಯ್ಯನ ಮನೆಯಲ್ಲಿ ಹಲವು ದಿನಗಳಿದ್ದು ಶಿವಾನುಭವಗೋಷ್ಠಿ ನಡೆಸಿದ. ಶರಣರ ಸಂಗದಿಂದ ತೆಲುಗು ದಂಪತಿಗಳು ಅನುಭಾವದ ಆಳ ಎತ್ತರಗಳನ್ನು ಕಂಡರು; ಅನುಭಾವವನ್ನೇ ಬದುಕಲು ಕಲಿತವರು.

ಕೇಶಿರಾಜನೊಡನೆ ಶಿವಗೋಷ್ಠಿ ನಡೆಸಿದ ಬಳಿಕ ಅವನಹೇಳಿಕೆಯಂತೆ ಜೊಮ್ಮಯ್ಯ ಬೇಟೆಯ ಕಾಯಕವನ್ನು ಬಿಟ್ಟು ವಿಕ್ರಮಾದಿತ್ಯನಲ್ಲಿ ಮಂತ್ರಿ ಪದವಿಯನ್ನು ಕೈಕೊಂಡಿರಬೇಕು.

ಮಂತ್ರಿಪದವಿ ಬಂದರೂ ಆತನ ಶಿವಾನುಭವಕ್ಕೆ ಚ್ಯುತಿಯೆಲ್ಲಿ? ಲೌಕಿಕ ಪಾರಮಾರ್ಥ ಎರಡನ್ನೂ ಆತ ಸಮರ್ಥವಾಗಿ ನಡೆಸಿದ್ದ. ರಾಜನಿಗೆ ಜೋಳವಾಳಿಯಾಗಿದ್ದ. ಆದರೆ ಭೀಮನಾಥನಿಗೆ ವೇಳೆಯಾಳಿಯಾಗಿದ್ದ.

ತೆಲುಗು ಜೊಮ್ಮಯ್ಯ ವಿಭೂತಿಯ ವೀರ, ಸುರಗಿಯ ಸುಭಟ, ವೀರನಲ್ಲದವ ಭಕ್ತನಾಗಲಾರ. ಭಕ್ತಿ ಸತ್ಯಕ್ಕೆ ಶಿವಕ್ಕೆ ಮೃದು, ಅಸತ್ಯಕ್ಕೆ ಅಶಿವಕ್ಕೆ ಅದು ಕೂರಲುಗು. ಅಸತ್ಯವನ್ನು, ಅನ್ಯಾಯವನ್ನು, ಅಧರ್ಮವನ್ನು ಕಂಡು ಭಕ್ತನೆಂದೂ ಸೈರಿಸನು. ಇಂಥ ಸತ್ಯ ನ್ಯಾಯ ಧರ್ಮಗಳಿಗೆ ಪ್ರಾಣ ಪಣಕ್ಕೆ ಹಚ್ಚಿ ಹೋರಾಡುವುದೇ ಗಣಾಚಾರ. ಇಂಥ ಗಣಾಚಾರ ಮೆರೆದ ಒಂದು ಪ್ರಸಂಗ ಜೊಮ್ಮಯ್ಯ ಜೀವನದಲ್ಲಿ ಬರುತ್ತದೆ.

ಜೊಮ್ಮಯ್ಯನಿಂದ ಪ್ರಭಾವಿತರಾಗಿ ಅನೇಕರು ಆತನಿಂದ ದೀಕ್ಷೆ ಪಡೆದಂತೆ ತೋರುತ್ತದೆ. ಆತನ ಪ್ರಭಾವಕ್ಕೊಳಗಾಗಿ ಶಿವಭಕ್ತಿಯನ್ನು ಸ್ವೀಕರಿಸಿದವರಲ್ಲಿ ಚಾಲುಕ್ಯ ಆರನೆಯ ವಿಕರಮನ ಹೆಂಡತಿ ಲಕುಮಾದೇವಿ ಅಗ್ರಗಣ್ಯಳು. ವಿಕ್ರಮಾದಿತ್ಯನಿಗೆ ಎಂಟು ಜನ ಹೆಂಡಂದಿರು, “ಅವರಲ್ಲಿ ಲಕುಮಾದೇವಿ(ಲಕ್ಷ್ಮೀದೇವಿ) ಒಬ್ಬಾಕೆ. ಈಕೆ ಕ್ರಿ.ಶ. ೧೦೮೪ರಲ್ಲಿ ಕಲ್ಯಾಣದಲ್ಲಿ, ಕ್ರಿ.ಶ ೧೦೯೫ರಲ್ಲಿ ಧರ್ಮಪುರ ಅಂದರೆ ಈತಿನ ಡಂಬಳದಲ್ಲಿ; ೧೧೦೯ರಲ್ಲಿ ನಿಟ್ಟಿಸಿಂಗಿ ಎಂಬಲ್ಲಿ ಬೇರೆ ಬೇರೆ ಕಾಲಗಳಲ್ಲಿ ಅಧಿಪತಿಯಾಗಿ ರಾಜ್ಯಭಾರ ಮಾಡುತ್ತಿದ್ದಳೆಂದು ಶಸನಗಳಲ್ಲಿ ಉಲ್ಲೇಖಗಳಿವೆ. ಇವಳು ‘ಪಿರಿಯರಸಿ’ ಎಂತಲೂ ಅವುಗಳಲ್ಲಿ ಕರೆಯಲ್ಪಟ್ಟಿದ್ದಾಳೆ.”[2]

ಲಕುಮಾದೇವಿ ಜೊಮ್ಮಯ್ಯ ಮತ್ತು ಇತರ ಶರಣರೊಡನೆ ಶಿವಾನುಭವಗೋಷ್ಠಿ ನಡೆಸುತ್ತಿದ್ದಿರಬೇಕು. ಆಕೆ ಹಣ್ಣು, ಹೂ, ಕರ್ಪೂರಗಳನ್ನು ಜೊಮ್ಮಯ್ಯನಿಗೆ ಭಕ್ತಿಯಿಂದ ಕಳಿಸುತ್ತಿದ್ದಳಂತೆ. ಜೊಮ್ಮಯ್ಯ ಮತ್ತು ಲಕುಮಾದೇವಿಯವರು ‘ಶಿವಸೋದರ’ರ ತೆರಬಾಳಿದರೆಂದು ಹರಿಹರ ಕವಿ ಹೇಳುತ್ತಾನೆ.

ಒಮ್ಮೆ ತೆಲುಗು ಜೊಮ್ಮಯ್ಯ ಪೆರ್ಮಾಡಿರಾಯನ ಅರಮನೆಗೆ ಬಂದ. ಮಹಡಿಯಲ್ಲಿ ದೊರೆ ವಿಷ್ಣು ವಿಗ್ರಹಕ್ಕೆ ಪೂಜೆಗೈಯುತ್ತಿದ್ದ. ಕೆಳಗೆ ಒಬ್ಬ ಪುರಾಣಿಕ ಪುರಾಣ ಓದುತ್ತಿದ್ದ. ವಿಷ್ಣುಪದ ಎಂದರೆ ಆಕಾಶ. ಅಲ್ಲಿ ಹುಟ್ಟಿದ್ದರಿಂದಲೇ ಗಂಗೆಗೆ ವಿಷ್ಣುಪದಿ ಎಂದು ಹೆಸರಾಯಿತು ಎಂದು ಹೇಳುವುದನ್ನು ಬಿಟ್ಟು ಆ ಪುರಾಣಿಕ ವಿಷ್ಣುಪದ ಎಂದರೆ ವಿಷ್ಣುವಿನ ಪಾದ, ಆ ಪಾದದಿಂದ ಹುಟ್ಟಿದ ಕಾರಣ ಗಂಗೆ ವಿಷ್ಣುಪದಿಯಾದಳು ಎಂದು ಹೇಳಿದ. ಇದನ್ನು ಕೇಳಿದ ಕೂಡಲೇ ಜೊಮ್ಮಯ್ಯ ಕತ್ತಿಕಿತ್ತಿ ಆ ಪುರಾಣಿಕನ ತಲೆಯನ್ನು ಸವರಿ ಹೋಗಿಬಿಟ್ಟ.

ಅವನ ವಿಚಾರಣೆ ಓಲಗದಲ್ಲಿ ನಡೆಯಿತು. ಜೊಮ್ಮಯ್ಯ ಎಂದೂ ದೊರೆಗೆ ವಂದಿಸಿದವನಲ್ಲ. ಇದನ್ನರಿತ ರಾಣಿ ಲಕುಮಾದೇವಿ ಒಂದು ಉಪಾಯಮಾಡಿದಳು; ದೊರೆಯ ಸಿಂಹಾಸನದ ಹಿಂದೆ ಆತನಿಗೆ ತಿಳಿಯದಂತೆ ತನ್ನ ಇಷ್ಟಲಿಂಗವನ್ನು ನಮಸ್ಕಾರ ಮಾಡುವನು. ತನಗೆ ನಮಸ್ಕಾರ ಮಾಡಿದನೆಂದು ತಿಳಿದು ವಿಕ್ರಮಾದಿತ್ಯ ಸಂತೋಷಗೊಂಡು ಜೊಮ್ಮಯ್ಯನಿಗೆ ಶಿಕ್ಷೆವಿಧಿಸಲಾರನೆಂದು ಆಕೆಯ ಭಾವನೆಯಾಗಿತ್ತು. ಜೊಮ್ಮಯ್ಯ ಬಂದ. ಲಕುಮಾದೇವಿಯ ಕೈಯಲ್ಲಿಯ ಲಿಂಗದೇವನನ್ನು ನೋಡಿದ. “ಭವಿಯ ಹಿಂದೆ ಯಾಕೆ ನಿಲ್ಲುವಿ? ಮುಂದೆ ಬಾ ಎಂದು ಕೈಮಾಡಿ ಕರೆದ. ಸಭಿಕರೆಲ್ಲರೂ ಮೂಕ ವಿಸ್ಮಯರಾಗಿರಲು ಆ ಲಿಂಗ ಮೆಲ್ಲನೆ ಬಂದು ಜೊಮ್ಮಯ್ಯನ ಮುಂದೆ ನಿಂತಿತು. ಆತ ಅದಕ್ಕೆ ಪೊಡಮಟ್ಟು ಹಿಂದಿರುಗಿ ಕಳಿಸಿದ. ಇದನ್ನು ಕಂಡು ದೊರೆಯ ಕೋಪವುಡುಗಿ ಜೊಮ್ಮಯ್ಯನಲ್ಲಿ ಭಯ ಭಕ್ತಿಯುಂಟಾಯಿತು.

ಈ ಘಟನೆ ಸತ್ಯವೋ ಸುಳ್ಳೋ ಎಂಬುದರಲ್ಲಿ ಅರ್ಥವಿಲ್ಲ. ಮಹಾತ್ಮರನ್ನು ಕುರಿತು ಇಂಥ ಎಷ್ಟೋ ಘಟನೆಗಳು ಸೃಷ್ಟಿಯಾಗುತ್ತವೆ. ಜೊಮ್ಮಯ್ಯ ಸತ್ಯನಿಷ್ಠ. ಧರ್ಮನಿಷ್ಠ ವೀರ ಭಕ್ತ ಎಂದು ತಿಳಿದರೆ ಸಾಕು. ಈ ತಿಳುವಳಿಕೆಯಲ್ಲಿ ಅರ್ಥವಿದೆ.

ಕಾಯಕಗೈಯುತ್ತ, ಶಿವಭಕ್ತಿ ಹಬ್ಬಿಸುತ್ತ, ಶಿವಗೋಷ್ಠಿ ನಡೆಸುತ್ತ ಜೊಮ್ಮಯ್ಯ ಕನೆಯವರೆಗೆ ಶಿವಪುರದಲ್ಲಿಯೇ ಇದ್ದ.

ತೆಲುಗು ಜೊಮ್ಮಯ್ಯನ ವಚನಗಳು

ಭಾವ, ಭಾಷೆ, ಅರ್ಥ, ತತ್ವ ಎಲ್ಲ ದೃಷ್ಟಿಗಳಿಂದಲೂ ಜೊಮ್ಮಯ್ಯನ ವಚನಗಳು ಶ್ರೇಷ್ಠ ಮಟ್ಟದವಾಗಿವೆ. ಭಾಷೆ ಬಲು ಸುಲಭ; ಹೇಳುವ ಮಾತು ಖಚಿತ, ಸ್ಪಷ್ಟ; ಕೊಡುವ ಉದಾಹರಣೆ ಅರ್ಥಪೂರ್ಣ. ಆತನ ನಾಲ್ಕೇ ವಚನಗಳು ದೊರಕಿವೆ. ಈ ನಾಲ್ಕು ವಚನಗಳಿಂದಲೇ ಜೊಮ್ಮಯ್ಯ ವೈಚಾರಿಕಲೋಕಕ್ಕೆ, ತತ್ವಲೋಕಕ್ಕೆ ಹಿರಿಯ ಕೊಡುಗೆ ಕೊಟ್ಟಿದ್ದಾನೆ.

ಜೊಮ್ಮಯ್ಯನ ಕಾಲಕ್ಕಾಗಲೇ ಲಿಂಗವಂತ ಧರ್ಮ ಹೊಸರೂಪು ಧರಿಸತೊಡಗಿತ್ತು, ಶಿವಾನುಭವ ಗೋಷ್ಠಿಯಿಂದ, ಸತ್ಯಶೋಧನೆ ಹೊಸ ತತ್ವಗಳು ಆವಿಷ್ಕಾರಗೊಳ್ಳುತ್ತಿದ್ದವು ಎಂಬುದು ಆತನ ವಚನಗಳು, ಆ ಕಾಲದ ಇನ್ನಿತರ ವಚನಕಾರರ ವಚನಗಳು ಮತ್ತು ಸಾಹಿತ್ಯದಿಂದು ತಿಳಿದು ಬರುತ್ತದೆ. ಸಾರ್ವತ್ರಿಕವಾಗಿ ಲಿಂಗವನ್ನು ಯಾವಾಗಲೂ ಧರಿಸುವ ಪದ್ಧತಿ ರೂಢಿಯಲ್ಲಿ ಬಂದಿತ್ತು. ಹೊಸದಾಗಿ ಗುರುಕರಣೆ ಪಡೆದು ಲಿಂಗಾಂಗಿಗಳಾದವರು ಸದಾ ಲಿಂಗವನ್ನು ಧರಿಸುತ್ತಿರಲಿಲ್ಲವೆಂದು ಕಾಣುತ್ತದೆ. ಅದಕ್ಕಾಗಿ ಲಿಂಗವನ್ನು ಯವಾಗಲೂ ಧರಿಸಬೇಕು, ಲಿಂಗಧಾರಣವುಳ್ಳುದೇ ಸದಾಚಾರವೆಂದು ಜೊಮ್ಮಯ್ಯ ತನ್ನ ಈ ವಚನದಲ್ಲಿ ಹೇಳುತ್ತಾನೆ.

ಗುರುಕರುಣವ ಪಡೆದುದಕ್ಕೆ ಚಿಹ್ನವಾವುದೆಂದರೆ:
ಅಂಗದ ಮೇಲೆ ಲಿಂಗಸಹಿತವಾಗಿರಬೇಕು.
ಅಂಗದ ಮೇಳೆ ಲಿಂಗಸಹಿತವಿಲ್ಲದೆ
ಬರೀಗುರುಕರುಣವಾಯಿತ್ತೆಂದೆಡೆ ಅದೆಂತೋ?
ಲಿಂಗಹೀನವಾಗಿ ಗುರುಕಾರುಣ್ಯವುಂಟೆ? ಇಲ್ಲ.
ಮಾತ ಕೇಳಲಾಗದು. ಇದು ಕಾರಣ ಲಿಂಗಧಾರಣವುಳ್ಳುದೇ ಸದಾಚಾರ.
ಇಲ್ಲದೊಡೆ ಅನಾಚಾರವೆಂಬೆನಯ್ಯಾ ತೆಲುಗೇಶ್ವರಾ.

ನನ್ನ ಮಟ್ಟಿಗೆ ನಾನು ಭಕ್ತನೆಂದುಕೊಂಡರೆ ಹೇಗೇ? ನನ್ನ ಭಕ್ತಿ ಇನ್ನೊಬ್ಬರನ್ನು ಮುಟ್ಟಬೇಕು. ದೇವರು ಮೆಚ್ಚಿದಾಗಲೇ ನನ್ನ ಭಕ್ತಿಗೆ ಸಾರ್ಥಕತೆ ಬರುತ್ತದೆ. ದೇವರು ಒಲಿಯದೆ ನಾನು ಎಷ್ಟೇ ಡಂಗುರು ಸಾರಿ ಕೊಂಡರೂ ನನ್ನ ಭಕ್ತಿಗೆ ಬೆಲೆಯಿಲ್ಲ. ಈ ಮಾತನ್ನು ಸಮರ್ಥಿಸಲು ಜೊಮ್ಮಯ್ಯ ಕೊಡುವ ಉದಾಹರಣೆಗಳು ಎಷ್ಟು ಜೀವಂತವಾಗಿವೆ; ಎಷ್ಟು ಅರ್ಥಪೂರ್ಣವಾಗಿವೆ. ನೋಡಿರಿ.

ಕಾಮ ಸನ್ನಿಧನಾಗಿ ತಾ ಚೆಲುವನಾದಡೆ
ಕಾಮಿನೀ ಜನವೆಲ್ಲ ಮೆಚ್ಚಬೇಕು!
ದಾನಗುಣದಲ್ಲಿ ಕರೆದೀವನಾದಡೆ
ಯಾಚಕಜನವೆಲ್ಲ ಮೆಚ್ಚಬೇಕು!
ವೀರನಾದೊಡೆ ವೈರಿಗಳು ಮೆಚ್ಚಬೇಕು!
ಖೂಳನಾದೊಡೆ ತನ್ನ ತಾ ಮೆಚ್ಚಿಕೊಂಬ!
ಎನ್ನದೇವ ತೆಲುಗೇಶ್ವರನಲ್ಲಿ ತಾನು ಭಕ್ತನಾದೊಡೆ
ದೇವರು ಮೆಚ್ಚುವ, ಜಗವೂ ತಾ ಮೆಚ್ಚುವುದು.

‘ವೀರನಾದರೆ ವೈರಿ ಮೆಚ್ಚಬೇಕು’ ಎಂಬ ಈ ಮಾತು ಬಸವಣ್ಣನವರ ವಚನದಲ್ಲಿಯೂ ಬರುತ್ತದೆ. ತೆಲುಗು ಜೊಮ್ಮಯ್ಯನ ಭಕ್ತಿಯನ್ನು ಮೆಚ್ಚಿ ಆತನನ್ನು ಹೊಗಳಿ ಹಾಡಿದ ಅವರಿಗೆ ಆತನ ವಚನಗಳು ಅತ್ಯಂತ ಪ್ರಿಯವಾಗಿರಬೇಕು. ಭಕ್ತಿಯಲ್ಲಿ, ತತ್ವದಲ್ಲಿ ಅವು ಆತನಿಗೆ ಮಾರ್ಗದರ್ಶನ ಖಂಡಿತವಾಗಿ ಮಾಡಿರಬೇಕು. ಹೀಗಿರುವಾಗ ಈ ಮಾತನ್ನು ಬಸವಣ್ಣ ಇದ್ದಕ್ಕಿದ್ದಂತೆ ಬಳಸಿಕೊಂಡುದರಲ್ಲಿ ಏನೂ ಆಶ್ಚರ್ಯವಿಲ್ಲ. ಇದರಂತೆ ದೇವರ ದಾಸಮಯ್ಯನ ವಚನಗಳನ್ನೂ ಬಸವಣ್ಣ ಬಳಸಿಕೊಂಡಿದ್ದುಂಟು. ಒಂದು ತತ್ವ, ಒಂದು ಅಭಿಪ್ರಾಯ ಒಂದು ಮಾತಿನಲ್ಲಿ ಖಚಿತವಾಗಿ ಸುಂದರವಾಗಿ ನೆಲೆನಿಂತಿತೆಂದರೆ ಅನೇಕರು ಆ ಮಾತನ್ನು ತಮ್ಮದೆನ್ನುವಂತೆ ಬಳಸಿಕೊಂಡದ್ದು ಕಂಡುಬರುತ್ತದೆ. ಹಾಗೆ ಮಾಡುವುದು ತಪ್ಪೇನೂ ಅಲ್ಲ.

ಈ ವಚನದಲ್ಲಿ ಬರುವ ಇನ್ನೊಂದು ಮಾತು ಬಹಳ ಸೊಗಸಾಗಿದೆ. “ಖೂಳನಾದೊಡೆ ತನ್ನತಾ ಮೆಚ್ಚಿಕೊಂಬ” ಎಂಬುದೇ ಆ ಮಾತು. ತನ್ನಲ್ಲಿ ಆ ಗುಣ ಇರಲಿ ಬಿಡಲಿ, ತನ್ನನ್ನು ತಾನೇ ಮೆಚ್ಚಿ ತಾನೇ ಹೊಗಳಿಕೊಳ್ಳುವವ ಖೂಳನಲ್ಲದೆ ಮತ್ತೇನು? ಇಂಥ ಮೂರ್ಖತನವಿದ್ದಲ್ಲಿ ಭಕ್ತಿ ನೆಲಿಸುವುದಿಲ್ಲ.

ಸಾಕ್ಷಾತ್ಕಾರ, ಓದು, ಅರಿವು ಇವುಗಳನ್ನು ಕುರಿತು ಬಹು ಮಾರ್ಮಿಕವಾಗಿ ಹೇಳುತ್ತದೆ ಕೆಳಗಿನ ವಚನ:

ಅಖಂಡಿತವ ಕಂಡೆನೆಂಬೆ:

ಕಂಡರಖಂಡಿಯಾಗಿ ಬ್ರಹ್ಮಾಂಡವಾಗಿರಬೇಕು.
ಓದಿದೆ ಓದಿದೆನೆಂದಂಬೆ:
ನಿನ್ನೋದು ವಾದಕ್ಕೆ ಹೋಯಿತು.
ಅರಿದೆನರಿದೆನೆಂದೆಂಬೆ: ಅರಿದುದೆಲ್ಲವನರಿದೆ.
ಅರಿಯದುದಕ್ಕೆಂತೋ?
ನವನಾಳವನ್ನು ಕಟ್ಟಿ ವಿಕಳನಾಗಲು ಬೇಡ
ಬಳಸಿ ಬಟ್ಟೆಯ ಕಾಣದೆ ಮಾಯೆಯ ಬಾಗಿಲ ಹೊದ್ದಿಹೆ.
ಮಕ್ಕಳ ತೊಟ್ಟಿಲಮೇಲೆ ಕಟ್ಟಿದ ಕೆಂಪಿನ ಹಣ್ಣಿರ್ದು
ನಿಲುಕಲುಬಾರದು.
ನೆನಹು ನೆಲೆಗೊಳ್ಳದಾಗಿ ನಿಜಭಾವ ನಿಜರೂಪವೆಂತೋ?
ಗಜೆಬಜೆಯಿಲ್ಲದ ಮನಕ್ಕೆ ಸಹಜವ
ತೆಲುಗೇಶ್ವರ ತೋರಿಹ.

ಬರಿಯ ವಾಗದ್ವೈಯದಿಂದ ಲಾಭವಿಲ್ಲ. ಸಾಕ್ಷಾತ್ಕಾರವಾದರೆ ಶಿವಸ್ವರೂಪಿಯೇ ಆಗಿರಬೇಕು. ಎಲೆಗಳೆದ ಉಲುಹಿಲ್ಲದ ವೃಕ್ಷದಂತಿರಬೇಕು. ಅರಿತವನು ಅರಿತೆನೆಂದು ಹೇಳುವುದಿಲ್ಲ. ಈಗ ಅರಿತುದೆಲ್ಲ ಹಿಂದೆ ಲೋಕ ಅರಿತುದೇ! ವೇದ ಶಾಸ್ತ್ರ ಪುರಾಣಗಳ ಅರಿವು ಮಾಡಿಕೊಂಡರೆ ಇದೆಲ್ಲ ಅರಿತ ಅರಿವೇ. ಇದರಿಂದ ಪ್ರಯೋಜನವಿಲ್ಲ. ತನ್ನ ತಾನರಿವ ಅರಿವು ಅರಿಯಬೇಕು. ಅದು ಓದಿನಿಂದ ಬರುವುದಿಲ್ಲ. ಓದು ವಾದವನ್ನು ಕಲಿಸುತ್ತದೆ. ಮೂಗು ಮುಚ್ಚಿ ನವನಾಳ ಕಟ್ಟಿದರೂ ಪ್ರಾಣಾಯಾಮ ಮುಂತಾದ ಸಾಧನೆಗಳನ್ನು ಮಾಡಿದರೂ ಲಾಭವಿಲ್ಲ. ನಿಜವಾದ ದಾರಿಗಾಣದೆ, ಗುರು ಕಾರುಣ್ಯ ಪಡೆಯದೆ ಮಾಯೆಯನ್ನು ಹೊದ್ದಿರುವೆ. ಅರಿದೆನೆಂಬ ಭ್ರಾಂತಿನಿಂದ ಆದ ಸ್ಥಿತಿ ಎಂತಹುದು!? ತೊಟ್ಟಿಲಲ್ಲಿ ಮೇಲೆ ಹಣ್ಣು ಕಟ್ಟಿರುತ್ತಾರೆ; ಆದರೆ ಅಲ್ಲಿ ಮಲಗಿದ ಕೂಸಿಗೆ ಆ ಹಣ್ಣು ದೊರಕುವುದಿಲ್ಲ ನೀನಿನ್ನೂ ಈ ದಾರಿಯಲ್ಲಿ ಕೂಸು. ನಿಜವಾದ ಅರಿವು ಬೇಕು. ನೆನಹು ಗಟ್ಟಿಗೊಳ್ಳಬೆಕು. ಗಜೆಬಜೆ ದೂರಾಗಬೇಕು. ಆಗ ಅರಿವಿನ ಉದಯ; ತಾನಾರೆಂಬುದರ ಅರಿವು ಮೂಡುವುದು; ಅಖಂಡಿತನ ದರ್ಶನವಾಗುವುದು. ಅಲ್ಲದೆ ಅಖಂಡಿತನ ಕಂಡೆನೆಂಬಲ್ಲಿ ದ್ವೈತವಿದೆ. ಅಖಂಡಿತನ ಕಾಣಲಾಗುವುದಿಲ್ಲ. ಅವನೇ ತಾನಾಗಬೇಕಾಗುತ್ತದೆ. ಈ ಓದು, ಅರಿದುದರ ಅರಿವು, ನವನಾಳ ಕಟ್ಟುವುದು – ಎಲ್ಲವೂ ದ್ವೈತದ ಅರಿವನ್ನೇ ಕೊಡುವವು. ಕೂಸು ಮತ್ತು ಕೆಂಪಿನ ಹಣ್ಣಿನ ವರ್ಣನೆಯ ಉದಾಹರಣೆ ಅಜ್ಞಾನವನ್ನೂ ದ್ವೈತವನ್ನೂ ಹೇಳುತ್ತದೆ. ಗಜೆಬಜೆ ನಿಂತಾಗ ಸಹಜವ ತೋರುವ ಎಂದರೆ ತೆಲುಗೇಶ್ವರ ತಾನೇ ಆಗುವ.

ಶರಣರು ವೀರರು ಧೀರರು. ಅವರ ಭಕ್ತಿ ಶೂರ ಭಕ್ತಿ. ಭಕ್ತಿಯೆಂಬ ಕೂರಲಗಿನಿಂದ ಶರಣರು ಹೇಡಿತನವನ್ನು ಕೊಂದರು. ಹೆದರಿಕೆಯನ್ನು ಹೊಡೆದೋಡಿಸಿದರು. ಅವರು ಅನುಪಮರು. ಮಹಾ ಆಳ ವಿಸ್ತಾರವುಳ್ಳವರು. ಶರಣು ಅನಾದಿ; ಶರಣ ಅನಂತ; ಶರಣ ಶೂನ್ಯ, ನಿಶೂನ್ಯ. ಈ ಅರ್ಥವನ್ಮೊಳಗೊಂಡ ಸುಂದರ ವಚನವಿದು:

ಬ್ರಹ್ಮಾಂಡ ಕೋಟಿಗಳುರುಳಿ ಬೀಳುವಲ್ಲಿ
ಕಾಕೆಯ ಹಣ್ಣೆಂದು ಒಬ್ಬ ಮೆಲಿದನಾ ಶರಣನು
ಮುಗಿಲಮುಟ್ಟುವನುದ್ದವ ನೋಡಿ;
ಗಗನವ ನುಂಗುವನ ಬಾಯಗಲವ ನೋಡಾ;
ತಾಳಮರವ ಕೀಳುವಂಗೆ ಚೋಗಚೆಯ ಆಗಿವೆನೆಂಬನು.
ಇಂತಪ್ಪ ಶರಣರು ತೆಲುಗೇಶ್ವರಾ, ನಿಮ್ಮವರು.

ಕಾಕೆಹಣ್ಣು, ಮುಗಿಲು ಮುಟ್ಟು, ಗಗನ ನುಂಗು, ತಾಳಮರ, ಚೊಗಚೆ ಇವೆಲ್ಲವುಗಳಲ್ಲಿ ವಿಶಿಷ್ಟ ತತ್ವಾರ್ಥ ಹುದುಗಿದೆ. ಅಲ್ಲಮಪ್ರಭುವನ್ನು ನೆನೆದರೆ ಈ ತತ್ವದ ಸುಳುಹುದೋರಿದಂತಾಗುತ್ತದೆ. ಆತ ಈ ತತ್ವದ ಸಾಕಾರ ಮೂರ್ತಿಯಾಗಿದ್ದ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

[1] ಬಸವನಾಳ ಸಂಪಾದಿತ: ಬಸವಣ್ಣನವರ ಷಟ್‌ಸ್ಥಲದ ವಚನಗಳು, ವಚನ – ೫೧೯.

[2] ಫ. ಗು. ದಳಕಟ್ಟಿ: ಶಿವಶರಣರ ಚರಿತ್ರೆಗಳು, ಭಾಗ ೩, ಪುಟ ೧೦೫.