ಲಿಂಗಮ್ಮ ಹಡಪದ ಅಪ್ಪಣ್ಣನ ಹೆಂಡತಿ. ಹಡಪದ ಅಪ್ಪಣ್ಣ ಬಸವಣ್ಣನಿಗೆ ಆಪ್ತನಾದ ಶರಣ. ಹಡಪದ ಎಂದಿರುವುದರಿಂದ ಆತ ಕ್ಷೌರಿಕನಿದ್ದನೆಂಬುದು ಸ್ಪಷ್ಟವಾಗುತ್ತದೆ. ಆದರೆ ಅತನ ವಚನಗಳಲ್ಲಿ ಆತನ ಕಾಯಕದ ವಿಷಯ ಉಕ್ತವಾಗಿಲ್ಲ. ಸಾಮಾನ್ಯವಾಗಿ ಶರಣರ ಹೆಸರಿನ ಜೊತೆಗೆ ಅವರ ಕಾಯಕದ ಹೆಸರು ಅಂಟಇಕೊಂಡು ಬರುವುದು ರೂಢಿ. ಹಾಗೆ ಅಪ್ಪಣ್ಣನ ಹೆಸರಿನೊಂದಿಗೆ ಬಂದ ಹಡಪದ ಎಂಬುದು ಆತ ಕ್ಷೌರಿಕ ವೃತ್ತಿ ಮಾಡುತ್ತಿದ್ದನೆಂದು ಸೂಚಿಸುತ್ತದೆ. ಅಪ್ಪಣ್ಣನದಾಗಲೀ ಅಥವಾ ಲಿಂಗಮ್ಮನದಾಗಲೀ ವಿವರವಾದ ಚರಿತ್ರೆ ತಿಳಿದುಬಂದಿಲ್ಲ. “ಹಡಪದಪ್ಪಣ್ಣ ಬಸವೇಶ್ವರನ ಏಕನಿಷ್ಠ ಸೇವಕನಾಗಿದ್ದನು. ಆತನ ಹೆಂಡತಿ ಲಿಂಗಮ್ಮ. ಆತನ ಗುರುವು ಚೆನ್ನ ಮಲ್ಲೇಶ್ವರ. ಹರಳಯ್ಯ ಮಧುವರಸರ ವಧೆಯಾದ ಬಳಿಕ ಬಸವೇಶ್ವರನು ಕೂಡಲಸಂಗಮಕ್ಕೆ ಬಂದ ಬಳಿಕ ಅವನು ತನ್ನ ಹೆಂಡತಿ ನೀಲಾಂಬಿಕೆಯನ್ನು ಕರೆತರಲು ಕಲ್ಯಾಣಕ್ಕೆ ಅವನನ್ನು ಕಳಿಸಿದನು. ಅವನು ಅವಳನ್ನು ಕರೆದುಕೊಂಡು ಕೃಷ್ಣಾನದಿಯ ದಂಡೆಯ ಮೇಲಿರುವ ತಂಗಡಿಗಿ ಗ್ರಾಮಕ್ಕೆ ಬಂದನು. ಅಲ್ಲಿಗೆ ಬರುವಷ್ಟರಲ್ಲಿ ಬಸವೇಶ್ವರನು ಲಿಂಗದಲ್ಲಿ ಐಕ್ಯನಾಗಿದ್ದನು. ಈ ಸುದ್ದಿಯು ತಲ್ಪಿದ ಕೂಡಲೇ ನೀಲಾಂಬಿಕೆಯು ಮತ್ತು ಹಡಪದಪ್ಪಣ್ಣನು ತಮ್ಮ ತಮ್ಮ ಲಿಂಗದಲ್ಲಿ ಬಯಲಾದರು. ತಂಗಡಿಗಿ ಗ್ರಾಮದ ಬದಿಯಲ್ಲಿ ನದೀತೀರದಲ್ಲಿ ಈ ಉಭಯತರ ಸಮಾಧಿಗಳಿವೆ. ಅವುಗಳ ಮೇಲೆ ಚಿಕ್ಕ ದೇವಾಲಯಗಳನ್ನು ಭಕ್ತರು ಕಟ್ಟಿದ್ದಾರೆ. ಪೂರ್ವಕಡೆಯ ದೇವಾಲಯವು ನೀಲಾಂಬಿಕೆಯದೂ ಪಶ್ಚಿಮ ಕಡೆಯದು ಹಡಪದಪ್ಪಣ್ಣನದೂ ಇವೆ.”[1] ಇದಿಷ್ಟು. ಹಳಕಟ್ಟಿಯವರು ಅಪ್ಪಣ್ಣನನ್ನು ಕುರಿತು ಬರೆದ ಚರಿತ್ರೆ, ವೀರಶೈವಾಮೃತ ಮಹಾಪುರಾಣ, ಗುರುರಾಜ ಚಾರಿತ್ರ ಮತ್ತು ಶರಣಲೀಲಾಮೃತ ಹಳಕಟ್ಟಿಯವರು ಹೇಳಿದ ಚರಿತ್ರೆಗೆ ಆಧಾರಗ್ರಂಥಗಳು. ಅಪ್ಪಣ್ಣನನ್ನು ಕುರಿತು ಒಂದೆರಡು ಪವಾಡಗಳೂ ಈ ಕಾವ್ಯದಲ್ಲಿ ದೊರಕುತ್ತವೆ. ಆದರೆ ಅವುಗಳಿಂದ ಆತನ ಚರಿತ್ರೆರಚನೆಗೆ ಯಾವ ಸಹಾಯವೂ ಆಗುವುದಿಲ್ಲ.

ಹಡಪದಪ್ಪಣ್ಣ ಬಸವಣ್ಣನ ಜೊತೆಗೆ ಕೂಡಲಸಂಗಮಕ್ಕೆ ಹೋದಾಗ ಲಿಂಗಮ್ಮ ಎಲ್ಲಿದ್ದಳು? ಎಲ್ಲಿ ಐಕ್ಯಳಾದಳು? ಕಲ್ಯಾಣಕ್ರಾಂತಿಯ ಅನಂತರ ಬದುಕಿದ್ದಳೆ? ಎಂಬ ಪ್ರಶ್ನೆಗಳಿಗೆ ಸಮರ್ಪಕ ಉತ್ತರಗಳಿಲ್ಲ. ಅಲ್ಲದೆ ಆಕೆಯ ಜೀವನದ ಇನ್ನಿತರ ವಿವರಗಳೂ ತಿಳಿದಿಲ್ಲ. “ಹಡಪದಪ್ಪಣ್ಣನ ಹೆಂಡತಿಯು ಲಿಂಗಮ್ಮನು. ಆಕೆಯ ಗುರುವು ಚೆನ್ನಮಲ್ಲೇಶ್ವರನು. ಆದ್ದರಿಂದ ಸತಿಪತಿಗಳ ಗುರುವು ಒಬ್ಬನೇ ಇದ್ದಂತಾಯಿತು. ಈತನನ್ನು ಕುರಿತು ಲಿಂಗಮ್ಮನು ಅನೇಕ ಸಲ ತನ್ನ ವಚನಗಳಲ್ಲಿ ಉಲ್ಲೇಖಿಸಿದ್ದಾಳೆ. ಅವಳ ವಚನಗಳ ಮುದ್ರಿಕೆಯು “ಅಪ್ಪಣ್ಣಪ್ರಿಯ ಚೆನ್ನಬಸವೇಶ್ವರಾ” ಎಂದಿದೆ. ಅವಳು ತನ್ನ ಗಂಡನಾದ ಹಡಪದಪ್ಪಣ್ಣನು ತನಗೆ ಸಿಂಹಾಸನ ಅಂದರೆ ಆಧಾರನಾಗಿದ್ದಾನೆ. ಗುರುಪಾದ ಚೆನ್ನಮಲ್ಲೇಶನು ಮನಸ್ಥಲಕ್ಕೆ ಪ್ರಾಣವಾಗಿದ್ದಾನೆ. ಮತ್ತು ತಾನು “ಚೆನ್ನಬಸವನ ಕರುಣದ ಶಿಶು ಎಂದು ಹೇಳಿಕೊಂಡಿದ್ದಾಳೆ”[2] ಇದಿಷ್ಟೇ ಆಕೆಯ ಬಗ್ಗೆ ಉಪಲಬ್ಧವಿದ್ದ ಚರಿತ್ರೆ.

ಲಿಂಗಮ್ಮನ ವಚನಗಳಿಂದ ಆಕೆಯ ಲೌಕಿಕ ಮತ್ತು ಆಧ್ಯಾತ್ಮಿಕ ಚರಿತ್ರೆಯನ್ನು ಸ್ವಲ್ಪ ಮಟ್ಟಿಗೆ ಸಂಗ್ರಹಿಸಬಹುದು.

ಲಿಂಗಮ್ಮ ಹಡಪಪ್ಪಣ್ಣನ ಹೆಂಡತಿಯೆಂಬುದಕ್ಕೆ ಆಕೆಯ ವಚನಗಳೇ ಪುರಾವೆಯನ್ನೊದಗಿಸುತ್ತವೆ: “ಅಪ್ಪಣ್ಣ ಪ್ರಿಯ ಚೆನ್ನಬಸವಣ್ಣ” ಎಂಬ ಆಕೆಯ ಅಂಕಿತದಲ್ಲಿ ಆಕೆಯ ಗಂಡನ ಹೆಸರು ಸೇರಿದೆ. ಗಂಡಂದಿರ ಮತ್ತು ಪ್ರಿಯರಾದವರ ಹೆಸರುಗಳನ್ನು ಅಂಕಿತದಲ್ಲಿ ಸೇರಿಸಿಕೊಳ್ಳುವುದು ಅನೇಕ ಶರಣ ಶರಣೆಯರಲ್ಲಿ ಕಂಡುಬರುತ್ತದೆ. ಕೆಲವು ಕಡೆ ಗೌರವ ಸೂಚಿಸುವುದಕ್ಕೆ ಗುರುವಿನ ಹೆಸರನ್ನೂ ತನಗಿಂತ ಹಿರಿಯರ ಹೆಸರನ್ನೂ ಅಂಕಿತದಲ್ಲಿ ಸೇರಿಸಿಕೊಳ್ಳುವ ರೂಢಿ ವಚನಕಾರದಲ್ಲಿದೆ.

“ಮಾರಯ್ಯಪ್ರಿಯ ಅಮರೇಶ್ವರಲಿಂಗ” ಇದು ಆಯ್ದಕ್ಕಿ ಲಕ್ಕಮ್ಮನ ವಚನ. ಮಾರಯ್ಯ ಆಕೆಯ ಗಂಡ. “ಮಸಣಯ್ಯಪ್ರಿಯ ಗಜೇಶ್ವರಾ” ಗಜೇಶ ಮಸಣಯ್ಯಗಳ ಹೆಂಡತಿ ಅಂಕಿತ. “ಉರಿಲಿಂಗಪೆದ್ದಿಗಳರಸ”. ಇದು ಉರಿಲಿಂಗಪೆದ್ದಿಗಳ ಹೆಂಡತಿ ಕಾಳವ್ವೆಯ ಅಂಕಿತ. “ಅಮುಗೇಶ್ವರಾ” ಎಂಬುದು ಅಮುಗೆ ರಾಯಮ್ಮನ ಅಂಕಿತ. ರಾಯಮ್ಮ ಅಮುಗಿ ದೇವಯ್ಯಗಳ ಹೆಂಡತಿ. ಆಕೆ ತನ್ನ ಗಂಡನ ಹೆಸರನ್ನೇ ತನ್ನ ಅಂಕಿತ ಮಾಡಿಕೊಂಡಿದ್ದಾಳೆ. ಹೀಗೆಯೇ ಲಿಂಗಮ್ಮನ ವಚನಾಂಕಿತದಲ್ಲಿರುವ “ಅಪ್ಪಣ್ಣ” ಆಕೆಯ ಗಂಡನ ಹೆಸರೇ.

“ಬಸವಪ್ರಿಯ ಕೂಡಲ ಚೆನ್ನಸಂಗಮದೇವಾ” ಎಂಬುದು ಹಡಪದಣ್ಣನ ಅಂಕಿತ. ಅಪ್ಪಣ್ಣನಿಗೆ ಬಸವಣ್ಣನೆಂದರೆ ಅಪಾರ ಪ್ರೀತಿ, ಗೌರವ. ಆದುದರಿಂದ ಆತನ ಹೆಸರನ್ನು ತನ್ನ ಅಂಕಿತದಲ್ಲಿ ಸೇರಿಸಿಕೊಂಡಿದ್ದಾನೆ.[3] ಚೆನ್ನ ಬಸವಣ್ಣನೆಂದರೆ ಲಿಂಗಮ್ಮ – ಅಪ್ಪಣ್ಣ ಇಬ್ಬರಿಗೂ ಪ್ರೀತಿ. ಆದುದರಿಂದ ಲಿಂಗಮ್ಮ ಚೆನ್ನಬಸವಣ್ಣನ ಹೆಸರನ್ನೇ ಅಂಕಿತ ಮಾಡಿಕೊಂಡರೆ, ಅಪ್ಪಣ್ಣ ಚೆನ್ನಬಸವಣ್ಣನವರ ಅಂಕಿತವನ್ನೇ – ಕೂಡಲಚೆನ್ನ ಸಂಗಮದೇವಾ ತನ್ನ ಅಂಕಿತವನ್ನಾಗಿ ಮಾಡಿಕೊಂಡಿದ್ದಾನೆ. ಬಸವಪ್ರಿಯ ಎಂದು ಅಪ್ಪಣ್ಣನ ಅಂಕಿತದಲ್ಲಿರುವುದರಿಂದ ಅವರಿಬ್ಬರ ಅಪ್ಪಣ್ಣ – ಚೆನ್ನಬಸವಣ್ಣ – ಅಂಕಿತಗಳು ಬೇರೆ ಬೇರೆ ಎಂದು ಗುರುತಿಸಲು ಸಾಧ್ಯವಾಗಿದೆ – ಹೀಗೆ ಬಸವ ಮತ್ತು ಚೆನ್ನ ಬಸವ ಇವರಿಬ್ಬರು ಅವರಿಗೆ ಪ್ರಿಯರಾದವರು.

ಲಿಂಗಮ್ಮ ತನ್ನ ಒಂದು ವಚನದಲ್ಲಿ “ಹಡಪದಪ್ಪಣ್ಣನೆ ಎನ್ನ ಕರಸ್ಥಲಕ್ಕೆ ಲಿಂಗವಾಗಿ ಬಂದು ನೆಲೆಗೊಂಡನು”[4] ಎಂದು ಹೇಳಿಕೊಂಡಿದ್ದಾಳೆ. ಎಂದು ಹೇಳಿ ಲಿಂಗವೆಂದರೆ ‘ಪತಿ’ ಎಂದೇ ಶರಣ – ಶರಣೆಯರ ಹೇಳಿಕೆ; ನಂಬುಗೆ. ಶರಣ(ಶರಣೆ) ಸತಿ ಲಿಂಗಪತಿ ಎಂಬ ಮಾತು ಪ್ರಸಿದ್ಧವಾದುದು. ಈ ಲಿಂಗವಾಗಿ ಬಂದ ಎಂದರೆ ಆತ – ಅಪ್ಪಣ್ಣ – ಆಕೆಯ ಗಂಡನೇ, ಅಪ್ಪಣ್ಣ(ಗಂಡ) ಮತ್ತು ಕರಸ್ಥಲದ ಲಿಂಗ ಇವರಿಬ್ಬರಲ್ಲಿ ಅಭೇದ ಲಿಂಗಮ್ಮನಿಗೆ. ಈ ವಿವೇಚನೆಯಿಂದ ಹಡಪದಪ್ಪಣ್ಣ ಲಿಂಗಮ್ಮನ ಗಂಡನೆಂಬುದು ಖಚಿತವಾಗುತ್ತದೆ.

ಚೆನ್ನಮಲ್ಲೇಸ್ವರ ಲಿಮಗಮ್ಮನ ಗುರು. ಅಪ್ಪಣ್ಣನಿಗೂ ಈತನೇ ಗುರುವೆಂದು ತಿಳಿದುಬರುತ್ತದೆ. ಲಿಂಗಮ್ಮ ತನ್ನ ವಚನಗಳಲ್ಲಿ ಹದಿನೈದು ಸಲ ತನ್ನ ಗುರುವನ್ನು ಸ್ಮರಿಸುತ್ತಾಳೆ. “ಬಚ್ಚರಿಯ ಬೆಳಗಿನೊಳಗೋಲಾಡಿ ನಿಮ್ಮ ಪಾದದೊಳಗೆ ನಿಜ ಮುಕ್ತಳಾದೆನಯ್ಯಾ ಚೆನ್ನಮಲ್ಲೇಶ್ವರಾ, ಅಪ್ಪಣ್ಣಪ್ರಿಯಚೆನ್ನಬಸವಣ್ಣಾ”[5] ಎಂಬ ಮಾತು ಚೆನ್ನಮಲ್ಲೇಶ್ವರ ಆಕೆಯ ಗುರುವೆಂಬುದು ಸ್ಪಷ್ಟಪಡಿಸುತ್ತದೆ. “ತಾನು ತಾನಾಗಿಪ್ಪ ಮಹಾ ಬೆಳಗಿನಲ್ಲಿ ಓಲಾಡಿ ಸುಖಿಯಾದೆನಯ್ಯಾ, ಚೆನ್ನ ಮಲ್ಲೇಶ್ವರನ ಶಿಶುವಾದ ಕಾರಣದಿಂದ…”[6] ಎಂಬ ಮಾತಂತೂ ಆತ ಆಕೆಯ ಗುರುವೆಂಬುದನ್ನು ನಿಶ್ಚಿತಗೊಳಿಸುತ್ತದೆ.

ಕೆಳಗಿನ ಆಕೆಯ ವಚನ ಆಕೆಯ ಕಾಲನಿರ್ಣಯಕ್ಕೆ ಅನುಕೂಲವಾಗಿದೆ.

ಬಸವೇಶ್ವರ, ಚನ್ನಬಸವೇಶ್ವರ, ಮಡಿವಾಳಯ್ಯ, ಅಲ್ಲಮಪ್ರಭು,
ಚೆನ್ನಮಲ್ಲೇಶ್ವರ, ಹಡಪದಪ್ಪಣ್ಣ
ತಮ್ಮೆಲ್ಲರ ತೊತ್ತಿನ ತೊತ್ತಿನ ಪಡಿದೊತ್ತಿನ ಮಗಳೆಂದು
ಹೊತ್ತುಹೊತ್ತಿಗೆ ಎಚ್ಚಱವ ಪಾಲಿಸಿ ರಕ್ಷಣೆಯ ಮಾಡಿದ ಕಾರಣದಿಂದ,
ತಮ್ಮೆಲ್ಲರ ಶ್ರೀಪಾದದಲ್ಲಿಯೆ ನಿಜಮುಕ್ತಳಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ[7]

ಬಸವ, ಚೆನ್ನಬಸವ, ಮಡಿವಾಳಯ್ಯ, ಅಲ್ಲಮಪ್ರಭು ಇವರ ಸಮಕಾಲೀನಳು ಲಿಂಗಮ್ಮ; ಅವರಿಂದ ಅನುಗ್ರಹ ಪಡೆದು ಅನುಭಾವ ಗಳಿಸಿದ್ದನ್ನು, ಹೊತ್ತುಹೊತ್ತಿಗೆ ಸಾಧನೆಯಲ್ಲಿ ಅವರಿಂದಾದ ಜ್ಞಾನದ ನೆರವನ್ನು ಆಕೆ ಮೇಲಿನ ವಚನದಲ್ಲಿ ಹೇಳಿಕೊಂಡಿದ್ದಾಳೆ. ಈ ವಚನದಿಂದ ಚೆನ್ನಮ್ಮಲ್ಲೇಶ್ವನೂ ಒಬ್ಬ ಶರಣ. ಬಸವ, ಚೆನ್ನಬಸವರಷ್ಟೇ ಎತ್ತರದ ಮಟ್ಟ; ಆತನದು ಇತ್ತು ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಬಸವ ಚೆನ್ನಬಸವರ ಹೆಸರಿನೊಂದಿಗೆ ಹಡಪದಪ್ಪಣ್ಣನ ಹೆಸರೂ ಬರುವುದರಿಂದ ಲಿಂಗಮ್ಮನಿಗೆ ಗಂಡನಿಂದ ಆಧ್ಯಾತ್ಮಸಾಧನೆಯಲ್ಲಿ, ಅನುಭಾವದ ಗಳಿಕೆಯಲ್ಲಿ ನೆರವು ದೊರಕಿದೆಯೆಂದು ಗೊತ್ತಾಗುವುದು. ಅಲ್ಲದೆ ಒಂದಾದ ಆ ಸತಿಪತಿಗಳ ಭಕ್ತಿ ಶಿವನಿಗೆ ಹಿತವಾಗಿತ್ತು. ಮೂರುಕಡೆ ಲಿಂಗಮ್ಮ ತನ್ನ ಪತಿಯನ್ನು ವಚನಗಳಲ್ಲಿ ನೆನೆದಿದ್ದಾಳೆ; ಪುಷ್ಟವನ್ನಪ್ಪಿದ ಪರಿಮಳದಂತಿದ್ದ ಆತನ ಹೆಸರನ್ನು ಅಂಕಿತದಲ್ಲಿ ಮೇಳವಿಸಿ ಕೊಂಡಿದ್ದಾಳೆ.

ಶರಣರಲ್ಲಿ ಒಂದು ವಿನೂತನ ವೈಶಿಷ್ಟ್ಯವೆಂದರೆ ಸತಿಪತಿಗಳಿಬ್ಬರೂ ಅನುಭಾವಿಗಳಾಗಿರುವುದು; ಇಬ್ಬರೂ ಒಂದೇ ಧ್ಯೇಯಕ್ಕಾಗಿ ಹೋರಾಡುವುದು; ಇಬ್ಬರೂ ವಚನಕಾರರಾಗಿರುವುದು. ಸತಪತಿಗಳಿಬ್ಬರು ಆಧ್ಯಾತ್ಮ ಸಾಧನೆಯಲ್ಲಿದ್ದವರು ಲೋಕದ ಇತಿಹಾಸದಲ್ಲಿ ಅಲ್ಲೊಂದು ಇಲ್ಲೊಂದು ಉದಾಹರಣೆ ದೊರಕಬಹುದು. ಆದರೆ ನೂರುನೂರು ಸಂಖ್ಯೆಯಲ್ಲಿ ಹೊಸ ಮೌಲ್ಯಗಳನ್ನು ಜನಜೀವನಕ್ಕಿಳಿಸುವ ಒಂದು ಮಹಾಮಣಿಹದಲ್ಲಿ ಗಂಡ – ಹೆಂಡಿರು ಒಂದಾಗಿ ದುಡಿದ ಉದಾಹರಣೆ ಕಲ್ಯಾಣ ಶರಣರದು ಒಂದೇ. ಇದೇನೂ ಅಭಿಮಾನದ ಮಾತಲ್ಲ. ಶರಣರ ಜೀವನಗಳೇ ಸಾಕ್ಷಿಯಾಗಿವೆ. ಅವರ ಮಹಾ ಅಂದೋಲನದಲ್ಲಿ ಶರಣೆಯರ ಪಾತ್ರ ಹಿರಿದು; ಎಲ್ಲಿಯೂ ಕಾಣದ ವೈಚಾರಿಕ, ಧಾರ್ಮಿಕ ಸಾಮಾಜಿಕ ಸ್ವಾತಂತ್ರ್ಯ ಈ ಶರಣೆಯರಲ್ಲಿ ಕಂಡುಬರುತ್ತದೆ.

ಲಿಂಗಮ್ಮನ ವಚನಗಳಲ್ಲಿ ಆಕೆಯ ಲೌಕಿಕ ಜೀವನದಲ್ಲಿ ಅಸ್ಪಷ್ಟ ಚಿತ್ರವನ್ನು ಕಾಣಬಹುದು –

ಕನಿಷ್ಠದಲ್ಲಿ ಹುಟ್ಟಿದೆ, ಉತ್ತಮದಲ್ಲಿ ಬೆಳೆದೆ, ಸತ್ಯಶರಣರ ಪಾದವಿಡಿದೆ
ಶರಣರ ಪಾದವಿಡಿದು ಗುರುವ ಕಂಡೆ, ಲಿಂಗವ ಕಮಡೆ….”[8]
ಕತ್ತಲೆಯಲ್ಲಿ ಮುಳುಗಿ ಕರ್ಮಕ್ಕೆ ಗುರಿಯಾಗುತ್ತಿದ್ದಡೆ
ಹೆತ್ತತಾಯಿ ಎಂಬ ಗುರುಸ್ವಾಮಿ ಎನ್ನ ಕೊರಳಿಗೆ
ಗಂಡನೆಂಬ ಲಿಂಗವ ಕಟ್ಟಿದನು…..”[9]

ಅಯ್ಯಾ ನರರೊಳು ಹುಟ್ಟಿ ಮಱಹಿನೊಳಗೆ ಬಿದ್ದವಳ ತಂದು
ಮಹಾಶರಣರು ಎನಗೆ ಕುಱುಹ ತೋರಿದರು
ಗುರುವೆಂಬುದನಱುಹಿದರು, ಜಂಗಮನೆ ಜಗದ ಕರ್ತೃವೆಂದಱುಹಿದರು…”[10]

ಲಿಂಗಮ್ಮ ಕನಿಷ್ಠ(ಕೀಳು) ಕುಲದಲ್ಲಿ ಹುಟ್ಟಿದಾಕೆ. ಹಡಪದವರೆಂದರೆ ಆಗ ಕೀಳೆಂದೇ ತಿಳಿಯಲಾಗುತ್ತಿತ್ತು. ಈ ಕಾಲಕ್ಕೂ ಆ ಭಾವನೆ ಹೋಗಿಲ್ಲ. ಕೀಳುಕುಲದಲ್ಲಿ ಹುಟ್ಟಿದರೂ ಆಕೆ ಉತ್ತಮಳಾಗಿ ಬೆಳೆದಳು. ‘ಉತ್ತಮಿಕೆ’, ಎಂಬುದು ಕುಲಕ್ಕಾಗಲೀ ಹುಟ್ಟಿಗಾಗಲಿ ಸಂಬಂಧಿಸಿದ್ದಲ್ಲ; ನಡತೆಗೆ ಸಂಬಂಧಿಸಿದ್ದು. ನಡತೆಗೆ ಮಾನ್ಯತೆ ಹೋಗಿ ಅದು ಕುಲಕ್ಕೆ, ಹುಟ್ಟಿಗೆ ಬಂದು ಸತ್ಯಕ್ಕೆ, ಉತ್ತಮಿಕೆಗೆ ಎಂದಿನಿಂದಲೂ ಅಪಚಾರವಾಗಿದೆ. ಇದರ ವಿರುದ್ಧವೇ ಶರಣರು ಯುದ್ಧ ಸಾರಿದ್ದು. ಅಂತೆಯೇ ಹಡಪದ ದಂಪತಿಗಳಂಥವರು, ಮಾದರ ಚೆನ್ನಯ್ಯ, ಡೋಹರ ಕಕ್ಕಯ್ಯನಂಥವರು ಶರಣಶ್ರೇಷ್ಠರಾಗಿ ಬೆಳಗಿದರು.

ಕಷ್ಟಸಂಸಾರಿ ಎನಿಸಿ ಲಿಂಗಮ್ಮ ಬಾಳುತ್ತಿರುವಾಗ ಶರಣರ ಸಂಗವೊದಗಿ ಅವರ ಅನುಗ್ರಹವಾಗಿ ಕುಱುಹು (ಇಷ್ಟಲಿಂಗ) ದೊರಕಿತು. ಒಬ್ಬ ಒಳ್ಳೆಯ ಗುರುವೂ ದೊರಕಿದ. ಅನುಭಾವ ಮೈಗೂಡಿಸಿಕೊಂಡು ಶರಣೆಯಾದಳು. ಕರ್ಮಹಿಂಗಿತು, ಮನ ಬತ್ತಲೆಯಾಯಿತು; ಸಾಮರಸ್ಯ ಸಾಧ್ಯವಾಯಿತು.

“ಮಹಾಶರಣರು ಕುರುಹು ತೋರೆದರು” – ಈ ಒಂದು ಮಾತು ಆ ಕಾಲದ ಶರಣರ ಆಂದೋಲನದ ಕೇಂದ್ರ ತತ್ವವನ್ನು ಅರುಹುತ್ತದೆ: ಸಾಮರಸ್ಯಕ್ಕೆ ಸಾಧನೆಯಲ್ಲದೆ ಸರ್ವಸಮಾನತೆಯ ಕುಱುಹಾದ ಇಷ್ಟಲಿಂಗವನ್ನು ಜನರಿಗೆ ಕೊಟ್ಟು ಶರಣರು ಜಾತಿಪಂಥ ವರ್ಗಗಳನ್ನು ಅಳಿಸಿ ಸಮಾನತೆಯ ಸುಭದ್ರ ಸಮಾಜ ರಚಿಸಿ, ಅನುಭಾವದ ಬೆಳಕನ್ನು ಹರಿಸಿ ಮಾನವತೆಯನ್ನು ಮೆರೆದ ಇತಿಹಾಸವೂ ಲಿಂಗಮ್ಮನ ಆ ಮಾತಿನಲ್ಲಿ ಆಡಗಿದೆ. ಕೀಳನ್ನು ಉನ್ನತೀಕರಿಸುವ ಸಾಧನ ಇಷ್ಟಲಿಂಗವಾಗಿದ್ದಿತು. ಆಂಥ ಇಷ್ಟಲಿಂಗವನ್ನು ಪಡೆದು ಲಿಂಗಮ್ಮ ಲೌಕಿಕ ಮತ್ತು ಪಾರಮಾರ್ಥ ಎರಡನ್ನೂ ಸಮರ್ಥವಾಗಿ ಬದುಕಿದಳು.

ಹಾಗೆ ನೋಡಿದರೆ ಆಕೆಯ ಎಲ್ಲ ವಚನಗಳು ಆಕೆಯ ಆಧ್ಯಾತ್ಮ ಜೀವನದ ಸಾಧನೆ ಸಿದ್ಧಿಗಳನ್ನು ಹೇಳುತ್ತವೆ. ಕೆಳಗಿನ ಎರಡು ವಚನಗಳಲ್ಲಿ ಆಕೆಯ ಲೌಕಿಕ ಮತ್ತು ಪಾರಮಾರ್ಥಿಕ ಜೀವನವಲ್ಲದೆ ಆಕೆಯ ಐಕ್ಯವನ್ನು ಗುರುತಿಸಬಹುದು.

ನರರ ಬೇಡೆನು, ಸುರರ ಹಾಡೆನು, ಕರಣಂಗಳ ಹರಿಯಬಿಡೆನು,
ಕಾಮನ ಬಲೆಗೆ ಸಿಲ್ಕೆನು, ಮರವೆಗೊಳಗಾಗೆನು,
ಪ್ರಣವ ಪಂಚಾಕ್ಷರಿಯ ಜಪಿಸಿಹೆನೆಂದು
ತನುವ ಮಱೆದು ನಿಜಮುಕ್ತಳಾದೆನಯ್ಯಾ
ಅಪ್ಪಣ್ಣಪ್ರಿಯ ಚನ್ನಬಸವಣ್ಣ[11]

ಸಾಕಯ್ಯಾ, ಲೋಕದ ಹಂಗು ಹರಿಯಿತ್ತು;
ತನುವಿನಾಸೆ ಬಿಟ್ಟಿತ್ತು; ಮನದ ಸಂಚಲ ನಿಂದಿತ್ತು.
ನುಡಿಗಡಣ ಹಿಂಗಿತ್ತು; ಘನವ ಬೆರೆಯಿತ್ತು, ಬೆಳಗಕೂಡಿತ್ತು.
ಬಯಲಿನೊಳಗೋಲಾಡಿ ಸುಖಿಯಾದೆನಯ್ಯಾ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ[12]

ಲಿಂಗಮ್ಮನ ೧೧೩ ವಚನಗಳು ಉಪಲಬ್ಧವಿವೆ. ಎಲ್ಲ ವಚನಗಳಲ್ಲಿ ಅನುಭಾವವೇ ತುಂಬಿದ್ದರೂ ಇಹದ ಬಾಳಿಗೂ ಸಂಬಂಧಿಸಿದ ವಿಚಾರಗಳು ಆ ವಚನಗಳಲ್ಲಿ ಇಲ್ಲದಿಲ್ಲ. ಶರಣರಿಗೆ ಆಧ್ಯಾತ್ಮದಷ್ಟೇ ಈ ಸಂಸಾರ ಮುಖ್ಯವಾಗಿತ್ತು. ಈ ಸಂಸಾರವನ್ನು ಬಿಟ್ಟು ಆಧ್ಯಾತ್ಮವಾಗಲೀ ಅನುಭಾವವಾಗಲೀ ಸಾಧ್ಯವಿಲ್ಲವಲ್ಲ. ಅದಕ್ಕಾಗಿ ಶರಣರು ಈ ಸಂಸಾರವನ್ನು ಸುಂದರಗೊಳಿಸಲು ಹೆಣಗಿದರು. ಈ ಸಂಸಾರದಲ್ಲಿ ಎಲ್ಲಕ್ಕೂ ಸಾಧನವಾದುದು ‘ದೇಹ’, ಇದರ ಶುದ್ಧಿಯಿಂದಲೇ ಸರ್ವವೂ ಸಾಧ್ಯ. ದುರುಳ ವೇದಾಂತಿಗಳಂತೆ ಶರಣರು ಈ ದೇಹವನ್ನು ಆಲಕ್ಷಿಸಲಿಲ್ಲ.

“… ಕರಸ್ಥಲದ ಲಿಂಗವನರ್ಚಿಸಿ ಪೂಜಿಸಿ
ವರವ ಬೇಡಿದಡೆ, ತನುವ ತೋರಿದನು;
ತನುವಿಡಿದು ಮಹಾಘನವ ಕಂಡೆ,
ಘನವಿಡಿದು ಮನವ ನಿಲಿಸಿದೆ…..”[13]

ಮೇಲಿನ ವಚನದಿಂದ ತನುವಿನ ಮಹತ್ವ ಮನದಟ್ಟಾಗುತ್ತದೆ. ದೇಹವನ್ನು ಉದಾಸೀನದಿಂದಲೂ ಕಾಣಲಾಗದು; ಅದನ್ನು ಕೆಟ್ಟ ರೀತಿಯಿಂದಲೂ ಬಳಸಬಾರದು. “ಕೂಡಲಸಂಗಮ ದೇವರ ಒಲಿಸಬಂದ ಪ್ರಸಾದ ಕಾಯಕ ಕೆಡಿಸಲಾಗದು” ಎಂದು ಬಸವಣ್ಣ ಹೇಳಿದರೆ. “ಈ ಕಾಯದಿಂದ ನಿಮ್ಮುವ ಕಂಡೆನು” ಎಂದು ಚೆನ್ನಬಸವಣ್ಣ ಹೇಳುತ್ತಾನೆ. ಲಿಂಗಮ್ಮನೂ ಈ ಕಾಯದ ಮಹತ್ವವನ್ನು ಅರಿತವಳು. ಅಂತೆಯೇ ಆಕೆ “ತನುವಿಡಿದು ಮಹಾಘನವ ಕಂಡೆ” ಎನ್ನುತ್ತಾಳೆ. ಅಲ್ಲದೆ ಆಕೆಯ ಲಿಂಗದೇವನು ವರವ ಬೇಡಿದರೆ ತನುವನ್ನು ತೋರಿಸಿದನಂತೆ. ಎಷ್ಟು ಅರ್ಥವತ್ತಾದ ಮಾತಿದು! ಈ ತನುವಿನಿಂದ ಘನವ ಕಂಡ ಆಕೆ “ತಾನು ತಾನಾಗಿಪ್ಪ ಮಹಾಬೆಳಗಿನಲ್ಲಿ ಓಲಾಡಿ ಸುಖಿಯಾದಳಂತೆ.”

ಹೊಸ ಸಮಾಜದ ರಚನೆಯ ಕಾಲಕ್ಕೆ ಹಳೆಯ ಸಮಾಜದಲ್ಲಿದ್ದ ದೋಷಗಳನ್ನು ಎತ್ತಿ ತೋರಿಸಬೇಕಾಗುತ್ತದೆ. ವಚನಕಾರರೆಲ್ಲರೂ ಈ ಕೆಲಸವನ್ನು ನಿರ್ದಾಕ್ಷಿಣ್ಯವಾಗಿ ಮಾಡಿದ್ದಾರೆ. ಸಮಕಾಲೀನ ಪ್ರಜ್ಞೆ ಮತ್ತು ಸಾಮಾಜಿಕ ಪ್ರಜ್ಞೆ ಮೊದಲಾದ ಇಂದು ಕೇಳಿಬರುತ್ತಿರುವ ಮಾತುಗಳು ಅಂದು ಬಳಕೆಯಲ್ಲಿ ಇರದಿದ್ದರೂ ಈ ಪ್ರಜ್ಞೆ ವಚನಕಾರರಲ್ಲಿ ಬಲವಾಗಿತ್ತು. ಅವರು ಕಠೋರ ವಿಮರ್ಶಕರು. ಅನೇಕ ಸಲ ತಮ್ಮಿಂದ ರಚನೆಯಾದ ಹೊಸ ಸಮಾಜದಲ್ಲಿ ಕಂಡು ಬಂದ ದೋಷಗಳನ್ನೂ ಅವರು ಮರೆಮಾಚದೆ ಬಯಲಿಗೆಳೆದಿದ್ದಾರೆ. ಶೋಷಣೆ – ಅದು ಯಾವ ರೂಪದಲ್ಲಿಯೇ ಇರಲಿ – ಅದರ ವಿರುದ್ಧ ಬಂಡೆದ್ದರು. ಲಿಂಗಮ್ಮನ ವಚನಗಳಲ್ಲಿಯೂ ಈ ಅಂಶಗಳನ್ನು ಸ್ಪಷ್ಟವಾಗಿ ಕಾಣಬಹುದು.

ವಾಗಾದ್ವೈತಿಗಳನ್ನು, ಆಷಾಢಭೂತಿಗಳನ್ನು ಕಂಡು ಲಿಂಗಮ್ಮ ಮೂದಲಿಸುತ್ತಾಳೆ; ಅವರಿಗೆ ಬುದ್ಧಿಯನ್ನೂ ಹೇಳುತ್ತಾಳೆ.

ತನ್ನ ತಾನರಿಯದೆ ಅನ್ಯರಿಗೆ ಬೋಧೆಯ ಹೇಳುವ
ಅಣ್ಣಗಳಿರಾ ನೀವು ಕೇಳಿರೋ.
ಅವರ ಬಾಳುವೆ ಎಂತೆಂದಡೆ:
ಕುರುಡ ಕನ್ನಡಿಯ ಹಿಡಿದಂತೆ,
ತನ್ನ ಒಳಗು ಮರೆದು ಇದಿರಿಂಗೆ ಬೋಧೆಯ ಹೇಳಿ
ಉದರವ ಹೊರೆವ ಚದುರರೆಲ್ಲರೂ ಹಿರಿಯರೆ? ಅಲ್ಲಲ್ಲ…”[14]

ಜ್ಞಾನಿಗಳಂತೆ ವರ್ತಿಸುವ ಅಜ್ಞಾನಿಗಳು ಒಳಗು ಮರೆದು ಹೊಟ್ಟೆ ಹೊರೆವ ಚದುರರು. ಈ ಚದುರರು ತಾವು ಅರಿತವರೆಂಬಂತೆ ತೋರಿಸಿಕೊಂಡು ಸಾಮಾನ್ಯರಿಗೆ ಬೋಧೆಯ ಮಾಡಿ, ಅವರನ್ನು ಶೋಷಣೆಗೀಡುಮಾಡಿ ತಾವು ಸುಖವಾಗಿ ಬದುಕುವ ಧೂರ್ತರು. ಇಂಥವರ ಸಂಖ್ಯೆ ಈಗಲೂ ಇದೆ. ಗುರುಬೋಧೆ ಕೊಡುವೆವೆಂದು ಹಳ್ಳಿಗಳಲ್ಲಿ ಅಜ್ಞ ಜನರನ್ನು ಮೋಸಮಾಡುವ ಕಳ್ಳ ಗುರುಗಳು ಸಾಕಷ್ಟಿದ್ದಾರೆ. ಇಂಥವರು ಶರಣರ ವಾಗ್ಜಾಲವ ಕಲಿತುಕೊಂಡು ನುಡಿಯುತ್ತಾರೆ; ಸ್ವಂತಕ್ಕೆ ಜ್ಞಾನವಿಲ್ಲ. ಇವರನ್ನು ಲಿಂಗಮ್ಮ ಕನ್ನಡಿ ಹಿಡಿದ ಕುರುಡರೆನ್ನುತ್ತಾಳೆ. ಅರ್ಥವುಳ್ಳ ಮಾತು. ಕಣ್ಣೇ ಇಲ್ಲ; ತನ್ನ ಮೊಗ ಕಾಣುವುದು ಹೇಗೆ? ತಮ್ಮ ನಿಜದ ಅರಿವೇ ತಮಗಿಲ್ಲ; ಇವರು ಅನ್ಯರಿಗೆ ಏನು ಬೋಧೆಯ ಮಾಡುವರು? ಸಮಾಜಕ್ಕೆ ಇವರು ಕಂಟಕರು.

ಸತ್ಯವನರಿಯದ ಮಾತು ಕಲಿತುಕೊಂಡು ಸಾವಿಗೊಳಗಾದ ಮರ್ತ್ಯರ ವಿಡಂಬನ ಕೆಳಗಿನ ವಚನದಲ್ಲಿದೆ:

ಮರ್ತ್ಯದ ಮನುಜರು ಸತ್ತರೆಲ್ಲ!
ಕತ್ತಲೆಯೊಳು ಮುಳುಗಿ, ಮಾತು ಕಲಿತುಕೊಂಡು,
ತೂತುಬಾಯೊಳಗೆ ನುಡಿದು, ಕಾತರಿಸಿ ಕಂಗೆಟ್ಟು,
ಹೇಸಿಕೆಯ ಮಲದ ಕೊಣದ ಉಚ್ಚೆಯ ಬಾವಿಗೆ ಮಚ್ಚಿ,
ಕಚ್ಚಿಯಾಡಿ ಹುಚ್ಚುಗೊಂಡು ತಿರುಗುವ ಕತ್ತೆಮನುಜರ
ಮೆಚ್ಚರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.”[15]

ಜ್ಞಾನವನ್ನು ಗಳಿಸದೆ ಮಾತು ಕಲಿತುಕೊಂಡು ಜೀವಿಸುವವರು ಇವರು. ಇವರಿಗೆ ಶುದ್ಧ ನಡೆಯಿಲ್ಲ. ಹೇಸಿಗೆ ಬದುಕು ಇವರದು. ಉಚ್ಚೆಯ ಬಾಯಿಗೆ ಮೆಚ್ಚಿ ಕಚ್ಚಿಯಾಡುವ ಇವರ ಬಾಯಿ ತೂತುಬಾಯಿ. ಅರ್ಥವುಳ್ಳ ಮಾತಾಡಲು, ಹೃದಯದ ಶುದ್ಧ ಅನಿಸಿಕೆ ಹೊರಹೊಮ್ಮಿಸಲು ಇರುವುದೇ ಬಾಯಿ. ಆದರೆ ಕತ್ತಲೆಯಲ್ಲಿ ಮುಳುಗಿದವರ, ಎಂದರೆ ಅಜ್ಞಾನಿಗಳ ಬಾಯಿ ಅದೊಂದು ತೂತು, ಅಷ್ಟೇ; ಕಲಿತುಕೊಂಡು ಎಂದರೆ ಅನುಭವಕ್ಕೆ ತಂದುಕೊಳ್ಳದೆ, ಅರ್ಥವರಿಯದೆ ಆಡುವ ಮಾತುಗಳು ಆ ತೂತುಬಾಯಿಂದ ಹೊರಬಂದಾಗ ವ್ಯರ್ಥವೆನಿಸುವವು.

ತಾವು ಅರಿಷಡ್ವರ್ಗವಿಲ್ಲದವರು, ಸಚ್ಚರಿತರು ಎಂದು ಹೇಳಿಕೊಳ್ಳುವ ಡಾಂಭಿಕರನ್ನು ಕುರಿತು ಲಿಂಗಮ್ಮನ ವಚನವಿದು:

ಕಾಮವಿಲ್ಲ, ಕ್ರೋಧವಿಲ್ಲ, ಲೋಭವಿಲ್ಲ
ಮೋಹವಿಲ್ಲ, ಮದವಿಲ್ಲ, ಮತ್ಸರವಿಲ್ಲ
ಎಂಬ ಅಣ್ಣಗಳಿರಾ, ನೀವು ಕೇಳಿರೊ, ಹೇಳಿಹೆನು.
ಕಾಮವಿಲ್ಲದವಂಗೆ ಕಳವಳವುಂಟೆ?
ಕ್ರೋಧವಿಲ್ಲದವಂಗೆ ರೋಷವುಂಟೆ?
ಲೋಭವಿಲ್ಲದವಂಗೆ ಆಸೆಯುಂಟೆ?
ಮೋಹವಿಲ್ಲದವಂಗೆ ಪಾಶವುಂಟೆ?
ಮದವಿಲ್ಲದವಂಗೆ ತಾಮಸವುಂಟೆ?
ಮತ್ಸರವಿಲ್ಲದವನು ಮನದಲ್ಲಿ ಮತ್ತೊಂದು ನೆನೆವನೆ?
ಇವು ಇಲ್ಲವೆಂದು ಮನವ ಕದ್ದು ನುಡಿವ
ಅಬದ್ಧರ ಮಾತ ಮೆಚ್ಚುವನೆ,
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ?”[16]

ಇಂಥವರು ಸಮಾಜದಲ್ಲಿ ಎಷ್ಟು ಮಂದಿಯಿಲ್ಲ? ತಾವು ಶುದ್ಧವೆಂದು ಹೇಳಿಕೊಂಡು ಹೇಸಿಜೀವನ ಮಾಡುತ್ತಾರೆ. ಲಿಂಗಮ್ಮ ಹಾಕುವ ಪ್ರಶ್ನೆಗಳಿಗೆ ಅಬದ್ಧರಲ್ಲಿ ಉತ್ತರವಿಲ್ಲ. ಇವರು “ಮನವ ಕದ್ದು ನುಡಿವವರು.” ಅರ್ಥವತ್ತಾದ ಮಾತಿದು. ತಮ್ಮ ಮನಸ್ಸಿಗೆ ಮೋಸ ಮಾಡಿ ಹೇಳುವ ಮಾತಿದು. ತಾನು ಹಾಗಿದ್ದೇನೆಂದು ಮನಸ್ಸಿಗೆ ಗೊತ್ತು. ಆದರೆ ಆ ಮನಸ್ಸನ್ನು ಬದಿಗೊತ್ತಿ – ಅದು ಬೇಡವೆಂದರೂ ಕೇಳದೆ – ತಾನು ಹಾಗಿಲ್ಲವೆಂದು ಹೇಳುವವನೇ ಮನ ಕದ್ದು ಮಾತನಾಡುವವ. ಇಂಥ ಮಾತುಗಳಿಂದ ಲಿಂಗಮ್ಮನ ವಚನಗಳಿಗೆ ಮೊನಚೂ ಸತ್ವವೂ ಉಂಟಾಗಿದೆ.

ಕೈಲಾಸ ಮತ್ತು ಮರ್ತ್ಯ ಮತ್ತು ಮರ್ತ್ಯಲೋಕದ ವ್ಯಾಖ್ಯೆ ಮತ್ತು ಇವೆರಡು ಲೋಕಗಳನ್ನು ಶರಣರು ಮೀರಿ ನಿಂದ ನಿಲುವು ಕೆಳಗಿನ ವಚನದಲ್ಲಿ ಸುಂದರವಾಗಿ ನಿರೂಪಿತವಾಗಿದೆ:

ಕೈಲಾಸ ಮರ್ತ್ಯಲೋಕ ಎಂಬರು.
ಕೈಲಾಸವೆಂದಡೇನೊ, ಮರ್ತ್ಯಲೋಕವೆಂದಡೇನೊ?
ಅಲ್ಲಿಯೂ ನಡೆಯು ಒಂದೆ, ಇಲ್ಲಿಯೂ ನಡೆಯು ಒಂದೆ.
ಅಲ್ಲಿಯ ನುಡಿಯೂ ಒಂದೆ,
ಇಲ್ಲಿಯ ನುಡಿಯೂ ಒಂದೆ ಕಾಣಿರಯ್ಯಾ ಎಂಬರು.
ಕೈಲಾಸದವರೆ ದೇವರ್ಕಳೆಂಬರು;
ಮರ್ತ್ಯಲೋಕದವರೆ ಮಹಾ ಗಣಂಗಳೆಂಬರು.
ಸುರಲೋಕದೊಳಗೆ ಸಾಸಿರ ಕಾಲಕ್ಕಲ್ಲದೆ ಅಳಿವಿಲ್ಲವೆಂಬರು.
ನರಲೋಕದೊಳಗೆ ಸತ್ತುಸತ್ತು ಹುಟ್ಟುತ್ತಿಹರೆಂಬರು.
ಇದು ಕಂಡು ನಮ್ಮ ಶಿವಶರಣರು
ಸುರಲೋಕವನು ನರಲೋಕವನು ತೃಣವೆಂದು ಭಾವಿಸಿ
ಭವವದಾಂಟಿ ತಮ್ಮ ತಮ್ಮ ಹುಟ್ಟನರಿದು
ಮಹಾ ಬೆಳಗೆ ಕೂಡಿ, ಬೆಳಗಿನಲ್ಲಿ ಬಯಲಾದರಯ್ಯಾ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ[17]

ಈ ವಚನದಲ್ಲಿ ಉಕ್ತವಾಗಿರುವ ‘ಅಲ್ಲಿಯೂ ನಡೆಯು ಒಂದೆ, ಇಲ್ಲಿಯೂ ನಡೆಯು ಒಂದೆ’ ಎಂಬ ಮಾತು ಕೈಲಾಸವೇನೂ ಹೆಚ್ಚಲ್ಲ ಎಂಬುದನ್ನು ಧ್ವನಿಸುತ್ತದೆ. ಇದು ಬಸವಣ್ಣನವರ ‘ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರು’ ಎಂಬ ವಚನವನ್ನು ನೆನಪಿಗೆ ತರುತ್ತದೆ. “ಸುರಲೋಕದೊಳಗೆ ಸಾಸಿರಕಾಲಕ್ಕಲ್ಲದೆ ಅಳಿವಿಲ್ಲ, ನರಲೋಕದೊಳಗೆ ಸತ್ತು ಸತ್ತು ಹುಟ್ಟುತ್ತಿಹರು” – ಎರಡರಲ್ಲಿಯೂ ಅಳಿವು – ಉಳಿವುಗಳಿಂದ, ಸಾವು – ಹುಟ್ಟುಗಳಿಂದ ತೊಡಕು; ಸಂಕೋಲೆ; ಕಷ್ಟಕೋಟಿಲೆ. ಆದುದರಿಂದ ಶರಣರು ಇವೆರಡು ಲೋಕಗಳನ್ನು ತೃಣವೆಂದು ಭಾವಿಸಿ, ಹುಟ್ಟು ಸಾವುಗಳನ್ನು ಅಳಿಸಿ ಬೆಳಗಿನಲ್ಲಿ ಬಯಲಾದರು.

ಶರಣರಲ್ಲದ ಸಾಮಾನ್ಯ ಜೀವಿಗಳು ಅಂತರಂಗ – ಬಹಿರಂಗ ಶುದ್ಧಿಯಿಲ್ಲದವರು. ಅವರ ನುಡಿ ಎಂತಹುದು? “ಅಂತರಂಗ ಬಹಿರಂಗ ಶುದ್ಧವಿಲ್ಲದೆ ನುಡಿವರು ಸಂತೆಯ ಸೂಳೆಯರಂತೆ.”[18] ಸಂತೆಯಲ್ಲಿ ದೇಹವನ್ನು ಮಾರಿಕೊಳ್ಳುವ ಸೂಳೆಯರಿಗೆ ಅಂತರಂಗ ಬಹಿರಂಗದ ಕಲ್ಪನೆಯಾದರೂ ಎಲ್ಲಿ? ಇನ್ನು ಶುದ್ಧಿಯ ಮಾತು ದೂರವೇ ಉಳಿಯಿತು. ಇವೆರಡು ಶುದ್ಧವಿಲ್ಲದವರಿಗೆ ಸೂಳೆಯರನ್ನು ಹೋಲಿಸಿದ್ದು ಔಚಿತ್ಯಪೂರ್ಣವಾಗಿದೆ. ಇವರೂ ಜೀವನದಲ್ಲಿ ಅರ್ಥ ಅಭಿಮಾನ ಮಾನ ಎಲ್ಲದರಲ್ಲಿ ವ್ಯಭಿಚಾರ ಮಾಡುವವರೇ. ಇವೆರಡು ಶುದ್ಧವಿದ್ದ ಶರಣರ ಇರುವು ಹೀಗೆ: “ಅಂತರಂಗವೆಲ್ಲ ಆಱುಹಾಯಿತ್ತು, ಬಹಿರಂಗವೆಲ್ಲ ಲಿಂಗವಾಯಿತ್ತು.”[19]

ಗಳಿಸಿದ್ದನ್ನು ಶಿವಶರಣರಿಗೆ, ಸಮಾಜಕ್ಕೆ ನೀಡದೆ ಮಡದಿ ಮಕ್ಕಳಿಗೆಂದು ತೆಗೆದಿರಿಸುವವರು ಇಂಥವರು:

ಒಡಕ ಮಡಕೆಯಂತೆ ಒಡೆದುಹೋಗುವ ಹಡಿಕೆ ಕಾಯಕ ನೆಚ್ಚಿ,
ತಟತಟನೆ ತಾಗಿ ಮಠದ ಬೆಕ್ಕಾಗಿ ತಿಟ್ಟನೆ ತಿರುಗಿ,
ಬಟ್ಟಿಯಲಿಕ್ಕಿ ಕಡಿವ ಕಳ್ಳನನರಿಯದೆ, ತಿಂಬ ಹುಲಿಯನಱಿಯದೆ;
ಒಡವೆಯ ಗಳಿಸಿಹೆನೆಂದು ಒಡೆಯನ ಮರೆದು;
ತನ್ನ ಮಡದಿ ಮಕ್ಕಳಿಗೆಂದು
ಅವರ ಒಡವೆರೆದು ಹೋಗುವ ಮಡಿವರೊಡನೆ ನುಡಿಯರು
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ[20]

ದೇಹಕ್ಕೆ ಒಡಕ ಮಡಕೆಯೆಂದಿರುವುದು ತುಂಬ ಸೊಗಸು. ಎರಡೂ ಒಡೆದು ಹೋಗುವಂಥವೇ. ಇಂಥ ಕಾಯ ನೆಚ್ಚಿದವರು ‘ಮಠದಬೆಕ್ಕು’ ಎಂದುದು ಇನ್ನೂ ಸೊಗಸು. ಮಠದಲ್ಲಿದ್ದೂ ಬೆಕ್ಕು ಇಲಿ ಕಂಡರೆ ಬಿಡದು. ಸಮಾಜದಲ್ಲಿ ಇಂಥ ಬೆಕ್ಕುಗಳಿಗೆ ಕೊರತೆಯಿಲ್ಲ. ಒಡವೆಯ ಗಳಿಸಿಹೆನೆಂದು ಒಡೆಯನ ಮರೆವ ಈ ಖೂಳರಿಗೆ ಕಡಿವ ಕಳ್ಳ, ತಿಂಬ ಹುಲಿ ಹಿಂದೆ ಬಿದ್ದಿವೆ; ಇದರ ಅರಿವು ಅವರಿಗಿಲ್ಲ. ಇವರೆಲ್ಲ ನಿಜವ ಕಾಣದೆ ಸಾವಿಗೆ ತುತ್ತಾಗುವವರು; ಶರಣರು ಇವರೊಡನೆ ನುಡಿಯರು.

[1] ಡಾ|| ಪಿ.ಜಿ. ಹಳಕಟ್ಟಿ, ೨೨೦ ಅಮರಗಣಾಧೀಶ್ವರರ ಚರಿತ್ರೆಗಳು, ಪುಟ ೯೧ – ೯೨.

[2] ಡಾ|| ಪಿ.ಜಿಲಹಳಕಟ್ಟಿ: ಶಿವಶರಣೆಯರ ಚರಿತ್ರೆಗಳು, ಪುಟ ೧೫೫.

[3] ಅಪ್ಪಣ್ಣನಂತೆ ಅನೇಕರು ಬಸವಣ್ಣನ ಹೆಸರನ್ನು ತಮ್ಮ ಅಂಕಿತದಲ್ಲಿ ಸೇರಿಸಿಕೊಂಡಿದ್ದಾರೆ.

ಅ. ಬಸವಣ್ಣಪ್ರಿಯ ನಾಗೇಶ್ವರಲಿಂಗ: ಬೊಕ್ಕಸದ ಸಂಗಣ್ಣ

ಆ. ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿವಿಮಲ ರಾಜೇಶ್ವರಲಿಂಗಃ ಬಾಚಿ ಕಾಯಕದ ಬಸವಣ್ಣ

ಇ. ಸವಣ್ಣಪ್ರಿಯ ಚೆನ್ನಸಂಗಯ್ಯ: ಅಕ್ಕನಾಗಮ್ಮ

[4] ಡಾ|| ಆರ್. ಸಿ.ಹಿರೇಮಠ: ಶಿವಶರಣೆಯರ ವಚನಗಳು, (ಸಮಗ್ರಸಂಪುಟ)

ಲಿಂಗಮ್ಮನ ಬೋಧೆಯ ವಚನಗಳು, ಪುಟ ೨೫೭, ವಚನ ೬೮.

[5] ಅದೇ ಪುಟ ೨೪೧, ವಚನ ೩೨.

[6] ಅದೇ ಪುಟ ೨೫೭, ವಚನ ೬೮.

[7] ಅದೇ ಪುಟ ೨೭೫, ವಚನ ೧೧೦,೧೧೧.

[8] ಅದೇ ಪುಟ ೨೫೪, ವಚನ ೬೪.

[9] ಅದೇ ಪುಟ ೨೫೬, ವಚನ ೬೭.

[10] ಅದೇ ಪುಟ ೨೫೬, ವಚನ ೬೬.

[11] ಅದೇ ಪುಟ ೨೬೫, ವಚನ ೮೫.

[12] ಅದೇ ಪುಟ ೨೬೭, ವಚನ ೧೧೩.

[13] ಅದೇ ಪುಟ ೨೫೭, ವಚನ ೬೮.

[14] ಅದೇ ಪುಟ ೨೫೦, ವಚನ ೫೪.

[15] ಅದೇ ಪುಟ ೨೫೨, ವಚನ ೫೯.

[16] ಅದೇ ಪುಟ ೨೬೮, ವಚನ ೩೨.

[17] ಅದೇ ಪುಟ ೨೪೯, ವಚನ ೫೨.

[18] ಅದೇ ಪುಟ ೨೫೭, ವಚನ ೧೦೮.

[19] ಅದೇ ಪುಟ ೨೫೭, ವಚನ ೧೦೮.

[20] ಅದೇ ಪುಟ ೨೪೭, ವಚನ ೪೬.