ಕರ್ತೃವನರಿಯಲು, ಮಹಾಘನವ ಕೂಡಲು ದೇಹವ ನಚ್ಚಿದವರಿಗೆ, ಸಂಸಾರ ಮಚ್ಚಿದವರಿಗೆ ಸಾಧ್ಯವಿಲ್ಲ. ದೇಹದಿಂದ ಎಲ್ಲ ಸಾಧ್ಯ; ಆದರೆ ಅದನ್ನು ಲಿಂಗದೇಹವನ್ನಾಗಿ ಮಾಡಿಕೊಂಡಾಗ ಮಾತ್ರ. ಆ ದಾರಿಯೇ ಗೊತ್ತಿರದ ಕಿಲುಬುದೇಹಿಗಳು ತಮ್ಮ ಅಂತರಂಗದಲ್ಲಿಯೇ ಲಿಂಗವನ್ನರಸುವ ಸಾಹಸಕ್ಕೆ ಕೈಹಾಕುತ್ತಾರೆ; ತಾವೂ ಆಧ್ಯಾತ್ಮಿಗಳೆಂದು ಜನರ ಮಧ್ಯೆ ಮೆರೆಯಲು ಪ್ರಯತ್ನಿಸಸುತ್ತಾರೆ. ಇಂಥವರು ಲಾಂಛನ ಧರಿಸಿಕೊಂಡು ಶರಣ ಸಮೂಹದಲ್ಲಿಯೂ ಇದ್ದರು. ಅವರನ್ನು ಕಂಡು ಲಿಂಗಮ್ಮ ಏನೊಂದು ಮುಲಾಜಿಯಿಲ್ಲದೆ ಮೂದಲಿಸುತ್ತಾಳೆ:

ಹೊತ್ತು ಹೊತ್ತಿಗೆ ಮೆತ್ತಹಾಕಿ ತಿಪ್ಪೆಯಲ್ಲಿ ಕರ್ಪುರವನಱಸುವನಂತೆ,
ತಿಪ್ಪೆಯಂತಹ ಒಡಲೊಳಗೆ ಕರ್ತೃವನಱಸಿಹೆನೆಂಬ ಅಣ್ಣಗಳಿರಾ,
ನೀವು ಕೇಳಿರೋ…”[1]

ತಿಪ್ಪೆಯಂತಹ ಒಡಲುಳ್ಳವರಿಗೆ ಅನುಭಾವ ಎಲ್ಲಿ ಸಾಧ್ಯ? ತಿಪ್ಪೆಯಲ್ಲಿ ಕರ್ಪುರ ಸಿಕ್ಕುವುದೇ? ಅದರಂತೆ ತಿಪ್ಪೆಯಂತಹ ಒಡಲಿನಲ್ಲಿ ಕರ್ತೃಕಾಣುವನೇ? ಒಡಲಿಗೆ ತಿಪ್ಪೆಯನ್ನು ಹೋಲಿಸಿದ್ದು ಅರ್ಥಪೂರ್ಣ. ಅದೂ ಕಸದಿಂದ ತುಂಬಿದ್ದುಲ ಇದೂ ಅರಿಷಡ್ವರ್ಗಾದಿ ಕಸದಿಂದ ತುಂಬಿದ್ದು. ಕರ್ಪುರಕ್ಕೆ ಕರ್ತೃವನ್ನು ಹೋಲಿಸಿದ್ದು ತುಂಬ ಸಮಂಜಸ. ಕರ್ಪುರ ಉರಿದು ಇಲ್ಲವಾಗುತ್ತದೆ; ಕರ್ತೃ ಇದ್ದೂ ಇಲ್ಲದವನಾಗಿದ್ದಾನೆ.

ಮನದ ಬಗ್ಗೆ ಲಿಂಗಮ್ಮ ಬಹಳ ಕಾಳಜಿವಹಿಸಿ ಮಾತನಾಡುತ್ತಾಲೆ. ಎಲ್ಲಕ್ಕೂ ಮನವೇ ಕಾರಣ. “ಲೋಕದ ಚೇಷ್ಟೆಗೆ ರವಿ ಬೀಜವಾದಂತೆ ಕರಣಂಗಳ ಚೇಷ್ಟೆಗೆ ಮನವೇ ಬೀಜ” ಎಂಬ ಮಹಾದೇವಿಯಕ್ಕನ ಮಾತು ಸತ್ಯ. ಈ ಮನವನ್ನು ಗೆದೆಯ ಬೇಕು; ಮಹವನ್ನಾಗಿ ಮಾಡಬೇಕು. ಇದನ್ನು ಗೆದೆಯದವರಿಗೆ ಅನುಭಾವ ಸಾಧ್ಯವಿಲ್ಲ.

ಮನಸ್ಸನ್ನು ಗೆದೆಯಲು ಬಗೆಬಗೆಯ ವ್ರತಗಳನ್ನೋ ನೇಮಗಳನ್ನೋ ಮಾಡಿಕೊಂಡು ದೇಹವನ್ನು ದಂಡಿಸುವವರನ್ನು ಕಂಡು ಲಿಂಗಮ್ಮ ಮರುಗುತ್ತಾಳೆ; ಮನವನ್ನು ಗೆದೆಯುವ ಮಾರ್ಗವನ್ನು ಅರುಹುತ್ತಾಳೆ.

ಮನವ ಗೆದ್ದೆಹೆನೆಂದು, ತನುವ ಕರಗಿಸಿ ಕಾಯಕ ಮರುಗಿಸಿ
ನಿದ್ರೆಯ ಕೆಡಿಸಿ ವಿದ್ಯೆಯ ಕಲಿತಿಹನೆಂಬ ಬುದ್ಧಹೀನರಿರಾ, ನೀವು ಕೇಳಿರೋ
ನಮ್ಮ ಶರಣರು ಮನವನೆಂತು ಗೆದ್ದಹರೆಂದೆಡೆ
ಕಾಮಕ್ರೋಧವ ನೀಗಿ, ಲೋಭ ಮೋಹ ಮದ ಮತ್ಸರವ ಛೇದಿಸಿ
ಆಸೆ ರೋಷವಳಿದು, ಜಗದ ಪಾಶವಬಿಟ್ಟು,
ಮರುಗಿಸುವ ಕಾಯಕವನೆ ಪ್ರಸಾದ ಕಾಯಕ ಮಾಡಿ ಸಲಹಿದರು.
ಕೆಡಿಸುವ ನಿದ್ರೆಯನೆ ಯೋಗ ಸಮಾಧಿಯ ಮಾಡಿ
ಸುಖವನೇಡಿಸಿ ಜಗವನೆ ಗೆದ್ದ ಶರಣರ ಬುದ್ಧಿಹೀನರೆತ್ತಬಲ್ಲರೋ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ?”[2]

ದುರ್ಗುಣಗಳನ್ನು ಒಳಗಿಟ್ಟುಕೊಂಡು ದೇಹ ದಂಡಿಸಿದರೆ ಆಗುವುದೇನು? ಅವರು ಕಲಿತ ವಿದ್ಯೆ ಅವಿದ್ಯೆ. ಅರಿಷಡ್ವರ್ಗಗಳನ್ನು ಕಳೆದು ಕಾಯವನ್ನು ಪ್ರಸಾದಕಾಯ ಮಾಡಬೇಕು. ಬರಿದೆ ನಿದ್ದೆಗೆಟ್ಟರೆ ಬಂದುದೇನು? ಆ ನಿದ್ರೆಯನ್ನೇ ಯೋಗಸಮಾಧಿ ಮಾಡಬೇಕು. ಎಲ್ಲರು ಏನು ಮಾಡಿದರೂ ಸುಖವನ್ನು ಪಡೆಯಲೆಂದೇ ಮಾಡುವರು. ಅದರೆ ಈ ಸುಖ ನಿಜವಾದ ಸುಖವಲ್ಲ. ಈ ಪ್ರಾಪಂಚಿಕ ಸುಖವನ್ನು ‘ಏಡಿಸಿ’ ನಿಂತಾಗ ನಿಜವಾದ ಆ ಸುಖದ ಅನುಭವವಾಗುವುದು.

ಶರಣರಸಂಗದಿಂದ, ದುರ್ಗುಣಗಳು ಅಳಿಯುವುದರಿಂದ
ಮನ ಹೀಗಾಗುತ್ತದೆ.
ಗಾಳಿ ಬೀಸ ಲದಂತೆ, ಮೋಡವಿಲ್ಲದ ಸೂರ್ಯನಂತೆ,
ಬೆಳಗಿದ ದರ್ಪಣದಂತೆ ಮನ ನಿರ್ಮಲವಾದಲ್ಲದೆ
ಮಹಾಘನವ ಕಾಣಬಾರದು….”[3]
“…
ಘನವ ಕಾಂಬುದಕ್ಕೆ ಮನವೆಂತಾಗಬೇಕಂದಡೆ:
ಅಕ್ಕಿಯ ಥಳಿಸಿದಂತೆ, ಹಲ್ಲಸುಲಿದಂತೆ, ಕನ್ನಡಿಯ ನೋಡಿದಂತೆ
ಮನ ನಿರ್ಮಲವಾದಲ್ಲದೆ ಘನವ ಕಾಣಬಾರದು….”[4]

ತಮ್ಮ ತಪ್ಪುಗಳನ್ನು, ದೋಷಗಳನ್ನು ವಚನಕಾರರಂತೆ ಬಿಚ್ಚಿ ಹೇಳಿಕೊಂಡವರು ಕಡಮೆ. ಇವರಲ್ಲಿ ಬಸವಣ್ಣನವರನ್ನು ಮೀರಿಸುವವರು ಯಾರು ಇಲ್ಲವೆನ್ನಬಹುದು. ಲಿಂಗಮ್ಮ ಸ್ವಾತ್ಮ ವಿಮರ್ಶೆಮಾಡಿಕೊಂಡು ತನ್ನ ತಪ್ಪು ಒಪ್ಪುಗಳನ್ನು ಬಯಲಿಗೆ ಹಾಕಿದ್ದಾಳೆ:

ನೆನೆವುತ್ತಿದೆ ಮನ; ದುರ್ವಾಸನೆಗೆ ಹರಿವುತ್ತಿದೆ ಮನ;
ಕೊನೆಗೊಂಬೆಗೆ ಎಳೆವುತ್ತಿದೆ ಮನ;
ಕಟ್ಟಿಗೆ ನಿಲ್ಲದು ಮನ; ಬಿಟ್ಟಡೆ ಹೋಗದು ಮನ.
ತನ್ನಿಚ್ಛೆಯಲಾಡುವ ಮನವ ಕಟ್ಟಿಗೆ ತಂದು, ಗೊತ್ತಿಗೆ ನಿಲಿಸಿ
ಬಚ್ಚಬರಿಯ ಬಯಲಿನೊಳಗೆ ಓಲಾಡುವ
ಶರಣರ ಪಾದದಲ್ಲಿ ನಾ ಬೆಚ್ಚಂತಿದ್ದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ[5]

ಕಂಡಕಂಡವರಿಗೆ ಶರಣರೆನ್ನಲು ಲಿಂಗಮ್ಮ ಒಲ್ಲಳು. ಶರಣರ ಇರವು ಮತ್ತು ನಡೆಯನ್ನು ಹೀಗ ವರ್ಣಿಸುತ್ತಾಳೆ:

“………………..
ಚಿತ್ಪ್ರಕಾಶವೆ ತಾನೆಯಾಗಿ ಆಡುವ ಶರಣರ ಇರವೆಂತೆಂದಡೆ:
ಇದ್ದೂ ಇಲ್ಲದಂತೆ, ಹೊದ್ದಿಯೂ ಹೊದ್ದದಂತೆ,
ಆಡಿಯೂ ಆಡದಂತೆ ನೋಡಿಯೂ ನೋಡದಂತೆ
ಕೂಡಿಯೂ ಕೂಡದಂತೆ, ಕುಂಭಕದೊಳು ನಿಂದು
ತುಂಬಿದಮೃತವನುಂಡು, ಬೆಂಬಳಿಯಲ್ಲಾಡುವ ಶರಣ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ, ತಾನೇ ನೋಡಾ[6]

“……………………………
ನಮ್ಮ ಶರಣರ ನಡೆ ಎಂತೆಂದಡೆ:
ಕತ್ತಲೆಯ ಬಾಗಿಲಿಗೆ ಕದವನಿಕ್ಕಿ,
ಪಶ್ಚಿಮದ ಕದವ ತೆಗೆದು
ಬಚ್ಚಬರಿಯ ಬೆಳಗಿನೊಳಗೋಲಾಡುವ ಶರಣರ ಪಾದಕ್ಕೆ
ನಮೋ ನಮೋ ಎಂದು ಸುಖಿಯಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ[7]

* * *

ವಚನಕಾರರಲ್ಲಿ, ಅಂತೆಯೆ ಕನ್ನಡ ಸಾಹಿತ್ಯದಲ್ಲಿ ಲಿಂಗಮ್ಮನಿಗೆ ಒಂದು ಉನ್ನತ ಸ್ಥಾನವಿದೆ. ಅನುಭಾವವನ್ನು ಉಪಮೆ, ರೂಪಕಗಳಿಂದ, ಸುಂದರ ಉಕ್ತಿಗಳಿಂದ ಮನಮುಟ್ಟುವಂತೆ ಆಕೆ ಹೇಳುತ್ತಾಳೆ. ಆಕೆಯ ವಚನಗಳನ್ನು ಬೋಧೆಯ ವಚನಗಳೆಂದು ಕರೆಯಲಾಗಿದೆ. ನಿಜ. ಅವು ಬೋಧೆಯ ವಚನಗಳೇ. ಈ ಬೋಧೆಯಲ್ಲಿ ತಾನು ಬಲ್ಲವಳೆಂಬ ಅಹಂಕಾರವಿಲ್ಲ. ಮನುಜರ ದುಸ್ಥಿತಿಯನ್ನು ಕಂಡು ಮರುಗಿ ಕಳಕಳಿಯಿಂದ ಹೊಮ್ಮಿದ ವಚನಗಳಿವು. ಅಲ್ಲಲ್ಲಿ ಸಿಟ್ಟು, ಒರಟು ತೋರಿದರೂ ಅದು ಅವಗುಣಕ್ಕೆ ಮನಿದದ್ದು, ಸಾತ್ವಿಕ ಸಂತಾಪ, ಅಷ್ಟೇ.

ತನುವ ಕರಗಿಸಿ, ಮನವ ಬಳಲಿಸಿ ಕಳವಳಿಸಿ
ಕಣ್ಣು ಕಾಣದ ಅಂಧಕರಂತೆ ಮುಂದುಗಾಣದೆ
ಸಂದೇಹದಲ್ಲಿ ಮುಳುಗಿರುವ ಮನುಜರಿರಾ
ನೀವು ಕೇಳಿರೋ ಹೇಳಿಹೆನು….”
”…………………..
ಬುದ್ದಿಹೀನರಿರಾ ನೀವು ಕೇಳಿರೋ……”
”……………………………
ಅಣ್ಣಗಳಿರಾ ನೀವು ಕೇಳಿರೋ……..”

ಇಲ್ಲಿ ಪ್ರಯೋಗವಾಗಿರುವ ‘ಅಣ್ಣಗಳಿರಾ’ ಎಂಬುದು ವ್ಯಂಗ್ಯವೂ ಆಗಬಹುದು, ಆತ್ಮೀಯತೆಯ ಕುರುಹೂ ಆಗಬಹುದು.

ಲಿಂಗಮ್ಮ ಬಳಸುವ ಉಪಮಾನಗಳು ನೇರ ಜೀವನದಿಂದ ಎತ್ತಿದವು:

ತಿಪ್ಪೆಯಂತಹ ಒಡಲೊಳಗೆ…..”
ಬಂಡಿಯ ಮೇಗಣ ಹೆಳವನಂತೆ ಕಂಡ ಕಂಡ ಕಡೆ
ಹಲುಬಿದಡೆ ನಿಮಗೆ ಬಂದುದೇನಿರೋ…..”
ಹೊಸ್ತಿಲೊಳಿರಿಸಿದ ಜ್ಯೋತಿಯಂತೆ…….”
ಒಡಕ ಮಡಿಕೆಯಂತೆ ಒಡೆದು ಹೋಗುವ ಹಡಿಕೆ ಕಾಯವ ನೆಚ್ಚಿ…..”

ಬಹು ಅರ್ಥಶ್ರೀಮಂತಿಕೆಯುಳ್ಳ ಉಕ್ತಿಗಳು:

ಕರಣಂಗಳಱತುದೆ ಕಂಗಳ ಮಂದಣ ಬೆಳಗು
ಮನವು ಮಹದಲ್ಲಿ ನಿಂದುದೆ ಲಿಂಗ
ಮಂಡೆಯಲ್ಲಿ ನಿಂದು……”
ಕಂಗಳ ಕರುಳನೆ ಕೊಯಿದು, ಮನದ ತಿರುಳನೆ ಹುರಿದು
ಗೊತ್ತ ಕಂಡವಂಗೆ ಅತ್ತಿತ್ತಲಱಸಲುಂಟೆ?”
ಕುರುಡ ಕನ್ನಡಿಯ ಹಿಡಿದಂತೆ
ಸಾಸಿರದಳ ಅಮೃತದ ಕೊಡ ಕಾಯಿತ್ತು,
ಕಾಯ್ದ ಅಮೃತ ಉಕ್ಕಿ ತೊಟ್ಟಿಕ್ಕೆ ಅಮೃತವನುಂಡು
ಲಿಂಗವ ನೋಡುವ ಕಂಗಳಲ್ಲೆ ಐಕ್ಯ

ಲಿಂಗಮ್ಮನ ಭಾಷೆ ಸರಳ. ಅನೇಕ ಕಡೆ ಆಡು ಭಾಷೆಯ ಮಾತುಗಳ ಬಳಕೆಯಾಗಿದೆ. ಅಲ್ಲದೆ ಹೆಣ್ಣುಮಕ್ಕಳು ಬಳಸುವ ಮಾತುಗಳೂ ಅಲ್ಲಲ್ಲಿ ಸೇರಿಕೊಂಡಿವೆ. ಇದರಿಂದ ಭಾಷೆಗೆ ಸೊಗಡು ಉಂಟಾಗಿದೆ:

“ಇವೀಸು, ನಿಮಗೆ ಬಂದುದೇನಿರೋ, ಒಡಕ ಮಡಿಕೆ, ತಟತಟನೆ ತಾಗಿ, ತೂತು ಬಾಯೊಳಗೆ, ನನ್ನ ಕೈಯಲ್ಲೊಂದು ಕಲ್ಲ ತೆಕ್ಕೊಂಡು, ತಳ್ಳಿಬಳ್ಳಿಯನೆ ಹರಿದು, ಅಕ್ಕಿಯ ಥಳಿಸಿದಂತೆ”. ಇವೆಲ್ಲ ಅಚ್ಚ ಕನ್ನಡ ಶಬ್ದಗಳೇ.

ಕೆಲವು ಕಡೆ ಅರ್ಥಕ್ಕೆ ಸಂದಿಗ್ಧತೆ ಬರುತ್ತದೆ ಎಂಬಂತೆ ಎನಿಸಿದರೂ ವಿಚಾರ ಮಾಡಿದರೆ ಅದು ಹಾಗಿಲ್ಲವೆಂದು ಖಚಿತವಾಗದಿರದು. ಘನವ ಕಾಣಲು ಮನ ಅಕ್ಕಿಯ ಥಳಿಸಿದಂತೆ, ಹಲ್ಲು ಸುಲಿದಂತೆ ನಿರ್ಮಲವಾಗಬೇಕು ಎನ್ನುತ್ತಾಳೆ ಲಿಂಗಮ್ಮ. ಸಾಮಾನ್ಯ ಮಾತಿನಿಂದ, ಸಾಮಾನ್ಯ ವಸ್ತುವಿನಿಂದ ಒಂದು ವಿಶೇಷ ಅರ್ಥಸಂಪತ್ತಿಯನ್ನು ಶರಣರು ಉಂಟು ಮಾಡುತ್ತಿರುವಂತೆ, ಆ ಕಲೆ ಲಿಂಗಮ್ಮನಿಗೂ ಸಾಧೀಸಿದೆ. ಥಳಿಸಿ ಕವಚ ತೆಗೆದು ಹೊಟ್ಟು ದೂರಮಾಡಿದ ಅಕ್ಕಿಯಂತೆ ಮನವಾಗಬೇಕು; ಅಂಥ ಅಕ್ಕಿಯಿಂದ ಶುದ್ಧ ಆರೋಗ್ಯದಾಯಕ ಅನ್ನವಾಗುವುದು. ಹಾಗೆ ಶುದ್ಧವಾದ ಮನದಿಂದ ಅನುಭಾವದಡಿಗೆ ಮಾಡಲು ಸಾಧ್ಯ. ಹೆಣ್ಣು ಮಕ್ಕಳಿಗೆ ಸಹಜವಾದ ಮಾತಿದು. ಈ ಉಪಮಾನ ಬೇರೆ ಕಡೆ ಬಹುಶಃ ಎಲ್ಲಿಯೂ ಬಂದಿಲ್ಲ. ಸ್ವಚ್ಛವಾಗಿ ತಿಕ್ಕಿದ ಹಲ್ಲಿನಂತೆ ಮನವಾಗಬೇಕೆಂಬುದೂ ವಿಶೇಷವೇ. ಅಶುದ್ಧ ಹಲ್ಲು, ಸ್ವಚ್ಛಮಾಡದ ಹಲ್ಲು, ಅನಾರೋಗ್ಯಕ್ಕೆ ಕಾರಣ. ಇದರಂತೆ ಮನಸ್ಸನ್ನು ‘ಸುಲಿ’ಯಬೇಕು; ಇಲ್ಲದಿದ್ದರೆ ಅದು ಹೊಲಸಿನಿಂದ ರೋಗಿಯಾಗುವುದು. ಮನಸ್ಸು ಸುಲಿಯುವುದೆಂದರೆ ದುರ್ಗುಣಗಳನ್ನು ಮನಸ್ಸಿನಿಂದ ದೂರಮಾಡುವುದೆಂದರ್ಥ.

ಇನ್ನಿತರ ಶರಣರಂತೆ ಲಿಂಗಮ್ಮ ಬೆಡಗಿನ ವಚನಗಳನ್ನೂ ರಚಿಸಿದ್ದಾಳೆ. ಒಂದು ಬೆಡಗಿನ ವಚನ ಬಹುಮುಖ್ಯವೆನಿಸುತ್ತದೆ:

ನಾನೊಂದು ಹಾಳೂರಿಗೆ ಹೋಗುತ್ತಿರಲು, ಹಾಳೂರು ಹೊಕ್ಕಡೆ
ಅಲ್ಲಿ ನಾಯಿಗಳು ಅಟ್ಟಿಕೊಂಡು ಬಂದವು, ಹುಲಿ ಕರಡಿ ಅಡ್ಡಲಾದವು.

ಇವ ಕಂಡು ನಾ ಹೆದರಿಕೊಂಡು
ನನ್ನ ಕೈಗೊಂದು ಕಲ್ಲತೆಕ್ಕೊಂಡು ನೋಡುತ್ತ ಬರುತ್ತಿರಲು,
ನಾಯಿಗಳು ಓಡಿಹೋದವು. ಹುಲಿಕರಡಿಗಳು ಅಲ್ಲಿಯೆ ಬಯಲಾದವು.
ಊರು ನಿರ್ಮಲವಾಯಿತ್ತು.
……………………………
……………………………….
ದ್ವಂದ್ವವನೆ ಹರಿದು ನಿಮ್ಮ ಸಂಗ ಸುಖದೊಳಗೋಲಾಡಿ
ಸುಖಿಯಾದೆ……[8]

ಹಾಳೂರು ಎಂದರೆ ದೇಹ. ನಾಯಿ ಹುಲಿ ಕರಡಿ ಇವು ಅರಿವರ್ಗ ಮತ್ತು ಅಷ್ಟಮದ ಮುಂತಾದವು. “ಕೈಯಲ್ಲೊಂದು ಕಲ್ಲು ತೆಕ್ಕೊಂಡು ನೋಡುತ್ತ ಬರುತ್ತಿರಲು….” ಈ ಕಲ್ಲು ಏನು? ಯಾವುದರ ಸಂಕೇತ? ಈ ಕಲ್ಲಿಗೆ ಹೆದರಿ ನಾಯಿ ಹುಲಿ ಕರಡಿ ಎಂದರೆ ದುರ್ಗುಣಗಳು ಓಡಿಹೋದವು. ಆಗ ಆವೂರು ನಿರ್ಮಲವಾಯಿತಂತೆ. ಎಂದರೆ ಈ ದುರ್ಗಣಗಳನ್ನು ಓಡಿಸುವ ಶಕ್ತಿ ಲಿಂಗಕ್ಕೆ ಮಾತ್ರ ಉಂಟು. ಕಲ್ಲೆಂದರೆ ಇಲ್ಲಿ ಲಿಂಗವೆಂದೇ ಭಾವಿಸಬೇಕಾಗುವುದು. ಲಿಂಗಕ್ಕೆ ಕಲ್ಲೆಂದು ಬೆಡಗಿನಿಂದ ಕರೆದ ಲಿಂಗಮ್ಮನ ಬೆಡಗೇ ಬೆಡಗು.

ಐಕ್ಯಸ್ಥಿತಿಯನ್ನು ಹೇಳುವ ಲಿಂಗಮ್ಮನ ಒಂದು ವಚನ ಬಲು ಸೊಗಸಾಗಿದೆ. ಅಲ್ಲದೆ ಆ ವಚನದಲ್ಲಿಯ ಒಂದುಮಾತು ಪ್ರಮುಖ ಸಿದ್ಧಾಂತದ ಚರ್ಚೆಗೆ ಅವಕಾಶ ನೀಡುತ್ತದೆ. ಇದು ಆ ವಚನ:

ಅಂಗವ ಮರೆದವಂಗೆ ಅಂಗದ ಹಂಗೇಕೋ?
ಅರಿವ ಕಂಡವಂಗೆ ಕುಱುಹಿನ ಹಂಗೇಕೋ?
ತಾನು ತಾನಾದವಂಗೆ ಧ್ಯಾನದ ಹಂಗೇಕೋ?
ಮನ ಮುಗ್ಧವಾದವಂಗೆ ಮಾನವರ ಹಂಗೇಕೋ?
ಆಸೆಯನಳಿದವಂಗೆ ರೋಷದ ಹಂಗೇಕೋ?
ಕಾಮನ ಸುಟ್ಟವಂಗೆ ಕಳವಳದ ಹಂಗೇಕೋ?
ನಡೆಗೆಟ್ಟವಂಗೆ ನುಡಿಯ ಹಂಗೇಕೋ?
ನಿಶ್ಚಿಂತನಾದವಂಗೆ ಉಚ್ಛರಣೆಯ ಹಂಗೇಕೋ?
ಬಯಲು ಬಯಲಾದವಂಗೆ ಭಾವದ ಹಂಗೇಕೋ?
ತನ್ನ ಮರೆದು ನಿಮ್ಮನರಿದ ಶರಣಂಗೆ ಅಲ್ಲಿಯೇ ಐಕ್ಯ ಕಂಡೆಯಾ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ[9]

ಒಂದೊಂದು ಪ್ರಶ್ನೆ ಇಲ್ಲಿಅರ್ಥಗರ್ಭಿತವಾಗಿದೆ: ಎಲ್ಲ ಪ್ರಶ್ನೆಗಳಿಗೆ ಉತ್ತರ ‘ಇಲ್ಲ’ ಎಂದೇ ಬರುವುದು. ಆದರೆ ಒಂದೊಂದು ಮಾತನ್ನೂ ಮಥನಿಸಿ ನೋಡಬೇಕಾಗುತ್ತದೆ; ಹಾಗೆ ನೋಡಿದಾಗ ಅಥವಾ ಹಾಗೆ ನೋಡುವವರಿಗೆ ಪ್ರಶ್ನೆಗಳಿಗುತ್ತವಾದ ‘ಇಲ್ಲ’ ಸರಿಯೆನಿಸುತ್ತದೆ. ಅನುಭಾವ ಅಳವಟ್ಟಾಗ ಈ ವಚನದಲ್ಲಿ ಅಡಗಿರುವ ಶರಣರ ಆಧ್ಯಾತ್ಮ ಜೀವನದ ಚರಿತ್ರೆ ವೇದ್ಯವಾಗುವುದು. ಈ ಸ್ಥಿತಿ ಒಮ್ಮಿಗೆ ಬಂದುದಲ್ಲ.

ಎಲ್ಲಕ್ಕಿಂತ ಮಿಗಿಲಾಗಿ ಈ ವಚನದ ಎರಡನೆಯ ಮಾತಾಗಿರುವ “ಅರಿವ ಕಂಡವಂಗೆ ಕುರಿಹಿನ ಹಂಗೇಕೆ? ಎಂಬುದು ಗಮನಾರ್ಹವಾಗಿದೆ; ಸ್ಥಾಪಿತ ಒಂದು ತತ್ವಕ್ಕೆ ಸವಾಲಾಗಿದೆ.

ಲಿಂಗಮ್ಮ ಬಹು ಎತ್ತರಕ್ಕೆ ನಿಂತು ಹೇಳಿದ ಮಾತಿದು. ಇದರಂತೆ ಅಲ್ಲಮಪ್ರಭುವೂ ಹೇಳಿದ್ದುಂಟು.

ಇನ್ನೊಂದು ಮಾತು: ಈ ವಚನದ ಅಡಿಟಿಪ್ಪಣಿಯಲ್ಲಿ ಕೆ೫೨೫ ಮತ್ತು ೪೮ ಆ ತಾಡವೋಲೆಗಳಲ್ಲಿ ಈ ಸಾಲು ಇಲ್ಲವೆಂದು ಹೇಳಿದೆ. ಹಾಗಾದರೆ ಇದು ಪ್ರಕ್ಷಿಪ್ತವೇ? ಶುದ್ಧ ಮಾತೃಕೆಯಾಗಿ ಸ್ವೀಕರಿಸಿದ ಪ್ರತಿಯಲ್ಲಿ ಈ ಸಾಲು ಇದೆ ಎಂದರೆ ಪ್ರಕ್ಷಿಪ್ತ ಹೇಗಾಗುವುದು? ಪ್ರಕ್ಷಿಪ್ತ ಅಲ್ಲವೆಂದು ಇಟ್ಟುಕೊಂಡರೆ ಅರಿವ ಕಂಡವನಿಗೆ ಐಕ್ಯ ಸ್ಥಲದಲ್ಲಿ ನಿಂದವನಿಗೆ ಕುಱುಹುಬೇಡವೆಂದು ಅರ್ಥೈಸಬೇಕೇ? ಇಲ್ಲ. ಹಾಗೆಯೇ ಅರ್ಥವಾಗುತ್ತದೆ. ಅಲ್ಲಮಪ್ರಭು, ಲಿಂಗಮ್ಮ ಮುಂತಾದವರು ಲಿಂಗಧರಿಸಿರಲಿಲ್ಲವೇ? ಸ್ವಯಂಲಿಂಗಿಯು ತಾನಾಗಿರುವೆನೆಂದು ಹೇಳಿದ ಸಿದ್ಧರಾಮನಿಗೆ ‘ಆಕಾಶದಲ್ಲಿ ಹಾರುವ ಪಟಕ್ಕಾದರೂ ಸೂತ್ರಬೇಕೆಂದು’ ಒತ್ತಾಯದಿಂದ ಲಿಂಗ ಕಟ್ಟಿದ್ದೇಕೆ?

ಇನ್ನೊಂದು ವಿಚಾರವೂ ಇದೆ: ಷಡುಸ್ಥಲದ ಆಚಾರ ಸಮಸಮುಚ್ಚಯವಾದುದು. ಶರಣ ಭಕ್ತಸ್ಥಲದಿಂದ ಐಕ್ಯಸ್ಥಲದವರೆಗೆ ಓಡಾಡುತ್ತಿರಬಹುದು. ಅಯಾ ಅವಸ್ಥೆಗೆ ಆಯಾ ಸ್ಥಲ. ಇದರಲ್ಲಿಯೂ ಒಂದೊಂದು ಸ್ಥಲವನ್ನು ವಿಶೇಷವಾಗಿ ಮಾಡಿಕೊಂಡವರೂ ಉಂಟು. ಇದಕ್ಕೆ ವಚನಗಳೇ ಆಧಾರಗಳಾಗಿವೆ. ಆ ವಿಶೇಷತೆಯಿದ್ದರೂ ಇನ್ನಿತರ ಸ್ಥಲ ಆತ ಬಿಟ್ಟಿರುವನೆಂದಲ್ಲ. ಹೀಗಿರುವಾಗ ಕುಱುಹು ಅವಶ್ಯವಾದುದೇ. ಆದರೆ ಸಾಮರಸ್ಯ ಸಾಧಿಸಿದವನಿಗೆ ಕುಱುಹು(ಇಷ್ಟಲಿಂಗ) ಬೇಕಿಲ್ಲ ಎಂಬ ವಾದವನ್ನೂ ಅಲ್ಲಗೆಳೆಯುವಂತಿಲ್ಲ. ಸಾಮರಸ್ಯಕ್ಕೆ ಸಾಧನವಾದುದು, ಅದು. ಸಾಮರಸ್ಯ ಸಿದ್ಧಿಸಿದ ಬಳಿಕ ಅದರ ಅವಶ್ಯಕತೆ ಏಕೆ?, ‘ಲಿಂಗವೆನ್ನೆ ಲಿಂಗೈಕ್ಯವೆನ್ನೆ’ ಎಂಬ ಮಾತು ಸಾಮರಸ್ಯವೇ; ಮಹಾದೇವಿಯಕ್ಕನ ‘ಲಿಂಗವೆನ್ನೆ’ ಎಂಬ ಮಾತಿನಲ್ಲಿ ಕುಱುಹಿನ ಹಂಗೇಕೆ? ಕುಱುಹು ಈ ಹಂತದಲ್ಲಿ ಏಕೆ ಎಂಬ ಧ್ವನಿ ಅಡಗಿಲ್ಲವೇ? ಇಂಥ ಒಂದು ಹಂತದಲ್ಲಿ ಇಷ್ಟಲಿಂಗದ ಅವಶ್ಯಕತೆ ಇಲ್ಲವೆನ್ನುವವರೂ ಆ ಕಾಲದಲ್ಲಿದ್ದರು; ಎಲ್ಲಹಂತದಲ್ಲಿಯೂ ಶರೀರ ಬಿದ್ದು ಹೋಗುವವರೆಗೂ ಇಷ್ಟಲಿಂಗ ಇರಬೇಕು ಎನ್ನುವವರೂ ಇದ್ದರು ಎಂಬುದು ಶರಣರ ವಚನಗಳಿಂದಲೂ ತಿಳಿದುಬರುವುದು. ಈ ವಿಷಯದಲ್ಲಿ ಅವರು ಒಂದು ನಿರ್ಣಯಕ್ಕೆ ಬಂದಂತೆ ಕಾಣುವುದಿಲ್ಲ. ಲಿಂಗಮ್ಮ ಅರಿವ ಕಂಡ ಬಳಿಕ ಕುರುಹಿನ ಅವಶ್ಯಕತೆ ಇಲ್ಲವೆನ್ನುವವರಲ್ಲಿ ಒಬ್ಬಳಾಗಿದ್ದಳು. ಆದರೆ ಅಂಥವರು ಲಿಂಗ ಧರಿಸಿದ್ದರೋ ಇಲ್ಲವೋ ಎಂಬುದನ್ನು ತಿಳಿಯಲಿಕ್ಕೆ ಯಾವ ಆಧರಗಳೂ ಇಲ್ಲ.

[1] ಅದೇ ಪುಟ ೨೩೩, ವಚನ ೧೨.

[2] ಅದೇ ಪುಟ ೨೩೧, ವಚನ ೧೦.

[3] ಅದೇ ಪುಟ ೨೩೧, ವಚನ ೯.

[4] ಅದೇ ಪುಟ ೨೩೩, ವಚನ ೧೩.

[5] ಅದೇ ಪುಟ ೨೩೧, ವಚನ ೧೮.

[6] ಅದೇ ಪುಟ ೨೨೮, ವಚನ ೨.

[7] ಅದೇ ಪುಟ ೨೨೭, ವಚನ ೧.

[8] ಅದೇ ಪುಟ ೨೬೨, ವಚನ ೨೯.

[9] ಅದೇ ಪುಟ ೨೩೮, ವಚನ ೨೭.