ಉಳ್ಳೂರ್ಮಲಯಾಳಿ ಭಾಷೆಯ ಹಿರಿಯ ಕವಿ. ಅವರದು ಸುಸಂಸ್ಕೃತ ವ್ಯಕ್ತಿತ್ವ. ಪ್ರೀತಿ, ಪರೋಪಕಾರದ ಹಂಬಲ, ಹೃದಯವನ್ನು ತುಂಬಿದಾಗ ಬಾಳೆಲ್ಲ ಬೆಳಕಾಗುತ್ತದೆ ಎಂದು ಸಾರಿದರು

ಉಳ್ಳೂರ್

ಮಲಯಾಳದ ಕವಿಗಳಲ್ಲಿ ಸರ್ವಶ್ರೇಷ್ಠರೂ, ಭಾಷಾಭಿಮಾನಿಗಳೂ, ದೇಶಾಭಿಮಾನಿಗಳೂ ಆಗಿದ್ದ ಹಿರಿಯ ಜೀವ ಉಳ್ಳೂರ್ ಎಸ್. ಪರಮೇಶ್ವರ ಅಯ್ಯರ್. ಕೇರಳದ ಜನರಿಗೆ ‘ಉಳ್ಳೂರ್’ ಎಂದೇ ಪರಿಚಿತರಾದವರು. ಆಧುನಿಕ ಮಲಯಾಳ ಕಾವ್ಯದಲ್ಲಿ ಒಂದು ಹೊಸ ಪಂಥವನ್ನು ಹುಟ್ಟುಹಾಕಿ ಮಲಯಾಳ ಭಾಷಾಸಾಹಿತ್ಯದ ಬೆಳವಣಿಗೆಗಾಗಿ ತಾವು ಇರುವವರೆಗೂ ಶ್ರಮಿಸಿದ ಮಹಾಕವಿ. ಹುಟ್ಟು ತಮಿಳರಾಗಿ ಸಂಸ್ಕೃತದ ಪರಂಪರೆಯಲ್ಲಿ ಬೆಳೆದು ಬಂದವರಾದರೂ ಅಜೀವ ಪರ್ಯಂತ ಮಲೆಯಾಳಕ್ಕಾಗಿ ತಮ್ಮನ್ನೇ ಅರ್ಪಿಸಿಕೊಂಡ ಹಿರಿಯ ಪಂಡಿತರು ಉಳ್ಳೂರರು.

ಬಾಲ್ಯ

ಕೇರಳದ ಚಂಗನಾಶೇರಿ ಗ್ರಾಮದಲ್ಲಿ ೧೮೭೭ ರ ಜೂನ್ ತಿಂಗಳ ಐದರಂದು ಉಳ್ಳೂರರು ಜನಿಸಿದರು.ಕೆಲಕಾಲ ಶಾಲಾ ಅಧ್ಯಾಪಕರೂ, ಮಲಯಾಳದ ಶಾಲೆಗಳ ಪರೀಕ್ಷಾಧಿಕಾರಿಗಳೂ ಆಗಿದ್ದ ಸುಬ್ರಹ್ಮಣ್ಯ ಅಯ್ಯರ್ ಇವರ ತಂದೆ. ನಾವಾಯ್‌ಕ್ಕುಳಂ ಎಂಬ ಗ್ರಾಮದ ಭಗವತಿಯ ಮ್ಮಾಳ್ ಮಹಾಕವಿಯ ತಾಯಿ. ಇವರದು ಮೊದಲಿಗೆ ಉಳ್ಳೂರಲ್ಲಿ ನೆಲೆಸಿದ್ದ ಮಧ್ಯಮ ವರ್ಗದ ಕುಟುಂಬ. ಕೌಶಿಕ ಗೋತ್ರದಲ್ಲಿ ಹುಟ್ಟಿದ ಮಹಾಕವಿಗೆ ಅದು ಅಭಿಮಾನದ ವಿಷಯವಾಗಿತ್ತು. ಕ್ಷತ್ರಿಯತ್ವವೂ ಬ್ರಾಹ್ಮಣತ್ವವೂ ಒಂದೆಡೆ ಸೇರಿದ್ದ ವಿಶ್ವಾಮಿತ್ರನ ಸಂತಾನ ಪರಂಪರೆಯವನೆಂದು ಉಳ್ಳೂರರು ಸಂದರ್ಭ ಬಂದಾಗಲೆಲ್ಲ ಹೇಳುತ್ತಿದ್ದರು.

ಚಿಕ್ಕ ವಯಸ್ಸಿನಲ್ಲೆ ಉಳ್ಳೂರರಿಗೆ ತನ್ನ ಅಜ್ಜಿಯಿಂದ ರಾಮಾಯಣ, ಮಹಾಭಾರತಾದಿ ಕಥೆಗಳ ಪರಿಚಯವಾಯಿತು. ತಾಯಿ ಅಧ್ಯಾತ್ಮ ರಾಮಾಯಣ, ಮಲಯಾಳಂ ಅಟ್ಟಕ್ಕಥೆಗಳು, ತುಳ್ಳಲ್ ಕವಿ ಕುಂಜನ್ ನಂಬಿಯಾರ್‌ನ ತುಳ್ಳಲ್‌ಗಳನ್ನು ಪರಿಚಯ ಮಾಡಿದಳು. ಅಜ್ಜಿಯಿಂದಲೆ ಮಹಾಕವಿಯ ಅಭಿರುಚಿಗಳ ಪಾಲನೆ, ಪೋಷಣೆ. ವೆಂಕಟರಾಮಯ್ಯರ್, ಉಳ್ಳೂರರ ತಾತ. ಅವರಿಗೆ ಉಳ್ಳೂರರೆಂದರೆ ಪರಮಪ್ರಿಯ. ಉಳ್ಳೂರರಿಗೂ ತಾತ ಎಂದರೆ ಆದರ. ವೆಂಕಟರಾಮಯ್ಯರ್ ಧೈರ್ಯಶಾಲಿಗಳೂ, ಸಾಹಸಿಗಳೂ ಆಗಿದ್ದರು. ಉಳ್ಳೂರರಲ್ಲೂ ಆ ಗುಣಗಳು ಮೈಗೂಡಿ ಬಂದಿದ್ದವು.

ವಿದ್ಯಾಭ್ಯಾಸ

ಐದನೆ ವಯಸ್ಸಿನಲ್ಲಿ ಉಳ್ಳೂರರನ್ನು ಶಾಲೆಗೆ ಕಳುಹಿಸಲಾಗಿತ್ತು. ಆರಂಭದಲ್ಲಿ ತಂದೆಯೇ ಗುರು. ಮುಂದೆ ಕಳ್ಳಾರ್ ಕೋಡೆ ಚಕ್ರಪಾಣಿ ವಾರಿಯರ್ ಎಂಬುವರು ಉಳ್ಳೂರರಿಗೆ ಸಂಸ್ಕೃತ ಭಾಷೆ ಕಲಿಸಿದರು. ಎಂಟನೆ ವಯಸ್ಸಿಗೆ ಸಂಸ್ಕೃತದ ಮಹಾಕಾವ್ಯಗಳನ್ನೋದಲು ಮೊದಲು ಮಾಡಿದರು. ಇದೇ ಸಮಯದಲ್ಲಿ ತಂದೆ ವ್ಯಾಕರಣವನ್ನು ಕಲಿಸಿದರು. ಅನಂತರ ಉಳ್ಳೂರರು ಸಂಸ್ಕೃತ ಸಾಹಿತ್ಯವನ್ನು ಅಭ್ಯಾಸ ಮಾಡಿದರು. ಹೇಳಿಕೊಟ್ಟದ್ದನ್ನು ತಕ್ಷಣ ಒಪ್ಪಿಸಿಬಿಡುವ ಕಲೆ ಮಹಾಕವಿಗೆ ಸಿದ್ಧಿಸಿತ್ತು. ಓದುವುದರಲ್ಲಿ, ಬರೆಯುವುದರಲ್ಲಿ ಮಹಾಶ್ರದ್ಧೆ, ಹೊಸ ವಿಚಾರಗಳನ್ನು ತಿಳಿದುಕೊಳ್ಳುವುದು ಕುತೂಹಲ.

ಉಳ್ಳೂರರು ಇಂಗ್ಲಿಷ್ ಕಲಿಯುವಿಕೆ ಪ್ರಾರಂಭಿಸಿದ್ದು ಅವರ ಹತ್ತನೆ ವಯಸ್ಸಿನಲ್ಲಿ ಚಂಗನಾಶೇರಿಯ ಡಿಸ್ಟ್ರಿಕ್ಟ್ ಇಂಗ್ಲಿಷ್ ವಿದ್ಯಾಲಯದಲ್ಲಿ. ಒಂದೇ ವರ್ಷದಲ್ಲಿ ಎರಡು ತರಗತಿಗಳನ್ನು ಮುಗಿಸಿದರು. ೧೮೯೦ರಲ್ಲಿ ತಿರುವನಂತಪುರದ ಫೋರ್ಟ್ ಹೈಸ್ಕೂಲ್ ಸೇರಿದರು.

ಪರಮೇಶ್ವರ ಅಯ್ಯರ್ ಲೋಯರ್ ಫೋರ್ತಿನಲ್ಲಿ ಓದುತ್ತಿದ್ದಾಗ ಅವರ ತಂದೆ ತೀರಿಕೊಂಡರು. ದೊಡ್ಡ ಕುಟುಂಬದ ರಕ್ಷಣೆಯ ಭಾರವನ್ನು ಉಳ್ಳೂರರೇ ಹೊರಬೇಕಾಯಿತು. ಆ ಸಂದರ್ಭದಲ್ಲಿ ಅವರಿಗೆ ನೆರವಾದವರು ಅವರ ಚಿಕ್ಕಮ್ಮ. ಆಕೆ ಶ್ರೀಮಂತರ ಮನೆಗಳಲ್ಲಿ ಅಡಿಗೆ ಕೆಲಸ ಮಾಡಿ ಸಂಪಾದಿಸಿ ತರುತ್ತಿದ್ದ ವರಮಾನ ದಿಂದಷ್ಟೆ ಸಂಸಾರ ತೂಗಿಸಬೇಕಾಗಿತ್ತು. ಆ ವರಮಾನ ಕುಟುಂಬದ ಆಹಾರಕ್ಕೂ ಸಾಲುತ್ತಿರಲಿಲ್ಲ. ಈ ವರ್ಷಗಳಲ್ಲಿ ಉಳ್ಳೂರರು ಬಡತನವನ್ನು ಅನುಭವಿಸಿದರು. ಉಳ್ಳೂರರಿಗೆ ಉಡಲು ಸರಿಯಾದ ಬಟ್ಟೆ ಇಲ್ಲ. ಕೇವಲ ಒಂದು ಪಂಚೆ ಅವರ ಉಡಿಗೆ. ಸೀಮೆಎಣ್ಣೆ ತೆಗೆದುಕೊಳ್ಳುವುದಕ್ಕೆ ದುಡ್ಡಿಲ್ಲದೆ ಹಣದ ಅಭಾವದಿಂದ ಎಷ್ಟೋ ದಿನ ಬೀದಿ ದೀಪದ ಕೆಳಗೆ ಓದಿ ಕಾಲನೂಕಿದರು. ವ್ಯಾಸಂಗದಲ್ಲಿನ ನಿಷ್ಠೆ ಬಿಡಲಿಲ್ಲ. ಹದಿನಾರನೆಯ ವಯಸ್ಸಿನಲ್ಲಿ ಮೆಟ್ರಿಕ್ಯುಲೇಷನ್ ಮುಗಿಸಿದರು. ೧೮೯೫ ರಲ್ಲಿ ಎಫ್.ಎ. ಪರೀಕ್ಷೆಯಲ್ಲೂ ೧೮೯೭ ರಲ್ಲಿ ಬಿ.ಎ. ಪರೀಕ್ಷೆಯಲ್ಲೂ ಉತ್ತೀರ್ಣರಾದರು. ತರಗತಿಗಳಲ್ಲಿ ಎಲ್ಲ ವಿಷಯದಲ್ಲಿ ಮೊದಲಿಗರು ಉಳ್ಳೂರರು. ಆದರೆ ಅವರ ಕೈ ಬರವಣಿಗೆ ಅಷ್ಟು ಚೆನ್ನಾಗಿರುತ್ತಿರಲಿಲ್ಲ. ಅವರಿಗೂ ಇದು ಸಹಿಸದ ವಿಷಯವೇ. ಒಳ್ಳೆ ಕೈಬರಹ ಇಲ್ಲದೆ ಬಿ.ಎ. ಪದವಿಯ ಇಂಗ್ಲಿಷ್ ವಿಷಯದಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾದರು. ತರಗತಿಯಲ್ಲಿ ಮೊದಲಿಗರಿರುತ್ತಿದ್ದ ಅವರಿಗೆ ಎರಡನೆ ದರ್ಜೆ ಕೊಡುವುದಾದರೂ ಹೇಗೆ ಎಂದು ಪರೀಕ್ಷಾಧಿಕಾರಿಗಳೇ ಪ್ರಸ್ತಾಪಿಸಿದ್ದರಂತೆ! ಒಳ್ಳೆ ಕೈ ಬರಹ ಇದ್ದವರನ್ನು ಕಂಡರೆ ಉಳ್ಳೂರರಿಗೆ ತುಂಬಾ ಮಮತೆ. ಮುಂದೆ ತಮ್ಮ ಮಕ್ಕಳ ಕೈ ಬರಹ ಚೆನ್ನಾಗಿರುವವಂತೆ ಶಿಕ್ಷಣ ಕೊಟ್ಟರು.

ಎಫ್.ಎ. ಪರೀಕ್ಷೆಗೆ ಓದುವಾಗಲೆ ಉಳ್ಳೂರರು ಇಂಗ್ಲಿಷ್ ಕವಿತೆಗಳನ್ನು ಕಟ್ಟುತ್ತಿದ್ದರು. ಕೆಲ ಇಂಗ್ಲಿಷ್ ಕವನಗಳನ್ನು ಅನುವಾದಿಸತೊಡಗಿದರು. ಈ ಕಾಲದಲ್ಲಿ ಮಲಯಾಳದ ಪ್ರಾಧ್ಯಾಪಕ ರಾಮಕುರುಪ್ ಹಾಗೂ ಇಂಗ್ಲಿಷ್ ಪ್ರಾಧ್ಯಾಪಕ ಸಿ.ಎಸ್.ಬಾಯಿಲ್ ಮಹಾಕವಿಯ ಮೇಲೆ ಪ್ರಭಾವ ಬೀರಿದರು. ಈ ಸಂದರ್ಭದಲ್ಲೇ ಉಳ್ಳೂರರಿಗೆ ಕವಿಪಂಡಿತ ಕೇಶವಶಾಸ್ತ್ರಿಗಳೆಂಬುವರ ಪರಿಚಯವಾಯಿತು.

ಮದುವೆ-ಉದ್ಯೋಗ

ಆಗಿನ ಕಾಲದ ಸಂಪ್ರದಾಯದಂತೆ ಉಳ್ಳೂರರಿಗೆ ಹದಿನೈದನೆಯ ವಯಸ್ಸಿನಲ್ಲಿ ವನಾಂಚೇರಿಯಲ್ಲಿನ ಅನಂತಲಕ್ಷ್ಮಿ ಅಮ್ಮಾಳರನ್ನು ಕೊಟ್ಟು ವಿವಾಹವಾಯಿತು. ಆದರೆ ಅವರ ದುರ್ದೈವ. ೧೯೦೩ ರಲ್ಲಿ ಅನಂತಲಕ್ಷ್ಮಿ ತೀರಿಕೊಂಡರು. ಮತ್ತೆ ವಡಕ್ಕೇರಿಯ ನಾಗರ್ ಕೋಯಿಲ್ ವೈದ್ಯನಾಥಯ್ಯರರ ಪುತ್ರಿ ಸುಬ್ಬಮ್ಮಾಳರನ್ನು ಮದುವೆಯಾದರು.

ಬಿ.ಎ. ಮುಗಿಸಿದನಂತರ ಕುಟುಂಬದ ರಕ್ಷಣೆಗೆಂದು ಉಳ್ಳೂರರು ಉದ್ಯೋಗ ಹಿಡಿದರು. ತಿರುವನಂತಪುರದ ಸೆಂಟ್ರಲ್ ಹೈಸ್ಕೂಲಿನಲ್ಲಿ ಅಧ್ಯಾಪಕರಾದರು. ಕೆಲದಿನಗಳಲ್ಲಿ ಅಲ್ಲಿನ ಮುಖ್ಯೋಪಾಧ್ಯಾಯರಾದರು. ಆಗಿನ್ನೂ ಅವರಿಗೆ ಇಪ್ಪತ್ತೊಂದು ವರ್ಷ ವಯಸ್ಸು. ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದ ಉಳ್ಳೂರ್ ಉತ್ತಮ ಅಧ್ಯಾಪಕರೆಂದು ಹೆಸರಾದರು. ಈ ಕೆಲಸ ಸಿಕ್ಕಿದ ಕೂಡಲೆ ತಮ್ಮ ಚಿಕ್ಕಮ್ಮನನ್ನು ಇತರರ ಮನೆಯ ಅಡಿಗೆ ವೃತ್ತಿಯಿಂದ ಬಿಡಿಸಿದರು. ಓದು ಮುಂದುವರಿಸಿ ೧೯೦೩ ರಲ್ಲಿ ಬಿ.ಎಲ್. ಪರೀಕ್ಷೆಯಲ್ಲೂ ೧೯೦೪ ರಲ್ಲಿ ತಮಿಳು ಮಲಯಾಳಗಳ ಎಂ.ಎ. ಪರೀಕ್ಷೆಯಲ್ಲೂ ಉತ್ತೀರ್ಣರಾದರು.

ತಾವು ಓದುತ್ತಿದ್ದ ದಿನಗಳಲ್ಲೆ ಇಂಗ್ಲಿಷ್ ಭಾಷೆಯ ಮೇಲೆ ಮಹಾಕವಿ ಒಲವು ತೋರಿಸಿದ್ದರು.ಹಲವಾರು ಯೂರೋಪಿಯನ್ ಗ್ರಂಥಗಳು, ಷೇಕ್ಸ್‌ಪಿಯರ್ ಮತ್ತು ರವೀಂದ್ರನಾಥ ಠಾಕೂರರ ಪುಸ್ತಕಗಳ ಅವಲೋಕನ ನಡೆಸಿದ್ದರು. ಶ್ರೀ ರಾಮಕೃಷ್ಣ ಪರಮಹಂಸ ಹಾಗೂ ಸ್ವಾಮಿ ವಿವೇಕಾನಂದರ ಉಪದೇಶಗಳಿಂದ ಭಾರತೀಯ ಸಂಸ್ಕೃತಿಯ ಮಹತ್ವದ್ದಾದ ದೀರ್ಘದರ್ಶನದ ಪರಿಚಯ ಮಾಡಿಕೊಂಡರು. ಕಾವ್ಯಾಭ್ಯಾಸ, ಲೇಖನ ರಚನೆ, ಕವಿತೆಗಳನ್ನು ಕಟ್ಟುವುದು ಮಹಾಕವಿಗೆ ವಿದ್ಯಾರ್ಥಿಯಾಗಿದ್ದಾಗಲೇ ರೂಢಿಯಲ್ಲಿ ಬಂದಿತ್ತು.

ಎಂ.ಎ. ಮುಗಿಸಿದ ನಂತರ ಸೆನ್ಸಸ್ ಕಮೀಶನರರ ಕಛೇರಿಯಲ್ಲಿ ಗುಮಾಸ್ತೆ ಹುದ್ದೆಗೆ ಸೇರಿದರು. (ಸೆನ್ಸಸ್ ಎಂದರೆ ಜನಗಣತಿ. ಒಂದು ದೇಶದಲ್ಲಿ ಅಥವಾ ಒಂದು ರಾಜ್ಯದಲ್ಲಿ ಎಷ್ಟು ಜನರಿದ್ದಾರೆ ಎಂದು ಖಚಿತವಾಗಿ ಗೊತ್ತಾಗಬೇಕು, ಅಲ್ಲವೆ? ಇದಕ್ಕಾಗಿ ಹತ್ತು ವರ್ಷಕ್ಕೊಮ್ಮೆ ಜನರನ್ನು ಎಣಿಸಲು ಮತ್ತು ಅವರ ವಿಷಯ ಮಾಹಿತಿ ಪಡೆಯಲು ಸರ್ಕಾರ ವ್ಯವಸ್ಥೆ ಮಾಡುತ್ತದೆ.) ಅಲ್ಲಿನ ಅಧಿಕಾರಿ ಸುಬ್ರಹ್ಮಣ್ಯ ಅಯ್ಯರರ ಗೌರವಕ್ಕೆ ಪಾತ್ರರಾದರು. ಸೂಕ್ಷ್ಮಗ್ರಾಹಿಯಾಗಿದ್ದ ಉಳ್ಳೂರ್ ಕೆಲದಿನಗಳಲ್ಲೆ ಹಿರಿಯಗುಮಾಸ್ತೆ ಆದರು. ಯುವಕರಾಗಿದ್ದ ಅವರು ಶೀಘ್ರದಲ್ಲೆ ಸೆನ್ಸಸ್ ವರದಿ ತಯಾರಿಸಿದರು. ಅದರ ಮುನ್ನುಡಿಯಲ್ಲಿ ಅವರ ಬುದ್ಧಿಶಕ್ತಿ ಸ್ಪಷ್ಟವಾಗಿತ್ತು. ವರದಿಯನ್ನು ಮಲಯಾಳದಲ್ಲೂ ತಯಾರಿಸಿದ್ದರು.

ಉದ್ಯೋಗದಲ್ಲಿ ಪ್ರಗತಿ

ಉಳ್ಳೂರರ ಬಗ್ಗೆ ಕೇಳಿದ್ದ ದಿವಾನ್ ಸಿ.ಪಿ. ಮಾಧವರಾವ್ ಅವರನ್ನು ಕರೆಸಿ ತಿರುವಾಂಕೂರು ಸಂಸ್ಥಾನದ ಪ್ರಾಚೀನ ಚರಿತ್ರೆ ಬರೆಯಲು ತಿಳಿಸಿದರು. ಉಳ್ಳೂರರು ಪಾದರಸವಲ್ಲವೆ? ಒಂದೇ ವಾರದಲ್ಲಿ ಚರಿತ್ರೆ ಸಿದ್ಧವಾಯಿತು. ದಿವಾನರಿಗೆ ಮಹದಾಶ್ಚರ್ಯ! ತಕ್ಷಣವೇ ಪದ್ಮನಾಭಪುರದ ಹುಜೂರ್ ಮುಖ್ಯ ಗುಮಾಸ್ತೆಯಾಗಿ ನಿಯಮಿಸಿದರು. ೧೯೦೬ ರಲ್ಲಿ ಉದ್ಯೋಗದಲ್ಲಿ ಬಡ್ತಿ ದೊರೆತು ಮ್ಯಾಜಿಸ್ಟ್ರೇಟ್ ಆದರು. ಆದರೆ ಸ್ವಲ್ಪ ದಿನಗಳಲ್ಲಿ ಹೊಸ ದಿವಾನರಾಗಿ ಬಂದ ಗೋಪಾಲಾಚಾರ‍್ಯರಿಗೆ ಹುಜೂರ್‌ನಲ್ಲಿ ಕೆಲಸ ಮಾಡಲು ಉಳ್ಳೂರರೆ ಬೇಕಾಯಿತು. ೧೯೧೦ರಲ್ಲಿ ಹುಜೂರ್‌ನಲ್ಲಿ ಮಹಾಕವಿಯು ಅಸಿಸ್ಟೆಂಟ್ ಸೆಕ್ರೆಟರಿ ಹುದ್ದೆ ಗಳಿಸಿದರು.ಮುಂದೆ ಹದಿನೇಳು ವರ್ಷ ಕಾಲ ತಮಗೆ ಬಂದ ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಕುಶಾಗ್ರಮತಿಯಾಗಿದ್ದ ಅವರಿಗೆ ಯಾವ ಕೆಲಸವೂ ಕಠಿಣವೆನಿಸಲಿಲ್ಲ. ದಿವಾನ್ ಕೃಷ್ಣನ್ ನಾಯರ್ ಬಳಿ ಖಾಸಗಿ ಕಾರ್ಯದರ್ಶಿಗಳಾಗಿ ಇದ್ದರು. ಕೆಲಕಾಲ ಮ್ಯೂಸಿಯಂನಲ್ಲಿ ನಿರ್ದೇಶಕರಾಗಿದ್ದರು. ಐದಾರು ವರ್ಷಕಾಲ ಗ್ರಂಥ ಪ್ರಚುರಣ ಕಾರ್ಯದಲ್ಲಿ ತೊಡಗಿದ್ದರು. ಐವತ್ತೆ ದನೆಯ ವಯಸ್ಸಿನಲ್ಲಿ ನಿವೃತ್ತರಾಗುವಾಗ ಲ್ಯಾಂಡ್ ರೆವಿನ್ಯೂ ಬೋರ್ಡಿನ ಆಕ್ಟಿಂಗ್ ಕಮೀಶನರಾಗಿದ್ದರು. ೧೯೨೬ ರಿಂದ ೧೯೩೨ ರವರೆಗೆ ತಿರುವನಂತಪುರದ ದಿವಾನ್ ಪೇಷ್ಕಾರ್ ಆಗಿದ್ದರು.

ಉಳ್ಳೂರರು ಕೆಲಸದಲ್ಲಿದ್ದ ದಿನಗಳಲ್ಲಿ ಪ್ರತಿ ಹಂತದಲ್ಲೂ ತಮ್ಮ ಸಾಮರ್ಥ್ಯ ತೋರಿದರು. ಯೋಗ್ಯತೆಗೆ ತಕ್ಕಂತೆಯೇ ಅವರಿಗೆ ದೊಡ್ಡ ಪದವಿಗಳು ದೊರೆತವು. ಬಂದುದರಲ್ಲಿ ತೃಪ್ತಿ ಪಡೆಯುವ ವಿಶೇಷ ಗುಣ ಅವರಲ್ಲಿತ್ತು. ಅತಿ ಮೋಹವಿಲ್ಲ. ತನಗೆ ಬರಬೇಕಾದ ಪದವಿ ಬೇರೊಬ್ಬರಿಗೆ ಬಂದರೂ ಯಾವ ಪ್ರತಿಕ್ರಿಯೆಯನ್ನೂ ತೋರುತ್ತಿರಲಿಲ್ಲ.

ಕಾವ್ಯಸೃಷ್ಟಿ

ಬಾಲ್ಯದಲ್ಲೆ ಮಹಾಕವಿಗೆ ಸಾಹಿತ್ಯ ಬಲುಪ್ರಿಯವಾದ ವಿಷಯ. ಬೆಳೆದಂತೆ ಅದೇ ಅವರ ಉಸಿರಾಯಿತು. ಸಮಾಜದಲ್ಲಿ ಒಬ್ಬ ಹಿರಿಯ ಅಧಿಕಾರಿ ಎನಿಸಿಕೊಂಡು ಗೌರವ ಪಡೆಯುವುದಕ್ಕಿಂತ ಮಲಯಾಳದ ಪ್ರಸಿದ್ಧ ಬರಹಗಾರರಾಗಿ ಹೆಸರಾಗಿದ್ದರು. ಅಂದರೆ ಅವರು ತಮ್ಮ ಕೆಲಸಕಾರ್ಯಗಳಲ್ಲಿ ಆಸಕ್ತಿ ತೋರುತ್ತಿರಲಿಲ್ಲ ಎಂದಲ್ಲ. ತನ್ಮಯತೆ ಅವರಿಗೆ ಸಿದ್ಧಿಸಿತ್ತು. ಸಾಹಿತ್ಯ, ಕಾವ್ಯರಚನೆ ಅಂತೆಯೇ.

ಲಲಿತ ಕೋಮಲವಾದ ಪದಗಳನ್ನು ಆರಿಸಿ, ಅದಕ್ಕೆ ಸಂಗೀತದ ಮಾಧುರ್ಯವನ್ನಿತ್ತು ಕಾವ್ಯರಚಿಸುವ ಪ್ರವೃತ್ತಿ ಉಳ್ಳೂರರದು. ಸಾಹಿತ್ಯದಂತೆಯೇ ಸಂಗೀತವೂ ಅವರಿಗೆ ಪ್ರಿಯವಾದ ವಿಷಯ. ಕರ್ನಾಟಕ ಸಂಗೀತವನ್ನು ಅನುಭವಿಸಿ ಕೇಳುವರು. ವೀಣಾನಾದದಲ್ಲಿ ಮೈಮರೆಯುವರು. ಸಂಸ್ಕೃತ ಭಾಷೆಯಲ್ಲಿ ಎಷ್ಟೇ ಪಾಂಡಿತ್ಯವಿದ್ದರೂ ಮಲಯಾಳ ಭಾಷೆಯ ಮೇಲೆ ಅವರಿಗೆ ಬಹು ಪ್ರೀತಿ. ಬಾಷಾಸಿದ್ಧಿಗೆ ತಪಸ್ಸು ಮಾಡಿ ಭಾಷಾಭಗೀರಥರೆನಿಸಿದ್ದರು. ಶಬ್ದಪ್ರಯೋಗದಲ್ಲಿ ಎತ್ತಿದ ಕೈ.

ಮಹಾಕವಿ ಕಾವ್ಯ ರಚನೆ ಆರಂಭ ಮಾಡಿದಾಗ ಮಲಯಾಳದ ಇನ್ನಿಬ್ಬರು ಮಹಾಕವಿಗಳಾದ ವಲ್ಲತೋಳ್, ಕುಮಾರನಾಶಾನ್ ತಮ್ಮ ಗಾನಸುಧೆಯಿಂದ ಕೇರಳೀಯರ ಮನತಣಿಸಿದ್ದರು. ಉಳ್ಳೂರರೂ ತಮ್ಮ ಕವಿತೆಗಳ ಮೂಲಕ ಮನೋವಿಕಾಸವನ್ನು ಸಾಧಿಸಲು ಅನುವು ಮಾಡಿದರು. ರಾಷ್ಟ್ರಪ್ರೇಮವನ್ನು ಪ್ರತಿಬಿಂಬಿಸುವ, ವಿಶ್ವಭ್ರಾತೃತ್ವವನ್ನು ಸಾರುವ ಕವನಗಳನ್ನು ಬರೆದರು. ಅವರ ಹಲವಾರು ಕವಿತೆಗಳು ಅಂದಿನ ಜನಪ್ರಿಯ ಮಲಯಾಳ ಪತ್ರಿಕೆಗಳಲ್ಲಿ ಪ್ರಕಟವಾದವು. ಅರ್ಧ ಸಂಸ್ಕೃತ, ಅರ್ಧ ಮಲಯಾಳವನ್ನು ಬಳಸುವ ಮಣಿಪ್ರವಾಳ ಶೈಲಿಯಲ್ಲೂ ಬರೆದರು. ಅಚ್ಚ ಮಲಯಾಳದಲ್ಲೂ ಕವನಗಳನ್ನು ರಚಿಸಿದರು. ವಲ್ಲತೋಳರು ದ್ರಾವಿಡ ವೃತ್ತಗಳಲ್ಲಿ ಕವಿತಾ ರಚನೆ ಮಾಡಿ ಕೇರಳೀಯರ ಪ್ರೀತಿಗೆ ಪಾತ್ರರಾಗಿರುವುದನ್ನು ಮನಗಂಡು ಆ ಬಗೆಯಲ್ಲೂ ಕವನಗಳನ್ನು ಬರೆದರು. ಅವರ ಕವಿತೆಗಳಲ್ಲಿ ವಿಶೇಷವಾದ ಪಾಂಡಿತ್ಯ ಕಾಣುತ್ತದೆ. ಪಂಡಿತಕವಿ ಎಂದೇ ಹೆಸರಾಗಿದ್ದರು. ಅವರು ರಚಿಸಿದ ಕವಿತೆಗಳು ನೂರೈವತ್ತೆರಡು. ಉದಾತ್ತಗುಣ, ಮಾನವನ ಇರುವಿಕೆಯ ಉದ್ದೇಶ, ಸೃಷ್ಟಿ ವೈಚಿತ್ರ್ಯಗಳನ್ನು ವಿವರಿಸಲು ಕಾವ್ಯ ಮಾಧ್ಯಮವನ್ನಾಗಿರಿಸಿಕೊಂಡಿದ್ದರು.

ಅರುಣೋದಯಂ, ರತ್ನಮಾಲ, ಅಮೃತಧಾರ, ಮಣಿಮಂಜೂಶ, ಹೃದಯ ಕೌಮುದಿ, ಕಿರಣಾವಲಿ, ಕಲ್ಪಶಾಖಿ, ತರಂಗಿಣಿ, ತಾರಾಹಾರಂ, ತಪ್ತಹೃದಯಂ ಇವು ಅವರ ಕವಿತಾ ಸಂಕಲನಗಳು.

‘ಮಳೈತ್ತುಳ್ಳಿ’ (ಮಳೆಹನಿ) ಎಂಬ ಕವನ ಉಳ್ಳೂರರ ಕಲಾವೈಭವಕ್ಕೆ ಸಾಕ್ಷಿ. ತಾರಾಹಾರ ಕವನ ಸಂಗ್ರಹದಲ್ಲಿನ ಈ ಕವಿತೆಯಲ್ಲಿ ಆಕಾಶದಿಂದ ನೆಲಕ್ಕೆ ಬೀಳಲಿರುವ ಮಳೆಹನಿಯನ್ನು ವರ್ಣಿಸುತ್ತಾರೆ. ಅದನ್ನು ವರ್ಣಿಸುತ್ತಲೇ ಮನುಷ್ಯನ ಜೀವನವನ್ನು ಚಿತ್ರೀಕರಿಸಲು ಯತ್ನಿಸುತ್ತಾರೆ. ‘ಉದ್ಬೋಧನಂ’  ಮೊದಲಾದ ಕವನಗಳಲ್ಲಿ ಸುಖವನ್ನು ಎಲ್ಲೋ ಹೊರಗಿದೆ ಎಂದು ಹುಡುಕುವುದು ದಡ್ಡತನ, ಅದು  ನಮ್ಮಲ್ಲಿಯೇ ಇದೆ ಎನ್ನುತ್ತಾರೆ ಮಹಾಕವಿ. ವಸುದೈವ ಕುಟುಂಬ ಎಂಬ ಕೃತಿಯಲ್ಲಿ ಉಪನಿಷತ್ತಿನ ಸಿದ್ಧಾಂತಗಳು ಮಾನವನ ಕುಟುಂಬದ ಮೇಲೆ ಹೇಗೆ ಪರಿಣಾಮ ಬೀರುತ್ತವೆಂಬುದನ್ನು ವಿವರಿಸುತ್ತಾರೆ. ಈ ಕೃತಿಗಳಲ್ಲೆಲ್ಲ ಅವರು ಹೇಳುವ ಮಾತು ಇದು. ಮನುಷ್ಯನ ಮನಸ್ಸಿನಲ್ಲಿ ಪ್ರೇಮವೂ ಇತರರಿಗೆ ಉಪಕಾರ ಮಾಡಬೇಕೆಂಬ ಆಕಾಂಕ್ಷೆಯೂ ಪ್ರಕಾಶಿಸಬೇಕು, ಇವುಗಳಿಂದ ಅವನ ಮನಸ್ಸಿಗೆ ಬೆಳಕು ಬಂದಾಗ ಸುತ್ತಲಿನ ಜಗತ್ತೆಲ್ಲ ಬೆಳಕಾಗುತ್ತದೆ, ಅವನಿಗೆ ಸುಖ ದೊರೆಯುತ್ತದೆ. ಕತ್ತಲಿದ್ದಾಗ ನಾವು ಏನು ಮಾಡುತ್ತೇವೆ? ಬೆಳಕು ಅಲ್ಲಿದೆ, ಇಲ್ಲಿದೆ ಎಂದು ಹುಡುಕುತ್ತ ಹೊರಟರೆ ಅಥವಾ ಬೆಳಕು ಬರಲಿ ಎಂದು ಹಂಬಲಿಸುತ್ತ ಕುಳಿತರೆ ಯಾವ ಪ್ರಯೋಜನವೂ ಇಲ್ಲ. ನಮ್ಮ ಕೈಯಲ್ಲಿ ದೀಪವಿದ್ದರೆ ನಾವು ಹೋದ ಕಡೆ ಎಲ್ಲ ಬೆಳಕು ಇರುತ್ತದೆ. ಹೃದಯ ಪರಿಶುದ್ಧವಾದವನಿಗೆ ಜೀವನವೆಲ್ಲ ಅಮೃತಸದೃಶವಾಗುತ್ತದೆ. ನಮ್ಮ ಸ್ವರ್ಗವನ್ನೂ ನಮ್ಮ ನರಕವನ್ನೂನಾವೇ ಸೃಷ್ಟಿಸಿಕೊಳ್ಳುತ್ತೇವೆ. ಅವರ ಆಶಾವಾದಿತ್ವ, ದೇಶಭಕ್ತಿ ಎಂದೂ ಕುಂದಲಿಲ್ಲ, ಅವರ ವಿಕಾಸಕ್ಕೆ ದಾರಿ ಮಾಡಿಕೊಟ್ಟಿದ್ದವು. ‘‘ನಾವು ಅಂತರಂಗವಾಗಿಯೂ ಬಹಿರಂಗವಾಗಿಯೂ ಶುದ್ಧಿಗೊಂಡಲ್ಲಿ ಹಿಂದೊಮ್ಮೆ ಸ್ವರ್ಗಸಮಾನವಾಗಿದ್ದ ಭಾರತ ಮತ್ತೆ ಸ್ವರ್ಗ ಸಮವಾದೀತು’’ ಎಂಬ ಮಹಾದಾಸೆಯನ್ನು ದೇಶಪ್ರೇಮ ಗೀತೆಗಳಲ್ಲಿ ಮಹಾಕವಿ ಹಾಡಿದರು. ಉಳ್ಳೂರರಿಗೆ ಜಾತಿ ಭೇದವಿರಲಿಲ್ಲ. ಹಿರಿಯಕಿರಿಯರೆಂಬ ತಾರತಮ್ಯವಿರಲಿಲ್ಲ. ‘‘ವಿಚಾರಧಾರ’’ ಎಂಬ ಕವಿತೆಯಲ್ಲಿ ಹರಿಜನ ಹುಡುಗಿಯೊಬ್ಬಳನ್ನು ಕುರಿತು ‘‘ಆಕೆ ದೇವರ ಸೃಷ್ಟಿಯಲ್ಲಿ ಬಂದವಳು. ಅವಳಿಗೂ ತನ್ನದೇ ಆದ ಅಂತಸ್ತಿದೆ’’ ಎಂದು ಬರೆದರು. ಮಹಾಕವಿ ಧಾರ್ಮಿಕಮೌಲ್ಯಗಳ ಗಾಯಕರಾಗಿದ್ದರು.

ಉಮಾಕೇರಳಂ

ಉಳ್ಳೂರರಿಗೆ ಅಪಾರ ಕೀರ್ತಿಯನ್ನು ಮಹಾಕವಿಪಟ್ಟವನ್ನು ತಂದುಕೊಟ್ಟ ಮಹಾಕಾವ್ಯ ‘‘ಉಮಾಕೇರಳಂ’’. ಮಲಯಾಳ ಮಹಾಕಾವ್ಯಗಳಲ್ಲಿ ಕವಿಗಳು ಪುರಾಣಗಳಿಂದ ಕತೆಗಳನ್ನಾರಿಸಿ ಸೇರಿಸುತ್ತಿದ್ದರು. ಈ ಪರಂಪರೆಯನ್ನು ಬದಲಿಸಿದರು ಉಳ್ಳೂರರು. ‘ಉಮಾಕೇರಳಂ’ ದಲ್ಲಿ ಕೇರಳದ ಚರಿತ್ರೆಯಲ್ಲಿ ಆಗಿ ಹೋದ ಕೆಲವು ಕಥಾನಕ ಘಟನೆಗಳನ್ನೊಳಗೊಂಡ ಇತಿಹಾಸ ಕಥೆಯನ್ನು ವಿವರಿಸಲಾಗಿದೆ. ಎರಡು ಸಾವಿರಕ್ಕಿಂತ ಹೆಚ್ಚಿನ ಶ್ಲೋಕಗಳನ್ನೊಳಗೊಂಡ ‘ಉಮಾಕೇರಳಂ’ ಗೆ ಮಲಯಾಳ ಸಾಹಿತ್ಯದಲ್ಲಿ ಪ್ರತ್ಯೇಕ ಸ್ಥಾನ. ಪದ್ಯಗಳಲ್ಲಿ ಬರುವ ದ್ವಿತೀಯಾಕ್ಷರ ಪ್ರಾಸದ ಅಗತ್ಯವಿಲ್ಲವೆಂಬುದನ್ನು ಕಂಡ ಮಹಾಕವಿ ಅದನ್ನು ಬಿಟ್ಟರು. ಈ ಹೊಸ ಬಗೆಯ ಕಾವ್ಯಕ್ಕೆ ಟೀಕೆಗಳು ಬಂದವು. ಆದರೆ ‘ಉಮಾಕೇರಳಂ’ ಸೂಸಿದ ಮಧುರ ಸೌರಭದ ಮುಂದೆ ಅವೆಲ್ಲ ನಿಷ್ಫಲವಾದವು.

ವೇದವ್ಯಾಸರೇ ನನ್ನ ಕಣ್ಣು ತೆರೆಸಿದ್ದು

ಮಹಾಕವಿಯು ಪಿಂಗಳ, ಕರ್ಣ ಭೂಷಣಂ, ಚಿತ್ರಶಾಲ, ಭಕ್ತಿ ದೀಪಿಕ ಮುಂತಾದ ಖಂಡಕಾವ್ಯಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ‘ಕರ್ಣಭೂಷಣಂ’ ಪ್ರಮುಖವಾದುದು. ನಮ್ಮ ಪುರಾಣಗಳ ಸಂಪತ್ತು ಹಾಗೂ ಪೌರಾಣಿಕ ವೈಭವವನ್ನು ಈ ಕಾವ್ಯದ ಮೂಲಕ ಸಾರಿದ್ದಾರೆ. ದಾನಶೀಲತೆ, ಸಹೃದಯತೆ, ಪೌರುಷ, ಗುರುಭಕ್ತಿಗಳ ಕೇಂದ್ರವಾದ ಕರ್ಣನ ನಡತೆಯನ್ನು ‘ಕರ್ಣ ಭೂಷಣಂ’ ನಲ್ಲಿ ವಿವರಿಸಿದ್ದಾರೆ. ಮಹಾಭಾರತದಲ್ಲಿ ಮಹಾಕವಿಗೆ ತುಂಬಾ ಆದರ. ಅದರ ಮೇಲಿನ ಆದರ ಗೌರವಗಳೇ ಕರ್ಣಭೂಷಣಂ ಕಾವ್ಯಕ್ಕೆ ಪ್ರೇರಣೆಯಾದವು. ‘‘ಯಾವ ಗ್ರಂಥವಿಲ್ಲದಿದ್ದರೂ ಸರಿಯೇ. ಮಹಾಭಾರತ ವೊಂದಿದ್ದರೆ ಸಾಕು. ನನ್ನನ್ನು  ಈ ನಾಡು ಬಿಟ್ಟೋಡಿಸಿದರೂ ಸರಿ, ಸೆರೆಮನೆಯಲ್ಲಿ ಹಾಕಿದರೂ ಸರಿ. ಮಹಾಭಾರತವನ್ನು ಮಾತ್ರ ನನ್ನ ಜೊತೆ ತೆಗೆದುಕೊಂಡು ಹೋಗುತ್ತೇನೆ’’ -ಮಹಾಭಾರತದ ಬಗ್ಗೆ ಮಾತು ಬಂದಾಗಲೆಲ್ಲ ಉಳ್ಳೂರರು ಹೀಗೆ ಹೇಳುತ್ತಿದ್ದರು. ಮಹಾಭಾರತವನ್ನು ಬರೆದ ವೇದವ್ಯಾಸರನ್ನು ಪರಮ ಆಚಾರ್ಯರನ್ನಾಗಿ ಸ್ವೀಕರಿಸಿದ್ದರು. ಮನುಷ್ಯ ತನಗೆ ಬೇಕಾದ್ದನ್ನೆಲ್ಲ ಕೇಳಿ ತಿಳಿಯುವುದು ಒಳ್ಳೆಯ ಆಚಾರ‍್ಯರಿಂದಲ್ಲವೆ? ಇದು ಮಹಾಕವಿಯ ತತ್ವ. ತಮ್ಮ ಹತ್ತನೆಯ ವಯಸ್ಸಿನಲ್ಲೇ ಮಲಯಾಳಂನಲ್ಲಿ ಮಹಾಭಾರತವನ್ನು ಓದಿದ್ದರು. ಅನಂತರ ವ್ಯಾಸಭಾರತದ ಗಾನಾಮೃತವನ್ನು ಸವಿದರು. ‘‘ವ್ಯಾಸರೇ ನನ್ನ ಕಣ್ಣು ತೆರೆಸಿದ್ದು, ಹೃದಯ ವಿಕಾಸಕ್ಕೆ ದಾರಿ ಮಾಡಿಕೊಟ್ಟವರು’’ ಎಂದು ತಮ್ಮ ‘‘ಸ್ಮರಣ ಮಾಧುರಿ’’ ಯಲ್ಲಿ ಹೇಳಿದ್ದಾರೆ. ‘ಅನ್ನುಂ ಇನ್ನುಂ’ ಎಂಬ ಕವಿತೆಯಲ್ಲಿ ಮಹಾಭಾರತ ಕಾಲದ ಹಾಗೂ ತಮ್ಮ ಕಾಲದ ನಾಯಕರಲ್ಲಿನ ವ್ಯತ್ಯಾಸವನ್ನು ನಿರೂಪಿಸಿದ್ದಾರೆ.

ಜ್ಞಾಪಕಶಕ್ತಿ

ಉಳ್ಳೂರರು ಭಾರತದ ಶ್ಲೋಕಗಳನ್ನು ಬಾಯಿಪಾಠ ಮಾಡಿದ್ದರು. ಅವರದು ಅಮೋಘ ಜ್ಞಾಪಕ ಶಕ್ತಿ. ಅದಕ್ಕೆ ಒಂದು ಉದಾಹರಣೆ. ಷೋರಣೂರ್ ರೈಲ್ವೆ ನಿಲ್ದಾಣದಲ್ಲಿ ಸಾಹಿತಿಗಳ ಕೂಟ ನೆರೆದಿತ್ತು. ಉಳ್ಳೂರರು ಅಲ್ಲಿದ್ದರು. ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದವರೇ ಎಲ್ಲರೂ. ಪುನ್ನಶ್ಶೇರಿ ಎಂಬುವರೇ ಪ್ರಮುಖರು. ಉಳ್ಳೂರರ ಜ್ಞಾಪಕ ಶಕ್ತಿಯನ್ನು ಪರೀಕ್ಷಿಸಲು ಅವರನ್ನು ಕೆಲವರು ಪ್ರಚೋದಿಸಿದರು. ಮಹಾಭಾರತದಲ್ಲಿ ಬರುವ ಶ್ಲೋಕಗಳನ್ನು ಕೆಲವನ್ನು ಹೇಳಬೇಕೆಂದು ಪುನ್ನಶ್ಶೇರಿ ಮಹಾಕವಿಯನ್ನು ಕೇಳಿದರು. ಸ್ವಲ್ಪವೂ ಬೇಸರವಿಲ್ಲ ಉಳ್ಳೂರರಿಗೆ. ಎರಡೂವರೆ ಗಂಟೆಗಳ ಕಾಲ ಒಂದೇ ಸಮನೆ ಹೇಳಿದರು. ಸ್ವಲ್ಪವೂ ತಡೆಯಿಲ್ಲ. ನೆರೆದಿದ್ದವರು ವಿಸ್ಮಿತರಾದರು. ಉಳ್ಳೂರರು ಭಾರತದ ಯಾವುದೇ ಪ್ರಸಂಗವನ್ನು ಕುರಿತು ಕೇಳಿದರೂ ಶ್ಲೋಕಗಳನ್ನು ಹೇಳಿ ವಿವರಣೆ ನೀಡುತ್ತಿದ್ದರು.

ಸಾಹಿತ್ಯ ಚರಿತ್ರೆ

ಸೆನ್ಸಸ್ ಕಚೇರಿಯಲ್ಲಿದ್ದಾಗಿನಿಂದಲೂ ಉಳ್ಳೂರರಿಗೆ ಸಂಶೋಧನೆ ಕಾರ್ಯವನ್ನು ಮಾಡುವುದು ದಿನ ನಿತ್ಯದ ಕೆಲಸಗಳಲ್ಲೊಂದಾಗಿತ್ತು. ಜನಗಣತಿ ಮಾಡುವ ಕಾರ್ಯಬಂದಾಗ ಅವರು ಜನತೆಯ ವಿವಿಧ ಮತಗಳು ಆಚಾರಗಳು, ಎಲ್ಲ ವಿಚಾರಗಳನ್ನು ಸಂಗ್ರಹಿಸಿದರು.

ಕೇರಳದ ಭಾಷಾಪೋಷಿಣಿ ಸಭೆ ನಡೆಸಿದ ಸಮ್ಮೇಳನವೊಂದರಲ್ಲಿ ಕೇರಳವರ್ಮ ವಲಿಯ ಕೋಯಿತ್ತಂಬುರಾನರು ಕೇರಳಕ್ಕೆ ಸಮಗ್ರವಾದ ಸಾಹಿತ್ಯ ಚರಿತ್ರೆಯೊಂದರ ಅಗತ್ಯವಿದೆ, ಆ ಕೆಲಸವನ್ನು ಉಳ್ಳೂರರೆ ಮಾಡಬೇಕು ಎಂದು ಸೂಚಿಸಿದರು. ಉಳ್ಳೂರರಿಗೆ ಪರಮ ಸಂತೋಷ. ಅಂದೇ ಪ್ರತಿಜ್ಞೆ ಮಾಡಿದರು; ‘‘ಸಾಯುವುದರೊಳಗೆ ಕೇರಳಕ್ಕೆ ಒಂದು ಸಮಗ್ರ ಸಾಹಿತ್ಯ ಚರಿತ್ರೆ ಬರೆದು ಅರ್ಪಿಸುತ್ತೇನೆ.’’ ಅಂದಿನಿಂದಲೇ ಸಾಹಿತ್ಯ ಸಂಶೋಧನೆಗೆ ತೊಡಗಿದರು. ಸಾಯುವುದಕ್ಕೆ ಇನ್ನು ಮೂರುದಿನಗಳಿದ್ದವು. ತಾವು ಇನ್ನು ಹೆಚ್ಚು ಕಾಲ ಇರುವುದಿಲ್ಲ ಎಂದು ಉಳ್ಳೂರರಿಗೆ ತಿಳಿದಿತ್ತು. ಸಾಹಿತ್ಯ ಚರಿತ್ರೆಯ ಮಹಾಕಾರ್ಯ ಮುಗಿಸಿದರು. ಒಟ್ಟು ಏಳು ಸಂಪುಟಗಳ ಮಲಯಾಳ ಸಾಹಿತ್ಯ ಚರಿತ್ರೆ ಅವರು ಗತಿಸಿದ ನಂತರ ಪ್ರಕಟವಾಯಿತು. ಅದು ಮಲಯಾಳದ ಆಧಾರ ಗ್ರಂಥವಾಯಿತು. ಈ ಮಹಾಗ್ರಂಥ ಅವರ ಸಾಧನೆಯ ಕುಸುಮ.

ಮಹಾಕವಿ ಮಲಯಾಳವನ್ನು ಹೇಗೆ ಪೋಷಿಸಿದರೋ ಹಾಗೆಯೇ ಮಲಯಾಳದಿಂದ ಆಂಗ್ಲ ಭಾಷೆಗೆ ಅನುವಾದಿ ಸುವ ಕಾರ್ಯವನ್ನು ಕೈಗೊಂಡರು. ಬಾಲ್ಯದಿಂದಲೂ ಇಂಗ್ಲಿಷ್ ಮೇಲೆ ಒಂದು ವಿಧದ ಪ್ರೀತಿ. ಸ್ವಂತ ಇಂಗ್ಲಿಷ್ ಕೃತಿಗಳನ್ನು ಬರೆದರು. ಕೇರಳವರ್ಮವಲಿಯ ಕೋಯಿತ್ತಂಬುರಾನರ ‘ಮಯೂರ ಸಂದೇಶ’ ಕಾವ್ಯವನ್ನು ಇಂಗ್ಲಿಷಿಗೆ ಅನುವಾದಿಸಿದರು. ಇಂಗ್ಲಿಷಿನಲ್ಲಿ ಬರುತ್ತಿದ್ದ ‘‘ತ್ರಿವೇಣಿ’’ ಮಾಸ ಪತ್ರಿಕೆಯನ್ನು ಕೆಲಕಾಲ ನಡೆಸಿದ್ದುಂಟು. ಅವರ ಎಷ್ಟೋ ಉಪನ್ಯಾಸಗಳನ್ನು ಅಂದಿನ ಜನಪ್ರಿಯ ಪತ್ರಿಕೆಗಳು ಪ್ರಕಟಿಸಿದುವು.

ಮಹಾಕವಿ ಸ್ವತಃ ತಾವೇ ಕವಿ, ಸಾಹಿತಿಯಾಗಿದ್ದುದಷ್ಟೇ ಅಲ್ಲ. ಇತರರು ಬರೆದದ್ದನ್ನು ಮೆಚ್ಚುವ ವಿಶೇಷಗುಣವನ್ನು ಪಡೆದುಕೊಂಡಿದ್ದರು. ದಿನನಿತ್ಯವೂ ಅವರಿಗೆ ಬರುತ್ತಿದ್ದ ಪತ್ರಗಳಿಗೆ ಗ್ರಂಥಪ್ರತಿಗಳಿಗೆ ಲೆಕ್ಕವಿಲ್ಲ. ಪ್ರತಿ ಪತ್ರಕ್ಕೂ ಉತ್ತರಿಸಿ ಅಭಿಪ್ರಾಯವನ್ನೇ ಆಧಾರವಾಗಿಟ್ಟುಕೊಂಡು ಅನೇಕ ತಮ್ಮ ಗ್ರಂಥವನ್ನು ಪ್ರಕಟಿಸುತ್ತಿದ್ದರು. ಬರಹಗಾರರನ್ನು ಅವರು ಎಂದೂ ನಿರಾಶೆಗೊಳಿಸುತ್ತಿರಲಿಲ್ಲ.

ಹರಿಜನ ಸೇವೆ

‘‘ಹರಿಜನರಿಗೆ ದೇವಾಲಯ ಪ್ರವೇಶವಿಲ್ಲ’’ ಎಂಬ ಕೂಗು ಕೇರಳದಲ್ಲೂ ಹಬ್ಬಿತ್ತು. ಉಳ್ಳೂರರು ತಮ್ಮ ಲೇಖನ, ಕವಿತೆಗಳಿಂದ ಜನರ ಮನಸ್ಸನ್ನು ತಿದ್ದಲು ಯತ್ನಿಸಿದರು. ವಿಚಾರಧಾರ ತುನ್ಬಪೂವು, ಕೀಶಸಂದೇಶ ಎಂಬ ಕವಿತೆಗಳನ್ನು ರಚಿಸಿದರು. ತಮ್ಮ ಕೆಲವು ಸ್ನೇಹಿತರೊಡನೆ ಕೇರಳ ಹಿಂದೂ ಮಿಷನ್‌ಅನ್ನು ಸ್ಥಾಪಿಸಿದರು. ಪ್ರಚಾರಕರಾಗಿ ದುಡಿದರು. ಕೆಲಸದಲ್ಲಿರುವಾಗಲೂ ನಿವೃತ್ತರಾದ ಮೇಲೂ ಕೀಳು ಜನರೆಂದು ನಿಂದನೆಗೆ ಪಾತ್ರರಾಗಿದ್ದ ಹರಿಜನರ ಏಳಿಗೆಗೆ ಶ್ರಮಿಸಿದರು.

ಉಳ್ಳೂರರು ಹರಿಜನರಿಗೆ ದೇವಸ್ಥಾನ ಪ್ರವೇಶದ ಅವಕಾಶ ಇರಬೇಕೆಂದು ತಯಾರಿಸಿದ ವರದಿಗಳು ತಿರುವಾಂಕೂರು ಸಂಸ್ಥಾನದ ಮಹಾರಾಜರು, ದಿವಾನರು ಹಾಗೂ ರಾಜಪುರೋಹಿತರನ್ನು ಬೆರಗುಗೊಳಿಸಿದವು. ವಾದವಿವಾದಗಳು ನಡೆದದ್ದು ಲೆಕ್ಕವೇ ಇಲ್ಲ. ಕಡೆಗೂ ಉಳ್ಳೂರರಿಗೆ ಜಯ. ಶ್ರೀ ಪದ್ಮನಾಭ ಸ್ವಾಮಿ ದೇವಾಲಯದೊಳಗೆ ಹರಿಜನರಿಗೆ ಪ್ರವೇಶ ದೊರೆಯಿತು. ಇದೇ ಸಂದರ್ಭದಲ್ಲಿ ಉಳ್ಳೂರರ ಪರಮ ಮಿತ್ರರಾಗಿದ್ದ ಪ್ರಸಿದ್ಧ ಕವಿ, ಕೆಸ್ತಮತಾವಲಂಬಿ ಜೇಮ್ಸ್ ಕಸಿನ್ಸರು ತಮ್ಮ ಹೆಸರನ್ನು ಜಯರಾಂ ಕಸಿನ್ಸ್ ಎಂದು ಬದಲಾಯಿಸಿಕೊಂಡರು. ಹಿಂದೂ ಮತಕ್ಕೆ ಸೇರಿದರು.

ಉಳ್ಳೂರರ ವಿಚಾರ ರೀತಿ ಅವರ ಬಂಧುಗಳಿಗೆ ಸರಿಬೀಳಲಿಲ್ಲ. ಜಾತಿಭ್ರಷ್ಟರೆಂದು ಅವರಿಗೆ ಛೀಮಾರಿ ಹಾಕಿದರು. ಉಳ್ಳೂರರು ‘‘ದೇವಸ್ಥಾನ ಎಲ್ಲರಿಗೂ ಬೇಕಾದುದು. ಜಾತಿ ಉಳ್ಳವರು ಜಾತಿ ಇಲ್ಲದವರು ದೇವರನ್ನು ಆರಾಧಿಸಬಹುದು. ಶಾಸ್ತ್ರಗಳ ಪ್ರಕಾರ ಪ್ರತಿಜೀವವೂ ಪವಿತ್ರ ಜ್ಯೋತಿಯಂತೆ. ವೇದದಲ್ಲಿ ನುಡಿದಂತೆ ಒಟ್ಟಿಗೆ ನಡೆಯೋಣ, ಒಟ್ಟಿಗೆ ಮಾತನಾಡೋಣ. ಒಬ್ಬರ ಮನಸ್ಸನ್ನೊಬ್ಬರು ಅರಿಯೋಣ’’ ಎಂದು ಹಾಡಿದರು.

ವಿವಿಧ ರಂಗಗಳಲ್ಲಿ

೧೯೩೭ ರಲ್ಲಿ ತಿರುವನಂತಪುರದಲ್ಲಿ ‘‘ಆಲ್ ಇಂಡಿಯಾ ಓರಿಯಂಟಲ್ ಕಾನ್‌ಫರೆನ್ಸ್’’ ನಡೆದಾಗ ಮಹಾಕವಿಯದೆ ಪ್ರಧಾನ ಪಾತ್ರ. ಅಲ್ಲಿ ಉಳ್ಳೂರರು ಓದಿದ ಪ್ರಬಂಧ ನೆರೆದಿದ್ದವರ ಪ್ರಶಂಸೆಗೆ ಪಾತ್ರವಾಯಿತು. ಅವರ ಪಾಂಡಿತ್ಯಕ್ಕೆ ಫಲವೊ ಎಂಬಂತೆ ಮ್ಯಾಕ್ಸ್‌ಮುಲ್ಲರ್ ಅಧ್ಯಯನ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕರಾಗಿರಲು ಜರ್ಮನಿಯಿಂದ ಕರೆ ಬಂದಿತು. ಉಳ್ಳೂರರು ಜರ್ಮನ್ ಕಲಿತರು. ಆದರೆ ಮಹಾಯುದ್ಧ  ಕಾರಣವಾಗಿ ಅವರ ವಿದೇಶ ಯಾತ್ರೆ ನಿಂತಿತು.

ಮಹಾಕವಿಯ ಪ್ರತಿಭೆಗೆ ಹಲವು ಅವಕಾಶಗಳು ದೊರೆತವು. ಎಲ್ಲ ಕೆಲಸಗಳಲ್ಲೂ ಅವರ ಶ್ರದ್ಧೆ,ಅಚ್ಚುಕಟ್ಟು ಇತರರಿಗೆ ಮಾದರಿಯಾಗಿದ್ದವು. ತಿರುವಾಂಕೂರು ಸರ್ಕಾರದಲ್ಲಿ ದೊಡ್ಡ ಕೆಲಸಗಳಿಗೆ ಯುವಕರನ್ನು ಆಯ್ಕೆ ಮಾಡಲು ಟಿ.ಸಿ.ಎಸ್. ಪರೀಕ್ಷೆಯನ್ನು ತಿರುವಾಂಕೂರು ರಾಜ್ಯ ಸರ್ಕಾರ ಏರ್ಪಡಿಸಿದಾಗ ಪರೀಕ್ಷಕರಾಗಿ ಉಳ್ಳೂರರೇ ನೇಮಕಗೊಂಡರು. ಇವರ ಜೊತೆಗೆ ಆಗಿದ್ದವರು ಅಂದಿನ ಮಹಾವ್ಯಕ್ತಿಗಳಾದ ಡಾ.ನೋಕ್ಸ್ ಹಾಗೂ ಪ್ರಾಧ್ಯಾಪಕ ಚಂದ್ರಶೇಖರ್. ಇವರೊಟ್ಟಿಗೆ ಸೇರಿ ಮಹಾಕವಿ ರೂಪಿಸಿದುದೇ ತಿರುವಾಂಕೂರ್ ವಿಶ್ವವಿದ್ಯಾನಿಲಯ. ‘‘ಸೆಂಟ್ರಲ್ ವರ್ನಾಕ್ಯುಲರ್ ರೆಕಾರ್ಡ್ಸ್’’ ಕಛೇರಿಯಲ್ಲಿ ಗೌರವ ನಿರ್ದೇಶಕರಾಗಿದ್ದು ಹಳೆ ಗ್ರಂಥಗಳು, ತಾಳೆಗರಿಗಳನ್ನು ಪರಿಷ್ಕರಿಸಿ ಅವುಗಳ ಸೂಚಿ ತಯಾರಿಸುವ ಮಹತ್ತರ ಕಾರ್ಯವನ್ನು ಮಹಾಕವಿ ನಿರ್ವಹಿಸಿದರು. ತಿರುವಾಂಕೂರು ವಿಶ್ವವಿದ್ಯಾನಿಲಯದಲ್ಲಿ ಆರಂಭದಿಂದ ಸಿಂಡಿಕೇಟನ ಸದಸ್ಯರಾಗಿದ್ದು ಏಳು ವರ್ಷಗಳ ಕಾಲ ಪ್ರಾಚೀನ ಭಾಷೆಗಳ ವಿಭಾಗದ ಡೀನ್ ಆಗಿದ್ದರು.

ಪುಸ್ತಕಗಳಲ್ಲಿನ ಒಲವು ಮಹಾಕವಿಗೆ ಎಂದೂ ಕಡಿಮೆಯಾಗಲಿಲ್ಲ. ಚಿಕ್ಕಂದಿನಲ್ಲೆ ಓದಿನ ಹಂಬಲ ವಿದ್ದುದರಿಂದ ಬೆಳೆದಂತೆ ಅದು ಹೆಚ್ಚಿತು. ಪುಸ್ತಕಗಳನ್ನು ಸಂಗ್ರಹಿಸಿದರು. ಅವೆಲ್ಲವನ್ನು ಓದಿ ಮನನ ಮಾಡಿರುತ್ತಿದ್ದರು. ಪ್ರತಿ ಪುಸ್ತಕಕ್ಕೂ ಒಂದು ಸಂಖ್ಯೆಕೊಟ್ಟು ಜೋಡಿಸಿಡುತ್ತಿದ್ದರು. ಅವರ ‘ಹೋಂ ಲೈಬ್ರರಿ’  ಅವರಿಗಿದ್ದ ಗ್ರಂಥ ಪರಿಚಯಕ್ಕೆ ಸಾಕ್ಷಿ. ಪುಸ್ತಕ ಭಂಡಾರಗಳ ಏಳಿಗೆಗೆ ಶ್ರಮಿಸಿದರು. ‘ಮಹಾಕವಿ ಉಳ್ಳೂರ್ ಮೆಮೋರಿಯಲ್ ಲೈಬ್ರರಿ ಅಂಡ್ ರಿಸರ್ಚ್ ಇನ್ಸ್‌ಟಿಟ್ಯೂಟ್’ ಈಗ ಒಂದು ಸಂಶೋಧನಾಲಯವಾಗಿ ಉಳ್ಳೂರರ ಕೀರ್ತಿಯನ್ನು ಮೆರೆಯುತ್ತಿದೆ.

ದೇಶಪ್ರೇಮ

‘‘ತಾನು ಹುಟ್ಟಿದ ನೆಲವನ್ನು ಪ್ರೀತಿಸದವನು ಆ ನೆಲದ ಮೇಲಿನ ಮನುಷ್ಯರನ್ನು ಪ್ರೀತಿಸಲಾರ’’ ಇದು ಉಳ್ಳೂರರ ನಂಬಿಕೆ. ಭಾರತೀಯತೆಯಲ್ಲಿ ಉಳ್ಳೂರರಿಗೆ ಮಹಾಪ್ರೀತಿ. ದೇಶಭಕ್ತಿ ಅವರಲ್ಲಿ ಸದಾ ಜಾಗೃತವಾಗಿತ್ತು. ಬ್ರಿಟಿಷರ ಕ್ರೂರ ವರ್ತನೆಯಿಂದ ಇಡೀ ದೇಶ ಕಂಗೆಟ್ಟಿದ್ದ ಕಾಲವದು. ಈ ಪೆಟ್ಟು ಉಳ್ಳೂರರಿಗೆ ತಟ್ಟದಿರಲಿಲ್ಲ. ಅಗಾಧ ಚಿಂತನೆಯಲ್ಲಿ ಮುಳುಗಿದರು. ದೇಶಪ್ರೇಮ ಸೂಸುವಂತೆ ಕವಿತೆಗಳನ್ನು ಬರೆದರು. ಪ್ರಜಾಪ್ರಭುತ್ವವನ್ನು ಎಷ್ಟು ಹೊಗಳಿದರೂ ಸಾಲದು. ಬ್ರಿಟಿಷರ ಸ್ವೇಚ್ಛಾಧಿಕಾರವನ್ನು ಎಷ್ಟು ನಿಂದಿಸಿದರೂ ತೀರದು. ತಮ್ಮ ಮಕ್ಕಳು ಶಾಲೆಯಲ್ಲಿ ಓದುವಾಗ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದಾಗ ಮಹಾಕವಿಯ ಮನಸ್ಸು ಸ್ವಲ್ಪವೂ ಕ್ಷೋಭೆಗೊಳ್ಳಲಿಲ್ಲ. ಸರ್ಕಾರದ ಹಿರಿಯ ಅಧಿಕಾರಿಯಾಗಿದ್ದಾಗ ತಮ್ಮ ರಾಷ್ಟ್ರೀಯ ವಿಚಾರಗಳ ಬಗ್ಗೆ ಎಚ್ಚರ ವಹಿಸಲೇಬೇಕಿತ್ತು. ಅಂದಿನ ಕವಿಗಳಿಗೆ ಸಾಮಾಜಿಕ-ರಾಜಕೀಯ ವಿಷಯಗಳನ್ನು ಕುರಿತು ಬರೆಯಲು ಸ್ವಾತಂತ್ರ್ಯವಿರಲಿಲ್ಲ. ಆದರೂ ಉಳ್ಳೂರರ ಉತ್ಕಟ ದೇಶಭಕ್ತಿ ಕಡಿಮೆಯದಲ್ಲ. ಗಾಂಧೀಜಿ, ಸುಭಾಷ್‌ಚಂದ್ರ ಬೋಸ್ ಮತ್ತು ರವೀಂದ್ರನಾಥ ಠಾಕೂರರನ್ನು ಕುರಿತು ಹಾಡಿದರು. ಕಳೆದ ಯುದ್ಧಕಾಲವನ್ನು ಉಳ್ಳೂರರಂತೆ ವಿಮರ್ಶೆ ಮಾಡಿದವರು ಬೇರೊಬ್ಬರಿಲ್ಲ.

ಮಹಾಕವಿಯದು ಚಟುವಟಿಕೆಯ ಜೀವನ. ವಿಶ್ರಾಂತಿ ಎನ್ನುವುದನ್ನೇ ಕಾಣರು. ಸದಾ ದುಡಿಮೆ. ಅದರಲ್ಲೆ ತೃಪ್ತಿ. ಸಾವಿನ ನಂತರವೆ ವಿಶ್ರಾಂತಿ ಎನ್ನುತ್ತಿದ್ದರು. ತುಂಬು ಚಟುವಟಿಕೆ, ಪಾದರಸದಷ್ಟೇ ಚುರುಕು. ಮಹಾಕವಿಗೆ ಇಷ್ಟವಾಗಿದ್ದ ವಿನೋದ ಕ್ರೀಡೆ ಎಂದರೆ ಕುದುರೆ ಸವಾರಿ.

ತಿರುವನಂತಪುರದ ಸೆಂಟ್ರಲ್ ಹೈಸ್ಕೂಲಿನಲ್ಲಿ ಮುಖ್ಯೋಪಾಧ್ಯಾಯರಾಗಿದ್ದಾಗಲೇ ಸಾಹಿತ್ಯ ಸಮಾರಂಭಗಳನ್ನೇರ್ಪಡಿಸುವ ಪರಿಪಾಠ ಮಹಾಕವಿಗೆ. ಒಳ್ಳೆ ಸಂಘಟಕರಾಗಿದ್ದರು. ಸಾಹಿತ್ಯ ಸಂಬಂಧದ ಕಾರ್ಯಗಳು ಆಗ ಪಂತಳದ ತಂಬುರಾನರ ಭವನದಲ್ಲಿ ಜರುಗುತ್ತಿದ್ದವು. ತಿರುವನಂತಪುರಕ್ಕೆ ಬಂದ ಕವಿಗಳೆಲ್ಲ ಅಲ್ಲಿಯೇ ಸೇರುವುದು. ಈ ಮೂಲಕ ಕೋಯಿಪ್ಪಿಳ್ಳಿ ಪರಮೇಶ್ವರ ಕುರುಪ್, ಮಹಾಕವಿ ವಲ್ಲತೋಳ್ ಮೊದಲಾದವರ ಪರಿಚಯ, ಸ್ನೇಹ ಉಳ್ಳೂರರಿಗಾಯಿತು. ಸಾಹಿತ್ಯ ಪ್ರೇಮಿಗಳಿಂದ ಸ್ಥಾಪಿತವಾದ ಭಾರತ ವಿಲಾಸಂ ಸಭೆ, ವಾರ್ಷಿಕೋತ್ಸವಗಳಲ್ಲಿ ಮಹಾಕವಿ ಭಾಗವಹಿಸುತ್ತಿದ್ದರು. ಅನಂತರ ಭಾಷಾಪೋಷಿಣಿ ಸಭೆ ಎಂಬ ಸಂಸ್ಥೆಯ ಖಜಾಂಜಿಯಾಗಿದ್ದರು. ಆಗಿನ್ನೂ ಅವರಿಗೆ ೨೬ ವರ್ಷ ವಯಸ್ಸು. ಎಲ್ಲೇ ಇರಲಿ ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡು ಕೆಲಸ ಮಾಡುತ್ತಿದ್ದರು.

ಅವರು ಬಹುಪ್ರಿಯವಾಗಿ ಕೆಲಸ ಮಾಡಿದ ಸಂಸ್ಥೆ ಎಂದರೆ ಸಾಹಿತ್ಯ ಪರಿಷತ್ತು. ೧೯೨೫ ರಲ್ಲಿ ಇಡಪ್ಪಳ್ಳಿಯಲ್ಲಿ ನಡೆದ ಸಾಹಿತ್ಯ ಪರಿಷತ್ತಿನ ಮೊದಲ ವಾರ್ಷಿಕದಿಂದ ಹಿಡಿದು ೧೯೪೭ ರವರೆಗೂ ಪರಿಷತ್ತಿನ ಪ್ರತಿ ವಾರ್ಷಿಕೋತ್ಸವದಲ್ಲೂ ಮಹಾಕವಿಯ ಪಾತ್ರವಿತ್ತು. ಒಮ್ಮೆ ಒಂದು ಸಮ್ಮೇಳನದ ಮುಕ್ತಾಯ ಸಮಾರಂಭದಲ್ಲಿ ಒಬ್ಬರು ‘‘ಮುಂದಿನ ವರ್ಷ ಪರಿಷತ್ತಿನ ಸಮಾರಂಭ ಹಿಮಾಲಯದಲ್ಲಿ ನಡೆದರೆ ಉಳ್ಳೂರರು ಅಲ್ಲಿಯೂ ಇರುತ್ತಾರೆ’’ ಎಂದು ಹಾಸ್ಯವಾಗಿ ಹೇಳಿದರಂತೆ.

ಉಳ್ಳೂರರು ತಮ್ಮ ಕೆಲಸ ಕಾರ್ಯಗಳನ್ನು ಶ್ರದ್ಧೆಯಿಂದ, ಶಿಸ್ತಿನಿಂದ ಮಾಡುವವರು. ಬೆಳಗ್ಗೆ ಐದು ಗಂಟೆಗೆ ಎದ್ದರೆ ರಾತ್ರಿ ಹತ್ತಕ್ಕೆ ಮಲಗುವರು. ಅಲ್ಲಿಯವರೆಗೆ ಈ ಕೆಲಸವಾದ ಮೇಲೆ ಈ ಕೆಲಸ. ಪ್ರತಿ ಕೆಲಸಕ್ಕೆ ಇಷ್ಟು ಹೊತ್ತು ಎಂದು ಕ್ರಮಬದ್ಧವಾಗಿ ದಿನಚರಿ ನಡೆಸಿಕೊಂಡು ಹೋಗುವರು.ಪ್ರತಿ ದಿನ ಎಂಟು ಹತ್ತು ಪತ್ರಿಕೆಗಳನ್ನು ಓದುತ್ತಿದ್ದರು. ಅಂಚೆಯಲ್ಲಿ ಬಂದ ಕಾಗದಗಳಿಗೆ ವಿಳಂಬವಿಲ್ಲದೆ ಉತ್ತರ ಬರೆಯುವರು. ರಾತ್ರಿ ನಿದ್ರೆ ಬಾರದಿದ್ದರೆ ಎದ್ದು ಏನಾದರೂ ಪುಸ್ತಕಗಳನ್ನು ಓದುವರು ಅಥವಾ ಏನನ್ನಾದರೂ ಬರೆಯುವರು. ಒಮ್ಮೊಮ್ಮೆ ಇಡೀ ರಾತ್ರಿಯನ್ನು ಹೀಗೆ ಕಳೆದದ್ದು ಉಂಟು.

ಮಾಡುವ ಕೆಲಸಗಳನ್ನು ಕ್ರಮವಾಗಿ ಮಾಡುವರು ಮಾತ್ರವಲ್ಲ, ಇತರರ ವಿಷಯವನ್ನೂ ಯೋಚಿಸಿ ಮಾಡುವ ಸ್ವಭಾವ ಅವರದು. ಮನೆಯಲ್ಲಿ ಕೆಲಸ ಮಾಡುವ ಆಳುಕಾಳಿಗೆ ಗೊತ್ತು ಮಾಡಿದ ದಿನಕ್ಕೆ ಸರಿಯಾಗಿ ಸಂಬಳ ಕೊಡುತ್ತಿದ್ದರು. ಅವರು ಸರ್ಕಾರಿ ಕೆಲಸದಲ್ಲಿದ್ದಾಗ ಕಚೇರಿಯ ಕೆಲಸಗಾರರು ಅವರ ಮನೆಗೆ ಬರುತ್ತಿದ್ದರು. ಉಳ್ಳೂರರು ಅವರಿಂದ ಸರ್ಕಾರದ ಕೆಲಸವನ್ನು ಮಾತ್ರ ಮಾಡಿಸುತ್ತಿದ್ದರು, ಮನೆಯ ಕೆಲಸವನ್ನು ಅವರಿಗೆ ಹೇಳುತ್ತಿರಲಿಲ್ಲ. ಸರ್ಕಾರಿ ಕೆಲಸ ಮಾಡಲು ಸರ್ಕಾರಿ ಕೆಲಸಗಾರರು, ಮನೆಯ ಕೆಲಸ ಮಾಡಲು ಉಳ್ಳೂರರು ಸಂಬಳ ಕೊಟ್ಟು ಇಟ್ಟುಕೊಂಡಿದ್ದ ಕೆಲಸಗಾರರು.

ಕಡೆಯ ವರ್ಷಗಳು

೧೯೩೭ ರಲ್ಲಿ ಮಹಾಕವಿಗೆ ಅರವತ್ತು ವರ್ಷ ತುಂಬಿದಾಗ ಅವರ ಸ್ನೇಹಿತರು, ಯುವ ಸಾಹಿತಿಗಳು ಸೇರಿ ದೊಡ್ಡ ಉತ್ಸವವನ್ನೇ ಮಾಡಿದರು. ಉಳ್ಳೂರರ ಬಗ್ಗೆ ಪ್ರಸಿದ್ಧ ಪತ್ರಿಕೆಗಳಲ್ಲಿ ಲೇಖನಗಳು ಬಂದವು. ಮಲೆಯಾಳ ಮನೋರಮ ಪತ್ರಿಕೆ ಒಂದು ವಾರದ ಕಾಲ ಉಳ್ಳೂರರ ಷಷ್ಟಿಪೂರ್ತಿ ಸಮಾರಂಭದ ಬಗ್ಗೆ ವಿಶೇಷ ಲೇಖನಗಳನ್ನು ಪ್ರಕಟಿಸಿತು.

ಕೇರಳದ ಉದ್ದಕ್ಕೂ ಉಳ್ಳೂರರು ಮನೆಮಾತಾದರು. ‘ಉಮಾಕೇರಳಂ’  ನ ಸವಿ ಉಣ್ಣದವರಿಲ್ಲ. ಹಲವು ಹತ್ತು ಗೌರವಗಳು ಮಹಾಕವಿಯನ್ನು ಹುಡುಕಿಕೊಂಡು ಬಂದವು. ೧೯೧೯ ರಲ್ಲಿ ಕೊಚ್ಚಿನ್ ಮಹಾರಾಜರು ‘ಕವಿತಿಲಕ’  ಎಂಬ ಬಿರುದನ್ನು ನೀಡಿ ಗೌರವಿಸಿದರು. ತಿರುವಾಂಕೂರು ಸಂಸ್ಥಾನದ ಮಹಾರಾಜರು ೧೯೩೭ ರಲ್ಲಿ ‘ಮಹಾಕವಿ, ‘ವೀರಶೃಂಖಲ’ ಬಿರುದುಗಳನ್ನಿತ್ತು ಆದರಿಸಿದರು. ಕಾಶಿಯ ವಿದ್ಯಾಪೀಠ ಇವರನ್ನು ‘ಸಾಹಿತ್ಯ ಭೂಷಣ’  ಎಂದು ಕರೆಯಿತು. ವಿದ್ಯಾರ್ಥಿಗಳಿಗಂತೂ ಉಳ್ಳೂರ್ ಅಚ್ಚುಮೆಚ್ಚು. ಮಹಾಕವಿಯ ಸಾಧನೆಗಳನ್ನು ಪ್ರತಿಬಿಂಬಿಸುವಂತಹ ‘ಉಳ್ಳೂರ್ ಸಂಭಾವನ ಗ್ರಂಥ’ ಬಹು ಹಿಂದೆಯೇ ಪ್ರಕಟವಾಯಿತು. ೧೯೭೭ ರಲ್ಲಿ ಉಳ್ಳೂರರ ಜನ್ಮಶತಾಬ್ದಿ ನಡೆದಾಗ ‘‘ಉಳ್ಳೂರಿಂಡೆ ಸಾಹಿತ್ಯ ಸಾಧನ’’ ಎಂಬ ವಿಶೇಷಕೃತಿ ಪ್ರಕಟವಾಗಿದ್ದು ಮಹಾಕವಿಗೆ ಕೇರಳೀಯರ ಕೃತಜ್ಞತೆಯ ಸೂಚಕವಾಗಿದೆ.

೧೯೪೮ ರಲ್ಲಿ ಗಾಂಧೀಜಿ ತೀರಿಕೊಂಡಾಗ ಅವರ ಬಗ್ಗೆ ಒಂದು ಕವನ ಬೇಕೆಂದು ‘ಮಾತೃ ಭೂಮಿ’  ಪತ್ರಿಕೆಯಿಂದ ಉಳ್ಳೂರರಿಗೆ  ಕರೆಬಂದಿತು. ಮಹಾಕವಿ ವ್ಯಾಕುಲರಾಗಿ ಗಾಂಧೀಜಿ ಬಗ್ಗೆ ಬರೆಯತೊಡಗಿದರು. ಸ್ವಲ್ಪ ಕಾಲದಲ್ಲೆ ಪ್ರಜ್ಞೆ ತಪ್ಪಿದರು. ರಕ್ತಸ್ರಾವವಾಯಿತು. ನಾಲ್ಕುದಿನಗಳು ಪ್ರಜ್ಞೆ ಬರಲೆ ಇಲ್ಲ. ಮಹಾಕವಿ ಉಳಿಯುವುದು ಕಷ್ಟವೆಂದು ವೈದ್ಯರು ಹೇಳಿದರು. ತಿರುವನಂತಪುರದ ರೇಡಿಯೋ ನಿಲಯ ಉಳ್ಳೂರರನ್ನು ಸ್ಮರಿಸಿ ಭಾಷಣ ಪ್ರಸಾರ ಮಾಡಿತು. ಬಂಧುಗಳಿಗೆ ಕರೆಯೂ ಹೋಯಿತು. ಆದರೆ ಕೇರಳದ ಸುದೈವ! ಮಹಾಕವಿಗೆ ಪ್ರಜ್ಞೆ ಮತ್ತೆ ಬಂತು. ಚೇತರಿಸಿಕೊಳ್ಳುವ ಹಾಗಾಯಿತು. ಆರೇಳು ತಿಂಗಳಲ್ಲಿ ಮತ್ತೆ ಹಿಂದಿನಂತೆ ಓದಿ ಬರೆಯುವಂತಾದರು.

ಮಹಾಕವಿ ಕೆಲಸ ಮಾಡುತ್ತಿದ್ದ ರೀತಿ ಎಂತಹವರನ್ನೂ ಬೆರಗುಗೊಳಿಸುತ್ತಿತ್ತು. ವಲ್ಲತೋಳ ಮಹಾಕವಿ ನುಡಿದಂತೆ ‘‘ಒಬ್ಬ ಉಳ್ಳೂರ್ ಪರಮೇಶ್ವರ ಅಯ್ಯರ್ ಆಗುವುದು ಅಷ್ಟು ಸುಲಭವಲ್ಲ.’’ ಕಡೆಯ ಹನ್ನೆರಡು ವರ್ಷಗಳ ಕಾಲ ಮಹಾಕವಿ ಕೇರಳ ಸಾಹಿತ್ಯ ಚರಿತ್ರೆ ಬರೆಯುವುದರಲ್ಲಿ ತೊಡಗಿದ್ದರು. ಮಹಾಕಠಿಣ ಕಾರ‍್ಯ ಅದು. ೧೪೦೦೦ ಕೈ ಬರಹದ ಪುಟಗಳ ಸಾಹಿತ್ಯ ಚರಿತ್ರೆ! ಅದು ಮುಗಿದಾಗ ಅವರಿಗೆ ೭೨ ವರ್ಷ ವಯಸ್ಸು. ಕೊನೆ ದಿನಗಳಲ್ಲಿ ರೋಗಪೀಡಿತರಾಗಿ ಹಾಸಿಗೆ ಹಿಡಿದರು. ಸಾಯುವುದಕ್ಕೆ ಇನ್ನೂ ಮೂರು ದಿನಗಳಿದ್ದಾಗ ಅವರ ಶಿಷ್ಯರನೇಕರು, ಸ್ನೇಹಿತರು ಮಹಾಕವಿಯ ದರ್ಶನ ಮಾಡಲು ಕೇರಳದ ನಾನಾ ಭಾಗದಿಂದ ಬಂದರು. ಆರಾಧನೆಗೆ ಅರ್ಹರೆನಿಸಿದ್ದ ಮಹಾ ಕವಿಗೆ ನಮಸ್ಕಾರಗಳನ್ನು ಸಲ್ಲಿಸಿದರು. ಹೃದಯ ವೇದನೆ ಉಂಟು ಮಾಡುವಂತಿತ್ತು ಮಹಾಕವಿಯ ಸ್ಥಿತಿ. ಕವಿ ಉಳ್ಳೂರರು ತಾವೇ ಹೇಳಿಕೊಂಡಿದ್ದಂತೆ ಸಾವನ್ನು ಸ್ವಾಗತಿಸಿದರು. ಸಾವಿಗೆ ಎಂದೂ ಹೆದರಲಿಲ್ಲ. ಮಿತ್ರನೆಂದು ಕರೆದರು. ೧೯೪೯ನೆ ಇಸವಿ ಜೂನ್ ತಿಂಗಳ ಹದಿನಾರರಂದು ಇಹಲೋಕವನ್ನು ತ್ಯಜಿಸಿದರು ಮಹಾಕವಿ. ಕೇರಳೀಯರಿಗೆ ಅದೊಂದು ದುರ್ದಿನ. ತಿರುವನಂತಪುರ ಶೋಕ ಸಾಗರದಲ್ಲಿ ಮುಳುಗಿತು.

ಮಹಾಕವಿಯ ಹಾಸಿಗೆಯ ದಿಂಬಿನಡಿಯಲ್ಲಿ ಒಂದು ಪುಸ್ತಕ. ‘‘ಬ್ಲೆಸ್ಡ್ ಆರ್ ದಿ ಡೆಡ್’’  ಎಂಬ ಇಂಗ್ಲಿಷ್ ಪುಸ್ತಕ. ೧೯೧೭ರಲ್ಲಿ ಲಂಡನ್‌ನಲ್ಲಿ ಪ್ರಕಟವಾದ ಕವಿತಾ ಸಂಕಲನ. ಕೀರ್ತಿಶಾಲಿಗಳಾದ ಆಂಗ್ಲ ಮಹಾಕವಿಗಳ ಮರಣವನ್ನು ವರ್ಣಿಸುವ ಕವಿತೆಗಳು. ಸಾಯುವ ಹೊತ್ತಿನಲ್ಲಿ ಈ ಪುಸ್ತಕವನ್ನು ಓದಿದ್ದರು ಉಳ್ಳೂರರು. ತಮ್ಮ ಮರಣ ಸಮೀಪಿಸುತ್ತಿದೆ ಎಂಬ ಅರಿವು ಅವರಿಗುಂಟಾಗಿತ್ತು. ಮಹಾಕವಿ ಬರೆದ ಕೊನೆ ಕವಿತೆ ಶವಸಂಸ್ಕಾರದ ವರ್ಣನೆ ಬರುವ ‘ಚುಡಲಕ್ಕಳ’ ಎಂಬ ಕವಿತೆ. ಪ್ರಕಟಿಸಿದ ಕೊನೆ ಕವಿತಾ ಸಂಕಲನ ‘ತಪ್ತ ಹೃದಯಂ’.  ಎಂಥ ಅರ್ಥಗರ್ಭಿತ ಹೆಸರು!

೧೯೪೮ರಲ್ಲಿ ಒದಗಿ ಬಂದ ರೋಗದಿಂದ ತಾನಿನ್ನು ಬದುಕಲಾರೆ ಎಂಬ ನಿರ್ಧಾರಕ್ಕೆ ಬಂದಿದ್ದರು. ತಾನು ಸತ್ತರೆ ಒಳ್ಳೆ ಬೆಳದಿಂಗಳಿನ ರಾತ್ರಿಯಲ್ಲಿ ಮೃತದೇಹದ ಸಂಸ್ಕಾರವಾಗಬೇಕು ಎಂಬ ಆಶಯ ವ್ಯಕ್ತಪಡಿಸಿದ್ದರು.

ಸರಳ ಜೀವನ

ಮಹಾಕವಿಯದು ಋಷಿಸಮಾನ ಜೀವನ. ಅದು ಅವರ ಉಡಿಗೆಯಿಂದಲೇ ಆರಂಭ. ಮನೆಯಲ್ಲಿರುವಾಗ ಪಂಚೆ, ಷರಟು, ಮೇಲೊಂದು ಉತ್ತರೀಯ. ಸಭೆಗಳಿಗೆ ಹೋಗಬೇಕಾದರೆ ನೀಳವಸ್ತ್ರ, ತಲೆಗೊಂದು ರುಮಾಲು. ಆಡಂಬರರಹಿತ ಜೀವನ. ಹೆಂಡತಿ ತೀರಿಕೊಂಡ ಮೇಲೆ ಮಹಾಕವಿ ಯತಿಯಂತೆ ಜೀವಿಸತೊಡಿಗಿದರು. ತಾನಾಯಿತು ಸಾಹಿತ್ಯವಾಯಿತು. ‘‘ಸಾಗರದಡಿ ಸಿಕ್ಕಿದ್ದೆಲ್ಲ ಮರಳು ಕಣ. ಕಡೆಯಬೇಕಾದುದು ಇನ್ನೂ ಇದೆ’’ ಎಂಬರ್ಥ ಕೊಡುವ ನೀಲಕಂಠ ದೀಕ್ಷಿತರ ಶ್ಲೋಕವನ್ನು ಯಾವಾಗಲೂ ಮಕ್ಕಳಿಗೆ ಹೇಳುತ್ತಿದ್ದರಂತೆ. ಜನಪ್ರಿಯತೆ ಗಳಿಸಿದ್ದ ಅವರಲ್ಲಿ ಸ್ವಲ್ಪ ಕೂಡ ಗರ್ವವಿಲ್ಲ. ದೀನಜನರಲ್ಲಿ ಕರುಣೆ, ಕೀಳು ಜನರೆಂದು ಗಣನೆಗೆ ಬಾರದ ಜನರ ಸ್ನೇಹ.

ಮಹಾಕವಿಯ ಜೀವನ ದುಡಿಮೆಯ ಜೀವನವಾಗಿತ್ತು. ಆರಂಭದಲ್ಲಿ ದಾರಿದ್ರ್ಯ ಅವರನ್ನು ಕಾಡಿತ್ತು. ಅದನ್ನೆಂದೂ ಅವರು ಮರೆಯಲಿಲ್ಲ. ಉಳಿದ ಜನಗಳನ್ನು ತಮ್ಮಂತೆಯೇ ಕಂಡರು. ಕೆಲಬಾರಿ ಒಂದು ಹೊತ್ತಿಗೂ ಆಹಾರ ಸಿಕ್ಕದೆ ಪರಿತಪಿಸಿದ ಜೀವ ಮಹಾಕವಿಯದು. ಉತ್ತಮಸ್ಥಿತಿಗೆ ಬಂದಾಗ ತಮ್ಮ ಮನೆಗೆ ಯಾರೇ ಬಂದರೂ ಊಟ ಹಾಕದೆ ಕಳುಹಿಸುತ್ತಿರಲಿಲ್ಲ. ಮಹಾಕವಿ ದೈವಭಕ್ತರಾಗಿದ್ದರು. ದೈವಪ್ರೀತಿಯಿಂದ ‘ಕನ್ಯಾಕುಮಾರಿಸ್ತವ’, ‘ಭಗವತಿ ಸ್ತೋತ್ರ’  ಇವುಗಳನ್ನು ರಚಿಸಿದರು.

ಸಾಹಸಿ ಉಳ್ಳೂರ್

ಮಹಾಕವಿಯದು ಸಾಹಸಮಯ ಜೀವನ. ಕೈಗೊಂಡ ಕಾರ್ಯಗಳೆಲ್ಲ ಸಾಹಸದವೇ. ಒಂದಲ್ಲ, ಎರಡಲ್ಲ, ನೂರಾರು ಕೆಲಸಗಳು ಕೈ ತುಂಬ. ಎಲ್ಲವನ್ನು ಧೈರ್ಯದಿಂದ ನಿರ್ವಹಿಸುತ್ತಿದ್ದರು. ತಮ್ಮ ಮಕ್ಕಳಿಗೂ ಸಾಹಸ ಪ್ರಿಯರಾಗಿರಲು ಹೇಳುತ್ತಿದ್ದರು. ತಮ್ಮ ಮೊದಲಮಗ ಮಹಾದೇವನ್‌ಗೆ ಅವನ ೧೮ನೆ ವಯಸ್ಸಿನಲ್ಲೇ ವೈಮಾನಿಕ ವಿದ್ಯೆಯನ್ನು ಅಭ್ಯಸಿಸಲು ಅನುಮತಿ ನೀಡಿದ್ದರು. ಮತ್ತೊಬ್ಬ ಮಗನಿಗೆ ಯುದ್ಧ ಪರಿಸ್ಥಿತಿಯಿದ್ದ ಆ ಭೀಕರ ಕಾಲದಲ್ಲೂ ಸೈನ್ಯಕ್ಕೆ ಸೇರಲು ಪ್ರೋತ್ಸಾಹಿಸಿದ್ದರು. ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಕಾಲವದು. ಭಾರತವನ್ನು ಕುರಿತು ಮಿಸ್ ಮೇಯೊ ಎಂಬ ಅಮೆರಿಕನ್ ಮಹಿಳೆ ಬರೆದ ‘ಮದರ್ ಇಂಡಿಯಾ’ ಕೃತಿಯನ್ನು ಉಳ್ಳೂರರು ಖಂಡಿಸಿ ಬರೆದರು. ಮಿಸ್ ಮೇಯೋ ಭಾರತವನ್ನು ತಪ್ಪಾಗಿ ಗ್ರಹಿಸಿದ್ದಳು. ‘‘ತಪ್ಪಾಗಿ ನಿರೂಪಿಸಿದ ಸತ್ಯಕ್ಕಿಂತ ಬೇರೆ ಸುಳ್ಳಿಲ್ಲ’’ ಎಂದು ವಾದಿಸಿದರು. ಮಹಾಕವಿ ಮನಸ್ಸಿನಲ್ಲೊಂದು ಹೊರಗೊಂದು ಆಡುತ್ತಿರಲಿಲ್ಲ. ಅರ್ಥಹೀನ ಸಂಪ್ರದಾಯ, ಮೂಢನಂಬಿಕೆಗಳೆಂದರೆ ಮಹಾಕವಿಗೆ ಆಗದು. ಅದಕ್ಕೆ ಉದಾಹರಣೆ ಉಳ್ಳೂರರ ‘ಶಾಸ್ತ್ರ ಮತ್ತು ಶಸ್ತ್ರ’  ಎಂಬ ಕವಿತೆ. ಅದೊಂದು ವ್ಯಂಗ್ಯ ನೋಟ ಬೀರುವ ಪದ್ಯ. ಗಂಡ ಸತ್ತಾಗ ಹೆಂಡತಿ ಅವನ ಚಿತೆಯನ್ನೇರಿ ತಾನೂ ಪ್ರಾಣ ಬಿಡುವ ಸತಿ ಪದ್ಧತಿ ಹಿಂದೂಗಳಲ್ಲಿತ್ತು. ಇದು ಹಳೆಯ ಮೂಢ ಸಂಪ್ರದಾಯ. ಇದನ್ನು ಅಂದಿನ ಬ್ರಿಟಿಷ್ ಸರ್ಕಾರ ನಿಷೇಧಿಸಿದಾಗ ಹಿಂದೂಗಳ ಪ್ರತಿಭಟನೆಗೆ ಬಿಳಿಯ ಅಧಿಕಾರಿಯೊಬ್ಬ ಉತ್ತರ ಕೊಟ್ಟದ್ದನ್ನು ಕವಿತೆಯಲ್ಲಿ ಹೀಗೆ ವರ್ಣಿಸಿದರು;

‘‘ನಿಮ್ಮ ಶಾಸ್ತ್ರದ ಮೇಲಿಲ್ಲ ನನ್ನ ವಿರೋಧ
ನಾರಿಯನು ಅಗ್ನಿಯಲಿ ಮುಳುಗಿಸುವ ಜನ ನಿಮ್ಮವರು
ಅವರ ಕೊಲ್ಲಲು ನಮ್ಮ ಕೈಯಲ್ಲಿ ಗುಂಡಿರುವುದು
ಸ್ನೇಹಿತರೇ, ಇಬ್ಬರಿಗೂ ಈ ಎರಡು ಶಾಸ್ತ್ರವ
ಭಾರತದಲೊಂದಾಗಿ ಆಚರಿಸಬಹುದಲ್ಲವೆ?
ಸತಿ ಪದ್ಧತಿಯ ಬೆಂಬಲಿಗರು ಇಲ್ಲವಾದರು ಕೂಡಲೆ’’

ಒಳ್ಳೆ ಸ್ನೇಹಿತ

ಸ್ನೇಹಿತರನ್ನು ಸಂಪಾದಿಸುವುದು ಮಹಾಕವಿಯ ಆಶಯವಾಗಿತ್ತು. ಅವರ ಸ್ನೇಹಿತರಲ್ಲಿ ಮಹಾಕವಿ ವಲ್ಲತೋಳ್, ಕುಮಾರನ್ ಆಶಾನರೂ ಸೇರಿದ್ದರು. ಸ್ನೇಹಿತರಲ್ಲನೇಕರು ಅವರನ್ನು ಹುಡುಕಿಕೊಂಡು ಬಂದು ಅವರಿಂದ ಜ್ಞಾನೋಪದೇಶ ಪಡೆಯುತ್ತಿದ್ದರು. ಉಳ್ಳೂರರು ತೀರಿಕೊಂಡಾಗ ವಲ್ಲತೋಳರು ಉಳ್ಳೂರರಿಗೆ ಅರ್ಪಿಸಿದ ಕವಿತೆಯಲ್ಲಿ ‘ಗುರುವೇ’ ಎಂದು ಸಂಬೋಧಿಸಿರುವುದು ಅವರ ಸ್ನೇಹದ ಅಳವಿಗೆ ಸಾಕ್ಷಿ. ಉಳ್ಳೂರ್ ಸಾಕ್ಷಾತ್ ಪರಮೇಶ್ವರನ ಅವತಾರವೆ ಎಂದು ಹಾಡಿದರು ವಲ್ಲತೋಳ್.

ಉಳ್ಳೂರರು ತಮ್ಮ ಕೃತಿಗಳಲ್ಲಿ ಮತ್ತೆ ಮತ್ತೆ ಹೇಳುವುದು ತ್ಯಾಗ, ಪರೋಪಕಾರ ಇವುಗಳ ಮಹತ್ವವನ್ನು. ಇತರರಿಗೆ ಉಪಕಾರ ಮಾಡಿದಾಗಲೇ ಮನುಷ್ಯನ ಜೀವನ ಧನ್ಯ. ಮಳೆಯ ಹನಿಯನ್ನು ಕುರಿತ ಕವನದಲ್ಲಿ ಹೀಗೆ ಹೇಳುತ್ತಾರೆ-ಮಳೆಯ ಹನಿ ತಾಯಿಯಂತಿರುವ ಮೋಡವನ್ನು ಬಿಟ್ಟು ಬರುತ್ತದೆ. ಮೋಡಕ್ಕೆ ದುಃಖವಾಗುತ್ತದೆ. ಆದರೆ ಆ ಮಳೆ ಹನಿ ಭೂಮಿಗೆ ಒಂದು ದೊಡ್ಡ ವರ. ನೀರು ಸಿಕ್ಕದೆ ಪರಿತಪಿಸುವ ಚಕ್ರವಾಕ ಪಕ್ಷಿಗೆ ಅದೊಂದು ಅನುಗ್ರಹ. ನೀರು ಹನಿ ಚಿಪ್ಪಿನಲ್ಲಿ ಸೇರಿ ಮುತ್ತಾಗುತ್ತದೆ. ಹೀಗೆ ಅದರ ಜೀವನ ಧನ್ಯ ಎನ್ನುತ್ತಾರೆ ಉಳ್ಳೂರರು. ‘ಕಬೀರದಾಸ್’ ಎನ್ನುವ ಕವನದಲ್ಲಿ ಒಬ್ಬ ಹುಡುಗನ ಕಥೆಯನ್ನು ಹೇಳುತ್ತಾರೆ. ಹುಡುಗ ಒಂದು ಬಟ್ಟೆಯನ್ನು ಮಾರಲು ಕಾಶಿಯ ಬೀದಿಯಲ್ಲಿ ಹೊರಟಿದ್ದಾನೆ. ಹುಡುಗ ತುಂಬಾ ಬಡವ. ಬಟ್ಟೆ ಮಾರಿ ಹಣ ಸಂಪಾದಿಸಲು ಹೊರಟಿದ್ದಾನೆ. ದಾರಿಯಲ್ಲಿ ಮುಸ್ಲಿಂ ಫಕೀರನೊಬ್ಬನ ಭೇಟಿ ಆಗುತ್ತದೆ. ಹುಡುಗ ಅವನಿಗೆ ಬಟ್ಟೆಯನ್ನು ಕೊಟ್ಟುಬಿಡುತ್ತಾನೆ. ‘ವಿಚಾರಧಾರೆ’ ಯಲ್ಲಿ ಅಸ್ಪೃಶ್ಯ ಹುಡುಗಿಯೊಬ್ಬಳ ಚಿತ್ರವಿದೆ. ಅವಳಲ್ಲಿಯೂ ಪರಮಾತ್ಮನ ಅಂಶ ಇದೆ ಎಂದು ಗುರುತಿಸಿ, ಮೇಲಿನ ಜಾತಿಯವಳು ಎಂದು ಸಮಾಜ ಕರೆಯುವ ಸ್ತ್ರೀಯೊಬ್ಬಳು ಅವಳನ್ನು ತನ್ನ ಮಗಳಂತೆ ಕಾಣುತ್ತಾಳೆ.

‘ಕರ್ಣಭೂಷಣಂ’ ಎನ್ನುವುದು ಉಳ್ಳೂರರ ಒಂದು ಸುಂದರ ಕವನ. ಇದು ಮಹಾಭಾರತದ ಆಧಾರದ ಮೇಲೆ ಬರೆದದ್ದು. ಅರ್ಜುನ ದೇವೇಂದ್ರನ ಆಶೀರ್ವಾದದಿಂದ ಹುಟ್ಟಿದವನು. ಕರ್ಣ ಸೂರ್ಯನ ಆಶೀರ್ವಾದದಿಂದ ಹುಟ್ಟಿದವನು, ಮಹಾಭಾರತ ಯುದ್ಧದಲ್ಲಿ ಇವರು ಬದ್ಧ ವೈರಿಗಳಾಗಿ ಒಬ್ಬರನ್ನೊಬ್ಬರು ಎದುರಿಸಲಿದ್ದಾರೆ. ಇಬ್ಬರೂ ಮಹಾವೀರರು, ಧನುರ್ವಿದ್ಯೆಯ ಪ್ರಭುಗಳು. ಕರ್ಣನಿಗೆ ಹುಟ್ಟುವಾಗಲೆ ಕವಚವೂ ಕಿವಿಯಲ್ಲಿ ಕುಂಡಲಗಳೂ ಇದ್ದವು. ಅವನು ಅವನ್ನು ಧರಿಸಿರುವವರೆಗೆ ಯಾರೂ ಅವನನ್ನು ಸೋಲಿಸಲಾರರು. ಇದು ಇಂದ್ರನಿಗೆ ತಿಳಿದಿದೆ. ಕರ್ಣ ದಾನಶೂರ ಎಂದೂ ಗೊತ್ತು. ಅವನಿಂದ ಕವಚಕುಂಡಲಗಳನ್ನು ದಾನವಾಗಿ ಪಡೆಯಬೇಕು, ಅದಕ್ಕಾಗಿ ಬ್ರಾಹ್ಮಣನ ವೇಷದಲ್ಲಿ ಹೋಗಿ ಬೇಡಬೇಕು ಎಂದು ಇಂದ್ರನ ಯೋಚನೆ. ಇದು ಸೂರ್ಯನಿಗೆ ಗೊತ್ತು. ಸೂರ್ಯ ಕರ್ಣನ ಬಳಿಗೆ ಹೋಗಿ, ‘ದೇವೇಂದ್ರ ವೃದ್ಧ ಬ್ರಾಹ್ಮಣನ ವೇಷದಲ್ಲಿ ಬರುತ್ತಾನೆ, ನಿನ್ನ ಕವಚ-ಕುಂಡಲಗಳನ್ನು ಬೇಡುತ್ತಾನೆ, ಕೊಡಬೇಡ’ ಎಂದು ಎಚ್ಚರಿಸುತ್ತಾನೆ. ಕರ್ಣನು, ‘ಬೇಡಿದವರಿಗೆ ನಾನು ಇಲ್ಲ ಎಂದು ಹೇಳಲಾರೆ. ದೇವೇಂದ್ರನಾಗಲಿ ಯಾರೇ ಆಗಲಿ ಬಂದು ಬೇಡಿದರೆ ಕೇಳಿದುದನ್ನು ಕೊಡುತ್ತೇನೆ’ ಎಂದು ಹೇಳುತ್ತಾನೆ. ಈ ಕಥೆಯನ್ನು ಉಳ್ಳೂರರು ತುಂಬಾ ಪರಿಣಾಮಕಾರಿಯಾಗಿ ಹೇಳಿದ್ದಾರೆ. ಕರ್ಣನ ಪಾತ್ರವನ್ನು ಉಜ್ವಲವಾಗಿ ಚಿತ್ರಿಸಿದ್ದಾರೆ. ಕರ್ಣನಿಗೆ, ‘ನಿನ್ನ ಕವಚಕುಂಡಲಗಳನ್ನು ದಾನ ಮಾಡಬೇಡ’ ಎಂದು ಹೇಳಲು ಬಂದ ಸೂರ್ಯನೇ, ಮಗನ ಉದಾತ್ತ ಸ್ವಭಾವವನ್ನು ಮೆಚ್ಚಿ ಅವನ ತೀರ್ಮಾನವೇ ಶ್ರೇಷ್ಠವಾದದ್ದು ಎಂದುಕೊಳ್ಳುತ್ತಾನೆ. ಮಗನ ಮನಸ್ಸನ್ನು ಬದಲಾಯಿಸಲು ಬಂದ ತಂದೆಯೇ ಮನಸ್ಸು ಬದಲಾಯಿಸುತ್ತಾನೆ. ಕರ್ಣನ ತೀರ್ಮಾನದ ಪರಿಣಾಮವಾಗಿ ಕರ್ಣ ಸಾಯುತ್ತಾನೆ ಎಂದು ಕರ್ಣನಿಗೂ ಗೊತ್ತು. ಸೂರ್ಯನಿಗೂ ಗೊತ್ತು. ಸೂರ್ಯ ಮತ್ತೆ ಮತ್ತೆ ಹಿಂದಿರುಗಿ ಮಗನನ್ನೇ ನೋಡುತ್ತ ಮರೆಯಾಗುತ್ತಾನೆ. ಮನುಷ್ಯ ಎಷ್ಟು ಕಾಲ ಬದುಕುತ್ತಾನೆ ಎನ್ನುವುದು ಮುಖ್ಯವಲ್ಲ. ಹೀಗೆ ಯಾವ ಆದರ್ಶಕ್ಕಾಗಿ ಬದುಕುತ್ತಾನೆ ಎನ್ನುವುದು ಮುಖ್ಯ ಎಂಬ ದೃಷ್ಟಿ ಈ ಕವನದಲ್ಲಿ ಹೃದಯ ಮುಟ್ಟುವಂತೆ ನಿರೂಪಿತವಾಗಿದೆ.

ಉಳ್ಳೂರರ ಸಂದೇಶ

ಉಳ್ಳೂರರು ಸಾರಿದರು:

ಸಾಕೆಮಗೆ ಒಂದೆ ಮತ ಸಾಕೆಮಗೆ ಒಂದೆ ವರ್ಗ
ನಮಗೊಂದೆ ರಾಷ್ಟ್ರ ನಮಗೊಬ್ಬನೆ ದೈವ

ನಿರಂತರ ಕಾಯಕ ಮತ್ತು ಧೈರ್ಯವನ್ನೊಳಗೊಂಡ ಜೀವನ ಇದೇ ಉಳ್ಳೂರರ ಕವನಗಳ ಸಂದೇಶ. ಅವರು ಭಾರತೀಯ ಸಂಸ್ಕೃತಿಯ ಮೇಲಿರಿಸಿಕೊಂಡಿದ್ದ ಆದರಾಭಿಮಾನಗಳು ಇಂದಿನ ಜನಾಂಗಕ್ಕೆ ಮಾದರಿ.

ಕೇರಳದಲ್ಲೆ ಹುಟ್ಟುತ್ತೇನೆ

ತಾವು ಮನಸಾರೆ ಪ್ರೀತಿಸಿದ ಕೇರಳವನ್ನು ಕುರಿತು ಎಷ್ಟು ವರ್ಣಿಸಿದರೂ ಮಹಾಕವಿಗೆ ಅದು ಕಡಮೆಯೇ.

ಈ ಮಣ್ಣೇ ನನ್ನನ್ನು ಬೆಳಿಸಿದ್ದು
ನನಗಿನ್ನೊಂದು ಜನುಮವಿರುವುದಾದರೆ
ಅದು ಕೇರಳದಲ್ಲಾಗಬೇಕು
ಅಡಿಯಿಂದ ಮುಡಿಯವರೆಗೂ
ನಿನ್ನಲಾಗಬೇಕು ತಾಯೆ!’’

ಎಂದು ಹಾಡಿದರು ಮಹಾಕವಿ. ಉಳ್ಳೂರ್ ಮಹಾಕವಿಯ ಬದುಕು ಇಂದಿನ ಜನತೆಗೆ ಒಂದು ಆದರ್ಶ.ಅವರ ಚರಿತ್ರೆ ಒಂದು ಕಾವ್ಯ.