೨೩-೮-೧೯೫೨ ರಂದು ಬೆಂಗಳೂರಿನಲ್ಲಿ ಜನಿಸಿದ ಉಷಾ ವಲ್ಲಭಂ. ‘ಕಲ್ಯಾಣ ಸುಂದರಂ’, ಟಿ. ಪುಟ್ಟಸ್ವಾಮಯ್ಯನವರಲ್ಲಿ ಸಂಗೀತಾಭ್ಯಾಸ ಮಾಡಿ ಆನೂರ್ ಎಸ್‌. ರಾಮಕೃಷ್ಣನವರಲ್ಲಿ ಉನ್ನತ ಶಿಕ್ಷಣ ಪಡೆದು ಉತ್ತಮ ಗಾಯಕಿಯರ ಸಾಲಿಗೆ ಸೇರುವವರಾದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಆಕಾಶವಾಣಿಯ ‘ಎ’ ಶ್ರೇಣಿಯ ಕಲಾವಿದೆ. ಬೆಂಗಳೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕಿಯಾಗಿ, ರಿಷಿ ವ್ಯಾಲಿ ಶಾಲೆಯಲ್ಲಿ ಉಪನ್ಯಾಸಕಿಯಾಗಿ, ಅಯ್ಯನಾರ್ ಸಂಗೀತ ಶಾಲೆಯಲ್ಲಿ ಶಿಕ್ಷಕಿಯಾಗಿ ವಿವಾಹದ ಮುನ್ನ ಸೇವೆ ಸಲ್ಲಿಸಿದ್ದರು.

ವಿವಾಹಾನಂತರ ಉಷಾಚಾರ್ ಅಮೆರಿಕದಲ್ಲಿ ನೆಲೆಸಿದ್ದು ಅಲ್ಲಿನ ಮೇರಿಲ್ಯಾಂಡ್‌ನಲ್ಲಿರುವ ‘ನಾದ ತರಂಗಿಣಿ’ ಸಂಸ್ಥೆಯ ನಿರ್ದೇಶಕಿಯಾಗಿ ಹಲವು ಕ್ರಿಯಾಶೀಲ ಕೆಲಸಗಳನ್ನು ಮಾಡಿರುತ್ತಾರೆ. ಭಾರತ ಮತ್ತು ಅಮೆರಿಕದಲ್ಲಿ ನೆಲೆಸಿರುವ ಹಲವಾರು ಭಾರತೀಯ ಸಂಗೀತ ಕಲಾವಿದರನ್ನು ಆಹ್ವಾನಿಸಿ ಮೂರು ದಿನಗಳ ಸಂಗೀತೋತ್ಸವವೊಂದನ್ನು ಪ್ರತಿ ವರ್ಷವೂ ನಡೆಸುತ್ತಾರೆ. ಇದಲ್ಲದೆ ‘ಕಲ್ಯಾಣಿರಾಗದ ವಿವಿಧ ಮುಖಗಳ ಪರಿಚಯ’, ‘ಭಾರತೀಯ ಸಂಗೀತದ ವಿವಿಧ ರಚನಾ ಪ್ರಕಾರಗಳ ಪ್ರಸ್ತುತಿ’, ‘ಪಾ ಫನಾಶಂ ಶಿವನ್‌ರ ಜನ್ಮ ಶತಮಾನೋತ್ಸವ’- ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಡಿ.ವಿ.ಜಿ.ಯವರ ಅಂತಃಪುರ ಗೀತೆಗಳನ್ನಾಧರಿಸಿದ ರೂಪಕವನ್ನು ವೇದಿಕೆಗೆ ತಂದಿದ್ದಾರೆ.

ನವ ರಾಗಮಾಲಿಕಾ, ವಿನಾಯಕ ವಂದನಂ, ದೇವೀ ದರ್ಶನಂ, ವಚನಾಮೃತಧಾರೆ ಮುಂತಾದ ಇವರ ಧ್ವನಿಸುರುಳಿಗಳೂ ಹೊರಬಂದಿವೆ. ಆಕಾಶವಾಣಿ-ದೂರದರ್ಶನ ಕೇಂದ್ರಗಳ ಮೂಲಕವೂ ಸಂಗೀತ ರಸಿಕರಿಗೆ ಪರಿಚಿತರಾಗಿರುವ ಉಷಾ ದೇಶ ವಿದೇಶಗಳ ಹಲವಾರು ಪ್ರತಿಷ್ಠಿತ ಸಭೆ ಸಂಸ್ಥೆಗಳಲ್ಲಿ ಗಾಯನ ಮಾಡಿದ್ದಾರೆ. ಅನೇಕ ಸಂಗೀತ ಮತ್ತು ನೃತ್ಯ ರೂಪಕಗಳಿಗೆ ಹಾಗೂ ನಾಟಕಗಳಿಗೆ ಸಂಗೀತ ಸಂಯೋಜಿಸಿ ಸಂಯೋಜಕಿಯಾಗಿಯೂ ತಾವು ಪ್ರಬುದ್ಧರೆಂಬುದನ್ನು ದೃಢಪಡಿಸಿದ್ದಾರೆ. ತಮ್ಮದೇ ಆದ ಸಂಸ್ಥೆ ‘ನಾದೋಪಾಸನ’ವನ್ನು ಸ್ಥಾಪಿಸಿ ತನ್ಮೂಲಕವೂ ಅನೇಕ ಉಪನ್ಯಾಸಗಳು, ಕಾರ್ಯಾಗಾರಗಳು, ಸಮ್ಮೇಳನಗಳನ್ನು ನಡೆಸುತ್ತಿರುತ್ತಾರೆ.

ಹೊರ ದೇಶದಲ್ಲಿದ್ದು ನಮ್ಮ ಭಾರತೀಯ ಸಂಗೀತ ಸಂಸ್ಕೃತಿಗಳ  ಉನ್ನತಿಗಾಗಿ ಸೇವೆ ಸಲ್ಲಿಸುತ್ತಿರುವ ಉಷಾ ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ೨೦೦೫-೦೬ರ ಸಾಲಿನ ಪ್ರಶಸ್ತಿ ಪಡೆದಿದ್ದಾರೆ.