ಉಷಾ ದಾತಾರ್‌ರವರು ಭರತನಾಟ್ಯ, ಮೋಹಿನ ಅಟ್ಟಂ, ಕೂಚಿಪುಡಿ ನಾಟ್ಯ ಮತ್ತು ಕಥಕಳಿಯಲ್ಲೂ ಅಷ್ಟೇ ಪರಿಣತಿಯನ್ನು ಹೊಂದಿದ್ದಾರೆ.

ತಮ್ಮ ಏಳನೇ ವಯಸ್ಸಿನಲ್ಲಿಯೇ ನೃತ್ಯ ಕಲಿಯಲಾರಂಭಿಸಿದ ಉಷಾ ದಾತಾರ್ ಸ್ನೇಹಪ್ರಭಾರವರೇ ಮೊದಲ ಗುರು. ನಂತರ ಕೇರಳ ಕಲಾ ಮಂಡಳಂನಲ್ಲಿ ವಿದ್ಯಾರ್ಥಿ ವೇತನದೊಂದಿಗೆ ಐದು ವರ್ಷಗಳ ಕಾಲ ಗುರುಕುಲ ಪದ್ಧತಿಯಲ್ಲಿ ಶಿಕ್ಷಣ. ೯ನೇ ವರ್ಷದಲ್ಲಿ ಮೋಹಿನಿ ಅಟ್ಟಂ ಹಾಗೂ ಭರತ ನಾಟ್ಯದಲ್ಲಿ ಪರಿಣತಿ. ಆಂಧ್ರ ಸಂಗೀತ ಅಕಾಡೆಮಿಯ ಆಶ್ರಯದಲ್ಲಿ ೧೯೭೩ರಲ್ಲಿ ಕೂಚಿಪುಡಿ ನಾಟ್ಯ, ದೇವಾಲಯ ನೃತ್ಯ, ಸಾತ್ವಿಕ ಅಭಿನಯದ ಶಿಕ್ಷಣ, ನಂತರ ಡಾ|| ವೆಂಕಟಲಕ್ಷ್ಮಮ್ಮ ಹಾಗೂ ಜೇಜಮ್ಮನವರಿಂದ ಮೈಸೂರು ಶೈಲಿಯ ನೃತ್ಯವನ್ನು ಕಲಿತರು. ಅಜ್ಜಂಪುರದಲ್ಲಿ ನಡೆದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ದಜೆ, ಇಂಡೋ-ಚೈನಾ ಯುದ್ಧ ಸಮಯದಲ್ಲಿ ನೀಫಾ ಗಡಿ ಪ್ರದೇಶದಲ್ಲಿ ಯೋಧರ ಮನರಂಜನೆಗಾಗಿ ನೀಡಿದ ನೃತ್ಯ ಪ್ರದರ್ಶನ, ದೇವಾಲಯ ನೃತ್ಯದ ಪುನಶ್ಚೇತನ ಇವರ ಅತ್ಯುನ್ನತ ಸಾಧನೆಯಾಗಿದೆ.

ಸುಮಾರು ೨೫ ವರ್ಷಗಳಿಂದ ೧೦೦೦ಕ್ಕೂ ಹೆಚ್ಚಿನ ನೃತ್ಯ ಕಾರ್ಯಕ್ರಮಗಳನ್ನು ದೇಶದ ಎಲ್ಲೆಡೆಯಲ್ಲಿಯೂ ನೀಡಿ ಹೊರ ದೇಶಗಳಲ್ಲೂ ನೃತ್ಯ ಕಾರ್ಯಕ್ರಮವನ್ನು ನಡೆಸಿಕೊಟ್ಟು ಎಲ್ಲರ ಅಭಿನಂದನೆಗೆ ಪಾತ್ರರಾಗಿದ್ದಾರೆ.

’ಕಾಡುಕುದುರೆ’, ’ಮಾಡಿ ಮಡಿದವರು’, ಮುಂತಾದ ಚಲನಚಿತ್ರಗಳಿಗೆ ನೃತ್ಯ ನಿರ್ದೇಶನವನ್ನು ನೀಡಿದ್ದಾರೆ. ಹೆಸರಾಂತ ಕಲಾವಿದೆ ವೈಜಯಂತಿ ಮಾಲಾರವರು ಮೋಹಿನಿ ಅಟ್ಟಂ ನೃತ್ಯವನ್ನು ಅವರಿಂದ ಕಲಿತಿದ್ದಾರೆ. ಅವರ ನಿರ್ದೇಶಿಸಿದ ನೃತ್ಯ ರೂಪಕ, ನೃತ್ಯ ಶೈಲಿಗಳು, ದೇವಾಲಯ ನೃತ್ಯಗಳು ದೂದರ್ಶನದಲ್ಲಿ ಬಿತ್ತರಗೊಂಡು ದೇಶಾದ್ಯಂತ ಜನಮನ್ನಣೆ ಗಳಿಸಿದೆ.

ಕರ್ನಾಟಕ ಶಿಕ್ಷಣ ಇಲಾಖೆಯವರು ಸಿದ್ದಪಡಿಸುತ್ತಿರುವ ಕಥಕ್ಕಳಿ ಪಠ್ಯಪುಸ್ತಕ ಸಮಿತಿಯ ಅಧ್ಯಕ್ಷೆಯಾಗಿಯೂ, ರಾಜ್ಯ ಪರೀಕ್ಷಾ ಮಂಡಳಿಗೆ ಮಾರ್ಗದರ್ಶಕರಾಗಿಯೂ, ಬೆಂಗಳೂರು ವಿಶ್ವವಿದ್ಯಾಲಯದ ನಾಟಕ ಹಾಗೂ ನೃತ್ಯ ವಿಭಾಗದಲ್ಲಿ ರೀಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಡಿಸ್ಸಿ ನೃತ್ಯ ಶೈಲಿಯಲ್ಲಿ ಪರಿಣತಿಯನ್ನು ಹೊಂದುತ್ತಿರುವ ಈ ಕಲಾವಿದೆ ಯೋಗ ಕೇಂದ್ರದ ಪ್ರಾಧ್ಯಾಪಕಿಯೂ ಆಗಿದ್ದಾರೆ.

ಕರ್ನಾಟಕ ಸರ್ಕಾರವೂ ಅವರ ಪ್ರತಿಭೆಯನ್ನು ಗುರುತಿಸಿ ೧೯೮೨-೮೪ರವರೆಗೆ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರನ್ನಾಗಿ ನೇಮಿಸಿತ್ತು. ಸೆನ್ಸಾರ್ ಮಂಡಳಿಯ ಸದಸ್ಯರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದಾರೆ.

ಇಂಥ ಅಪೂರ್ವ ಕಲಾವಿದೆಯ ಪ್ರತಿಭೆಯ ಮೆರುಗನ್ನು ಹೆಚ್ಚಿಸುವಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು “ಕರ್ನಾಟಕ ಕಲಾ ತಿಲಕ” ಬಿರುದು ಮತ್ತು ೧೯೯೪-೯೫ರ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.