ಜನನ : ೨೬-೩-೧೯೩೨ – ವಿಜಾಪುರ

ಮನೆತನ : ಸಂಗೀತಾಸಕ್ತರ ಮನೆತನ, ತಂದೆ ಶ್ರೀನಿವಾಸರಾವ್ ಮುದ್ದೆಬಿಹಾಳ ಅವರೂ ಸಂಗೀತ ಬಲ್ಲವರು.

ಗುರುಪರಂಪರೆ : ಮೊದಲಿಗೆ ತಂದೆಯವರ ಮಾರ್ಗದರ್ಶನ. ಅನಂತರ ರಂಗಾಚಾರ್ಯ ಕಾಖಂಡಕಿ ಅವರಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಮುಂದೆ ಹುಬ್ಬಳ್ಳಿಯ ರಾಮಣ್ಣ ದೇಸಾಯಿಯವರಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ಅನಂತರದಲ್ಲಿ ಧಾರವಾಡದ ಸಂಗೀತ ಮಹಾವಿದ್ಯಾಲಯದಲ್ಲಿ ಪ್ರಥಮ ಶ್ರೇಣಿಯಲ್ಲಿ ಬಿ.ಮ್ಯೂಸಿಕ್ ಮಾಡಿ ೧೯೮೦ ರಲ್ಲಿ ಎಂ. ಮ್ಯೂಸಿಕ್ ಪದವಿ ಗಳಿಸಿ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯದ ಸಂಗೀತ ವಿಶಾರದ ಪರೀಕ್ಷೆಯಲ್ಲೂ ತೇರ್ಗಡೆಯಾಗಿದ್ದಾರೆ.

ಸಾಧನೆ: ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಸ್ನಾತಕೋತ್ತರ ಪದವಿ ಉಪನ್ಯಾಸಕಿಯಾಗಿ ಸೇವೆಯಲ್ಲಿದ್ದರು. ಶಾಸ್ತ್ರೀಯ ಸಂಗೀತ ಮಾತ್ರವಲ್ಲದೆ ಸುಗಮ ಸಂಗೀತ ಕ್ಷೇತ್ರದಲ್ಲೂ ಸಾಕಷ್ಟು ಪ್ರಾವೀಣ್ಯತೆ ಪಡೆದು ಕನ್ನಡ, ಮರಾಠಿ ಹಾಗೂ ಹಿಂದಿ ಭಾಷೆಗಳಲ್ಲಿನ ಗೀತೆಗಳನ್ನು ರಾಷ್ಟ್ರಾದ್ಯಂತ ಹಾಡಿ ಜನಪ್ರಿಯತೆ ಗಳಿಸಿದ್ದಾರೆ. ’ಪ್ರಬುದ್ಧ ಕರ್ನಾಟಕ’ದ ಬೆಳ್ಳಿಹಬ್ಬದ ಸಂದರ್ಭದಲ್ಲಿ ’ಹಚ್ಚೇವು ಕನ್ನಡದ ದೀಪ’ ಗೀತೆಯನ್ನು ಹಾಡಲು ವಿಶೇಷವಾಗಿ ಆಮಂತ್ರಿತರಾಗಿದ್ದರು. ಮೈಸೂರು ದಸರಾ ಉತ್ಸವದಲ್ಲಿ ಹಲವಾರು ಬಾರಿ ಹಾಡಿದ್ದಾರೆ. ಆಕಾಶವಾಣಿ ಕೇಂದ್ರದ ಸುಗಮ ಸಂಗೀತ ಗಾಯಕರಾಗಿದ್ದರು. ದ. ರಾ. ಬೇಂದ್ರೆ, ಆನಂದ ಕಂದ, ಕಾವ್ಯಾನಂದ, ಎನ್ಕೆ, ಕಣವಿ, ಎಕ್ಕುಂಡಿ, ಇಟಗಿ ಅವರ ಕವನಗಳನ್ನು ಸ್ಥಳದಲ್ಲೆ ರಾಗ ಹಾಕಿ ಹಾಡುವ ಸಾಮರ್ಥ್ಯ ಗಳಿಸಿಕೊಂಡಿದ್ದರು. ಅಷ್ಟು ಮಾತ್ರವಲ್ಲದೆ ಪುಣೆಯಲ್ಲಿದ್ದು ಅಲ್ಲಿನ ಕನ್ನಡೇತರರಿಗೆ ಕನ್ನಡ ಗೀತೆಗಳ ಮಾಧುರ್ಯತೆ, ಶ್ರೀಮಂತಿಕೆಯನ್ನು ತೋರಿಸಿ ಕೊಟ್ಟವರು.

ಪ್ರಶಸ್ತಿ – ಸನ್ಮಾನ : ಎಲೆಯ ಮರೆಯ ಕಾಯಿಯಂತಿದ್ದು ಯಾವ ಪ್ರಶಸ್ತಿ – ಗೌರವಗಳಿಗೆ ಅಪೇಕ್ಷೆ ಪಟ್ಟವರಲ್ಲ. ಆದರೂ ಅನೇಕ ಗೌರವ – ಸನ್ಮಾನಗಳೂ ಇವರನ್ನು ಅರಸಿಕೊಂಡು ಬಂದವು. ೨೦೦೨-೦೩ರ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಇವರಿಗೆ ಸಂದಿದೆ.