Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಉಸ್ತಾದ್ ಶೇಖ್ ಹನ್ನುಮಿಯ್ಯಾ

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಉನ್ನತ ಸಾಧನೆಗೈದು ನೂರಾರು ಶಿಷ್ಯರನ್ನು ತರಬೇತುಗೊಳಿಸಿ, ಭಾವೈಕ್ಯದ ಸಂದೇಶವನ್ನು ಸಂಗೀತದ ಮೂಲಕ ಕೃತಿಗಿಳಿಸಿರುವ ಮಧುರಕಂಠದ ಗಾಯಕ ಉಸ್ತಾದ್ ಶೇಖ್ ಹನ್ನು ಮಿಯ್ಯಾ ಅವರು.
ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಕೊರೂರಿನಲ್ಲಿ ೧೯೩೧ರಲ್ಲಿ ಜನಿಸಿದರು. ಪ್ರಕೃತಿಯ ವರವಾಗಿ ಬಂದ ಇಂಪಾದ ಕಂಠಸಿರಿಯನ್ನು ಹೊಂದಿದ್ದ ಶ್ರೀಯುತರು ಎಳೆಯ ವಯಸ್ಸಿನಲ್ಲೇ ಸಂಗೀತಾಭ್ಯಾಸವನ್ನು ಪ್ರಾರಂಭಿಸಿದರು. ಒಂಬತ್ತು ವರ್ಷದವರಾಗಿದ್ದಾಗಲೇ ಸಾರಂಗಿ ವಾದಕರಾಗಿದ್ದ ತಂದೆ ತೀರಿಕೊಂಡರು. ಬಡತನದ ನಡುವೆಯೂ ಪೂನಾಕ್ಕೆ ಹೋಗಿ ಭಾಸ್ಕರ ಸಂಗೀತ ವಿದ್ಯಾಲಯದಲ್ಲಿ ಒಂದು ವರ್ಷ ಸಂಗೀತ ಕಲಿತರು. ಅನಂತರ ಪರಭಣಿ ಎಂಬ ಊರಿನಲ್ಲಿ ಉಸ್ತಾದ್ ಡಾ. ಗುಲಾಮ ರಸೂಲ ಇವರ ಬಳಿ ೧೨ ವರ್ಷ ಎಡೆಬಿಡದೆ ಶ್ರಮಪಟ್ಟು ಅಭ್ಯಾಸ ನಡೆಸಿದರು. ಹಿಂದೂಸ್ತಾನಿ ಸಂಗೀತದ ಎಲ್ಲ ಆಯಾಮಗಳ ಪರಿಚಯ ಮಾಡಿಕೊಂಡ ಶ್ರೀಯುತರು ಸೊಲ್ಲಾಪುರ, ಕೊಲ್ಲಾಪುರ, ಬೆಳಗಾವಿ, ಮೊದಲಾದ ಪಟ್ಟಣಗಳಲ್ಲಿ ಸಂಗೀತ ಶಾಲೆಯನ್ನು ಪ್ರಾರಂಭಿಸಿ ಶಿಷ್ಯವೃಂದವನ್ನು ತರಬೇತುಗೊಳಿಸಿದರು.
೧೯೭೯ರಲ್ಲಿ ಭಾಲ್ಕಿ ಗ್ರಾಮಕ್ಕೆ ಬಂದು ಅಲ್ಲಿ ಸರಸ್ವತಿ ಸಂಗೀತ ವಿದ್ಯಾಲಯವನ್ನು ಸ್ಥಾಪಿಸಿ ನೂರಾರು ಶಿಷ್ಯರಿಗೆ ಸಂಗೀತ ಶಿಕ್ಷಣ ನೀಡಿದರು. ಇವರ ಶಾಲೆಗೆ ಅಖಿಲ ಭಾರತ ಗಂಧರ್ವ ಮಹಾ ವಿದ್ಯಾಲಯದ ಮಾನ್ಯತೆಯು ಲಭಿಸಿತು. ಕೊಳಲು, ತಬಲಾ ಹೀಗೆ ಇನ್ನಿತರ ವಾದ್ಯಗಳನ್ನು ಕಲಿಸತೊಡಗಿದರು. ಶಿಷ್ಯರೊಡಗೂಡಿ ಮಸೀದಿ, ಚರ್ಚು, ದೇವಸ್ಥಾನಗಳಲ್ಲಿ ತಮ್ಮ ಗಾಯನದ ರಸಗಂಗೆಯನ್ನು ಹರಿಸಿ ಜನ ಸಮೂಹದ ಮನಸೂರೆಗೊಂಡರು. ಸಹಜ ಗಾನದ ಮೋಡಿಯಿಂದ ಎಲ್ಲ ಜಾತಿ, ವರ್ಗಗಳ ಪ್ರೀತಿಗೆ ಪಾತ್ರರಾದರು ಶ್ರೀಯುತರು ನಿಜವಾದ ಅರ್ಥದಲ್ಲಿ ಭಾವೈಕ್ಯದ ಪ್ರತೀಕವಾಗಿದ್ದಾರೆ.
ಶ್ರೀಯುತರ ಗಾಯನ ಸಾಧನೆಯನ್ನು ಗಮನಿಸಿ ಜನ ಸಂಘಟನೆಗಳು ಪರಭಣಿ, ಮಹಾರಾಷ್ಟ್ರದ ಅಹ್ಮದ್‌ನಗರ, ಪಾಥರಡಿ, ಮಿರಜಗಾಂವ್, ಉದಗೀರ್ ಮೊದಲಾದ ಸ್ಥಳಗಳಲ್ಲಿ ಸಾರ್ವಜನಿಕ ಸನ್ಮಾನ ಮಾಡಿ ಬಿರುದು ಬಾವಲಿಗಳನ್ನು ನೀಡಿ ಸನ್ಮಾನಿಸಿವೆ. ಆಕಾಶವಾಣಿಯಲ್ಲಿ ಇವರ ಸಂಗೀತ ಬಿತ್ತರಗೊಂಡಿದೆ.
ಅಚಲ ಶ್ರದ್ಧೆ, ಅದಮ್ಮ ನಿಷ್ಠೆ, ಸತತ ಸಾಧನೆಗಳಿಂದ ಸಿದ್ದಿ ಪಡೆದು ಸ್ವಂತ ಪರಿಶ್ರಮದಿಂದ ಸಂಗೀತ ಕ್ಷೇತ್ರದಲ್ಲಿ ಮಹತ್ವದ ಸ್ಥಾನ ಸಂಪಾದಿಸಿದ ಶ್ರೇಷ್ಠ ಹಿಂದೂಸ್ತಾನಿ ಗಾಯಕ ಉಸ್ತಾದ್ ಶೇಖ್ ಹನ್ನುಮಿಯ್ಯಾ ಅವರು.