ಇಲ್ಲಿ ಅನ್ನವೇ ಪ್ರಧಾನ ಬೆಳೆ! ಮಲೆನಾಡಿನಲ್ಲಿ ಹತ್ತಕ್ಕೂ ಹೆಚ್ಚು ಭತ್ತದ ತಳಿಗಳಿವೆ. ಇಳುವರಿ, ವ್ಯಾಪಾರದ ದೃಷ್ಠಿಯಿಂದ ನೋಡಿದ್ರೆ ಇವು ಉತ್ತಮ ತಳಿಗಳೇನೋ ಸರಿ. ಆದ್ರೆ ಊಟದ ವಿಷಯಕ್ಕೆ ಬಂದಾಗ ಈ ತಳಿಗಳು ಸೈ ಎನಿಸಿಕೊಳ್ಳಲಾರವು. ಬೆಳೆದ ಭತ್ತವನ್ನು ಮಾರಿ ಅಂಗಡಿಯಿಂದ ಅಕ್ಕಿ ಕೊಂಡು ತಂದ ಅದೆಷ್ಟೋ ರೈತರು ಇಲ್ಲಿದ್ದಾರೆ. ಹೀಗಿರುವಾಗ ಊಟಕ್ಕೊಂದು ಭತ್ತ ಬೇಕೆನ್ನುವ ಆಲೋಚನೆ ಎಲ್ಲರಲ್ಲೂ ಬಂದಿತ್ತು. ಆಲೋಚನೆ ಮನಸ್ಸಿನಿಂದ ಹೊರಬಂದಾಗ ಭತ್ತ ಹುಡುಕುವ ಕಾರ್ಯ ಶುರುವಾಯಿತು.

‘ನಮಗೆ ಊಟಕ್ಕೊಂದು ಒಳ್ಳೆಯ ಅಕ್ಕಿ ಕೊಡಿ’!- ದೇಸಿ ಭತ್ತದ ತಳಿ ಹುಡುಕಾಟದ ಸಭೆಯಲ್ಲಿ ಕುಳಿತಿದ್ದ ಬೇಸಾಯ ತಜ್ಞರು, ಚಳುವಳಿಕಾರರು, ಬಿತ್ತನೆ ಬೀಜ ಪರಿಣಿತರ ಮುಂದೆ ಮಲೆನಾಡಿನ ಭತ್ತ ಬೆಳೆಗಾರರು ಹೀಗೊಂದು ಮನವಿ ಮಾಡಿದ್ದರು.

ಅರೆ, ಎಕರೆಗಟ್ಟಲೆ ಭತ್ತದ ಗದ್ದೆಗಳಿವೆ. ಟನ್‌ಗಟ್ಟಲೆ ಅಕ್ಕಿ ಬೆಳೆಯುತ್ತಾರೆ. ನಾಡಿಗೆ ಅನ್ನ ಉಣಿಸುವ ಸಕಲೇಶಪುರದಲ್ಲಿ ‘ಊಟದ ಅಕ್ಕಿಗೆ’ ಬರವೇ? ಸಭೆಯಲ್ಲಿದ್ದವರು ತಮ್ಮ ಮನವಿಯ ಅರ್ಥವನ್ನು ವಿವರಿಸಿದರು.

 

ನಿಜ, ಸಕಲೇಶಪುರ ತಾಲ್ಲೂಕಿನಲ್ಲಿ ನೂರಾರು ಎಕರೆ ಭತ್ತದ ಗದ್ದೆಗಳಿವೆ. ಸಾವಿರಾರು ಟನ್ ಭತ್ತ ಬೆಳೆಯುತ್ತಾರೆ. ಹೇರಳವಾದ ಅಕ್ಕಿಯೂ ಉತ್ಪಾದನೆಯಾಗುತ್ತದೆ. ಆದರೂ ಈ ಭಾಗದ ರೈತರಿಗೆ ‘ಊಟಕ್ಕೊಂದು ಒಳ್ಳೆ ಅಕ್ಕಿ ಇಲ್ವಲ್ಲಾ’ ಎಂಬ ಕೊರಗು ಇದೆ.

ಒಂದು ಕಾಲದಲ್ಲಿ ಸಕಲೇಶಪುರ ಸುತ್ತ ಆಲೂರು ಸಣ್ಣ, ಗೌರಿಸಣ್ಣ, ಹೊಳೆಸಾಲು ಚಿಪ್ಪಿಗ, ಘಂಸಾಲೆ, ದಪ್ಪಭತ್ತ, ನೆಟ್ಟಿ ಬೆಳ್ಳಕ್ಕಿ, ಕ್ಯಾಸರಿ(ಕಿರುವಾಣ), ರಾಜಮುಡಿ ಯಂತಹ ಹತ್ತಾರು ದೇಸಿ ಭತ್ತದ ತಳಿಗಳಿದ್ದವು ಎಂದು ಹಿರಿಯ ರೈತರು ನೆನಪಿಸಿಕೊಳ್ಳುತ್ತಾರೆ. ಆಗ ಊಟಕ್ಕೊಂದು, ದನಕರುಗಳ ಮೇವಿಗೊಂದು, ಹಬ್ಬಹಬ್ಬಕ್ಕೂ ವಿಶೇಷ ಅಡುಗೆಗಳಿಗೆಗಾಗಿಯೇ ಬೆಳೆಯುವ ಹತ್ತಾರು ಭತ್ತದ ತಳಿಗಳು ನಮ್ಮಲ್ಲಿದ್ದವು. ಹಸಿರು ಕ್ರಾಂತಿ ನಂತರ ಹೈಬ್ರೀಡ್ ತಳಿಗಳು ಕಾಲಿಟ್ಟಿದ್ದೇ ಇಟ್ಟಿದ್ದು, ಎಲ್ಲ ದೇಸಿ ತಳಿಗಳೆಲ್ಲ ಒಂದೊಂದಾಗಿ ನಾಪತ್ತೆಯಾದವು. ಅವುಗಳ ಜಾಗದಲ್ಲಿ ಈಗ ಅಧಿಕ ಇಳುವರಿ ತಳಿಗಳಷ್ಟೇ ಉಳಿದಿವೆ.

ಪತ್ತೆಯಾದ ‘ದೇಸಿ ತಳಿ’ ಮಾಹಿತಿ

ಮೂರು ವರ್ಷಗಳ ಹಿಂದೆ ಭೂಮಿ ಸುಸ್ಥಿರ ಅಭಿವೃದ್ದಿ ಸಂಸ್ಥೆ ಈ ವಿಚಾರವನ್ನು ಪತ್ತೆ ಹಚ್ಚಿತು. ಸಕಲೇಶಪುರ ತಾಲ್ಲೂಕು ಯೆಡೇಹಳ್ಳಿಯಲ್ಲಿ ಸಾವಯವ ಗ್ರಾಮ ಅನುಷ್ಠಾನದ ವೇಳೆ ತಳಿ ಸಮೀಕ್ಷೆ ಮಾಡಿದಾಗ, ಸಂಸ್ಥೆಗೆ ದೇಸಿ ತಳಿಗಳ ಮಾಹಿತಿ ಲಭ್ಯವಾಯಿತು. ಅನೇಕ ರೈತರಿಗೆ ಈಗಲೂ ದೇಸಿ ತಳಿಗಳ ಮೇಲಿನ ಆಸಕ್ತಿಯಿರುವುದು, ಅವುಗಳನ್ನು ಸಂರಕ್ಷಿಸಬೇಕು, ಮತ್ತೆ ನಮ್ಮ ನೆಲದಲ್ಲಿ ನಾಟಿ ಮಾಡಬೇಕೆಂಬ ಹಂಬಲವಿರುವುದನ್ನು ಸಂಸ್ಥೆ ಗುರುತಿಸಿತು.

ಇದೇ ಸಮಯದಲ್ಲಿ ರಾಜ್ಯದಲ್ಲಿ ಆರಂಭವಾಗಿದ್ದ ‘ಭತ್ತ ಉಳಿಸಿ’ ಆಂದೋಲನ ಯೆಡೇಹಳ್ಳಿಯಲ್ಲಿ ‘ದೇಸಿ ತಳಿಗಳ’ ಪ್ರಾಮುಖ್ಯ ಕುರಿತು ಆಂದೋಲನ ನಡೆಸಿತು. ಇದರಿಂದ ಉತ್ತೇಜಿತಗೊಂಡ ಯೋಜನೆಯ ಫಲಾನುಭವಿಗಳೆಲ್ಲ ಸಂಸ್ಥೆಯ ಮಾರ್ಗದರ್ಶನದಲ್ಲಿ ದೇಸಿ ತಳಿ ಉಳಿಸಲು ಸಂಕಲ್ಪ ಮಾಡಿದರು. ಊರಿನಿಂದ ನಾಪತ್ತೆಯಾದ ಭತ್ತದ ತಳಿಗಳ ಹುಡುಕಾಟ ಆರಂಭಿಸಿದರು

ದೇಸಿ ತಳಿ ಹುಡುಕಾಟದ ಹಾದಿಯಲ್ಲಿ

ನಾಪತ್ತೆಯಾಗಿರುವ ತಳಿಗಳನ್ನು ಪತ್ತೆ ಹಚ್ಚುವುದಾದರೂ ಹೇಗೆ?- ಇದಕ್ಕಾಗಿ ನಾಡಿನ ಭತ್ತ ಸಂರಕ್ಷಕರ ಸಹಕಾರ ಪಡೆಯುವುದಕ್ಕೆ ರೈತರು ತೀರ್ಮಾನಿಸಿದರು. ಸಿಕ್ಕಿ ಸಿಕ್ಕಿದ ಗೆಳೆಯರಿಗೆ ‘ನಿಮ್ಮೂರಿನಲ್ಲಿ ಈ ಭತ್ತದ ತಳಿ ಇದೆಯಾ? ಇದ್ದರೆ ನಮಗೆ ತಿಳಿಸಿ. ಹಿಡಿಯಾಷ್ಟಾದರೂ ಸಾಕು ಮರಾಯ್ರೆ’ ಎಂದು ದುಂಬಾಲು ಬಿದ್ದರು. ಹೀಗೆ ತಳಿಗಳ ಹುಡುಕಾಟ ನಡೆಸಿದಾಗ ಸಕಲೇಶಪುರದ ಸುತ್ತ ನಾಲ್ಕೈದು ದೇಸಿ ಭತ್ತದ ತಳಿಗಳು ‘ಹಿಡಿಯಷ್ಟು’ ಪ್ರಮಾಣದಲ್ಲಿ ಲಭ್ಯವಾದವು. ಆ ತಳಿಗಳನ್ನು ಅಲ್ಲಿನ ನಿಸರ್ಗ ಸಾವಯವ ಕೃಷಿ ಸಂಘ ಜೋಪಾನ ಮಾಡಿತು.

ತಳಿ ಸಂಗ್ರಹಿಸಿದ ನಂತರ ಅದನ್ನು ಆಸಕ್ತ ರೈತರಿಗೆ ತಮ್ಮ ಗದ್ದೆಗಳಲ್ಲಿ ಸಾವಯವ ವಿಧಾನದಲ್ಲಿ ಬೆಳೆಸಲು ಸಲಹೆ ನೀಡಲಾಯಿತು. ಕಟಾವಿನ ಹಂತದಲ್ಲಿ ನಾಡಿನ ತಳಿ ಪರಿಣಿತ ರೈತರನ್ನು ಆಹ್ವಾನಿಸಿ ತೆನೆ ಆಯ್ಕೆ ಮಾಡಿಸಿ, ದೇಸಿ ತಳಿಗಳನ್ನು ಸಂಗ್ರಹಿಸಿ, ಬೆಳೆಸಲಾಯಿತು.

ರೈತರ ಗದ್ದೆಯಲ್ಲೇ ತಳಿ ಪ್ರಾತ್ಯಕ್ಷಿಕೆ

ತಳಿ ಹುಡುಕ್ಕಿದ್ದಾಯಿತು. ಬೆಳೆಸಿದ್ದೂ ಆಯಿತು. ಅವುಗಳನ್ನು ದ್ವಿಗುಣ ಗೊಳಿಸಬೇಕು. ‘ದಾರಿ ಯಾವುದಯ್ಯ? ಎಂದು ಚಿಂತಿಸುತ್ತಿದ್ದ ವೇಳೆಯಲ್ಲಿ ನಿಸರ್ಗ ಸಾವಯವ ಕೃಷಿ ಸಂಘದ ಸದಸ್ಯರಲ್ಲೊಬ್ಬರಾದ ಕಾಡುಗದ್ದೆಯ ಚಿದಂಬರ ‘ತಾನು ೧೦ ಗುಂಟೆ ಸ್ಥಳದಲ್ಲಿ ಈ ಹದಿನೆಂಟು ತಳಿಗಳನ್ನು ಬೆಳೆಸಲು ಒಪ್ಪಿದರು. ಧೋ ಎಂದು ಸುರಿವ ಮಳೆಯ ನಡುವೆಯೇ ಹದಿನೆಂಟು ತಳಿಗಳನ್ನು ಪ್ರತ್ಯೇಕವಾಗಿ ಬಿತ್ತನೆ ಮಾಡಿದರು.

ಭತ್ತದ ತೆನೆಗಳು ತೊನೆದಾಡುವಾಗ ಅದರ ಅಂದವನ್ನು ಕಣ್ತುಂಬಿಕೊಂಡ ರೈತರ ಮೊಗದಲ್ಲಿ ಗೆಲುವಿನ ನಗೆ. ಈ ಸಂತೋಷವನ್ನು ಹಂಚಿಕೊಳ್ಳಬೇಕೆಂದು ‘ದೇಸಿ ಭತ್ತದ ತಳಿ ಕ್ಷೇತ್ರೋತ್ಸವ’ ಮಾಡಬೇಕೆಂದು ತೀರ್ಮಾನಿಸಿದರು.

ಕ್ಷೇತ್ರೋತ್ಸವನ್ನು ಅರ್ಥಪೂರ್ಣವಾಗಿಸಬೇಕೆಂದು ನಿರ್ಧರಿಸಿದರು. ಅದಕ್ಕಾಗಿ ಪರಿಣಿತ ರೈತ ಮಿತ್ರರನ್ನು ಆಹ್ವಾನಿಸಿದರು. ಅವರನ್ನು ತೆನೆ ತುಂಬಿದ್ದ ದೇಸಿ ತಳಿಗಳ ಅಂಗಳಕ್ಕಿಳಿಸಿ ಕೈಗೊಂದೊಂದು ಬಣ್ಣದ ದಾರಗಳನ್ನು ಕೊಟ್ಟು ‘ಉತ್ತಮ ತಳಿ ಆಯ್ಕೆ ಹಾಗೂ ತಳಿ ಶುದ್ದತೆ ಮಾಡುವಂತೆ’ ಮನವಿ ಮಾಡಿದರು. ಗೆಳೆಯರ ಮನವಿಗೆ ಒಪ್ಪಿದವರೆಲ್ಲರೂ ಪ್ರಾಮಾಣಿಕವಾಗಿ ಉತ್ತಮ ತಳಿಗಳನ್ನು ಆಯ್ಕೆ ಮಾಡಿದರು ಮಾತ್ರವಲ್ಲ, ಅವುಗಳ ಬೀಜ ಪಡೆದು ಅಭಿವೃದ್ದಿಪಡಿಸುವುದಾಗಿ ‘ಸಂಕಲ್ಪ ಮಾಡಿದರು’.

ದೇಸಿ ಭತ್ತದ ತಳಿಗಳ ಬಿತ್ತನೆ, ಕೊಯ್ಲು, ಬೀಜ ಸಂಗ್ರಹ ವಿಸ್ತರಣೆಗೊಳ್ಳುತ್ತಿದ್ದಂತೆ ಅವುಗಳನ್ನು ಒಂದು ಕಡೆ ಒಪ್ಪ ಮಾಡಬೇಕಾಯಿತು. ಈ ಪ್ರಕ್ರಿಯೆಗಾಗಿ ಆರಂಭವಾಗಿದ್ದೇ ‘ಸಮುದಾಯ ದೇಸಿ ಭತ್ತದ ಬೀಜ ಬ್ಯಾಂಕ್’.

ಹಿಡಿ ಭತ್ತ ಕೊಟ್ಟು, ದುಪ್ಪಟ್ಟು ಸಂಗ್ರಹ

ಕಳೆದ ೨೦೦೯ರಲ್ಲಿ ವಿಶ್ವ ಭೂಮಿ ದಿನಾಚರಣೆಯಂದು ಸಾಂಕೇತಿಕವಾಗಿ ಆರಂಭವಾದ ಸಮುದಾಯ ಬೀಜ ಬ್ಯಾಂಕ್ ನಂತರ ಚಿದಂಬರ ಅವರಂತೆ ಅನೇಕ ರೈತರು ದೇಸಿ ತಳಿಗಳನ್ನು ಸಂರಕ್ಷಿಸಲು ಆರಂಭಿಸಿದರು. ರೈತ ಲೋಹಿತಾಕ್ಷ ಅವರು ಬೀಜ ಬ್ಯಾಂಕ್‌ನಿಂದ ಒಂದು ಹಿಡಿ ಘಂಸಾಲೆ ಭತ್ತದ ತಳಿ ಪಡೆದರು. ೩ ವರ್ಷಗಳ ಕಾಲ ಈ ತಳಿಯನ್ನು ಬೆಳೆಸಿ, ಶುದ್ದಗೊಳಿಸಿ, ನೆರೆಯ ರೈತರಿಗೂ ಹಂಚಿದರು. ‘ಹಿಡಿ ಭತ್ತ ಕೊಟ್ಟದ್ದ ಬೀಜ ಬ್ಯಾಂಕಿಗೆ ೧೦೦ ಕೆಜಿ ಭತ್ತವನ್ನು ಬೆಳೆದುಕೊಡುವ ಮೂಲಕ ಲೋಹಿತಾಕ್ಷ ಅವರು ಸಮುದಾಯ ಬೀಜ ಬ್ಯಾಂಕ್ ಪರಿಕಲ್ಪನೆಯನ್ನು ಸಾಕಾರಗೊಳಿಸಿದರು.

ಬೀಜ ಬ್ಯಾಂಕ್ ಆರಂಭವಾದ ನಂತರ ಯೆಡೇಹಳ್ಳಿಯ ಸಾವಯವ ಕೃಷಿ ಸಂಘದ ಸಂಘದ ಅಧ್ಯಕ್ಷರಾದ ವೈ.ಸಿ.ರುದ್ರಪ್ಪನವರು ಒಂದು ಎಕರೆಯಲ್ಲಿ ರಾಜಮುಡಿ ತಳಿ ಬೆಳೆಸುತ್ತಿದ್ದಾರೆ. ಕುಂಬಾರಘಟ್ಟೆ ಕೃಷಿಕ ವೈ. ಎಂ. ರಾಜು ಒಂದು ಕೆ.ಜಿ ಚಿನ್ನಪೊನ್ನಿ ಭತ್ತವನ್ನು ಬೆಳೆದು ಶುದ್ದಿಗೊಳಿಸಿದ್ದಾರೆ. ‘ಕೇವಲ ೧೧೦ ದಿನಗಳಿಗೆ ಕಟಾವಾಗುವ ಈ ತಳಿ ಬೇಸಿಗೆ ಕಾಲಕ್ಕೆ ಸೂಕ್ತವಾಗಿದೆ. ಉಳಿದ ತಳಿಗಳು ೧೩೫-೧೫೦ ದಿನಗಳಲ್ಲಿ ಕಟಾವಾಗುವುದರಿಂದ ಮುಂಗಾರಿನ ಮಳೆಗೆ ಸಿಕ್ಕಿ ಅಪಾರ ನಷ್ಟವಾಗುತ್ತಿತ್ತು. ಹಾಗಾಗಿ ಚಿನ್ನಪೊನ್ನಿ ಮಲೆನಾಡಿನ ಬೇಸಿಗೆ ಬೆಳೆಗೆ ಉತ್ತಮ ತಳಿ’ ಎಂಬುದು ರಾಜು ಅಭಿಪ್ರಾಯ.

ಪ್ರಾಯೋಗಿಕವಾಗಿ ೨ ತಾಕುಗಳಲ್ಲಿ ಚಿನ್ನಪೊನ್ನಿ ಹಾಗೂ ಐ ಆರ್ ೬೪ ತಳಿಗಳನ್ನು ಬೆಳೆದು ಈ ಭಾಗಕ್ಕೆ ಇಳುವರಿ, ಬೆಳವಣಿಗೆ, ರುಚಿ ಹಾಗೂ ವಾತಾವರಣಕ್ಕೆ ಚಿನ್ನಪೊನ್ನಿ ಸೂಕ್ತ ಎಂಬುದನ್ನು ರಾಜು ಮನಗಂಡಿದ್ದಾರೆ. ಇದನ್ನು ಗಮನಿಸಿದ ಹತ್ತಾರು ರೈತರು ಈಗ ಚಿನ್ನಪೊನ್ನಿ ಭತ್ತವನ್ನು ಬೇಸಿಗೆಯಲ್ಲಿ ತಮ್ಮ ಗದ್ದೆಯಲ್ಲಿ ಬೆಳೆಯುತ್ತಿದ್ದಾರೆ.

ಯೆಡೇಹಳ್ಳಿಯ ನಿಸರ್ಗ ಸಾವಯವ ಕೃಷಿ ಸಂಘದವರ ಉತ್ಸಾಹ ಇಷ್ಟಕ್ಕೆ ನಿಲ್ಲಲಿಲ್ಲ. ಕಳೆದು ಹೋಗಿರುವ ಭತ್ತದ ತಳಿಗಳ ಹುಡುಕಾಟ ಮುಂದುವರೆಸಿದರು. ಭತ್ತದ ತಳಿಗಳ ಸಂಗ್ರಹ ವಿಸ್ತರಣೆಯಾಗತೊಡಗಿತು. ಸ್ಥಳದ ಕೊರತೆಯಿಂದಾಗಿ ಆ ತಳಿಗಳನ್ನು ತಮ್ಮ ತಮ್ಮ ಮನೆಗಳಲ್ಲಿ ೨ ವರ್ಷಗಳ ಕಾಲ ಸಂರಕ್ಷಿಸಿದರು. ತಳಿಗಳ ಸಂಖ್ಯೆ ಮತ್ತು ಪ್ರಮಾಣ ಅಧಿಕವಾದಾಗ ಬೀಜ ಬ್ಯಾಂಕಿಗೊಂದು ಕಟ್ಟಡ ಅನಿವಾರ್ಯವಾಗಿತ್ತು.

ಬೀಜ ಬ್ಯಾಂಕಿಗಾಗಿ ಕಟ್ಟಡ ನಿರ್ಮಾಣ

ಇಂತಾ ಹೊತ್ತಲ್ಲಿ ರೈತರೆಲ್ಲ ಸಂಘದಿಂದಲೇ ಸಮುದಾಯ ಭವನ ನಿರ್ಮಿಸುವ ಯೋಚನೆ ಮಾಡಿದರು. ಅದರಲ್ಲಿ ಬೀಜ ಬ್ಯಾಂಕ್, ಗ್ರಂಥಾಲಯ, ಸಭಾಂಗಣ ಎಲ್ಲವೂ ನಿರ್ಮಿಸಬೇಕೆಂಬ ‘ನೀಲ ನಕ್ಷೆ’ ಸಿದ್ದಪಡಿಸಿದರು. ನಂತರ ಭೂಮಿ ಸಂಸ್ಥೆ ರೈತರೊಂದಿಗೆ ಸೇರಿ ಸಂಗ್ರಹಿಸಿದ ಹಣ ಸುಮಾರು ೪೦ ಸಾವಿರಗಳಷ್ಟಾಯಿತು. ಜೊತೆಗೆ ಕಟ್ಟಡ ನಿರ್ಮಾಣಕ್ಕೆ ಕಲ್ಲು, ಮರಳು, ಕಬ್ಬಿಣ ಇತ್ಯಾದಿಗಳನ್ನೂ ದೇಣಿಗೆ ರೂಪದಲ್ಲಿ ಜನರು ಕೊಡಲು ಮುಂದಾದರು. ಕೂಡಲೆ ಬೀಜ ಬ್ಯಾಂಕ್ ಕಟ್ಟುವ ಕಾರ್ಯ ಶುರುವಾಯಿತು. ಆದರೆ ತಳಪಾಯ ಹಾಕಿ ಗೋಡೆ ನಿರ್ಮಿಸುವಷ್ಟರಲ್ಲಿ ಕೈಯಲ್ಲಿದ್ದ ಹಣ ಖಾಲಿಯಾಗಿತ್ತು. ಈಗ ನಾವ್ಯಾಕೆ ಜನಪ್ರತಿನಿಧಿಗಳನ್ನು ಕೇಳಬಾರದು ಎಂಬ ಚರ್ಚೆ ಶುರುವಾಯ್ತು. ಅಂತಿಮವಾಗಿ ಹಾಸನ ಜಿಲ್ಲಾ ಪಂಚಾಯ್ತಿಯ ಕೃಷಿ ಸ್ಥಾಯಿ ಸಮಿತಿ ಹಾಗೂ ಸಕಲೇಶಪುರ ಶಾಸಕರನ್ನು ಗ್ರಾಮಕ್ಕೆ ಕರೆಯಿಸಿ ತಮ್ಮ ಅಹವಾಲನ್ನು ಅವರ ಮುಂದಿಟ್ಟರು. ರೈತರ ಆಸಕ್ತಿಯನ್ನು ಕಂಡ ಶಾಸಕರು ತಮ್ಮ ಅನುದಾನದಿಂದ ಒಂದು ಲಕ್ಷ ರೂಪಾಯಿ ಹಣವನ್ನು ಮಂಜೂರು ಮಾಡಿದರು. ಕೆಲವೇ ದಿನಗಳಲ್ಲಿ ಸುಸಜ್ಜಿತ ಬೀಜ ಬ್ಯಾಂಕ್ ಯೆಡೇಹಳ್ಳಿಯಲ್ಲಿ ವಿಧ್ಯುಕ್ತವಾಗಿ ಆರಂಭವಾಯ್ತು.

ಈಗ ೨೪ ದೇಸಿ ಭತ್ತದ ತಳಿಗಳನ್ನು ಸಂರಕ್ಷಿಸಿರುವ ಬೀಜ ಬ್ಯಾಂಕಿನಲ್ಲಿ ಊಟಕ್ಕಾಗಿ ೩ ತಳಿಗಳ ಬೀಜೋತ್ಪಾಧನೆ ಆಗಿದೆ. ಅವುಗಳೆಂದರೆ ರಾಜಮುಡಿ, ಘಂಸಾಲೆ ಮತ್ತು ಕ್ಯಾಸಕ್ಕಿ. ಈ ವರ್ಷ ಬೀಜಬ್ಯಾಂಕಿನಿಂದ ೨ ಜಿಲ್ಲೆಗಳ ೪ ತಾಲ್ಲೂಕುಗಳಲ್ಲಿ ೧೯ ಕ್ವಿಂಟಾಲ್ ಬಿತ್ತನೆಯಾಗುತ್ತಿದೆ. ಸುಮಾರು ೬೦ ಎಕರೆಗಳಲ್ಲಿ ಬೀಜೋತ್ಪಾದನೆಗಾಗಿ ಬರದಿಂದ ಸಿದ್ಧತೆ ನಡೆದಿದೆ.

ತಳಿ ಸಂರಕ್ಷಣೆಗೆ ಪ್ರೇರೇಪಿಸಿದ ಬೀಜ ಬ್ಯಾಂಕ್ ಯೆಡೇಹಳ್ಳಿಯಲ್ಲಿ ಸಾಂಕೇತಿಕವಾಗಿ ಆರಂಭವಾದ ಸಮುದಾಯ ದೇಸಿ ಭತ್ತದ ಬೀಜ ಬ್ಯಾಂಕ್ ಉದ್ಘಾಟನೆ ಸಮಾರಂಭಕ್ಕೆ ನೆರೆಯ ಚಿಕ್ಕಂದೂರು ರೈತರು ಆಗಮಿಸಿದ್ದರು. ಸಮಾರಂಭದ ನಂತರ ಕಳೆದು ಹೋದ ತಳಿಗಳ ಬಗ್ಗೆ ಚರ್ಚೆ ಆರಂಭವಾಯಿತು. ‘ತಮ್ಮೂರಿನಿಂದ ಇಂಥ ತಳಿಗಳು ನಾಪತ್ತೆಯಾಗಿವೆ’ ಎಂಬ ಅಪರೂಪದ ದೇಸಿ ತಳಿ ಅವಶೇಷವಿಲ್ಲದಂತೆ ನಾಪತ್ತೆಯಾಗಿದೆ ಎಂಬ ವಿಷಯ ಚರ್ಚೆಗೆ ಬಂತು.

ಈ ಘಟನೆ ನಡೆದ ಎರಡು ಮೂರು ತಿಂಗಳ ನಂತರ ಚಿಕ್ಕಂದೂರಿನ  ರೈತರೊಬ್ಬರು ‘ನಮ್ಮೂರಿನಲ್ಲಿ ನೆಟ್ಟಿ ಬೆಳ್ಳಕ್ಕಿ ತಳಿ’ ಇದೆ ಎಂದು ಯೆಡೇಹಳ್ಳಿ ರೈತರಿಗೆ ಮಾಹಿತಿ ಕೊಟ್ಟರು. ಅಷ್ಟೆ ಅಲ್ಲ, ಯೆಡೇಹಳ್ಳಿ ಕಾರ್ಯಕ್ರಮದಿಂದ ಸ್ಪೂರ್ತಿ ಪಡೆದ ಚಿಕ್ಕಂದೂರಿನ ರೈತರು ತಮ್ಮೂರಿನಲ್ಲೂ ಹಳೆ ಭತ್ತದ ತಳಿಗಳನ್ನು ಸಂರಕ್ಷಿಸಲು ಆರಂಭಿಸಿದರು. ಬೀಜ ಸಂರಕ್ಷಣೆಗಾಗಿ ಸಂಘ ರಚಿಸಿಕೊಂಡರು. ಸದಸ್ಯರೆಲ್ಲ ಹಸಿರು ಸಮವಸ್ತ್ರ ತೊಟ್ಟರು. ಶಿಸ್ತುಬದ್ದವಾಗಿ ಭತ್ತದ ತಳಿಗಳನ್ನು ಬೆಳಸಿ, ಉಳಿಸಲು ಆರಂಭಿಸಿದರು. ಪ್ರಸ್ತುತ ಆ ಊರಿನಲ್ಲೂ ‘ದೇಸಿ ಭತ್ತದ ತಳಿಗಳು’ ಸಂಗ್ರಹವಾಗಿವೆ.

ಇದೇ ಅಲ್ಲವೇ ಮಾದರಿಯಾಗುವ ಪರಿ ಎಂದರೆ?