೩೧. ಊರ್ಜಿತ
ಆರೂಢ-ನಿಜ-ಮನೋsಹಂಕಾರೋತ್ಕರ್ಷ-ಪ್ರಕಾಶಮೂರ್ಜಿತ-ಸದಳಂ |
ಕಾರಂ ತ*ದೀಯ-ಲಕ್ಷ್ಯ-*ವಿಚಾರಮನೀ ತೆಱದಿನಱದುಕೊಳ್ಗೆ ಕವೀಶರ್ ||೧೯೯||
ಕೊಲ್ಲೆಂ ಬಿಸುಡಾಯುಧಮಂ ಪುಲ್ಲಂ ಕರ್ಚೇಱು ಪುತ್ತನಡಿಗಱಗೆನ್ನಾ |
ನಿಲ್ಲದೆ ತೊಲಗಿದಿರಿಂದಂತಲ್ಲದೊಡೆೞ್ದಾರ್ಡು ಕೆಯ್ದುಗೆಯ್ ನೀನಗಳ್ ||೨೦೦||
೧೯೮. ಎರಡು ಜೋಡಿಯಾದ ಹುರಿಯಿಂದ ಬಳಸಲ್ಪಟ್ಟಿದ್ದೂ, ನಿನ್ನ ಶರೀರವು ಮಟ್ಟವಾಗಿದೆ; ಯಾವದೇ ವಿಕಾರವೂ ಇಲ್ಲದಿದೆ, ಶಾಂತತೆಯಿಂದ ಸೊಗಯಿಸುತ್ತಿದೆ. *ಇಲ್ಲಿ ಯೋಗಮುದ್ರೆಯಲ್ಲಿರುವ ಶಾಂತನಾದ ಯೋಗಿಯ ವರ್ಣನೆಯಿದೆ. ಮೃಚ್ಛಕಟಕ ನಾಟಕದ ಮಂಗಳಶ್ಲೋಕವೊಂದರಲ್ಲಿ ಯೋಗಮುದ್ರೆಯಲ್ಲಿರುವ ಶಿವನ ವರ್ಣನೆಯನ್ನು ಮಾಡುವಾಗ- “ಪರ್ಯಂಕಗ್ರಂಥಿಬಂಧದ್ವಿಗುಣಿತಭುಜಗಾಶ್ಲೇಷ ಸಂವೀತಜಾನೋಃ” ಎಂದಿದೆ ಎಂದರೆ ಅಲುಗಾಡದಂತೆ ಎರಡು ಮಂಡಿಗಳನ್ನೂ ಎರಡೆಳೆಯ ಹುರಿಯಿಂದ ಕಟ್ಟಿ ಗಂಟನ್ನು ಹಾಕಿರುವ ‘ಪರ್ಯಂಕಬಂಧ’ದ ವರ್ಣನೆಯಿದು. ಇಲ್ಲಿಯೂ ಹಾಗೆಯೇ ‘ಗುಣ’ ಎಂದರೆ ಹಗ್ಗ; ದ್ವಿಗುಣ=ಎಂದರೆ ಎರಡೆಳೆ. ಆದರಿಂದ ‘ಪರಿಚಿತ’ ಎಂದರೆ ಸಮೇತ ಎಂದರ್ತ ಮಾಡುವುದು ಸಂದರ್ಭೋಚಿತವಾಗಿದೆ. ಇಲ್ಲಿ ಶಾಂತರಸ ಸ್ಪಷ್ಟ. ಮಿಕ್ಕ ಅಪಪಾಠಗಳಲ್ಲಿ ಸಂದರ್ಭೋಚಿತವಾದ ಅರ್ಥಸ್ವಾರಸ್ಯವಿಲ್ಲ.*
೧೯೯. ಆತ್ಮಾಭಿಮಾನ ಅಥವಾ ಅಹಂಕಾರದ ಏರಿಕೆಯ ಅತಿಶಯವನ್ನು ಪ್ರಕಟಿಸುವುದೇ ‘ಊರ್ಜಿತ’ವೆಂಬ ಅಲಂಕಾರ. ಕವೀಶ್ವರರು ಈ ರೀತಿ ಅದರ ಲಕ್ಷ್ಯ ಪ್ರಕಾರವನ್ನು ಅರಿಯಬೇಕು. *ದಂಡಿ-II-೨೭೫ ರಲ್ಲಿ ಇದನ್ನು ‘ಊರ್ಜಸ್ವಿ’ಯೆಂದು ಕರೆದಿದ್ದಾನೆ.*
೨೦೦. ಆಯುಧವನ್ನು ಬಿಸಾಡು, ನಿನ್ನನ್ನು ಕೊಲ್ಲುವುದಿಲ್ಲ. ಹುಲ್ಲನ್ನು ಕಚ್ಚು. ಹುತ್ತನ್ನೇರು. ನನ್ನ ಅಡಿಗೆರಗು. ಎದುರಲ್ಲಿ ನಿಲ್ಲದೆ ತೊಲಗು; ಅಲ್ಲದಿದ್ದರೆ ಎದ್ದು ಸಿಂಹನಾದಮಾಡುತ್ತ ಈಗ ನೀನು ಆಯುಧವನ್ನು ಹಿಡಿ! *ಇಲ್ಲಿ ಪರಾಕ್ರಮಿಯೊಬ್ಬನ ವರ್ತನೆ ವರ್ಣಿತವಾಗಿದೆ. ಅಂಜುವ ಹೇಡಿಯ ಸಂಗಡ ಯುದ್ಧಮಾಡದೆ ಆಯುಧವನ್ನು ಕೊಟ್ಟಾದರೂ ಅವನು ಕಾದುವಾಗ ಮಾತ್ರ ಹೊಡೆಯುವೆನೆಂಬ ವೀರಾಗ್ರಣಿಯ ಪ್ರಬಲ ಆತ್ಮವಿಶ್ವಾಸ ಇಲ್ಲಿ ವ್ಯಕ್ತವಾಗಿರುವುದರಿಂದ ‘ಊರ್ಜಸ್ವಿ’.*
೩೨. ವ್ಯಾವೃತ್ತಿ
ಮಗುೞ್ದುಂ ಮ[1]ಗುೞ್ದುಂ ಮಾತಂ ನೆಗೞ್ದೆರೆ ಪೇೞ್ದಾಗಳಕ್ಕುಮಾ ವ್ಯಾವೃತ್ತಿ- |
ಸ್ವಗತಾಳಂಕಾರಂ ಬಗೆಗಗಾಧಮನರದಱ ತೆಱನನೀ ಕುಱಪುಗಳಿಂ ||೨೦೧||
ವಿರಹಂ ಪರಿತಾಪಮನಾ ಪರಿತಾಪಮುಮಳಿಪನಳಿಪುಮಾ[2] ವಲ್ಲಭನೊಳ್ |
ನೆ[3]ರೆದಿರ್ಪ ಬಗೆಯನಾ ನೆರೆದಿರವುಂ ಸುರತಾನುರಾಗಮಂ ಪೆರ್ಚಿಸುಗುಂ ||೨೦೨||
ನುಡಿಯಂ ತಗುಳ್ಚೆ ನೋಟಂ ನುಡಿ ಪರಿಚಯಮಂ ತಗುಳ್ಚೆ ಪರಿಚಯಮಳಿಪಂ |
ತಡೆಯದೆ ತಗುಳ್ಚೆ ಮನದಳಿಪೊ[4]ಡಗೂಡಿದುದಂ ತಗುಳ್ಚುಗುಂ ಕಾಮಿಗಳಾ ||೨೦೩||
೩೩. ಪ್ರಿಯತರ
ಪ್ರಿಯ-ಕುಶಲಪೂರ್ವಕೋಚಿತ-ನಯ-ವಿನಯೋದಾರ-ರುಚಿರ-ವಚನ-ಪ್ರಾಯಂ |
ಪ್ರಿಯತರಮೆಂಬುದು ಸಕಳ-ಕ್ರಿಯಾನುಗಮಿತಾರ್ಥಮಿಂ[5]ತು ತದುದಾಹರಣಂ ||೨೦೪||
೨೦೧. ತಿರುಗಿ ತಿರುಗಿ ಮೊದಲು ಹೇಳಿದ ಮಾತನ್ನು ಮತ್ತೆ ಉಚ್ಚರಿಸುವುದು ‘ವ್ಯಾವೃತ್ತಿ’ ಅಥವಾ ವಿಶೇಷವಾದ “ಆವೃತ್ತಿ”ಯೆಂಬ ಅಲಂಕಾರ. ಅದರ ಪರಿಯನ್ನು ಕೆಳಗಿನ ಕುರುಹುಗಳಿಂದರಿಯಬೇಕು- *ಈ ಅಲಂಕಾರದಲ್ಲಿ ಸರಪಳಿಯ ಕೊಂಡಿಯಂತೆ ಎರಡೆರಡು ಪದಗಳಿದ್ದು, ಹಿಂದಿನ ಉತ್ತರಪದ ಮುಂದಿನ ಪೂರ್ವಪದವಾಗುವಂತೆ ರಚಿತವಾಗಿರುತ್ತದೆ. ಇದಕ್ಕೆ ‘ಏಕಾವಳಿ’ಯೆಂದು ಮುಂದಿನವರು ಕರೆಯುವರಲ್ಲದೆ ಇಲ್ಲಿಯ ಅನುಕ್ರಮಕ್ಕೆ ‘ಗೃಹೀತಮುಕ್ತರೀತಿ’ ಅಥವಾ ‘ಒಂದನ್ನು ಬಿಟ್ಟು ಒಂದನ್ನು ಹಿಡಿಯುವುದು’ ಎಂದೂ ಹೆಸರಿಸುತ್ತಾರೆ.*
೨೦೨. ವಿರಹವು ಪರಿತಾಪವನ್ನೂ ಪರಿತಾಪವು ಉತ್ಕಂಠೆಯನ್ನೂ ಉತ್ಕಂಠೆಯು ವಲ್ಲಭನಲ್ಲ ಕೂಟದ ಯತ್ನವನ್ನೂ ಕೂಟದ ಯತ್ನವು ಸುರತಾನುರಾಗವನ್ನೂ ಹೆಚ್ಚಿಸುವುದು. *ಕರ್ತೃ-ಕರ್ಮಪದಗಳಲ್ಲಿ ಕ್ರಮಕ್ರಮವಾಗಿ ಮೊದಲು ಕರ್ಮವಾಗಿದ್ದುದೇ ಮುಂದೆ ಕರ್ತೃವಾಗುತ್ತ ಹೋಗುವುದು ಇಲ್ಲಿಯ ವಿಶೇಷ.*
೨೦೩. ಕಾಮಿಗಳ ನೋಟವು ನುಡಿಯನ್ನು ಪ್ರೇರಿಸಿದರೆ, ನುಡಿ ಪರಿಚಯವನ್ನೂ, ಪರಿಚಯವೂ ಉತ್ಕಂಠೆಯನ್ನೂ ಪ್ರೇರಿಸುತ್ತದೆ. ಉತ್ಕಂಠೆಯ ಒಡಗೂಟವನ್ನು ಪ್ರೇರಿಸುತ್ತದೆ. *ಇಲ್ಲಿಯೂ ಮೇಲಿನ ಪದ್ಯದಂತೆಯೇ ಗೃಹೀತಮುಕ್ತರೀತಿಯ ಆವೃತ್ತಿಯಿದೆ.*
೨೦೪. ಪ್ರಿಯವೂ ಕುಶಲಪೂರ್ವಕವೂ ಉಚಿತ ಹಾಗು ನಯವಿನಯಾದಿ ಗುಣೋಪೇತವೂ ಆದ ಮಧುರ ವಚನ ತುಂಬಿರುವುದೇ ‘ಪ್ರಿಯತರ’ ಎಂಬ ಅಲಂಕಾರ. ಅದರ ಉದಾಹರಣೆ ಹೀಗೆ- *ಇದಕ್ಕೆ ದಂಡಿಭಾಮಹರ ಹೆಸರು ‘ಪ್ರೇಯಸ್’ ಅಥವಾ ‘ಪ್ರೆಯಸ್ವತ್’ ಎಂದು.*
ಗುರುಜನದ ಪರಕೆ[6]ಯುಂ ಬಂಧುರ-ಪುಣ್ಯ-ಫಳಾನುಭಂಧ[7]ಮುಂ ನೆರೆದೆನ್ನೊಳ್ |
ಪರಮಾನುಭಾವ-ಭರಮುಂ ದೊರೆಕೊಂಡುವ[8]ವಿಂದು ಬರವಿನೊಳ್ನಿಮ್ಮಡಿಯಾ ||೨೦೫||
೩೪. ಆಶೀರಲಂಕಾರ
ದೊರೆಕೊಂಡು ಮನದ ಬಗೆಯಂ ಪಿರಿದಾಗಿರೆ ಪಿರಿಯರೊಸಗೆಯಂ[9]*ಬಯಸುವು*ದುಂ |
ಪರಮಾಶೀರರ್ಥಾಳಂಕರಣಾಂತರಮದಱ ಲಕ್ಷ್ಯಮೀ ತೆರನಕ್ಕುಂ ||೨೦೬||
ಆಯುಂ ಶ್ರೀಯಂ ವಿಜಯಮುಮಾಯತಿಯುಂ ನೃಪತಿ ನಿನಗೆ ನಿಜಸಂತತಿಯುಂ |
ನ್ಯಾಯದೆ ಪೆರ್ಚುವುದಕ್ಕೀ ತೋಯಧಿ-ಧರಣೀ- ಧರಾಧರ-ಸ್ಥಿತಿವರೆಗಂ ||೨೦೭||
೩೫. ಭಾವಿಕ
ಗೀತಿಕೆ || ಭಾವಮೆಂಬುದಕ್ಕುಂ ಕವಿಗಳಾ
ಭಾವಿಸಿ ಮನದ ಬಗೆಯೊಂದಿದರ್ಥಂ |
ಕೇವಲಮದೞೊಳಲಂಕೃತಿ
ಭಾವಿಮೆಂಬುದಕ್ಕುಂ ನೃಪತುಂಗ-ದೇವ-ಮತದಿಂ ||೨೦೮||
೨೦೫. ಇಂದು ನಿಮ್ಮಡಿಗಳ ಆಗಮನದಿಂದ ನನಗೆ ಗುರುಜನರ ಆಶೀರ್ವಾದಗಳೂ ಪುಣ್ಯಫಲದ ಅನುಬಂಧವೂ ಪರಮ ಮಹಿಮಾತಿಶಯವೂ ಎಲ್ಲವೂ ಫಲಿಸಿದಂತಾದವು. *ಪೂಜ್ಯರೂ ಮಹಾಮಹಿಮರೂ ಆದವರೊಬ್ಬರ ಆಗಮನದಿಂದ ಹರ್ಷಾತಿಶಯವನ್ನು ತಳೆದ ಗೃಹಸ್ಥನೊಬ್ಬನ ಮಾತೆಂದು ಸಂದರ್ಭವನ್ನು ಊಹಿಸಿಕೊಳ್ಳಬೇಕು. ತಾನಾಗಿ ಕೃಷ್ಣನು ಮನೆಗೆ ಬಂದಾಗ ವಿದುರನು ಅವನನ್ನು ಕುರಿತು ಹೇಳುವ ಮಾತನ್ನು ದಂಡಿಭಾಮಹರು ಉದಾಹರಣೆಯಾಗಿ ಕೊಡುತ್ತಾರೆ. ಹೋಲಿಸಿ-ದಂಡಿ, ಐಐ -೨೭೬, ಭಾಮಹ, II -೫.*
೨೦೬. ಮನಸ್ಸಿನ ಇಷ್ಟಾರ್ಥ ಹಿರಿದಾಗಿ ಕೈಗೂಡಲಿ ಎಂದು ಹಿರಿಯರು ಆಶೀರ್ವಾದಮಾಡಿ ಹರಸುವುದೇ ‘ಆಶೀಃ’ ಎಂಬ ಅರ್ಥಾಲಂಕಾರ. ಅದರ ಲಕ್ಷ್ಯ ಹೀಗೆ-*ಹೋಲಿಸಿ-ದಂಡಿ, II -೩೫೭.*
೨೦೭. ರಾಜನೆ, ನಿನಗೆ ಈ ಸಮುದ್ರ, ಪರ್ವತಗಳಿರುವವರೆಗೂ ಆಯುಸ್ಸು, ಸಂಪತ್ತು, ವಿಜಯ, ಅಭ್ಯುದಯ, ಸಂತತಿಗಳು ಹೆಚ್ಚುತ್ತಿರಲಿ!
೨೦೮. ಕವಿಗಳು ಪರಿಭಾವಿಸಿ ಮನದಲ್ಲಿ ತಂದುಕೊಂಡ ಅರ್ಥವೇ ‘ಭಾವ’. ನೃಪತುಂಗನ ಮತದಂತೆ ಅದರಲ್ಲಿ ತೋರುವ ಅಲಂಕಾರವೇ ‘ಭಾವಿಕ’. *ದಂಡಿ ಕೂಡ “ಭಾವವೆಂದರೆ ಕವಿಯ ಅಭಿಪ್ರಾಯ”ವೆಂದೇ ಸ್ಪಷ್ಟಪಡಿಸಿದ್ದಾನೆ. ಅಲ್ಲದೆ ಇದು ಕಾವ್ಯದ ಆರಂಭದಿಂದ ಹಿಡಿದು ಸಮಾಪ್ತಿಯವರೆಗೂ ಅನುಸೂತ್ಯವಾಗಿರುವ ಐಕ್ಯಸೂತ್ರವೆಂದೂ ವಿವರಿಸಿದ್ದಾನೆ. ಕಥಾಸೂತ್ರದಲ್ಲಿ ಯಥೋಚಿತ ಘಟನೆ, ಪರಸ್ಪರ ಸುಸಂಬದ್ಧತೆ, ಅನುಚಿತ ವರ್ಣನೆಗಳ ಅಭಾವ, ಗಂಭೀರ ವಿಚಾರ-ಮುಂತಾಗಿ ಇಡಿಯ ಕಾವ್ಯವಿಮರ್ಶೆಗೆ ಹೊರಟಾಗ ರಸಿಕರಿಗೆ ಕಾಣಬರುವ ಯೋಜನಾತಂತ್ರವೇ ‘ಭಾವಿಕತ್ವ’ ಆದ್ದರಿಂದ ಇದಕ್ಕೆ ಬಿಡಿಪದ್ಯದ ಉದಾಹರಣೆ ಸಾಧ್ಯವಿಲ್ಲ. ಹೋಲಿಸಿ- ದಂಡಿ, II -೩೬೪-೩೬೬.*
[1] ಮಾತಂ ‘ಪಾ’; ಮತ್ತಿನ ‘ಮ’. ಇಲ್ಲಿ ಅಂಗೀಕೃತಪಾಠ ‘ಸೀ’ ಸೂಚಿತ.
[2] ‘ಮಾ’, ಪಾ’ನಲ್ಲಿ ಲುಪ್ತ, ‘ಮ’ ಸೂಚಿತ.
[3] ಬಗೆ(ಂ)ದಿರ್ಪ ‘ಪಾ’, ‘ನೆರೆದಿರ್ಪ” ಮ’ ಸೂಚಿತ.
[4] ಇದೂ ‘ಮ’ ಸೂಚಿತ; ‘ಪಾ’ ಲುಪ್ತ.
[5] ಇಂತುಟಿದುದಾ ಹರಣಂ ‘ಪಾ’, ಇಂತುಟದುದಾಹರಣಂ ‘ಸೀ’. ಇಲ್ಲಿ ‘ಮ’ ಸೂಚನೆ ಅಂಗೀಗೃತವಾಗಿದೆ.
[6] ಯುಂ ‘ಸೀ’ ಸೂಚಿತ; ಯಂ ‘ಪಾ, ಮ’.
[7] ಮುಂ ‘ಸೀ” ಸೂಚಿತ; ಮಂ ‘ಪಾ, ವ’.
[8] ವದಿಂದು ‘ಪಾ, ಮ’.
[9] ಪೇಳ್ವೊಡದುಂ ‘ಸೀ’ ಸೂಚಿತ; ಬಗೆದಂದುಂ ‘ಮ’.
Leave A Comment