ರಾಜಕುಮಾರರು ಕಣ್ಮರೆಯಾದ ನಂತರ ಅವರ ಕುಟುಂಬವನ್ನು ನೋಡಲು ಹೋದಾಗ ನಾನೊಂದು ಸೂಚನೆ ಕೊಟ್ಟಿದ್ದೆ. ಪಾರ್ವತಮ್ಮನವರೂ ಅವರ ಪುತ್ರರೂ ನನ್ನ ಸೂಚನೆಗೆ ಮನಃಪೂರ್ವಕವಾಗಿ ಮಿಡಿದಿದ್ದರು. ಕನ್ನಡ ಭಾಷೆಗೂ ಕನ್ನಡ ನಾಡಿಗೂ ತಾನೇನೆಂಬ ಅರಿವನ್ನು ತಂದವರು ನಮ್ಮ ದೊಡ್ಡ ಲೇಖಕರು ಮಾತ್ರವಲ್ಲ, ವರನಟ ರಾಜಕುಮಾರರೂ ಮುಖ್ಯರು.

ಕನ್ನಡ ಭಾಷೆ ನಮ್ಮ ಆಧುನಿಕ ಕಾಲದಲ್ಲಿ ಉಳಿಯಲು ಬೆಳೆಯಲು ಕನ್ನಡಿಗರೆಲ್ಲರೂ ಅಕ್ಷರಸ್ಥರಾಗುವುದು ಕನಿಷ್ಠವಾದ ಒಂದು ಅಗತ್ಯ. ರಾಜಕುಮಾರರ ನೆನಪನ್ನು ಶಾಶ್ವತಗೊಳಿಸುವ ಕೆಲಸ ಇದಾದ್ದರಿಂದ ಅವರ ಕೋಟ್ಯಾಂತರ ಅಭಿಮಾನಿಗಳು ಈ ಸಾಕ್ಷರತಾ ಆಂದೋಲನದಲ್ಲಿ ಭಾಗಿಗಳಾಗಬೇಕು. ಅಕ್ಷರಬಲ್ಲ ಅಭಿಮಾನಿಗಳು ಬಾರದವರಿಗೆ ಕಲಿಸಬೇಕು; ಬಾರದವರು ತಮ್ಮ ಅಣ್ಣನಿಗೆ ಇದು ಪ್ರಿಯವಾಗುತ್ತದೆಂದು ತಿಳಿದು ಅಕ್ಷರ ಕಲಿಯಬೇಕು. ಅವರು ಸಮಾಧಿಯಾಗಿರುವ ಜಾಗದಲ್ಲಿ ನೀವು ಯಾವ ಹೊತ್ತಿಗೆ ಹೋಗಿ ನೋಡಿದರೂ ಅಲ್ಲಿ ಹಣ್ಣುಕಾಯಿ ತಂದು ತಮ್ಮ ಈ ಪ್ರೀತಿಯ ನಟನಿಗೆ ಅರ್ಪಿಸುವವರನ್ನು ನಾವು ನೋಡುತ್ತೇನೆ. ಇವರಲ್ಲಿ ಬಡಬಗ್ಗರೇ ಹೆಚ್ಚು ಜನ. ಈ ಎಲ್ಲರಿಗೆ ಅಕ್ಷರ ಜ್ಞಾನವೆಂದರೆ ತಾವು ಮರ್ಯಾದೆಯಿಂದ ಬದುಕುಲು ಈ ಕಾಲದ ಬಹು ದೊಡ್ಡ ಅಗತ್ಯವೆಂದು ತಿಳಿಯಬೇಕು. ಅಕ್ಷರಜ್ಞಾನದ ಅಗತ್ಯವಿಲ್ಲದೆ ಇದ್ದವರು ವೇದಕಾಲದ ಋಷಿಗಳು ಮಾತ್ರ.

ಪಾರ್ವತಮ್ಮನವರ ಜೊತೆ ಮಾತಾಡಿದಾಗ ಈ ಅಕ್ಷರ ಆಂದೋಲನವನ್ನು ರಾಜಕುಮಾರರ ಹೆಸರಿನಲ್ಲಿ ಹೇಗೆ ಮಾಡಬಹುದೆಂಬ ನನ್ನ ವಿಚಾರ ಮಸುಕಾಗಿತ್ತು. ಈಗದು ಸ್ಪಷ್ಟವಾಗಿರುವುದರಿಂದ ಬರೆಯುತ್ತಿದ್ದೇನೆ. ಸಾಕ್ಷರತಾ ಆಂದೋಲನದಲ್ಲಿ ಒಂದಷ್ಟು ಜನ ಅಕ್ಷರಸ್ಥರಾದರು; ಆದರೆ ಕೇವಲ ಅಕ್ಷರವನ್ನು ಗುರುತಿಸಬಲ್ಲವರಾದರು. ಸರಾಗವಾಗಿ ಇವರು ಓದಲಾರರು. ಬಹು ಮುಖ್ಯವಾಗಿ ಇಂಥವರ ದೃಷ್ಟಿಯಿಂದಲೂ, ಅಕ್ಷರವೇ ಬಾರದವರಿಗೆ ಕಲಿಯಬೇಕೆಂಬ ಆಸೆ ಹುಟ್ಟಿಸುವ ದೃಷ್ಟಿಯಿಂದಲೂ, ಕೇವಲ ಶಾಲೆಗಿನ್ನೂ ಹೋಗದ ಮಕ್ಕಳ ದೃಷ್ಟಿಯಿಂದಲೂ ನಾವು ಮಾಡಬಹುದಾದ ಒಂದು ಕೆಲಸವಿದೆ. ಇದು ಸಾಧ್ಯವಾಗುವುದು ಎಲ್ಲ ಗ್ರಾಮ ಪಂಚಾಯಿತಿಗಳೂ ಈ ಕಾರ್ಯಕ್ರಮವನ್ನು ಕೈಗೆತ್ತಿಕೊಂಡಾಗ. ರಾಜಕುಮಾರರನ್ನು ಪ್ರೀತಿಸಿದವರೆಲ್ಲರೂ ಇದು ಕನ್ನಡದ ಶ್ರೇಷ್ಠ ನಟನೊಬ್ಬನಿಗೆ ನಾವು ಮಾಡುವ ಶ್ರಾದ್ಧ ಎಂದು ತಿಳಿದಾಗ.

* * *

ನನ್ನ ಮನಸ್ಸಿನಲ್ಲಿ ಬಂದು ಹೋದ ಈ ವಿಚಾರ ಯಶಸ್ವಿಯಾಗುತ್ತದೆಂದು ಮನದಟ್ಟಾದ್ದು ಜುಲೈ ೩೦ನೇ ತಾರೀಖು ದೆಹಲಯಲ್ಲಿ ನಾನೊಂದು ಚರ್ಚೆಯಲ್ಲಿ ಭಾಗವಹಿಸಿದಾಗ. ಸಂದರ್ಭ ಪಿಟ್ರೋಡರವರ ಅಧ್ಯಕ್ಷತೆಯಲ್ಲಿ ನಮ್ಮ ಸರ್ಕಾರ ನಾಲೆಡ್ಜ್‌ ಕಮಿಷನ್‌ಎಂಬ ಸಂಸ್ಥೆಯೊಂದನ್ನು ಶುರುಮಾಡಿದೆ. ಈ ಹೆಸರು ಕೊಂಚ ಗರ್ವದ್ದಾಯಿತು ಎಂದು ನಾನು ಅನುಮಾನಪಟ್ಟರೂ ಅಕ್ಷರ ಚಳುವಳಿ ಬಗ್ಗೆಯಲ್ಲವೇ ಎಂದು ಹೋದೆ. ಪಾರ್ವತಮ್ಮನವರ ಜೊತೆ ನಾನು ಮಾತಾಡುವಾಗ ನನಗೆ ಅಸ್ಪಷ್ಟವಾಗಿ ಹೊಳೆದದ್ದನ್ನು ಸ್ಪಷ್ಟಗೊಳಿಸಿದವರು ಡಾಕ್ಟರ್‌ಬ್ರಿಜ್ ಕೊಟಾರಿ ಎಂಬ ಅಹ್ಮದಾಬಾದಿನ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ಅಧ್ಯಾಪಕರಾಗಿರುವ ತರುಣ.

ಇವರು ಒಂದು ಸರಳವಾದ ಉಪಾಯ ಹುಡುಕಿದ್ದಾರೆ. ಸಿನಿಮಾದ ಹಾಡುಗಳೆಂದರೆ ಇಷ್ಟಪಡದವರು ಯಾರಿದ್ದಾರೆ? ಜನಪ್ರಿಯವಾದ ಸಿನಿಮಾ ಹಾಡುಗಳನ್ನು ಸಿನಿಮಾದಲ್ಲಿ ನಮ್ಮ ಮೆಚ್ಚಿನ ನಟನೋ ನಟಿಯೋ ಹಾಡುತ್ತ ಇದ್ದಂತೆ, ಆ ಹಾಡುಗಳನ್ನು ನಾವು ಕೇಳಿಸಿಕೊಳ್ಳುತ್ತ ಕಾಣುತ್ತ ಇದ್ದಂತೆ ಚಿತ್ರದ ಬುಡದಲ್ಲಿ ಅದೇ ಭಾಷೆಯ ಅಕ್ಷರಗಳಲ್ಲಿ ಹಾಡಿನ ಸಾಲು ಕಾಣಿಸಿಕೊಳ್ಳಬೇಕು. ಕೊಂಚ ದಪ್ಪವಾದ ಅಕ್ಷರದಲ್ಲಿ. ಹಾಡಿನ ಇಡೀಸಾಲು ಕಾಣುತ್ತಿದ್ದಂತೆಯೇ ನಮ್ಮ ಮೆಚ್ಚಿನ ನಟ ಅಥವಾ ನಟಿ ನುಡಿಯುವ ಹಾಡಿನ ಶಬ್ದ ಉಜ್ವಲಿಸಬೇಕು. ಅಂದರೆ ಕೇಳಿಸಿಕೊಳ್ಳುವ ಶಬ್ದ ಆ ಹೊತ್ತಿನಲ್ಲೇ ಕಾಣಿಸಬೇಕು. ಹಾಡೆಂದ ಮೇಲೆ ಕೆಲವು ಶಬ್ದಗಳು ಮತ್ತೆ ಮತ್ತೆ ಬಳಕೆಯಾಗುತ್ತವೆ ಅಲ್ಲವೆ? ಮತ್ತೆ ಮತ್ತೆ ಅವು ಕೇಳುವಾಗಲೇ ಕಾಣುತ್ತವೆ; ಕ್ರಮೇಣ ಕಂಡೊಡನೆ ಮನಸ್ಸಿನಲ್ಲಿ ಗುರುತಿಸಬಲ್ಲಂತೆ ನಿಲ್ಲುತ್ತವೆ.

ನಿಜವಾಗಿ ನಾವು ಓದುವುದೆಂದರೆ ಬಿಡಿಬಿಡಿಯಾಗಿ ಅಕ್ಷರಗಳನ್ನಲ್ಲ. ಇಡೀ ಶಬ್ದವನ್ನು ನಾವು ಒಟ್ಟಾಗಿ ಗಮನಿಸಿ ಗ್ರಹಿಸುತ್ತೇವೆ. ಈ ಬಗೆಯ ಗ್ರಹಿಕೆಯಲ್ಲಿ ಹಾಡನ್ನು ಕೇಳಿಸಿಕೊಳ್ಳುತ್ತಿರುವ ಜನ, ಆ ಹಾಡನ್ನು ತಾವೇ ಒಂಟಿಯಾಗಿದ್ದಾಗ ಗುಣಿಗುಣಿಸಿಕೊಂಡು ಖುಷಿಯಾಗುವ ಜನ ಕೇಳಿಸಿಕೊಂಡ ಶಬ್ದವನ್ನು ಕಾಣಿಸಿಕೊಂಡ ಅಕ್ಷರ ಸಮುಚ್ಚಯದ ಜೊತೆ ಗುರುತಿಸುತ್ತ ನೋಡುತ್ತಾರೆ. ನೋಡಿದ್ದು ಮಿದುಳಿನಲ್ಲಿ ಮಿಡಿಯುವ ನೆನಪುಗಳಾಗುತ್ತವೆ.

ಇದನ್ನು ಇಂಗ್ಲಿಷಿನಲ್ಲಿ ಕೊಟಾರಿ Same Language Substitling (SLS) ಎಂದು ಕರೆದಿದ್ದಾರೆ. ಇದನ್ನು ವ್ಯಾಪಕವಾಗಿ ಪ್ರಯೋಗ ಮಾಡಿಯೂ ಆಗಿದೆ. ಅದರ ಕೆಲವು ಮಾಹಿತಿಗಳು ಇಲ್ಲಿವೆ.

೧. ಗುಜರಾತಿನಲ್ಲಿ ೧೯೯೯ ರಿಂದ ದೂರದರ್ಶನದವರು ಚಿತ್ರಹಾರ್ ರಂಗೋಲಿ ಮತ್ತು ಸ್ಥಳೀಯ ಚಿತ್ರಗೀತ್ ಎಂಬ ಕಾರ್ಯಕ್ರಮಗಳಲ್ಲಿ ಶೀರ್ಷಿಕೆ ಸಮೇತದ ಹಾಡುಗಳನ್ನು ಬಿತ್ತರಿಸ ತೊಡಗಿದ ಮೇಲೆ ಅಕ್ಷರಜ್ಞಾನ ಸುಮಾರು ಒಂದೂವರೆಯಷ್ಟು ಅಧಿಕಗೊಂಡಿತು.

೨. ಶೇಕಡಾ ೯೦ ಜನ ಹೀಗೆ ತಮ್ಮ ಪ್ರಿಯ ಹಾಡುಗಳನ್ನು ಶೀರ್ಷಿಕೆ ಸಮೇತ ನೋಡಲು ಬಯಸುತ್ತಾರೆ.

೩. ಸುಮಾರು ಐದು ನೂರು ಮಿಲಿಯನ್ ಭಾರತೀಯರಿಗೆ ಟೀವಿ ಲಭ್ಯವಿದೆ; ಇವರಲ್ಲಿ ಅರ್ಧದಷ್ಟು ಜನ ಅರೆಬರೆ ಅಕ್ಷರಸ್ತರು; ಅಥವಾ ಅನಕ್ಷರಸ್ತರು.

೪. ಅಕ್ಷರಸ್ತರೂ ಕೇಳಿಸಿಕೊಳ್ಳುತ್ತಿರುವ ಹಾಡನ್ನು ಶಬ್ದಗಳಾಗಿ ನೋಡಲು ಇಷ್ಟಪಡುತ್ತಾರೆ; ಅರೆಬರೆ ಓದಬಲ್ಲವರು ಶಬ್ದಗಳನ್ನು ಒಟ್ಟಾಗಿ ಗ್ರಹಿಸಲು ಕಲಿಯುತ್ತಾರೆ; ಓದಬಾರದವರಿಗೆ ಓದಬೇಕೆಂಬ ಆಸೆ ಹುಟ್ಟಬಲ್ಲುದು; ಶಾಲೆಗೆ ಹೋಗುವ ಮಕ್ಕಳಿಗೆ ಇದೊಂದು ಪ್ರಿಯವಾಗಬಲ್ಲ ಮನೆ ಪಾಠ (ಹೋಂ ವರ್ಕ್!); ಅದೇ ತಾನೇ ಅಕ್ಷರ ಕಲಿತವರು ಕಲಿತದ್ದನ್ನು ಮರೆಯುವುದಿಲ್ಲ. (ಅಕ್ಷರ ಆಂದೋಲನದ ಮುಖ್ಯ ಕಾಳಜಿಗಳಲ್ಲಿ ಇದೊಂದು)

೫. ವಿಡಿಯೋ ನೋಡುವವರು ಸುಮ್ಮನೇ ಚಿತ್ರ ನೋಡುತ್ತಾರೊ, ಅಥವಾ ಓದಲು ಇದ್ದರೆ ಅದನ್ನು ಓದುತ್ತ ನೋಡುತ್ತಾರೊ ಎಂದು ಪ್ರಯೋಗ ಮಾಡಿ ನೋಡಿದಾಗ, ಓದುತ್ತಾರೆ ಎಂಬುದು ಸಾಬೀತಾಗಿದೆ.

೬. ಇಡೀ ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಅಕ್ಷರ ಜ್ಞಾನವನ್ನು ಪ್ರೇರೇಪಿಸುವ, ಹೆಚ್ಚಿಸುವ, ದೃಢಪಡಿಸುವ ವಿಧಾನವೆಂದು ಇದನ್ನು ನ್ಯೂಯಾರ್ಕ್‌ಟೈಮ್ಸ್‌ಪತ್ರಿಕೆ ವಿಶ್ಲೇಷಿಸಿದೆ.

* * *

ಇದು ಸುವರ್ಣ ಕರ್ಣಾಟಕದ ವರ್ಷ. ರಾಜಕುಮಾರರು ನಮ್ಮನ್ನು ಅಗಲಿದ ಕಾಲ. ನನ್ನ ಬಯಕೆಯಿದು:

೧. ರಾಜಕುಮಾರರ ಜನಪ್ರಿಯವಾದ ಎಲ್ಲ ಹಾಡುಗಳನ್ನೂ ಕನ್ನಡದಲ್ಲಿ ಶೀರ್ಷಿಕೆ ಸಮೇತ ವಿಡಿಯೋಗಳಾಗಿ ಮಾಡಬೇಕು.

೨. ಈ ವಿಡಿಯೋಗಳನ್ನು ದೂರದರ್ಶನದವರು ಹಾಗೂ ಪ್ರೈವೇಟ್ ಚಾನಲ್‌ನವರು ಒಂದು ಅನುಕೂಲವಾದ ದುಡಿಯುವ ಜನರೆಲ್ಲರೂ ನೋಡಬಹುದಾದ ಕಾಲದಲ್ಲಿ ಈ ಇಡೀ ವರ್ಷ ಟೆಲಿವಿಷನ್‌ಗಳಲ್ಲಿ ಬಿತ್ತರಿಸಬೇಕು. ಜನಪ್ರಿಯವಾದ ಈಚಿನ ಹಾಡುಗಳನ್ನೂ ರಾಜಕುಮಾರರ ಗೌರವಾರ್ಥ ಬಳಸಬಹುದು.

೩. ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಸಾರ್ವಜನಿಕ ಪ್ರೇಕ್ಷಣೆಗೆ ಟೀವಿಗಳೂ ಮತ್ತು ಈ ಹಾಡುಗಳು ಕೆಸೆಟ್‌ಗಳೂ ಲಭ್ಯವಿರಬೇಕು.

೪. ಈ ಹಾಡುಗಳನ್ನು ಅಚ್ಚು ಮಾಡಿದ ಪುಟ್ಟ ಪುಸ್ತಕಗಳೂ ಜನರಿಗೆ ಸಿಗುವಂತೆ ಮಾಡಬೇಕು. ಎಲ್ಲ ಮನೆಗಳಲ್ಲೂ ಒಂದು ಪುಸ್ತಕವಾದರೂ ಇರುವಂತೆ ನೋಡಿಕೊಳ್ಳಬೇಕು. ಪುಟ್ಟ ಮಕ್ಕಳು ಪುಸ್ತಕಗಳನ್ನು ಕಣ್ಣಲ್ಲಿ ನೋಡುತ್ತ ಹಿರಿಯರು ಓದುವುದನ್ನು ನೋಡುತ್ತ ಬೆಳೆಯಬೇಕು.

೫. ಎಲ್ಲ ಶಾಲೆಗಳೂ ಈ ಕಾರ್ಯಕ್ರಮವನ್ನು ಬಳಸಿಕೊಳ್ಳಬೇಕು.

* * *

ಎಂಬತ್ತರ ದಶಕದ ಕೊನೆಯಲ್ಲಿ ನೂರಕ್ಕೆ ನೂರು ಅಕ್ಷರಸ್ಥವಾದ ಮೊದಲನೆಯ ಊರೆಂದರೆ ಕೊಟ್ಟಾಯಂ. ಇದಾದ ನಂತರ ಇಡೀ ಕೇರಳದಲ್ಲಿ ಅಕ್ಷರ ಆಂದೋಲನ ನಡೆಯಿತು. ಆಗ ಕೊಟ್ಟಾಯಂನ ವಿಶ್ವವಿದ್ಯಾಲಯ ಅಕ್ಷರ ಆಂದೋಲನ ಪ್ರಾರಂಭಿಸಿದಾಗ ನಾನು ಅದರ ಕುಲಪತಿಯಾಗಿದ್ದೆನೆಂಬುದು ನನಗೆ ಹೆಮ್ಮೆಯ ಸಂಗತಿ. ಈ ಅನುಭವವನ್ನು ಇನ್ನೊಮ್ಮೆ ಹಂಚಿಕೊಳ್ಳುವೆ. ನನ್ನ ಈ ಲೇಖನ ಸುವರ್ಣ ಕರ್ಣಾಟಕದ ಯೋಜಕರಿಗೂ, ರಾಜಕುಮಾರರ ಅಭಿಮಾನಿಗಳಿಗೂ ಪ್ರಿಯವಾದರೆ ನನಗೆ ಸಂತೋಷ.

ದೂರದರ್ಶನದವರು ಗುಜರಾತಿನಲ್ಲಿ ಇಂತಹ ಎಸ್‌ಎಲ್‌ಎಸ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ ಎಂದು ಡಾ. ಕೊಠಾರಿ ಹೇಳುತ್ತಾರೆ. ಗುಜರಾತ್‌, ಆಂಧ್ರಪ್ರದೇಶ, ಮಹಾರಾಷ್ಟ್ರಗಳಲ್ಲಿ ವರ್ಷಕ್ಕೆ ತಲಾ ಒಬ್ಬರಿಗೆ ಐದು ಪೈಸೆ ಖರ್ಚಿನಲ್ಲಿ ಈ ಪ್ರಯೋಗವನ್ನು ಯಶಸ್ವಿಯಾಗಿ ಮಾಡಲಾಯಿತು ಎನ್ನುತ್ತಾರೆ ಕೊಠಾರಿ.

ಇದೊಂದೇ ಉಪಾಯವೆಂದು ನಾನೇನು ಹೇಳುತ್ತಿಲ್ಲ; ಆದರೆ ಅಕ್ಷರ ಆಂದೋಲನದಲ್ಲಿ ಕಲಿಯುವುದೂ ಖುಷಿಯಾದ ಅನುಭವವಾಗಬಹುದೆಂದೂ ನಮ್ಮ ಜನರ ರಾಜಕುಮಾರರ ಮೇಲಿನ ಪ್ರೇಮದ ಸದುಪಯೋಗವಾಗಬಹುದೆಂದೂ ನಾನಿದನ್ನು ಮೆಚ್ಚಿ ಬರೆದಿದ್ದೇನೆ.

ಈ ತಂತ್ರದ ಬಗ್ಗೆ ಹೆಚ್ಚಿನ ಮಾಹಿತಿ ಬಯಸುವವರು ಡಾ. ಬ್ರಿಜ್ ಕೊಠಾರಿಯವರನ್ನು ಸಂಪರ್ಕಿಸಬಹುದು. ಅವರ ಈ ಮೈಲ್ ವಿಳಾಸ ಹೀಗಿದೆ : brj@csli.stanford.edu ಅಥವಾ brj@limhd.ernet.in

* * *