ನಾನೇನು ಬಹಳ ಸಿನಿಮಾಗಳನ್ನು ನೋಡಿರುವ ತಜ್ಞನಲ್ಲ. ಆದರೇ ಕಿರೋಸ್ತಾಮಿಯ ಕೆಲವು ಸಿನಿಮಾಗಳನ್ನು ನೋಡುತ್ತಿದ್ದಂತೆಯೇ ನನಗೆ ಅನ್ನಿಸಿದ್ದು ಇದು: ಯೂರೋಪಿಯನ್ ಸಿನಿಮಾ ಎನ್ನುವಂತೇ ಏಷ್ಯನ್‌ ಸಿನಿಮಾ ಕೂಡಾ ಇದೆ. ಸತ್ಯಜಿತ್‌ ರಾಯ್‌ನಂತೆ, ಜಪಾನಿನ ಕುರೊಸಾವನಂತೆ, ಇರಾನಿನ ಅಬ್ಬಸ್ ಕಿರೋಸ್ತಾಮಿಯೂ ನಮ್ಮ ಕಾಲದ ಬಹಳ ಸೂಕ್ಷ್ಮಜ್ಞನಾದ ಏಷ್ಯನ್ ಸಿನಿಮಾ ನಿರ್ದೇಶಕ.

ಇವನು ಇರಾನಿನವರು ಎಂಬುದು ಬಹಳ ಮುಖ್ಯ. ಷಾ ಆಳುತ್ತಿದ್ದ ಕಾಲದಲ್ಲಿ ಇರಾನ್‌ ತನ್ನ ದೇಶೀಯ ಇಸ್ಲಾಮಿಕ್ ಸಂಸ್ಕೃತಿಯಿಂದ ತುಂಬಾ ದೂರವಾಗಿ ಅಮೆರಿಕದ ಕೃತಕ ಅನುಕರಣೆಯಲ್ಲಿ ಪರದೇಶಿಯಾಯಿತು. ಇದಕ್ಕೆ ವಿರುದ್ಧವಾಗಿ ಎದ್ದ ಧಾರ್ಮಿಕ ಸ್ವದೇಶಿ ಅಲೆ ಇರಾನ್‌ನನ್ನು ಮತ್ತೆ ನಿರ್ಬಂಧಿಸಿ ಮತನಿಷ್ಠ ಇಸ್ಲಾಮಿನ ಚೌಕಟ್ಟಿನಿಂದ ಹೊರಬಾರದಂತೆ ನೋಡಿಕೊಂಡಿತು. ಇದು ಕ್ರೂರವೆನ್ನಿಸುವಷ್ಟು ಮಾನವ ಸ್ವಭಾವಕ್ಕೆ ಅಸಹಜವಾಗಿ ಅತಿಯಾದದ್ದೇ ಇರಾನ್‌ ತನ್ನ ದೇಶೀಯ ಸಂಸ್ಕೃತಿಯ ಯಾವುದೊ ಅತಿಯಾಗಗೊಡದ ಹದವನ್ನು ಮತ್ತೆ ಪಡೆದುಕೊಳ್ಳುತ್ತಿದೆ. ಹೀಗಾಗಿ ಉಳಿದೆಲ್ಲ ಇಸ್ಲಾಮಿಕ್‌ ರಾಷ್ಟ್ರಗಳಿಗಿಂತ ಹೆಚ್ಚಾಗಿ ಇರಾನ್ ಭಾರತಕ್ಕೆ ಹತ್ತಿರವಾಗುತ್ತಿದೆ. ಅದು ಪಡೆಯುತ್ತಿರುವ ಹದದಲ್ಲೂ ಅದು ಎದುರಿಸುತ್ತಿರುವ ಸಾಂಸ್ಕೃತಿಕ ಇಕ್ಕಟ್ಟಿನ ಸಮಸ್ಯೆಗಳಲ್ಲೂ ಇದು ನಿಜ. ಮುಖ್ಯವಾಗಿ ಹೀಗೆ ಅನ್ನಿಸುವುದು ಅವರು ಮಾಡುತ್ತಿರುವ ಸಿನಿಮಾಗಳಲ್ಲಿ.

ಖೊಮೇನಿಯ ನಂತರದ ಇರಾನ್‌ನಲ್ಲಿ ಅವರ ಮತೀಯ ಶ್ರದ್ಧೆಗಳನ್ನು ನಿರಾಕರಿಸಿ ಆಧುನಿಕರವಾಗುವುದು ಸುಲಭವೇನಲ್ಲ. ಕಳೆದ ವರ್ಷದ ಕ್ಯಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಅಬ್ಬಾಸ್ ಕಿರೋಸ್ತಾಮಿ ಪುರಸ್ಕೃತನಾದ. ವೇದಿಕೆಯ ಮೇಲೆ ಇವನಿಗೇ ಪುರಸ್ಕಾರವನ್ನು ಕೊಟ್ಟ ಕ್ಯಾಥರಿನ್ ಎಂಬ ಮಹಿಳೆ ಅವನನ್ನು ಅಪ್ಪಿ ಮುದ್ದಿಟ್ಟಳು. ಇದೊಂದು ದೊಡ್ಡ ಸುದ್ದಿಯಾಗದೇ ಹೋಗುವುದು ಮಡಿವಂತ ಇರಾನ್‌ನಲ್ಲಿ ಸಾಧ್ಯವೇ? ಖಂಡಿತಾ ಅಲ್ಲವೆಂದು ತೋರುತ್ತದೆ. ಅಬ್ಬಾಸ್ ಕಿರೋಸ್ತಾಮಿ ಒಂದು ವಾರ ಟೆಹರಾನ್‌ಗೆ ತಡವಾಗಿ ತೆರಳಿದನಂತೆ.

೧೯೪೦ ರಲ್ಲಿ ಟೆಹರಾನ್‌ನಲ್ಲಿ ಹುಟ್ಟಿದ ಅಬ್ಬಾಸ್ ಕಿರೋಸ್ತಾಮಿ ತನ್ನ ಮುವತ್ತನೇ ವರ್ಷದಿಂದ ಸಿನಿಮಾಗಳನ್ನು ಮಾಡಲು ಆರಂಭಿಸಿದ. ಈತ ಕವಿ ಮತ್ತು ಫೋಟೋಗ್ರಾಫರ್‌ ಕೂಡಾ. ನಾನು ಮೊನ್ನೆ ಮೊನ್ನೆ ಇವರ ‘ಟೆನ್‌’ ಎಂಬ ಚಿತ್ರವನ್ನು ನೋಡಿ ಮರುಳಾಗಿದ್ದೇನೆ. ಅದು ನನ್ನ ತಲೆಯಲ್ಲಿ ಎಷ್ಟು ತುಂಬಿಕೊಂಡಿದೆ ಎಂದರೇ ಈಗ ಭಾರತಾದ್ಯಂತ ಬಹುಜನಪ್ರಿಯವೆಂದು ಪ್ರಸಿದ್ಧವಾದ ಅಥವಾ ಹಾಗೆ ಅರಚುತ್ತಾ ಸಾರುತ್ತಿರುವ ನಮ್ಮ ಮೀಡಿಯಾಗಳ ಪ್ರೇರಣೆಗೆ ಒಳಗಾಗಿ ಜೋಹರ್‌ನ ಚಿತ್ರ ‘ಕಭಿ ಅಲ್ವಿದ ನಾ ಕೆಹನಾ’ ನೋಡಿದೆ. ಇದೊಂದು ಎಷ್ಟು ದೊಡ್ಡ ಹಿಂಸೆಯ ಅನುಭವವೆಂದರೆ ಅದರಿಂದ ನಾನು ಸಮಾಧಾನಗೊಳ್ಳಲು ಮತ್ತೆ ಮತ್ತೆ ಅಬ್ಬಾಸ್ ಕಿರೋಸ್ತಾಮಿಯ ‘ಟೆನ್‌’ ಅನ್ನು ನೆನೆಯುತ್ತಲೇ ಇದ್ದೇನೆ.

ಇಡೀ ಸಿನಿಮಾ ನಡೆಯುವುದು ಒಂದು ಚಲಿಸುತ್ತಿರುವ ಕಾರಿನಲ್ಲಿ. ಹತ್ತು ಸಾನೆಟ್‌ಗಳಂತೆ ತನ್ನ ಅರ್ಥಗಳನ್ನು ಅಡಕಗೊಳಿಸಿಕೊಂಡಿರುವ ಚಾಪ್ಟರ್‌ಗಳಲ್ಲಿ. ಚಲಿಸುತ್ತಿರುವ ಕಾರನ್ನೇ ತನ್ನ ಇಡೀ ಸಿನಿಮಾದ ಲೊಕೇಶನ್‌ಮಾಡಿಕೊಂಡಿರುವುದಕ್ಕೆ ಅಬ್ಬಾಸ್ ಕೊಡುವ ವಿವರಣೆ ಕೇಳಿ:

‘ನನ್ನ ಅತ್ಯುತ್ತಮ ಗೆಳೆಯರೆಂದರೆ ನನ್ನ ಕಾರು, ನನ್ನ ಆಫೀಸು ಮತ್ತು ನನ್ನ ಮನೆ. ಪಕ್ಕದಲ್ಲೊಬ್ಬರನ್ನು ಕೂರಿಸಿಕೊಂಡಿದ್ದಾಗ ನನ್ನ ಕಾರೇ ನನಗೆ ಅತ್ಯಂತ ಆಪ್ತವಾದ ಲೊಕೇಶನ್‌. ಕಾರಿನಲ್ಲಿ ಎದುರು ಬದುರಾಗಿ ನಾವು ಕೂತಿರುವುದಿಲ್ಲ. ಅಕ್ಕಪಕ್ಕ ಕೂತಿರುತ್ತೇವೆ. ಅಕ್ಕಪಕ್ಕ ಕೂತಾಗ ಬೇಕೆಂದಾಗ ಮಾತ್ರ ನೋಡುತ್ತೇವೆ. ಇದರಿಂದಾಗೆ ನನಗೆ ಸಹಜ ಒತ್ತಾಯವಿಲ್ಲದ ಆಪ್ತತೆ ಸಾಧ್ಯವಾಗುತ್ತದೆ. ಹೀಗೆ ಕೂತಾಗ ಸುತ್ತಮುತ್ತ ನೋಡುವುದು ಅಸಭ್ಯವೆನಿಸುವುದಿಲ್ಲ. ಎದುರಿಗೆ ದೊಡ್ಡ ಸ್ಕ್ರೀನ್‌ಇರುತ್ತದೆ. ಅಕ್ಕಪಕ್ಕದ ನೋಟಗಳೂ ಇರುತ್ತವೆ. ಮೌನವಾಗಿರುವುದು ಕಷ್ಟವೆನಿಸುವುದಿಲ್ಲ. ಯಾರು ಯಾರಿಗೂ ಒದಗುತ್ತಲೇ ಇರಬೇಕಾಗುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಚಲಿಸುತ್ತಿರುವ ಕಾರಿನಲ್ಲಿ ನಾವು ಸತತವಾಗಿ ಸ್ಥಳಾಂತರಗೊಳ್ಳುತ್ತಲೇ ಇರುತ್ತೇವೆ.’

ನಾವು ಮೊದಲು ಅಮೀನ್‌ ಎನ್ನುವ ಹುಡುಗನನ್ನು ಮಾತ್ರ ಚಲಿಸುವ ಕಾರಿನಲ್ಲಿ ನೋಡುತ್ತೇವೆ. ಶಾಲೆ ಹೋಗುವ ಹುಡುಗ ಇವನು. ಕೈಯಲ್ಲೊಂದು ಬ್ಯಾಗ್‌ ಹಿಡಿದುಕೊಂದು ಕೂತವನು ಕೋಪ ತಾಪದಲ್ಲಿ ಅರಚಿಕೊಳ್ಳುತ್ತಿದ್ದಾನೆ. ತಾಯಿ ಇನ್ನೊಂದು ಮದುವೆಯಾಗಿದ್ದನ್ನು ಈ ಮಗ ಸಹಿಸಲಾರ. ಅವಳ ಹೊಸ ಗಂಡನ ಜೊತೆ, ಅವನನ್ನು ಮಲತಂದೆಯೆಂದು ಒಪ್ಪಿಕೊಂಡು ಅವನ ಜೊತೆ ಇರಲಾರ. ಇದೊಂದು ವಿಶೇಷ ಸಂದರ್ಭವೆನ್ನಿಸಿದರೂ ಹುಡುಗನ ಹಠಮಾರಿತನ ವಿಶೇಷವಲ್ಲ. ನಮಗೂ ನಮ್ಮ ಎಳೆಯ ಮಗನದೋ, ವಯಸ್ಸಾಗಿದ್ದರೆ ನಮ್ಮ ಮೊಮ್ಮಗನದೋ ಸಿಟ್ಟು, ಸಿಡುಕು ಅರಚಾಟಗಳೇ ನೆನಪಾಗುತ್ತವೆ. ಎಲ್ಲ ಹಠಮಾರಿ ಹುಡುಗರಂತೆ ಅವನೂ ಈಗೊಂದು ವಿಶಿಷ್ಟ ಕಾರಣಕ್ಕಾಗಿ ಇನ್ನಷ್ಟು ಹಠಮಾರಿಯಾಗಿದ್ದಾನೆ –  ಅಷ್ಟೆ. ಪಕ್ಕದಲ್ಲಿ ಕೂತು ಸತತವಾಗಿ ಮಾತೃತ್ವದ ಹಕ್ಕುಗಳನ್ನು ಮಗನ ಮೇಲೆ ಹೇರಲು ವಾದಿಸುತ್ತ ಮಾತನಾಡುವ ಅವನ ತಾಯಿ ಬಹಳ ಹೊತ್ತು ನಮಗೆ ಕಾಣುವುದೇ ಇಲ್ಲ. ಸಿಟ್ಟಿನಲ್ಲಿ ಕಿವಿ ಮುಚ್ಚಿಕೊಂಡು ‘ನಿನ್ನ ಮಾತು ಸಾಕು, ಅದೇ ಅದೇ ಹೇಳುತ್ತೀಯ, ನೀನು ಒಳ್ಳೆಯ ತಾಯಿಯೇ ಅಲ್ಲ, ನಿನಗೆ ನಿನ್ನದೇ ಸ್ವಾರ್ಥ’ ಎಂದು ಕಿರುಚುತ್ತ ಮಗ ತನ್ನ ಶಾಲೆಯ ಚೀಲವನ್ನು ಕಾರಿನಿಂದ ಹೊರಗೆಸೆಯುವ ಬೆದರಿಕೆ ಹಾಕುತ್ತಾನೆ.

ಇಲ್ಲಿ ಗಮನಿಸಬೇಕಾದ್ದು ಇದು: ಇದ್ವಿಗ್ನತೆಯಲ್ಲಿ ಮಾತಾಡುವ ತಾಯಿ ನಮಗೆ ಕಾಣದ್ದರಿಂದಲೇ ನಾವೇ ಅವಳಾಗುತ್ತೇವೆ. ಅಥವಾ ಅವಳ ಮಾತುಗಳು ನಾವೇ ಅಂತಹ ಸಂದರ್ಭದಲ್ಲಿ ಆಡಬಹುದಾದ ಮಾತುಗಳಂತೆಯೂ ಮಗು ನಮಗೆ ಉತ್ತರಿಸುತ್ತಿರುವಂತೆಯೂ ಭಾಸವಾಗಲು ತೊಡಗುತ್ತದೆ.

ಸಿನಿಮಾದಲ್ಲಿ ನಿರೀಕ್ಷಿತ ವಾಸ್ತವವೆಂದರೆ ಕಿವಿಯಲ್ಲಿ ಕೇಳುವುದನ್ನು ಕಣ್ಣಿನಲ್ಲಿ ನಾವು ನೋಡುವುದು. ಹೀಗೆ ಅಭ್ಯಾಸಗತವಾದ ವಾಸ್ತವದ ನಮ್ಮ ನಿರೀಕ್ಷೆಯನ್ನು ನಿರ್ದೇಶಕ ಮುರಿಯುವುದರಿಂದಲೇ, ಕಾಣದೇ ಕೇಳಿಸಿಕೊಳ್ಳುವ ಅಶರೀರವಾದ ವಾಸ್ತವ ಹೆಚ್ಚು ಆಳದ ನಿಜವಾಗುತ್ತದೆ. ನಾವು ನಮಗೇ ಒಡ್ಡಿಕೊಳ್ಳುವ ಕಲ್ಪಿತದ ಮಾತುಗಳಾಗುತ್ತವೆ.

ತಾಯಿಗೂ ಬದುಕಬೇಕಾದ ತನ್ನದೇ ಅದೊಂದು ಜೀವನವಿದೆ ಎಂಬುದನ್ನು ಬಡಪಟ್ಟಿಗೂ ಒಪ್ಪಿಕೊಳ್ಳಲಾರದೆ ಸಿಟ್ಟಿನಲ್ಲಿ ಕಿರುಚುವ ಮಗ ಎಲ್ಲ ಗಂಡಸರಂತೆಯೇ ಮುಂದೊಂದು ದಿನ ತಾನು ಬಿಟ್ಟ ಗಂಡನಂತೆಯೂ ಆದಾನು. ತಾನು ಬಿಟ್ಟ ಗಂಡನಲ್ಲಿ ತಾನು ದ್ವೇಷಿಸುವುದನ್ನೇ ಈಗ ತಾನು ಪ್ರೀತಿಸುವ ಮಗನಲ್ಲಿ ಅವಳು ಎದುರಾಗುತ್ತಿದ್ದಾಳೆ. ಅವಳು ಪದೇ ಪದೇ ವಾದಿಸುವುದರ ಪಲ್ಲವಿ ಇದು: ‘ನನಗೇ ನನ್ನಲ್ಲಿ ಪ್ರೀತಿಯಿಲ್ಲದಿದ್ದರೆ ಇನ್ನೊಬ್ಬರನ್ನು ನಾನು ಪ್ರೀತಿಸುವುದು ಹೇಗೆ ಸಾಧ್ಯ? ಮಗನಾದ ನಿನ್ನನ್ನೂ ಪ್ರೀತಿಸುವುದು ಹೇಗೆ ಸಾಧ್ಯ?’

ಆದರೆ ತನ್ನ ಹೊಟ್ಟೆಯಲ್ಲಿ ಹುಟ್ಟಿ ತಾನು ಸಾಕಿ ಸಲುಹಿದ್ದೇ ಈಗ ಒಂದು ಬಂಡೆಯಂತೆ ತನಗೆ ಎದುರಾಗಿದೆ.

ಡೈವೋರ್ಸ್ ಪಡೆಯುವಾಗ ತಾಯಿ ಒಂದು ಸುಳ್ಳು ಹೇಳಿದ್ದಾಳೆ –  ತನ್ನ ಗಂಡ ಮಾದಕ ವ್ಯಸನಿ ಎಂದು. ಈ ಸುಳ್ಳು ಹೇಳದಿದ್ದರೆ ಈ ದೇಶದ ಕಾನೂನಿನ ಪದ್ಧತಿಯಲ್ಲಿ ತನಗೆ ಡೈವೋರ್ಸ್ ಸಿಗುತ್ತಿರಲಿಲ್ಲ ಎಂಬುದು ಅವಳ ವಾದ. ವಯಸ್ಕನೊಬ್ಬನಿಗೆ ಹೇಳಬಹುದಾದದ್ದನ್ನು ಎಳೆಯ ಮಗನ ಹತ್ತಿರ ನಿವೇದಿಸಿಕೊಳ್ಳುವ ಪಾಡು ಅವಳದ್ದಾಗಿದೆ.

ಹೇಳಿದ್ದನ್ನೇ ಹೇಳುತ್ತಾ ದುಮುಗುಡುವ ಕೀರಲು ಕಂಠದ ಈ ತಾಯಿಯನ್ನು ಮಗ ಇಳಿದುಹೋದ ಮೇಲೆ ಮಾತ್ರ ನಾವು ನೋಡುತ್ತೇವೆ. ತಲೆಯ ಮೇಲೆ ದುಪ್ಪಟ್ಟ ಹೊದ್ದ, ಆದರೂ ಆಧುನಿಕಳಂತೆ ಕಾಣುವ, ಚೆಲುವೆಯಾದ ಪ್ರಬುದ್ಧೆ ಇವಳು. ಕೇವಲ ಗೃಹಿಣಿಯಾಗಿದ್ದು ತೃಪ್ತಿ ಪಡೆಯಲಾರಳು. ನಗರ ಜೀವಿ; ನಿಪುಣೆ. ಡ್ರೈವ್ ಮಾಡುವಾಗಿನ ಅವಳ ಎಚ್ಚರ, ಅವಳ ಸಮಯಪ್ರಜ್ಞೆ, ಎದುರಾಗುವ ಚಾಲಕರ ಬಗ್ಗೆ ಅವಳ ನಯದ ವರ್ತನೆ, ಅವಳ ಅವಸರ ಎಲ್ಲವನ್ನೂ ನೋಡುತ್ತಾ ಅವಳು ತಾನು ಡ್ರೈವ್ ಮಾಡುವ ಕಾರಿನಲ್ಲಿ ಎಷ್ಟು ಸ್ವಾಧೀನದ ಎಚ್ಚರದಲ್ಲಿದ್ದಾಳೋ ಅಷ್ಟೇ ತನ್ನೊಳಗಿನ ಆಲೋಚನೆಗಳಲ್ಲೂ ತತ್ಪರಳಾಗಿದ್ದಾಳೆ ಎಂದು ನಮಗೆ ಅನ್ನಿಸುತ್ತದೆ.

ಇದಾದ ನಂತರ ಅವಳು ತನ್ನ ಸೋದರಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಚಲಿಸುತ್ತಾಳೆ. ಸೋದರಿಯ ಬುದ್ಧಿವಾದವನ್ನು ಕೇಳಿಸಿಕೊಳ್ಳುತ್ತಾಳೆ. ಮಗನಿಗೆ ಫುಟ್‌ಬಾಲ್ ಅಂದರೆ ಇಷ್ಟವಲ್ಲವೇ, ಇದು ಆಡುವ ವಯಸ್ಸಲ್ಲವೇ, ಈಗ ಅವನಿಗೆ ತಾಯಿಗಿಂತ ತಂದೆಯೇ ಮುಖ್ಯವಾಗುತ್ತಾನೆ. ಅವನ ಪಾಡಿಗೆ ಅವನನ್ನು ಬಿಟ್ಟುಬಿಡು ಎಂದು ಈ ಸೋದರಿ ಒಂದು ಜಾಣ ಪ್ರಬುದ್ಧೆಯಾಗಿ ಹೇಳುತ್ತಾಳೆ. ತಾಯಿಗಿದು ನಿಜವೆನ್ನಿಸುತ್ತದೆ. ಕಾರಿನಲ್ಲಿ ಸೋದರಿಯನ್ನು ಬಿಟ್ಟು ತನ್ನ ಗಂಡನಿಗೆ ಹುಟ್ಟಿದ ಹಬ್ಬದ ಕೇಕ್ ಒಂದನ್ನು ಕೊಳ್ಳಲು ಹೋದಾಗ ಮೌನದಲ್ಲಿ ಈ ಸೋದರಿಯ ಮುಖವನ್ನು ತದೇಕಚಿತ್ತರಾಗಿ ನಾವು ನೋಡುವಂತಾಗುತ್ತದೆ. ಸಣ್ಣ ಸಣ್ಣ ವಿವರಗಳಲ್ಲಿ ನಾವು ನೋಡುವ ಈ ಮುಖ ಯಾವುದೋ ಒಳಗಿನ ವ್ಯಗ್ರತೆಯಲ್ಲಿ ಕಿರಿಕಿರಿಗೊಳ್ಳುವುದನ್ನು ನಾವು ಗಮನಿಸುತ್ತೇವೆ. ಅವಳ ಬೆರಳುಗಳು ಇರದ ಏನನ್ನೋ ತುಟಿಗಳ ನಡುವಿನಿಂದ ಚಿವುಟಿ ತೆಗೆಯುತ್ತಲೇ ಇರುವಂತೆ ಕಾಣುತ್ತದೆ. ಅವಳ ಮುಖವೇ ಮಾತಾಡುವಂತೆ ತೋರುತ್ತದೆ. ತನ್ನ ಸೋದರಿ ಕೇಕ್‌ಕೊಂಡು ಬಂದದ್ದೇ ಆಪ್ತ ಉಪದೇಶವನ್ನು ಕೊಡಬಲ್ಲ ಜಾಣೆಯಾಗಿ ಮತ್ತಿವಳು ಕಾಣಿಸಿಕೊಳ್ಳುತ್ತಾಳೆ. ಅವಳು ತನ್ನಲ್ಲೇ ತೊಡಗಕೊಳ್ಳುವ ಕ್ಯಾಮರಾ ಕದ್ದು ಕಾಣುವ ಸನ್ನೆಗಳ ಸಹಜತೆ ಸೂಕ್ಷ್ಮತೆಯಲ್ಲಿ ಅವಳ ಒಳಜೀವನ ಮಸುಕುಮಸುಕಾಗಿ ನಮಗೆ ತೋರುತ್ತದೆ.

ಪೂರ್ಣಗೊಂಡ ಸ್ಕ್ರಿಪ್ಟ್ನಿಂದ ನಾನು ಪ್ರಾರಂಭಿಸುವುದೇ ಇಲ್ಲ. ನನ್ನ ಮನಸ್ಸಿನಲ್ಲಿ ಒಂದು ಪಾತ್ರ ಹುಟ್ಟಿಕೊಂಡಿರುತ್ತದೆ. ಪಾತ್ರವಂಥವನೊಬ್ಬ ಅಥವಾ ಒಬ್ಬಳು ನನಗೆ ನಿಜ ಜೀವನದಲ್ಲಿ ಪ್ರತ್ಯಕ್ಷವಾಗುವ ತನಕ ನಾನು ಟಿಪ್ಪಣಿಗಳನ್ನೂ ಮಾಡಿಕೊಳ್ಳಲು ಹೋಗುವುದಿಲ್ಲ. ಅಂಥವರೊಬ್ಬರು ಸಿಕ್ಕಮೇಲೆ ನನಗವರು ಆಪ್ತರಾಗುವಷ್ಟು ಅವರ ಜತೆ ಕಾಲ ಕಳೆಯುತ್ತೇನೆ. ಹೀಗಾಗಿ ನಾನು ಮಾಡುವ ಟಿಪ್ಪಣಿಗಳು ನನ್ನ ಮನಸ್ಸಿನಲ್ಲಿರುವ ಪಾತ್ರದ ಬಗ್ಗೆಯಾಗಿರದೆ ನಿಜ ಜೀವನದಲ್ಲಿ ನಾನು ಕಂಡವರ ಬಗ್ಗೆ ಆಗಿರುತ್ತವೆ. ಇದೊಂದು ದೀರ್ಘ ಪ್ರಕ್ರಿಯೆ; ಐದಾರು ತಿಂಗಳುಗಳಾದರೂ ಹಿಡಿಯುವ ಪ್ರಕ್ರಿಯೆ. ಹೀಗಾದಾಗ ನಾನು ಕೆಲವು ಟಿಪ್ಪಣಿಗಳನ್ನು ಮಾಡಿಕೊಳ್ಳುತ್ತೇನೆಯೇ ಹೊರತು ಅವರ ಸಂಭಾಷಣೆಗಳನ್ನು ಬರೆದಿಟ್ಟುಕೊಳ್ಳುವುದಿಲ್ಲ. ಇಡೀ ಸಂಭಾಷಣೆಗಳನ್ನು ಬರೆಯುವುದೇ ಇಲ್ಲ. ಆದುದರಿಂದ ಚಿತ್ರೀಕರಣ ಪ್ರಾರಂಭ ಮಾಡಿದಾಗ ರಿಹರ್ಸಲ್ ಮಾಡುವ ಪ್ರಮೇಯವೇ ಬರುವುದಿಲ್ಲ. ನನಗೇ ಅವರು ಹತ್ತಿರವಾಗುವುದರ ಬದಲು ಅವರಿಗೇ ನಾನು ಹತ್ತಿರವಾಗುತ್ತಾ ಹೋಗುತ್ತೇನೆ. ನಾನು ಅವರಿಗೆ ಕೊಡುವುದು ಇಲ್ಲವೆಂದಲ್ಲ. ಆದರೆ ಅವರಿಂದ ನಾನು ಹೆಚ್ಚು ಪಡೆದುಕೊಳ್ಳುತ್ತೇನೆ.’

 – ಅಬ್ಬಾಸ್ ಕಿರೋಸ್ತಾಮಿ.

ಸಿನಿಮಾದಲ್ಲಿ ನಾವು ಕಾಣುವುದ ಒಂದು ಹೆಣ್ಣು, ಆಮೇಲೆ ಮತ್ತೊಂದು ಹೆಣ್ಣು, ಆಮೇಲೆ ಮಗದೊಂದು ಹೆಣ್ಣು, ಈ ಹೆಣ್ಣುಗಳ ವಿವಿಧ ಮುಖಗಳು, ವಿವಿಧ ಸಮಸ್ಯೆಗಳು; ಆದರೂ ಎಲ್ಲವೂ ಒಂದೇ ಹೆಣ್ಣು –  ಹೀಗೆ ವಿವರಗಳನ್ನು ಸಂಜ್ಞೆಗಳನ್ನಾಗಿ ಮಾಡಿ ಧ್ವನಿಯಾಗಿಸುವ ಬಗೆ ಪ್ರಬುದ್ಧ ಕಲಾವಿದನದು.

ಇವಳನ್ನು ಬಿಟ್ಟ ಮೇಲೆ ಪರಿಚಿತಳಲ್ಲದ ವಯಸ್ಸಾದವಳೊಬ್ಬಳನ್ನು ಅಮೀನ್‌ನ ತಾಯಿ ಕಾರಿಗೆ ಹತ್ತಿಸಿಕೊಳ್ಳುತ್ತಾಳೆ –  ಸಭ್ಯ ಕನಿಕರದಿಂದ. ನಾವೂ ಕಾಣದ ಈ ಅಪರಿಚಿತಳು ವಟಗುಡದ ದೈವಭಕ್ತೆ. ಸತತ ಪ್ರಾರ್ಥನೆಯಲ್ಲಿ ಒದ್ದೆಯಾದ ತ್ಯಾಗಿ. ಕಾರಿನ ಚಾಲಕಿ ಗೌರವದಿಂದ ಆದರೆ ಉದಾಸೀನದಿಂದ ಅವಳ ಬಿಟ್ಟಿ ಉಪದೇಶಗಳನ್ನು ಕೇಳಿಸಿಕೊಳ್ಳುತ್ತಾಳೆ. ಜೀವನದ ಗೋಜಲುಗಳ ನಡುವೆ ಈ ಬಗೆಯ ಸರ್ವಾರ್ಪಣೆಯನ್ನು ಸುಮ್ಮನೆ ನಮಗೆ ಕಾಣುವಂತೆ ನಮ್ಮೆದುರು  ಇಟ್ಟು ಕಥೆ ಬಿಚ್ಚುತ್ತ ಸಿನಿಮಾ ಮುಂದುವರಿಯುತ್ತದೆ. ವಾಕ್ಯದ ನಡುವೆಯ ಕಾಮಾಗಳು ಇವು.

ಈ ಕಾರಿನ ಪ್ರಮಾಣದಲ್ಲಿ ನಮಗೆ ಮರೆಯಲಾರದ ಘಟನೆ ಎಂದರೆ ಕಾರಿನ ಚಾಲಕಿ ಕಾರನ್ನು ಕತ್ತಲಿನಲ್ಲಿ ನಿಲ್ಲಿಸಿದಾಗ ಹತ್ತಿಕೊಳ್ಳುವ ಒಬ್ಬ ಸೂಳೆ. ಇವಳ ಮುಖವನ್ನು ನಾವು ಕಾಣುವುದೇ ಇಲ್ಲ. ಮಾತುಗಳನ್ನು ಮಾತ್ರ ಕೇಳುತ್ತೇವೆ. ಇವಳು ಹತ್ತಿಕೊಳ್ಳಲು ಕಾರಣ ಕಾರಿನಲ್ಲಿರುವುದು ಒಬ್ಬ ಗಂಡಸು ಎಂಬ ಭ್ರಮೆಯಲ್ಲಿ. ನಮ್ಮ ಚಾಲಕಿ ಅವಳನ್ನು ಇಳಿಯಲು ಬಿಡುವುದಿಲ್ಲ. ಸೂಳೆಯ ನಿತ್ಯ ಜೀವನದ ಸತ್ಯಗಳನ್ನು ತಿಳಿಯಲು ಈಕೆ ಪರಮ ಕುತೂಹಲಿಯಾಗುತ್ತಾಳೆ. ದಾರಿಯುದ್ದಕ್ಕೂ ಸೂಳೆ ವಿಚಿತ್ರವಾಗಿ ಬಿಕ್ಕಿ ಬಿಕ್ಕಿ ನಗುತ್ತಲೇ ತನ್ನ ಕಥೆಯನ್ನು ಯಾವ ಆತ್ಮ ಮರುಕವೂ ಇಲ್ಲದೆ ಬಡಬಡಿಸುವ ಹಿಗ್ಗಿನಲ್ಲಿ ಹೇಳಿಕೊಳ್ಳುತ್ತಾಳೆ.

ಇದೊಂದು ಅಪೂರ್ವ ಸನ್ನಿವೇಶ ಈ ಚಿತ್ರದಲ್ಲಿ. ನಮಗೆ ಕಾಣದ ಸೂಳೆಯ ಕೀರಲು ಹಿಗ್ಗಿನ ಸವಾಲಿನ ಧ್ವನಿಯ ಹಿನ್ನೆಲೆಯಲ್ಲಿ ನಾವು ಕಾಣುವ ಮತ್ತೆ ಮದುವೆಯಾದ ಅಮೀನಿನ ಈ ತಾಯಿ ಯಾರು? ಚಾಣಾಕ್ಷಳಾದ ಜಾಣ ಸಂಸಾರಿಯೆ? ಒಳಗುದಿ ತೀರದೆ ಇನ್ನೂ ತುಡಿಯುವ ಪ್ರೇಯಸಿಯೆ? ಮಗನ ಜೊತೆ ಪ್ರಾರಂಭವಾದ, ಆದರೆ ಸ್ವಗತವಾಗಿಯೇ ಉಳಿದ ಅವಳ ಬಯಕೆಗಳು ಹೊಸ ಅರ್ಥಗಳನ್ನು ಪಡೆದುಕೊಳ್ಳುತ್ತವೆ, ಸೂಳೆಯ ಮಾತುಗಳ ಹಿನ್ನೆಲೆಯಲ್ಲಿ ನಾವು ಈವರೆಗೆ ಕೇಳಿ ಕಂಡದ್ದೆಲ್ಲವನ್ನೂ ಪುನರಾಲೋಕಿಸುತ್ತೇವೆ. ನೈತಿಕ ಜೀವನ, ಸುಖ ಮತ್ತು ಪ್ರೀತಿಯ ಹುಡುಕಾಟ, ಸಭ್ಯಸಮಾಜದ ಕಟ್ಟುಪಾಡುಗಳು –  ಎಲ್ಲವೂ ಸಮಸ್ಯಾತ್ಮಕವಾಗುತ್ತವೆ.

ಈ ಚಿತ್ರ ನೋಡಿದ ವಿಮರ್ಶಕರೆಲ್ಲರೂ ಉಲ್ಲೇಖಿಸುವ ಒಂದು ಮಾತು ಅಲ್ಲಿ ಬರುತ್ತದೆ. ಹಿಗ್ಗಿನ ಪರಾಕಾಷ್ಠೆಯಲ್ಲಿ ಸೂಳೆ ಹೇಳುತ್ತಾಳೆ; ಮರ್ಯಾದಸ್ಥ ಸಂಸಾರಿಗಳಾದ ನೀವು ಹೆಂಗಸರು ಹೋಲ್‌ಸೇಲ್‌ ವ್ಯಾಪಾರಿಗಳು. ನಾವು ರೀಟೇಲ್‌ವ್ಯಾಪಾರಿಗಳು. ಮತ್ತೇನಿದೆ ಹೆಣ್ಣುಗಂಡಿನ ಸಂಬಂಧದಲ್ಲಿ? Sex, sex, sex ನಿಮ್ಮ ಗಂಡಂದಿರೆಲ್ಲರೂ ಆರಾಮಿನ ಸುಖಕ್ಕೆ ಬರುವುದು ನನ್ನಂಥವಳ ಬಳಿಯೇ.

ಇಲ್ಲೊಂದು ಸತ್ಯ ಥಟ್ಟನೇ ಅನಾವರಣಗೊಳ್ಳುತ್ತದೆ. ಎಪಿಫನಿಯಂತೆ, ವಿರೋಧಾಭಾಸವಾಗಿ, ಗಂಡಸರೆಲ್ಲರೂ ಹೆಣ್ಣಿನಿಂದ ಏನು ಅಪೇಕ್ಷಿಸುತ್ತಾರೋ ಅದೇ ಸತ್ಯದಲ್ಲಿ ಆಗಿಬಿಟ್ಟವಳು ಈ ಸೂಳೆ. ಗಂಡಸಿಗೆ ಲೈಂಗಿಕ ಸುಖವನ್ನು ಕೊಡುವ ಉದ್ಯಮದಲ್ಲೇ ತನ್ನ ಎಲ್ಲ ಸುಖವನ್ನೂ ಸಾರ್ಥಕತೆಯನ್ನೂ ಕಾಣುವುದಷ್ಟೇ ಅಲ್ಲದೆ ಅದನ್ನು ಅಟ್ಟಿ ಹುಡುಕುವ ಪ್ರಾಣಿಯೂ ಅವಳಾಗಿ ಹೋಗಿದ್ದಾಳೆ. ಗಂಡು ಬಯಸುವುದೇ ತಾನೂ ಆಗಿ ಬಿಟ್ಟು ಅವಳು ಬಿಡುಗಡೆ ಪಡೆದಿದ್ದಾಳೆ. ಅಥವಾ ಹಾಗೆನ್ನಿಸುವ ಶಾಕನ್ನು ನಮಗೆ ಕೊಡಬಲ್ಲವಳಾಗಿದ್ದಾಳೆ.

ಜನಸಂದಣಿ ಇದ್ದಲ್ಲೆಲ್ಲಾ ಕಾರನ್ನು ನಿಲ್ಲಿಸು ನಿಲ್ಲಿಸು ಎಂದು ಸೂಳೆ ಕಾಡುತ್ತಾಳೆ. ಆದರೆ ಅವಳಾಡುವ ಮಾತನ್ನು ಕೇಳಿಸಿಕೊಳ್ಳುವ ಆಸೆ ನಮ್ಮ ತಾಯಿ ಪ್ಲಸ್ ಪ್ರಣಯಿಯಾದ ಚಾಲಕಿಗೆ. ಸಂಭಾವಿತೆಯಾಗಿ ತಾನು ಆಗದ್ದನ್ನು ಆಡಲಾರದ್ದನ್ನು ಯಥೇಚ್ಛ ಕೇಳಿಸಿಕೊಂಡು ಕಾರನ್ನು ನಿಲ್ಲಿಸುತ್ತಾಳೆ. ಅವಸರದಲ್ಲಿ ಸೂಳೆ ಇಳಿದು ಹೋಗಿ ಇನ್ನೊಂದು ಕಾರನ್ನು ಹತ್ತಿಕೊಳ್ಳುವುದನ್ನು ನಾವು ನೋಡುತ್ತೇವೆ.

ಇನ್ನೊಂದು ಮರೆಯಲಾರದ ಭೇಟಿಯೆಂದರೆ ಕೋಲು ಮುಖದ ಚಿಂತಾಕ್ರಾಂತ ಭಾವದ ಹೆಣ್ಣೊಬ್ಬಳ ಜತೆಗಿನದು. ಸೂಳೆಗೆ ವಿರುದ್ಧದ ಸತ್ಯ ಇವಳ ಭಾವಲೋಕದ್ದು. ಪ್ರಾಯಶಃ ಇವಳು ಶೀತಳೆ –  ರತ್ಯುತ್ಸಾಹಿಯಲ್ಲ. ಇವಳು ತನ್ನ ಪ್ರಿಯಕರನನ್ನು ಒಲಿಸಿಕೊಳ್ಳಲಾಗದೆ ಸೋತಿದ್ದಾಳೆ. ತಲೆಯ ಮೇಲಿನ ಹೊದಿಕೆಯನ್ನು ಬಿಗಿಯಾಗಿ ಮಡಿವಂತಳಂತೆ ಕಟ್ಟಿಕೊಂಡಿದ್ದಾಳೆ. ಅವಳ ಪಾಲಿಗೆ ದೇವರನ್ನು ಪ್ರಾರ್ಥಿಸುವುದೆಂದರೆ ದೇವರ ಮೇಲೂ ಜುಲುಮೆ ಮಾಡಿದಂತೆ. ಜುಲುಮೆಯಿಂದ ಪ್ರೀತಿ ಸಿಗುವುದಿಲ್ಲ ಎಂಬುದನ್ನು ತಿಳಿದಿರುವ ಹೆಂಗಸು ಇವಳು. ಘನತೆ ಕಳೆದುಕೊಳ್ಳುವ ವ್ಯಾಕುಲಿಯಾದ ಈ ಸಂಗಾತಿಯನ್ನು ನಮ್ಮ ಚಾಲಕಿ ಸಂತೈಸುತ್ತಾಳೆ. ‘ದುಪಟ್ಟಾವನ್ನು ಅಷ್ಟು ಬಿಗಿಯಾಗಿ ಕಟ್ಟಿಕೊಳ್ಳಬೇಡ. ಅದು ಸಡಿಲವಾಗಿದ್ದರೆ ನೀನು ಸುಂದರವಾಗಿ ಕಾಣುತ್ತೀ’ ಎಂದು ಒಂದು ಹೆಣ್ಣು ಇನ್ನೊಂದು ಹೆಣ್ಣಿಗೆ ಆಪ್ತತೆಯಲ್ಲಿ ಹೇಳಿಕೊಳ್ಳುವಂತೆ ಹೇಳಿದಾಗ ಸಂಗಾತಿ ನಸುನಕ್ಕು ದುಪಟ್ಟಾ ಸಡಿಲಿಸುತ್ತಾಳೆ. ಥಟ್ಟನೇ ಅವಳು ಬೋಳಿಸಿಕೊಂಡ ತಲೆ ನಮಗೆ ಕಾಣುತ್ತದೆ. ಸಂಗದ ವೈಯಾರದಲ್ಲಿ ಸೂಳೆ ಬಿಡುಗಡೆ ಕಂಡರೆ, ಬೋಳಿಸಿದ ತಲೆ ಸೂಚಿಸುವ ನಿಸ್ಸಂಗದಲ್ಲಿ ಇವಳಿಗೆ ಬಿಡುಗಡೆಯ ಅನುಭವವಾಗಿರಬಹುದೆ?

ಬೋಳಾದ ತಲೆಯ ಅವಳ ಸೌಮ್ಯ ಭಾವದ ಮುಖದ ನಮಗೂ ಒಂದು ಕ್ಷಣ ತುಂಬ ಸುಂದರವೆನ್ನಿಸುತ್ತದೆ.

ಕನಿಷ್ಠದಲ್ಲಿ ಗರಿಷ್ಠವನ್ನು ಹೊಳೆಯಿಸಬಲ್ಲ ಕಲೆ ಇಲ್ಲಿದೆ. ಜಪಾನೀ ಹೈಕೋ ಕವನವೊಂದನ್ನು ಓದಿದ ಅನುಭವವಿದು. ಭಗ್ನ ಪ್ರಣಯಿ, ದೈವಭಕ್ತೆ, ಸೂಳೆ, ವಿಶಾದಯೋಗದಲ್ಲಿರುವ ಈ ಸಾಧ್ವಿ –  ಒಂದರ ನಂತರ ಇನ್ನೊಂದು ಅಲೆ. ನದಿಯಂತೆ ಹರಿಯುವ ಈ ಕಾರಿನ ಯಾತ್ರೆಯಲ್ಲಿ.

ಮತ್ತೆ ಬಂಡಾಯಗಾರನಾದ ಮಗ ಕಾರನ್ನು ಹತ್ತಿಕೊಳ್ಳುತ್ತಾನೆ. ಈಗ ಮಗನ ಮಲ ತಾಯಿಯ ಬಗ್ಗೆ ಚಾಲಕಿ ಸ್ವಲ್ಪ ವಿನೋದದಲ್ಲಿಯೇ ಪ್ರಶ್ನಿಸುತ್ತಾಳೆ. ಎಷ್ಟು ಕುತೂಹಲದಲ್ಲೋ ಅಷ್ಟೇ ಕೊಂಕಿನಲ್ಲಿ. ‘ನಿನ್ನ ಮಲತಾಯಿ ಗಂಡ ಹೇಳಿದಂತೆ ಕೇಳಿ ನಡೆದುಕೊಳ್ಳುವ ಗೃಹಿಣಿ ಇರಬೇಕಲ್ಲವೇ? ಪ್ರತಿನಿತ್ಯ ಹೊಸ ಹೊಸ ಅಡುಗೆಗಳನ್ನು ಮಾಡಿ ಗಂಡನಿಗೆ ಉಣಿಸಿ ಜಠರ ಮುಖೇನ ನಿನ್ನ ಅಪ್ಪನನ್ನು ಗೆದ್ದಿದ್ದಾಳಲ್ಲವೆ? ತನ್ನದೇ ಜೀವನವೊಂದು ಬೇಕೆಂಬ ನನ್ನಲ್ಲಿರುವ ಸ್ವಾರ್ಥ ಅವಳಲ್ಲಿ ಇಲ್ಲವೇ ಇಲ್ಲ ಅಲ್ಲವೇ?’

ತನ್ನ ಮಲತಾಯಿಯನ್ನು ಪೆದ್ದಳೆಂದು ಕಾಣುವ ಈ ವಿನೋದದ ಮಾತುಕತೆಯಲ್ಲಿ ಆರಾಮಾಗಿ ಮಗನೂ ಪಾಲಾಗುತ್ತಾಳೆ. ಫ್ರಿಜ್‌ನಲ್ಲಿರುವ ತಂಗಳನ್ನ ತಾನೀಗ ತಿನ್ನಬೇಕಾಗಿಲ್ಲ. ಅಷ್ಟೇ ಸಾಕು. ಹೀಗೆ ಹೇಳುತ್ತಲೇ ತಾಯಿ ಕಾರನ್ನು ಚಲಿಸುವ ಮಾರ್ಗವನ್ನು ಅವನು ಬದಲಿಸಲು ಒತ್ತಾಯಿಸುತ್ತಾ, ಇನ್ನೂ ಹತ್ತಿರದ ದಾರಿಗಳನ್ನು ವಿವರಿಸುತ್ತ ತನ್ನ ಯಜಮಾನಿಕೆಯನ್ನು ತಾಯಿಯ ಮೇಲೆ ಹೇರಲು ವ್ಯರ್ಥ ಯತ್ನಿಸುತ್ತಾನೆ. ಅಪ್ಪನಿಗೆ ಸರಿಯಾದ ಮಗ. ಎಲ್ಲ ಗಂಡುಗಳಂತೆ ಇನ್ನೊಂದು ಗಂಡು. ಆದರೆ ತನಗೆ ಪ್ರಿಯನಾದ ತನ್ನ ಕೂಸು.

ಕತೆಯೇನೋ ಕೊನೆಯಾಗುವುದೇ ಇಲ್ಲ. ಇದು ಶಿಖರವಿಲ್ಲದ ಕಟ್ಟಡ. ಆಗುವುದಕ್ಕೆಲ್ಲಾ ಅನುವಾಗುವುದೇ ಇಲ್ಲಿ ನಿರ್ದೇಶಕನಲ್ಲದ ನಿರ್ದೇಶಕನ ಕಲೆ. ಇಷ್ಟಿಷ್ಟೇ ಬಿಚ್ಚುತ್ತಾ ಹೆಚ್ಚುತ್ತಾ ಹೊಂದುತ್ತಾ ಹೋಗುವುದೇ ಇಲ್ಲಿಯ ಕಥನ. ತಮ್ಮೊಳಗೆ ತಾವಿರುವ ಹೆಣ್ಣಿನ ಒಳ ಮನಸ್ಸನ್ನು ನಾವು ಇಣುಕಿ ನೋಡುತ್ತೇವೆ. ಓರೆ ನೋಟಗಳಿಗಷ್ಟೇ ಅವಕಾಶವಿರುವ ಕಥನದಲ್ಲಿ ಅಲಂಕಾರವಿಲ್ಲ. ನಿಯಂತ್ರಣಗಳಿಲ್ಲ. ಒತ್ತಾಯಗಳಿಲ್ಲ. ನಾವು ಕಥನದು ಭಾವೋದ್ವೇಗಗಳಿಗೆ ಹೀಗೇ ಸ್ಪಂದಿಸಬೇಕೆಂದು ಜುಲುಮೆ ಮಾಡುವ ಹಿನ್ನೆಲೆಯ ಸಂಗೀತ ಕೊಡ ಇಲ್ಲ. ಕಾರು ಚಲಿಸುವಾಗ ಒಂದು ಹಂಪ್‌ ಅನ್ನು ಅದು ಹತ್ತಿ ಇಳಿದಾಗ ಆಗುವ ಶಬ್ದವೇ ಭಾವಪಲ್ಲಟಗಳನ್ನು ಸೂಚಿಸುವಂತೆ ಇರುತ್ತದೆ. ಹೀಗೆ ನಾವು ಕಾಣುತ್ತಾ ಹೋಗುವುದು ತನ್ನಲ್ಲೇ ಕಾಣ್ಕೆಯಾಗಿಬಿಡುವುದು ಈ ಚಿತ್ರದ ಒಂದು ಸೋಜಿಗ.

ಈ ಚಿತ್ರವನ್ನು ನೋಡುವುದಕ್ಕಿಂತ ಒಂದು ದಿನ ಮುಂಚೆ ನಾನು ಡಾ. ಆಶಾದೇವಿ ಬರೆದ ‘ಸ್ತ್ರೀಮತವನ್ನುತ್ತರಿಸಲಾಗದೆ…’ ಎನ್ನುವ ಪುಸ್ತಕವನ್ನು ಬಿಡುಗಡೆ ಮಾಡುತ್ತಾ ಸ್ತ್ರೀ ಲೋಕದ ಪ್ರಜ್ಞೆಗೆ ಸ್ಪಂದಿಸಲು ಪ್ರಯತ್ನಿಸಿದ್ದೆ. ಈ ಪುಸ್ತಕದ ಮೂರು ಒಳ್ಳೆಯ ಲೇಖನಗಳು ನನ್ನನ್ನು ಬಹುವಾಗಿ ಕಾಡಿದ್ದವು. ಈ ಮೂರರಲ್ಲಿ ನನಗೆ ತುಂಬ ಇಷ್ಟವಾದದ್ದು ಡಾ. ಆಶಾದೇವಿಯವರು ವೈದೇಹಿಯವರ ಮೇಲೆ ಬರೆದದ್ದು. ವೈದೇಹಿಯವರ ಆರ್ದ್ರ ಗರ್ವದ ಬರೆವಣಿಗೆ, ಸವಿತಾ ನಾಗಭೂಷಣರ ಆಗುವುದಕ್ಕೆಲ್ಲಾ ಅನುವಾಗುವ ‘ಸ್ತ್ರೀಲೋಕ’ದ ಬರೆವಣಿಗೆ, ಪ್ರತಿಭಾ ನಂದಕುಮಾರರ ಅನನ್ಯವಾದ ತುಂಟು ಬಿಡುಗಡೆಯ ಧಾಟಿ ನನ್ನ ಮನಸ್ಸಿನಲ್ಲಿ ಈ ಸಿನಿಮಾವನ್ನು ನೋಡುವಾಗ ಇತ್ತು. ಹೀಗಾಗಿ ಅಬ್ಬಾಸ್ ಕಿರೋಸ್ತಾಮಿಯೂ ನನ್ನ ಮನಸ್ಸಿನಲ್ಲಿ ಬೆಳೆದ; ನಮ್ಮ ಲೇಖಕಿಯರೂ ಅಬ್ಬಾಸ್ ಕಿರೋಸ್ತಾಮಿಯ ಜತೆ ನನ್ನ ಮನಸ್ಸಿನಲ್ಲಿ ಬೆಳೆಯುತ್ತಾ ಹೋದರು. ಈ ಅನುಭವದಲ್ಲಿ ಗಿರೀಶ್ ಕಾಸರವಳ್ಳಿಯೂ ಅದೂರ್‌ ಗೋಪಾಲಕೃಷ್ಣನ್‌ರೂ ಹೋಲಿಕೊಂಡೂ ಭಿನ್ನರಾಗಿಯೂ ಇದ್ದರು. ಇಂಥ ಅನುಭವದ ನಂತರ ಜೋಹರ್‌ನ ತನ್ನ ಶೀರ್ಷಿಕೆಯಲ್ಲೂ ಅತಿ ಉದ್ದವಾದ ಬಾಲಿವುಡ್‌ಸಿನಿಮಾ ನಮ್ಮ ಮನಸ್ಸಿನ ಸೂಕ್ಷ್ಮಗಳನ್ನು ಜಡ್ಡುಗೊಳಿಸುವ ಕಮರ್ಷಿಯಲ್ ಹುನ್ನಾರ ಎನಿಸಿತು.

ಅಬ್ಬಾಸ್ ಕಿರೋಸ್ತಾಮಿಯ ಈ ಅಪೂರ್ವ ಕಲಾಕೃತಿಯಲ್ಲೂ ಸಮಸ್ಯೆಯಿಲ್ಲವೆಂದಲ್ಲ. ಹೊಳೆಯದೇ ಹೋದರೆ ಸಪ್ಪೆಯಾಗಬಹುದಾದ ಅತಿಸಂಕುಚಿತ ವಿವರಗಳೂ, ಪುನರಾವರ್ತನೆಯೆನ್ನಿಸಬಹುದಾದ ಸ್ಥಿರ ಡಿಜಿಟಲ್ ಕ್ಯಾಮರಾ ಹಿಡಿಯುತ್ತ ಹೋಗುವ ವಿಸ್ತಾರಗಳೂ ಇಂತಹ ಕಲಾಕೃತಿಗಳು ಎದುರಿಸುವ ಅಪಾಯಗಳು. ಆಗುವುದಕ್ಕೆ ಅನುವಾಗುವ ಇಂತಹ ಕಲೆಯಲ್ಲಿ ಕಣ್ಣಿಗೆ ಕಂಡದ್ದು ಅದೃಷ್ಟವಶಾತ್‌ ಕಾಣ್ಕೆಯಾಗುತ್ತದೆ. ಆದರೆ ಅತಿನಿರ್ಮಿತವೂ ನಿಯೋಜಿತವೂ ಭಾವೋದ್ವೇಗಗಳನ್ನು ಹೊಂಚಿ ಸಾಧಿಸುವಂಥದೂ ಆದ ಆಕ್ರಮಣಶಾಲಿಯಾದ ಕೃತಕ ಸಿನಿಮಾಗಳಲ್ಲಿ ಪ್ರೇಕ್ಷಕನೂ ಬಳಸಿ ಬೆಸಾಕಿದ ಇನ್ನೊಂದು ಪದಾರ್ಥವಾಗಿರುತ್ತಾನೆ.

೨೭೨೦೦೬

* * *