ಸುಮಾರು ಮುವ್ವತ್ತು ವರ್ಷಗಳಿಗೂ ಹೆಚ್ಚು ಕಾಲದ ಎನ್ನ ಮಿತ್ರ ಅಯ್ಯಪ್ಪ ಪಣಿಕ್ಕರ್‌ (೧೯೩೦ – ೨೦೦೬) ಮೊನ್ನೆ ಕಣ್ಮರೆಯಾದರು. ಕೆಲವು ದಿನಗಳ ಹಿಂದೆ, ಅವರಿಗೆ ಏನೇನೂ ಮೈಯಲ್ಲಿ ಸರಿಯಿಲ್ಲವೆಂದು ಕೇಳಿ ಫೋನ್ ಮಾಡಿದ್ದೆ. ಅವರ ಮಗಳು ಫೋನ್ ತೆಗೆದುಕೊಂಡರು. ಅಪ್ಪನಿಗೆ ಮಾತಾಡುವುದು ಕಷ್ಟವೆಂದರು; ಎಚ್ಚರವಾಗಿದ್ದಾರೆ ಎಂದರು. ನಾನು ಕರೆದೆನೆಂದು ಅವರಿಗೆ ಹೇಳಿ ಎಂದೆ.

ಅವರು ಫೋನ್ ತೆಗೆದುಕೊಂಡಿದ್ದರೆ ನಾನು ಏನು ಹೇಳಬಹುದಿತ್ತು?

ಯಾವ ಹಿತವಾದ ಸುಳ್ಳನ್ನೂ, ಪೊಳ್ಳು ಭರವಸೆಗಳನ್ನೂ ಪರಸ್ಪರ ಹೇಳಿಕೊಳ್ಳದ ಸ್ನೇಹ ನಮ್ಮದು. ಶಾಂತಿನಾಥ ದೇಸಾಯರು ಸಾಯುತ್ತಿದ್ದಾಗಲೂ ಹೀಗೇ ಆಗಿತ್ತು. ಫೋನ್ ತೆಗೆದುಕೊಂಡರು; ನನಗೆ ‘ಬೇಗ ಗುಣವಾಗಿ’ ಇತ್ಯಾದಿ ಯಾವ ಹಿತವಾದ ಸುಳ್ಳುಗಳನ್ನು ಹೇಳಲು ನನಗೆ ಅವಕಾಶ ಕೊಡದಂತೆ ಆಕ್ಸಿಜನ್ ಸೇವನೆಯನ್ನು ಕ್ಷಣ ನಿಲ್ಲಿಸಿ ಮೃದು ಸ್ನೇಹದಲ್ಲಿ ಅಂದರು: ‘ಎಷ್ಟು ದಿನ ಬದುಕಿರುತ್ತೇನೆ ಈಗ ಮುಖ್ಯವಾಗಿ ಉಳಿದಿಲ್ಲ; ಉಳಿದ ಕಾಲದಲ್ಲಿ ಬದುಕನ್ನು ಎಷ್ಟು ಅರ್ಥಪೂರ್ಣವೆನ್ನಿಸುವಂತೆ ಬಳಸುತ್ತೇನೆ ಎಮಬುದಷ್ಟೇ ನನಗೀ ಉಳಿದಿರುವುದು’. ಇಂಗ್ಲಿಷಿನಲ್ಲಿ ಅವರು ಹೇಳಿದ ಈ ಮಾತು ಇನ್ನೂ ಹಗುರಾಗಿತ್ತು: ನನ್ನನ್ನೂ ಹಗುರಗೊಳಿಸುವಂತಿತ್ತು.

ಮಾತಾಡಲು ಸಾಧ್ಯವಿದ್ದಿದ್ದರೆ ಅಯ್ಯಪ್ಪ ಪಣಿಕರ್‌ಏನಾದರೂ ಜೋಕು ಮಾಡುತ್ತ ಇದ್ದರೋ ಏನೋ – ಉಸಿರಾಡಲಾರದ ತನ್ನ ಸ್ಥಿತಿಯ ಬಗ್ಗೆಯೇ. ಕಾಣಲು ಪುಟಾಣಿಯಾಗಿದ್ದ, ಆದರೆ ಆಳವಾದ ಹಿತವಾದ ಧ್ವನಿಯನ್ನು ಪಡೆದ ಅವರ ಗಂಟಲಿನಿಂದ ಬರಬಹುದಾಗಿದ್ದ ಮಾತನ್ನು ಊಹಿಸಿ ನಾನು ಸುಮ್ಮನಾದೆ.

ಕೊಟ್ಟಾಯಂನ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದಲ್ಲಿ ಸಿಂಡಿಕೇಟಿನ ಸದಸ್ಯರಾಗಿದ್ದ ಪಣಿಕ್ಕರ್, ನನ್ನ ಕುಲಪತಿ ನಿರ್ವಹಣೆಯ ಕಾಲದ ಧರಣಿ – ಬಿಕ್ಕಟ್ಟುಗಳನ್ನು ಇವು ಕೇರಳದ ವಿಶಿಷ್ಟ ಬೀದಿನಾಟಕವೆಂದು ಕಾಣುವಂತೆ ಸಾಮಾನ್ಯಗೊಳಿಸಿ, ನಗಿಸಿ, ಹಗುರಗೊಳಿಸುತ್ತಿದ್ದರು. ನಾನು ಲೇಖಕನೆಂಬುದನ್ನು ಮರೆಯಗೊಡದಂತೆ ನೋಡಿಕೊಂಡರು. ಸಾಹಿತ್ಯ ಅಕಾಡೆಮಿಯಲ್ಲಿ ನಾನು ಅಧ್ಯಕ್ಷನಾಗಿದ್ದಾಗ ಮುತುವರ್ಜಿಯಿಟ್ಟು ಮಾಡಬೇಕಾದ ಸಂಶೋಧನಾತ್ಮಕ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ತನ್ನನ್ನು ಟೀಕಿಸುವ ಮಲೆಯಾಳಿ ಲೇಖಕರ ಬಗ್ಗೆಯೂ ನಿಷ್ಪಕ್ಷಪಾತವಾದ ಅಭಿಪ್ರಾಯವನ್ನು ಕೊಡುತ್ತಿದ್ದರು.

ಬಿಳಿಯ ಮುಂಡನ್ನು ಉಟ್ಟು, ಹಣೆಯ ಮೇಲೆ ಗಂಧದ ಬೊಟ್ಟನ್ನು ತೊಟ್ಟು ಬಿಳಿಯ ಕುರುಚಲು ಗಡ್ಡದಲ್ಲಿ ನಾಚಿ ಯಾವತ್ತೂ ನಗುತ್ತಲೇ ಮಾತಾಡುವ, ಕಣ್ಣು ಮಿಟುಕಿಸಿ, ಏನಾದರೂ ಪನ್‌ ಮಾಡಿ, ಕಂಡದ್ದನ್ನು ಕೊಂಚ ತಿರುಗು ಮುರುಗು ಮಾಡಿ ನಾವು ಇನ್ನೊಂದು ಬಗೆಯಲ್ಲಿ ಅದನ್ನೇ ಕಾಣುವಂತೆ ಮಾಡುವ, ಯಾವತ್ತೂ ಇತರರ ಮೇಲೆ ತನ್ನನ್ನು ಒಡ್ಡಿಕೊಳ್ಳದ, ಹೇರಿಕೊಳ್ಳದ ಈ ಪುಟಾಣಿ ಮನುಷ್ಯ ದೇಹದಲ್ಲಿ ಎಂದೂ ತೋರವಾಗದಂತೆ ಚುರುಕಾಗಿ ಓಡಾಡಿಕೊಂಡು ಮಿತಾಹಾರಿಯಾಗಿದ್ದವರು. ಅವರ ಗೆಳೆಯರೆಲ್ಲರೂ ಕುಡಿದು ಉಂಡು ದೀರ್ಘ ಚರ್ಚೆಯಲ್ಲಿ ಇಡೀರಾತ್ರೆಯನ್ನು ಕಳೆಯುವವರಾದರೆ, ಅಯ್ಯಪ್ಪ ಅವರ ನಡುವೆ ಎಲ್ಲವನ್ನೂ ನೋಡುತ್ತ ಕೂತಿದ್ದು ಬೇಗ ಮನೆ ಸೇರುವ ಮನುಷ್ಯ. ಅವರ ಅಭಿಮಾನಿಗಳಲ್ಲಿ ಕೆಲವರು ತಮಾಷೆಗೆ ಹೇಳುವುದು; ನಮ್ಮ ಅಯ್ಯಪ್ಪ ಕೇರಳದಲ್ಲಿ ಮಾತ್ರ ಕುಡಿಯವುದಿಲ್ಲ! ಇನ್ನು ಕೆಲವರು ಅವರ ಕಿವಿಗೆ ಬೀಳದಂತೆ ಹೇಳುತ್ತ ಇದ್ದುದು: ‘ಇಂಡಿಯಾದಲ್ಲಿ ಎಲ್ಲೂ ಕುಡಿಯುವುದಿಲ್ಲ. ಅದು ಅವರ ವ್ರತ’. ಅವರ ಜೊತೆ ಯೂರೋಪನ್ನೂ ಸುತ್ತಿದ್ದ ನನಗೆ ನಿಜ ತಿಳಿದಿತ್ತು; ಆದರೆ ಬಾಯಿಬಿಟ್ಟಿದ್ದಿಲ್ಲ. ಯಾಕೆಂದರೆ ತಾವರೆಯ ಎಲೆಯ ಮೇಲಿನ ನೀರಿನಂತೆ ಯಾವುದಕ್ಕೂ ಅಂಟಿಕೊಳ್ಳದ ಮನುಷ್ಯ ಈ ಅಯ್ಯಪ್ಪ.

ಹಣೆಯ ಮೇಲೆ ಗಂಧ ತೊಟ್ಟು ಆಗಷ್ಟೇ ಸ್ನಾನ ಮಾಡಿ ಬಂದವರಂತೆ ಶುಭ್ರ ಬಿಳಿ ಬಟ್ಟೆಯಲ್ಲಿ ಕಾಣುತ್ತ ಇದ್ದ ಅಯ್ಯಪ್ಪ ಮತೀಯವಾದಿಯಲ್ಲ. ದೇವರ ಅಗತ್ಯವಿಲ್ಲದ ಆಧ್ಯಾತ್ಮದ ಹುಡುಕಾಟದಲ್ಲಿದ್ದ ಆಧುನಿಕ ಭಾರತೀಯರಲ್ಲಿ ಅವರೂ ಒಬ್ಬರು. ಕೇರಳದ ಅಪ್ಪಟ ಸ್ಥಳೀಯ ಊಟವನ್ನೂ ವೇಷ ಭೂಷಣಗಳನ್ನೂ ಬಿಡದಂತೆಯೇ ವೈಚಾರಿಕತೆಯಲ್ಲೂ ಕಾವ್ಯಸಂವೇದನೆಯಲ್ಲೂ ಆಧುನಿಕವಾಗಿ ಇದ್ದದ್ದು ಅಯ್ಯಪ್ಪ ಪಣಿಕ್ಕರ್‌ರ ಹೆಚ್ಚುಗಾರಿಕೆ.

ಬಲು ಸೂಕ್ಷವಾದ ಕಿವಿ ಅಯ್ಯಪ್ಪ ಪಣಿಕ್ಕರದು. ಒಮ್ಮೆ ಮೈಸೂರಿನಲ್ಲಿ ನಮ್ಮ ಮನೆಯಲ್ಲಿ ಕೂತು ಅದೂ ಇದೂ ಹರಟುತ್ತಿದ್ದಾಗ ‘ಈಚಿಗೇನಾದರೂ ಒಳ್ಳೆಯದೊಂದು ಪದ್ಯ ಬಂದಿದೆಯೆ?’ ಎಂದು ನನ್ನನ್ನು ಕೇಳಿದರು. ಅಡಿಗರ ಎಲ್ಲ ಪದ್ಯಗಳನ್ನೂ ಭಾಷಾಂತರಿಸುತ್ತಲೇ ಅವರಿಗೆ ಓದಿದ್ದ ನಾನು ಆಗ ತಾನೇ ಪ್ರಕಟವಾಗಿದ್ದ ಅಡಿಗರ ‘ಮೂಲಕ ಮಹಾಶಯರು’ ಎನ್ನುವ ಪದ್ಯವನ್ನು ಓದಿದೆ. ಈ ಪದ್ಯದ ಸಂದರ್ಭ ನೆನೆಯಬೇಕು. ಮುಖ್ಯಮಂತ್ರಿ ದೇವರಾಜ ಅರಸರು ಕಷ್ಟದಲ್ಲಿದ್ದ ಅಡಿಗರಿಗೆ ಮಾಸಾಶನವನ್ನು ಕೊಡುವ ನಿರ್ಧಾರ ಮಾಡಿದ್ದರು. ಅಡಿಗರು ಅದನ್ನು ಒಪ್ಪಿಕೊಂಡಿದ್ದರು. ಅಡಿಗರಿಗೆ ಅದನ್ನು ಕೊಡುವುದು ದೇವರಾಜ ಅರಸರಿಗೆ ಸುಲಭದ ಕೆಲಸವಾಗಿರಲಿಲ್ಲ. ‘ನಿಮ್ಮನ್ನು ಸತತವಾಗಿ ಟೀಕಿಸುವ ಅಡಿಗರಿಗೆ ಏಕದನ್ನು ಕೊಡುತ್ತಿದ್ದೀರಿ?’ ಎಂದು ಹಿಂಬಾಲಕರು ಗೊಣಗಿದಾಗ ಅರಸರು ಹೇಳಿದರಂತೆ –  ‘ಹೊಗಳು ಭಟ್ಟರ ನಡುವೆ ನಮ್ಮನ್ನು ಸೀರಿಯಸ್ಸಾಗಿ ಟೀಕಿಸುವ ಅಡಿಗರಂಥವರು ಇರುವುದು ದೇಶದ ಪುಣ್ಯವಲ್ಲವೆ?’ ಆದರೆ ಅಡಿಗರ ಅಭಿಮಾನಿಗಳಲ್ಲಿ ಕೆಲವರು ಅಡಿಗರನ್ನು ಟೀಕಿಸಿ ಪತ್ರಿಕೆಗಳಿಗೆ ಬರೆದರು. ಎಲ್ಲ ಬಗೆಯ ಸರ್ಕಾರೀಕರಣವನ್ನು ಟೀಕಿಸುತ್ತ ಬಂದ ಅಡಿಗರು ಈ ಮಾಶಾಸನ ಪಡೆಯುವುದು ಸರಿಯೆ? ಹೀಗೆ ಟೀಕಿಸಿದವರು ಪ್ರತಿ ತಿಂಗಳು ತಪ್ಪದೆ ಸಂಬಳ ತೆಗೆದುಕೊಳ್ಳುತ್ತಿದ್ದ ಪೆನ್ಷನ್‌  ಗ್ಯಾರಂಟಿಯಾಗಿದ್ದ ಕ್ರಾಂತಿಕಾರರು. ಆಗ ಅಡಿಗರು ಅವರಿಗೆ ಉತ್ತರವಾಗಿ ಬರೆದ ಪದ್ಯ ಅದು.

ತನಗೆ ಮಾಡಲಾರದ್ದನ್ನು ಇನ್ನೊಬ್ಬರ ಮೂಲಕ ಮಾಡಿಸಿ ಖುಷಿ ಕಾಣುವುದರ ಬಗ್ಗೆ (ವಾಯೂರಿಸಂ/ಪೀಪಿಂಗ್ ಟಾಮ್‌, ಅಂದರೆ ‘ಮೂಲಕ ಮಹಾಶಯ’ ತನದ ಬಗ್ಗೆ) ಇರುವ ಈ ಪದ್ಯ ವ್ಯಂಗ್ಯವನ್ನು ಮೀರಿ ಫಿಲಸಾಫಿಕಲ್ ಆಗುತ್ತದೆ. ಕೊನೆಯ ಭಾಗದಲ್ಲಿ ತನ್ನದೇ ರುಚಿಯ ವಿಶಿಷ್ಟತೆಯ, ಅದು ಇದಾಗಲಾರದ, ಯಾವುದೂ ಇನ್ನೊಂದು ಆಗಬಾರದ ತರಕಾರಿಗಳ, ಹಣ್ಣುಗಳ, ಇಡೀ ಸಸ್ಯ ಜಗತ್ತಿನ ಇಮೇಜುಗಳು ಬರುತ್ತವೆ. ಯಾವ ಸೊಗಸಿನ ಹೂವನ್ನೂ ರುಚಿಯ ಹಣ್ಣನ್ನೂ ಪಡೆಯದ, ಅನಾಕರ್ಷಕ ತೇಗ (ತ್ಯಾಗವೂ) ಕಾಲದ ಸಮಾಧಾನದಲ್ಲಿ ಬಲಿತು ಗಟ್ಟಿಯಾದ ಭದ್ರವಾದ ಮೇಜು ಕುರ್ಚಿಗಳಾಗುವುದನ್ನು ಕೊನೆಯ ಸಾಲುಗಳು ಹೇಳುತ್ತವೆ.

ಅಯ್ಯಪ್ಪ ಈ ಪದ್ಯವನ್ನು ಎರಡು ಬಾರಿ ವಿವರಣೆಯ ಸಹಿತ ನನ್ನಿಂದ ಕೇಳಿಸಿಕೊಂಡರು. ಕೊನೆಯ ಭಾಗದ ಸಸ್ಯ ಲೋಕದ ವೈವಿಧ್ಯದ ಇಮೇಜರಿ ಅವರಿಗೆ ಅದೆಷ್ಟು ಹಿಡಿಸಿತೆಂದರೆ ಕನ್ನಡದಲ್ಲಿ ಅವರು ಆಲಿಸಿದ್ದನ್ನೇ ಮಲೆಯಾಳಂನಲ್ಲೂ ಆಲಿಸಿಕೊಂಡವರಂತೆ ನನ್ನೆದುರೇ ಅದನ್ನು ಅನುವಾದಿಸಿ ಓದಿದರು. ಇದೊಂದು ಮನಸ್ಸಿನಿಂದ ಮನಸ್ಸಿಗೆ ಮಾತ್ರವಲ್ಲದೆ ಒಂದು ಭಾಷೆಯ ಕಿವಿಯಿಂದ ಇನ್ನೊಂದು ಭಾಷೆಯ ಕಿವಿಗೂ ಆದ ಬೆರಗಿನ ಅನುವಾದ. ನಾನು ಮೆಚ್ಚಿದ್ದನ್ನು ತಾನೇ ಬರೆದಂತೆ ಭಾವಿಸಬಲ್ಲ ಧಾರಾಳ ಅಯ್ಯಪ್ಪ ಪಣಿಕರ್‌ಗೆ ಇತ್ತು.

* * *

ಅಯ್ಯಪ್ಪ ಪಣಿಕರ್‌ಬಗ್ಗೆ ಮಾತಾಡಲು ತೊಡಗಿದರೆ ಅವರ ಬಗ್ಗೆ ಮಾತ್ರ ಮಾತಾಡುವುದು ಸಾಧ್ಯವಾಗದು. ಅವರ ಸಹವಾಸವೆಂದರೆ ಒಂದು ಇಡೀ ಸಹಯೋಗದ ಕುಟುಂಬದ ಜೊತೆಗಿನ ಸಹವಾಸ. ಐವತ್ತರ ದಶಕದ ಕೊನೆಯಲ್ಲಿ ಯಾವ ಸಂಸ್ಥೆಯ ಸಹಾಯವೂ ಇಲ್ಲದೆ ಸ್ವಪ್ರೇರಿತವಾಗಿ ಹುಟ್ಟಿಕೊಂಡು ನಮ್ಮನ್ನು ಒಟ್ಟುಮಾಡಿದ ಕೆಲವು ಮಂದಿಯನ್ನು –  ಗೋವಿಂದನ್, ಪಣಿಕ್ಕರ್, ವಿಜಯನ್, ಅಡಿಗ ಇಂಥವರನ್ನು –  ಅಡಿಗರ ಮಾತಿನಲ್ಲಿ ನಮ್ಮ ಕಾಲದ ‘ಶೇಕಡಾ ಏಳರ ಖಳರು’ ಎಂದು ಯಾಕೆ ಕರೆಯುತ್ತೇನೆ ಹೇಳುವೆ.

ಶೇಕಡಾ ಏಳರ ಖಳರು ಮಾತ್ರ ಅಷ್ಟಿಷ್ಟಕ್ಕೆ ಮಣಿವ ಕುಳಗಳಲ್ಲ.
ನಾಸಿಕಾಗ್ರದ ದೃಷ್ಟಿ ಬಿಡುವರಲ್ಲ.
ತರ್ಜನ, ಗರ್ಜನ, ಮಿದುಳ ಮಾರ್ಜನ, ಶಿರಚ್ಛೇದನಕ್ಕೂ ತಗ್ಗಿ ನಡೆವರಲ್ಲ.
ಇಲ್ಲಿಂದ ವೈಕುಂಠಪುರಕ್ಕೆ ಹೋಗುವ ಕಾಲುದಾರಿ ಗುಟ್ಟನು ಬಲ್ಲ ಭ್ರಷ್ಟಜನರು.

ಅಡಿಗರ ‘ಗೊಂದಲಪುರ’ದಲ್ಲಿ ಬರುವ ಈ ಸಾಲುಗಳು ಐವತ್ತರ ದಶಕದ ಕೊನೆಯಲ್ಲಿ ನಮಗೆಲ್ಲರಿಗೂ ಮುಖ್ಯವೆನ್ನಿಸಿದ್ದ ಒಂದು ‘ರಾಜಕೀಯ ಸಾಂಸ್ಕೃತಿಕ ಘೋಷಣೆ’. ಆ ಕಾಲದ ಮಹತ್ವದ ಇತಿಹಾಸಕಾರನಾದ ಟಾಯ್ನೆಬಿಯನ್ನು ನಾವೆಲ್ಲರೂ ಬಹಳ ಆಸೆಪಟ್ಟು ಓದುತ್ತಿದ್ದೆವು. ಟಾಯ್ನೆಬಿಯ ಪ್ರಕಾರ ಒಂದು ನಾಗರಿಕತೆ ಅವನತಿಯ ಸ್ಥಿತಿಯನ್ನು ಮುಟ್ಟಿದಾಗ ಆ ಸಮಾಜಗಳಲ್ಲಿ ಒಂದು Internal proletariat (ಆಂತರಿಕ ಶ್ರಮಜೀವಿ ಸಮುದಾಯ) ಇರುತ್ತದೆ ಎನ್ನುತ್ತಾನೆ. ರೋಮನ್ ಚಕ್ರಾಧಿಪತ್ಯ ಅವನತಿಯಲ್ಲಿದ್ದಾಗ ಯೇಸುಕ್ರಿಸ್ತ ಮತ್ತು ಅವನ ಸಂಗಡಿಗರು ಈ ಬಗೆಯ Internal proletariat. ಬ್ರಿಟಿಶ್ ಸಾಮ್ರಾಜ್ಯದಲ್ಲಿ ಗಾಂಧಿ ಮತ್ತು ಅವರ ಅನುಯಾಯಿಗಳು ಕ್ರಿಸ್ತ ಮಾಡಿದ್ದನ್ನೇ ಮಾಡಿದವರು. ಒಂದು ನಾಗರಿಕತೆಯನ್ನು ಉಳಿಸುವವರು ಈ ಒಳಗಿನ ದಮನಿತ ಜನ. ಬಹುಮತದ ಜತೆ ಗುರುತಿಸಿಕೊಳ್ಳದೆ ಅಲ್ಪಮತೀಯರಾಗಿ ತಮ್ಮಲ್ಲೇ ದೊಡ್ಡ ಸತ್ಯಗಳನ್ನು ಬಚ್ಚಿಟ್ಟುಕೊಂಡು ಹೊಸ ಶಕೆಯನ್ನು ಪ್ರಾರಂಭಿಸಬಲ್ಲ ಶಕ್ತರು ಇವರು. ಈ ಜನರನ್ನು Creative minority ಎಂದು ಟಾಯ್ನ್‌ಬಿ ಅಲ್ಲದೆ ಇ. ಎಂ. ಫಾರ್‌ಸ್ಟರ್‌ನಂಥ ಲೇಖಕರೂ ಭಾವಿಸುತ್ತಿದ್ದರು. ಎಲಿಯಟ್ ಕೂಡಾ. ಇದು ಕ್ರಿಯೇಟಿವ್‌ಮೈನಾರಟಿ ಅಥವಾ ಇದಕ್ಕೆ ವಿರೋಧವಾಗಿ ಭಾರತದ ಜಾತಿಪದ್ಧತಿಯಲ್ಲಿ ಆದಂತೆ ಡಾಮಿನೆಂಟ್ ಮೈನಾರಿಟಿಯೂ, ತಾವು ಕ್ರಿಯೇಟಿವ್ ಮೈನಾರಿಟಿ ಎಂಬ ಸೋಗು ಹಾಕಬಹುದು. (ಇದು ಲೋಹಿಯಾರಿಂದ ನಾವು ಕೆಲವರು ಪಡೆದಿದ್ದ ಸೂಕ್ಷ್ಮ. ಈ ಸೂಕ್ಷ್ಮವನ್ನು ಕೆಲವೊಮ್ಮೆ ಎಲಿಯಟ್ ಗಮನಿಸದೆ ಮಾತಾಡುವುದೂ ಇದೆ.) ಮೊದಲನೆಯದು ಹೊಸದನ್ನು ಸೃಷ್ಟಿಸುವಂಥದು. ಎರಡನೆಯದು ಸೃಜನಶೀಲತೆಯನ್ನು ನಾಶಮಾಡಿ ಬಹುಜನ ಸಮುದಾಯವನ್ನು ತುಳಿಯುವ ಹುನ್ನಾರದ್ದು. ಹಾಗೆಯೇ ಬಹುಜನ ಸಮಾಜ ಕ್ರಿಯೇಟಿವ್ ಮೈನಾರಿಟಿಯ ತಪಸ್ಸಿನ ಶಕ್ತಿಯನ್ನು ಪೋಷಿಸಿ ಬೆಳೆಸಲೂಬಹುದು –  ಗಾಂಧಿಯನ್ನು ಬೆಳೆಸಿದಂತೆ. ಹಾಗೆಯೇ ದಿಕ್ಕು ತಪ್ಪಿ ಹಿಟ್ಲರ್‌ರಂಥವರ ಮೋಡಿಗೆ ಬಲಿಯಾಗಿ ಸಮೂಹ ಸನ್ನಿಗೂ ಕಾರಣವಾಗಬಹುದು. ಸ್ಟಾಲಿನ್‌ನನ್ನು ಸಹಿಸಿಕೊಳ್ಳುವ ಭ್ರಮೆಯದೂ ಆಗಬಹುದು. ಇಂಥವರ ಜೊತೆ ಅಪ್ಪಟ ಕನಸುಗಾರರೂ ಇರಬಹುದು.

ಬೈಬಲ್‌ನ ಹಳೆ ಒಡಂಬಡಿಕೆಯಲ್ಲಿ ನೋಹಾನ ನೌಕೆಯ ಕಥೆ ಬರುತ್ತದೆ. ಪ್ರಳಯದಿಂದ ಜೀವಿಗಳನ್ನು ರಕ್ಷಿಸಲು ನೋಹಾ ಒಂದು ನೌಕೆಯಲ್ಲಿ ಎಲ್ಲ ಜೀವಿಗಳು ಗಂಡು ಹೆಣ್ಣು ಜೋಡಿಯೊಂದಂದನ್ನು ಕಾಪಾಡಿಕೊಂಡು ಪ್ರವಾಹ ಇಳಿಯಲು ಕಾದನಂತೆ.

ಅಗತ್ಯವಾದರೆ ಅಲ್ಪಸಂಖ್ಯಾತರಾಗಿಯೇ ಉಳಿಯುತ್ತೇವೆಂಬ ವ್ರತದ ನಮಗೆ ಆ ದಿನಗಳಲ್ಲಿ ಯಾವ ಜನಪ್ರಿಯ ಲೇಖಕರ ಬಗ್ಗೆಯೂ ಗೌರವವಿರಲಿಲ್ಲ. ಅಂತೆಯೇ ಅರವಿಂದರ ಆಧ್ಯಾತ್ಮಿಕತೆಯನ್ನು ಮಾನವನ ಸತತ ವಿಕಾಸವನ್ನು ಯಾವ ಸ್ವಂತದ ಅನುಭವವೂ ಇಲ್ಲದೆ ಒಪ್ಪುವ ಲೇಖಕರೆಂದರೂ ನಮಗೆ ಅನುಮಾನ. ನೋವಿಲ್ಲದ ಹೆರಿಗೆಯನ್ನು ನಂಬುವ ಜನರಂತೆ ಇವರು ನಮಗೆ ಕಂಡರು. ಆದ್ದರಿಂದ ಈ ಸೇಕಡಾ ಏಳರ ಖಳರು ತಮ್ಮ ಭೂತಕಾಲದ ಅನುಕರಣೆಯಿಂದಲೂ ಸಲೀಸಾದ ಆಧ್ಯಾತ್ಮದಿಂದಲೂ ಮರುಳಾಗದ ಜನರಾಗಿ ನಮಗೆ ಆದರ್ಶವಾಗಿದ್ದರು.

ಕೇರಳದಲ್ಲಿ ಕಮ್ಯುನಿಸ್ಟರ ಸ್ಲೋಗನ್ನುಗಳನ್ನು ಜತೆಗೇ ಕಾಂಗ್ರೆಸ್ಸಿಗರ ಬಹುಜನ ಪೂಸಿಯ (ಪಾಪ್ಯುಲಿಸ್ಟ್‌) ಪೊಳ್ಳು ಆಶ್ವಾಸನೆಗಳನ್ನೂ ಏಕಕಾಲದಲ್ಲಿ ಟೀಕಿಸುವ ಒಂದು ಲೇಖಕರ ಗುಂಪು ಈ ಕಾಲದಲ್ಲಿಯೇ ಹುಟ್ಟಿಕೊಂಡಿತು. ಇವರೆಲ್ಲರನ್ನೂ ನವ್ಯರೆಂದು ಕರೆಯುವುದು ರೂಢಿಯಾಯಿತು. ಇವರ ಕೇಂದ್ರದಲ್ಲಿ ಇದ್ದುದು ಎಂ. ಗೋವಿಂದನ್‌ಎಂಬ ಒಬ್ಬ ವಿಲಕ್ಷಣ ಪ್ರತಿಭೆಯ ಮನುಷ್ಯ. ಈತ ಎಷ್ಟು ತೀವ್ರವಾದ ಎಂ.ಎನ್. ರಾಯ್‌ವಾದಿಯೆಂದರೆ ಅವರ ಒಬ್ಬನೇ ಮಗನಿಗೆ ಅವರು ಇಟ್ಟ ಹೆಸರು ಮಾನವೇಂದ್ರನಥ.

ಮದ್ರಾಸಿನಲ್ಲಿ ಮಹಡಿಯೊಂದರ ಮೇಲೆ ಇವರ ವಾಸ. ಅಲ್ಲೇ ಸ್ಲಂನಲ್ಲಿ ವಾಸ ಮಾಡುವ ಬಡವರಿಗೆ ಮದ್ದು ಕೊಡುತ್ತಿದ್ದ ಅವರ ಹೆಂಡತಿಯ ಮೆಡಿಕಲ್ ಪ್ರಾಕ್ಟೀಸ್‌. ಅವರ ಹೆಂಡತಿಯ ಕೋಣೆಯ ಪಕ್ಕದಲ್ಲಿ ನಾವೆಲ್ಲರೂ ಕೂತು ಶೇಕಡಾ ಏಳರ ಖಳರ ಕೆಲಸವನ್ನು ಮಾಡುವುದು. ಕೇರಳದ ಅತ್ಯಂತ ದೊಡ್ಡ ಪ್ರತಿಭೆಗಳನ್ನೆಲ್ಲಾ ನಾನು ಭೇಟಿಯಾದದ್ದು ಹರಕು ಮುರುಕು ಖುರ್ಚಿಗಳ, ಸುಸ್ತಾದರೆ ಅಡ್ಡಾಗಲು ಒಂದು ಬೆಂಚ್ ಇದ್ದ ಈ ಅಸ್ತವ್ಯಸ್ತ ಹಜಾರದಲ್ಲಿ.

ವಿಚಿತ್ರವಾದ ಸಿನಿಮಾಗಳನ್ನು ತೆಗೆದ ಅರವಿಂದನ್‌ರನ್ನು ನಾನು ನೋಡಿದ್ದು ಅಲ್ಲೇ. ತಾನು ತೆಗೆಯಬೇಕೆಂದಿದ್ದ ಚಿತ್ರಗಳ ಕನಸುಗಳನ್ನು ಕಾಣುತ್ತಿದ್ದ ಅರವಿಂದನ್ ಪ್ರತಿಭೆಯನ್ನು ಅವರ ಎಳೆಯ ವಯಸ್ಸಿನಲ್ಲೇ ಗೋವಿಂದನ್ ಗುರುತಿಸಿ ಬೆಳೆಸುತ್ತಿದ್ದರು. ಯಾರ ಬಳಿಯೂ ಆ ದಿನದ ಊಟಕ್ಕೆ ಬೇಕಾದಕ್ಕಿಂತ ಹೆಚ್ಚು ಕಾಸು ಇರದ ಕಾಲ ಅದು. ಆದರೆ ಯಥೇಚ್ಛವಾಗಿ ಹೊಸ ವಿಚಾರಗಳು ನಮ್ಮನ್ನು ಹುರಿದುಂಬಿಸಿದ್ದವು. ಅಡೂರ್ ಗೋಪಾಲಕೃಷ್ಣನ್‌ರನ್ನು ನಾನು ನೋಡಿದ್ದೂ ಅಲ್ಲೇ. ಅಯ್ಯಪ್ಪ ಪಣಿಕ್ಕರ್‌, ಓ.ವಿ.ವಿಜಯನ್‌, ಆನಂದ್ ಈ ಎಲ್ಲರನ್ನೂ ಕನ್ನಡದಲ್ಲಿ, ತಮಿಳಿನಲ್ಲಿ, ಹಿಂದಿಯಲ್ಲಿ ಮುಖ್ಯರಾದ ಎಲ್ಲರಿಗೂ ಪರಿಚಯಿಸುತ್ತಿದ್ದವರು ಗೋವಿಂದನ್‌. ನಮಗೊಬ್ಬ ಎಜ್ರಾ ಪೌಂಡ್‌ನಂತೆ ಇದ್ದವರು ಈ ಗೋವಿಂದನ್‌.

ಗೋವಿಂದನ್ ಸತತವಾಗಿ ಕಮ್ಯುನಿಸ್ಟರನ್ನೂ ಕಾಂಗ್ರೆಸಿಗರನ್ನೂ ಟೀಕಿಸುತ್ತಲೇ ಬದುಕಿದರು. ಯಾವತ್ತೂ ರಾಜಿ ಮಾಡಿಕೊಂಡ ಮನುಷ್ಯ ಅವರಲ್ಲ. (ಅವರು ಎಷ್ಟು ನಿಷ್ಠರುರೆಂದರೆ ಅವರು ನೆಹರೂ ಫೆಲೋಶಿಪ್ಪನ್ನು ಒಪ್ಪಿಕೊಂಡರೆಂಬುದೇ ಅವರ ವೈರಿಗಳಿಗೆ ಗ್ರಾಸವಾಯಿತು). ವಿಚಾರದಲ್ಲಿ ಅವರು ರಾಯ್ ಮತ್ತು ಮಾರ್ಕ್ಸ್‌ರನ್ನು ನಂಬಿದವರು. ತಮಿಳುನಾಡಿನ ಪೆರಿಯಾರ್‌ರನ್ನು ಮೆಚ್ಚಿಕೊಂಡವರು ಇವರು. ಇವರ ಲೋಕಕ್ಕೆ ಒಂದಿಷ್ಟು ಲೋಹಿಯಾರನ್ನೂ ತಂದವರಲ್ಲಿ ನಾನೂ ಒಬ್ಬ.

ಅಯ್ಯಪ್ಪ ಪಣಿಕ್ಕರ್‌ರನ್ನು ಭಾವೋತ್ಕಟತೆಯಲ್ಲಿ ಹಾಡುವಂತೆ ಬರೆಯಲಾರದ ಕವಿಯೆಂದು ಜನಪ್ರಿಯ ಮಲೆಯಾಳೀ ಲೇಖಖರು ನಗಣ್ಯ ಮಾಡಿದಾಗ ಪಣಿಕ್ಕರ್‌ರ ಹೊಸ ಲಯವನ್ನು ಗುರುತಿಸಿದ ಗೋವಿಂದನ್‌ ಕ್ಲಿಷ್ಟವೆನಿಸುವುದನ್ನು ಧಾರಣೆ ಮಾಡಬಲ್ಲ ಚಿಂತನಶೀಲ ಓದನ್ನು ಎಲ್ಲರಿಗೂ ಕಲಿಸಿದರು. ಅದೆಂತಹ ಕಾಲವೆಂದರೆ ನಾವು ಬರೆದದ್ದು ಎಲ್ಲರಿಗೂ ಇಷ್ಟವಾಯಿತೆಂದರೆ ನಮಗೆ ಅನುಮಾನವೇ. ಗೋವಿಂದನ್ ಮೆಚ್ಚಿದರೆ ಮಲೆಯಾಳಿಗಳಿಗೆ, ಅಡಿಗರು ಮೆಚ್ಚಿದರೆ ನಮಗೆ ಅಷ್ಟೇ ಸಾಕೆನ್ನಿಸುತ್ತಿದ್ದ ಕಾಲ ಅದು. ಸಣ್ಣ ಪುಟ್ಟ ಪತ್ರಿಕೆಗಳು ಆಗ ನಮಗೆ ನೋಹಾನ ನೌಕೆಯಾದವು.

ಅಯ್ಯಪ್ಪ ಪಣಿಕ್ಕರ್ ಆಗತಾನೆ ಬರೆದು ಮುಗಿಸಿದ ಅವರ ಕುಟುಂಬ ಪುರಾಣಂ ಎಂಬ ಪದ್ಯವನ್ನು ಓದಿದ್ದು ನೆನಪಾಗುತ್ತದೆ. ಈ ಪದ್ಯದಲ್ಲಿ ಕುಟುಂಬದ ಸದಸ್ಯರೆಲ್ಲರ ವರ್ಣನೆ ಬರುತ್ತದೆ. ಈ ನೆಂಟರಿಷ್ಟರೆಲ್ಲರೂ ಬಹುಪಾಲು ಅವರ ತಾಯಿಯ ಕಡೆಯವರು. ಇಡೀ ಪದ್ಯದಲ್ಲಿ ತಂದೆ ಕಾಣಿಸಿಕೊಳ್ಳುವುದೇ ಇಲ್ಲ. ಯಾಕೆಂದರೆ ತನ್ನ ತಾಯಿಯ ಜತೆ ಸಂಬಂಧ ಮಾಡಿಕೊಂಡಿದ್ದ ಈ ಬ್ರಾಹ್ಮಣ ರಾತ್ರಿ ತಂಗಲು ಮಾತ್ರ ಮನೆಗೆ ಬರುತ್ತಾ ಇದ್ದುದು. ಅವರು ಮಕ್ಕಳ ಜತೆ ಊಟ ಮಾಡಿದವರಲ್ಲ. ಮಡಿಯಿಂದಾಗಿ ಮಕ್ಕಳನ್ನು ಎತ್ತಿ ಮುದ್ದಾಡಿ ಬೆಳೆಸಿದವರಲ್ಲ. ಆದರೆ ಈ ಪದ್ಯವನ್ನು ಬರೆಯುವ ಕಾಲಕ್ಕೆ ನಾಯರ್ ಸಮಾಜ ಎಷ್ಟು ಬದಲಾಗಿತ್ತೆಂದರೆ ಈ ಬಗೆಯ ಸಂಬಂಧಗಳನ್ನು ಮಾಡಿಕೊಳ್ಳುವುದು ಕಡಿಮೆಯಾಗಿತ್ತು. ಅದರಿಂದ ಅಯ್ಯಪ್ಪ ಪಣಿಕ್ಕರ್‌ ಯಾವ ಸಂಕೋಚವೂ ಇಲ್ಲದೆ ಈ ಬಗ್ಗೆ ಮಾತಾಡಬಲ್ಲವರಾಗಿದ್ದರು.

ಅಯ್ಯಪ್ಪ ಪಣಿಕ್ಕರ್ ಬಗೆಯ ಲೋಕಕ್ಕೆ ಹೊಸ ದನಿಯೊಂದು ಬಂದು ಸೇರಿಕೊಂಡು ಎಲ್ಲರೂ ಬೆರಗಾದರು. ಕೆದರಿದ ಕೂದಲಿನ ಗಟ್ಟಿಯಾದ ಗಂಟಲಿನ ಕಾಡು ಮನುಷ್ಯನಂತೆ ಕಾಣುವ ಕಡಮ್ಮನಿಟ್ಟ ರಾಮಕೃಷ್ಣನ್ ತಮ್ಮ ಪದ್ಯವನ್ನು ಅಪೂರ್ವವಾದ ಶೋಭೆಯಲ್ಲಿ chant ಮಾಡಿದ್ದನ್ನು ನಾನು ಎಂದೂ ಮರೆಯಲಾರೆ. ಅವರ ಕವನವೊಂದರ ಕೋಳಿಗಳು ಅಂಗಳದ ತುಂಬಾ ಕಿವಿಗೂ ಕಣ್ಣಿಗೂ ಕಟ್ಟುವಂತೆ ಓಡಾಡುತ್ತಿದ್ದವು. ಪಣಿಕ್ಕರ್‌ರ ಕ್ಲಿಷ್ಟತೆ ಈ ಕವನಗಳಲ್ಲಿ ಇರಲಿಲ್ಲ. ಕಾವ್ಯ ಎಲ್ಲ ಸಂಕೋಚಗಳಿಂದಲೂ ಬಿಡುಗಡೆಗೊಂಡಿತ್ತು. ನಾಗರಿಕತೆಗೆ ಅತೀತವಾದ ಆದಿಮ ಮಾನವ ಪ್ರಾಣಶಕ್ತಿ ಅದರಲ್ಲಿತ್ತು. ಇದಕ್ಕೆ ತದ್ವಿರುದ್ಧವಾಗಿ ಬರೆಯುವ ಪಣಿಕ್ಕರ್‌ – ಅಯ್ಯಪ್ಪ ಪಣಿಕ್ಕರನ್ನು ನಮಗೆ ಪರಿಚಯಿಸಿದ್ದ ಗೋವಿಂದನ್‌ರವರೇ ಕಡಮ್ಮನಿಟ್ಟರನ್ನು ನಮಗೆಲ್ಲರಿಗೂ ಹೊಸ ಪ್ರತಿಭೆಯೆಂದು ಪರಿಚಯಿಸಿಕೊಟ್ಟರು. ಕಡಮನಿಟ್ಟ ಕೈಯಲ್ಲಿ ಪುಸ್ತಕ ಹಿಡಿದು ಎಂದೂ ಓದಿದವರಲ್ಲ. ನೆನಪಿನಿಂದಲೇ ತಮ್ಮ ಪದ್ಯಗಳನ್ನು ಉದ್ಘೋಷವೆಂಬಂತೆ ವಾಚಿಸುತ್ತಿದ್ದವರು.

ಕಡಮನಿಟ್ಟರ ಹೆಸರನ್ನು ಎತ್ತುತ್ತಿರುವಂತೆಯೇ ಹಲವು ನೆನಪುಗಳಾಗುತ್ತವೆ. ತಿರುವನಂತಪುರದಲ್ಲಿ ಅದೊಂದು ರಾತ್ರಿ. ಕಳ್ಳನಂಗಡಿಯಿಂದ ಕಡಮ್ಮನಿಟ್ಟರೂ ಮತ್ತು ಸುಶೀಲರಂತೆ ಕಾಣುವ ಅವರ ಸ್ನೇಹಿತರೂ ನಡುರಾತ್ರೆ ಹೊರಬಂದಿದ್ದಾರೆ. ಅವರಿಬ್ಬರ ನಡುವೆ ತೀವ್ರವಾದ ವಾಗ್ವಾದ ನಡೆದಿದೆ. ಪರಿಣಾಮವಾಗಿ ಕಡಮ್ಮನಿಟ ತನ್ನ ಗೆಳೆಯನನ್ನು ಚೂರಿಯಲ್ಲಿ ಇರಿಯಲು ಹೋಗಿ ಕೊಂಚ ಗಾಯವಾಗಿದೆ. ಅದರ ರಕ್ತವನ್ನು ಮಲಗಿದ್ದ ನನ್ನನ್ನು ಎಬ್ಬಿಸಿ ತೋರಿಸಿದ ಗೆಳೆಯ ಅನಂತರ ಕಡಮನಿಟ್ಟರ ಜತೆಗೇ ಅಯ್ಯಪ್ಪ ಪಣಿಕ್ಕರ್‌ ಮನೆಗೆ ಹೋಗಿದ್ದಾರೆ. ಅವರ ಬಾಗಿಲನ್ನು ಬಡಿದು ನಿದ್ದೆಯಲ್ಲಿದ್ದವರನ್ನು ಎಬ್ಬಿಸಿ ತನ್ನ ಗಾಯವನ್ನು ಸುಶೀಲ ಗೆಳೆಯ ತೋರಿದ್ದಾನೆ. ಕಡಮನಿಟ್ಟ ಯಾವ ಪಶ್ಚಾತ್ತಾಪವೂ ಇಲ್ಲದೆ ಪಣಿಕ್ಕರ್‌ ಎದುರು ಈ ಗೆಳೆಯನಿಗಿದ್ದ ಕಾವ್ಯದ ಬಗೆಗಿನ ತಪ್ಪು ಕಲ್ಪನೆಗಳನ್ನು ಮತ್ತೆ ನಿಂದಿಸಲು ಶುರು ಮಾಡಿದ್ದಾರೆ. ಅಯ್ಯಪ್ಪ ಪಣಿಕ್ಕರ್‌ಇಬ್ಬರಿಗೂ ಗುರುಗಳಲ್ಲವೇ….? ಇಬ್ಬರನ್ನೂ ಸಮಾಧಾನ ಮಾಡಿ, ಅಮಲು ಇಳಿಯಲು ಮಜ್ಜಿಗೆ ಕುಡಿಸಿ ಹಿಂದಕ್ಕೆ ಕಳುಹಿಸಿದ್ದಾರೆ.

ಇನ್ನೊಂದು ನೆನಪು: ನಾನು  ಮಾನಸ ಗಂಗೋತ್ರಿಯ ಇಂಗ್ಲಿಷ್‌ ವಿಭಾಗದಲ್ಲಿ ಪಾಠ ಮಾಡುತ್ತಿದ್ದೀನಿ. ಥಟ್ಟನೇ ಬಾಗಿಲಲ್ಲಿ ಕೆದರಿದ ಕೂದಲಿನ ಭರ್ಜರಿ ಮೀಸೆಯ ಮಂಡುಟ್ಟ ವ್ಯಕ್ತಿಯೊಂದು ಕಂಠಪೂರ್ತಿ ನಿಂತಿರುವುದನ್ನು ವಿದ್ಯಾರ್ಥಿಗಳೆಲ್ಲರೂ ಬೆರಗಿನಿಂದ ನೋಡುತ್ತಾರೆ. ಕಡಮನಿಟ್ಟರು ಕಂಠಪೂರ್ತಿ ಕುಡಿದಿರುವುದು  ನನಗೆ ಗೊತ್ತಾಗಿ ಹೊರಬಂದು ಅವರ ಕೈಹಿಡಿದು ಕುರ್ಚಿ ಮೇಲೆ ಕೂರಿಸಿ, ವಿದ್ಯಾರ್ಥಿಗಳಿಗೆ ಈತ ಕೇರಳದ ಡಿಲಾನ್‌ಥಾಮಸ್ ನಂತಹ ಕವಿಯೆಂದು ಪರಿಚಯ ಮಾಡುತ್ತೇನೆ. ಕಡಮನಿಟ್ಟರು ಖುಷಿಯಾಗಿ ಹೌದೆನ್ನುವಂತೆ ತಲ ಹಾಕಿ, ತನ್ನಷ್ಟಕ್ಕೇ ನಗುತ್ತಾರೆ. ನನಗೊಂದು ಉಪಾಯ ಹೊಳೆಯುತ್ತದೆ. ‘ಎಲ್ಲರೂ ಗಾಂಧಿ ಭವನದ ಮೈದಾನದಲ್ಲಿ ಸೇರಿ. ಕಡಮನಿಟ್ಟರು ತಮ್ಮ ಪದ್ಯಗಳನ್ನು ನಿಮಗೆ ಒದಲಿದ್ದಾರೆ’ ಎಂದೆ.

ಕಡಮನಿಟ್ಟರನ್ನು ನನ್ನ ಕೋಣೆಗೆ ಕರೆದುಕೊಂಡು ಹೋಗಿ ಬಲಾತ್ಕಾರವಾಗಿ ಟೀ ಕುಡಿಸಿ, ಕೈ ಹಿಡಿದು ಗಾಂಧಿ ಭವನಕ್ಕೆ ನಡೆಸಿಕೊಂಡು ಹೋದೆ. ಅವನ ಪ್ರಸಿದ್ಧ ಪದ್ಯಗಳನ್ನು –  ಕೋಳಿ, ಕುರತಿ ಇತ್ಯಾದಿ, ಈಗ ಟೈಟಲ್ ಮರೆತಿದ್ದೇನೆ –  ಗಟ್ಟಿಯಾಗಿ ಬಯಲಿನಲ್ಲಿ ಹಾಡುವಂತೆ ಕೇಳಿದೆ. ಕಡಮನಿಟ್ಟ ಒಂದು ಕ್ಷಣದಲ್ಲಿ ಬದಲಾದರು. ಒಬ್ಬ ಕಾಡು ಕವಿಯಾದರು. ಅರ್ಥವಾಗದಿದ್ದರೂ ಪದ್ಯದ ಲಯಕ್ಕೆ ನನ್ನ ವಿದ್ಯಾರ್ಥಿಗಳು ಬೆರಗಾದರು. ಕಡಮನಿಟ್ಟ ಬೆವರುವಷ್ಟು ಕಾಲ ಅವರಿಂದ ಕಾವ್ಯೋದ್ಘೋಷ ಮಾಡಿಸಿ ನನ್ನ ಸ್ಕೂಟರ್‌ ಮೇಲೆ ಕೂರಿಸಿ ‘ಎಲ್ಲಿಗೆ ಹೋಗಬೇಕು’ ಕೇಳಿದೆ. ಕಡಮನಿಟ್ಟ ತಾನು ಯಾವ ಹೊಟೆಲಿನಿಂದ ತನ್ನ ಸ್ನೇಹಿತರನ್ನು ಬಿಟ್ಟು ಬಂದದ್ದು ಎಂಬುದನ್ನು ಮರೆತಿದ್ದರು. ಸದ್ಯದಲ್ಲೇ ಕಾರಿನಲ್ಲಿ ಬಂದ ಅವರ ಗೆಳೆಯರು ಇನ್ನೊಂದು ಊರಿಗೆ ಹೋಗುವರಿದ್ದರು.

ಸ್ಕೂಟರ್‌ಮೇಲೆ ಕೂತು ಶುರುಮಾಡಿದೆ ನನ್ನ ಸಾಹಸವನ್ನು. ಅಕಾರದಿಂದ ಶುರುಮಾಡಿದ ನನಗೆ ಗೊತ್ತಿರುವ ಹೋಟೆಲುಗಳ ಹೆಸರುಗಳನ್ನೆಲ್ಲ ಹೇಳುತ್ತ ಹೋದೆ. ನನ್ನ ಹಿಂದೆ ಕೂತ ಕಡಮನಿಟ್ಟ ‘ಮ’ ಎಂದಿದ್ದೆ ‘ಯೆಸ್!’ ಅಂದರು. ಮಹಾರಾಜ ಕಾಲೇಜಿನ ಎದುರಿನ ಹೋಟೆಲಿಗೆ ಬಂದದ್ದೇ ಸ್ನೇಹಿತರು ಇನ್ನೇನು ಹೊರಡಲು ಕಾದಿರುವುದನ್ನು ಕಂಡು ಕಡಮನಿಟ್ಟ ಸ್ಕೂಟರನಿಂದ ಇಳಿದರು.

ಈ ಕಡಮನಿಟ್ಟ ಕೇರಳದ ಕವಿತೆಯ ದಿಕ್ಕನ್ನು ಅದರ ಆದಿಮ ಜಾನಪದ ಮೂಲಕ್ಕೆ ಒಯ್ದು ಬದಲಿಸಿದರು; ಅಯ್ಯಪ್ಪ ಕಾವ್ಯಕ್ಕೆ ಹೊರತಾದ್ದನ್ನು, ಅಕಾವ್ಯವೆಂದು ನಿರ್ಲಕ್ಷಿಸಿದ ಸತ್ಯಗಳನ್ನು, ಒಳತಂದು ಸೃಷ್ಟಿಸಿದರು; ಕಡಮನಿಟ್ಟರ ಹಿಂದೆಯೂ ಅಯ್ಯಪ್ಪ ಇದ್ದರು. ಅಯ್ಯಪ್ಪ ಹಾಗೇ ಅನುಮಾನಿಯಾದ ಕವಿಯಾಗಿ ಐರಾನಿಕ್ ಆಗಿ ಉಳಿದರು. ಆದರೆ ಕಡಮನಿಟ್ಟ ಬಹುಜನಪ್ರಿಯರಾಗಿ, ಕಮ್ಯುನಿಸ್ಟ್ ಪಕ್ಷದಿಂದ ಎಂಎಲ್‌ಎ ಆಗಿ ಒಂದು ಪಾರ್ಕಿಗೆ ತನ್ನ ಹೆಸರನ್ನೂ ಕೊಟ್ಟರು. ಈಗೇನು ಮಾಡುತ್ತಿದ್ದಾರೆ ಎಂದು ಗೆಳೆಯರನ್ನು ಕೇಳಿದರೆ ತಣ್ಣಗಿದ್ದಾರೆ ಎನ್ನುತ್ತಾರೆ. ಅಯ್ಯಪ್ಪ ಪಣಿಕ್ಕರ್‌ ಅಷ್ಟು ಏರಲೂ ಇಲ್ಲ ಇಳಿಯಲೂ ಇಲ್ಲ. ಅವರ ಹಾದಿಯಲ್ಲಿ ಈಗ ಸಚ್ಚಿದಾನಂದನ್ ಹಲವು ಬಗೆಗಳಲ್ಲಿ ಬರೆಯುವ ಕವಿಯಾಗಿದ್ದಾರೆ. ನಮ್ಮದೇ ಆಗುತ್ತಿರುವ ಆಧುನಿಕ ಪಶ್ಚಿಮಕ್ಕೂ ಕೇರಳಕ್ಕೂ ಏಕಕಾಲದಲ್ಲಿ ಒದಗಬಲ್ಲ ಅಯ್ಯಪ್ಪ ದಾರಿಯಲ್ಲಿ ತಮ್ಮದೇ ಛಾಪನ್ನು ಒತ್ತಿದ್ದಾರೆ.

ಗೋವಿಂದನ್ ಮನೆಯಲ್ಲಿ ಎಲ್ಲ ಕಡೆ ನಡೆಯುವ ಎಲ್ಲ ಸುದ್ದಿಗಳೂ ಒದಗುತ್ತಿದ್ದವು. ಅವರ ಮನೆಯೊಂದು ನಮಗೆ ಅಕಾಡೆಮಿಯಂತೆ ಇತ್ತು. ಕಿವಿಯಿಂದ ಕಿವಿಗೆ ದಾಟುವ (ಇಂಗ್ಲಿಷಿನಲ್ಲಿ ಗ್ರೇಪ್‌ ವೈನ್ ಎನ್ನುವ) ಅಂದರೆ ಬಳ್ಳಿಯಂತ ಹೊಸಕುಡಿಗಳು ಒಡೆಯುತ್ತ ಹಬ್ಬುತ್ತ ಹೋಗುವ ಆತ್ಮೀಯವಾದ ಈ ಬಗೆಯ ಪ್ರತಿಭಾ ಪರಿಚಯದಲ್ಲಿ ಅಡಿಗರು ಮತ್ತು ಅಯ್ಯಪ್ಪ ಪಣಿಕ್ಕರ್‌ ಭಾರತದ ಕವಿಗಳಾದರು. ವಿಜಯನ್‌ದಾರ್ಶನಿಕ ಲೇಖಕರಾದರು. ಅರವಿಂದನ್, ಅಡೂರ್‌ಇವತ್ತು ಇಡೀ ಜಗತ್ತೇ ಮೆಚ್ಚುವ ಸಿನಿಮಾ ನಿರ್ದೇಶಕರಾದರು. ಇಲ್ಲಿ ಯಾರೂ ಯಾರನ್ನೂ ಹೊಗಳಬೇಕಾಗಿರಲಿಲ್ಲ. ಮೆಚ್ಚಿಸಬೇಕಾಗಿರಲಿಲ್ಲ. ಸತತವಾಗಿ ಕಾದಿರುವ ಬಡಜನರಿಗೆ ಮದ್ದನ್ನು ಕೊಡುತ್ತಿರುವಾಗಲೇ ಆಗ ಈಗ ಒಳಗೆ ಬಂದು ಗೋವಿಂದನ್‌ ಹೆಂಡತಿ ನಮಗೆಲ್ಲರಿಗೂ ಟೀಯನ್ನು ಮಾಡಿ ಕೊಡುತ್ತಲೂ ಇದ್ದರು. ಈ ಗೋವಿಂದನ್ ಇಷ್ಟೆಲ್ಲಾ ಸೃಷ್ಟಿಗೆ ಕಾರಣವಾದರು ನಿಜ. ಆದರೆ ಅವರೇ ಸ್ವತಃ ಬರೆದದ್ದು ಕಡಿಮೆ. ಆದರೆ ಅವರು ಬರೆದದ್ದಷ್ಟು ಇವತ್ತಿಗೂ ಮಲೆಯಾಳಂ ಮುಂದೆ ಮಾಡಬಹುದಾದುದನ್ನು ಸೂಚಿಸುವಂತಿದೆ ಎಂದು ತಿಳಿದವರು ಹೇಳುತ್ತಾರೆ.

ಅಯ್ಯಪ್ಪ ಪಣಿಕರ್‌ನನ್ನಂತೆ, ಗೋವಿಂದನ್‌ರಂತೆ ಅಥವಾ ಅಡಿಗರಂತೆ ರಾಜಕೀಯದ ಬಗ್ಗೆ ಹೆಚ್ಚು ಮಾತಾಡುತ್ತಿರಲಿಲ್ಲ. ಆದರೆ ಎಮರ್ಜನ್ಸಿ ಬಗ್ಗೆ ಆ ಕಾಲದಲ್ಲೇ ಅದನ್ನು ಕಟುವಾಗಿ ಹಾಸ್ಯ ಮಾಡಬಲ್ಲ, ಕಿವಿಯಿಂದ ಕಿವಿಗೆ ಹರಡಬಲ್ಲ ಕವಿತೆಗಳನ್ನು ಬರೆದವರು. ಜನತಾ ಪರಿವಾರವನ್ನು ನಂದಿ ನನ್ನಂಥವರು, ಜನಸಂಘವನ್ನು ನೆಚ್ಚಿ ಅಡಿಗರಂಥವರು, ಸ್ಟಾಲಿನ್ನನ್ನು ನೆಚ್ಚಿ ಭಿಷಮ್ ಸಹಾನಿಯಂಥವರು, (ಮೊದಲು ದಿನಗಳಲ್ಲಿ ಓವಿ ವಿಜಯನ್‌ನಿರ್ಮಲವರ್ಮರಂಥವರು ಕೂಡ) ಮಾಡಿದ ತಪ್ಪನ್ನು ಮಾಡುವ ಅಗತ್ಯ ಬೀಳದ ಸಮಾಧಾನಿ ಅಯ್ಯಪ್ಪ ಪಣಿಕರ್.

ಮೇಲಿನ ಮಾತನ್ನು ಅಯ್ಯಪ್ಪ, ಗೋವಿಂದನ್, ಓ.ವಿ. ವಿಜಯನ್‌ಬಳಗಕ್ಕೇ ಸೇರಿದ ಈ ಕಾಲದ ಮಹತ್ವದ ಕಥೆಗಾರರೊಬ್ಬರು ಒಪ್ಪುವುರೋ ಇಲ್ಲವೋ ಎನ್ನುವ ಅನುಮಾನ ನನಗಿದೆ. ಅಸಾಧಾರಣ ಪ್ರತಿಭೆಯ ಈ ಬರಹಗಾರ ಮೈಸೂರಿನ ಫಿಲೋಮಿನಾ ಕಾಲೇಜಲ್ಲಿ ಅಡಿಗರ ಶಿಷ್ಯರಾಗಿ ಬೆಳೆದವರು. ಅವರ ಮೊದಲ ಕಥಾ ಸಂಕಲನ ಅರ್ಪಿತವಾದ್ದು ಅವರನ್ನು ಗುರುತಿಸಿ ಬೆಳೆಸಿದ ಅಡಿಗರಿಗೆ. ಕನ್ನಡ ಮಾತು ಬಲ್ಲವರಾದ ಇವರು ರಬ್ಬರ್‌ ಬೆಳೆಯುವ ಕ್ರೈಸ್ತ ವೈಶ್ಯ ಲೋಕದಿಂದ ಹುಟ್ಟಿ ಬಂದವರು. ಮುಸ್ಲಿಮ್ ಸಮುದಾಯದ ವಿಶಿಷ್ಟವಾದ ಹಾಸ್ಯಪ್ರಜ್ಞೆಯನ್ನೂ, ಭಾಷಾ ಪ್ರಯೋಗವನ್ನೂ ಪಡೆದಿದ್ದ ಭಾರತದ ಮಹತ್ವದ ಕಾದಂಬರಿಕಾರರಲ್ಲಿ ಒಬ್ಬರಾದ ವೈಕಂ ಮಹಮದ್ ಬಶೀರರಂತೆ ಈತ ಯಾಕೆ ಬೆಳೆಯಬಾರದು ಎಂದು ನಾನು ಹಲವು ಸಾರಿ ಅಂದುಕೊಂಡಿದ್ದೇನೆ. ಆದರೆ ಈ ಲೇಖಕ ವಿಪರೀತಗಳ ಬೆನ್ನು ಹತ್ತಿದ ಜಗಳಗಂಟಿಯಾದ ಸೆಕ್ಯುಲರಿಸ್ಟ್. ಫಂಡಮೆಂಟಲಿಸ್ಟ್ ಎನ್ನಿಸುವಷ್ಟು ಸೆಕ್ಯುಲರಿಸ್ಟ್‌. ವಿಜಯನ್ನರ ಆಧ್ಯಾತ್ಮಿಕ ಒಲವನ್ನೂ ಅವರಿಗೆ ಬಹು ಪ್ರೀತಿಯವರಾದ ಇವರು ಸಂಶಯದಿಂದ ನೋಡುತ್ತಾರೆ. ಕೇರಳದಲ್ಲಿ ಉದಾತ್ತವಾದ ಮಾತುಗಳನ್ನು ಆಡುವ ಪರಮೇಶ್ವರನ್ ಎಂಬ ಸಂಘ ಪರಿವಾರದ ನಯವಂತರಾದ ಧೀಮಂತರಿದ್ದಾರೆ. ಅವರ ಮಾತಿನ ಮೋಡಿಗೆ ಅಯ್ಯಪ್ಪನವರೂ ಕೆಲವೊಮ್ಮೆ ಒಳಗಾಗಿದ್ದಾರೆ ಎಂಬ ಸಂಶಯವನ್ನು ಈ ಲೇಖಕ ವ್ಯಕ್ತಪಡಿಸಿದ್ದುಂಟು. ಪಾಲ್ ಝಕಾರಿಯಾ ಈ ಲೇಖಕನ ಹೆಸರು. ಅಯ್ಯಪ್ಪ, ಗೋವಿಂದನ್, ವಿಜಯನ್‌, ಅರವಿಂದನ್, ಅಡೂರ್ –  ಈ ಬಳಗಕ್ಕೇ ಸೇರಿದ ಲೇಖಕ ಇವರು.

ನಂಬೂದರಿ ಪಾಡರು ಬದುಕಿದ್ದರೆ ಇವರೆಲ್ಲರ ಜೊತೆ ಜಗಳ ಮಾಡುವ ಧೀಮಂತಿಕೆ ಅವರಿಗೆ ಇತ್ತು. ಕೇರಳವೇ ಇನ್ನೊಂದು ಪ್ರಪಂಚ.

೧೭೨೦೦೬

* * *