ಬೆಂಗಳೂರಿನಲ್ಲಿ ನನ್ನ ಮನೆ ಇರುವ ಆರ್‌ಎಂವಿ ಬಡಾವಣೆಯಲ್ಲಿ ನೈಕೀ ಶೂ ಧರಿಸಿ ವಾಕ್ ಹೋಗುತ್ತಾ ಇದ್ದಾಗ ನನ್ನ ಪರಿಚಯದ ವಯಸ್ಸಾದ ಮಹಿಳೆಯೊಬ್ಬರು ಇಳಕಲ್ಲಿನ ಸೀರೆಯುಟ್ಟು ತಲೆಯ ಮೇಲೆ ಸೆರಗು ಹಾಕಿ ಬರಿಗಾಲಿನಲ್ಲಿ ಸರಸರನೆ ನಡೆಯುತ್ತಿದ್ದರು. ಜಾತಿಯಲ್ಲಿ ದಲಿತರಾದ ಆಕೆ ಮಂತ್ರಿಯೊಬ್ಬರ ತಾಯಿಯಾದ್ದರಿಂದ ನಮಗೆ ಬರಿಗಾಲಿನ ಅವರ ಅದೇ ಹಿತವೆನ್ನಿಸುವಂತಹ ಸರಾಗವಾದ ನಡಿಗೆ ಕಂಡು ಆಶ್ಚರ್ಯ.

ಜತೆಯಲ್ಲಿದ್ದ ನನ್ನ ಹೆಂಡತಿ ‘ಏನವ್ವ ಬರಿಗಾಲಲ್ಲಿ ನಡೀತ ಇದೀರಿ?’ ಎಂದು ಕೇಳಿದಳು.

ನಾವು ಶ್ರಾವಣ ಮಾಸದಲ್ಲಿದ್ದೀವಿ ಎಂದು ನನಗೆ ಗೊತ್ತಾದದ್ದೇ ಆಗ. ನಾನು ಬ್ರಾಹ್ಮಣನಾಗಿ ಹುಟ್ಟಿದವನು. ಇವೆಲ್ಲಾ ಒಂದುಕಾಲದಲ್ಲಿ ಗೊತ್ತಿದ್ದವನು. ಪ್ರತಿ ಶ್ರಾವಣ ಶನಿವಾರ ಅಗ್ರಹಾರದ ಮನೆಮನೆಗೆ ಹೋಗಿ ಶಾಸ್ತ್ರೋಕ್ತವಾಗಿ ತಟ್ಟೆಯೊಡ್ಡಿ ‘ಭವತಿ ಭಿಕ್ಷಾಂದೇಹಿ’ ಎಂದು ಭಿಕ್ಷೆಯೆತ್ತಿ ನನ್ನ ಅಜ್ಜನಿಗೆ ಖುಷಿಕೊಟ್ಟವನು. ನನ್ನ ಅಪ್ಪನಿಗೆ ಪಂಚಾಂಗ ನೋಡುವುದಕ್ಕೆ ಮಾತ್ರವಲ್ಲ, ಲೆಖ್ಖಹಾಕಿ ಬರೆಯುವುದಕ್ಕೂ ಗೊತ್ತಿತ್ತು. ನಾನೂ ಮಠದ ಒಂದು ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸ ಆರಂಭ ಮಾಡಿದವನು. ಆದರೆ ಕ್ರಮೇಣ ಇದು ಶ್ರಾವಣ ಮಾಸ ಅನ್ನುವುದು ಅಪ್ರಸ್ತುತವಾಗುವಷ್ಟು ಆಧುನಿಕನಾಗಿಬಿಟ್ಟಿದ್ದೆ. ಹಳ್ಳಿಯ ಜನರಿಗೆ, ಬಡಜನರಿಗೆ, ನಿರಕ್ಷರರಿಗೆ ಪಂಚಾಂಗ ನೋಡದೇ ಇದ್ದರೂ ಯಾವ ಹಬ್ಬ ಯಾವಾಗ ಅಂತ ಗೊತ್ತಿರುತ್ತದೆ. ಈ ದೇಶದ ಬಡವರಿಗೆ ನೆಲದ ಜತೆಗೆ ಎಷ್ಟು ಸಂಬಂಧ ಇದೆಯೋ ಅಷ್ಟೇ ಗಾಢವಾದ ಸಂಬಂಧ ಅವರಿಗೆ ಆಕಾಶದ ಜತೆಯೂ ಇದೆ. ಕೆಲವು ಸಾರಿ ಇದು ಅವರಿಗೇ ಗೊತ್ತಾಗದಷ್ಟು ಅಪ್ರಜ್ಞಾಪೂರ್ವಕವಾಗಿ ಇರುತ್ತದೆ.

ನಾನು ಮಲೆನಾಡಿನ ತೀರ್ಥಹಳ್ಳಿಯಲ್ಲಿ ಓದುತ್ತ ಹತ್ತಿರದ ಹಳ್ಳಿಯೊಂದರಲ್ಲಿ ಬೆಳೆದವನು. ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆ ಜಾತ್ರೆ ಅಂತ ಒಂದು ಜಾತ್ರೆ ನಡೆಯುತ್ತೆ. ಆ ಜಾತ್ರೆಯ ದಿವಸವನ್ನು ಎಷ್ಟು ದಿನಗಳ ಹಿಂದಿನಿಂದಲೇ ಎದುರುನೋಡುತ್ತ ಮಾತನಾಡುತ್ತಿದ್ದೆವು ಎಂದು ನೆನಪಾಗುತ್ತದೆ. ಇರುವ ಒಂದು ಒಳ್ಳೆಯ ಅಂಗಿಯನ್ನು ಒಗೆದು ಗಂಜಿಹಾಕಿ ಒಣಗಿಸಿ, ತಟ್ಟೆಯ ಮೇಲೆ ಕೆಂಡವಿಟ್ಟು ಕಾಯಿಸಿ, ಪಾಣಿಪಂಚೆಯಿಂದ ಅದನ್ನು ಜೋಪಾನವಾಗಿ ಹಿಡಿದು, ಅಂಗಿಯ ಮೇಲೆ ಅದನ್ನು ಒತ್ತಿ ಆಡಿಸಿ ಇಸ್ತ್ರಿಮಾಡಿ ಎಳ್ಳಮಾವಾಸ್ಯೆಗೆ ತೊಡಲು ಅಮ್ಮನ ಪೆಟ್ಟಿಗೆಯಲ್ಲಿ ಕಾದಿಡುತ್ತಿದ್ದೆವು. ಹಳ್ಳಿಗೆ ಹೊರಗಿನಿಂದ ಬಂದವರು, ಗಾಡಿ ಹೊಡೆಯುವವರು, ಸುಮ್ಮನೇ ನದಿಯ ದಂಡೆಯ ಮೇಲೆ ಅಡ್ಡಾಡುತ್ತ ಹರಟೆ ಹೊಡೆಯುವವರು, ಕಾಡುಹಂದಿಯನ್ನು ಬೇಟೆಯಾಡಿ ಬಂದು ತಮ್ಮ ಸಾಹಸಗಳನ್ನು ಕೊಚ್ಚಿಕೊಳ್ಳುವವರು, ಗುಡ್ಡದ ಮೇಲಿನ ಕೊಂಕಣಿ ಅಂಗಡಿಗೆ ಸೀಮೆಎಣ್ಣೆಯನ್ನೋ ತೊಗರಿಬೇಳೆಯನ್ನೋ ಕೊಳ್ಳಲು ದೂರದ ಹಳ್ಳಗಳಿಂದ ಬಂದವರು ಎಲ್ಲರೂ ಬರಲಿರುವ ಜಾತ್ರೆಯ ತಮ್ಮ ತಯ್ಯಾರಿ ಬಗ್ಗೆ ಮಾತಾನಾಡಿಕೊಳ್ಳುತ್ತಾ ಇರುತ್ತಿದ್ದರು. ಆ ಜಾತ್ರೆಗೆ ಹೋಗಿ ಬಂದರೆ ಇಡೀ ವರ್ಷದ ಹರಟೆಗೆ, ಮಾತಿಗೆ ಎಲ್ಲಾ ಅದರದೇ ನೆನಪುಗಳು. ಗೆಣೆಯ ಮೇಲೆ ಸರಸರನೆ ಏರಿ ಅಷ್ಟೆತ್ತರದಿಂದ ಹೊಕ್ಕುಳಿನ ಮೇಲೆ ಗೆಣೆಯನ್ನು ಇಟ್ಟು ತಮಟೆಯ ಬಡಿತಕ್ಕೆ ಇಡೀ ಮೈಯನ್ನು ಆಕಾಶಕ್ಕೆ ಚೆಲ್ಲುವಂತೆ ಒಡ್ಡಿ ಓಲಾಡಿ ಅಷ್ಟೇ ಸರಸರನೆ ಕೆಳಗಿಳಿದು ಕುಮ್ಮುಚಟ್ಟು ಹಾಕಿ ಕೈಮುಗಿದು ನಿಲ್ಲುವ ಪರಮಸುದಂರಿಯಾಗಿ ಕಾಣುತ್ತ ಇದ್ದ ಬಾಲೆಯೊಬ್ಬಳನ್ನು ಮರೆಯಲಾರೆ.

ಆ ಕಾಲದಲ್ಲಿ ಒಂದು ದೇವಸ್ಥಾನದಲ್ಲಿ ಆರಾಧನೆ ಅಂದರೆ ಅದು ಬರೀ ಕಾಟಾಚಾರದ ಪೂಜೆ ಅಲ್ಲ. ಸಂಸ್ಕೃತದಲ್ಲಿ ಈಗ ಇಂಥ ಪೂಜೆ ನಡೆಯಲಿದೆ ಎಂದು ಒಬ್ಬ ಸಾರುತ್ತಿದ್ದ. ಇಂತಿಂಥಾ, ಎಷ್ಟೆಷ್ಟು ದೀಪಗಳ ಆರತಿ ಈಗ ನಡೆಯಲಿದೆ ಎಂದು ರಾಗವಾಗಿ ಸಾರುವುದೇ ಒಂದು ಸೊಗಸು. ದೇವರ ಪ್ರೀತ್ಯರ್ಥವಾಗಿ ಒಂದು ಪುಟ್ಟ ಭಾಷಣವೂ ತಿಳಿದವರೊಬ್ಬರಿಂದ ನಡೆಯುತ್ತಿತ್ತು. ನಾವು ಕೈಮುಗಿದು ಗರ್ಭಗುಡಿಯನ್ನೇ ನೋಡುತ್ತ ಎರಡೂ ಪಕ್ದಲ್ಲಿ ಶಿಸ್ತಾಗಿ ಪಂಚೆಯುಟ್ಟು ನಿಂತು ಈ ಅರ್ಚನೆಯೆಂಬ ಆಚರಣೆಯನ್ನು ನಾಟಕವೆಂಬಂತೆ ನೋಡುವುದು. ಕೊನೆಗೆ ಒಂದು ಸಂಗೀತ ಸಮಾರಾಧನೆ ಇರುತ್ತಿತ್ತು.

ಈ ಬಗೆ ಬಗೆಯ ಆರತಿಗಳೆಲ್ಲಾ ನೋಡುವುದಕ್ಕೂ ಬಹಳ ಚೆನ್ನಾಗಿರುತ್ತಿದ್ದವು. ಏಕೆಂದರೆ ಆಗ ಎಲೆಕ್ಟ್ರಿಕ್ ದೀಪಗಳಿರಲಿಲ್ಲ. ದೊಡ್ಡ ದೀಪದ ಕಂಬಗಳಲ್ಲಿ ದೇವರ ಅಕ್ಕಪಕ್ಕ ಎಣ್ಣೆದೀಪ ಉರಿಯುತ್ತಿದ್ದರೂ ನೆರಳುಗಳು ಏರಿಳಿದು ಆಡುವ ಕತ್ತಲಾದ ಗರ್ಭಗುಡಿಯಲ್ಲಿ ಆರತಿಯನ್ನು ಬೆಳಗುತ್ತಿದ್ದರು. ಈ ಬೆಳಗುವ ಕ್ರಮದಲ್ಲಿ ಒಂದು ವಿಶೇಷ ಇತ್ತು. ಆ ದೇವತಾ ವಿಗ್ರಹದ ಬೇರೆ ಬೇರೆ ಭಾಗಗಳನ್ನು ತೋರಿಸುತ್ತಾ ಆರತಿ ಎತ್ತುತ್ತಿದ್ದರು. ಒಂದು ವಿಗ್ರಹವನ್ನು ನಾವು ಆ ಆರತಿಯ ಬೆಳಕಿನಲ್ಲಿ ಸ್ವಲ್ಪ ಸ್ವಲ್ಪವೇ ನೋಡುತ್ತಾ, ಮತ್ತೆ ಅದೇ ಭಾಗಗಳನ್ನು ಇನ್ನೊಂದು ಆರತಿಯ ವೇಳೆಯೂ ನೋಡುತ್ತಾ ಸುಮಾರು ಹತ್ತು ಹದಿನೈದು ಆರತಿಗಳ ಅವಧಿಯಲ್ಲಿ ನಮ್ಮ ಮನಸ್ಸಿನಲ್ಲಿ ವಿಗ್ರಹದ ಒಟ್ಟು ಸ್ವರೂಪ ಕ್ರಮೇಣವಾಗಿ ಮೂಡಿರುತ್ತಿತ್ತು. ಕೊನೆಗೊಂದು ಶಂಖ ಜಾಗಟೆಗಳ ಹುಚ್ಚಿನ ಆವೇಶದಲ್ಲಿ ದೊಡ್ಡ ಆರತಿ ಎತ್ತುತ್ತಿದ್ದರು. ಆಗ ನಮ್ಮ ಮನಸ್ಸಿನೊಳಗಿಂದ ದೊಡ್ಡ ಆರತಿಯ ಬೆಳಕಿನಲ್ಲಿ ದೇವರ ಬಿಂಬ ಗರ್ಭಗುಡಿಯಲ್ಲಿ ಸಾಕ್ಷಾತ್ಕಾರಗೊಳ್ಳಬೇಕು – ಹಾಗೆ. ಶಬ್ದಗೊಳಗಿನ ನಿಶ್ಶಬ್ದದ ಹಾಗೆ.

ಈಗ ನಮ್ಮ ದೇವಸ್ಥಾನಗಳೆಲ್ಲಾ ಎಷ್ಟು ಆಧುನಿಕವಾಗಿಬಿಟ್ಟಿವೆ ಎಂದರೆ ಎಲ್ಲ ಕಡೆಯೂ ದೊಡ್ಡ, ಉಜ್ವಲವಾದ ಎಲೆಕ್ಟ್ರಿಕ್ ದೀಪಗಳನ್ನು ನೇತುಹಾಕಿ, ದೇವರ ಮೇಲೆ ಸರ್ಚ್‌ಲೈಟ್‌ ತೂರಿ, ಆರತಿ ಬೆಳಗುವುದನ್ನು ಅರ್ಥಹೀನ ಮಾಡಿಟ್ಟಿದ್ದೇವೆ. ಆರತಿಗೊಂದು ಅರ್ಥ ಇರಬೇಕಾದರೆ ಆ ಅರ್ಥಕ್ಕೆ ಬೇಕಾಗಿರುವ ಕತ್ತಲೂ ಅಲ್ಲಿರಬೇಕು. ಆ ಕತ್ತಲಿಗೆ ಬೇಕಾದ ಒಂದು ಪಾವಿತ್ರ್ಯದ ಕಲ್ಪನೆಯೂ ಬೇಕು. ಮತ್ತೆ ದೇವತಾ ವಿಗ್ರಹವೂ ಇದಕ್ಕನುಗುಣವಾಗಿಯೇ ಇರಬೇಕಾಗುತ್ತದೆ. ಈಗ ದೇವಾನುದೇವತೆಗಳೆಲ್ಲಾ ಸಿನಿಮಾ ನಟ – ನಟಿಯರಂತಾಗಿಬಿಟ್ಟಿದ್ದಾರೆ. ಬಣ್ಣ ಬಣ್ಣದ ಮೂತಿ ಬಾಲಗಳ ಹನುಮಂತ ಬಣ್ಣಬಣ್ಣದ ರಾಮ ದೇವಾಲಯದ ಶಿಖರದ ಮೇಲೆ ಫೋಸ್ ಕೊಟ್ಟು ನಿಂತು ತನ್ನ ಭಕ್ತಿಯನ್ನು ಸಾರುತ್ತಾನೆ. ಈಗ ದೇವರಿಗೂ ಸಿನಿಮಾ ನಟರ ಮುಖಗಳೇ. ದೇವರ ವಿಗ್ರಹ, ಚಿತ್ರಗಳಿಗಿದ್ದ ಸಾಂಕೇತಿಕತೆ ಮಾಯವಾಗಿ ಕ್ಯಾಲೆಂಡರ್ ಚಿತ್ರಗಳೇ ನಮ್ಮ ದೇವರುಗಳಾಗಿಬಿಟ್ಟಿವೆ.

ಈಗಲೂ ನಮ್ಮ ಹಳ್ಳಿಗೆ ಹೋದರೆ ಅಲ್ಲಿ ಭೀಮನಕಟ್ಟೆ ಎಂಬ ಸ್ಥಳವಿದೆ. ಅಲ್ಲಿ ತುಂಗಾತೀರದಲ್ಲಿ ಕಡುಕೋಪಿ ದೂರ್ವಾಸರು ಸಿಡಿಮಿಡಿಯುತ್ತಲೇ ತಪಸ್ಸಿಗೆ ಕೂತಿದ್ದ ಪುಟ್ಟ ದ್ವೀಪವಿದೆ, ಹಳೆಯ ಒಂದು ಭೀಮೇಶ್ವರ ಎಂಬ ದೂರ್ವಾಸ ಶಾಪಕ್ಕೆ ಹೆದರಿದ ಗಡಿಬಿಡಿಯಲ್ಲಿ ಭೀಮ ಸ್ಥಾಪಿಸಿದ ಒಂದು ದೇವಸ್ಥಾನವಿದೆ. ಅಲ್ಲಿನ ಗರ್ಭಗುಡಿಯಲ್ಲಿ ಸ್ವಲ್ಪ ಕತ್ತಲಿದೆ. (ಇನ್ನೂ ಇದೆಯೋ ಗೊತ್ತಿಲ್ಲ.) ಯಾರಾದರೂ ಆರತಿ ಎತ್ತುವನ್ನು ನೋಡಿದರೆ ನನಗೆ ನನ್ನ ಬಾಲ್ಯವೇ ಹಿಂದಕ್ಕೆ ಬಂದಂತೆ ಭಾಸವಾಗುತ್ತದೆ.

* * *

ಮೊದಲಿಗೆ ಬಹುಪಾಲು ನಾಗರಿತಕೆ ಪೇಗನ್ (Pagan) ನಾಗರಿಕತೆಗಳಾಗಿದ್ದವು. ಪೇಗನ್ ನಾಗರಿಕತೆಗಳು ಅಂದರೆ ಬಹುದೇವಾರಾಧನೆಯ ನಾಗರಿಕತೆಗಳು. ರೋಮ್ ಎಷ್ಟರ ಮಟ್ಟಿಗೆ ಪೇಗನ್ ನಾಗರಿಕತೆ ಅಂದರೆ ರೋಮ್‌ನ ಉಚ್ಛ್ರಾಯ ಕಾಲದಲ್ಲಿ ರೋಮ್‌‌ನ ಎಲ್ಲಾ ದೇವತೆಗಳಿಗೂ ಒಂದೊಂದು ದೇವಸ್ಥಾನವಿತ್ತು. ಇವೆಲ್ಲವುಗಳ ಜತೆಗೆ ಇನ್ನೊಂದು ದೇವಸ್ಥಾನವೂ ಇತ್ತು. ಅದು ‘ನಮಗೆ ಗೊತ್ತಿಲ್ಲದೇ ಇರುವ ದೇವರಿಗಾಗಿ ಈ ದೇವಸ್ಥಾನ’ ಎಂದು ರೋಮನ್ನರು ಈ ದೇವಸ್ಥಾನವನ್ನು ಗುರುತಿಸುತ್ತಿದ್ದರು. ಅವರವರ ದೇವರು ಅವರಿಗೆ. ದೇವರ ವಿಷಯದಲ್ಲಿ ಯುದ್ಧ ಆಗುವುದಕ್ಕೆ ಶುರುವಾಗಿದ್ದು ದೇವರಿರುವುದು ಒಬ್ಬನೇ ಎಂಬ ಧಾರ್ಮಿಕ ಕಲ್ಪನೆ ಬಲಗೊಂಡ ಮೇಲೆ. ಅದು ಯಹೂದ್ಯ ಮೂಲದ ಧರ್ಮಗಳಿಂದ ಆರಂಭವಾಯಿತು. ಕೂಡಲೇ ಏನಾಯಿತು ಎಂದರೆ ದೇವರು ಒಬ್ಬನೇ, ಅವನು ನಿರಾಕಾರ ಎಂಬ ಪರಿಕಲ್ಪನೆ ಹುಟ್ಟಿತು. ನಮ್ಮ ಪೇಗನ್ ಸಂಸ್ಕೃತಿಯಲ್ಲೂ ಈ ಕಲ್ಪನೆ ಇದೆ. ದೇವರು ನಿರಾಕಾರ, ನಿರ್ಗುಣ, ಏಕಂ ಸತ್‌, ವಿಪ್ರಾಃ ಬಹುದಾವದಂತಿ. ಸತ್ಯ ಒಂದೇ, ತಿಳಿದವರು ಬಹುವಾಗಿ ಈ ಒಂದನ್ನೇ ಬೇರೆ ಬೇರೆ ಮಾತುಗಳಲ್ಲಿ ವಿವರಿಸಿಕೊಳ್ಳುತ್ತಾರೆ,

ಪ್ರಪಂಚದ ಇಡೀ ಧರ್ಮಗಳನ್ನು ವಿಶ್ಲೇಷಣೆ ಮಾಡುವುದಾದರೆ ಎರಡು ಜೋಡಿ ಪದಗಳನ್ನು ತೆಗೆದುಕೊಂಡರೆ ಸಾಕಾಗುತ್ತದೆ. ನನಗೆ ಇದನ್ನು ಹೇಳಿದವರು ರಾಮಚಂದ್ರ ಗಾಂಧಿ. ಅವು ಸಾಕಾರ – ಸಗುಣ, ನಿರಾಕಾರ – ನಿರ್ಗುಣ. ವೈಷ್ಣವರಿಗೆ ದೇವರು ಸಾಕಾರ ಮತ್ತು ಸಗುಣ – ಅವನು ಸರ್ವ ಗುಣ ಸಂಪನ್ನ. ಅದ್ವೈತಿಗಳಿಗೆ ಜ್ಞಾನೋದಯವಾದ ನಂತರ, ಮಾಯೆಕಳೆದ ನಂತರ ದೇವರು ನಿರಾಕಾರ. ಅದು ನೀನೇ, ಇನ್ನೊಂದಲ್ಲ. ಅಲ್ಲಮನಂಥವರ ಮಟ್ಟಿಗೆ ದೇವರು ನಿರಾಕಾರ – ನಿರ್ಗುಣ. ಕ್ರಿಶ್ಚಿಯನ್ನರಿಗೆ ಮತ್ತು ಮಹಮದೀಯರಿಗೆ ದೇವರು ನಿರಾಕಾರ, ಆದರೆ ಸುಗುಣ.

ಈ ಬಗ್ಗೆ ರಾಮಚಂದ್ರ ಗಾಂಧಿಯವರ ಜತೆ ಚರ್ಚಿಸುತ್ತಿದ್ದಾಗ ನನಗೊಂದು ಸಮಸ್ಯೆ ಉದ್ಭವವಾಯಿತು. ಆಗಲೇ ಇದನ್ನು ಕೇಳಿದೆ : ‘ನಿರಾಕಾರ/ಸಗುಣ ದೇವರಿದ್ದಂತೆ, ಎಲ್ಲಾದರೂ ದೇವರು ಸಾಕಾರ ಮತ್ತು ನಿರ್ಗುಣ ಆಗಿರುವುದು ಸಾಧ್ಯವೇ?’

ಅವರು ಒಂದು ವಿಚಿತ್ರವಾದ ಉತ್ತರ ಕೊಟ್ಟರು. ಅದನ್ನು ಅವರು ಅಂದಂತೆಯೇ ನೆನಪಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತೇನೆ. ರಾಮಚಂದ್ರ ಗಾಂಧಿಯವರು ‘ಸಾಧ್ಯ, ಸಾಕಾರವಾಗಿದ್ದೂ ನಿರ್ಗುಣವಾಗಿರುವುದು ಬ್ಯೂರೋಕ್ರಸಿ’ ಎಂದು ನನ್ನನ್ನು ಚಕಿತಗೊಳಿಸಿದರು.

* * *

ಜಗತ್ತಿನಲ್ಲಿ ಈಗ ಉಳಿದುಕೊಂಡಿರುವ ಏಕೈಕ ಪೇಗನ್ ಸಂಸ್ಕೃತಿ ನಮ್ಮದು. ಐರೋಪ್ಯ ದೇಶದ ಪೇಗನ್ ಸಂಸ್ಕೃತಿ ಎಷ್ಟು ನಾಶವಾಯಿತು ಅಂದರೆ ಇವತ್ತು ಅಪೋಲೋನಿಗೆ ಎಲ್ಲಿಯೂ ದೇವಸ್ಥಾನ ಇಲ್ಲ. ಆದರೆ ಇದು ಸಂಪೂರ್ಣ ನಾಶ ಅಲ್ಲ. ಯಾಕೆಂದರೆ ಯಾವುದೂ ಹಾಗೆ ನಾಶವಾಗವುದಿಲ್ಲ. ಯೂರೋಪಿನ ಎಲ್ಲ ದೊಡ್ಡ ಕವಿಗಳೂ ಮನೆಕಟ್ಟುವುದು ಈ ಪೇಗನ್ ದೇವತೆಗಳಿಗೇ. ಐರೋಪ್ಯ ಕಾವ್ಯ ಅಥವಾ ಇಂಗ್ಲಿಷ್‌ಕಾವ್ಯವನ್ನು ಓದಿದರೆ ಇದು ಅರ್ಥವಾಗುತ್ತದೆ. ಅದರಲ್ಲಿ ಕಾಲವಾಗಿ ಹೋದ ಐರೋಪ್ಯ ದೇವತೆಗಳೆಲ್ಲಾ ಆ ಪದ್ಯಗಳಲ್ಲಿದ್ದಾರೆ. ಕೀಟ್ಸ್‌ನ ಪದ್ಯಗಳಲ್ಲಿ, ಏಟ್ಸ್‌ನ ಪದ್ಯಗಳಲ್ಲಿ, ಬ್ಲೇಕ್‌ನ ಪದ್ಯಗಳಲ್ಲಿ ಅಪೋಲೋ ಆದಿಯಾಗಿ ಎಲ್ಲ ದೇವತೆಗಳು ಬರುತ್ತಾರೆ. ದೇವಾಲಯವಿಲ್ಲದ ದೇವರುಗಳೆಲ್ಲಾ ಕಾವ್ಯ ದೇಗುಲಗಳಲ್ಲಿ ಉಳಿದಿದ್ದಾರೆ.

ನಮ್ಮ ದೇಶದ ಸಂಸ್ಕೃತಿ ಇನ್ನೂ ಪೇಗನ್ ಸಂಸ್ಕೃತಿಯಾಗಿ ಉಳಿದುಕೊಂಡು ಬಂದಿರುವುದರಿಂದ ಇಲ್ಲಿ ಕಾವ್ಯದಲ್ಲಿ ಮಾತ್ರ ಅಲ್ಲ, ನಿಜ ಜೀವನದಲ್ಲೂ ನಮ್ಮ ದೇವರುಗಳೆಲ್ಲಾ ಉಳಿದುಕೊಂಡು ಬಂದಿದ್ದಾರೆ.

ಒಂದು ಬೇವಿನ ಗಿಡ ಒಂದು ಅಶ್ವತ್ಥದ ಗಿಡ ಒಟ್ಟಿಗೇ ಹುಟ್ಟಿದರೆ ಅದು ದೇವಸ್ಥಾನ ಅನ್ನಿಸಿಕೊಳ್ಳುತ್ತದೆ. ನಾವು ಪಾವಿತ್ರ್ಯವನ್ನು ಎಲ್ಲವುದರಲ್ಲೂ ಕಾಣುತ್ತೇವೆ. ಬೆಂಗಳೂರಿನ ಸಮೀಪವೇ ಒಂದು ಕಿರು ತಿರುಪತಿ ಇದೆ. ಅಲ್ಲೊಂದು ಶಾಲೆ ಇದೆ. ಆ ಶಾಲೆಯ ಯಾವುದೋ ಕಾರ್ಯಕ್ರಮಕ್ಕೊಂದು ನಾನು ಹೋಗಿದ್ದೆ. ಆಗ ಯಾರೋ ನನಗೆ ‘ಇಲ್ಲೊಂದು ತಿರುಪತಿ ದೇವಸ್ಥಾನ ಇದೆ. ದೂರದ ತಿರುಪತಿಯಲ್ಲಿ ಜನ ಸೇರುವ ಹಾಗೆ ಇಲ್ಲಿಯೂ ಸೇರುತ್ತಾರೆ. ನೀವು ಅಲ್ಲಿಗೆ ಬರಬೇಕು’ ಎಂದು ಕರೆದರು. ನಾನು ಹೋದೆ.

‘ಅಲ್ಲಿರುವ’ ತಿರುಪತಿಗೆ ಇದು ಇನ್ನೊಂದು ತಿರುಪತಿ. ಅಂದರೆ ತಿರುಪತಿ ಅನ್ನೋದು ಒಂದೇ ಕಡೆ ಇರಬೇಕಾಗಿಲ್ಲ ಅನ್ನೋದು ನನಗೆ ನಿಜಕ್ಕೂ ಆಶ್ಚರ್ಯ ಹುಟ್ಟಿಸಿತು. ಹಾಗೆಂದು ಇದು ಪರ್ಯಾಯ ತಿರುಪತಿಯೂ ಅಲ್ಲ. ಅಲ್ಲಿರುವ ಯಾರೋ ಹೇಳಿದರು ‘ಅಲ್ಲಿರುವ ತಿರುಪತಿಯಲ್ಲಿ ದೇವರು ಕೈ ಹಿಡಿದುಕೊಂಡಿರುವ ರೀತಿಗೂ ಇಲ್ಲಿರುವ ರೀತಿಯೂ ಬೇರೆ ಬೇರೆ’. ನಮಗೆ ಕೈಯನ್ನು ಬೇರೆ ರೀತಿ ಇಟ್ಟುಕೊಂಡರೆ ಮತ್ತೊಂದು ದೇವರು ಸಿಕ್ಕಿ ಬಿಡುತ್ತಾರೆ.

ಕಿರುತಿರುಪತಿಯಲ್ಲಿ ನನಗೆ ವಿಶೇಷ ಅತಿಥಿ ಎಂಬ ಕಾರಣದಿಂದ, ಕ್ಯೂನಲ್ಲಿ ನಿಲ್ಲುವುದು ತಪ್ಪಿ ದೇವರ ದರ್ಶನವಾಯಿತು. ಅಲ್ಲಿರುವ ವೆಂಕಟೇಶ್ವರ ಕೈ ಹೇಗೆ ಇಟ್ಟುಕೊಂಡಿದ್ದ ಎಂಬುದನ್ನು ಮರೆತಿದ್ದೇನೆ. ದರ್ಶನ ಮುಗಿಸಿ ಹೊರ ಬರುವಾಗ ದರ್ಶನಕ್ಕಾಗಿ ನಿಂತಿದ್ದ ಕ್ಯೂನ ಉದ್ದಕ್ಕೂ ನಡೆದುಕೊಂಡು ಬಂದೆ. ನನ್ನನ್ನು ಆಗ ಕಾಡುತ್ತಾ ಇದ್ದದ್ದು ಒಂದೇ ಪ್ರಶ್ನೆ. ಇಷ್ಟೂ ಜನ ಹೇಗೆ ದೇವರ ದರ್ಶನ ಪಡೆಯುತ್ತಾರೆ?

ಕ್ಯೂ ಅನುಸರಿಸಿಯೇ ಹೋಗುತ್ತಿದ್ದಾಗ ಅಲ್ಲೊಂದು ನಡುವೆ ಕಪ್ಪಾದ ಕಲ್ಲಿತ್ತು. ಅದನ್ನು ಯಾರು ತಂದಿಟ್ಟಿದ್ದರೋ ಏನೋ? ಕೆಲವರು ಆ ಕಲ್ಲಿಗೇ ಅರಿಶಿನ, ಕುಂಕುಮ ಇಟ್ಟು ಕಾಯಿ ಒಡೆದು ಅಲ್ಲಿಂದಲೇ ಹಿಂದಿರುಗುತ್ತಿದ್ದರು. ಆ ತಿರುಪತಿಗೆ ಇಲ್ಲೊಂದು ತಿರುಪತಿ ಇದ್ದರೆ ಈ ತಿರುಪತಿಗೆ ಅಲ್ಲೊಂದು ಕಲ್ಲಿಟ್ಟು ಮತ್ತೊಂದು ತಿರುಪತಿ ಮಾಡಿದ್ದರು. ದೇವರ ದರ್ಶನಕ್ಕೆ ಗರ್ಭಗುಡಿಯವರೆಗು ಹೋಗಲೇ ಬೇಕಾಗಿಲ್ಲ. ಆ ಕಲ್ಲಿಗೆ ಕಾಯಿ ಒಡೆದರೆ ಅವರ ಸಂಕಲ್ಪ ಪೂರ್ತಿಯಾಗಿಬಿಡುತ್ತದೆ. ಅದು ಒಂದು ಕಲ್ಲು. ಕುಂಕುಮ ಅರಶಿನ ಹಚ್ಚಿದ ಕಲ್ಲು. ಅದರ ಮೇಲಷ್ಟು ಹೂವು. ಪಕ್ಕದಲ್ಲೊಂದು ಉರಿಯುವ ಹಣತೆ.. ನಾವು ಭಾವಿಸಿದರೆ ಅದು ದೇವರು. ಅಲ್ಲದಿದ್ದರೆ ಅಲ್ಲ. ಇದು ನಮ್ಮ ದೇವತಾ ಕಲ್ಪನೆ.

ನನ್ನ ಹಾಗೆ ಬುದ್ಧಿವಂತರಾಗುತ್ತಾ ಹೋದಂತೆ ಇದು ಅಸಾಧ್ಯವಾಗುತ್ತಾ ಹೋಗುತ್ತದೆ… ಅಥವಾ ಇದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಾಂಕೇತಿಕತೆಯನ್ನು ಸೈದ್ಧಾಂತಿಕವಾಗಿ ವಿವರಿಸಿಕೊಂಡು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ನಾನೂ ಅಷ್ಟೇ ವಿವರಿಸಿಕೊಳ್ಳುವ ಮೂಲಕ ಕಲ್ಲಿನಲ್ಲಿರುವ ದೇವರನ್ನು ಕಂಡುಕೊಳ್ಳುತ್ತಿದ್ದೇನೆ. ಇದು ನನ್ನ ಬಗ್ಗೆಯೇ ನಾನು ಮಾಡಿಕೊಳ್ಳುತ್ತಿರುವ ವಿಮರ್ಶೆ ಕೂಡಾ.

ನಂಬುವ ಶಕ್ತಿ ಅಂದರೆ ಆ ತಿರುಪತಿಗೆ ಈ ತಿರುಪತಿ, ಈ ತಿರುಪತಿ ಈ ಕಲ್ಲು. ಅದನ್ನು ಪೂಜೆ ಮಾಡಿದರೆ ಇದೂ ಕೂಡಾ ತಿರುಪತಿ ಎನ್ನುವುದನ್ನು ನಂಬುವವರು ಯಾರು? ನಾನು ಮೊದಲು ಹೇಳಿದ ಬರಿಗಾಲಿನಲ್ಲಿ ಶ್ರಾವಣ ಮಾಸ ಅಂತ ಓಡಾಡುತ್ತಾ ಇದ್ದರಲ್ಲ ಆ ಹೆಣ್ಣುಮಗಳಂಥವರು. ಅದನ್ನು ನೋಡಿದಾಗ ನನಗೆ ಇನ್ನೊಂದು ಆಶ್ಚರ್ಯವಾಗುತ್ತದೆ. ಈ ರೀತಿಯಲ್ಲಿ ದೇವತಾ ಕಲ್ಪನೆಗಳನ್ನು ಈ ದೇಶದಲ್ಲಿ ಉಳಿಸಿಕೊಂಡು ಬಂದವರನ್ನು ನಾವು ಅಸ್ಪೃಶರೆಂದೋ, ಶೂದ್ರರೆಂದೋ ಭಾವಿಸುತ್ತೇವೆ. ನಮ್ಮ ದೇಶದ ಸಂಸ್ಕೃತಿಯನ್ನು ಉಳಿಸಿದವರು ಮೇಲ್ಜಾತಿಯವರು ಮಾತ್ರವಲ್ಲ. ಉಳಿದ ಎಲ್ಲಾ ಜಾತಿಯವರು.

೧೦೨೦೦೬

* * *