Foreign Journalist : What do you think of modern western civilization?
Mahatma Gandhi: It’s a good idea.

ದೇವಸ್ಥಾನದ ಹಿಂಬದಿಯಲ್ಲಿ ತುಂಗೆಯ ದಡದಲ್ಲಿದ್ದ ನಾಗಸಂಪಿಗೆಯ ಮರದ, ಅಗಲವಾಗಿ ತೆರೆದುಕೊಂಡ ಹೂವುಗಳನ್ನು ದೋಟಿಯಲ್ಲಿ ಮೀಟಿ ಬೀಳಿಸಿ, ಅದರ ಕುಸುಮವನ್ನು ಅಂಗಳದಲ್ಲಿ ಒಣಗಿಸಿ ಆಯುರ್ವೇದ ಪಂಡಿತರೊಬ್ಬರಿಗೆ ಮಾರಿ ಪುಡಿಗಾಸು ಗಳಿಸುವುದು; ಬೆಳಿಗ್ಗೆ ಎದ್ದಿದ್ದೆ ಅಂಗೈ ಉಜ್ಜಿ ಕರಾಗ್ರದಲ್ಲಿ ಲಕ್ಷ್ಮಿಯೂ ಕರಮಧ್ಯದಲ್ಲಿ ಸರಸ್ವಿತಿಯೂ ಇದ್ದಾಳೆಂದೂ ಕಣ್ಣೆಗೊತ್ತಿಕೊಳ್ಳುವುದು, ನಂತರ ಮನೆ ಎದುರಿನ ಬಡಕಲು ತೆಂಗಿನ ಮರವನ್ನು ಕಲ್ಪವೃಕ್ಷವೆಂದು ಭಾವಿಸಿ ನೋಡಿ ಕೈಮುಗಿಯುವುದು, ಉಮಿಕರಿಯಿಂದ ಹಲ್ಲುಜ್ಜಲು ಹಿತ್ತಲಿಗೆ ಹೋಗುವಾಗ ಕೊಟ್ಟಿಗೆಯಲ್ಲಿ ಕಟ್ಟಿದ ಕೌಲಿಯೆನ್ನುವ ಕಪ್ಪು ದನದ ಹಣೆಯನ್ನು ಮುಟ್ಟಿ ಕಣ್ಣಿಗೊತ್ತಿಕೊಳ್ಳುವುದು, ಊಟಕ್ಕಿಂತ ಮುಂಚೆ ನನ್ನ ಅಜ್ಜ ಎಲೆಯ ಮೇಲೆ ಬಡಿಸಿದ ಪದಾರ್ಥಗಳಲ್ಲಿ ಒಂದಿಷ್ಟನ್ನು ಗೋಗ್ರಾಸವೆಂದು ಹಾಲು ಕರೆಯುವ ಕೌಲಿಗೆ ಎತ್ತಿಡುವುದು –  ಇವನ್ನೆಲ್ಲ ನಾನು ಈಗ ನೆನೆಯುವುದು ಹಳಹಳಿಕೆಗಾಗಿಯಲ್ಲ. ನಮ್ಮೆಲ್ಲರಿಗೂ ಸಂಕಟಕಾರಿಯಾದ ರಾಜಕೀಯವಾಗಿಬಿಟ್ಟ ಸಮಸ್ಯೆಯೊಂದನ್ನು ನಿಮ್ಮ ಎದುರು ಮಂಡಿಸುವುದಕ್ಕಾಗಿ.

ಆ ಕಾಲದಲ್ಲಿ ನಮ್ಮ ಗ್ರಾಮೀಣ ಜೀವನದಲ್ಲಿ ನಮ್ಮ ಸುತ್ತಮುತ್ತಲಿನ ಎಲ್ಲವೂ ಪವಿತ್ರವೆನ್ನುವ ಕಲ್ಪನೆ ಸಹಜವಾಗಿ ಇತ್ತು. ನಿತ್ಯ ಜೀವನದ ವ್ಯವಹಾರದ ಅಗತ್ಯ ಎಲ್ಲವೂ ಪವಿತ್ರ ಎನ್ನುವ ಭಾವನೆಯನ್ನು ಪೋಷಿಸುವಂತಿತ್ತು. ಈ ಭಾವನೆಯ ಕೇಂದ್ರದಲ್ಲಿ ಇದ್ದದ್ದು ಗೋವು; ಮಲೆನಾಡಿನಲ್ಲಿ ಎಲ್ಲೆಲ್ಲು ಕಾಣಸಿಗುತ್ತಿದ್ದ ಕುಳ್ಳುದನಗಳು.

ಇಲ್ಲೊಂದು ಅಡ್ಡಮಾತು ಹೇಳಿ ಮುಂದುವರಿಯಬೇಕು. ನಮ್ಮ ಮನೆಯ ದನ ಪವಿತ್ರ ಎನ್ನಿಸಿದರೆ, ಪರರ ಮನೆಯ ದನ ಪೀಡೆಯೆಂದೂ ಅನ್ನಿಸುತ್ತಿತ್ತು. ಎಂತಹ ಬೇಲಿಯನ್ನಾದರೂ ಹಾರಿ ಬರಬಲ್ಲ ಉತ್ಕಟ ಹಸಿವಿನೊಂದಿಗೆ ಹುಟ್ಟಿದ ಛಲದ ದನಗಳು ಇವು. ನಮಗಾಗದವರ ಮನೆಯ ದನಗಳ ಉಪಟಳ ಸಹಿಸಲಾರದೆ ಅವುಗಳನ್ನು ದೊಡ್ಡಿಗೆ ಅಟ್ಟಿ ಬರುವುದೂ ಇತ್ತು. ದೊಡ್ಡಿಯಿಂದ ಬಿಡಿಸಿಕೊಳ್ಳು ಯಜಮಾನ ದಂಡ ತೆತ್ತಬೇಕು; ಪ್ರತೀಕಾರವಾಗ ನಮ್ಮ ಮನೆಯ ದನವನ್ನು ಅವನು ದೊಡ್ಡಿಗ ಅಟ್ಟಲು ಸಮಯ ಹೊಂಚಬೇಕು.

ಮಳೆಗಾಲದಲ್ಲಿ ಬತ್ತದ ಗದ್ದೆ ಹಸಿರಾದಾಗ ದನ ಕಾಯುವವನಿಗೆ ಈ ಬಿರುಸಾದ ಓಟದ ಕಟ್ಟುಮುಟ್ಟಾದ ಮೈಕಟ್ಟಿನ ದನಗಳು ಮತ್ತು ಅವುಗಳ ಗಂಡು ಗುಡ್ಡಗಳು ದುಃಸ್ವಪ್ನವೇ ಸರಿ. ಶಾಂತವೇರಿ ಗೋಪಾಲಗೌಡರು ಹೇಳುತ್ತಿದ್ದ ಕಥೆಗಳಲ್ಲಿ ಅವರ ದನಕಾಯುವ ದಿನಗಳ ಗೋಳಾಟಗಳು ರೋಚಕವಾದವು. ಎಲ್ಲೋ ಗುಡ್ಡದ ಮೇಲೆ ಮೇಯುವ ದನಗಳು ಇದ್ದಕ್ಕಿದ್ದಂತೆ ದೂರ ದುರುಗಟ್ಟಿ ನೋಡುತ್ತ ಮೂಗಿನ ಹೊಳ್ಳೆ ಕಿಸಿದು ಪಯಿರಿನ ವಾಸನೆ ಗ್ರಹಿಸಿ ಓಡತೊಡಗುತ್ತಿದ್ದುವಂತೆ. ದನಕಾಯುವವನು ತನಗೆ ಮುಂದೆ ರೈತನಿಂದ ಬೀಳುವ ಏಟನ್ನು ತಪ್ಪಿಸಿಕೊಳ್ಳಲು ಬಾಲವೆತ್ತಿ ಓಡುವ ಈ ದನಗಳ ಹಿಂದೆ ಓಡಬೇಕು. ನೋಡುನೋಡುತ್ತ ಇದ್ದಂತೆ ಅವು ಛಂಗನೆ ನೆಗೆದು ಬೇಲಿ ಹಾರಿ ಹಸಿರಾದ ಪಯಿರಿಗೆ ಬಾಯಿ ಕೊಟ್ಟಾಯಿತೆಂದರೆ ದನಕಾಯುವವನ ಗತಿ ಮುಗಿಯಿತು.

ಈ ಎಲ್ಲ ಗೋಳುಗಳ ನಡುವೆ ನನ್ನ ದೊಡ್ಡಮ್ಮನಿಗೆ ದನಗಳೆಂದರೆ ಪ್ರಾಣ. ಕೊಟ್ಟಿಗೆಯಲ್ಲಿ ಅವುಗಳ ಎದುರು ನಿಂತು ಅವಳು ಮಾತಾಡುತ್ತಿದ್ದಳು, ಬೈಯುತ್ತಿದ್ದಳು. ಮುದ್ದಿಸುತ್ತಿದ್ದಳು. ತನ್ನ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದಳು. ಅವುಗಳಿಗೆ ತಾನು ಹೇಳುವುದೆಲ್ಲ ಗೊತ್ತಾಗುತ್ತದೆ ಎಂದೇ ತಿಳಿಯುತ್ತಿದ್ದರು. ದೊಡ್ಡಮ್ಮನನ್ನು ದಡ್ಡಮ್ಮ ಎಂದು ಹಾಸ್ಯದಲ್ಲಿ ಚೋಟುದ್ದದ ನಾವು ಕರೆದಾಗ ದಿವ್ಯವಾಗಿ ನಗುತ್ತಿದ್ದಳು.

ಈ ದನಗಳ ಬಗ್ಗೆ ಬರೆಯ ಹೊರಟ ನನಗೆ ಇದ್ದಕ್ಕಿದ್ದಂತೆ ಬಾಲ್ಯದಲ್ಲಿ ಪರಿಚಯವಾಗಿದ್ದ ಒಂದು ಪದ್ಯ ನೆನಪಾಯಿತು. ಪುಣ್ಯಕೋಟಿಯ ಪ್ರಸಿದ್ಧ ಹಾಡಲ್ಲ; ಇದು ಇನ್ನೊಂದು (ಪುಣ್ಯ ಕೋಟಿಯ ಗೋವಿನ ಹಾಡು ಓದುವಾಗ ಮಾತ್ರ ನನ್ನ ಜಬರುದಸ್ತಿನ ತಂದೆ ನನ್ನಿದುರು ಕಣ್ಣೀರಿಟ್ಟಿದ್ದರೆಂದು ನೆನಪು). ‘ಇಟ್ಟರೇ ಸಗಣಿಯಾದೆ, ತಟ್ಟಿದರೆ ಕುರುಳಾದೆ, ಸುಟ್ಟರೆ ನೊಸಲಿನ ವಿಭೂತಿಯಾದೆ’ ಎಂದು ಮೊದಲಾಗುವ ಈ ಪದ್ಯದ ಮುಂದಿನ ಸಾಲುಗಳು ನೆನಪಾಗಲಿಲ್ಲ. ಗೆಳೆಯ ಬೋಳುವಾರು ಸಂಪಾದಿಸಿದ ನನ್ನ ಪಾಲಿಗೆ ಅತ್ಯುದ್ಭುತವಾದ ಮಕ್ಕಳ ಪದ್ಯಗಳ ಸಂಕಲನವೊಂದಿದೆ. ಅದರಲ್ಲಿ ಈ ಪದ್ಯವಿದೆ. ೧೯ನೇ ಶತಮಾನದ ಪೂರ್ವಾರ್ಧದಲ್ಲಿದ್ದ ಎಸ್‌.ಜಿ. ನರಸಿಂಹಾಚಾರ್‌ಬರೆದ ‘ಗೋವಿನ ಚರಿತ್ರೆ’ ಇದು.

ಬೇಸಾಯದ ಬದುಕಿನ ಲೋಕದ ಅತ್ಯುತ್ತಮ ರೂಪಕ ಈ ಕವನ. ಕೃಷಿಕಾರನ ಇಡೀ ಬದುಕಿಗೆ ದನ ಒದಗಿ ಬರುತ್ತದೆ. ಯಾವ ಯಾವ ರೂಪದಲ್ಲಿ ಎಂಬುದನ್ನು ಈ ಕವನ ಮನಮುಟ್ಟುವಂತೆ ಹೇಳುತ್ತದೆ. ಇಲ್ಲಿ ದನವೇ ಮಾತಾಡುತ್ತದೆ; ನನ್ನ ದೊಡ್ಡಮ್ಮನ ಜೊತೆ ಮಾತಾಡಿದಂತೆ! ‘ನೀನಾರಿಗಾದೆಯೋ ಎಲೆ ಮಾನವಾ’ ಎಂದು ನಮ್ಮನ್ನು ಹಂಗಿಸಿ ‘ಹರಿ ಹರಿ ಗೋವು ನಾನು’ ಎಂದು ತನ್ನ ಪರಿಚಯವನ್ನು ಮಾಡಿಕೊಳ್ಳುತ್ತದೆ.

ಕರೆದರೆ ಹಾಲಾಗುತ್ತದೆ, ಹೆಪ್ಪಾಗಿ ಮೊಸರಾಗುತ್ತದೆ. ಕಡೆದಾಗ ಬೆಣ್ಣೆಯಾಗುತ್ತದೆ, ಕಾಯಿಸಿದರೆ ತುಪ್ಪವಾಗುತ್ತದೆ. ಹಳ್ಳಿಗಳಲ್ಲಿ ಮರ್ಯಾದಸ್ತರೆಂದು ತಿಳಿದುಕೊಂಡವರು ಹಾಲನ್ನು ಮಾರಲು ಹೋಗುವುದಿಲ್ಲ. ಆದರೆ ತುಪ್ಪ ಮಾಡಿ ಮಾರುವುದುಂಟು. ಕಷ್ಟಕಾಲದಲ್ಲಿ ಒದಗಲೆಂದು ಒಂದಿಷ್ಟು ಕಾಸನ್ನು ಬಚ್ಚಿಡುತ್ತಿದ್ದ ನನ್ನ ಅಮ್ಮ ಘಮಘಮಿಸುವಂತೆ ಕಾಯಿಸಿದ ಬೆಣ್ಣೆಯನ್ನು ತುಪ್ಪ ಮಾಡಿ ಪೇಟೆಗೆ ಸ್ಕೂಲಿಗೆಂದು ಹೋಗುವಾಗ ನಮ್ಮ ಕೈಯಲ್ಲಿ ಕಳುಹಿಸಿ ಅಂಗಡಿಯಲ್ಲಿ ಮಾರಿಸುತ್ತಿದ್ದುದು ನೆನಪಾಗುತ್ತದೆ. ಆದ್ದರಿಂದ ಬಾಯಾರಿ ಮನೆಗೆ ಬಂದ ಯಾರಿಗಾದರೂ ಯಥೇಚ್ಛವಾಗಿ ನೀರುಮಜ್ಜಿಗೆ ದೊರೆಯುತ್ತಿತ್ತು.

ಕೆಲವು ವರ್ಷಗಳ ಹಿಂದೆ ರಾಮಯ್ಯ ಎನ್ನುವ ಹಣ್ಣ ಹಣ್ಣು ಮುದುಕನೊಬ್ಬ ಮನೆಗೆಲಸಕ್ಕೆ ಬಂದಾಗ ಆಡಿದ ಮಾತೊಂದು ನೆನಪಾಗುತ್ತದೆ. ಆಧುನೀಕರಣದಿಂದ ದರಿದ್ರಗೊಂಡ ಬಡವರ ಸ್ಥಿತಿಯನ್ನು ಅವನು ವರ್ಣಿಸಿದ್ದು ಹೀಗೆ: ‘ಒಡೇರೆ, ಅದೇನೋ ಈ ಕಾಲದಲ್ಲಿ ಡೇರಿ ಪಾರಿ ಅಂತ ಏನೋ ಶುರುವಾಗಿ ಬಿಟ್ಟು ನಿಮ್ಮಂಥವರ ಮನೇಗೆ ಬಾಯಾರಿ ಬಂದರೆ ನೀರು ಮಜ್ಜಿಗೆಗೂ ಗತಿಯಿಲ್ಲದೇ ಹೋಯ್ತು!’

ನರಸಿಂಹಾಚಾರರಿಗೆ ೧೯ನೇ ಶತಮಾನದಲ್ಲಿ ಕಂಡ ಜೀವವಿರುವ ಗೋವು ಹಾಲು, ಮೊಸರು, ತುಪ್ಪಗಳಿಗಾಗಿ ಮಾತ್ರವಲ್ಲದೆ ಸತ್ತಮೇಲೂ ಉಪಯುಕ್ತ ಪ್ರಾಣಿಯಾಗಿತ್ತು. ಹೊಳೆ ಹಾಯಲು ಅದು ಹರಿಗೋಲಾಗಿ, ಉತ್ಸವದ ರಾಯಭೇರಿಗೆಯಾಗಿ, ರಾಯರಾ ಕಾಲಿಗೆ ಮುಳ್ಳೊತ್ತುವಾಗಿ (ಟಾರು ಹಾಕದ ರಸ್ತೆಯ ಮೇಲೆ ನಡೆಯಲು ಬಳಸುವ ಮೆಟ್ಟಿಗೆ ಎಷ್ಟು ಸಮರ್ಪಕವಾದ ಶಬ್ದ ಇದು!) ದನ ಒದಗುತ್ತಿತ್ತು. ಪೋಲಿ ಅಲೆದು ಬೇಲಿ ಹಾರಿ ಅತಿಕ್ರಮಣದ ಅಪರಾಧಕ್ಕೊಳಗಾಗಿ ದೊಡ್ಡಿಯ ಜೈಲು ಸೇರುವ ದನಗಳೂ ಈ ನಮ್ಮ ಕವಿಗೆ ‘ಹಾದಿ ಬೀದಿಯಲ್ಲಿರುವ ಕಸದ ಹುಲ್ಲನ್ನು ಮೇದು ಬಂದು’ ಮನೆಗೆ ಅಮೃತವನ್ನು ಕೊಡುವ ಕರುಣಾಮಯಿಯೆಂದೇ ಕಾಣುತ್ತಿತ್ತು. ಪರರ ದನಗಳನ್ನು ಜರಿಯುವವರಿಗೂ ಹೀಗೂ ಕಾಣಬಹುದಾದ ಮನಸ್ಸಿನ ಔದಾರ್ಯದ ದಾಕ್ಷಿಣ್ಯವಿತ್ತು. ‘ಅಂದರೆ, ನಿತ್ಯದ’ ದನದ ತರಳೆ ತಾಪತ್ರಯಗಳ ಜೊತೆಗೇ ಒಳಗಣ್ಣಿಗೆ ಕಾಣುವ ‘ಸತ್ಯದ ದನ’ವೂ ಒಂದಿತ್ತು. ಓದಲು ಬಾರದ ನನ್ನ ದೊಡ್ಡಮ್ಮನೊ, ಕವಿ ನರಸಿಂಹಾಚಾರರೂ ಬೇಸಾಯ ಲೋಕದ ಈ ಹಸುವೆಂಬ ದೇವತೆಯ ಪೂಜಾರಿಗಳಾಗಿದ್ದರು. ಯಾಕೆಂದರೆ ನಿಜದಲ್ಲೂ ನಮ್ಮ ಬೇಸಾಯ ಕ್ರಮದ ಜೀವನಾಡಿಯಾಗಿ ಗೋವು ಇತ್ತು – ಗಾಡಿ ಎಳೆಯುವ, ನೇಗಿಲು ಉಳುವ ಎತ್ತಾಗಿ, ಕೊಂಚವಾದರೂ ಅತ್ಯಂತ ರುಚಿಕರವಾದ ಹಾಲು ಕೊಡುವ ಹಸುವಾಗಿ, ಮುದಿಯಾದರೂ ಕೊಟ್ಟಿಗೆಯ ತಾಯಾಗಿ, ಗೊಬ್ಬರದ ಸಮೃದ್ಧಿಗೆ ಅಗತ್ಯವಾದ ಇನ್ನೊಂದು ಬಾಲವಾಗಿ ಇರುತ್ತಿತ್ತು. ಮನೆಯಲ್ಲಿ ಮುದಿಯಾದ ಅಜ್ಜಿಯೂ ಅಜ್ಜನೂ ಹಾಗೆಯೇ. ಬೇಸಾಯ ಜೀವನ ಕ್ರಮದಲ್ಲಿ ಅಗತ್ಯ ಜೀವಿಗಳಾಗಿದ್ದರು. ಹಸುಗಳೆಲ್ಲ ಕೊಟ್ಟಿಗೆ ಸೇರಿದವೆ, ಗೋಧೂಳಿ ಸಂಜೆಯಲ್ಲಿ? ಎಂದು ಅಜ್ಜ ಎಣಿಸುತ್ತ ಮನೆಯ ಹಿತ್ತಲಲ್ಲಿ ನಿಂತಿದ್ದರೆ, ಅಜ್ಜಿ ಮನೆಯಲ್ಲಿ ಏನನ್ನೂ ಎಸೆಯದೆ ಕಲಗುಚ್ಚು ಮುರಗಳ ತಯ್ಯಾರಿಯಲ್ಲಿ ಇಡೀ ದಿನ ಸಂಭ್ರಮಿಸುತ್ತಿದ್ದಳು.

ವ್ಯವಹಾರದಲ್ಲಿ ತನ್ನ ಅನುಕೂಲಕ್ಕಾಗಿ ಮನುಷ್ಯ ಯಾವತ್ತೂ ಪ್ರಾಯಶಃ ಕೇವಲ ಮನುಷ್ಯನೇ. ಕಾಲವಾದ ಪೂಜ್ಯ ಹಿರಿಯರನ್ನು ವೈತರಿಣೀ ಎಂಬ ನದಿಯನ್ನು ದಾಟಿಸಿ ಚಿರಶಾಂತಿಯ ಪರಂಧಾಮದಲ್ಲಿ ನೆಲಸುವಂತೆ ಮಾಡುವ ಗೋವನ್ನು ಆ ಹಿಂದಿನ ಕಾಲದಲ್ಲೂ ನಾವು ಹೇಗೆ ಮೋಸ ಮಾಡುತ್ತ ಇದ್ದೆವು ಎಂಬುದನ್ನು ಕವಿ ಹೇಳಲು ಮರೆಯುವುದಿಲ್ಲ:

ಕರು ಸತ್ತ ಬೇಗೆಯಲಿ ನಾ ಬೇಯುತ್ತಿದ್ದರೆ
ಮರುಕವಿಲ್ಲದೆ ಸತ್ತ ಕರುವ ತಂದು
ತಿರುತಿರುಗಿ ಮುಂದಿಟ್ಟು ಹಾಲು ಕರೆವೆ ನೀನು

ಎಂದು ಬಾಯಿಯಿಲ್ಲದ ಹಸುವಿನ ನಿಂದಿಸುವ ಬಾಯಿಯಾಗುತ್ತಾನೆ ನಮ್ಮ ಹಿರಿಯ ಕವಿ.

* * *

ಅರವತ್ತರ ದಶಕದಲ್ಲಿ ಇಂಗ್ಲೆಂಡಿಗೆ ಓದಲು ಹೋದ ನಾನು ಅಲ್ಲಿಯ ದನವೊಂದನ್ನು ನೋಡಿದ್ದೇ ಇದು ಯಾವುದೋ ಒಂದು ಪ್ರಾಣಿ, ನಮ್ಮ ದನವಲ್ಲ ಎನ್ನಿಸಿತ್ತು. ಅಷ್ಟು ದೊಡ್ಡ ಪ್ರಾಣಿಗೆ ಅದೆಷ್ಟು ದೊಡ್ಡ ಕೆಚ್ಚಲು! ಹಾಲು ಕೊಡುವುದನ್ನು ಬಿಟ್ಟು ನಮ್ಮ ದನದಂತೆ ಬೇರೆ ಏನನ್ನೂ ಅದು ಮಾಡದು. ಅದರ ಗಂಡು ಕರು ಗಾಡಿ ಎಳೆಯಲಾರದು ಉಳಲಾರದು ಅದರ ಬೆನ್ನು ಸಪಾಟು. ಅಷ್ಟು ಗಾತ್ರದ ಕೆಚ್ಚಲಿನ ಅಷ್ಟು ದೊಡ್ಡ ದನ ಅದೆಷ್ಟು ತಿನ್ನುತ್ತದೆ ಎಂದರೆ ಅದು ಕೊಡುವ ಹಾಲಿನ ಪ್ರಮಾಣ ಅದರ ಇಳಿ ವಯಸ್ಸಿನಲ್ಲಿ ಕಡಿಮೆಯಾದದ್ದೇ ಅದನ್ನು ಕೊಲ್ಲದೇ ವಿಧಿಯಿಲ್ಲ. ಕೊಂದ ಪಾಪ ತಿಂದು ಪರಿಹಾರವಾಗಬೇಕಲ್ಲವೇ? ಬ್ರಿಟಿಷರ ಮೆಚ್ಚಿನ ಮಾಂಸ ‘ಬೀಫ್‌ಸ್ಟೀಕ್‌’. ಮುದಿ ದನಗಳನ್ನು ಸಾಕಿಕೊಂಡಿರುವುದು ಖಂಡಿತ ಎಕನಾಮಿಕ್‌ಅಲ್ಲ.

ಇಟಲಿಯಲ್ಲಿ ನಾನು ರೈಲೊಂದರಲ್ಲಿ ಪ್ರಯಾಣ ಮಾಡುತ್ತಿದ್ದಾಗ ಒಂದು ರೈತ ಕುಟುಂಬದ ಪರಿಚಯವಾಯಿತು. ನನ್ನ ಭಾಷೆ ಅವರಿಗೆ ಗೊತ್ತಿಲ್ಲ; ಅವರ ಭಾಷೆ ನನಗೆ ಗೊತ್ತಿಲ್ಲ. ಆದರೂ ಸ್ನೇಹಿತರಾದೆವು. ಸನ್ನೆಗಳಲ್ಲಿ ಮಾತಾಡಲು ಶುರು ಮಾಡಿದೆವು. ಇಟಾಲಿಯನ್ ರೈತ ಎದ್ದು ಬಾಗಿ, ಎರಡು ಹಸ್ತಗಳನ್ನೂ ತಲೆಯ ಮೇಲಿನ ಕೋಡಾಗಿ ತೋರಿಸಿ, ಹಸುವಿನಂತೆ ಶಬ್ದ ಮಾಡಿ, ಕತ್ತನ್ನು ಕಡಿಯುವಂತೆ ತೋರಿಸಿ ಪ್ರಶ್ನಾರ್ಥಕವಾಗಿ ಮುಷ್ಠಿ ಅಲ್ಲಾಡಿಸಿದ. ‘ನೀವೇಕೆ ಹಸುವನ್ನು ಕಡಿಯುವುದಿಲ್ಲ’ ಎಂದು ಕೇಳುತ್ತ ಇದ್ದಾನೆಂದು ನನಗೆ ಗೊತ್ತಾಯಿತು. ನಾನು ಹೇಗೆ ಸನ್ನೆ ಭಾಷೆಯಲ್ಲಿ ನಮ್ಮ ದೇಶದ ಬೇಸಾಯದ ಹಸುವಿನ ಎಕಾನಮಿಯನ್ನಾಗಲೀ, ಅದರಿಂದ ಹುಟ್ಟಿದ ಪಾವಿತ್ರ್ಯದ ಕಲ್ಪನೆಯನ್ನಾಗಲೀ ಅವನಿಗೆ ವಿವರಿಸಲಿ ಎಂದು ತಿಳಿಯಲಿಲ್ಲ. ನಾನು ವಿವರಿಸಲು ಪಟ್ಟ ಪಾಡನ್ನು ನೋಡಿ ಅವನು ಕನಿಕರಪಡುತ್ತ ಸ್ನೇಹದಲ್ಲಿ ನಕ್ಕು ಸುಖಿಸಿದ.

ಕೋಳಿಗಳನ್ನು ಕಾನ್ಸನ್‌ ಟ್ರೇಶನ್‌ ಕ್ಯಾಂಪಿನಂತಹ ಪುಟ್ಟಗೂಡುಗಳಲ್ಲಿ ಹುಟ್ಟಿನಿಂದ ಸಾವಿನ ತನಕ ಎಂದೂ ಚಲಿಸದಂತೆ ಕೂರಿಸಿ, ಸತತ ತಿನ್ನಿಸಿ, ಅವು ಇಡುವ ಮೊಟ್ಟೆ ಕಡಿಮೆಯಾದದ್ದೇ ಅವನ್ನು ಮಾಂಸ ಮಾಡಿ ಮಾರುವ ಎಷ್ಟೋ ಸಸ್ಯಾಹಾರಿ ಸಾಹುಕಾರನನ್ನು ನಾನು ನೋಡಿದ್ದೇನೆ. ಅದೊಂದು ವಿಚಿತ್ರ ಪ್ರಾಣಿಹಿಂಸೆ ಎಂಬ ಪಾಪಭಾವನೆ ಕಿಂಚಿತ್ತೂ ಈ ಸದ್‌ ಗೃಹಸ್ಥರನ್ನು ಕಾಡುವುದಿಲ್ಲ.

ಉಳುವುದಾಗಲೀ, ಎತ್ತಿನ ಬಂಡಿಯಲ್ಲಿ ಸಾಗಣೆ ಮಾಡುವುದಾಗಲೀ, ಗೊಬ್ಬರ ಹಾಕಿ ಬೆಳೆಯುವುದಾಗಲೀ ನಮ್ಮ ಟ್ರಾಕ್ಟರುಗಳ, ರಾಸಾಯನಿಕ ಗೊಬ್ಬರಗಳ ಈ ಕಾಲದಲ್ಲಿ ಲಾಭದಾಯಕವಾಗಿ ಉಳಿದಿಲ್ಲ. ಕೊಂಚ ಹಾಲು ಕೊಡುವ, ಆದರೆ ಹಲವು ಉಪಯೋಗಗಳನ್ನು ಪಡೆದ ನಮ್ಮ ಹಿಂದಿನ ದನಗಳು ಈಗ ಕ್ರಮೇಣ ಮಾಯವಾಗುತ್ತಿವೆ. ಅವುಗಳನ್ನು ಸಾಕಿ ಹಾಲಿನ ಡೇರಿ ನಡೆಸುವಂತಿಲ್ಲ. ಹಾಲಿನ ಉತ್ಪಾದನೆ ಒಂದು ಉದ್ಯೋಗವಾದಾಗ ಜರ್ಸಿ ಹಸುಗಳೇ, ಆಧುನಿಕ ತಳಿಗಳೇ ಬೇಕಾಗುತ್ತವೆ. ಆದರೆ ಈ ದನಗಳು ಗಂಡು ಕರು ಹಾಕಿದರೆ ಅವುಗಳಿಂದ ಯಾವ ಪ್ರಯೋಜನವೂ ಇಲ್ಲ. ಇರುವುದನ್ನೆಲ್ಲ ತಿಂದು ಅವು ಕೊಬ್ಬಿ ಬೆಳೆಯುತ್ತವೆ. ಹಸುಗಳೂ ಅಷ್ಟೆ. ಅವಕ್ಕೆ ವಯಸ್ಸಾಗಿ ಹಾಲಿನ ಇಳುವರಿ ಕಡಿಮೆಯಾದಾಗ ಅವನ್ನು ಸಾಕುವುದು ‘ಎಕನಾಮಿಕ್’ ಅಲ್ಲ. ಗೋವನ್ನು ಪವಿತ್ರವೆಂದು ತಿಳಿಯುವ ನಾವೇ ಅವನ್ನು ಮಾರುತ್ತೇವೆ. ಅವುಗಳ ಪಾಡು ಮುಂದೇನು ಎಂದು ನಮಗೇ ನಾವು ಕೇಳಿಕೊಳ್ಳುವುದು ಇಷ್ಟವಾಗುವ ಸಂಗತಿಯಲ್ಲ. ಯಾವ ಉದ್ಯೋಗವೂ ಇಲ್ಲದ ಬಡಪಾಯಿಗಳು ಈ ಬಡಪಾಯಿ ದನಗಳನ್ನು ಬಡಪಾಯಿ ರೈತರಿಂದ ಕೊಂಡು ಕಸಾಯಿಖಾನೆಗೆ ಒಯ್ಯುವವರಾಗುತ್ತಾರೆ. ಇವರನ್ನು ಹಿಡಿದು ದಂಡಿಸಿ ಹಿಂಸಿಸುವ ಬಡವರೇ ಆದ ಕ್ರೂರ ಯುವಜನರು ಎಲ್ಲೆಲ್ಲೂ ಹೊಂಚುತ್ತಿರುತ್ತಾರೆ. ಇವರು ಕೋಮುವಾದದ ವೋಟ್ ಬ್ಯಾಂಕನ್ನು ಯಾರೋ ಪುಂಡು ರಾಜಕಾರಣಿಗಳಿಗೆ ಬೆಳೆಸಿಕೊಡುವ ಮಧ್ಯವರ್ತಿ ಪುಢಾರಿಗಳಾಗುತ್ತಾರೆ.

ಗಾಂಧಿ ಮತ್ತು ಮಾರ್ಕ್ಸ್‌ರನ್ನು ತನ್ನೊಳಗೆ ಹೊಂದಾಣಿಸಿಕೊಳ್ಳಲು, ನಮ್ಮ ಹಲವು ಬೆಳೆಯರಂತೆಯೇ ಸತತ ಪ್ರಯತ್ನಿಸುತ್ತಿದ್ದ ಅತ್ಯವಸರದ ಉತ್ಕಟ ಮಾತುಗಾರ, ಎಲ್ಲರ ಪ್ರೀತಿಯ ಲೇಖಕ ಮುಲ್ಕ್‌ ರಾಜ್ ಆನಂದ್ ಒಮ್ಮೆ ಮೈಸೂರಿಗೆ ಬಂದವರು ನನ್ನ ಹೆಗಲಿನ ಮೇಲೆ ತನ್ನ ಎರಡೂ ಕೈಗಳನ್ನು ಇರಿಸಿ ಪ್ರವಾದಿಯಂತೆ ಹೇಳಿದ್ದರು: ‘ಹೌದು, ನಮಗೆ ಗೋವು ಪವಿತ್ರ ಎನಿಸುತ್ತದೆ. ಆದರೆ ಹಾಲಿನ ಉತ್ಪಾದನೆಗೆಂದು ಅವುಗಳ ಸಂಖ್ಯೆ ಅಧಿಕವಾಗುತ್ತಾ ಹೋದರೆ ನಾವು ಗೋ ಭಕ್ಷಕರಾಗುವುದು ಅನಿವಾರ್ಯವಾಗುತ್ತದೆ. ಇಲ್ಲವಾದರೆ ಅವು ನಮ್ಮನ್ನು ತಿಂದು ಬಿಡುತ್ತವೆ. ಎಲ್ಲಿದೆ ಹಾಲು ಕೊಡದ ಅವುಗಳಿಗೆ ಮೇವು? ಗಾಂಧಿ ಗೋವನ್ನು ಕರುಣೆಯ ಕಾವ್ಯ ಎನ್ನುತ್ತಾರೆ. ಬೇಸಾಯ ಕೇಂದ್ರಿತ ಜೀವನ ವ್ಯವಸ್ಥೆಯಲ್ಲಿ ಅದು ನಿಜ. ಆದರೆ ನಾವು ಕೈಗಾರಿಕೋದ್ಯಮದಲ್ಲಿ ಆಧುನಿಕವಾಗುತ್ತಾ ಹೋದಂತೆ ನಮ್ಮ structure of feelings ಭಾವನೆಗಳ ಹೊಂದಾಣಿಯ ಸ್ವರೂಪದಲ್ಲಿಯೇ ಬೆಳವಣಿಗೆಗಳಾಗಬೇಕಾಗುತ್ತದೆ ಇತ್ಯಾದಿ……

ಯಂತ್ರ ನಾಗರೀಕತೆಯಲ್ಲಿ ಭಾರತದ ದಲಿತರ ಮಲ ಹೊರುವ ಕಾಯಕಕ್ಕೆ ಕೊನೆಯನ್ನು ಕಂಡಿದ್ದ ಆನಂದರು ಭಾವನೆಯಲ್ಲಿ ಗಾಂಧಿ ಪ್ರಿಯರು, ಚಿಂತನೆಯಲ್ಲಿ ಮಾರ್ಕ್ಸ್‌ವಾದಿಗಳು, ಎಪ್ಪತ್ತರ ದಶಕದಲ್ಲಿ ಸೋವಿಯತ್‌ಯೂನಿಯನ್ ಮತ್ತು ಚೀನಾದ ಕ್ರೌರ್ಯಗಳನ್ನು ಕಂಡ ನಂತರವೂ ಮುಗ್ಧವಾಗಿ ಪ್ರಗತಿಶೀಲ ಅಭಿವೃದ್ಧಿಯ ಆಧುನಿಕತೆಯ ಕನಸು ಕಾಣುವುದು ನಮ್ಮೆಲ್ಲರಿಗೂ ಸಾಧ್ಯವಿತ್ತು. ಜಾಗತೀಕರಣದ ಈ ದಿನಗಳಲ್ಲಿ ಆನಂದರು ಏನೆನ್ನುತ್ತ ಇದ್ದರೋ?

ಗಾಂಧಿಗೆ ಬೇಕಾದ್ದು ಆಧುನಿಕ ನಾಗರೀಕತೆಯ ಬಹುತ್ಪನ್ನವಲ್ಲ; ಬಹುಜನರಿಂದ ಆಗುವ ಉತ್ಪನ್ನ. ಭಾರತದಲ್ಲಿ ಬಹುಜನರನ್ನು ಉತ್ಪನ್ನದಲ್ಲಿ ತೊಡಗಿಸುವುದು ಕೃಷಿ ಆಧಾರಿತ ಜೀವನ ಕ್ರಮ. ಇವತ್ತಿಗೂ ಕೃಷಿ ಉತ್ಪನ್ನ ಮಾತ್ರ. ನಾವು ನಿಸರ್ಗದ ಜೊತೆ ಹೆಣಗಿ ಸಹಕರಿಸಿ ಮಾಡುವ ಉತ್ಪನ್ನ. ನಿಜವಾದ ಉತ್ಪನ್ನ ಇರುವುದನ್ನು ಬದಲಿಸುವುದು, ಪರಿಷ್ಕರಿಸುವುದು, ತೀಡಿ ತಿದ್ದುವುದು, ಇಲ್ಲದ್ದನ್ನು ಇರುವುದರಿಂದ ಉಂಟು ಮಾಡುವುದು ಕೈಗಾರಿಕೆ. ಕೃಷಿ ಈಗಿನ ಮನಮೋಹಕವಾದ ಇನ್‌ ಫಾರ್ಮೇಶನ್‌ ಟೆಕ್ನಾಲಜಿಯಂತಲ್ಲ. ಜನಸಮುದಾಯ ಇನ್ನು ಮುಂದೆ ಬಟ್ಟೆ ಉಡಲು, ತಿಂಡಿ ತಿನ್ನಲು ಊಟ ಮಾಡಲು ಗದ್ದೆಗಳಲ್ಲಿ ಉತ್ತಿ ಬಿತ್ತಿ ಕಳೆ ತೆಗೆದು ನೀರು ಹಾಯಿಸಿ ಸಗಣಿಗೊಬ್ಬರ ಬಳಸಿ ದುಡಿಯುವ ಇಂಗ್ಲಿಷ್‌ ಬಾರದ ನೇಗಿಲ ಯೋಗಿಯ ಕಡೆ ನೋಡಬೇಕಿಲ್ಲ. ಬಯೋ ಟೆಕ್ನಾಲಜಿ ಮುಖೇನ ಯಥೇಚ್ಛವಾಗಿ ಕೃತಕ ಆಹಾರವನ್ನೂ ಬಟ್ಟೆಯನ್ನೂ ಉತ್ಪತ್ತಿ ಮಾಡುವ ಮಾಯಾಲೋಕದ ಕಾರ್ಪೋರೇಟ್‌ ಸಂಸ್ಥೆಗಳ ವಶದಲ್ಲಿ ಈ ನಮ್ಮ ಜಮೀನುಗಳು ಇರುತ್ತವೆ. ಸಣ್ಣಪುಟ್ಟ ಕೃಷಿಕರಲ್ಲದೆ ನಮ್ಮೆಲ್ಲರ ಕೋಪಕ್ಕೆ ಒಳಗಾದ ದಢಿಯ ಜಮೀನುದಾರರೂ ನಾಶವಾಗಲಿದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಂಡು ಸತ್ತರೆ ಜಮೀನುದಾರರು ಅವನ ಕಾನ್ವೆಂಟಿನಲ್ಲಿ ಕಲಿತ ಮಕ್ಕಳ ಭಾಗ್ಯದಿಂದ ನಮ್ಮ ಸಿಟಿಗಳಲ್ಲೋ ಅಮೆರಿಕಾದ ಸಿಟಿಗಳಲ್ಲೋ ಹೊಡೆಯಲು ನೊಣಗಳೂ ಇಲ್ಲದೆ ಟೆಲಿವಿಷನ್‌ ನೋಡಿಕೊಂಡು ಆಕಳಿಸುತ್ತ ಇರುತ್ತಾರೆ.

ಈಗಾಗಲೇ ಕೃಷಿಗೆ ಬೇಕಾದ ಭೂಮಿ ಐಟಿ ಬಿಟಿಗಳಿಗೋ ಸ್ಥಾವರಗಳಿಗೋ, ಟೂರಿಸಂಗಾಗಿಯೋ, ಬೃಹತ್‌ ನಗರಗಳ ಹೊಸ ಬಡಾವಣೆಗಳಿಗೋ ವೇಗವಾಗಿ ಚಲಿಸಲು ಅಗತ್ಯವಾದ ರಸ್ತೆಗಳಿಗೋ ಮುಡಿಪಾಗುತ್ತಿವೆ. ವಿಶ್ವಬ್ಯಾಂಕ್‌, ಡಬ್ಲ್ಯುಟಿಓ ಸಂಸ್ಥೆಗಳು ನಮ್ಮ ನೀರು, ನೆಲ, ಗಾಳಿ ಎಲ್ಲವೂ ಕಾರ್ಪೊರೇಟ್ ಸಂಸ್ಥೆಗಳ ವಶವಾಗುವಂತೆ, ಚುನಾಯಿತ ಸರ್ಕಾರಗಳು ಆಡಳಿತದಲ್ಲಿ ದುರ್ಬಲವಾಗುವಂತೆ ಅಂತಾರಾಷ್ಟ್ರೀಯ ಹುನ್ನಾರ ನಡೆಸಿವೆ. ಬೇಸಾಯದಿಂದ ಬೇಸತ್ತವರು ಇವರಿಂದ ಆಕರ್ಷಿತರಾದಾರು; ಮೇಧಾ ಪಾಟ್ಕರರಂತಹ ಹೋರಾಟಗಾರರು ಫಲಾಪೇಕ್ಷೆಗೆ ಅವಕಾಶವೇ ಇಲ್ಲದ ಕರ್ಮದಲ್ಲಿ ಜೀವ ಸವೆದಾರು.

ಈ ನಡುವೆ ಗೋವಿನ ಗೋಳಿನ ಕಥೆಯೂ ಬದಲಾಗುತ್ತದೆ. ಬೇಸಾಯ ಜೀವನದಲ್ಲಿ ಸರ್ವತ್ರ ಬಳಕೆಯ ಪ್ರಾಣಿ, ಆಧುನಿಕ ನಾಗರೀಕತೆಯಲ್ಲಿ ಕೇವಲ ಹಾಲು ಮತ್ತು ಮಾಂಸದ ಪ್ರಾಣಿಯಾಗುತ್ತದೆ. ಲಾಭದಾಯಕವೆಂದು ಇವುಗಳ ಸಂಖ್ಯೆಯೂ ಬೆಳೆಯುತ್ತದೆ. ಬೆಳೆದಾಗ ಇಂಗ್ಲೆಂಡಿನಲ್ಲಿ ಬಂದಂತೆ ಅದೆಂಥದೋ ‘ಹುಚ್ಚು’ ಕಾಯಿಲೆ (mad cow disease) ಸಾಂಕ್ರಾಮಿಕವಾಗಿ ಹರಡುತ್ತದೆ. ನೀವು ಓದಿರಬೇಕು ಕಾಯಿಲೆಯಿಂದ ಗುಣ ಹೊಂದಿದರೂ ಮಾರುಕಟ್ಟೆಯ ಪೈಪೋಟಿಯಲ್ಲಿ ಈ ದನಗಳ ಮಾಂಸಕ್ಕೆ ಬೆಲೆಯಿಲ್ಲ. ಕೆಲವೇ ವರ್ಷಗಳ ಹಿಂದೆ ಇಂಗ್ಲೆಂಡಿನಲ್ಲಿ ಸಹಸ್ರ ಸಂಖ್ಯೆಯಲ್ಲಿ ಈ ದನಗಳನ್ನು ಕೊಂದು ಸುಟ್ಟರು ಅಥವಾ ಹೂಳಿದರು. ಕೊಂದ ಪಾಪ ತಿಂದೂ ಪರಿಹಾರವಾಗಲಿಲ್ಲ. ಈಗ ಕೋಳಿಗಳ ಸರದಿ.

ಕುರಿಯನ್‌ ಗುಜರಾತಿನಲ್ಲಿ ಹಾಲಿನ ಕೋ ಆಪರೇಟಿವ್ ಮಾಡಿ ಕ್ಷೀರ ಕ್ರಾಂತಿಯನ್ನು ಮಾಡಿದ. ಅವನು ಜಾಣ. ಅದು ಎಮ್ಮೆಯ ಹಾಲಿನಿಂದಾದ ಕ್ರಾಂತಿ. ಎಮ್ಮೆ ಪವಿತ್ರವಲ್ಲ ಮುಂದಿನದನ್ನು ಹೇಳಬೇಕಿಲ್ಲ.

* * *

ನಮಗೆ ಆಧುನೀಕರಣವೂ ಬೇಕು; ಹಸು ಪವಿತ್ರವಾಗಿಯೂ ಉಳಿಯಬೇಕು ಎಂದರೆ ಅದು ಸಾಧ್ಯವೆ? ಆಧುನೀಕರಣಕ್ಕಾಗಿ ನಾವು ಕಟ್ಟುವ ಆಣೆಕಟ್ಟುಗಳನ್ನು, ಉಷ್ಣಸ್ಥಾವರಗಳನ್ನು ಅಣುಸ್ಥಾವರಗಳನ್ನು, ನಾವು ರಾಜ್ಯ ವ್ಯವಸ್ಥೆಯ ಭದ್ರತೆಯ ನೆವದಲ್ಲಿ ಸ್ಫೋಟಿಸುವ ಅಣುಬಾಂಬುಗಳನ್ನು ಪ್ರಶ್ನಿಸುವವರು, ಹಾಗೆಯೇ ರಾಸಾಯನಿಕ ಗೊಬ್ಬರ ಬಳಸಿ ನಡೆಸುವ ಬೇಸಾಯವನ್ನು ಪ್ರಶ್ನೆ ಮಾಡುವವರು ನಮಗೆ ದೇಶದ್ರೋಹಿಗಳಂತೆ ಕಾಣುತ್ತಿದ್ದಾರೆ.

ಗೋಹತ್ಯೆಯನ್ನು ನಿಷೇಧಿಸಬೇಕೆನ್ನುವ ನಮ್ಮ ಧರ್ಮಗುರುಗಳು, ನಮ್ಮ ರಾಜಕಾರಣಿಗಳು, ಆಸೆ ಬುರುಕುತನದ ಆಧುನೀಕರಣವನ್ನೇ ಪ್ರಶ್ನಿಸದೇ ಹೋದಲ್ಲಿ ಕೋಮುದ್ವೇಷವನ್ನು ಬೆಳೆಸುವುದಕ್ಕೆ ಮಾತ್ರ ನಮ್ಮ ಗೋವುಗಳು ನೆವವಾಗುತ್ತವೆ. ‘ಇಟ್ಟರೇ ಸಗಣಿಯಾದೆ, ತಟ್ಟಿದರೆ ಕುರುಳಾದೆ, ಸುಟ್ಟರೇ ನೊಸಲಿನ ವಿಭೂತಿಯಾದೆ’ ಎನ್ನುವ ಸಾಲುಗಳಿಗೆ ಇನ್ನೊಂದು ಸಾಲು ಸೇರಿಸಬೇಕಾಗುತ್ತದೆ:

‘ಕಟುಕನಿಗೆ ಕೊರಳೊಡ್ಡಿ ಓಟುಗಳು ಆದೆ.’

ನಾವು ನಾಚಿಕೆಗೆಟ್ಟ ಆತ್ಮವಂಚನೆಯ ಜನರಾಗುತ್ತಿದ್ದೇವೆ. ನಮ್ಮ ಗೋವಿನ ಪ್ರೇಮ ನಿಜವಾಗಬೇಕಾದಲ್ಲಿ ನಾವು ಗಾಂಧಿಯವರಂತೆ ಆಧುನೀಕರಣವನ್ನು ಒಂದು ಫರಂಗಿ ರೋಗದಂತೆಯೂ ಕಾಣಬಲ್ಲ, ಕಂಡು ನಮಗೆ ಬೇಕಾದ ಅರ್ಥವ್ಯವಸ್ಥೆಯನ್ನು ಕಟ್ಟಿಕೊಳ್ಳಬಲ್ಲ ಜನರಾಗಬೇಕಾಗುತ್ತದೆ.

ಕೊನೆಯಲ್ಲಿ ನಮ್ಮ ಚರಿತ್ರೆಯಲ್ಲಿ ನಡೆಯಿತೆಂದು ನಾನು ಕೇಳಿದ್ದರ ಒಂದು ನೆನಪು. ಹಿಂದುಗಳೂ ಮುಸ್ಲಿಮರೂ ಸ್ನೇಹದಲ್ಲಿ ಬದುಕಬೇಕೆಂಬ ಉದ್ದೇಶದಿಂದ ಮುಸ್ಲಿಮರು ಗೋಮಾಂಸ ತಿನ್ನುವುದನ್ನು ಬಿಡಬೇಕೆಂಬುದು ಬಹಳ ಹಿಂದಿನಿಂದಲೂ ಸಜ್ಜನರ ಆಶಯವೂ ಆಗಿದೆ. ಈ ಆಶಯವನ್ನು ಮುಸ್ಲಿಮರಿಗೆ ಮಾತ್ರ ಅನ್ವಯಿಸುವುದು ತಪ್ಪಾಗುತ್ತದೆ. ಕೆಲವು ಕ್ರಿಶ್ಚಿಯನ್ನರೂ ದಲಿತರೂ ಗಿರಿಜನರೂ ಗೋಮಾಂಸ ತಿನ್ನುವುದುಂಟು. ಅದು ಬೇರೆ ಮಾಂಸದಷ್ಟು ದುಬಾರಿಯಲ್ಲ ಎನ್ನುವುದೂ ಇದಕ್ಕೆ ಒಂದು ಕಾರಣ. ಖಿಲಾಫತ್‌ ಆಂದೋಲನದಲ್ಲಿ ಗಾಂಧೀಜಿ ಮುಸ್ಲಿಮರ ಪರ ನಿಂತರು. ಆಗ ಕೆಲವು ಹಿಂದೂ ನಾಯಕರೇ ಗಾಂಧಿಯನ್ನು ಕೇಳಿದರು. ಇದು ಪ್ರಶಸ್ತವಾದ ಸನ್ನಿವೇಶ. ನಾವು ಮುಸ್ಲಿಮರ ಪರ ನಿಲ್ಲುವಾಗ ಒಂದು ಕಂಡೀಶನ್ ಹಾಕಬೇಕು. ಅವರು ಗೋಮಾಂಸ ತಿನ್ನುವುದನ್ನು ಬಿಡುತ್ತೇವೆ ಎಂದು ಪ್ರಾಮಿಸ್‌ಮಾಡಬೇಕು. ಅದಕ್ಕೆ ಗಾಂಧೀಜಿ ಕೊಟ್ಟ ಉತ್ತರ ಒಬ್ಬ ಧಾರ್ಮಿಕ ವ್ಯಕ್ತಿಯ ಉತ್ತರವಾಗಿತ್ತು. ‘ನಾವು ಖಿಲಾಫತ್‌ವಿವಾದದಲ್ಲಿ ಮುಸ್ಲಿಮರನ್ನು ಬೆಂಬಲಿಸುವದು ನಮ್ಮ ನೈತಿಕ ಅಗತ್ಯವೆಂದೇ ತಿಳಿದಿರುವುದಾದರೆ ಯಾವ ಷರತ್ತನ್ನೂ ಹಾಕದೆ ನಾವು ಬೆಂಬಲಿಸಬೇಕು. ಮುಸ್ಲಿಮರು ಸ್ವಪ್ರೇರಣೆಯಿಂದಲೇ ತಾವಾಗಿಯೇ ಗೋಮಾಂಸ ಬಿಟ್ಟಲ್ಲಿ ನನಗೆ ಸಂತೋಷ.’

ಯಾವ ಪ್ರಾಣಿಯ ಮಾಂಸವನ್ನೂ ತಿನ್ನದವನ ಔದಾರ್ಯದ ಅಧಿಕಾರದ ಮಾತು ಇದು.

೨೦೦೬

* * *