ಈಗ ಕರ್ನಾಟಕದಲ್ಲಿ ಸರಕಾರ ಬದಲಾಗುತ್ತಿದೆ. ಈ ಬದಲಾವಣೆ ಆಗುತ್ತಿದೆ ಎನ್ನುವುದು ನಿರಕ್ಷರರಿಗೂ ಗೊತ್ತಾಗುವ ಹಾಗೆ ಬೆಂಗಳೂರಿನ ಎಲ್ಲ ಪ್ರಮುಖ ಬೀದಿಗಳಲ್ಲೂ ದೊಡ್ಡ ದೊಡ್ಡ ಪೋಸ್ಟರ್‌ಗಳು, ಕಟೌಟುಗಳು ಕಾಣಿಸಿಕೊಂಡಿವೆ. ನಮಗೆ ಆಕಾಶವೇ ಕಾಣಿಸದಂತೆ ರಾಜಕಾರಣಿಗಳು ಬೀದಿಯ ಬದಿಯಲ್ಲಿ ಬೃಹದಾಕಾರದ ಕಟೌಟ್‌ಗಳಾಗಿ ನಿಂತು ತಮ್ಮ ಗುಂಪುಗಳನ್ನು ಒಡ್ಡಿಕೊಂಡಿದ್ದಾರೆ. ಇದರಲ್ಲೂ ಒಂದು ರಾಜಕೀಯ ಇದೆ. ಒಬ್ಬ ಪ್ರಮುಖನ ಜತೆ ಯಾರ ಚಿತ್ರಗಳಿವೆ ಎನ್ನುವುದನ್ನು ಗಮನಿಸಿದರೆ ಈ ಪ್ರಮುಖನ ಬಳಿ ಯಾರೆಲ್ಲಾ ಅಧಿಕಾರಕ್ಕಾಗಿ ಅಂಗಲಾಚುತ್ತಿದ್ದಾರೆ ಎಂಬುದು ಅರ್ಥವಾಗುತ್ತದೆ. ಇದು ಆಧುನಿಕ ರಾಜಕಾರಣದ ಮೊದಲ ವಿಕಾರ.

ಬೀದಿಗಳನ್ನು, ರಸ್ತೆಯ ಬದಿಗಳನ್ನೂ ಕಲುಷಿತಗೊಳಿಸುತ್ತಿರುವ ಈ ‘ಕಟೌಟ್ ಸಂಸ್ಕೃತಿ’ ಒಂದು ಹೊಸ ಮಾಧ್ಯಮವೇ ಆಗಿಬಿಟ್ಟಿದೆ. ದಾರಿಯಲ್ಲಿ ಓಡಾಡುವಾಗ ನಮ್ಮ ಕಣ್ಣುಗಳು ಮರಗಿಡಗಳು, ಹಕ್ಕಿ ಪಿಕ್ಕಿಗಳು, ನಮಗಿಷ್ಟವಾದುದನ್ನು ನೋಡಬೇಕೇ ಹೊರತು ಈ ವಿಕಾರಗಳನ್ನಲ್ಲ. ಇದು ತಮಿಳುನಾಡಿನಲ್ಲಿ ಬಹಳ ಅಬ್ಬರದಿಂದ ನಡೆಯುತ್ತಿತ್ತು. ಅಲ್ಲಿನ ರಾಜಕಾರಣಿಗಳು ಬಾಹುಬಲಿಯಷ್ಟು ಎತ್ತರದ ಕಟೌಟ್‌ಗಳಲ್ಲಿ ಎಲ್ಲಾ ಆಭರಣಗಳನ್ನು ತೊಟ್ಟು ನಿಲ್ಲುತ್ತಿದ್ದರು. ಆ ಸಂಸ್ಕೃತಿ ಈಗ ಕರ್ನಾಟಕದೊಳಕ್ಕೂ ಬಂದಿದೆ.

ಹಿಂದುತ್ವವಾದಿಗಳು ಅಧಿಕಾರಕ್ಕೆ ಬಂದರೂ, ಸೆಕ್ಯುಲರ್‌ವಾದಿಗಳೇ ಆಡಳಿತದ ಚುಕ್ಕಾಣಿ ಹಿಡಿದರೂ ಕಳೆದ ಹತ್ತು ವರ್ಷಗಳಲ್ಲಿ ಎಲ್ಲರೂ ಮುಂದುವರಿಸುತ್ತಾ ಬಂದದ್ದು ಆಧುನಿಕ ಬಂಡವಾಳ ಶಾಹಿ ವ್ಯವಸ್ಥೆಯನ್ನು, ಯಾವ ಯಾವ ರಾಷ್ಟ್ರಗಳ ಜತೆ ಒಪ್ಪಂದಕ್ಕೆ ಸಹಿ ಹಾಕಿ, ಯಾವ ಯಾವ ಕಂಪೆನಿಗಳನ್ನು ಶುರು ಮಾಡಬಹುದು, ಬೇರೆ ದೇಶಗಳಿಗೆ ತ್ಯಾಜ್ಯವಾದ ವಸ್ತುಗಳನ್ನು ಇಲ್ಲಿ ಹೇಗೆ ತಯಾರಿಸಬಹುದು, ಹೇಗೆ ಬೇಗನೆ ದುಡ್ಡು ಮಾಡಬಹುದು ಎಂಬ ಭ್ರಷ್ಟಾಚಾರಿ ಉಪಾಯಗಳ ಮೇಲೆಯೇ ಇಂದಿನ ನಮ್ಮ ವ್ಯಾಪಾರಿ ಲೋಕ ನಿಂತಿದೆ. ಇದು ಆಧುನಿಕ ರಾಜಕಾರಣದ ಮತ್ತೊಂದು ವಿಕಾರ.

ಹಿಂದಿನ ವಾಜಪೇಯಿ ಸರಕಾರಕ್ಕೆ ಜನ ಓಟು ಕೊಡದೆ ಸೋಲಿಸಿದರು. ಹಾಗೆಯೇ ಕಾಂಗ್ರೆಸ್ಸನ್ನು ಗೆಲ್ಲಿಸಿದರು. ಇದು ಬರೀ ಮತೀಯತೆಯ ವಿರುದ್ಧ ಚಲಾಯಿಸಲಾದ ಓಟು ಎಂದು ಹಲವರು ಭಾವಿಸಿದರು. ಆದರೆ ಇದು ಕೇವಲ ಮತೀಯತೆಯ ವಿರುದ್ಧದ ತೀರ್ಪಲ್ಲ. ಅದು ಉದಾರೀಕರಣ ಎಂಬ ಹುಸಿ ನಾಟಕದ ವಿರುದ್ಧದ ತೀರ್ಪೂ ಆಗಿತ್ತು. ಈ ಉದಾರೀಕರಣದಿಂದ ಒದಗಿದ ಕಷ್ಟಗಳನ್ನು ತಮ್ಮ ಓಟುಗಳ ಮೂಲಕ ಜನರು ಪ್ರತಿಭಟಿಸಿದ್ದರು. ಎಷ್ಟು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂಬುದನ್ನು ನೆನಪು ಮಾಡಿಕೊಂಡರೆ ಇದು ಅರ್ಥವಾಗುತ್ತದೆ. ಆದರೆ ಹೊಸ ಸರಕಾರ ಅದು ಬರೀ ಮತೀಯತೆಯ ವಿರುದ್ಧದ ಓಟು ಎನ್ನುವಷ್ಟರ ಮಟ್ಟಿಗೆ ಮಾತ್ರ ಅರ್ಥ ಮಾಡಿಕೊಂಡು ಹಿಂದಿನ ಸರಕಾರದ ಮುಖ್ಯವಾದ ಎಲ್ಲಾ ಆರ್ಥಿಕ ಕಾರ್ಯಕ್ರಮಗಳನ್ನೂ ಮುಂದುವರಿಸಿಕೊಂಡು ಬಂದಿದೆ.

ಈ ಎಲ್ಲಾ ಸರಕಾರಗಳ ಬದಲಾವಣೆಯ ವೇಳೆಯೂ ನಡೆಯುತ್ತಿರುವುದು ಒಂದೇ ಕೆಲಸ. ಅದು ಇಲ್ಲಿ ಬಹುರಾಷ್ಟ್ರೀಯ ಕಂಪನಿಗಳಿಗೆ ಅತ್ಯಂತ ಅನುಕೂಲಕರ ವ್ಯವಸ್ಥೆಯನ್ನು ಹೇಗೆ ಮತ್ತು ಎಷ್ಟು ವೇಗವಾಗಿ ಉಂಟುಮಾಡಬಹುದು ಎಂಬುದು. ಈ ಅನುಕೂಲಕರ ವ್ಯವಸ್ಥೆಯನ್ನು ಉಂಟು ಮಾಡುವ ಪ್ರಕ್ರಿಯೆಯಲ್ಲಿ ನನಗಿರುವ ಭಯ ಏನೆಂದರೆ ನಾವು ಒಂದು ನಾಗರಿಕತೆಯಾಗಿ ಈ ದೇಶದಲ್ಲಿ ಉಳಿಯಲು ಸಾಧ್ಯವಾದ ನಮ್ಮ ಊಟದ ಪದ್ಧತಿಗಳು, ವೇಷಭೂಷಣದ ಕ್ರಮ,  ನಮ್ಮ ಭಾಷೆಗಳು, ನಮ್ಮ ನಡಾವಳಿಗಳೆಲ್ಲವನ್ನೂ ವಿದ್ಯಾವಂತರಾದ ಜನರಲ್ಲಾದರೂ ಬದಲಾಯಿಸಿಬಿಡುವ ಕ್ರಿಯೆ ಇದಾಗಿದೆ ಎಂಬುದು. ಇದು ಆಳುವ ವರ್ಗ ತನ್ನೊಳಗೆ ಮಾಡಿಕೊಳ್ಳುತ್ತಿರುವ ಬದಲಾವಣೆ. ಆದರೆ ಈ ಬದಲಾವಣೆ ಅನುಕೂಲವಂತರಲ್ಲದವರಿಗೂ ಮಾದರಿಯಾಗಬಹುದಾದದ್ದರಿಂದ ಇದನ್ನು ಭಯ ಹುಟ್ಟಿಸುವ ಬದಲಾವಣೆ ಎಂದು ಕರೆಯುತ್ತೇವೆ.

ಇಂಥ ಸಂದರ್ಭದಲ್ಲಿ ಹತಾಶರಾಗದೆ ಯೋಚನೆ ಮಾಡುವುದಕ್ಕೆ ನಮಗಿರುವ ಏಕೈಕ ಭರವಸೆ ಏನೆಂದರೆ ಇವತ್ತಿಗೂ ಸರಕಾರದ ಹಂಗೇ ಇಲ್ಲದೆ ಬದುಕುತ್ತಿರುವ ಅಪಾರವಾದ ಜನಸಂಖ್ಯೆ. ಹೌದು, ಈ ಜನಕ್ಕೆ ಸರಕಾಋದ ಹಂಗಿಲ್ಲ. ಬೆಳಿಗ್ಗೆ ಏಳಬೇಕು, ದುಡೀಬೇಕು, ಕೂಲಿ ಪಡೆದುಕೊಂಡು ಆದರಿಂದ ಒಂದಷ್ಟು ರಾಗಿಯನ್ನೋ ಜೋಳವನ್ನೋ ತಂದು ಅದನ್ನು ಹಿಟ್ಟು ಮಾಡಿಸಿ, ಮುದ್ದೆ ಮಾಡಿಕೊಂಡು ಯಾವುದೋ ಒಂದು ಸೊಪ್ಪಿನ ಸಾರು ಮಾಡಿ ತಿನ್ನಬೇಕು. ಇದರಿಂದ ಬಂದ ಸ್ವಲ್ಪ ಶಕ್ತಿಯನ್ನು ಮರುದಿನದ ಉದ್ಯೋಗಕ್ಕೆ ಬಳಸಬೇಕು. ಮರುದಿನದ ಕೆಲಸದಲ್ಲಿ ಅವರು ಗಳಿಸಿದ್ದನ್ನು ಮತ್ತೆ ಶಕ್ತಿ ಉತ್ಪತ್ತಿ ಮಾಡಿಕೊಳ್ಳಲು ಬಳಸಬೇಕು. ತಮ್ಮ ಅತ್ಯಲ್ಪ ಸಂಪಾದನೆಯಿಂದ ಬಂದ ಶಕ್ತಿಯನ್ನು ಅವರು ಹೀಗೆ ಪ್ರತಿದಿನವೂ ನಮ್ಮ ಉಳಿವಿಗಾಗಿ, ನಮ್ಮ ಒಳಿತಿಗಾಗಿ ಬಳಸುತ್ತಿದ್ದಾರೆ. ಇವರಿಗೂ ಸರಕಾರಕ್ಕೂ ನಿಜವಾದ ಸಂಬಂಧ ಇಲ್ಲ. ಏಕೆಂದರೆ ಯಾವ ಸರಕಾರವೂ ಅವರ ಕ್ಷೇಮದ ಬಗ್ಗೆ ಕಾಳಜಿ ವಹಿಸಿಲ್ಲ. ಅವರಿಗೆ ಅನಾರೋಗ್ಯ ಕಾಡಿದಾಗ ಚಿಕಿತ್ಸೆ ಕೊಡಿಸುವುದಾಗಲೀ, ಅವರು ಬಹಳ ಮುದುಕರಾಗಿ ಕೆಲಸ ಮಾಡುವುದಕ್ಕೆ ಸಾಧ್ಯವಾಗದ ಸ್ಥಿತಿ ಒದಗಿದಾಗ ಅವರಿಗೆ ಎರಡು ತುತ್ತು ಸಿಗುವ ವ್ಯವಸ್ಥೆಯನ್ನಾಗಲಿ ಯಾವ ಸರಕಾರವೂ ಮಾಡಿಲ್ಲ. ಹೀಗೆ ಮಾಡಬೇಕು ಎನ್ನುವ ಉದ್ದೇಶವೇನೋ ಇದೆ –  ಮಹಾತ್ಮಾಗಾಂಧಿ ಹೇಳಿದ್ದರು ಎಂಬ ಕಾರಣದಿಂದ. ನಕ್ಸಲೈಟರ ಭಯದಿಂದ…..

* * *

ಹಿಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸೋತಿತು. ಐಟಿ – ಬಿಟಿಯನ್ನು ದೊಡ್ಡದು ಮಾಡಲು ಹೋಗಿ ಅದು ಸೋಲುಂಡಿತು. ಆಗ ಎರಡು ಪಕ್ಷಗಳು ಗೆದ್ದು ಬಂದವು. ಇದರಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದ್ದು ಬಿಜೆಪಿ. ಎರಡನೆಯ ಸ್ಥಾನ ಕಾಂಗ್ರೆಸ್‌ನದ್ದು, ಮೂರನೆಯ ಸ್ಥಾನ ಜೆಡಿಎಸ್‌ನದ್ದು. ಅಂದರೆ ಬಿಜೆಪಿ ಹಾಗೂ ಜೆಡಿಎಸ್‌ಗಳು ಗಳಿಸಿದ ಒಟ್ಟು ಸ್ಥಾನಗಳು ಸೇರಿದರೆ ಕಾಂಗ್ರೆಸ್‌ಗೆ ಜನಾದೇಶವಿಲ್ಲ ಎಂಬುದು ಸ್ಪಷ್ಟ. ಕಾಂಗ್ರೆಸ್‌ನವರು ನಿಜವಾದ ತಾತ್ವಿಕ ರಾಜಕಾರಣ ಮಾಡುವುದಾಗಿದ್ದರೆ ಜನ ತಮ್ಮನ್ನು ಸೋಲಿಸಿದ್ದಾರೆ ಎಂದು ಒಪ್ಪಿಕೊಳ್ಳಬೇಕಿತ್ತು. ಜಾತ್ಯಾತೀತತೆಗೆ ತಮಗಿರುವ ಬದ್ಧತೆಯನ್ನು ತೋರಿಸಲು ಜೆಡಿಎಸ್‌ಗೆ ಸರಕಾರ ರಚಿಸಲು ಹೇಳಿ ಹೊರಗಿನಿಂದ ಬೆಂಬಲ ಘೋಷಿಸಬೇಕಿತ್ತು. ಆಗ ಅದು ತತ್ವಕ್ಕೆ ಬದ್ಧವಾದ ರಾಜಕಾರಣ ಆಗುತ್ತಿತ್ತು. ಈಗ ಜೆಡಿಎಸ್‌ನವರಿಗೆ ಕಾಂಗ್ರೆಸ್ ಬಹಳ ಹೇಯ ಅನ್ನಿಸುತ್ತಿದೆ. ಅವರಿಗೆ ಕಾಂಗ್ರೆಸ್ ಅಷ್ಟು ಹೇಯ ಅನ್ನಿಸಿದ್ದರೆ ಮತ್ತೊಂದು ಚುನಾವಣೆಯ ಮೂಲಕ ಬೊಕ್ಕಸದ ಹೊರೆ ಹೆಚ್ಚಿಸುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದರೆ ಬಿಜೆಪಿಗೇ ಸರಕಾರ ರಚಿಸುವ ಅವಕಾಶವನ್ನು ಬಿಟ್ಟುಕೊಟ್ಟು ಹೊರಗಿನಿಂದ ಬೆಂಬಲ ಕೊಡುತ್ತೇವೆ ಎಂದು ಹೇಳಬೇಕಿತ್ತು. ಹಿಂದೆ ವಿ.ಪಿ. ಸಿಂಗ್ ಸರಕಾರ ಅಧಿಕಾರಕ್ಕೆ ಬಂದಾಗ ಬಿಜೆಪಿ ಹೀಗೆಯೇ ಜನತಾದಳಕ್ಕೆ ಬೆಂಬಲ ನೀಡಿತ್ತು. ಅದು ತತ್ವಬದ್ಧ ರಾಜಕಾರಣವಾಗುತ್ತಿತ್ತು. ಈಗ ಸಮ್ಮಿಶ್ರ ಸರಕಾರದಲ್ಲಿ ಉಂಡದ್ದು ಸಾಲದು ಎಂಬ ಕಾರಣಕ್ಕೆ ಜೆಡಿಎಸ್‌ನವರಿಗೆ ಕಾಂಗ್ರೆಸ್‌ಹೇಯ ಅನ್ನಿಸುತ್ತಿದೆ ಎಂದು ಜನ ಉಳಿಯಬಹುದಾಗಿದೆ. ಅಂದರೆ ಯಾರ್ಯಾರು ಎಷ್ಟೆಷ್ಟು ದುಡ್ಡನ್ನು ಚುನಾವಣೆಗಿಂತ ಮೊದಲು ಮಾಡಿಕೊಳ್ಳಬೇಕು ಎಂಬುದನ್ನು ನಿರ್ಧರಿಸಿ ಅದಕ್ಕೆ ತಕ್ಕಂತೆ ಖಾತೆಗಳನ್ನು ಹಂಚಿಕೊಳ್ಳುವ ರಾಜಕಾರಣ ಈಗ ನಡೆಯುತ್ತಿದೆ.

ಆದ್ದರಿಂದ ಇನ್ನೊಂದು ಮೂರನೆಯ ಪಕ್ಷ ಹುಟ್ಟಿದರೂ ಅದೂ ಹೀಗೆಯೇ ಮಾಡಬಹುದು ಎಂಬ ಭಯ ನನಗಿದೆ. ಈ ಹೊತ್ತಿನಲ್ಲಿ ನಾವು ಮೂರನೆಯ ಶಕ್ತಿಯ ವ್ಯಾಖ್ಯೆಯನ್ನು ಹಿಗ್ಗಿಸಿಕೊಳ್ಳಬೇಕು. ಸಮಾಜದ ಬಗ್ಗೆ ಕಳಕಳಿ ಇರುವ, ತಮ್ಮ ತಮ್ಮ ಕ್ಷೇತ್ರಗಳಲ್ಲಿಯೇ ಸರಿಯಾದ ಕೆಲಸವನ್ನು ಮಾಡುತ್ತಿರುವ ಜನರೇ ಈ ಕಾಲದ ಮೂರನೆಯ ಶಕ್ತಿ. ರಾಜಸ್ಥಾನದಲ್ಲಿ ‘ನೀರು ಗಾಂಧಿ’ ಎಂದು ಖ್ಯಾತನಾದ ರಾಜೇಂದ್ರಸಿಂಗ್ ಮಾತನಾಡುವುದನ್ನು ನೋಡಿದಾಗ ಈತನೂ ಒಬ್ಬ ಮೂರನೇ ಶಕ್ತಿಯ ಪ್ರತೀಕ ಅನ್ನಿಸುತ್ತೆ. ಆತ ಊರಿಗೆ ನೀರು ತಂದಿದ್ದಾರೆ. ಸಾಲು ಮರದ ತಿಮ್ಮಕ್ಕನಂಥ ಅಜ್ಜಿ ಊರಿನಲ್ಲೆಲ್ಲಾ ಮರ ನೆಡುತ್ತಾಳೆ. ಆಕೆಯೂ ಒಂದು ಮೂರನೇ ಶಕ್ತಿ. ಒಬ್ಬ ಪ್ರೈಮರಿ ಶಾಲೆಯ ಮೇಷ್ಟು ಅಲ್ಲಿರುವ ಮಕ್ಕಳನ್ನೆಲ್ಲಾ ಶಾಲೆಗೆ ಕರೆತಂದು ಸರಿಯಾಗಿ ಪಾಠ ಮಾಡಿ ಶಾಲೆ ಅತ್ಯುತ್ತಮವಾಗುವ ಹಾಗೆ ನೋಡಿಕೊಂಡರೆ ಆತನೂ ಮೂರನೇ ಶಕ್ತಿ.

ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಜನ ಕಾರ್ಯನಿರತರಾಗಬೇಕು. ನಾನು ಮೊದಲೇ ಹೇಳಿದ ಸರಕಾರದ ಯಾವ ಲಾಭವನ್ನೂ ಪಡೆಯುವ ದೈಹಿಕ ದುಡಿಮೆಯ ಅಪಾರ ಜನಸ್ತೋಮ ಈಗಲೇ ಒಂದು ಮೂರನೇ ಶಕ್ತಿಯಾಗಿ ನಮ್ಮ ನಾಗರೀಕತೆಯನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ಅದಿಲ್ಲದಿದ್ದರೆ ನಾವೆಲ್ಲಿರುತ್ತಿದ್ದೆವು? ನಮಗೇನು ಐಟಿ – ಬಿಟಿಯನ್ನು ತಿನ್ನಲು ಸಾಧ್ಯವೇ? ನಾವು ತಿನ್ನುವುದನ್ನೆಲ್ಲಾ ದುಡಿಯುತ್ತಿರುವುದು ಆ ಜನಸ್ತೋಮ. ಆ ಶಕ್ತಿ ಇದ್ದೇ ಇದೆ. ಅದು ರಾಜಕೀಯ ಶಕ್ತಿಯಾಗಿ ಕಾಣಿಸುತ್ತಿಲ್ಲ. ಆದರೆ ಅದು ಮಾನವ ಸಂಪನ್ಮೂಲವಾಗಿ ಅಪಾರ ಸಂಖ್ಯೆಯಲ್ಲಿದೆ. ಈ ಜನಸಮೂಹದ ಜತೆಗೆ ಅವರಿಗಿಂತ ಉತ್ತಮ ಸ್ಥಿತಿಯಲ್ಲಿರುವ ನಮ್ಮಂಥವರು ಸೇರಿ ಒಂದು ನಾಗರಿಕ ಸಮಾಜವನ್ನು ಕಲ್ಪಿಸಿಕೊಳ್ಳಬೇಕು. ಅದಕ್ಕೆ ಸಂಬಂಧಿಸಿದಂತೆ ಒಂದು ಘಟನೆಯನ್ನು ಉಲ್ಲೇಖಿಸಬಹುದು ಅನ್ನಿಸುತ್ತಿದೆ.

ಗಾಂಧೀಜಿಯವರಿಗೆ ಈ ಕಲ್ಪನೆ ಬಹಳ ಸ್ಪಷ್ಟವಾಗಿತ್ತು. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ವಿದೇಶಿ ಪತ್ರಕರ್ತನೊಬ್ಬ ಅವರಲ್ಲಿ ‘ನಿಮ್ಮ ಧ್ಯೇಯ ಏನು?’ ಎಂದು ಕೇಳಿದ. ಈ ಸಂದರ್ಭದಲ್ಲಿ ಆತ ನಿರೀಕ್ಷಿಸಿದ ಉತ್ತರ ಬ್ರಿಟಿಷರನ್ನು ತೊಲಗಿಸುವುದು. ಆದರೆ ಆ ಪತ್ರಕರ್ತನಿಗೆ ಆಶ್ಚರ್ಯವಾಗುವಂತೆ ಗಾಂಧಿ ಉತ್ತರಿಸುತ್ತಾರೆ –  ‘ನನ್ನ ಧ್ಯೇಯ ಮೂರು. ಒಂದನೆಯದು ಹಿಂದೂ – ಮುಸ್ಲಿಂ ಏಕತೆ, ಅವರಿಬ್ಬರಲ್ಲಿ ಇರುವ ಜಗಳವನ್ನು ಇಲ್ಲದಂತೆ ಮಾಡುವುದು. ಎರಡನೆಯದು ಅಸ್ಪೃಶ್ಯತೆಯ ನಿವಾರಣೆ. ಮೂರನೆಯದ್ದು ಖಾದಿ. ಈ ಮೂರೂ ಹೇಗೆ ಬ್ರಿಟಿಷರನ್ನು ಹೊರಗಟ್ಟುವ ಉದ್ದೇಶಕ್ಕೆ ಪೂರಕವಾಗಿದೆ ಎಂಬುದನ್ನು ನೋಡೋಣ. ಬೇರೆಯವರಿಗೆ ನಮ್ಮ ಮೇಲೆ ಪ್ರಭುತ್ವ ಸ್ಥಾಪಿಸಿ ಅಟ್ಟಹಾಸ ಮಾಡುವುದಕ್ಕೆ ಸಾಧ್ಯವಾದದ್ದೇ ಹಿಂದೂಗಳು ಮತ್ತು ಮುಸ್ಲಿಮರು ಒಗ್ಗಟ್ಟಾಗದೇ ಇದ್ದುದರಿಂದ. ಅವರು ಒಗ್ಗಟ್ಟಾಗಿದ್ದರೆ ಬ್ರಿಟಿಷರಿಗೆ ಭಾರತದಲ್ಲಿರುವುದಕ್ಕೆ ಯಾವ excuse ಕೂಡಾ ಉಳಿಯುವುದಿಲ್ಲ. ಎರಡನೆಯದು ನಮ್ಮಲ್ಲೇ ಇರುವ ಅಸಮಾನತೆ –  ನಾವು ಅಸ್ಪೃಶ್ಯರನ್ನು ನೋಡಿಕೊಳ್ಳುವ ರೀತಿ –  ಅದರಿಂದಾಗಿ ಇದೊಂದು ನ್ಯಾಯಮತ ಸಮಾಜವಲ್ಲ. ಹಾಗಾಗಿ ಬ್ರಿಟಿಷರು ‘ನೀವು ನ್ಯಾಯಯುತವಾಗಿ ನಡೆದುಕೊಳ್ಳುವುದಿಲ್ಲ. ನೀವು ಹಾಗೆ ನಡೆದುಕೊಳ್ಳುವಂತೆ ಮಾಡುವುದಕ್ಕೆ ಇನ್ನೊಂದು ಶಕ್ತಿ ಬೇಕು. ಅದಕ್ಕೆ ನಾವಿದ್ದೇವೆ’ ಎಂದು ವಾದಿಸಬಹುದು. ಅಸ್ಪೃಶ್ಯತೆ ನಿವಾರಿಸಿದರೆ ಈ ವಾದವೂ ನೆಲೆ ಕಳೆದುಕೊಳ್ಳುತ್ತದೆ. ಮೂರನೆಯದು ಆರ್ಥಿಕ ಸಂಬಂಧಗಳ ವಿಷಯ. ಗಾಂಧಿ ವೈಶ್ಯ ಜಾತಿಯಲ್ಲಿ ಹುಟ್ಟಿದ್ದರಿಂದಲೋ ಏನೋ ಇದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಇದು ಮಾರ್ಕ್ಸ್‌‌ಗೂ ಗೊತ್ತಿತ್ತು. ಅಧಿಕಾರ ಯಾರ ಕೈಯಲ್ಲಿರಬೇಕು ಎಂಬುದನ್ನು ನಿರ್ಧರಿಸುವುದು ಆರ್ಥಿಕ ಸಂಬಂಧಗಳೇ. ಇಲ್ಲಿಂದ ಹತ್ತಿಯನ್ನು ತೆಗೆದುಕೊಂಡು ಹೋಗಿ ನೂಲು ಮಾಡಿ ಬಟ್ಟೆಮಾಡಿ ಅದನ್ನು ಬ್ರಿಟಿಷರು ನಮಗೆ ಮಾರುತ್ತಿದ್ದರು. ನಾವೇ ನಮ್ಮ ಬಟ್ಟೆಯನ್ನು ಮಾಡಿಕೊಳ್ಳುವುದಕ್ಕೆ ಶುರು ಮಾಡಿದರೆ ಬ್ರಿಟಿಷರಿಗೆ ಇಲ್ಲಿ ಉಳಿದುಕೊಳ್ಳುವುದರಿಂದ ಯಾವ ಲಾಭವೂ ಇರುತ್ತಿರಲಿಲ್ಲ.

ಗಾಂಧೀಜಿಯವರ ಸ್ವದೇಶಿ ಚಳುವಳಿಯ ಸಮಯದಲ್ಲಿ ಮ್ಯಾಂಚೆಸ್ಟರ್‌ನಲ್ಲಿದ್ದ ಒಂದು ಮಿಲ್‌ಮುಚ್ಚಿಹೋಯಿತು. ರೌಂಡ್ ಟೇಬಲ್‌ ಕಾನ್ಫರೆನ್ಸ್‌ಗೆ ಹೋಗಿದ್ದ ಅರೆ ಬೆತ್ತಲೆಯ ಗಾಂಧಿ ಮ್ಯಾಂಚೆಸ್ಟರ್‌ನ ಮಿಲ್‌ಗೆ ಹೊಗಿ ಅಲ್ಲಿನ ಕಾರ್ಮಿಕರನ್ನು ಉದ್ದೇಶಿಸಿ ‘ನನ್ನ ಚಳವಳಿಯಿಂದಾಗಿ ನೀವು ಕೆಲಸ ಕಳೆದುಕೊಂಡಿದ್ದೀರಿ. ನೀವೂ ನನ್ನ ಸ್ವಾತಂತ್ರ್ಯದ ಹೋರಾಟದಲ್ಲಿ ಭಾಗಿಯಾಗಬೇಕು’ ಎಂದರು. ಮಾರ್ಕ್ಸ್‌workers of the world unite  ಎಂದು ಹೇಳಿದ್ದರೆ ಗಾಂಧೀಜಿ ಅದನ್ನು ಮಾಡಿ ತೋರಿಸಿದ್ದರು. ಗಾಂಧೀಜಿಯ ಮಾತು ಕೇಳಿದ ಒಬ್ಬಳು ಹಣ್ಣುಹಣ್ಣು ಮುದುಕಿ –  ಕಾರ್ಖಾನೆ ಮುಚ್ಚಿದ್ದರಿಂದ ಹಸಿದವಳು –  ಬಂದು ಗಾಂಧೀಜಿಯ ಎರಡೂ ಕೆನ್ನೆಗೆ ಮುತ್ತಿಟ್ಟಳು.

ಇದು ನಾಗರಿಕ ಸಮಾಜವನ್ನು ಸೃಷ್ಟಿಮಾಡುವ ಆಂದೋಲನದ ಸ್ವರೂಪ. ಅದು ಇನ್ನೂ ನಮ್ಮ ನೆನಪಿನಲ್ಲಿ ಅದೃಷ್ಟವಶಾತ್‌ ಉಳಿದಿದೆ. ನೆನಪಿದೆ. ಎಲ್ಲೆಲ್ಲೂ ಅಪಸ್ವರಗಳೇ ಕೇಳಿಸುವ, ಅತ್ಯಂತ ಸಣ್ಣಜನರು ಆಕಾಶ ಕಾಣದ ಹಾಗೇ ಮೆರೆಯುವ ಹೇಯವಾದ ಚಿತ್ರಗಳೇ ಕಣ್ಣಿಗೆ ಕಟ್ಟುವ ಇವತ್ತಿನ ಅತ್ಯಂತ ವಿಷಾದದ ಘಳಿಗೆಗಳಲ್ಲಿ ಮೇಲೆ ಹೇಳಿದ ನೆನಪುಗಳನ್ನು ಉಳಿಸಿಕೊಂಡು ಕ್ರಿಯಾಶೀಲರಾಗುವುದು ಬಹಳ ಮುಖ್ಯವಾಗುತ್ತದೆ.

೨೦೦೬

* * *