ಉತ್ತರ ಕೊರಿಯಾದಲ್ಲಿ ನಾನು ಓಡಾಡಿದ್ದು ಎಂಬತ್ತರ ದಶಕದ ಕೊನೆಯಲ್ಲಿ. ನಾನು ಕೇರಳದಲ್ಲಿದ್ದಾಗ. ಅದರ ರಾಜಧಾನಿ ಪ್ಯಾಂಗ್ ಯಾಂಗ್‌ಗೆ ನೇರವಾಗಿ ಹೋಗುವಂತೆ ಇರಲಿಲ್ಲ. ಚೀನಾದ ಬೀಜಿಂಗ್‌ನಲ್ಲಿ ವಿಮಾನದಲ್ಲಿ ಹೋಗಿ ಇಳಿದು, ಅಲ್ಲಿನ ನಮ್ಮ ರಾಯಭಾರ ಕಛೇರಿಯ ಸಹಾಯ ಪಡೆದು ರೈಲು ಹತ್ತಿ ಪ್ರಯಾಣ ಮಾಡಿ ಪ್ಯಾಂಗ್ ಯಾಂಗ್ ತಲುಪಬೇಕು. ಹೆಚ್ಚು ಕಡಿಮೆ ಪ್ರತಿವಾರ ಹಿಂದೂ ಪತ್ರಿಕೆಯಲ್ಲಿ ಮಹಾನಾಯಕ ಕಿಮ್‌ಚಿತ್ರದಡಿ ಇಡೀ ಪುಟದಲ್ಲಿ ಸಣ್ಣ ಅಕ್ಷರದಲ್ಲಿ ಪ್ರಕಟವಾಗುತ್ತಿದ್ದ ಉತ್ತರ ಕೊರಿಯಾ ಸರ್ಕಾರದ ಜಾಹಿರಾತನ್ನು (ತನ್ನ ಅಸ್ತಿತ್ವವನ್ನೇ ದಾಖಲಿಸಿ ಮುಂದೊಡ್ಡಿಕೊಳ್ಳುವ ವೈಚಿತ್ರ್ಯವನ್ನು) ನೋಡಿ ನೋಡಿಯೇ ಬೇಸರವಾಗಿದ್ದ ನನಗೆ ಅನಿರೀಕ್ಷಿತ ಅನುಭವ ಕಾದಿತ್ತು. ಆ ಬಗ್ಗೆ ಈ ಲೇಖನ.

ನನ್ನನ್ನು ಒಂದು ಪಂಚತಾರಾ ಹೊಟೇಲಿನಲ್ಲಿ ಇಳಿಸಿದರು. ಹೆಸರಿಗೆ ಇದು ಪಂಚತಾರಾ ಹೊಟೇಲು. ಆದರೆ ಅಲ್ಲಿ ಸಿಗುತ್ತಿದ್ದ ಊಟ ಉಪಚಾರಗಳು ಅಷ್ಟಕ್ಕಷ್ಟೇ. ಸಾಮಾನ್ಯವಾಗಿ ಎಲ್ಲ ಕಮ್ಯುನಿಸ್ಟ್ ದೇಶಗಳೂ ಅದ್ಭುತವಾದ ರಸ್ತೆಗಳನ್ನೂ ಗಗನ ಚುಂಬಿ ಕಟ್ಟಡಗಳನ್ನೂ ಪಂಚತಾರಾ ಹೊಟೇಲುಗಳನ್ನೂ ಯಾಕೆ ಜನರಿಗೆ ಕಣ್ಣು ಕುಕ್ಕುವಂತೆ ಒಡ್ಡುತ್ತಾರೋ?

ಸ್ಟಾಲಿ‌ನ್‌ ಕಾಲದಲ್ಲಿ ಮಾಸ್ಕೋನಲ್ಲಿ ಎಲ್ಲೆಂದರಲ್ಲಿ ಕಾಣುವಂಥ ಬಹುದೊಡ್ಡ ಅರಮನೆಗಳು ಇದ್ದವು. ಈ ಅರಮನೆಗಳಲ್ಲಿ ನಿತ್ಯೋಪಯೋಗಿ ಸಾಮಾನುಗಳನ್ನು ಕೊಳ್ಳಬಹುದಿತ್ತು. ಇಂತಹ ಒಂದು ಅರಮನೆಯಲ್ಲಿ ಮಿನುಗಿ ಮಿಂಚು ಶಾಂಡಲಿಯರ್‌ ಒಂದರ ಕೆಳಗೆ ನಿತ್ಯದ ಬ್ರೆಡ್‌ಗಾಗಿ ಕ್ಯೂ ನಿಂತವರನ್ನು ನಾನು ಕಂಡಿದ್ದೆ. ರೋಮ್‌ನಂಥ ಚಕ್ರಾಧಿಪತ್ಯವಾಗಬೇಕೆಂಬ ಕನಸನ್ನು ಎಲ್ಲ ಯೂರೋಪಿಯನ್ನರಂತೆ ರಷ್ಯಾವೂ ಕಾಣಲು ಹೋಗಿ ನಿತ್ಯ ಜೀವನದಲ್ಲಿ ಸಮಾಧಾನಿಯೂ ಸುಖಿಯೂ ಆದ ತನ್ನ ಉದ್ದೇಶಿತ ಸಮಾಜವಾದಿ ವ್ಯವಸ್ಥೆಯನ್ನು ಕಟ್ಟಲಾರದೇ ಹೋಯಿತು. ಹೀಗೆಯೇ ತಾನೊಂದು ಮಹಾನ್‌ರಾಷ್ಟ್ರವಾಗಬೇಕೆಂಬ ಹಂಬಲ ಉತ್ತರ ಕೊರಿಯಾವನ್ನೂ ರೋಗಗ್ರಸ್ತ ಮಾಡಿತ್ತು ಎಂಬುದು ಪ್ಯಾಂಗ್‌ಯಾಂಗ್‌ನಲ್ಲಿ ಕಣ್ಣಿಗೆ ಹೊಡೆಯುವಂತೆ ತೋರುತ್ತಿತ್ತು. ಇದನ್ನು ಜಗತ್ತು ಗುರುತಿಸುತ್ತಿಲ್ಲವೆಂಬ ಸಂಕಟದಲ್ಲಿ ಉತ್ತರ ಕೊರಿಯಾ ಸರಕಾರ ತನ್ನನ್ನು ತಾನೇ ಜಾಹೀರಾತು ಗೊಳಿಸಿಕೊಳ್ಳುತ್ತಾ ಇದ್ದದ್ದು. ವಿಪರ್ಯಾಸವೆಂದರೆ ಉತ್ತರ ಕೊರಿಯಾಕ್ಕೆ ಅದರ ಅಗತ್ಯ ಈಗ ಇಲ್ಲೇ ಇಲ್ಲ. ಅಣುಬಾಂಬನ್ನು ತಾನೂ ತಯಾರಿಸಬಲ್ಲೆ ಎಂಬುದನ್ನು ಲೋಕಕ್ಕೆ ಗೊತ್ತಾಗುವಂತೆ ಮಾಡಿದ ಕ್ಷಣದಿಂದಲೇ ಈಗ ಉತ್ತರ ಕೊರಿಯಾ ಸತತವಾಗಿ ಸಿಎನ್‌ಎನ್‌ನಲ್ಲಿ ಬಿಬಿಸಿಯಲ್ಲಿ ಕಾಣಿಸಿಕೊಳ್ಳತೊಡಗಿದೆ. ಅಂತೂ ತನ್ನ ಒಂದು ಉದ್ದೇಶದಲ್ಲಿ ಉತ್ತರ ಕೊರಿಯಾ ಗೆದ್ದಿದೆ. ಅದಕ್ಕೊಂದು ಅಸ್ತಿತ್ವ ಸಿಕ್ಕಿದೆ. ಹೀಗೆ ಒಂದು ಮಹಾನ್‌ರಾಷ್ಟ್ರದ ಅಸ್ತಿತ್ವಕ್ಕಾಗಿ ಅಣ್ವಸ್ತ್ರ ಬಲದ ಮೇಲೆ ನಿಲ್ಲುವ ದೇಶಗಳೆಲ್ಲವೂ ತನ್ನ ಜನರನ್ನು ಮಾತ್ರ ಹಸಿದ ಬಡಪಾಯಿಗಳಾಗಿ ಉಳಿಸಿಕೊಂಡಿರುತ್ತವೆ.

* * *

ಈ ಪಂಚತಾರಾ ಹೊಟೇಲಿನಲ್ಲಿ ಕೊರಿಯಾದ ರುಚಿಯೇ ಇಲ್ಲದ ಸಪ್ಪೆಯೂಟವನ್ನು ಮಾಡುತ್ತ ನನ್ನ ಇಬ್ಬರು ದುಭಾಷಿ ಸಂಗಡಿಗರ ಜತೆ ಉತ್ತರ ಕೊರಿಯಾದ ಮಹತ್ವವನ್ನು ನನಗೆ ಮನದಟ್ಟು ಮಾಡುವ ನೋಡಬೇಕಾದ ಎಲ್ಲವನ್ನೂ ನೋಡಿದೆ. ಎಲ್ಲಿ ಕಣ್ಣೆತ್ತಿ ನೋಡಿದರೂ ಎತ್ತರವಿದ್ದ ಜಾಗದಲ್ಲೆಲ್ಲಾ ಕಾಣುತ್ತಿದ್ದುದು ಕಿಮ್ –  ಸಾಂಗ್‌ನ ಮುಖವೇ. (ಅವನ ಈ ಹೊಸ ಹೆಸರಿನ ಅರ್ಥ, ಕಿಮ್‌ಎನ್ನುವ ಸೂರ್ಯ). ಇವನು ಹುಟ್ಟಿದ ಹಳ್ಳಿಯನ್ನೂ ಅವನ ಸಾಮಾನ್ಯ ಬಡ ಮನೆಯನ್ನೂ ನೋಡಿದ್ದಾಯಿತು. ಎರಡನೇ ಮಹಾಯುದ್ಧದ ನಂತರ ಪ್ರಪಂಚವನ್ನು ಅಮೆರಿಕ ಮತ್ತು ಸೋವಿಯತ್‌ದೇಶಗಳು ಹಂಚಿಕೊಳ್ಳುವ ಕುಟಿಲೋಪಾಯದಲ್ಲಿ ಈ ಕಿಮ್‌ಸೋವಿಯತ್‌ರ ಪರವಾಗಿದ್ದವನು. ಕೆಂಪು ಸೈನ್ಯದಲ್ಲಿದ್ದು ಜಪಾನಿನ ವಿರುದ್ಧ ಹೋರಾಡಿದ ಈ ಶೂರ ಉತ್ತರ ಕೊರಿಯಾದ ನಾಯಕನಾದ. ೧೯೪೫ ರಲ್ಲಿ ಇವನ ವಯಸ್ಸು ೩೩. ಇವನು ನಿಜವಾದ ಜನನಾಯಕ ಎಂದು ಹಲವರ ಅಭಿಪ್ರಾಯ. ಯಾಕೆಂದರೆ ಪ್ರಾರಂಭದಿಂದಲೂ ಈತ ಕೊರಿಯಾವನ್ನು ಆಕ್ರಮಿಸಿದ್ದ ಜಪಾನೀಯರ ವಿರುದ್ಧ ಗೆರಿಲ್ಲಾ ಹೋರಾಟದಲ್ಲಿ ಪಾಲ್ಗೊಂಡವನು. ಇವನಿಗೆ ಸಮಾನನಾದ ನಾಯಕ ದಕ್ಷಿಣ ಕೊರಿಯಾದಲ್ಲಿ ಇರಲಿಲ್ಲ. ಈತನ ಒಂದು ಚಿತ್ರವಿರುವ ಬ್ಯಾಡ್ಜ್ ಒಂದನ್ನು ತಮ್ಮ ಅಂಗಿಯ ಮೇಲೆ ಧರಿಸದವರು ಯಾರೂ ಉತ್ತರ ಕೊರಿಯಾದಲ್ಲಿ ನನಗೆ ಕಾಣಲಿಲ್ಲ.

ಆಳುವವನು ಜನರ ಪ್ರೀತಿಯನ್ನೂ ಭಯವನ್ನೂ ಪಡೆದಿರಬೇಕು ಎಂಬ ಮಾತಿದೆ. ಪ್ರೀತಿಯಿಲ್ಲದಿದ್ದರೆ ಭಯವಾದರೂ ಇರಬೇಕು. ಯಾಕೆಂದರೆ ಭಯದಲ್ಲೇ ಬದುಕಬೇಕಾಗಿ ಬಂದವನು ತಾನು ಭಯ ಪಡುವುದನ್ನು ಪ್ರೀತಿಸುತ್ತೇನೆಂದು ಆತ್ಮವಂಚನೆ ಮಾಡಿಕೊಳ್ಳುವುದು ಸಾಧ್ಯವಿದೆ. ರಾಷ್ಟ್ರಗಳನ್ನು ಕಟ್ಟುವ ದುಷ್ಟರೆಲ್ಲರಿಗೂ ಇದು ಗೊತ್ತು. ಅಶೋಕ ಮಾತ್ರ ಪ್ರಾಯಶಃ ಇದಕ್ಕೆ ವಿನಾಯಿತಿ ಇರಬಹುದು.

ನನ್ನ ಸಹಾಯಕ ಮಿತ್ರರ ಪ್ರಕಾರ ತಮ್ಮ ಮಹಾನಾಯಕ ಲೆನಿನ್, ಮಾರ್ಕ್ಸ್, ಸ್ಟಾಲಿನ್ ಮತ್ತು ಮಾವೋ ಈ ನಾಲ್ವರಿಗಿಂತಲೂ ತನ್ನ ವೈಚಾರಿಕತೆಯಲ್ಲಿ ಮುಂದಿದ್ದಾನೆ. ಮಾವೋ ಹೊಸದನ್ನು ಸೇರಿಸಿದ ಎಂದು ಹಲವರು ನಂಬುತ್ತಿದ್ದರೆ ಕಿಮ್‌ಇನ್ನೂ ಒಂದು ಹೊಸದನ್ನು ಸೇರಿಸಿದ ಎಂದು ಇವರು ನಂಬಿದ್ದರು. ಹೊಸದನ್ನು ಸೇರಿಸಿದ್ದು ಮಾತ್ರವಲ್ಲ ಅದನ್ನು ಮುಂದುವರಿಸಿಕೊಂಡು ಹೋಗುವ ಮಗನನ್ನೂ ಹುಟ್ಟಿಸಿಕೊಂಡಿದ್ದ. ಈಗ ಆಡಳಿತದಲ್ಲಿ ಇರುವ ಕಿಮ್‌ನನ್ನು ಅವರು ಡಿಯರ್ ಲೀಡರ್ ಎಂದು ಆಗ ಕರೆಯುತ್ತಿದ್ದುದು. ಈಗಲೂ ಅವನು ಡಿಯರ್‌ಲೀಡರ್.

ಪ್ರಾರಂಭದಲ್ಲಿ ದಕ್ಷಿಣಕ್ಕಿಂತ ಉತ್ತರ ಕೊರಿಯ ಆರ್ಥಿಕವಾಗಿ ಮುಂದಿತ್ತು. ಉತ್ತರ ಕೊರಿಯಾ ಸೋವಿಯತ್‌ಯೂನಿಯನ್‌ನಿಂದಲು ಚೀನಾದಿಂದಲೂ ಸಹಾಯವನ್ನು ಪಡೆದಿದ್ದರೂ ಅವರ ಬಾಲಬಡುಕ ರಾಷ್ಟ್ರವಂತೂ ಖಂಡಿತಾ ಅಲ್ಲವೆಂಬುದು ಕಿಮ್‌ನ ಅನುಯಾಯಿಗಳ ಪ್ರಚಾರ. ಇದನ್ನು ವಿವರಿಸಲು ಅವರೊಂದು ಶಬ್ದವನ್ನು ಉಪಯೋಗಿಸುತ್ತಿದ್ದರು. ಆ ಶಬ್ದ ‘ಜೂಷೆ’ (Jusche) ಅಂದರೆ ಸ್ವಾವಲಂಬನೆ. ಆದರೆ ಈ ಸ್ವದೇಶಿಯಲ್ಲಿ ಸಾಕಷ್ಟು ರಷ್ಯಾ ಮತ್ತು ಚೀನಾ ಸಹಕಾರವಿತ್ತು. ರಷ್ಯಾಕ್ಕೂ ಚೀನಾಕ್ಕೂ ನಡುವೆ ಜಗಳ ಪ್ರಾರಂಭವಾದಾಗ ಕಿಮ್ ಕೊಂಚ ಚೀನಾದ ಪರವಾಗಿ ಇದ್ದಿದ್ದರಿಂದ ಅವರ ಆರ್ಥಿಕ ವ್ಯವಸ್ಥೆಗೆ ತೊಂದರೆಯಾಯಿತು ಎನ್ನುತ್ತಾರೆ.

ನಾನು ಹಲವು ಒಲ್ಳೆಯ ಶಾಲೆಗಳನ್ನೂ ಕಾರ್ಖಾನೆಗಳನ್ನೂ ಕವಾಯತುಗಳನ್ನೂ ನೋಡಿದೆ. ಇವೆಲ್ಲವನ್ನೂ ವಿವರಿಸುತ್ತಾ ಹೋಗುವುದರಲ್ಲಿ ಯಾವ ಸತ್ಯದ ದರ್ಶನವೂ ಆಗುವುದಿಲ್ಲ. ಭೇಟಿಯಾಗಲು ಬಂದವರಿಗೆ ತೋರಿಸಲು ಇರುವ ಸಂಸ್ಥೆಗಳು ಇವು. ಈ ಬಗ್ಗೆ ನಾನು ಬರೆಯದೆ ನನ್ನ ವಿಶೇಷವಾದ ಎರಡು ಅನುಭವಗಳನ್ನು ಇಲ್ಲಿ ದಾಖಲಿಸುತ್ತೇನೆ.

* * *

ಉತ್ತರ ಕೊರಿಯಾದಲ್ಲಿ ನಡೆದ ಒಂದು ಪಂದ್ಯಾವಳಿಯಲ್ಲಿ ಭಾಗವಹಿಸಲು ದಕ್ಷಿಣ ಕೊರಿಯಾದಿಂದ ರಿಮ್ ಎಂಬ ಕನ್ಯೆ ಬಂದಿದ್ದಳು. ದಕ್ಷಿಣ ಕೊರಿಯಾದ ಅನುಮತಿಯನ್ನು ಪಡೆಯದೆ ಧಿಕ್ಕರಿಸಿ ಈಕೆ ಉತ್ತರ ಕೊರಿಯಾಕ್ಕೆ ಬಂದಿದ್ದಳು. ನಾನು ಹೋದ ಮಾರನೆಯ ದಿನ ಅವಳು ಇಡೀ ಉತ್ತರ ಕೊರಿಯಾದ ಹೀರೋಯಿನ್‌ಆಗಿದ್ದಳು. ಅವಳ ಸುತ್ತ ಒಂದು ಆಂದೋಲನವೇ ಪ್ರಾರಂಭವಾಯಿತು. ಎರಡು ಕೊರಿಯಾಗಳೂ ಒಟ್ಟಾಗಬೇಕೆಂಬುದು ಈ ಆಂದೋಲನ. ಇದರಲ್ಲಿ ಹಲವು ಪ್ಯಾಲೆಸ್ಟೇನಿಯರೂ ಭಾಗವಹಿಸಿದ್ದರು. ಅಮೆರಿಕ ಗಾಂಧಿವಾಧಿಯೊಬ್ಬನೂ ಇದರಲ್ಲಿದ್ದ. ಎರಡು ದೇಶ ಒಟ್ಟಾಗುವುದು ಅವಶ್ಯವೆಂದು ತಿಳಿದವರಲ್ಲಿ ನಾನೂ ಒಬ್ಬನಾದ್ದರಿಂದ ಈ ಆಂದೋಲನದಲ್ಲಿ ಭಾಗಿಯಾದೆ. ಪರದೇಶಿಯನಾಗಿ ಭಾಗಿಯಾದ ನಾನು ಒಂದು ಸುದ್ದಿಯೂ ಆದೆ. ಎಲ್ಲರ ಜತೆ ನಾನೂ ಮಾರ್ಚ್ ಮಾಡಿದೆ. ಭಾಷಣ ಮಾಡಿದೆ. ಇದರಿಂದ ನನ್ನ ಸಹಾಯಕರು ಬಹಳ ಸಂತೋಷಪಟ್ಟರು. ನಾನು ಪ್ರತಿನಿತ್ಯ ಅವರನ್ನು ಒಂದು ವಿಷಯ ಕೇಳುತ್ತಿದ್ದೆ. ಎಲ್ಲ ಕೊರಿಯನ್ನರೂ ಊಟ ಮಾಡುವ ಹೊಟೇಲ್ ಒಂದಕ್ಕೆ ನನ್ನನ್ನು ಕರೆದುಕೊಂಡು ಹೋಗಿ ಎಂದು.

ಕೊನೆಗೆ ಅವರು ನನಗಾಗಿ ಆ ಧೈರ್ಯವನ್ನು ಮಾಡಿದರು. ಅವರು ನನ್ನನ್ನು ವಿಐಪಿಯೆಂದು ಮುಂದಾಗಿ ಹೋಗಿ ಊಟಕ್ಕೆ ಕೂರಿಸಲು ಪ್ರಯತ್ನಿಸಿದಾಗ ನಾನು ಒಪ್ಪಲಿಲ್ಲ. ಕ್ಯೂನಲ್ಲಿ ನಿಂತು ಕಾದು ಆ ಹೊಟೇಲ್‌ನಲ್ಲಿ ಸಿಕ್ಕಿದ ನಿಜವಾದ ಕೊರಿಯಾದ ಊಟವನ್ನು ಮಾಡಿ ಬಂದೆ. ಅಲ್ಲಿ ನಾನು ಕಂಡ ಪ್ರತಿಯೊಬ್ಬನೂ ಕಿಮ್‌ಬ್ಯಾಡ್ಜನ್ನು ಧರಿಸಿದ್ದ ನನ್ನನ್ನು ಕೊರಿಯಾ ಒಕ್ಕೂಟದ ಆಂದೋಲನದಲ್ಲಿ ಭಾಗವಹಿಸಿದವನೆಂದೂ ಬಹಳ ಜನ ಗುರುತಿಸಿ ಕೈಕುಲುಕಿದರು.

ಇದನ್ನು ಬರೆಯುತ್ತಿದ್ದಂತೆ ನಮ್ಮ ನಾಡಿನ ಮಹಾ ಋಷಿಗಳಲ್ಲಿ ಒಬ್ಬರಾದ ಅರವಿಂದರು ಎರಡು ಕೊರಿಯಾಗಳ ನಡುವೆ ಯುದ್ಧ ನಡೆಯುತ್ತಿದ್ದಾಗ ಇನ್ನೊಂದರ್ಥದಲ್ಲಿ ಅಮೆರಿಕಕ್ಕೂ ಸೋವಿಯತ್‌ಯೂನಿಯನ್‌ಗೂ ನಡುವೆ ಯುದ್ಧ ನಡೆಯುತ್ತಿದ್ದಾಗ ತಳೆದ ನಿಲುವು ನನಗೆ ನೆನಪಾಯಿತು. ಅವರು ಈ ಯುದ್ಧದಲ್ಲಿ ನಾವು ಅಮೆರಿಕದ ಪರ ಇರಬೇಕು ಎಂಬ ಹೇಳಿಕೆಯನ್ನು ತಮ್ಮ ಏಕಾಂತ ತೊರೆದು ಹೇಳಿದ್ದರು. ಅವರ ವಿದ್ವತ್ತಿಗಾಗಿ ಅರವಿಂದರನ್ನು ಮೆಚ್ಚುವ ನನಗೆ ಈಗಲೂ ಇದೊಂದು ಬಿಡಿಸಲಾರದ ಒಗಟೇ. ಅರವಿಂದರೇಕೆ, ನಮ್ಮ ಕಾರಂತರು, ನಮ್ಮ ಅಡಿಗರು, ಕ್ವೆಸ್ಟ್ ಪತ್ರಿಕೆ ಸಂಪಾದಕರಾದ ನನ್ನ ಮೆಚ್ಚಿನ ಶಾ – ಎಲ್ಲರೂ ಅಮೇರಿಕಾದ ಬೆಂಬಲಿಗರೇ. ಇನ್ನು ಇವರ ವಿರೋಧಿಗಳೋ ಭೀಷಮ್ ಸಹಾನಿಯಂತೆ ಸೋವಿಯತ್‌ಯೂನಿಯನ್ನಿನಲ್ಲಿ ಕಂಡ ಕ್ರೌರ್ಯವನ್ನು ಕಂಡೂ ಕಣ್ಣುಮುಚ್ಚಿ ಕೂತವರು.

ಪ್ರತಿಯೊಬ್ಬ ಕೊರಿಯನ್‌ನ ಹೃದಯದಲ್ಲೂ ತಾವು ಒಟ್ಟಾಗಬೇಕೆಂಬ ಆಸೆ ಕೈಗೂಡದಂತೆ ಜಗತ್ತಿನ ಮಹಾನ್ ರಾಷ್ಟ್ರಗಳು ಸಂಚು ಮಾಡಿದವು. ಇವತ್ತು ಜಗತ್ತಿನ ಎಲ್ಲ ಸಮಸ್ಯೆಗಳ ಮೂಲವಿರುವುದು ಈ ಎರಡು ರಾಷ್ಟ್ರಗಳ ಪಾಪಕೃತ್ಯಗಳಲ್ಲಿ.

* * *

ಕೊರಿಯಾಕ್ಕೆ ತನ್ನ ಸಂಸ್ಕೃತಿಯಲ್ಲಿ ಪ್ರೀತಿಯಿದೆಯೆ? ತನ್ನತನದ ಹುಡುಕಾಟವಿದೆಯೆ? ದಕ್ಷಿಣ ಕೊರಿಯಾದ ಲೇಖಕನೊಬ್ಬ ನನಗೆ ಹೇಳಿದ್ದ: ‘ನಾವು ಕೊರಿಯನ್ ಭಾಷೆಯಲ್ಲಿ ಬರೆದದ್ದನ್ನು ಓದುವವರು ಕಡಿಮೆ. ಎಲ್ಲ ದರಿದ್ರ ಅಮೇರಿಕನ್ ಪುಸ್ತಕಗಳೂ ಕೊರಿಯನ್‌ಗೆ ಕೂಡಲೇ ಭಾಷಾಂತರವಾಗಿ ಬಿಡುತ್ತವೆ. ಸಾಲ್‌ಬೆಲ್ಲೋ ಸಹಿತವಾಗಿ. ಭಾಷಾಂತರ ನಮ್ಮನ್ನು ಕಾಡುವ ಶಾಪ’.

ವಾಷಿಂಗ್ಟನ್‌ನಲ್ಲಿ ಒಮ್ಮೆ ನಾನು ಒಬ್ಬ ಉಡುಪಿ ಕಡೆಯ ಸಾಹಸಿ ವ್ಯಾಪಾರಿಯೊಬ್ಬನನ್ನು ಭೇಟಿಯಾದೆ. ಕಾರಂತರನ್ನು ಬಲ್ಲ ಈತ ಇನ್ನೂ ತನ್ನ ಒಳ ಮನಸ್ಸಿನಲ್ಲಿ ಜೀವಂತನಾಗಿದ್ದ. ದಕ್ಷಿಣ ಕೊರಿಯಾಕ್ಕೆ ಈತ ವ್ಯಾಪಾರಕ್ಕೆಂದು ಯಾವಾಗಲೂ ಹೋಗುತ್ತಿರುತ್ತಾನೆ. ದಕ್ಷಿಣ ಕೊರಿಯಾದ ಐತಿಹಾಸಿಕ ಮಹತ್ವದ ಪ್ರದೇಶಗಳನ್ನು ನೋಡಲು ಒಮ್ಮೆ ಈತ ಇಚ್ಛಿಸಿದನಂತೆ. ಇವನ ಗೆಳೆಯರಾದ ದಕ್ಷಿಣ ಕೊರಿಯಾದ ವ್ಯಾಪಾರಿಗಳು ಆಗ ಇವನಿಗೆ ಹೇಳಿದ ಮಾತು ಇದು: ‘ನಮಗೆ ನಮ್ಮ ಭೂತಕಾಲ ಬೇಕಿಲ್ಲ. ಅದನ್ನು ಸಂಪೂರ್ಣ ನಾಶಮಾಡಿ ನಾವು ಹೊಸಬರಾಗಲು ಹೊರಟಿದ್ದೇವೆ. ಈ ಐತಿಹಾಸಿಕ ಸ್ಥಳಗಳನ್ನು ನಾವು ಈವರೆಗೆ ನೋಡಲು ಹೋದದ್ದೇ ಇಲ್ಲ.’

ಉತ್ತರ ಕೊರಿಯಾದವರು ಜಪಾನಿನ ವಸಾಹತುಶಾಹಿಯಿಂದ ಸ್ವತಂತ್ರರಾದ ತಾವೇ ನಿಜವಾದ ಕೊರಿಯಾ ಎನ್ನುತ್ತಾರೆ. ಆದ್ದರಿಂದ ನನ್ನ ಸಂಗಡಿಗರಿಗೆ ನಾನು ಹೇಳಿದೆ –  ನಿಮ್ಮ ಬಹು ಹಿಂದಿನ ಬೌದ್ಧ ದೇವಾಲಯವೊಂದನ್ನು ನೋಡಲು ನನಗೆ ಆಸೆ. ತಮ್ಮ ಕೊರಿಯಾದಲ್ಲಿ ಎಲ್ಲ ಮತ ಧರ್ಮಗಳನ್ನೂ ನಾವು ನಿಷೇಧಿಸಿದ್ದೇವೆ ಎಂದು ಅವರು ಉತ್ತರ ಕೊಟ್ಟರು. ಆದರೂ ಬೇಕೆಂದವರಿಗೆ ಅವರ ಪೂಜಾ ಸ್ಥಳಗಳನ್ನು ಉಳಿಸಿಕೊಳ್ಳಲು ಅವಕಾಶವಿದೆ ಎಂದರು. ಆದ್ದರಿಂದ ಹೀಗೆ ಸ್ವ ಇಚ್ಛೆಯಿಂದ ಉಳಿದ ಒಂದು ಪುರಾತನ ಬೌದ್ಧ ದೇವಾಲಯಕ್ಕೆ ನನ್ನನ್ನು ಕರೆದುಕೊಂಡು ಹೋದರು.

ಅಲ್ಲೊಬ್ಬ ಬಡಪಾಯಿಯಂತೆ ಕಾಣುತ್ತಿದ್ದ ಬೌದ್ಧಭಿಕ್ಷು ಇದ್ದ. ಅವನು ತೊಟ್ಟ ಅಂಗಿಯ ಮೇಲೆ ದೇಶದ ಪರಮಪುರುಷನಾದ ಕಿಮ್‌ನ ಬ್ಯಾಡ್ಜ್ ಇರಲಿಲ್ಲ. ಅಷ್ಟು ಅವನು ಸ್ವತಂತ್ರನಾಗಿದ್ದ ಎನ್ನಬಹುದೇನೊ? ತನ್ನ ದೇವಾಲಯದಲ್ಲಿದ್ದ ಹಳೆಯ ಗ್ರಂಥಗಳನ್ನು ಆತ ನನಗೆ ತೋರಿಸಿದ. ಸುತ್ತಮುತ್ತಲಿನ ಗ್ರಾಮಗಳಿಂದ ಹಿಂದಿನ ಕಾಲದಲ್ಲಿ ಸಿಗುತ್ತಿದ್ದ ಸಂಭಾವನೆ ಅವನಿಗಿರಲಿಲ್ಲ. ಯಾರೋ ಒಬ್ಬಿಬ್ಬರು ಮುದುಕರು ಪ್ರಾರ್ಥನೆಗಾಗಿ ಬಂದು ಹೋಗುತ್ತಿದ್ದರು. ನಾನು ಕೇಳಿದ ಪ್ರಶ್ನೆಗಳಿಗೆ ಆತ ನನ್ನ ಸಂಗಡಿಗರಿಗೆ ಇಷ್ಟವಾಗುವ ಉತ್ತರಗಳನ್ನೇ ಕೊಟ್ಟ. ಅದಿರಲಿ! ನಾನು ಕೇಳುವ ಪ್ರಶ್ನೆಗಳಿಗಿಂತ ಮುಂಚೆಯೇ ಅವನು ಕೆಲವು ನಿರೀಕ್ಷಿತ ಉತ್ತರಗಳನ್ನು ಕೊಟ್ಟಿದ್ದ. ನಾನು ನನ್ನ ಸಂಗಡಿಗರನ್ನು ಕೇಳಿದೆ: ನಿಮಗೆ ಬೌದ್ಧಧರ್ಮ ಮುಖ್ಯವಲ್ಲವೇ? ಅದಕ್ಕೆ ನನ್ನ ಸಂಗಡಿಗರು ಕೊಟ್ಟ ಉತ್ತರ ದಕ್ಷಿಣಕೊರಿಯಾದ ವ್ಯಾಪಾರಿಗಳು ಕೊಟ್ಟ ಉತ್ತರಕ್ಕಿಂತ ಭಿನ್ನವಾಗಿರಲಿಲ್ಲ –  ‘ನಾವೊಂದು ಹೊಸ ಕಾಲದಲ್ಲಿ ಇದ್ದೇವೆ. ಈ ಕಾಲವನ್ನು ಸೃಷ್ಟಿಸುತ್ತಿರುವಾತ ನಮ್ಮ ಮಹಾನಾಯಕ ಕಿಮ್‌. ಬುದ್ಧ ಇರಲಿ, ಮಾರ್ಕ್ಸ್, ಲೆನಿನ್‌ಗಿಂತಲೂ ಆತ ಮುಂದೆ ಹೋಗಿ ತನ್ನ ವಿಚಾರಗಳನ್ನು ಮಂಡಿಸಿದ್ದಾನೆ.’ ಇದು ಹೇಗೂ ಕಣ್ಣುಹಾಯಿಸದಲ್ಲೆಲ್ಲ ಆಕಾಶ ಕಾಣಿಸದಂತೆ ನಾನು ಕಂಡ ಮುಖವಲ್ಲವೆ? ಆದ್ದರಿಂದ ಅಷ್ಟಕ್ಕೇ ನಾನು ಅವರನ್ನು ಬಿಡಲಿಲ್ಲ. ‘ಯಾವ ಕಾರಣಕ್ಕಾದರೂ ನಿಮ್ಮ ಸಾಂಸ್ಕೃತಿಕ ಇತಿಹಾಸದಲ್ಲಿ ಬುದ್ಧ ನಿಮಗೆ ಮುಖ್ಯ ಎನಿಸುವುದಿಲ್ಲವೇ?’

ನನ್ನ ಸಂಗಡಿಗರಲ್ಲೊಬ್ಬ ಯೋಚಿಸಿ, ನಡೆಯುತ್ತಿದ್ದ ನನ್ನನ್ನು ನಿಲ್ಲಿಸಿ, ಅತ್ಯಂತ ಆಶ್ಚರ್ಯಕರವಾದ ಒಂದು ಉತ್ತರ ಕೊಟ್ಟ. ‘ಮುದ್ರಣ ತಂತ್ರಜ್ಞಾನದ ಬೆಳವಣಿಗೆಯ ದೃಷ್ಟಿಯಿಂದ ಬುದ್ಧ ನಮಗೆ ಮುಖ್ಯ. ಯಾಕೆಂದರೆ ಅವನ ಅನುಯಾಯಿಗಳು ಮೊದಲು ಪುಸ್ತಕಗಳನ್ನು ಅಚ್ಚು ಮಾಡಿದವರು.’

* * *

ಈ ಉತ್ತರದಿಂದ ಕಸಿವಿಸಿಗೊಂಡ ನಾನು ಇನ್ನೊಂದು ಮಾತು ಸೇರಿಸದೆ ಇರಲಾರೆ. ನನಗೆ ಬಡಪಾಯಿಯಂತೆ ಕರುಣಾಜನಕನಾಗಿ ಕಂಡ ಬೌದ್ಧ ಭಿಕ್ಷು ಮತ್ತು ಅವನ ಹಿರಿಯರು ಹಿಂದೆ ಹೇಗಿದ್ದಿರಬಹುದೆಂದು ಊಹಿಸಿದೆ. ಪ್ರಾಯಶಃ ಸುತ್ತಮುತ್ತಲಿನ ಗ್ರಾಮದ ಎಲ್ಲರೂ ಅವರ ಗೇಣಿದಾರರಾಗಿದ್ದಿರಬೇಕು. ಅವರು ಗೇಣಿ ಕೊಡದಿದ್ದರೆ ಅವರನ್ನು ಶಿಕ್ಷಿಸುವ ಅಧಿಕಾರ ಈ ಭಿಕ್ಷುಗಳಿಗೆ ಇದ್ದಿರಬೇಕು. ಒಂದು ಮಠದ ಜಗತ್ತಿನಿಂದ ಬಂದ ನನಗೆ ಹೇಗೆ ಮಠದಲ್ಲಿ ನಿತ್ಯದ ಪೂಜೆಯ ಜತೆಗೇ ನಿತ್ಯದ ಜಪ್ತಿಗಳೂ ನಡೆಯುತ್ತಿದ್ದುವೆಂಬುದು ಇನ್ನೂ ನೆನಪಿದೆ. ಆದರೂ ನನಗೆ ಬುದ್ಧ, ಕ್ರಿಸ್ತ, ಪೈಗಂಬರ, ಶಂಕರ, ಆನಂದತೀರ್ಥ, ರಾಮಾನುಜ, ರಮಣ ಪರಮಹಂಸ – ಎಲ್ಲರೂ ಬೇಕು. ಅವರ ವಿರೋಧಿಗಳಾದ ಮೆಟೀರಿಯಲಿಸ್ಟರಿಂದಲೂ ಮುಕ್ತರಾಗಿ ಬೇಕು; ಅವರ ಕಪಟ ಭಕ್ತರಿಂದಲೂ ಮುಕ್ತರಾಗಿ ಬೇಕು. ಅವರೇ ಆಗಿಬೇಕು; ಅವರ ಕಾಲದವರೂ ಆಗಿ ಬೇಕು; ನಮ್ಮ ಕಾಲಕ್ಕೆ ಸಲ್ಲುವವರೂ ಆಗಿ ಬೇಕು.

* * *

ನಾನು ಯಾವತ್ತೂ ಮರೆಯದ ಇನ್ನೊಂದು ಘಟನೆ. ಉತ್ತರ ಕೊರಿಯಾದಲ್ಲಿ ಅಪೂರ್ವ ಸೌಗಂಧಿಕ ಎಂಬ ಅರ್ಥ ಬರುವ ಒಂದು ಎತ್ತರದ ಪರ್ವತವಿದೆ. ಇದನ್ನು Mount Myohyangsan ಎನ್ನುತ್ತಾರೆ. ನನ್ನ ಐವತ್ತೇಳನೆಯ ವಯಸ್ಸಿನಲ್ಲಿ ನನಗೆ ಡಯಾಬಿಟಿಸ್ ತೊಂದರೆ ಇರುವುದನ್ನೂ ಮರೆತು ಈ ಸಂಗಡಿಗರ ಜತೆ ಬಹುಶ್ರಮಪಟ್ಟು ಹತ್ತಬೇಕಾದ ಆ ಬೆಟ್ಟವನ್ನು ಹತ್ತಿದೆ. ನನ್ನ ಜತೆ ನೂರಾರು ಜನ ಹತ್ತುತ್ತಿದ್ದರು. ಅವರೆಲ್ಲರೂ ದೃಢಕಾಯರು. ಇವರಲ್ಲಿ ಕೊರಿಯಾದ ಸೈನಿಕರೂ ಇದ್ದರು. ಹತ್ತಿ ಹತ್ತಿ ಸುಸ್ತಾದಾಗ ಸ್ವಲ್ಪ ಕೂತು ವಿಶ್ರಮಿಸಿ ಮತ್ತೆ ಏರಿ ಏರಿ ಹತ್ತುವುದು. ಹೀಗೆ ಕಣ್ಣೆದುರು ಏರುತ್ತಲೇ ಇರುವ ಎತ್ತರಗಳು ಮುಗಿಯುವುದನ್ನು ನಿರೀಕ್ಷಿಸುತ್ತಲೇ ಹತ್ತುತ್ತಾ ಹೋದ ನನಗೆ  ಇದ್ದಕ್ಕಿದ್ದಂತೆ ರಕ್ತದಲ್ಲಿನ ಎಲ್ಲ ಸಕ್ಕರೆಯೂ ಮಾಯವಾಗಿ ಮೈನಡುಕ ಉಂಟಾಯಿತು. ಕಣ್ಣುಕತ್ತಲೆ ಕಟ್ಟಿ ಜೋಲುವಂತಾಯಿತು. ಏನೂ ಅರಿಯದೆ ಕೂತಿಬಿಟ್ಟೆ. ನನ್ನ ಜೇಬಿನಲ್ಲಿ ಚಾಕಲೇಟ್ ಇರಲಿಲ್ಲ. ಅಮೆರಿಕದ ಚಾಕಲೇಟಿಗಾಗಿ ಆಸೆಪಡುವ ನನ್ನ ಸಂಗಡಿಗರ ಜೇಬಿನಲ್ಲೂ ಇರಲಿಲ್ಲ. ಅಲ್ಲಿ ನಡೆದಾಡುವ ಕೆಲವು ಸೈನಿಕರು ತಮ್ಮ ಹೆಗಲ ಮೇಲೆ ತಮ್ಮ ಆಹಾರದ ಗಂಟನ್ನು ಇಟ್ಟುಕೊಂಡಿರುವುದನ್ನು ನೋಡಿ ಅವರ ಕಡೆ ನಾನು ಬೆರಳು ಮಾಡಿ ತೋರಿದೆ. ಕೈಸನ್ನೆ ಮಾಡಿದೆ. ಒಬ್ಬ ಸೈನಿಕ ಬಂದು ತನ್ನ ಗಂಟನ್ನು ಬಿಚ್ಚಿದ. ಆ ಗಂಟಿನಲ್ಲೊಂದಷ್ಟು ಯಾವತ್ತೋ ಬೇಯಿಸಿದ ಹಳಸಿದ ಅನ್ನವಿತ್ತು. ತನ್ನ ಊಟಕ್ಕೆ ಇಟ್ಟುಕೊಂಡಿದ್ದುದನ್ನು ಅವನು ತುಂಬ ಪ್ರೀತಿಯಿಂದ ನನಗೆ ಕೊಟ್ಟ. ನನಗೆ ಗೊತ್ತಿರದ ಭಾಷೆಯಲ್ಲಿ ಬಹಳ ವಿನಯದಿಂದ ಇದನ್ನು ತಿನ್ನು ಎಂದ. ನಾನದನ್ನು ಪರಮಾನ್ನವೆಂಬಂತೆ ತಿಂದು ಸುಧಾರಿಸಿಕೊಳ್ಳುತ್ತಾ ಕೂತೆ. ನನ್ನ ಮೈಯಲ್ಲಿ ಮತ್ತೆ ಚೈತನ್ಯ ಹುಟ್ಟಿ ನಿಧಾನವಾಗಿ ಉಕ್ಕುವುದನ್ನು ಬಹಳ ಸುಖದಿಂದ ಅನುಭವಿಸಿದೆ. ಅಲ್ಲೊಬ್ಬ ಹೆಂಗಸು ಒಂದು ಮಗುವನ್ನು ಕರೆದುಕೊಂಡು ಹೋಗುತ್ತಿದ್ದಳು. ಕೊರಿಯಾದಲ್ಲಿ ಸುದ್ದಿಯಾಗಿದ್ದ ನನ್ನನ್ನು ಅವಳು ಗುರುತಿಸಿದಳು. ಮಗುವಿಗಾಗಿ ಅವಳು ಇಟ್ಟುಕೊಂಡಿದ್ದ ಕೊರಿಯನ್ ಚಾಕಲೇಟ್ ಅವಳ ಕೈಚೀಲದಲ್ಲಿ ಇತ್ತು. ಅದರಲ್ಲಿ ಕೆಲವನ್ನು ಅವಳಾಗಿಯೇ ಬಂದು ನನಗೆ ತಿನ್ನಲು ಕೊಟ್ಟಳು. ಮಹೋನ್ಮಾದದ ಅತಿಸರದಲ್ಲಿ ಮೆರೆಯುವ ಕಿಮ್‌ನನ್ನೇ ಎಲ್ಲೆಲ್ಲೂ ನೋಡಿ ಹೇಸುತ್ತಿದ್ದ ನನಗೆ ಈ ಜನ ಎಷ್ಟು ಒಳ್ಳೆಯವರು ಎನ್ನಿಸಿ ನನ್ನ ರಾಜಕೀಯ ಚಿಂತನೆಯೆಲ್ಲವೂ ಮರೆತು ಹೋಯಿತು.

ಸುಧಾರಿಸಿಕೊಂಡವನು ಎದ್ದು ನಿಂತು ಮತ್ತೆ ಹತ್ತಿ ಹತ್ತಿ ಶಿಖರವನ್ನು ತಲುಪಿದೆ. ಶಿಖರದಲ್ಲಿ ಒಂದು ಅರಮನೆ. ವರ್ಣಿಸಲಾರದಷ್ಟು ವೈಭವದ ಅರಮನೆ. ಈ ಅರಮನೆ ಅವರ ಮಹಾನಾಯಕ ಕಿಮ್‌ನ ವೈಭವವನ್ನು ಸಾರುವ ಅರಮನೆ. ಅಲ್ಲಿ ಅವನಿಗೆ ಸ್ಟಾಲಿನ ಕೊಟ್ಟ ವಿಮಾನವೋ ಕಾರೋ, ಚೀನಾ ಕೊಟ್ಟ ವಿಮಾನವೋ ಕಾರೋ, ಬೇರೆ ಬೇರೆ ದೇಶದವರು ಕೊಟ್ಟ ಬೆಳ್ಳಿ, ಚಿನ್ನದ ಬೊಂಬೆಗಳೋ, ತಟ್ಟೆಗಳೋ ಕಣ್ಣು ಕುಕ್ಕುವಂತೆ ತುಂಬಿಕೊಂಡಿದ್ದವು. ಅಲ್ಲಿರುವ ಪುಸ್ತಕಗಳನ್ನು ನೋಡಲು ನನ್ನನ್ನು ಕರೆದುಕೊಂಡು ಹೋದರು. ಜಗತ್ತಿನ ಹಲವು ಲೇಖಕರು ಕಿಮ್‌ಮೇಲೆ ಬರೆದ ಪುಸ್ತಕಗಳು ಅಲ್ಲಿದ್ದವು. ಆಶ್ಚರ್ಯ ಎನಿಸುವಂತೆ ಭಾರತೀಯರು ಬರೆದ ನೂರಾರು ಪುಸ್ತಕಗಳಿದ್ದವು. ನನಗೆ ಗೊತ್ತಿರುವ ಯಾವ ಲೇಖಕನ ಪುಸ್ತಕವೂ ಅಲ್ಲಿರಲಿಲ್ಲ. ಅತ್ಯಂತ ಸುಂದರವಾಗಿ ಮುದ್ರಿತವಾದ ಕೆಲವೇ ಪುಟಗಳ ಆದರೆ ಚರ್ಮದ ಹೊದಿಕೆ ಇರುವ ಪುಸ್ತಕಗಳವು.

ಬೆಟ್ಟವನ್ನು ಇಳಿದಿದ್ದಾಯಿತು. ಅಲ್ಲೊಂದು ಕೊಳ ಇತ್ತು. ಕೊಳದ ಬೆಂಚಿನ ಮೇಲೆ ನಾನೆಷ್ಟು ಸುಸ್ತಾಗಿ ಮಲಗಿದನೆಂದರೆ ನನಗೆ ಅಲ್ಲಾಡಿಸಬಲ್ಲ ಕಾಲುಗಳೇ ಇಲ್ಲ ಎನಿಸಿತ್ತು. ಸೂಟ್ ತೊಟ್ಟ ನನ್ನ ಇಬ್ಬರು ಸಂಗಡಿಗರು ತಮ್ಮ ಸೂಟುಗಳನ್ನು ಬಿಚ್ಚಿದರು. ನನ್ನ ಬಟ್ಟೆಯನ್ನೂ ಬಿಚ್ಚಿದರು. ಬರಿ ಕಾಚಾದಲ್ಲಿ ನನ್ನನ್ನು ಬೆತ್ತಲೆ ಮಲಗಿಸಿದರು. ಆಮೇಲಿಂದ ನನ್ನ ಮೈಯನ್ನು ತಿಕ್ಕಲು ಶುರು ಮಾಡಿದರು. ಅವರ ಬೆರಳುಗಳಲ್ಲಿ ಮಾಂತ್ರಿಕ ಶಕ್ತಿ ಇತ್ತು. ಕಣ್ಣಿನಲ್ಲಿ ನನ್ನ ಬೆತ್ತಲೆಯ ನಾಚಿಕೆಯನ್ನು ಕಳೆಯುವ ತುಂಟು ನಗುವಿತ್ತು. ಕ್ರಮೇಣ ನನ್ನ ಮೈ ದಣಿವು ಇಳಿಯಿತು. ಎಲ್ಲಿಂದಲೋ ಬಿಸಿ ನೀರನ್ನು ತಂದು ನನ್ನನ್ನು ಉಜ್ಜಿ ಶುಭ್ರಗೊಳಿಸಿ, ಟೀ ಕುಡಿಸಿ ಕಾರಿಗೆ ಹತ್ತಿಸಿದರು.

ಹೀಗೆ ನನಗೆ ಪರಮ ಪ್ರಿಯರಾದ ಸಂಗಡಿಗರು ಮಾರನೇ ದಿನ ನನ್ನನ್ನು ಕಾಡಲು ಶುರು ಮಾಡಿದರು. ನಮ್ಮ ಮಹಾನಾಯಕ ಕಿಮ್‌ಗೆ ವಯಸ್ಸಾಗುತ್ತಿದೆ. ಅವರ ಬಗ್ಗೆ ನೀವೊಂದು ಪುಸ್ತಕವನ್ನು ಬರೆಯಬೇಕು. ಹಾಗೆಯೇ ನಾನು ಕುಲಪತಿಯಾಗಿದ್ದ ವಿಶ್ವವಿದ್ಯಾನಿಲಯದಿಂದ ಅವರಿಗೊಂದು ಡಿ.ಲಿಟ್‌ಅನ್ನು ಕೊಡಿಸಬೇಕು. ಪ್ಲೀಸ್, ಪ್ಲೀಸ್…! ಅವರ ಪ್ರೊಮೋಶನ್‌ಗೆ ಇದು ಅಗತ್ಯವೆಂದು ನಾನು ಊಹಿಸಿ ಪೇಚಾಡುತ್ತ ಹೇಳಿದೆ:

‘ಡಿ.ಲಿಟ್‌ಅನ್ನು ಹೀಗೆ ರಾಜಕೀಯ ನಾಯಕನೊಬ್ಬನಿಗೆ ಕುಲಪತಿಯಾಗಿ ನಾನಾಗಿಯೇ ಕೊಡುವ ಅಧಿಕಾರವಿಲ್ಲ. ಪುಸ್ತಕ? ನಾನು ಈ ಬಗೆಯ ಪುಸ್ತಕಗಳನ್ನು ಬರೆಯುವುದೇ ಇಲ್ಲ. ಅದಕ್ಕಾಗುವ ಖರ್ಚನ್ನು ಕೊಡುತ್ತೇವೆ’ ಎಂದರು. ನನಗೇನೂ ಬೇಡವೆಂದೆ. ಆದರೆ ನನ್ನ ಮಾತನ್ನು ನನ್ನ ಸಂಗಡಿಗರು ವಿನಯದ ಮಾತೆಂದೇ ಭಾವಿಸಿ ನಾನು ರಾಜಧಾನಿಯನ್ನು ಬಿಡುವ ತನಕ ನನ್ನನ್ನು ಉಪಚರಿಸಿ ಕೇರಳಕ್ಕೆ ನಾನು ಹಿಂದಿರುಗಿದ ಮೇಲೆ ಅವರ ರಾಯಭಾರ ಕಚೇರಿಯಿಂದ ಯಾರ ಯಾರ ಹತ್ತಿರವೋ ತಮ್ಮ ಒತ್ತಾಯವನ್ನು ನನ್ನ ಮೇಲೆ ಹೇರುವಂತೆ ಪ್ರೇರೇಪಿಸಿದ್ದರು. ಈಗ ಈ ಎಲ್ಲವೂ ಮುಗಿದಿದೆ. ಅಣುಬಾಂಬ್‌ತಯಾರಿಸಿ ಎಲ್ಲರಂತೆ ತಾವಾಗುವ ವಿನಾಶದ ಹಾದಿಯಲ್ಲಿ ಉತ್ತರ ಕೊರಿಯಾ ಇದೆ. ನನ್ನಂತಹ ಲೇಖಕರ ಅಗತ್ಯ ಇನ್ನು ಅವರಿಗೆ ಇಲ್ಲ.

ಕೊರಿಯಾದ ಕೃಷಿ ವ್ಯವಸ್ಥೆಯ ಬಗ್ಗೆ ಅಧಿಕಾರಿಯೊಬ್ಬರ ಜತೆ ನಾನು ಮಾತನಾಡುವಾಗ ನಾನು, ಅತ್ಯಂತ ಕಡಿಮೆ ಮಳೆಯಲ್ಲೂ ಬೆಳೆಯುವ ರಾಗಿಯ ಬಗ್ಗೆ ಹೇಳಿದ್ದೆ. Jusche ಯನ್ನು ಇನ್ನೂ ನಂಬುವಂತೆ ಕಾಣುತ್ತಿದ್ದ ಈ ಕೃಷಿತಜ್ಞ ರಾಗಿಯ ಬೀಜವನ್ನು ನನ್ನಿಂದ ಕೇಳಿದ್ದ. ನಾನು ಪುಸ್ತಕ ಬರೆಯಲಿಲ್ಲ, ಡಾಕ್ಟೋರೇಟ್ ಕೊಡಲಿಲ್ಲ. ಆದರೆ ರಾಗಿಯನ್ನು ಕಳುಹಿಸಿಕೊಟ್ಟೆ.

೨೨೧೦೨೦೦೬

* * *