ನಮಗೆ ದೇವರು ಇದಾನೆ ಅಂದರೆ ಅವನು ಸಾಂಕೇತಿಕವಾಗಿ ಇದ್ದಾನೆ ಎಂದರ್ಥ. ಯೂರೋಪ್‌ನಲ್ಲಿ ಏನಾಗಿತ್ತು ಅಂದರೆ ಬೈಬಲ್‌ನಲ್ಲಿ ಇರುವುದು ಸಾಂಕೇತಿಕವಲ್ಲ ಅದು ನಿಜವಾದ ವರ್ಣನೆ ಅಂತ ಭಾವಿಸಿದ್ದರು. ಆಡಂ ಮತ್ತು ಈವ್‌ನಿಂದಲೇ ಹುಟ್ಟಿದೇವೆ ಅಂತ ತಿಳಿದಿದ್ದರು. ಡಾವಿನ್ ಬಂದು ಮನುಷ್ಯರೆಲ್ಲಾ ಮಂಗಗಳಿಂದ ವಿಕಾಸ ಹೊಂದಿದವರು ಎಂದ ತಕ್ಷಣ ಗಾಬರಿಯಾಗಿಬಿಟ್ಟರು. ಇವತ್ತಿಗೂ ಅಮೆರಿಕಾದ ವಿಶ್ವವಿದ್ಯಾಲಯಗಳಲ್ಲಿ ಡಾರ್ವಿನ್‌ವಾದವನ್ನು ಕಲಿಸುವುದಕ್ಕೆ ಬಹಳ ವಿರೋಧ ವ್ಯಕ್ತಪಡಿಸುವವರಿದ್ದಾರೆ. ಡಾರ್ವಿನ್ ವಾದವನ್ನು ಹೇಳಿಕೊಡುವುದಾದರೆ ಬೈಬಲ್‌ನಲ್ಲಿ ಇರುವುದನ್ನೂ ಹೇಲಿಕೊಡಬೇಕೆಂದು ಒತ್ತಾಯಿಸುತ್ತಾರೆ. ಡಾರ್ವಿನ್ ಬಂದ ಕೂಡಲೇ ಬೈಬಲ್‌ತಿರುಗಾಮುರುಗಾ ಆಗಿಬಿಡುತ್ತದೆ ಎಂಬ ಭಯ ಅವರದ್ದು.

ಯಾವ ಡಾರ್ವಿನ್ ಕೂಡಾ ನಮ್ಮ ನಂಬಿಕೆಗಳನ್ನು ಉಲ್ಟಾ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ನಮ್ಮಲ್ಲಿ ಕಪಿಗೂ ಸ್ಥಾನವಿದೆ. ಅವನೂ ಇಲ್ಲಿ ದೇವರು. ದತ್ತಾತ್ರೇಯನ ಸನ್ನಿಧಿಯಲ್ಲಿ ನಾಯಿಗೂ ಜಾಗವಿದೆ, ಇಲಿಗೂ ವಕ್ರದಂತ ಮಹಾಕಾಯನನ್ನು ಹೊರುವ ಕಾಯಕವಿದೆ. ಎಲ್ಲವನ್ನೂ ನಾವು ದೈವ ಕಲ್ಪನೆಯಲ್ಲೇ ನೋಡುತ್ತೇವೆ. ಅದಕ್ಕೇ ನವರಾತ್ರಿಯಲ್ಲಿ ಬೊಂಬೆಗಳ ಆರಾಧನೆ ನಮಗೆ ಅಬಾಲವೃದ್ಧರ ಮುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಮನೆ ಮನೆಗೂ ವೈವಿಧ್ಯದ ಮ್ಯೂಸಿಯಂ ಕಳೆಬಂದು ಪ್ರತಿ ಮನೆಯ ಬಾಗಿಲೂ ತೆರೆದಿರುತ್ತದೆ.

ನಮ್ಮಲ್ಲಿ ಸಮೃದ್ಧಿಯ ಆರಾಧನೆ ಇದೆ; ಯಹೂದ್ಯ ಮೂಲದ ಧರ್ಮಗಳಂತೆ ಪಾಪ ಕಲ್ಪನೆಯಿಂದ ಹೊರಟ ದೇವರ ಆರಾಧನೆಯಿಲ್ಲ. ಬೇಂದ್ರೆ ಹೇಳುವ ಮಾತಿದು: ‘ಆನಂದ ಸ್ಪಂದದಿಂದ ಹುಟ್ಟಿಬಂದ ಸೃಷ್ಟಿಯಿಂದ – ’ ಗಂಡುಹೆಣ್ಣಿನ ಸಂಭೋಗವೇ ಬೇಂರೆಯವರ ಆನಂದ ಸ್ಪಂದದ ಮೂಲ.

ಸೆಮಿಟಿಕ್ ಧರ್ಮಗಳ ಸೃಷ್ಟಿಯ ಕಲ್ಪನೆಯಲ್ಲೇ ‘ಒರಿಜಿನಲ್‌ಸಿನ್‌’ –  ಆದಿಪಾಪದ ಕಲ್ಪನೆಯಿದೆ. ಆಡಂ ಮತ್ತು ಈವ್‌ಏಡನ್ ಉದ್ಯಾನವನದಲ್ಲಿದ್ದರು. ಅಲ್ಲಿರುವ ಮರದ ಹಣ್ಣೊಂದನ್ನು ಅವರು ತಿನ್ನಬಾರದಿತ್ತು. ಆದರೆ ಈವ್‌ ಅದನ್ನು ತಿಂದಳು. ತಪ್ಪು ಮಾಡಿದ ಆಕೆ ತಾನು ಮಾತ್ರ ನರಕಕ್ಕೆ ಹೋಗುತ್ತೇನೆಂಬ ಭಯದಿಂದ ಆ ಹಣ್ಣನ್ನು ಗಂಡನಿಗೂ ತಿನ್ನಿಸಿದಳು. ಇದರ ನಂತರ ಮರ್ತ್ಯ ಸೃಷ್ಟಿ ಮುಂದುವರಿಯಿತು. ನಮ್ಮಲ್ಲಿ ಸೃಷ್ಟಿಯ ಕಲ್ಪನೆ ಹೀಗಿಲ್ಲ. ಉಪನಿಷತ್‌ ಒಂದರ ಪ್ರಕಾರ ಪುರುಷ ಮತ್ತು ಸ್ತ್ರೀತತ್ವಗಳು ಒಂದು ಗಂಡು ಆನೆಯಾಗಿ ಹೆಣ್ಣು ಆನೆಯಾಗಿ, ಒಂದು ಹೋರಿಯಾಗಿ ಒಂದು ದನವಾಗಿ –  ಹೀಗೆಯೇ ಯಾವು ಯಾವುದೋ ಹಲವು ಮೃಗಗಳ ಜೋಡಿಯಾಗಿ, ಕೊನೆಗೆ ಗಂಡು – ಹೆಣ್ಣು ಕೀಟವಾಗಿಯೂ ಒಂದನ್ನು ಇನ್ನೊಂದು ಆಸೆಯಲ್ಲಿ ಅಟ್ಟಿ ವೃದ್ಧಿಸುತ್ತವೆ. ಆದ್ದರಿಂದಲೇ ನಮ್ಮ ಪೇಗನ್ ನಾಗರಿಕತೆಗೆ ತಾಳುವ ಬಾಳುವ ಶಕ್ತಿ ಇದೆ. ಮತ್ತೆ ನಾವು ದೇವರನ್ನು ಇದು ಹೀಗೇ ಇಷ್ಟೇ ಎಂದು ನಂಬಲೇ ಬೇಕಾಗಿಲ್ಲ. ನಂಬುತ್ತೇವೋ ಇಲ್ಲವೋ ಎಂಬುದು ಮುಖ್ಯ ಪ್ರಶ್ನೆಯೇ ಆಗುವುದಿಲ್ಲ. ಆಚರಣೆ, ಉತ್ಸವ, ಸಂಭ್ರಮ –  ಇವುಗಳು ಮಾತ್ರ ಮುಖ್ಯವಾಗುತ್ತದೆ. ಎಲ್ಲ ಹಬ್ಬಗಳೂ, ಪ್ರಥಮ ಏಕಾದಶಿಯೊಂದನ್ನು ಬಿಟ್ಟು –  ಎಲ್ಲವೂ ಮಕ್ಕಳು ಎದುರು ನೋಡುವ ಹಬ್ಬಗಳೇ. ಇನ್ನು ಮಗು ಹುಟ್ಟಿದಂದಿನಿಂದ ಹಬ್ಬಗಳು; ಹುಟ್ಟಿದ್ದು ಕೃಷ್ಣನೋ ಗೌರಿಯೋ ಎಂಬಂತೆ. ಹೆಸರಿಡಲು ಹಬ್ಬ; ಹೊಸಲುದಾಟಿದರೆ ಹಬ್ಬ; ಮೊದಲ ತುತ್ತಿನ ಅನ್ನ ಪ್ರಾಶನದ ಹಬ್ಬ; ಇನ್ನು ಉಪನಯನ, ಮದುವೆ, ಹಸೆತುಂಬುವುದು, ಬಯಕೆ ಇತ್ಯಾದಿಗಳಿರಲಿ, ಋಷಿಪಂಚಮಿ, ಅರವತ್ತರ ಶಾಂತಿ –  ಸಾಯುವತನಕವೂ ಹಬ್ಬಗಳೇ. ಇದೇನು ನಾವು ನಂಬಿದ ದೈವಕ್ಕೆ ಪೂರ್ಣ ಶರಣಾಗುವ ‘ರಿಲಿಜನ್’ ಹೌದೇ ಎಂದು ಅನುಮಾನವಾಗುತ್ತದೆ. ಇದೊಂದು ವಿಪರ್ಯಾಸವೇ: ಸಂಭ್ರಮದ ಕೃಷ್ಣನನ್ನು ಪೂಜಿಸುವವರು ಪಾಶ್ಚಿಮಾತ್ಯರಾಗಿರಬೇಕಿತ್ತು; ಬಡವರಿಗೆ ಮಾತ್ರ ಸ್ವರ್ಗ ಮೀಸಲು ಎಂದು ತಿಳಿದ ಈ ಬಡವರ ದೇಶ ಕ್ರಿಸ್ತನದಾಗಿರಬೇಕಿತ್ತು.

* * *

ದೇವಸ್ಥಾನದಲ್ಲಿ ಒಂದು ಸಂಗೀತ ಕಚೇರಿ ನಡೆಸಿದರೆ ಆ ಸಂಗೀತಕ್ಕೆ ಒಂದು ಆವರಣ ದೊರೆಯುತ್ತದೆ. It gets contextualized. ಆ ರೀತಿ ದೈವಾವೃತಗೊಳ್ಳುವುದರಿಂದಲೇ ಅದಕ್ಕೊಂದು ಕಳೆ (aura) ಒದಗುತ್ತದೆ. ಪುರಂದರರ ತ್ಯಾಗರಾಜರ ಕೀರ್ತನೆಗಳೂ ಪೂಜೆಯೂ ಆಗಿಬಿಡುತ್ತದೆ.

ನಮ್ಮ ಕಲೆಯಲ್ಲಿ ಇದು ಎಷ್ಟರ ಮಟ್ಟಿಗೆ ಇತ್ತು ಎನ್ನುವುದಕ್ಕೆ ಒಂದು ಘಟನೆ ನೆನಪಿಗೆ ಬರುತ್ತಿದೆ. ಕಪಿ ವಾತ್ಸಾಯನ ಎಂಬ ದಿಲ್ಲಿಯ ವಿದ್ವಾಂಸೆ ಕೇರಳದ ಕಲಾ ಪ್ರಕಾರವಾದ ಕಥಕ್ಕಳಿಯನ್ನು ಕಲಿಯುವುದಕ್ಕೆಂದು ದಿಲ್ಲಿಯಿಂದ ಕೇರಳಕ್ಕೆ ಹೋದಳು. ಒಬ್ಬ ಹೆಣ್ಣು ಮಗಳು ಕಥಕ್ಕಳಿಯನ್ನು ಕಲಿಯುವುದಕ್ಕೆ ಬಂದಿದ್ದಾಳೆ ಎಂಬುದಕ್ಕೆ ಕೇರಳದ ಬಹಳಷ್ಟು ಜನ ಈ ಹೆಣ್ಣು ಮಗಳು ಯಾರು? ನೋಡೋಕ್ಕೆ ಚೆನ್ನಾಗಿ ಬೇರೆ ಇದ್ದಾಳೆ. ಇವಳೇನಾಗಿರಬಹುದು? ಎಂದು ಆಕೆಯ ಶೀಲದ ಬಗ್ಗೆಯೇ ಗುಸುಗುಸು ಸುದ್ದಿಯಿತ್ತಂತೆ.

ಕಥಕ್ಕಳಿಯನ್ನು ದೇವಸ್ಥಾನದ ಆವರಣದಲ್ಲಿ ಮಾತ್ರ ಆಡಬೇಕು ಎಂಬುದು ಬಹು ಹಿಂದಿನ ಸಂಪ್ರದಾಯವಂತೆ. ಅದೂ ಒಂದು ಬಗೆಯ ದೇವತಾ ಅರ್ಚನೆ… ಅಷ್ಟೇ ಅಲ್ಲ ಕಥಕ್ಕಳಿ ಆಡುವವರು ಪ್ರೇಕ್ಷಕರು ಇದ್ದಾರೆಯೋ ಇಲ್ಲವೋ ಎಂಬುದರ ಬಗ್ಗೆ ಯೋಚಿಸುವುದೇ ಇಲ್ಲ. ಒಂದು ದೀಪ ಹತ್ತಿಸಿ ಎದುರಿಟ್ಟುಕೊಂಡು ಅದಕ್ಕೆ ಕಥಕ್ಕಳಿ ಆಡುತ್ತಾರೆ. ನಾನು ಕೇರಳದಲ್ಲಿ ಕೆಲಸ ಮಾಡುತ್ತಿದ್ದಾಗ ಒಂದು ಕಥಕ್ಕಳಿ ತಂಡವನ್ನು ಕರೆಸಿದ್ದೆ. ಉತ್ತರ ದೇಶಗಳಿಂದ ಬಂದ ವಿಶ್ವವಿದ್ಯಾಲಯದ ಅತಿಥಿಗಳು ನೋಡಲೆಂದು. ಉತ್ಕಟ ಭಾವ ವೇಗಗಳ ಸಿನಿಮಾ ನೋಡಿದ ಜನ ಈ ನಿಧಾನ ಗತಿಯ ಕಥಕ್ಕಳಿ ನೋಡುವ ವ್ಯವಧಾನ ಉಳ್ಳವರೆ ಎಂಬ ಅನುಮಾನ ನನಗಿತ್ತು. ಆದರೆ ಕಥಕ್ಕಳಿ ತಂಡದ ಮುಖ್ಯಸ್ಥ ನನಗೆ ಹೇಳಿದ್ದು ಇನ್ನೂ ನೆನಪಿದೆ ‘ಜನ ಇರಲಿ ಬಿಡಲಿ ನಾವು ಯೋಜನೆ ಮಾಡುವುದಿಲ್ಲ. ಸಭೆಗಾಗಿ ಕಾಯಬೇಡಿ. ನಾವು ಆಡುವುದು ಈ ದೀಪಕ್ಕೆ’. ಈ ಕಲಾಗರ್ವ ನನಗೆ ಬಹಳ ಮಹತ್ವದ ವಿಚಾರವೆಂದು ಅನ್ನಿಸುತ್ತದೆ.

ಕೇರಳದಲ್ಲಿ ಕಥಕ್ಕಳಿ ಕಲಿತಿದ್ದ ಕಪಿಲ ವಾತ್ಸಾಯನರು ಕಥಕ್ಕಳಿ ತಂಡವೊಂದನ್ನು ದಿಲ್ಲಿಗೆ ಆಹ್ವಾನಿಸಿದರಂತೆ. ಬಹಳ ಹಿಂದಿನ ಕಥೆಯಿದು. ಹಾಗೆ ಒಂದು ತಂಡ ಅಲ್ಲಿಗೆ ಹೋಯಿತು. ಅಲ್ಲಿ ಪ್ರದರ್ಶನವನ್ನೂ ನೀಡಿತು. ಯಾರಾದರೂ ಛಾಯಾಗ್ರಾಹಕರು ಅವರ ಫೋಟೋ ತೆಗೆಯಲು ಹೋದರೆ ಆ ಕಲಾವಿದರು ಮುಖ ಮುಚ್ಚಿಕೊಳ್ಳುತ್ತಿದ್ದರಂತೆ. ದೇವಾಲಯದ ಆವರಣದಲ್ಲಿ ಆಡದೆ ಇನ್ನೆಲ್ಲೋ ಆಡಿದರೆಂಬ ಪುಕಾರು ತಮ್ಮ ಮೇಲೆ ಊರಲ್ಲಿ ಬಂದೀತೆಂದು ಈ ಸಂಕೋಚ ಮತ್ತು ಬಹಿಷ್ಕಾರದ ಭಯ ಈ ಕಲಾವಿದರಿಗೆ. ಇದನ್ನು ಕಂಡ ಕಪಿಲ ವಾತ್ಸಾಯನ ನಮ್ಮ ಜನ ಎಷ್ಟು ಹಿಂದುಳಿದಿದ್ದಾರೆ. ಇವರಲ್ಲಿ ಎಂತೆಂಥಾ ಮೂಢ ನಂಬಿಕೆಗಳಿವೆ ಎಂದೆಲ್ಲಾ ಅಂದುಕೊಂಡಿದ್ದರಂತೆ. ನನಗಿದನ್ನು ಕಪಿಲಾರೇ ಹೇಳಿದ್ದು. ಆದರೆ ಮುಂದಿನದನ್ನು ಕೇಳಿ.

ಇದಾಗಿ ಕೆಲ ಕಾಲದ ನಂತರ ಆಕೆ ಕೇರಳಕ್ಕೆ ಬಂದವರು ನನಗೆ ಹೇಳಿದರು. ‘ಈಗ ಕಾಲ ಹೇಗಾಗಿದೆಯೆಂದರೆ ಮೂರೋ ನಾಲ್ಕೋ ವರ್ಷ ಕಥಕ್ಕಳಿಯನ್ನು ಕಲಿತವನೊಬ್ಬ ರಾಜಕಾರಣಿಗಳನ್ನು ಹಿಡಿದು ಯಾವ್ಯಾವುದೋ ರೀತಿ ಪ್ರಭಾವ ಬೀರಿ ದಿಲ್ಲಿಯಲ್ಲಿ ಬಂದು ಕಥಕ್ಕಳಿ ಆಡಲು ಪ್ರಯತ್ನಿಸುತ್ತಾನೆ. ಈ ಸ್ಥಿತಿ ನೋಡಿದರೆ ನಾನು ಹಿಂದೆ ಕಲಾದೃಷ್ಟಿಯಿಂದ ಮಾಡಿದ್ದು ತಪ್ಪು ಎನ್ನಿಸುತ್ತದೆ.’

ಇದನ್ನೇ ಎಲ್ಲವನ್ನೂ ಚೀಪ್‌ಗೊಳಿಸಿ ಮಾರುವ ಆತುರದ ಆಧುನೀಕರಣ ಎನ್ನುವುದು. ನಮ್ಮ ದೇವತೆಗಳು ರಾಕ್ಷಸರೂ ಕೂಡಾ ಬಹಳ ವಿಚಿತ್ರ. ಬಲಿಯೂ ಒಬ್ಬ ರಾಕ್ಷ ಎನ್ನುವುದನ್ನು ಮರೆಯಬಾರದು. ಅವನ ಮನೆಯನ್ನು ಕಾಯುತ್ತಿರುವವನು ದೇವರ ದೇವನಾದ ವಿಷ್ಣು. ಬಲಿಯನ್ನು ತುಳಿದ ನಂತರ ವಿಷ್ಣುವಿಗೆ ಅಪರಾಧ ಪ್ರಜ್ಞೆ ಕಾಡುತ್ತಿದೆ. ಅದಕ್ಕೇ ಅವನು ಬಲಿಯ ಮನೆಯನ್ನು ಕಾಯುತ್ತಿದ್ದಾನೆ. ವರ್ಷಕ್ಕೊಮ್ಮೆ ತನ್ನ ಪ್ರಜೆಗಳನ್ನು ನೋಡುವುದಕ್ಕಾಗಿ ಬಲಿ ಬರುತ್ತಾನೆ. ಒಳ್ಳೆ ರಾಕ್ಷಸರಿದ್ದಾರೆ; ಹಾಗೇ ಕೆಟ್ಟವರೂ ಇದ್ದಾರೆ. ಒಳ್ಳೆ ದೇವತೆಗಳಂತೆ ಕೆಟ್ಟ ದೇವತೆಗಳೂ ಇದ್ದಾರೆ. ಇಂದ್ರನಿಗೆ ಇರುವಂಥ ಗರ್ವ ಇನ್ನಾರಿಗೂ ಇಲ್ಲ. ಅವನ ದರ್ಪ ಅಷ್ಟಿಷ್ಟಲ್ಲ. ಋಷಿಗಳಿಂದ ತಾನು ಕೂತ ಪಲ್ಲಕ್ಕಿ ಹೊರಿಸಿಕೊಂಡು ವೇಗವಾಗಿ ಹೋಗಿ ಹೋಗಿ ಎನ್ನುವ ಸಂಸ್ಕೃತದ ಜಬರದಸ್ತಿನಲ್ಲಿ ‘ಸರ್ಪ ಸರ್ಪ’ ಎಂದು ಕಾಲು ಕುಟ್ಟುತ್ತಾನೆ. ಆಗ ನಾಲ್ವರಲ್ಲಿ ಒಬ್ಬನಾದ ಕುಂಟುಕಾಲಿನ ಋಷಿಯಿಂದ ಶಾಪಗ್ರಸ್ತನಾಗಿ ನಿಜದ ಸರ್ಪವೇ ಆಗಿ ಪಲ್ಲಕ್ಕಿಯಿಂದ ಹರಿದು ಹೋದವನು ಈ ಇಂದ್ರ, ರಾವಣನನ್ನೂ ಮೀರಿಸಿದ ಕಾಮುಕಿ; ಋಷಿಪತ್ನಿಗಳ ವ್ಯಾಮೋಹಿ.

ನಮ್ಮ ಮಕ್ಕಳು ನಮ್ಮ ನಾಗರಿಕತೆಯಲ್ಲೇ ಬೆಳೆದು ಬಂದದ್ದಾದರೆ, ಕನ್ನಡ ಮಾಧ್ಯಮದಲ್ಲಿ ಓದಿದವರಾದರೆ, ಅದರ ಗ್ರಾಮೀಣ ಸಮೃದ್ಧಿಯಲ್ಲಿ ದೇವ ದೇವಿಯರನ್ನು ಕಂಡವರಾದರೆ ಗೊಡ್ಡಾದ ಮೂರ್ಖ ಮೂಢನಂಬಿಕೆ ಅವರಲ್ಲಿ ಹುಟ್ಟಲಾರದು. ಹಿಂಸೆಯಲ್ಲಿ ದೇವಸ್ಥಾನಗಳನ್ನು ಕಟ್ಟುವುದನ್ನೋ ಮಸೀದಿಗಳನ್ನು ಒಡೆಯುವುದನ್ನೋ ಅವರು ಶೌರ್ಯದ ಸಂಕೇತವೆಂದೋ, ದೇಶಭಕ್ತಿಯೆಂದೋ ಭಾವಿಸಲಾರರು. ಇದು ಹಾಗೆ ಬೆಳೆದು ಬಂದವನಾದ ನನ್ನ ನಂಬಿಕೆ. ನನ್ನ ತಾಯಿ ನೂರಾರು ದೇವರುಗಳ ನಡುವೆ ಮುಸ್ಲಿಮರು ನಂಬುವ ದೇವರು ಮಕ್ಕಳ ಆರೋಗ್ಯವನ್ನು ಕಾಪಾಡುವಾತ ಎಂದು ತಿಳಿದಿದ್ದರು. ಹೀಗೆ ತಿಳಿಯುವುದು ಸೆಮಿಟಿಕ್ ಧರ್ಮಗಳಿಗೆ ಕಷ್ಟ. ನಾವೇಕೆ ಅವರನ್ನು ಈ ವಿಷಯಗಳಲ್ಲಿ ಅನುಸರಿಸಬೇಕು?

ಎ.ಕೆ.ರಾಮಾನುಜನ್ ಹೇಳುತ್ತಾರೆ:. ‘ಭಾರತದಲ್ಲಿ ಯಾರೂ ಮೊದಲನೇ ಬಾರಿಗೆ ರಾಮಾಯಣ ಅಥವಾ ಮಹಾಭಾರತವನ್ನು ಓದುವುದಿಲ್ಲ’. ಯಾಕೆಂದರೆ ಆ ಕತೆ ನಮಗೆ ಮೊದಲೇ ಗೊತ್ತಿರುತ್ತದೆ. ಆದರೆ ಯೂರೋಪ್‌ನಲ್ಲಿ ಯಾರಾದರೂ ಹೋಮರ್‌ನನ್ನು ಓದಿದರೆ ಅವನು ಮೊದಲನೇ ಬಾರಿಗೆ ಹೋಮರ್‌ನನ್ನು ಓದುತ್ತಿರುತ್ತಾನೆ.

ಇನ್ನು ಮುಂದೆ ನಮ್ಮ ದೇಶದ ಮಕ್ಕಳು They will only read RAMAYANA for the first time in an English edition if they go to an English Medium school and if it happens to be a text (ಇಂಗ್ಲಿ ಮಾತ್ರ ಬರುವವರಿಗಾಗಿ ಈ ವಾಕ್ಯ ಇಂಗ್ಲಿಷಿನಲ್ಲಿದೆ).

* * *

ಕೊನೆಯದಾಗಿ ಒಂದು ಮಾತು: ಆಧುನಿಕರಾಗಿಬಿಟ್ಟ ನಮ್ಮಂಥವರು ಹುಡುಕುತ್ತಿರುವುದು ದೇವರು ಎಂಬ ಒಂದು ವಿಶಿಷ್ಟ ಸೃಷ್ಟಿಕರ್ತನ ಅಗತ್ಯವಿಲ್ಲದಂತೆ ಆಧ್ಯಾತ್ಮಿಕವಾದ ಬೆರಗಿನಲ್ಲಿದ್ದೇ, ಮನಸ್ಸಿನ ಅಲ್ಪ ಸಮಾಧಾನಕ್ಕಾಗಿ ಈ ಬೆರಗನ್ನು ವಿವರಣೆಗಳಲ್ಲಿ ಸರಳ ಗೊಳಸಿಕೊಳ್ಳದೇ ಜಗತ್ತಿನ ಸೃಷ್ಟಿಗೆ ಎದುರಾಗುವುದು. ಗೌತಮ ಬುದ್ಧ ಇದರಲ್ಲಿ ನಮಗೆ ಆಪ್ತ.

ದೇವರನ್ನು ಇದ್ದಾನೆಯೆಂದು ಭಾವಿಸಿ ಸಂಸಾರವನ್ನೇ ತೊರೆದ ಅಕ್ಕ ಮೀರಾರನ್ನು ಕಂಡೂ ಬೆರಗಾಗುವುದು; ಜೊತೆಗೇ, ಬಡಜನರು ಈ ಲೋಕದ ಒಡೆಯರಾಗುವ ಕನಸನ್ನು ಕಂಡ ಕ್ರಿಸ್ತನನ್ನೂ, ಅಲ್ಲಾಹುವಿಗೆ ತನ್ನನ್ನು ಸರ್ವಾರ್ಪಣೆ ಮಾಡಿಕೊಂಡ ಪೈಗಂಬರರನ್ನೂ ನಮ್ಮ ಪೂರ್ವಸೂರಿಗಳು ಎಂದು ಪವಿತ್ರ ಭಾವನೆಯಲ್ಲಿ ಗೌರವಿಸುವುದು ವೈಯಕ್ತಿಕವಾಗಿ ಮುಖ್ಯ ಮಾತ್ರವಲ್ಲ ಹಿಂಸೆ ನಮ್ಮ ಕಾಲದ ತಲ್ಲಣಗಳಿಂದ ಪಾರಾಗಲು ಅಗತ್ಯ. ಈ ಅಗತ್ಯದಲ್ಲಿ ರಾಜಕೀಯ ಜಾಣತನವಿಲ್ಲ; ನಾವೆಲ್ಲರೂ ಹುಡುಕುವ ಸತ್ಯವೂ, ಎಲ್ಲ ಧರ್ಮಗಳಲ್ಲಿ ಹುಡುಕಿಕೊಳ್ಳಬೇಕಾದ ಸತ್ಯವೂ ಅಡಗಿದೆ.

ಯಾಕೆಂದರೆ, ಈ ಪ್ರಪಂಚದಲ್ಲಿ ಆಚರಣೆಯಲ್ಲಿರುವ ಯಾವ ಮತವೂ, ತನ್ನಲ್ಲೇ ತನ್ನಷ್ಟಕ್ಕೇ ಪರಿಪೂರ್ಣವಲ್ಲ; ಪೂರ್ಣತೆಗೆ ಹಂಬಲಿಸದ ಯಾವ ಮತವೂ ಇಲ್ಲ.

೧೫೧೦೨೦೦೬

* * *